ಜನನ : ೧೨-೯-೧೯೩೪ರಂದು ಹಾಸನ ಜಿಲೆಯ ಅರಕಲುಗೂಡಿನ ಅಗ್ರಹಾರದಲ್ಲಿ

ಮನೆತನ : ಸುಪ್ರಸಿದ್ಧ ಸಂಗೀತಗಾರರ ಮನೆತನ ತಂದೆ ಕೃಷ್ಣಸ್ವಾಮಿ ಸಂಸ್ಕೃತ ಹಾಗೂ ಪಿಟೀಲು ವಿದ್ವಾಂಸರು ತಾಯಿ ಮಹಾಲಕ್ಷ್ಮಮ್ಮ.

ಗುರುಪರಂಪರೆ : ಇವರು ತಮ್ಮ ಸೋದರಮಾವ ಕೆ. ಕೃಷ್ಣಪ್ಪನವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ ಗಮಕ ರತ್ನಾಕರ ಬಿ.ಎಸ್.ಎಸ್. ಕೌಶಿಕ್ ಅವರಲ್ಲಿ ಗಮಕ ಶಿಕ್ಷಣ ಪಡೆದಿದ್ದಾರೆ.

ಕ್ಷೇತ್ರ ಸಾಧನೆ : ಸುಮಾರು ೪೮ ವರುಷಗಳಿಗೂ ಮಿಕ್ಕಿ ಗಮಕ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಮಹಾವಿದ್ಯಾಲದಯಲ್ಲಿ ಗಮಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗಮಕ ಪ್ರೌಢತರಗತಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವುದಲ್ಲದೇ ಕರ್ನಾಟಕ ಸಂಗೀತದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ ಆಕಾಶವಾಣಿ ಕೇಂದ್ರಗಳಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ರಾಜ್ಯದಾದ್ಯಂತ ಇವರು ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೈಸೂರಿನ ತಮ್ಮ ಮನೆಯಲ್ಲೇ ಗಮಕ ತರಗತಿಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಪರೀಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಶೃಂಗೇರಿ ಹಾಗೂ ಸುತ್ತೂರು ಮಠಾಧೀಶ್ವರರ ಸಮ್ಮುಖದಲ್ಲಿ ಮೈಸೂರರಸರಾಗಿದ್ದ ಜಯ ಚಾಮರಾಜ ಒಡೆಯರ್, ಕೆಂಗಲ್ ಹನುಮಂತಯ್ಯ, ಡಾ|| ಸರ್ವಪಲ್ಲಿ ರಾಧಾಕೃಷ್ಣನ್, ಬಿ.ಡಿ. ಜತ್ತಿ, ರಾಷ್ಟ್ರಕವಿ ಕುವೆಂಪುರವರ ಸಮ್ಮುಖದಲ್ಲಿ ಸಹ ವಾಚನ ಮಾಡಿ ಪ್ರಶಂಸೆ ಗಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕುಮಾರ ಸೇವಾ ಸಂಘ ನಡೆಸಿದ ಕುಮಾರವ್ಯಾಸ ಜಯಂತ್ಯುತ್ಸವದಲ್ಲಿ ಅನೇಕ ಗಮಕ ದಿಗ್ಗಜಗಳ ಮುಂದೆ ವಾಚನ – ವ್ಯಾಖ್ಯಾನ ಮಾಡಿದಾಗ ಅಂದು ಅಲ್ಲಿ ಹಾಜರಿದ್ದ ಹಿರಿಯ ಗಮಕಿ ಜೋಳದ ರಾಶಿ ದೊಡ್ಡಣ್ಣಗೌಡರು ಇವರ ವಾಚನ ಮಾಧುರ್ಯಕ್ಕೆ ಮಾರುಹೋಗಿ ಇವರನ್ನು ’ಗಮಕದ ಗೌರಮ್ಮ’ ಎಂದೇ ಸಂಬೋಧಿಸಿ ಪ್ರಶಂಸಿಸಿದರು. ಮಂಡ್ಯದ ಕರ್ನಾಟಕ ಸಂಘದವರು ನಡೆಸುತ್ತಿರುವ ಕುವೆಂಪುರವರ ’ರಾಮಾಯಣ ದರ್ಶನಂ’ ಕಾವ್ಯವಾಚನ ಸ್ಪರ್ಧೆಯಲ್ಲಿ ಸತತವಾಗಿ ಮೂರು ವರ್ಷ ಪ್ರಥಮ ಬಹುಮಾನ ಗಳಿಸಿದ ಹಿರಿಮೆ ಇವರದು.

ಪ್ರಶಸ್ತಿ – ಪುರಸ್ಕಾರಗಳು : ಇವರಿಗೆ ಸಂದಿರುವ ಸನ್ಮಾನ – ಬಿರುದುಗಳು ಹಲವಾರು. ಮೈಸೂರು ಅರಮನೆಯ ಜನಪದ ಕಟ್ಟೆ ಮಠದ ವತಿಯಿಂದ ’ಗಮಕ ಕಲಾರತ್ನ’ ಶ್ರೀ ರಾಮಮಂದಿರದಿಂದ ’ಗಮಕ ಕಲಾನಿಧಿ’, ಉಜ್ಜನೀ ಪೀಠದ ’ವಾಚನ ಸರಸ್ವತಿ’, ಹೊಸಹಳ್ಳಿ ಗಮಕ ಕಲಾ ಪರಿಷತ್ತಿನ ವತಿಯಿಂದ ’ಗಮಕ ವಿಶಾರದೆ’ ಇವುಗಳಲ್ಲಿ ಮುಖ್ಯವಾದವುಗಳು. ಶಿವಮೊಗ್ಗದಲ್ಲಿ ನಡೆದ ನಾಲ್ಕನೆಯ ಅಖಿಲ ಕರ್ನಾಟಕ ಗಮಕ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ. ರಾಮನಾಥಪುರದಲ್ಲಿ ನಡೆದ ಕರ್ನಾಟಕ ಗಾನ ಕಲಾ ಪರಿಷತ್ತಿನ ೩೬ನೇ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್ ಸದಸ್ಸಿನಲ್ಲೂ ಸನ್ಮಾನಿತರಾದ ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೬-೯೭ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.