ಈವತ್ತು ನಿಮ್ಮ ಮೆಚ್ಚಿನ ಪತ್ರಿಕೆ ತಡವಾಗಿ ನಿಮ್ಮ ಕೈ ಸೇರಿರುವುದಕ್ಕೆ ಕಾರಣವಿದೆ ಬಿಡಿ. ಬೆಳ್ಳಂಬೆಳಗ್ಗೆ ಉದಯವಾಗುವುದಕ್ಕೆ ಮೊದಲೇ ಸೂರ್ಯ ಆತುರದಿಂದ ಅಸ್ತಮನಕ್ಕೆ ಹೊರಟಂತೆ ಗ್ರಹಣ ಹಿಡಿದೇ ಬೆಳಗಾಗಿದೆ. ಈ ಸಂದರ್ಭದಲ್ಲಿ ಹೊರ ಹೊರಡುವುದೇ ಅಶುಭ ಎಂದುಕೊಂಡು ಎಷ್ಟೋ ಮಂದಿ ಮನೆಯೊಳಗೇ ಗ್ರಹಣ ಹಿಡಿಸಿಕೊಂಡು ಕುಳಿತಿದ್ದಾರೆ. ನಮ್ಮ ಎಲ್ಲ ಟೀವಿ ಛಾನೆಲ್ಲುಗಳಲ್ಲಿ ಶಾಲು ಹೊತ್ತ ಜ್ಯೋತಿಷಿಗಳು ಗ್ರಹಣದ ದಿನ ಯಾವ್ಯಾವ ರಾಶಿಗಳಲ್ಲಿ ಹುಟ್ಟಿದವರಿಗೆ ಏನೇನು ಗ್ರಹಚಾರ ಕಾದಿದೆ ಎಂದು ಮೂರು ದಿನದಿಂದ ನಿರರ್ಗಳವಾಗಿ ವಿವರಿಸುತ್ತಲೇ ಇದ್ದಾರೆ. ಒಟ್ಟಾರೆ ಎಲ್ಲೆಡೆ ಏನೋ ದುರದೃಷ್ಟದ ಸಂಗತಿ ಟಿಸುತ್ತಿದೆ ಎನ್ನುವ ಭಾವನೆ ಕವಿಯುತ್ತಿದೆ. ಮೊನ್ನೆ ಶಿವರಾತ್ರಿಯ ದಿನದಂದು ರಾಜ್ಯದ ಜನತೆಗೆಲ್ಲ ಗಂಗಾಜಲ ಹನಿಸಿದ ಸರ್ಕಾರ ಗ್ರಹಣದ ದಿನದಂದು ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದರೆ ಚೆನ್ನಿತ್ತು. ಗ್ರಹಣದ ಕಾಲ ಭಯಗೊಳ್ಳುವ ಸಮಯವಲ್ಲ, ಸಂಭ್ರಮಿಸುವ ಕಾಲ ಎಂದು ಹಬ್ಬವನ್ನಾಗಿಸಿದ್ದರೆ ಒಳ್ಳೆಯದಲ್ಲವೇ?

ಗ್ರಹಣ ಎಂದರೆ ಹಬ್ಬವೇ? ಭೀಮನ ಅಮಾವಾಸ್ಯೆಯ ದಿನ ಬಂದದ್ದರಿಂದ ಹೀಗೆ ತಪ್ಪಾಗಿ ಹೇಳಿದೆ ಎಂದು ಭಾವಿಸಬೇಡಿ. ನಿಜ. ಗ್ರಹಣ ಎನ್ನುವ ಟನೆ ನಾವು ಮನುಜರೆಲ್ಲರೂ ಸಂಭ್ರಮಿಸಿ ಹಬ್ಬದಂತೆ ಆಚರಿಸಬೇಕಾದ ಒಂದು ಸಂಗತಿ. ಭಯದಿಂದ ಶಾಂತಿ, ಪೂಜೆಗಳನ್ನು ಮಾಡಬೇಕಾದ ಸಂಗತಿಯಲ್ಲ. ಯಾಕೆ ಗೊತ್ತೇ?  ನಮಗೆ ತೋರುವಂತಹ ಗ್ರಹಣದ ದೃಶ್ಯ ಈ ವಿಶ್ವದ ಇನ್ಯಾವ ಜಗತ್ತಿನಲ್ಲಿಯೂ ಕಾಣಲಿಕ್ಕಿಲ್ಲ. ಅಂತಹ ಒಂದು ಅಪರೂಪದ ಹಾಗೂ ಆಕಸ್ಮಿಕದ ಸಂಗತಿ ಗ್ರಹಣ. ನಮ್ಮದೇ ಸೌರಮಂಡಲದಲ್ಲಿರುವ ಇನ್ನೂ ಏಳು ಗ್ರಹಗಳ ಗ್ರಹಚಾರ: ಗ್ರಹಣ ನಮಗೆ ಕಾಣಿಸುವಷ್ಟು ಸುಂದರವಾಗಿ ಅವುಗಳ ಮೇಲಿಂದ ಗೋಚರಿಸುವುದಿಲ್ಲ.

ಗ್ರಹಣ ಹೇಗಾಗುತ್ತದೆ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ವಿವರಗಳನ್ನು ಪತ್ರಿಕೆಗಳೂ, ಟೀವಿ ಛಾನೆಲ್ಲುಗಳೂ ಪ್ರಸಾರ ಮಾಡಿವೆ. ಅದರಲ್ಲೂ ಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯ ವಜ್ರದುಂಗುರದಂತೆ ಕಾಣುವ ದೃಶ್ಯವನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಪೂರ್ಣ ಸೂರ್ಯಗ್ರಹಣ ನೀಡುವ ಅನುಭವ ವಿಶಿಷ್ಟವಾದದ್ದು. ನಿಗಿ, ನಿಗಿ ಬೆಂಕಿಯ ಚೆಂಡಾಗಿ ಉರಿಯುವ ಸೂರ್ಯ ಕೆಲವು ನಿಮಿಷಗಳ ಕಾಲ ಥಟ್ಟನೆ ತಣ್ಣಗಾಗಿ ಬಿಡುತ್ತಾನೆ. ಕತ್ತಲು ಕವಿಯುತ್ತದೆ. ಬೆಳ್ಳಂಬೆಳಗೂ ತಾರೆಗಳು ಆಕಾಶದಲ್ಲಿ ಮಿನುಗುತ್ತವೆ. ಒಂದೆರಡು ಕ್ಷಣ ಸೂರ್ಯ ಒಂದು ವಜ್ರದುಂಗುರದಂತೆ ಜಗಮಗಿಸುತ್ತಾನೆ. ಕತ್ತಲಾದಷ್ಟೆ ಶೀ್ರವಾಗಿ ಮತ್ತೆ ಬೆಳಕು ಹರಡಲಾರಂಭಿಸುತ್ತದೆ. ಒಂದೆರಡು ಗಂಟೆಗಳೊಳಗೆ ಹೀಗೊಂದು ಗ್ರಹಣ ಮುಗಿದಿರುತ್ತದೆ. ಚಂದ್ರಗ್ರಹಣವೂ ಅಷ್ಟೆ. ಯಾರೋ ರಕ್ತ ಚೆಲ್ಲಿದಂತೆ ತಿಂಗಳ ಬೆಳಕನ್ನು ಚೆಲ್ಲುವ ಚಂದ್ರ ಕೆಲವು ನಿಮಿಷಗಳ ಕಾಲ ಮಬ್ಬಾಗುತ್ತದೆ. ಕಷ್ಟಗಳೇ ಹಾಗೆ, ಕ್ಷಣಿಕ ಎನ್ನುವಂತೆ, ಮರಳಿ ನಗಲು ಆರಂಭಿಸುತ್ತದೆ. ಹೀಗೆ ಸೂರ್ಯ ಹಾಗೂ ಚಂದ್ರ ಗ್ರಹಣಗಳೆರಡೂ ಭೂನಿವಾಸಿಗಳಿಗೆ ಅತ್ಯಂತ ಮನೋಹರವಾದ, ಅಪರೂಪದ ದೃಶ್ಯಗಳಾಗಿ ಗೋಚರಿಸುತ್ತವೆ.

ಇದು ಒಂದು ವಿಚಿತ್ರ ಸಂಯೋಗ ಎನ್ನುತ್ತಾರೆ ವಿಜ್ಞಾನಿಗಳು. ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ಅವಿರತವಾಗಿ ಪ್ರದಕ್ಷಿಣೆ ಹಾಕುತ್ತಿವೆ. ಯಾವಾಗಲೋ ಒಮ್ಮೆ ಇವು ಮೂರೂ ಒಂದೇ ರೇಖೆಯಲ್ಲಿ ಎದುರಾಗುತ್ತವೆ. ಆಗ ಭೂಮಿಯ ನೆರಳು ಚಂದ್ರನ ಮೇಲೋ, ಚಂದ್ರನ ನೆರಳು ಭೂಮಿಯ ಮೇಲೋ ಬಿದ್ದು, ಚಂದ್ರಗ್ರಹಣ ಅಥವಾ ಸೂರ್ಯಗ್ರಹಣ ಆಗುತ್ತದೆ.  ಆದರೆ ಇದಿಷ್ಟೇ ಆಗಿದ್ದರೆ ಸೂರ್ಯಗ್ರಹಣದ ಸೌಂದರ್ಯಕ್ಕೆ ಮಹತ್ವ ದೊರಕುತ್ತಿರಲಿಲ್ಲ. ಭೂಮಿಯ ಮೇಲಿನಿಂದ ನೋಡಿದಾಗ ಸೂರ್ಯ ಮತ್ತು ಚಂದ್ರ ಎರಡೂ ಸಮಗಾತ್ರದ ಆಕಾಶಕಾಯಗಳಂತೆ ತೋರುತ್ತವೆ ಎನ್ನುವುದೇ ವಿಶೇಷ. ಚಂದ್ರನಿಗಿಂತಲೂ ಸುಮಾರು 400 ಪಟ್ಟು ದೊಡ್ಡದಾಗಿರುವ ಸೂರ್ಯ ಚಂದ್ರನಷ್ಟೆ ದೊಡ್ಡದಾಗಿ ಕಾಣುತ್ತದೆ. ಕೇವಲ 1740 ಕಿಲೋಮೀಟರು ವ್ಯಾಸವಿರುವ ಚಂದ್ರ, ಅದರ 400 ಪಟ್ಟು ದೊಡ್ಡದಾದ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಸೂರ್ಯಗ್ರಹಣ ಆಗುತ್ತದೆ. ಆಗಸದಲ್ಲೊಂದು ವಜ್ರದುಂಗುರ ಗೋಚರಿಸುತ್ತದೆ.

ಈ ಸೌಂದರ್ಯ ಕೇವಲ ಭೂನಿವಾಸಿಗಳಿಗಷ್ಟೆ ಲಭ್ಯ! ಅದರಲ್ಲೂ ಅದನ್ನು ಕಂಡು ಆನಂದಿಸುವ ಮನವಿರುವ ಮಾನವರಿಗಷ್ಟೆ ಎನ್ನುವುದು ನಮ್ಮ ಸೌಭಾಗ್ಯವಲ್ಲವೇ? ನಿಜವೇ! ಬೇರಾವ ಗ್ರಹದಲ್ಲೂ ಇಂತಹ ದೃಶ್ಯ ಗೋಚರಿಸುವುದಿಲ್ಲ. ಉದಾಹರಣೆಗೆ, ಭೂಮಿಗೆ ಚಂದ್ರನಿರುವ ಹಾಗೆ ಬುಧ ಹಾಗೂ ಶುಕ್ರ ಗ್ರಹಗಳಿಗೆ ಉಪಗ್ರಹಗಳೇ ಇಲ್ಲ. ಜೊತೆಗೆ ಸೂರ್ಯನಿಗೆ ಬಲು ಸಮೀಪದಲ್ಲಿರುವ ಅವುಗಳಲ್ಲಿ ದಿನಗಳ ಅವಧಿ ಹಾಗೂ ವರ್ಷಾವಧಿಯೂ ಬಹಳ ಕಡಿಮೆ. ಶುಕ್ರನ ಮೇಲ್ಮೈ ಕುದಿಯುವಷ್ಟು ಬಿಸಿಯಾಗಿದ್ದರೂ ಅಲ್ಲಿರುವ ಮೋಡಗಳಿಂದಾಗಿ ಸೂರ್ಯ ಮಸುಕಾಗಿ ಕಾಣುತ್ತಾನೆ. ಭೂಮಿಯಿಂದ ಕಾಣುವಂತೆ ಹೊಳಪಿನ ಉಂಡೆಯಾಗಿಯಲ್ಲ!

ಉಪಗ್ರಹಗಳಿರುವ ಗ್ರಹಗಳಲ್ಲಾದರೂ ಗ್ರಹಣ ಕಾಣಬೇಕಲ್ಲ ಎಂದಿರಾ? ಮಂಗಳ ಗ್ರಹಕ್ಕೆ ಎರಡು ಚಂದ್ರಗಳಿವೆ. ಆದರೆ ನಮ್ಮ ಚಂದ್ರನಿಗೆ ಹೋಲಿಸಿದರೆ ಅವೆರಡೂ ಅತಿ ಸಣ್ಣ ಕಲ್ಲುಗಳು ಅಷ್ಟೆ ಗ 13 ಮತ್ತು 25 ಕಿಲೋಮೀಟರು ವ್ಯಾಸದ ಶಿಲೆಗಳು. ಸೂರ್ಯನಿಂದ ಭೂಮಿಗಿಂತ ದುಪ್ಪಟ್ಟು ದೂರದಲ್ಲಿದ್ದರೂ, ಅದರ ಉಪಗ್ರಹಗಳ ಗಾತ್ರ ಬಹಳ ಸಣ್ಣ. ಹೀಗಾಗಿ ದೊಡ್ಡ ಸೂರ್ಯನ ಮೇಲೆ ಎರಡು ಕಪ್ಪು ಚುಕ್ಕೆಗಳು ಚಲಿಸಿದಂತೆ ಸೂರ್ಯಗ್ರಹಣ ಅಲ್ಲಿ ತೋರುತ್ತದೆ. ವಜ್ರದುಂಗುರವಂತೂ ಅಸಾಧ್ಯ! ಉಪಗ್ರಹಗಳ ಸಂಖ್ಯೆ ಹೆಚ್ಚಿರುವುದರಿಂದ ಗ್ರಹಣಗಳ ಸಂಖ್ಯೆ ಹೆಚ್ಚಿದ್ದರೂ, ಅಂತಹ ಅದ್ಭುತ ದೃಶ್ಯವೇನೂ ಅದಾಗಿರುವುದಿಲ್ಲ.

ಇಡೀ ಸೂರ್ಯಮಂಡಲದಲ್ಲಿ ಅತಿ ದೊಡ್ಡದಾದ ಗ್ರಹ ಗುರು. ಹದಿನೇಳು ಚಂದ್ರಗಳ ಒಡೆಯ ಅದು. ಅದರಲ್ಲಿ ಅತಿ ದೊಡ್ಡ ಉಪಗ್ರಹ ನಮ್ಮ ಚಂದ್ರನಿಗಿಂತಲೂ ಹತ್ತು ಪಟ್ಟು ದೊಡ್ಡದು ಮತ್ತು ಗುರುವಿಗೆ ಅತಿ ಸಮೀಪದಲ್ಲಿ ಸುತ್ತುತ್ತಿರುತ್ತದೆ. ಗುರುವಿನಿಂದ ನೋಡಿದಾಗ ಸೂರ್ಯ ಭೂಮಿಯಿಂದ ಗೋಚರಿಸುವುದರ ಐದರಲ್ಲೊಂದಂಶದಷ್ಟು ಸಣ್ಣದಾಗಿ ತೋರುತ್ತದೆ. ಗುರುವಿನಿಂದ ನೋಡಿದಾಗ ಸೂರ್ಯ ಅಷ್ಟೇನೂ ಪ್ರಖರವಾಗಿರುವುದಿಲ್ಲ. ದೊಡ್ಡ ನಕ್ಷತ್ರದಂತೆ ಕಾಣುತ್ತದೆಯಷ್ಟೆ. ಹೀಗಾಗಿ ಅಲ್ಲಿನ ಗ್ರಹಣವೂ ಸಂಭ್ರಮದ ದೃಶ್ಯವಾಗುವುದಿಲ್ಲ.

ಇನ್ನು ಅತಿ ಹೆಚ್ಚಿನ ಉಪಗ್ರಹಗಳಿರುವ ಶನಿಗ್ರಹ (ಇದಕ್ಕೆ ಇಪ್ಪತ್ತೇಳು ಉಪಗ್ರಹಗಳೂ, ಅಸಂಖ್ಯ ದೂಳಿನ ಕಣಗಳು ಸುತ್ತುತ್ತಿರುವ ವರ್ತುಲಗಳೂ ಇವೆ) ದಿಂದ ಸೂರ್ಯ ಭೂಮಿಯಿಂದಿರುವುದಕ್ಕಿಂತ ಹತ್ತು ಪಟ್ಟು ದೂರದಲ್ಲಿದೆ. ಹತ್ತು ಪಟ್ಟು ಸಣ್ಣದಾಗಿ ಗೋಚರಿಸುತ್ತದೆ.  ಹೀಗಾಗಿ ಇಲ್ಲಿ ಜರುಗುವ ಗ್ರಹಣಗಳ ಸಂಖ್ಯೆಯೂ ಹೆಚ್ಚು. ಕೆಲವೇ ಕಿಲೋಮೀಟರುಗಳಷ್ಟು ಹತ್ತಿರದಲ್ಲಿ ವರ್ತುಲಗಳು ಇರುವುದರಿಂದ, ಅದರ ಅಡಿಯಲ್ಲಿರುವವರಿಗೆ ಸೂರ್ಯನ ಮೇಲೊಂದು ಕಪ್ಪು ಬಟ್ಟೆ ಸುತ್ತಿದಂತೆ ಸದಾ ಗೋಚರಿಸುತ್ತದೆ. ಇನ್ನು ಆಗಾಗ್ಗೆ ಸೂರ್ಯನಿಗೆ ಅಡ್ಡ ಬರುವ ಇತರೆ ಉಪಗ್ರಹಗಳ ಗಾತ್ರ ಹಾಗೂ ದೂರಕ್ಕೆ ಅನುಗುಣವಾಗಿ, ಸೂರ್ಯ ಪೂರ್ತಿಯಾಗಿ ಮರೆಯಾಗಿ ಬಿಡಬಹುದು ಇಲ್ಲವೇ, ಅದರ ಮುಂದೆ ಒಂದು ಕಪ್ಪು ಚುಕ್ಕೆ ಬಲು ಶೀ್ರವಾಗಿ ಚಲಿಸಿ ಮಾಯವಾಗಬಹುದು. ನಮ್ಮಲ್ಲಿಯಂತೆ ವಜ್ರದುಂಗುರ ಗೋಚರಿಸುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಗೋಚರಿಸಿದರೂ, ಅದರ ಪ್ರಖರತೆ ವಜ್ರದಂತೆಯಂತೂ ಇರುವುದಿಲ್ಲ. ಹೆಚ್ಚೆಂದರೆ ಕಡಿಮೆ ಬೆಲೆಯ ಹರಳಿನುಂಗುರದಂತೆ ಮಸುಕಾಗಿ ಇದ್ದೀತು.

ಇನ್ನೂ ದೂರದ ನೆಪ್ಚೂನ್, ಯುರೇನಸ್ಗಳ ಮಾತು ಹೇಳುವ ಹಾಗೇ ಇಲ್ಲ. ಏಕೆಂದರೆ ಅವುಗಳಿಂದ ನೋಡಿದಾಗ ಸೂರ್ಯ ಬಾನನ್ನು ಬೆಳಗುವ ಭಾನುವಿನಂತೆ ತೋರುವುದಿಲ್ಲ. ಆಕಾಶದಲ್ಲಿರುವ ಲಕ್ಷಾಂತರ ನಕ್ಷತ್ರಗಳಲ್ಲಿ ಒಂದರಂತೆ ತೋರುತ್ತದೆ ಅಷ್ಟೆ. ಈಗ ಹೇಳಿ! ಗ್ರಹಣ ನಮ್ಮ ಅದೃಷ್ಟವೋ, ಗ್ರಹಚಾರವೋ? ವಿಶ್ವದಲ್ಲಿ ಇನ್ಯಾರಿಗೂ ಗೋಚರಿಸದ ವಿಶೇಷ ಸಂಗತಿಯಾದ ಇದನ್ನು ನಾವು ಮನುಜರು ಹಬ್ಬದಂತೆ ಆಚರಿಸಬೇಕಲ್ಲವೇ!