ನಿಸರ್ಗದ ಪ್ರಕೋಪವನ್ನು ಎದುರಿಸಲು ಪ್ರಾಚೀನ ಮಾನವನು ಕಂಡುಕೊಂಡ ಒಂದು ಸುವರ್ಣಮಾಧ್ಯಮ ಆರಾಧನೆ, ಕ್ರೂರ ಮೃಗಗಳಿಗೆ, ಭಯಂಕರ ವಸ್ತುಗಳಿಗೆ ಅಂಜಿ, ಅವನ ಅವುಗಳಿಗೆ ಒಂದೊಂದು ಆಕಾರ ಕೊಟ್ಟು ಆರಾಧಿಸತೊಡಗಿದ. ತನಗೆ ಬರಬಹುದಾದ ರೋಗ ರುಜಿನಗಳನ್ನು ತಡೆಯಲು ದೇವರನ್ನು ಕಲ್ಪಿಸಿಕೊಂಡ, ಹಾಗೆ ಕಲ್ಪಿಸಿಕೊಂಡ ದೇವರನ್ನು ವೈಯಕ್ತಿಕ ಮಟ್ಟದಲ್ಲಿ ಮನೆ ಮಾರುಗಳ ಜಗುಲಿಯ ಮೇಲೆ ಇಟ್ಟು ಪೂಜಿಸತೊಡಗಿದ. ಮೊದ ಮೊದಲು ಅವು ಮನೆಯ ಒಂದು ಮೂಲೆಯ ಕಟ್ಟೆಯ ಮೇಲೆ ವಿರಾಜಮಾನವಾಗಿರುತ್ತಿದ್ದವು. ಮನೆ ಮದ್ಯದ ಕಂಬದಲ್ಲಿ ಲಕ್ಷ್ಮಿ ಇರುತ್ತಿದ್ದಳು. ಬರ ಬರುತ್ತ ಕಟ್ಟೆಯ ಮೇಲಿನ ದೇವತೆಗಳು ಪ್ರತ್ಯೇಕವಾದ ಕೋಣೆಯನ್ನೆ ಪಡೆದವು. ಪೂಜಾ ಕೋಣೆಗಳನ್ನು ಹಲವರು ತಮ್ಮ ಯೋಗ್ಯತಾನುಸಾರ ಅಲಂಕರಿಸುತ್ತ ಬಂದರು. ಮುಂದೆ ವ್ಯಕ್ತಿಗತವಾಗಿ, ಊರ ವತಿಯಿಂದ ಸಾಮೂಹಿಕವಾಗೆ ಹಲವಾರು ದೇವಾಲಯಗಳು ರಚನೆಗೊಂಡವು. ಅವುಗಳ ನಿರ್ಮಾಣದಲ್ಲಿ ಹಲವರು ತಮ್ಮನ್ನು ತಾವು ಸಮರ್ಪಿಸಿಕೊಂಡು ಅವನ್ನು ಮಹತ್ವದ ಕಲೆಯ ಕೇಂದ್ರವಾಗಿಸಿದರು. ಅಂತಹ ಕಟ್ಟಡಗಳ ನಾಲ್ಕೈದು ಹಂತಗಳನ್ನು ಗುರುತಿಸಿ ಇಲ್ಲಿ ಅಭ್ಯಸಿಸಬಹುದು.

ಮೊಟ್ಟಮೊದಲು ದೇವರು ಬಯಲ ಆಲಯದಲ್ಲಿಯೆ ಆಶ್ರಯ ಪಡೆದಿದ್ದಿರಬೇಕು. ಇದಕ್ಕೆ ಸಾಕ್ಷಿಯನ್ನುವಂತೆ ಇಂದಿಗೂ ಇಂಥ ಹಲವು ದೇವರು ದೊರೆಯುತ್ತಿವೆ. ಊರ ಅಗಸಿಯ ಮುಂದಲ ಕರುಗಲ್ಲು ಅಥವಾ ಭರಮಪ್ಪ, ಹೊಲಗಳಿಗೆ ಹೋದಾಗ ಪೂಜಿಸಲು ಕಲ್ಲಿಸಿಕೊಳ್ಳುವ ಬೆನಕ ಮೊದಲಾದವನ್ನು ಇಲ್ಲಿ ಉದಾಹರಿಸಬಹುದು. ಭರಮಪ್ಪನಿಗ ಎಣ್ಣೆ ಹಾಕಿ, ಊದುಬತ್ತಿ ಹಚ್ಚಿ ಪೂಜಿಸುವರಾದರೂ ಅದಕ್ಕೆ ಯಾವ ಗುಡಿಗುಂಡಾರಗಳಿರದೆ ಇರುವುದು ಅದರ ಪ್ರಾಚೀನತೆ ಆದಾರವನ್ನೊದಗಿಸುತ್ತದೆ. ಅಡ್ಡಾಡುವಾಗ ಕಾಲು ತಾಗಿದಲ್ಲಿ ನಮಸ್ಕರಿಸುವುದಷ್ಟೇ ಅದಕ್ಕೆ ತೋರುವ ರಿಯಾಯಿತಿ. ಬಂಡಿ ಮೊದಲಾದವು ಹೋಗುವಾದ ಅದನ್ನು ನಡುವೆ ಮಾಡಿಕೊಂಡು ಹೋಗಬೇಕೆಂಬ ನಂಬುಗೆಯುಂಟು.

ಮುಂದೆ ಇಂಥ ದೇವತೆಗಳಲ್ಲಿ ಹಲವು ಗಿಡಗಂಟೆಗಳ ಆಶ್ರಯ ಪಡೆದವು. ಬನ್ನಿ, ಅಶ್ವತ್ಥ, ಆಲ, ಎಕ್ಕೆ, ಬೇವುಗಳಿರುವ; ಬೇವು ಅಶ್ವತ್ಥ ಕೂಡಿ ಇರುವ ಸ್ಥಳಗಳು ದೇವತೆಗಳ ವಾಸಕ್ಕೆ ಪ್ರಶಸ್ತವೆನ್ನಿಸಿದವು. ಬೇವಿನ ಮರಕ್ಕೂ ಹೆಣ್ಣು ದೇವತೆಗಳಿಗೂ ವಿಶೇಷವಾದ ನಂಟಿದೆ. ಬೇವು ವಿಷನಿವಾರಕ ಎಂಬ ದೃಷ್ಟಿಯಿಂದ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿರಬೇಕು. ಬಸವಣ್ಣನೊಂದೆಡೆಗೆ ಮಾ ಭಕ್ತನಾದೊಡೆಯೂ ಬಾವಿಯ ಬೊಮ್ಮನ ಪೂಜಿಸದೆ ಬಿಡ ಎಂದಿದ್ದಾನೆ. ಹೀಗಾಗಿ ಕೆಲವು ದೇವತೆಗಳು ನೀರಿರುವ ಸ್ಥಳವನ್ನು ವಾಸಕ್ಕಾಗಿ ಆಯ್ದುಕೊಂಡಿರಬೇಕು. ಬಂಡಿದುರಗವ್ವ, ದುರಗಮರಗಿ, ಪರ್ವತಮಲ್ಲಯ್ಯದಂಥ ಕೆಲವು ದೇವತೆಗಳು ಪೆಟ್ಟಿಗೆಯಾಕಾರದ ಗೂಡನ್ನು ಹೊಂದಿ ಸಂಚಾರಿದೇವತಿಗಳೆನ್ನಿಸಿದವು. ಮಾನವನು ಒಂದೆಡೆ ನೆಲೆಯೂರಿ ನಿಲ್ಲಲಾರದ ಸನ್ನಿವೇಶದಲ್ಲಿ ಇಂಥ ದೇವತೆಗಳು ಮೂಡಿಬಂದಿರಬೇಕು.

ಗ್ರಾಮದೇವತೆಗಳಲ್ಲಿ ಪ್ರಮುಖರಾದವರು ದುರಗವ್ವ ಮತ್ತು ದ್ಯಾಮವ್ವ, ದ್ಯಾಮವ್ವ ಗ್ರಾಮದೇವತೆಯಾಗಿ ಊರಮಧ್ಯದಲ್ಲಿದ್ದರೆ ದುರಗವ್ವ ದುರ್ಗದ+ಅವ್ವ ಎನ್ನಿಸಿ ಊರ ಸಂರಕ್ಷಣೆಯ ಭಾರವನ್ನು ಹೊತ್ತು ಊರ ಹೊರಗುಳಿದಳು. ದುರಗವ್ವನಂತೆ ಊರಸಂರಕ್ಷಣೆಯ ಭಾರವನ್ನು ಹೊತ್ತು ಊರ ಸೀಮೆಯನ್ನು ಕಾಪಾಡವವ ಸೀಮೆಯ ಲಕ್ಕವ್ವ ಮತ್ತು ಎಲ್ಲಮ್ಮ. ಈ ಎಲ್ಲ ದೇವತೆಗಳು ಮಾತ್ರ ಸಮಾಜ ರಚನೆಯಲ್ಲಿ ದ್ಯೋತಕವಾಗಿ ಮೂಡಿ ಬಂದವು. ಇವು ಮೊದ ಮೊದಲು ನಾಲ್ಕು ನಾಲ್ಕು ಕಲ್ಲು ಚಪ್ಪಡಿಗಳ ಆಶ್ರಯ ಪಡೆದವುಗಳಾಗಿರಬೇಕು. ಇಂದಿಗೂ ಇಂಥ ಹಲವಾರು ದೇವಾಲಯಗಳನ್ನು ಹಳ್ಳಿಗಳಲ್ಲಿ ಕಾಣುತ್ತೇವೆ. ಊರಿಗೆ ಕಾಲರಾ, ಪ್ಲೇಗ್ ಮೊದಲಾದ ಭೀಕರ ರೋಗರುಜಿನಗಳು ಕಾಣಿಸಿಕೊಂಡಾಗ, ಮಳೆ ಬೆಳೆ ಬರದೆ ಬರ ಉಂಟಾದಾದ ಈ ದೇವತೆಗಳಿಗೆ ವಿಶೇಷ ಪೂಜೆ. ರೈತನಂತೂ ತನ್ನ ವರ್ಷದ ಕೃಷಿಕಾರ್ಯವನ್ನು ಪ್ರಾರಂಭಿಸುವುದು ಈ ದೇವತೆಗಳ ಉಡಿ ತುಂಬಿದ ಮೇಲೆಯೇ.

ಈ ವರೆಗೆ ಗುಂಡುಕಲ್ಲು ರೂಪದಲ್ಲಿದ್ದ ಈ ದೇವತೆಗಳು ಮಾನವ ಸಂಸ್ಕೃತಿ ಬೆಳೆಯುತ್ತ ಹೋದಂತೆ ಕಲಾತ್ಮಕ ರೂಪ ಪಡೆಯ ಹತ್ತಿದವು. ಅದಕ್ಕಾಗಿ ಮೊದ ಮೊದಲು ಸುಲಭವಾಗಿ ಕೆತ್ತಬಲ್ಲಂತಹ ಕಟ್ಟಿಗೆಯ ದೇವತೆಗಳ ನಿರ್ಮಾಣ ಪ್ರಾರಂಭವಾಯಿತು. ಅವು ಆಯಾ ಪ್ರದೇಶದಲ್ಲಿ ದೊರೆಯುವ ಸಾಮಗ್ರಿಗಳನ್ನವಲಂಬಿಸಿ ಮಣ್ಣು ಮತ್ತು ಮರ; ಕಲ್ಲು ಮತ್ತ ಇಟ್ಟಿಗೆಗಳಿಂದ ಮಾಡಿದ ಕಟ್ಟಡಗಳ ಆಶ್ರಯವನ್ನು ಪಡೆಯ ಹತ್ತಿದವು. ಕೆಲವನ್ನು ನೆಲದ ಮೇಲೆ ಕಟ್ಟಿದರೆ ಇನ್ನು ಕೆಲವನ್ನು ಕಟ್ಟೆಯ ಮೇಲೆ ಕಟ್ಟುವ ಪದ್ಧತಿ ಪ್ರಾರಂಭವಾಯಿತು. ಕಟ್ಟೆ ಇಲ್ಲದ ಗುಡಿಗಳನ್ನು ಮನೆ ಕಟ್ಟುವಂತೆ ನೆಲದಾಳದಲ್ಲಿ ಪಾಯ ಹಾಕಿ ಸಮಪಾತಳಿ ಭೂಮಿಯ ಮೇಲೆ ಕಟ್ಟುತ್ತಿದ್ದರು. ಹೆಚ್ಚಾಗಿ ಇವು ಚೌಕಾಕೃತಿಯಲ್ಲಿರುತ್ತಿದ್ದವು. ಇವುಗಳ ಮೇಲೆ ಗುಡಿಗಳನ್ನು ಸಂಕೇತಿಸುವ ಯಾವ ಗೋಪುರಗಳೂ ಇದ್ದಿಲ್ಲ. ಹಳ್ಳಿಗಳಲ್ಲಿ ಈಗಲು ಇಂಥ ಹಲವು ಗುಡಿಗಳನ್ನು ಕಾಣುತ್ತೇವೆ. ಮುಂದೆ ಪುರೋತಶಾಯ ಪ್ರಭಾವವುಂಟಾಗಿ ಅವು ಗರ್ಭಗೃಹ, ಒಳಾಂಗಣ, ಹೊರಾಂಗಣ, ಪಾದಗಟ್ಟಿ, ಮೂಲಗಂಬಗಳನ್ನು ಹೊಂದಿದವು. ಅವಕ್ಕೆ ಮನೆಗಳಿಗೆ ಇರುವಂತೆ ಕಿಟಕಿಗಳಿರಲಿಲ್ಲ. ಗರ್ಭಗುಡಿಯ ಕತ್ತಲಲ್ಲಿರುವ ದೇವರ ಮೇಲೆ ಹೊರಗಿನ ಬೆಳಕು ಫೋಕಸ್ ರೂಪದಲ್ಲಿ ಬಿದ್ದು, ಆ ದೇವತೆಗೆ ಮೆಚ್ಚಿನ ಹೆರಗನ್ನು ತಂದು ಕೊಡುವ ತತ್ವ ಅಲ್ಲಿರಬೇಕು. ಅದರಿಂದ ಭಕ್ತರ ಏಕಾಗ್ರತೆ ಹೆಚ್ಚುತ್ತದೆಂಬ ನಂಬುಗೆಯೂ ಇದೆ. ವಿಗ್ರಹದ ಭದ್ರತೆಯ ಕಲ್ಪನೆಯ ದೃಷ್ಟಿಯೂ ಅಲ್ಲಿದೆ. ಪಾದಗಟ್ಟಿ ಮತ್ತು ಮೂಲಗಂಬಗಳು ದೇವಿಯ ಕಣ್ಣೆದುರಿಗೆ ಇರುವುದರಿಂದ ಅವುಗಳಲ್ಲಿ ದೇವಿಯ ಕೃಪೆ ಇರುವುದೆಂಬ ನಂಬಿಗೆ ಇದೆ. ಗುಡಿಯ ಒಳಗೆ ಹೋಗಲಾರದವರು ಅವುಗಳಿಗೆ ನಮಸ್ಕರಿಸಿ ತೃಪ್ತಿಪಟ್ಟುಕೊಳ್ಳುವರು.

ಇವು ಮಣ್ಣಿನ ಅಥವಾ ಸಣ್ಣ ಸಣ್ಣ ಕಲ್ಲುಗಳ ಗೋಡೆಯನ್ನು ಹೊಂದಿರುವುದಕ್ಕೆ ಹಿನ್ನೆಲೆಯಾಗಿ ಒಂದು ಆಚರಣೆಯಂದು ಹೇಳಲಾಗುತ್ತದೆ. ದೇವಿಯ ಉತ್ಸವ ಮುಗಿದ ತರುವಾಯ ಆಕೆಯ ಅಂಗಾಂಗಗಳನ್ನೆಲ್ಲ ಬಿಚ್ಚಿ ಒಂದು ಪೆಟ್ಟಿಗೆಯಲ್ಲಿಟ್ಟು ಅದರ ಮೇಲೆ ಆ ಮೂರ್ತಿಯ ರುಂಡವನ್ನು ಇರಿಸುವರು. ಗೆ ಇಟ್ಟು ಹಿಂದಿನ ಬಾಗಿಲಿನಿಂದ; ಬಾಗಿಲಿರದಿದ್ದರೆ ಹಿಂದಿನ ಗೋಡೆಯನ್ನು ಒಡೆದು ಹೊರ ಹೋಗಬೇಕು ಎಂಬ ನಂಬುಗೆಯಿದೆಯಂತೆ, ಉತ್ಸವದ ತರುವಾಯ, ಆ ಮೂರ್ತಿಗೆ ದೇವಿಯ ಸ್ವರೂಪ ಬರುವುದರಿಂದ ಆಕೆಯ ಮುಂದೆ ಯಾರು ಹಾಯಬಾರದು ಎಂಬ ವಿಚಾರ ಇದಕ್ಕೆ ಕಾರಣವಂತೆ. ಅದಕ್ಕಾಗಿ ಗ್ರಾಮದೇವತೆಗಳ ಕಟ್ಟಡಗಳನ್ನು ಮಣ್ಣಿನಿಂದ ಅಥವಾ ಸಣ್ಣ ಸಣ್ಣ ಕಲ್ಲುಗಳಿಂದ ಕಟ್ಟಿತ್ತದ್ದರು.

ಬರಬರುತ್ತ ಇಂಥ ಆಚರಣೆಗಳನ್ನೆಲ್ಲ ಕಳಚಿಕೊಂಡು, ಸ್ಥಿರತೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ದೇವಾಲಯಗಳನ್ನು ಕಲ್ಲಿನಲ್ಲಿ ಕಟ್ಟಹತ್ತಿದರು, ಕೆಲವೆಡೆ ಇಟ್ಟಿಗೆಯನ್ನು ಬಳಸಿದ ಉದಾಹರಣೆ ಇವೆ.

ಭಾರತದ ದೇವಾಲಯಗಳ ವಾಸ್ತುಶಿಲ್ಪಕ್ಕೆ ಬೌದ್ಧ ಧರ್ಮ ಒಂದಿಲ್ಲೊಂದು ರೀತಿಯಲ್ಲಿ ತನ್ನ ಕಾಣಿಕೆಯನ್ನಿತ್ತಿದೆ. ಅಶೋಕನ ಕಾಲದ ಸ್ತೂಪಗಳು, ಶಿಲಾಸ್ತಂಬಗಳು, ಗುಹೆಗಳು ತೀವ್ರ ಪ್ರಭಾವವನ್ನು ಬೀರಿವೆ. ಕರ್ನಾಟಕದ ವಾಸ್ತು ಶಿಲ್ಪವೂ ಆ ಪ್ರಭಾವದಿಂದ ಹೊರತಾಗಿಲ್ಲ. ಧಾರವಾಡ ಜಿಲ್ಲೆಯ ಹಲಸಿಯಲ್ಲಿ ಮೃಗೇಶವರ್ಮನ ಕಾಲದ (ಕ್ರಿ.ಶ. ಸು ೪೬೦-೪೮೦) ಕೆಲವು ಪ್ರಾಚೀನ ದೇವಾಲಯಗಳಿದ್ದು ಅವುಗಳಲ್ಲಿ ಒಂದಾದ ಜೈನ ಬಸದಿ ಗರ್ಭಗೃಹ ಶುಕನಾಸಿಯನ್ನು ಮಾತ್ರ ಒಳಗೊಂಡಿದೆ. ಶುಕನಾಸಿ ಗರ್ಭ ಗೃಹಕ್ಕಿಂತ ದೊಡ್ಡದಿದೆ. ಸ್ಥಳೀಯವಾಗಿ ದೊರೆಯಬಹುದಾದ ದೊಡ್ಡ ದೊಡ್ಡ ಒರಟು ಕಲ್ಲುಗಳನ್ನು ಜೋಡಿಸಿ ಗೋಡೆಗಳನ್ನು ಮಾಡಲಾಗಿದೆ. ಯಾವ ನಯನಾಜೂಕು ಇಲ್ಲದೆ ಕಟ್ಟಿರುವ ಈ ದೇವಾಲಯ ಪ್ರಾಯಶಃ ದಕ್ಷಿಣ ಭಾರತದ ಕಟ್ಟಡಗಳ ಪ್ರಾರಂಭಿಕ ಘಟ್ಟವೆಂದು ಗುರುತಿಸಲಾಗಿದೆ. ಅದೇ ರೀತಿ ಸೊರಬ ತಾಲ್ಲೂಕಿನ ಜೂಜೇನಹಳ್ಳಿ ದುರ್ಗಾ ದೇವಾಲಯವನ್ನು ಹೆಸರಿಸಬಹುದಾಗಿದೆ. ಬೆಳಗಾವಿ ಜಿಲ್ಲೆಯ ಕಾದರೋಳಿಯ ಶಂಕರದೇವಾಲಯ ಕದಂಬರಕಾಲದ ನಿರ್ಮಾಣಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಇಲ್ಲಿ ಚೌಕಾಕಾರದ ಗರ್ಭಗೃಹವು ಪಿರಮಿಡನಂಥ ಮೆಟ್ಟು ಮೆಟ್ಟಿಲಾಗಿ ಮೇಲೆರಿರುವ ಗೋಪುರವನ್ನು ಹೊಂದಿದೆ. ತುದಿಯಲ್ಲಿ ಒಂದು ಸ್ತೂಪಿಕೆಯೂ ಅದರ ಮೇಲೆ ಒಂದು ಕಳಶವೂ ಇದೆ. ಐಹೊಳೆ ಪಟ್ಟದಕಲ್ಲುಗಳಲ್ಲಿನ ಎರಡು ಸಾಲು ಕಂಬಗಳನ್ನೊಳಗೊಂಡು  ಸೇರಿದವೆಂದೂ, ಅವು ಅಲ್ಲಿ ಬೆಳೆದು ಬಂದ ವಾಸ್ತುಶೈಲಿಗೆ ಮೂಲ ಮಾದರಿಯಾಗಿವೆಯೆಂದೂ ನಂಬಲಾಗಿದೆ.

ಈ ಎಲ್ಲ ದೇವಾಲಯಗಳ ಹೊಲವನ್ನು ರಚನಾ ವಿಧಾನವನ್ನು ರೂಪಿಸಿದವರು ಬಿಸದೋಜ, ಚಾವೋಜ, ಸಿಗೋಜ, (ಬೆಳಗಾವಿ ಕೇದಾರೇಶ್ವರ ದೇವಾಲಯ) ರೇವತಿ ಓವಜ, ನರಸೊಬ್ಬ, ಅನಿವಾರಿತಗುಂಡ (ಐಹೊಳೆ, ಪಟ್ಟದಕಲ್ಲು ದೇವಾಲಯ) ಮೊದಲಾದ ಶಿಲ್ಪಗಳು. ಅವರಲ್ಲಿ ಕೆಲವರು ರಾಮಾಯಣ ಮಹಾಭಾರತದ ಚಿತ್ರದ ಜೊತೆ ಅನೇಕ ಭಂಗಿಗಳಲ್ಲಿ ನಿಂತ ರಸಿಕ ದಂಪತಿಗಳನ್ನೂ ಇನ್ನಿತರ ಹಲವಾರು ಗ್ರಾಮೀಣ ಬದುಕಿನ ಸನ್ನಿವೇಶಗಳನ್ನೂ ಕೆತ್ತಿರುವುದು ಅವರ ಜಾನಪದ ಜೀವನದ ಹಿನ್ನೆಲೆಗೆ ಸಾಕ್ಷಿಯನ್ನೊದಗಿಸುತ್ತದೆ.

ಮಠ ಮಾನ್ಯಗಳ ವಾಸ್ತುಶಿಲ್ಪ:

ಪೂರ್ವದಲ್ಲಿ ತಪಸ್ವಿಗಳಾದವರು ತಮ್ಮ ಪೂಜೆ ಪುನಸ್ಕಾರಗಳಿಗಾಗಿ ಪ್ರಶಾಂತವಾದ ಅಡವಿ ಕೆರೆದಂಡೆ, ಸ್ಮಶಾನಗಳಂತಹ ಸ್ಥಳಗಳನ್ನು ಆಯ್ದುಕೊಳ್ಳುತ್ತಿದ್ದರು. ಕಾಪಾಲಿಕರು ಸ್ಮಶಾನದಲ್ಲಿದ್ದುಕೊಂಡೇ ತಮ್ಮ ಪೂಜಾ ವಿಧಾನಗಳನ್ನು ಸಲ್ಲಿಸುತ್ತಿದ್ದರು ಸ್ವಾಮಿಗಳು ವಾಸವಾಗಿರುವ ಇಂದಿನ ಮಠಗಳು ಒಂದರ್ಥದಲ್ಲಿ ಸಮಾಧಿ ಸ್ಥಳಗಳೇ. ಇಂದಿಗೂ ಮಠದ ಜಾಗೆಯಲ್ಲಿ ಹೆಣಗಳನ್ನು ಹುಗಿಯುವ ಪದ್ಧತಿಯಿದೆ. ಸ್ವಾಮಿಗಳ ಗದ್ದುಗೆಗಳಂತೂ ಮಠದಲ್ಲಿ ಸಾಕಷ್ಟು ದೊರೆಯುತ್ತವೆ. ಆದ್ದರಿಂದ ಈ ಮಠಗಳು ಸಾಮಾನ್ಯವಾಗಿ ಊರ ಹೊರಗೇ ಇರುತ್ತಿದ್ದವು.

ಪ್ರಚೀನಕಾಲದ ಹಲವಾರು ಶಾಸನಗಳು ಕೆಲವೊಂದು ಮಠಗಳನ್ನು ಉಲ್ಲೇಖಿಸುವವಾದರೂ ಆ ಕಾಲದ ಮಠಗಳು ಇದ್ದ ರೂಪದಲ್ಲಿ ನಮಗೀಗ ನೋಡಲು ದೊರೆಯುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಕಾಲ ಕಾಲಕ್ಕೆ ಬಂದ ಮಠಾಧೀಶರು ಆ ಮಠಗಳನ್ನು ತಮ್ಮ ಸೌಲಭ್ಯಕ್ಕನುಗುಣವಾಗಿ ನವೀಕರಿಸಿಕೊಂಡಿರುವುದು. ಅತೀ ಪ್ರಾಚೀನವೆಂದರೆ ಸುಮಾರು ೧೦೦- ೨೦೦ ವರ್ಷ ಹಳೆಯದಾಗಿರಬಹುದಾದ ಮಠಗಳು ಮಾತ್ರ ನಮಗೆ ನೋಡಲು ದೊರೆಯುತ್ತವೆ. ಅವುಗಳಲ್ಲಿ ಕೆಲವು ಕಲ್ಲಿನಿಂದ ಮತ್ತು ಮಣ್ಣಿನಿಂದ ಕಟ್ಟಲ್ಪಟ್ಟವು. ಅವುಗಳ ಗೋಡೆಗಳು ಸಾಮಾನ್ಯವಾಗಿ ೩- ೪ ಅಡಿ ಅಗಲವಾಗಿರುವುದುಂಟು.

ಗುರುವಿಲ್ಲದ ಮಠವಲ್ಲ ಎಂಬ ಮಾತಿಗೆ ಮಠವಿಲ್ಲದ ಊರಿಲ್ಲ ಎಂಬ ಮಾತನ್ನು ಸೇರಿಸಬಹುದಾಗಿದೆ. ಕರ್ನಾಟಕದ ಸುಮಾರು ೪೦೦೦ ಹಳ್ಳಿಗಳಲ್ಲಿ ಕನಿಷ್ಠ ೪೦೦೦ ಮಠಗಳಾದರೂ ಇರುವ ಸಂಭವವಿದೆ. ಮೊದ ಮೊದಲು ಈ ಮಠಗಳು ಊರಿಂದ ಪ್ರತ್ಯೆಕವಾಗಿರುತ್ತಿದ್ದರೂ ಬರಬರುತ್ತ ಸನ್ಯಾಸಿಗಳಾಗಿದ್ದ ಮಠಾಧಿಪತಿಗಳು ಸಂಬಂಧಿಕರ ಮನೆಯಲ್ಲೋ, ಸಂಬಂಧಿಕರೇ ಮಠದಲ್ಲೋ ಬಂದು ವಾಸಿಸತೊಡಗಿದರಾದರಿಂದ ಅವು ತಮ್ಮ ಮೂಲ ರೂಪ ಕಳೆದುಕೊಂದು ಮನೆಗಳಾಗಿ ಪರಿವರ್ತಿತವಾಗಿವೆ. ಇಂಥ ಮನೆ- ಮಠಗಳನ್ನು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ. ಇನ್ನು ಹಲವು ಮಠಗಳು ತಮ್ಮ ಮೂಲ ಆಶಯವನ್ನು ಉಳಿಸಿಕೊಂಡು ಮಠ ಮಾನ್ಯಗಳ ಸಂಸ್ಕೃತಿಗೆ ಇವತ್ತಿಗೂ ಜೀವಂತ ಸಾಕ್ಷಿಯಾಯೆನ್ನುವಂತಿವೆ. ಅವುಗಳಲ್ಲಿ ಪ್ರಾತಿನಿಧಿಕವಾಗಿ ಎರಡು ಮಠಗಳನ್ನು ಇಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ೧) ಅಮ್ಮಿನಬಾವಿಯ ಪಂಚಗ್ರಹ ಹಿರೇಮಠ ೨) ಹುಬ್ಬಳ್ಳಿಯ ಮೂರು ಸಾವಿರ ಮಠ.

ಅಮ್ಮಿನಬಾವಿಯ ಪಂಚಗ್ರಹ ಹಿರೇಮಠ

ಧಾರವಾಡದಿಂದ ಸುಮಾರು ೧೦ ಕಿ.ಮಿ. ದೂರದಲ್ಲಿರುವ ಅಮ್ಮಿನಬಾವಿಯಲ್ಲಿ ಈ ಮಠವಿದೆ. ಪೂರ್ವಕ್ಕೆ ಮುಖ ಮಾಡಿ ನಿಂತಿರುವ ನೆಲದಿಂದ ಸುಮಾರು ೫೦ ಅಡಿಯಷ್ಟು ಎತ್ತರವಿರುವ ಮಹಾದ್ವಾರ ಅತ್ಯಂತ ಭವ್ಯವಾಗಿದೆ. ೧೫ ಉದ್ದನೆಯ ಮೆಟ್ಟಲುಗಳ ಮೇಲೆ ನಿಂತಿರುವ ಇದು ಮುಂದೆ ೧೦ ಅಡಿ ಅಗಲವಾಗಿರುವ ತಳಪಾಯದ ಮೇಲೆ ನಿಂತಿದೆ. ಅದರ ಮೇಲೆ ಶ್ರೀ ಬರೆಯಲಾಗಿದೆ. ಮೇಲಿನಿಂದ ಎರಡು ಅಡಿ ಕೆಳಗೆ ಸುಮಾರು ೮ ಅಡಿ ಎತ್ತರ ಸುಮಾರು ೧೨ ಅಡಿ ಅಗಲವಿರುವ ಒಂದೇ ಕಲ್ಲಿನಲ್ಲಿ ಸಿಂಹ ಮುಖವನ್ನು ಅದರಿಂದ ಕೆಳಗೆ ಹೊರಟ ಮಂಟಪವನ್ನು ಕೆತ್ತಲಾಗಿದೆ. ಮಹಾದ್ವಾರದ ಎರಡೂ ತೋಳಿಗೆ ಹೂವಿನಾಕಾರದ ಕುಸುರಿ ಕೆಲಸವಿದ್ದು ಕೆಳಗೆ ಸರ್ಪಕಾವಲಿರುವ ಶಿವಲಿಂಗವನ್ನು ಕೆತ್ತಲಾಗಿದೆ. ಹೊಸ್ತಿಲಿಗೆ ಭದ್ರತೆಯನ್ನು ಸಂಕೇತಿಸುವ ಆಮೆಯ ಚಿತ್ರವಿದೆ. ಮಹಾದ್ವಾರದ ಮೇಲ್ಭಾಗದಲ್ಲಿ ಮಣ್ಣಿನಿಂದ ಕಟ್ಟಲಾದ ಮೂರು ಕೋಣೆಗಳಿವೆ. ಅವನ್ನು ನಗಾರಿಖಾನೆ ಎಂದೂ ಕರೆಯಲಾಗುತ್ತಿತ್ತು. ಅಲ್ಲಿ ಕುಳಿತು ಪ್ರತಿದಿನ ಬೆಳಗ್ಗೆ ನಗಾರಿಬಾರಿಸುವುದು, ಸಂಗೀತ ನುಡಿಸುವ ಸೇವೆಯಾಗುತ್ತಿತ್ತು. ಈಗ ಆ ಕೋಣೆಗಳು ಜೀರ್ಣವಾಗಿವೆ.

ಮಹಾದ್ವಾರವನ್ನು ದಾಟಿ ಸುಮಾರು ೧೫ ಅಡಿ ಒಳ ಬರುತ್ತಲೆ ಎತ್ತರಕ್ಕೆ ಮುಖ ಮಾಡಿ ನಿಂತಿರುವ ಭವ್ಯವಾದ ಮಠವನ್ನು ಕಾಣುತ್ತೇವೆ. ಮಂಟಪ, ಮುಖಮಂಟಪವನ್ನೊಳಗೊಂಡಿರುವ ಸದರ್ (ದರ್ಬಾರ್ ಹಾಲ್) ಅಂದಿನ ಜನರ ಕಟ್ಟಿಗೆಯ ಕುಸುರಿ ಕೆಲಸಕ್ಕೆ ಸಾಕ್ಷಿ ನುಡಿಯುವಂತಿದೆ. ಮುಖಮಂಟಪದ ಎದುರಿಗೆ ಎರಡು ಭವ್ಯ ಕಟ್ಟಿಗೆ ಕಂಬಗಳು, ಅವುಗಳ ಒಂದೊಂದು ಮಗ್ಗುಲಿಗೆ ಒಂದೊಂದು ಸಣ್ಣ ಕಂಬಗಳಿವೆ. ಮಂಟಪ ಸಣ್ಣ ಆರು ಕಂಬಗಳು ಅಟ್ಟವನ್ನು ಹೊತ್ತರೆ, ಮುಖಮಂಟಪ ಈ ಎರಡೂ ಸಣ್ಣ ಕಂಬಗಳ ಮೇಲೆ ಅಟ್ಟ ಚಾಚಿಕೊಂಡಿದೆ. ಆ ಎಲ್ಲ ಕಂಬದ ಮೇಲ್ಭಾಗದ ತುದಿಗಳು, ಮತ್ತು ತೊಲೆಗಳ ಮುಖಗಳು ಸಿಂಹ, ಗಿಳಿ, ಬಳ್ಳಿಗಳ ಸೂಕ್ಷ್ಮ ಕೆತ್ತನೆಯ ಕೆಲಸವನ್ನು ಹೊಂದಿವೆ. ಅಲ್ಲಲ್ಲಿ ಬೋದುಗಳ ಮುಗ್ಗಲಿನ ಪಟ್ಟಿಕೆಗಳಲ್ಲಿ ಕಾಮದಹನ, ತ್ರಿಪುರ ಸಂಹಾರ (ಇವೆರಡರ ಪೌರಾಣಿಕ ಅದು ಯಜ್ಞಕುಂಡವಾದರೂ ಆಗಿರಬೇಕು, ನೀರಿನ ಹೊಂಡವಾದರೂ ಆಗಿರಿಬೇಕು). ಇದಕ್ಕೆ ಸಮಾನಾಂತರವಾಗಿ ಛತ್ತಿನಲ್ಲಿ ಗಾಳಿ ಬೆಳಕಿಗೆಂದು ಜಾಲಂದ್ರವನ್ನು ಕೂಡ್ರಿಸಿರುವ ಕೆಲಸ ಆಶ್ಚರ್ಯವನ್ನುಂಟುಮಾಡುವಂತಿದೆ. ಅದರ ಪ್ರತಿಯೊಂದು ಕಟ್ಟೆ ನಾಲ್ಕು ಭವ್ಯ ಕಂಬಗಳನ್ನು ಹೊಂದಿವೆ. ಅವುಗಳ ಮೇಲಿನ ತೊಲೆಗಳನ್ನು ಮಂಟಪದಲ್ಲಿರುವಂತೆ ಕಲಾತ್ಮಕವಾಗೆ ಕೆತ್ತಲಾಗಿದೆ. ಬೋದುಗಳ ಮಗ್ಗಲಿನ ಪಟ್ಟಿಕೆಗಳಲ್ಲಿ ಸಂಗೊಳ್ಳಿ ರಾಯಣ್ಣ, ನರಗುಂದದ ಬಾಬಾಸಾಹೇಬ, ಹಿರೇಮಠದ ಸ್ವಾಮಿಗಳು, ಕೃಷ್ಣ- ರುಕ್ಮಿಣಿಯರ ಸಲ್ಲಾಪ, ರಾಮ- ಸೀತೆ- ಹನುಮಂತ, ಪರಮೇಶ್ವರನ ಓಲಗ, ಜವದಗ್ನಿ- ಕಾಮಧೇನುವಿನ ಪ್ರಸಂಗ ಮೊದಲಾದ ವರ್ಣ ಚಿತ್ರಗಳಿವೆ. ಅವನ್ನು ವಿವರಿಸುವ ಬರಹವೂ ಅವುಗಳ ಮೇಲಿದೆ.

ಭವಂತಿಯ ಬಲ ಕಟ್ಟೆಯಲ್ಲಿ ಕರ್ತೃಗದ್ದುಗೆಗೆ ಹೋಗುವ ದ್ವಾರವಿದೆ. ಆ ದ್ವಾರದ ತೋಳುಗಳು ಮೂರು ಹಂತದ ಕಟ್ಟಿಗೆಯಲ್ಲಿ ಅತಿ ಸೂಕ್ಷ್ಮವಾಗಿ ಕೆತ್ತಲ್ಪಟ್ಟಿದೆ. ಕೈ ಮುಗಿದು ಕುಳಿತ ವ್ಯಕ್ತಿಗಳ ಒಂದು ಸಾಲು, ಬಳ್ಳಿಗಳ ಮತ್ತೊಂದು ಸಾಲು ಅಲ್ಲಿವೆ. ಒಂದೊಂದು ಹಂತದ ಮಧ್ಯದಲ್ಲಿ ಗಣೇಶ, ನಂದಿ, ಸ್ವಾಮಿಗಳ ಚಿತ್ರವಿದೆ. ಒಳಗೆ ಹೋದರೆ ಶಾಂತಲಿಂಗ ಸ್ವಾಮಿಗಳ ಕರ್ತೃಗದ್ದುಗೆ ಇದೆ. ಅದರ ಮುಂದೆ ದೊಡ್ಡ ಪಡಸಾಲೆಯಿದ್ದು ಅಲ್ಲಿ ಅಯ್ಯಾಚಾರ, ಲಿಂಗದೀಕ್ಷೆಯನ್ನು ಮಾಡಲಾಗುತ್ತಿದೆ. ಅಲ್ಲಿಯ ಒಂದು ಅಂಕಣದ ಬೋದುಗಳನ್ನು ಮಾತ್ರ ಬಹು ಸುಂದರವಾಗೆ ಕೆತ್ತಲಾಗಿದೆ. ಗದ್ದುಗೆಯನ್ನೊಳಗೊಂಡ ಈ ಭಾಗವನ್ನು ಗುರುಮಠ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಭಾಗವೇ ಮೂಲ ಮಠವಾಗಿರಬೇಕು. ಅದರ ಮಗ್ಗಲಿಗೆ ಒಂದು ಬಾವಿ ಇದೆ ೯ ಕಲ್ಪನೆಯನ್ನು ಚಿತ್ರದಲ್ಲಿ ಬಹು ಸ್ಪಷ್ಟವಾಗಿ ಬಿಡಿಸಲಾಗಿದೆ. ಕರ್ಣಾರ್ಜುನರ ಕಾಳಗ ಮೊದಲಾದ ಚಿತ್ರಗಳನ್ನು ಕೆಳಗೆ ನಿಂತವರು ಮೇಲಕ್ಕೆ ಮುಖ ಎತ್ತಿ ನೊಡಿದಲ್ಲಿ ಕಾಣುವಂತೆ ಚಿತ್ರಿಸಲಾಗಿದೆ. ಅವುಗಳ ಬಣ್ಣ ಸಂಯೋಜನೆ ಮೆಚ್ಚುವಂತಿದೆ. ವಿವರಗಳನ್ನು ಅವುಗಳ ಮೇಲೆ ಬರೆಯಲಾಗಿದೆ.

ಮಂಟಪದ ಮಧ್ಯದಲ್ಲಿರುವ, ಅಷ್ಟೊಂದು ಕಲಾತ್ಮಕವಲ್ಲದ ಭವ್ಯವಾದ ಬಾಗಿಲನ್ನು ದಾಟಿ ಒಳಗೆ ಪ್ರವೇಶಿಸಿದರೆ ಕಾಣುವದು ಭವಂತಿ. ಸುತ್ತಲೂ ನಾಲ್ಕು ಕಟ್ಟೆಗಳ ಮಧ್ಯೆ ಒಂದು ಪಾಲಾಳ ಅಂಕಣ ವೆಂಬ ಚೌಕ ಹೊಂಡವಿದೆ. ಅದನ್ನು ಮೇಲಿನಿಂದ ಬೀಳುವ ನೀರು ಹರಿದು ಹೋಗಲು ಮಾಡಲಾಗಿದೆ. ಎಂದು ಹೇಳುವರಾದರೂ ಬಹುಶಃ ಅದರ ಉದ್ದೇಶ ಅಷ್ಟೇ ಇರಲು ಸಾಧ್ಯವಿಲ್ಲ. ಅದು ಯಜ್ಞಕುಂಡವಾದರೂ ಆಗಿರಬೇಕು. ನೀರಿನ ಹೊಂಡವಾದರೂ ಆಗಿರಬೇಕು. ಇದಕ್ಕೆ ಸಮಾನಂತರವಾಗಿ ಛತ್ತಿನಲ್ಲಿ ಗಾಳಿ ಬೆಳಕಿಗೆಂದು ಜಾಲಂದ್ರವನ್ನು ಕೂಡ್ರಿಸುವ ಕೆಲಸ ಆಶ್ಚರ್ಯವನ್ನುಂಟುಮಾಡುವಂತಿದೆ. ಅದರ ಮೇಲಿನ ತೊಲೆಗಳನ್ನು ಮಂಟಪದಲ್ಲಿಯಂತೆ ಕಲಾತ್ಮಕವಾಗಿ ಕೆತ್ತಲಾಗದೆ. ಬೋದುಗಳ ಮಗ್ಗಲಿನ ಪಟ್ಟಿಕೆಗಳಲ್ಲಿ ಸಂಗೊಳ್ಳಿ ರಾಯಣ್ಣ, ನರಗುಂದದ ಬಾಬಾಸಾಹೇಬ, ಹಿರೇಮಠದ ಸ್ವಾಮಿಗಳು, ಕೃಷ್ಣ- ರುಕ್ಮಿಣಿಯರ ಸಲ್ಲಾಪ, ರಾಮ- ಸೀತೆ- ಹನುಮಂತ, ಪರಮೇಶ್ವರನ ಓಲಗ, ಜವದಗ್ನಿ- ಕಾಮಧೇನುವಿನ ಪ್ರಸಂಗ ಮೊದಲಾದ ವರ್ಣ ಚಿತ್ರಗಳಿವೆ. ಅವನ್ನು ವಿವರಿಸುವ ಬರಹವೂ ಅವುಗಳ ಮೇಲಿದೆ.

ಭವಂತಿಯ ಬಲಕಟ್ಟೆಯಲ್ಲಿ ಕರ್ತೃಗದ್ದುಗೆಗೆ ಹೋಗುವ ದ್ವಾರವಿದೆ. ಆ ದ್ವಾರದ ತೋಳುಗಳು ಮೂರು ಹಂತದ ಕಟ್ಟಿಗೆಯಲ್ಲಿ ಅತಿ ಸೂಕ್ಷ್ಮವಾಗಿ ಕೆತ್ತಲ್ಪಟ್ಟಿದೆ. ಕೈ ಮುಗಿದು ಕುಳಿತ ವ್ಯಕ್ತಿಗಳ ಒಂದು ಸಾಲು, ಬಳ್ಳಿಗಳ ಮತ್ತೊಂದು ಸಾಲು ಅಲ್ಲಿವೆ. ಒಂದೊಂದು ಹಂತದ ಮಧ್ಯದಲ್ಲಿ ಗಣೇಶ, ನಂದಿ, ಸ್ವಾಮಿಗಳ ಚಿತ್ರವಿದೆ. ಒಳಗೆ ಹೋದರೆ ಶಾಂತಲಿಂಗ ಸ್ವಾಮಿಗಳ ಕರ್ತೃಗದ್ದುಗೆ ಇದೆ. ಅದರ ಮುಂದೆ ದೊಡ್ಡ ಪಡಸಾಲೆಯಿದ್ದು ಅಲ್ಲಿ ಅಯ್ಯಾಚಾರ, ಲಿಂಗದೀಕ್ಷೆಯನ್ನು ಮಾಡಲಾಗುತ್ತಿದೆ. ಅಲ್ಲಿಯ ಒಂದು ಅಂಕಣದ ಬೋದುಗಳನ್ನು ಮಾತ್ರ ಬಹು ಸುಂದರವಾಗಿ ಕೆತ್ತಲಾಗಿದೆ. ಗದ್ದುಗೆಯನ್ನೊಳಗೊಂಡ ಈ ಭಾಗವನ್ನು ಗುರುಮಠ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಭಾಗವೇ ಮೂಲಮಠವಾಗಿರಬೇಕು. ಅದರ ಮಗ್ಗಲಿಗೆ ಒಂದು ಬಾವಿ ಇದೆ.

ಭವಂತಿಯ ಎದುರು ಕಟ್ಟೆಯ ನಡುವಿನ ಬಾಗಿಲು ದಾಟುತ್ತಲೆ ಒಂದು ಪಡಸಾಲೆಯಿದೆ. ಅದರ ಒಂದು ಬದಿಗೆ ಅಡುಗೆಮನೆ, ಸ್ನಾನಗೃಹಗಳಿವೆ. ಇನ್ನೊಂದು ಬದಿಗೆ ಭೋಜನ ಶಾಲೆಯಿದೆ. ಅದರ ಕೆಳಗೆ ಅನುಷ್ಠಾನಕ್ಕಾಗಿ ಒಂದು ನೆಲಮಾಳಿಗೆ ಇದ್ದು ಅಲ್ಲಿ ಒಂದು ವಿಶೇಷವಾದ ಪೂಜಾಗೃಹವಿದೆ.

ಭವಂತಿಯ ಎಡಕಟ್ಟೆಯಲ್ಲಿ ಉತ್ಸವಕ್ಕೆ ಉಪಯುಕ್ತವಾದ ವಸ್ತುಗಳನ್ನು, ಕಾಮನ ಹಬ್ಬದಲ್ಲಿ ಊರಜನ ಮೆರೆಸುವ ಕಾಮ- ರತಿಯರ ವಿಗರಹಗಳನ್ನೂ, ಮೈಸೂರು ಅರಸರು ಕೊಟ್ಟ ಮೇಣೆಯನ್ನು, ಪಲ್ಲಕ್ಕಿಯನ್ನೂ ಇಡಲಾಗಿದೆ.

ಎಡಕಟ್ಟೆಯ ಗೋಡೆಯ ಮಧ್ಯದಲ್ಲಿರುವ ಮೆಟ್ಟಿಲುಗಳಿಂದ ಸದರ್ ಮೇಲಿನ ಅಟ್ಟ ಮತ್ತು ಭವಂತಿಯ ಮೇಲಿನ ಅಟ್ಟಗಳಿಗೆ ಹೋಗಬಹುದಾಗಿದೆ. ಸದರ್ ಮೇಲಿನ ಅಟ್ಟದ ಮುಂಭಾಗಕ್ಕೆ ಸಣ್ಣ ದೊಡ್ಡ ಕಟ್ಟಿಗೆಯ ಕಮಾನುಗಳನ್ನು ಕೂಡಿಸಲಾಗಿದೆ. ಮುಂಭಾಗದ ಅಂಗಳದಲ್ಲಿ ನಿಂತು ನೋಡುವವರಿಗೆ ಅದೊಂದು ಸುಂದರ ಮಂಟಪದಂತೆ ಕಾಣುತ್ತದೆ. ದೂರದಿಂದ ನೋಡುವವರಿಗೆ ಮೈಸೂರು ಅರಮನೆಯನ್ನು ನೆನಪಿಗೆ ತರುತ್ತದೆ. ಅಟ್ಟದ ವಿಶಾಲವಾದ ಸ್ಥಳದಲ್ಲಿ ಬಹಳಷ್ಟು ಜನರಿಗೆ ಕೂಡ್ರಲು ಅವಕಾಶವಿದೆ. ಬಲಭಾಗಕ್ಕೆ ಒಂದು ಕೋಣೆ ಇದೆ. ಸ್ವಾಮಿಗಳ್ಯಾರಾದರೂ ಬಂದಲ್ಲಿ ಅಲ್ಲಿ ಇಳಿದು ಕೊಳ್ಳಬಹುದಿತ್ತು. ಅಟ್ಟದ ಹಿಂಬಾಗಿಲಿನಿಂದ ಒಳಗೆ ಬಂದರೆ ಭವಂತಿಯ ಮೇಲೆ ನಾಲ್ಕು ಕಟ್ಟೆಗಳಿಗೆ ಸಮಾಂತರವಾಗಿ ಕಟ್ಟಲ್ಪಟ್ಟ ಅಟ್ಟವನ್ನು ಕಾಣುತ್ತೇವೆ. ನಾಲ್ಕೂ ಕಡೆ ನಿಂತು ಕೆಳಗಿನ ಕಾರ್ಯಚಟುವಟಿಕೆಗಲನ್ನು ನೋಡಬಹುದಾಗಿದೆ.

ಒಟ್ಟಾರೆ ಹಿಂದಿನ ಗುರುವರ್ಗದ ಮಠಗಳು ಹೇಗಿದ್ದವು ಎಂಬುದಕ್ಕೆ ಇಂದು ಇದು ಒಳ್ಳೆಯ ಉದಾಹರಣೆಯಾಗಿ ನಿಂತಿದೆ.

ಮೂರುಸಾವಿರಮಠ, ಹುಬ್ಬಳ್ಳಿ.

ಪೂರ್ವವಕ್ಕೆ ಮುಖ ಮಾಡಿ ನಿಂತಿರುವ ಆರು ಅಂತಸ್ತಿನ ಮಹಾದ್ವಾರ ಶ್ರೀಮಠದ ಭವ್ಯತೆಯನ್ನು ಸಾರಿ ಹೇಳುತ್ತಿದೆ. ಮೇಲಿನ ಗಡಿಯಾರವುಳ್ಳ ಗೋಪುರ ದೂರದಿಂದಲೇ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಅದಕ್ಕೆ ಹೊಂದಿಕೊಂಡು ಸುತ್ತಲೂ ಹಲವಾರು ಅಂಗಡಿಗಳ ಸಾಲುಗಳನ್ನು ಕಾಣುತ್ತೇವೆ. ಅವುಗಳಲ್ಲಿ ವಿಭೂತಿ ರುದ್ರಾಕ್ಷಿ ಶ್ರೀಮಠದ ಪ್ರಕಟನೆಗಳನ್ನು ಮಾರುವ ಅಂಗಡಿಯೂ ಒಂದು. ನಡುವಿನ ಮಾಹಾದ್ವಾರ ಒಂದು ಮಗ್ಗಲಿಗೆ ವಸ್ತು ಸಂಗ್ರಹಾಲಯವಿದೆ. ಅಲ್ಲಿ ಓಲೆಮಠದ ಕಮಾನಿನಾಕಾರದ ಕಟ್ಟಿಗೆ ಮಟಗಿಯನ್ನು ಇದ್ದಕ್ಕಿದ್ದ ಹಾಗೆ ಸಂಗ್ರಹಿಸಲಾಗಿದೆ. ಇನ್ನೊಂದು ಮಗ್ಗಲಿಗೆ ಆನೆ ಮನೆ ಇದೆ ಅದನ್ನು ದಾಟಿ ಮುಂದೆ ಬಂದರೆ ಎದುರಿಗೆ ಇತ್ತೀಚಿಗೆ ಮಾಡಿಸಿದ ಜೋಡು ತೇರು ಕಾಣುತ್ತೇವೆ. ಅವುಗಳ ಹಿಂದೆ ಜೀರ್ಣವಾದ, ಭವ್ಯವಾದ ಕಟ್ಟಿಗೆ ತೇರನ್ನು ಹಾಗೇ ಸಂಗ್ರಹಿಸಿಡಲಾಗಿದೆ. ಅದರ ಮಗ್ಗಲಿಗೆ ಆಫೀಸಿನ ಆಧುನಿಕ ಕಟ್ಟಡವಿದೆ. ಅವನ್ನು ದಾಟಿ ಮುಂದೆ ಬರುತ್ತಿದ್ದಂತೆ ಉತ್ತರಕ್ಕೆ ಮುಖಮಾಡಿನಿಂತ ಶ್ರೀಮಠದ ಭವ್ಯಮಂಟಪ ಕಾಣುತ್ತದೆ. ಮಂಟಪದಲ್ಲಿ ಕುಳಿತು ಶ್ರೀಗಳಾಗಳಲಿ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳಾಗಲಿ ಎಲ್ಲರಿಗೂ ಕಾಣಬೇಕು ಎಂಬ ದೃಷ್ಟಿಯಿಂದ ಅದನ್ನು ಮೂರು ಹಂತಗಳಾಗಿ ಕಟ್ಟಿಸಲಾಗಿದೆ. ಮುಖಮಂಟಪದ ಘನವಾದ ಆರು ದೊಡ್ಡ ಕಂಬಗಳನ್ನು ಹೊಂದಿದೆ. ಅದರ ಒಂದು ಮಗ್ಗಲಿಗೆ ಕಟಂಜನಾಕಾರದ ಕೋಣೆಯಿದ್ದು ಅಲ್ಲಿ ಬೆಳ್ಳಿಸಿಂಹಾನವನ್ನಿಡಲಾಗಿದೆ. ಅಲ್ಲಿಂದ ಒಂದೊವರೆ ಅಡಿ ಎತ್ತರದ ಮೇಲೆ ಮುಖ್ಯಮಂಟವಿದೆ. ಅದಕ್ಕೆ ಆರು ಸಣ್ಣ ಕಂಬಗಳಿದ್ದು ಅದು ಕಮಾನಿನಾಕೃತಿಯ ಮಡಿಗೆ ಹೊಂದಿದೆ. ಅದರ ಎರಡೂ ಬದಿಗೆ ಎರಡು ಕೋಣೆಗಳಿದ್ದು ಒಂದು ಕೋಣೆಯಲ್ಲಿ ಬಂಗಾರದ ಸಾಮಾನುಗಳನ್ನು, ಇನ್ನೊಂದು ಕೋಣೆಯಲ್ಲಿ ಆಹಾರ ಸಾಮಗ್ರಿಗಳನ್ನು ಇಡಲಾಗಿದೆ. ಮಂಟಪದ ಮಧ್ಯದಲ್ಲಿ ಸಾಗವಾನಿ ಕಟ್ಟಿಗೆಯಿಂದ ಮಾಡಿದ ಭವ್ಯ ಸಿಂಹಾಸನವಿದೆ. ಮಂಟಪದ ಆರೂ ಕಂಬಗಳ ಮೇಲೆ ಮೇಲಿನ ಅಟ್ಟ ಚಾಚಿಕೊಂಡಿದೆ. ಮುಖಮಂಟಪದ ಗೋಡೆಯ ಮಧ್ಯದಿಂದ ಮೇಲಿನ ಮಹಡಿಗೆ ಹೋಗಲು ಇಕ್ಕಟ್ಟಾದ ಮೆಟ್ಟಲುಗಳಿವೆ. ಮಂಟಪದ ವಿದ್ಯುದೀಪ ಮತ್ತು ಅಲಂಕರಣ ಮಸ್ತುಗಳು ಶ್ರೀಮಠಕ್ಕೆ ಗಾಂಭಿರ್ಯವನ್ನು ತಂದು ಕೊಟ್ಟಿವೆ.

ಮಂಟಪದ ಮಧ್ಯದಲ್ಲಿರುವ ಕಲಾತ್ಮಕ ಸಣ್ಣ ಬಾಗಿಲನ್ನು ಬಾಗಿ ದಾಟಿ ಒಳ ಹೋಗುತ್ತಲೆ ಪವನ ಹಾಲಿದೆ. ಅಲ್ಲಿ ಕುಳಿತು ಶ್ರೀಗಳು ಭಕ್ತರಿಗೆ ದರ್ಶನ ಕೊಡುತ್ತಾರೆ. ಅದರ ಎರಡೂ ಕಡೆ ಎರಡು ಕೋಣೆಗಳಿವೆ. ಅವುಗಳಲ್ಲಿ ಒಂದು ಶ್ರೀಗಳ ಪ್ರಸಾದ ಖೋಟಿಕೋಲಿ. ಇದನ್ನು ದಾಟಿ ಮುಂದೆ ಹೋದರೆ ಲಕ್ಷ್ಮೀ ಹಾಲ್‌ತಲುಪುತ್ತೇವೆ. ಮಧ್ಯದಲ್ಲಿ ಲಕ್ಷ್ಮೀ ಕಂಬವಿದ್ದು ದಿನಂಪ್ರತಿ ಪೂಜೆ ಗೊಳ್ಳುತ್ತಿದೆ. ಅಲ್ಲಿಯೇ ಬಂದು ಹೋಗುವವರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕೆ ಹೊಂದಿಕೊಂಡು ಸ್ನಾನದ ಮನೆ, ಅಡುಗೆ ಮನೆಗಳಿವೆ. ಅದರ ಒಂದು ಬದಿಗೆ ವಟುಗಳ ಪೂಜಾಖೋಲಿ, ಊಟದ ಖೋಲಿ ಇವೆ. ಅಲ್ಲಿಂದ ಮೇಲಿನ ಅಟ್ಟದಲ್ಲಿರುವ ಶ್ರೀಗಳವರ ಪೂಜಾಗೃಹದ ಮುಂಭಾಗಕ್ಕೆ ಹೋಗಲು ಬರುವಂತೆ ಮೆಟ್ಟಿಲುಗಳಿವೆ. ಲಕ್ಷ್ಮೀ ಹಾಲಿನ ಇನ್ನೊಂದು ಬದಿಗೆ, ಸ್ವಲ್ಪ ಕೆಳಭಾಗದಲ್ಲಿ ದನದ ಕೊಟ್ಟಿಗೆ ಇದೆ.

ಪವನ ಹಾಲು ಮತ್ತು ಲಕ್ಷ್ಮೀ ಹಾಲಿನ ಮಧ್ಯದ ಗೋಡೆಯ ನಡುವೆ ಇರುವ ಮೆಟ್ಟಿಲುಗಳ ಮೂಲಕ ಮೇಲೇರಿ ಹೋಗಿ ಮುಂಭಾಗಕ್ಕೆ ತಿರುಗಿದರೆ ಮಂಟಪದ ಮೇಲೆ ಕಟ್ಟಲಾದ ಶಿವಾನುಭವ ಮಂಟಪಕ್ಕೆ ಬರುತ್ತೇವೆ. ಅಲ್ಲಿ ನಿಂತು ಕೆಳಭಾಗದ ಚಟುವಟಿಕೆಗಳನ್ನು ನೋಡಬಹುದು. ಅದು ಕಟ್ಟಿಗೆಯ ಮಂಟಪದಿಂದ ಅಲಂಕೃತವಾಗಿದು. ಆದರೆ ಒಂದುಬದಿಗೆ ವಟುಗಳು, ಸಾಧಕರ ನಾಲ್ಕು ಕೋಣೆಗಳಿವೆ. ಮೆಟ್ಟಲನ್ನು ದಾಟಿ ಹಿಂಭಾಗಕ್ಕೆ ಹೋದರೆ ಶ್ರೀಗಳು ಕುಳಿತುಕೊಳ್ಳುವ, ಭಕ್ತರಿಗೆ ದರ್ಶನವನ್ನೀಯುವ ಕೋಣೆಯಿದೆ. ಅದರ ಮುಂಬದಿಗೆ ಒಂದು ಬಾಗಿಲಿದ್ದು ಅದರ ಮೂಲಕ ಒಳಗೆ ಹೋದರೆ ಶ್ರೀಗಳವರ ಬೆಳ್ಳಿ ಸಾಮಾನುಗಳಿಂದ ಕೂಡಿದ. ಪೂಜಾಗೃಹವಿದೆ. ಅದರ ಎದುರಿಗೆ ಸ್ನಾನಗೃಹ, ಅಡುಗೆ ಮನೆ ಇವೆ. ದರ್ಶನ ಕೋಣೆಯ ಹಿಂಬದಿಗೆ ಒಂದು ಮನಮೋಹಕವಾದ ರತ್ನಗಂಬಳಿ ಕುತನಿ, ಬೆಲೆಯುಳ್ಳ ಪೀಠೋಪಕರಣ, ಮೊದಲಾದವಿದ್ದು ಅವು ಶ್ರೀಮಠದ ವೈಭವವನ್ನು ಸಾರುತ್ತಿವೆ. ಎರಡನೆಯ ಅಂತಸ್ತಿನಲ್ಲಿ ಮತ್ತೊಂದು ಪ್ರಶಾಂತವಾದ ಶ್ರೀಗಳವರ ಪವಡಿಸುವ ಮನೆಯಿದೆ. ಅದರ ಮುಂದ  ೧ ನೇ ಅಂತಸ್ತಿನಲ್ಲಿ ಛತ್ತಿನ ವಿಶಾಲವಾದ ಬಯಲಿದ್ದು. ಅದರ ಇನ್ನೊಂದು ಬದಿಗೆ ಶ್ರೀಗಳ ಉಪಯೋಗಕ್ಕೆಂದು ಗ್ರಂಥಾಲಯವನ್ನು ಕಟ್ಟಿಲಾಗಿದೆ.

ಮುಖ ಮಂಟಪದ ಒಂದು ಮಗ್ಗಲಿಗೆ ಸ್ವಲ್ಪ ಕೆಳಬಾಗದಲ್ಲಿ ಕರ್ತೃಗದ್ದಗೆಯಿದೆ. ಗದ್ದುಗೆಯ ಇಡೀ ಕೋಣೆಯನ್ನು ಬೆಲೆಯುಳ್ಳ ಅಮೃತಶಿಲೆಯಿಂದ ಹೊದಿಸಲಾಗಿದ್ದು ಪ್ರವೇಶಿಸುತ್ತಲೆ ಭಕ್ತರ ಹೃದಯದಲ್ಲಿ ಭಕ್ತಿ ಭಾವವನ್ನು ಹೊಮ್ಮಿಸುತ್ತದೆ. ಗದ್ದುಗೆಯ ಸುತ್ತಲೂ ಕಟಂಜನವಿದ್ದು ಪ್ರದಕ್ಷಿಣ ಪಥದ ಸುತ್ತಲೂ ಭಕ್ತರು ಕುಳಿತುಕೊಳ್ಳಲು ಕಮಾನಿನಾಕಾರದ ಕಟ್ಟೆಗಳಿವೆ. ಗದ್ದುಗೆ ದರ್ಶನ ಮಾಡಿಕೊಂಡ ಭಕ್ತರು ಅಲ್ಲಿ ಕುಳಿತುಹೋಗಬೇಕು ಎಂಬ ನಂಬುಗೆಯುಂಟು. ಆ ಕಟ್ಟೆಗಳ ಮೇಲೆ ಮತ್ತೊಂದು ಅಟ್ಟವಿದೆ. ಶ್ರೀಗಳು ೧ ನೇ ಅಂತಸ್ತಿನಿಂದಲೆ ಕರ್ತೃಗದ್ದುಗೆಯ ದರ್ಶನ ಒಡೆಯಲು ಬರುವಂತೆ ಹಾದೆ ಇದೆ. ಕರ್ತೃಗದ್ದುಗೆಯ ಹಿಂದೆ ಮುಸ್ಲಿಂ ಕಲಾಕೃತಿಯನ್ನು ಹೋಲುವ ನಾಲ್ಕು ಕಮಾನುಗಳುಳ್ಳ ಮುಲಮಠವಿದೆ. ಇದು ಬಹಶಃ ೩೦೦- ೪೦೦ ವರ್ಷದ ಹಿಂದಿನದಾಗಿರಬಹುದು. ಪೂರ್ವದಲ್ಲಿ ಈ ಮೂಲರ್ಮ ಮತ್ತು ಕರ್ತೃಗದ್ದುಗೆ ಮಾತ್ರ ಇದ್ದವು. ಸುಮಾರು ೬೦- ೭೦ ವರ್ಷದ ಅಂತರದಲ್ಲಿ ಉಳಿದೆಲ್ಲ ರೂಪುಗೊಂಡಿದೆ.

ಮುಖಮಂಟಪದ ಇನ್ನೊಂದು ಮಗ್ಗಲಿಗೆ ಗುರುಸಿದ್ಧಸ್ವಾಮಿಗಳ ಗದ್ದುಗೆಯಿದೆ. ಅದರ ಮಗ್ಗಲಿಗೆ ಕಲ್ಯಾಣ ಮಂಟಪದ, ವಿದ್ಯಾರ್ಥಿಗಳ ವಸತಿನಿಲಯಗಳಿವೆ. ಇಡೀ ಮಠ ಕೆಂಪು ಕಲ್ಲಿನಲ್ಲಿ ಕಟ್ಟಲ್ಪಟ್ಟಿದೆ. ನೆಲಕ್ಕೆಲ್ಲ ಅಮೃತಶಿಲೆ ಹೊದಿಸಿರುವುದು ಶ್ರೀಮಠಕ್ಕೆ ಗಾಂಭಿರ್ಯವನ್ನು ಮೆರಗನ್ನೂ ಉಂಟು ಮಾಡಿದೆ.

ಉತ್ತರ ಕರ್ನಾಟಕದ ಇನ್ನೆರಡು ಮಠಗಳು ಮೇಲಿನ ಮಠಗಳಿಗಿಂತ ಭಿನ್ನವಾಗಿದೆ. ಅವು ೧) ಶಿರಹಟ್ಟಿಯ ಫಕೀರಸ್ವಾಮಿ ಮಠ ೨) ಸಾವಳಗಿಯ ಶಿವಲಿಂಗೇಶ್ವರ ಮಠ, ಇವು ವೀರಶೈವ ಮಠಗಳಾಗಿದ್ದರೂ ಹಿಂದೂ- ಮುಸ್ಲಿಂ ಸಂಸ್ಕೃತಿಯ ಸಮಾಗಮನ್ನ್ನು ದ್ಯೋತಿಸುವ ಕಟ್ಟಡಗಳ ರಚನಾ ವಿನ್ಯಾಸವನ್ನು ಹೊಂದಿವೆ. ಕೆಳಗೆ ಗದ್ದುಗೆ ಇದ್ದರೆ ಮೇಲೆ ಗೋರಿ ಇದೆ.

ಒಟ್ಟಾರೆ ಉತ್ತರ ಕರ್ನಾಟಕದ ಮಠಗಳ ತಲವಿನ್ಯಾಸ ಸ್ವಲ್ಪ ಹೆಚ್ಚೂ ಕಡಿಮೆ ಒಂದೇ ರೀತಿಯದೆಂದು ಹೇಳಬಹುದು. ಮಹಾದ್ವಾರ, ಸುತ್ತಾಲಯ, ಪ್ರಾಂಗಣ, ಮಧ್ಯದಲ್ಲಿ ಕರ್ತೃಗದ್ದುಗೆ, ಅದರ ಕೆಳಗೆ ಕೆಲವೆಡೆ ಅನುಷ್ಠಾನಕ್ಕಾಗಿ ನೆಲಮನೆ, ಮುಂದೆ ಭವ್ಯವಾದ ಮಂಟಪ, ಒಳಗೆ ಹೋದರೆ ಶ್ರೀಗಳು ಕುಳಿತುಕೊಳ್ಳುವ ಭಕ್ತರಿಗೆ ದರ್ಶನವನ್ನೀಯುವ ಸ್ಥಳ, ಶ್ರೀಗಳ ಪವಡಿಸುವ ಕೋಣೆ, ಪೂಜಾಗೃಹ, ಅಡುಗೆಮನೆ ಇವೆಲ್ಲ ಸಾಮಾನ್ಯವಾಗಿರುತ್ತವೆ. ಇಡೀ ಮಠಗಳು ಹೆಚ್ಚಾಗಿ ಹಾಳುಮಣ್ಣಿನಿಂದ ಕೆಲವು ಸಲ ಕಲ್ಲಿನಿಂದ ಕಟ್ಟಿದವುಗಳಾಗಿರುತ್ತವೆ. ಇತ್ತೀಚೆಗೆ ಮಠಗಳ ಕಟ್ಟುವಿಕೆಯಲ್ಲಿ ಆರ್.ಸಿ.ಸಿ. ಪ್ರವೇಶಿಸತೊಡಗಿದೆ. ಎಲ್ಲ ಕಲೆಗಳು ಜಾನಪದಕಲೆಗಳ ಮೂಲದಿಂದ ಬಂದಿರುವಂತೆ ದೇವಾಲಯ ಮಠ ಮಾನ್ಯಗಳ ವಾಸ್ತು ಶಿಲ್ಪಕಲೆಯೂ ಜಾನಪದ ಮೂಲದಿಂದಲೆ ಬಂದುದೆಂತಲೂ, ಮೂಲ ಆಶಯದಲ್ಲಿ ಈಗಲೂ ಆ ಎಲ್ಲ ಅಂಶಗಳನ್ನು ಉಳಿಸಿಕೊಂಡು ಬಂದಿದೆಯೆಂತಲೂ ಹೇಳಬಹುದಾಗಿದೆ.

* * *