ಸೇವೆಯ ಅವಧಿ: ೨೫.೦೭.೧೯೮೨ ರಿಂದ ೨೪.೦೭.೧೯೮೭

ಜರ್ನೈಲ್ ಸಿಂಗ್ ಎನ್ನುವುದು ಗ್ಯಾನಿ ಜೈಲ್ ಸಿಂಗ್ ಅವರ ನಿಜ ನಾಮಧೇಯ. ೧೯೩೮ ರಿಂದ ೫ ವರ್ಷಗಳ ಕಾಲ ರಾಜಕೀಯ ಕೈದಿಯಾಗಿ ಜೈಲಿನಲ್ಲಿದ್ದಾಗ, ಹಾಸ್ಯಕ್ಕಾಗಿ ಸೆರೆಮನೆಯ ಅಧಿಕಾರಿಯ ಹತ್ತಿರ ತನ್ನ ಹೆಸರು ಜೇಲ್‌ಸಿಂಗ್ ಎಂದು ಹೇಳಿಕೊಂಡರಂತೆ. ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ಅದೇ ಹೆಸರನ್ನು ಜೈಲ್‌ಸಿಂಗ್ ಎಂಬುದಾಗಿ ಸ್ವಲ್ಪ ಬದಲಾಯಿಸಿಕೊಂಡರಂತೆ. ಅಂದಿನಿಂದ ಅದೇ ಅವರ ಹೆಸರಾಯಿತು. ಸಿಖ್ ಮತ್ತು ಇತರ ಧರ್ಮಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದಾಗಿ, “ಗ್ಯಾನಿ” (ಜ್ಞಾನಿ) ಎಂಬ ಬಿರುದು ಸೇರಿಕೊಂಡಿತು.
ಪಂಜಾಬಿನ ಫರೀದ್ ಕೋಟ್ ಜಿಲ್ಲೆಯ ಸಂದವಾನ್ ಎಂಬ ಸಣ್ಣ ಹಳ್ಳಿ ಗ್ಯಾನಿ ಜೈಲ್‌ಸಿಂಗ್ ಅವರ ಜನ್ಮಸ್ಥಳ. ೧೯೧೬ರ ಮೇ ೫ನೇ ತಾರೀಖು ಕೃಷಿ ಮತ್ತು ಕುಶಲ ಕೆಲಸಗಾರ “ವಿಶ್ವಕರ್ಮ” ಕುಟುಂಬದಲ್ಲಿ ಇವರ ಜನನ. ಸಿಖ್ ಧರ್ಮವನ್ನು ಸ್ವೀಕರಿಸಿದ ಇವರ ಕುಟುಂಬಕ್ಕೆ “ರಾಮ್‌ಘಡಿಯಾ” ಎಂದು ಹೆಸರಾಯಿತು. ತಂದೆ ಭಾಯಿ ಕಿಷನ್ ಸಿಂಗ್, ತಾಯಿ ಇಂದಿಕೌರ್. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಜೈಲ್‌ಸಿಂಗ್ ಅವರನ್ನು ಮಲತಾಯಿಯೇ ಪ್ರೀತಿಯಿಂದ ಸಲಹಿದರು. ಕುಟುಂಬದ ಎಲ್ಲ ಸದಸ್ಯರಿಗೂ ಸಿಖ್ ಧರ್ಮದಲ್ಲಿ ಅಪಾರ ಭಕ್ತಿ ಮನೆಯ ಒಂದು ಕೋಣೆಯಲ್ಲಿ “ಗುರು ಗ್ರಂಥ್ ಸಾಹೇಬ” ಪ್ರತಿಷ್ಠಿಸಿ, ಪ್ರತಿದಿನವೂ ಗ್ರಂಥ ಪಠನ ಮಾಡುತ್ತಿದ್ದರು. ತಮ್ಮ ನಾಡು ಮತ್ತು ಧರ್ಮಗಳ ರಕ್ಷಣೆಗಾಗಿ ಆತ್ಮಾರ್ಪಣೆ ಗೈದ ಸಿಖ್ ಧರ್ಮಗುರುಗಳ ಜೀವನ ಚರಿತ್ರೆಗಳು ಬಾಲಕ ಜೈಲ್‌ಸಿಂಗರ ಮೇಲೆ ಗಾಢ ಪರಿಣಾಮ ಬೀರಿದವು.ಕೇವಲ ೫ನೆಯ ವಯಸ್ಸಿನಲ್ಲೇ ಗ್ರಂಥ ಪಠನ ಮಾಡಲು ಶಕ್ತರಾದರು. ತಂದೆಯಿಂದ ಸಿಖ್ಖರ ಪವಿತ್ರ ಗ್ರಂಥಗಳ ಶಿಕ್ಷಣ ಪಡೆದರು. ಶಬದ್ ಕೀರ್ತನ್ ಹಾಡುವುದರಲ್ಲೂ ಪರಿಣತಿ ಪಡೆದರು. ಸಿಖ್ ಧರ್ಮದ ಜೊತೆಗೆ ಇತರ ಧರ್ಮ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದರು.
ಜೈಲ್‌ಸಿಂಗ್ ಅವರ ಶಾಲಾ ಶಿಕ್ಷಣ, ಮಾಧ್ಯಮಿಕ ಶಾಲೆಯವರೆಗೆ ಮಾತ್ರ. ಸ್ವಂತವಾಗಿ ಅಧ್ಯಯನಮಾಡಿ ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತರು. ಅವರ ಕಲಿಕೆ ಕೇವಲ ಪುಸ್ತಕಗಳಿಗೆ ಸೀಮಿತವಾದದ್ದಲ್ಲ. ಕಲ್ಲು ಒಡೆಯುವುದು, ಬಾವಿ ತೋಡುವುದು, ಚಪ್ಪಲಿ ಹೊಲಿಯುವುದು, ಗಾರೆ ಕೆಲಸ, ಉಳುವುದು ಮುಂತಾದ ಶ್ರಮಗಳಲ್ಲಿ ನಿಪುಣರು. ಜೀವನಾನುಭವ, ಸ್ವಾಧ್ಯಾಯ, ಶ್ರಮ ಜೀವನ -ಇವೇ ಅವರ ಗುರುಗಳು; ಈ ಗುರುಗಳ ಸ್ಫೂರ್ತಿಯ ಚಿಲುಮೆ “ಗುರು ಗ್ರಂಥ ಸಾಹೇಬ್” .ಆದುದರಿಂದ , ಎಲ್ಲ ಜಾತಿ ಮತ ಪಂಥಗಳೂ ಒಂದೇ ಎಂಬ ಪಾಠವನ್ನು ಸಣ್ಣ ವಯಸ್ಸಿನಿಂದಲೇ ಮೈಗೂಡಿಸಿಕೊಂಡಿದ್ದರು. ಸಿಖ್ ಧರ್ಮಗುರುಗಳ ಆತ್ಮಾರ್ಪಣೆಯಷ್ಟೇ ಪ್ರಭಾವ ಬೀರಿದ ಇತರ ಘಟನೆಗಳೆಂದರೆ ಭಗತ್‌ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಅವರ ಆತ್ಮಾರ್ಪಣೆ, ಹಾಗೂ ಜಲಿಯನ್‌ವಾಲಾಬಾಗ್ ಹತ್ಯಾಕಾಂಡ.
ಫರೀದ್‌ಕೋಟ್ ಅಂದಿನ ದಿನಗಳಲ್ಲಿ ಒಂದು ಸಂಸ್ಥಾನವಾಗಿತ್ತು. ಅಲ್ಲಿನ ರಾಜ ಹರೀಂದರ್ ಸಿಂಗ್ ಬ್ರಿಟಿಷರ ಕೈಗೊಂಬೆಯಾಗಿದ್ದ. ಆತನ ನಿರಂಕುಶ ಆಡಳಿತವನ್ನು ಪ್ರತಿಭಟಿಸಿ, ಪ್ರಜಾತಂತ್ರವನ್ನು ಸ್ಥಾಪಿಸಿ, ಜನರ ಸ್ಥಿತಿಗತಿಗಳನ್ನು ಸುಧಾರಿಸಲು ಜೈಲ್‌ಸಿಂಗ್ ನಡೆಸಿದ ಹೋರಾಟ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಇಟ್ಟ ಮೊದಲ ಹೆಜ್ಜೆ. ಈ ಹೋರಾಟದಲ್ಲಿ ಗುರಿ ಮುಟ್ಟಲು ೧೫ ವರ್ಷಗಳು ಬೇಕಾಯಿತು. ಈ ಮಧ್ಯೆ ಬೀಬಿ ಪ್ರಧಾನ್ ಕೌರ್ ಅವರೊಂದಿಗೆ ಅವರ ವಿವಾಹವೂ ಆಯಿತು.
ಫರೀದ್‌ಕೋಟ್ ಅಕಾಲಿ ದಳದ ಕಾರ್ಯದರ್ಶಿಯಾಗಿದ್ದ ಜೈಲ್‌ಸಿಂಗ್, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಫರೀದ್‌ಕೋಟ್‌ನಲ್ಲೂ ಕಾಂಗ್ರೆಸ್‌ನ ಒಂದು ಘಟಕವನ್ನು ೧೯೩೮ರಲ್ಲಿ ಸ್ಥಾಪಿಸಿದರು. ಆಗ ಅವರ ವಯಸ್ಸು ಕೇವಲ ೨೨. ಅವರ ಪ್ರಯತ್ನಗಳಿಗೆ ದೊರೆತ ಫಲ ಐದು ವರ್ಷಗಳ ಜೈಲುವಾಸ. ಜೈಲಿನಿಂದ ಹೊರ ಬಂದ ಮೇಲೂ ಕಿರುಕುಳ ತಪ್ಪಲಿಲ್ಲ ಫರೀದ್‌ಕೋಟ್ ಬಿಟ್ಟು ಲಾಹೋರಿನಲ್ಲಿರಬೇಕಾಯಿತು. ೧೯೪೬ರಲ್ಲಿ ಅಲ್ಲಿಂದ ಹಿಂತಿರುಗಿ ಬಂದು ಗಾಂಧೀಜಿಯವರ ತತ್ವಗಳಿಗನುಸಾರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಮುನ್ನಡೆದರು.
ಭಾರತ ಸ್ವತಂತ್ರವಾದ ಮೇಲೂ ಫರೀದ್‌ಕೋಟ್‌ನಲ್ಲಿ ರಾಜನ ದಬ್ಬಾಳಿಕೆ ಮುಂದುವರಿದಿತ್ತು. ಮತ್ತೆ ಇದನ್ನು ಪ್ರತಿಭಟಿಸಿ ಪ್ರಜಾ ಸರ್ಕಾರವನ್ನು ಸ್ಥಾಪಿಸಲು ಜೈಲ್‌ಸಿಂಗ್ ಮುಂದಾದರು. ಪೋಲೀಸ್ ಠಾಣೆ, ಸರ್ಕಾರಿ ಖಜಾನೆ ಮೊದಲಾಗಿ ಎಲ್ಲ ಸರಕಾರಿ ಘಟಕಗಳನ್ನು ವಶಪಡಿಸಿಕೊಂಡು, ಸಮಾನಾಂತರ ಸರಕಾರದ ರಚನೆಯನ್ನು ಘೋಷಿಸಿದರು. ಈ ಕಾರಣಕ್ಕಾಗಿ, ಒಂದು ಜೀಪಿಗೆ ಜೈಲ್‌ಸಿಂಗ್ ಅವರನ್ನು ಕಟ್ಟಿ ರಸ್ತೆಯ ಮೇಲೆ ಎಳೆಸಲಾಯಿತಂತೆ. ಆದರೆ ಕಾಲ-ಪ್ರವಾಹದ ಎದುರು ಬಹಳ ಕಾಲ ರಾಜ ನಿಲ್ಲಲಾಗಲಿಲ್ಲ. ಫರೀದ್‌ಕೋಟ್ ಸಂಸ್ಥಾನ ಪಂಜಾಬ್ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟದಲ್ಲಿ (PEPSU) ಸೇರಲೇ ಬೇಕಾಯಿತು. ೧೯೫೬ರಲ್ಲಿ ಪಂಜಾಬ್ ರಾಜ್ಯದಲ್ಲಿ ಅದು ಲೀನವಾಯಿತು.
ಪಂಜಾಬ್ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟದ ಮಂತ್ರಿಪದವಿ. ಪಂಜಾಬ್ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷತೆ, ರಾಜ್ಯ ಸಭೆಯ ಸದಸ್ಯತ್ವ. ಪಂಜಾಬ್ ಮಂತ್ರಿ ಮಂಡಲದಲ್ಲಿ ಜೈಲು ಮತ್ತು ಹೈನುಗಾರಿಕೆ ಖಾತೆಗಳ ಮಂತ್ರಿ ಪದವಿ, ೧೯೭೨ರಲ್ಲಿ ಪಂಜಾಬಿನ ಮುಖ್ಯಮಂತ್ರಿ ಪದವಿ, ಲೋಕಸಭಾ ಸದಸ್ಯತ್ವ, ಕೇಂದ್ರ ಗೃಹ ಮಂತ್ರಿಪದವಿ ಇವು ಜೈಲ್‌ಸಿಂಗ್ ನಿರ್ವಹಿಸಿದ ಕೆಲವು ಪ್ರಮುಖ ಹುದ್ದೆಗಳು. ಜೈಲ್‌ಸಿಂಗ್ ಪಂಜಾಬಿನ ಮುಖ್ಯಮಂತ್ರಿಯಾಗಿದ್ದಾಗ,ಸ್ವಾತಂತ್ರ್ಯ ಯೋಧರಿಗೆ ಅವರು ನೀಡಿದ ಸನ್ಮಾನ, ಶಹೀದ್‌ಉಧಮ್‌ಸಿಂಗ್‌ನ ಚಿತಾಭಸ್ಮವನ್ನು ಲಂಡನ್ನಿನಿಂದ ತರಿಸಿ ಅದಕ್ಕೆ ಸ್ಮಾರಕವನ್ನು ನಿರ್ಮಿಸಿದ್ದು. ಶಹೀದ್‌ಭಗತ್‌ಸಿಂಗ್‌ನ ತಾಯಿ ಮತ್ತು ಲಾಲಾ ಲಜಪತರಾಯ್ ಅವರ ಸೊಸೆಗೆ ನೀಡಿದ ಸನ್ಮಾನ , ಗುರುಗೋಬಿಂದ್‌ಸಿಂಗ್ ಅವರಿಗೆ ಸಂಬಂಧಿಸಿದ ಎಲ್ಲ ಪವಿತ್ರ ಕ್ಷೇತ್ರಗಳಿಗೂ ಸಂಪರ್ಕ ಕಲ್ಪಿಸುವ ೬೪೦ ಕಿಲೋಮೀಟರ್ ಉದ್ದದ ಗುರುಗೋಬಿಂದ್‌ಸಿಂಗ್ ಮಾರ್ಗದ ನಿರ್ಮಾಣ, ಸೈಕಲ್ ರಿಕ್ಷಾ ಎಳೆಯುವವರಿಗಾಗಿ ಕಲ್ಯಾಣ ಯೋಜನೆ ಮುಂತಾದ ಅನೇಕ ಸತ್ಕಾರ್ಯಗಳು ಜನರ ಮನಸ್ಸಿನಲ್ಲಿಯೇ ಜೈಲ್‌ಸಿಂಗ್ ಅವರ ನೆನಪನ್ನು ಅಚ್ಚಳಿಯಿಂದ ಉಳಿಸಿವೆ.
೧೯೮೨ರಲ್ಲಿ ಜೈಲ್‌ಸಿಂಗ್ ಗೃಹ ಮಂತ್ರಿ ಪದವಿಗೆ ರಾಜೀನಾಮೆ ನೀಡಿ, ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಅದೇ ವರ್ಷದ ಜುಲೈ ೨೫ ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೮೪ರಲ್ಲಿ ಪ್ರಧಾನಿ ಇಂದಿರಾ ಗಾಂಧೀಜಿಯವರು ಹಂತಕನ ಗುಂಡಿಗೆ ಬಲಿಯಾದಾಗ ಉಂಟಾದ ಗಲಭೆ, ಸಿಖ್ ಸಮುದಾಯದ ಮೇಲೆ ನಡೆದ ಹಲ್ಲೆ, ಇಡೀ ದೇಶಕ್ಕೇ ಆಘಾತವನ್ನುಂಟುಮಾಡಿದವು. ಆ ಸಮಯದಲ್ಲಿ ಪರಿಸ್ಥಿತಿಯನ್ನೆದುರಿಸಲು ಜೈಲ್ ಸಿಂಗ್ ಅವರು ತೋರಿದ ಸ್ಥೈರ್ಯ, ಎಲ್ಲರ ಗೌರವಕ್ಕೆ ಪಾತ್ರವಾಯಿತು.
ಸದ ಹಸನ್ಮುಖಿಯಾಗಿರುತ್ತಿದ್ದ ಜೈಲ್‌ಸಿಂಗ್ ಯಾವಾಗಲೂ ಬಿಳಿ ಉಡುಪನ್ನೇ ಧರಿಸುತ್ತಿದ್ದರು. ನೆಹರೂ ಅವರಂತೆಯೇ , ಇವರಿಗೂ ಕೋಟಿನಲ್ಲಿ ಕೆಂಪು ಗುಲಾಬಿ ಇರಲೇಬೇಕು. ಜನರಲ್ಲಿ ಆತ್ಮೀಯವಾಗಿ ಬೆರೆಯುವುದರಲ್ಲಿ ಅವರಿಗೆ ಪ್ರೀತಿ. ಚಿಕ್ಕದಂದಿನಲ್ಲಿ ಶಬದ್ ಕೀರ್ತನ್‌ನಲ್ಲಿ ಬೆಳೆಸಿಕೊಂಡ ಆಸಕ್ತಿ ರಾಷ್ಟಪತಿಯಾದಾಗಲೂ ಮುಂದುವರೆದಿತ್ತು. ಪಂಜಾಬಿ ಭಾಷೆಯ ಬೆಳವಣಿಗೆಯಲ್ಲೂ ಆಸಕ್ತಿ ವಹಿಸುತ್ತಿದ್ದರು.೧೯೭೪ರಲ್ಲಿ ಪಂಜಾಬಿ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತು.
ಗ್ಯಾನಿ ಜೈಲ್‌ಸಿಂಗ್ ಅವರು ೧೯೮೭ರಲ್ಲಿ ರಾಷ್ಟ್ರಪತಿಸ್ಥಾನದಿಂದ ನಿವೃತ್ತರಾದರು. ನಂತರ, ೨೫.೧೨.೧೯೯೪ರಂದು ನಿಧನರಾದರು.