ತಮಿಳುನಾಡಿನ ಪುದುಕೋಟೆಯಲ್ಲಿ ೨-೮-೧೯೩೧ ರಂದು ಜನಿಸಿದ ಗೌರಿಯವರ ಸಂಗೀತ ಶಿಕ್ಷಣ ಪುದುಕೋಟೆ ವೆಂಕಟರಾಮ ಅಯ್ಯರ್, ಕೆ.ಎಸ್‌. ಕೃಷ್ಣಮೂರ್ತಿ, ಜಿ.ಎನ್‌. ಬಾಲಸುಬ್ರಹ್ಮಣ್ಯಂ, ಡಾ||ಎಂ.ಎಲ್‌. ವಸಂತಕುಮಾರಿ ಹಾಗೂ ಎಸ್‌. ಕಲ್ಯಾಣರಾಮನ್‌ ಅವರುಗಳಲ್ಲಿ ಪಡೆದರು. ವಿದ್ವತ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಗೌರಿ ವೀಣಾ ವಾದನವನ್ನೂ ಬಲ್ಲವರು.

ಸುಮಾರು ಐದು ದಶಕಗಳಿಂದಲೂ ನಾಡಿನ ಎಲ್ಲಾ ಸಂಗೀತ ಸಭೆಗಳಲ್ಲಿ, ಸಂಗೀತ ಸಮ್ಮೇಳನಗಳಲ್ಲಿ, ಆಕಾಶವಾಣಿ- ದೂರದರ್ಶನ ಮಾಧ್ಯಮಗಳಲ್ಲಿ ಸಂಗೀತ ಕಚೇರಿಗಳನ್ನು, ಸೋದಾಹರಣ ಭಾಷಣ, ಪ್ರಾತ್ಯಕ್ಷಿಕೆಗಳನ್ನೂ ನಡೆಸಿದ್ದಾರೆ. ಇವರ ಕಾರ್ಯಕ್ರಮಗಳು ತಾಷ್ಕೆಂಟ್‌, ಸಿಂಗಪೂರ ದೂರದರ್ಶನಗಳಿಂದಲೂ ಪ್ರಸಾರವಾಗಿವೆ.

ಮೈಸೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಉಪನ್ಯಾಸಕಿಯಾಗಿ, ರೀಡರ್ ಆಗಿ, ವಿಭಾಗದ ಮುಖ್ಯಸ್ಥೆಯಾಗಿ ನಾನಾ ರೀತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಮೇರಿಕ, ಕೆನಡಾ ಮುಂತಾದ ವಿದೇಶಗಳಲ್ಲೂ ನಮ್ಮ ದೇಶದ ಹಲವೆಡೆಗಳಲ್ಲೂ ಕಚೇರಿ ನೀಡಿರುವ ಹಿರಿಮೆ ಇವರದು. ಉತ್ತಮ ಬೋಧಕಿಯಾಗಿರುವ ಇವರ ಮಾರ್ಗದರ್ಶನದ ಲಾಭ ಪಡೆದು ವಿದ್ವಾಂಸರಾಗಿರುವವರು ಅನೇಕರು.

ಮೂವತ್ತಕ್ಕೂ ಹೆಚ್ಚು ಉಪಯುಕ್ತ ಪುಸ್ತಕಗಳನ್ನು ಸಂಗೀತ ವಿಷಯಕವಾಗಿ ಬರೆದಿರುವ ಶ್ರೀಮತಿಯವರು ಮೈಸೂರು ಕೇರಳಗಳ ಅನೇಕ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ಮಹಾ ಪ್ರಬಂಧ ಮಂಡಿಸಲು, ಡಾಕ್ಟರೇಟ್‌ ಪದವಿ ಪಡೆಯಲು ಮಾರ್ಗದರ್ಶಕರಾಗಿದ್ದಾರೆ. ಈ ಪದವಿಗಾಗಿ ಸಲ್ಲಿಸಲ್ಪಡುವ ಮಹಾಪ್ರಬಂಧಗಳ ಪರಿಶೀಲಕರಾಗಿ ಹಲವಾರು ವಿಶ್ವವಿದ್ಯಾಲಯಗಳ, ಅಧ್ಯಯನ ಕೇಂದ್ರಗಳ ಸದಸ್ಯೆಯಾಗಿ ಸಂಗೀತ ಪರೀಕ್ಷೆಗಳನ್ನು ಸುಲಲಿತವಾಗಿ ನಡೆಸಲು ನೆರವಾಗುತ್ತ ಕೆಲವು ಅಧ್ಯಯನ ಕೇಂದ್ರಗಳ ಅಧ್ಯಕ್ಷೆಯೂ ಆಗಿದ್ದು ಸೇವೆ ಸಲ್ಲಿಸುತ್ತಿದ್ದಾರೆ.

‘ಸಂಗೀತ ರಸಮಂಜರಿ’, ‘ಕಲಾ ನಿಪುಣ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳಿಂದ ಸನ್ಮಾನಿತರಾಗಿರುವ   ಶ್ರೀಮತಿಯವರನ್ನು ಅನೇಕ ಸಂಘ-ಸಂಸ್ಥೆಗಳೂ ಗೌರವಿಸಿವೆ.