ಗೌರಿ ಹಬ್ಬದ ಹಾಡುಗಳು

1.  ಗಂಗಿ ಗೌರೀ ಹಾಡು

1

ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ॥
ಕೊಂಬಣಸ ಕೊರಳs ಹುಲಗೆಜ್ಜೆ ಕೋಲ                                                                  ॥

ಕೊಂಬುs ಅಣಸ ಕೊರಳ ಹುಲಗೆಜ್ಜಿ ಶಿವರಾಯಾ॥
ಗಂಗಿsನ ತರವೋs ನಡದಾರ ಕೋ                                                                        ॥

ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ
ಲಿಂಗಕೊಂದ್ಹೊವs ದಯಮಾಡ ಕೋ                                                                      ॥

ಲಿಂಗಕೊಂದ್ಹೊವs ದಯಮಾಡಿದ್ರ ಮಾಡೇನ॥
ನಮ್ಮವ್ವ ನಮಗs ಬೈದಾಳ ಕೋ                                                                            ॥

ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ॥
ಲಿಂಗಕ್ಕೆರಡ್ಹೊವs ದಯಮಾಡ ಕೋ                                                                        ॥

ಲಿಂಗಕ್ಕೆರಡ್ಹೊವ ದಯಮಾಡಿದ್ರ ಮಾಡೇನ॥
ನಮ್ಮಪ್ಪ ನಮಗs ಬಡಿದಾನ ಕೋ                                                                           ॥

ನಿಮ್ಮವ್ವ ಬೈದsರ ನಿಮ್ಮಪ್ಪ ಬಡಿದsರ॥
ಬೇಗ ಬಾ ಗಂಗಾ ಜಡಿಯಾಗಕೋ                                                                          ॥

ಬಂದsರ ಬಂದೇನ ನೆಂಬಿಗಿಲ್ಲೋ ಶಿವನೆ॥
ರಂಭಾsಳೊ ನಿನ್ನ ಮನಿಯಾಗ ಕೋ                                                                      ॥

ನನ್ನಾಣಿ ನಿನ್ನಾಣಿ ಮತ್ತ ನಿಂಗದಾಣಿ॥
ರಂಬಿಲ್ಲ ನನ್ನ ಮನಿಯಾಗ ಕೋ                                                                               ॥

ಬಂದsರ ಬರುವೇನೊ ನಂಬಿಗಿಲ್ಲೋ ಶಿವನೆ॥
ಮಡದ್ಹ್ಯಾಳೊ ನಿನ್ನ ಮನಿಯಾಗ ಕೋ                                                                    ॥

ನನ್ನಾಣಿ ನಿನ್ನಾಣಿ ಮತ್ತ ದೇವsರಾಣಿ॥
ಮಡದಿಲ್ಲ ನನ್ನ ಮನಿಯಾಗ ಕೋ                                                                            ॥

 

* * * * *

ಜಡಿಯಾಗ ಹೋಗೂದು ಗಿಣಿರಾಮ ಕಂಡಾನ॥
ಹೋಗಿ ಹೇಳ್ಯಾನs ಗೌರವ್ಗ ಕೋ                                                                             ॥

ಮನಗಿsದ ಗೌರವ್ವ ಮೈಮುರಿದು ಎದ್ದಾಳ॥
ತಣ್ಣೀರ ಗಿಂಡೀಲಿ ಮಕ ತೊಳೆದ ಕೋ                                                                    ॥

ತಣ್ಣೀರ ಗಿಂಡೀಲಿ ಮಕ ತೊಳೆದ ಗೌರವ್ವ
ಹ್ವಾದಾಳಣ್ಣಾsನ ಅರಮನಿಗಿ ಕೋ                                                                           ॥

ಎಂದಿಲ್ಲ ಗೌರವ್ವ ಇಂದ್ಯಾಕ ಬಂದಾಳ॥
ಕುಂಡsರ ಕುಡರೇ ಮಣಿಚೌಕಿ ಕೋ                                                                         ॥

ಕುಂಡsರ ಬಂದಿಲ್ಲ ನಿಂದsರ ಬಂದಿಲ್ಲ॥
ನಾ ಒಂದ ಕನಸ ಹೇಳಿಬಂದೆ ಕೋ                                                                        ॥

ಕೆರಿಮ್ಯಾಲಿ ಕೆರಿಹುಟ್ಟಿ ಕೆರಿಮ್ಯಾಲಿ ಮರಹುಟ್ಟಿ॥
ಮರದ ಮ್ಯಾಲೊಬ್ಬs ಬಲಿಹಾಕಿ ಕೋ                                                                      ॥

ಕೆರಿಯಂದ್ರ ಶಿವರಾಯಾ ಮರ ಅಂದ್ರ ಜಡಿಗೋಳು॥
ಬಲಿಯಂದ್ರ ಒಳಗ ಸಿರಗಂಗಿ ಕೋ                                                                         ॥

ದೇಶಾನೆ ಆಳವರಿಗೇಸೊಂದು ಹೆಂಡsರ॥
ನಿನಗ್ಯಾಕ ತಂಗೀ ಪರದುಕ್ಕ ಕೋ                                                                           ॥

ಕಿಡಿಕಿsಡಿನಾದಾಳ ಕಿಡಚಂಡನಾದಾಳ॥
ಎಡವಿsದ ಬೆರಳೋsಂದರವಿಲ್ಲ ಕೋ                                                                   ॥

ಎಡವೀದ ಬೆರಳೊಂದರವಿಲ್ಲ ಗೌರವ್ವ॥
ಬಂದಾಳ ತನ್ನ ಅರಮನಿಗೆ ಕೋ                                                                             ॥

* * * * *

ಗೊಬ್ಬೂರ ಹಾದೀಲಿ ಒಬ್ಬಯ್ಯ ಬರತಾನ॥
ಅಬ್ಬರಣಿ ಗೌರೀ ನೀರಿsಡ ಕೋ                                                                                ॥

ಒಂದ್ ಗಿಂಡಿ ಇಡು ಅಂದ್ರ ಎರಡ ಗಿಂಡಿ ಇಟ್ಟಾಳ॥
ನಿನಗಿಬ್ಬರೇನ ಪುರುಷsರ ಕೋ                                                                                ॥

ಅಯ್ಯಯ್ಯ ಶಿವಶಿವ ಅಣಕsದ ಮಾತ್ಯಾಕೊ॥
ಸರವ ಕೆಂಜೆsಡಿ ಮಣಿಮುಕುಟ ಕೋ                                                                       ॥

ಸರವsನೆ ಕೆಂಜೆsಡಿ ಮಣಿಮುಕಟದೊಳಗಿನ॥
ಸಿರಿಗಂಗಾಗೊಂದs ನಿನಗೊಂದ ಕೋ                                                                     ॥

ಗೊಬ್ಬೂರ ಹಾದೀಲಿ ಒಬ್ಬಯ್ಯ ಬರತಾನ॥
ಅಬ್ಬರಣಿ ಗೌರಿs ಎರಿಮಾಡಿ ಕೋ                                                                             ॥

ಒಂದೆsಡಿ ಮಾಡಂದ್ರ ಎರಡೆsಡಿ ಮಾಡ್ಯಾಳ॥
ನಿನಗಿಬ್ಬರೇನ ಪುರುಷsರ ಕೋ                                                                                ॥

ಅಯ್ಯಯ್ಯ ಶಿವಶಿವ ಅಣಕsದ ಮಾತ್ಯಾಕೊ॥
ಸರವ ಕೆಂಜೆsಡಿ ಮಣಿಮುಕುಟ ಕೋ                                                                       ॥

ಸರವsನೆ ಕೆಂಜೆsಡಿ ಮಣಿಮುಕುಟದೊಳಗಿsನ॥
ಸಿರಗಂಗಿಗೊಂದs ನಿಮಗೊಂದ ಕೋ                                                                     ॥

ಗಂಗೀನ ತಂದsರ ತಂಗೀನ ತಂದಂಗ॥
ನಿಂಗsವ ತಾನ ಬಡಿತೇನ ಕೋ                                                                               ॥

ಗಂಗಿsನ ತಂದsರ ತಂಗೀನ ತಂದಂಗ॥
ಖೆಂಡsವ ತಾರs ಬಡಿತೇನ ಕೋ                                                                             ॥

* * * * *

ಬೆಳ್ಳಿ ಬಟ್ಟಲದಾಗ ಎಳ್ಳೆಣ್ಣೆ ತಕ್ಕೊಂಡು॥
ಗೌರ್ಹ್ಯೊದಳವನs ತೆಲಿ ಹೂಸ ಕೋ                                                                      ॥

ತೆಲಿಯೆಂಬ ಭಾಂವಕ ಒತ್ತ್ಯಾಳ ಒರಿಸ್ಯಾಳ॥
ಟೊಂಕಂಬು ಭಾಂವsಕಿಳಿದಾಳ ಕೋ                                                                      ॥

ಟೊಂಕಂಬೊ ಭಾಂವಕ ಒತ್ತ್ಯಾಳ ಒರಿಸ್ಯಾಳ॥
ಪಾದಂಬ ಭಾವಂsಕಿಳಿದಾಳ ಕೋ                                                                           ॥

ಪಾದಂಬೋ ಭಾಂವಕ ಒತ್ತ್ಯಾಳ ಒರಿಸ್ಯಾಳ॥
ನೆಲ ಸೋಸಿ ಗಂಗಿ ಹರಿದಾಳ ಕೋ                                                                        ॥

ಗಂಗ್ಹ್ಯೋದ ಮರುದಿsನ ಗೌರಿ ಮುಟ್ಟನಾದಾಳ॥
ಮಿಂದೆನೆಂದsರ ನೀರಿಲ್ಲ ಕೋ                                                                                  ॥

ಮಿಂದೇನು ಅಂದsರ ನೀರಿಲ್ಲ ಶಿವರಾಯಾ॥
ಹಾಲಿsನ ಕ್ವಡಾ ಖಲವ್ಯಾನ ಕೋ                                                                            ॥

ಹಾಲೀಲಿ ಮಿಂದಿದರ ಹೋಗsವು ಮುಡಚಾಟ॥
ತಂಗಿ ಗಂಗಮನ ಖಳವsರಿ ಕೋ                                                                            ॥

ಗಂಗ್ಹ್ಯೋದ ಮರದಿsನ ಗೌರಿ ಮುಟ್ಟನಾದಾಳ॥
ಮಿಂದೇನಂದಾರs ನೀರಿಲ್ಲ ಕೋ                                                                              ॥

ಮಿಂದೇನು ಅಂದರs ನೀರಿಲ್ಲ ಶಿವರಾಯಾ॥
ತುಪ್ಪsದ ಕ್ವಡಾ ಖಳವ್ಯಾನ ಕೋ                                                                            ॥

ತುಪ್ಪೀಲಿ ಮಿಂದಿದರ ಹೋಗsವ ಮುಡಚಾಟ॥
ತಂಗಿ ಗಂಗಮನ ಖಳುವsರಿ ಕೋ                                                                          ॥

* * *
2.  ಗಂಗೀ ಗೌರೀ ಹಾಡು (2)

ಅಡವಿಯನ್ನಿ ಮರನೆ
ಗಿಡವ ಬನ್ನಿ ಮರನೆ
ಅಡವ್ಯಾಗ ಇರುವಂಥ
ಸಾರಂಗ ಸರದೂಳಿ
ಹೆಬ್ಬsಲಿ ಹುಲಿ ಕರಡಿ

 

ಎಡಬಲ ಹಾಂವು ತೇಳೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ

ಎನ್ನ ತಪ್ಪೇನು ಕಂಡಿ॥

 

ಪಟ್ಟಣದ ದಾರಿ ಮ್ಯಾಲ
ಹಿಟ್ಟಗಲ್ಲಿನ ಮ್ಯಾಲ
ಕತ್ತಿsಯ ವರಿಯಂಗ
ವರಿಯವರು ಇದ್ದಲ್ಲಿ

 

ಇಪ್ಪತ್ತು ಗಾಂವುದ ತಪನಿದ್ದೋs ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ                                               ಎನದನ ತಪ್ಪೇನು ಕಂಡಿ॥

 

ಸಾರಂಗ ದಾರಿಮ್ಯಾಲ
ಸಾಲಗಲ್ಲಿನ ಮ್ಯಾಲ
ಛೂಜಿsಯ ಮಣಿಯಂಗ
ಮಣಿಯವರು ಇದ್ದಲ್ಲಿ

 

ನಾಲ್ವತ್ತು ಗಾಂವುದ ತಪನಿದ್ದೊs ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ

ಎನ್ನ ತಪ್ಪೇನು ಕಂಡಿ॥

 

ತನುವ ಇಲ್ಲದ ಗಂಗಿ
ಥಣ್ಣೀರಿಗ್ಹೋದಾಗ
ನಿಂಬೀಹಣ್ಣಿsನಂಗ
ತುಂಬಿsದ ಕುಚಗಳು

 

ಬಂದ ಕುಂತಾಳ ಜಡಿಯೊಳಗೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ

ಎನ್ನ ತಪ್ಪೇನು ಕಂಡಿ॥

 

ಒಟ್ಟಿsದ ಬಣವಿsಗಿ
ಕಿಚಗುಳ್ಳ ಬಿದ್ದಂಗ
ಮುತ್ತಿsನ ರಾಸಿsಗಿ
ಕಳ್ಳರು ಬಿದ್ದಂಗ
ಚಿಕ್ಕಂದಿನೊಗತಾನಾ
ಮತ್ತೊಬ್ಳಿಗಾಯ್ತಂದ

 

ಹೊಟ್ಯಾಗ ಭೆಂಕಿ ಬರಕ್ಯಾದೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತುದಿ

ಎನ್ನ ತಪ್ಪೇನು ಕಂಡಿ॥

* * *

3. ಗೌರಿ ಹಾಡು

ಬೇಸತ್ತು ಮಲಗೀದಿ
ಆನಿ ಬಂದಾವೆ ಅಗಸ್ಯಾಗೆ ಕೋಲೆ
ಆನಿ ಬಂದಾವೆ ಅಗಸೆ ಗೌರವ್ವನ
ತಂದಿ ಬಂದಾನೆ ಕರೆಯಾಕೆ ಕೋಲೆ
ಹತ್ತು ಕಾಲಿನೇಣಿ ಉಪ್ಪುರಗಿ ನಿಲ ಹಾಕಿ
ಹತ್ತಿ ನೋಡ್ಯಾಳೆ ತವರೂರ ಕೋಲೆ
ಹತ್ತೇನ ನೋಡ್ಯಾಳೆ ತವರೂರ ಹಾದ್ಯಾಗ
ಅವರಪ್ಪ ಗಿರಿರಾಜ ಬರುತಾನೆ ಕೋಲೆ

ಬಂದ ಗಿರಿರಾಜಗೆ ಗಿಂಡೀಲಿ ನೀರಕೊಟ್ಟು
ಕುಂದರಕ ಹಾಕ್ಯಾಳೆ ಚವುಕೆಯ ಕೋಲೆ

ಕುಂದರಕ ಬಂದಿಲ್ಲ ನಿಂದಿರಕ ಬಂದಿಲ್ಲ
ಮಗಳೆ ಗೌರವ್ವನ ಕರಿಬಂದೆ ಕೋಲೆ

ಆರುಕಾಲಿನೇಣಿ ಆವುರಿಗೆ ನಿಲ ಹಾಕಿ
ಏರಿ ನೋಡ್ಯಾಳೆ ತವರೂರ ಕೋಲೆ

ಏರೇನ ನೋಡ್ಯಾಳೆ ತವರೂರ ಹಾದ್ಯಾಗೆ
ವಾರೀಗಿ ಗೆಣತೇರ ಬರುತಾರೆ ಕೋಲೆ

ಬಂದಂತ ಗೆಣತೇರಿಗೆ ಗಿಂಡೀಲಿ ನೀರಕೊಟ್ಟು
ಕುಂದರ ಹಾಕ್ಯಾಳೆ ಚವುಕೆಯ ಕೋಲೆ

ಕುಂದರಕ ಬಂದಿಲ್ಲ ನಿಂದರಕ ಬಂದಿಲ್ಲ
ಗೆಣತಿ ಗೌರವ್ವನ ಕರಿಬಂದೆ ಕೋಲೆ

ನಮ್ಮನಿ ಊರಾಗೆ ತುಂಬಿದ ಹುಣಿವ್ಯಪ್ಪ
ಕಳುವಿ ಕೊಡರಿ ನಮ್ಮ ಗೌರಿಯ ಕೋಲೆ

ಉಟ್ಟು ಸೀರಿ ಬಿಚ್ಚಿಡೆ ಸಿರಿಗೌರಿ
ಉಟುಗೊಳೆ ಹಳೆಯ ಪಟಗೀಯ ಕೋಲೆ

ಉಟ್ಟಗೊಳೆ ಹಳೆಯ ಪಟಗೀ ತವರಿಗ್ಹೋಗಿ
ಉಟುಬರುವಂತೆ ಹೊಸ ಗಳಗೀಯ ಕೋಲೆ

ಇತ್ತ ಬಾರೆ ಸಿರಿಗೌರಿ ಮತ್ತೊಂದು ಹೇಳೇನಿ
ಬಾಗಿಲುದಾಗ ಬೆಳೆದೆ ಸುಳಿಬಾಳೆ ಕೋಲೆ

ಬಾಗಿಲುದಾಗ ಬೆಳೆದಾ ಸುಳಿಬಾಳೆ ಕೊಯ್ದು
ನೀಡೆ ಗೆಣತೇರಿಗೆ ಹುಳಿಬುತ್ತಿ ಕೋಲೆ

ಹುಳಿಬುತ್ತಿ ಉಣ್ಣಾಕೆ ಬಡವರಲ್ಲಿ ಶಿವನೆ
ಹತ್ತೆಮ್ಮಿ ಕರೆದ ನೊರೆಹಾಲು ಕೋಲೆ

ಹತ್ತೆಮ್ಮಿ ಕರೆದ ನೊರೆಹಾಲು ಸಕ್ಕರಿ ತುಪ್ಪ
ಐತೇಳು ಗೆಣತೇರ ಮನಿಯಾಗೆ ಕೋಲೆ

ಶಾಲಿಗ್ಹೋಗೊ ಜನವ ಓಡ್ಯೋಡಿ ಬಂದಾರೆ
ಯಾಕ ಹಡೆದವ್ವ ಅಳತೀದಿ ಕೋಲೆ

ನಮ್ಮನಿ ಊರಾಗೆ ತುಂಬಿದ ಹುಣಿವ್ಯಪ್ಪ
ನಿಮ್ಮಜ್ಜ ನಿನ್ನ ಕರಿಬಂದ ಕೋಲೆ

ನಿಮ್ಮಜ್ಜ ನಿನ್ನ ಕರಿಯ ಬಂದೈದಾರೆ
ಕಳುವಲಿಲ್ಲ ನಿಮ್ಮ ಶಿವರಾಯ ಕೋಲೆ

ಗಂಜೀಯ ಕುಡಿವ್ಯಾರು ಹಂಜೀಯ ನೂಲಾರು
ರಂಜಿಣಿಗಿ ಸಂಜೇಲಿ ಒರಗ್ಯಾರೆ ಕೋಲೆ

ರಂಜಿಣಿಗಿ ಸಂಜೇಲಿ ಒರಗಾ ತವರೀಗ್ಹೋಗಿ
ಏನುಂಡು ಬರುತೀ ಸಿರಿಗೌರ ಕೋಲೆ

ರಾಟೀಯ ನೂಲೋರೆ ರಾಕಾಟಿಯ ಕುಡಿಯೋರೆ
ರಾಟೀ ಸಂದೇಲಿ ಒರಗೋರೆ ಕೋಲೆ

ರಾಟೀಯ ಸಂದೇಲಿ ಒರಗೋ ತವರೀಗ್ಹೋಗಿ
ಏನುಂಡು ಬರುತಿ ಸಿರಿಗೌರಿ ಕೋಲೆ

ರಾಗೀಯ ರೊಟ್ಟಿಯ ರಾಜಗಿರಿ ಪಲ್ಲೇವು
ರಾಜಕ ತವರೂರು ಬಡವsರು ಕೋಲೆ

ರಾಜಕ ತವರೂರು ಬಡವsರು ಮನೆಯಾಗೆ
ಒಂದಿನ ಇದ್ದು ಬರುತೇನೆ ಕೋಲೆ

* * *

4. ಗೌರಿಯನ್ನು ಕಳುಹಿಸಿಕೊಡುವ ಹಾಡು – 1

ಕಲ್ಲಾಗ ಮಳಿಬಂದು ಕಲ್ಲೆಲ್ಲ ಹಸಿಗೊಂಡು
ಕಲ್ಲಾಗ ಕವಳಿ ಬೆಳೆದಾವ ಕೋಲ॥

ಕಲ್ಲಾಗ ಕವಳಿ ಬೆಳೆದಾವ ಗೌರಮ್ಮ
ನಲ್ಲಿ ನೀ ಹ್ಯಾಂಗ ತಪನಿದ್ದೆ ಕೋಲ॥

ನನ್ನ ತಪದಗೂಡಿ ನಿನಗೇನ ಮಾಡದು
ಸುಮ್ಮನ ಹೋಗ ಹುಚ ಜೋಗಿ ಕೋಲ॥

ಆನಿಆನಿಮುಂದ ಆನಿಯಮರಿಮುಂದ
ಮ್ಯಾನೆದಗೌಡರ ಮಗ ಮುಂದ ಕೋಲ॥

ಮ್ಯಾನೆದಗೌಡರ ಮಗ ಮುಂದ ಶರಣಗೌಡ
ಆನಿಮ್ಯಾಲ ಗೌರಿ ಖಳವ್ಯಾಕನ ಕೋಲ॥

ಒಂಟಿಒಂಟಿಯ ಮುಂದ ಒಂಟಿಯಮರಿ ಮುಂದ
ಬಂಡಗೌಡರ ಮಗ ಮುಂದ ಕೋಲ॥

ಬಂಟನೆ ಗೌಡರ ಮಗ ಮುಂದ ಶರಣ ಬಸವ
ಒಂಟ್ಹೇರಿ ಗೌರಿ ಖಳವ್ಯಾರ ಕೋಲ

ಕುದರಿ ಕುದರಿ ಮುಂದ ಕುದರಿಯ ಮರಿ ಮುಂದ
ಚದರಗೌಡರ ಮಗ ಮುಂದ ಕೋಲ

ಚದುರನೆ ಗೌಡರ ಮನಗ ಮುಂದ ಭೋಗೇಶ
ಕುದುರೇರಿ ಗೌರಿ ಖಲವ್ಯಾರ ಕೋಲ॥

ಹೊಸ್ತಲ ಧಾಟಾಗ ಏನಂದಿ ಗೌರಮ್ಮ
ಹೊಸ್ತಲಿಗಿ ಹೊನ್ನ ಜಡಿರೆಂದ ಕೋಲ॥

ಬಾಗಲ ಧಾಟಾಗ ಏನಂದಿ ಗೌರಮ್ಮ
ಬಾಗಲಿಗಿ ಮುತ್ತ ಜಡಿರೆಂದ ಕೋಲ

ಹೂಗಾರ ಗೌರಿಗಿ ಏನೇನ ಸಿಂಗಾರ
ಹೂವಿನ ಹಾರ ಜನಿವಾರ ಕೋಲ॥

ಈಸು ಗೌರಿಗೊಳು ಅಗಸೀಗಿ ಹೋಗ್ಯಾರ
ಅಗಸೀಯ ತೆರಿಯೋ ತಳವಾರ ಕೋಲ॥

ಇವ ಅಗಸಿಗೊಳು ಸುಮ್ಮನ್ಯಾಕ ತೆರಿಯಲಿ
ಬಗಸಿ ತುಂಬ ಅಡಕಿ ಬಿಲಿ ಎಲಿಯ ಕೋಲ॥

ಬಗಸಿ ಥುಂಬ ಅಡಕಿ ಬಿಳಿ ಎಲಿಯ ಕೊಟ್ಟರ
ಅಗಸಿಯ ತೆರದ ತಳವಾರ ಕೋಲ॥

ಅಗಸಿಯ ತೆರದ ತಳವಾರ ಗೌರಮ್ಮ
ಹೋಗ್ಯಾಳ ಶಿವನ ಅರಮನಿಗೆ ಕೋಲ॥

* * *

5. ಗೌರಿಯನ್ನು ಕಳುಹಿಸಿಕೊಡುವ ಹಾಡು – 2

ಬಾಗಿಲ ಧಾಟಟಿಗೆ ಏನಂದಿ ಗೌರಮ್ಮ
ಸಿಂಗಾರ ನಮಗ ಘನವಾಗಿ ಕೋಲ

ಸಿಂಗಾರ ನಮಗ ಘನವಾಗಿ ದೇವಿಂದ್ರ
ನಿಂಗವಂತನ ಭೂಮಿ ಬೆಳಿಲಂದೆ ಕೋಲ

ಬಾಗಿಲ ಧಾಟಟಗೆ ಏನಂದಿ ಗೌರಮ್ಮ
ಭಾಗ್ಯವ ನಮಗ ಘನವಾಗೆ ಕೋಲ
ಭಾಗ್ಯವ ನಮಗ ಘನವಾಗಿ ಬಸುರಾಜನ
ಭಾಗ್ಯವಂತನ ಭೂಮಿ ಬೆಳಿಲಂದೆ ಕೋಲ
ಶೆಟ್ಟಿ ಶೆಟ್ಟೇರಿ ಗೌರಿ ಶೆಟ್ಟೇರ ಮನಿಯನ ಗೌರಿ
ಶೆಟ್ಟಿ ಬಸರಾಜನ ಮನಿ ಗೌರಿ ಕೋಲ
ಶೆಟ್ಟನೆ ಬಸರಾಜನ ಮನಿಗೌರಿ ಹೋಗತಾಳ
ನಾಲತ ಪಂಜಿನ ಬೆಳಕೀಲಿ ಕೋಲ
ರಾಯ ರಾಯರ ಗೌರಿ ರಾಯರ ಮನಿಯನ ಗೌರಿ
ರಾಯನಿಂಗಣ್ಣನ ಮನಿಗೌರಿ ಕೋಲ
ರಾಯನ ನಿಂಗಣ್ಣನ ಮನಿಗೌರಿ ಹೋಗುತಾಳ
ನಾಲತ ಪಂಜಿನ ಬೆಳಕಲಿ ಕೋಲ

ದಿಡ್ಡಿತೆರಿಯೆ ನನ್ನ ಬುದ್ದುಳ್ಳ ತಳವಾರ
ಗಿದ್ದನ ತುಂಬ ಅಡಕಿ ಬಿಳಿ ಎಲಿಯ ಕೋಲ
ಗಿದ್ದನ ತುಂಬ ಅಡಕಿ ಬಿಳಿ ಎಲಿಯ ತೊಗೊಂಡು
ದಿಗ್ಗನ ಬಂದ ದಿಡ್ಡಿ ತೆರದಾನೆ ಕೋಲ

ಅಗಸಿ ತೆರಿಯ ನನ್ನ ಸೊಗಸುಳ್ಳ ತಳವಾರ
ಬಗಸಿ ತುಂಬ ಅಡಕಿ ಬಿಳಿ ಎಲೆಯ ಕೋಲ
ಬಗಸಿಗೆ ತುಂಬ ಅಡಕಿ ಬಿಳಿ ಎಲಿಯ ತೊಗೊಂಡು
ಸೊಗಸಿಲಿ ಬಂದಗಿಸಿ ತೆರುದಾನೆ ಕೋಲ
ಕಳವಿ ಬಂದೇನಮ್ಮ ಕಳವುಳ್ಳ ಗೌರಮ್ಮನ
ಬಿಳಿಮುತ್ತಿನ ಕಿನ್ನ ಚೆಲುವಿನ್ನ ಕೋಲ
ಬಿಳಿಮುತ್ತಿನ ಕಿನ್ನ ಚೆಲುವಿನ್ನ
ಕಳವಿ ಬಂದೇವ ಶಿವನ ಅರಮನಿಗೆ ಕೋಲ
ಬಿಟ್ಟ ಬಂದೇನಮ್ಮ ಪಟ್ಟದ ಗೌರಮ್ಮನ
ಬೆಳದಿಂಗಳಕಿನ್ನ ಚಲುವಿನ್ನ ಕೋಲ