ದೊಡ್ಡ ತಪ್ಪಲೆಯ ತುಂಬಾ ಹಾಲನ್ನೆಲ್ಲಾ ತುಂಬಿದ ವೆಂಕಟರಾಯರು ಲ್ಯಾಕ್ಟೋಮೀಟರ್ ತರಲು ಹೇಳಿದರು. ಗಟ್ಟಿಹಾಲು ೩೫ ಡಿಗ್ರಿ ತೋರಿಸುತ್ತಿತ್ತು. ಇದಕ್ಕೆ ಎರಡು ಕೊಡ ನೀರು ಹಾಕು ಎಂದರು. ಎಮ್ಮೆಹಾಲಿನ ವ್ಯಾಪಾರ ಮಾಡೋದಾದ್ರೆ ನೀರು ಸೇರಿಸದಿದ್ರೆ ಆಗುತ್ತಾ? ಅದರಲ್ಲಿ ಶೇಕಡಾ ೭.೫ರಷ್ಟು ಫ್ಯಾಟ್ ಇರುತ್ತೆ. ಶೇಕಡಾ ನಾಲ್ಕರಷ್ಟು ಇದ್ದರೆ ಸಾಕು ಎನ್ನುತ್ತಾ ಕ್ಯಾನುಗಳಿಗೆ ತುಂಬತೊಡಗಿದರು. ದಿನಕ್ಕೆ ೯೦ ಲೀಟರ್ ಉತ್ಪಾದನೆ. ನಾಲ್ಕು ಹೋಟೆಲ್‌ಗಳಿಗೆ ವರ್ತನೆ. ಲೀಟರ್‌ಗೆ ಎರಡು ರೂಪಾಯಿ ದರ. ದಿನಗಳಿಕೆ ೧೮೦ ರೂಪಾಯಿಗಳು.

ಇದು ಯಾವ ಕಾಲದ ಸುದ್ದಿ ಸ್ವಾಮಿ?

೧೯೮೦ನೇ ಇಸವಿಯದ್ದು. ವೆಂಕಟರಾಯರು ಡೈರಿಗಾಗಿಯೇ ಐದು ಮುರ್ರಾಮಿಶ್ರ ಮತ್ತು ಒಂದು ಸುರುಟಿ ಎಮ್ಮೆ ಸಾಕಿದ್ದರು. ಎರಡು ಎಕರೆ ಹುಲ್ಲುಗಾವಲು. ನಾಲ್ಕು ಎಕರೆ ಕರಡದ ಬ್ಯಾಣ. ಒಂದು ಎಕರೆ ಗದ್ದೆಯಲ್ಲಿ ಸಿಗುವ ಒಣಹುಲ್ಲು. ಪೀಕಿಂಗ್ ಹತ್ತಿಕಾಳು, ಜೋಳದ ಕಡಿ ಇವೇ ಪಶು ಆಹಾರ. ಇದರ ಖರ್ಚು-ಗೊಬ್ಬರದ ಉತ್ಪಾದನೆಗೆ ಸಮಸಮ. ಆಳು ಖರ್ಚು ಹಾಗೂ ಇತರೇ ಖರ್ಚುಗಳೆಲ್ಲಾ ಹಾಲಿನ ಬೆಲೆಯಿಂದ ನಿರ್ವಹಣೆ. ಮನೆಯ ಏಳೂ ಸದಸ್ಯರದು ಕೆಲಸದಲ್ಲಿ ಸಮಪಾಲು. ಒಟ್ಟಾರೆ ಲಾಭಕ್ಕೆ ಕುತ್ತಿಲ್ಲ. ಅದೇ ಸಮಯದಲ್ಲಿ ಸರ್ಕಾರದವರು ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳಿಗೆ ಹಾಲು, ಬ್ರೆಡ್ ಹಂಚುವ ವ್ಯವಸ್ಥೆ ಮಾಡಿದರು. ಇಡೀ ತಾಲ್ಲೂಕಿನ ಗುತ್ತಿಗೆ ವೆಂಕಟರಾಯರಿಗೆ ಸಿಕ್ಕಿತು.

ಹಾಲಿನ ಹಕ್ಕೊತ್ತಾಯ ಕ್ರಮೇಣ ಹೆಚ್ಚುತ್ತಿತ್ತು. ಸರ್ಕಾರ ಹಸಿರು ಕ್ರಾಂತಿಯೊಂದಿಗೆ ಬಿಳಿ ಕ್ರಾಂತಿಯ ಯೋಜನೆಯನ್ನೂ ರೂಪಿಸಿ ಆಗಲೇ ೨೦ ವರ್ಷಗಳಾಗಿತ್ತು. ಅದು ಬುಡಮಟ್ಟ ತಲುಪದೇ ನಿಷ್ಕ್ರಿಯವಾಗಿತ್ತು. ಪ್ರಯೋಗಗಳು ನಡೆಯುತ್ತಲೇ ಇದ್ದವು. ದೇಶದ ಶೇಕಡಾ ೭೦ರಷ್ಟಿರುವ ಸಣ್ಣ ಹಾಗೂ ಅತಿಸಣ್ಣ ರೈತರ ಜೀವನಮಟ್ಟ ಸುಧಾರಣೆ ಅಗತ್ಯವಾಗಿತ್ತು. ಕೃಷಿ ಮತ್ತು ಪಶುಪಾಲನೆಯ ನಿರ್ವಹಣೆ ಮತ್ತು ತಳಿ ಅಭಿವೃದ್ಧಿಯಲ್ಲಿ ಗಣನೀಯ ಬದಲಾವಣೆಗಳಾಗಬೇಕಿತ್ತು. ಅದನ್ನು ಮೊದಲು ಸಾಧ್ಯವಾಗಿಸಿದ್ದು ಗುಜರಾತಿನ ಪಿ.ಜೆ. ಕುರಿಯನ್, ಕ್ಷೀರಕ್ರಾಂತಿಯೊಂದಿಗೆ, ಸಮುದಾಯ ಚಿಂತನೆ ಮತ್ತು ಸಹಕಾರಿ ತತ್ವಗಳ ಸಹಯೋಗವೇ ಬಡತನದ ಪಲ್ಲಟಕ್ಕೆ ಕಾರಣವೆಂದು ಅಮುಲ್ ಮೂಲಕ ನಿರೂಪಿಸಿದ್ದರು.

ಇಸವಿ ೧೯೭೦ರ ದಶಕದಲ್ಲಿ ಕರ್ನಾಟಕವು ಕ್ಷೀರಕ್ರಾಂತಿಯ ಪಥದಲ್ಲಿ ಹೆಜ್ಜೆಯಿಟ್ಟಿತು. ಹೈನುಗಾರಿಕೆಯನ್ನು ಉದ್ಯಮವಾಗಿಸಿತು. ಹೈನುಗಾರಿಕೆಗೆ ಸರಿಯಾದ ಉದ್ದೇಶ ಹಾಗೂ ಹವಾಮಾನ ತುಂಬ ಮುಖ್ಯ. ಪಶುಗಳ ಆರೋಗ್ಯ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಧರಿಸುವುದೇ ಹವಾಮಾನ. ಭಾರತೀಯ ಹಸುತಳಿಗಳಲ್ಲಿ ಸಿಂಧಿತಳಿ ಎಲ್ಲಾ ರೀತಿಯ ಹವಾಮಾನಗಳನ್ನು ಎದುರಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಉಳಿದಂತೆ ಸಾಹಿವಾಲ, ಗಿರ್, ಥಾರ್‌ಪಾರ್ಕರ್ ತಳಿಗಳು ಸಾಧಾರಣವಾಗಿ ಹೊಂದಿಕೊಳ್ಳುತ್ತಿದ್ದವು. ಇವುಗಳ ಸರಾಸರಿ ಹಾಲು ಉತ್ಪಾದನೆ ೧,೨೦೦ ಕೆ.ಜಿ.ಯಿಂದ ೨,೬೦೦ಕೆ.ಜಿ.ಯಷ್ಟು ಪ್ರತಿ ಕರಾವಿಗಿತ್ತು.

ಹರಿಯಾಣ, ಮಧ್ಯಪ್ರದೇಶದ ನಿಮಾರಿ, ರಾಜಾಸ್ಥಾನದ ಕೋನಿ, ರಥಿ, ಆಂಧ್ರದ ಓಂಗೋಲೆ, ಕರ್ನಾಟಕದ ಹಳ್ಳಿಕಾರ್, ಅಮೃತ ಮಹಲ್, ಹಿಮಾಲಯದ ಪೊನ್ನಾರ್, ಮರಾಠ, ಕರ್ನಾಟಕ ಹಾಗೂ ಆಂಧ್ರ ಬೆಲ್ಟ್‌ನ ಕೃಷ್ಣಾವ್ಯಾಲಿ, ಡಿಯೋನಿ, ಗುಜರಾತಿನ ಕಾಂಕ್ರಿಜ್, ಡಾಂಗಿ ಮೊದಲಾದ ೨೬ಕ್ಕೂ ಹೆಚ್ಚು ತಳಿಗಳು ಆಯಾ ಪ್ರದೇಶಗಳಿಗೆ ಮಾತ್ರ ಸೀಮಿತ. ಆಯಾ ಪ್ರದೇಶಗಳಲ್ಲಿ ಹಾಲು ಉತ್ಪಾದನೆ ಮತ್ತು ಹೋರಿಗಳನ್ನು ಕೃಷಿ ಚಟುವಟಿಕೆಗಳಿಗೆ ಸೂಕ್ತವಾಗಿಯೇ ಬಳಸಿಕೊಳ್ಳಲಾಗುತ್ತಿದೆ.

ಎಮ್ಮೆಗಳಲ್ಲಿ ಸುರುಟಿ, ಮುರ್ರಾ, ಜಫರಾಬಾದಿ, ಮೆಹಸಾನಿ, ನೀಲಿ ಮತ್ತು ರಾವಿ, ನಾಗಪುರಿ, ಬಾದಾವಾರಿ ಮೊದಲಾದವುಗಳು ಭಾರತೀಯ ತಳಿಗಳು. ೯೦೦ ಕೆ.ಜಿ.ಯಿಂದ ೨,೫೦೦ಕೆ.ಜಿ.ಯವರೆಗೆ ವರ್ಷಂಪ್ರತಿ ಹಾಲು ಉತ್ಪಾದನೆಗೆ ಯೋಗ್ಯ. ಕೋಣಗಳನ್ನು ಕೃಷಿ ಕೆಲಸಕ್ಕೆ ಬಳಸಲಾಗುತ್ತಿದೆ. ಕಡಿಮೆ ಪೌಷ್ಟಿಕ ಆಹಾರ, ಬೇಕಾಬಿಟ್ಟಿ ಹುಲ್ಲು, ನೀರಸ ಆಹಾರ ಪದ್ಧತಿಯಿದ್ದರೂ, ಪ್ರತಿಕೂಲ ಹವಾಮಾನಗಳಲ್ಲೂ ಎಮ್ಮೆಗಳು ಬದುಕಿ ಹಾಲು ಕೊಡುವ ಸಾಧ್ಯತೆ ಹೆಚ್ಚು. ರುಚಿ, ಕೊಬ್ಬು, ಮೊಸರು, ತುಪ್ಪ, ಖೋವಾಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಭಾರತದಲ್ಲಿ ಎಮ್ಮೆಗೆ ಆದ್ಯತೆಯಿದೆ.

ಇಷ್ಟಾದರೂ ಕ್ಷೀರಕ್ರಾಂತಿಯಲ್ಲಿ ಭಾರತೀಯ ಶುದ್ಧ ತಳಿಗಳಿಗೆ ಪ್ರಾಮುಖ್ಯ ಸಿಗಲಿಲ್ಲ. ಶುದ್ಧವಿದೇಶಿ ತಳಿಗಳು ಇಲ್ಲಿಯ ವಾತಾವರಣಕ್ಕೆ ಹೊಂದಲಿಲ್ಲ.

ನಮ್ಮ ಮಿಲಿಟರಿ ಡೈರಿ ಫಾರ್ಮಿನವರು ಇಸವಿ ೧೯೦೦ರ ಸುಮಾರಿನಲ್ಲಿ ಯುರೋಪಿನಿಂದ ಅಧಿಕ ಹಾಲಿಗೋಸ್ಕರ ಶಾರ್ಟ್‌ಹಾರ್‍ನ್, ಆಯರ್‌ಶಯರ್, ಹೊಲಸ್ಟೀನ್-ಫ್ರೀಝನ್ ತಳಿಗಳನ್ನು ತಂದರು. ಬ್ರೌನ್‌ಸ್ವಿಸ್, ಗ್ಯೂಅರ್‍ನೇಸೇ ತಳಿಗಳು ಆನಂತರದಲ್ಲಿ ಬಂದವು. ಇವುಗಳಿಗೆ ಕೃತಕವಾಗಿ ವಿದೇಶಿ ವಾತಾವರಣವನ್ನೇ ನಿರ್ಮಿಸಲಾಗಿತ್ತು. ಉನ್ನತಮಟ್ಟದ ನಿರ್ವಹಣೆ ಇದ್ದರೂ ಹಸುಗಳು ರೋಗಪೀಡಿತವಾದವು. ಗರ್ಭ ಕಟ್ಟಲೇ ಇಲ್ಲ.

ಎರಡನೇ ಹಂತದಲ್ಲಿ ಹೋಲಸ್ಟೀನ್-ಫ್ರೀಝನ್, ಜರ್ಸಿ ಮತ್ತು ಬ್ರೌನ್‌ಸ್ವಿಸ್ ತಳಿಗಳನ್ನೂ ಭಾರತದ ವಿವಿಧ ಪ್ರದೇಶಗಳಲ್ಲಿ ಸಾಕಲಾಯಿತು. ಜರ್ಸಿ ತಳಿಗಳು ಅಧಿಕ ಬಿಸಿಲು, ಮಳೆ ಮತ್ತು ಚಳಿಯನ್ನು ತಡೆದುಕೊಂಡವು. ಪೌಷ್ಟಿಕ ಆಹಾರದ ಕೊರತೆಯಲ್ಲೂ ಬದುಕಿಕೊಂಡವು. ಇಷ್ಟಾಗಿಯೂ ಹಾಲಿನಲ್ಲಿ ಶೇಕಡಾ ಆರರಷ್ಟು ಕೊಬ್ಬಿನ ಅಂಶವಿತ್ತು. ಆಗಲೇ ಮಿಶ್ರತಳಿಗಳ ಪ್ರಯೋಗ ನಡೆಯಿತು. ವಿದೇಶಿ ತಳಿಗಳ ವೀರ್ಯವನ್ನು ಸ್ಥಳೀಯ ತಳಿಯ ಹಸುಗಳಿಗೆ ಬಳಸಿದರು. ಹುಟ್ಟಿದ ತಳಿಗಳಲ್ಲಿ ಶೇಕಡಾ ೫೦ ಪ್ರಮಾಣದ ಮಿಶ್ರತಳಿಗಳು ಅಧಿಕ ಹಾಲು ಉತ್ಪಾದನೆ ಮತ್ತು ಮಾಂಸಲವಾಗಿರುವಲ್ಲಿ ಯಶಸ್ವಿಯಾಯಿತು. ಇವುಗಳು ಗರ್ಭಧಾರಣೆ ಸಮಸ್ಯೆ, ಸಾಂಸರ್ಗಿಕ ರೋಗಗಳು ಮತ್ತು ವಾತಾವರಣದ ಏರುಪೇರುಗಳನ್ನು ಎದುರಿಸುವ ಸಾಮರ್ಥ್ಯ ಪಡೆದವು. ಮೊದಲಬಾರಿ ಹಸು ಸಾಕುವವರಿಗೆ ಶೇಕಡಾ ೫೦ ಪ್ರಮಾಣದ ವಿದೇಶೀ ಗುಣ ಇರುವ ತಳಿಗಳನ್ನು ಶಿಫಾರಸು ಮಾಡಲಾಯಿತು. ಶೇಕಡಾ ೬೨.೫ ಹಾಗೂ ಶೇಕಡಾ ೭೫ರ ಎರಡನೇ ಪೀಳಿಗೆ ಹುಟ್ಟಿದವು. ವಿದೇಶಿ ಅಂಶ ಹೆಚ್ಚಿದಷ್ಟೂ ರೋಗನಿರೋಧಕ ಶಕ್ತಿ ಕುಂಠಿತವಾಗಿರುತ್ತಿತ್ತು.

ಮಿಶ್ರ ತಳಿಯ ಹೋರಿಗಳಲ್ಲಿ ವೇಗದ ಬೆಳವಣಿಗೆ, ದೃಢಕಾಯ, ಸೌಮ್ಯಸ್ವಭಾವ ಹಾಗೂ ಭಾರಹೊರುವ ಸಾಮರ್ಥ್ಯ ಇತ್ತು. ಆದರೆ ನಡಿಗೆ ನಿಧಾನ. ಕುತ್ತಿಗೆ ಸಮತಟ್ಟಾಗಿದ್ದು ನೊಗ ಹೂಡಲು ಬರುತ್ತಿರಲಿಲ್ಲ. ಆರೋಗ್ಯ ನಿರ್ವಹಣೆಯೂ ಶಿಸ್ತಿನಿಂದಿರಬೇಕಾಗಿತ್ತು.

ಇಸವಿ ೧೯೮೭ರ ಹೊತ್ತಿಗೆ ಪ್ರತಿ ಹಳ್ಳಿಗಳಿಗೂ ಮಿಶ್ರತಳಿಯ ಹಸುಗಳು ಬಂದವು. ಬೆಂಗಳೂರು, ದೊಡ್ಡಬಳ್ಳಾಪುರಗಳಿಂದ ಲಾರಿಗಳಲ್ಲಿ ನಿಧಾನ ನಡಿಗೆ, ಬೋಳುತಲೆ, ಜೋತುಬಿದ್ದ ಗಂಗೆದೊಗಲು, ನೀಳದೇಹ, ನುಣುಪಾದ ಕೂದಲು, ರಾಕ್ಷಸಗಾತ್ರದ ಕೆಚ್ಚಲು ಹೊತ್ತು ನಿಂತ ಹಸುಗಳನ್ನು ನೋಡಿ ಊರಿಗೆ ಊರೇ ಬೆರಗು. ಕೆಚ್ಚಲು ಮುಟ್ಟಿದ ಕೂಡಲೇ ಧಾರೆಧಾರೆಯಾಗಿ ಸುರಿಯುವ ಹಾಲು. ಎಷ್ಟು ಹೊತ್ತಾದರೂ ಒದೆಯದ, ತಿವಿಯದ ಹಸುಗಳು ಮನೆಮಾತಾದವು. ಮಿಶ್ರತಳಿ ಹಸು ಸಾಕುವುದೇ ಪ್ರತಿಷ್ಠೆಯ ಸಂಕೇತವಾಗಿತ್ತು.

ಸರ್ಕಾರ ಮಿಶ್ರತಳಿಗಳ ಹಸು ಕೊಳ್ಳಲು ಸಹಾಯಧನ ನೀಡಿತು. ಬಡತನ ನಿರ್ಮೂಲನ ಯೋಜನೆಯಲ್ಲಿ ವಿದೇಶಿ ಹಣ ಹರಿದುಬಂತು. ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಹಿಂದುಳಿದವರು, ಆರ್ಥಿಕ ಬಲಹೀನರು ಎಲ್ಲರಿಗೂ ಹಸು ಕೊಳ್ಳಲು ಸಾಲ ಸಿಕ್ಕಿತು. ವಿಮಾ ಯೋಜನೆ ಲಭಿಸಿತು. ಇಲ್ಲಿ ರಾಜ್ಯ ಹಾಲು ಉತ್ಪಾದಕ ಸಂಸ್ಥೆ ನಂದಿನಿಯ ಪಾತ್ರ ದೊಡ್ಡದು. ತಾಲ್ಲೂಕುಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಹಾಲು ಸಂಗ್ರಹಣ ಕೇಂದ್ರಗಳನ್ನು ಸ್ಥಾಪಿಸಿತು. ಇವುಗಳಿಗೆ ಪ್ರತ್ಯೇಕ ಸ್ವಾಯತ್ತತೆ ನೀಡಿತು. ಜಿಲ್ಲಾಮಟ್ಟದಲ್ಲಿ ಶೀತಲೀಕರಣ ಘಟಕಗಳನ್ನೂ ನಿರ್ಮಿಸಿತು. ಜಾನುವಾರು ಆಹಾರ ತಯಾರಿ, ವೈದ್ಯರ ನೇಮಕ, ಕೃತಕ ಗರ್ಭಧಾರಣ ಕೇಂದ್ರ, ತರಬೇತಿ ಪಡೆದ ಕಾರ್ಯಕರ್ತರು ಹೀಗೆ ಏನೆಲ್ಲಾ ಅನುಕೂಲತೆಗಳು ರೈತರ ಮನೆಗೇ ಬಂದವು. ಮೊಸರು, ಮಜ್ಜಿಗೆ, ತುಪ್ಪ, ಖೋವಾ, ಪೇಡೆ ಮೊದಲಾದ ಉಪ ಉತ್ಪನ್ನಗಳು ಹರಿದುಬಂದವು. ನಿರ್ವಾತತಂತ್ರ ಬಳಸಿದ ಪ್ಯಾಕೇಟ್‌ಗಳಲ್ಲಿ ಹಾಲು ಸುಲಭವಾಗಿ ಲಭ್ಯವಾಗತೊಡಗಿತು. ಏನೆಲ್ಲಾ ಸಾಧ್ಯತೆಗಳು ಗ್ರಾಹಕರನ್ನು ಹುಡುಕಿ ಹೊರಟವು. ಇಡೀ ವ್ಯವಸ್ಥೆಯೇ ಯೋಜಿತ ಕೇಂದ್ರೀಕರಣಕ್ಕೆ ಒಳಗಾಗಿತ್ತು. ಅನೇಕರು ಬಡತನದಿಂದ ಮೇಲೆ ಬಂದರು. ಹಾಲು ಉತ್ಪಾದನೆಗಾಗಿಯೇ ಹಸು ಸಾಕುವವರು ಹೆಚ್ಚಾದರು.

ಸಾರ್ಥಕ ಗೋಪಾಲನೆ

ಸಾಗರ ತಾಲ್ಲೂಕಿನ ಬೆಳೆಯೂರು ಚಂದ್ರಶೇಖರ ಆರ್ಥಿಕವಾಗಿ ಹಿಂದುಳಿದವರು. ಕೆನರಾ ಬ್ಯಾಂಕಿನ ಸಹಾಯ ಪಡೆದು ಹಸು ತಂದರು. ಕೊಟ್ಟಿಗೆ ಕಟ್ಟಿಸಿದರು. ಮನೆತುಂಬಾ ಹದಿನೈದಕ್ಕೂ ಹೆಚ್ಚು ಜನ. ಅರ್ಧ ಎಕರೆ ತೋಟ. ಒಂದು ಎಕರೆ ಹುಲ್ಲುಗಾವಲು. ಕಿತ್ತು ತಿನ್ನೋ ಬಡತನ. ಹಸುಗಳನ್ನು ತಂದು ಒಂದೇ ವರ್ಷಕ್ಕೆ ಮನೆ ಪರಿಸ್ಥ್ತಿತಿ ಸುಧಾರಿಸಿತು. ನಾಲ್ಕು ವರ್ಷಕ್ಕೆ ಆರು ಹಸುಗಳು ಹಾಲು ಹಿಂಡತೊಡಗಿದವು. ಸಾಲ ತೀರಿಸಿದರು. ಈಗ ಹದಿನೈದು ಹಸುಗಳ ಒಡೆಯರಾಗಿದ್ದಾರೆ. ಹದಿನಾಲ್ಕು ವರ್ಷದ ಹೈನು ಉದ್ಯಮದಲ್ಲಿ ೨೦ಕ್ಕೂ ಹೆಚ್ಚು ಹಸುಗಳನ್ನು ಮಾರಾಟ ಮಾಡಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ದಿನಂಪ್ರತಿ ೬೦ ಲೀಟರ್ ಹಾಲು ಹಾಕುತ್ತಾರೆ. ಸಂಘದ ಅಧ್ಯಕ್ಷರೂ ಆಗಿದ್ದಾರೆ. ವರ್ಷಕ್ಕೆ ೩೦ ಲೋಡ್ ಸೆಗಣಿ ಮಾರಾಟ ಮಡುತ್ತಾರೆ. ತೋಟದಲ್ಲಿ ಬಂಪರ್ ಫಸಲು. ಗೋಬರ್ ಗ್ಯಾಸ್ ಇದೆ. ಇಂದು ಇವರು ಬೆಳೆಯೂರಿನ ಶ್ರೀಮಂತ ಕುಟುಂಬ. ಕಳೆದ ಹತ್ತುವರ್ಷಗಳ ಲೆಕ್ಕಪತ್ರಗಳಿವೆ. ಪಶು ಆಹಾರ, ಹುಲ್ಲುಬಳಕೆ, ಹಾಲು ಉತ್ಪಾದನೆ, ಗೊಬ್ಬರ ಉತ್ಪಾದನೆ, ಉಪಯೋಗ ಮೊದಲಾದ ಅನೇಕ ವಿವರಗಳ ದಾಖಲೆಯಿದೆ. ಸೂಕ್ತರೀತಿಯ ಫೀಡಿಂಗ್ ಹಾಗೂ ಬ್ರೀಡಿಂಗ್ ನಿರ್ವಹಣೆಯೇ ನನ್ನ ಯಶಸ್ಸಿನ ಗುಟ್ಟು ಎನ್ನುತ್ತಾರೆ. ತಮಗೆ ಕೃಷಿಗಿಂತಲೂ ಹೈನುಗಾರಿಕೆಯೇ ಪ್ರಮುಖ ಎಂದು ಪ್ರತಿಪಾದಿಸುತ್ತಾರೆ.

ಇಷ್ಟಾದರೂ ರುಚಿ ಮತ್ತು ಮನೆ ಬಳಕೆಗೋಸ್ಕರ ಎಮ್ಮೆಯ ಹಾಲಿನ ಅಭಿರುಚಿ ಹೆಚ್ಚೇ ಇದೆ. ರಾಜ್ಯದಲ್ಲಿ ೧೬,೦೦,೩೧೦ ಮಿಶ್ರತಳಿ ಹಸುಗಳಿವೆ. ೧,೨೮,೨೨೦ ಎಮ್ಮೆಗಳಿವೆ. (ಇಸವಿ ೨೦೦೩ರ ಜಾನುವಾರು ಗಣತಿ) ಎಮ್ಮೆಹಾಲಿನ ಡೈರಿ ಮಾಡಿದವರು ಪ್ರತ್ಯೇಕ ಮಾರುಕಟ್ಟೆ ಜಾಲವನ್ನೇ ಹೊಂದಿರುತ್ತಾರೆ. ಎಮ್ಮೆಹಾಲಿಗೆ ಸಿಗುವ ಮರ್ಯಾದೆಯೆ ಬೇರೆ.

ಗುಲ್ಬರ್ಗಾದ ಸೇಡಂನ ಮಹೇಂದ್ರ ಶಹಾ ಅವರು ಪಾರಸ್ ಬ್ರಾಂಡಿನ ಹೈನೋದ್ಯಮ ನಡೆಸುತ್ತಿದ್ದಾರೆ. ಉತ್ತಮ ಆಹಾರ, ನುರಿತ ಕೆಲಸಗಾರರು ಮತ್ತು ಸಮಯಕ್ಕೆ ತಕ್ಕ ವೈದ್ಯಕೀಯ ಸೌಲಭ್ಯ ದೊರೆತರೆ ಹೈನೋದ್ಯಮದಿಂದ ಹಾಲಿನ ಹೊಳೆಯನ್ನೇ ಹರಿಸಬಹುದು ಎನ್ನುತ್ತಾರೆ. ಇವರಲ್ಲಿ ಮುರ್ರಾ ತಳಿಯ ೩೮ ಎಮ್ಮೆಗಳಿವೆ. ಪಂಢರಪುರಿ ಗೌಳೇರ್‌ನ ಒಂದು ಬೀಜದ ಕೋಣವಿದೆ. ದಿನದ ಸರಾಸರಿ ಹಾಲಿನ ಉತ್ಪನ್ನ ೨೦೦ ಲೀಟರ್‌ಗಳು. ಹತ್ತಿಕಾಳು, ಶೇಂಗಾ ಹಿಂಡಿ, ಕುಸುಬೆ ಹಿಂಡಿ, ಗೋಧಿಬೂಸಾ, ತೊಗರಿಹೊಟ್ಟಿನೊಂದಿಗೆ ಉಪ್ಪು ಬೆಲ್ಲ ಸೇರಿಸಿ ಮಾಡಿದ ದಾಣಿ, ಒಂದು ಎಮ್ಮೆಗೆ ಎಂಟು ಕಿಲೋದಷ್ಟು ನೀಡುತ್ತಾರೆ. ಉಳಿದಂತೆ ಹಸಿರು ಹುಲ್ಲು, ಜೋಳದ ದಂಟು, ಭತ್ತದ ಹುಲ್ಲು, ಚೊಗಚೆ ಸೊಪ್ಪು ಹೀಗೆ ವಿಭಿನ್ನ ಆಹಾರದ ವ್ಯವಸ್ಥೆಯಿದೆ. ಹಸಿರು ಮೇವಿಗಾಗಿ ನೇಪಿಯರ್ ಮತ್ತು ಪ್ಯಾರಾ ತಳಿಯ ಹುಲ್ಲುಗಳನ್ನು ಬೆಳೆಯುತ್ತಿದ್ದಾರೆ. ಬೇಸಿಗೆಯ ಬಿಸಿಲು ನಿವಾರಣೆಗೆ ಹತ್ತಿರದಲ್ಲಿ ಹರಿವ ಕಮಲಾವತಿ ನದಿಯಿದೆ. ಮೇಯಿಸುವ ಉದ್ದೇಶಕ್ಕೆ ಇಬ್ಬರು ಕೆಲಸಗಾರರಿದ್ದಾರೆ. ಉಳಿದಂತೆ ಆಹಾರ, ವೈದ್ಯಕೀಯ ಮೊದಲಾದ ಕೆಲಸಗಳಿಗೆ ನಾಲ್ಕು ಜನರಿದ್ದಾರೆ. ಇವರದು ಹಗಲು-ರಾತ್ರಿ ಕೆಲಸ. ಒಂದು ಲೀಟರ್ ಹಾಲಿಗೆ ಎರಡೂ ರೂಪಾಯಿ ಸಂಬಳ, ಪ್ರತಿಬಾರಿ ಕರು ಹಾಕಿದಾಗ ೫೦೦ ರೂಪಾಯಿ ಭತ್ಯೆ. ಹೆಣ್ಣುಕರುವಾದರೆ ವಿಶೇಷ ಬೋನಸ್. ಹಾಲು ಹಂಚಲು ಇಬ್ಬರಿದ್ದಾರೆ. ಪಾರಸ್ ಬ್ರಾಂಡ್‌ನ ಗಟ್ಟಿಯಾದ ಅಪ್ಪಟ ಹಾಲಿನ ಬೆಲೆ ಲೀಟರ್‌ಗೆ ೨೮ ರೂಪಾಯಿಗಳು. ಇದು ಸೇಡಂನಲ್ಲಿ ಮನೆಮಾತಾದ ಹಾಲು. ಈಗೀಗ ಖೋವಾ, ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಅದಕ್ಕಾಗಿ ಹೆಚ್ಚು ಹಾಲನ್ನು ಮೀಸಲಿಡುತ್ತಿದ್ದಾರೆ.

ಕರು ಹಾಕಿದ ಎಮ್ಮೆಯ ಬೆಲೆ ೪೨ ಸಾವಿರ ರೂಪಾಯಿಗಳಿದ್ದರೆ ಹಾಲು ಕೊಡದ ಬರಡು ಎಮ್ಮೆಗೆ ಕೇವಲ ೧೦ಸಾವಿರ ಮಾತ್ರ. ಮೂರು ನಾಲ್ಕು ಕರುಗಳಾದ ಮೇಲೆ ಹಾಲು ಕಡಿಮೆಯಾಗುತ್ತದೆ. ಹೀಗಾಗಿ ಎಮ್ಮೆಗಳನ್ನು ಆಗಾಗ ಮಾರುತ್ತಲೋ, ಬದಲಾಯಿಸುತ್ತಲೋ ಇರಬೇಕು ಎನ್ನುತ್ತಾರೆ ಮಹೇಂದ್ರ ಶಹಾ.

ಹೆಬ್ರಿ ಬಳಿಯ ಚಾರದ ರಾಜೀವಶೆಟ್ಟಿಯವರು ಆಧುನಿಕ ವ್ಯವಸ್ಥೆಗಳನ್ನೆಲ್ಲಾ ಹೊಂದಿದ ಹೈನೋದ್ಯಮ ಮಾಡಿದರೆ, ಗದಗದ ಸುರೇಶ್ ಕಳೆದ ಆರು ವರ್ಷಗಳಿಂದ ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಮಾಳದ ಗೋವಿಂದ ಮರಾಠೆ ಫೇಡೆ ಉದ್ಯಮಕ್ಕಾಗಿಯೇ ಹೈನುಗಾರಿಕೆ ಮಾಡುತ್ತಿದ್ದಾರೆ.

ಎಮ್ಮೆಯಾಗಲಿ, ಹಸುವಾಗಲಿ ಹೈನುಗಾರಿಕೆಯ ಉದ್ದೇಶ ಮತ್ತು ನಿರ್ವಹಣೆಗಳನ್ನು ಶಿಸ್ತಿನಿಂದ ಪಾಲಿಸಿದರೆ ಎಂದೆಂದೂ ಲಾಭದಾಯಕ. ಹೈನು ಉದ್ಯಮವು ಕೃಷಿಯೊಂದಿಗೆ ಹೇಳಿ ಮಾಡಿಸಿದ ಜೋಡಿ. ಕ್ಷೀರ ವ್ಯವಹಾರ ರೈತರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಪೂರಕ.