೧೯೯೫ರ ಪೂರ್ಣ ಸೂರ್ಯಗ್ರಹಣದ ಬಳಿಕ, ಆಸಕ್ತರ ಗಮನ ೧೯೯೯ರಲ್ಲಿ ಚಂದ್ರನ ನೆರಳು ಸಾಗಲಿರುವ ದಾರಿಯ ಕಡೆ ಹರಿದಿತ್ತು. ವೀಕ್ಷಣೆಗೆ ಯಾವ ಜಾಗ ಅನುಕೂಲ? ಯಾವ ಜಾಗದಲ್ಲಿ ಆಗಸ್ಟ್ ೧೧ರ ಸಂಜೆ ಅವಕಾಶ ಶುಬ್ರವಾಗಲಿರುವ ಸಂಭವ ಹೆಚ್ಚು? ಹಿಂದಿನ ಹವಾದಾಖಲೆಗಳು ಏನನ್ನು ತೋರಿಸುತ್ತವೆ? ಮಾನ್ಸೂನ್ ಮಳೆಗಾಳಿಗಳ ದಾರಿ ಆಗ ಹೇಗಿರುತ್ತದೆ? ಇಂಥ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ವಿಶ್ವಸನೀಯವಾದ ಉತ್ತರಗಳನ್ನು ಪಡೆಯಲು ಪರಿಣತರು ಪ್ರಯತ್ನಿಸಿದರು. ಅದೇನಿದ್ದರೂ ಹವೆಯ ಚಂಚಲತೆಯ ಮೇಲೆ ನಿಯಂತ್ರಣ ಸಾಧಿಸಲು ಕಷ್ಟ ತಾನೆ? ಆದ್ದರಿಂದ ಬಾರತೀಯ ವಿಜ್ಞಾನಿಗಳ ಒಂದು ತಂಡ ತಮ್ಮ ವೀಕ್ಷಣೆ  –  ಪ್ರಯೋಗಗಳಿಗಾಗಿ ಇರಾನ್‌ಗೆ ಹೋಯಿತು. ಎಷ್ಟೋ ಜನ ತಮಗೆ ಅನುಕೂಲವಾದ ಜಾಗಗಳಲ್ಲಿ, ಆಂಶಿಗವಾಗಲೀ ಸಂಪೂರ್ಣವಾಗಲೀ ಗ್ರಹಣವನ್ನು ನೋಡಲು ನಿಂತರು.

ಸುರಕ್ಷಿತವಾಗಿ ನೋಡಿದಾಗ ಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ಕಂಡು ಬರುವ ವಿವಿಧ ದೃಶ್ಯಗಳ ಬಗ್ಗೆ ಜನರಲ್ಲಿ ಈ ಬಾರಿ ವ್ಯಾಪಕ ತಿಳಿವಳಿಕೆ ಹರಡಿತ್ತು. ನೇರ ನೋಡದವರೂ ಟೆಲಿವಿಷನ್ ಕಾರ್ಯಕ್ರಮ ನೋಡಿ ಈ ಬಗ್ಗೆ ತಿಳಿದಿದ್ದರು. ಸೂರ್ಯ ಬಿಂಬದ ಎದುರು ಬಂದಾಗಲಷ್ಟೇ ಕಪ್ಪಾಗಿ ಕಂಡು ಬರುವ ಚಂದ್ರದ ಬಿಂಬ, ಸೂಕ್ಷ್ಮ ರಂಧ್ರಗಳ ಮೂಲಕ ಬಿಸಿಲು ತೂರಿ ಹೋದಾಗ ಕಂಡುಬರುವ ಚಾಪಾಕೃತಿಯ ಸೂರ್ಯ ಪ್ರತಿಬಿಂಬ, ಮಸುಕಾಗುವ ಬಿಸಿಲು, ಚಂದ್ರನ ಕೊರಕಲು ಅಂಚಿನಿಂದ ಹೊಳೆಯುವ ಬೈಲಿಮಣಿ  –  ವಜ್ರದುಂಗುರ, ಸೂರ್ಯ ಬಿಂಬ ಪೂರ್ತಿಯಾಗಿ ಚಂದ್ರಬಿಂಬದಿಂದ ಆವರಿಸಲ್ಪಟ್ಟಾಗ ಬೆಳಕಿನ ತೀವ್ರತೆ ಮಿಲಿಯನ್ ಪಟ್ಟು ಕಡಿಮೆಯಾಗುವ ಹಿನ್ನೆಲೆಯಲ್ಲಿ ಹೊಳೆಯುವ ಕರೋನ  –  ಇವೆಲ್ಲವನ್ನೂ ನೋಡುವ ನಿರೀಕ್ಷೆ ಇಟ್ಟುಕೊಂಡವರು ಚಂದ್ರನ ಅಂಬ್ರ ನೆರಳು ಬೀಳುವ ತಾಣಗಳಿಗೆ ಹೋದರು. ಮಳೆಗಾಲದ ಮಧ್ಯದಲ್ಲೇ ಗ್ರಹಣದ ಶ್ರೀಯ ಬಂದುದರಿಂದ ದೂರ ಪ್ರಯಾಣ ಮಾಡಲು ಅನೇಕರು ಡೋಲಾಯಮಾನ ಸ್ಥಿತಿಯಲ್ಲಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ವಿಜ್ಞಾನ ತಂತ್ರಜ್ಞಾನ ಸಂವಹನದ ರಾಷ್ಟ್ರೀಯ ಮಂಡಲಿ ನೀಡಿದ ಪ್ರೋತ್ಸಾಹದಿಂದ ಕರ್ನಾಟಕದ ಕೆಲವು ವಿದ್ಯಾರ್ಥಿಗಳು ಇಂಥ ಸಂಶಯ ಸ್ಥಿತಿಗೆ ಒಳಗಾಗದೆ ಗುಜರಾತ್‌ನ ಪಶ್ಚಿಮ ಭಾಗಕ್ಕೆ ಪಾಕಿಸ್ತಾನದ ಗಡಿಗೆ ಹತ್ತಿರವಿರುವ ಲಾಖ್‌ಪತ್‌ಗೆ ಹೊರಟರು. ಬೆಂಗಳೂರಿನಿಂದ ಅಹಮ್ಮದಾಬಾದ್, ಅಹಮ್ಮದಾಬಾದ್‌ನಿಂದ ಬುಜ್ (ಇದು ಕಚ್ಛ್ ಪ್ರದೇಶದಲ್ಲಿರುವ ಒಂದು ನಗರ), ಬುಜ್‌ನಿಂದ ಲಾಖ್‌ಪತ್  –  ಇದು ಅವರ ದಾರಿ, ಮುಖ್ಯ ಶಿಬಿರ ಬುಜ್‌ನಲ್ಲಿ, ಲಾಖ್‌ಪತ್‌ನಲ್ಲಿ ಏನಿದ್ದರೂ ಗ್ರಹಣಕಾಲದ ಹಾಜರಿ. ಅದು ಎರಡೂ ಕಾಲು ಗಂಟೆಗಳಿಗಿಂತ ಹೆಚ್ಚಿರಲಿಲ್ಲ.

ಗ್ರಹಣದ ಹಿಂದಿನ ದಿನ ಬುಜ್ ನಗರದ ನೂರಾರು ವಿದ್ಯಾರ್ಥಿಗಳೊಂದಿಗೆ ಭಾರತದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳೂ ಕೂಡಿ ಬಾರೀ ಮೆರವಣಿಗೆ ನಡೆಸಿದರು. ‘ಗ್ರಹಣ ನೋಡೋಣ ಬನ್ನಿ’  –  ಅವರ ಮುಖ್ಯ  ಘೋಷಣೆಯಾಗಿತ್ತು. ನಗರದ ಅಗಲ ಕಿರಿದಾದ ಮತ್ತು ಅಂಕುಡೊಂಕಾದ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಗ್ರಹಣ ನೋಡಲು ತಮ್ಮ ಊರಿಗೆ ಬೇರೆ ಬೇರೆ ಕಡೆಗಳಿಂದ ವಿದ್ಯಾರ್ಥಿಗಳು ಬಂದುದರ ಅರಿವು ಅಲ್ಲಿಯ ನಾಗರಿಕರಿಗೆ ಆಯಿತು. ಬುಜ್ ನಗರದ ಹಳೆಯ ರತ್ತೆಗಳಿಗೂ ಮೈಸೂರು ಬೆಂಗಳೂರು ನಗರಗಳ ಹಳೆಯ ರಸ್ತೆಗಳಿಗೂ ಅಗಲ, ಆಕಾರಗಳಲ್ಲಿರುವ ವ್ಯತ್ಯಾಸಗಳು ಕೇವಲ ಮೇಲುನೋಟಕ್ಕೆ ಸ್ಪಷ್ಟವಾಗುತ್ತದೆ. ರಸ್ತೆ, ನಿವಾಸಗಳ ನಿರ್ಮಾಣಗಳನ್ನು ಒಳಗೊಂಡ ನಗರ ಯೋಜನೆಯ ವಿವರಗಳು ಆಯಾ ಜಾಗದ ಬೂಗುಣ ಮತ್ತು ವಾಯುಗುಣಗಳನ್ನು ಅವಲಂಬಿಸಿವೆ. ಭಾರತದ ವಿವಿಧ ಪ್ರದೇಶಗಳಲ್ಲಿ ಇವು ಒಂದೇ ತೆರನಾಗಿಲ್ಲ. ಮರಳುಗಾಡು ಪ್ರದೇಶದಲ್ಲಿರುವ ಬುಜ್ ನಗರದ ವಿಶಿಷ್ಟ ರಸ್ತೆಗಳು ಹಾಗೂ ಅವುಗಳ ಅಂಚುಗಳಲ್ಲೇ ಎದ್ದು ನಿಂತಿರುವ ಎತ್ತರದ ಸಾಲು ಕಟ್ಟಡಗಳು ತಮ್ಮ ಮಿತಿಯೊಳಗೆ ಹಿತವಾದ ವಾಯುಗುಣವನ್ನು ಕಾಪಾಡಲು ಸಹಾಯಕವಾಗುತ್ತವೆ ಎಂಬುದನ್ನು ರಸ್ತೆ ಆಕಾರದ ಬಗ್ಗೆ ಕುತೂಹಲಗೊಂಡ ಕೆಲವು ವಿದ್ಯಾರ್ಥಿಗಳಾದರೂ ಪರಿಣತರಿಂದ ತಿಳಿದರು.

ಗ್ರಹಣದ ಹಿಂದಿನ ಎಂಟು ಹತ್ತು ದಿನಗಳಿಂದಲೂ ಆಕಾಶದಲ್ಲಿ ಸೂರ್ಯ ಕಾಣಿಸಿದ್ದೇ ಕಡಿಮೆ. ಮೆರವಣಿಗೆಯಲ್ಲಿ ಹೋಗಿ ಗ್ರಹಣವನ್ನು ನೋಡಲು ವಿದ್ಯಾರ್ಥಿಗಳು ಸಾಮೂಹಿಕ ಕರೆ ನೀಡಿದರೂ ಈ ಬಾರಿ ಆ ಸಂದರ್ಭ ತಪ್ಪಿಹೋಗುವ ಆತಂಕವೂ ಅವರಲ್ಲಿ ಮನೆ ಮಾಡಿತ್ತು. ೧೦ನೇ ತಾರೀಕಿನ ದಿನ ಸಂಜೆ ಗಡಿಯಲ್ಲಿ ಪಾಕಿಸ್ತಾನದ ವಿಮಾನವನ್ನು ಭಾರತದ ವೈಮಾನಿಕ ಬಲ ಹೊಡೆದುರುಳಿಸಿದ ಸುದ್ದಿ ಬಂತು. ಅದರೊಂದಿಗೆ ಲಾಖ್‌ಪತ್‌ಗೆ ಗ್ರಹಣ ವೀಕ್ಷಣೆಗಾಗಿ ಸಾಗುವ ಯೋಚನೆಯೂ ದೂರ ಸರಿಯಿತು.

ಸುಮಾರಾಗಿ ಪೂರ್ಣತಾ ಪಥದ ಮಧ್ಯದಲ್ಲಿರುವ ಭಿರಂಡೇರಿಯ ಮರಳುಗಾಡಿನಲ್ಲಿರುವ ಹೊಡ್ಕ ಎಂಬ ತಾಣಕ್ಕೆ ವಿದ್ಯಾರ್ಥಿಗಳೆಲ್ಲರೂ ಆಗಸ್ಟ್ ೧೧ರ ಮಧ್ಯಾಹ್ನದ ನಂತರ ತೆರಳಿದರು. ಗ್ರಹಣದ ಪ್ರತೀಕವನ್ನು ಮುದ್ರಿಸಿದ ಬನಿಯನ್‌ಗಳನ್ನು ಅವರು ಧರಿಸಿದ್ದರು. ಗ್ರಹಣ ವೀಕ್ಷಣೆಗಾಗಿ ಕನ್ನಡಕಗಳನ್ನು ಪಡೆದಿದ್ದರು. ಗ್ರಹಣ ಹೇಗೆ ಕಾಣಿಸುವುದೋ ಅವರಿಗೆ ಗೊತ್ತಿರಲಿಲ್ಲ. ಆದರೆ ಅಂದು ಅದರ ಆಚರಣೆಗೇನೂ ತೊಂದರೆ ಇರಲಿಲ್ಲ.

ಗ್ರಹಣ ಸ್ಪರ್ಶದ ಮೊದಲೇ, ಸುಮಾರು ಎರಡು ಗಂಟೆಗಳ ಬಸ್ ಪ್ರಯಾಣದ ಬಳಿಕ, ವಿದ್ಯಾರ್ಥಿಗಳು ಹೊಡ್ಕವನ್ನು ತಲುಪಿದ್ದರು. ಜೀವನದಲ್ಲಿ ಮೊದಲ ಬಾರಿಗೆ ಅವರು ಗ್ರಹಣ ನೋಡಲು ಬಂದಿದ್ದರು. ಆದರೇನು? ಸೂರ್ಯ ಮಾತ್ರ ಮೋಡಗಳ ಹಿಂದೆ ಅವಿತಿಟ್ಟುಕೊಂಡಿದ್ದ.

ಹೊಡ್ಕದ ಮರಳುಗಾಡಿನಲ್ಲಿ ಒಂದೆರಡು ಸರಕಾರಿ ಕಟ್ಟಡಗಳು ಇದ್ದುವು. ಒಂದರ ತಾರಸಿಯ ಮೇಲೆ ಒಂದೆರಡು ತಂಡಗಳು ಪೋಟೋ ತೆಗೆಯಲು ಸನ್ನದ್ದವಾಗಿ ಕುಳಿತಿದ್ದುವು. ನೂರಾರು ಜನ ಮರಳು ನೆಲದ ಮೇಲೆ ಅತ್ತಿತ್ತ ಅಡ್ಡಾಡುತ್ತಿದ್ದರು. ಅಲ್ಲಲ್ಲಿ ಮುಳ್ಳು ಗಿಡಗಂಟೆಗಳು ಸಾಕಷ್ಟು ಎತ್ತರವಾಗಿಯೇ ಬೆಳೆದಿದ್ದುವು. ಬಿಸುವ ಗಾಳಿಗೆ ಮರಳು  –  ಧೂಳು ರಾಶಿ ನೆಲದಿಂದ ಏಳುತ್ತಿತ್ತು. ವೀಕ್ಷಣೆಗಾಗಿ ಜನರನ್ನು ತಂದ ಕಾರು, ಬಸ್ಸುಗಳು ಚಲಿಸಿದಾಗಲೆಲ್ಲ ದೂಳು ರೊಯ್ಯನೆ ಹಾರಿ ಕಣ್ಣು ಎವೆ ತೆರೆಯುವುದಕ್ಕೆ ಕಷ್ಟವಾಗುತ್ತಿತ್ತು.

ಅಲ್ಲೊಂದು ಮರಳ ದಿನ್ನೆಯ ಕಡೆಯಿಂದ ದೊಡ್ಡ ಸದ್ದಿನಲ್ಲಿ ಸ್ಟಿರಿಯೊ ಸಂಗೀತ ಕೇಳಿ ಬರುತ್ತಿತ್ತು. ಡೈನಮೊ ಮತ್ತು ಧ್ವನಿವರ್ಧಕಗಳನ್ನು ಸ್ಥಾಪಿಸಿ ವಾದ್ಯ ಸಂಗೀತದ ರೆಕಾರ್ಡನ್ನು ನುಡಿಸುತ್ತಿದ್ದರು. ಗುಂಪು ಗುಂಪಾಗಿ ಅಥವಾ ಒಬ್ಬೊಬ್ಬರಾಗಿ ವಿದೇಶೀಯರು ಕುಣಿಯುತ್ತಿದ್ದರು. ತಲೆ ಬೋಳಿಸಿದವರು, ಜುಟ್ಟಿಟ್ಟವರು, ಕನ್‌ಪ್ಯೂಸಿಯಸ್ ಮೀಸೆಯವರು ನಾನಾ ಉಡುಪುಗಳಿಂದ ಇತರರ ಗಮನ ಸೆಳೆಯುತ್ತಿದ್ದರು. ದಂಡವನ್ನು ಆಕಾಶದಲ್ಲಿ ಕುಣಿಸಿ ಕಾಲುಗಳ ಮಧ್ಯೆ ತೂರಿಸಿ ಮೇಲಕ್ಕೆ ಹಾರಿಸಿ ಕೈಯಿಂದ ಬೀಳಬಿಟ್ಟು ತೇಲಿಸಿ ಏನೇನೋ ಚಮತ್ಕಾರಗಳನ್ನು ಮಾಡುತ್ತಿದ್ದರು. ಉದ್ದವಾದ ಲಾಡಿಯನ್ನು ಗಾಳಿಗೆ ಹಿಡಿದು ಮೇಲೆ ಕೆಳಗೆ ಸುತ್ತ ಮುತ್ತ ಹಾರಿಸುತ್ತಿದ್ದರು. ಗ್ರಹಣ ನೋಡಲು ಬಂದ ಅನೇಕ ಜನ ಬಿಳಿ ಹೆಣ್ಣು  –  ಗಂಡುಗಳು ನಡೆಸುವ ಈ ಚಮತ್ಕಾರಗಳನ್ನು ನೋಡುತ್ತಾ ‘ಅಹಾ, ಓಹೋ’ ಎಂದು ಮೆಚ್ಚುಗೆಯ ಸ್ವರ ಹೊರಡಿಸುತ್ತಿದ್ದರು. ಇದಾವುದರ ಪರಿವೆ ಇಲ್ಲದವರಂತೆ ಬೇರೆ ಬೇರೆ ತಂಡಗಳು ಕುಣಿಯುತ್ತಿದ್ದುವು. ಕುಣಿಯದ ಕೆಲವರು ನಿಂತಲ್ಲೇ ಕಾಲನ್ನೋ ಸೊಂಟವನ್ನೋ ಓಡಿಸುತ್ತಿದ್ದರು. ಬಂದ ಅವರು ಗ್ರಹಣ ಕಾಲದಲ್ಲಿ ಇಲ್ಲಿ ಸೇರಿದ್ದರು. ಕರ್ನಾಟಕ ಬಪ್ಪನಾಡಿನಂಥ ಕೆಲವು ದೇವಾಲಯಗಳಲ್ಲಿ ರಥೋತ್ಸವದ ಸಮಯ ಡೋಲು ಬಡಿಯುತ್ತ ಗುಂಪು ಗುಂಪು ಜನ ಗಂಟೆಗಟ್ಟಲೆ ಕುಣಿಯುವುದುಂಟು. ಕಚ್ಛ್‌ನ ಮರಳುಗಾಡಿನಲ್ಲಿ ಅಂದು ಗ್ರಹಣೋತ್ಸವವೇನೋ! ಆಕಾಶದಲ್ಲಿ ಅಡಗಿದ ಸೂರ್ಯನ ವಿಶಿಷ್ಟ ನೋಟದ ಪ್ರತೀಕ್ಷೆಯಲ್ಲಿ ವಿದೇಶೀ ಜನ ಕುಣಿಯುವಂತೆ ಕಂಡಿತು.

ವಾಚನ್ನು ನೋಡಿ ಗ್ರಹಣ ಸ್ಪರ್ಶದ ಕಾಲಕ್ಕೆ ಕೆಲವರು ಚಪ್ಪಾಳೆ ತಟ್ಟಿದರು. ಪಶ್ಚಿಮ ಆಕಾಶದಲ್ಲಿ ರಾಶಿ ಮೋಡಗಳ ಹಿಂದೆ ಸೂರ್ಯ ಅವಿತಿದ್ದವನು ಹೊರಗೆ ಬಂದಿರಲಿಲ್ಲ.

ಆರು ಗಂಟೆ ಸಮೀಪಿಸುತ್ತಿದ್ದಂತೆ ಪೂರ್ಣತೆಯ ಆರಂಭ ಕ್ಷಣ ಸಮೀಪಿಸುತ್ತಿತ್ತು. ವಾತಾವರಣದ ದೃಶ್ಯತೆ ಕಡಿಮೆಯಾಗುತ್ತಿತ್ತು. ನಿರಾಸೆಯೇ ಕಟ್ಟೊಡೆದಂತೆ ಯಾರೋ ಸೂರ್ಯನನ್ನು ದೊಡ್ಡಸ್ವರದಲ್ಲಿ ಕರೆದರು  –  ‘ಕಮಾನ್’. ಮರಳುಗಾಡಿನ ಗಾಳಿ ಅದನ್ನು ಬಹಳ ದೂರ ಒಯ್ದಿರಬಹುದು. ಸೂರ್ಯ ಉತ್ತರಿಸಲಿಲ್ಲ!

ಆದರೆ ಒಮ್ಮೆಲೆ ಕತ್ತಲು ಕವಿಯಿತು. ಪೂರ್ಣತೆಯ ಆರಂಭ ಸದ್ದು ಗದ್ದಲಗಳಿಲ್ಲದೆ ನಡೆದಿತ್ತು. ಆಕಾಶದಲ್ಲಿ ಕಂಡು ಬರದಿದ್ದರೂ ಸೂರ್ಯಬಿಂಬವನ್ನು ಪೂರ್ಣವಾಗಿ ಅಡಗಿಸಿದ ಚಂದ್ರ ಬಿಂಬವನ್ನು ಮನಸ್ಸು ಚಿತ್ರಿಸಿತು. ಮರಳುಗಾಡು ಇಡೀ ನಿಶ್ಶಬ್ದ. ವಿದೇಶೀಯರ ಕುಣಿತವು ಇಲ್ಲ. ಸಂತೀರವೂ ಇಲ್ಲ! ಮರಗಳ ಕಡೆ ಹಾರಿ ಕುಳಿತ ಕಾಗೆ, ಬಾನಾಡಿಗಳ ಸದ್ದಿಲ್ಲ. ಕತ್ತಲು ಹೇಗೆ ಕವಿಯಿತು, ಯಾವ ದಿಕ್ಕಿನಿಂದ ಕವಿಯಿತು ಎಂದು ಗ್ರಹಿಸಿಕೊಳ್ಳುವ ಮೊದಲೇ ಬೆಳಕು ಮಾಯವಾಗಿತ್ತು. ಐದಾರು ಮೀಟರ್ ದೂರದಲ್ಲಿರುವ ವ್ಯಕ್ತಿಯ ಮುಖ ಚಹರೆಯೂ ಸ್ಪಷ್ಟವಾಗಿ ಗೋಚರಿಸದಷ್ಟು ಕತ್ತಲೆ. ಪ್ರಾಯಶಃ ಎಲ್ಲರೂ ಅದನ್ನು ಮೌನವಾಗಿ ಆಹ್ಲಾದಿಸಿದರು. ಅದು ಒಂದೇ ಮಿನಿಟು, ‘ಆಹಾ, ಎಂಥ ಸುಖ’ ಎನ್ನುವಷ್ಟರಲ್ಲೇ ಪಶ್ಚಿಮದಲ್ಲಿ ಬೆಳಕು ಹರಿಯಿತು. ಆ ಕ್ಷಣ, ಮುಂಜಾನೆಯ ಮೂಡಲೇ ಪಶ್ಚಿಮಕ್ಕೆ ಸರಿದು ನಿಂತಂತಿತ್ತು  –  ಸೂರ್ಯ ಮಾತ್ರ ಉದಯಿಸಿರಲಿಲ್ಲ! ಮಣಿ, ವಜ್ರ, ಕಿರೀಟಗಳ ಯಾವ ಸಂಭ್ರಮವೂ ಇಲ್ಲದೆ ಗ್ರಹಣದ ಪೂರ್ಣತೆಯ ಹಂತ ಮುಗಿದಿತ್ತು. ಗ್ರಹಣ ಮೋಕ್ಷಕ್ಕೆ ಕಾಯದೆ ಜನ ಸಂದಣೆ ಬಿರಿಯತೊಡಗಿತು.

ಕಳೆದ ಬಾರಿ (೧೯೯೫) ಗ್ರಸ್ತ ಸೂರ್ಯನನ್ನು ನೋಡಿದವರೊಬ್ಬರು ಬಾವುಕರಾಗಿ ‘ದೇವರನ್ನು ಕಂಡೆ’ ಎಂದಿದ್ದರಂತೆ. ಅಂಥವರೊಬ್ಬರು ಈ ಬಾರಿ ಕಚ್ಛ್‌ಗೆ ಬಂದು ನೋಡಿದ್ದರೆ ‘ಕತ್ತಲೆ ಮಾಡಿ ಮುಳುಗುವುದನ್ನು ಕಂಡೆ’ ಎನ್ನುತ್ತಿದ್ದರೇನೊ.

ನೋಡಬಂದ ವಿದ್ಯಾರ್ಥಿಗಳು ಪರಸ್ಪರ ಕೇಳಿಕೊಂಡರು. ‘ಹೇಗಿತ್ತು?’ ‘ಕತ್ತಲು ತುಂಬ ಚೆನ್ನಾಗಿತ್ತು’, ‘ಇಂಥ ಕ್ಷಣಿಕ ಕತ್ತಲೆಯನ್ನು ಕಂಡಿರಲಿಲ್ಲ’. ‘ಸೂರ್ಯ ಕಾಣಿಸಿಕೊಂಡಿದ್ದಿದ್ದರೆ ನಾವು ಬಾಗ್ಯಶಾಲಿಗಳಾಗಿರುತ್ತಿದ್ದೆವು’, ‘ಪೂರ್ಣ ತೃಪ್ತಿಯಿಲ್ಲ, ಆದರೆ ಇಲ್ಲಿಗೆ ಬಂದುದರಿಂದ ಗ್ರಹಣವನ್ನು ಸ್ವಲ್ಪವಾದರೂ ಅನುಭವಿಸುವಂತಾಯಿತು’. ‘ತೆಂಕಣ ಗಾಳಿಯಿಂದ ದೂಡಿಸಿಕೊಂಡು ಬಂದ ರಾಶಿರಾಶಿ ಮಳೆಮೋಡಗಳು ಒಮ್ಮೆಲೆ ಆಕಾಶವನ್ನು ತುಂಬಿದಾಗ ನಮ್ಮ ಊರಲ್ಲಿ ನಡು ಹಗಲಿನಲ್ಲಿ ಕತ್ತಲೆ ಕಟ್ಟಿದ್ದನ್ನು ನೋಡಿದ್ದೇನೆ. ಕತ್ತಲಾಯಿತೆಂಬ ಭ್ರಮೆಯಿಂದ ಆಗ ಪಕ್ಷಿಗಳು ಗೂಡು ಸೇರಿದ್ದನ್ನೂ ಕಂಡಿದ್ದೇನೆ. ಆದರೆ ಆ ಕತ್ತಲೂ ಇಷ್ಟು ಗಾಡವಲ್ಲ. ಆಗ ಗುಡುಗಿನ ಶಬ್ದ, ಮಿಂಚಿನ ಬೆಳಕು ಬೇರೆ. ಇಂದಿನದೋ ಆದಾವುದೂ ಇಲ್ಲದ ಪ್ರಶಾಂತವಾದ ಮಿನಿಟಿನ ಕತ್ತಲೆ’! ಒಬ್ಬೊಬ್ಬರೂ ತಮ್ಮ ತಮ್ಮ ಶಬ್ದ ಚಿತ್ರಗಳನ್ನು ಮೆತ್ತುತ್ತಿದ್ದರು.

ಸಾಯಂಕಾಲ ಏಳೂ ಕಾಲು ಗಂಟೆ ಹತ್ತು ಮಿನಿಟಾದರೂ ಸೂರ್ಯಾಸ್ತವಾಗಿರಲಿಲ್ಲ. ಭಾರತದ ಪಶ್ಚಿಮ ಅಂಚಿನಲ್ಲಿ ನಮ್ಮ ದೇಶದ ಉಳಿದ ಭಾಗಗಳಿಗಿಂತ ಅನಂತರವಷ್ಟೇ ಅಸ್ತಮಾನ?. ಆದ್ದರಿಂದ ಈ ವಿಳಂಬ! ಹೊಡ್ಕದಿಂದ ಹಿಂದಿರುಗುವಾಗ ಸೂರ್ಯ ಹೊಂಬಣ್ಣದಿಂದ ಹೊಳೆಯುವುದನ್ನು ವಿದ್ಯಾರ್ಥಿಗಳು ನೋಡಿದರು. ಚಲಿಸುವ ಬಸ್ಸಿನಲ್ಲಿ ಕುಳಿತಲ್ಲಿಂದ ಒಬ್ಬರಿಗೊಬ್ಬರು ಅದನ್ನು ಕಿಂಡಿಯಲ್ಲಿ ತೋರಿಸಿದರು. ಎಂಥ ಚಂದ! ಗ್ರಹಣಕ್ಕೆ ಮೊದಲೇ ಹೀಗೆ ಸೂರ್ಯ ಹೊರಬಂದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಹಳಹಳಿಸಿದರು.

ಗ್ರಹಣ ಹಿಡಿದಾಗ ಸೂರ್ಯನನ್ನು ರಾಕ್ಷಸನಿಂದ ಬಿಡಿಸಲೆಂಬಂತೆ ಹಿಂದೆ ಡೋಲು – ಜಾಗಟೆ ಬಡಿದು, ನಗಾರಿ ಊರಿ ಉಪವಾಸ ಕೂತು, ಧ್ಯಾನಿಸಿ ನಾನಾ ತರದಲ್ಲಿ ಜನ ಆಚರಿಸುತ್ತಿದ್ದರು. ಕಚ್ಛ್‌ನ ಮರಳುಗಾಡಿನಲ್ಲಿ ಈ ಬಾರಿ ಗ್ರಹಣವನ್ನು ಉತ್ಸವ ಎಂಬಂತೆ ಆಚರಿಸಲು, ನೋಡಿ ಸಂತೋಷಿಸಲು ದೇಶ – ವಿದೇಶದ ಜನ ಬಂದಿದ್ದರು. ಮಿನಿಟು ಕಾಲದ ಕತ್ತಲನ್ನು ಸದ್ದಿಲ್ಲದೆ ಅವರು ನೋಡಿದರು. ಹತ್ತು ವರ್ಷಗಳ ಅನಂತರದ  –  ೨೦೦೯ರ ಮಳೆಗಾಲ ಹೇಗಿದ್ದೀತೋ ಎಂದು ಅನೇಕರು ಚಿಂತಿಸಿದರು. ಆಗ, ಹಿಮಾಲಯದ ದಕ್ಷಿಣದಲ್ಲಿ ಚಂದ್ರನ ನೆರಳು ಹಾಯುವಾಗ, ತಾವೆಲ್ಲಿರುತ್ತೇವೋ ಎಂದುಕೊಂಡು ತಮ್ಮ ತಮ್ಮ ದಾರಿ ಹಿಡಿದರು  –  ಜಾತ್ರೆಯ ಅನಂತರದ ಜನದಂತೆ.

(ಪ್ರಕೃತಿ ಮತ್ತು ಜನರಿಂದ ಪೂರ್ಣ ಸೂರ್ಯಗ್ರಹಣದ ಸನ್ನಿವೇಶ ಬದಲಾಗುವುದನ್ನು ೧ನೇ ಮತ್ತು ೨ನೇ ಅನುಬಂಧಗಳು ವಿವರಿಸುತ್ತವೆ).

* * *