ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸ್ಥಳದ ಬಸ್‌ ನಿಲ್ದಾಣದಲ್ಲಿ ಪಕ್ಷಿಗಳ ಮಾರಾಟ ನಡೆದಿತ್ತು. ಕುತೂಹಲದಿಂದ ಹೋಗಿ ನೋಡಿದೆ. ಅವು ಗೌಜಲ ಅಥವಾ ಕಾಜುಗ ಪಕ್ಷಿಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿಲ್ಲ.

ಗೌಜಲು (Partidge) ಕೌಜುಗ, ಉರ್ದುವಿನಲ್ಲಿ ಚೀತೇರ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಪುಟ್ಟ ಕೋಳ ಗಾತ್ರದ ಪಕ್ಷಿ, ಗ್ಯಾಲಿಫಾರ್ಮಿನ್‌ ಗಣ, ಟಿಟ್ರಿವೋನಿಡಿ ಕುಟುಂಬ, ಫ್ರಾಂಕೊಲೈನಸ್‌ ಜಾತಿಯಲ್ಲಿ ಬರುತ್ತದೆ. ಭಾರತದಲ್ಲೆಡೆ ಕಂಡುಬರುವ ಗೌಜಲು ಪಕ್ಷಿಯಲ್ಲಿ ಚೆನ್ನಾಗಿ ಎತ್ತರ ಮಟ್ಟದಲ್ಲಿ ಹಾರುವ ಸಾಮರ್ಥ್ಯವನ್ನು ಕಾಣಲಾಗುವುದಿಲ್ಲ. ನೆಲದ ಮೇಲೆ ಚೆನ್ನಾಗಿ ಓಡಬಲ್ಲದು. ಆದರೆ ಅಪಾಯ ಬಂದಾಗ ಸ್ವಲ್ಪ ಎತ್ತರಕ್ಕೆ ಹಾರಿ ಪೊದೆಗಳಲ್ಲಿ, ಕಂಟಿಗಳಲ್ಲಿ ಬಚ್ಚಿಟ್ಟು ಕೊಳ್ಳುತ್ತದೆ. ಹೆಚ್ಚು ಹಾರುವ ಸಾಮರ್ಥ್ಯವಿಲ್ಲದ್ದರಿಂದ, ಇದನ್ನು ಹಿಡಿಯುವವರಿಗೆ ಸುಲಭ ಬಲಿಯಾಗುತ್ತದೆ.

ಈ ಹಕ್ಕಿಗಳಿಗೆ ಇವುಗಳ ಮಾಂಸದ ವಿಶಿಷ್ಟ ರುಚಿಯಿಂದಾಗಿ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಆಹಾರಕ್ಕಾಗಿ ಇವುಗಳನ್ನು ಕೊಲ್ಲಲಾಗುತ್ತಿದೆ.

ಗೌಜಲು ಹಕ್ಕಿಗಳನ್ನು ಹಿಡಿಯಲು ಬಳಸುವ ಬಲೆಯ ಸಮೀಪ, ಮೊದಲೇ ಸಾಕಲ್ಪಟ್ಟ ಒಂದೆರಡು ಗೌಜಲು ಪಕ್ಷಿಗಳನ್ನು, ಪಂಜರಗಳಲ್ಲಿ ಇಟ್ಟಿರುತ್ತಾರೆ. ಪಂಜರಗಳಲ್ಲಿನ ಗೌಜಲುಗಳು ಕೂಗುತ್ತಲೇ, ತನ್ನ ಜಾತಿಯ ಪಕ್ಷಿಗಳು ಅಪಾಯದಲ್ಲಿವೆಯೆಂದು ತಿಳಿದು ಅವುಗಳನ್ನು ರಕ್ಷಿಸಲು ಬರುವ ಗೌಜಲುಗಳು ಕೂಡ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ.

ಇವುಗಳ ಮಾರಾಟದಿಂದಲೇ ಉಪಜೀವನ ನಡೆಸುತ್ತಿರುವ ಜನಾಂಗಗಳಿವೆ. ಇವರನ್ನು ಭೇಟಿ ಮಾಡಿದಾಗ ಹೊಟ್ಟೆ ತುಂಬಿಕೊಳ್ಳುಕ ಇವುಗಳನ್ನು ಹಿಡಿದು, ಮಾರಾಟ ಮಾಡ್ತೇವ್ರಿ. ಸರಿಸುಮಾರು ೨೫೦ ಗ್ರಾಮಗಳಷ್ಟು ತೂಕ ತೂಕ್ತಾವ್ರಿ. ಜೋಡಿ ಹಕ್ಕಿಗಳನ್ನು ಮಾರಿದಾಗ ೫೦ ರೂಪಾಯಿಗಳಿಂದ ೬೦ ರೂಪಾಯಿಗಳ ತನಕ ಗಳಿಕಿ ಆಗತೈತ್ರಿ. ಆದರ ಮೊದಲಿನಂಗ ಬಲ್ಯಾಗ ಭಾಳ ಪಕ್ಷಿಗಳು ಈಗೀಗ ಸಿಗ್ಹಾಕತ್ತಿಲ್ಲರೀ, ಎರಡು, ಮೂರು ದಿನಗಳ ತನಕ ಕಾಯ್ದಾಗ ಒಂದೆರಡು ಪಕ್ಷಿಗಳು ಸಿಗಲಾವರೀ… ಹಲವಾರು ವರ್ಷಗಳಿಂದ ಇವುಗಳನ್ನು ಹಿಡಿಯುತ್ತಿರುವ ಗೊಲ್ಲದ ಮುಖಂಡನ ಮಾತುಗಳಿವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಪಕ್ಷಿಗಳನ್ನು ಸಾಕಾಣಿಕ ಮಾಡುವುದಾಗಲೀ, ರಕ್ಷಿಸುವ ಕಾರ್ಯವಾಗಲೀ ಜರುಗುತ್ತಿಲ್ಲ. ಹೀಗಾಗಿ ಪರಿಸರದಲ್ಲಿ ಈ ಪಕ್ಷಿಗಳ ಬೇಟೆ ಅವ್ಯಾಹತವಗಿ ಮುಂದುವರಿದೇ ಇದೆ. ಮಾನವನ ಕ್ರೌರ್ಯಕ್ಕೆ ಬಲಿ ಯಾಗಿ ಈಗಾಗಲೇ ಹಲವಾರು ಜೀವಿ ಪ್ರಭೇದಗಳು ಭೂಮಿಯಿಂದ ನಶಿಸಿ ಹೋಗಿವೆ. ಈಗಾಗಲೇ ಮಾಂಸಕ್ಕಾಗಿ ೧೮೬೧ರ ತನಕ ಮಾರಿಷಸ್‌ ದ್ವೀಪದ ಕಾಡುಗಳಲ್ಲಿ ವಾಸಿಸಿದ್ದ ಡೋಡೋ ಪಕ್ಷಿಗಳನ್ನು ಬೇಟೆಯಾಡಿ ಅವುಗಳ ಯಾವುದೇ ಸಂತತಿ ಇಲ್ಲದಂತೆ ನಾಶಪಡಿಸಲಾಗಿದೆ. ಇನ್ನೂ ಹಲವಾರು ವಿನಾಶದ ಅಂಚಿನಲ್ಲಿವೆ. ಇವುಗಳ ಸಾಲಿನಲ್ಲಿ ಈ ಪುಟ್ಟ ಗೌಜಲು ಹಕ್ಕಿಯೂ ಸೇರಬಹುದು.

ಗೌಜಲು ಹಕ್ಕಿಯ ವಿವರ

  •  ಗೌಜಲು, ಕೌಜುಗ, ಗೌಜಿಗ, ತೀತೇರೆ, ಗ್ರೇ ಪಾಟ್ರಿಡ್ಜ್ ಇತ್ಯಾದಿ ಹೆಸರುಗಳು.
  • ಗಂಡು ಮತ್ತು ಹೆಣ್ಣು ಹಕ್ಕಿಗಳೆರಡಕ್ಕೂ ಬಹಳಷ್ಟು ವ್ಯತ್ಯಾಸವಿಲ್ಲ. ಆದರೆ ಗಂಡುಹಕ್ಕಿಗೆ ಕಾಲಿನಲ್ಲಿ ಚೂಪಾದ ಮುಳ್ಳಿನಂತಹ ರಚನೆಗಳಿರುತ್ತವೆ.
  • ಭಾರತ, ಬಾಂಗ್ಲಾ, ಸಿಲೋನ್‌, ಪಾಕಿಸ್ತಾನಗಳಲ್ಲಿ ಇವು ಲಭ್ಯ.
  • ಗಾಬರಿಯಾದಾಗ ಹಾರುವುದಕ್ಕಿಂತ ಓಡುವುದೇ ಹೆಚ್ಚು. ಅತೀ ಪುಕ್ಕಲು ಸ್ವಭಾವ.
  • ನಸುಕೆಂಪು ಅಥವಾ ಕಂದುಬಣ್ಣದ ದೇಹದ ಮೇಲೆ ಕರಿಯ ಪಟ್ಟಿಗಳಿವೆ.
  • ನೆಲಮಟ್ಟದಲ್ಲಿ ಹುಲ್ಲು ಸಂಗ್ರಹಿಸಿ ಗೂಡು ಕಟ್ಟುತ್ತದೆ.
  • ಮಾಂಸಕ್ಕಾಗಿ ಅಪಾರ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ.