ಸೂರ್ಯಬಿಂಬವನ್ನು ಚಂದ್ರ ಬಿಂಬ ಸಂಪೂರ್ಣವಾಗಿ ಮರೆ ಮಾಡುವ ಸ್ಥಿತಿಯನ್ನು ‘ಪೂರ್ಣತೆ’ ಎನ್ನುವುದುಂಟು. ಅದುವೇ ಖಗ್ರಾಸ ಸೂರ್ಯಗ್ರಹಣದ ಅಥವಾ ಪೂರ್ಣ ಸೂರ್ಯಗ್ರಹಣದ ಸನ್ನಿವೇಶ. ಈ ಸನ್ನಿವೇಶ ಭೂಮಿಯ ಮೇಲೆ ಎಲ್ಲಾದರೊಂದು ಕಡೆ ಒಂದೆರಡು ವರ್ಷಗಳಿಗೊಮ್ಮೆ ಉಂಟಾಗುವುದು. ಆದರೆ ಒಮ್ಮೆ ಕಂಡು ಬಂದ ಜಾಗದಲ್ಲೇ ಮತ್ತೆ ಕಂಡು ಬರಬೇಕಾದರೆ ಮೂರೂವರೆ ಶತಮಾನಗಳಿಗಿಂತಲೂ ಅಧಿಕ ಕಾಲ ಬೇಕು. ಆದ್ದರಿಂದಲೇ ಅದೊಂದು ಅಪರೂಪದ ಘಟನೆ.

ಒಂದು ಸ್ಥಳಕ್ಕೆ ಪೂರ್ಣತೆಯ ಸ್ಥಿತಿ ಕೆಲವು ಸೆಕೆಂಡುಗಳಿಂದ ಹಿಡಿದು ಕೆಲ ಮಿನಿಟುಗಳ ತನಕ ಮಾತ್ರ ಸೀಮಿತ. ಚಂದ್ರಬಿಂಬವು ಬೀಳಿಸುವ ದಟ್ಟ ನೆರಳು ಭೂಮಿಯ ಮೇಲೆ ಹಾದು ಹೋದಂತೆ ಪೂರ್ಣತೆಯ ಸನ್ನಿವೇಶವೂ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತದೆ. ಪೂರ್ಣತೆಯನ್ನು ಕಾಣಬಹುದಾದ ಜಾಗಗಳನ್ನೆಲ್ಲಾ ಜೋಡಿಸುವ ದಾರಿಯನ್ನು ಪೂರ್ಣತೆಯ ದಾರಿ ಅಥವಾ ಪೂರ್ಣತೆಯ ಪಥ ಎನ್ನುವುದುಂಟು. ಖಗ್ರಾಸ ಪಥ ಎನ್ನುವುದೂ ಇದನ್ನೇ.

ಪೂರ್ಣತೆಯ ನೋಟ ಯಾರಿಂದ ಯಾರೂ ಬಚ್ಚಿಡುವಂಥದ್ದಲ್ಲ. ಪ್ರಕೃತಿ ಮುನಿಸದಿದ್ದರೆ, ಯಾರೇ ಆಗಲಿ ಮನಸ್ಸಿದ್ದವರು ನೋಡಬಹುದಾದದ್ದು. ಆದ್ದರಿಂದ ರಾಜಸ್ತಾನದ ಗಡಿಯಿಂದ ಬಂಗಾಳಕೊಲ್ಲಿಯ ತೀರದವರೆಗಿನ ಸುಮಾರು ೯೦೦ ಕಿಮೀ ಉದ್ದದ ದಾರಿಯಲ್ಲಿರುವ ಲಕ್ಷಾಂತರ ಜನ ವಿಶೇಷ ಪ್ರಯತ್ನ ಪಡದೆ ನೋಡಬಹುದಾದ ಸನ್ನಿವೇಶ ೧೯೯೫ನೇ ವರ್ಷದ ಅಕ್ಟೋಬರ್ ೨೪ರಂದು ಸೃಷ್ಟಿಯಾಗಿತ್ತು.

ಇಸ್ರೊ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟ ಹಾಗೂ ಸೂರ್ಯ ಪ್ರಕಾಶವನ್ನು ಲಕ್ಷ ಪಟ್ಟು ತಗ್ಗಿಸಬಲ್ಲ ಫಿಲ್ಟರುಗಳನ್ನು ಅನೇಕ ಸಂಘಟನೆಗಳು ತಯಾರಿಸಿ ಜನಸಾಮಾನ್ಯರಿಗೆ ಸಿಗುವಂತೆ ಮಾಡಿದುವು. ಇಂಥ ಫಿಲ್ಟರುಗಳಿಲ್ಲದವರು ಪೂರ್ಣ ಕಪ್ಪಗಿನ ಎಕ್ಸ್‌ರೇ ಫಿಲ್ಮ್ ಅಥವಾ ಫೋಟೋ ಫಿಲ್ಮನ್ನು ಎರಡು ಮೂರು ಬಾರಿ ಮಡಚಿ ನೋಡುವ ಧೈರ್ಯ ತಳೆದರು. ಆದರೆ ಈ ಎಲ್ಲ ತಯಾರಿಗಳೂ ಪೂರ್ಣತೆಯನ್ನು ನೋಡಲು ಸಹಾಯಕವಷ್ಟೇ ಹೊರತು ಪೂರ್ಣತೆಯನ್ನು ನೇರವಾಗಿ ನೋಡುವುದಕ್ಕಲ್ಲ. ಪೂರ್ಣತೆಯ ಕ್ಷಣಗಳನ್ನು ನೋಡುವಾಗ ನಮಗೂ ಸೂರ್ಯನಿಗೂ ಮಧ್ಯೆ ಯಾವ ಫಿಲ್ಟರು, ಫಿಲ್ಮುಗಳೂ ಅಡ್ಡ ಬರುವಂತಿಲ್ಲ!

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸ್ನೇಹಿತರೊಂದಿಗೆ (ಇದರಲ್ಲಿ ಐದು ವಿದ್ಯಾರ್ಥಿಗಳೂ ಇದ್ದರು) ಪೂರ್ಣತೆಯ ನೋಟಕ್ಕಾಗಿ ನಾನು ರಾಜಸ್ತಾನದ ಅಲ್ವಾರಿಗೆ ಹೋದೆ. ಅಲ್ವಾರ್ (ಇದು ಅಲ್ವಾರ್ ಜಿಲ್ಲೆಯ ಮುಖ್ಯ ಪಟ್ಟಣವೂ ಹೌದು) ಪೂರ್ಣತೆಯ ಪಥದಲ್ಲಿತ್ತು. ಪೂರ್ಣತೆಯ ಪಥ ಹಿಂದೆಯೇ ಹೇಳಿದಂತೆ ಬರಿಯ ಗೆರೆಯಲ್ಲ. ಅದು ಸಾಕಷ್ಟು ಅಗಲವಿರುವ ಪಟ್ಟಿ. ಅಲ್ವಾರ್ ಈ ಪಟ್ಟಿಯ ಮಧ್ಯದಲ್ಲಿರಲಿಲ್ಲ. ಅಲ್ವಾರ್  –  ಜಯಪುರ ಹೆದ್ದಾರಿಯಲ್ಲಿ ಪಟ್ಟಿಯ ಮಧ್ಯರೇಖೆಗೆ ಸಮೀಪವಾದ ಅಕಬರಪುರ –  ವೀಕ್ಷಣೆಗಾಗಿ ನಾವು ಮೊದಲೇ ಆರಿಸಿದ ಜಾಗವಾಗಿತ್ತು. ಹೀಗೆ ಜಾಗದ ಆಯ್ಕೆಯನ್ನು ಸಾಕಷ್ಟು ಮೊದಲೇ ವಿಜ್ಞಾನ –  ತಂತ್ರಜ್ಞಾನ ಸಂವಹನದ ರಾಷ್ಟ್ರೀಯ ಸಮಿತಿ ನಡೆಸಿ ದೇಶದ ಹಲವು ಸ್ವಯಂ ಸೇವಾ ಸಂಘಟನೆಗಳಿಗೆ ತಿಳಿಸಿತ್ತು. ಇದರಿಂದ ಮಣಿಪುರ, ಅರುಣಾಚಲ ಪ್ರದೇಶಗಳಿಂದ ಹಿಡಿದು ಗುಜರಾತ್, ಕರ್ನಾಟಕದ ವರೆಗಿನ ಕಿರಿಯರ ತಂಡಗಳು ಅಲ್ಲಿ ಒಟ್ಟಾಗಿ ಬೆರೆತು ನೋಡುವಂತಾಯಿತು.

೨೩ರ ಸಂಜೆ ನಾವು ಮರುದಿನದ ವೀಕ್ಷಣಾ ತಾಣವನ್ನು ನೋಡಲು ಹೋದೆವು. ವಿದೇಶೀಯರನ್ನೂ ಒಳಗೊಂಡಂತೆ ಬೇರೆ ಬೇರೆ ತಂಡಗಳು ಅಲ್ಲಲ್ಲಿ ತಮ್ಮ ಷಾಮಿಯಾನಗಳನ್ನು ಹಾಕಿದ್ದುವು. ಅರಾವಳಿ ಪರ್ವತ ಶ್ರೇಣಿಯ ನಡುವೆ ಸಾಗುವ ಹೆದ್ದಾರಿಯ ಎರಡೂ ಕಡೆಗಳಲ್ಲಿ ದೊಡ್ಡ ಗುಡ್ಡಗಳಿವೆ. ಬೆಟ್ಟದ ಸಾಲಿನೆದುರು ಕೆಲವೆಡೆ ವಿಶಾಲವಾದ ಮೈದಾನ ಪ್ರದೇಶಗಳಿವೆ. ವಿಡಿಯೋ ಹಾಗೂ ದೂರದರ್ಶಕದಿಂದ ಫೋಟೋ ತೆಗೆಯುವವರು ತಮ್ಮ ತಮ್ಮ ನಿಶ್ಚಿತ ಜಾಗಗಳನ್ನು ಬೆಟ್ಟಗಳಲ್ಲಿ ನಿಗದಿಪಡಿಸಿಕೊಳ್ಳುತ್ತಿದ್ದರು. ಕುರ್ಚಿ, ಮೇಜುಗಳನ್ನು ಸಾಗಿಸುತ್ತಿದ್ದರು. ವಿದ್ಯುತ್ ಸರಬರಾಜು ಬೇಕಾದವರು ಅದಕ್ಕಾಗಿ ತಾತ್ಕಾಲಿಕ ಕೇಬಲ್‌ಗಳನ್ನು ಎಳೆಯುತ್ತಿದ್ದರು.

ಪೂರ್ಣತೆಯ ಪಥದಲ್ಲಿ ಬೇರೆ ಬೇರೆ ಕಡೆಗಳಲ್ಲಿ ವಿಜ್ಞಾನಿಗಳು ಹಮ್ಮಿಕೊಂಡ ಪ್ರಯೋಗಗಳು ಒಂದೆರಡಲ್ಲ : ಸೂರ್ಯನ ತ್ರಿಜ್ಯವನ್ನು ನಿರ್ಣಯಿಸುವುದು, ಪೂರ್ಣತೆಯ ಅಗಲವನ್ನು ತಿಳಿಯುಮದು, ವಾತಾವರಣದ ಉಷ್ಣತೆಯನ್ನು ಅಳೆಯುವುದು, ಪಕ್ಷಿ  –  ಪ್ರಾಣಿ  –  ಮನುಷ್ಯರ ವರ್ತನೆಗಳನ್ನು ಅಧ್ಯಯಿಸುವುದು, ಸೂರ್ಯನ ಸುತ್ತಲೂ ದೂಳಿನುಂಗುರ ಉಂಟೇ ಎಂದು ಪತ್ತೆ ಮಾಡುವುದು ಹೀಗೆ ಹತ್ತಾರು. ನನಗೋ ಪೂರ್ಣತೆಯನ್ನು ನೋಡುವುದೇ ಮುಖ್ಯವಾಗಿತ್ತು. ಆದ್ದರಿಂದ ಸಾಮಾನ್ಯ ವ್ಯಕ್ತಿಯಾಗಿ ಆ ಬೆರಗನ್ನು ಅನುಭವಿಸುವುದು ಹೇಗೆ ಎಂಬುದರ ಬಗ್ಗೆಯೇ ನಾನು ಯೋಚಿಸುತ್ತಿದ್ದೆ.

೨೪ರಂದು ಬೆಳಿಗ್ಗೆ ಬೇಗನೇ ಎಚ್ಚರವಾಯಿತು. ಇನ್ನೂ ಕತ್ತಲೆ ಇತ್ತು. ನಾನು ಉಳಿದಿದ್ದ ಹೊಟೇಲಿನ ಹೊರಜಗಲಿಗೆ ಬಂದು ಆಕಾಶ ನೋಡಿದೆ. ಉಳಿದ ನಕ್ಷತ್ರಪುಂಜಗಳೊಂದಿಗೆ ‘ಮಹಾವ್ಯಾಧ’ ಹಾಗೂ ಅದನ್ನು ಅನುಸರಿಸುವಂತೆ ಆಕಾಶದಲ್ಲಿ ತೋರುವ ‘ಮಹಾಶ್ವಾನ’ ಶುಬ್ರ ಆಕಾಶದಲ್ಲಿ ಮಿನುಗುತ್ತಿದ್ದುವು. ಮನಸ್ಸಿಗೆ ಹರ್ಷವಾಯಿತು. ಏಕೆಂದರೆ ಮೋಡಗಳು ಸುಳಿದಿರಲಿಲ್ಲ. ಮೋಡಗಳು ತೆಳುವಾಗಿದ್ದರೂ ಸಾಕು, ಪೂರ್ಣತೆಯ ನೋಟವನ್ನು ಮಸುಕುಗೊಳಿಸಬಲ್ಲವಾಗಿದ್ದುವು. ಅಕ್ಟೋಬರ್ ತಿಂಗಳಲ್ಲಿ ರಾಜಸ್ತಾನದ ಆಕಾಶ ಶುಬ್ರವಾಗಿರುತ್ತದೆ ಎಂಬ ನಿರೀಕ್ಷೆ ಸಾಮಾನ್ಯ. ಈಶಾನ್ಯ ಮಾನ್ಸೂನುಗಳ ಪರಿಣಾಮವೇನಿದ್ದರೂ ಭಾರತದ ಪೂರ್ವ ಭಾಗಕ್ಕೇ ಹೆಚ್ಚು.

ಮುಂಜಾನೆ ೬ ಗಂಟೆಗೆ ಬಸ್ಸು ಹತ್ತಿ ಅಕಬರಪುರಕ್ಕೆ ಬಂದೆವು. ಗ್ರಹಣದ ಯಾವ ಸೂಚನೆಯೂ ಇಲ್ಲದಂತೆ ಸೂರ್ಯ ಉದಯಿಸಿದ್ದ. ಮೇಲೇರಿದಂತೆ ಮುಂಜಾನೆಯ ಕೆಂಪನ್ನು ಕಳೆದುಕೊಳ್ಳುತ್ತಲಿದ್ದ. ಮೊದಲೇ ನಿಶ್ಚಯಿಸಿದ ಗುಡ್ಡವನ್ನು ಹತ್ತಿ ನಿಂತೆವು. ಎಲ್ಲೂ ದಟ್ಟವಾದ ವೃಕ್ಷ ರಾಶಿಯಿರಲಿಲ್ಲ. ಸಣ್ಣಪುಟ್ಟ ಗಿಡಗಂಟಿಗಳು ಹಾಗೂ ಪೊದರುಗಳು ಗುಡ್ಡದ ಮೇಲೆಲ್ಲಾ ಇದ್ದುವು. ಪಕ್ಷಿಗಳು ಇಲ್ಲವಾದುದರಿಂದ ಅವುಗಳ ವರ್ತನೆ ವ್ಯತ್ಯಯವಾದುದನ್ನು ನಾವು ಗಮನವಿಟ್ಟು ಕಾಣುವ ಸ್ಥಿತಿಯಲ್ಲಿರಲಿಲ್ಲ.

ಸುಮಾರು ೭ ಗಂಟೆ ೨೫ ಮಿನಿಟುಗಳ ಹೊತ್ತಿಗೆ ಅದಾಗಲೇ ಸೂರ್ಯಬಿಂಬವನ್ನು ಚಂದ್ರ ಬಿಂಬ ಪಶ್ಚಿಮ ಬದಿಯಲ್ಲಿ ಸ್ಪರ್ಶಿಸಿದಂತೆ ಕಂಡಿತು. ನಾನು ಸಮಯವನ್ನು ನೋಡುವ ಗೋಜಿಗೆ ಹೋಗಲಿಲ್ಲ. ಇದಕ್ಕಾಗಿ ನಾನು ವಾಚನ್ನು ಕೂಡ ಕಟ್ಟಿರಲಿಲ್ಲ. ಪೂರ್ಣತೆಯನ್ನು ನೋಡುವುದೊಂದೇ ನನ್ನ ಮನಸ್ಸನ್ನು ತುಂಬಿತ್ತು. ಸಮಯದ ಬಗ್ಗೆ ಏನಿದ್ದರೂ ನನ್ನ ಪಕ್ಕದವರು ಹೇಳುತ್ತಿದ್ದರು. ಚಂದ್ರ ಬಿಂಬ ಕಡು ಕಪ್ಪಾಗಿತ್ತು. ಅದು ಪೂರ್ವಕ್ಕೆ ಸರಿಯುತ್ತಿದ್ದಂತೆ ಒಂದು ಉಜ್ವಲ ವೃತ್ತ ಹೆಚ್ಚು ಹೆಚ್ಚು ಆವರಿಸುವಂತೆ ಕಂಡಿತು. ಈಗ ಯಾರೂ ಬರಿ ಕಣ್ಣಿನಿಂದ ನೋಡುತ್ತಿರಲಿಲ್ಲ. ಫಿಲ್ಟರನ್ನು ಕಣ್ಣ ಮುಂದಿಟ್ಟೇ ನೋಡುತ್ತಿದ್ದರು. ಫಿಲ್ಟರುಗಳಲ್ಲಿಯೂ ಬೇರೆ ಬೇರೆ ಥರಗಳಿದ್ದುದು ಆಗ ಗಮನಕ್ಕೆ ಬಂತು. ಹೆಚ್ಚಿನ ಫಿಲ್ಟರುಗಳಲ್ಲಿ ಸೂರ್ಯ ಬಿಂಬ ಮಸುಕು ಬಿಳಿಯಾಗಿ ಕಂಡು ಬರುತಿತ್ತು. ಕೆಲವು ಫಿಲ್ಟರುಗಳಲ್ಲಿ ಹಳದಿಯಾಗಿ, ಕೆಲವದರಲ್ಲಿ ನೀಲವಾಗಿ, ಕೆಲವದರಲ್ಲಿ ಸೂರ್ಯ ಬಿಂಬದೊಂದಿಗೆ ಪ್ರಬಾ ವಲಯವೂ ಕೂಡಿಕೊಂಡಂತೆ ಕಾಣಿಸುತ್ತಿತ್ತು. ಉಪಕರಣ ಸಾಧನಗಳ ಶಿಷ್ಟೀಕರಣಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ ಅದು ವಾಸ್ತವವಾಗಿ ಸಾಧ್ಯವಾಗುವುದಿಲ್ಲ ಎಂದು ಆಗ ನನಗೆ ಅನಿಸಿತು.

ಚಂದ್ರ ಬಿಂಬ ಮುಂದುವರಿದಂತೆ ಸೂರ್ಯನ ಝಳ ಕಡಿಮೆಯಾಯಿತು. ಗಿಡಗಂಟಿಗಳ ನಡುವಿನಿಂದ ತೂರಿ ಹೋಗುವ ಸೂರ್ಯ ರಶ್ಮಿಯಿಂದೀಗ ವೃತ್ತಾಕಾರದ ಬೆಳಕಿನ ಬೊಟ್ಟುಗಳು ಕಾಣಿಸದಾದುವು. ಅಚ್ಚುಕಟ್ಟಾಗಿ ಒಂದಷ್ಟು ಕತ್ತರಿಸಿ ಹೋದ ಬೆಳಕಿನ ವೃತ್ತಗಳು ಅರ್ಥಾತ್ ಪ್ರಬಾ ಚಾಪಗಳು ಕಂಡುವು. ಕಾಗದವನ್ನು ಚುಚ್ಚಿ ಮಾಡಿದ ಸಣ್ಣ ತೂತಿನಿಂದ ಹೋದ ಸೂರ್ಯ ರಶ್ಮಿಯೂ ಇದೇ ತರದ ಪ್ರತಿಬಿಂಬವನ್ನು ತೋರಿಸಿತು. ಅನೇಕರಿಗೆ ಇದು ಮೋಜೆನಿಸಿತು. ಅದು ಸೂರ್ಯನದ್ದೇ ಪ್ರತಿಬಿಂಬ. ಚಂದ್ರ ತಿಂದ ಸೂರ್ಯ ಭಾಗ ವೀಕ್ಷಣೆಗೆ ‘ಮೇಲೆ’ (ಪಶ್ಚಿಮಕ್ಕೆ) ಇತ್ತು. ಆದರೆ ಪ್ರತಿಬಿಂಬದಲ್ಲಿ ಈ ಕಪ್ಪು ಭಾಗ ‘ಕೆಳಗಿತ್ತು’. ಬೆಳಕು ನೇರವಾಗಿ ಸಾಗುವುದನ್ನು ತಲೆ ಕೆಳಗಾದಂತೆ ಕಂಡ ಈ ಪ್ರತಿಬಿಂಬ ಸಾರಿ ಹೇಳುತಿತ್ತು. ಕಾಗದದಲ್ಲಿ ಸೂಕ್ಷ್ಮ ರಂಧ್ರಗಳನ್ನು ಮಾಡಲಾರದವರು ತೋರು ಬೆರಳು ಹೆಬ್ಬೆರಳುಗಳನ್ನು ಮಡಚಿ ಮಾಡಿದ ರಂಧ್ರದಿಂದ ಬೆಳಕು ಹಾಯಿಸಿ ಸೂರ್ಯ ಪ್ರತಿಬಿಂಬವನ್ನು ಕಾಗದದ ತೆರೆಯ ಮೇಲೆ ಮೂಡಿಸಿ ನಗುತ್ತಿದ್ದರು.

ನೋಡು ನೋಡುತ್ತಿದ್ದಂತೆ ಚಂದ್ರ ಬಿಂಬ ಸೂರ್ಯನ ಹೆಚ್ಚಿನ ಭಾಗವನ್ನು ಆವರಿಸಿತ್ತು. ಎಂಟೂ ಕಾಲು ಗಂಟೆಯಾಗಿತ್ತು. ಈ ಹಿಂದೆ ಪೂರ್ಣತೆಯನ್ನು ನೋಡಿದ ಮಿತ್ರರೊಬ್ಬರು ಸಂಜ್ಞಾಸೂಚಕರಾಗಲು ಒಪ್ಪಿದ್ದರು. ಅದಕ್ಕಾಗಿಯೇ ಪೀಪಿ ಕೊಂಡುಕೊಂಡಿದ್ದರು. ಅದರಲ್ಲಿ ಎರಡು ಸಿಳ್ಳು ಹಾಕಿದೊಡನೆ ಫಿಲ್ಟರನ್ನು ತೆಗೆದು ಸೂರ್ಯನನ್ನು ನೇರವಾಗಿ ನೋಡಬೇಕೆಂದೂ ಒಂದು ಸಿಳ್ಳು ಹಾಕಿದೊಡನೆ ಮತ್ತೆ ಫಿಲ್ಟರನ್ನು ಕಣ್ಣೆವೆಯೆದುರು ಹಿಡಿಯಬೇಕೆಂದೂ ಒಡಂಬಡಿಕೆ ಮಾಡಿಕೊಂಡಿದ್ದೆವು.

ಆಗ ನಾವು ಒಬ್ಬರನ್ನೊಬ್ಬರು ನೋಡಿದೆವು. ನಮ್ಮ ಸುತ್ತಲಿನ ಪೊದೆ ಗಿಡಗಳನ್ನು ನೋಡಿದೆವು, ಬಾರೀ ಗೋಡೆಗಳಂತೆ ನಿಂತ ಪ್ರಾಚೀನ ಅರಾವಳಿಯ ಸಾಲುಗಳನ್ನೂ ನಮ್ಮ ಮುಂದಿನ ವಿಶಾಲ ಬಯಲನ್ನೂ ನೋಡಿದೆವು. ಆಗಿನ ಬೆಳಕೇ ವಿಚಿತ್ರವಾಗಿತ್ತು. ಸ್ವಲ್ಪ ಹೊತ್ತಿನ ಹಿಂದೆ ಸೆಕೆಯೆನಿಸುತ್ತಿದ್ದ ಹವೆ ಈಗ ಚಳಿ ಎನಿಸುವಷ್ಟು ತಣ್ಣಗಾಗಿತ್ತು. ಬಾಲಕರಾಗಿದ್ದಾಗ ನಾವು ಬಣ್ಣ ಬಣ್ಣದ ಗ್ಲಾಸ್ ಪೇಪರನ್ನು ಕಣ್ಣೆದುರು ಹಿಡಿದು ಬಣ್ಣದ ಜಗತ್ತನ್ನು ನೋಡುತ್ತಿದ್ದ ನೆನಪಾಯಿತು. ಈಗ ನಮ್ಮ ಸುತ್ತು ಎಲ್ಲವೂ ತೆಳು ಹಳದಿ ಬಣ್ಣದ ಬೆಳಕಿನಿಂದ ನೆನೆಯುವಂತೆ ತೋರಿತು. ಇದು ಉಷಃ ಕಾಲದ ಅಥವಾ ಸಂಧ್ಯಾ ಕಾಲದ ಸೂರ್ಯ ಪ್ರಕಾಶದಂತಿರಲಿಲ್ಲ. ಆಗ ಇಡೀ ಸೂರ್ಯ ಬಿಂಬದಿಂದ ಹೊಮ್ಮುವ ಬೆಳಕು ಬೂ ವಾತಾವರಣವನ್ನು ತೂರಿ ಬರುತ್ತದೆ. ಸೂರ್ಯ ವಾತಾವರಣದ ಮೇಲ್ಪದರುಗಳಿಂದ ಬರುವ ಬೆಳಕು ಮಾತ್ರ ನಮ್ಮನ್ನೀಗ ಬೆಳಗುತ್ತಿತ್ತು. ಈ ರೀತಿಯ ಅನುಭವ ಹಿಂದೆ ಬಂದದ್ದಿಲ್ಲ.

ಆಕಾಶ ಕಪ್ಪಾಗುತ್ತಿತ್ತು. ಪಶ್ಚಿಮ ಭಾಗ ಹೆಚ್ಚು ಕಪ್ಪಾಗಿತ್ತು. ಪೂರ್ವ ದಿಗಂತದಲ್ಲಿ ಮತ್ತೊಮ್ಮೆ ಉಷಃಕಾಲ ಬಂದಂತಿತ್ತು. ನಮ್ಮಲ್ಲೊಬ್ಬರು ತಾವು ತಂದ ಬಿಳಿ ಬಟ್ಟೆಯನ್ನು ನೆಲದ ಮೇಲೆ ಹಾಸಿದ್ದರು. ಪಶ್ಚಿಮದೆಡೆಯಿಂದ ನೆರಳಿನ ಪಟ್ಟೆಗಳು ಅದರ ಮೇಲೆ ಕ್ಷಿಪ್ರವಾಗಿ ಹಾದು ಹೋಗುವುದನ್ನು ಅವರು ಕಂಡರು. ಸೂರ್ಯಚಾಪದಿಂದ ಹೊರಟ ಬೆಳಕು ಚಂದ್ರನ ಅಂಚಿನಿಂದ ಬಾಗಿದಾಗ ಈ ಪರಿಣಾಮ ಉಂಟಾಗುತ್ತದೆ. ಇನ್ನೇನು ಒಂದೆರಡು ಮಿನಿಟುಗಳಲ್ಲಿ ಪೂರ್ಣತೆಯ ಪ್ರಾರಂಭ. ನಾನು ಫಿಲ್ಟರಿನಲ್ಲಿ ಸೂರ್ಯನನ್ನೇ ನೋಡುತ್ತಿದ್ದೆ. ನನ್ನ ಸುತ್ತುಮುತ್ತಲನ್ನು ಸಂಪೂರ್ಣವಾಗಿ ಮರೆತಿದ್ದೆ.

ಪೀಪಿಯ ಎರಡು ಸಿಳ್ಳುಗಳಾದವೇ ಇಲ್ಲವೇ ನಾನರಿಯೆ. ಫಿಲ್ಟರನ್ನು ಕಣ್ಣುಗಳ ಎದುರಿನಿಂದ ಸರಿಸುವಂತೆ ನನ್ನನ್ನು ಸ್ಪುರಿಸಿದ ಪ್ರಚೋದನೆ ಯಾವುದೆಂದು ಸ್ಪಷ್ಟವಾಗಿ ಈಗ ಹೇಳಲು ಆಗುತ್ತಾ ಇಲ್ಲ. ಪೂರ್ಣತೆ ಆರಂಭವಾಗುವ ಕ್ಷಣವನ್ನು ವಾಚು ನೋಡಿ ನಿಶ್ಚಯಿಸಲು ಹೋದರೆ ಆ ಮಾಯಕದ ನೋಟ ಮಾಯವಾಗಬಹುದಿತ್ತು. ಎವೆ ಮುಚ್ಚಿ ಅರೆತೆರೆದು ನೋಡಿದೆ. ಸೂರ್ಯ ಚಾಪ ಮಿರಿಮಿರಿ ಮಿರುಗುವುದೇ ಎಂದುಕೊಳ್ಳುವಷ್ಟರಲ್ಲಿ ಅದು ಮಾಯವಾಗಿ ಹೋಯಿತು. ಪಶ್ಚಿಮ  –  ದಕ್ಷಿಣ ಅಂಚಿನಲ್ಲಿ ಒಂದೆರಡು ಬೆಳಕಿನ ಹುಂಡುಗಳು (ಬೈಲಿ ಮಣಿಗಳು) ಕಂಡುವೆಂದು ತೋರುತ್ತದೆ.

ಅವನ್ನು ಮನಸ್ಸು ಗ್ರಹಿಸುವ ಮೊದಲೇ ಪೂರ್ವದ ಅಂಚಿನಲ್ಲಿ ಗಾಡ ಕಿತ್ತಳೆ ಕೆಂಪಿನ ಬೆಳಕಿನ ಚುಕ್ಕೆ ಚಕ್ಕನೆ ವಿಸ್ತರಿಸಿತು. ಅಷ್ಟೇ ಕ್ಷಿಪ್ರವಾಗಿ ಮತ್ತೆ ಮಾಯವಾಯಿತು. ನನಗೆ ಕಾಣಿಸಿದ್ದು ಕ್ಷಣಿಕವಾದ ವಜ್ರದುಂಗುರ ಎಂದು ಯೋಚಿಸುವ ಮೊದಲೇ ಅದುವರೆಗೆ ಕಾಣದ ನೋಟ ಮೂಡಲಲ್ಲಿ ಕಾಣಿಸಿತು. ಸೂರ್ಯನನ್ನು ಮರೆ ಮಾಡಿದ ಚಂದ್ರ ಬಿಂಬ ಈಗಲೂ ಕಡು ಕಪ್ಪು. ಅದರ ಅಂಚಿನಲ್ಲಿ ನಸುಬೆಳಕಿದೆ. ಆದರೆ ಕಣ್ಣನ್ನು ಸೆಳೆದ ನೋಟ – ಸೂರ್ಯಬಿಂಬದ ಸುತ್ತಲೂ ತೆಳುವಾಗಿ ಹೊಮ್ಮುತ್ತಿದ್ದ ಮಿರುಗು ಬೆಳಕು. ಸೂರ್ಯಬಿಂಬದ ಪೂರ್ವ ಪಶ್ಚಿಮವಾಗಿ ಇದು ಹೆಚ್ಚು ವಿಸ್ತರಿಸಿತ್ತು. ತೆಳು ಬಿಳಿ ಕೆನ್ನೀಲಿಯಂತೆ ಕಾಣಿಸಿರಬೇಕೆಂದು ಮನಸ್ಸು ಹೇಳುತ್ತಿದೆ. ಮುತ್ತು ಹಾಗೆ ಹೊಳೆಯಬಹುದೆ? ಅದು ಸೂರ್ಯ ಬಿಂಬದ ಕಿರೀಟ ಭಾಗ  –  ಕರೋನ.

ದಿನನಿತ್ಯ ಸೂರ್ಯ ಕಂತಿದಾಗ ಮಾಯವಾಗುತ್ತಾನೆ. ಕಂತುವ ಮೊದಲು ಪ್ರಖರತೆಯನ್ನು ಕಳೆದುಕೊಳ್ಳುತ್ತಾನೆ. ಆದರೆ ನಾನೀಗ ನೋಡುತ್ತಿರುವುದು ದಿಗಂತದಿಂದ ಸಾಕಷ್ಟು ಮೇಲಿರುವಂಥ, ಒಂದು ಗಂಟೆಯ ಹಿಂದೆ ಪ್ರಖರವಾಗಿದ್ದು ಈಗ ಇಲ್ಲದಾಗಿರುವಂಥ ಸೂರ್ಯನನ್ನು. ಆದರೂ ಚಂದ್ರನ ಹಿಂದೆ ಇದ್ದೇನೆಂದು ಕಿರೀಟವನ್ನಷ್ಟೇ ಆತ ಕುಣಿಸುತ್ತಿದ್ದಾನೆ! ದಿನನಿತ್ಯವೂ ಕಾಣುವ ಸೂರ್ಯನ ಈ ಅವತಾರ ನನಗೆ ಅಪೂರ್ವ. ಈಗ ನಾನೇ ಆಕಾಶದಲ್ಲಿದ್ದೇನೇನೋ! `ಓ ಸೂರ್ಯ, ನಕ್ಷತ್ರವಾದರೂ ನೀನು ಚಿಕ್ಕೆಯಲ್ಲ. ನಿನ್ನ ಬಿಂಬ, ಬಿಲ್ಲೆ, ಸಣ್ಣದಾಗಿ ಕಂಡರೂ ಬಾರೀ ದೊಡ್ಡವನು. ಹೀಗೆ ನೀನೇ ಈಗ ಮರೆಸಿಕೊಂಡರೂ ಹೊರಬರಲು ತವಕಿಸುವದನ್ನು ಈ ಕ್ಷಣ ನೋಡುವಂತಾಯಿತಲ್ಲ? ನೀನಿಲ್ಲ ಎನ್ನುವುದನ್ನು ಕಲ್ಪಿಸುವುದಕ್ಕೇ ಕಷ್ಟ‘!  –  ಇಂಥ ಬಾವಪರವಶತೆಗೆ ಅದೂ ತಕ್ಕ ಕಾಲ. ಎಷ್ಟೋ ಜನ ಅತ್ತಿರಬೇಕು. ಎಷ್ಟೊ ಜನ ಬೊಬ್ಬಿಟ್ಟಿರಬೇಕು. ನನಗೆ ಯಾವುದೂ ಕೇಳಿಸಲಿಲ್ಲ. ಸೂರ್ಯನ ಪೂರ್ವಕ್ಕೊಂದು, ಪಶ್ಚಿಮಕ್ಕೆ ಇನ್ನೊಂದು  –  ಹೀಗೆ ಬೆಳಕಿನ ಎರಡು ಚಿಕ್ಕೆಗಳು ಕಂಡುವು. ಅವು ಶುಕ್ರ ಮತ್ತು ಬುಧ ಗ್ರಹಗಳಾಗಿದ್ದವು.

ಎಲ್ಲವೂ ಕ್ಷಣಿಕವೆನಿಸುವಂತೆ ಪಶ್ಚಿಮದ ಅಂಚಿನಿಂದ ಕಿತ್ತಳೆ ಕೆಂಪು ಬೆಳಕು ಚಕ್ಕನೆ ಹರಿದು ಹಿಗ್ಗಿ ಮಾಯವಾಯಿತು. ಆಳವಾದ ಚಾಂದ್ರ ಕಣಿವೆಯಿಂದ ತೂರಿ ಬಂದ ಬೆಳಕು ಕಿರಣಿಸಿ ಹೀಗೆ ಕಂಡಿತ್ತು. ಅದು ಮತ್ತೊಂದು `ವಜ್ರದುಂಗುರ‘. ಪೂರ್ಣತೆ ಪ್ರಾರಂಭವಾದುದನ್ನು ಮೊದಲಿಗೆ ಸೂಚಿಸಿದಂತೆಯೇ ಇದು ಪೂರ್ಣತೆಯ ಅಂತ್ಯವನ್ನೂ ಸೂಚಿಸಿತ್ತು. ಪೂರ್ಣತೆಯ ಅವಧಿ ಸುಮಾರು ೫೦ ಸೆಕೆಂಡುಗಳಷ್ಟಿತ್ತು. ಆದರೂ ಅತ್ಯಂತ ಕ್ಷಣಿಕವೆಂದು ಕಂಡಿತ್ತು. ಕಣ್ಣು ನೋಡಿದ್ದನ್ನು ಮನಸ್ಸು ಗ್ರಹಿಸುವುದಕ್ಕಿಂತ ಕ್ಷಿಪ್ರವಾಗಿ ಘಟನೆಗಳು ನಡೆದುಹೋದಂತೆ ಆಗಿತ್ತು. ಎರಡು ವಜ್ರದುಂಗುರಗಳ ಮಧ್ಯದ ನೋಟವನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳಲು ಯತ್ನಿಸಿದರೂ ಅದು ಮರೆಯಾಗುವಂತೆ ತೋರಿತು. ಈ ದೃಷ್ಟಿಯಿಂದ ಅದು ಎಚ್ಚರದಲ್ಲಿದ್ದೂ ಹಗಲುಗನಸಿನಲ್ಲಿದ್ದ ಕನಸಿನ ನೋಟವಾಗಿತ್ತು. ಕಣ್ಣುಮುಚ್ಚಿ ತೆರೆಯುವುದರೊಳಗೆ ಫಿಲ್ಟರನ್ನು ಅಡ್ಡ ಹಿಡಿದಿದ್ದೆ. ಸೂರ್ಯಚಾಪ ಮೇಲಿನಿಂದ (ಪಶ್ಚಿಮದಿಂದ) ಕಾಣಿಸತೊಡಗಿತ್ತು. ಗ್ರಹಣ ಮೋಕ್ಷದ ಹಂತ ಈಗ ಆರಂಭವಾಗಿತ್ತು. ಚಂದ್ರಬಿಂಬ ಪೂರ್ವಕ್ಕೆ ಸರಿಯುತ್ತ ಬಂದಂತೆ ಸೂರ್ಯಬಿಂಬ ಹೆಚ್ಚೆಚ್ಚು ಮುಕ್ತವಾಗುತ್ತ ಪ್ರಖರವಾಗುತ್ತ ಹತ್ತು ಗಂಟೆಯೊಳಗೇ ಗ್ರಹಣ ಮೋಕ್ಷವಾಗಿತ್ತು.

ಹಿಂದಿರುಗಿ ಬರುವಾಗ ಕಳೆದ ಬಾರಿ ಹುಬ್ಬಳ್ಳಿಯಲ್ಲಿದ್ದ ಸನ್ನಿವೇಶಕ್ಕೂ (೧೯೮೦ರ ಸನ್ನಿವೇಶ) ಈ ಬಾರಿಯ ಸನ್ನಿವೇಶಕ್ಕೂ ಇರುವ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಚರ್ಚಿಸಿದೆವು. ಕಳೆದ ಬಾರಿ ಆಕಾಶ ಹೆಚ್ಚು ಕತ್ತಲಾಗಿತ್ತು. (ಪೂರ್ಣತೆಯ ಪಥ ಹೆಚ್ಚು ಅಗಲವಾಗಿದ್ದುದರಿಂದ ಈ ಪಥದ ಹೊರಗಿನಿಂದ ಚೆದರಿ ಮಧ್ಯಕ್ಕೆ ಬರುವ ಬೆಳಕು ಕಡಿಮೆ ಇತ್ತು). ಪಕ್ಷಿಗಳ ಗೊಂದಲಮಯ ವರ್ತನೆ ಹೆಚ್ಚು ಸ್ಪಷ್ಟವಾಗಿತ್ತು. ಎರಡು ವಜ್ರದುಂಗುರಗಳು ಕಳೆದ ಬಾರಿ ಸಂಭವಿಸಿದರೂ ಅನೇಕರಿಗೆ ನೋಡಲಾದದ್ದು ಒಂದೇ. ಕಳೆದ ಬಾರಿ ಕುತೂಹಲದೊಂದಿಗೆ ಭಯವೂ ಮಿಶ್ರವಾಗಿತ್ತು. ಈ ಬಾರಿ ಕುತೂಹಲದೊಂದಿಗೆ ಕಳೆದ ಬಾರಿಯ ನೆನಪಿನಿಂದ ಸ್ಪುರಿಸಿದ ನಿರೀಕ್ಷೆಯಿತ್ತು. ಆದ್ದರಿಂದ ಈ ಬಾರಿ ಹೆಚ್ಚು ಸಂತೋಷಿಸಲು ಅನೇಕರಿಗೆ ಸಾಧ್ಯವಾಯಿತು.

ಅಲ್ವಾರ್‌ನಿಂದ ಹಿಂದಿರುಗುವಾಗ ರೈಲು ಬಂಡಿಯಲ್ಲೊಮ್ಮೆ, ಬಸ್ಸಿನಲ್ಲಿ ಮತ್ತೊಮ್ಮೆ  –  ಹೀಗೆ ಅಸ್ತಮಿಸುವ ಸೂರ್ಯನನ್ನು ಎರಡು ದಿನ, ಎರಡು ಬಾರಿ ನೋಡಿದೆ. ಬೇರೇನೂ ಕೆಲಸವಿಲ್ಲದಿದ್ದುದರಿಂದ ಕಿಂಡಿಯ ಬದಿಯಿಂದ ಒಂದರ್ಧ ಗಂಟೆ ಬಿಟ್ಟು ಬಿಟ್ಟು ಸೂರ್ಯನನ್ನು ನೋಡಿದೆ. ಮೊದಲ ಬಾರಿ ಸೂರ್ಯನಿಗೂ ನನಗೂ ಮಧ್ಯೆ ಕರಿಮೋಡದ ರಾಶಿಯಿತ್ತು. ಸೂರ್ಯನಿಂದ ಅದಕ್ಕೆ ಒಂದಷ್ಟು ಅಗಲದ ಮಿರುಗುವ ಅಂಚು ಬಂದಿತ್ತು. ಮೋಡ ಕರಗಿದಾಗ ಸೂರ್ಯನ ಉಜ್ವಲ ಕೆಂಪು ಬೆಳಕು ತೂರಿ ಬರುತ್ತಿತ್ತು. ಎರಡನೆಯ ಬಾರಿ ಮೋಡ ದಪ್ಪಗಿರಲಿಲ್ಲ. ಅಲ್ಲಲ್ಲಿ ಸೂರ್ಯದೂಲಗಳನ್ನು ಹೊರಹೋಗಲು ಅದು ಬಿಡುತ್ತಿತ್ತು. ಭೂಮಿಯನ್ನು ತಟ್ಟಲು ಬರುವಂತೆ ಅವು ತೋರುತ್ತಿದ್ದುವು. ದೂಲಗಳು ಕೆಳಗಿಳಿದಂತೆ ಅಗಲವಾಗುತ್ತಿದ್ದುವು. ಮರಗಳು ಅಡ್ಡವಾದಾಗ ಎಲೆಗಳ ನಡುವಿನಿಂದ ಕಿರಣಿಸಿ ಮಾಯವಾಗುವ ಸೂರ್ಯನಿಗೂ ವಜ್ರಕಾಂತಿಯಿತ್ತು. ಆದರೆ ಅಲ್ವಾರ್‌ನಲ್ಲಿದ್ದ ಕ್ಷಣಿಕತೆ ಇಲ್ಲಿ ಇರಲಿಲ್ಲ. ಸೂರ್ಯನ ಉದಯಾಸ್ತ ಕಾಲಗಳಲ್ಲೂ ನಾವು ಸೊಬಗಿನ ವಿದ್ಯಮಾನಗಳನ್ನು ಕಾಣುತ್ತೇವೆ. ದಿನದಿನ ಅವು ಕಾಣಿಸಿದರೂ ಒಂದು ದಿನದ ವಾತಾವರಣ ಮತ್ತು ಸನ್ನಿವೇಶ ಮತ್ತೊಂದು ದಿನ ಇರಬೇಕೆಂದಿಲ್ಲ. ಆದರೆ ಅವು ಪ್ರತಿದಿನ ಸುಲಭವಾಗಿ ತೋರುವುದರಿಂದ ವಿರಳ ಘಟನೆಗಳಾಗಿರುವುದಿಲ್ಲ, ಆಸಕ್ತಿಯನ್ನು ಅನುದಿನ ಕೆರಳಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಖಗ್ರಾಸ ಸೂರ್ಯಗ್ರಹಣಗಳ ವಿರಳತೆಯಿಂದಾಗಿಯೇ ಅವುಗಳ ಪೂರ್ಣತೆಯ ಬಗ್ಗೆ ನಮ್ಮ ಕುತೂಹಲ ಮೂಡುತ್ತದೆ. ಮತ್ತೊಂದು ವಿಷಯವನ್ನೂ ನಾವು ಗಮನಿಸಬಹುದು. ಸೂರ್ಯನ ಉದಯಾಸ್ತಗಳಲ್ಲಿ ಸೂರ್ಯರಶ್ಮಿ ಮತ್ತು ಬೂವಾತಾವರಣದ ಅಂತರವರ್ತನೆಯಿಂದ ಉಂಟಾಗುವ ನೋಟ ನಮ್ಮ ಪಾಲಿಗೆ ಸಿಗುತ್ತದೆ. ಖಗ್ರಾಸ ಸೂರ್ಯಗ್ರಹಣ ಕಾಲದ ಪೂರ್ಣತೆಯ ದೃಶ್ಯದ ಮೇಲೆ ಬೂವಾತಾವರಣದ ಪರಿಣಾಮ ಅಷ್ಟೇ ಅಲ್ಲದೆ ಚಂದ್ರನ ಮೈಗುಣ, ಆಕಾರ ಮತ್ತು ಮೈಗಾತ್ರಗಳ ಪ್ರಬಾವವೂ ಇದೆ.

೧೯೯೯ನೇ ಆಗಸ್ಟ್ ೧೧ರಂದು ಅಪರಾಹ್ನ ಮತ್ತೆ ಪೂರ್ಣತೆಯ ಸನ್ನಿವೇಶ ಗುಜರಾತ್, ಮಹಾರಾಷ್ಟ್ರ, ಆಂಧ್ರ, ಒರಿಸ್ಸಾಗಳಲ್ಲಿ ಕಾಣಿಸಲಿದೆ. ಆದರೆ ಆಗ ಮಳೆಗಾಲ ಇನ್ನೂ ಮುಗಿದಿರುವುದಿಲ್ಲ. ಆಕಾಶದಲ್ಲಿರಬಹುದಾದ ಮೋಡಗಳು ಚಂದ್ರಛಾಯೆಯ ಪರಿಣಾಮವನ್ನು ಸುಟವಾಗಿ ತೋರಗೊಡಬಲ್ಲವೇ ನೋಡಬೇಕು.

* * *