ಪ್ರಸಿದ್ಧರಾದ ಏಳು ಮಂದಿ ಋಷಿಗಳ ಹೆಸರನ್ನು ನೀವು ಕೇಳಿದ್ದೀರಾ? ಕಶ್ಯಪ, ಭರದ್ವಾಜ, ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಜಮದಗ್ನಿ, ಗೌತಮ – ಇವರೇ ಆ ಋಷಿಗಳು. ಇವರನ್ನು ಸಪ್ತರ್ಷಿಗಳೆಂದು ಕರೆಯುತ್ತಾರೆ. ಇವರಲ್ಲೊಬ್ಬರು ಗೌತಮ ಮಹರ್ಷಿಗಳು.

ಹೆಂಡತಿಮಕ್ಕಳು

ಭರತಖಂಡದ ಉತ್ತರ ದಿಕ್ಕಿನ ಪಾರಿಯಾತ್ರವೆಂಬ ಪರ್ವತದ ಬಳಿ ಗೌತಮ ಮುನಿಗಳ ಆಶ್ರಮ. ಅವರು ಒಂದು ಗುರುಕುಲವನ್ನು ಸ್ಥಾಪಿಸಿದ್ದರು. ಅಲ್ಲಿ ನಾನಾ ದೇಶಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಗೌತಮರು ಗುರುಕುಲದ ಅಧಿಪತಿ. ಅವರಿಗೆ ‘ಕುಲಪತಿ’ ಎಂಬ ಹೆಸರಿತ್ತು. ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಅನ್ನವಸ್ತ್ರಗಳನ್ನಿತ್ತು ವಿದ್ಯಾಭ್ಯಾಸ ಮಾಡಿಸುವ ಮುನಿಗೆ ‘ಕುಲಪತಿ’ ಎಂದು ಹೆಸರು.

ಶಿಷ್ಯರಿಗೆ ಪಾಠ ಹೇಳುವುದು, ಉಳಿದ ವೇಳೆಯಲ್ಲಿ ತಪಸ್ಸನ್ನಾಚರಿಸುವುದು – ಇವೆರಡೇ ಗೌತಮರ ನಿತ್ಯಚರ್ಯೆ.  ಅವರ ಪತ್ನಿ ಅಹಲ್ಯೆ. ಬಹಳ ಸುಂದರಿಯಾದವಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಬ್ರಹ್ಮನು ಅವಳನ್ನು ಸೃಷ್ಟಿಸಿದನಂತೆ. ಇಂದ್ರನು ಅವಳನ್ನು  ಕಂಡು ಮೋಹಿತನಾದನಂತೆ. ಆದರೆ ಬ್ರಹ್ಮನು ಅಹಲ್ಯೆಯನ್ನು ಗೌತಮ ಮುನಿಗಳ ಆಶ್ರಮಕ್ಕೆ ಸೇರಿಸಿದನು. ಗೌತಮರು ವಾತ್ಸಲ್ಯದಿಂದ ಅವಳಿಗೆ ಪಾಠ ಹೇಳುತ್ತಿದ್ದರು. ಅವಳ ಸೌಂದರ್ಯವನ್ನು ಕಂಡು ಗೌತಮರ ಮನಸ್ಸು ಸ್ವಲ್ಪವೂ ಚಲಿಸಲಿಲ್ಲ. ಅದರಿಂದ ಮೆಚ್ಚಿ ಬ್ರಹ್ಮನು ಅಹಲ್ಯೆಯನ್ನು ಗೌತಮರಿಗೆ ಕೊಟ್ಟು ಮದುವೆ ಮಾಡಿದನಂತೆ. ಅಹಲ್ಯೆ ಪತಿವ್ರತೆಯೆಂದು ಕೀರ್ತಿ ಗಳಿಸಿದ್ದಾಳೆ. ಈ ದಂಪತಿಗಳ ಮಕ್ಕಳಲ್ಲಿ ಶತಾನಂದ, ಶರದ್ವಂತ, ಚಿರಕಾರಿ ಎಂಬ ಮೂವರು ಪ್ರಸಿದ್ಧರು.

ಶತಾನಂದನು ವೇದಗಳನ್ನೂ ಶಾಸ್ತ್ರಗಳನ್ನೂ ಕಲಿತು ದೊಡ್ಡ ವಿದ್ವಾಂಸನಾಗಿದ್ದನು. ಅವನ ಪಾಂಡಿತ್ಯವನ್ನು ಕಂಡು ಮೆಚ್ಚಿ ಜನಕರಾಜನು ಆತನನ್ನು ತನ್ನ ಆಸ್ಥಾನದಲ್ಲಿ ಇರಿಸಿಕೊಂಡಿದ್ದನು. ಶ್ರೀರಾಮನು ಜನಕರಾಜನ ಸಭೆಗೆ ಬಂದು ಶಿವಧನುಸ್ಸನ್ನು ಮುರಿದನಷ್ಟೆ. ಈ ಸಮಯದಲ್ಲಿ ವಿಶ್ವಾಮಿತ್ರ ಮುನಿಗಳ ಪೂರ್ವಚರಿತ್ರೆಯನ್ನೂ ತಪೋ ಮಹಿಮೆಯನ್ನೂ ಶತಾನಂದನೇ ಶ್ರೀರಾಮನಿಗೆ ವರ್ಣಿಸಿ ಹೇಳಿದ್ದನು. ಸೀತಾದೇವಿಗೂ ಶ್ರೀರಾಮನಿಗೂ ಮದುವೆಯಾದ ಸಂದರ್ಭದಲ್ಲಿ ಶತಾನಂದನು ಪುರೋಹಿತನಾಗಿದ್ದನು.

ಗೌತಮರ ಇನ್ನೊಬ್ಬ ಮಗ ಶರದ್ವಂತ. ಈತನ ಮಗನೇ ಮಹಾಭಾರತದಲ್ಲಿ ಪ್ರಸಿದ್ಧನಾದ ಕೃಪಾಚಾರ್ಯ. ಗೌತಮರ ವಂಶದವನಾದ್ದರಿಂದ ಕೃಪಾಚಾರ್ಯನಿಗೂ ಗೌತಮ ಎಂದು ಹೆಸರಿದೆ. ಕೃಪಾಚಾರ್ಯನ ತಂಗಿ ಕೃಪಿಯೆಂಬವಳು ದ್ರೋಣಾಚಾರ್ಯನ ಹೆಂಡತಿ. ಅಶ್ವತ್ಥಾಮನ ತಾಯಿ.

ಗೌತಮ ಮುನಿಗಳ ಮತ್ತೊಬ್ಬ ಮಗನಾದ ಚಿರಕಾರಿಯ ವಿಷಯವಾಗಿ ತಿಳಿದಿರಬೇಕಾದ ಒಂದು ಕಥೆ ಇದೆ.

ಚಿರಕಾರಿ

ಚಿರಕಾರಿ ಎಂದರೆ ಸಾವಧಾನವಾಗಿ ಅಲೋಚಿಸಿ ಕೆಲಸ ಮಾಡತಕ್ಕವನು ಎಂದರ್ಥ. ಒಂದು ಕೆಲಸದ ಸಾಧಕ – ಬಾಧಕಗಳನ್ನು, ಹಿಂದು-ಮುಂದನ್ನು ಸರಿಯಾಗಿ ವಿಚಾರ ಮಾಡಿ ಅನಂತರ ಮುಂದುವರಿಯತಕ್ಕವನು. ಹಾಗೆ ವಿಚಾರ ವಿಮರ್ಶೆಗಳನ್ನು ನಡೆಸಿದ ಮೇಲೆ, ಅದು ಸರಿಯೆನಿಸಿದರೆ ಆ ಕೆಲಸಕ್ಕೆ ಕೈ ಹಾಕುತ್ತಾನೆ.. ಆದ್ದರಿಂದ ಅದು ಬೇಗ ನಡೆಯದೆ ಸಹಜವಾಗಿಯೇ ತಡವಾಗುತ್ತದೆ. ಆದರೆ ಚಿರಕಾರಿಗೂ ಸೋಮಾರಿಗೂ ವ್ಯತ್ಯಾಸ ಉಂಟು. ಚಿರಕಾರಿ ಕೆಲಸದ ವಿಧಾನವನ್ನು ಆಲೋಚಿಸಿ ನಿರ್ಣಯಕ್ಕೆ ಬರುತ್ತಾನೆ. ನಿರ್ಣಯಕ್ಕೆ ಬಂದಮೇಲೆ ಮಾಡಬೇಕಾದ್ದನ್ನು ತಡವಿಲ್ಲದೆ ಆಸಕ್ತಿಯಿಂದ ನಡೆಸುತ್ತಾನೆ. ಸೋಮಾರಿ ಹಾಗಲ್ಲ. ಅವನು ಆಲೋಚನೆಯನ್ನೇ ಮಾಡುವುದಿಲ್ಲ. ಆಲೋಚಿಸಿದರೂ ಕೆಲಸಕ್ಕೆ ಕೈಹಾಕುವುದಿಲ್ಲ! ಗೌತಮರ ಮಗನಿಗೆ ವಿಮರ್ಶಿಸಿ ಕೆಲಸ ಮಾಡುವ ಸ್ವಭಾವವಿತ್ತು. ಅವನು ಸೋಮಾರಿ ಅಲ್ಲ. ಅವನ ಈ ನಿಧಾನ ಸ್ವಭಾವವನ್ನು ನೋಡಿ ‘ಚಿರಕಾರಿ, ಚಿರಕಾರಿ’ ಎಂದು ಜನರು ಕರೆಯುತ್ತಿದ್ದರು.

ಒಂದು ಸಲ ಗೌತಮರಿಗೆ ತಮ್ಮ ಪತ್ನಿಯಾದ ಅಹಲ್ಯೆಯ ಮೇಲೆ ಬಹಳ ಕೋಪ ಉಂಟಾಯಿತು. ಅವರು ವಿಚಾರ ಮಾಡಲಿಲ್ಲ. ಚಿರಕಾರಿಯನ್ನು ಕರೆದು, “ನಿನ್ನ ತಾಯಿಯನ್ನು ಕೊಂದುಹಾಕು!” ಎಂದು ದುಡುಕಿನಿಂದ ಹೇಳಿ ದೂರದ ಕಾಡಿಗೆ ಹೊರಟುಹೋದರು.

ನಿಜವಾಗಿ ಚಿರಕಾರಿ

ಇತ್ತ ಚಿರಕಾರಿಗೆ ಚಿಂತೆ ಪ್ರಾರಂಭವಾಯಿತು. ಅವನು ಮನಸ್ಸಿನಲ್ಲಿ ಹೀಗೆ ಆಲೋಚಿಸತೊಡಗಿದನು: ‘ಎಲಾ! ತಂದೆಯವರು ಹೀಗೆ ಆಜ್ಞೆ ಮಾಡಿ ಹೊರಟು ಹೋದರಲ್ಲ! ಈಗ ನಾನೇನು ಮಾಡಬೇಕು? ಅವರ ಮಾತನ್ನು ಮೀರುವುದು ಹೇಗೆ? ಆದರೆ ತಾಯಿಯನ್ನು ಮಗನೇ ಕೊಲ್ಲುವುದೆಂದರೇನು? ಇದೇನು ಚಿಕ್ಕ ವಿಷಯವೇ? ತಂದೆಯ ಮಾತನ್ನು ನಡೆಸುವುದಾದರೆ ಈ ಘೋರ ಕೃತ್ಯವನ್ನು ಮಾಡಬೇಕು. ತಂದೆಯ ಆಜ್ಞೆಯನ್ನು ಪಾಲಿಸಬೇಕಾದದ್ದು ಧರ್ಮ. ತಾಯಿಯನ್ನು ರಕ್ಷಿಸಬೇಕಾದದ್ದೂ ಧರ್ಮವೇ! ನನ್ನನ್ನು ಪೋಷಿಸಡಿ ವಿದ್ಯೆಯನ್ನು ಕಲಿಸಿ ಒಬ್ಬ ಮನುಷ್ಯನನ್ನ ಆಗಿ ಮಾಡಿದವರು ತಂದೆಯಲ್ಲವೇ? ಅವರ ಅಪ್ಪಣೆಯನ್ನು ನಡೆಸುವುದು ಮಗನಾದ ನನ್ನ ಕರ್ತವ್ಯವಲ್ಲವೇ? ತಂದೆಯ ಮಾತನ್ನು ನಡೆಸಿದರೆ ಸಕಲ ದೇವತೆಗಳೂ ಸಂತುಷ್ಟರಾಗುತ್ತಾರೆಂದು ಶಾಸ್ತ್ರದಲ್ಲಿ ಸಹೇಳಿದೆ. ತಂದೆಯ ಆಶೀರ್ವಾದದಿಂದಲೇ ಮಗನಿಗೆ ಶ್ರೇಯಸ್ಸು. ಆದರೆ-?

‘ನನ್ನ ತಾಯಿ ನನ್ನನ್ನು ಒಂಬತ್ತು ತಿಂಗಳವರೆಗೆ ಹೊಟ್ಟೆಯಲ್ಲಿ ಧರಿಸಿ ಸಲಹಿದ್ದಾಳೆ. ಎಂತಹ ಕಷ್ಟ ಬಂದರೂ ತಾಯಿಯಿದ್ದರೆ ಸಮಾಧಾನದಿಂದ ಸಹಿಸಬಹುದು. ಅಮ್ಮ ಎಂದು ಕರೆಯಲು ಮನೆಯಲ್ಲಿ ಅಮ್ಮನಿದ್ದರೆ ಮನಸ್ಸಿಗೆ ನೆಮ್ಮದಿಯೆನಿಸುತ್ತದೆ. ನಮಗೆ ವಯಸ್ಸಾಗಿ ದೊಡ್ಡವರಾದರೂ ಮನೆಯಲ್ಲಿ ತಾಯಿ ಇದ್ದರೆ, ಎರಡು ವರ್ಷದ ಹುಡುಗರಂತೆ ನಿಶ್ಚಿಂತೆಯಿಂದ ತಿರುಗಾಡಿಕೊಂಡಿರಬಹುದು! ಮಗನು ದಡ್ಡನೋ ಬುದ್ಧಿವಂತನೋ, ಗಟ್ಟಿಗನೋ, ಕೈಲಾಗದವನೋ ಹೇಗಿದ್ದರೂ ತಾಯಿ ಅವನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಯಾರಿಗೆ ತಾಯಿ ಇಲ್ಲವೋ ಅವನು ಹುಡುಗನಾಗಿದ್ದರೂ ಮುದುಕನಾದಂತೆಯೇ! ತಾಯಿಯಿಲ್ಲದವನಿಗೆ ಇನ್ನು ಯಾರಿದ್ದರೂ ಆತ ಅನಾಥ. ತಾಯಿಗೆ ಸಮನಾದ ಬಂಧುಗಳಿಲ್ಲ. ಮಕ್ಕಳಿಗೆ ತಾಯಿ ದೇವರಿದ್ದಂತೆ.

‘ಆದರೆ ತಾಯಿಗೂ ನನ್ನ ತಂದೆ ಪತಿ. ಅವಳಿಗೂ ಪೂಜ್ಯರಾದವರು ತಂದೆ. ಅದೇನೋ ಸರಿ. ತಂದೆಗೆ ಪೂಜ್ಯತೆ ಯಾವಾಗ? ಮದುವೆಯ ಸಂದಭ್ದಲ್ಲಿ ಗಂಡನು ಹೆಂಡತಿಗೆ, ‘ನಿನ್ನನ್ನು ಧರ್ಮದಿಂದ ನಡೆಸಿಕೊಳ್ಳುತ್ತೇನೆ, ಧರ್ಮಕ್ಕೆ ಮೀರಿ ನಡೆಯುವುದಿಲ್ಲ. ನಿನ್ನನ್ನು ಪಾಲಿಸುತ್ತೇನೆ’ ಎಂದು ಮಾತು ಕೊಟ್ಟಿರುತ್ತಾನೆ. ಈ ಮಾತನ್ನು ನಡೆಸದಿದ್ದಾಗ ಅವನೆಂತಹ ಪತಿ? ತಪ್ಪು ತಂದೆಯದು, ತಾಯಿಯದಲ್ಲ. ಹೆಂಡತಿಯು ತಪ್ಪು ಮಾಡದಂತೆ ನೋಡಿಕೊಳ್ಳಬೇಕಾದದ್ದು ಗಂಡನಿಗೆ ಸೇರಿದ್ದು.

‘ಆದರೆ ತಂದೆ ನನಗೆ ತಂದೆ ಮಾತ್ರವಲ್ಲ, ವಿದ್ಯೆಯನ್ನು ಕಲಿಸಿದ ಗುರುವೂ ಹೌದು. ಅಂತಹ ತಂದೆಯ ಮಾತನ್ನು  ಮೀರಬಹುದೆ?’

ಹೀಗೆ ಚಿರಕಾರಿ ಆಲೋಚಿಸುತ್ತಾ ಹೋದನು. ಎಷ್ಟು ಆಲೋಚಿಸಿದರೂ ಎಷ್ಟು ಚಿಂತಿಸಿದರೂ ಅವನಿಗೆ ಸರಿಯಾದ ಉತ್ತರ ಹೊಳೆಯಲಿಲ್ಲ. ಮನಸ್ಸಿನಲ್ಲಿ ಯಾವುದೂ ನಿರ್ಣಯವಾಗಲಿಲ್ಲ. ಅನೇಕ ದಿನಗಳು ಕಳೆದವು.

ಅಯ್ಯೋ, ತಪ್ಪು ಮಾಡಿದೆ!’

ಇತ್ತಲಾಗಿ ಗೌತಮ ಮುನಿಗಳೂ ದೂರದ ಕಾಡಿನಲ್ಲಿ ತಪಸ್ಸಿಗೆ ಕುಳಿತರು. ಅಹಲ್ಯೆಯ ಮೇಲೆ ಉಂಟಾದ ಕೋಪ ಇಳಿಯುತ್ತಾ ಬಂದಿತ್ತು. ಅದೇ ಚಿಂತೆ ಅವರನ್ನು ಕಾಡುತ್ತಿತ್ತು. ಮನಸ್ಸು ಹೊಯ್ದಾಡತೊಡಗಿತು. ಅವರಿಗೆ ಹೀಗೆನ್ನಿಸಿತು: ‘ಆಹಾ! ಅಹಲ್ಯೆ ನನ್ನನ್ನು ಇಷ್ಟು ವರ್ಷಗಳು ಶ್ರದ್ಧೆಯಿಂದ ಸೇವೆ ಮಾಡಿದ್ದಾಳೆ. ಮಕ್ಕಳನ್ನು ಪ್ರೀತಿಯಿಂದ ಸಾಕಿದ್ದಾಳೆ. ಒಂದು ಸಣ್ಣ ತಪ್ಪಿಗಾಗಿ ಅವಳನ್ನು ಕೊಲ್ಲಬೇಕೆಂದು ಹೇಳಿಬಿಟ್ಟೆನಲ್ಲ! ಸ್ತ್ರೀಯನ್ನು ಕೊಲ್ಲಬಹುದೆ? ನಾನು ದೊಡ್ಡ ತಪ್ಪನ್ನೇ ಮಾಡಿದೆನಲ್ಲವೆ? ಗುರುಕುಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಅವರ ಗತಿಯೇನು? ನನ್ನ ವಿಷಯದಲ್ಲಿ ಅವರು ಏನೆಂದುಕೊಂಡಾರು’

ಅಷ್ಟರಲ್ಲಿ ಇಂದ್ರನು ವೇಷಮರೆಸಿಕೊಂಡು ಒಬ್ಬ ಮುನಿಯ ರೂಪದಲ್ಲಿ ಅಲ್ಲಿಗೆ ಬಂದು, ಗೌತಮರೊಡನೆ ಮಾತಿಗೆ ಆರಂಭಿಸಿದನು. ಅಹಲ್ಯೆಯ ವಿಷಯ ಪ್ರಸ್ತಾಪಕ್ಕೆ ಬಂದಿತು. ಇಂದ್ರನು, “ಮಹರ್ಷಿ, ಋಷಿಗಳ ಮನಸ್ಸು ಶಾಂತವಾಗಿರಬೇಕು. ಶಾಂತಿಯಿಲ್ಲದಿದ್ದರೆ ತಪಸ್ಸು ನಡೆಯುವುದು ಹೇಗೆ? ನಿನ್ನ ಪತ್ನಿಯ ಮೇಲೆ ಹೀಗೆ ಕೋಪಿಸಿಕೊಳ್ಳಬಹುದೆ? ಅವಳಿಗೆ ಮರಣ ದಂಡನೆ ವಿಧಿಸಬಹುದೆ? ಅವಳಾದರೂ ಯಾವ ದೊಡ್ಡ ತಪ್ಪು ಮಾಡಿದಳು? ಅಸೂಯೆಯಿಂದ ನಿನ್ನ ಮನಸ್ಸು ಕದಡಿಹೋಗಿದೆ. ಅವಳನ್ನು ಕೊಲ್ಲಬೇಕೆಂದು ಆಜ್ಞೆ ಮಾಡಬಹುದೆ? ನಿನ್ನ ಮಗನು ಹಡೆದ ತಾಯಿಯನ್ನು ಕೊಲ್ಲಬೇಕೆ? ಅಥವಾ ತಂದೆಯ ಆಜ್ಞೆಯನ್ನು ಮೀರಬೇಕೆ? ಚಿರಕಾರಿಯನ್ನು ನೀನು ಧರ್ಮಸಂಕಟದಲ್ಲಿ ಸಿಕ್ಕಿಸಿದೆ. ಇನ್ನೊಬ್ಬರಿಗೆ ಬುದ್ಧಿ ಹೇಳಬೇಕಾದ ನೀನೆ ಹೀಗೆ ಮಾಡಬಹುದೆ?” ಎಂದನು.

ಗೌತಮರ ಮನಸ್ಸು ಪೂರ್ತಿಯಾಗಿ ಬದಲಾಯಿಸಿತು. ‘ನಾನು ಚಿರಕಾರಿಗೆ ಹೇಳಿದ್ದು ಬಹಳ ಅವಿವೇಕವಾಯಿತು. ಸ್ತ್ರೀಹತ್ಯೆ ಮಹಾದೋಷ. ಹೆತ್ತ ತಾಯಿಯನ್ನು ಅವನು ಹೇಗೆ ಕೊಂದಾನು? ಅವನು ಚಿರಕಾರಿ. ಯಾವ ಕೆಲಸವನ್ನು ಮಾಡುವಾಗಲೂ ವಿಮರ್ಶೆ ಮಾಡುತ್ತಾನೆ . ಕೂಡಲೇ ಕೆಲಸಕ್ಕೆ ಕೈಹಾಕುವುದಿಲ್ಲ. ಕಾರ್ಯವು ಮಿಂಚಿರಲಿಕ್ಕಿಲ್ಲ. ಈ ವಿಷಯದಲ್ಲಿ ಅವನು ಥಟ್ಟನೆ ದುಡುಕಲಾರ. ಅಯ್ಯೋ! ಕೈ ಹಿಡಿದ ಹೆಂಡತಿಯನ್ನು ಕೊಲೆ ಮಾಡಲು ಹೇಳಿದೆನಲ್ಲ! ತಪ್ಪು ಮಾಡಿದೆ. ಈಗಲೇ ಆಶ್ರಮಕ್ಕೆ ಹೋಗಿ ಪರಿಸ್ಥಿತಿ ಏನಾಗಿದೆಯೆಂದು ನೋಡುತ್ತೇನೆ’ ಎಂದು ನಿಶ್ಚಯಿಸಿ ಮನೆಗೆ ಬೇಗಬೇಗನೆ ಬಂದರು.

ನಿನ್ನ ಹೆಸರು ಸಾರ್ಥಕವಾಯಿತು

“ಓ ಚಿರಕಾರಿ, ಎಲ್ಲಿದ್ದೀಯೆ?” ಎಂದು ಕೂಗುತ್ತ ಗೌತಮ ಮುನಿಗಳು ಆಶ್ರಮದ ಹತ್ತಿರ ಬಂದರು. ಅವರ ಧ್ವನಿ ಕೇಳಿಸಿದೊಡನೆ ಚಿರಕಾರಿ ಹೊರಗೆ ಬಂದು ತಂದೆಯ ಪಾದಗಳಿಗೆ ನಮಸ್ಕರಿಸಿದನು. ಗೌತಮರು ಕಳವಳಿಸುತ್ತ, “ಮಗು ಚಿರಕಾರಿ , ನಿನ್ನ ಹೆಸರು ಸಾರ್ಥಕವಾಗಲಿ. ತಾಯಿಯನ್ನು ಕೊಂದಿಲ್ಲವಷ್ಟೆ?” ಎಂದು ಕೇಳಿದರು.

‘ಅನೇಕ ವಿಷಯಗಳಲ್ಲಿ ಚಿರಕಾರಿಯಾಗಿರುವುದು ಉತ್ತಮ’.

 

ಇದ್ದ ಸಂಗತಿಯನ್ನು ಚಿರಕಾರಿ ತಿಳಿಸಿದನು. “ಎನು ಮಾಡಬೇಕೆಂದು ನಿರ್ಣಯಿಸಲು ಆಗಲಿಲ್ಲ. ನಿಮ್ಮ ಮಾತನ್ನು ನಡೆಸಲಾರದೆ ಧರ್ಮಸಂಕಟದಲ್ಲಿ ಸಿಕ್ಕಿದ್ದೇನೆ. ಮನ್ನಿಸಬೇಕು” ಎಂದು ದೈನ್ಯದಿಂದ ತಿಳಿಸಿದನು.

ಗೌತಮರಿಗೆ ಆನಂದವಾಯಿತು. “ಮಗನೆ, ಒಳ್ಳೆಯದಾಯಿತು. ತಾಯಿಯನ್ನು ಉಳಿಸಿದೆ. ಮಾತೃಹತ್ಯಾ ದೋಷ ನಿನಗೆ ಬರಲಿಲ್ಲ. ಅಹಲ್ಯೆ ಇಲ್ಲದಿದ್ದರೆ ನಾನು ಬದುಕಿ ಉಳಿಯುತ್ತಿರಲಿಲ್ಲ. ತಾಯಿತಂದೆಗಳನ್ನು ಬದುಕಿಸಿದ ಪುಣ್ಯ ನಿನಗೆ ಬಂದಿತು. ನೀನು ಚಿರಕಾರಿ ಎನಿಸಿಕೊಂಡಿದ್ದು ಸಾರ್ಥಕವಾಯಿತು” ಎಂದು ಹಲುಬಿದರು. ಮಗನನ್ನು ಅಪ್ಪಿಕೊಂಡು ಆಶೀರ್ವದಿಸಿದರು. ಅಹಲ್ಯೆಯನ್ನು ಕಂಡು ಸಂತೋಷಿಸಿದರು.

ಅವರು ಚಿರಕಾರಿಯನ್ನು ಹೊಗಳುತ್ತ, “ಮಗು, ಅನೇಕ ವಿಷಯಗಳಲ್ಲಿ ಚಿರಕಾರಿಯಾಗಿರುವುದು ಉತ್ತಮ. ಇನ್ನೊಬ್ಬನಿಗೆ ಕೆಟ್ಟದ್ದನ್ನೂ ಪಾಪ ಕೃತ್ಯವನ್ನೂ ಮಾಡುವ ಸಂದರ್ಭ ಒದಗಿದರೆ ಚಿರಕಾರಿಯಾಗಬೇಕು. ಸ್ನೇಹಿತನನ್ನು ಮಾಡಿಕೊಳ್ಳುವಾಗ ಬಹಳ ಕಾಲ ಅವನೊಡನೆ ಒಡನಾಡಿ ಪರೀಕ್ಷಿಸಬೇಕು.

ಒಮ್ಮೆಗೇ ಸ್ನೇಹವನ್ನು ಬೆಳೆಸಬಾರದು. ತಪ್ಪು ಮಾಡಿದರೆಂದು ಯಾರ ಮೇಲೂ ದುಡುಕಬಾರದು. ಒಡನೆಯೇ ಕೆಟ್ಟ ಮಾತನ್ನಾಡಬಾರದು. ದಂಡಿಸಬಾರದು. ಆ ವಿಷಯದಲ್ಲಿ ಚಿರಕಾರಿಯಾಗುವುದು ಶ್ರೇಷ್ಠ. ಹಿರಿಯರನ್ನು ಚಿರಕಾಲ ಸೇವಿಸಬೇಕು. ವಿದ್ಯೆಯನ್ನು ಚಿರಕಾಲ ಕಲಿಯಬೇಕು. ಧರ್ಮವನ್ನು ಚಿರಕಾಲದವರೆಗೆ ಪಾಲಿಸಬೇಕು. ಈ ವಿಷಯಗಳಲ್ಲಿ ಚಿರಕಾರಿಯಾಗಿರುವುದೇ ಮೇಲು! ‘ಚಿರಾಕರೀ ಪ್ರಶಸ್ಯತೇ’.”

ನಾವು ಇನ್ನೊಬ್ಬರಿಗೆ ಬುದ್ಧಿ ಹೇಳುವುದು ಸುಲಭ. ನಾವೇ ಆಚರಿಸುವುದು ಕಷ್ಟ. ಗೌತಮರ ವಿಚಾರವೂ ಹಾಗೆಯೇ. ಅವರು ಮಹಾವಿದ್ವಾಂಸರು, ತಪಸ್ವಿಗಳು, ಧರ್ಮವನ್ನು ಚೆನ್ನಾಗಿ ಬಲ್ಲವರು. ಆದರೆ ಕೋಪದಿಂದ ಒಮ್ಮೊಮ್ಮೆ ದುಡುಕುತ್ತಿದ್ದರು. ಇಂತಹ ಇನ್ನೊಂದು ಸಂದರ್ಭ ಅವರ ಜೀವನದಲ್ಲಿ ನಡೆಯಿತು.

ಆಶ್ರಮ ಬರಿದಾಯಿತು

ಅಹಲ್ಯೆ ಪರಮಸುಂದರಿ. ಅವಳ ಸೌಂದರ್ಯ ಕರುಬುವಷ್ಟಿತ್ತು. ಅವಳನ್ನು ಬ್ರಹ್ಮನು ಸೃಷ್ಟಿಸಿದಾಗಲೇ ಇಂದ್ರನಿಗೆ ಮೋಹ ಹುಟ್ಟಿತ್ತು. ಆತನು ಅಹಲ್ಯೆಯ ಪರವಾಗಿ ಗೌತಮರೊಡನೆ ಮಾತಾಡಿದ್ದನಲ್ಲವೆ? ಗೌತಮ ಮುನಿಗಳು ನಡೆಸುತ್ತಿದ್ದ ಯಜ್ಞದಲ್ಲಿ ಅವನು ಪ್ರತ್ಯಕ್ಷವಾಗಿ ಭಾಗವಹಿಸುತ್ತಿದ್ದನು. ಆಗಾಗ ಗೌತಮರ ಗುರುಕುಲಕ್ಕೆ ಭೇಟಿ ಕೊಡುತ್ತಿದ್ದನು.

ಇದರಿಂದಾಗಿ ಗೌತಮರ ಮನಸ್ಸಿನಲ್ಲಿ ಒಂದು ಅಸೂಯೆ ಮನೆ ಮಾಡಿತ್ತು. ಒಂದು ಸಲ ತಾವಿಲ್ಲದಾಗ ದೇವೇಂದ್ರನು ಆಶ್ರಮಕ್ಕೆ ಬಂದುದನ್ನು ಗೌತಮರು ಕಂಡರು. ಅಹಲ್ಯೆಯ ನಡತೆಯಲ್ಲಿ ಅವರಿಗೆ ಸಂಶಯ ಬಂದಿತು. ‘ಕಲ್ಲಾಗಿ ಹೋಗು!” ಎಂದು ಅಹಲ್ಯೆಯನ್ನು ಸಿಟ್ಟಿನಿಂದ ಶಪಿಸಿಬಿಟ್ಟರು.

ತನ್ನ ತಪ್ಪು ಏನೂ ಇಲ್ಲವೆಂದು ಹೇಳುತ್ತ ಅಹಲ್ಯೆ ಕಣ್ಣೀರು ಸುರಿಸಿದಳು.

ಋಷಿಗಳ ಕೋಪ ಶಾಂತವಾಯಿತು. “ಶಾಪವನ್ನು ಹಿಂತೆಗೆದುಕೊಳ್ಳಲು ಬರುವುದಿಲ್ಲ. ಒಂದು ಪರಿಹಾರ ಹೇಳುತ್ತೇನೆ. ಮುಂದೆ ರಾವಣನ ಸಂಹಾರಕ್ಕಾಗಿ ವಿಷ್ಣು ಶ್ರೀರಾಮನಾಗಿ ಅವತರಿಸುತ್ತಾನೆ. ವಿಶ್ವಾಮಿತ್ರ ಮುನಿಗಳೊಡನೆ ಇಲ್ಲಿಗೆ ಬರುತ್ತಾನೆ. ಆಗ ಶಾಪವು ಮುಕ್ತಾಯವಾಗುತ್ತದೆ. ಆಗ ನೀನು ಮೊದಲಿನಂತೆ ನಿನ್ನ ರೂಪವನ್ನು ಪಡೆಯುತ್ತೀಯೆ”  ಎಂದರು. ಅನಂತರ ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟುಹೋದರು.

ಅಹಲ್ಯೆ ಕಲ್ಲಾದಳು. ಗೌತಮರ ಆಶ್ರಮ ಪಾಳು ಬಿದ್ದಿತು. ವಿದ್ಯಾರ್ಥಿಗಳು ಅಲ್ಲಿಂದ ತೆರಳಿದರು. ಗುರುಕುಲ ಮುಚ್ಚಿತು.

ಶ್ರೀರಾಮ ಕೃಪೆ

ಗೌತಮರು ಹೇಳಿದಂತೆ ಶ್ರೀರಾಮನ ಅವತಾರವಾಯಿತು. ವಿಶ್ವಾಮಿತ್ರ ಮುನಿಗಳು ಯಜ್ಞದ ರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ತಮ್ಮ ಆಶ್ರಮಕ್ಕೆ ಕರೆ ತಂದರು. ಅಲ್ಲಿಯ ಕೆಲಸ ಮುಗಿದ ಮೇಲೆ ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಗೆ ಹೊರಟರು. ಮಿಥಿಲೆಯಲ್ಲಿ ಜನಕರಾಜನ ಬಳಿ ಇದ್ದ ಶಿವ ಧನುಸ್ಸನ್ನು ರಾಮಲಕ್ಷ್ಮಣರಿಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ದಾರಿಯಲ್ಲಿ ಗೌತಮ ಮುನಿಗಳ ಪಾಳು ಬಿದ್ದ ಆಶ್ರಮ ಸಿಕ್ಕಿತು.

ಅಹಲ್ಯೆಗೆ ಬಂದ ಶಾಪದ ವೃತ್ತಾಂತ ವಿಶ್ವಾಮಿತ್ರ ಮುನಿಗಳಿಗೆ ತಿಳಿದಿತ್ತು. ಅದನ್ನು ಹೋಗಲಾಡಿಸುವುದಕ್ಕಾಗಿ ಶ್ರೀರಾಮನನ್ನು ಅಲ್ಲಿಗೆ ಕರೆತಂದರು. ಒಡನೆಯೇ ಗೌತಮರು ಕೊಟ್ಟಿದ್ದ ಶಾಪ ಮುಗಿಯಿತು. ಅಹಲ್ಯೆ ತನ್ನ ನಿಜರೂಪವನ್ನು ಪಡೆದಳು. ಆ ಹೊತ್ತಿಗೆ ಸರಿಯಾಗಿ ಗೌತಮರು ಹಿಮಾಲಯದಿಂದ ಹಿಂದಿರುಗಿ ಬಂದರು. ಅವರಲ್ಲಿ ಅಸೂಯೆ, ಕೋಪ ಯಾವುದೂ ಉಳಿದಿರಲಿಲ್ಲ, ಗೌತಮರು ಸಂತೋಷದಿಂದ ಅಹಲ್ಯೆಯೊಡನೆ ಆಶ್ರಮದಲ್ಲಿ ನೆಲೆಸಿದರು. ಮತ್ತೆ ಕ್ರಮವಾಗಿ ಆಶ್ರಮಕ್ಕೆ ಕಳೆಯೇರಿತು. ಎಲ್ಲೆಡೆಯಿಂದಲೂ ವಿದ್ಯಾರ್ಥಿಗಳು ಬರತೊಡಗಿದರು. ಗುರುಕುಲ ಆರಂಭವಾಯಿತು.

ಇತ್ತ ವಿಶ್ವಾಮಿತ್ರರು ರಾಮಲಕ್ಷ್ಮಣರೊಡನೆ ಮಿಥಿಲೆಗೆ ಹೋದರು. ಗೌತಮರ ಮಗ ಶತಾನಂದ ಮುನಿ ಜನಕರಾಜನ ಆಸ್ಥಾನದಲ್ಲಿದ್ದನಷ್ಟೆ. ವಿಶ್ವಾಮಿತ್ರರು ಆತನಿಗೆ ಅಹಲ್ಯೆಯ ಶಾಪ ಮುಗಿಯಿತೆಂದೂ ಗೌತಮರು ಹಿಂದಿರುಗಿ ಬಂದು ಆಶ್ರಮದಲ್ಲಿ ನೆಲೆಸಿದರೆಂದೂ ತಿಳಿಸಿದರು. ಶತಾನಂದನ ಆನಂದಕ್ಕೆ ಪಾರವೇ ಉಳಿಯಲಿಲ್ಲ.

ಅಯ್ಯೋ ನನ್ನ ದುರ್ದೈವವೇ!’

ಗೌತಮ ಮುನಿಗಳ ಗುರುಕುಲದಲ್ಲಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬನ ಹೆಸರು ಉತ್ತಂಕ. ಅವನು ಗುರುಗಳ ಅಚ್ಚುಮೆಚ್ಚಿನ ಶಿಷ್ಯ. ಆತನು ತೇಜಸ್ವಿಯಾಗಿದ್ದು ಭಕ್ತಿಯಿಂದ ಗುರುಸೇವೆಯನ್ನು ನಡೆಸುತ್ತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದನು. ಎಲ್ಲರಿಗೂ ಅವನು ಮಾದರಿ. ಎಲ್ಲರಿಗೂ ಅವನಲ್ಲಿ ಪ್ರ ಈತಿ. ತಾವೂ ಉತ್ತಂಕನಂತೆ ಇರಬೇಕೆಂದು ಎಲ್ಲ ವಿದ್ಯಾರ್ಥಿಗಳ ಬಯಕೆ.

ವಿದ್ಯಾಭ್ಯಾಸ ಮುಗಿದ ಮೇಲೆ ವಿದ್ಯಾರ್ಥಿಗಳು ತಮ್ಮ ಮನೆಗೆ ಹೋಗಲು ಗೌತಮರು ಅನುಮತಿ ನೀಡುತ್ತಿದ್ದರು. ಅವರ ಅನುಮತಿಯನ್ನು ಪಡೆಯದೆ ಯಾರೂ ಹೋಗುವಂತಿಲ್ಲ. ಕುಲಪತಿಗಳ ಒಪ್ಪಿಗೆಯನ್ನು ಪಡೆದು ಅವರೆಲ್ಲರೂ ಹೊರಟುಹೋಗುತ್ತಿದ್ದರು.

ಉತ್ತಂಕನ ವಿದ್ಯಾಭ್ಯಾಸ ಮುಗಿಯಿತು. ಆದರೂ ಮನೆಗೆ ಹೋಗಲು ಗೌತಮರು ಅನುಮತಿಯನ್ನು ನೀಡಲಿಲ್ಲ. ಅವರ ಆಜ್ಞೆಗಾಗಿ ಉತ್ತಂಕನು ಬಹಳ ದಿನ ಕಾದನು. ಪ್ರಯೋಜನವಾಗಲಿಲ್ಲ. ತನ್ನ ಕಣ್ಣೆದುರಿಗೆ ಸಹಪಾಠಿಗಳು ವಿದ್ಯಾಭ್ಯಾಸ ಮುಗಿಸಿ ಹೊರಟುಹೋಗುತ್ತಿದ್ದರೂ ತನಗೆ ಮಾತ್ರ ಗುರುಗಳ ಆಜ್ಞೆ ಸಿಗಲಿಲ್ಲವೆಂದು ಉತ್ತಂಕನಿಗೆ ದುಃಖ. ಅವನು ಬಹಳ ವಿನಯಶಾಲಿಯಾದ್ದರಿಂದ ಗುರುಗಳಿಗೆ ತನ್ನ ಅಭಿಪ್ರಾಯವನ್ನು ತಿಳಿಸಲಿಲ್ಲ. ತನ್ನ ಸೇವೆಯಿಂದ ಗೌತಮರಿಗೆ ಇನ್ನೂ ತೃಪ್ತಿಯಾಗಿಲ್ಲವೆಂದೇ ಊಹಿಸಿದನು. ತನ್ನ ದಿನದ ಕರ್ತವ್ಯವನ್ನು ಆಸಕ್ತಿಯಿಂದ ಮಾಡುತ್ತಲೇ ಇದ್ದನು.

ಹೀಗಿರುವಾಗ ಒಂದು ದಿನ ಉತ್ತಂಕನು ಕಾಡಿಗೆ ಹೋಗಿ ಸಮಿತ್ತುಗಳ ಹೊರೆಯನ್ನು ಹೊತ್ತುಕೊಂಡು ಆಶ್ರಮಕ್ಕೆ ಬರುತ್ತಿದ್ದನು. ಅವನಿಗೆ ಬಹಳ ಹಸಿವಾಗಿತ್ತು. ಭಾರವನ್ನು ಹೊತ್ತು ಬಳಲಿದ್ದನು. ಹೊರೆಯನ್ನು ಕೆಳಗಿಳಿಸಿ ಚಿಂತಿಸುತ್ತ ಕುಳಿತನು. ‘ಗುರುಗಳು ಹೇಳಿಕೊಟ್ಟ ವಿದ್ಯೆಯೆಲ್ಲವನ್ನೂ ಕಲಿತದ್ದಾಯಿತು. ಭಕ್ತಿಯಿಂದ ಇಷ್ಟು ವರ್ಷ ಅವರ ಸೇವೆ ಮಾಡಿದೆ. ಆದರೂ ಕುಲಪತಿಗಳಿಗೆ ನನ್ನ ಮೇಲೆ ದಯೆ ಬರಲಿಲ್ಲ. ನನ್ನನ್ನು ಅನುಗ್ರಹಿಸಲಿಲ್ಲ. ಮನೆಗೆ ಹೋಗಲು ಅನುಮತಿ ನೀಡಲಿಲ್ಲ. ಸ್ನೇಹಿತರೆಲ್ಲರೂ ವಿದ್ಯೆ ಕಲಿತು ಒಬ್ಬೊಬ್ಬರಾಗಿ ಹೊರಟು ಹೋದರು. ಅಯ್ಯೋ, ನನ್ನ ದುರ್ದೈವವೇ!’ಎಂದು ಕಳವಳಿಸಿದನು. ದುಃಖ ಒತ್ತರಿಸಿತು. ತಡೆಯಲಾರದೆ ಗಳಗಳನೆ ಅಳತೊಡಗಿದನು.

ಗೌತಮರ ಮಗಳು ಉತ್ತಂಕನ ಜೊತೆಯ ವಿದ್ಯಾರ್ಥಿನಿ. ಅವಳಿಗೆ ಅಳುವ ಶಬ್ದ ಕೇಳಿಸಿತು. ಯಾರಾಗಿರಬಹುದೆಂದು ಹೋಗಿ ನೋಡಿದರೆ ಉತ್ತಂಕ! ಅವನು ಅಳುವುದನ್ನು ಆ ಹುಡುಗಿ ಎಂದೂ ಕಂಡಿರಲಿಲ್ಲ. ಅಚ್ಚರಿಯಾಯಿತು. ಉತ್ತಂಕನ ಬಳಿಗೆ ಹೋಗಿ ಸಂತೈಸತೊಡಗಿದಳು.

ಉತ್ತಂಕ ಅಳಿಯನಾದ

ಆ ಹೊತ್ತಿಗೆ ಸರಿಯಾಗಿ ಗೌತಮರು ಬಂದರು.

ಈ ವಿಷಯ ಗೌತಮ ಮುನಿಗಳಿಗೆ ತಿಳಿಯಿತು. ಅವರು ಒಡನೆಯೇ ಅಲ್ಲಿಗೆ ಬಂದು, ‘ಮಗು, ಉತ್ತಂಕ, ಏಕೆ ಅಳುತ್ತಿರುವೆ? ನಿನಗೆ ಯಾವ ತೊಂದರೆಯಾಯಿತು? ಸಂಕೋಚವಿಲ್ಲದೆ ನನಗೆ ಹೇಳು” ಎಂದು ಪ್ರೀತಿಯಿಂದ ಅವನ ಮೈ ಸವರುತ್ತಾ ಕೇಳಿದರು.

ಉತ್ತಂಕನು, “ಗುರುಗಳೇ, ನಾನು ಇಷ್ಟು ವರ್ಷಗಳವರೆಗೆ ಗುರುಕುಲದಲ್ಲಿದ್ದು ನಿಮ್ಮನ್ನು ಸೇವಿಸುತ್ತ ಬಂದಿದ್ದೇನೆ. ನೀವು ಕಲಿಸಿದ ವಿದ್ಯೆಯೆಲ್ಲವನ್ನು ಕಲಿತಿದ್ದೇನೆಂದು ನನಗೆ ಅನ್ನಿಸಿದೆ. ಭಕ್ತಿಯಿಂದ ನಡೆದುಕೊಂಡಿದ್ದೇನೆ. ಸುಖವನ್ನು ಎಳ್ಳಷ್ಟೂ ಬಯಸದೆ ಗುರುಕುಲದ ನಿಯಮವನ್ನು ಪಾಲಿಸಿದ್ದೇನೆ. ನನ್ನ ತರುವಾಯ ಬಂದ ವಿದ್ಯಾರ್ಥಿಗಳೆಲ್ಲರೂ ವಿದ್ಯೆಯನ್ನು ಕಲಿತು ನನ್ನ ಕಣ್ಣೆದುರಿಗೇ ಹೊರಟುಹೋದರು. ನನ್ನ ವಿಷಯದಲ್ಲಿ ಮಾತ್ರ ಗುರುಗಳಿಗೆ ದಯೆ ಹುಟ್ಟಿರಲಿಲ್ಲ ಅದಕ್ಕಾಗಿ ಅಳು ಬಂದಿತು” ಎಂದನು.

ಗೌತಮರ ಮನಸ್ಸು ಕರಗಿಹೋಯಿತು. ಅವರು “ಬಾ ಮಗು ಉತ್ತಂಕ, ನಿನ್ನ ಗುರುಭಕ್ತಿಯನ್ನು ಕಂಡು ಮೆಚ್ಚಿದ್ದೇನೆ. ಈ ಗುರುಕುಲದಲ್ಲಿ ನೀನು ಕಲಿಯಬೇಕಾದ್ದು ಯಾವುದೂ ಉಳಿದಿಲ್ಲ. ಎಲ್ಲ ಶಾಸ್ತ್ರಗಳಲ್ಲಿಯೂ ನೀನು ಪಂಡಿತನಾಗಿದ್ದೀಯೆ. ನಿನ್ನ ಮೇಲಿನ ಪ್ರೀತಿಯಿಂದಲೇ ನಿನ್ನನ್ನು ಅಗಲುವುದಕ್ಕೆ ನನಗೆ ಮನಸ್ಸಾಗಲಿಲ್ಲ. ಆದ್ದರಿಂದ ಹೋಗಬಹುದೆಂದು ನಿನಗೆ ಹೇಳಲಿಲ್ಲ. ಮನೆಗ ಹೋಗುವ ಇಚ್ಛೆಯಾದರೆ, ಉತ್ತಂಕ, ನೀನು ಹೋಗಬಹುದು. ಕಳಿಸುತ್ತೇನೆ” ಎಂದರು.

‘ಆಹಾ! ಗುರುಗಳಿಗೆ ನನ್ನ ನಡತೆಯಿಂದ ಬೇಸರವಾಗಿಲ್ಲ’ ಎಂದು ಉತ್ತಂಕನಿಗೆ ಸಮಾಧಾನವಾಯಿತು. ‘ಅವರಿಗೆ ನನ್ನಲ್ಲಿ ಎಷ್ಟು ಪ್ರೀತಿ!’ ಎಂದು ಹಿಗ್ಗಿದನು. “ಗುರುಗಳೇ, ಅಪ್ಪಣೆಯಾದರೆ ತಾಯಿ-ತಂದೆಗಳ ಬಳಿಗೆ ಹೋಗುತ್ತೇನೆ. ನಾನು ಗುರುದಕ್ಷಿಣೆಯನ್ನು ಒಪ್ಪಿಸಬೇಕು. ಅದು ಏನೆಂದು ಹೇಳೋಣವಾಗಲಿ ಸಲ್ಲಿಸುತ್ತೇನೆ” ಎಂದನು.

ಗೌತಮರು, “ಉತ್ತಂಕ, ಗುರುಗಳಿಗೆ ಶಿಷ್ಯನ ನಡತೆಯಿಂದ ಸಂತೋಷವಾದರೆ ಅದೇ ಗುರುದಕ್ಷಿಣೆ. ನಿನ್ನ ನಡೆ-ನುಡಿಗಳಿಂದಲೂ ಕಲಿತ ವಿದ್ಯೆಯಿಂದಲೂ ನನಗೆ ಬಹಳ ಸಂತೋಷವಾಗಿದೆ; ತೃಪ್ತಿಯಾಗಿದೆ. ಏನನ್ನೂ ನೀನು ಕೊಡಬೇಕಾಗಿಲ್ಲ. ಸಮಾಧಾನದಿಂದ ನೀನು ಹೋಗಬಹುದು” ಎಂದರು. ಗುರುಗಳ ವಾತ್ಸಲ್ಯವನ್ನು ಕಂಡು ಉತ್ತಂಕನಿಗೆ ಕಣ್ಣೀರು ತುಂಬಿತು. ಅವನು ಗೌತಮರಿಗೆ ನಮಸ್ಕರಿಸಿ, “ಗುರುದಕ್ಷಿಣೆ ಕೊಡದಿದ್ದರೆ ನಾನು ಕೃತಘ್ನನಾದೇನು. ದಯವಿಟ್ಟು ಸ್ವೀಕರಿಸಬೇಕು” ಎಂದನು. ಗೌತಮರು ನಗುತ್ತ, “ಉತ್ತಂಕ, ಆ ವಿಷಯವನ್ನು ಎತ್ತಬೇಡ. ಇದೋ, ನನ್ನ ಮಗಳು ನಿನ್ನ ಜೊತೆಗಾತಿಯಾದ ವಿದ್ಯಾರ್ಥಿನಿ. ಸುಂದರಿಯೂ ವಿದುಷಿಯೂ ಆಗಿದ್ದಾಳೆ. ನೀನು ಒಪ್ಪುವುದಾದರೆ ಇವಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಇದು ಶಿಷ್ಯದಕ್ಷಿಣೆ!” ಎಂದರು. ಉತ್ತಂಕನು ಒಪ್ಪಿದನು. ಮದುವೆಯಾಯಿತು.

ಇದೇ ಗುರುದಕ್ಷಿಣೆ

ಉತ್ತಂಕನಿಗೆ ಗುರುದಕ್ಷಿಣೆಯನ್ನು ಕೊಡುವ ಚಿಂತೆ ತಪ್ಪಲೇ ಇಲ್ಲ. ‘ಇಷ್ಟು ಪ್ರೀತಿಸುವ ಗುರುಗಳಿಗೆ ಕಾಣಿಕೆಯನ್ನು ಕೊಡದೆ ನಾನು ಹೋಗಬಹುದೆ ? ಆದರೆ ಗೌತಮ ಮುನಿಗಳು ಅದನ್ನು ಸ್ವೀಕರಿಸಲು ಒಪ್ಪುವುದಿಲ್ಲ. ಏನು ಮಾಡಲಿ?’ ಎಂದು ಆಲೋಚಿಸುತ್ತಲೇ ಇದ್ದನು. ‘ಇರಲಿ; ಗುರುಪತ್ನಿಯನ್ನು ಕೇಳಿ ನೋಡುವೆನು.  ಅವಳು ಒಪ್ಪಿದರೆ ಸಾಕು. ನನ್ನ ಇಷ್ಟ ನೆರವೇರಿದಂತೆಯೇ’ ಎಂದುಕೊಂಡು ಅತ್ತೆಯಾದ ಅಹಲ್ಯೆಯನ್ನು ಕಂಡು ಹೀಗೆಂದನು: “ಅಮ್ಮ, ನಾನು ಗುರುದಕ್ಷಿಣೆಯನ್ನು ಒಪ್ಪಿಸಬೇಕೆಂದಿದ್ದೇನೆ. ಅದು ಎಷ್ಟು ದುರ್ಲಭವಾಗಿದ್ದರೂ ನಾನು ತರಬಲ್ಲೆ. ನಿಮ್ಮ ಆಶೀರ್ವಾದದಿಂದ ಅಂತಹ ತಪೋಬಲ ನನಗಿದೆ.”

ಅದಕ್ಕೆ ಅಹಲ್ಯೆ, “ವತ್ಸ, ಭಕ್ತಿಯಿಂದ ನಮ್ಮ ಸೇವೆ ಮಾಡಿದ್ದೀಯೆ. ನೀನು ಇದುವರೆಗೆ ಮಾಡಿದ ಸೇವೆಯೇ ಸಾಕು. ನಮಗೆ ಸಂತೋಷವಾಗಿದೆ. ನೀನು ಏನನ್ನೂ ಕೊಡಬೇಕಾಗಿಲ್ಲ”  ಎಂದಳು.

ಉತ್ತಂಕನು, “ಏನನ್ನಾದರೂ ಕೊಡದೆ ಹೋಗಲು ನನಗೆ ಮನಸ್ಸಾಗದು. ಏನು ಬೇಕೆಂದು ಹೇಳಬೇಕು” ಎಂದು ಒತ್ತಾಯಪಡಿಸಿದನು.

ಕಡೆಗೆ ನಿರ್ವಾಹವಿಲ್ಲದೆ ಅಹಲ್ಯೆ, “ಉತ್ತಂಕ, ಸೌದಾಸನೆಂಬ ರಾಜನ ಹೆಂಡತಿಯ ಬಳಿ ರತ್ನ ಖಚಿತವಾದ ಕುಂಡಲಗಳಿವೆ, ಅವು ದಿವ್ಯವಾದ ಕಿವಿಯ ಓಲೆಗಳು. ಸಾಧ್ಯವಾದರೆ ಅವನ್ನು ತಂದುಕೊಡು” ಎಂದಳು. ಉತ್ತಂಕನಿಗೆ ಸಂತೋಷವಾಯಿತು. ಅವನು ಈ ವಿಷಯವನ್ನು ತನ್ನ ಹೆಂಡತಿಗೆ ತಿಳಿಸಿ ಓಲೆಯನ್ನು ತರಲು ಆಶ್ರಮದಿಂದ ಹೊರಟುಹೋದನು.

ಗೌತಮರಿಗೆ ಉತ್ತಂಕನು ಆಶ್ರಮದಲ್ಲಿ ಕಾಣಿಸಲಿಲ್ಲ. ಅವರು ಅಹಲ್ಯೆಯನ್ನು ಕುರಿತು, “ಉತ್ತಂಕನು ಎಲ್ಲಿ?” ಎಂದು ಕೇಳಿದರು. ಅಹಲ್ಯೆ ನಡೆದ ವೃತ್ತಾಂತವನ್ನು ತಿಳಿಸಿದಳು. ಗೌತಮರು, “ಅಹಲ್ಯೆ, ಆ ಓಲೆಗಳಿಗೆ ನೀನು ಆಸೆ ಪಟ್ಟಿದ್ದು ಸರಿಯಲ್ಲ. ಉತ್ತಂಕನನ್ನು ಕಳಿಸಬಾರದಾಗಿತ್ತು. ಸೌದಾಸನು ಒಬ್ಬ ಋಷಿಯ ಶಾಪದಿಂದ ಈಗ ರಾಕ್ಷಸನಾಗಿದ್ದಾನೆ. ಮನುಷ್ಯರನ್ನು ಕಂಡರೆ ತಿಂದುಬಿಡುತ್ತಾನೆ” ಎಂದು ಕಳವಳಿಸಿದರು. ಎಲ್ಲರಿಗೂ ಭಯವಾಯಿತು. ಬೇರೆ ದಾರಿ ಕಾಣದೆ ‘ಉತ್ತಂಕನಿಗೆ ಶುಭವಾಗಲಿ’ ಎಂದು ಗೌತಮರು ಮನಸ್ಸಿನಲ್ಲೇ ಹರಸಿದರು.

ಉತ್ತಂಕನ ಸಾಹಸ

ಸೌದಾಸನು ರಾಕ್ಷಸನಾಗಿ ಕಾಡಿನಲ್ಲಿ ಅಲೆಯುತ್ತಿರುವುದು ಉತ್ತಂಕನಿಗೆ ತಿಳಿಯಿತು. ಅವನು ಧೈರ್ಯದಿಂದ ಅಲ್ಲಿಗೆ ಹೋದನು. ಸೌದಾಸನು ರಾಕ್ಷಸನಾಗಿ ಯಮನಂತೆ ಘೋರ ರೂಪದಲ್ಲಿರುವುದು ಕಾಣಿಸಿತು. ಅವನು ಉತ್ತಂಕನನ್ನು ಕಂಡೊಡನೆ ಅವನನ್ನು ಹಿಡಿಯಲು ರಭಸದಿಂದ ಒಡುತ್ತ ಬಂದನು. ಉತ್ತಂಕನು ಹೆದರಲಿಲ್ಲ. ಅವನು ಧೈರ್ಯದಿಂದ, “ಮಹಾರಾಜ, ನೀನು ಕ್ಷತ್ರಿಯ ಧರ್ಮವನ್ನು ಬಲ್ಲವನು. ಸ್ವಲ್ಪ ತಡೆ. ನಾನು ಗೌತಮ ಮುನಿಗಳ ಶಿಷ್ಯ. ಗುರುದಕ್ಷಿಣೆಯನ್ನು ತರಲು ಹೊರಟಿದ್ದೇನೆ. ಗುರುಸೇವೆಯಲ್ಲಿ ತೊಡಗಿರುವ ಶಿಷ್ಯನನ್ನು ಹಿಂಸಿಸುವುದು ನಿನಗೆ ತರವಲ್ಲ”  ಎಂದನು. ಸೌದಾಸನು, “ಅದೆಲ್ಲ ನನಗೆ ಬೇಡ. ನನಗೆ ಹಸಿವಾಗಿದೆ. ಹಸಿದ ವೇಳೆಯಲ್ಲಿ ಸಿಕ್ಕಿದವನನ್ನು ತಿಂದುಬಿಡುವುದು ನನ್ನ ಸ್ವಭಾವ” ಎಂದು ಹೇಳಿದನು.

ಉತ್ತಂಕ: ಮಹಾರಾಜ, ಗುರುವಿಗಾಗಿ ಒಂದು ವಸ್ತುವನ್ನು ಬೇಡಲು ನಿನ್ನ ಹತ್ತಿರ ಬಂದಿದ್ದೇನೆ. ಅದನ್ನು ಕೊಡು.  ಅದು ನಾನು ಕೊಡಬೇಕಾದ ಗುರುದಕ್ಷಿಣೆ. ಅದನ್ನು ಅವರಿಗೆ ಒಪ್ಪಿಸಿ, ಮರಳಿ ನಿನ್ನ ಬಳಿಗೆ ಬರುತ್ತೇನೆ. ತಡವೇನೂ ಆಗದು. ಆಗ ನನ್ನನ್ನು ನೀನು ತಿನ್ನಬಹುದು. ನಾನು ಸುಳ್ಳು ಹೇಳತಕ್ಕವನಲ್ಲ.

ಸೌದಾಸ: ಒಳ್ಳೆಯದು ನಿನಗೆ ಏನು ಬೇಕು? ಕೊಡುತ್ತೇನೆ .

ಉತ್ತಂಕ: ಎಲೈ ಬ್ರಾಹ್ಮಣ, ಓಲೆಯನ್ನು ಕೇಳುವುದು ಸರಿಯಲ್ಲ. ಅದು ನನ್ನ ಹೆಂಡತಿಗೆ ಬಹಳ ಪ್ರಿಯವಾದ ವಸ್ತು. ಅದನ್ನು ಬಿಟ್ಟು ಇನ್ನು ಏನನ್ನಾದರೂ ಕೇಳು.

ಉತ್ತಂಕ: ಮಹಾರಾಜ, ನನಗೆ ಬೇಕಾದದ್ದು ಓಲೆಯೇ. ಅದನ್ನೇ ನಾನು ಗುರುಪತ್ನಿಗೆ ಕೊಡಬೇಕಾಗಿದೆ. ಇನ್ನು ಯಾವುದೂ ಬೇಡ. ನಿನ್ನ ಮಾತನ್ನು ಉಳಿಸಿಕೊ. ಅದನ್ನು ಕೊಡು.

ಸೌದಾಸ: ಒಳ್ಳೆಯದು ನನ್ನ ಹೆಂಡತಿ ಮದಯಂತಿ. ಹೋಗಿ ಅವಳನ್ನು ಕೇಳು. ಕೊಡುತ್ತಾಳೆ. ನಾನು ಹೇಳಿದೆನೆಂದು ತಿಳಿಸು.

ಉತ್ತಂಕನು ಮದಯಂತಿಯ ಬಳಿಗೆ ಹೋದನು. “ತಾಯಿ, ನಾನು ಗೌತಮ ಮುನಿಗಳ ಶಿಷ್ಯ. ಗುರುಪತ್ನಿಗಾಗಿ ನಿನ್ನ ದಿವ್ಯ ಕುಂಡಲಗಳನ್ನು ಬೇಡಲು ಬಂದಿದ್ದೇನೆ. ನಿನ್ನ ಪತಿಯಾದ ಸೌದಾಸನಿಗೆ ನನ್ನ ಪ್ರಾರ್ಥನೆಯನ್ನು ತಿಳಿಸಿದೆ. ಅವನ್ನು ಕೊಡಬೇಕೆಂದು ಆತನು ಹೇಳಿಕಳಿಸಿದ್ದಾನೆ” ಎಂದು ತಿಳಿಸಿದನು. ಆಗ ಮದಯಂತಿ, “ಎಲೈ ತಪಸ್ವಿ, ಈ ಓಲೆಗಳಲ್ಲಿ ನನಗೆ ತುಂಬ ಆಸೆ ಇದೆ. ಆದರೆ ನನ್ನ ಪತಿ ಹೇಳಿಕಳಿಸಿದ್ದಾನೆಂದು ನುಡಿಯುತ್ತೀಯೆ. ಆತನ ಮಾತನ್ನು ನಾನು ಮೀರಲಾರೆ. ನೀನು ಹೇಳುವುದು ಸತ್ಯವಿರಬಹುದು. ಆದರೂ ಓಲೆಗಳನ್ನು ಕೊಡುವಂತೆ ನನ್ನ ಪತಿ ಹೇಳಿದ್ದಾನೆಂಬುದಕ್ಕೆ ಒಂದು ಗುರುತು ತಂದುಕೊಡು” ಎಂದಳು. ಉತ್ತಂಕನು ತಿರುಗಿ ಸೌದಾಸನ ಬಳಿಗೆ ಹೋಗಿ ಮದಯಂತಿಯ ಮಾತನ್ನು ತಿಳಿಸಿದನು.

ಸೌದಾಸ: ಇದೇ ನಾನು ಹೇಳಿದ್ದೇನೆಂಬುದಕ್ಕೆ ಗುರುತು – “ಈ ದಾರಿ ಸರಿಯಲ್ಲ, ಆದರೆ ಬೇರೆ ದಾರಿ ಇಲ್ಲ!” ಈ ಮಾತನ್ನು ಅವಳಿಗೆ ತಿಳಿಸು. ಓಲೆಯನ್ನು ಕೊಡುತ್ತಾಳೆ.

ಉತ್ತಂಕನು ಮದಯಂತಿಯ ಸಮೀಪಕ್ಕೆ ಹೋಗಿ ಸೌದಾಸನು ಹೇಳಿದ ಸಂಕೇತದ ಮಾತನ್ನು ತಿಳಿಸಿದನು. ಮದಯಂತಿಗೆ ನಂಬಿಕೆಯಾಯಿತು. ಅವಳು ಓಲೆಗಳನ್ನು ಕೊಟ್ಟು, “ಎಲೈ, ಋಷಿಕುಮಾರ, ಈ ಓಲೆಗಳಿಗೆ ಸಮವಾದ ವಸ್ತು ಇನ್ನೊಂದಿಲ್ಲ. ದೇವತೆಗಳೂ, ನಾಗರೂ ಇವುಗಳ ಮೇಲೆ ಕಣ್ಣಿಟ್ಟಿದ್ದಾರೆ. ಇವನ್ನು ಯಾವ ಸಂದರ್ಭದಲ್ಲಿಯೂ ನೆಲದ ಮೇಲೆ ಇಡಬಾರದು. ಇಟ್ಟರೆ ಅವರು ಅಪಹರಿಸಿಬಿಡುತ್ತಾರೆ” ಎಂದು ಎಚ್ಚರಿಸಿದಳು.

ಉತ್ತಂಕನು ಅವನ್ನು ಜೋಪಾನವಾಗಿ ಇರಿಸಿಕೊಂಡು ಮತ್ತೆ ಹೋಗಿ ಸೌದಾಸನನ್ನು ಕಂಡನು. “ಮಹಾರಾಜ, ನಿನ್ನ ಔದಾರ್ಯ ಆಶ್ಚರ್ಯಕರವಾದುದು. ಇಷ್ಟು ಉದಾರಿಯಾದ ನಿನಗೆ ಈ ರಾಕ್ಷಸ ರೂಪ ಏಕೆ ಬಂದಿತು? ‘ಈ ದಾರಿ ಸರಿಯಲ್ಲ, ಆದರೆ ಬೇರೆ ದಾರಿ ಇಲ್ಲ! ಎಂದು ಹೇಳಿದೆಯಲ್ಲ, ಅದರ ಗುಟ್ಟೇನು?” ಎಂದು ಕೇಳಿದನು. ಸೌದಾಸನು ನಿಟ್ಟುಸಿರು ಬಿಡುತ್ತ, “ಎಲೈ ತಪಸ್ವಿ, ನಾನು ರಾಜನಾಗಿದ್ದಾಗ ವಸಿಷ್ಠ ಮುನಿಗಳ ಮಗನಾದ ಶಕ್ತಿ ಎಂಬ ಋಷಿಗೆ ಅವಮಾನ ಮಾಡಿದೆ. ಆತನು ಕೋಪದಿಂದ ಹೀಗೆ ಶಪಿಸಿದನು. ನಾನು ರಾಕ್ಷಸನಾದೆ. ನನಗೆ ಸದ್ಗತಿ ಇಲ್ಲ. ಈ ದಾರಿ ಸರಿಯಲ್ಲ, ಆದರೆ ಬೇರೆ ದಾರಿ ಇಲ್ಲ. ಅನುಭವಿಸಬೇಕಾಗಿದೆ” ಎಂದನು.

ಉತ್ತಂಕ: ಮಹಾರಾಜ, ನನಗೆ ಬೇಕಾದ ಓಲೆಯನ್ನು ಕೊಡಿಸಿದೆ. ನಿನ್ನ ವೃತ್ತಾಂತವನ್ನು ಹೇಳಿದೆ. ನನ್ನಲ್ಲಿ ಸ್ನೇಹವನ್ನು ತೋರಿ ಸ್ನೇಹಿತನಾಗಿರುವೆ. ನಾನೂ ಸಹ ಸ್ನೇಹಿತನಿಗೆ ಕೊಟ್ಟ ಮಾತನ್ನು ತಪ್ಪಬಾರದು. ಒಂದು ಪ್ರಶ್ನೆ ಕೇಳುತ್ತೇನೆ. ಓಲೆಗಳನ್ನು ಗುರುಪತ್ನಿಗೆ ಕೊಟ್ಟ ಮೇಲೆ ತಿರುಗಿ ನಾನು ಇಲ್ಲಿಗೆ ಬರಬೇಕೆ? ಬೇಡವೆ? ಸ್ನೇಹಿತನಾಗಿ ಉತ್ತರ ಹೇಳು!

ಸೌದಾಸ: ಎಲೈ ತಪಸ್ವಿ, ಉತ್ತರ ಬೇಕಾದರೆ ಹೇಳುತ್ತೇನೆ ಕೇಳು, ನೀನು ಖಂಡಿತ ಬರಕೂಡದು! ಬಂದರೆ ನೀನು ಸಾಯುವುದು ನಿಶ್ಚಯ!

ಉತ್ತಂಕನಿಗೆ ಸೌದಾಸನ ನುಡಿಯನ್ನು ಕೇಳಿ ಅಚ್ಚರಿಯಾಯಿತು. “ಸೌದಾಸ, ನಿನಗೆ ಶುಭವಾಗಲಿ! ನಿನಗೆ ಬಂದ ಶಾಪ ಬೇಗನೆ ಪರಿಹಾರವಾಗಲಿ!” ಎಂದು ಹೇಳಿ ಗೌತಮರ ಆಶ್ರಮಕ್ಕೆ ಹೊರಟನು.

ನಾಗಲೋಕದಲ್ಲಿ

ಅವನು ಓಲೆಗಳನ್ನು ತೆಗೆದುಕೊಂಡು ಕಾಡುದಾರಿಯಲ್ಲಿ ಬರುತ್ತಿದ್ದನು. ಬಹಳ ದಣಿವಾಗಿತ್ತು. ಹಸಿವಾಗಿತ್ತು. ಆಗ ಉತ್ತಂಕನಿಗೆ ಒಂದು ಬಿಲ್ವದ ಮರ ಕಾಣಿಸಿತು. ಮರದಲ್ಲಿ ಬಿಲ್ವದ ಹಣ್ಣುಗಳಿದ್ದವು. ಅವನ್ನು ಕಿತ್ತು ತಿನ್ನಬೇಕೆಂದು ಮನಸ್ಸಾಯಿತು. ಉತ್ತಂಕನು ಓಲೆಗಳನ್ನು ಕೃಷ್ಣಾಜಿನದಲ್ಲಿ ಕಟ್ಟಿ ಬಿಲ್ವಮರದ ಒಂದು ಕೊಂಬೆಗೆ ತೂಗುಹಾಕಿ ಮರವನ್ನು ಹತ್ತಿದನು. ಹಣ್ಣನ್ನು ಕೋಲಿನಿಂದ ಹೊಡೆದು ಬೀಳಿಸುವಾಗ ಅದು ಕೃಷ್ಣಾಜಿನದ ಗಂಟಿನ ಮೇಲೆ ಬಿದ್ದಿತು. ಗಂಟು ಬಿಚ್ಚಿಹೋಯಿತು. ಓಲೆಗಳು ನೆಲದಮೇಲೆ ಬಿದ್ದವು. ಒಡನೆಯೇ ಒಬ್ಬ ನಾಗನು ಸರ್ಪರೂಪದಲ್ಲಿ ಬಂದು, ಓಲೆಗಳನ್ನು ಕಚ್ಚಿಕೊಂಡು ಹುತ್ತದ ಬಿಲವನ್ನು ಹೊಕ್ಕನು. ಅಲ್ಲಿಂದ ಪಾತಾಳಲೋಕಕ್ಕೆ ಹೊರಟುಹೋದನು. ಉತ್ತಂಕನು ಓಲೆಗಳನ್ನು ತರುತ್ತಿದ್ದಾನೆಂದು ಗೊತ್ತಾಗಿ ಆ ನಾಗನು ಅವನನ್ನು ಹಿಂಬಾಲಿಸಿ ಗುಟ್ಟಾಗಿ ಬಂದಿದ್ದನು.

ಉತ್ತಂಕನಿಗೆ ಬಹಳ ದುಃಖವಾಯಿತು. ಹಾಗೆಯೇ ಕೋಪವೂ ಉಕ್ಕಿ ಬಂದಿತು. ಒಂದು ದೊಣ್ಣೆಯನ್ನು ತೆಗೆದುಕೊಂಡು ಹುತ್ತವನ್ನು ಬಡಿಯಲಾರಂಭಿಸಿದನು. ಆಗ ದೇವೇಂದ್ರನು ಬ್ರಾಹ್ಮಣ ವೇಷದಿಂದ ಬಂದು, “ಅಯ್ಯೋ,, ಇದೇನು ನೀನು ಮಾಡುತ್ತಿರುವುದು?” ಎಂದು ಕೇಳಿದನು. ಉತ್ತಂಕನು ನಡೆದ ಸಂಗತಿಯನ್ನು ತಿಳಿಸಲಾಗಿ ಇಂದ್ರನು, “ಉತ್ತಮಕ, ಒಂದು ನಾಗವು ಓಲೆಗಳನ್ನು ಪಾತಾಳಲೋಕಕ್ಕೆ ತೆಗೆದುಕೊಂಡು ಹೋಗಿದೆ. ಅವನ್ನು ತರಲು ನಿನಗೆ ಸಾಧ್ಯವೆ? ಈ ಪ್ರಯತ್ನವನ್ನು ಕೈಬಿಡು” ಎಂದನು. ಉತ್ತಂಕನು, “ಇಲ್ಲ, ಪ್ರಯತ್ನಿಸಿಯೇ ತೀರುವೆನು. ಗುರುಪತ್ನಿಗೆ ಕೊಟ್ಟ ಮಾತನ್ನು ನಡೆಸಲೇಬೇಕು. ಓಲೆ ಸಿಗದಿದ್ದರೆ ಪ್ರಾಣವನ್ನಾದರೂ ಬಿಡುವೆನು” ಎಂದು ನಿಶ್ಚಯದಿಂದ ಹೇಳಿದನು.

ಅವನ ಗುರುಭಕ್ತಿಗೆ ಮೆಚ್ಚಿ ಇಂದ್ರನು ಉತ್ತಂಕನನ್ನು ಪಾತಾಳಕ್ಕೆ ಕರೆದೊಯ್ದನು. ಅಲ್ಲಿ ಅಗ್ನಿದೇವನು ಪ್ರತ್ಯಕ್ಷನಾಗಿ, “ಉತ್ತಂಕ, ನಾನು ನಿನ್ನ ಗುರುವಿನ ಗುರು. ಗುರುಕುಲದಲ್ಲಿ ನೀನೂ ಗೌತಮನೂ ಹವಿಸ್ಸನ್ನು ಕೊಟ್ಟು ನನ್ನನ್ನು ಸೇವಿಸಿದ್ದೀರಿ. ನಿನಗೆ ಏನಾಗಬೇಕು? ಹೇಳು” ಎಂದು ಕೇಳಿದನು. ಉತ್ತಂಕನು ಓಲೆಗಳ ವಿಷಯವನ್ನು ತಿಳಿಸಿದನು. ಅಗ್ನಿದೇವನಿಗೆ ನಾಗರು ಹೆದರಿದರು. ಓಲೆಗಳನ್ನು ಅಪಹರಿಸಿ ತಂದ ನಾಗನಿಂದ ಅವನ್ನು ಉತ್ತಂಕನಿಗೆ ಕೊಡಿಸಿದರು.

ಉತ್ತಂಕನಿಗೆ ಇನ್ನಿಲ್ಲದಷ್ಟು ಸಂತೋಷವಾಯಿತು. ಆಶ್ರಮಕ್ಕೆ ಹಿಂದಿರುಗಿ ಆ ಓಲೆಗಳನ್ನು ಅಹಲ್ಯೆಗೆ ಒಪ್ಪಿಸಿದನು. ಉತ್ತಂಕನು ಕ್ಷೇಮದಿಂದ ಬಂದುದನ್ನು ಕಂಡು ಎಲ್ಲರೂ ಆನಂದಿಸಿದರು.

ಇತ್ತಲಾಗಿ ಸೌದಾಸನಿಗೆ ಉತ್ತಂಕನು ಹೇಳಿದಂತೆಯೇ ಆಯಿತು. ವಸಿಷ್ಟ ಮುನಿಗಳ ಅನುಗ್ರಹದಿಂದ ಅವನ ಶಾಪವು ನೀಗಿ ರಾಕ್ಷಸ ರೂಪ ಹೋಯಿತು.

ತಾಯಿ, ಜನರ ಕಷ್ಟವನ್ನು ಪರಿಹರಿಸು

ಗೌತಮ ಮುನಿಗಳ ಗುರುಕುಲ ಯಥಾಪ್ರಕಾರ ನಡೆಯುತ್ತಿತ್ತು. ಒಂದು ಸಲ ದೇಶದಲ್ಲಿ ಘೋರವಾದ ಬರಗಾಲ ಬಂದಿತು. ಮಳೆ ಇಲ್ಲ; ಬೆಳೆ ಇಲ್ಲ. ಹೊಟ್ಟೆಗಿಲ್ಲದೆ ಜನರಲ್ಲಿ ಹಾಹಾಕಾರವೆದ್ದಿತು. ಏನು ಮಾಡಬೇಕೆಂದು ತೋರದೆ ಜನರು ಕಂಗಾಲಾದರು. ಗುರುಕುಲದಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರದ ಕೊರತೆಯಾಗದಂತೆ ಗೌತಮರು ಬಹಳ ಕಷ್ಟಪಟ್ಟರು. ಶ್ರಮದಿಂದ ಆಹಾರವನ್ನು ಒದಗಿಸುತ್ತಲೇ ಇದ್ದರು. ಹಸಿವಿನಿಂದ ಬಳಲಿದ ಪ್ರಜೆಗಳು ಗೌತಮ ಮುನಿಗಳ ಆಶ್ರಮಕ್ಕೆ ಬರತೊಡಗಿದರು. ಮುನಿಗಳು ಕರುಣೆಯಿಂದ ಅವರಿಗೆ ಆಶ್ರಯವನ್ನಿತ್ತರು. ಊಟವಿಲ್ಲವೆನ್ನಲು ಗೌತಮರಿಗೆ ಮನಸ್ಸು ಬರಲಿಲ್ಲ. ದೇಶದ ನಾನಾ ಭಾಗಗಳಿಂದ ಬರುವ ಅನಾಥರ ಸಂಖ್ಯೆ ದಿನದಿನಕ್ಕೂ ಹೆಚ್ಚಿತು. ಅವರೆಲ್ಲರಿಗೂ ಆಹಾರವನ್ನೊದಗಿಸುವುದು ಹೇಗೆ? ಹಸಿದವರಿಗೆ ಊಟವಿಲ್ಲವೆಂದು ಹೇಳುವುದಾದರೂ ಹೇಗೆ?
ಗೌತಮರು ಗಾಯತ್ರೀದೇವಿಯನ್ನು ಭಕ್ತಿಯಿಂದ ಉಪಾಸನೆ ಮಾಡುತ್ತಿದ್ದರು. ಆ ಕಷ್ಟಕಾಲದಲ್ಲಿ ಗಾಯತ್ರಿಗೆ ಶರಣು ಹೋದರು. “ತಾಯಿ, ದೇಶದಲ್ಲಿ ಭೀಕರವಾದ ಬರಗಾಲ ಬಂದಿದೆ. ಜನರು ಹೊಟ್ಟೆಗಿಲ್ಲದೆ ಇಲ್ಲಿಗೆ ಬರುತ್ತಿದ್ದಾರೆ. ಅವರಿಗೆ ಅನ್ನವನ್ನು ಹಾಕಲು ನನಗೆ ಶಕ್ತಿ ಇಲ್ಲ. ಅವರನ್ನು ಹೊರಗೆ ಕಳಿಸಲು ನನಗೆ ಮನಸ್ಸಾಗದು. ಹೊರಗಡೆಯಾದರೂ ಆ ಜನರಿಗೆ ಆಹಾರವೆಲ್ಲಿ ದೊರಕುತ್ತದೆ? ನಿನ್ನನ್ನು ಮೊರೆಹೊಕ್ಕಿದ್ದೇನೆ. ಈ ಜನರ ಕಷ್ಟವನ್ನು ಪರಿಹರಿಸು. ನೀನೇ ನಮ್ಮನ್ನು ಪಾರುಗಾಣಿಸಬೇಕು” ಎಂದು ಪ್ರಾರ್ಥಿಸಿದರು. ಗಾಯತ್ರಿಯನ್ನು ಧ್ಯಾನಿಸುತ್ತಾ ತಪಸ್ಸಿನಲ್ಲಿ ನಿರತರಾದರು. ಅವರ ಭಕ್ತಿಗೂ ಹಸಿದ ಜನರಲ್ಲಿದ್ದ ಅವರ ವಾತ್ಸಲ್ಯಕ್ಕೂ ಮೆಚ್ಚಿ ಗಾಯತ್ರಿಯು ಪ್ರತ್ಯಕ್ಷಳಾಗಿ, ಗೌತಮರಿಗೆ ಒಂದು ಅಕ್ಷಯಪಾತ್ರೆಯನ್ನಿತ್ತಳು. ಆ ಪಾತ್ರೆಯಿಂದ ಎಷ್ಟು ಅನ್ನವನ್ನು ಬಡಿಸಿದರೂ ಅನ್ನ ಇದ್ದೇ ಇರುತ್ತಿತ್ತು. ಈ ಅಕ್ಷಯಪಾತ್ರೆಯನ್ನು ಕಂಡು ಗೌತಮರಿಗೆ ಆನಂದವಾಯಿತು. ಬಂದ ಜನರೆಲ್ಲರಿಗೂ ಅದರಿಂದ ಅನ್ನವನ್ನು ಬಡಿಸಿ ಹೊಟ್ಟೆತುಂಬ ಊಟ ಮಾಡಿಸಲು ಸಾಧ್ಯವಾಯಿತು. ಹನ್ನೆರಡು ವರ್ಷಗಳವರೆಗೆ ಬರಗಾಲವಿತ್ತು. ಅದು ಕಳೆದು ದೇಶದಲ್ಲಿ ಸುಭಿಕ್ಷ ನೆಲೆಸುವವರೆಗೂ ಗೌತಮರು ಜನರಿಗೆ ಆಹಾರವನ್ನಿತ್ತು ಸಲಹಿದರು.

ಗೌತಮ ಮಹರ್ಷಿಗಳು ಆಗಾಗ ದೇಶಸಂಚಾರಕ್ಕೆ ಹೊರಡುತ್ತಿದ್ದರು. ಜನರ ಪರಿಸ್ಥಿತಿಯನ್ನು ಅರಿತು ಅವರಿಗೆ ಸೂಕ್ತವಾದ ಸಲಹೆಯನ್ನು ಕೊಡುವುದು, ಹಿತವನ್ನು ಬೋಧಿಸುವುದು, ಕಷ್ಟದಲ್ಲಿರತಕ್ಕವರಿಗೆ ಧೈರ್ಯ ಹೇಳುವುದು, ಹಿಂಸಾ ಮಾರ್ಗವನ್ನು ಬಿಡುವಂತೆ ಸೂಚಿಸುವುದು – ಇವೆಲ್ಲವೂ ಅವರ ದೇಶಸಂಚಾರದ ಉದ್ದೇಶಗಳಾಗಿದ್ದವು. ಆ ಸಮಯದಲ್ಲಿ ಕೆಲವು ವಿಚಿತ್ರ ಘಟನೆಗಳೂ ನಡೆಯುತ್ತಿದ್ದವು. ಅಂಥ ಘಟನೆಗಳಲ್ಲಿ ಒಂದನ್ನು ಇಲ್ಲಿ ಬರೆದಿದೆ.

ವೃಷಾದರ್ಭಿ

ದೇಶದಲ್ಲಿ ಹನ್ನೆರಡು ವರ್ಷ ಬರಗಾಲ ಬಂದಿತ್ತೆಂದು ಹಿಂದೆ ತಿಳಿಸಿದೆಯಷ್ಟೆ. ಆ ಸಮಯದಲ್ಲಿ ಒಮ್ಮೆ ದೇಶದ ಪರಿಸ್ಥಿತಿ ಹೇಗಿದೆಯೆಂದು ನೋಡಿ ತಿಳಿಯುವುದಕ್ಕಾಗಿ ಗೌತಮರು ದೇಶಸಂಚಾರವನ್ನು ಕೈಗೊಂಡರು . ಅವರೊಡನೆ ಅತ್ರಿ, ಭರದ್ವಾಜ ಮೊದಲಾದ ಇತರ ಆರು ಮಂದಿ ಋಷಿಗಳೂ ಸೇರಿದರು. ಸಪ್ತರ್ಷಿಗಳು ಕಾಲ್ನಡಿಗೆಯಿಂದ ಸಂಚರಿಸುತ್ತ ಹೊರಟರು.

ಎಲ್ಲೆಡೆಯೂ ಆಹಾರದ ಕೊರತೆ. ಋಷಿಗಳು ಎಷ್ಟೋ ದಿನ ಉಪವಾಸವಿರಬೇಕಾಗುತ್ತಿತ್ತು. ಆದರೂ ಧೈರ್ಯಗೆಡದೆ ಜನರಲ್ಲಿ ಉತ್ಸಾಹವನ್ನು ತುಂಬುತ್ತ, ನೀತಿಯನ್ನು ಬೋಧಿಸುತ್ತ ಸಂಚರಿಸುತ್ತಿದ್ದರು. ದಾರಿಯಲ್ಲಿ ವೃಷಾದರ್ಭಿ ಎಂಬ ರಾಜನ ಪಟ್ಟಣ ಸಿಕ್ಕಿತು. ಆ ರಾಜನು ಪ್ರಜೆಗಳನ್ನು ಒತ್ತಾಯಪಡಿಸಿ ಧನಧಾನ್ಯಗಳನ್ನು ಸಂಗ್ರಹಿಸಿದ್ದನು. ತನಗೆ ಸಮಾನರಿಲ್ಲವೆಂಬ ಅಹಂಕಾರ ಅವನಲ್ಲಿ ತುಂಬಿತ್ತು. ಪ್ರಜೆಗಳು ಹೊಟ್ಟೆಗಿಲ್ಲದೆ ಕಷ್ಟಪಡುತ್ತಿದ್ದರೂ ಅವರಿಗೆ ಸಹಾಯವನ್ನು ಮಾಡುತ್ತಿರಲಿಲ್ಲ. ಋಷಿಗಳು ಬಂದಿದ್ದಾರೆಂದು ವೃಷಾದರ್ಭಿಗೆ ತಿಳಿಯಿತು. ತಾನು ಒಳ್ಳೆಯವನೆಂದೂ ಧರ್ಮಿಷ್ಠನೆಂದೂ ತೋರಿಸಿಕೊಳ್ಳುವುದಕ್ಕಾಗಿ, ಅವನು ಈ ಋಷಿಗಳ ಬಳಿಗೆ ಹೋದನು. ಅವರನ್ನು ಕುರಿತು “ಋಷಿಗಳೆ, ನಿಮಗೆ ಏನು ಬೇಕು? ಹೊಟ್ಟೆಗಿಲ್ಲದೆ ನಿಮ್ಮ ದೇಹವು ಕ್ಷೀಣಿಸಿದೆ. ಅಕ್ಕಿ, ಹಾಲು, ಮೊಸರು ಎಲ್ಲವೂ ನನ್ನಲ್ಲಿವೆ. ಯಥೇಷ್ಟವಾಗಿ ತಿನ್ನಿರಿ. ಹಸುಗಳು ಬೇಕೆ? ಹಣ ಬೇಕೆ? ಏನನ್ನಾದರೂ ಕೇಳಿಕೊಳ್ಳಿರಿ ಕೊಡುತ್ತೇನೆ”  ಎಂದನು.

ಪ್ರಜೆಗಳಿಗಿಲ್ಲದ್ದು ನಮಗೇಕೆ?’

ಋಷಿಗಳಿಗೆ ಅನ್ನಿಸಿತು, ‘ಈ ರಾಜ ಎಷ್ಟು ಅಹಂಕಾರಿ! ಜನರು ಹಸಿವಿನಿಂದ ಕಂಗೆಟ್ಟಿರುವಾಗ ಅವರಿಗೆ ಏನನ್ನೂ ಕೊಡುತ್ತಿಲ್ಲ. ಅರಮನೆಯಲ್ಲಿ ಎಲ್ಲವನ್ನೂ ತುಂಬಿಕೊಂಡಿದ್ದಾನೆ. ಯಾರಿಗೂ ಇಲ್ಲದ್ದು ನಮಗೇಕೆ? ನಾವೇನು ಈತನನ್ನು ಬೇಡಿಕೊಂಡೆವೆ?’ ಎಂದು.

ಗೌತಮ ಮುನಿಗಳು ಹೇಳಿದರು: “ರಾಜ, ಪ್ರಜೆಗಳಿಗಿಲ್ಲದ್ದು ನಮಗೇಕೆ? ಅಂತಹ ಆಹಾರ ಜೇನುತುಪ್ಪವಾದರೂ ನಮಗೆ ವಿಷ. ಜನರಿಗಿಲ್ಲದ ಹಣ ಬೆಂಕಿಯ ಕಣ. ನಮಗೇನೂ ಬೇಡ. ಅವನ್ನು ಹೊಟ್ಟೆಗಿಲ್ಲದ ಬಡವರಿಗೆ ಕೊಡು” ಎಂದರು. ಋಷಿಗಳೆಲ್ಲರೂ ಮುಂದಕ್ಕೆ ಹೊರಟರು.

ವೃಷಾದರ್ಭಿಗೆ ಅವಮಾನವಾಯಿತು. ‘ರಾಜನಾದ ನನಗೆ ಈ ಬಡ ಮುನಿಗಳು ಬುದ್ಧಿ ಹೇಳುತ್ತಾರೆ!’ ಎಂದುಕೊಂಡು ತನ್ನ ಮಂತ್ರಿಗಳನ್ನು ಕರೆಸಿ ಆಲೋಚಿಸಿದನು. ‘ಹೇಗಾದರೂ ಮಾಡಿ ಆಹಾರ ಪದಾರ್ಥವೂ ಹಣವೂ ಈ ಋಷಿಗಳ ಕೈ ಸೇರುವಂತೆ ಮಾಡಬೇಕು. ಆಗ ಇವರ ಅಹಂಕಾರ ಮುರಿಯುತ್ತದೆ’ ಎಂದು ಅವನ ಹಠ. ಮಂತ್ರಿಗಳಿಗೆ ಒಂದು ಯುಕ್ತಿ ಹೊಳೆಯಿತು. ಅತ್ತಿ ಹಣ್ಣುಗಳೊಳಗೆ ರತ್ನಗಳನ್ನು ಉಪಾಯವಾಗಿ ತೂರಿಸಿದರು. ಅವನ್ನು ತಾವೇ ಋಷಿಗಳ ಬಳಿಗೆ ತೆಗೆದುಕೊಂಡು ಹೋಗಿ, “ಪೂಜ್ಯರೆ, ನಮ್ಮ ರಾಜ್ಯಕ್ಕೆ ಬಂದು ನೀವು ಉಪವಾಸವಾಗಿ ಹೋಗಬಾರದು. ಮಹಾರಾಜನಾದ ವೃಷಾದರ್ಭಿಗೆ ಇದರಿಂದ ಬಹಳ ವ್ಯಥೆಯಾಗುತ್ತದೆ. ಈ ಹಣ್ಣುಗಳನ್ನಾದರೂ ಸ್ವೀಕರಿಸಿ” ಎಂದು ಕೇಳಿಕೊಂಡರು. ಅತ್ರಿ ಮುನಿಗಳು ಹಣ್ಣನ್ನು ಕೈಯಲ್ಲಿ ಹಿಡಿದು, “ಏನಾಶ್ಚರ್ಯ! ಅತ್ತಿ ಹಣ್ಣು ಇಷ್ಟು ಭಾರವಾಗಿರುತ್ತದೆಯೇ?” ಎಂದರು. ಗೌತಮರು, “ಹಾಗಿದ್ದರೆ ಏನೋ ಮೋಸವಿದೆ! ಹಣ್ಣಿನೊಳಗೆ ಭಾರವಾದ ವಸ್ತುವನ್ನು ಸೇರಿಸಿರಬೇಕು. ರಾಜನು ರತ್ನಗಳನ್ನೂ ಚಿನ್ನದ ತುಂಡುಗಳನ್ನೂ ಒಳಗೆ ತೂರಿಸಿದ್ದರೂ ಇರಬಹುದು! ಅದಕ್ಕೆ ನಾವು ಆಸೆಪಡಬಾರದು. ಒಂದು ಸಲ ಮನುಷ್ಯನು ಆಸೆಗೆ ಒಳಪಟ್ಟನೆಂದರೆ ಅದು ಬೆಳೆಯುತ್ತಾ ಹೋಗುತ್ತದೆ. ಮನುಷ್ಯನು ಸಮುದ್ರ ಇದ್ದ ಹಾಗೆ. ಎಷ್ಟು ಹೊಳೆಗಳ ನೀರು ಹರಿದುಬಂದರೂ ಸಮುದ್ರ ತುಂಬುವುದಿಲ್ಲ. ಎಷ್ಟು ಆಸೆ ನೆರವೇರಿದರೂ ಮನುಷ್ಯನಿಗೆ ತೃಪ್ತಿಯಾಗದು!” ಎಂದರು. ಎಲ್ಲ ಋಷಿಗಳು ಗೌತಮರ ಮಾತನ್ನೊಪ್ಪಿದರು. ಹಣ್ಣುಗಳನ್ನು ತೆಗೆದುಕೊಳ್ಳದೆ ಮುಂದಕ್ಕೆ ಹೋದರು.

‘ದ್ರೋಣ, ಯುದ್ಧವನ್ನು ನಿಲ್ಲಿಸು. ಜನರನ್ನು ಕೊಲ್ಲಬೇಡ.’

ಭೂತದ ಪೀಡೆ

 

ಈ ವಿಷಯವನ್ನು ಕೇಳಿ ವೃಷಾದರ್ಭಿಗೆ ಸಿಟ್ಟು ನೆತ್ತಿಗೇರಿತು. ಅವನು ಅಗ್ನಿಯಲ್ಲಿ ಮಂತ್ರಗಳಿಂದ ಹೋಮ ಮಾಡಿದನು. ಒಂದು ಘೋರವಾದ ಭೂತವು ಅಗ್ನಿಯ ಮಧ್ಯದಿಂದ ಎದ್ದು ಬಂದು, “ನಾನು ಏನು ಮಾಡಲಿ?” ಎಂದು ಕೇಳಿತು. ರಾಜನು, “ದೂರದಲ್ಲಿ ಏಳು ಮಂದಿ ಋಷಿಗಳು ಹೋಗುತ್ತಿದ್ದಾರೆ. ಅವರ ಹೆಸರೇನೆಂದು ಕೇಳಿ ತಿಳಿದುಕೊ. ಆಮೇಲೆ ಅವರನ್ನು ಕೊಂದುಹಾಕು!” ಎಂದು ಹೇಳಿ ಕಳಿಸಿದನು. ಭೂತವು ಮುಂದೆ ಹೋಗಿ ಒಂದು ಕೊಳದ ಬಳಿ ಕಾದು ನಿಂತಿತ್ತು. ಕೊಳದಲ್ಲಿದ್ದ ತಾವರೆ ದಂಟುಗಳನ್ನು ತಿಂದು ನೀರು ಕುಡಿಯೋಣವೆಂದು ಸಪ್ತರ್ಷಿಗಳು ಅಲ್ಲಿಗೆ ಬಂದರು. ‘ನಿಮ್ಮ ಹೆಸರೇನು?” ಎಂದು ಭೂತವು ಕೇಳಿತು. ಅದರ ಉದ್ದೇಶ ಋಷಿಗಳಿಗೆ ತಿಳಿಯಿತು. ಗೌತಮರು ಆ ಭೂತಕ್ಕೆ ಅರ್ಥವಾಗದ ಹಾಗೆ ತಮ್ಮ ಹೆಸರನ್ನು ಒಂದು ಶ್ಲೋಕದಲ್ಲಿ ಸೇರಿಸಿ ಹೇಳಿದರು. “ನೀವು ಏನು ಹೇಳುವಿರೋ ನನಗೆ ತಿಳಿಯದು” ಎಂದಿತು ಭೂತ. ಉಳಿದ ಋಷಿಗಳೂ ಅದಕ್ಕೆ ಅರ್ಥವಾಗದಂತೆ ಶ್ಲೋಕಗಳನ್ನು ರಚಿಸಿ ಹೇಳಿದರು. “ನಾನು ಸೋತೆ!” ಎಂದಿತು ಭೂತ. ಈ ವಿಚಾರವನ್ನು ತಿಳಿದ ಇಂದ್ರನು ಅಲ್ಲಿಗೆ ಬಂದು ಆ ಭೂತವನ್ನು ವಜ್ರಾಯುಧದಿಂದ ಅಪ್ಪಳಿಸಿ ಕೊಂದನು.

ದ್ರೋಣ, ಇದು ತರವಲ್ಲ

ಪಾಂಡವರಿಗೂ ಕೌರವರಿಗೂ ಯುದ್ಧ ನಡೆಯುತ್ತಿತ್ತು. ದ್ರೋಣಾಚಾರ್ಯನು ಕೌರವರ ಪಕ್ಷವನ್ನು ವಹಿಸಿದ್ದನು. ಆತನು ಮಹಾ ವೀರ. ಆತನನ್ನು ಗೆಲ್ಲುವುದು ಪಾಂಡವರಿಗೆ ಅಸಾಧ್ಯವೆನಿಸಿತು. ಆತನು ಪ್ರತಿದಿನ ಲಕ್ಷಗಟ್ಟಲೆ ಪಾಂಡವ ಸೈನಿಕರನ್ನು ಕೊಂದು ಹಾಕುತ್ತಿದ್ದನು. ಆಗ ಗೌತಮಮುನಿಗಳು ದ್ರೋಣಾಚಾರ್ಯನನ್ನು ಕಂಡು, ದ್ರೋಣ, ನೀನು ಯುದ್ಧ ಮಾಡಿ, ಈ ರೀತಿಯಲ್ಲಿ  ಜನರನ್ನು ಕೊಲ್ಲುವುದು ತರವಲ್ಲ. ನೀನು ಮಾಡುತ್ತಿರುವುದು ಕ್ರೂರವಾದ ಕೆಲಸ. ಇದಕ್ಕಿಂತ ಹೆಚ್ಚಿನ ಹಿಂಸಾಕೃತ್ಯ ಇನ್ನೊಂದಿಲ್ಲ. ವೇದವೇದಾಂಗಳನ್ನು ಕಲಿತ ವಿದ್ವಾಂಸನಾಗಿದ್ದೀಯೆ. ನಿನ್ನಂತಹವನಿಗೆ ಇದು ಭೂಷಣವಲ್ಲ. ಯುದ್ಧವನ್ನು ನಿಲ್ಲಿಸು. ಜನರನ್ನು ಕೊಲ್ಲಬೇಡ” ಎಂದು ಬೋಧಿಸಿದರು.

ಹೀಗೆ ಸಾವಿರಾರು ಜನರಿಗೆ ಗೌತಮ ಮುನಿಗಳು ಹಿತೋಪದೇಶ ಮಾಡಿದರು. ಕಷ್ಟದಲ್ಲಿರುವವರಿಗೆ ಧೈರ್ಯ ಹೇಳಿದರು. ಗುರುಕುಲವನ್ನು ಸ್ಥಾಪಿಸಿ ಲಕ್ಷಾಂತರ ಮಂದಿ ಶಿಷ್ಯರನ್ನು ವಿದ್ಯಾವಂತರನ್ನಾಗಿ ಮಾಡಿದರು.

ಅಷ್ಟೇ ಅಲ್ಲ. ಅವರು ಹಲವಾರು ಗ್ರಂಥಗಳನ್ನು ರಚಿಸಿದರು. ಗೌತಮ ಸ್ಮೃತಿ’, ‘ಗೌತಮ ಧರ್ಮಸೂತ್ರ’ ಎಂಬುವು ಅವರ ಕೃತಿಗಳು. ಮನುಷ್ಯನು ಎಂಟು ಗುಣಗಳನ್ನು ತನ್ನಲ್ಲಿ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಅವು ಯಾವುವೆಂದರೆ – ಸಕಲ ಪ್ರಾಣಿಗಳಲ್ಲಿಯೂ ದಯೆ, ತಾಳ್ಮೆ, ಹೊಟ್ಟೆಕಿಚ್ಚು ಪಡದಿರುವುದು, ಸ್ವಚ್ಛತೆ, ಒಳ್ಳೆಯ ನಡತೆ, ಹಿರಿಯರು ಹೇಳಿದ್ದನ್ನು ನಡೆಸುವುದು, ಕಷ್ಟಕಾಲದಲ್ಲಿ ಧೈರ್ಯ, ಇನ್ನೊಬ್ಬರ ವಸ್ತುವನ್ನು ಬಯಸದಿರುವುದು. ಇವುಗಳಿಗೆ ಆತ್ಮಗುಣಗಳೆಂದು  ಹೆಸರು. ಗೌತಮ ಮುನಿಗಳು ಹೇಳಿರುವ ಇನ್ನೊಂದು ಹಿತನುಡಿಯೇನೆಂದರೆ, ‘ಕೆಲಸವಿಲ್ಲದೆ ಇನ್ನೊಬ್ಬರ ಮನೆಗೆ ಹೋಗಬಾರದು.’

ಗೌತಮ ಮುನಿಗಳ ಇನ್ನೊಂದು ಮುಖ್ಯವಾದ ಗ್ರಂತ ‘ನ್ಯಾಯಸೂತ್ರ’. ಇದರಲ್ಲಿ ೫ ಅಧ್ಯಾಯಗಳೂ ೫೨೮ ಸೂತ್ರಗಳೂ ಇವೆ. ಇವಕ್ಕೆ ನ್ಯಾಯದರ್ಶನ ಅಥವಾ ತರ್ಕಶಾಸ್ತ್ರ ಎನ್ನುತ್ತಾರೆ. ಗೌತಮ ಮುನಿಗಳ ಹರಿತವಾದ ಬುದ್ಧಿಶಕ್ತಿಯನ್ನಿಲ್ಲಿ ಕಾಣಬಹುದು. ಭಾರತೀಯರು ಹೆಮ್ಮೆ ಪಡಬೇಕಾದ ಗ್ರಂಥ ಇದು.