ಗ್ರಾಮವನ್ನು ಅರ್ಥಮಾಡಿಕೊಂಡರೆ ನಮ್ಮ ಸಮಾಜ ರಚನೆಯನ್ನು ಅರ್ಥಮಾಡಿಕೊಂಡಂತೆ. ಅದು ಜನಪದ ಸಾಂಸ್ಕೃತಿಕ ಪೂರಕ ಎ, ಬ. ಹೇಳಿಕೆಯಂತೆ ಗ್ರಾಮವೆಂಬ ಆಡುಂಬೊಲದಲ್ಲಿಯೇ ಮಾನವ ಸಮಾಜ ವಿಕಸಿತವಾಗುತ್ತ ಬಂದಿದೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಗ್ರಾಮದ ಪಾತ್ರ ಅತ್ಯಂತ ಮಹತ್ವದ್ದು. ದೇಶಕ್ಕೆ ಆಸಾರ ಹಾಗೂ ಕಚ್ಚಾಸಾಮಗ್ರಿಗಳದ್ದಾಗಿದೆ. ಜೊತೆಗೆ ಭಾರತದಂತಹ ಗ್ರಾಮಗಳ ದೇಶದಲ್ಲಿ ನಮ್ಮ ಸಂಸ್ಕ್ರತಿಯ ಸಾರವನ್ನು ಉಳಿಸಿ ಬೆಳೆಸಿಕೊಂಡು ಬರುವ ಅತಿ ಮಹತ್ವದ ಜವಾಬ್ದಾರಿಯೂ ಗ್ರಾಮಗಳದ್ದೇ ಆಗಿದೆ.

ಗ್ರಾಮಗಳ ಸ್ವರೂಪ ನಿರ್ಣಯವು ಮುಖ್ಯವಾಗಿ ಆ ಪ್ರದೇಶದ ಭೌಗೋಳಿಕ ಹಾಗೂ ಸಾಮಾಜಿಕ ಪರಿಸರವನ್ನು ಅವಲಂಬಿಸಿರುತ್ತದೆ. ಭಿನ್ನ ಸಾಮಾಜಿಕ ಪದ್ಧತಿಗಳ ಅದರ ಆಚಾರ – ವಿಚಾರ ಹಾಗೂ ಅವರು ನಂಬಿದ ದೇವ – ದೆವ್ವಗಳು ಇವೂ ಕೂಡ ಗ್ರಾಮ ವಿನ್ಯಾಸದ ಮೇಲೆ ಗಣನೀಯವಾದ ಪರಿಣಾಮವನ್ನು ಬೀರಬಹುದು. ಈ ನೆಲೆಯಲ್ಲಿ ಕರಾವಳಿಯ ಗ್ರಾಮ ವಿನ್ಯಾಸ- ಬಯಲು ಸೀಮೆಯ ಅಥವಾ ಮಲೆನಾಡಿನ ಗ್ರಾಮವಿನ್ಯಾಸಕ್ಕಿಂತ ಭಿನ್ನವಾಗಿರುತ್ತದೆ.

ಭರತನು ಗ್ರಾಮವನ್ನು ಬ್ರಾಹ್ಮಣಾದಿ ವರ್ಣಗಳೆಂಬ ಕೂಡಿದ ಪ್ರಕಾರ ಕಂದಕಗಳಿಲ್ಲದ ಬಹುಜನವಸತಿಯೆಂದು ವರ್ಣಿಸಿದ್ದಾನೆ. ಮಾರ್ಕಂಡೇಯ ಪುರಾಣದಲ್ಲಿ ಶೂದ್ರರು ಹೆಚ್ಚು ಸಂಖ್ಯೆಯಲ್ಲಿರುವ, ರೈತರು ಸಮೃದ್ದರಾಗಿರುವ ಸಾಗುವಳಿ ಯೋಗ್ಯವಾದ ಭೂಮಿಯ ಮಧ್ಯದಲ್ಲಿಯ ಜನವಸತಿಗೆ ಗ್ರಾಮವೆಂದು ಹೆಸರು ಎಂದಿದೆ. ಋಗ್ವೇದವು ಗ್ರಾಮವನ್ನು ಹಲವು ಕುಟುಂಬಗಳಿರುವ ನೆಲೆಯೆಂದು ವರ್ಣಿಸುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗ್ರಾಮಗಳೆಂದರೆ ನೂರಕ್ಕೆ ಕಡಿಮೆ ಇಲ್ಲದಷ್ಟು ಆದರೆ ಐನೂರಕ್ಕೆ ಮೀರದಷ್ಟು ಶೂದ್ರರಾದ ಕೃಷಿಕರ ಕುಟುಂಬಗಳಿರುವ ಒಂದು ಕ್ರೋಶ ಅಳತೆಯ ದೂರದವರೆಗೆ ಹರಡಿರುವ ಹಾಗೂ ನದಿ, ಪರ್ವತ, ಕಾಡು, ಹೂ ಬಿಡುವ ಮರಗಳಿಂದ ಕುಡಿದ ಮೇರೆಗಳಿರುವ ಮತ್ತು ತಮ್ಮನ್ನೆ ತಾವೇ ಸಂರಕ್ಷಿಸಿಕೊಳ್ಳಬಲ್ಲ ಜನವಸತಿಗಳೆಂದು ವರ್ಣಿಸಲಾಗಿದೆ. ಹೀಗೆ ಪ್ರಾಚೀನ ಗ್ರಂಥಗಳಿಂದ ನಮಗೆ ಗ್ರಾಮವೆಂದರೆ ಜನರೂ, ಗೋವುಗಳೂ, ಕೃಷಿಭೂಮಿಯೂ ಇರುವ ನೆಲೆಯೆಂಬ ಒಟ್ಟಾರೆ ಭಾವನೆಯು ಬರುತ್ತದೆ. ೧೯೭೧ ರ ಜನಗಣತಿಯ ಪ್ರಕಾರ ಗ್ರಾಮವೆಂದರೆ ಆಡಳಿತದ ದೃಷ್ಟಿಯಿಂದ ಮೇರೆಗಳನ್ನು ಗುರುತಿಸಿದ ಹಾಗೂ ಜನವಸತಿ  ಇರಲಿ, ಬಿಡಲಿ ಪ್ರತ್ಯೇಕವಾದ ಭೂದಾಖಲೆಗಳುಳ್ಳ ಹಾಗೂ ಇರುವ ಜನಸಂಖ್ಯೆಯ ಒಂದು ಅಥವಾ ಎರಡು ಹೆಚ್ಚು ಕೊಪ್ಪಲುಗಳಲ್ಲಿ (ಹ್ಯಾಮ್ಲೆಟುಗಳು) ಹರಡಿ ಹೋಗಿರುವ ಸಮುದಾಯ. ಭಾರತೀಯ ಹಾಗೂ ವಿದೇಶಿಯ ಗ್ರಾಮಗಳನ್ನು ಅಧ್ಯಯನ ಮಾಡಿರುವ ನಾಗೇಶ್‌ರವರು ಭಾರತೀಯ ಗ್ರಾಮ ಸ್ವರೂಪವನ್ನು ಕಂಡುಕೊಂಡಿರುವದು ಹೀಗೆ – ೫೦೦೦ ಕ್ಕಿಂತ ಕಡಿಮೆ ಜನಸಂಖ್ಯೆ ಇದ್ದು ಚದುರ ಕಿಲೋಮೀಟರಿಗೆ ೪೦೦ ಕ್ಕಿಂತ ಕಡಿಮೆ ಜನಸಾಂದ್ರತೆಯುಳ್ಳ ಹೆಚ್ಚಾಗಿ ಕೃಷಿ  ಅಥವಾ ನಿಸರ್ಗಾಧಾರಿತ  ಬೇರೊಂದು ಮುಖ್ಯೋದ್ಯೋಗ ಹೊಂದಿರುವ ಹಾಗೂ ಗ್ರಾಮೀಣ ಲಕ್ಷಣಗಳಿಂದ ಕೂಡಿರುವ ಕಿರಿಯ ಸಮುದಾಯಗಳೇ  ಗ್ರಾಮಗಳು. ನಾಗೇಶ್‌ರವರ ಈ ಮೇಲಿನ ವ್ಯಾಖ್ಯೆ ಬಯಲುಸೀಮೆ, ಮಲೆನಾಡು ಅಥವಾ ಕರಾವಳಿಯ ಯಾವ ಪ್ರದೇಶಗಳಿಗಾದರೂ ಅನ್ವಯಿಸು ವಂತಿರುವುದರಿಂದ ಕರ್ನಾಟಕ  ಗ್ರಾಮ ವಿನ್ಯಾಸಗಳ ಅಧ್ಯಯನಕ್ಕೆಇದನ್ನೆ ಆಧಾರವಾಗಿ ಇಟ್ಟುಕೊಳ್ಳಬಹುದಾಗಿದೆ. ನದಿ, ಮರ, ಬಂಡೆಗಲ್ಲು, ಸಮುದ್ರ, ಪರ್ವತ ಇವು ಗ್ರಾಮಗಳಿಗೆ ಇರಬಹುದಾದ ಸ್ವಾಭಾವಿಕ ಮೇರೆಗಳು ಅಂಥವಿಲ್ಲದ ಪಕ್ಷದಲ್ಲಿ ಗಡಿಕಲ್ಲುಗಳನ್ನು ಕಂಬಗಳನ್ನು ನೆಟ್ಟೊ, ಪೊದೆ ಬೆಳೆಯಿಸಿಯೋ ಅಥವಾ ಗೋಡೆ ಅಥವಾ ಬೇಲಿ ರಚಿಸಿಯೋ ಕೃತಕ ಗಡಿ ಗುರುತುಗಳನ್ನು ಮಾಡಿಕೊಂಡಿರುತ್ತಾರೆ. ಊರ ಹೊಲಗಳಿಗೂ ಕೂಡ ಇದೇ ಅನ್ವಯವಾಗುತ್ತದೆ. ಲಿಂಗ ಮುದ್ರೆಯ ಕಲ್ಲು (ಶೈವ ಸಂಪ್ರದಾಯಗಳ ಹೊಲಗಳ ಗಡಿಗುರುತುಗಳಾಗಿ ನೆಟ್ಟಿರುವದನ್ನು ಅವುಗಳ ಮೇಲೆ ಕೆಲವೊಮ್ಮೆ  ಶಾಸನ ರಚಿಸಲ್ಪಟ್ಟಿರುವದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಊರ ಗಡಿಗಳ ವಿಷಯದಲ್ಲಿ ಜಗಳಗಳಾದರೆ ಐದು ಅಥವಾ ಹತ್ತು ಗ್ರಾಮಗಳ ಹಿರಿಯರು ಸೇರಿ ಗಡಿಗಳಲ್ಲಿ ನೈಸರ್ಗಿಕ ಅಥವಾ ಕೃತಕ ಗುರುತುಗಳ ಸಹಾಯದಿಂದ ವಿವಾದಗಳನ್ನು ಪರಿಹರಸಬೇಕೆಂದು ಅರ್ಥಶಾಸ್ತ್ರ ಹೇಳುತ್ತದೆ.

ಸಮುದ್ರ  ದಂಡೆಗುಂಟ ಪಟ್ಟಿಯಂತೆ ಕಿರಿಯಗಲದ ಮರಳುಮಿಶ್ರಿತ ನೆಲ, ಅದಕ್ಕೆ ತಾಗಿದಂತೆ ಇಳಿಜಾರು ಪ್ರದೇಶ. ಅದಕ್ಕೆ ಒತ್ತಿ ನಿಂತಂತೆ ಗುಡ್ಡ ಬೆಟ್ಟಗಳ ಸಾಲು – ಇದು ಕರಾವಳಿಯ ಭೌಗೋಳಿಕ ಸ್ವರೂಪ. ಇವು ಪ್ರಕೃತಿ ಸೌಂದರ್ಯದಿಂದ ಕೂಡಿದ ಸುಂದರತಾಣಗಳು ಎನ್ನುವುದರಲ್ಲಿ ಸಂಶಯವಿಲ್ಲ. ನೋಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಟ್ಯಾಗೋರರು, ಕಾರವಾರದ ಕರಾವಳಿಯ ತೀರವನ್ನು ಮೆಚ್ಚಿ ಹೊಗಳಿದ್ದುಂಟು. ಬಯಲು ಸೀಮೆಯಂತೆ ವಿಶಾಲವಾದ ಸ್ಥಳ ಕರಾವಳಿಯ ತೀರ ಪ್ರದೇಶದಲ್ಲಿ ಇರದು. ಆದರೆ ಇದ್ದಷ್ಟೇ ಭೂಮಿಯನ್ನು ಸದುಪಯೋಗಪಡಿಸಿಕೊಳ್ಳುವ ಕಲೆ ಅವರಿಗೆ ಖರಗತವಾಗಿದೆ. ಉಪ್ಪು ಯಾರಿಕೆ, ತೆಂಗು. ತರಕಾರಿಗಳ ಬೆಳೆಗಳಿಗೆ ಸೀಮಿತವಾದ ತೀರವನ್ನು ಬಿಟ್ಟು ಒಳಭಾಗಕ್ಕೆ ಬರುತ್ತಿದ್ದಂತೆ ಭತ್ತ, ತೆಂಗು, ಅಡಿಕೆ, ಕಬ್ಬು, ಮತ್ತಿತರ ಬೆಳೆಗಳನ್ನು ಬೆಳೆಯುತ್ತಿರುವ ತುಂಡು – ತುಂಡು ಭೂಮಿಗಳನ್ನು ನೋಡುತ್ತೇವೆ. ಇಳಿಜಾರಾದ ಭೂಮಿಯನ್ನೆ ಆದಷ್ಟು ಸಮಪಾತಳಿಗೈದು ಕೃಷಿ ಉದ್ಯೋಗವನ್ನು ಹುಡುಕುತ್ತ ದಟ್ಟವಾದ ಅರಣ್ಯಗಳನ್ನು ಕಟಿದು ಸಾಗುವಳಿಯ ಸಾಹಸ ಮಾಡುತ್ತ ಬಂದ ಈ ನಿಸರ್ಗ ಕುವರರೆಲ್ಲ ದಟ್ಟವಾದ ಅರಣ್ಯದ ಮಧ್ಯದಲ್ಲಿಯೇ ಮನೆ ಕಟ್ಟಿಕೊಂಡು ತಾಂಡ ಅಥವಾ ಕೊಪ್ಪಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ಕರಾವಳಿಯ ಗ್ರಾಮವಿನ್ಯಾಸ ಹೆಚ್ಚಾಗಿ ಚದುರಿದ ವಸತಿವಿನ್ಯಾಸಯುಳ್ಳದ್ದು (scattered settlement) ಎನ್ನಬಹುದು.

ಕರ್ನಾಟಕದ ಕರಾವಳಿ ಎಂದರೆ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲ್ಲೂಕುಗಳು ಮತ್ತು ದಕ್ಷಿಣ ಜಿಲ್ಲೆ ಅಥವಾ ತುಳುನಾಡು. ತುಳುನಾಡಿನಲ್ಲಿ ಬಿಲ್ಲವರು, ಮೋಗೇರರು, ಬಂಟರು, ಹಳೆಪೈಕರು, ನಾಡವರು, ಗಾಣಿಗರು, ಕೆಲಸಿಗಳು, ಹರಿಜನರು, ಶಿವಳ್ಳಿ ಕೋಟ, ಕೋಟೇಶ್ವರ, ಸಕಲಪುರಿ ಹವ್ಯಕ ಮುಂತಾದ ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನ್ನರು ಮುಂತಾದದವರು ಪ್ರಮುಖ ಜಾತಿಯ ಜನರಾಗಿದ್ದಾರೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮುಕ್ರಿಗಳು, ಖರ್ವಿಗಳು, ಬೋಯಿಗಳು, ಕಾಬೇರರು, ಮೋಗೇರರು, ಕರೆ ಒಕ್ಕಲಿಗರು, ದೇವಡಿಗರು, ಕಂಚುಗಾರರು, ಹರಿಕಂತ್ರರು, ಹಾಲಕ್ಕಿಗಳು, ಗೌಡಸಾರಸ್ವತರು, ನಾಡವರು, ದೇವರು ಕೊಮಾರಪೈಕರು, ಹವ್ಯಕರು, ಹರಿಜನರು, ಆಗೇರರು, ಮುಸ್ಲಿಮರು, ಕ್ರಿಶ್ಚಿಯನ್ನರು, ಮುಂತಾದವರು ಮುಖ್ಯ ಜಾತಿ – ಪಂಗಡಗಳಿಗೆ ಸೇರಿದವರಾಗಿದ್ದಾರೆ. ಕರಾವಳಿಯ ಯಾವಭಾಗದ ಹಳ್ಳಿಯೇ ಆಗಿರಲಿ ಅಲ್ಲಿ ಅನೇಕ ಜಾತಿಯ ಜನರು ಒಟ್ಟೊಟ್ಟಿಗೆ ಮನೆಕಟ್ಟಿಕೊಂಡು ಜೀವಿಸುತ್ತಿಲ್ಲ. ಅವರದ್ದೇ ಪ್ರತ್ಯೇಕವಾದ ವಾಸಸ್ಥಳವಿರುತ್ತದೆ.

ಕರಾವಳಿ ಪರಶುರಾಮನ ಸೃಷ್ಟಿ ಎನ್ನಲಾಗುತ್ತದೆ. ಒಂದು ಕಾಲದಲ್ಲಿ ಈ ಭಾಗ ಸಮುದ್ರದಲ್ಲಿ ಮುಳುಗಿತು ಎಂದು ಹೇಳುತ್ತಾರೆ. ಕರಾವಳಿಯ ಬಹಳಷ್ಟು ಜನರು ಕರ್ನಾಟಕದ ಅಥವಾ ಭಾರತದ ಬೇರೆ ಪ್ರದೇಶಗಳಿಂದ ಅಲ್ಲಿಗೆ ಬಂದು ತಳವೂರಿದವರೆಂತಲೂ ಭಾವಿಸಲಾಗುತ್ತದೆ. ಮತ್ತೆ ಇವರಲ್ಲಿ ಕೆಲವರು ಮತಾಂತರ ಹೊಂದಿದವರೂ ಇದ್ದಾರೆ. ಈ ಮೇಲಿನ ಅಭಿಪ್ರಾಯ ಊಹೆಗಳಿಗೆ ಇದಮ್ಮಿತ್ಥಂ ಎನ್ನುವ ಆಧಾರ ಇಲ್ಲದ್ದರಿಂದ ಈ ಕುರಿತು ನಿರ್ಧಾರವಾಗಿ ಏನನ್ನೂ ಹೇಳುವದು ಕಷ್ಟವಾಗಿದೆ. ಆದರೆ ಕೃಷಿ ಪ್ರಧಾನ ಕುಟುಂಬ ವ್ಯವಸ್ಥೆ ಬಂದು ಮಾನವ ಒಂದೆಡೆ ನೆಲೆನಿಂತ ಮೇಲೆ ಏನೇನೆಲ್ಲ ಸ್ಥಿತ್ಯಂತರಗಳು ಆದವು ಕರಾವಳಿಯ ಗ್ರಾಮಗಳ ಸ್ವರೂಪದ ಮೇಲೆ ಅದರ ಪರಿಣಾಮವೇಣು? ಎಂಬ ಐತಿಹಾಸಿಕ ಸಂಗತಿಯು ಕುತೂಹಲಕಾರಿಯಾಗಿದೆ. ಕೃಷಿಯೋಗ್ಯ ಭೂಮಿಯನ್ನು ಹುಡುಕುತ್ತ – ಸುಡುಕುತ್ತ ಸಂಖ್ಯಾಬಲ ಹೆಚ್ಚಿಸಿಕೊಂಡ ಹವ್ಯಕರು, ಉತ್ತರ ಕನ್ನಡ ಜಿಲ್ಲೆಯತ್ತ ಹೋಗಿ, ಅಲ್ಲಿಂದಲೂ ಮುಂದೆ ಕಾಸರಗೋಡಿನವರೆಗೂ ಪಸರಿಸಿದ್ದಾರೆ. ಇವರಿರುವ ಊರುಗಳು ಕೆಲವೆಡೆ ಒಂದೇ ಮನೆಯದಾಗಿದ್ದರೆ, ಮತ್ತೆ ಕೆಲವೆಡೆ  ಕೆರಿ ಸ್ವರೂಪವನ್ನು ಪಡೆದುಕೊಂಡಿವೆ.  ಪ್ರಾಯಶಃ ಈಗಿರುವ ಕೇರಿ ಸ್ವರೂಪ ಮೊದಲ  Settlement  ನ್ನೂ ಮತ್ತು ಈಗಿರುವ ಒಂಟಿಮನೆಗಳು ನಂತರದ ವಸತಿಯನ್ನೂ ಸೂಚಿಸುತ್ತಿರಬಹುದು. ಅಂದರೆ ಒಂಟಿಮನೆಯೇ ಕೇರಿಯಾಗಿ (ಅವಿಭಕ್ತ ಕುಟುಂಬ ಪದ್ದತಿಯಲ್ಲಿ) ಕೇರಿಯಿಂದ ಮತ್ತೆ ಒಂಟಿಮನೆಯ ಊರು (ವಿಭಕ್ತ ಕುಟುಂಬ) ಒಡೆದು ಬಂದಿರಬಹುದು.ಆದರೆ ಇತರ ಸಮಾಜಗಳ ಜನರ ವಸತಿವಿನ್ಯಾಸ ನಿಶ್ಚಿತ ಸ್ವರೂಪದ್ದು. ಅವರು ಹೆಚ್ಚಾಗಿ ಗುಂಪಾಗಿಯೇ ಜೀವಿಸುತ್ತಾರೆ. ಕಡಲ ತೀರದಲ್ಲಿ ಖಾರ್ವಿ ಮುಂತಾದ ಮೀನುಗಾರಿಗೆ ವೃತ್ತಿಯ ಜನ ವಾಸವಾಗಿದ್ದಾರೆ. ಮೀನುಗಾರಿಗೆ, ಹಡಗು ವ್ಯಾಪಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಇವರದ್ದು. ನದಿತೀರದ ಮೀನುಗಾರಿಕೆ ಅಂಬಿಗರದ್ದು ಕುಮರಿ ವ್ಯವಸಾಯ ಕುಣುಬಿಗಳದ್ದು, ನಾಡವರು, ನಾಮಧಾರಿಗಲ್ಲಿ ಕೆಲವರಿಗೆ ತೋಟ – ಗದ್ದೆಗಳಿವೆ, ಮತ್ತೆ ಕೆಲವರು ಉಳಿದವರ ತೋಟ- ಗದ್ದೆಗಳಲ್ಲಿ ದುಡಿಯುವವರು, ಕರಾವಳಿಯಲ್ಲಿ ವಿರಳವಾಗಿಯಾದರೂ ಅಲ್ಲಲ್ಲಿ ನೆಲೆಸಿರುವ ಕ್ರಿಶ್ಚಿಯನ್, ಮುಸ್ಲಿಂ, ಕುಟುಂಬಗಳೂ ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿರ್ಜಾನ ಮತ್ತು ಚಂದಾವರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರಿದ್ದಾರೆ.  ಈ ಎಲ್ಲಾ ಅಂಶಗಳ ನೆಲೆಯಲ್ಲಿ ಕರಾವಳಿಯ ಗ್ರಾಮ ವಿನ್ಯಾಸವನ್ನು ಕುರಿತು ವಿಶ್ಲೇಷಣೆ ನಡೆಸಬಹುದು.

ಆರೋಳಿ ಎಂಬ ಊರು, ಗೇರುಸೊಪ್ಪೆ ಹಾಗೂ ಹೊನ್ನಾವರಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ. ಊರಿನ ವಿನ್ಯಾಸ, ಇಂಗ್ಲೀಷಿನ ಯು ಆಕಾರದ್ದು

[1] ಈ ಊರಿನಲ್ಲಿ, ನಾಡವರು ಕರೆಒಕ್ಕಲಿಗರು ಹವ್ಯಕರು ಅಂಬಿಗರು ಬೇರೆ- ಬೇರೆ ಗುಂಪುಗಳಲ್ಲಿ ವಾಸವಾಗಿದ್ದಾರೆ. ನಾಡವರ ಮತ್ತು ಬ್ರಾಹ್ಮಣರ ವಸತಿ, ಎರಡೆರಡು ಕಡೆಗಿರುವುದರಿಂದ ಪ್ರಾಯಶಃ ಎರಡು ಪ್ರತ್ಯೇಕ ಊರುಗಳು ಸೇರಿ, ಈಗಿನ ಆರೇಳಾಗಿರಬೇಕು. ಎಕೆಂದರೆ ಜಟ್ಟಿದೇವರು ಕೂಡ ಆ ಊರಿನಲ್ಲಿ ಎರಡು ಇವೆ. ಸಮುದ್ರ ತೀರದಲ್ಲಿ ಅಂಬಿಗರ ಪ್ರತ್ಯೇಕ ವಸತಿ ಇದೆ. ಊರಬೀದಿಯೂ ಯು ಆಕಾರದಲ್ಲಿಯೇ ಮುಂದುವರೆದಿದೆ.ಬೀದಿಯ ಮತ್ತೊಂದು ಮಗ್ಗಲಿಗೆ ಊರವರ ಹೊಲ ತೋಟಗಳಿವೆ ಅವುಗಳಾಚೆ ಒಂದು ನದಿಯು ಹರಿದಿದೆ ಈ ನದಿಯೇ ಗ್ರಾಮಕ್ಕಿರುವ ನೈಸರ್ಗಿಕ ಗಡಿ. ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿಯೇ ಗಡಿಯಾಗಿದೆ. ಬ್ರಾಹ್ಮಣರ ಕೇರಿಯ ಮೇಲ್ಬಾಗದಲ್ಲಿ – ಎತ್ತರದ ಸ್ಥಳದಲ್ಲಿ ಸುಬ್ರಹ್ಮಣ್ಯ ದೇವಾಲಯವಿದೆ. ಕೇರಿಯಲ್ಲಿ ಗೋಪಾಲಕೃಷ್ಣ ದೇವಾಲಯವಿದೆ. ನಾಡವರ ಕೇರಿಯ ಬಳಿ ಅಮ್ಮನವರ ದೇವಾಲಯವಿದೆ. ಅದರ ಬಳಿಯೇ ಒಂದೊ ಜಟ್ಟ ದೇವರಿದೆ ಪ್ರಾಕೃತಿಕ ಸನ್ನಿವೇಶ ಹಾಗೂ ಸಾಮಾಜಿಕ ಪದ್ಧತಿ ಇವುಗಳಿಗನುಗುಣವಾಗಿ ಗ್ರಾಮದ ವಿನ್ಯಾಸ ರೂಪಗೊಂಡಿರುವದನ್ನು ಇಂತಲ್ಲಿ ಕಾಣಬಹುದು. ಒಂದೊಂದು ಕೇರಿಯ ಸಂಸ್ಕ್ರತಿ ಆಚರಣೆಯಲ್ಲೂ ಭಿನ್ನತೆ ಇದೆ. ಆದರೂ ಭಿನ್ನತೆಯಲ್ಲಿ ಏಕತೆ ಗ್ರಾಮದ ಗುಣ ಅಮ್ಮನವರಿಗೆ ಸಂಬಂಧಿಸಿದ ಜಾತ್ರೆ, ಮತ್ತಿತರ ಸಾಮೂಹಿಕ ಧಾರ್ಮಿಕ ವಿಧಿ – ವಿಧಾನಗಳ ಗ್ರಾಮದ ಸಮಸ್ತರನ್ನೂ ಒಂದಾಗಿಸುತ್ತವೆ. ಕೆಲವು ಊರುಗಳಲ್ಲಿ ಊರಿನ ಜಾತ್ರೆ, ಬಂಡಿಹಬ್ಬ ಮುಂತಾದ ಸಂದಂರ್ಭಗಳಲ್ಲಿ ಪ್ರತಿಯೊಂದು ಸಮಾಜದವರಿಗೂ ಅವರೇ ನಿರ್ವಹಿಸುವ ಕೆಲಸ – ಕಾರ್ಯಗಳು ನಿಗದಿತವಾಗಿದ್ದು, ಆ ಮೂಲಕವಾಗಿ ಗ್ರಾಮದವರೆಲ್ಲರನ್ನೂ ಒಂದೆಡೆ ತೊಡಗಿಸುವ ಮತ್ತು ಗ್ರಾಮದ ಸಾಮರಸ್ಯ ಕಾಯ್ದುಕೊಂಡು ಹೋಗುವ ಉದ್ದೇಶವಿದೆ.

ಉತ್ತರ ಕನ್ನಡ ಜಿಲ್ಲೆಯ ಮತ್ತೊಂದು ಗ್ರಾಮ ಬೇಲೇಕೇರಿ : ಅಂಕೋಲಾ ತಾಲುಕಿನ ಈ ಊರಿನಲ್ಲಿ ನಾಡವರು, ಹಾಲಕ್ಕಿಗಳು, ಕೊಮಾರ ಪಂಡಾದವರು, ಕುಂಬಾರರು, ಬ್ರಾಹ್ಮಣರು, ಖಾರ್ವಿಗಳು ವಾಸವಾಗಿರುವದು ಕಂಡುಬರುತ್ತದೆ.[2] ಬೇಲೇಕೇರಿಯ ಒಂದು ಪಕ್ಕದಲ್ಲಿ ಸಮುದ್ರವಿದೆ. ಬಂದರಿನಲ್ಲಿ ಖಾರ್ವಿಗಳು ವಾಸವಾಗಿದ್ದಾರೆ. ಸಮುದ್ರ ತೀರದಿಂದ ಈಗೆ ನಾಡವರ ದೊಡ್ಡಕೇರಿಯೇ ಇದೆ. ಅವರ ಹೊಲಗಳು ಪಶ್ಚಿಮ ದಿಕ್ಕಿನಲ್ಲಿ ಬರುತ್ತದೆ.ಕೇರಿಯ ಪೂರ್ವದಿಕ್ಕಿನಲ್ಲಿ ಈ ಒಂದು ರಸ್ತೆ ಇದ್ದು, ಅದರ ಆಚೆಗೂ ನಾಡವರ ಮನೆಗಳಿವೆ. ಅವರ ಮನೆ – ಹೊಲಗಳನ್ನು ದಾಟಿದ ನಂತರ ಬೆಟ್ಟ – ಗುಡ್ಡಗಳ ಪ್ರದೇಶ ಪ್ರಾರಂಭವಾಗುತ್ತದೆ. ಅಲ್ಲಿ ಕುಮ್ರಿ – ವ್ಯವಸಾಯ ಮಾಡುವ ಹಾಲಕ್ಕಿಗಳು ವಾಸವಾಗಿದ್ದಾರೆ. ರಸ್ತೆಯ ಪಕ್ಕದಲ್ಲಿ ಕೆಲವು ಹವ್ಯಕರ ಮನೆಗಳೂ ಇವೆ. ಇವರು ಮೂಲತಃ ದೇವಸ್ಥಾನದ ಪೂಜೆಗಾಗಿ ಬಂದುಳಿದವರು. ಊರಿನ ದಕ್ಷಿಣದಲ್ಲಿ ಬೊಗರಿಗದ್ದೆ. ಹರಿಜನರಾದ ಆಗೇರರ ಮನೆಗಳು ದೂರದ ಅರಣ್ಯಪ್ರದೇಶದಲ್ಲಿವೆ. ಹೀಗೆ ಊರಿನ ನಿರ್ದಿಷ್ಟ ಭಾಗಗಳಲ್ಲಿ ವಾಸ್ತವ್ಯವನ್ನು ಕಲ್ಪಸಿಕೊಂಡ ಭಿನ್ನಸಮಾಜದ ಜನರು ಆ ಊರಿನ ದೈವಗಳಿಗೆ ಒಟ್ಟಾರೆ ನಡೆದುಕೊಳ್ಳುತ್ತಿರುವದು ಮಹತ್ವದ ಸಂಗತಿಯಾಗಿದೆ. ಕೊಮಾರಪಂತರ ಕೇರಿಯಲ್ಲಿ ಕರಿದೇವ ಇದ್ದಾನೆ. ನಾಡವರ ಕೇರಿಯಲ್ಲಿ ಅಮ್ಮನವರ ದೇವಸ್ಥಾನವಿದೆ. ಅದರ ಪಕ್ಕದಲ್ಲಿ ಕುಂಬಾರರ ಮನೆಯಿರುವದು ಸ್ವಾರಸ್ಯಕರ. ಈ ಕುಂಬಾರರ ಮನೆಯವರು ಸಮುದ್ರ ಪಕ್ಕದಲ್ಲಿರುವ ಜೈನಬೀರನಿಗೆ ನಡೆದುಕೊಳ್ಳುತ್ತಿರುವದು ಮತ್ತೂ ಸ್ವಾರಸ್ಯಕರ. ಅಮ್ಮನವರ ದೇವಸ್ಥಾನದಲ್ಲಿ ನಡೆಯುವ ಬಂಡಿ ಹಬ್ಬಕ್ಕೆ ಊರವರೆಲ್ಲ ಬರುತ್ತಾರೆ. ಅದರಂತೆ ಕೊಮಾರಪಂತರ ಹಾಲಕ್ಕಿಗಳ ಸುಗ್ಗಿ ಹಬ್ಬದಲ್ಲಿ ಉಳಿದವರು ಭಾಗವಹಿಸುತ್ತಾರೆ. ಅಮ್ಮನವರ ದೇವಸ್ಥಾನ ಪೂಜೆ ಬ್ರಾಹ್ಮಣವರದ್ದೇ ಆದರೂ ವರ್ಷಕೊಮ್ಮೆ ಆ ಹಕ್ಕನ್ನು ಕುಂಬಾರರಿಗೆ ಬಿಟ್ಟು ಕೋಡಬೇಕಾಗುತ್ತದೆ. ಇದು ದೇವರ ಪೂಜಾ ವಿಷಯದಲ್ಲಿ ಆ ಗ್ರಾಮದವರು ಮಾಡಿಕೊಂಡ ಒಪ್ಪಂದ : ಆ ಮೂಲಕ ಕಂಡುಕೊಂಡು ಗ್ರಾಮಸಾಮರಸ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಾರಾಧನೆ ಇದೆ ಬ್ರಹ್ಮಣರ ಕೇರಿಯನ್ನನ್ನು  ಆ ಪ್ರವೇಶಿಸಿದೆ. ಪ್ರತಿಯೊಬ್ಬ ಬ್ರಾಹ್ಮಣರ ಮನೆಯಲ್ಲೂ ಒಂದು ಭೂತವಿದೆ ಎನ್ನಲಾಗುತ್ತದೆ. ಈದು ದ್ರಾವಿಡ ಸಂಸ್ಕ್ರತಿಯ ಪ್ರಭಾವ ಎನ್ನಬಹುದಾದರೂ ಒಂದು ಗ್ರಾಮದಲ್ಲಿ ಅನೇಕ ಸಂಸ್ಕ್ರತಿಯ ಮೆಲೆ ಹೇಗಾಗುತ್ತದೆ. ಎಂಬುದನ್ನು ಗುರುತಿಸಬಹುದಾದ ಒಂದು ಅವಕಾಶ. ದಕ್ಷಿಣ ಕನ್ನಡ ಜಿಲ್ಲೆಯ ಬಸರುರಿನಲ್ಲಿಯೂ ಏಳು ಕೇರಿಗಳಿವೆ. ಮೂಡುಕೇರಿ, ಬಸರಿಕೇರಿ, ಮಾಸಕೇರಿ, ಮಂಡಿಕೇರಿ, ರಾಹುಕೇರಿ, ಗುಡಿಕಾರಕೆ, ಅಗ್ರಹಾರ ಮುಂತಾದ ಹೆಸರುಗಳು. ಒಂದು ಕಾಲದಲ್ಲಿ ಐದು ರಾಜಧಾನಿ ಪಟ್ಟಣವಾಗಿ ಮೆರೆದಿದ್ದುದ್ದನ್ನು ಸೂಚಿಸುತ್ತದೆ. ಈಗಲೂ  ಆ ಕೇರಿಗಳಲ್ಲಿ ಬೇರೆ- ಬೇರೆ ಸಮಾಜದ ಜನರೇ ವಾಸವಾಗಿದ್ದಾರೆ. ಪಡುಕೋಣೆಯಲ್ಲಿ ಕೇವಲ ಮಗವೀರರು ಕುರುದೀಪದಲ್ಲಿ ಕೇವಲ ಹೆಬ್ಬಾಳ ಹೆಸರಿನ ಜನರು ನೆಲೆಸಿದ್ದಕ್ಕೆ ಇದೇ ಕಾರಣ.ಕಾರವಾರದ ಬಳಿಯ ಸಾವಂತವಾಡದ ಗ್ರಾಮ ವಿನ್ಯಾಸ- ವಿಶಿಷ್ಟ ರೀತಿಯದು. ಇದರ ಸುತ್ತ ಬೇರೆ ಬೇರೆ ವಾಡಗಳು ಬೆಳೆದು ಸಾವಂತವಾಡದ ವಿಸ್ತರಣೆಯೆಂದೆ ಪರಿಭಾವಿಸಲ್ಪಟ್ಟಿದೆ. ದೇವಳವಾಡ, ಭಜಂತ್ರಿವಾಡ, ಕೊಂಕಣವಾಡ, ಸಾವಂತವಾಡ, ವೈಲವಾಡ, ಹರಿಜನವಾಡಗಳಲ್ಲಿ ಇದು ಹಂಚಿಹೋಗಿದೆ. ಕೊಂಕಣವಾಡ ಸಾವಂತವಾಡಗಳಲ್ಲಿ ೪೦-೫೦ ಮನೆಗಳಿದ್ದು, ಉಳಿದ ಕಡೆ ತಲಾ ೪ – ೫ ಮನೆಗಳಿವೆ. ಕೊಂಕಣಸ್ಥ ಬ್ರಾಹ್ಮಣರೇ ವಿಶೇಷವಾಗಿರುವ ಈ ಊರಿನಲ್ಲಿ ದೇವಳರು, ಭಜಂತ್ರಿಗಳು ಕೇಲ ಪ್ರಮಾಣದಲ್ಲಾದರೂ ಇದ್ದಾರೆ. ಹರಿಜನರೆಲ್ಲ ಊರಿಗೆ ಸ್ವಲ್ಪ ದೂರದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಕುರ್ಮಿ ಬೇಸಾಯ ಮಾಡುವ  ಹಾಲಕ್ಕಿಗಳಿದ್ದಾರೆ.ಸಮುದ್ರ ತೀರದಲ್ಲಿ ಮೀನುಗಾರಿಕೆಯ ಬಡಜು ಮತ್ತು ಹರಕಾಂತ್ರ ಜನದಿದ್ದಾರೆ. ಹೀಗೆ ಕರಾವಳಿಯ ಗ್ರಾಮ ವಿನ್ಯಾಸ ವಿಶಿಷ್ಟವಾಗಿದ್ದು ಬೇರೆ – ಬೇರೆ ಸಮಾಜಕ್ಕೆ ಸಂಬಂಧಿಸಿದ ಜನರ ಹೆಚ್ಚಾಗಿ ಗುಂಪುಗಳಲ್ಲಿ (ಕೇರಿ ಅಥವಾ ಕೊಪ್ಪ) ವಾಸಿಸುತ್ತಿದ್ದರು. ತಮ್ಮ ತಮ್ಮಲ್ಲಿ ಅವರು ಒಂದು ರೀತಿಯ ಸಾಮರಸ್ಯವನ್ನು ಸ್ಥಾಪಿಸಿಕೊಂಡಿರುವದು ಮಹತ್ವದ ಅಂಶ. ಇದಕ್ಕೆ ಗ್ರಾಮ ದೇವತೆಗಳು ದೇವಸ್ಥಾನಗಳಲ್ಲಿ ನಡೆಯುವ ಆಚರಣೆಗಳು. ಸಾಮೂಹಿಕ ಹಬ್ಬ ಜಾತ್ರೆಗಳು ಸಹಾಯಕವಾಗಿವೆ.

ಕರಾವಳಿಯ ಗ್ರಾಮಗಳಿಗೆ ನ್ಯಾಯ ಪದ್ದತಿ ಕೂಡ ವಿಶಿಷ್ಟ ರೀತಿಯದು. ದಕ್ಷಿನ ಕನ್ನಡ ಜಿಲ್ಲೆ ಬಹುತೇಕವಾಗಿ ಭೂತಗಳ ನಾಡು ಅಲ್ಲಿ ಭೂತ, ಕೋಲ, ಗೆಂಡ, ಡಕ್ಕೆ, ಬಲಿ ಇತ್ಯಾದಿ  ಆರಾಧನೆಗಳಿವೆ. ಹೇಳಿಕೊಂಡು ಪರಿಹಾರ ಪಡೆಯುತ್ತಾರೆ. ದೆವ್ವದ ಎದುರಿನಲ್ಲಿ ನ್ಯಾಯ ಪಡೆದಾಗಲೇ ಈ ಜನರಿಗೊಂದು ನೆಮ್ಮದಿ. ಕರಾವಳಿಯಲ್ಲಿ ಏನೇ ಕಲಹಗಳಿದ್ದರೂ ದೆವ್ವದ ತೀರ್ಮಾನಕ್ಕೆ ತೆಲೆ ಬಾಗೋ ಪದ್ಧತಿ ಇನ್ನೂ ಉಳಿದುಕೊಂಡು ಬಂದಿದೆ. ಉತ್ತರ ಕನ್ನಡದ ಕರಾವಳಿಯ ಕೆಲವು ಸಮಾಜಗಳಲ್ಲಿ ಅವರಿಗೆ ತಮ್ಮದೇ ಆದ ಸಾಮಾಜಿಕ ನ್ಯಾಯ ವ್ಯವಸ್ಥೆಯಿದೆ. ಹಾಲಕ್ಕಿನಾಡವ, ಮುಕ್ರಿ, ಹವ್ಯಕ ಮುಂತಾದ ಪಂಗಡಗಳಲ್ಲಿ ಸಮಾಜದ ಮುಖಂಡನೇ ನ್ಯಾಯ ತೀರ್ಮಾನಿಸುವ ನ್ಯಾಯಾಧೀಶನೂ ಅಗಿ ಪರಿಣಮಿಸುತ್ತಾನೆ. ಹವ್ಯಕರು ಕರ್ನಾಟಕದಲ್ಲಿ ಒಟ್ಟು ಹದಿನಾರೂ ಸೀಮೆಗಳಲ್ಲಿ ಪಸರಿಸಿದ್ದು ೩೬ ಮಠಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ೮ ರಿಂದ ೧೦ ಮಠಗಳು ಕರಾವಳಿಯಲ್ಲಿಯೇ ಇವೆ ಮುಕ್ರಿ, ಹಲಕ್ಕಿ  ಸಮಾಜಗಳಿಗೂ ಕೆಲವು ಸೀಮೆಗಳಿದ್ದು, ಸೀಮೆ ಬುದ್ಧವಂತ, ಗ್ರಾಮ ಬುದ್ಧಿವಂತ, ಕೋಲ್ಕಾರ ಇತ್ಯಾದಿ ಇದ್ದು ಕುಟುಂಬಕ್ಕೆ ಸಂಬಂಧಿಸಿದ ಒಳ ಹೊರಗಿನ ನ್ಯಾಯಗಳನ್ನು ಅವರು ಬಗೆಹರಿಸಿಕೊಡುತ್ತಾರೆ. ನಾಡವರಲ್ಲಿಯೂ ಊನಗಾವಕರ್, ಸೀಮೆಗಾವಕರ ಇತ್ಯಾದಿ ಹೆಸರಿನವರು ಇರುತ್ತಾರೆ. ನಾಡವರಿಗೆ ಮಿರ್ಜಾನ, ಚಂದಾವರ, ಅಂಕೋಲಾಗಳೆಂದು ಮೂರು ಸೀಮೆಗಳಿವೆ. ಗೌಡ ಸಾರಸ್ವತ್ತದಲ್ಲಿ ಕೂಡ ಕಾಮತ್, ಕಿಣಿ, ನಾಯಕ, ಪ್ರಭು, ಹೆಗ್ಗಡೆ, ಪೈ, ಪಡಿಯಾರ್, ಭಂಡಾರಿ, ಶೆಣೈ, ಶಾನುಭೋಗ ಮುಂತಾದವು ಸಾಮಾಜಿಕ ಧಾರ್ಮಿಕ ವ್ಯವಸ್ಥೆಯನ್ನೆಲೆಯಲ್ಲಿ ಮೂಡಿಬಂದ ಹೆಸರುಗಳಾಗಿವೆ. ಈಗ ಅವು ಕುಲನಾಮಗಳಾಗಿ ಉಳಿದುಕೊಂಡು ಬಂದಿವೆ.

ಕರಾವಳಿಯ ಗ್ರಾಮಸ್ವರೂಪಕ್ಕೆ ಸಂಬಂಧಿಸಿದಂತೆ ಸ್ಥಳನಾಮಗಳು ಹಿಚ್ಚಿನ ಮಾಹಿತಿಯನ್ನು ನೀಡಬಲ್ಲವಾಗಿದೆ. ಸ್ಥಳನಾಮಗಳಲ್ಲಿ ಸಾಮಾನ್ಯವಾಗಿ ಎರಡು ಭಾಗಗಳಿದ್ದು ಅವನ್ನು ನಿರ್ದಿಷ್ಟ ಮತ್ತು ವರ್ಗ ಎಂದು ಕರೆಯಲಾಗುತ್ತದೆ. ಉತ್ರ ಪದವಾಗಿರುವ ವರ್ಗ. ಗ್ರಾಮದ ಪ್ರಾಕೃತಿಕ ಸ್ವರೂಪವನ್ನು ಅರುಹಬಲ್ಲದಾಗಿದೆ. ಕರಾವಳಿಯ ಊರುಗಳು ಹೆಸರುಗಳಲ್ಲಿ ಕೆಲವು ಕಡೆ ಗೋಣ, ಗುಳಿ, (ಉದಾ : ಅಗ್ಗರಗೋಣ, ಅಡಿಗೋಣ, ಬಾಳೆಗುಳಿ, ಬೆಟ್ಟುಳಿ, ಶಿರಕುಳಿ ಇತ್ಯಾದಿ) ಮತ್ತು ಕೆಲಡೆಡೆ ಗದ್ದೆ, ಮಕ್ಕಿ (ಕೊಡಗದ್ದೆ, ಮಾಣಿಗದ್ದೆ, ನಂದನಗದ್ದೆ, ಸಿಂಗನಮಕ್ಕಿ, ದೇವಲಮಕ್ಕಿ) , ಕೇರಿ (ಭಾವಿಕೇರಿ, ಮೂಡಗೇರ ಇತ್ತಯಾದಿ) ಗಳು ಕಂಡು ಬರುತ್ತವೆ. ಗೋಣ, ಗುಳಿಗಲು ನೀರಿನ ಆಶ್ರಯ ಸ್ಥಾನವನ್ನು (ಎತ್ತರ ಅಥವಾ ತಗ್ಗು) ಸೂಚಿಸಿದರೆ, ಗದ್ದೆ ಮಕ್ಕಿಗಳು ವ್ಯವಸಾಯ ಯೋಗ್ಯ ಪ್ರದೇಶವನ್ನು ಸೂಚಿಸುತ್ತವೆ. ಮೂರುಕಡೆ ನೀರಿನಿಂದ ಸುತ್ತುವರೆದ ಪ್ರದೇಶವನ್ನು ಕುರ್ವೆ ಎನ್ನುತ್ತಾರೆ. ಕಾವಳಿಯಲ್ಲಿ ಇಂಥ ಪ್ರದೇಶ ಸರ್ವೇ ಸಾಮಾನ್ಯ. ಅಂತೆಯೇ ಕಪ್ಪೆಕುರ್ವೆ, ಚಿತ್ರಕುರ್ವೆ, ಮಾವಿನಕುರ್ವೆ, ಇತ್ಯಾದಿ ಅನೇಕ ಕುರ್ವೆ ಹೆಸರಿನ ಊರುಗಳಿವೆ. ಅದೆ ರೀತಿ ಸಾಮಯವಾಡ, ಶಿರವಾಡ, ಕುಳವಾಡ ಇತ್ಯಾದಿ ಹೆಸರಿನ ವಾಡಗಳೂ ಅಲ್ಲಿ ಇವೆ.

ಕರಾವಳಿಯ ಸ್ಥಳನಾಮಗಳ ಅಧ್ಯಯನ ಒಂದು ಪ್ರತ್ಯೇಕವಾದ ಅಧ್ಯಯನಕ್ಕೆ ಯೋಗ್ಯವಾಗಿದ್ದು, ಪ್ರಸ್ತುತ ಪ್ರಬಂಧಗಳಲ್ಲಿ ಇಂತಹ ಅಧ್ಯಯನಗಳು ಗ್ರಾಮವಿನ್ಯಾಸವನ್ನು ರೂಪಿಸುವಲ್ಲಿ ಪ್ರಾಕೃತಿಕ ಸನ್ನಿವೇಶಗಳು ಎಂತಹ ಪಾತ್ರವಹಿಸಿವೆ. ಎಂಬುದನ್ನು ಅರಿಯಲು ಸಹಾಯಕಾರಿಯಾಗುತ್ತವೆ. ಎಂಬುದನ್ನಷ್ಟೇ ಪ್ರತಿಬಿಂಬಿಸುವುದಾಗಿದೆ.

ಕರ್ನಾಟಕ ಕರಾವಳಿ ಪ್ರಮುಖ ವ್ಯಾಪಾರಿ ಬಂದರು ಆಗಿದ್ದದ್ದರಿಂದ ಮೊದಲಿನಿಂದಲೂ ತನ್ನನ್ನು ಹೊರ ಸಂಪರ್ಕಗಳಿಗೆ ತೆರೆದುಕೊಂಡಂತಹುದು. ಅಂದರೆ ಹೊರರಾಜ್ಯ ಹಾಗೂ ಹೊರದೇಶಗಳ ಪ್ರಭಾವಕ್ಕೂ ಕೆಲಮಟ್ಟಿಗೆ ಒಳಗಾಗಿದೆ. ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ವಿದ್ಯಾಭ್ಯಾಸ, ಹಾಗೂ ಆಧುನಿಕತೆ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡಂತಹ ಪ್ರದೇಶ. ಪ್ರತಿಯೊಂದು ಗ್ರಾಮದಿಂದಲೂ ಅಥವಾ ಪ್ರತಿಯೊಂದು ಮನೆಯಿಂದಲೂ ಒಬ್ಬರಾಗಲೀ ಅನೇಕರಾಗಲೀ ಉದ್ಯೋಗಕ್ಕಾಗಿ ಬೇರೆ ಪ್ರದೇಶಕ್ಕೆ (ಪಟ್ಟಣಕ್ಕೆ) ಹೋಗಿರುವುದನ್ನು ಕಾಣುತ್ತೇವೆ. ಇವೆಲ್ಲವುಗಳ ಪರಿಣಾಮವಾಗಿ ಇದ್ದ ಸ್ವಲ್ಪವೇ ಜಾಗವನ್ನು ಅತ್ಯುತ್ತಮವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಚಾಕ ಚಕ್ಯತೆ ಸೌಂದರ್ಯ ಪ್ರಜ್ಞೆ ಇವರಲ್ಲಿ ಸಹಜವಾಗಿಯೇ ಅಳವಡಿಸಿಕೊಳ್ಳಲ್ಪಟ್ಟಿದೆ. ಕರಾವಳಿಯ ಗ್ರಾಮವಿನ್ಯಾಸದಲ್ಲಿ ಇವೆಲ್ಲವುಗಳ ಪ್ರಭಾವವನ್ನು ನಾವು ಐತಿಹಾಸಿಕವಾಗಿ ಗುರುತಿಸುತ್ತ ಬರಬಹುದು.

ಹೊರಪ್ರದೇಶಗಳಿಗೆ ವಲಸೆ ಹಾಗೂ ಸರಕಾರದ ಸವಲತ್ತುಗಳು ನಾನಾ ಯೋಜನೆಗಳು, ಜನತಾ ಮನೆಗಳು, ಇವುಗಳಿಂದಾಗಿ ಪರಸ್ಪರ ಸಹಾಯ ಸಹಕಾರಗಳಿಂದ (ಅದು ಬಿಟ್ಟಿಯೋ ಮುಯ್ಯಿಯೋ ಅಥವಾ ಆಳು ಗೆಲಸವೋ ಯಾವುದಾದರೂ ಆಗಿರಬಹುದು) ಆಗುತ್ತಿದ್ದ ಕೃಷಿ ಮತ್ತಿತರ ಕಾರ್ಯಗಳು ಈಗ ಬಿಕ್ಕಟ್ಟನ್ನು ಎದುರಿಸುತ್ತಲಿವೆ. ಪರ್ಯಾಯವಾಗಿ ಯಂತ್ರ ಸಹಾಯ ಪಡೆದು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಜನತೆ ಪ್ರಯತ್ನಸುತ್ತಿದೆ. ಇದು ಒಂದು ರೀತಿಯಲ್ಲಿ ಗ್ರಾಮವಿನ್ಯಾಸದ  ಮೇಲೆ ಅಪ್ರತ್ಯಕ್ಷವಾದ ರೀತಿಯಲ್ಲಿ ಪರಿಣಾಮ ಬೀರಿದರೆ, ಕರಾವಳಿಯಲ್ಲಿ ಈಗಾಗಲೇ ಕೈಗೊಂಡ ಕೊಂಕಣರೈಲು ಮಾರ್ಗ, ಸೀಬರ್ಡ್‌‌ನೌಕಾನೆಲೆ, ಕೈಗಾ ಅಣುಸ್ಥಾವರಗಳು ದೇಶದ ಅಭಿವೃದ್ದಿ – ತಗಳ ದೃಷ್ಟಿಯಿಂದ ಅಪೇಕ್ಷಣೀಯವೆನ್ನಬಹುದಾದರೂ ಜನಪದ ಜೀವನ, ಸಂಸ್ಕ್ರತಿ, ಕಲೆ ಇವುಗಳೆಲ್ಲ ನಾಶವಾಗುವ ಭಯವಿದ್ದೇ ಇದೆ. ಇವೆಲ್ಲ ಕರಾವಳಿಯ ಗ್ರಾಮಜೀವನ, ಗ್ರಾಮವಿನ್ಯಾಸ ಇವುಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರುವುದರಲ್ಲಿ ಸಂಶಯವಿಲ್ಲ. ಇದುವರೆಗಿನ ಉಪನ್ಯಾಸದ ಮುಖ್ಯಾಂಶಗಳನ್ನು ಈ ರೀತಿ ಹಿಡಿದಿಡಬಹುದು.

೧) ಕರಾವಳಿಯ ಭೌಗೋಳಿಕ ಪರಿಸರ, ಅಲ್ಲಿಯ ಗ್ರಾಮವಿನ್ಯಾಸವನ್ನು ನಿರ್ಧರಿಸಿದೆ.

೨) ಕುಲಕಸಬುಗಳನ್ನಾಧರಿಸಿ ಗ್ರಾಮದಲ್ಲಿ ಸ್ಥಳ – ನಿರ್ದೇಶನಗೊಳ್ಳುವುದನ್ನು ಗಮನಿಸುತ್ತೇವೆ.

೩) ಸ್ಥಳನಾಮಗಳು – ಪಳೆಯುಳಿಕೆಗಳಂತೆ ಗ್ರಾಮ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ.

೪) ದೈವಸ್ಥಳಗಳು ಹಾಗೂ ದೇವಸ್ಥಾನಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹಬ್ಬ – ಜಾತ್ರೆಗಳು, ಬಯಲಾಟ, ಮದುವೆ ಮುಂತಾದ ಪ್ರಸಂಗಗಳು ಗ್ರಾಮೀಣರ ಸಾಮೂಹಿಕ ಬದುಕಿನಲ್ಲಿ ಸೌಹಾರ್ದತೆ, ಸಾಮರಸ್ಯಗಳನ್ನು ಮೂಡಿಸಲು, ಕೇಂದ್ರೀಕೃತ ಬದುಕಿಗೆ ಕಾರಣವಾಗಿವೆ.

೫) ಕೆಲವು ವಿಷಯಗಳಲ್ಲಿ ವಿಕೇಂದ್ರೀಕೃತ ಜೀವನವೂ ಕರಾವಳಿಯ ಗ್ರಾಮ ಜೀವನದಲ್ಲಿದೆ. ಇಲ್ಲಿಯ ಇಲ್ಲಿಯ ಭಿನ್ನ ಸಮಾಜಗಳಲ್ಲಿ ಧರ್ಮ, ನ್ಯಾಯ ಮುಂತಾದ ಅಂಶಗಳ ನಿರ್ಣಯಗಳಲ್ಲಿ ಅವನ್ನು ಗುರುತಿಸಬಹುದಾಗಿದೆ.

೬) ಸಾಗರ ಹಾಗೂ ಸಾಗರೋತ್ತರ ಜೀವನಗಳ ಪ್ರಭಾವಕ್ಕೂ ಕಾಲದಿಂದ ಕಾಲಕ್ಕೆ ಕಡಲ ಗ್ರಾಮಗಳು ಒಳಗಾಗಿವೆ.

೭) ಆಧುನಿಕ ತಂತ್ರಜ್ಞಾನ, ಹಾಗೂ ಸರಕಾರದ ಯೋಜನೆ ಭೂ ಹಿಡುವಳಿ ಪರಿವರ್ತನೆ, ಸಾಲಮೇಳ, ಆಶ್ರಯ ಯೋಜನೆಗಳಿಂದ ಗ್ರಾಮ ವಿನ್ಯಾಸದಲ್ಲಿ ತೀವ್ರ ಬದಲಾವಣೆಗಳು ಕಂಡುಬರತೊಡಗಿವೆ. ನಗರೀಕರಣ ಪ್ರಕ್ರಿಯೆಗೆ ಎಲ್ಲವೂ ತೆರೆದುಕೊಂಡತೆ ತೋರುತ್ತಿದ್ದು ಗ್ರಾಮಜೀವನವಿರಲಿ, ಗ್ರಾಮವೇ ನಾಶವಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.


[1]      ನೋಡಿ ನಕಾಶೆ ೧

[2]      ನೋಡಿ ನಕಾಶೆ ೨