ಮುಂಬೈಯಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿ ತಬಲಾ ವಾದನದಲ್ಲಿ ಅಪಾರ ಹೆಸರು ಗಳಿಸಿರುವ ಶ್ರೀ ಗೌರಾಂಗ ಕೋಡಿಕಲ್‌ ಅವರು ಕರ್ನಾಟಕದ ಹೆಸರಾಂತ ತಬಲಾ ವಾದಕರಲ್ಲೊಬ್ಬರಾಗಿದ್ದಾರೆ. ೧೯೪೬ರಲ್ಲಿ ಮುಂಬೈಯಲ್ಲಿ ಜನಿಸಿದ ಶ್ರೀ ಗೌರಂಗ್‌ ಕೋಡಿಕಲ್‌ ಅವರು ಪ್ರಾರಂಭದಲ್ಲಿ ತಮ್ಮ ತಂದೆ ತಾಯಿಯವರಿಂದ ಸಂಗೀತ ಕ್ಷೇತ್ರಕ್ಕೆ ಮಾರ್ಗದರ್ಶನ ಪಡೆದರು. ನಂತರ ಮುಂಬೈಯ ಪಂ. ಶಶಿ ಬೆಳ್ಳಾರೆ ಮತ್ತು ಬೆಂಗಳೂರಿನ ಪಂ. ದತ್ತಪ್ಪ ಗರುಡ್‌ ಅವರಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪಡೆದರು. ತಬಲಾ ವಾದನದಲ್ಲಿ ಗೌರಂಗ್‌ ಅವರಿಗೆ ಉನ್ನತ ಶಿಕ್ಷಣ ದೊರೆತದ್ದು ಹೈದ್ರಾಬಾದ್‌ನ ತಬಲಾ ನವಾಜ್‌ ಉಸ್ತಾದ್‌ಶೇಖ್‌ ದಾವೂದ್‌ ಅವರ ಮಾರ್ಗದರ್ಶನದಲ್ಲಿ.

ಬಾಲ್ಯದಲ್ಲಿ ಗುಜರಾತಿನ ಜಮ್‌ ನಗರದಲ್ಲಿ ತಮ್ಮ ಕುಟುಂಬಕ್ಕೆ ನಿಕಟವರ್ತಿಗಳಾಗಿದ್ದ ಅಂದಿನ ಕಾಲದ ಸಂಗೀತ ಕ್ಷೇತ್ರದ ದಿಗ್ಗಜರುಗಳಾದ ರ್ಶರೀಮತಿ ಕೇಸರ್ ಬಾಯಿ ಕೇರ್ಕರ್, ಪಂ. ಪನ್ನಾಲಾಲ್‌-ನಿಖಿಲ್‌ ಘೋಷ್‌, ಉಸ್ತಾದ್‌ ಖಾದಿಂ ಹುಸೇನ್‌, ಲತಾ ವತ್‌ ಹುಸೇನ್‌ ಮತ್ತು ಅಬ್ದುಲ್‌ ಹಲೀಂ ಜಾಫರ್ ಖಾನ್‌ ಮುಂತಾದವರನ್ನು ಬಹಳ ಹತ್ತಿರದಿಂದ ಗಮನಿಸುವ ಅವಕಾಶ ಗೌರಂಗ್‌ ಅವರಿಗೆ ದೊರೆತಿತ್ತು.

ತಬಲಾ ವಾದನವನ್ನು ಗಂಭೀರವಾಗಿ ತೆಗೆದುಕೊಂಡ ನಂತರ ಗೌರಂಗ್‌ ಕೋಡಿಕಲ್‌ ಅವರು ಪಂ. ಮಲ್ಲಿಕಾರ್ಜುನ ಮನಸೂರ್, ಪಂ. ಬಸವರಾಜ ರಾಜಗುರು, ಪಂ. ಕುಮಾರ ಗಂಧರ್ವ, ಪಂ. ಭೀಮಸೇನ ಜೋಶಿ, ದಿನಕರ್ ಕಾಯ್ಕಿಣಿ, ಯಶವಂತ್‌ ಭುವಾ ಜೋಷಿ, ರಾಜನ್‌-ಸಾಜನ್‌ ಮಿಶ್ರಾ, ಕಿಶೋರಿ ಅಮೋನ್ಕರ್, ಪ್ರಭಾ ಅತ್ರೆ, ಪರ್ವಿನ್‌ ಸುಲ್ತಾನ ಮುಂತಾದ ದಿಗ್ಗಜರುಗಳಿಗೆ ತಬಲಾ ಸಾಥಿ ನೀಡುತ್ತಾ ಬಂದಿದ್ದಾರೆ. ಜೊತೆಗೆ ಪಂ. ದಿನಕರ್ ಕಾಯ್ಕಿಣಿ, ಪಂ. ದೇವೇಂದ್ರ ಮುರುಡೇಶ್ವರ್, ಪಂ. ವಿನಾಯಕ ತೊರವಿ ಮುಂತಾದ ಹಿರಿಯ ಸಂಗೀತ ಕಲಾವಿದರ ಜೊತೆ ಹೊರ ದೇಶಗಳಲ್ಲೂ ನಿರಂತರ ಪ್ರವಾಸ ಮಾಡಿದ್ದಾರೆ.

ಪ್ರಸ್ತುತ ಬೆಂಗಳೂರು ಆಕಾಶವಾಣಿಯ ಸಂಗೀತ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿರುವ ಗೌರಂಗ್‌ ಅವರು ಸಿ.ಸಿ.ಆರ್.ಟಿ. ವಿದ್ಯಾರ್ಥಿ ವೇತನದ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮದೇ ಸುರಸಾಗರ್ ಸಂಗೀತ ಸಭೆ ಮೂಲಕ ಸುಮಾರು ೨೦ ವರ್ಷಗಳಿಂದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಗಣನೀಯವಾದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇವರ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.