ಮನುಷ್ಯನ ನಾಗರಿಕತೆಯ ಬೆಳವಣಿಗೆಯ ಸಂದರ್ಭದಲ್ಲಿ ಗ್ರಾಮದ ಕಲ್ಪನೆ, ಗ್ರಾಮದ ಸ್ಥಾಪನೆ ಅತ್ಯಂತ ಮಹತ್ವದ  ಘಟ್ಟವಾಗಿದೆ. ಆದಿಮಾನವನು ಆಹಾರದ ಸಂಗ್ರಹಕ್ಕಾಗಿ ಬೇಟೆಯಾಡುತ್ತ ಒಂದು ಸ್ಥಳದಿಂದ  ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತದ್ದ. ಹಸಿವು ಮತ್ತು ಅದರ ಪೂರೈಕೆ ಇಷ್ಟೇ ಅವನ ಉದ್ದೇಶವಾಗಿತ್ತು. ಗಡ್ಡೆ, ಗೆಣಸು, ಬೇಟೆ, ಮೀನುಗಳ ಸಂಗ್ರಹ ಇವು ಅವನ ಮುಖ್ಯ ಕಾರ್ಯಗಳಾಗಿದ್ದವು. ಸಂಚಾರಿಯಾದ ಮಾನವನು ಒಂದೆಡೆ ನೆಲೆಯೂರಲು ಕಾರಣ    ಒದಗಿಬಂತು – ಅದೇನೆಂದರೆ ಕೃಷಿ ಪ್ರಾಣಿಗಳನ್ನು ಪಳಗಿಸಿಕೊಂಡು ನೆಲವನ್ನು ಅಗಿದು ಬೀಜ ಬಿತ್ತಿ ಬೆಳೆ ಪಡೆಯಲಾರಂಭಿಸಿದಾಗ ಮನುಷ್ಯನ ಚರಿತ್ರೆಯಲ್ಲಿ ಒಂದು ಮಹತ್ವದ ಅಧ್ಯಾಯ ಪ್ರಾರಂಭವಾಯಿತು. ಹೀಗೆ ಕೃಷಿ ಕರ್ಮಕ್ಕಾಗಿ ಅಲ್ಲಲ್ಲಿ ಸ್ಥಿರವಾಗಿ ನೆಲೆಗೊಂಡ ಜನ ಸಮುದಾಯಗಳು ಗ್ರಾಮಗಳೆನಿಸಿಕೊಂಡವು. ಇಂಥ ಗ್ರಾಮದ ಉದಯ ಸಾಮಾಜಿಕ ವಿಕಾಸದ ಒಂದು ಹಂತ. ಅನಾಗರಿಕ ಮಾನವರು ನಾಗರಿಕತೆಯೆಡೆಗೆ ಮುನ್ನಡೆದ ಹೆಜ್ಜೆಯನ್ನದು ಗುರುತಿಸುತ್ತದೆ. ಸಂಸ್ಕೃತಿಯ ವೃದ್ಧಿಯೂ ಪೋಷಣೆಯೂ ಗ್ರಾಮ ವ್ಯವಸ್ಥೆಯಿಂದ ಸಾಧ್ಯವಾಯಿತು…..ಇಂದಿಗೂ ಪ್ರಪಂಚದ ಮುಕ್ಕಾಲು ಪಾಲು ಜನರನ್ನು ಗ್ರಾಮಗಳು ಪೋಷಿಸುತ್ತವೆ. ಅಲ್ಲದೆ ಉಳಿದ ಮತ್ತೊಂದು ಪಾಲಿನವರಿಗೆ ಆಹಾರವನ್ನೂ ಕಚ್ಚಾಸಾಮಗ್ರಿಯನ್ನೂ ಪೂರೈಸುತ್ತವೆ.

[1] ಗ್ರಾಮಗಳ ನಿರ್ಮಾಣ ಎಂದು ಪ್ರಾರಂಭವಾಯಿತೆಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕ್ರಿ. ಶ. ಪೂ. ೬೫೦೦ ವರ್ಷಗಳಷ್ಟು ಹಿಂದಕ್ಕೆ ಗ್ರಾಮಗಳ ಚರಿತ್ರೆ ಹೋಗುತ್ತದೆ. ಭಾರತೀಯ ಗ್ರಾಮಗಳು ಋಗ್ವೇದದಷ್ಟು ಪ್ರಾಚೀನ. ರಾಮಾಯಣ. ಮಹಾಭಾರತಗಳಲ್ಲಿ ಗ್ರಾಮದ ಉಲ್ಲೇಖಗಳಿವೆ. ಅರ್ಥಶಾಸ್ತ್ರ ಮನುಸ್ಮ್ರತಿಗಳಲ್ಲಿ ಗ್ರಾಮದ ವಿವಿಧ ಪ್ರಕಾರಗಳನ್ನು ಲಕ್ಷಣಗಳನ್ನೂ ವಿವರಿಸಲಾಗಿದೆ. ಜೈನ ಮತ್ತು ಬೌದ್ಧ ಗ್ರಂಥಗಳಲ್ಲಿ – ಗ್ರಾಮಗಳ ವಿವರಣೆ ವಿಫುಲವಾಗಿದೆ. ಇಷ್ಟು ಪ್ರಾಚೀನತೆ ಹೊಂದಿರುವ ಗ್ರಾಮ ಅಂದಿನಿಂದ ಇಂದಿನವರೆಗೆ ಒಂದೇ ರೀತಿಯಲ್ಲಿದೆ ಎಂದು ಹೇಳಲಿಕ್ಕಾಗದು. ಭೌಗೋಳಿಕ, ರಾಜಕೀಯ, ನೈಸಗಿಕ ಕಾರಣಗಳಿಂದಾಗಿ ಗ್ರಾಮಗಳ ಸ್ವರೂಪದಲ್ಲಿ ಬದಲಾವಣೆಯಾಗಿರುವದು ಸಹಜ. ಆದರೆ ಅದು ಅತ್ಯಲ್ಪ, ಗ್ರಾಮಗಳು ತಮ್ಮ ಮೂಲಸ್ವರೂಪವನ್ನು ಸಾಧ್ಯವಾದಷ್ಟು ಮಟ್ಟಿಗೆ ಹಾಗೇ ಉಳಿಸಿಕೊಂಡು ಬಂದಿವೆಯೆಂದು ಹೇಳಬಹುದು. ಭೀಕರ ನೈಸರ್ಗಿಕ ಕೋಪಗಳು, ಮಹಾಯುದ್ಧಗಳು, ಪರಕೀಯ ದಾಳಿಗಳು, ಗ್ರಾಮಗಳ ಒಟ್ಟಾರೆ ಸ್ವರೂಪವನ್ನು ಬದಲಾಯಿಸಲು ಸಾಧ್ಯವಾಗಿಲ್ಲ.

ಗ್ರಾಮವೆಂದರೆ “ಬ್ರಾಹ್ಮಣಾದಿ ವರ್ಣಗಳಿಂದ ಕೂಡಿದ, ಪ್ರಾಕಾರ ಕಂದಕಗಳಿಲ್ಲದ ಬಹುಜನ ವಸತಿ” ಎಂದು ಭರತನು ಹೇಳಿದ್ದಾನೆ.[2]  ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ “ಗ್ರಾಮಗಳೆಂದರೆ ನೂರಕ್ಕೆ ಕಡಿಮೆ ಇಲ್ಲದಷ್ಟು ಆದರೆ ಐದು ನೂರಕ್ಕೆ ಮೀರದಷ್ಟು ಶೂದ್ರರಾದ ಕೃಷಿಕರ ಕುಟುಂಗಗಳಿರುವ, ಒಂದು ಕ್ರೋಶ ಅಳತೆಯ, ದೂರ ದೂರದವರೆಗೆ ಹರಡಿರುವ, ನದಿ, ಪರ್ವತ, ಕಾಡು, ಹೂ ಬಿಡುವ ಮರಗಳಿಂದ ಕೂಡಿದ ಮೇರೆಗಳಿರುವ ಮತ್ತು ತಮ್ಮನ್ನೆ ತಾವೇ ಸಂರಕ್ಷಿಸಿಕೊಳ್ಳಬಲ್ಲ ಜನವಸತಿ”[3] ಎಂದು ಹೇಳಿದ್ದಾನೆ. ಕೇವಲ ಬ್ರಾಹ್ಮಣರು ವಾಸಿಸುವದು ಅಗ್ರಹಾರವೆನಿಸುತ್ತದೆ. ಅಗ್ರಹಾರದಿಂದ ಗ್ರಾಮಗಳನ್ನು ಬೇರ್ಪಡಿಸಿ ಹೇಳಲು ಭರತನನ್ನು ಬ್ರಾಹ್ಮಣಾದಿ ವರ್ಣಗಳಿಂದ ಕೂಡಿರುವ ಎಂದು ಸೂಚಿಸಿದ್ದಾನೆ. ಪ್ರಾಕಾರ ಕಂದಕಗಳು ದೊಡ್ಡನಗರಗಳಿಗೆ ರಾಜಧಾನಿಗಳಿಗೆ ಇರುತ್ತವೆ. ಅಂಥವು ಇಲ್ಲದವು ಮಾತ್ರ ಗ್ರಾಮಗಳೆನಿಸುತ್ತವೆಂಬುದು ಭರತನ ಅಭಿಪ್ರಾಯ. ಕೌಟಿಲ್ಯ ವ್ಯಾಖ್ಯೆ ಅರ್ಥಪೂರ್ಣವಾಗಿದೆ. ಗ್ರಾಮದಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆಯನ್ನು ಅವನು ನಿರ್ಣಯಿಸಿದ್ದಾನೆ. ಗ್ರಾಮದ ಕೃಷಿಕರಿಂದ ತುಂಬಿಕೊಂಡಿರುವದನ್ನು ನಿಚ್ಚಳವಾಗಿ ಗುರುತಿಸಿದ್ದಾನೆ. ಗ್ರಾಮದ ಗಡಿಗಳ ವಿಷಯದಲಿಲ್ಲೂ ಅವನ ಅಭಿಪ್ರಾಯ ಸೂಕ್ತವಾಗಿದೆ.

ಗ್ರಾಮದ ಭೌತಿಕ ಲಕ್ಷಣವನ್ನಾಧರಿಸಿ ಅವುಗಳನ್ನು ವರ್ಗೀಕರಿಸಬಹುದಾಗಿದೆ. ಇರಾವತಿ ಕರ್ವೆಯವರು ಮಹಾರಾಷ್ಟ್ರದ ಗ್ರಾಮಗಳನ್ನು ಮೂರು ವಿಭಾಗಗಳಲ್ಲಿ ವರ್ಗೀಕರಿಸಿದ್ದಾರೆ. ಕೇಂದ್ರೀಕೃತ ಗ್ರಾಮಗಳು ಹೊಲಗದ್ದೆಗಳ ಮಧ್ಯೆ ಸ್ಥಾಪಿತವಾಗಿರುತ್ತದೆ. ಮನೆಗಳು ಒಂದಕ್ಕೊಂದು ಹತ್ತಿಕೊಂಡಿದ್ದು ಗುಂಪು ಗುಂಪಾಗಿರುತ್ತವೆ. ಎರಡನೆ ಪ್ರಕಾರದ ಗ್ರಾಮಗಳೆಂದರೆ ಕೊಂಕಣ ಕರಾವಳಿಯಲ್ಲಿರುವ ಗ್ರಾಮಗಳು, ನೀಳವಾದ ರಸ್ತೆಯಿದ್ದು ರಸ್ತೆ ಅಕ್ಕ ಪಕ್ಕದಲ್ಲಿ ಎದುರುಬದುರಾಗಿ ಸಾಲು ಮನೆಗಳಿರುತ್ತವೆ. ಪ್ರತಿ ಮನೆಗೆ ವಿಶಾಲವಾದ ಹಿತ್ತಲು ಇರುತ್ತದೆ. ಮೂರನೆಯ ಪ್ರಕಾರದ ಗ್ರಾಮಗಳ ಬೆಟ್ಟ ಪ್ರದೇಶದಲ್ಲಿರುವ. ವಸತಿಗಳು ಅಲ್ಲಲ್ಲಿ ಚದುರಿದಂತಿದ್ದು ಸಣ್ಣ ಸಣ್ಣ  ಗುಂಪುಗಳಾಗಿರುತ್ತವೆ. ಈ ವರ್ಗೀಕರಣ ಸ್ಥೂಲವಾಗಿ ಭಾರತದ ಗ್ರಾಮಗಳೆಲ್ಲ ಅನ್ವಯಿಸುತ್ತದೆ. ಉತ್ತರ ಕರ್ನಾಟಕದ ಗ್ರಾಮಗಳು ಮೊದಲನೆಯ ಪ್ರಕಾರದ ಕೇಂದ್ರೀಕೃತ ಗ್ರಾಮಗಳೆನಿಸಿವೆ.

ಒಂದು ಗ್ರಾಮ ವಿಸ್ತಾರದಲ್ಲಿ ಮತ್ತು ಜನಸಂಖ್ಯೆಯಲ್ಲಿ ಎಷ್ಟು ದೊಡ್ಡದಿರಬೇಕೆಂಬುದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಒಂದು ಗ್ರಾಮ ಒಂದು ನೂರು ಕುಟುಂಬಗಳಿಂದ ಹಿಡಿದು ಒಂದು ಸಾವಿರ ಕುಟುಂಬಗಳ ವಸತಿಯಾಗಿರುತ್ತದೆ. ಕನಿಷ್ಠ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುತ್ತದೆ. ಒಂದೇ ಕುಟುಂಬದ ಮಲೆನಾಡಿನ ಗ್ರಾಮಗಳು ಇದಕ್ಕೆ ಅಪವಾದವಾಗಿವೆ.

ಹಳ್ಳಿ, ಊರು, ಕಸಬಾ, ಖೇಳಗಿ, ಕೊಪ್ಪ, ವಾಡಾ, ತಾಂಡಾ, ಇವು ಕರ್ನಾಟಕದಲ್ಲಿ ಗ್ರಾಮಗಳಿಗಿರುವ ಬೇರೆ ಬೇರೆ ಹೆಸರುಗಳು, ಸ್ಥೂಲವಾಗಿ ಇವುಗಳನ್ನು ಒಂದೇ ಅರ್ಥದಲ್ಲಿ ಬಳಸುತ್ತಿದ್ದರೂ ಇವು ಸೂಕ್ಷ್ಮ ವ್ಯತ್ಯಾಸ ಒಳಗೊಂಡಿವೆ. ಕಸಬಾ, ವಾಡಾ, ಕೊಪ್ಪ ಇವು ಉಪ ಗ್ರಾಮಗಳೆಂಬ ಅರ್ಥ ನೀಡುತ್ತವೆ. ತಾಂಡಾ ಲಂಬಾಣಿ ಜನಾಂಗದ ವಸತಿ. ತಾತ್ಕಾಲಿಕವಾದ ಚಿಕ್ಕ ವಸತಿ ಎಂಬ ಅರ್ಥ ಮೂಲದಲ್ಲಿದ್ದಿರಬಹುದು. ಈಗ ತಾಂಡಾಗಳೆಲ್ಲ ಗ್ರಾಮದ ಸ್ವರೂಪ ಪಡೆದಿವೆ. ಖೇಡ, ಖೇಳಗಿ ಇವು ಬೀದರ ಜಿಲ್ಲೆಯಲ್ಲಿವೆ.

ಗ್ರಾಮ ಸ್ಥಾಪನೆಗೆ ಅನೇಕ ಅಂಶಗಳನ್ನು ಗಮನಿಸಲಾಗುತ್ತದೆ. ಹೆಚ್ಚಿನ ಗ್ರಾಮಗಳು ನದಿ, ಹಳ್ಳ, ತೊರೆಗಳ ದಂಡೆಯ ಮೇಲೆ ಕಟ್ಟಲ್ಪಟ್ಟಿವೆ. ಬದುಕಲು ಅತ್ಯವಶ್ಯವಾಗಿ ಬೇಕಾದ ನೀರಿನ ಸೌಲಭ್ಯವೇ ಇದಕ್ಕೆ ಕಾರಣ, ಅಲ್ಲದೆ ನದಿದಂಡೆಯ ಭೂಮಿ ಫಲವತ್ತಾಗಿರುತ್ತದೆ. ಕೃಷಿಗೆ ಉಪಯುಕ್ತವಾಗಿರುತ್ತದೆ. ಸಾಮಾನ್ಯವಾಗಿ ಗ್ರಾಮಗಳನ್ನು ಎತ್ತರದ ಮೇಲೆ, ದಿನ್ನೆಗಳ ಮೇಲೆ ಕಟ್ಟಿದ್ದಾರೆ. ಪ್ರವಾಹ, ಜವುಳು, ದಾಳಿಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಎತ್ತರದ  ಸ್ಥಳ ಆಯ್ಕೆಮಾಡಿಕೊಳ್ಳಲಾಗಿದೆ.

ಗ್ರಾಮದ ಪ್ರವೇಶದ್ವಾರಕ್ಕೆ ಅಗಸಿ ಎಂದು ಹೆಸರು, ಊರಿಗೆ ಅಗಸಿ ಹಲವು ಇರಬಹುದು. ಅವುಗಳಲ್ಲಿ ಒಂದು ಅತ್ಯಂತ ಪ್ರಮುಖವಾಗಿರುತ್ತವೆ. ಒಂದನ್ನೊಂದು ಬೇರ್ಪಡಿಸಿ ಹೇಳಲು ಆ ಅಗಸಿಯಿಂದ ಪ್ರಾರಂಭವಾಗುವ ರಸ್ತೆ ಯಾವ ಗ್ರಾಮಕ್ಕೆ ಹೋಗುವುದೋ ಅದನ್ನು ಆ ಗ್ರಾಮದ ಅಗಸಿಯೆಂದು ಕರೆಯುತ್ತಾರೆ. ಉದಾ – ಧಾರವಾಡದಲ್ಲಿರುವ ನವಲಗುಂದ ಅಗಸಿ, ಹುಬ್ಬಳ್ಳಿಯ ಭಂಡಿವಾಡ ಅಗಸಿ ಇತ್ಯಾದಿ. ಮುಖ್ಯ ಅಗಸಿ ಒಂದು ಹೆಬ್ಬಾಗಿಲನ್ನು ಹೊಂದಿರುವದು ಸಾಮಾನ್ಯ. ಈ ಹೆಬ್ಬಾಗಿಲಿಗೆ ಹೊಂದಿಕೊಂಡತೆ ಎತ್ತರ ಗೋಡೆಗಳ ಮನೆಗಳಿರುತ್ತವೆ. ಅಂದರೆ ಈ ಬಾಗಿಲಿನಿಂದ ಮಾತ್ರ ಗ್ರಾಮ ಪ್ರವೇಶ ಸಾಧ್ಯ. ಪರರ ದಾಳಿಯಿಂದ ರಕ್ಷಣೆ ಪಡೆಯಲು ಭದ್ರವಾದ ಅಗಸಿ ಬಾಗಿಲು ಅವಶ್ಯವೆನಿಸಿತ್ತು. ಇಂಥ ಹೆಬ್ಬಾಗಿಲು ಇಲ್ಲದ ಕಡೆ ಒಂದು ಚಪ್ಪರವೋ, ಎರಡು ಬದಿಗೆ ಕಲ್ಲಿನ ಕಂಬಗಳೋ ಅಗಸಿಯನ್ನು ಸೂಚಿಸುತ್ತವೆ. ಇವೆಲ್ಲ ಇಲ್ಲದಿದ್ದರೂ ನಿರ್ದಿಷ್ಟ ಸ್ಥಳವನ್ನು ಅಗಸಿ ಎಂದು ಗುರುತಿಸಿರುತ್ತಾರೆ. ಅಗಸಿಯ ಬಗ್ಗೆ ಗ್ರಾಮೀಣರಿಗೆ ತುಂಬಾ ಅಭಿಮಾನ ಗೌರವ. ಪರ ಊರಿನ ಮದುವೆ ನಿಬ್ಬಣ ಈ ಅಗಸಿಯಿಂದಲೇ ಊರಲ್ಲಿ ಪ್ರವೇಶಮಾಡಬೇಕು. ಬೀಗರನ್ನು ಎದುರುಗೊಳ್ಳುವ ಸಮಾರಂಭ ನಡೆಯುತ್ತದೆ. ದೇವರ ಉತ್ಸವ ಊರ ಹೊರಗೆ ಹೋಗಬೇಕಾದಾಗ ಅಗಸಿಯಿಂದಲೇ ಹೋಗಬೇಕು. ಅಗಸಿಯಲ್ಲಿ ಎರಡು ಕಂಬಗಳಿದ್ದು ಅವುಗಳಿಗೆ ಕರಿಕಟ್ಟಿ ಕಾರಹುಣ್ಣಿಮೆಯಲ್ಲಿ ಕರಿ ಹರಿಯುವರು. ಹಿಂದಿನ ಕಾಲದಲ್ಲಿ ವೈರಿಯ ತಲೆ ಕಡಿದು ಅಗಸಿ ಬಾಗಿಲಿಗೆ ಕಟ್ಟುತ್ತಿದ್ದರು. ಹೀಗೆ ಅಗಸಿ ಗ್ರಾಮದ ಮಹತ್ವದ ಭಾಗವಾಗಿದೆ.

ಅಗಸಿಗೆ ಹೊಂದಿಕೊಂಡು ಓಣಿಗಳು ವ್ಯಾಪಿಸಿರುತ್ತವೆ. ಓಣಿಗಳ ಉದ್ಧ ಅಗಲ ವಿಸ್ತಾರಗಳಿಗೆ ಯಾವುದೇ ತರದ ಲೆಕ್ಕಾಚಾರವಿಲ್ಲ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮಗಳ ಓಣಿಗಳು ಚಿಕ್ಕವು. ಎಷ್ಟೊ ಕಡೆ ಚಕ್ಕಡಿ ಹಾಯಲು ಜಾಗೆ ಇರದಷ್ಟು ಚಿಕ್ಕವಾಗಿರುತ್ತವೆ. ಅಗಲ ಕಡಿಮೆ ಇದ್ದಂತೆ ಉದ್ದವೂ ಕಡಿಮೆ. ಅಂಕುಡೊಂಕಾಗಿ ವ್ಯಾಪಿಸಿ ಅನೇಕ ಸಂದಿಗೊಂದಿಗಳನ್ನು ನಿರ್ಮಿಸಿರುತ್ತವೆ. ಮನೆಗಳು ಹೆಚ್ಚಾಗಿ ಗುಂಪುಮನೆಗಳು. ಒಂದನ್ನೊಂದು ಆಶ್ರಯಿಸಿಕೊಂಡು ಮನೆಗಳು ಕಟ್ಟಲ್ಪಟ್ಟಿರುತ್ತವೆ. ಒತ್ತಟ್ಟಿಗಿರುವ ಮತ್ತು ಉಳಿತಾಯದ ಉದ್ದೇಶದಿಂದ ಹೀಗೆ ಗುಂಪು ಮನೆಗಳು ನಿರ್ಮಾಣವಾಗಿರುವುದರಿಂದ ವ್ಯವಸ್ಥಿತವಾದ ಮತ್ತು ವಿಶಾಲವಾದ ಓಣಿಗಳನ್ನು ನಿರೀಕ್ಷಿಸುವದು ತಪ್ಪಾಗುತ್ತದೆ. ಓಣಿಗಳಿಗೆ ಕೇರಿ, ಗಲ್ಲಿಗಳೆಂದೂ ಹೆಸರು.

ಗ್ರಾಮೀಣ ಸಮಾಜ ಜಾತಿಗಳನ್ನಾಧರಿಸಿ ಸಂಯೋಜಿಸಲ್ಪಟ್ಟಿದ್ದು. ಜಾತಿ ವ್ಯವಸ್ಥೆ ಇಲ್ಲಿ ಕಟ್ಟು ನಿಟ್ಟಾಗಿ ರೂಢಿಯಲ್ಲಿದೆ. ಕೃಷಿಕರ್ಮ ಪ್ರಧಾನವಾದ ಗ್ರಾಮಗಳಲ್ಲಿ ಕೃಷಿಗೆ ಪೂರಕವಾದ ಅನೇಕ ವೃತ್ತಿಗಳು ಇರಬೇಕಾದುದು ಸಹಜ. ಉದಾ – ಬಡಿಗತನ, ಕಮ್ಮಾರಿಕೆ ಇತ್ಯಾದಿ. ಈ ಬಹು ಸಂಖ್ಯಾತ ಕೃಷಿಕರ ಜೀವನಕ್ಕೆ ಬೇಕಾದ ಸಾಮಗ್ರಿಗಳನ್ನು ತಯಾರಿಸುವ, ನಿತ್ಯ ಜೀವನದ ಕೆಲಸ ಕಾರ್ಯಗಳನ್ನು ಪೂರೈಸುವ ವೃತ್ತಿಗಳು ಅವಶ್ಯವೆನಿಸಿದವು. ಉದಾ -ಕುಂಬಾರಿಕೆ, ಮೇದಾರಿಕೆ, ಚಮ್ಮಾರಿಕೆ, ಕ್ಷೌರಿಕ, ಸಗ ಇತ್ಯಾದಿ. ಈ ವಿವಿಧ ವೃತ್ತಿಗಳೇ ಕಾಲ ಕ್ರಮೇಣ ಜಾತಿಗಳೆನಿಸಿದವು. ಈ ಜಾತಿಗಳು ತಮ್ಮ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ತಮ್ಮ ವೃತ್ತಿಯ ಗೌಪ್ಯತೆ ಕಾಪಾಡಿಕೊಳ್ಳಲು, ಸಂರಕ್ಷಣೆಯನ್ನನುಭವಿಸಲು ಒಂದೇ ಕಡೆ ವಾಸಿಸಲಾರಂಭಿಸಿದರು. ಮೇಲ್ನೋಟಕ್ಕೆ ಜಾತಿ ಜಾತಿಯಲ್ಲಿ ಅಂತರವಿದ್ದರೂ ಅಂತರಂಗದಲ್ಲಿ ಸೌಹಾರ್ದತೆಯ ಭಾವವಿದೆ. ಪರಸ್ಪರರನ್ನು ಅವಲಂಬಿಸಿಯೇ ಬದುಕಬೇಕಾದ ಅನಿವಾರ್ಯತೆಯೂ ಇದಕ್ಕೆ ಕಾರಣವೆನ್ನಬಹುದು. ಒಂದೊಂದು ಜಾತಿಯವರು ವಾಸಿಸುವ ಭಾಗ ಆಯಾ ಜಾತಿಯ ಓಣಿಯ ಓಣಿಯಾಯಿತು. ಕೇರಿಯಾಯಿತು. ಅಗಸ, ಕ್ಷೌರಿಕ, ನೇಕಾರ, ಕುಂಬಾರ, ಬಡಿಗ, ಅಕ್ಕಸಾಲಿಗ, ಗಾಣಿಗ, ಮೇದಾರ,ಬಳಿಗಾರ, ಸಿಂಪಿಗ, ಸುಣಗಾರ ಮುಂತಾದ ವೃತ್ತಿಯವರು ವಾಸಿಸುವ ಓಣಿಯನ್ನು ಅವರವರ ಹೆಸರಿನಿಂದ ಕರೆಯುತ್ತಾರೆ. ಒಮ್ಮೊಮ್ಮೆ ಆ ಓಣಿಯಲ್ಲಿ ಇತರರೂ ವಾಸವಾಗಿರಬಹುದು. ಬಹುಸಂಖ್ಯಾತರು ಯಾರಿರುವರೋ ಅವರ ಹೆಸರು ಮಾತ್ರ ಗುರುತಿಸಲ್ಪಟ್ಟಿರುತ್ತದೆ. ಹಾಗೇ ಬ್ರಾಹ್ಮಣರ, ಮುಸ್ಲಿಮರ, ಜೈನರ, ಕುರುಬರ, ಬೇಡರ, ರಡ್ಡೇರ ಕೇರಿಗಳು ತಮ್ಮ ತಮ್ಮ ಅಸ್ತಿತ್ವ ಪಡೆದುಕೊಂಡಿರುತ್ತವೆ. ಒಂದೆ ಜಾತಿಯವರು ಊರಿನ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದರೆ ಅಲ್ಲಿ ಬೇರೆ ಬೇರೆ ಹೆಸರಿನ ಓಣಿಗಳಿರುತ್ತವೆ. ಆ ಓಣಿಯಲ್ಲಿರುವ ಒಬ್ಬ ಪ್ರತಿಷ್ಠರ ಹೆಸರು ಆ ಓಣಿಗೆ ಅಂಟಿಕೊಂಡಿರುತ್ತವೆ. ಉದಾ – ಗೌಡ್ರ ಓಣಿ, ಕುಲಕರ್ಣಿರ ಓಣಿ, ಜಾತಿ ವ್ಯವಸ್ಥೆ ಎಷ್ಟೇ ನಿಷ್ಠುರವಾಗಿದ್ದರೂ ಮಿಶ್ರ ವಸತಿಗಳು ಗ್ರಾಮದಲ್ಲಿರುವದು ಸಹಜ. ನಿರ್ದಿಷ್ಠ  ಜಾತಿಯ ಓಣಿಯ ಒಂದು ಕುಟುಂಬ ಯಾವಯಾವದೋ ಕಾರಣಕ್ಕೆ ಬೇರೆ ಜಾತಿಯ ಓಣಿಯಲ್ಲಿ ಮನೆ ಮಾಡಿಕೊಂಡಿರಬೇಕಾದ ಸಂದರ್ಭಗಳು ಬಂದಾಗ ಮಿಶ್ರ ವಸತಿ ಸಾಧ್ಯವಾಗುತ್ತದೆ. ಇತ್ತೀಚೆಗೆ ಸರ್ಕಾರವು ನೀಡುತ್ತಿರುವ ಜನತಾಮನೆಗಳಲ್ಲಿ ಬೇರೆ ಬೇರೆ ಜಾತಿಯವರು ಅಕ್ಕ ಪಕ್ಕದಲ್ಲಿ ವಾಸಿಸುತ್ತಿದ್ದಾರೆ. ಹರಿಜನ ಕೇರಿ ಗ್ರಾಮದ ಅಂಚಿನಲ್ಲಿರುತ್ತದೆ.

ಯೋಜಿತವಲ್ಲದ ಅಡ್ಡಾದಿಡ್ಡಿ ವ್ಯಾಪಿಸಿದ ಓಣಿಗಳಿರುವದರಿಂದ ಮಳೆ ನೀರು, ಬಚ್ಲ ನೀರು ಹರಿದು ಹೋಗಲು ಗಟಾರುಗಳ ವ್ಯವಸ್ಥೆ ಇರುವುದಿಲ್ಲ. ಮಳೆ ನೀರು ಓಣಿ ತುಂಬೆಲ್ಲ ಹರಿದು ಕೊನೆಗೆ ಊರ ಹೊರಗೆ ದಾಟುತ್ತದೆ. ಮಳೆಗಾಲದಲ್ಲಿ ಓಣಿಗಳು ಕೆಸರುಮಯವಾಗಿರುತ್ತವೆ. ಕೆಲವು ಊರುಗಳಲ್ಲಿ ಓಣಿಗೆ ಕಲ್ಲು ಹೊಂದಿಸಿಕೆಸರಾಗುವದನ್ನು ನಿವಾರಿಸಿರುತ್ತಾರೆ. ಇದರಲ್ಲಿ ಬಚ್ಚಲ ನೀರು ಇಂಗಿ ಹೋಗುವುದರಿಂದ ಓಣಿ ಕೊಳೆಯಾಗುವದು ತಪ್ಪುತ್ತದೆ. ಇತ್ತೀಚೆಗೆ ಗ್ರಾಮಗಳಿಗೆ ನಲ್ಲಿ ನೀರಿನ ವ್ಯವಸ್ಥೆಯಾಗುತ್ತಿದೆ. ನಲ್ಲಿಗಳಿಂದ ಸೋರುವ ಹೆಚ್ಚಿನ ನೀರೆಲ್ಲ ಓಣಿಗಳಲ್ಲಿ ಮಲೆತು ನಿಂತು ಸೊಳ್ಳೆಗಳ ಜನ್ಮಸ್ಥಾನವಾಗಿರುತ್ತದೆ.

ಹಿಂದೆ ಗ್ರಾಮಗಳು ಆಡಳಿತಾತ್ಮಕವಾಗಿ ಸ್ವತಂತ್ರ ಘಟಕಗಳಾಗಿದ್ದವು. ಸ್ವರಕ್ಷಣೆ ಗ್ರಾಮಗಳ ಜವಾಬ್ದಾರಿಯಾಗಿತ್ತು. ಪರಕೀಯರ ದಾಳಿಯನ್ನು ವ್ಯವಸ್ಥಿತವಾಗಿ ಎದುರಿಸಬೇಕಾಗಿತ್ತು. ದಾಳಿ ಬರುವದನ್ನು ಕಂಡುಕೊಳ್ಳಲು ಊರ ಮಧ್ಯದಲ್ಲಿ ಎತ್ತರವಾದ ಹೂಡೇ (ಮಣ್ಣಿನ ದಿನ್ನೆ) ನಿರ್ಮಿಸಲಾಗಿತ್ತು. ಅದರ ಮೇಲೆ ನಿಂತರೆ ಸುಮಾರು ಐದಾರು ಕಿ.ಮೀ ದೂರದವರೆಗಿನ ಚಲನವಲನಗಳನ್ನು ನೋಡಬಹುದಿತ್ತು. ದಾಳಿ ಬರುವ ಸೂಚನೇ ಬಂದ ಕೂಡಲೇ ಊರವರೆಲ್ಲ ಒಂದಾಗಿ ಅಗಸಿ ಬಾಗಿಲು ಭದ್ರಪಡಿಸಿ ದಾಳಿ ಎದುರಿಸಲು ಸನ್ನದ್ಧರಾಗುತ್ತಿದ್ದರು. ಹೂಡೆಗಳ ವ್ಯವಸ್ಥೆ ನೋಡಿಕೊಳ್ಳಲು ಅದರ ಸಮೀಪದ ಕೆಲವು ಮನೆಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ಆ ಮನೆತನಗಳು “ಹೂಡೇದವರು” ಎಂದು ಗುರುತಿಸಲ್ಪಟ್ಟಿದ್ದಾರೆ.

ಗುಡಿಗಳಿಲ್ಲದ ಗ್ರಾಮವಿಲ್ಲ. ಗ್ರಾಮದ ಸರ್ವ ಜನಾಂಗದವರೂ ನಡೆದುಕೊಳ್ಳುವ ಕೆಲವೇ ಪ್ರಮುಖ ದೇವರುಗಳಿದ್ದಾರೆ. ಹಣಮಂತ, ಗ್ರಾಮದೇವತೆ, (ದೇಮವ್ವ, ದುರಗವ್ವ, ಊರಮ್ನ,) ಇವರಿಬ್ಬರು ಇರಲೇಬೇಕು. ಹಣಮಂತನ ಗುಡಿ ಅಗಸಿಯ ಸಮೀಪವಿದ್ದರೆ ಗ್ರಾಮದೇವತೆಯ ಗುಡಿ ಸಾಮಾನ್ಯವಾಗಿ ಊರಿನ ಮಧ್ಯದಲ್ಲಿರುತ್ತದೆ. ಇದು ಊರಿನ ಸಾಂಸ್ಕೃತಿಕ ಕೇಂದ್ರವೂ ಹೌದು. ಜನ ಕೂಡ್ರುವುದು, ಹರಟೆ ಹೊಡೆಯುವದು, ಪಂಚಾಯಿತಿ ಮಾಡುವದು, ಭಜನೆ ಮಾಡುವದು ಈ ಗ್ರಾಮದೇವತೆಯ ಗುಡಿಯಲ್ಲಿ. ಈ ಎಲ್ಲ ಕಾರಣಗಳಿಂದ ಇದು ಮಹತ್ವದ ಸ್ಥಾನವಾಗಿದೆ. ಇನ್ನು ಉಳಿದಂತೆ ಆಯಾ ಜಾತಿಯ ಓಣಿ – ಕೇರಿಗಳಲ್ಲಿ ಅವರವರ ಜಾತಿಯ ದೇವರ ಗುಡಿಗಳಿರುತ್ತವೆ. ಉದಾ – ಕುರುಬರ ಓಣಿಯಲ್ಲಿ ಬೀರಪ್ಪನ ಗುಡಿ, ದೇವಾಂಗದವರ ಓಣಿಯಲ್ಲಿ ಬನಶಂಕರಮ್ಮನ ಗುಡಿ, ಜೈನರ ಓಣಿಯಲ್ಲಿ ಬಸ್ತಿ, ಇತ್ಯಾದಿ.

ಗೌಡರ ಮನೆಯ ಸಮೀಪ ಚಾವಡಿ ಇರುತ್ತದೆ. ಇದು ಗ್ರಾಮದ ಸಾರ್ವಜನಿಕ ಕಚೇರಿ ಇದ್ದಂತೆ. ಊರಿಗೆ ಯಾರಾದರೂ ಬಂದಾಗ ಅವರು ಇಲ್ಲಿ ಕುಳಿತುಕೊಂಡು ಅಧಿಕಾರ ಚಲಾಯಿಸುತ್ತಾರೆ. ನ್ಯಾಯ ತೀರ್ಮಾನ ಇಲ್ಲಿಯೇ ನಡೆಯುತ್ತದೆ. ಚಾವಡಿಯ ಮೇಲೆ ಸಾಮಾನ್ಯವಾಗಿ ಊರಿನ ಗೌಡನ ನಿಯಂತ್ರಣವಿರುತ್ತದೆ.

ಗ್ರಾಮದ ಅಗಸಿಯಲ್ಲಿ ಮಧ್ಯಕ್ಕೆ ಒಂದು ಗುಂಡು ಕಲ್ಲಿರುತ್ತದೆ. ಅದರ ಅರ್ಧ ಭಾಗ ನೆಲದಲ್ಲಿರುತ್ತದೆ. ಇದಕ್ಕೆ ಗೋರ್ಕಲ್ಲು, ಬುಡ್ಡೇಕಲ್ಲು ಅನ್ನುತ್ತಾರೆ. ಇದರ ಬಗ್ಗೆ ಹಳ್ಳಿಗರಿಗೆ ಗೌರವ ಬಹಳ. ಎಮ್ಮೆ ಆಕಳು ಈದಾಗ ಮೊದಲ ಹಾಲು ತಂದು ಈ ಕಲ್ಲಿನ ಮೇಲೆ ಹಾಕುತ್ತಾರೆ. ಹಬ್ಬ ಹುಣ್ಣಿಮೆ ಉತ್ಸವಗಳ ಸಂದರ್ಭದಲ್ಲಿ ಎಣ್ಣೆ ತಂದು ಇದರ ಮೇಲೆ ಹಾಕುತ್ತಾರೆ. ರಸ್ತೆಯ ಮಧ್ಯದಲ್ಲಿದ್ದರೂ ಇದನ್ನೂ ಯಾರು ತುಳಿಯುವುದಿಲ್ಲ. ತುಳಿದರೂ ಪ್ರಾಯಶ್ಚಿತ್ತಕ್ಕಾಗಿ ಮುಟ್ಟಿ ನಮಸ್ಕರಿಸುತ್ತಾರೆ. ಗ್ರಾಮವನ್ನು ಸ್ಥಾಪಿಸುತ್ತಿರುವಾಗ ಈ ಗೋರ್ಕಲ್ಲನ್ನು ಹುಗಿದಿರುತ್ತಾರಂತೆ. ಪ್ರತಿಯೊಂದು ಗ್ರಾಮವು ತನ್ನ ನೀರಿನ ವ್ಯವಸ್ಥೆಗಾಗಿ ಕೆರೆ ಬಾವಿಗಳನ್ನು ಕಟ್ಟಿಕೊಂಡಿರುತ್ತದೆ. ನದಿ ದಡದ ಮೇಲಿನ ಊರುಗಳಿಗೆ ನೀರಿನ ಸಮಸ್ಯೆ ಇದ್ದಿರಲಿಲ್ಲ ಒಳಭಾಗದ ಗ್ರಾಮಗಳು ಊರಮಧ್ಯೆ. ಊರ ಮಗ್ಗಲಿಗೆ ಬಾವಿ ತೋಡಿಕೊಂಡಿವೆ. ಸೇದುವ ಬಾವಿ ಮತ್ತು ಹೊಕ್ಕು ತುಂಬುವ ಬಾವಿ ಎಂದು ಎರಡು ವಿಧ. ಹೊಕ್ಕು ತುಂಬುವ ಬಾವಿಯನ್ನು ಯಾರೂ ಹೊಲಸು ಮಾಡಬಾರದೆಂಬ ನಿಯಮವಿರುತ್ತದೆ. ಈ ಸರ್ವಗ್ರಹಿತ ನಿಯಮ ಪಾಲನೆಗಾಗಿ ಕಾವಲು ಇರುತ್ತಾರೆ. ಇದರಂತೆ ಧಾರವಾಡ ಜಿಲ್ಲೆಯ ಗ್ರಾಮಗಳ ಪಕ್ಕದಲ್ಲಿರುವ ಬಳಕೆ ನೀರಿನ ಕೆರೆಗಳನ್ನು  ಕಾಯುತ್ತಾರೆ. ನೀರಾವರಿಯ ಕೆರೆಗಳೂ ಭೂಮಿಯಲ್ಲಿರುತ್ತವೆ. ಈ ಕೆರೆಗಳು ಕೂಡ ಗ್ರಾಮದ ಅವಿಭಾಜ್ಯ ಅಂಗವಾಗಿವೆ.

ಗ್ರಾಮದ ದನಗಳನ್ನು ಮೇಯಿಸಲು ಒಂದಿಷ್ಟು ಸಾರ್ವಜನಿಕ ಭೂಮಿ ಇರುತ್ತದೆ ಇದಕ್ಕೆ ಗೋಮಾಳ, ತುರಮಂಡಿ ಎನ್ನುತ್ತಾರೆ. ಇದು ಹೆಸರಿಗೆ ಗೋಮಾಳವಾಗಿದ್ದರೂ ಊರಿನ ದನಗಳೆಲ್ಲ ಇಲ್ಲಿ ಮೇಯುತ್ತದೆ. ಇಂಥ ಬಯಲು ಜಾಗೆಗೆ ಬೀದರ ಜಿಲ್ಲೆಯಲ್ಲಿ ಗೈರಾಣ ಜಮೀನು ಅನ್ನುತ್ತಾರೆ. ಇತ್ತಿತ್ತಲಾಗಿ ತುರಮಂದಿಗಳು ಉಳುಮೆ ಭೂಮಿಗಳಾಗಿವೆ.

ರೈತರು ದಿನನಿತ್ಯದ ಸೆಗಣಿಯನ್ನು ಸಂಗ್ರಹಿಸಿ ಗೊಬ್ಬರ ತಯಾರಿಸಲು ತಿಪ್ಪೆಗಳನ್ನು ಮಾಡಿಕೊಂಡಿರುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಈ ತಿಪ್ಪೆಗಳು ಊರ ಹೊರಭಾಗಕ್ಕಿರುತ್ತವೆ. ಅವರವರ ತಿಪ್ಪೆಯ ಗುಂಡಿ ಅವರವರಿಗೆ ಗೊತ್ತಿರುತ್ತದೆ. ಊರಲ್ಲಿ ಜಾಗಾ ಕಡಿಮೆ ಇದ್ದುದಕ್ಕಾಗಿ ಇಂಥ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದೆ ರೀತಿ ಬಣವೆಗಳನ್ನೂ ಊರ ಹೊರಗೆ ಸಾಲಾಗಿ ಒಟ್ಟಿರಿರುತ್ತಾರೆ. ಊರ ಹೊರಗೆ ಸಮಾನಾಂತರವಾಗಿ ಕಣಗಳಿರುತ್ತವೆ. ಹಿತ್ತಿಲುಗಳಾಗಿರುವ ಈ ಕಣಗಳಲ್ಲಿ ಕಾಳು ಒಕ್ಕುವದು, ಹುಲ್ಲು ಒಟ್ಟುವದು, ಹೊಟ್ಟು ಸಂಗ್ರಹಿಸುವುದನ್ನೂ ಮಾಡುತ್ತಾರೆ. ಇಂಥ ಜಾಗೆಗೆ ರಾಯಚೂರು ಜಿಲ್ಲೆಯಲ್ಲಿ ಪರಡಿ ನಂಬರ್ ಎನ್ನುತ್ತಾರೆ.

ಗ್ರಾಮವನ್ನು ಸುತ್ತುವರೆದು ಒಂದು ಬೇಲಿಯಿರುತ್ತದೆ. ಇದು ಸಾಮಾನ್ಯವಾಗಿ ಕಳ್ಳಿ ಸಾಲಾಗಿರುತ್ತದೆ. ಎತ್ತರವಾಗಿ ಬೆಳೆದ ಕಳ್ಳಿಯ ಸಾಲು ಮರೆಯಾಗುವುದರಿಂದ ಈ ಜಾಗೆ ಬಹಿರ್ದೆಶೆಗೆ ಅನುಕೂಲವಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಬೇರೆ ಬೇರೆ ದಿಕ್ಕುಗಳಿರುತ್ತವೆ.

ಗ್ರಾಮದ ವ್ಯಾಪ್ತಿ ಅದರ ಕೃಷಿ ಭೂಮಿವರೆಗೆ ಇರುತ್ತದೆ. ಗ್ರಾಮದ ಸುತ್ತಲಿನ ಭೂಮಿಯೆಲ್ಲ ಗ್ರಾಮಕ್ಕೆ ಸೇರಿದ್ದು. ಈ ಭೂಮಿಯ ಗಡಿಯನ್ನು ಸೀಮೆ ಎನ್ನುತ್ತಾರೆ. ಸೀಮೆಯಿಂದಾಚೆಗಿನದು ಪರ ಊರಿನವರದು. ಈ ಸೀಮೆಯ ಬಗ್ಗೆ ಗ್ರಾಮೀಣರಿಗೆ ಅಪಾರ ಗೌರವ, ಅಭಿಮಾನ, ಪರಕೀಯರನ್ನು ತಮ್ಮ ಸೀಮೆಯಲ್ಲಿ ಬಿಡುವುದಿಲ್ಲ. ತಮ್ಮ ಸೀಮೆಯೊಳಗೆ ಪ್ರವೇಶಿಸಬೇಕಾದರೆ ಅಪ್ಪಣೆ ಪಡೆಯಬೇಕು. ಸೀಮೆಗೆ ಕೆಲವು ಗಿಡ ಮರ ಹಳ್ಳ ತೊರೆಗಳ ಗುರುತು ಇರುತ್ತದೆ.

ಇದಿಷ್ಟು ಉತ್ತರ ಕರ್ನಾಟಕದ ಗ್ರಾಮಗಳ ವಿನ್ಯಾಸ.

* * * 


[1]      ಕನ್ನಡ ವಿಶ್ವಕೋಶ – ನಂ. ೬ ಪುಟ ೪೦೧

[2]      ಉಧೃತ- ಕನ್ನಡ ವಿಶ್ವಕೋಶ – ನಂ ೬ – ಪುಟ ೮೦೧

[3]      ಉಧೃತ – ಎಚ್‌. ವಿ  ನಾಗೇಶ್ – ಗ್ರಾಮಾಂತರ – ಪುಟ – ೩