6. ಗಂಗಿ ಗೌರೀ ಸಂವಾದ

1

ಕಂದ:

ಅಂಬರದ ಗಂಗೆಯನು ಬೊಂಬೆರೂಪನೆ ಮಾಡಿ
ಅಂಬಿಗ ಶರಣನಾತ್ಮಜಳೆನಿಸುವ
ಕುಂಭನಿಗೆ ಚೋದ್ಯವೆನಿಸುವ ಶಿವಗಂಗೆಯನು
ಹಂಬಲಿಸಿ ತಂದ ಹರುಷಾಬ್ಧಿ ಕಥೆಯ                                                                      ॥

ಆಕಾಶಗಂಗೆಯನು ಏಕರೂಪ ಮಾಡಿ
ಸಾಕಾರ ರತ್ನಗಿರಿಯೊಳಗಿರುಸುತ
ಓಂ ಕಾರರೂಪ ಶಿವ ಜೋಗಿರೂಪನೆ ತಾಳಿ
ಬೇಕೆಂದು ತಂದ ಶ್ರೀಗಂಗೆ ಕಥೆಯ                                                                   ॥2 ॥

ವಚನ : ರಾಗ : ತೆಲುಗ ಕಾಂಬೋದಿ:

ಗಂಗೆಯನು ತಂದ ವಚನವ ಕೇಳಿ ಜನವೆಲ್ಲ ನಮ್ಮ
ಸಂಗಮೇಶ ದೈವಕಿನ್ನು ಮಿಗಿಲಿಲ್ಲ                                                                            ॥

ಗುರುವೆ ನಿಮ್ಮ ಚರಣಕಮಲ ಗುರುರಾಯ ಮುಕ್ತಿ
ಪರಮ ಪದವನಿತ್ತು ರಕ್ಷಿಪುದು ಗುರುರಾಯ
ವರವನಿತ್ತು ಕರುಣಿಸುತಲಿ ಗುರುರಾಯ ಗಂಗೆ
ಗಿರಿಜೆ ಜಗಳ ಕೇಳಿ ಶಿವನು ಗುರುರಾಯ                                                                ॥

ಎನ್ನ ಗುರುವೆ ಕೇಳೈ ನಿಮ್ಮ ಗುರುರಾಯ ಸಂ
ಪನ್ನೆ ನೀಲಲೋಚನೆಯು ಗುರುರಾಯ
ತನ್ನ ಪುರುಷ ಬಸವೇಶ್ವರಗೆ ಗುರುರಾಯ ಮತ್ತೆ
ವರ್ಣಿಸಿ ಪೇಳಿದನು ಕಥೆಯ ಗುರುರಾಯ                                                               ॥

ಎಲ್ಲ ಲೋಕ ಭುವನಸ್ಥಲಕೆ ಗುರುರಾಯ ಮುಕ್ತಿ
ಕಲ್ಯಾಣ ಪಟ್ಟಣದೊಳಗೆ ಗುರುರಾಯ
ಬಲ್ಲಿದ ಬಸವೇಶ ತನ್ನ ಗುರುರಾಯ ಪ್ರಾಣ
ದೊಲ್ಲಭೆಯ ಕೇಳುತಿರ್ದ ಗುರುರಾಯ                                                                    ॥

ನೀಲಾಂಬಿಕೆ ನೀನು ಪೇಳು ಎಲೆ ಹೆಣ್ಣೆ ಶಿವನು
ಬಾಲೆ ಗಂಗೆ ತಂದ ಕಥೆಯ ಎಲೆ ಹೆಣ್ಣೆ
ಆಲಿಸುವೆನು ಕರ್ಣದಲ್ಲಿ ಎಲೆ ಹೆಣ್ಣೆ ಮುಕ್ತಿ
ಶೀಲವಂತೆ ಭಕ್ತಿ ಕಾಂತೆ ಎಲೆ ಹೆಣ್ಣೆ                                                                          ॥

ಅರಸಿ ನೀಲರತ್ನ ವೇಣಿ ಎಲೆ ಹೆಣ್ಣೆ ನಮ್ಮ
ಪರಮ ಗಿರಿಜೆಗಂಗೆ ಜಗಳ ಎಲೆ ಹೆಣ್ಣೆ
ಹರನು ಸಂತೈಸಿದ ಕಥೆಯ ಎಲೆ ಹೆಣ್ಣೆ ಅಮೃತ
ಸುರಿಯೆ ಕರ್ಣಗಳಿಗೆ ನೀನು ಎಲೆ ಹೆಣ್ಣೆ                                                                   ॥

ಪುರುಷ ಬಸವೇಶ್ವರನ ನುಡಿಗೆ ನೀಲಮ್ಮ ಬಹಳ
ಹರುಷವೇರಿ ಲಿಂಗದೊಳಗೆ ನೀಲಮ್ಮ
ಅರಸಿ ಗಂಗೆಗೌರಿ ಜಗಳ ನೀಲಮ್ಮ ಗಂಡ
ಗೊರೆದು ಪೇಳಿದಳು ಕಥೆಯ ನೀಲಮ್ಮ                                                                  ॥

ಮೂಲಮಂತ್ರ ಪ್ರಣಮರೂಪ ಬಸವಯ್ಯ ಪೇಳ್ವೆ
ಲಾಲಿಸಿನ್ನು ರತ್ನಮಣಿಯೆ ಬಸವಯ್ಯ
ಆಲಿನಟ್ಟು ಲಿಂಗದೊಳಗೆ ನೀಲಮ್ಮ ತನ್ನ
ಶೂಲಧರನಬ ಸ್ತುತಿ ಮಾಡಿದಳು ನೀಲಮ್ಮ                                                           ॥

ಶಿವನೆ ನಿಮ್ಮ ಸ್ತುತಿಯ ಮಾಳ್ಪೆ ಲಿಂಗಯ್ಯ ಎನ್ನ
ಭವದ ಕರ್ಮಕಳೆದು ಸಲಹೊ ಲಿಂಗಯ್ಯ
ಯುವತಿ ಗಿರಿಜೆ ನೀವಲ್ಲದೆ ಲಿಂಗಯ್ಯ ಇನ್ನು
ಭುವನದೊಳಗೆ ದೈವವಿಲ್ಲ ಲಿಂಗಯ್ಯ                                                                      ॥

ಶಿವನ ಭಕ್ತ ಲಾಲಿಸಿನ್ನು ಬಸವಯ್ಯ ಒಂದು
ನೆವದಿ ಬಂದ ಜಗಳ ಕತೆಯ ಬಸವಯ್ಯ
ವಿವರದಿಂದ ಕೇಳ್ದವರಿಗೆ ಬಸವಯ್ಯ ಅಮೃತ
ದ್ರವಿಸುವುದು ಬಾಳುವಂತೆ ಬಸವಯ್ಯ                                                                   ॥

ಸಂಗನ ಶರಣನೇ ಕೇಳು ಬಸವಯ್ಯ ಶಿವನು
ಗಂಗೆ ತಂದ ಕತೆಗಳನು ಬಸವಯ್ಯ
ಸಂಗತ್ಯ ವಚನ ಪದದಿ ಬಸವಯ್ಯ ಶಿವನು ಮೂ
ರಂಗದಲ್ಲಿ ಕೃತಿಯ ಕೇಳು ಬಸವಯ್ಯ                                                                      ॥

ಮುಂದೆ ಕೇಳು ಮುಕ್ತಿಧರನೆ ಬಸವಯ್ಯ ಭುವನ
ಕೊಂದು ರತ್ನ ರಜತಾದ್ರಿಯು ಬಸವಯ್ಯ
ಸಂದ ಶರಣ ಭಕ್ತಗಣದಿ ಬಸವಯ್ಯ ಮುಕ್ತಿ
ಸಿಂಧು ನೀನೆ ಮುನಿಗಳೊಡೆಯ ಬಸವಯ್ಯ                                                          ॥

ಪದನು:

ವೃಷಭವಾಹನನೆ ಕೇಳು ಬಸವಯ್ಯ ಶಶಿಧರನ ಒಡ್ಡೋಲಗ
ಮುಸುಕಿ ಹತ್ತೆಂಟು ಕೋಟಿ ದೇವದೇವಾದಿಗಳು ಪಸರಿಸಿತು

ವಾಲಗದೊಳು    ॥

ದೇವಗಣ ಭಕ್ತಗಣವು ಬಸವಯ್ಯ ಕಾಮಪಿತರಜಹರಿಗಳು
ದೇವೇಂದ್ರ ಸುರಮುನಿಯು ದಿಕುಪಾಲಕರೆಲ್ಲ ತೀವಿಕೊಂಡಿಹುದೋಲಗದಿ
ಜಾವ ತಿಥಿ ಗಳಿಗೆಗಳನು ಹೇಳುವ ಜೋಯಿಸ ಬ್ರಸ್ಪತಿಗಳು
ಕೋವಿದ ನಂದಿ ಭೃಂಗಿ ವೀರಭದ್ರಾದಿಗಳು ತೀವಿಕೊಂಡಿಹುದೋಲಗದಿ           ॥

ವಾಮಭಾಗದಲಿ ವಿಷ್ಣು ಬಲದಲ್ಲಿ ಆ ಮಹಾನವಬ್ರಹ್ಮರು
ವ್ಯೋಮಕೇಶರ ನಟ್ಟನಡುವೆ ನಿಸ್ಸೀಮನು ಭೂಮಿಯಾಕಾಶದೊಡೆಯ
ಸೋಮಸೂರ್ಯರು ಕೋಟಿಯು ನವಗ್ರಹರು ಸ್ತೋಮ ಸ್ತೋಮದಲ್ಲಿದ್ದರು
ಕೋಮಲಾಂಗದ ಮಂತ್ರಶಕ್ತಿಯರು ಭಕ್ತಿಯರು ಕಾಮಹರ ನೋಲಗದೊಳು    ॥

ಕಿನ್ನರರು ಕಿಂಪುರುಷರು ಬಸವಯ್ಯ ಪನ್ನಗಧರರೆಲ್ಲರೂ
ಮುನ್ನವೋಲೈಸಿದ ಶರಣಭಕ್ತಾದಿಗಳು ಸನ್ನಿಧಿಯೊಳೊಪ್ಪುತಿಹರು
ಚೆನ್ನಬಸವಯ್ಯ ಕೇಳಿ ಗುರುರಾಯ ತನ್ನೊಳಗೆ ಒಂದು ನೆನೆದು
ಕನ್ನೆ ಗೌರಿಯ ನೋಡಿಯೆನ್ನ ಪ್ರಾಣವೆ ಎಂದು ಮನ್ನಿಸುತ ಮನೆಗೆ ಕಳುಹಿ       ॥

ತೊಡೆಯ ಮೇಲಣ ಮಡದಿಯು ಗುರುರಾಯ ಒಡನೆ ಮುಂಡಾಡಿಯಪ್ಪಿ
ಪಡೆಯಲಿಲ್ಲವು ಗಿರಿಜೆ ತಿರುಕಮಕ್ಕಳನೆಂದು ನುಡಿದ ತನ್ನಾತ್ಮದಲ್ಲಿ
ಒಡವೆ ವಸ್ತುಗಳ ನೋಡಿ ಇನ್ನೊಬ್ಬ ಮಡದಿಯನು ತರುವೆನೆನುತ
ಗಡಿಬಡಿಸುತಿರ್ದನೊಡ್ಡೋಲಗವ ಕಳುಹಿದರೆ ತಡೆಯದೆ ಬಯಲಾದರು           ॥

ಎಲ್ಲರನು ಕಳುಹಿಕೊಡುತ ಗುರುರಾಯ ಬಲ್ಲಿದ  ನಾರಂದನಾ
ಮೆಲ್ಲನೆ ಕೈವಿಡಿದು ಏಕಾಂತ ಸ್ಥಳದೊಳಗೆ ಅಲ್ಲಿ ಮೂರ್ತಗಳ ಮಾಡಿ
ಚೆಲ್ವ ನಾರದನೆ ಕೇಳು ನೀ ಮುನ್ನ ಎಲ್ಲ ರಾಜ್ಯಗಳ ಬಲ್ಲೆ
ಕಲ್ಲುಗುಂಡು ಗಿರಿಯು ಗವ್ಹರದೊಳಗಿರುವ ಬಲ್ಲವರ ನೋಡಬೇಕು                     ॥

ಬೆಸಸಿದರೆ ಗುರುರಾಯಗೆ ನಾರಂದ ಮಿಸುನಿ ಹಾವುಗೆಯ ತಂದು
ಹೊಸೆದು ಜಡೆಗಳ ಮಾಡಿ ಭಸಿತ ಸರ್ವಾಂಗದಲಿ ವಿಷಯ ಹಾವುಗಳ ಧರಿಸಿ
ಎಸೆವ ಕಂಥೆಗಳ ತೊಟ್ಟು ಪಣೆಯೊಳಗೆ ಮಸಣ ಬೂದಿಗಳನಿಟ್ಟು
ಶಶಿಮುಖಿಯ ತರುವುದನು ಉಸುರದೆ ನಾರದಗೆ ಮುಸುಕಿಲಿ ಮಾಡಿಕೊಂಡು ॥

ತನುಮನದ ಪ್ರಾಣಲಿಂಗಿ ಕೇಳಿನ್ನು ಮುನಿಯವತಾರದ ಜೋಗಿ
ಜನವಶ್ಯ ರಾಜವಶ್ಯಗಳೆಂಬ ಬೂದಿಯನು ಕೊನೆಯುಗುರಿನೊಳಗಡಸಿ
ದಿನ ವಾರ ಮೋರ್ತಗಳನು ತಾ ತನ್ನ ಮನದೊಳಗೆ ತಿಳಿದುಕೊಳುತ
ಘನಗುರು ಸಂಗಮೇಶ್ವರಲಿಂಗ ತೆರಳಿದನು ಮುನಿ ನಾರಂದನ ಕೂಡಿ             ॥

ಸಂಗತ್ಯ:

ಶೂಲಿಯ ಶರಣನೆ ಲಾಲಿಸು ಮುಕ್ತಿಗ
ಳಾಲಯಕಧಿಪತಿಯರಸಾ
ಮೂಲೋಕದರಸಿಯು ಬಾಲೆ ಶ್ರೀಗೌರಿಯ
ಮೇಲೆ ಗಂಗೆಯ ತಂದ ಶಿವನು                                                                                ॥

ರೂಪಿಲ್ಲದವನಾ ಮಗನ ಸುಖನಾತ್ಮಜಿ
ನೆಪದಿ ರಕ್ಷಿಪಳವಳಾ
ಅಪರಂಪರ ಶಿರದೊಳಗಿಟ್ಟ ಗಂಗೆಯ
ಗೋಪತಿಯರಸ ಕೇಳ್ಪುರುಷ                                                                                    ॥

ನಾಲ್ಕೊಂದು ಮಕ್ಕಳ ಪಡೆದ ಮಹಿಮೆಯೊ
ಳಾಕಾರವಾದನಾತ್ಮಜನ
ಸೋಕಲು ಪಾಪನಿರ್ಲೇಪವ ಮಾಡಿದ
ಓಂಕಾರ ಪ್ರಣಮಸ್ವರೂಪ                                                                                         ॥

ಸಂಗನಬಸವಯ್ಯ ಲಿಂಗಮೂರುತಿ ಕೋಟಿ
ಅಂಗಜ ರೂಪಿನ ಜೋಗಿ
ಬಂಗಾರ ಪುತ್ತಳಿ ಗಂಗೆಯ ಶಿವ ತಂದ
ಶೃಂಗಾರ ಕಥೆಯ ಕೇಳುವುದು                                                                                 ॥

ಮೆಟ್ಟುವ ಹಾವುಗೆ ಮತಿಯೊಳದೃಶವ
ಇಟ್ಟಾನು ತನ್ನಯ ಪಣೆಗೆ
ಪಟ್ಟಪಟ್ಟಾವಳಿ ಜಿಬಿ ನಾಣ್ಯದ ಕಂಥೆ
ತೊಟ್ಟಾನು ಮಲೆಯಾಳ ಜೋಗಿ                                                                             ॥

ಆರಾರಿಗಳವಲ್ಲ ಅಪರಂಜಿ ಮುನಿರಾಯ
ಭಾರಿ ಕಿನ್ನರಿಗಳ ಪಿಡಿದು
ಮೂರುಲೋಕದ ಮುನಿಗಳ ಗುರುನಾಥನು
ಆರು ಶಾಸ್ತ್ರಗಳಳವಡಿಸಿ                                                                                            ॥

ಚಿಟ್ಟಿಗ ನಾರಂದ ಮುನಿಗೊಂದು ವೇಷವ
ಮುಟ್ಟಿ ತಾ ಧರಿಸಿದ ಶಿವನ
ತೊಟ್ಟ ಎರಳೆಚರ್ಮ ಸುಟ್ಟ ಬೂದಿಯ ಲೇಪ
ಬಿಟ್ಟಾನವನ ಕಿರುಜಡೆಯ                                                                                          ॥

ಬಗೆಬಗೆ ರೂಪನು ನಗೆಯಿಂದ ಧರಿಸಿದ
ಹಗಲುಗತ್ತಲೆ ಅದೃಶ್ಯಗಳ
ಉಗುರೊಳಗಡಗಿಸಿ ನಿಗಮಕಗೋಚರ
ನಗೆ ಮುಖದಲಿ ತೆರಳಿದನು                                                                                      ॥

ಮಾರಹರನು ಚಿಕ್ಕನಾರಂದ ಮುನಿಗೂಡಿ
ಮೇರು ಮಂದರಗಳನಿಳಿದು
ಈರೇಳು ಲೋಕದ ನವಭಾಂಡಪೃಥ್ವಿಯಾ
ಘೋರಾರಣ್ಯಗಳ ನೋಡುತಲಿ                                                                                 ॥

ನಡದಾನು ರಾಜ್ಯದ ಗಡಿಸೀಮೆಯ ದಾಟಿ
ಬೆಡಗು ತಾಣಗಳ ನೋಡುತಲಿ
ನಡುರಾಜ್ಯ ಗಿಡುರಾಜ್ಯ ಪಡೆರಾಜ್ಯ ಪರರಾಜ್ಯ
ಬಡಗು ರಾಜ್ಯಗಳ ನೋಡುತಲಿ                                                                               ॥

ಉರಲೋಕ ನರಲೋಕ ಸುರಲೋಕ ಹರಲೋಕ
ಪರಲೋಕ ಪರಬ್ರಹ್ಮಲೋಕ
ತಿರುಗೂತ ಬರಗೂತ ಸೊರಗೂತ ಬಳಲೂತ
ಸರವಾರಗಳ ನೋಡುತಲಿ                                                                                       ॥

ತೆಗ್ಗುತೆವರನೆ ಮೆಟ್ಟಿ ಬಗ್ಗೆಬಾರದ ಗವಿ
ಎಗ್ಗಳ ಗಿಡುಗಂಟಿಯೊಳಗೆ
ಮುಗ್ಗುತ ಎಡವುತ ಮುನಿಮಹಾಜೋಗಿಯು
ನುಗ್ಗಾಗಿ ನುಡಿದ ನಾರದಗೆ                                                                                        ॥

ವರಮುನಿ ನಾರಂದ ಸರವಾರ ಸುಡಲಿನ್ನು
ಶರಿರವು ಬಳಲಿ ಬಾಯಾರಿ
ಹರಣಗಳಳಿವುತ ಒರಗೂದುಚಿತವೇನು
ತಿರುಗುವಾ ಬಾ ನಮ್ಮ ಸ್ಥಲಕೆ                                                                                  ॥

ಎಲವೋ ನಾರಂದ ಮಲೆಯೋಳ್ಯಾತಕೆ ಬಂದೆ
ಬಲಗಳಳಿದು ಬಳಲಿದರೆ
ಹಲವು ವಿಹಾರದಿ ನೆಲೆಯರಿದುಣಿಸುವ
ಲಲನೆಯರುಂಟೆ ಈ ಸ್ಥಲದಿ                                                                                      ॥

ನಾಡು ದೇಶಗಳನು ನೋಡಿ ಬಳಲಿದೆವು ಕಾ
ಡಾಡಡವಿಗಳಸುಲಿನ್ನು
ಬೇಡಿದ ಬಯಕೆಯ ನೀಡುವರಾರುಂಟು
ಮೂಢ ನಾರಂದ ಬಾ ಮನಿಗೆ                                                                                    ॥

ಬಾರೆಲೊ ನಾರಂದಾ ಊರು ಸೀಮೆಗಳೊಳು
ನೀರು ಹಾರಗಳುಂಟೆ ನಮಗೆ
ದಾರಿ ಬಿಟ್ಟೆಯ ಸುಡು ಅರಣ್ಯದೊಳಗೊಬ್ಬ
ನಾರೀಯರನು ಕಂಡುದಿಲ್ಲ                                                                                        ॥

ಇತ್ತ ತಿರುಗು ನಾರಂದಮುನಿ ಹೋಗುವ
ಅತ್ತಣ ಗಿರಿಗಳು ಸುಡಲಿ
ತುತ್ತು ಆಹಾರಗಳಿಲ್ಲವೆಂದರೆ ಮುನಿ
ಉತ್ತರಗಳ ಕೊಟ್ಟ ಶಿವಗೆ                                                                                           ॥

ಪದನು:

ಕೇಳು ಕೇಳೆನ್ನ ಗುರುವೆ ಎನ್ನ ಜನ್ಮಪಾವನದ ಮೂರ್ತಿ ನೀನು
ಭಾಳಲೋಚನ ಶಿವನ ಬೇಡಿದರೆ ಏನುಂಟು ಹಾಳು ಅರಣ್ಯದೊಳಗೆ                 ॥

ಮುನಿಯ ವೇಷವ ತಾಳಲು ನಮಗಿನ್ನು ತನುವಿಗೆಲ್ಲಿಯದು ಸುಖವು
ಕೊನರು ತರಗೆಲೆಗಳನು ಆಹಾರಗಳ ಮೆದ್ದು ವನದೊಳಗೆ ಚರಿಸಬೇಕು
ತನುಮನವ ದಂಡಿಸುತಲಿ ಗುರುರಾಯ ಮನವನೊಬ್ಬುಳಿಯ ಮಾಡಿ
ಹಾನಿಹರಿಗಳಿಗಂಜಿ ಹೆದರದೆ ನಾವಿನ್ನು ಘನರಾಜ್ಯ ನೋಡಬೇಕು                     ॥

ಉಣ್ಣಲೂಟವ ಬೇಡಲಿಕೆ ಗುರುರಾಯ ಹೆಣ್ಣಿನ ಅರಮನಿಗಳಿಗೆ
ಹಣ್ಣು ಹಂಪಲಗಳ ಸಲಿಸುತಲಿ ಅಡವಿ ಅರಣ್ಯಗಳ ನೋಡಬೇಕು
ಕಣ್ಣುಮೂರುಳ್ಳ ಶಿವನೆ ಕೈಕಾಲು ದಣ್ಣನೆ ದಣಿಯಬೇಕು
ಬೆಣ್ಣೆಮುದ್ದೆಗಳಾಗಿ ಇದ್ದಂತ ಶರೀರಗಳ ಸಣ್ಣಿಸಿ ಕಳೆಯಬೇಕು                             ॥

ಪರದೇಶಿಯಾದ ಮೇಲೆ ಗುರುರಾಯ ಶರೀರಕೆಲ್ಲಿಯದು ಸುಖವು
ದೊರಕಿದುದನುಂಡುಕೊಂಡು ಗುರುರಾಯ ಮತ್ತೊರಗಬೇಕೆಲ್ಯಾದರು
ಸರವರವ ನೋಡಬೇಕು ಗುರುರಾಯ ಪರಬ್ರಹ್ಮ ಋಷಿಗಳುಂಟು
ಶಿರವ ತಲೆಕೆಳಕಾಗಿ ಮಾಡುವ ತವಸಿಗಳ ಚರಣಗಳ ನೋಡಬೇಕು                 ॥

ಬಿಸಿಯ ಕೋಡ್ಗಲ್ಲ ಮೇಲೆ ಗುರುರಾಯ ಮಸೆದ ಕೂರಲಗನಿಟ್ಟು
ಮಿಸುಕದೆ ಕೈಕಾಲು ತಲೆಕೆಳಗೆ ಮಾಡುವರ ಕುಶಲಗಳ ನೋಡಬೇಕು
ದಶವಾಯುಗಳು ಸೂಸದೆ ಗುರುರಾಯ ಉಸುರ ಉನ್ಮನಿಯಲಿಟ್ಟು
ಭಸಿತರುದ್ರಾಕ್ಷಿಗಳ ಮುನಿಗಳ ನೋಡಿದರೆ ಹಸುತೃಷೆಗಳಿಲ್ಲ ನಮಗೆ                ॥

ಶರಣು ಶರಣಾರ್ಥಿ ಗುರುವೆ ನೀ ಮುನ್ನ ಅರಿಯದಾ ಋಷಿಗಳುಂಟೆ
ಮೆರೆವ ಮೂವತ್ತಾರ್ಕೋಟಿ ಮುನಿಗಳು ನಿಮ್ಮ ಚರಣಕಮಲದಲಿರುವರು
ತೆರಳಿ ಸರವರವ ಪೊಕ್ಕು ನೋಡುವ ಪರಿಗಳನು ಬಲ್ಲೆವೇನ
ಪರಮಗುರು ಸಂಗಮೇಶ್ವರ ನೀನೆ ಬಲ್ಲೆಂದು ಚರಣಕೆರಗುತ ನುಡಿದನು          ॥

ವಚನ:

ಮೂರು ಮೂರ್ತಿಗಳವಲ್ಲ ನೀ ಗುರುರಾಯ ಮಹಾ
ಮೇರುಗಿರಿಯನಿಳಿದು ಬಂದೆ ಗುರುರಾಯ
ಘೋರಾರಣ್ಯಗಳ ನೋಡಿತಾಲೆ ಗುರುರಾಯ ನಿಮ್ಮ
ಗಾರುಡಗಳು ತಿಳಿಯವೆಮಗೆ ಗುರುರಾಯ                                                             ॥

ಗೆಜ್ಜೆಕಾಲ ಚಿಕ್ಕಮುನಿ ಗುರುರಾಯ ನನ್ನ
ಅಜ್ಜು ತಿಳಿದು ಮನವ ನೋಡು ಗುರುರಾಯ
ವಜ್ರದೇಹವಸ್ತು ನೀನು ಗುರುರಾಯ ನಿನ್ನ
ಹೆಜ್ಜೆ ಹಿಡಿದು ನಾನು ಬರುವೆ ಗುರುರಾಯ                                                             ॥

ನಾರಂದನ ನುಡಿಗೆ ನಗುತ ಗುರುರಾಯ ಮುಂದೆ
ಘೋರಾರಣ್ಯಗಳನು ಹೊಕ್ಕು ಗುರುರಾಯ
ಕಾರುಮಿಂಚಿನ ಬೆಳಗಿನಂತೆ ಗುರುರಾಯ ಅಲ್ಲಿ
ವಾರಿರತ್ನಗಿರಿಯ ಕಂಡು ಗುರುರಾಯ                                                                    ॥

ಆಗ ಬೇಗದಲ್ಲಿ ನಡೆದು ಗುರುರಾಯ ಬಯಕೆ
ಜಾಗ ಇರವನರಸುತಲಿ ಗುರುರಾಯ
ಸಾಗಿ ಮುಂದಕ್ಕಡಿಗಳಿಡುತ ಗುರುರಾಯ ಪುಷ್ಪ
ರಾಗಗಿರಿಯ ಕಂಡ ಶಿವನು ಗುರುರಾಯ                                                                ॥

ಚಿತ್ರಕೂಟ ಪರ್ವತಗಳನು ಗುರುರಾಯ ವೇದ
ಶಾಸ್ತ್ರಗಳಿಗೆ ನಿಲಕದಿಹವು ಗುರುರಾಯ
ಕ್ಷೇತ್ರ ನವರತ್ನಗಿರಿಯು ಗುರುರಾಯ ಜಗದ
ಸೂತ್ರಧಾರಿ ನೋಡಿ ಕಂಡ ಗುರುರಾಯ                                                                ॥

ಮೂರು ಪರ್ವತಗಳ ಸುತ್ತ ಗುರುರಾಯ ರತ್ನ
ವಾರಿಧಿಯ ನಡುಮಧ್ಯದಲ್ಲಿ ಗುರುರಾಯ
ಆರು ಮೂರು ನವಕೋಟಿಗಳು ಗುರುರಾಯ ಬ್ರಹ್ಮ
ನಾರಾಯಣರಿಗಳವಲ್ಲವು ಗುರುರಾಯ                                                                   ॥

ಅಲ್ಲಿ ಸ್ಥಳವ ನೋಡುವೆನೆಂದು ಗುರುರಾಯ ಶಿವನು
ಕಲ್ಲು ಮುಳ್ಳು ಹುಲ್ಲಿನೊಳಗೆ ಗುರುರಾಯ
ಹಳ್ಳ ಹೊಳೆಯ ಹಿಡಿದು ಬರುತ ಗುರುರಾಯ ಮುಂದೆ
ಮಲ್ಲಿಗೆ ವನವ ಕಂಡ ಗುರುರಾಯ                                                                           ॥

ಶೃಂಗಾರದ ತೋಟದೊಳಗೆ ಗುರುರಾಯ ರತ್ನ
ಬಂಗಾರದ ಬೊಂಬೆ ಇರಲು ಗುರುರಾಯ
ಲಿಂಗಪೂಜೆ ಪರಮಜ್ಞಾನಿ ಗುರುರಾಯ ಮುಕ್ತಿ
ಯಂಗನೆಯ ಕಂಡ ಶಿವನು ಗುರುರಾಯ                                                                ॥

ನೀರೆಯೊಬ್ಬ ಸತಿಯು ಅಲ್ಲಿ ಗುರುರಾಯ ವನಕೆ
ನೀರ ಬಿಟ್ಟು ಪುಷ್ಪವೆತ್ತಿ ಗುರುರಾಯ
ಹಾರಕಮಲಗಳ ಧರಿಸಿ ಗುರುರಾಯ ತನಗೆ
ಮೂರು ವೇಳೆ ಶಿವನ ಪೂಜೆ ಗುರುರಾಯ                                                               ॥

ಜಾಜಿಮಲ್ಲಿಗೆಗಳ ಹಾರ ಗುರುರಾಯ ತನ್ನ
ಪೂಜೆ ಕಳಸಕುಚದ ಮೇಲೆ ಗುರುರಾಯ
ಮೂಜಗದ ಶಿವನ ಪೂಜೆ ಗುರುರಾಯ ಮಾಡು
ಸೋಜಿಗವ ಕಂಡ ಶಿವನು ಗುರುರಾಯ                                                                  ॥

ಮನದ ಬಯಕೆ ಸೇರಿತೆಂದು ಗುರುರಾಯ ಅವಳ
ವನದ ತಂಪಿನೊಳಗೆ ನಿಂದು ಗುರುರಾಯ
ಮನೆಯ ಹಂಬಲಗಳ ಬಿಟ್ಟು ಗುರುರಾಯ ಚಿಕ್ಕ
ಮುನಿಯ ಕೂಡೆ ಮಾತಾಡಿದನು ಗುರುರಾಯ                                                      ॥

ತನುಮ ನಾರಂದೀಶ ನೋಡು ಮುನಿರಾಯ ಇವಳ
ಕೊನರು ಕೊಬ್ಬು ಚೆಲ್ವಿಕೆಗಳ ಗುರುರಾಯ
ವನಿತೆ ಗಿರಿಜೆ ಪಾರ್ವತಿಯು ಮುನಿರಾಯ ಇವಳ
ಕೊನೆಯ ಉಗುರು ಹೋಲಲರಿಯಾಳು ನೀ ರಾಯ                                             ॥

ಒಡೆಯ ನೀವು ನುಡಿದರೇನು ಗುರುರಾಯ ನಮ್ಮ
ಪಡೆದ ಗಿರಿಜೆಗಿವಳು ಸರಿಯೆ ಎಲೆ ದೇವ
ಅಡವಿ ಚಿಂಚಕಾಡ ಮನುಜಳೆಲೆ ದೇವ ಒಂದು
ಬೆಡಗ ಮಾಡಿ ತಿರುಗುತಿಹಳು ಎಲೆ ದೇವ                                                              ॥

ಭೂಪಾರಾವ ತಿರುಗಿದೆವೊ ಮುನಿರಾಯ ಇಂಥ
ರೂಪ ಸತಿಯ ಕಂಡುದಿಲ್ಲ ಮುನಿರಾಯ
ನೋಂಪಿ ನೋಮತಲ್ಲದಿವಳು ಮುನಿರಾಯ ಜಗದ
ಪಾಪಿಗಳಿಗೆ ಸಲುವಳೇನೊ ಮುನಿರಾಯ                                                               ॥

ಕಣ್ಣುಗೆಟ್ಟು ನುಡಿಯೆ ಸಲ್ಲದೆಲೆ ದೇವ ಸುಟ್ಟ
ಸುಣ್ಣ ಮಾರುವರ ಮಗಳು ಎಲೆ ದೇವ
ತಣ್ಣೀರೊಳಗೆ ಹುಟ್ಟಿ ಬೆಳೆದಳೆಲೆ ದೇವ ಮೂರು
ಕಣ್ಣ ನಿಮಗೆ ಸಲ್ಲಳಿವಳು ಎಲೆ ದೇವ                                                                        ॥

ಎಳೆಯ ಬಾಲ ನೀ ಕೇಳೆಲೊ ಮುನಿರಾಯ ನಿನಗೆ
ತಿಳಿಯದಿನ್ನು ಇವಳ ಮಹಿಮೆ ಮುನಿರಾಯ
ಕಳೆಯು ಜೀವರತ್ನ ಇವಳು ಮುನಿರಾಯ ನೋಡಿ
ಬಳಲಿಕೆಗಳ ಮರೆದೆವಿಲ್ಲಿ ಮುನಿರಾಯ                                                                    ॥

ಬಾಡಿ ಬಳಲಿ ಕಣ್ಣುಗೆಟ್ಟಿರೆಲೆ ದೇವ ಕಪ್ಪೆ
ಏಡಿ ತಿಂಬವರ ಮಗಳು ಎಲೆ ದೇವ
ಕೋಡಿ ಮಗಳು ಎಂದು ತಿಳಿದು ಎಲೆ ದೇವ ಅಡವಿ
ಗೂಡಿಸಿನ್ನು ಬಿಟ್ಟರಿವಳ ಎಲೆ ದೇವ                                                                          ॥

ದಡ್ಡ ಮನುಜ ನಾರಂದನೆ ಮುನಿರಾಯ ಇವಳು
ದೊಡ್ಡವರ ಮಗಳಾದಾಳೊ ಮುನಿರಾಯ
ದೊಡ್ಡಿತೋಟ ಖಾಸಭಾಗ ಮುನಿರಾಯ ಲಿಂಗ
ದೊಡ್ಡೋಲಗವ ನೋಡು ನೀ ಮುನಿರಾಯ                                                            ॥

ಸೃಷ್ಟಿಗೀಶ ಶಿವನೆ ಕೇಳು ಗುರುರಾಯ ಇವಳು
ಕೆಟ್ಟವ್ಯಾಳ್ಳೆ ಜನಿಸಿದವಳು ಎಲೆ ದೇವ
ಪಟ್ಟುಗುಡುಮ ಪರದೇಶಿಯು ಗುರುರಾಯ ಜನನಿ
ಬಿಟ್ಟು ಹೋದರಡವಿಯೊಳಗೆ ಎಲೆ ದೇವ                                                               ॥

ದಾಂಟಿಸಿದರೆ ಗಿರಿಯ ಸೇರಿ ಎಲೆ ದೇವ ಶಸ್ತ್ರ
ಈಟಿ ಬಿಲ್ಲು ಬಾಣಗಳನು ಎಲೆ ದೇವ
ಕಾಟಗಾರ ಕೂಡಿಕೊಂಡು ಎಲೆ ದೇವ ಇವಳ
ಬೇಟೆ ಅರ್ತಿಗಳನು ನೋಡು ಎಲೆ ದೇವ                                                                ॥

ಕಂದ

ಸಿದ್ಧರಿಬ್ಬರು ಕೂಡಿ ಮದ್ದು ಮಂತ್ರವ ಕಲಿತು
ಶಬ್ದಗಳಾಲಿಸುತ ನೋಡುತಿರಲು
ಲುಬ್ಧ ಕಾಟಕರು ಪಂದಿಯ ಆರ್ಭಟಿಸುತಲಿ
ಗದ್ದಲಿಸಿ ಆಡುತಿರೆ ಬೇಂಟೆಗಳನು                                                                            ॥

ರೂಢಿಗೀಶ್ವರ ಶಿವನು ನಾಡುದೇಶಗಳ ತಿರಿಗಿ
ನೋಡುತಿರೆ ವಿಸ್ಮಯ ಶ್ರೀಗಂಗೆಯ
ಕಾಡುಚಂಚರ ಬೇಂಟೆಗಳ ಕಂಡು ಪರಶಿವನ
ಕೂಡೆ ಬಣ್ಣಿಸಿ ಪೇಳುತಿರ್ದ ಮುನಿಪ                                                                         ॥

 

ಪದನು

ನೋಡು ನೋಡೆನ್ನ ಗುರುವೆ ನೋಡಿವಳ ಗಾಡಿಕಾರ್ತಿಯ ಬೇಂಟೆಯ
ಕೂಡಿರ್ದಮೃಗದೊಳಗೆ ಓಡಾಡಿಸೆದಡೆ ಮೂಡಿಹಾಯ್ವವು ಬೆನ್ನಿಲಿ                       ॥

ಚಲುವ ಚಲ್ಲಣವನುಟ್ಟು ಕಾಸಿಯಿಂದುಲಿವ ಕಂಜರವ ಕಟ್ಟಿ
ಲಲಿತ ಶ್ರೀಗಂಧವನು ಮೈಯೊಳಗೆ ಪೂಸಿಕೊಂಡಲಗು ಆಯುಧವ ಪಿಡಿದು
ಗುಲಗಂಜಿದಂಡೆಗಳನು ತಾ ತನ್ನ ತಲೆಮೊಲೆಗೆ ಸಿಂಗರಿಸುತ
ಮಲೆಯು ಮಂಜಿರ ಗಿರಿಗಂಹ್ವಾರಗಳ ಪೊಕ್ಕು ಹಲವು ಬಲೆಗಳ ಬೀಸುತ        ॥

ಮೀರಿ ಕಾಸಿಗಳನುಟ್ಟು ಅವಳಿನ್ನು ವಾರಿಚಿಮ್ಮುರಿಯ ಸುತ್ತಿ
ಈರೇಳು ಭುವನಗಳು ಮರುಳಾಗಿ ಬೀಳ್ವಂತೆ ಸೇರಿ ತಿಲಕವನಿಡುತಲಿ
ಮಾರ ಮನ್ಮಥನ ಬಿಲ್ಲು ಕಣ್ಣೆಂಬ ಕಾರಮಿಂದಿನ ಬಾಣದಿ
ಹಾರುವ ಪಕ್ಷಿಗಳ ತೋರಿ ತಾನೆಸೆದರೆ ಧಾರುಣಿಗೆ ಒರಗುತಿಹವು                     ॥

ಜಲ್ಲಿಮೃಗ ಸಾರಂಗನ ಅಪ್ಪಳಿಸಿ ಕೊಲ್ಲುವ ಹುಲಿ ಕರಡಿಯು
ಬಲ್ಲಿದ ಮದದಾನೆ ಬರುವ ಸಂಭ್ರಮನೋಡಿ ಬಿಲ್ಲ ಜೇವಡೆಗೈವುತ
ಗಲ್ಲಿಸಿ ಎಸೆದಡಿನ್ನು ಗಾಯದೊಳಗೆಲ್ಲವೊರಗಲು ಧರಣಿಗೆ
ಹಲ್ಲುಟೊಂಕವು ಕರುಳುಖಂಡಗಳು ಸುರಿವುತಲಿ ಚೆಲ್ಲಿದವು ರಕ್ತಮಳೆಯ          ॥

ಕಾಡಪಂದಿಗಳ ಕಂಡು ಕಂಗೆಟ್ಟು ಬೇಡ ನಾಯಕರೋಡಲು
ಕೂಡೆ ಬೆಂಬಲವಾಗಿ ಬಂದು ಸೀಳಿದವಾಗ ಹೇಡಿ ಕಾಟಕರ ಕುಲವ
ನಾಡಾಡಿ ಹಂದಿಯಲ್ಲ ಶ್ರೀಕೃಷ್ಣ ಆಡಿದನು ವರಹರೂಪಾ
ಮೂಢ ನರಕಾಸುರನ ಕೊಂದು ಸೀಳಿದನೆಂಬ ರೂಢಿಗಚ್ಚರಿಯಾಯಿತು             ॥

ಮಂದಿಗಳ ಸೀಳಿಸೀಳಿ ಅಪ್ಪಳಿಸಿ ಕೊಂದು ಕೊಲೆಗಳನಾಡುತ
ಪಂದಿಯೆಲ್ಲವು ಕೃಷ್ಣರೂಪಾದ ನಮಗಿನ್ನು ಬಂದಿತು ಪ್ರಳಯವೆನುತ
ನಿಂದಿರದೆ ಓಡಿ ಬರುತ ಕಾಟಕರು ಬಂದು ಪಾದಕ್ಕೆರಗಲು
ಇಂದುಮುಖಿ ತನ್ನಹಸ್ತವ ನೀಡಿ ನೋಡಿದರೆ ಕುಂದಣ ಪರಿಯಾಯಿತು             ॥

ಎಡಬಲನ ಕೂಡಿಕೊಳುತ ಆ ಕ್ಷಣದಿ ನಡೆದಳಾ ಹಂದಿ ಮೇಲೆ
ಬಿಡುಬಿಡು ನಾಯಿಗಳ ಒಡನೆ ತೂರಿದಳಾಗ ಸಿಡಿಲ ಮರಿಯಾರ್ಭಟದಲಿ
ಗುಡುಗುಡಿಸಿ ಆರ್ಭಟಿಸುವ ಪಂದಿಯ ಪಡೆಯ ದಂಡುಗಳನೆಲ್ಲ
ತುಡಕಿ ಎದೆಗುಂಡಿಗೆಯನಿರಿದು ಕೆಡಹಿದಳಾಗ ಗಡಿನಾಡ ಬೇಂಟೆಗಾರ್ತಿ         ॥

ಬೊಬ್ಬೆಯಬ್ಬರಗಳಿಂದ ಶ್ರೀಗಂಗೆ ಹೆಬ್ಬುಲಿಯ ಮಾರ್ಬಲಗಳಾ
ತಬ್ಬಿಬ್ಬುಗಳ ಮಾಡಿ ಸೀಳಿ ಕೆಡಹಿದಳಾಗ ಕೊಬ್ಬ ಹರಿಯಿತು ನೆಲದೊಳು
ಇಬ್ಬದಿಯ ಜನಗಳೆಲ್ಲ ಭಲಭಲರೆ ಹಬ್ಬ ನಮಗಾಯಿತೆನುತ
ಒಬ್ಬಿಬ್ಬರುಳಿಯದೆ ಎಲ್ಲ ಜನರೊಡಗೂಡಿ ಉಬ್ಬಿ ಮುಂದಕೆ ನಡೆವುತ                ॥

ಅಡವಿಜೀವಿಗಳ ಕೊಂದು ಮುಂದಕ್ಕೆ ನಡೆದಳು ಹೊಳೆಯ ತಡಿಗೆ
ತೊಡಕುಬಲೆಗಳ ಬೀಸಿ ಜಲಚರವ ಕೊಲುವಂಥ ಸಡಗರವ ನೋಡು ಗುರುವೆ
ಒಡವೆವಸ್ತುಗಳ ತೆಗೆದು ಮೇಲಿಂದ ಮಿಡಿದು ಹಾರಲು ಮಡುವಿಗೆ
ಕಡಲೊಳಗೆ ಇದ್ದಂಥ ಜಲಚರಾದಿಗಳೆಲ್ಲ ಗಡಬಡಿಸಿ ಕಂಗೆಡುತಲಿ                      ॥

ಬಿಟ್ಟು ಬಲೆಗಳ ಹಾಸುತಾ ಗಾಣದೊಳಗಿಟ್ಟಳು ಮಧುಮಾಂಸವ
ಎಷ್ಟು ಜೀವನವೆಲ್ಲ ತಿನಬಂದು ಸಿಲ್ಲಿದವೊ ಕಟ್ಟಿದಳು ಉರಿಲಿನೊಳಗೆ
ಕೆಟ್ಟ ಮೋರೆಯ ಮೊಸಳೆಯ ಜಲದೊಳಗೆ ಬೆಟ್ಟದಂಥಾ ಪ್ರಾಣಿಯು
ಕೃಷ್ಣಾವತಾರದ ಮತ್ಸ್ಯಕೂರ್ಮಾದಿಗಳ ದಟ್ಟಸಿಯೊರಗಿಸಿದಳು                        ॥

ಹರುಗೋಲುಗಳನೇರುತ ತಾ ತನ್ನ ಸರಿಯವರ ಕೂಡಿಕೊಳುತ
ಗಿರಗಿರನೆ ತಿರಿಗಿ ಹುಯ್ಯಲ ಬೊಬ್ಬೆಗಳ ಮಾಡಿ ಸರಳುಸರಳೆಸೆದಾಡುತ
ಅರರೆ ಭಲಭಲರೆನುತಲಿ ಪುಟ್ಟಗಳ ತುರಗವಾಟದಿ ಓಡಿಸಿ
ಅರ್ತಿಯಾನಂದಗಳ ನೋಡುತಲಿ ಜಲಚರವ ಹೊರಿಸಕೊಳುತಾ ನಡೆದಳು   ॥

ಇಂತು ಬೇಂಟೆಗಳನಾಡಿ ಶ್ರೀಗುರುವೆ ಅನಂತ ಜೀವಿಗಳ ಕೊಂದು
ಮುಂತೆ ತಮ್ಮಯ ತೋಟದೊಡ್ಡಿ ಗುಡಿಸಿಲಿನೊಳಗೆ ಸಂತೈಸಿಕೊಂಡಿರುವಳು
ಇಂತಿವಳ ಲಿಂಗಪೂಜೆ ಸುಲಿನ್ನು ಅಂತಕನ ಗುರುಸ್ವಾಮಿಯು
ಅಂತುಕಾರಣದಿಂದ ಅಡವಿಯೊಳು ಬಿಸುಟರು ತಾಂತ್ರಿಕ ಜೋಗಿ ಕೇಳು         ॥

ನಾರದನ ನುಡಿಗಳಿನ್ನು ಗುರುವಿಂಗೆ ಸರಿಬಾರವು ಮನಸಿಗೆ
ನೀರ ಬೊಬ್ಬುಳಿಯ ಸ್ತ್ರೀಯಳ ಕಂಡು ಮನಸೋತು ಮೀರಿಹುದು ಕಾಮತತ್ವ
ಆರ ಮಾತನು ಕೇಳದೆ ಗುರುರಾಯ ಸೇರಿ ಸನ್ನಿಧಿಗೆ ಬಂದು
ಸಾರಿ ಗುರುಸಂಗಮೇಶ್ವರಲಿಂಗ ನುಡಿಸಿದನು ಜಲಜಕುಲದ ಸ್ತ್ರೀಯಳ             ॥

ಸಂಗತ್ಯ

ಚಿಕ್ಕಮುನಿಯನು ಕೂಡಿ ಪೊಕ್ಕಾನು ತೋಟವ
ಮುಕ್ಕಣ್ಣ ಮುನಿ ಮಹಾಜೋಗಿ
ಸಕ್ಕರೆವಿಲ್ಲಿನ ಕೋಟಿ ಮನ್ಮಥರೂಪ
ಚಕ್ಕಂದ ಚದುರೆಯೊಳ್ ನುಡಿದ                                                                             ॥

ಮಲ್ಲಿಗೆ ಮುಡಿಯೋಳಮ್ಮನಥನರಗಿಳಿಯೆ
ನಲ್ಲನಾಯಕರುಂಟೆ ನಿನಗೆ
ಹುಲ್ಲೆ ಕರಡಿ ಸಿಂಹ ಶಾರ್ದೂಲ ಮೃಗ ನಿನ್ನ
ಕೊಲ್ಲದಿಹವೆ ಗೋಣಮುರಿದು                                                                                    ॥

ತೋಟಗಾರತಿ ಕೇಳು ಕೋಟಿಚಂದ್ರರು ನಿನ್ನ
ನೋಟವ ಪೋಲ್ವರಿಲ್ಲ
ಬೇಟೆಯನಾಡಲು ಬಲವಂತ ಮೃಗ ನಿನ್ನ
ನೀಟಿನ ರೂಪ ಸೀಳದಿಹವೆ                                                                                       ॥

ಜಾಲಗಾರತಿ ಕೇಳು ಜಲಚರಗಳನು ನೀ
ಗಾಳವ ಹಾಕಿ ಕೊಲ್ಲುವರೆ
ಮೇಲಾದ ಮತ್ಸ್ಯಕೂರ್ಮನು ಜಲಚರ ನಿನ್ನ
ಸೀಳಿ ಕೊಲ್ಲುವೆ ಬಿಡದಿಹವೆ                                                                                        ॥

ಜಗದೊಳು ಮನ್ಮಥಜಯಸಿರಿಯಳೆ ನಿನ್ನ
ಉಗುರುಗೊನೆಗೆ ಸಮನಿಲ್ಲ
ಮೃಗಸಿಂಹ ಶಾರ್ದೂಲ ಬಗಿದು ಬೇಟೆಯನಾಡಿ
ನಗೆಮೊಗಗಳ ಸೀಳದಿಹವೆ                                                                                      ॥

ಚಂದ್ರ ಕಳೆಯ ಚದುರವೆಣ್ಣೆ ನೀನೆನ್ನ
ಮಂದಿರಕೊಡೆಯಾನ ಮಾಡು
ಬಂದಂಥ ದುರಿತವ ಪರಿಹರಿಸುವೆನು ಮ
ಹೀಂದ್ರಜಾಲದ ಮುನಿರಾಯ                                                                                    ॥

ಪುರುಷರಿಲ್ಲದ ನಾರಿ ಸರಸವಾಡಲು ಮೃಗ
ವರಸಿ ಕೊಲದೆ ಬಿಡದಿಹವೆ
ವರುಷವು ಹದಿನಾರು ಪ್ರಾಯದ ಮುನಿ ನಾನು
ಹರಸಿಕೊ ಪ್ರಾಣೇಶನೆನುತ                                                                                       ॥

ಬಸವಮಂತ್ರಿಯೆ ಕೇಳು ಬಿಸಿಗಣ್ಣ ಮುನಿರಾಯ
ಕುಶಲದ ಮಾತನಾಡಿದರೆ
ಶಶಿಮುಖಿ ಮನದೊಳು ಹೊಸೆದಂತೆ ಕೋಪವು
ಮಸಗುತ ಮಾತನಾಡಿದಳು                                                                                     ॥

ಎಲ್ಲಿಯ ಮುನಿಯೊ ನೀನೆಲ್ಲಿಯ ಜೋಗಿಯೊ
ಎಲ್ಲಿ ಸನ್ಯಾಸಿ ಋಷಿಯೋ
ಬಲ್ಲತನವೆ ನಮ್ಮ ನಲ್ಲರ ಕೇಳುವುದು
ಇಲ್ಲ ಸಂನ್ಯಾಸಿಯ ಮಾರ್ಗ                                                                                      ॥

ಪರದೇಶಿ ಮುನಿ ಕೇಳು ತಿರಿದುಂಬ ಜೋಗಿ ನೀ
ಪರಸತಿಯರ ನೋಡ ಸಲ್ಲ
ವಿರಸ ಮಾತುಗಳಿಂದ ಸರಸವನಾಡಲು
ಸಿರಸವನುಳುಹಿಕೊ ಜೋಗಿ                                                                                     ॥

ಜೋಗಿವೇಷವ ತಾಳಿ ನೀಗಿ ಕಳೆಯಲುಬೇಕು
ತಾಗು ನಿರೋಧ ಮೋಹಗಳ
ಕೂಗುವ ಕಾಮಕ್ರೋಧವನೆಲ್ಲವ ಸುಟ್ಟು
ಮಾಗಿ ಕೋಗಿಲೆಯಾಗಬೇಕು                                                                                   ॥

ಸಂನ್ಯಾಸಿಯಾದರೆ ಕನ್ನೆವೆಣ್ಣುಗಳನು
ಕಣ್ಣೀಲಿ ನೋಡ ಸಲ್ಲ
ಹೊನ್ನು ಹೆಣ್ಣು ಮಣ್ಣು ಮೂರನಳಿದು ಸಂ
ಪನ್ನ ಜೋಗಿಗಳಾಗಬೇಕು                                                                                         ॥

ಋಷಿಯ ವೇಷವ ತಾಳಿ ಹಸುತೃಷೆನಿದ್ರೆಯ
ಕಸಮಾಡಿ ಕಳೆಯಲಿ ಬೇಕು
ಪಶುಪತಿಗಳವಲ್ಲ ಪರದೇಶಿ ಮುನಿ ಕೇಳು
ಶಶಿಮುಖಿಯೊಳಾಟ ಸಲ್ಲ                                                                                         ॥

ತ್ರಾಣಗಳರಿದು ತಲ್ಲಣವಡಗಿ ಮನ
ಕಾಣದಂತಡಗಿರಬೇಕು
ಮಾಣದೆ ಹರಿಯಜರಳವಲ್ಲ ರೂಪಿಗೆ
ಜಾಣತನಗಳೇಕೆ ಜೋಗಿ                                                                                           ॥

ಜಾಣತನಗಳಲ್ಲ ಜಯಸಿರಿಯಳೆ ನಿನ್ನ
ಪ್ರಾಣಸಂಗಾತಿಯ ಜೋಗಿ
ಕೋಣ ಹಾಯ್ವ ಮೃಗ ಕೊಂದಾವೆನುತ ನಿನ್ನ
ಪ್ರಾಣಕೆ ಚಿಂತಿಸುತಿಹೆನು                                                                                           ॥

ಪಿಡಿನಡುವಿನ ಬಾಲೆ ನುಡಿ ಗಿಳಿಕೋಗಿಲೆ
ಸಡಗರ ರೂಪಸಂಪನ್ನೆ
ಅಡವಿಯ ಮೃಗಸಿಂಹ ಕೆಡವಿ ಕೊಂದಾವೆ ನಿನ್ನ
ಒಡೆಯಾನ ಮಾಡಿಕೊ ಎನ್ನ                                                                                     ॥

ಕೊಡೆಯ ಹಾವುಗೆ ಜೋಗಿ ನುಡಿಯೆ ಸಲ್ಲದು ಕೇಳು
ಅಡವಿ ಮೃಗ ನಮ್ಮ ಬಳಗ
ಕಡಿವ ಕರಸಿ ಸಿಂಹ ಸಾರಂಗ ಮೃಗ ನಮ್ಮ
ಒಡಲೋಳಗುದ್ಭವಿಸಿದವು                                                                                         ॥

ಹುಚ್ಚುಮುನಿಯೆ ಕೇಳು ಹುಲಿ ಸಾರಂಗ
ಕಚ್ಚುವ ಮೃಗ ನಮ್ಮ ಬಳಗ
ನುಚ್ಚುನುರಿಯ ಗಂಡರಿಲ್ಲ ಕೇಳೆಲೆ ಮುನಿ
ಕಿಚ್ಚು ಗಣ್ಣನು ನಮ್ಮ ಪ್ರಾಣ                                                                                       ॥

ಹೊಂದಾವರೆ ಮೊಗ್ಗೆ ಮೊಲೆಯಳೆ ಕೇಳು ಗೋ
ವಿಂದ ಶಿವನ ಕಾಣಲರಿಯ
ಮಂದಮತಿಯ ಮಾನವಳಿಗೆಲ್ಲಿಯ ಶಿವ
ಹೊಂದಿಕೆ ಮಾಡಿಕೊ ತರಳೆ                                                                                     ॥

ಭಜನೆಯ ಮಾತನಾಡಲಿ ಬೇಡ ಮುನಿ ನಿಮ್ಮ
ಅಜಹರಿ ಸುರರಿಗಸಾಧ್ಯ
ತ್ರಿಜಗವಂದ್ಯನ ನಿಜವಾಗಿ ಭಜಿಸಲು
ಹುಜುರು ನಿಂದಿಹ ನಮ್ಮ ಶಿವನು                                                                             ॥

ಗುಂಡಿನ ಮರೆಯ ಮಾನವ ಕೇಳು ಶಿವನನು-
ಕಂಡವರುಂಟೆ ಕಲಿಯುಗದಿ
ಮಿಂಡಿ ನೀ ಹರೆಯಾದ ಹೆಣ್ಣೆ ಪ್ರಾಯದ
ಗಂಡರಿಲ್ಲದ ಜೀವ ಸಲ್ಲ                                                                                              ॥

ಮನುಜರೂಪನೆ ಕೇಳು ವಿನಯ ಸಲ್ಲದು ನಮ್ಮ
ಘನಗಿರಿ ಗಹ್ವಾರದೊಳಗೆ
ಮುನಿಪ ವಶಿಷ್ಠ ವಿಶ್ವಾಮಿತ್ರ ಮಾಂಡವ್ಯ
ತನುಜೆಯೆಂದೆನ್ನ ಭಾವಿಪರು                                                                                    ॥

ಅಂತಹ ಋಷಿಯಲ್ಲ ಅಪರಂಜಿ ಮುನಿರಾಯ
ಮುಂತೆ ಮುಕ್ತಿಯನೀವ ಜೋಗಿ
ಚಿಂತಿತಾರ್ಥವನೀವ ಚಿನ್ಮಯರೂಪನ
ಸಂತೈಸಿಕೊಳ್ಳೆ ನೀನರಿಯೆ                                                                                       ॥

ಬೆಡಗು ಸಲ್ಲದು ನಮ್ಮ ಒಡೆಯ ಪರಂಜ್ಯೋತಿ
ಒಡಲ ಹೃತ್ಕಮಲದೊಳಿಹನು
ನುಡಿಯು ನಿಷ್ಠುರವಾಗಿ ಬರುತಿವೆ ಮುನಿ ನೀನು
ನಡೆ ನಿಮ್ಮ ಪಡೆಗಿರಿಗಳಿಗೆ                                                                                        ॥

ಹೋಗಲಿ ಬಂದುದಿಲ್ಲವೆ ಹೊಸ ಮಲೆಯಾಳ
ಜೋಗಿಗಳ್ಗುರುವು ಕೇಳಾವು
ಜಾಗ ಇರವ ನೋಡ ಬಂದಂಥ ಮುನಿ ನಿನ್ನ
ಭಾಗದ ಒಡೆಯನೆ ನಾನು                                                                                         ॥

ಒಡೆಯನೆಂದೆನಬೇಡ ಬಡಮುನಿ ಎಲೆ ಜೋಗಿ
ಪೊಡವಿ ಈರೇಳು ಲೋಕಗಳ
ಒಡಲೊಳಗಿಂಬಿಟ್ಟು ಬಿಡದೆನ್ನ ಕರಸ್ಥಲ
ಕೊಡೆಯನಾಗಿಹ ನಮ್ಮ ಶಿವನು                                                                               ॥

ಭಾಳಾಕ್ಷರೂಪೆಂದು ತಾಳ್ದೆವು ಕೋಪವ
ಸೀಳಿ ಕೊಲ್ವೆವು ನರರುಗಳ
ಜಾಳು ಮಾತುಗಳನಾಡಲಿ ಬೇಡ ಕಿವಿಗೊಟ್ಟು
ಕೇಳಲೆ ಮುನಿ ನಮ್ಮ ಘನವ                                                                                    ॥

ಮುನಿರಾಯ ಕೇಳಿನ್ನು ಮನೆದೈವ ಶಿವನಿಗೆ
ತನು ಮನ ಧನಗಳನಿತ್ತು
ಇನಿಯಾದೆ ಪರಬ್ರಹ್ಮ ಪ್ರಾಣದೊಲ್ಲಭನನು
ಘನಸ್ತುತಿಯನು ಕೇಳ್ಮುನಿಪ                                                                                      ॥

ಮಲ್ಲಿಕಾರ್ಜುನ ಪ್ರಾಣದೊಲ್ಲಭ ಶಿವನಿಗೆ
ನೆಲ್ಲು ಬಿದಿರಕ್ಕಿಗಳ ತಂದು
ಕಲ್ಲೊರಳೊಳು ಹಾಕಿ ತಳಿಸುವ ಸತಿಯರ
ಸೊಲ್ಲ ಲಾಲಿಸು ಮುನಿರಾಯ                                                                                   ॥

ಕಳೆಯುಳ್ಳ ಸತಿಯರು ಎಳಮುತ್ತು ಮಾಣಿಕ
ಸೆಳೆ ನಡುಗಳು ಬಳುಕುತಲಿ
ಗಳರವ ಕೋಗಿಲೆಯೆಳದುಂಬೆ ಗಾನದಿ
ತಳಿಸುವ ವಚನವ ಕೇಳು                                                                                          ॥

ಹೂವಿನರಳು ಬಾಲಸ್ತ್ರೀಯರುಗಳು ತಮ್ಮ
ಯೌವನಗಳ ಬಣ್ಣಿಸುತಲಿ
ಎಸೆವ ದುಕೂಲವನುಟ್ಟು ಭಸಿತ ರುದ್ರಾಕ್ಷಿಯ
ಶಶಿಮುಖಿಯರು ಪಾಡುತಿಹರು                                                                                ॥

ಆವ ಜನ್ಮದಿ ದೇವನೆ ಮನೆದೈವ
ಭಾವ ಭೇದಗಳಿಲ್ಲ ನಮಗೆ
ಮೂವರರಿಯದ ಭಾವನ ಮಹಿಮೆಯ
ಸೂವಿಯ ವಚನವ ಕೇಳು                                                                                          ॥

 

ಒರಳಕ್ಕಿಯ ಪದನು:

ಸುವ್ವೀ ಸುವ್ವೀ ಸುವ್ವಾಲೇ
ಸುವ್ವೆಂದು ಪಾಡಿರಿ ಶೂನ್ಯ ಪ್ರಕಾಶಗೆ
ಸುವ್ವೀ ಸುವ್ವೀ ಸುವ್ವಾಲೇ

ಚಂಚುವೆಣ್ಣುಗಳೆಲ್ಲ ಕೂಡೂತ ತಮ್ಮ
ಮಿಂಚುಳ್ಳ ನಯನಾದಿ ನೋಡುತ
ಪಂಚಮುಖದ ಪರಶಿವನ ಕೊಂಡಾಡುತ
ಗೊಂಚಲ ಹಾವುಗೆ ಜೋಗಿ ನೀ ಕೇಳು                                                                    ॥

ಬೇಟಕಾರ್ತಿಯರೆಲ್ಲ ಕೂಡುತ ಶಶಿ
ಜೂಟ ಶಿವನ ಕೊಂಡಾಡುತ
ಆಡಬೇಟಗಳೆಲ್ಲ ಶಿವನೊಳಗಲ್ಲದೆ
ಕೀಟಕ ಮನುಜರನೊಲ್ಲವೊ ಜೋಗಿ                                                                        ॥

ದುಂಡುದೋಳುಗಳೆತ್ತಿ ತಳಿಸುತ ತಮ್ಮ
ಗಂಡನೇ ಶಿವನೆಂದು ಪಾಡುತ
ಮೊಂಡಮೂಕೊರೆಯ ದೈವವನರಿಯೆವು
ರುಂಡಮಾಲೆಯ ಜೋಗಿ ನುಡಿಗಳ ಕೇಳು                                                             ॥

ಸುಲಿಪಲ್ಲ ಬೆಳಗುತ ರಂಜಿಸಿ ತಮ್ಮ
ತಲೆ ಮೊಲೆಗಳ ಕಟ್ಟಿ ನುಣ್ಣಿಸಿ
ಮಲಹರಮಂತ್ರವು ಮನದೊಳಗಲ್ಲದೆ
ಹೊಲೆಮಾರಿ ದೈವವನೊಲ್ಲೆವೊ ಜೋಗಿ                                                                 ॥

ಬಿದಿರಿಕ್ಕಿಗಳ ತಂದು ತಳಿಸುತ ತಮ್ಮ
ಅಧರ ಮಾಣಿಕ ಬಿಚ್ಚಿ ಪಾಡುತ
ಮದಹರಮಂತ್ರವು ಮನದೊಳಗಲ್ಲದೆ
ಸದೆಮಾರಿ ದೈವವನೊಲ್ಲವೊ ಜೋಗಿ                                                                     ॥

ಸರುವಾರದವರೆಲ್ಲ ಕೂಡುತ ನಮ್ಮ
ಪರಮಶಿವನ ಕೊಂಡಾಡುತ
ಹರಹರವೆನುತಲಿ ಗುರುಪಾದವಲ್ಲದೆ
ಸುರಿಮಾರಿ ದೈವವನರಿಯೆವೊ ಜೋಗಿ                                                                  ॥

ಕುಂಜರವೈರಿಯ ಪೂಜೆಗೆ ನಾವು
ಮಂಜಿನ ನೀರನು ತರುವೆವೊ
ಎಂಜಲು ಅಗುಳುಗಳಿಲ್ಲದೆ ಶಿವನಿಗೆ
ಸಂಜೀವದಗ್ಗಣಿಯ ತರುವೆವೊ ಜೋಗಿ                                                                   ॥

ಗಂಧಾಕ್ಷತೆಗಳನು ಇಡುತಾ ಗೋ
ವಿಂದನ ಪುಷ್ಪವ ಧರಿಸುತೆ
ತಂದು ಧೂಪದೀಪಾರಗಿಗಳನೆತ್ತಿ
ವಂದಿಸಿ ಶಿವನೊಳಗಿರುವೆವೊ ಜೋಗಿ                                                                    ॥

ಇಂತೆಂದು ಅಕ್ಕಿಯ ತಳಿಸುವ ನಮ್ಮ
ಕಂತುಹರಗೆ ಬೋನವ ಮಾಡುತ
ಸಂತೋಷದಿಂದಲ್ಲಿ ಶಿವನಿಗರ್ಪಿಸುತ ಅ
ನಂತ ಕಾಲದೊಳಿರುವೆವು ಜೋಗಿ                                                                           ॥

ನಾಡಿನ ಮುನ್ನಾರೆಂಬುತ ನೀ ನಮ್ಮ
ಕೂಡೆ ಜಾಣಿಕೆಯ ನೀನಾಡಲು
ಮಾಡಿದ ಸರಳು ಬಾಣಗಳಿಂದೆಚ್ಚಡೆ
ಮೂಡಿ ಹಾಯ್ವವು ನಿನ್ನ ಬೆನ್ನಲಿ ಜೋಗಿ                                                                  ॥

ಕನ್ನೆವೆಣ್ಣುಗಳನು ಕಾಣುತ ನೀ
ಚುನ್ನಾದ ಸರಸವನಾಡಲು
ಪನ್ನಂಗಧರಶಿವನಾದರೆ ಕೊಲುವೆವೊ
ಇನ್ನು ಸುಮ್ಮನೆ ಹೋಗು ಕಿನ್ನರಿ ಜೋಗಿ                                                                ॥

ಲೋಕದ ಮುನ್ನಾರೆಂಬುತಾ ನೀ
ಜೋಕೆ ಸರಸವನಾಡಲು
ಏಕೋದೇವ ಶಿವನಾದರೆ ನಾವೀಗ
ನೂಕಿ ಕೆಡಹಿ ಬೇಗಲೆಸೆವೆವೊ ಜೋಗಿ                                                                     ॥

ಪರಶಿವ ರೂಪೆಂದು ತಾಳ್ದೆವು ನಿಮ್ಮ
ವಿರಸ ಸರಸಗಳು ಸಾಕಿನ್ನು
ವರಗುರುಸಂಗನ ಒಡಲೊಳಗಿರುವೆವು
ಶರಣು ಶರಣಾರ್ಥಿ ಹೋಗಯ್ಯ ಜೋಗಿ                                                                  ॥

ಕಲ್ಯಾಣಪುರಪತಿ ಕೇಳಿನ್ನು ಸೊಲ್ಲಿಗೆ
ಸಿಲುಕದಭೇದ್ಯನು ಶಿವನು
ಮಲ್ಲಿಕಾರ್ಜುನ ಜೋಗಿ ತಲ್ಲಣಗೊಳಿಸಿದ
ರಿಲ್ಲಿಗೆ ಸಂಧಿಗೆ ಶರಣು ಶರಣಾರ್ಥಿ                                                                           ॥

ಸಂಧಿ ಟಕ್ಕಂ ಕಂದ 4, ವಚನ 31, ಪದನು 24, ಸಂಗತ್ಯ. 49,
ಒರಳಿಕ್ಕಿ ಪದನು 14, ಉಭಯಂ 122 ಕ್ಕಂ ಮಂಗಳ ಮಹಾ ಶ್ರೀ ಶ್ರೀ