ಗಂಗಿ ಗೌರೀ ಸಂವಾದ 5

ವಚನ:

ಸುತರ ಬಲುಮೆಗಳನು ಕೇಳೆಲೆ ಹೆಣ್ಣೆ ನಿನ್ನ
ಹತಮಾಡಿ ಹಲ್ಲ ಮುರಿವರೆಲೆ ಹೆಣ್ಣೆ
ರತುನ ಮಾಣಿಕದ ಮನೆಯೊಳೆಲೆ ಹೆಣ್ಣೆ ನಿನ್ನ
ಹಿತದಿಂದ ರಕ್ಷಿಸುವೆನು ಎಲೆ ಹೆಣ್ಣೆ                                                                            ॥

ಎಲ್ಲ ಮಕ್ಕಳಿನ್ನು ಕೇಳು ಅಕ್ಕಯ್ಯ ಚಿಕ್ಕ
ನಲ್ಲೇರುಗಳು ಬಂದಮೇಲೆ ಅಕ್ಕಯ್ಯ
ಹಲ್ಲು ಹೋದ ಮುದುಕಿ ನೀನು ಅಕ್ಕಯ್ಯ ನಿನಗೆ
ಹುಲ್ಲ ಮನೆಯು ಸೋಬಿತಾನೆ ಅಕ್ಕಯ್ಯ                                                                 ॥

ಸೊಸೆಯ ಮಗನ ನಂಬಬೇಡ ಅಕ್ಕಯ್ಯ ಅವನು
ಬಿಸಿಗಣ್ಣಿನ ಕೋಪದವನು ಅಕ್ಕಯ್ಯ
ಕಸವ ನೀರ ಹೊರಿಸುವಾರು ಅಕ್ಕಯ್ಯ ನಿನ್ನ
ಮಸಣಕ್ಕೀಡಮಾಡದಿಹರೆ ಅಕ್ಕಯ್ಯ                                                                         ॥

ಷಣ್ಮುಖನ ನಂಬಬೇಡ ಅಕ್ಕಯ್ಯ ಅವನು
ಸೆಣಸಿ ತಾರಕನ ಕೊಂದನಕ್ಕಯ್ಯ
ಗುಣವು ಮುಳ್ಳ ಮೊನೆಯಷ್ಟಿಲ್ಲ ಅಕ್ಕಯ್ಯ ನಿನ್ನ
ಹಣೆಯ ಬರಹದ ಕರ್ಮಫಲವೆ ಅಕ್ಕಯ್ಯ                                                                ॥

ನೂರುವರುಷ ತುಂಬಿತಿನ್ನು ಅಕ್ಕಯ್ಯ ನಿನಗೆ
ನೀರು ಗಂಜಿ  ಹೊಯ್ವರಿಲ್ಲ ಅಕ್ಕಯ್ಯ
ಸೇರಿಕೊಳ್ಳೆ ಹಿರಿಯ ಮಗನ ಅಕ್ಕಯ್ಯ ನಮ್ಮ
ಕೇರಿಯೊಳಗೆ ಸುಖದೊಳಿರೆ ಅಕ್ಕಯ್ಯ                                                                    ॥

ಬಿಗುಹು ಬಿಂಕ ಸಲ್ಲದಿನ್ನು ಅಕ್ಕಯ್ಯ ನಿನಗೆ
ತೊಗಲು ಜೋಲು ಬಿದ್ದವೆಲೆ ಅಕ್ಕಯ್ಯ
ಜಗದ ಜನರ ಹಗೆಯು ಕಾಣೆ ಅಕ್ಕಯ್ಯ ನಿನ್ನ
ಹುಗಿದು ಹಾಕೋರಿಲ್ಲ ಅಕ್ಕಯ್ಯ                                                                                ॥

ಮುದುಕಿ ಕೇಳು ಗಿರಿಜಾದೇವಿ ಅಕ್ಕಯ್ಯ ಅವಗೆ
ಮದುವೆ ಮುಂಜಿ ಆಗಲಿಲ್ಲ ಅಕ್ಕಯ್ಯ
ಕದುರು ಹಂಜಿ ನೂತುಕೊಂಡು ಅಕ್ಕಯ್ಯ ನಮ್ಮ
ಸದನದೊಳಗೆ ಸುಖದೊಳೆರೆ ಅಕ್ಕಯ್ಯ                                                                   ॥

ಬಣ್ಣನೆಯ ನುಡಿಗಳಲ್ಲ ಅಕ್ಕಯ್ಯ ಮಾಯ
ಕಣ್ಣ ದೇವತೆಗಳು ಅಳಿದಾರಕ್ಕಯ್ಯ
ಹೆಣ್ಣು ಜನ್ಮ ನಿನ್ನ ಪಾಡೇನಕ್ಕಯ್ಯ ನಿನ್ನ
ಮಣ್ಣಿಗ್ಹಾದಿ ಮಾಡಿಕೊಳ್ಳಿ ಅಕ್ಕಯ್ಯ                                                                           ॥

ಮುದ್ದು ಮೊಗದ ಗಿರಿಜಾದೇವಿ ಅಕ್ಕಯ್ಯ ನೀನು
ಬಿದ್ದು ಹೋಹ ದಿನವು ಬಂತು ಅಕ್ಕಯ್ಯ
ಸದ್ದು ಸಪ್ಪಳಿಲ್ಲದಂತೆ ಅಕ್ಕಯ್ಯ ನಮ್ಮ
ಬುದ್ಧಿ ಮಾತಿನೊಳಗೆ ನಡೆಯೆ ಅಕ್ಕಯ್ಯ                                                                  ॥

ಮತ್ತೆ ಕೇಳು ಮಂತ್ರಿ ಬಸವ ಗುರುರಾಯ ಮನೆಯ
ತೊತ್ತುಮಾಡಿ ಜಾಡಿಸಿದರೆ ಗುರುರಾಯ
ಎತ್ತಿ ಕೋಪಾಟೋಪಗಳಲಿ ಗುರುರಾಯ ಗಿರಿಜೆ
ಹತ್ತಿಸಿನ್ನು ಜಾಳಿಸಿದಾಳು ಗುರುರಾಯ                                                                   ॥

ಹೊಟ್ಟಿಕೂಳ ತಿಂದ ನಾಯಿ ಎಲೆ ಹೆಣ್ಣೆ ದೊಡ್ಡ
ಬೆಟ್ಟಗಿರಿಗೆ ಬೊಗುಳಲೇನು ಎಲೆ ಹೆಣ್ಣೆ
ನಟ್ಟಗುಂಡು ನಡುಗುವಾದೆ ಎಲೆ ಹೆಣ್ಣೆ ನಿನ್ನ
ಲೊಟ್ಟಿಜಾತಿ ಗುಣಕೆ ಹೋದೆ ಎಲೆ ಹೆಣ್ಣೆ                                                                  ॥

ಜೋಕುಮಾರ ಹೊಲತಿ ಕೇಳು ಎಲೆ ಹೆಣ್ಣೆ ನಾಯಿ
ಸಿಕ್ಕ ಹಳೆಯ ತೊಗಲುಗಳನು ಎಲೆ ಹೆಣ್ಣೆ
ತಾಕಿ ಹಸ್ತಿಮದ್ದಾನೆಗಳು ಎಲೆ ಹೆಣ್ಣೆ ಕೆಡಹಿ
ನೂಕುವದು ಮೂಲಹೊಲತಿ ಎಲೆ ಹೆಣ್ಣೆ                                                                    ॥

ಮೂಳಹೊಲತಿ ಕಬ್ಯಾರವಳೆ ಎಲೆ ಹೆಣ್ಣೆ ನಿನ್ನ
ಕೋಳಿ ಹಂದಿ ಮೀನ ಮರತಿ ಎಲೆ ಹೆಣ್ಣೆ
ತೋಳುತೊಡೆಯ ಬಲುಮೆ ಇದ್ದರೆಲೆ ಹೆಣ್ಣೆ ಸಂತಿ
ಸೂಳೆಯಾಗಿ ಜಲ್ಮ ಹರಿಯೆ ಎಲೆ ಹೆಣ್ಣೆ                                                                    ॥

ಪದನು:

ಸೂಳೆ ವೇಶಿಯರು ಎಂದು ನೀ ನಮ್ಮ ಬಾಳ್ವರ ನುಡಿವರೇನೇ
ತಾಳಿದೆನು ನಾನೀಗ ನಿನ್ನ ಸುಳಿವಳಿಗಳನು ಹೇಳಿದರೆ ಹುರುಳಿಲ್ಲವೇ               ॥

ದೇವಿ ಗಿರಿಜೆ ಕೇಳು ನಿಂಬಳಗ ಆವ ಸುದ್ದಗಳು ಹೇಳೆ
ಭಾವೆ ಛಾಯಾದೇವಿ ಯಮಧರ್ಮನ ರಾಣಿ ದೇವಪುರುಷನ ನುಂಗಳೆ
ಭೂವಳಯ ಬಲ್ಲ ಕೆಲಸ ಬ್ರಹಸ್ಪತಿಯು ದೇವಚಂದ್ರನ ಕೂಡಳಿ
ತಾವರೆಗಂಧಿರತಿದೇವಿಯನು ತಾ ಪಡೆದು ಹಾವಿನೊಳಗಾದ ಚಂದ್ರ                ॥

ಸಪ್ತ ಋಷಿಗಳ ಹೆಂಡರು ಪುರುಷರಿಗೆ ಪುಷ್ಟಜಾತಿಯನೆ ತರುತಾ
ಅಪ್ಪಿಕೊಳ್ಳರೇ ಅಗ್ನಿಪುರುಷನ ಬೇಗದಲಿ ತಪ್ಪಿ ಶಿಶುಗಳ ಪಡೆಯರೆ
ಮುಪ್ಪುರದ ಪತಿವ್ರತೆಯರು ಕೃಷ್ಣನ ಅಪ್ಪಿ ಬತ್ತಲೆಯಾಗರೆ
ದರ್ಪಣದ ಮುಖಿ ಧರ್ಮರಾಯನ ರಾಣಿಗೆ ನೆಪ್ಪುಹರಿಯದೆ ಕರ್ಣಗೆ                   ॥

ಮಾನವರ ಹೇಳಲಳವೆ ಅಭಿಮಾನವಗೇಡಿನ ಬಗೆಯನು
ಊನವಿಲ್ಲದೆ ಕೊಂತಿ ಐವರನು ಭ್ರಮಿಸುತಲಿ ತಾನು ಮಕ್ಕಳ ಪಡೆಯಳೆ
ಹೀನ ಮಾನವರ ಮಾತು ಅಂತಿರಲಿ ನೀನಾವ ಸುದ್ದ ಹೇಳು
ನಾನಾಗಿ ನಿನ್ನ ಅಪರಾಧಗಳ ನುಂಗಿದರೆ ಹೀನಗುಣಗಳ ತೋರಿದೆ                  ॥

ನಿನ್ನಯ ಮದುವೆಗಳಿಗೆ ಶಿವ ತಾನು ಹನ್ನೆರಡು ಕೋಟಿ ದ್ರವ್ಯ
ಹೊನ್ನಧಾರೆಯನೆರೆದು ನಿನ್ನ ಮದುವೆಯನಾಗಿ ತನ್ನ ತೊಡೆಯೊಳಗಿರಿಸಿದ
ಉನ್ನತ ಐಶ್ವರ್ಯದಿ ಇರುತಿರಲು ಅನ್ಯ ಬ್ರಹ್ಮನ ಭ್ರಮಿಸಲು
ನಿನ್ನ ಕೊಲಲಾರದೆ ಮುನ್ನ ಬ್ರಹ್ಮನ ಶಿರವ ತನ್ನ ಉಗುರಿಲಿ ಚಿವುಟಿದ               ॥

ಕಪ್ಪು ಕುಲದವಳು ಎಂದು ನೀ ನಮ್ಮ ನಿಷ್ಫಲದಿ ನುಡಿವರೇನೆ
ತುಪ್ಪಬೋನವನುಂಡು ಪರರ ಭ್ರಮಿಸುವಳೀಗ ಕಪ್ಪುಗುಲದವಳು ಕಾಣೆ
ತೊಪ್ಪಲರಿವೆಯ ಗಿರಿಜೆಯೆ ನಿನ್ನ ಗುಣ ಗೋಪ್ಯಮಾಡಲು ಮಾಜಿದೆ
ಕುಪ್ಪಸವ ಹೊಲಿವ ಚಿಪ್ಪಿಗನ ಗುಪ್ತಸುದ್ದಿಯ ಮರೆದೆಯಾ                                    ॥

ಮುತ್ತೈದೆ ಗಿರಿಜೆ ಕೇಳು ನಿನ್ನಯ ಸತ್ಯಗಳು ಸುಡಲಿ ಇನ್ನು
ಮತ್ತೆ ನಿನ್ನಯ ಚಿತ್ತಗುಣಭಾವಗಳ ಕಂಡು ಹತ್ತು ತಲೆಯವಗಿತ್ತನು
ಎತ್ತಿ ಕೊಂಡೊಯ್ದು ತಿಳಿದು ರಾವಣನು ಚಿತ್ತ ಮನಸಿಗೆ ಬಾರದೆ
ಹೊತ್ತ ಮೋರೆಯ ಮುದುಕಿ ಛೀ ಎಂದು ದಬ್ಬಿದರೆ ಮತ್ತೆ ನಮ್ಮನು ಕೂಡಿದೆ   ॥

ಹೆಡಗಿದಲೆ ಗಿರಿಜೆ ಕೇಳು ನಿನ್ನಯ ಮುಡಿದಲೆಗೆ ನೆರೆ ಬಂದವು
ಗಡಿಗೆಮಡಕೆಯ ತೊಳೆದು ನಮ್ಮ ಅರಮನೆಯೊಳಗೆ ಅಡಿಗೆ ಬಾಣಸಿಯಾಗಿರೆ
ನಡೆ ನುಡಿಯು ಕೆಟ್ಟಮೇಲೆ ಎಲೆ ಗೌರಿ ಬಡಿವಾರ ಇನ್ಯಾತಕೆ
ಒಡೆಯ ಸಂಗಮನಾಥನರಮನೆಯೊಳಗಿನ್ನು ನುಡಿಯದೆ ಸುಮ್ಮನಿರೆ              ॥

ವಚನ:

ಮನವ ನೋಯಿಸಿ ನುಡಿದರಿನ್ನು ಎಲೆದೇವ ಗೌರಿ
ಘನಕೋಪಗಳ ತಾಳ್ದಳಿನ್ನು ಎಲೆದೇವ
ಅನಲು ಜನಿಸಿ ಮನದೊಳಿನ್ನು ಎಲೆದೇವ ಚಿಕ್ಕ
ಸುನಿಯ ಮಾಡಿ ಗರ್ಜಿಸಿದಳು ಎಲೆದೇವ                                                               ॥

ಬೀದಿ ಹೊಲತಿ ಕಬ್ಬೆರವಳೆ ಎಲೆ ಹೆಣ್ಣೆ ನಮ್ಮ
ಹಾದರಗಳನೇನ ಬಲ್ಲೆ ಎಲೆ ಹೆಣ್ಣೆ
ಸೋದಿಸುತ್ತ ಮನವ ನೋಡಿ ಎಲೆ ಹೆಣ್ಣೆ ಬಿನದ
ಚಿಪ್ಪಿಗವತಾರದಲಿದ್ದ ಎಲೆ ಹೆಣ್ಣೆ                                                                                ॥

ಬ್ರಹ್ಮರಾವಳನು ಕೇಳು ಎಲೆ ಹೆಣ್ಣೆ ಶಿವಗೆ
ಇಮ್ಮಡಿಯ ಘನವೆಂದೆನಲು ಎಲೆ ಹೆಣ್ಣೆ
ಹಮ್ಮ ಮುರಿದು ಹತಮಾಡಿದನು ಎಲೆ ಹೆಣ್ಣೆ ಚಿಕ್ಕ
ಚುಮ್ಮನಾಯಿ ಬೊಗಳಲೇನು ಎಲೆ ಹೆಣ್ಣೆ                                                                ॥

ಕುಡಿದು ನೆತ್ತೆಗೇರಿದವಳೆ ಎಲೆ ಹೆಣ್ಣೆ ಎನ್ನ
ಒಡೆಯ ಮನವ ನೋಡಿದಾನ ಎಲೆ ಹೆಣ್ಣೆ
ತುಡುಕಿ ತುಳುಕಿ ಸೂಸದಿರಲು ಎಲೆ ಹೆಣ್ಣೆ ಮೆಚ್ಚಿ
ತೊಡೆಯ ಮೇಲೆ ಮಲಗಿಕೊಂಡ ಎಲೆ ಹೆಣ್ಣೆ                                                           ॥

ಭವದ ಕುರಿಯೆ ಹೇಮನರಿಯೆ ಎಲೆ ಹೆಣ್ಣೆ ಸರ್ವ
ಭುವನಕೆಲ್ಲ ಅಧಿಕನಾವ ಎಲೆ ಹೆಣ್ಣೆ
ಶಿವನ ಅರ್ಧದೇಹಿ ನಾನು ಎಲೆ ಹೆಣ್ಣೆ ಬೇರೆ
ಶಿವನು ಹೋಹ ಶರೀರವುಂಟೆನೆಲೆ ಹೆಣ್ಣೆ                                                                 ॥

ಚೆನ್ನ ಶಿವನ ಮಡದಿ ನಾನು ಎಲೆ ಹೆಣ್ಣೆ ಚಿಕ್ಕ
ಕುನ್ನಿ ನಾಯಿ ಜರಿದರೇನು ಎಲೆ ಹೆಣ್ಣೆ
ಅನ್ಯ ಹಾದರಗಳು ಉಂಟೆ ಎಲೆ ಹೆಣ್ಣೆ ಕೇಳು
ತೊನ್ನಹೊಲತಿ ಕೆಟ್ಟ ಮೂಳಿ ಎಲೆಹೆಣ್ಣೆ                                                                      ॥

ಹೆಜ್ಜವುಂಟೆ ವಜ್ರಕಿನ್ನು ಎಲೆ ಹೆಣ್ಣೆ ಚಿಕ್ಕ
ಗುಜ್ಜಿನಾಯಿ ಬೊಗಳಲೇನು ಎಲೆಹೆಣ್ಣೆ
ಸೆಜ್ಜೆ ಗೃಹದ ದೇವತೆಗಳು ಎಲೆ ಹೆಣ್ಣೆ ನನ್ನ
ಹೆಜ್ಜೆಯೊಳು ಉರುಳಿದಾರು ಎಲೆ ಹೆಣ್ಣೆ                                                                  ॥

ಬಲೆಯ ಹಾಕಿ ಕೊಲೆಯ ಕೊಲ್ವೆ ಎಲೆ ಹೆಣ್ಣೆ ನಿನ್ನ
ಹೊಲೆಯ ಮಾತ ಒಪ್ಪರಿನ್ನು ಎಲೆ ಹೆಣ್ಣೆ
ಕಲೆಯ ನೆಲೆಯ ಬಲ್ಲ ಹಿರಿಯರೆಲೆ ಹೆಣ್ಣೆ ನನ್ನ
ನೆಲೆಯನಾರು ಕಂಡುದಿಲ್ಲ ಎಲೆ ಹೆಣ್ಣೆ                                                                      ॥

ಮುಪ್ಪುವುಂಟೆ ಶಿವನ ಮಡದಿಗೆಲೆ ತಂಗಿ ನಿನ್ನ
ಕಪ್ಪು ಹೊಲಸ ಮನವನೊಪ್ಪರೆಲೆ ತಂಗಿ
ತಿಪ್ಪೆ ಮಲವ ಬಳಿವ ಮೂಳಿ ಎಲೆ ತಂಗಿ ಶಿವಗೆ
ಕರ್ಪುರದ ಜ್ಯೋತಿ ನಾನು ಎಲೆ ತಂಗಿ                                                                   ॥

ಹೆಂಡಿ ಹಿಡಿವ ಮೂಳಿ ಬಂದು ಎಲೆ ಹೆಣ್ಣೆ ಚಲ್ವ
ಗೊಂಡೆಯೆಂದಳವನೇರಲು ಎಲೆ ಹೆಣ್ಣೆ
ಕಂಡು ಸಗಣಿ ಎನ್ನದೆಂಬ ಎಲೆ ಹೆಣ್ಣೆ ನಿನ್ನ
ಗುಂಡಗುಣಕೆ ಹೋದೆ ನೀನು ಎಲೆ ಹೆಣ್ಣೆ                                                                 ॥

ಕತ್ತೆ ಪರಿಮಳವ ಹೊತ್ತರೆ ಎಲೆ ಹೆಣ್ಣೆ ಅದರ
ಯುಕ್ತಿ ಪರಿಮಳವ ಬಲ್ಲುದೆ ಎಲೆ ಹೆಣ್ಣೆ
ತೊತ್ತಿಗುಂಟೆ ಗರತಿಭಾವ ಎಲೆ ಹೆಣ್ಣೆ ಶಿವನ
ನೆತ್ತಿಯೊಳಗೆ ಇದ್ದರೇನೆ ಎಲೆ ಹೆಣ್ಣೆ                                                                          ॥

ದೇವಭಕ್ತರೆಲ್ಲ ಕೂಡಿ ಎಲೆ ಹೆಣ್ಣೆ ಚಿಕ್ಕ
ಭಾವೆ ತಂದು ಸಲಹಿದರು ಎಲೆ ಹೆಣ್ಣೆ
ಜೀವ ಸೊಕ್ಕಿ ನುಡಿಯದಿರೆಲೆ ಹೆಣ್ಣೆ ಛೀ
ಹೇವಗೆಟ್ಟ ಹೇಸಿಮೂಳಿ ಎಲೆ ಹೆಣ್ಣೆ                                                                            ॥

ಕೆಟ್ಟ ಹೊಲತಿ ಕಬ್ಬೆರವಳೆ ಎಲೆ ಹೆಣ್ಣೆ ನಿನಗೆ
ಹುಟ್ಟರೇನೆ ಗಂಡರುಗಳು ಎಲೆ ಹೆಣ್ಣೆ
ಹೊಟ್ಟೆಹೊರೆದು ಬಾಳೊಕಿಂತ ಎಲೆ ಹೆಣ್ಣೆ ಒಂದು
ಕಟ್ಟಿಕೆರೆಯ ಭಾವಿ ಬೀಳೆ ಎಲೆ ಹೆಣ್ಣೆ                                                                         ॥

ನೆತ್ತಿ ಜೆಡೆಯ ಬಿಡಿಸದಿರ್ದಡೆಲೆ ಹೆಣ್ಣೆ ನಾನು
ಹೊತ್ತಗಿರಿಯು ಕುಚಗಳಲ್ಲ ಎಲೆ ಹೆಣ್ಣೆ
ಸುತ್ತಿಕೊಂಡು ಮುಂದಲೆಗಳ ಎಲೆ ಹೆಣ್ಣೆ ನಿನ್ನ
ಕುತ್ತಿಗೆಯ ಮುರಿಯದಿಹೆನೆ ಎಲೆ ಹೆಣ್ಣೆ                                                                     ॥

ತೊಡೆಯ ಬಿಟ್ಟು ಕಡೆಗೆ ನಿಂತು ಗುರುರಾಯ ಗೌರಿ
ಗುಡಿಗುಡಿಸಿ ಘರ್ಜಿಸಿದಳು ಗುರುರಾಯ
ನಡುಗಿತಿನ್ನು ಭೂಮಿ ಗಗನ ಗುರುರಾಯ ಸಪ್ತ
ಕಡಲು ಒಡೆದು ಬೆದರಿದಾವು ಗುರುರಾಯ                                                             ॥

ಬಹುಕೋಪದಲಿ ಗರ್ಜಿಸಿದರೆ ಗುರುರಾಯ ಗಂಗೆ
ಮಹಿತಳಕ್ಕೆ ಮುಳುಗಿದಂತೆ ಗುರುರಾಯ
ಮಹದೇವನ ಮುಖವ ನೋಡಿ ಗುರುರಾಯ ಗಂಗೆ
ಬಹುದುಃಖದಿ ದುಃಖಿಸಿದಳು ಗುರುರಾಯ                                                              ॥

ಕೇಳಿ ಘರ್ಜನೆಯ ಧ್ವನಿಗೆ ಗುರುರಾಯ ಗಂಗೆ
ಬಾಳೆ ಸುಳಿಗಳಂತೆ ನಡುಗಿ ಗುರುರಾಯ
ಆಳೊ ಶಿವನ ಮುಖವ ನೋಡಿ ಗುರುರಾಯ ಗಂಗೆ
ಪ್ರಳಾಪದಲಿ ಶೋಕಿಸಿದಳು ಗುರುರಾಯ                                                               ॥

ಪದನು:

ಅಯ್ಯಯ್ಯ ಪಾಪಿ ಶಿವನೆ ನನಗಿನ್ನು ಬೈಯಬಾರದ ಬೈಗಳ
ಕೈಯಾರೆ ಕೊಲ್ವಂತೆ ಅಂತರಿಸಿ ನಿಂದಳು ಸುಯ್ಯಲಾರೆನು ಪ್ರಾಣವ                ॥

ಇಂತು ಬೈಗುಳವ ಕೇಳಿ ಎಲೆ ಶಿವನೆ ಎಂತು ಸೈರಿಸುವೆನಿನ್ನು
ಹಂತಿಗಟ್ಟನೆ ಕಟ್ಟಿ ಹಲವು ಮಂತ್ರಗಳಿಂದ ಮುಂತೆ ಕೊರಳನೆ ಮುರಿವಳು
ಪಂತ ಪಾಡುಗಳಿಂದ ತಾ ತನ್ನ ಸಂತ ಮೂವರ ಕೈಯಲಿ
ಅಂತರಂಗವ ಬಗಿದು ಸೀಳಿ ಕೊಲಿಸುವಳೀಗ ಪಂಥ ಸುಕುಮಾರರಿಂದ           ॥

ಜೋಗಿ ವೇಷವನೆ ತಾಳಿ ನೀ ನನ್ನ ಸಾಗಿ ಗಿರಿಗಳನೆ ಹೊಕ್ಕು
ಸೋಗೆಗಂಗಳ ಸೊಬಗೆ ಎಂದೆನುತ ನೀನೆನ್ನ ಹೀಗೆ ಮೋಸವ ಮಾಳ್ಪರೆ
ನಾಗಲೋಕದ ಸಿದ್ಧರೊಡೆಯನೆಂದಾಗರ ಉಳಿಯ ಮಾಡಿದೆ
ಆಗ ಬೇಗದಿ ನನ್ನನೀಗ ಕಳೆವೆನು ಎಂದು ಬೇಗೆಯುರಿಯೊಳಗಿಕ್ಕಿದೆ                ॥

ಮಡದಿ ಮಕ್ಕಳು ಇಲ್ಲವು ನನಗಿನ್ನು ಪಡೆದ ತಾಯಿಗಳಿಲ್ಲವು
ಒಡವೆಯನು ಗಳಿಸಿದೆನು ಎಂಬುವರು ಇಲ್ಲವೆಂದು ಬೆಡಗು ಮಾಡಿದೆ ನನ್ನನು
ತೊಡೆಯ ಜಾಗವು ತನ್ನದು ಮೇಲಣ ಮುಡಿಯ ಜಾಗವು ನನ್ನದು
ಕಡುಪಾಪಿ ದೊಡ್ಡ ರಕ್ಕಸಿ ನಿನ್ನ ಹೆಂಡತಿ ಕಡಿದು ತಿನ್ನದೆ ಬಿಡುವಳೆ                   ॥

ನೀನಾಗಿ ತಂದ ಮೇಲೆ ಅವಳೆನ್ನ ಸ್ಥಾನಮಾನವ ನೋಡದೆ
ಸ್ಥಾನ ಸೂಕರ ಕೆಟ್ಟ ಜಾತಿಗಳು ಎಂದೆನುತ ಹೀನ ನುಡಿಗಳ ನುಡಿಸಿದೆ
ವಾನರರ ಜಾತಿಯವಳು ಬಳಿಕೆನ್ನ ಊನ ಮಾಡದೆ ಬಿಡುವಳೆ
ಸೂನ್ಯ ಸೇಡೆಗಳಿಂದ ಮರೆದಿಕ್ಕಿ ಕೊಲಿಸುವಳು ನಾನು ಸೈರಿಸಲಾರೆನು          ॥

ಎಲ್ಲಿಯ ಮುದುಕಿ ಇವಳು ಶಿವಶಿವಾ ಹಲ್ಲು ಹೋದವಳಲ್ಲವು
ಕಲ್ಲುಗುಂಡುಗಳೆಲ್ಲ ಕರಗಿ ಮಣ್ಣಾದವು ಸೊಲ್ಲು ಶಬ್ದಗಳಿಂದಲಿ
ಎಲ್ಲರನು ನೋಡಲಿಕೆ ಅವಳಿಗಿನ್ನೆಲ್ಲಿ ಬಂದಿತೊ ಹರೆಯವು
ಮಲ್ಲಿಕಾರ್ಜುನದೇವ ಮೋಸಮಾಡುತಲೆನ್ನ ಕೊಲ್ಲಲು ಕರತಂದಿರಿ                   ॥

ಮುದುಕಿ ಇವಳೆಂದು ನಾನು ಶಿವಶಿವಾ ಹದನ ಮುನ್ನರಿತುದಿಲ್ಲ
ಕದರು ಹಂಜಿಯ ಕೊಟ್ಟ ಪರಿ ಇವಳೆನ್ನ ಹಗೆಯ ಮುಗುಚದೆ ಬಿಡುವಳೆ
ಬದುಕುಭಾಗ್ಯಗಳು ಕೆಟ್ಟು ಶಿವ ನಿಮ್ಮ ಉದಕಮಜ್ಜನವಳಿಯಲಿ
ಕುದಿಕುದಿತು ನೊಂದು ದುಃಖವು ನಿಮ್ಮ ಕೈಮೈಗೆ ಸಂದುಸಂದನೆ ತಾಗಲಿ     ॥

ಕಣ್ಣು ಮೂರುಳ್ಳ ಶಿವನೆ ನಿನ್ನಯ ಯಾವ ಪುಣ್ಯಗಳನುಣ್ಣಲಿಲ್ಲ
ಕಣ್ಣೀರು ಕೂಳುಗಳ ತಿನಿಸುತಲಿ ನೀ ನನ್ನ ಮಣ್ಣಕಲಸಲಿ ತಂದಿರೇ
ಹೆಣ್ಣು ಹೆತ್ತವರೆಲ್ಲರು ಅಡವಿ ಅರಣ್ಯಗಳ ತಿರುಗಿ ಬಳಲಿ
ಬಣ್ಣದ ಗಿಳಿ ನಮ್ಮ ಬಯಲು ಮಾಡಿದೆ ಎಂದು ಕಣ್ಣೀರನೆ ಸುರಿವರು                  ॥

ಯಾಕೆ ಬಯಲಾದೆ ಮಗಳೆ ನೀ ನಮ್ಮ ಸಾಕಲಾರದೆ ಹೋದೆಯಾ
ಕಾಕು ದೈವದ ಭಜನೆ ನಮಗಿಲ್ಲ ನಿನ್ನಯ ಜೋಕೆ ಪಾದವ ನಂಬಿದೆ
ಆಕಾಶ ನುಂಗಿತೇನೊ ಶಿವಶಿವಾ ಭೂಕಾಂತೆ ಅಳಿಯಿತೇನೊ
ಕೋಕಿಲೆ ಕೊಳರ್ವಕ್ಕಿ ಅಳಿಯಂಚೆ ನವಿಲೆಂದು ಶೋಕಮಾಡಿಯೆ ಸುಯ್ವರು   ॥

ನಮ್ಮ ಬಳಲಿಕೆಗಳೆಲ್ಲ ಶಿವಶಿವಾ ನಿಮ್ಮ ಬಂಧುಬಳಕಗೆ ತಾಗಲಿ
ಬೊಮ್ಮ ಹರಿರುದ್ರಾದಿ ಸಕಲ ಮುನಿಗಳು ನಿಮ್ಮ ನಂಬದೆ ಬಯಲಾಗಲಿ
ಇಮ್ಮಡಿಯ ದುಃಖ ನಿಮ್ಮ ಕೈಮೈಗೆ ಗಮ್ಮನೆ ಹಾವಾಗಲಿ
ನಮ್ಮ ಶಾಪದಿ ನೀವು ನಿರ್ವಯಲ ಬೆರೆಯೆಂದು ದುಮ್ಮಾನ ದುಃಖದೊಳಗೆ     ॥

ಸಾರಿದಳು ಹುಲ್ಲ ಹಿಡಿದು ಶಿವ ನಿಮ್ಮ ದಾರಿಗಳು ಬೇಡವೆಂದು
ಗೌರಿಯಲಿ ತಪ್ಪಿಲ್ಲ ಎನ್ನ ಪೂರ್ವಾಜಿತದ ಘೋರಪಾಪದ ಫಲವಿದು
ಹಾರಿಹೋಗುವ ಪಕ್ಷಿಯ ಶಿವಶಿವಾ ಮೀರಿ ಜಡೆಯೊಳು ಹುದಿಗಿದೆ
ಮಾರಿ ಮಸಣೆಗೆ ನನ್ನ ಸೇರಿಸಿದೆ ಶಿವನೆಂದು ನೀರ ಸುರಿವುತ ಕಣ್ಣಲಿ               ॥

ಜಗಳ ಕತನಗಳ ಶಿವ ಕೇಳಿ ಮುಗುಳು ನಗೆಗಳ ನಗುತಲಿ
ಅಗಜೆ ಗಂಗೆಯನೀಗ ಕೂಡಿಸುವೆನೆನುತಲಿ ಗಗನ ಹೂಮಗಳೆಗರೆಸುತ
ತೆಗೆದಪ್ಪಿ ಮುಂಡಾಡುತಾ ಗಂಗೆಯ ಒಗುವ ಕಣ್ಣಿರನೊರಸಿ
ಮೃಗಮದಗಂಧಿ ಮುಕ್ತಾಂಗನೆ ನೀನೆನಲು ಮುಗಿಯೆ ಐದನೇ ಸಂಧಿಯು        ॥

ವಚನ:

ಹೆಣ್ಣು ನೊಂದು ದುಃಖಿಸಿದರೆ ಗುರುರಾಯ ಗಂಗೆ
ಕಣ್ಣೀರ ತೊಡೆದ ಕೇಳು ಶಿವನು ಗುರುರಾಯ
ಹಣ್ಣು ಹಾಲು ಬೆರಸಿದಂತೆ ಗುರುರಾಯ ಮುಂದೆ
ತಣ್ಣಗವರನಿರಿಸಿದಾನು ಗುರುರಾಯ                                                                       ॥

ಗೌರಿಗಂಗೆ ಸಂವಾದಗಳ ಗುರುರಾಯ ನಮ್ಮ
ಮಾರಹರನು ಕೇಳಿ ನಗುತ ಗುರುರಾಯ
ಈರೇಳು ಜಗವು ಕೇಳಿದಲ್ಲಿ ಗುರುರಾಯ ತರ್ಕ
ಪೂರೈಸಿದ ಸಂಧಿಗೆ ಶರಣು ಗುರುರಾಯ                                                               ॥

ಶರಣು ಶರಣು ಮರಣರಹಿತ ಗುರುರಾಯ ಎನ್ನ
ಹರಣ ಭವದ ರೋಗವೈದ್ಯ ಗುರುರಾಯ
ಚರಸ್ಮರಣೆ ಮಾಡುವೆನು ಗುರುರಾಯ ಮುಕ್ತಿ
ಯೆರೆದು ಸಲಹಿ ರಕ್ಷಿಪುದು ಗುರುರಾಯ                                                                  ॥

ಸಂಧಿ 5ಕ್ಕಂ ವಚನ 51, ಪದನು 18,
ಉಭಯಂ 489 ಕ್ಕಂ ಮಂಗಳ ಮಹಾ ಶ್ರೀ ಶ್ರೀ