ಕಂದ:

ಮುಂದಣ ಕಥಾಮೃತದಿ ಇಂದುಧರ ತನ್ನ ಸತಿಯರನು
ಒಂದಾಗಿ ಕೂಡಿಸುವೆನೆನಲು ಒಲ್ಲದಿರಲು
ಮಂದಿಮಕ್ಕಳನು ಹಂಚಿಕೊಂಡೀರ್ವರು
ಕಂದ ಗಣಪತಿ ಶಾಸ್ತ್ರವ ಕೀರ್ತಿಸಿದರು

ಪದನು:

ಗಂಗೆಗೌರಮ್ಮರು ತಾವಿಬ್ಬರು ಸಂಗಾತ ಇರಲೊಲ್ಲದೆ ಬಂದಿತು
ಜಗಳವು ಕೊಂಬಂತೆ ಪರ್ವತಾ ಲಿಂಗ ತಾ ನೋಡುತಲಿರ್ದುನು                       ॥

ಮಾತ ಕೇಳದೆನ್ನೊಳು ಎಲೆ ಗಂಗೆ ಮಲೆತುಕೊಂಡಿರುವರೇನೆ
ನೀತಿ ನಿನಗಿದು ಹಿರಿಯತನಕೆ ಒಮ್ಮೆನಾ ತಾಳಿದೆನು ಕಾಣೆಲೆ                            ॥

ಬೆಟ್ಟವರ್ಧನನ ಮಗಳೆ ನಿನಗೆಷ್ಟು ರಟ್ಟೆಯತನವೇತಕೆ
ಹುಟ್ಟ ಹಿಡಿದು ಹರುಗೋಲ ತೆಗೆವವರಲ್ಲಿ ಹುಟ್ಟಿದ ಮಗಳಲ್ಲವೆ                            ॥

ಆದರದಕೆ ಕುಂದೇನೇ ನೀ ನನಗೆ ಮುಂದೆ ಬಾಹ ಬನ್ನಣೆಯ ಪೇಳಿ
ಮೇದಿನೀಯೊಳಗೆಲ್ಲ ಚರಸಾಡಿದೆನೆಂಬ ಭೇದವನು ಮರದೆಯಲ್ಲೆ                    ॥

ಕುಲಗೇಡಿ ನಿನ್ನ ತಂದು ನಮ್ಮಯ್ಯ ನೆಲೆಗೆಟ್ಟು ತಿರಿದುಂಡನೆ
ಒಲುಮೆಯ ಮಧ್ಯದಲಿ ಬೆನ್ನಮೇಲಣ ಚರ್ಮ ನೆಲವದು ಹೋಗಿತ್ತೆಲೆ                ॥

ಒಂಟೆತ್ತಿಗೆಣೆಯಿಲ್ಲದೆ ನಿನ್ನನು ತಂದು ನೆಂಟರೆಲ್ಲರು ಹಾನಿಯೆ
ಬಂಟನಾದನು ಗಂಗೆ ಬಾಣನಿಗಾಳಾದ ಉಂಟಲ್ಲವೆಂದು ಹೇಳೆ                         ॥

ಹಾಲು ಬೋನವನು ಸವಿದು ವೀಳ್ಯವ ಮೇಲೆ ಹಾಕುವರೇತಕೆ
ಬಾಲೆ ನೀ ಮುಂಚೆ ಬಂದರೆ ಏನು ನಾ ಹೆಚ್ಚು ಸಂಚಿಯ ಹಿಡಿಸುವೆನು              ॥

ಪಂಚಾಮೃತವನು ಸವಿದು ವೀಳ್ಯವ ಹಿಂಚು ಹಾಕುವದೇತಕೆ
ಕೆಂಚೆ ನೀ ಮುಂಚೆ ಬಂದರೇನೆ ನಾ ಹಿಂಚು ಮಂಚದ ಕೆಳಗೆ ಒರಗೆ                  ॥

ಹೀನವ ನುಡಿದಳೆಂದು ಗೌರಮ್ಮ ಮೋನವ ತಾಳಿದಳು
ಭಾನುಕಳೆಯನು ಸೂಡಿದಭವ ಮನೆಗೆ ಬಾರಾ ಮೋಸವಿದೇಕೆಂದನು             ॥

ನೀನೊಂದ ಹೆಣ್ಣ ತಂದು ಅವಳ ದೊಡ್ಡ ಪಾವನವನು ಮಾಡಿದೆ
ಏನ ಹೇಳುವೆ ಎನ್ನ ಬಂಡುಗೆಲಿದಾಳೆಂದು ತಾನು ಬಲು ಕೋಪದೊಳು           ॥

ಯಾಕೆ ಕೊಂಡಾಡಿದಿರೇ ನೀವಿಬ್ಬರೂ ವಾಕುವಾದಗಳೇತಕೆ
ಸಾಕು ಜಗಳ ಗಂಗೆ ನೀ ಕಿರಿಯವಳೆಂದು ಜೋಕಿಲಿ ಇರಿಯೆಂದನು                  ॥

ತಂದಿರೆ ಬಂದಿರಲ್ಲೇ ನೀವಿಬ್ಬರು ಕೊಂಡಾಡುವದೇತಕೆ
ಇಂದುಮೊದಲು ಗಂಗೆ ಕುಂದ ನುಡಿಯಬೇಡ ಎಂದನು ಶಿವ ದೇವಿಗೆ              ॥

ಆಕೆ ಪಾರ್ವತಿದೇವಿಯಾ ಪಾದದ ಮೇಲೆ ಈಕೆ ಗಂಗೆಯ ನೂಕಿದ
ಲೋಕದೊಡೆಯ ಪರ್ವತಮಲ್ಲ ಇಬ್ಬರನು ಏಕವ ಮಾಡಿದನು                            ॥

ಸಂಗತ್ಯ:

ಸಂಗಮೇಶ್ವರನೇ ಶ್ರೀರಂಗನಯನ ಪಾ
ದಂಗಳ ಚರಣ ಪೂಜಿಪನೆ
ಹಿಂಗದೀರೇಳು ಲೋಕಂಗಳ ಸಲಹುವ
ಗಂಗೆಯ ಕೃತಿಯ ಲಾಲಿಪುದು                                                                                  ॥

ಎಲ್ಲ ದೇವರ ದೇವ ಅಲ್ಲಮಪ್ರಭುರಾಯ
ಕಲ್ಯಾಣ ಪುರವರಾಧೀಶ
ಮಲ್ಲಿಕಾರ್ಜುನ ಭಕ್ತ ಬಸವ ತನ್ನಯ ಪ್ರಾಣ
ದೊಲ್ಲಭೆಯನು ಕೇಳುತಿರ್ದ                                                                                      ॥

ಯೋಗಿ ಹೃತ್ಕಮಲದ ಭೋಗಿ ಪ್ರಪಂಚುಗಳ
ನೀಗಿ ಕಳೆವ ನಿರ್ಮಳಾಂಗಿ
ಭಾಗೀರಥಿಯು ನೊಂದು ಶೋಕಿಸಿದರೆ ಶಿವ
ಹೇಗೆ ಸಂತೈಸಿದ ಪೇಳು                                                                                           ॥

ಪಂಚವದನವುಳ್ಳ ಪರಶಿವ ರೂಪ ನೀ
ಕಿಂಚಿತವ ಮಾಡಿ ರಕ್ಷಿಪ
ಅಂಚೆಗಮನ ಕೋಟಿ ಮಿಂಚಿನ ಪ್ರತಿಯುಳ್ಳ
ಕೆಂಚೆ ಗಂಗೆಯ ಸಂತೈಸಿದುದ                                                                                ॥

ಭೂಪ ಬಸವ ಕೇಳುವ ಕೋಪಿಸಿ ಗೌರಮ್ಮ
ಶ್ರೀಪತಿಯೊಡನೆ ಪೇಳುತಲಿ
ಚಾಪಲಾಕ್ಷಿಯ ಇಂತು ಶೋಕಗಳನು ಕಂಡು
ಗೋಪತಿ ಶಿವ ನಸುನಗುತ                                                                                       ॥

ಅತ್ತು ದುಃಖಿಸುತಿರ್ದ ಚಿತ್ರದ ಬೊಂಬೆಯ
ನೆತ್ತಿಯಿಂದಿಳುಹಿ ಮುಂಡಾಡಿ
ಮುತ್ತು ಸುರಿವ ಕಣ್ಣೀರೊರಸುತ ಮುಖ ನೋಡಿ
ಕಸ್ತೂರಿ ಮೃಗವೆ ಬಾರೆನುತ                                                                                     ॥

ಜಡೆಯ ಶ್ರೀಗಂಗೆಯ ತೊಡೆಯೊಳಗಿಳುಹಿಟ್ಟು
ಪಿಡಿದು ಚೆಂದುಟಿ ಚಂದ್ರಬಿಂಬಗಳ
ಬಿಡುಬಿಡು ನಿನ್ನಯ ಕಡುದುಃಖವನು ಪಾ
ಲ್ಗಡಲ ಗಂಗೆಯೆ ಭೀಮರತಿಯೆ                                                                                 ॥

ಸೋಕ ಮಾಡಲು ನನ್ನ ಏಕಾಂಗಿ ಸ್ತ್ರೀಯಳೆ
ಲೋಕವು ಹತವಹವಿನ್ನು
ಕಾಕ ಮೋರೆಯ ಗೌರಿ ನಿಕ್ಕರಿಸಲು ನಿನ್ನ
ಕೋಗಿಲೆ ಸ್ವರಕೇನು ಹಾನಿ                                                                                       ॥

ನೀನು ಮುನಿದರಿನ್ನು ಹಾನಿಯಹವು ಲೋಕ
ಕಾನನವುರಿದಿ ಸುಡುವವು
ಧ್ಯಾನ ಮೋನವು ಜಪತಪ ಸೀಮೆ ಕೆಟ್ಟವು
ಧ್ಯಾನವ ಕಾಣದಲಿಹರು                                                                                             ॥

ಅಡಗಿ ಹೋದರೆ ನೀನು ಪೊಡವಿ ಈರೇಳಕ್ಕೆ
ಬಡಿದಾಟ ಬಹಿರಂಗದಲ್ಲಿ
ಒಡಲಗಿಚ್ಚಿಗೆ ತಮ್ಮ ದೃಢಮನಗಳ ಬಿಟ್ಟು
ಕುಡಿದವರು ಹೊಲೆಯರ ನೀರ                                                                                 ॥

ಆ ಜಾತಿ ಈ ಜಾತಿ ಮೂಜಾತಿಗಳು ಎಲ್ಲ
ಮಾಜುವವೆತಿ ನಿನ್ನ ಮುಂದೆ
ಸೂಜಾತಿ ಹಾರುವ ಕುಲಹೀನ ಹೊಲೆಯರು
ಭೋಜನಗಳ ಬಯಸುವರು                                                                             ॥11 ॥

ಉಕ್ಕಿ ತುಳುಕಲು ನೀ ಉರಿವ ಕಾಮಗಳಿಂದ
ಸೊಕ್ಕುವರೆಲೆ ನಿನ್ನ ಮರೆದು
ಚೊಕ್ಕಟ ಹೊಲೆಜಾತಿವೆಣ್ಣಗಳೆಂಜಲ ತಿಂದು
ಸಿಕ್ಕುವರೆಲೆ ಯಮಪುರಕೆ                                                                                          ॥

ನಿನ್ನಿಂದ ಕುಲಚಲ ನಿನ್ನಿಂದ ಜಲಮಲ
ನಿನ್ನಿಂದ ಸಕಲ ಸಂಪದವು
ಮುನ್ನ ನೀನಿಲ್ಲದಿದ್ದರೆ ಅನ್ಯವೇನುಂಟು
ಚೆನ್ನಬಸವ ರನ್ನಗೊರಳೆ                                                                                            ॥

ಮತ್ತೆ ಕೇಳೆಲೆ ನನ್ನ ಚಿತ್ರಸಾಲೆಯ ಬೊಂಬೆ
ತೊತ್ತು ಬಲ್ಲಳೆ ನಿನ್ನ ನೆಲೆಯ
ಸತ್ತ ಪಿತರ ನೆನಸಿಕೊಂಡು ಪಾರ್ವತಿ
ಸುತ್ತಿಕೊಂಡಳು ನಿನ್ನ ಬಿಡದೆ                                                                                     ॥

ಯಾತರ ಹಿರಿಯಾಳು ಖೆಮತಿ ಗಿರಿಜೆ ತನ್ನ
ಸೂತಕ ಕಳೆವುದರಿಯಳು
ಪಾತಕ ಹೊಲೆಮೂಳಿ ಯಾತರನರಿಯಾದೆ
ಜಾತಿಯ ಬಗುಳಲೇನಹುದು                                                                                    ॥

ಹುಚ್ಚುನಾಯಿಗಳು ಹೊಟ್ಟೆಗಿಂದಾನೆಯ ಕಂಡು
ಅಚ್ಚವಿಚ್ಚೆಯ ಬೊಗುಳಿದರೆ
ಹೆಚ್ಚಿನ ಮದಕರಿ ಕಚ್ಚಿತು ತನಗೆಂದು
ರಚ್ಚೆಗಿಕ್ಕುವದೆ ಮದ್ದಾನೆ                                                                                            ॥

ಹೆಣ್ಣು ಗಂಗೆಯ ಪಿತ ಚನ್ನಬಸವ ಕೇಳು
ಕಣ್ಣು ಮೂರುಳ್ಳನ ನುಡಿಯ
ಹುಣ್ಣಿವೆ ಚಂದ್ರನ ಹುಸಿಮಾಡಿ ಗಂಗೆಯ
ಬಣ್ಣಿಸಿದನು ವಚನದಲಿ                                                                                               ॥

ವಚನ:

ತುಂಗಕುಚದ ಸಿಂಗಾರವೆ ಎಲೆ ಗಂಗೆ ನನಗೆ
ಮಂಗಳಾರತಿಯ ಬೆಳಗೆ ಎಲೆ ಗಂಗೆ
ಹಿಂಗಲರಿಯೆ ನಿನ್ನದೆಂದು ಎಲೆ ಗಂಗೆ ನನ್ನ
ಲಿಂಗ ಜಡಿಯೊಳಿಟ್ಟು ತಂದೆ ಎಲೆ ಗಂಗೆ                                                                ॥

ಶಾಪುವುಂಟೆ ನಿನಗೆ ಕೇಳು ಎಲೆ ಗಂಗೆ ನನ್ನ
ಗೋಪತಿಯ ಶಿವನ ಮಡದಿ ಎಲೆ ಗಂಗೆ
ತಾಪವುರಿಗಣ್ಣ ಶಾಂತಿ ಎಲೆ ಗಂಗೆ ನನ್ನ
ದೀಪ ಹೃದಯಕಮಲ ಜ್ಯೋತಿ ಎಲೆ ಗಂಗೆ                                                            ॥

ಬಂಡು ಮಾಡಿದ ನುಡಿಗಳೆಲ್ಲ ಎಲೆ ಗಂಗೆ ನಮ್ಮ
ಕೆಂಡದೊಳಗೆ ಬಿದ್ದ ತೃಣವೆ ಎಲೆ ಗಂಗೆ
ಹಿಂಡು ದನುಜ ಜೀವ ಪ್ರಾಣಿ ಎಲೆ ಗಂಗೆ ನನ್ನ
ದುಂಡುಮಲ್ಲಿಗೆಯ ಚೆಂಡೆ ಎಲೆ ಗಂಗೆ                                                                     ॥

ಇಂದ್ರ ಕೆಟ್ಟ ಚಂದ್ರನಳಿದ ಎಲೆ ಗಂಗೆ ಅವಳ
ಬಂಧುಬಳಗ ಬ್ರಹ್ಮ ಕೆಟ್ಟರೆಲೆ ಗಂಗೆ
ನೊಂದುಬೆಂದು ಬೊಗಳಲೇನು ಎಲೆ ಗಂಗೆ ನಿನ್ನ
ಒಂದು ರೋಮ ತಾಕಲರಿಯವೆಲೆ ಗಂಗೆ                                                                ॥

ಶಾರದೆಯು ಕೆಟ್ಟಳಿನ್ನು ಎಲೆ ಗಂಗೆ ಅವಳ
ಭೂರಿದೇವತೆಗಳು ಮಡಿದರೆಲೆ ಗಂಗೆ
ಪಾರುವತಿ ನೊಂದು ನುಡಿದರೆಲೆ ಗಂಗೆ ನಿನಗೆ
ಭಾರವುಂಟೆ ಮಂತ್ರಶಕ್ತಿ ಎಲೆ ಗಂಗೆ                                                                        ॥

ಕಾಮನುರಿದ ಭೀಮನಳಿದನೆಲೆ ಗಂಗೆ ಅವಳ
ನಾಮ ದೇವತೆಗಳು ಮಡಿದರೆಲೆ ಗಂಗೆ
ಸೀಮೆ ಕೆಟ್ಟು ನುಡಿದರೇನು ಎಲೆ ಗಂಗೆ ನನ್ನ
ಹೇಮಪುತ್ಥಳಿಯ ಬೊಂಬೆ ಎಲೆ ಗಂಗೆ                                                                     ॥

ಬಿದಿಗೆಚಂದ್ರ ಕೋಟಿ ಸೂರ್ಯರೆಲೆ ಗಂಗೆ ನಿನ್ನ
ಅಧರಕಳೆಯ ಹೋಲಲರಿಯರೆಲೆ ಗಂಗೆ
ಹದಿನೆಂಟು ಜಾತಿಜಲ್ಮಗಳು ಎಲೆ ಗಂಗೆ ನಿನ್ನ
ಉದಕ ಮಿಂದು ಮುಕ್ತರಹನು ಎಲೆ ಗಂಗೆ                                                              ॥

ಪದನು:

ಕೃಷ್ಣವತಿಗಂಗೆ ಕೇಳು ಲೋಕದ ಭ್ರಷ್ಟಮನುಜನರು ಬಲ್ಲರೇ
ಕುಷ್ಟರೋಗದ ಚಂದ್ರ ಮೊದಲಾದ ಸುರರೆಲ್ಲ ಮುಟ್ಟಿಮೀಯಲು ಪಾವನ         ॥

ಮಿತಿಯಿಲ್ಲದಾ ರಕ್ಕಸರನು ವಿಷ್ಣು ಹತಮಾಡಿ ಸಂಹರಿಸುತ
ಅತಿ ಪಾಪದೋಷಗಳು ಆವರಿಸಿದರೆ ನಿನ್ನ ಸುತನಾಗಿ ಸ್ನಾನಗೈಯೆ
ಮತಿವಂತೆ ಗಂಗಾಮೃತೆ ನಾ ನಿನ್ನ ವ್ರತವ ಬಿಡಲಾರೆನೆಂದು
ಸುತನ ಹೆಸರಿಲಿ ಕರೆಸಿಕೊ ಎಂದು ನುಡಿದರೆ ಅತಿ ಹರುಷವನು ತಾಳದೆ         ॥

ಕೃಷ್ಣದೇವರ ಹೆಸರಲಿ ಶ್ರೀಗಂಗೆ ಕೃಷ್ಣವೇಣಿಗಳಾಗುತ
ಸೃಷ್ಟಿ ಈರೇಳನು ಕೊಟ್ಟು ರಕ್ಷಿಸುವಂಥ ಕಟ್ಟಾಣಿ ಮುತ್ತೆ ನನಗೆ
ಎಷ್ಟು ಬ್ರಹ್ಮರು ಮಡಿದರೂ ರುದ್ರನ ಕಟ್ಟುರಿಯ ಹಂಗಿನವರು
ಸುಟ್ಟ ಬೂದಿಯನು ನಿನ್ನೊಳಗೆ ಬೆರಿಸಿದರೆ ಹುಟ್ಟು ಜಲ್ಮವೆ ಪಾವನ                  ॥

ರಾಮಾವತಾರರಿಗೆ ಹನುಮಂತ ತಾ ಮಹಾ ಬಂಟನಾಗಿ
ಗ್ರಾಮ ಲೆಂಕಾಪುರವ ಸುಟ್ಟು ಬೂಧಿಯ ಮಾಡಿ ತಾಮಸವು ತಲೆಗೇರಲು
ಹೋಮದುರಿಯನು ತಾಳದೆ ನಿನ್ನೊಳಗೆ ನೇಮ ನಿತ್ಯದಿ ಮುಳುಗಲು
ಭೀಮ ಹನುಮಂತನ ರಕ್ಷಿಸಿದ ಕಾರಣ ಭೀಮರತಿ ಗಂಗೆಯಾದೆ                        ॥

ಭಾಗ್ಯದಲಿ ಗರ್ವಿಸುತಲಿ ಇರಲೊಬ್ಬ ಯೋಗಿಮಣಿ ವಿಭೂತಿಗೆ
ತೂಗಿನೋಡಲು ಮತ್ತೆ ಸರಿಬಾರದಿರೆ ಕಂಡು ಆಗ ತಲ್ಲಣಗೊಳುತಲಿ
ನೀಗಿ ಕಳೆವೆನು ಪ್ರಾಣವಾ ಎಂದೆನುತ ಆಗ ನಿನ್ನೊಳು ಮುಳುಗಲು
ಭಾಗ್ಯ ಕುಬೇರನ ರಕ್ಷಿಸಿದ ಕಾರಣದಿ ಭಾಗೀರತಿ ಗಂಗೆಯಾದೆ                           ॥

ನನ್ನ ಜಡೆಯೊಳಗಿರುತಲಿ ಎಲೆ ಗಂಗೆ ಇನ್ನು ಚಿಂತೆಗಳೇತಕೆ
ಮುನ್ನೂರು ಅರವತ್ತು ನಾಮಗಳ ಧರಿಸಿದೆ ನಿನ್ನ ವರ್ಣಿಸುವರಳವೆ
ಮುನ್ನಿನ ಹಿರಿಯರೆಲ್ಲ ಎಲೆ ಗಂಗೆ ನಿನ್ನ ಪೂಜಿಸಿ ಮರೆದರು
ಅನ್ಯೋನ್ಯವೆಂದು ಬೊಗಳುವ ಬ್ರಹ್ಮಜಾತಿಗೆ ಇನ್ನು ದೃಷ್ಟವ ತೋರಿದೆ             ॥

ವಚನ:

ಇರುಳು ಹಗಲು ವಿಪ್ರಜಾತಿ ಎಲೆ ಗಂಗೆ ನಿನ್ನ
ಶರಧಿಯೊಳಗೆ ಮುಳುಗುತಿಹರು ಎಲೆ ಗಂಗೆ
ಬೆರಳನೆಣಿಸಿ ಮೂಗ ಮುಟ್ಟಿ ಎಲೆ ಗಂಗೆ ನಿನ್ನ
ಚರಣಕಮಲ ಕಾಣಲರಿಯರೆಲೆ ಗಂಗೆ                                                                      ॥

ವಾರ ತಿಥಿಯ ದಿನಗಳಲ್ಲಿ ಎಲೆ ಗಂಗೆ ತಮ್ಮ
ನಾರಸಿಂಹ ಹರಿಗೋವಿಂದ ಎಲೆ ಗಂಗೆ
ಘೋರ ಅಶ್ವಗಜವ ಕೊಂದರೆಲೆ ಗಂಗೆ ನಿನ್ನ
ನೀರು ಹೊಗದೆ ಜನ್ಮವಿಲ್ಲ ಎಲೆ ಗಂಗೆ                                                                     ॥

ಯತಿಪಾತಕ ದಿನಗಳಲ್ಲಿ ಎಲೆ ಗಂಗೆ ತಮ್ಮ
ಪಿತರು ಹಿತರ ಕೂಡಿಕೊಂಡು ಎಲೆ ಗಂಗೆ
ಹತವ ಮಾಡಿ ಜೀವಗಳನು ಎಲೆ ಗಂಗೆ ನಿನ್ನ
ರತುನ ಪಾದ ಕಾಣಲರಿಯರೆಲೆ ಗಂಗೆ                                                                    ॥

ಸೂರ್ಯಚಂದ್ರ ಗ್ರಹಣದಲ್ಲಿ ಎಲೆ ಗಂಗೆ ತಮ್ಮ
ಹಾರುವರ ಕೂಡಿಕೊಂಡು ಎಲೆ ಗಂಗೆ
ನೂರು ಕರ್ಮ ಮುಳುಗಿ ಕಳೆದು ಎಲೆ ಗಂಗೆ ನಿನ್ನ
ಮೀರಿ ನಡೆಯೆ ಜನ್ಮವಿಲ್ಲ ಎಲೆ ಗಂಗೆ                                                                      ॥

ಬ್ರಹ್ಮ ವಶ್ಯ ಕರ್ಮಗಳನು ಎಲೆ ಗಂಗೆ ನಿನ್ನ
ನಿರ್ಮಳವ ಮಾಡಿ ಕಳೆವೆ ಎಲೆ ಗಂಗೆ
ಮರ್ಮವರಿಯದೆ ನುಡಿವವರ್ಗೆ ಎಲೆ ಗಂಗೆ ನಿನ್ನ
ಧರ್ಮಗುಣವ ಪಾಲಿಸಿನ್ನು ಎಲೆ ಗಂಗೆ                                                                     ॥

ಹಾರುಜಾತಿಗಳಂತಿರಲಿ ಎಲೆ ಗಂಗೆ ಸವತಿ
ನಾರಿಗಿರಿಜೆ ನುಡಿದ ನುಡಿಯ ಎಲೆ ಗಂಗೆ
ತೂರಿ ಬೂದಿಗಳ ಮಾಡಿದೆವು ಎಲೆ ಗಂಗೆ ಸೂತ್ರ
ದಾರಿ ಶಿವನು ಎಂದು ತಿಳಿಯೆ ಎಲೆ ಗಂಗೆ                                                              ॥

ತಿಳಿದು ನೋಡು ಪೂರ್ವದಲಿ ಎಲೆ ಗಂಗೆ ನಿಮ್ಮ
ಕಳೆಯು ಒಂದೆ ಶರೀರ ಬೇರೆ ಎಲೆ ಗಂಗೆ
ಅಳಲು ಬಳಲು ನಿಮಗೆ ಉಂಟೆ ಎಲೆ ಗಂಗೆ ನನ್ನ
ಹೊಳೆವ ಕನ್ನಡಿಯ ಬೆಳಕೆ ಎಲೆ ಗಂಗೆ                                                                    ॥

ನಳಿನಮುಖಿಯ ಸಂತೈಸಿದರೆ ಗುರುರಾಯ ಸತಿಗೆ
ತಿಳಿಯಿತಿನ್ನು ಪೂರ್ವಜ್ಞಾನ ಗುರುರಾಯ
ಇಳೆಯ ಕಪಟನಟನಾಟಕನು ಗುರುರಾಯ ಎಂದು
ಬಳಿಕ ಶಿವನ ಸ್ತುತಿ ಮಾಡಿದಳು ಗುರುರಾಯ                                                        ॥

ಲೋಕರತ್ನ ಮಾಣಿಕವು ಎಲೆ ಗಂಗೆ ಗಿರಿಜೆ
ಯಾಕಾರವೆ ಆದಿಶಕ್ತಿ ಎಲೆ ಗಂಗೆ
ಬೇಕು ನಿನಗೆ ಗಿರಿಜಾದೇವಿ ಎಲೆ ಗಂಗೆ ನನ್ನ
ಏಕೋರೂಪ ತಿಳಿದು ನೋಡು ಎಲೆ ಗಂಗೆ                                                             ॥

ಪದನು:

ತ್ರಿಪುರಸಂಹಾರಿ ಕೇಳು ವಿಷ್ಣುವ ಕಪಟನಾಟಕನೆಂಬರು
ಕಪಿಯ ಮನುಜರು ಏನಬಲ್ಲರು ವಿಷ್ಣುವಿನ ಗುಪಿತದಿಂದಾಡಿಸುವುದ                 ॥

ಇರುವೆ ಮೊದಲಾನೆ ಕಡೆಯು ಎಂದೆಂಬ ನಾನಾ ಜೀವನಗಳೆಲ್ಲ
ಮೀನಕೇತನಪಿತನು ರಕ್ಷಿಸಿದನೆಂಬರು ಹಾನಿ ಬಂದಿರೆ ಮಗನಿಗೆ
ಆನಂದಮೂರ್ತಿ ಕೇಳು ಮನ್ಮಥನ ನೀನೆ ರಕ್ಷಿಸಿದವನೆಂದು
ಧ್ಯಾನಿಸುತ ವೇದಶಾಸ್ತ್ರಗಳೆಲ್ಲ ಕೂಗುವವು ನೀನೆ ಸೂತ್ರಿಕನು ಎಂದು              ॥

ಒದಗಿ ಕಪಟನಾಟಕಾ ಹರಿ ತನ್ನ ಉದರ ಜಲದುರ್ಗದೊಳಗೆ
ಹದಿನಾರು ಸಾವಿರ ಗೋಪಸ್ತ್ರೀಯರು ಭೋಗಪದಗಳಿನ್ನಾರಿಗಳವು
ಒದಗಿ ಕಾಲವು ತುಂಬಲು ಬೇಡನ ಶರಕೆ ಗುರಿಯಾದ ಕೃಷ್ಣ
ಬೆದರಿ ಬೊಬ್ಬೆಗೊಂಡು ಪಟ್ಟಣ ಬಯಲಾಯಿತು ಅದು ಯರ ನಟ ನಾಟಕ       ॥

ಪಶುಪತಿಯೆ ಶಿವನೆ ಕೇಳು ವಿಷ್ಣುವಿನ ಎಸೆವ ನಾಟಕವೆಂಬರು
ದಶ ಅವತಾರದಲಿ ಜಲ್ಮ ಜಲ್ಮಾದಿಗಳು ಬೆಸುಗೆಯಾಡಿಸಿದರಾರು
ಮುಸುಕಿ ಹಿರಣ್ಯನ ಹೀರುತಲಿ ದೆಸೆದೆಸೆಗಳಾರ್ಭಟಿಸಲು
ಬಿಸಿಗಣ್ಣ ವೀರಭದ್ರನ ಕೊಟ್ಟು ಮರ್ದಿಸಿದ ಕುಶಲನಾಟಕವಾರದು                      ॥

ಮತ್ತ ಬುದ್ಧಿಗಳನಳಿದ ನರಹರಿಗೆ ತತ್ವಜ್ಞಾನವು ಸೇರಲು
ಹತ್ತಾವತಾರದಲಿ ನಿಮ್ಮ ಶ್ರೀಪಾದವನು ಭೃತ್ಯತ್ವದಲಿ ಪೂಜಿಸಿ
ಉತ್ತಮ ಚಾಂಡಾಲರು ಇಲ್ಲೆನಲು ಮತ್ತೆ ಸಾಕ್ಷಿಯ ಕಾಣದೆ
ಮರ್ತ್ಯಲೋಕದೊಳಗೆ ಶ್ರೀರಾಮಲಿಂಗವನು ಅರ್ತಿಯಲಿ ಪೂಜಿಸಿದನು           ॥

ಚಿನುಮಯ ಶಿವನೆ ನಿಮ್ಮ ಲೋಕದೊಳು ನೆನೆಯದಾರಾರು ಇಲ್ಲ
ಹನುಮಂತ ಕೋಟಿಲಿಂಗವ ಭಜಿಸಿ ಪಡೆದನು ಮಯ್ಯೂರ ಪೂಜೆಗಳನು
ಮುನಿಜನಾದಿಗಳೆಲ್ಲರು ತಾ ತಮ್ಮ ಮನದ ಲಿಂಗವ ಪಡೆದರು
ನೆನಹೆಂಬ ಜವೆಯ ಜಗದೊಳು ಹುಡಿಯಾಡಿಪನೆ ನಿನಗಾರು ಸರಿಯಲ್ಲವು      ॥

ಉತ್ಪತ್ಯ ಸ್ಥಿತಿಗಳೆಂಬ ಜವೆಗಳನು ಪೃಥ್ವಿಯಾಕಾಶಕೆಲ್ಲ
ಮಥನಸೂತ್ರವ ಹೂಡಿ ವಿಶ್ವನಾಟಕವೆಂಬ ಶ್ರುತಿವೇದ ಸಾರುತಿವೆ ಕೋ
ಹತವಹ ಕೋಟಿ ಜೀವ ಅಕ್ಷಣಕೆ ಸ್ಥಿತಿವಹ ಕೋಟಿ ಜೀವ
ಶಿತಕಂಠ ಶಿವನೆ ನಿನ್ನಯ ವಿಶ್ವನಾಟಕವು ಶ್ರುತಿ ಬ್ರಹ್ಮಗಳವಲ್ಲವು                     ॥

ಬಯಲ ರೂಪನೆ ಮಾಡುವೆ ಶಿವಶಿವ ರೂಪ ಬಯಲನೆ ಮಾಡುವೆ
ಜಯ ಜಯತ ಜಗದ ಸೂತ್ರವ ಹೂಡಿಯಾಡಿಪನೆ ಜಯತು ಜಗಭರಿತದೇವ
ಸವತಿ ಮಚ್ಚರ ಜಗಳವ ಶಿವ ನಿಮ್ಮ ಕಿವಿಯೊಳಗೆ ಲಾಲಿಸುತಲಿ
ನಯನದೃಷ್ಟಿಲಿ ನೋಡಿ ನಲಿನಲಿದು ನಗುವಂಥ ಜಯಸಂಗಮೇಶಗುರುವೆ     ॥

ಸಂಗತ್ಯ:

ಆನೆ ಮೊದಲು ಇರುವೆ ಕಡೆಯೆಂದೆಂಬ
ನಾನಾ ಜೀವದ ಬೊಂಬೆಗಳಿಗೆ
ನೀನೆ ಜಗದ ಸೂತ್ರಧಾರಿ ಕೇಳೆಲೆ ನಮ್ಮ
ಹಾನಿ ಒಳ್ಳಿತು ನಿಮ್ಮದಲವೆ                                                                                      ॥

ದೇವಶಿವನೆ ನಿಮ್ಮ ಮಹಿಮೆಯ ತಿಳಿಯಲ್ಕೆ
ಗೋವಿಂದ ಅಜಸುರರಿಗರಿದು
ನಾವು ಸತಿಯರೇನ ಬಲ್ಲೆವು ಗುರು ಸರ್ವ
ಜೀವದಯಾಪಾರಿ ಬಲ್ಲ                                                                                              ॥

ನನ್ನ ಬಿನ್ನಪವನು ಕೇಳೆಲೆ ಪರಶಿವ
ಕನ್ಯೆ ಗಿರಿಜೆ ನನಗಿನ್ನು
ಅನ್ಯೋನ್ಯವಿಲ್ಲದೆ ಕೂಡಿಸಿದರೆ ಮತ್ತೆ
ಭಿನ್ನವಾಗಿಯೆ ಕಾಣಿಸುವದು                                                                                      ॥

ಏಕೋ ಶಿವನೆ ಕೇಳು ಆಕೆಯೊಡನೆ ನಾನು
ನೂಕಲಾರೆನು ಒಗತನವ
ಕಾಕು ನಿಷ್ಠುರದಿ ಸಾಕಿದ ಸುನಿಯೆಂದು
ಹಾಕುವಳೆನಗೆ ಕೂಳುಗಳ                                                                                         ॥

ಶಂಕರ ಪರಶಿವ ಓಂಕಾರ ರೂಪನೆ
ಡೊಂಕು ಬರಲು ಅವಳೊಡನೆ
ಕಂಕುಳ ಸೀರೆಯ ಹೊಲತಿ ನೀ ಹೋಗೆಂದು
ಜಂಕಿಸಿ ಜರಿವಳು ಎನ್ನ                                                                                              ॥

ಒಂದು ಕುಟುಂಬಗಳಾದರೆ ಜಗಳವು
ಬಂದಿತು ಬಾರದಲಿರದು
ಹೊಂದಿ ನಾ ನಡೆದರೆ ಹೊರಕುಲದವಳೆಂದು
ಸಂದು ಸಂದನೆ ಮುರಿಸುವಳು                                                                                ॥

ಹರನೆ ಕೇಳೆಲೆ ನಮ್ಮ ಎರಡಾರ ಜಗಳದಿ
ಸರಕು ಮಾಡರು ನಿಮ್ಮ ಕಡೆಗೆ
ಹರಕುತನಗಳಿಂದ ಇವಳ ತಂದನುಯೆಂದು
ಒರಗಿಸುವಳು ನಿಮಿಷದಲ್ಲಿ                                                                                        ॥

ಎಚ್ಚರದೊಳು ಮನೆಯೊಳಗಣ ದ್ರವ್ಯವ
ವೆಚ್ಚಮಾಡಿ ಕೆಡಿಸುವಳು
ಕಿಚ್ಚುಗಣ್ಣನೆ ಕಿರಿನಗೆಯಲಿ ದಾರಿದ್ರ್ಯ
ನುಚ್ಚುಬೋನವೆ ಗತಿ ನಿನಗೆ                                                                                     ॥

ಕಾಳಗ ಕತನಗಳಿಂದಲಿ ದ್ರವ್ಯವ
ಗಾಳೀಲಿ ತೂರಿ ಚೆಲ್ಲುವಳು
ಕೂಳ ಕಾಣೆನುಯೆಂದು ಕುದಿಕುದಿಯುತ ಕೈಗೆ
ಜೋಳಿಗೆಯನು ಹಿಡಿಸುವಳು                                                                                    ॥

ಅಂಜಿಕೆ ಅಳುಕುಗಳಿಲ್ಲದೆ ಬದುಕನು
ಎಂಜಲಗಲಸಿ ಬಿಡುವಳು
ನಂಜುಂಡ ಶಿವ ಕೇಳು ನಗೆಯಲ್ಲ ಬೋನದ
ಗಂಜಿಯೆ ಶೋಭಿತ ನಿನಗೆ                                                                                        ॥

ಕಂಟಕತನಗಳ ಮಾಡುತ ಮನೆಯೊಳು
ನೆಂಟರಿಷ್ಟರ ತಿನಿಸುವಳು
ಗಂಟಿ ನಾಗರ ಸುತ್ತ ಸೆಳೆಕೊಂಡು ನಿನ್ನನು
ಒಂಟೆತ್ತಿಲಿ ನಿಲಿಸುವಳು                                                                                             ॥

ಕರಕರೆ ಕೂಳನು ಸಲಿಸಲು ಕೈಮ್ಯಾಗ
ಕೆರಕು ಹಿಡಿವುದೆಲೆ ನಿಮಗೆ
ಶರೀರಕೆ ಬೆಂಕಿ ಬಿಸಿನೀರನು ಕಾಣದೆ
ಹೊರಗೆ ಹೋಗುವೆ ನಿಮಿಷದಲ್ಲಿ                                                                               ॥

ಏಸು ಒಗೆತನಗಳ ಕೆಡಿಸಿದೆ ಗಿರಿಜೆಯೊ
ಳೀಸಲಾರೆ ಒಗೆತನವ
ಬಾಸೆಪಾಲಕ ಭಾಳನೇತ್ರ ಭಾವಕಿಯಳು
ಹೇಸಿಕೆಯೊಳಡಗಿಡಬೇಡ                                                                                         ॥

ಬೇಡ ಶಿವನೆ ನಿಮ್ಮ ಬೇಡಿಕೊಂಬೆನು ಮಾತ
ನಾಡಿಸದಿರು ಅವಳೊಡನೆ
ರೂಢಿಗೀಶ್ವರ ಶಿವನೋಡಿ ಶ್ರೀನಯದಿ
ಮಾಡಿಸು ಗಗನರಮನೆಯ                                                                                       ॥

ಮುತ್ತು ಮಾನಿಕ ನವರತ್ನಗಳಿಂದ
ತೆತ್ತಿಸಿ ಮೆರೆವ ಅರಮನೆಯ
ಸುತ್ತ ಕೋಟಿಯ ಮೇಲೆ ಪುತ್ಥಳಿ ಬೊಂಬೆಯ
ಸತ್ತಿಗೆ ಸಾಲುಗಳೆಸೆಯೆ                                                                                             ॥

ವಿಪರೀತ ಅರಮನೆಯ ಅ ಪರಂಪರ ಮಾಡು
ತ್ರಿಪುರಸಂಹಾರಿ ನಾ ನಿನಗೆ
ಜಪಸ್ತೋತ್ರಗಳ ಮಾಡಿ ಕುಪಿತದಿ ಮನೆಯೊಳು
ಜಪಿಸಿಕೊಂಡಿರುವೆನು ನಿಮ್ಮ                                                                                    ॥

ಮಾರಹರನೆ ಮಂತ್ರ ಮೂರುತಿ ಕೇಳಿನ್ನು
ಯಾರ ಮನೆಯೊಳ್ ಮಕ್ಕಳಿಲ್ಲ
ನಾರಸಿಂಹನ ಎದೆದಲ್ಲಣ ಶರಭನ
ವೀರನವನ ಕೊಡಿಸೆನಗೆ                                                                                            ॥

ಹಸುಮಗ ವೀರನ ವಶಮಾಡಿ ಕೊಟ್ಟರೆ
ಸಿಸುಮಾಡಿ ಸಲಹಿಕೊಂಬೆ
ಸೊಸೆ ಭದ್ರಕಾಳಮ್ಮ ಕುಶಲದಿ ನಡೆದರೆ
ಹೆಸರು ಬಾಹುದು ಶಿವ ನಿಮಗೆ                                                                                 ॥

ಚೆನ್ನಶಿವನೆ ಕೇಳು ನಿನ್ನ ಮಗನು ಸೊಸೆಗೆ
ಹೊನ್ನಮಳೆಯ ಕರೆಸುವುದು
ಅನ್ನ ಉದಕ ಸರ್ವ ರನ್ನಮಂಚದ ಮೇಲೆ
ನಿನ್ನ ಭೋಗಕೆ ಕಡೆಯಿಲ್ಲ                                                                                           ॥

ತುಪ್ಪಬೋನವನುಂಡು ಚಂದ್ರ ಮಂಚದಮೇಲೆ
ಕರ್ಪುರ ವೀಳ್ಯವ ಸವಿದು
ಪುಷ್ಪಶಯನ ಮೇಲೆ ಒಪ್ಪುವ ನಯನಕೆ
ಕರ್ಪುರ ಜ್ಯೋತಿ ನಾ ನಿಮಗೆ                                                                                   ॥

ಇಬ್ಬರ ಹರೆಯದಿ ಹಬ್ಬವಾದುದು ನಿಮ್ಮ
ಉಬ್ಬು ಹೇಳುವರಾರು ಶಿವನೆ
ಕಬ್ಬುವಿಲ್ಲನ ವೈರಿ ಇಬ್ಬರ ಹರೆಯದಿ
ಹೆಬ್ಬಲಿಯಾಗಿರಬಹುದು                                                                                             ॥

ಅವಳ ನಂಬಲಿ ಬೇಡ ಧವಳ ದೇಹವನೆಲ್ಲ
ಕವಳವೇರಿಸಿ ಕೆಡಿಸುವಳು
ಹವಳ ಮಾಣಿಕ ಮುತ್ತು ಗೌಳದ ಸರವೆಂದು
ಜವಳಿ ಹಸ್ತವು ಮುಗಿದಿರಲು                                                                                      ॥

ಮಂತ್ರಿಬಸವ ಗಂಗೆ ತಂತ್ರದ ನುಡಿಗೇಳಿ
ಚಿಂತಾಯಕ ನಸುನಗುತ
ಇಂತು ಬಯಕೆಗಳನಂತವಾಗಲಿಯೆಂದು
ಸಂತಸಗಳ ಧಾರೆಯೆರೆದು                                                                                        ॥

ಬಯಸಿ ತಂದುದಕಿನ್ನು ನಯವಾಯಿತೆನುತಲಿ
ಸವತಿಗಿಮ್ಮಡಿಯ ಮಾಡಿದನು
ಜಯಸಿರಿಲಕ್ಷ್ಮಿಯ ನುಡಿಯ ಭಾವಕೆ ಮೆಚ್ಚಿ
ಸಾಗರದೊಳಗಿದ್ದುದನು                                                                                             ॥

ನಂದಿಬಸವ ಕೇಳು ಮುಂದಾಳ ನುಡಿಗಳ
ಕಂದರಿಬ್ಬರ ಕಥೆಗಳನು
ಇಂದುಧರನ ಕೂಡೆ ಒಂದೊಂದು ಪರಿಯಲಿ
ಮುಂದೆ ಪೇಳಿದ ವಚನದಲ್ಲಿ                                                                                      ॥

ಈರೇಳು ಧರಣಿಯಾರೈದು ಸಲಹುವ
ಮಾರಾರಿ ಹರಭಕ್ತ ಜನರು
ನಾರಿಗಿರಿಜೆ ಗಂಗೆ ಸೇರಿ ಸುಖದೊಳಿರ್ದ
ಆರನೆಯ ಸಂಧಿಗೆ ಶರಣು                                                                                         ॥

ಸಂಧಿ 4ಕ್ಕಂ ಕಂದ 1, ವಚನ 16, ಪದನು 24,
ಸಂಗತ್ಯ. 43, ಉಭಯಕ್ಕಂ 573 ಕ್ಕಂ ಮಂಗಳ ಮಹಾ ಶ್ರೀ ಶ್ರೀ