ಲಕ್ಷ್ಮೀಶನ ಜೈಮಿನಿ ಭಾರತದ ಸೀತಾಪರಿತ್ಯಾಗದ ಕಥೆಯ ಸಂದರ್ಭದಲ್ಲಿ ರಾಮನ ಆಜ್ಞೆಯಂತೆ ಲಕ್ಷಣ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಅಯೋಧ್ಯೆಯ ಕಡೆ ಹೊರಟು ಬಿಟ್ಟಾಗ ಚಮರಿಮೃಗಗಳು, ಆನೆಗಳು, ಸಾರಸಾಕ್ಷಿಗಳು, ಹಂಸಪಕ್ಷಿಗಳು ಆಕೆಯನು ರಕ್ಷಿಸಿದ್ದಾಗಿ ವಿವರಿಸಲ್ಪಟ್ಟಿದೆ. ಅಂತೆಯೇ ದುಷ್ಟ ಬುದ್ದಿಯಿಂದ ಕಾಡಿಗೊಯ್ದು ತಳ್ಳಲ್ಪಟ್ಟ ಚಂದ್ರಹಾಸನೂ ಕೂಡ ವನದೇವೆಯಿಂದ ರಕ್ಷಿಸಲ್ಪಟ್ಟ ಎಂದು ಕವಿ ಲಕ್ಷ್ಮೀಶ ವಿವರಿಸುತ್ತ ಚಂದ್ರಹಾಸನು ತನ್ನ ಕಾಲಿನ ಬೆರಳು ಕಳೆದುಕೊಂಡು ಅನುಭವಿಸುತ್ತಿದ್ದ ನೋವಿಗೆ ಅಡವಿಯ ಚರಾಚರಗಳು ಪಡಿನುಡಿಯುತ್ತಿದ್ದುವಂತೆ.

ಈ ಮೇಲಿನ ಕಥಾಭಾಗಗಳು ಏನೇ ಇರಲಿ ಇದರ ಮೂಲ ಆಶಯವಿಷ್ಟೇ ಪ್ರಕೃತಿಗೆ ಮನುಷ್ಯ ಸಮೂಹವನ್ನು ರಕ್ಷಿಸುವ ಶಕ್ತಿಯಿದೆ. ಪ್ರಕೃತಿಗೆ ಮನುಷ್ಯ ಸಮೂಹವನ್ನು ರಕ್ಷಿಸುವ ಶಕ್ತಿಯಿದೆ. ಪ್ರಕೃತಿಗೆ ಮನುಷ್ಯ ಜೀವನದ ಬಗ್ಗೆ ಕರುಣೆಯಿದೆ. ಶಿಷ್ಟ ಕಾವ್ಯ ಕಥೆಗಳೇ ಅಲ್ಲದೆ, ಯಾವುದೇ ಜನಪದ ಕಥೆಯೊಂದನ್ನು ಗಮನಿಸಿದರೂ ಅಲ್ಲಿ ಪರಿಸರ ಮನುಷ್ಯನನ್ನು ರಕ್ಷಿಸುತ್ತದೆ ಎಂಬ ವಿವರಗಳೇ ತುಂಬಿವೆ. ಹಾಗೆ ನೋಡಿಕೊಂಡರೆ ಲಕ್ಷ್ಮೀಶನ ಜೈಮಿನಿ ಭಾರತದ ಕಥಾ ಭಾಗಗಳೂ ಜನಪದ ಕಥಾ ಆಶಯಗಳೇ ಎಂದು ತಿಳಿಯಬಹುದಾಗಿದೆ.

ಎಲ್ಲಿ ಪರಿಸರ ಸಮೃದ್ಧಿ ಇದೆಯೋ ಅಲ್ಲಿ ಜೀವನವೂ ಸಮೃದ್ಧವಾಗಿ ಇರುತ್ತದೆ. ಎಲ್ಲಿ ಪ್ರಕೃತಿ ನಾಶವಾಗಿರುತ್ತದೋ ಅಲ್ಲಿ ಜೀವನ ಕ್ರಮವೂ ಕಮರಿರುತ್ತದೆ. ಅಲ್ಲಿಯ ಬದುಕಿನಲ್ಲಿ ಪೈಪೋಟಿ ಇರುತ್ತದೆ. ಸರಕು ಸಂಸ್ಕೃತಿ ಅಲ್ಲಿರುತ್ತದೆ. ಇದನ್ನು ಸಾಮಾನ್ಯವಾಗಿ ಪಟ್ಟಣದ ಸಂಸ್ಕೃತಿ ಎನ್ನಬಹುದು. ಅರಣ್ಯ ಸಂಸ್ಕೃತಿಯಲ್ಲಿ ಎರಡು ಜೀವನ ಕ್ರಮಗಳಿದ್ದವು. ಒಂದು ಬುಡಕಟ್ಟು ಸಂಸ್ಕೃತಿ, ಎರಡನೆಯದು ಋಷಿಸಂಸ್ಕೃತಿ. ಇವೆರಡರ ಜೀವನ ಕ್ರಮವೂ ಹೇಗಿರುತ್ತದೆಂದರೆ ಒಂದು ತಾಯಿ ಇದ್ದಂತೆ, ಇನ್ನೊಂದು ಮಗುವಿದ್ದಂತೆ. ಇವೆರಡರ ನಡುವೆ ಒಂದು ಯಜಮಾನ ಸಂಸ್ಕೃತಿ ಇತ್ತು. ಅದು ಯಾವುದೆಂದರೆ ಪಟ್ಟಣ ಸಂಸ್ಕೃತಿ.

ಮೊದಲು ಬುಡಕಟ್ಟು ಸಂಸ್ಕೃತಿಯ ವಿವರಗಳನ್ನೇ ಸ್ವಲ್ಪಮಟ್ಟಿಗೆ ಗಮನಿಸಬಹುದಾಗಿದೆ. ಬುಡಕಟ್ಟು ಸಂಸ್ಕೃತಿಯಲ್ಲಿ ನಾಗರೀಕತೆಯ ಬದುಕಿಗೆ ಸಂಬಂಧಪಟ್ಟ ಸಂಗತಿಗಳಿಗೆ ಅಂದರೆ ನಗರದಂತೆ ದೊಡ್ಡ ದೊಡ್ಡ ಸೌಧಗಳಿಗೆ ಮಹಲುಗಳಿಗೆ ಅಲ್ಲಿ ಅವಕಾಶವಿಲ್ಲ. ಕಾಡಿನ ಸಾಮಾನ್ಯ ಉತ್ಪನ್ನಗಳಿಂದ ಕಟ್ಟಬಹುದಾಗಿದ್ದ ಗುಡಿಸಲುಗಳು, ಒಂದೊಂದು ಗುಡಿಸಲೂ ವೃತ್ತಾಕಾರಕ್ಕೆ ಇದ್ದು, ಎಲ್ಲ ಗುಡಿಸಲ ಸಮೂಹವು ವೃತ್ತಾಕಾರಕ್ಕೆ ಇರಬೇಕು. ಒಂದೆಡೆ ಆಗುಹೋಗು ಇನ್ನೊಂದಕ್ಕೆ ಅರಿವಾಗುವಂತಿರಬೇಕು. ಎಲ್ಲ ಗುಡಿಸಲ ನಡುವೆ ಬೆಂಕಿ ಉರಿಯುವಂತಿರಬೇಖು. ಈ ಬೆಂಕಿಯ ಬೆಳಕಿನಲ್ಲಿ ರಾತ್ರಿಯ ಚಟುವಟಿಕೆ ನಡೆಯಬಹುದು. ಸಾಂಘಿಕ ಜೀವನಕ್ಕೆ ಇಲ್ಲಿ ಮಹತ್ವ. ಒಬ್ಬ ಗಂಡಸು, ಒಬ್ಬ ಹೆಂಗಸು, ಒಂದು ಮಗು ಇಡೀ ಬುಡಕಟ್ಟು ಹುಟ್ಟಿಗೆ ಸಂಬಂಧಿಸಿದವರು. ಇಡೀ ಹಟ್ಟಿ ಒಂದೇ ಹಟ್ಟಿ ಅಥವಾ ಒಂದೇ ಹಟ್ಟಿ ಇಡೀ ಹಟ್ಟಿ. ಯಾವ ವ್ಯಕ್ತಿ ಯಾವ ಗುಡಿಸಲಿಗೆ ಸಂಬಂಧಪಟ್ಟವನು ಎಂಬುದಕ್ಕೆ ಇಲ್ಲಿ ಮಹತ್ವವಿಲ್ಲ. ಒಂದು ಹಟ್ಟಿಯ ವ್ಯಕ್ತಿ ಸಂಪಾದಿಸಿಕೊಂಡು ಬಂದ ಆಹಾರ ಎಲ್ಲ ಹಟ್ಟಿಗಳದೂ ಆದುದರಿಂದ ಬುಡಕಟ್ಟು ಹಳ್ಳಿಯ ಜನಗಳಿಗೆ ಬಿಕ್ಷುಕ ವೃತ್ತಿಯ ಪರಿಚಯವರುವುದಿಲ್ಲ. ಮತ್ತು ಬದುಕಿನ ವಿಧಿ ವಿಧಾನಗಳಲ್ಲಿ ಅಲೌಕಿಕ ಸಂಗತಿಗಳಿಗೆ ಹೆಚ್ಚು ಅವಕಾಶವಿಲ್ಲ. ದೈವತ್ವದ ಪರಿಕಲ್ಪನೆ ತುಂಬಾ ಕಡಿಮೆ. ರಾಮ, ಕೃಷ್ಣ ಮತ್ತು ಮಾರಿದೇವತೆಯ ಪರಿಕಲ್ಪನೆ ತುಂಬ ಕಡಿಮೆ. ಅವರ ನಡುವೆ ಆದ ವೀರರಿಗೆ ಮಾತ್ರ ದೈವತ್ವದ ಅವಕಾಶವಿರುತ್ತದೆ. ಸ್ತ್ರೀಯರು ವಿಧವರೆಯರಗಿಯೇ ಬದುಕುವ ಅಗತ್ಯವಿರುವುದಿಲ್ಲ. ವಿಧವೆಯರಿಗೆ ಪುನರ್ವಿವಾಹದ ಅವಕಾಶವಿದೆ. ಸತ್ತವರು ಬುಡಕಟ್ಟು ಜನಗಳ ನಡುವೆಯೇ ಬದುಕಿರುತ್ತಾರೆ. ಋಷಿ ಸಂಸ್ಕೃತಿಯವರಂತೆ ನೀರು, ಆಕಾಶ, ಸೂರ್ಯ, ಚಂದ್ರ, ವಾಯು ಇವುಗಳನ್ನು ಬುಡಕಟ್ಟಿನವರು ದೇವತೆಗಳೆಂದು ಬಗೆಯುವುದುಂಟು. ಬುಡಕಟ್ಟಿನ ಜನಗಳಿಗೆ ಸೂರ್ಯ-ಚಂದ್ರರು ಹೆಚ್ಚು ಪರಿಚಿತರು. ಅವರ ಜೀವನಕ್ಕೆ ಹತ್ತಿರದವರು. ಅವರ ಕುಲದ ಉತ್ಪತ್ತ್ಯಾಗುವುದೂ ಪ್ರಕೃತಿಯ ನಡುವಿನಿಂದಲೇ. ಬುಡಕಟ್ಟು ಜನಗಳಿಗೆ ಕುಲ ಮೂಲ ಪುರುಷರು ಸೂರ್ಯ ಚಂದ್ರರಾದರೆ, ಪ್ರಕೃತಿಯ ಅಂಗೋಪಾಂಗದಲ್ಲಿ ದೊರೆಯುವ ಗಿಡ, ಮರ, ಪ್ರಾಣಿ ಪಕ್ಷಿಗಳೇ ಅವರ ಕುಲದ ಬೇರೆ ಬೇರೆ ಹೆಸರುಗಳಾಗುತ್ತವೆ. ವಿವಾಹದ ವಿಧಾನಗಳೂ ಸರಳ. ಸ್ವಯಂವರ ಪದ್ಧತಿ ಅಥವಾ ತೆರೆಕೊಟ್ಟು ಹೆಣ್ಣು ತರುವ ಕ್ರಮ ಬುಡಕಟ್ಟಿನಲ್ಲಿ ಇಂದೂ ಉಳಿದುಕೊಂಡಿದೆ. ಒಟ್ಟೂ ಬುಡಕಟ್ಟು ಜೀವನ ಸಂಪೂರ್ಣ ಪ್ರಕೃತಿಯ ನೆರವಿನಿಂದಲೇ ಹುಟ್ಟಿಕೊಂಡಿರುವಂಥದು. ಜಗತ್ತಿನಾದ್ಯಂತ ಇರುವ ಬುಡಕಟ್ಟುಗಳ ಉಗಮದ ಕಥೆಗಳನ್ನು ಗಮನಿಸಿದರೆ ಅವು ಪ್ರಕೃತಿಯ ನೆರವಿನಿಂದಲೇ ಹುಟ್ಟಿಕೊಂಡಿರುವಂತೆ ಕಾಣಿಸುತ್ತವೆ.

ಚಿತ್ರದುರ್ಗ ಸೀಮೆಯ ಬೇಡ ಬುಡಕಟ್ಟು ಸಮೂಹದಲ್ಲಿ ಅವರ ಕುಲ ಮೂಲ ಪುರುಷನನ್ನು ಕುರಿತಂತೆ ಒಂದು ಕಥೆಯಿದೆ. ಬ್ರಹ್ಮ, ವಿಷ್ಣು, ಮಹೇಶ್ವರರು ಲೋಕ ಸಂಚಾರಕರಾಗಿ ಬಂದರು. ಆ ದಿನ ಬೆಳಗಿನಲ್ಲಿ ಅವರು ಹಣೆಗೆ ವಿಭೂತಿ, ನಾಮ ಹಚ್ಚಿಕೊಳ್ಳಬೇಕಿತ್ತು. ಒಂದು ಕೊಳದ ಬಳಿ ಬಂದರು. ಶಿವನು ವಿಭೂತಿಯನ್ನು ಅಂಗೈಯಲ್ಲಿಟ್ಟುಕೊಂಡು ವಿಷ್ಣು, ಬ್ರಹ್ಮ ಅಂಗೈಯಲ್ಲಿ ನಾಮ ಕಲಿಸಿದರು. ಆದರೆ ಇದನ್ನು ಪವಿತ್ರಗೊಳಿಸಿಕೊಳ್ಳಲು ಹಸುವಿನ ಗಂಜಲ ಬೇಕಿತ್ತು. ಬ್ರಹ್ಮ ಅದಕ್ಕಾಗಿ ಒಂದು ಗೋವನ್ನು, ಪಂಪಾದ್ರಿ ಎಂಬ ಬಸವನನ್ನು ಸೃಷ್ಟಿಸಿದ. ಗೋವಿನ ಗಂಜಲದಿಂದ ಶಿವನು ವಿಭೂತಿ ಗಟ್ಟಿಯನ್ನು ಪವಿತ್ರ ಮಾಡಿಕೊಳ್ಳುವಾಗ ವಿಭೂತಿಯ ಒಂದು ಕಣ ಗೋವಿನ ಗೊರಸಿನ ನಡುವೆ ಸಿಕ್ಕಿಹಾಕಿಕೊಂಡಿತು. ಆ ಕಣವು ಗೋವಿನ ಗೊರಸಿನಲ್ಲೇ ಒಂಭತ್ತು ತಿಂಗಳಕಾಲ ಶಿಶುವಾಗಿ ಬೆಳೆಯಿತು. ಆ ಶಿಶುವೇ ಮ್ಯಾಸಬೇಡರ ಕುಲಮೂಲ ಪುರುಷ ಚೆಟ್ಲುಗೊಟ್ಲು ಮಲ್ಲಿನಾಯಕ. ಈ ಮಲ್ಲಿನಾಯಕನನ್ನು ಮೋಹಿಸಿದವಳು ಒಬ್ಬ ಗಂಧರ್ವ ಕನ್ಯೆ. ಈ ಗಂಧರ್ವ ಕನ್ಯೆಗೂ ಚೆಟ್ಲು ಗೊಟ್ಲು ಮಲ್ಲಿ ನಾಯಕನಿಗೂ ಚಂಚುಲಕ್ಷ್ಮಿಯೆಂಬ ಮಗಳು ಹುಟ್ಟಿದಳು. ಈ ಚಂಚುಲಕ್ಷ್ಮಿಗೆ ನರಸಿಂಹದೇವರ ಸಮಾಗಮದಿಂದ ಹುಟ್ಟಿದವರು ಪೆದ್ದಪ್ಪನಾಯಕ ಕೋರಿಯರಮಂಚನಾಯಕ, ಕೋರಿಪಾಪನಾಯಕ ಇವರಿಂದ ಮ್ಯಾಸಬೇಡರ ಗುಂಪು ಬೆಳೆಯಿತು. ಇವರು ಅರಣ್ಯದಲ್ಲಿಯೇ ಪಶುಪಾಲಕರಾಗಿ ತಮ್ಮ ಸಂತತಿಯನ್ನು ಬೆಳೆಸಿದವರು.

ಆದರೆ ಶೀಶೈಲದಿಂದ ವಲಸೆ ಬಂದಂತೆ ಬಹುತೇಖ ಆಧಾರಗಳುಳ್ಳ ಮ್ಯಾಸ ಬೇಡರ ಸಂಬಂಧದ ಮೇಲಿನ ಕಥೆಯಲ್ಲಿ ಶಿವ, ವಿಷ್ಣು, ಬ್ರಹ್ಮರ ಪ್ರಸ್ತಾಪವಿದೆ. ಬಹುಶಃ ಬೇಡರ ನಡುವೆ ವೈಷ್ಣವ ಧರ್ಮದ ಪ್ರಭಾವ ಆದನಂತರ ಹುಟ್ಟಿಕೊಂಡಿದ್ದಿರಬೇಕು. ಅಲ್ಲದೆ ಈ ಮೇಲಿನ ಕಥೆ ನಡೆಯುವುದು ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಬಿ.ಜೆ.ಕೆರೆಯ ಕಮರದ ಕಾಡಿನಲ್ಲಿ. ಆದರೆ ಬೇಡರ ಮೂಲದೇವತೆ ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ಮತ್ತು ಬೇಡರ ಮೂಲನೆಲೆಯೂ ಕೂಡ ಆಂಧ್ರದ ಶ್ರೀಶೈಲ ಅರಣ್ಯಭಾಗಗಳೇ. ೧೩ ಅಥವಾ ೧೪ನೇ ಶತಮಾನದಲ್ಲಿ ವಲಸೆ ಬಂದ ಮ್ಯಾಸಬೇಡರ ಮೇಲೆ ವೈಷ್ಣವ ಧರ್ಮದ ಪ್ರಭಾವವೂ ಆಗಿದೆ. ತದನಂತರದಲ್ಲಿಯೇ ಬೇಡರ ನಡುವೆ ಈ ಕುಲ ಮೂಲದ ಕಥೆ ಹುಟ್ಟಿಕೊಂಡಿದೆ.

ಬುಡಕಟ್ಟು ಸಂಸ್ಕೃತಿಯನ್ನು ಬಿಟ್ಟರೆ ಅರಣ್ಯದ ಮತ್ತೊಂದು ಸಂಸ್ಕೃತಿ ಋಷಿ ಸಂಸ್ಕೃತಿ. ಇವರೂ ಕುಡ ಭೂ, ಅಗ್ನಿ, ವಾಯು, ಜಲ, ಸೂರ್ಯ, ಚಂದ್ರ ಆರಾಧಕರು, ಸರಳ ಜೀವನ ಇವರ ಆದರ್ಶವಾದರೂ ಯೋಗಬಲ ಮತ್ತು ದೈವಬಲವನ್ನು ಪಡೆದವರಂತೆ ಜನಪದ ಕಥೆಗಳಲ್ಲಿ, ಶಿಷ್ಟ ಕಾವ್ಯ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬುಡಕಟ್ಟಿನ ಸಮೂಹ ಪ್ರಕೃತಿಯ ಸಹಾಯದಿಂದ ಬದುಕುವವರಂತೆ ಕಂಡರೆ ಋಷಿಗಳೆನಿಸಿಕೊಂಡರು ತಮ್ಮ ಯೋಗ ಬಲದಿಂದ ಪ್ರಕೃತಿಯ ಒಂದಿನಿತು ಶಕ್ತಿಯನ್ನು ವಶಪಡಿಸಿಕೊಂಡಂತೆ ಇರುತ್ತಾರೆ. ಇದರೊಂದಿಗೆ ಋಷಿ ಸಂಸ್ಕೃತಿಗೆ ಪ್ರಕೃತಿ ಮತ್ತು ಜೀವ ಜಗತ್ತಿನ ಬಗ್ಗೆ ಅಪಾರ ಪ್ರೀತಿ, ಕರುಣೆ ಇರುವುದುಂಟು. ಇದರಿಂದಲೇ ನಮ್ಮ ಎಲ್ಲ ಕಥೆ ಕಾವ್ಯಗಳಲ್ಲಿ ಪಟ್ಟಣಗಳಿಂದ ಸಮಸ್ಯೆಗಳನ್ನು ಹೊತ್ತು ಬರುವ ಜೀವಗಳಿಗೆ ಒಮ್ಮೊಮ್ಮೆ ಋಷಿ ಸಂಸ್ಕೃತಿಯವರು, ಬುಡಕಟ್ಟು ಸಂಸ್ಕೃತಿಯವರು ಅಂತರಂಗ ಪೂರ್ವಕವಾಗಿ ಸಹಾಯ ಮಾಡುವವರಾಗಿ ಕಂಡುಬರುತ್ತಾರೆ. ಯಾವುದೇ ಜನಪದ ಕಥೆ ಕಾವ್ಯದ ಆಶಯ ಇದೇ ಮಾದರಿಯಲ್ಲಿ ಚಿತ್ರಿತವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಪಾಂಡವರು ವನವಾಸಕ್ಕೆ ಹೋಗುವುದು. ಅಲ್ಲಿ ಅವರು ಋಷಿಮುನಿಗಳ ಭೇಟಿಯಿಂದ ತಮ್ಮ ಅರಣ್ಯ ಬದುಕಿಗೆ ಭರವಸೆಯನ್ನು ಪಡೆಯುವುದು. ರಾಮ ತನ್ನ ಪಟ್ಟಾಭಿಷೇಕ ಮಹೋತ್ಸವದ ದಿನವೇ, ನಾರು ಬಟ್ಟೆಯುಟ್ಟು ಋಷಿಮುನಿಗಳ ಮಾರ್ಗದರ್ಶನದಲ್ಲಿ ಇದ್ದರೂ, ಅನೇಕ ಸಮಸ್ಯೆಗಳಿಗೆ ತಲೆ ಒಡ್ಡಬೇಕಾಗಿ ಬಂದು ಅದನ್ನು ಜಯಿಸುವುದು, ಹರಿಶ್ಚಂದ್ರನೂ ಸಹ ರಾಜ ಪದವಿಯನ್ನು ಬಿಟ್ಟು ಅರಣ್ಯ ಸೇರಿ, ತನ್ನ ಎಲ್ಲ ರಾಜಸ ಗುಣಗಳನ್ನು ಕಳೆದುಕೊಂಡು ಮನುಷ್ಯತ್ವವನ್ನು ಪಡೆಯುವುದು ಇವೆಲ್ಲವುಗಳ ಕಥೆಯ ಹಿನ್ನೆಲೆಯಲ್ಲಿ ಋಷಿಗಳ ಪಾತ್ರವೇ ಮಹತ್ವದ್ದಾಗಿ ತೋರುತ್ತದೆ. ಅರಮನೆಗಳಿಂದ, ಶ್ರೀಮಂತರ ಮನೆಗಳಿಂದ ಸಮಸ್ಯೆಗಳ ನಡುವೆ ಸಿಲುಕಿದ ಮಹಿಳೆಯರೂ ಅರಣ್ಯಕ್ಕೆ ಬರುವುದಿದೆ. ಸವತಿಯ ಹಿಂಸೆಗೆ ಸಿಕ್ಕಿದ ಅಬಲೆ ಹುತ್ತಕ್ಕೆ ಕೈ ಹಾಕಿ ಮಲಗಿದರೆ ಆಕೆಯ ಕೈ ಮೇಲಿನ ಕುರವನ್ನು ಕಚ್ಚುವ ಹಾವು ಆಕೆಯ ದೈಹಿಕ ಮಾನಸಿಕ ನೋವನ್ನು ನಿವಾರಣೆ ಮಾಡುವ ಸಹಾಯಕ ಜಂತುವಾಗಿರುತ್ತದೆ. ಹೀಗೆ ಕಾವ್ಯ ಕಥೆಗಳಲ್ಲಿ ಪರಿಸರದ ಜಂತುಗಳಿಂದ ಹಿಡಿದು ಬುಡಕಟ್ಟು ಸಂಸ್ಕೃತಿಯ ಜನ, ಋಷಿಸಂಸ್ಕೃತಿಯ ಹಿರಿಯರು ಅತ್ಯಂತ ಸಾಧು ಮನೋಭಾವದವರಾಗಿಯೇ ಕಾಣಿಸಿಕೊಳ್ಳುವುದುಂಟು.

ವಿಲ್ಡ್ಯೂರಾಂಟ್ ಹೇಳುವಂತೆ ಅರಣ್ಯ ಸಂಸ್ಕೃತಿಯಲ್ಲಿ ಕಂಡು ಬರುವುದು Moral Elements of Civilization ಮತ್ತು Mental Elements of Civilization, ಆದರೆ ಅದೇ. ಪಟ್ಟಣದಲ್ಲಿ ಕಂಡು ಬರುವುದು Economic Elements of Civilization  ಮತ್ತು Political Elements of Civilization  ಪಟ್ಟಣ ಸಂಸ್ಕೃತಿ ಪ್ರತಿಯೊಂದನ್ನೂ ಲಾಭ ನಷ್ಟಗಳ ಮಾನದಂಡದಲ್ಲೇ ನೋಡುವಂಥದ್ದು. ಜನಪದ ಕಥೆಗಳಲ್ಲಿ ರಾಜರಾಣಿಯರು ಅರಣ್ಯಕ್ಕೆ ಬರುವುದು ಸಂತಾನ ಪ್ರಾಪ್ತಿಗಾಗಿ, ತಮ್ಮ ಆಸ್ತಿಯನ್ನು ಸಂಪತ್ತನ್ನು ರಕ್ಷಿಸುವ ಹಕ್ಕುದಾರನನ್ನು ಪಡೆಯುವುದಕ್ಕಾಗಿ, ಇಲ್ಲವೇ ಆಸ್ತಿಯನ್ನು ಕಿತ್ತುಕೊಂಡ ಒಬ್ಬ ರಾಜ ಇನ್ನೊಬ್ಬ ರಾಜನನ್ನು ಕಾಡುಪಾಲು ಮಾಡಿರುತ್ತಾನೆ. ಆತ ನೆಲೆಯನ್ನು ಹುಡುಕುವವನಂತೆ ರಕ್ಷಣೆಯನ್ನು ಕೋರುವವನಂತೆ ಕಾಡಿನತ್ತ ಬಂದಿರುತ್ತಾನೆ. ಆ ಅನಾಥ ಅರಸನನ್ನು ಋಷಿ ಸಂಸ್ಕೃತಿಯೋ, ಬುಡಕಟ್ಟು ಸಂಸ್ಕೃತಿಯೋ, ಅರಣ್ಯದ ಜೀವ ಜಂತುವೋ ರಕ್ಷಿಸುತ್ತದೆ. ಹೀಗಾಗಿ ಪಟ್ಟಣ ಸಂಸ್ಕೃತಿ ಎಂದರೆ ಅದು ಅರಮನೆಯ ಸಂಸ್ಕೃತಿ ಅಥವಾ ಈ ಹೊತ್ತಿನಂತಾದರೆ ವಿಧಾನಸೌಧದ ಸಂಸ್ಕೃತಿ ಎನ್ನಬಹುದು. ಅಥವಾ ವಿಧಾನಸೌಧ ಸಿಂಡ್ರೋಮ್ ಆಗಬಹುದು. ಇದರ ಗುಣ ಎಂದರೆ ಎಲ್ಲವನ್ನು ತನ್ನ ಭೋಗಕ್ಕಾಗಿ ಬಳಸಿಕೊಳ್ಳುವುದು. ಅದಕ್ಕಾಗಿ ಸ್ಪರ್ಧೆಯನ್ನು ಒಡ್ಡುವುದು, ಅಥವಾ ಏರ್ಪಡಿಸುವುದು. ಈ ಸ್ಪರ್ಧೆ ನಾಗರೀಕತೆಯ ಹೆಸರಿನಲ್ಲೇ ರಂಜನೆಯ ಮುಖ ತೊಟ್ಟುಕೊಂದೇ ಇರುತ್ತದೆ. ಒಬ್ಬನನ್ನು ಇನ್ನೊಬ್ಬನು ಮೀರಿಸುವ ಪ್ರಯತ್ನದಲ್ಲಿ ತೊಡಗುವುದು. ಇಂಥ ಪ್ರಯತ್ನದಲ್ಲಿ ಸತತ ತೊಡಗುವ ಪಟ್ಟಣದ ಸಂಸ್ಕೃತಿಗೆ ಪ್ರಕೃತಿ, ಪರಿಸರದ ಮತ್ತು ಜೀವಜಾಲದ ಬಗ್ಗೆ ಅರಿವೇ ಇಲ್ಲವಾಗಿರುತ್ತದೆ. ಅರಿವು ಇದ್ದರೂ ತನ್ನ ಭೋಗಕ್ಕಾಗಿ ಪ್ರಕೃತಿಯನ್ನು ನಾಶಗೈಯುತ್ತಲೇ ಇರುತ್ತದೆ. ಈ ಪ್ರಕೃತಿಯ ಸುಂದರ ಸೂಕ್ಷ್ಮವನ್ನರಿಯದೇ ಬದುಕುವುದು ಪಟ್ಟಣ ಸಂಸ್ಕೃತಿಯ ಕ್ರಮವಾಗಿರುತ್ತದೆ. ಅದಕ್ಕಾಗಿಯೇ ಪಟ್ಟಣ ಜೀವನ ಕ್ರಮದಲ್ಲಿ ಅವಿಭಕ್ತ ಕುಟುಂಬಗಳಿಗಿಂತ ವಿಭಕ್ತ ಕುಟುಂಬಗಳೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತವೆ. ಈ ಪ್ರಭಾವವೂ ಗ್ರಾಮ ಸಂಸ್ಕೃತಿಯ ಮೇಲೂ ತ್ವರಿತವಾಗಿ ಆಗುತ್ತಿದೆ.

ಸೌರವ್ಯೂಹದಲ್ಲಿ ಭೂಮಿ ಒಂದು ಜೀವಂತ ಗ್ರಹ. ಅಲ್ಲಿ ಲಕ್ಷಾಂತರ ಸಂಖ್ಯೆಯ ವೈವಿಧ್ಯಮಯ ಜೀವರಾಶಿಯಿದೆ. ವಿಶ್ವದ ಎಲ್ಲಾ ಜೀವಿಗಳನ್ನು ಪ್ರತ್ಯೇಕ ಮಾಡಿ ನೋಡಲು ಕಲಿತ ಆಧುನಿಕ ಮಾನವ ತನ್ನ ಜೀವನ ಕ್ರಮಕ್ಕೂ ಪರಿಸರ ನಾಶಕ್ಕೂ ನೇರ ಸಂಬಂಧವಿದೆಯೆಂದು ತಿಳಿದಂತೆಲ್ಲ. ನಿಸರ್ಗ-ಮನುಷ್ಯ, ಹಳ್ಳಿ-ಪಟ್ಟಣ, ಸ್ಥಳೀಯ-ಜಾಗತಿಕ, ಸಂಪಾದನೆ-ಭೋಗ, ಪ್ರಬಲ-ದುರ್ಬಲ, ಹೆಣ್ಣು-ಗಂಡು, ಆದಿವಾಸಿ-ನಗರವಾಸಿ, ಹೀಗೆ ಎಲ್ಲವನ್ನು ಪ್ರತ್ಯೇಕಗೊಳಿಸುತ್ತ ಒಂದು ದೊಡ್ಡದು, ಒಂದು ಚಿಕ್ಕದು ; ಒಂದು ಪ್ರಬಲ, ಒಂದು ದುರ್ಬಲ ಎಂದು ನೋಡುವ ಪರಿಭಾವನೆ ಕೇವಲ ಪಟ್ಟಣ ಸಂಸ್ಕೃತಿಯದಾಗಿರುತ್ತದೆ. ಕಲ್ಲು, ಮಣ್ಣು, ಪ್ರಾಣಿ, ಪಕ್ಷಿ ಇಲ್ಲಿ ಎಲ್ಲವೂ ಲಾಭ ತರುವ ಮಾಧ್ಯಮಗಳು, ಅಥವಾ ವ್ಯಾಪಾರಿ ಸಂಸ್ಕೃತಿ. ಪಟ್ಟಣ ಸಂಸ್ಕೃತಿಗೆ ಸಂಸ್ಕೃತಿಗೆ ಅನಗತ್ಯ ಭೋಗದ ದಾಹವಿದ್ದು ಅದು ಯಾವ ತ್ಯಾಗಕ್ಕೂ ಸಿದ್ಧವಿರುವುದಿಲ್ಲ. ಬಹಿರ್ಮುಖವಾಗಿ ಎಲ್ಲ ನಾಗರೀಕತೆಯ ಲಕ್ಷಣಗಳು ಇಲ್ಲಿ ಬೆಳೆಯುತ್ತ ಅಂತರಂಗದಲ್ಲಿ ಇಲ್ಲಿ ಬಡತನ, ಅನಾಥ ಪ್ರಜ್ಞೆ, ಪ್ರತ್ಯೇಕತೆಯ ಬುದ್ದಿ ಒಂದೊಂದು ಕುಟುಂಬದ ನಡುವೆಯೂ ಅಡ್ಡಗೋಡೆಗಳಿದ್ದು ಎಲ್ಲರೂ ಬೇರೆ ಬೇರೆಯಾಗಿ ಬದುಕುವವರಾಗಿರುತ್ತಾರೆ. ಆದರೆ ಬುಡಕಟ್ಟು ಪರಿಸರ ಸಂಸ್ಕೃತಿಯಾಗಲಿ ಗ್ರಾಮ ಸಂಸ್ಕೃತಿಯ ವಿವರಗಳಾಗಲಿ ಪಟ್ಟಣದಂತೆ ಇರುವುದಿಲ್ಲ.

ಬುಡಕಟ್ಟು ಸಂಸ್ಕೃತಿಗೆ ಆಸ್ತಿ ಐಶ್ವರ್ಯದ ಕಲ್ಪನೆಯೇ ಇರುವುದಿಲ್ಲ. ಆದರೆ ಗ್ರಾಮ ಸಂಸ್ಕೃತಿಗೆ ತಕ್ಕ ಮಟ್ಟಿಗೆ ಆಸ್ತಿಯ ಐಶ್ವರ್ಯದ ಕಲ್ಪನೆ ಇರುತ್ತದೆ. ಗ್ರಾಮ ಸಂಸ್ಕೃತಿಯಲ್ಲಿ ಆಸ್ತಿ ಐಶ್ವರ್ಯದ ಕಲ್ಪನೆಯೆಂದರೆ ಭೂಮಿ ಮತ್ತು ದನಕರು ಜಾನುವಾರುಗಳು ಮತ್ತು ಅವಿಭಕ್ತ ಕುಟುಂಬ. ಗ್ರಾಮೀಣರು ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕೊಪ್ಪದಲ್ಲಿ ತುಂಬಿರುವ ದನಕರು, ಕುರಿಕೋಳಿ, ಎಮ್ಮೆಯನ್ನು ಹಣವೆಂದು ತಿಳಿಯುತ್ತಾರೆ. ಅಂದರೆ ಇಂದಿಗೂ ಗ್ರಾಮೀಣ ಬದುಕು ಈ ಪ್ರಾಣಿ ಸಮೂಹವನ್ನು ಐಶ್ವರ್ಯವೆಂದು ತಿಳಿದಿದೆ. ಆಸ್ತಿಯೆಂದರೆ ಗ್ರಾಮೀಣರಿಗೆ ತಮ್ಮ ಹಟ್ಟಿಯ ಆಚೆಯಿರುವ ವ್ಯವಸಾಯದ ಭೂಮಿ, ತದನಂತರ ಅರಣ್ಯ ಮೂಲದ ಉತ್ಪನ್ನಗಳನ್ನು ಗ್ರಾಮಿಣ ಬದುಕು ಆಸ್ತಿಯೆಂದು ತಿಳಿಯುತ್ತದೆ. ಆದರೆ ಪಟ್ಟಣ ಸಂಸ್ಕೃತಿ ಎಲ್ಲ ಆಸ್ತಿ ಐಶ್ವರ್ಯವನ್ನು ಹಣದ ಸ್ವರೂಪದಲ್ಲೇ ನೋಡುತ್ತದೆ.

ಪಟ್ಟಣ ಸಂಸ್ಕೃತಿ ತನಗೆ ಬೇಕಾದ ತಿಳುವಳಿಕೆಗಳನ್ನು ಅರಣ್ಯ ಸಂಸ್ಕೃತಿಯಿಂದ ಆಮದು ಮಾಡಿಕೊಳ್ಳುವಂತೆ ಕಂಡರೂ ಅದನ್ನು ಕಲುಷಿತಗೊಳಿಸುತ್ತದೆ. ಇದು ಪ್ರಾಚೀನ ಕಾಲದಿಂದಲೂ ನಡೆದು ಬಂದದ್ದೇ ಆಗಿದೆ. ದುಷ್ಯಂತ ಆಶ್ರಮದ ಋಷಿಗಳನ್ನು ಕಂಡು ಗೌರವಿಸುವವನಂತಿದ್ದರೂ, ಅಲ್ಲಿದ್ದ ಶಕುಂತಲೆಗೆ ಸಮಸ್ಯೆಯನ್ನು ಒಡ್ಡುವವನಾಗುತ್ತಾನೆ. ದಶರಥ ಅರಣ್ಯಕ್ಕೆ ಬೇಟೆಯಾಡಲು ಬಂದು ಮನುಪುತ್ರನನ್ನು ಕೊಂದು ಸಮಸ್ಯೆಗೆ ಸಿಲುಕುತ್ತಾನೆ.

ಈಗಲೂ ಪಟ್ಟಣ ಸಂಸ್ಕೃತಿ ಆಧುನಿಕ ರೀತಿಯಲ್ಲಿ ಕುಳಿತಲ್ಲೇ ಅರಣ್ಯ ಮತ್ತು ಗ್ರಾಮ ಸಂಸ್ಕೃತಿಯ ರಕ್ತವನ್ನು ಹೀರಿ ಪ್ರತಿಯಾಗಿ ಅಲ್ಲಿಗೆ ತನ್ನ ಕೊಳೆಯನು ಬಿಡುತ್ತಿದೆ. ಗ್ರಾಮೀಣ ಸಂಪತ್ತನ್ನು ಯಾರ್‍ಯಾರು ಎಷ್ಟೆಷ್ಟು ಹೀರುತ್ತಾರೆ ಎಂಬುದರಲ್ಲಿ ಪೈಪೋಟಿ ಪಟ್ಟಣ ಸಂಸ್ಕೃತಿಗೆ ಇರುತ್ತದೆ. ಹಿಂದಿನ ಶತಮಾನಗಳಲ್ಲಿ ಯಾವ ಯಾವ ರಾಜನು ಎಷ್ಟೆಷ್ಟು ಯುದ್ಧಗಳನ್ನು ಮಾಡಿ ಎಷ್ಟು ನೆಲ, ಐಶ್ವರ್ಯ ಮತ್ತು ರಾಣಿಯವರನ್ನು ವಶಪಡೇಇಸಿಕೊಳ್ಲುತ್ತಾನೋ ಅವನು ಅಷ್ಟು ಪ್ರಬಲ ಎನ್ನುವ ತಿಳುವಳಿಕೆ ಇದ್ದಂತೆ ಇದು ಬೇರೊಂದು ಸ್ವರೂಪದಲ್ಲಿ ಇಪ್ಪತ್ತೊಂದನೆಯ ಶತಮಾನಕ್ಕೂ ಮುಂದುವರೆಯುತ್ತಲೇ ಇದೆ. ಪಟ್ಟಣ ಸಂಸ್ಕೃತಿ ಪರಿಸರ ಮತ್ತು ಪ್ರಕೃತಿಯೊಡನೆ ಹೊಂದಿ ಅದನ್ನು ಆರಾಧಿಸಿ ಬದುಕುವಂಥದಲ್ಲ. ಆದರೆ ಬುಡಕಟ್ಟು ಅಥವಾ ಗ್ರಾಮ ಸಂಸ್ಕೃತಿಗೆ ನೆಲವೇ, ಪ್ರಕೃತಿಯೇ ಆಧಾರ. ಇದಕ್ಕೆ ಉದಾಹರಣೆಯಾಗಿ ಗ್ರಾಮೀಣ ಹಬ್ಬಗಳನ್ನೇ ಗಮನಿಸಬಹುದು.

ಗಣೇಶನ ಹಬ್ಬ ಎನ್ನುವುದು ರೈತರಿಗೆ ಆಧಾರವೆನಿಸುವ ಮಣ್ಣಿನ ಪೂಜೆಯೇ ಆಗಿದೆ. ಈ ಹಬ್ಬದ ಸಂದರ್ಭದಲ್ಲಿ ರೈತರು ತಂತಮ್ಮ ಹೊಲದಿಂದ ಮಣ್ಣು ತರುತ್ತಾರೆ. ಅದರಲ್ಲಿ ಗಣೇಶನ ವಿಗ್ರಹ ತಯಾರಿಸುತ್ತಾರೆ. ಈ ವಿಗ್ರಹವನ್ನು ನೋಡಿದರೆ ಥಟ್ಟನೆ ಬೀಜ ಅಥವಾ ಮೊಳಕೆಯ ಆಕರಾವನ್ನು ನೆನಪಿಗೆ ತರುವಂತಿರುತ್ತದೆ. ಶಿಷ್ಟ ಸಂಸ್ಕೃತಿ ಕಲ್ಪಿತ  ಈ ಗಣೇಶನ ವಿಗ್ರಹಕ್ಕಿಂತ ಮೂಲದಲ್ಲಿ ಗ್ರಾಮೀಣ ರೈತರು ಮಳೆ ಬಿದ್ದ ನೆಲದಲ್ಲಿ ಬಿತ್ತನೆ ನಡೆಸುವ ಕಾಲಕ್ಕೆ ಗರಿಕೆಯ ಚಿಗುರು ಸಿಕ್ಕಿಸಿದ ಒಂದು ಸಗಣಿಯ ಉಂಡೆ ಗಣೇಶನ ಸ್ಥಾನದಲ್ಲಿ ಇದ್ದಿತು. ಆ ಮೇಲೆ ಇದಕ್ಕೆ ದವಸ ಧಾನ್ಯ ತುಂಬುವ ಕಣಜ, ದವಸ ದಾನ್ಯದ ಶತ್ರು ಇಲಿ. ಇಲಿಯನ್ನು ನಾಶಪಡಿಸುವ ಹಾವು ಇದೆಲ್ಲದವರ ಕಲ್ಪನೆಯೂ ಬೆನಕನ ವಿಗ್ರಹಕ್ಕೆ ಬಂದಿತು. ಹಾಗೆಯೇ ಬೆನಕನ ಕೈಯಲ್ಲಿ ಧಾನ್ಯದ ತೆನೆಯೂ, ರೈತರ ಬದುಕಿಗೆ ಅಗತ್ಯವೆನಿಸುವ ಕೊಡಲಿಯೂ, ಹಗ್ಗವೂ ಬಂದವು. ಅಂತೆಯೇ ಗಣೇಶನಿಗೆ ದವಸಧಾನ್ಯದ ಬೆಳೆಗೆ ಅಷ್ಟೇನೂ ಸಹಕಾರಿಯಲ್ಲದ ಚಂದ್ರನ ಜತೆ ವಿರಸ ಬೆಳೆಯಿತು. ಆದರೆ ಸೂರ್ಯನ ಜೊತೆಗೆ ಬೆನಕನ ವಿರಸ ಇಲ್ಲ. ಮಳೆ ಮತ್ತು ಬೆಳೆಗೆ ಸೂರ್ಯನ ಶಾಖ ಅತ್ಯಂತ ಸಹಕಾರಿಯಾದುದು. ಈ ಬೆನಕನನ್ನು ಅಥವಾ ಗಣೇಶನನ್ನು ಪೂಜಿಸುವ ಪರಿಕರಗಳೂ ಸಹ ಪರಿಸರದಲ್ಲಿ ದೊರಕುವ ವಸ್ತುಗಳೇ. ಬೇಲ, ಸೀಬೆ, ಸೀತಾಫಲ, ನೆಲ್ಲಿ, ಗರಿಕೆ ಈ ಮುಂತಾದವು. ಕರ್ನಾಟಕದಾದ್ಯಂತ ಬೆನಕನ ಮೇಲೆ ದೊರಕುವ ಜನಪದ ಗೀತೆಗಳು ಪರಿಸರದ ಉತ್ಪನ್ನಗಳೇ ಆತನಿಗೆ ನೈವೇದ್ಯವಾಗಿ ನೀಡುವಂಟೆ ಕೇಳಿಬರುತ್ತವೆ. ಗೊನೆ ಬಾಳೆಹಣ್ಣು, ತೆಂಗಿನ ಎಳನೀರು, ಕಟ್ಟುವೀಳ್ಯದ ಎಲೆ, ಜೇನುತುಪ್ಪ, ಎಳ್ಳುಂಡೆ, ಉದ್ದಿನ ಕಡುಬು, ಇಂಥವನ್ನೇ ರೈತನು ಬೆನಕನಿಗೆ ನೈವೇಧ್ಯವಾಗಿ ನೀಡುವಂತೆ ಪ್ರಾರ್ಥಿಸುತ್ತಾನೆ. ಯಾವುದೇ ಗ್ರಾಮೀಣ ದೇವತೆಯ ಮೇಲೆ ಈ ಬಗೆಯ ಹಾಡುಗಳು ಜನಪದರ ನಡುವೆ ಕೇಳಿ ಬರುವುದಿಲ್ಲ. ಗಣೇಶ ಅಥವಾ ಬೆನಕ ಸಂಪೂರ್ಣ ಪರಿಸರದಿಮ್ದಲೇ ಹುಟ್ಟಿಕೊಂಡ ವ್ಯವಸಾಯ ದೇವತೆಯೆಂದು ನಾವು ಪರಿಗಣಿಸಬಹುದಾಗಿದೆ. ಹೀಗೆ ರೈತರು ತಮ್ಮ ಹೊಲದಿಂದ ಬೆನಕನ ರೂಪದಲ್ಲಿ ತಂದು ಪೂಜಿಸಿದ ಮಣ್ಣನ್ನು ಮತ್ತೆ ನೀರಿಗೇ ಒಯ್ದು ಬಿಡುತ್ತಾರೆ.

ಬೆನವನ ಹಬ್ಬವೇ ಬಹುತೇಕವಾಗಿ ಹಬ್ಬಗಳಲ್ಲಿ ಆರಂಭದ ಹಬ್ಬವಾಗಿದ್ದು ಆದಾಗಲೇ ಮಳೆಬಿದ್ದು ಭೂಮಿಯಿಂದ ಬೆಳೆ ಮೊಳಕೆಯೊಡೆದಿದ್ದು ನಿಲ್ಲುವ ಕಾಲವಾಗಿರುತ್ತದೆ. ಈ ಬೆಳೆಯು ಸಮೃದ್ಧವಾಗಿ ನಿಂತಾಗ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ. ಇಷ್ಟು ಹೊತ್ತಿಗೆ ವಿಶಾಖಾ ಮಳೆಯಿಂದಾಗಿ ಆ ಮುನ್ನ ಹುಟ್ಟಿಕೊಂಡಿದ್ದ ಕ್ರಿಮಿಕೀಟಗಳು ನಾಶವಾಗಿ ಬೆಳೆಯ ಸಮೃದ್ಧಿ ಇರುತ್ತದೆ. ಕತ್ತಲೆಯಲ್ಲಿ ಬೆಳಕನ್ನು ನಿರೀಕ್ಷಿಸಿ ಬೆಳಕನ್ನು ಒಳಿತನ್ನು ಬಯಸುವುದೇ ದೀಪಾವಳಿಯ ವೈಶಿಷ್ಟ್ಯ. ಭೂಮಿಯ ಮೇಲೆ ನಿಂತ ಬೆಳೆಯ ಸಮೃದ್ಧಿಯನ್ನು ನೋಡಲು ಬಲಿಚಕ್ರವರ್ತಿ ಪಾತಾಳದಿಂದ ಬರುತ್ತಾನೆಂಬುದರ ಸಾಂಕೇತಿಕತೆ ಅರ್ಥಪೂರ್ಣವಾದುದೇ ಆಗಿದೆ. ಈ ದೀಪಾವಳಿಯ ನಂತರ ಪ್ರಮುಖ ರೈತರ ಹಬ್ಬವಾಗಿ ಬರುವುದು ಸಂಕ್ರಾಂತಿ. ಇದು ರೈತರ ಹಬ್ಬವೆನ್ನುವುದಕ್ಕಿಂತ ರೈತರ ಜೀವನಾಧಾರವಾದ ದನಕರುಗಳ ಹಬ್ಬವೇ ಆಗಿರುತ್ತದೆ. ಈ ಹಬ್ಬದ ಹೊತ್ತಿಗೆ ರೈತರ ಬೇಸಾಯ ಒಂದು ಹಂತಕ್ಕೆ ಬಂದು ಅದು ಮಿಗಿದಿರುತ್ತದೆ. ಆರು ತಿಂಗಳ ಕಾಲ ಮಣ್ಣಿನೊಂದಿಗೆ ದುಡಿದ ರೈತ ತನ್ನ ದನಕರುಗಳಿಗೆ ವಿರಾಮ ಕೊಡುವ ಅಥವಾ ಪೂಜಿಸುವ ಕಾಲ ಇದು. ಸಂಕ್ರಾಂತಿಯ ಹಬ್ಬದಂದು ರಾತ್ರಿ ದನಕರುಗಳ ಕೊಟ್ಟಿಗೆಯಲ್ಲಿ ಗೋವಿನ ಕಥೆಯನ್ನು ಓದಲಾಗುವುದು. ಈ ಗೋವಿನ ಕಥೆ ಕಾಡುಗೊಲ್ಲನೊಬ್ಬನ ಕಥೆ ಎನ್ನುವುದಕ್ಕಿಂತ ಕಾಡುಗೊಲ್ಲನು ಸಾಕಿದ್ದ ಪುಣ್ಯಕೋಟಿ ಎಂಬ ಹಸುವಿನ ಕಥೆ. ಈ ಪುಣ್ಯಕೋಟಿ ಹಸುವು ತನ್ನ ಸಾತ್ವಿಕತೆಯಿಂದ ಹುಲಿಯನ್ನು ಗೆಲ್ಲುತ್ತದೆ. ಸಾತ್ವಿಕತೆಯ ಮುಂದೆ ಕೇವಲ ಪರಾಕ್ರಮ, ಶಕ್ತಿ ಉಡುಗುತ್ತದೆ. ಈ ಕಥೆಯನ್ನು ಓದಿದ ನಂತರ ಗೋಕುಲದಲ್ಲಿ ಗೊಲ್ಲರೊಡನೆ ಬೆಳೆದನೆನ್ನಲಾದ ಕೃಷ್ಣನನ್ನು ಪೂಜಿಸಲಾಗುವುದು. ದನಕರುಗಳ ಆರಾಧನೆಯೇ ಪ್ರಧಾನವೆನ್ನಿಸುವ ಈ ಹಬ್ಬ ದವಸ ಧಾನ್ಯವನ್ನು ಮನೆಗೆ ತರುವ ಸಂದರ್ಭದ ಹಬ್ಬವಾದುದರಿಂದ ಎಳ್ಳು, ಬೆಲ್ಲ, ಕಬ್ಬನ್ನು ಮನೆ ಮನೆಗೆ ಹಂಚುವ ಹಬ್ಬವಾಗಿಯೂ ರೈತರ ನಡುವೆ ಆಚರಣೆಯಲ್ಲಿದೆ.

ರೈತನ ಬೆಳೆಯ ವ್ಯವಸಾಯ ಕಾರ್ಯ ಮುಗಿದ ನಂತರದಲ್ಲಿ ಪ್ರಕೃತಿ ಅಥವಾ ನೆಲ ತನ್ನ ಸ್ವರೂಪ ಕಳೆದುಕೊಳ್ಳುತ್ತದೆ. ಡಿಸೆಂಬರ ಅಥವಾ ಜನವರಿಯ ಚಳಿಯ ದಿನಗಳಲ್ಲಿ ನೆಲ ಗಡುಸಾಗುತ್ತದೆ ಅಥವಾ ದುರ್ಬಲವಾಗುತ್ತದೆ. ನೆಲದ ಮೇಲಿನ ಗಿಡಮರಗಳು ನಿಸ್ತೇಜವಾಗುತ್ತವೆ. ನೆಲದಾಳಕ್ಕೆ ಬೇರನ್ನು ಬಿಟ್ಟುಕೊಂಡು ಬೆಳೆಯಲಾರವು. ಈ ಕಾರಣದಿಂದಲೇ ರೈತರು ಭೂಮಿತಾಯಿಯನ್ನು ಆ ಸಮಯದಲ್ಲಿ ಬಹಿಷ್ಠೆಯಾಗಿರುವಳೆಂದು ತಿಳಿದು ಊರ ಒಳಗಿನ ಆಚರಣೆಗಳಿಗೆ ಅಥವಾ ಊರೊಟ್ಟಿನ ಆಚರಣೆಗಳಿಗೆ ಬರುತ್ತಾರೆ. ಅಥವಾ ವ್ಯವಸಾಯ ಸಂಬಂಧದಲ್ಲಿ ಮನೆಯ ಸಮಸ್ಯೆಗಳ ಮೇಲೆ ಕಟ್ಟಿಕೊಂಡ ಹರಕೆಗಳು ಇಲ್ಲಿ ಮದುವೆ ಮುಂಜಿ ಸಂಗತಿಗಳು ಪ್ರಧಾನವಾಗುತ್ತವೆ. ಊರು-ಕೇರಿ, ಹೊಲಗದ್ದೆ ಕಾಯುವ ಸ್ತ್ರೀ ಪುರುಷ ದೇವತೆಗಳ ಆರಾಧನೆ ನಡೆಯುತ್ತದೆ. ಇದೆಲ್ಲದಕ್ಕೂ ಕೊನೆಯ ಇಲ್ಲವೇ ಆರಂಭದ ಹಬ್ಬವೆಂದರೆ ಯುಗಾದಿ. ಯುಗಾದಿಯ ನಂತರ ಭೂಮಿತಾಯಿ ಬೇಸಿಗೆಯ ಬಿಸಿಲಲ್ಲಿ ಒಣಗಿ ತದನಂತರ ಬಿದ್ದ ಒಂದೋ ಎರಡೋ ಹದ ಮಳೆಯಿಂದ ತನ್ನ ಮೂರು ತಿಂಗಳ ಮುಟ್ಟು ಕಳೆದುಕೊಂಡು ಮೇಲೇಳುವಳು. ಹೀಗೆ ಪ್ರಕೃತಿಗೆ ಸಂಬಂಧಿಸಿದ ಆಚರಣೆಗಳೇ ಗ್ರಾಮೀಣ ಪರಿಸರದಲ್ಲಿ ಹಬ್ಬಗಳಾಗಿ ಪರಿಣಮಿಸಿವೆ. ಆದರೆ ಅವೆಲವೂ ವಟ್ಟಣಗಳಲ್ಲಿ ವ್ಯಾಪಾರಿ ಸಂಸ್ಕೃತಿಯ ಸಂಗತಿಗಳಾಗಿ ಮಾರ್ಪಾಡು ಆಗಿವೆ ಎಂಬುದನ್ನು ಮತ್ತೆ ವಿವರಿಸಬೇಕಿಲ್ಲ. ಬೆನಕನ ತಯಾರಿಗೆ ಆದರ ಬಣ್ಣ ಮತ್ತು ಮಾರಾಟದಿಂದ ಹಿಡಿದು, ಒಡವೆ ವಸ್ತ್ರಗಳ ಖರೀದಿಯಿಂದ ಹಿಡಿದು ಬೆನಕನ ಅಥವಾ ಯಾವುದೇ ಹೆಸರಿನಲ್ಲಿ ವ್ಯವಹಾರ ಇಲ್ಲ್ಲ ಅವ್ಯವಹಾರ ನಡೆಯುತ್ತ ಸ್ಪರ್ಧೆಯೇರ್ಪಡಲು ಪಟ್ಟಣ ಸಂಸ್ಕೃತಿಯಲ್ಲಿ ಅವಕಾಶವಿದೆ.