ಗಂಗಿ ಗೌರೀ ಸಂವಾದ
2
ವಚನ:
ಪರಮಪುಣ್ಯ ಜೋಗಿ ಕೇಳು ಗುರುರಾಯ ತಮ್ಮ
ಶಿರವ ತೂಗಿ ಬೆರಗಾಗುತಲಿ ಗುರುರಾಯ
ಧರೆಯ ಮನುಜಳಲ್ಲವೆಂದು ಗುರುರಾಯ ಅವಳು
ಇರುವ ಸ್ಥಳವ ಕೇಳಿತಿರ್ದ ಗುರುರಾಯ ॥
ತಾಯಿತಂದೆ ನಿನಗುಂಟೇನೆಲೆ ಹೆಣ್ಣೆ ನಿನ್ನ
ಸಾಯಸಗಳ ಕೇಳಿದೆವು ಎಲೆ ಹೆಣ್ಣೆ
ಕಾಯ ಜೀವ ಸಲಹಿದವರು ಎಲೆ ಹೆಣ್ಣೆ ಅವರು
ಆವ ಠಾವಿನಲ್ಲಿ ಇಹರು ಎಲೆ ಹೆಣ್ಣೆ ॥
ತಂದೆತಾಯಿ ಬಂಧುಬಳಗ ಎಲೆ ಜೋಗಿ ನನ್ನ
ಹೊಂದಿಕೊಂಡು ಗಿರಿಯೊಳಿಹರು ಎಲೆ ಜೋಗಿ
ಕಂದಿ ಕುಂದಿ ಬಳಲಗೊಡದೆ ಎಲೆ ಜೋಗಿ ನಮ್ಮ
ನಂದನದೊಳಗಿಟ್ಟರಂತೆ ಎಲೆ ಜೋಗಿ ॥
ಋಷಿಗಳು ನೀವು ಕೇಳ್ದಿರಿನ್ನು ಎಲೆ ಜೋಗಿ ನಮಗೆ
ಹುಸಿಯ ನುಡಿಯು ಸಲ್ಲದಿನ್ನು ಎಲೆ ಜೋಗಿ
ವಸುಧೆಯೊಳಗೆ ಜನಿಸಿ ಬಂದೆ ಎಲೆ ಜೋಗಿ ನನ್ನ
ದೆಸೆಯ ಲಾಲಿಸಿನ್ನು ಕೇಳು ಎಲೆ ಜೋಗಿ ॥
ಗಾರುಡಿಗ ಗುರುವೆ ಕೇಳು ಎಲೆ ಜೋಗಿ ನಿರಾ
ಭಾರಿ ನಾನು ನಿರ್ಮಳಾಂಗಿ ಎಲೆ ಜೋಗಿ
ನೀರೆ ಅಂಬಿಗಾರ ಮಗಳು ಎಲೆ ಜೋಗಿ ನನ್ನ
ಘೋರ ತಪಸುಮಾಡಿ ಪಡೆದರೆಲೆ ಜೋಗಿ ॥
ನನ್ನ ಪುಣ್ಯ ಉಂಡೇನೆಂದು ಎಲೆ ಜೋಗಿ ತಪಸ
ಮುನ್ನಮಾಡಿ ಪಡೆದರಯ್ಯ ಎಲೆ ಜೋಗಿ
ಚೆನ್ನಬಸವನ ರನ್ನಗೊಳ ಎಲೆ ಜೋಗಿ ಸಂ
ಪನ್ನೆ ಗಂಗೆಯೆಂದು ಕರೆದರೆಲೆ ಜೋಗಿ ॥
ಶಶಿಮುಖಿಯೆ ಮಿಸಿನಿರೂಪೆ ಎಲೆ ಹೆಣ್ಣೆ ನಮ್ಮ
ಬಸವಗೊರಳ ಗಂಗೆದೇವಿ ಎಲೆ ಹೆಣ್ಣೆ
ವಸುಧೆಯೊಳಗೆ ಬಸವಣ್ಣನ ಎಲೆ ಹೆಣ್ಣೆ ಕೊರಳ
ಹೆಸರೇನು ಪರಿಯಲ್ಲಿಟ್ಟರೆಲೆ ಹೆಣ್ಣೆ ॥
ಮಂದ್ರಗಿರಿಯ ಮುನಿಯೆ ಕೇಳು ಎಲೆ ಜೋಗಿ ನಮ್ಮ
ತಂದೆ ಬಸವನ ಕೊರಳಿನಲ್ಲಿ ಎಲೆ ಜೋಗಿ
ಬಿಂದು ನಾದ ಕಳೆಗಳಿಂದ ಎಲೆ ಜೋಗಿ ಜನಿಸಿ
ಬಂದಳೆಂದು ಹೆಸರನಿಟ್ಟರೆಲೆ ಜೋಗಿ ॥
ಬಸವಗೊರಳ ಗಂಗೆದೊಗಲಿಂದೆ ಎಲೆ ಜೋಗಿ ಜನಿಸಿ
ವಸುಧೆ ಜನರ ಹೊರೆವಳೆಂದೆ ಎಲೆ ಜೋಗಿ
ಎಸೆವ ವೇಚ ಶ್ರುತಿ ಪೌರಾಣ ಎಲೆ ಜೋಗಿ ಕೊರಳ
ಹೆಸರನಿಟ್ಟು ಕರಸಿದಾವೊ ಎಲೆ ಜೋಗಿ ॥
ಪಡೆದಾಕ್ಷಣವೆ ತಿಳಿದು ನೋಡಿ ಎಲೆ ಜೋಗಿ ನೀ ಪಾ
ಲ್ಗಡಲ ಗಂಗಾದೇವಿಯೆಂದು ಎಲೆ ಜೋಗಿ
ಒಡೆಯ ಬಸವನ ಕೊರಳ ಶಕ್ತಿ ಎಲೆ ಜೋಗಿ ಎಂದು
ನುಡಿದು ತೊಟ್ಟಿಲಗಳ ಕಟ್ಟಿದರು ಎಲೆ ಜೋಗಿ ॥
ಬಸವಣ್ಣನ ಮಗಳೆ ಎನುತ ಎಲೆ ಜೋಗಿ ನನಗೆ
ಮಿಸುನಿ ತೊಟ್ಟಿಲಗಳ ಕಟ್ಟಿ ಎಲೆ ಜೋಗಿ
ಸಿಸುವ ನೋಡಿ ಮಲಗಿಸುತಲಿ ಎಲೆ ಜೋಗಿ ಅವರ
ಕುಸಲಾದ ಜೋಗುಳವ ಕೇಳು ಎಲೆ ಜೋಗಿ ॥
ಜೋಗುಳ ಪದನು:
ಜೋ ಜೋ ಎನ್ನ ಬಂಧುಗಳ ಸಿರಿಯೆ
ಜೋ ಜೋ ಎನ್ನ ಚಂದ್ರರ ಕಳೆಯೆ
ಜೋ ಜೋ ನಮ್ಮ ನಂದಿಯ ಶಿಶುವೇ ಹೀಗೆ
ಜೋಯೆಂದು ಪಾಡಿರಿ ಶ್ರೀನಿಲಗಂಗೆಗೆs ಜೋ ಜೋ ॥
ತುಂಬಿದ ಹೊಳೆಯೊಳು ಅಂಬಿಗ ಶರಣಿ
ಹಂಬಲಿಸಿಯೆನ್ನ ತಪಸ ಮಾಡಿದರೆ
ರಂಭೆ ಜ್ಞಾನಶಕ್ತಿ ಜನಿಸಿದಳೆಂದು ತನ್ನ
ಕುಂಭಕುಚವೆಂಬ ಮೊಲೆಯನೂಡಿದಳುs ಜೋ ಜೋ ॥
ಸತಿಪತಿ ಈರ್ವರು ಅತಿ ಹರುಷದಲ್ಲಿ
ರತನು ಮಾಣಿಕ ಮುತ್ತು ಸೇರಿತುಯೆಂದು
ಹತ್ತಿರದಾ ಬಂಧುಬಳಗಗಳೆಲ್ಲಾ ನಮಗೆ
ಗತಿಮುಕ್ತಿ ಗಂಗೆ ನೀನಲ್ಲದಿಲ್ಲs ಜೋ ಜೋ ॥
ಬಣ್ಣನದ ತೊಟ್ಟಿಲಿಗೆ ರನ್ನದ ಸರಪಳಿಯು
ಸಣ್ಣ ಬಣ್ಣಗಳ ಹಾಸಿ ಮಲಗಿಸಿ
ಹೆಣ್ಣು ಜಾತಿಗಳೆಲ್ಲ ತೂಗುತ ನೋಡಿ ಮೂರು
ಕಣ್ಣುಳ್ಳ ಶಿವನ ಮಡದೆಂದು ಪಾಡೀ ಜೋ ಜೋ ॥
ಸೂರ್ಯಚಂದ್ರಾದಿಗಳ ಅರಳೆಲೆ ಬಟ್ಟು
ನೀರ ಸಮುದ್ರದ ಮಾಗಾಯನಿಟ್ಟು
ಮೂರು ಲೋಕಗಳ ಕಿರುಗೆಜ್ಜೆ ನಾರಿ ಜಗದ
ಘೋರ ಪಾತಕದ ಕರ್ಮಸಂಹಾರೀ ಜೋ ಜೋ ॥
ಯೋಗಿಣಿ ಜೋಗಿಣಿ ಮಾಗಣಿಯರೆಲ್ಲ
ರಾಗರಚನೆಯಿಂದ ತೂಗಿ ಪಾಡುತಲಿ
ನಾಗಭೂಷಣ ಶಿವನ ಜ್ಞಾನದೊಳಿಹೆವು ಕೃಷ್ಣ
ಭಾಗೀರತಿ ಗಂಗೆ ರಕ್ಷಿಸಿ ಹೊರವೇ ಜೋ ಜೋ ॥
ಶಂಭು ಶಂಕರನ ಮಡದಿ ನೀ ಜೋ ಜೋ
ಅಂಬಾರ ಪುರದ ನಿರ್ಮಾಯಿ ಜೋ ಜೋ
ಅಂಬಿಗ ಶರಣಾರ ಮಗಳೆ ನೀ ಜೋ ಜೋ ನಿನ್ನ
ನಂಬಿದ ಭಕ್ತರ ಸಲಹಿಕೊ ತಾಯಿs ಜೋ ಜೋ ॥
ಹನ್ನೆರಡು ವರುಷವು ತಪಸಿರಲೆಂದು
ಚಿನ್ನ ಬಾಲತ್ವದಿ ಸುಳಿದೆ ನೀ ಬಂದು
ನಿನ್ನ ಶ್ರೀಪಾದವ ಬಿಡೆವು ಎಂದೆಂದುs ನಮ್ಮ
ಚೆನ್ನಬಸವಣ್ಣನ ಕೊರಳ ಶ್ರೀಗಂಗೆs ಜೋ ಜೋ ॥
ಸಾಕಿ ಸಲಹಿ ನನ್ನ ದೊಡ್ಡವಳ ಮಾಡಿ
ಲೋಕದ ಮನುಜರಿಗಳವಲ್ಲ ನೋಡಿ
ಈಕೆಗೆ ಶಿವನೇ ಗಂಡೆಂದು ಪಾಡೀ ಎನ್ನ
ಏಕಾಂತ ವನದೊಳಗಿಟ್ಟರು ನೋಡೀ ಜೋ ಜೋ ॥
ಕಂಗಳ ಕಾಂತಿಯ ಜೋಗಿ ನೀ ಕೇಳು
ಲಿಂಗಪೂಜೆಗಳು ಆವಾಗ ನಮಗೆ
ಸಂಗ ಸಮರಸವಿಲ್ಲ ಭವಿಗಳ ಹೊಂದೆs ನಮ್ಮ
ಸಂಗನ ಬಸವನ ಘನವ ಕೇಳ್ಮುಂದೇ ಜೋ ಜೋ ॥
ಕಂದ:
ಬಸವ ಸೃಷ್ಟಿಯನು ಪಸರಿಸುವೆ ಕೇಳ್ಮುಂದೆ
ವಸುಧೆ ಈರೇಳು ಸಚರಾಚರಂಗಳು
ಪಶುಜೀವಿ ಹರಿಯಜರು ಸುರಮುನಿಗಳೆಲ್ಲ
ಬಸವನಾತ್ಮದಲಿ ಜನಿಸಿದರಖಿಳ ಕೋಟಿ ಜನರು ॥
ಸೃಷ್ಟಿಗೊಡೆಯನು ಬಸವ ಶ್ರೀ ಮಹಾಗಂಗೆಯನು
ಸೃಷ್ಟಿಸಿದ ತನ್ನಯ ಶ್ರೀ ಕಂಠದೊಳು
ವಿಷ್ಣುಪಾದದಿ ಜನಿಸಿದಳೆಂಬ ಭ್ರಷ್ಟರನು ಹಳಿದು
ದೃಷ್ಟವನು ಪೇಳಿದಳು ಶ್ರುತಿಶಾಸ್ತ್ರದಿಂ ॥
ಸಂಗತ್ಯ:
ಜೋಗಿ ಮುನೀಶಾನೆ ಆಗ ಮಹಿಮಗೆನ್ನ
ಯೋಗಾವ ಮಾಡಿ ಪಡದಾರು
ನಾಗಭೂಷಣ ಶಿವಗರ್ಪಿಸಿದ ನನ್ನ
ಭೋಗವೆ ಪರಮನೊಳೈಕ್ಯ ॥
ಶಿವಶರಣರಿಗೊಪ್ಪು ಭವಿ ನರರಿಗೆ ತಪ್ಪು
ಜವನಾದ ಕಾಲಗೆ ಮುಪ್ಪು
ರವಿಕೋಟಿ ತೇಜನೆ ಅವನೀಶ ಮುನಿರಾಯ
ವಿವರಿಸು ಬಸವಸೃಷ್ಟಿಯನು ॥
ಸಿಂಗಾಳ ದೀಪದ ಜೋಗಿ ಕೇಳೆಲೆ ಮುನಿ
ಸಂಗನ ಬಸವನ ಕೊರಳ
ಗಂಗೆದೊಗಲೊಳಿಂದ ಜನಿಸಿದ ಕಾರಣ
ಗಂಗೆದೇವಿಯೆಂಬ ಪೆಸರು ॥
ಆದಿಯ ಕೇಳಿನ್ನನಾದಿಯ ಬಸವನ
ಓದುವ ಕಂಠದೊಳ್ಮನ್ನ
ನಾದ ಕಳೆಯು ಬಿಂದು ನಾನಾ ಕತನಗಳಿಂದ
ಮೇದಿನಿಯೊಳು ಜನಿಸಿದೆನು ॥
ಉತ್ಪತ್ತಿ ಸ್ಥಿತಿ ಲಯ ಸತ್ವರಜತಮಗಳ
ಮಥನವ ಮಾಡಿ ಜನ್ಮಿಸಿದೆ
ಇಂತಾ ವಾದಿಗಳು ಮತಿಗೆಟ್ಟ ಮಾನವರು
ಗತಿತಪ್ಪಿ ನುಡಿವುದ ಕೇಳು ॥
ಭೇದವಾದಿತರ್ಕ ಮನುಜರುಗಳು ವಿಷ್ಣು
ಪಾದದಿ ಜನಿಸಿದಳೆನುತ
ಹೋದರು ನರಕದ ಪುಳುಗೊಂಡದೊಳಗೆಮ
ಬಾಧೆಯು ಜನ್ಮ ಜನ್ಮದಲಿ ॥
ನಾರಣಗೆ ಭೂಮಿಯ ಧಾರೆಯನೆರೆಯಲು
ಮೂರಡಿ ಇಡಲೊಂದು ಪಾದ
ಮೇರುವಿನೊಳಗೊಂದ ತೋರಿದನಾಕ್ಷಣ
ವಾರಿಜೋದ್ಭವ ಕಂಡ ಬ್ರಹ್ಮ ॥
ವಿಷಮಯ ಪಾದವು ಎಸೆಯಿತು ನಮಗೆಂದು
ಮಿಸುನಿ ಕಮಂಡಲದುದಕ
ಹಸನಾಗಿ ತೆಗೆವುತ ಕುಸುಮಕ್ಷತೆಗಳಿಂದ
ಶಶಿಧರ ಶಿವನೆಂದು ಭಜಿಸಿ ॥
ಅಂಗಜನಣ್ಣನ ಪಾದಗಳಿಗಭಿಷೇಕ
ಗಂಗೆಯ ತಂದು ನೀಡಿದರೆ
ಉಂಗುಷ್ಟ ತುದಿಯಲಿ ಗಂಗೆ ಹರಿಯಿತೆಂದು
ಭಂಗ ಹೀನರು ಬಳಲಿದರು ॥
ಪಶುಪತಿ ಪಾದವು ಪುಸಿಯಾಗಲ್ಶಾಪಿಸಿ
ಕುಸಿಯಾಗಲು ಶ್ರೀಹರಿಪಾದ
ವಸುಧೆಯೊಳಲಿಯಲ್ಕೆ ಪೆಸರಾಯ್ತ ವೈಕುಂಠ
ಶಶಿಧರರೂಪ ಕೇಳ್ಮುನಿಪ ॥
ಆದಿಯನರಿಯದ ವಾದಿ ಕುರಿಗಳೆಲ್ಲ
ಹೋದರು ನರಕದ ಕುಳಿಗೆ
ಮೇದಿನಿ ಹದಿನಾಲ್ಕು ಪಿರಮಹಾಬಸವನ
ಪಾದದಿ ಜನಿಸಿದವಖಿಳಾ ॥
ಬಿನುಗರ ನುಡಿಯೆ ತಿರಲಿ ಕೇಳೆಲೊ ಮುನಿ
ಘನಮಹಿಮ ನಮ್ಮ ಬಸವಾ
ಮನುಮುನಿ ಅಜಹರಿ ಸುರರು ದೇವತೆಗಳ
ನೆನಹು ಮಾತ್ರದಿ ನಿರ್ಮಿಸಿದ ॥
ಎಡದ ಭಾಗದಿ ವಿಷ್ಣು ಬಲದ ಭಾಗದಿ ಬ್ರಹ್ಮ
ನಡುವೆ ರುದ್ರನ ನಿರ್ಮಿಸಿದನು
ಪಡೆದ ತಂದೆಯು ನಮ್ಮೊಡೆಯ ಬಸವ ಕೊರ
ಳೆಡೆಯೊಳು ನಾನು ಜನ್ಮಿಸಿದೆ ॥
ಪೃಥ್ವಿಯೇ ಬ್ರಹ್ಮ ಜಲವೇ ವಿಷ್ಣು
ಅಗ್ನಿಯ ತತ್ವವೇ ರುದ್ರನಂಶ
ಮತ್ತೆ ಮಾರುತ ಈಶ್ವರ ಸದಾಶಿವ ಪಂಚ
ತತ್ವವೆ ಬಸವನಾತ್ಮಗಳು ॥
ಭೂಮಿಯಕಾಶ ಭೂಮಂಡಲದ ಬುದ್ಬುದ
ಆ ಮಹಾ ಜೀವರಾಶಿಗಳು
ಕಾಮಪಿತರು ಮೊದಲಾದಖಿಳ ಜನ
ರೋಮರೋಮದಿ ಜನಿಸಿದರು ॥
ರೂಪುಚಿತ್ರನೆ ಕೇಳು ಗೌಪ್ಯವಲ್ಲವು ನಮ್ಮ
ಭೂಪತಿ ಬಸವನ ರಾಣಿ
ಗೋಪಿಯಾತ್ಮಗಳು ಸುಜಾತವೆನುತ ತಮ್ಮ
ಶ್ರೀಪತಿ ಜನಿಸಿಯೇ ಬಂದ ॥
ಕಂದರ್ಪಪಿತನು ಗೋವಿಂದ ನಾರಾಯಣ
ತಂದೆಗಳೆಂದು ಭಾವಿಸುತ
ನಂದಿಬಸವನೇರಲಿಲ್ಲ ಕೇಳೆಲೆ ಮುನಿ
ಒಂದೊಂದು ಜನನವ ತಾಳಿ ॥
ಆವ ಜನ್ಮಕೆ ಗೋವಿನಾತ್ಮವುಯೆಂದು
ಕಾಮಪಿತನು ಜನಿಸಿದರೆ
ದೇವತೆಗಳು ಕೂಡಿ ಹೆಸರಿಟ್ಟು ಕರೆದರು
ಗೋವಿಂದ ಗೋವಿಂದ ಎನುತ ॥
ನಿಶ್ಚಲರೂಪಿನ ಜೋಗಿ ಕೇಳೆಲೊ ಮುನಿ
ಅಚ್ಯುತನೆನ್ನ ಗರ್ಭದಲಿ
ಮತ್ಸ್ಯಾವತಾರ ಕೂರ್ಮಗಳಾಗಿ ಜನಿಸುತ
ಕೆಚ್ಚುದಾನವರ ಸೀಳಿದನು ॥
ಬಾಯಬಡಿಕರೇನ ಬಲ್ಲರೊ ಮುನಿರಾಯಾ
ಗೋವಿಂದ ಅಜಹರಿ ಬಲ್ಲ
ಆವೆ ರೂಪುಗಳಿಂದ ಜನಿಸಿದ ಕಾರಣ
ತಾಯಿಗಳೆಂದು ಭಾವಿಸುತ ॥
ಮೂಲ ಪ್ರಳಯಗಳಿಂದ ಶ್ರೀಹರಿ ತನ್ನ
ಆಲದೆಲೆಯ ಮೇಲೆ ಶಯನ
ಕಾಲೂರಿನಿಂದೇ ನಿನ್ನ ಗರ್ಭದೊಳೆಂದು
ನೀಲಲೋಹಿತ ನುತಿಸಿದನು ॥
ಸೃಷ್ಟಿ ಈರೇಳು ಲೋಕಾದಿ ಲೋಕವು ನಿನ್ನ
ಹೊಟ್ಟೆಯೊಳಡಗಿದವೆನುತ
ಮುಟ್ಟಿ ಭಜಹಿಸಿ ಎನ್ನ ಹೆಸರಿಟ್ಟು ಕರೆದರೆ
ಕೃಷ್ಣವೇಣಿಯ ಪೆಸರೆನಗೆ ॥
ಆರು ಬಲ್ಲರೊ ನಮ್ಮ ಆದಿ ಅನಾದಿಯ
ನೀರು ಭೂಪ್ರಳಯದ ರಹಿತ
ಈರೇಳು ಲೋಕದ ಪಿತಮಹ ಬಸವನ
ನಾರಾಯಣನು ತಾನೆ ಬಲ್ಲ ॥
ತಂಗಿಯಾದಳು ತನ್ನ ಅಂಗದ ಜನನಿಯು
ಲಿಂಗಬಸವ ನಿರ್ಮಿಸಿದ
ಶೃಂಗವೆರಡನು ತನ್ನಂಗದ ಫಣೆಗಿಟ್ಟು
ಗಂಗೆ ತಾ ಮಾಡಿ ಪೂಜಿಸಿದ ॥
ಹರನವತಾರನೆ ವರಮುನಿ ಕೇಳಿನ್ನ
ಗುರುಪರಂಜ್ಯೋತಿ ಬಸವನ
ಹರಿಯಜ ಸುರರಗಣಿತ ದೇವ ಋಷಿಗಳು
ಚರಣದಿ ಜನಿಸಿದರಖಿಳಾ ॥
ಕಡುಚಲ್ವ ಗಂಗೆಯ ನುಡಿಯನಾಲಿಸಿ ಕೇಳಿ
ಮೃಡನವತಾರನಿಂತೆಂದ
ಮಡದಿ ಕೇಳೆಲೆ ನಿಮ್ಮ ಒಡೆಯ ಬಸವನೊಳು
ಅಡಗಿದವೆಷ್ಟೊ ಲೋಕಗಳು ॥
ಬಾಲೆ ಕೇಳೆಲೆ ನಿನ್ನ ಲೋಲ ಬಸವ ಪ್ರಳಯ
ಕಾಲದೊಳೆಂತಡಗಿದನು
ಭೂಲೋಕ ಭುವಲೋಕ ಸತ್ಯಲೋಕದ ಜನ
ಓಲೈಸಿದರಾವ ಸ್ಥಲದಿ ॥
ಜಾಳೇಂದ್ರದೇಶದ ಜೋಗಿ ಕೇಳಲೆ ಮುನಿ
ಕಾಳುಕಾಳಂಧರ ಮಯದಿ
ತಾಳಿದ ಸ್ಥಲ ಸ್ಥಲದೊಳಗಿಟ್ಟನಾದಿಯ
ಕೇಳೆಲೆ ಮುನಿರಾಯ ಜೋಗಿ ॥
ಪದನು:
ಎಲೆ ಜೋಗಿ ನೀನು ಕೇಳು ಬಸವಣ್ಣ ಕುಲ ಮಹಾದೈವದೊಡೆಯ
ಸಲಹುತಲಿ ಈರೇಳು ಲೋಕಗಳ ನಿರ್ಮಿಸಿದ ಮಲೆನಾಡ ಜೋಗಿ ನೀ ಕೇಳು
ಆದಿ ಮಧ್ಯಾಂತ ಶೂನ್ಯ ಎಲೆ ಜೋಗಿ ನಾದ ಕಳೆ ಬಿಂದು ಶೂನ್ಯ
ಮೂದೇವ ಮೂರ್ತಿಗಳು ಮುನ್ನವೇ ಶೂನ್ಯವು ಭೇದಿಸುವರಿಲ್ಲದಂದು
ಓದುವ ಪ್ರಣಮರೂಪ ಬಸವಯ್ಯ ಸಾಧಿಸಿ ನೆಗೆದನೆಂದು
ಮಾದೇವ ಮೊದಲಾದ ದೇವರ್ಕಳೆಲ್ಲರು ಪಾದ ಪದ್ಮದೊಳಡಗಲು ॥
ಯುಗಪ್ರಳಯ ಜಗಪ್ರಳಯವು ಎಲೆ ಜೋಗಿ ಹಗಲಿರುಳು ಏಕ ಪ್ರಳಯ
ಮಿಗಿಲಾದ ಪ್ರಳಯದಲಿ ಬಸವಣ್ಣ ಪುಟ್ಟಿದನು ತಗಲು ತಾಕಿಲ್ಲದಂದು
ಮಿಗಿಲು ಮಿಂಚುಗಳೆಲ್ಲವು ಮುನಿರಾಯ ದಗಿಲು ಭುಗಿಲೆಂಬ ಸಿಡಿಲು
ನಿಗಮಗೋಚರವೆಲ್ಲ ಬಸವದಂಡೇಶ್ವರನ ಉಗುರ ಕೊನೆಯೊಳಡಗಲು ॥
ಪ್ರಳಯ ಪ್ರಳಯಗಳಿಗಂದು ಬಸವಣ್ಣ ಹಳಬನಾಗಿರ್ದನಂದು
ಕಳೆಯುಳ್ಳ ಸೂರ್ಯಚಂದ್ರಾದಿಗಳು ಕಣ್ಣೊಳಗೆ ಸುಳಿದು ಸೂಸುತಲಿಂದು
ಬೆಳೆಬಿತ್ತು ಯೋನಿಮುಖದಿ ಜನಿಸಿದವು ಹುಳುರಾಸಿ ಮೊದಲಾದವು
ಇಳೆಯ ಬ್ರಹ್ಮಾಂಡ ಸಚರಚರಂಗಳು ಎಲ್ಲ ತಳಪಾಯದೊಳಡಗಲು ॥
ಪೊಡವಿ ಈರೇಳು ಭುವನ ಎಲೆ ಜೋಗಿ ಕಡಲೇಳು ಸಾಗರಗಳು
ಮಡದಿ ಹೆಣ್ಣು ಗಂಡು ನಾನಾಜೀವನವೆಲ್ಲ ಎಡದ ಪಾದದೊಳಡಗಲು
ಜಡೆದಲೆಯ ಜೋಗಿ ಕೇಳು ಬಸವಣ್ಣ ಪಡೆದ ನಾನಾ ದೈವವ
ಮೃಡಬ್ರಹ್ಮ ಹರಿಯಾದಿ ದೇವದೇವೇಂದ್ರರು ಎಡದ ಪಾದದೊಳಡಗಲು ॥
ಹುಲಿಯ ಚರ್ಮದ ಜೋಗಿಯೆ ಕೇಳಿನ್ನು ಬೆಲೆಯುಂಟೆ ಬಸವಣ್ಣಗೆ
ಹಲವು ದೈವಂಗಳಿಗೆ ಪಿತನು ತಾನೆನಿಸಿದನು ಲಲಿತಾಂಗ ಜೋಗಿ ಕೇಳು
ಜನಪ್ರಳಯ ಮಹಪ್ರಳಯವ ಬಸವಣ್ಣನ ಸ್ಥಲಸ್ಥಲದೊಳಿಟ್ಟು ಮೆರೆದ
ಸಲೆ ಗುರಬಸವಣ್ಣ ಸಂಗಮೇಶ್ವರನೆಂದು ಉಲಿದವು ವೇದ ಶ್ರುತಿಯು ॥
ಶ್ರುತಿ:
ಶೃಂಗಮಧ್ಯಂ ಹರಿಶ್ಚೈವ ಯೋಗೋರಮ್ಯ ಉರಸ್ತಥಾ
ದೇವ ನಾಸಾಪುಟಃ ವಾಯುಃ ಚಕ್ಷುರ್ಭಾನು ನಿಶಾಕರೌ॥ ॥
ಗಾತ್ರಂ ವೈ ವಿಶ್ವರೂಪಶ್ಯ ಪದಮೇವ ಚತುರ್ಯುಗಮ್
ಅಂಡಜಂ ಸರ್ವತೀರ್ಥಾಣಿ ವಾಮಃ ಸರ್ವಾಶ್ಯ ದೇವತಾ॥ ॥
ಲಿಂಗಾನಿ ರೋಮರೋಮಾಣಿ ರಂಗಮಧ್ಯಂತು ಪೀಠಕಂ
ಶೃಂಗಮಧ್ಯೇ ಶಿವೋ ದೃಷ್ಟಃ ಕಂಠಸ್ಥಾನೇ ತು ಜಾನ್ಹವೀ
ವೃಷಭಾದನ್ಯಃ ಕಃ ಯೋಗೀ ಜಗದಾನಂದಕಾರಣಂ॥ ॥
ವಚನ:
ಇಂತು ಸಕಲ ದೇವತೆಗಳ ಎಲೆ ಜೋಗಿ ಆs
ನಂತ ಕಾಲ ಅಡಗಿಸಿದ್ದರೆಲೆ ಜೋಗಿ
ಮುಂತೆ ಧರೆಯಕಾಶಗಳಿಗೆಲೆ ಜೋಗಿ ಪ್ರಳಯ
ವಾಂತು ಜಗವ ಸೃಷ್ಟಿಸಿದನು ಎಲೆ ಜೋಗಿ ॥
ಸನ್ಯಾಸಿಗಳು ನೀವು ಕೇಳಿ ಎಲೆ ಜೋಗಿ ಪ್ರಳಯ
ವನ್ನು ಮುನ್ನ ಹೆಪ್ಪಗೊಟ್ಟರೆಲೆ ಜೋಗಿ
ತನ್ನ ಸೃಷ್ಟಿ ಜಗದ ಜೀವಿಗೆಲೆ ಜೋಗಿ ಅವರಿ
ಗನ್ನ ಉದಕ ಕಲ್ಪಿಸಿದನು ಎಲೆ ಜೋಗಿ ॥
ಸತ್ಯಭಾವ ಋಷಿಯೆ ಕೇಳು ಎಲೆ ಜೋಗಿ ಜಗಕೆ
ಬಿತ್ತು ಬೆಳಸು ನಿರ್ಮಿಸಿದನು ಎಲೆ ಜೋಗಿ
ಎತ್ತುಯೆಂಬ ರೂಪತಾಳಿ ಎಲೆ ಜೋಗಿ ಜಗಕೆ
ತುತ್ತು ಮಾಡಿ ಉಣ್ಣಿಸಿದನು ಎಲೆ ಜೋಗಿ ॥
ಹರಗಿ ಬಿತ್ತಿ ಹಸನಮಾಡಿ ಎಲೆ ಜೋಗಿ ತನ್ನ
ನೊರೆಯು ಜೊಲ್ಲು ಶೇಷಗಳನು ಎಲೆ ಜೋಗಿ
ಹರಿಯು ಬ್ರಹ್ಮರುದ್ರಾದಿಗಳು ಎಲೆ ಜೋಗಿ ಸಲಿಸಿ
ಪರಮ ಮುಕ್ತಿ ಪಡೆದರಯ್ಯ ಎಲೆ ಜೋಗಿ ॥
ಮೆಟ್ಟಿ ತುಳಿದು ಮೆದ್ದು ಬಿಟ್ಟು ಎಲೆ ಜೋಗಿ ಹಂತಿ
ಗಟ್ಟಿ ತಿರಿಗಿ ಹಸನ ಮಾಡಿ ಎಲೆ ಜೋಗಿ
ಮುಟ್ಟಿ ಪ್ರಸಾದಗಳ ಮಾಡಿ ಎಲೆ ಜೋಗಿ ನಮ್ಮ
ಸೃಷ್ಟಿ ದೈವಗಳಿಗೆ ಯೋಗ್ಯ ಎಲೆ ಜೋಗಿ ॥
ಎಸೆವ ಭಾರಿ ಕಂಥೆ ಋಷಿಯೆ ಎಲೆ ಜೋಗಿ ಇದನು
ಹುಸಿಯು ಸಟಿಯನಾಡುವರ್ಗೆ ಎಲೆ ಜೋಗಿ
ಮುಸುಕಿ ಭವದ ಕರ್ಮಗಳಲಿ ಎಲೆ ಜೋಗಿ ಬಿದ್ದು
ವಸವಹರು ನಾಯಿ ಜನ್ಮಕೆಲೆ ಜೋಗಿ ॥
ನೀಲಕಂಠಮುನಿಯೆ ಕೇಳು ಎಲೆ ಜೋಗಿ ನಂದಿ
ಕಾಲಸಗಣಿ ಸತಿಯ ಮೂತ್ರ ಎಲೆ ಜೋಗಿ
ಮೂಲೆಮನೆಯ ಒಳಗೆ ಹೊರಗೆ ಎಲೆ ಜೋಗಿ ತಳಿಯೆ
ಕಾಲಕರ್ಮ ಕೆಟ್ಟು ಕಳಿವುದೆಲೆ ಜೋಗಿ ॥
ಮಿಣಿಯು ಕಣ್ಣಿ ಜತ್ತಿಗೆಗಳು ಎಲೆ ಜೋಗಿ ಮತ್ತೆ
ಎಣಿಸಲಿಲ್ಲ ಸಿದ್ಧಿ ಕಾಣೆ ಎಲೆ ಜೋಗಿ
ದಣಿಯಲುಂಡು ಜರಿದು ನುಡಿವರ್ಗೆ ಎಲೆ ಜೋಗಿ ಭವದ
ಕುಣಿಯ ನಾಯ ಜನ್ಮ ಜನ್ಮ ಎಲೆ ಜೋಗಿ ॥
ಹೊನ್ನ ಹಾವುಗೆಯ ಮನಿಯೆ ಎಲೆ ಜೋಗಿ ಕೇಳು
ಮನ್ನಿಸ್ಯುಂಡು ತೃಪ್ತಿಬಟ್ಟು ಎಲೆ ಜೋಗಿ
ಕಣ್ಣು ತಪ್ಪಿ ಜರಿದು ನುಡಿವರ್ಗೆ ಎಲೆ ಜೋಗಿ ಭವದ
ಕುನ್ನಿ ನಾಯಿ ಜನ್ಮ ಸಾಕ್ಷಿ ಎಲೆ ಜೋಗಿ ॥
ಸಂಕುಗೊರಳ ಮುನಿಯೆ ಕೇಳು ಎಲೆ ಜೋಗಿ ಜಗದ
ಮಂಕುಮರುಳು ತಾಳುಬೋಳು ಎಲೆ ಜೋಗಿ
ಸಂಕೆಗೊಳದೆ ಜರಿದರಿನ್ನು ಎಲೆ ಜೋಗಿ ನಮ್ಮ
ಓಂಕಾರರೂಪ ಬಸವಣ್ಣನು ಎಲೆ ಜೋಗಿ ॥
ಭಾವಶುದ್ಧ ಬಸವಣ್ಣನು ಎಲೆ ಜೋಗಿ ನಮ್ಮ
ದೈವ ಮನೆಯ ಬಸವಣ್ಣನು ಎಲೆ ಜೋಗಿ
ಹಾವ ಕೊರಳೊಳಿಟ್ಟ ಮುನಿಯೆ ಎಲೆ ಜೋಗಿ ನಮಗೆ
ನೋವು ಜನನ ಮರಣವಿಲ್ಲ ಎಲೆ ಜೋಗಿ ॥
ಸಿಂಗಿನಾಥ ಮುನಿಯೆ ಕೇಳು ಎಲೆ ಜೋಗಿ ಬಸವ
ನಂಗಚರ್ಮ ಹರಿಗೋಲೆಮಗೆ ಎಲೆ ಜೋಗಿ
ಲಿಂಗಮೂರ್ತಿ ಬಸವಣ್ಣಗೆ ಎಲೆ ಜೋಗಿ ಕೊರಳ
ಗಂಗೆಯಿಂದ ಜನಿಸಿ ಬಂದೆ ಎಲೆ ಜೋಗಿ ॥
ಯತಿ ಮಹಾಮುನಿಯೆ ಕೇಳು ಎಲೆ ಜೋಗಿ ಜಗದ
ಪಿತನು ನಮ್ಮ ಬಸವಣ್ಣನು ಎಲೆ ಜೋಗಿ
ಶ್ರುತಿ ಪೌರಾಣ ಪೊಗಳಲರಿಯವೆಲೆ ಜೋಗಿ ಮಂದ
ಮತಿಗಳೇನ ಬಲ್ಲರಯ್ಯ ಎಲೆ ಜೋಗಿ ॥
ಇತ್ತಂಡದ ಪ್ರಸಂಗಗಳ ನೀಲಮ್ಮ ಜಗವ
ಪೆತ್ತ ಬಸವನೊಳಗೆ ಪೇಳ್ದಳು ನೀಲಮ್ಮ
ಉತ್ತಮಾಂಗಿ ಬಸವನ ರಾಣಿ ನೀಲಮ್ಮ ದ್ವಿತೀಯ
ಅರ್ತಿ ಸಂಧಿ ಮುಗಿಸಿದಳು ನೀಲಮ್ಮ ॥
ಕೋಟಿ ಭವದ ರಾಟಗಳನು ಗುರುರಾಯ ಕಡಿದು
ದಾಂಟಿಸುವ ಧರ್ಮಗುರುವೆ ಗುರುರಾಯ
ಆಟ ಬೇಟಿ ನೋಟ ಕೂಟ ಗುರುರಾಯ ಕಪಟ
ನಾಟಕವಯ್ಯ ನಿಮ್ಮ ಸೂತ್ರ ಗುರುರಾಯ ॥
ಸಂಧಿ 2ಕ್ಕಂ ಕಂದ 2, ವಚನ 26, ಪದನು 5, ಸಂಗತ್ಯ. 28,
ಜೋಗುಳ ಪದನು 9, ಉಭಯಂ 195 ಕ್ಕಂ ಮಂಗಳ ಮಹಾ ಶ್ರೀ ಶ್ರೀ
* * *
Leave A Comment