ಸೂರ್ಯಾಸ್ತಗಳನ್ನು ಬಿಟ್ಟರೆ, ಉಳಿದಂತೆ ದಿನನಿತ್ಯ ಸೂರ್ಯನನ್ನು ನೋಡುವ ಗೋಜಿಗೆ ಯಾರೂ ಹೋಗುವುದಿಲ್ಲ; ಕಣ್ಣು ಕುಕ್ಕಿದಂತಾಗುವುದರಿಂದ ಅದು ಸಾಧ್ಯವೂ ಇಲ್ಲ. ಒಂದು ವೇಳೆ ಬಲವಂತವಾಗಿ ಹಾಗೆ ನೋಡಿದ್ದೇ ಆದರೆ ಕಣ್ಣನ್ನು ಕಳೆದುಕೊಂಡೇವು. ಪೂರ್ಣತೆಯ ಅತ್ಯಲ್ಪ ಕಾಲವನ್ನು ಬಿಟ್ಟು ಉಳಿದ ಸೂರ್ಯಗ್ರಹಣ ಕಾಲದಲ್ಲಿ ಕೂಡ ಈ ಅಪಾಯ ಇದ್ದೇ ಇದೆ. ಪೂರ್ಣತೆಯ ಅವಧಿಯಲ್ಲಿ ಕತ್ತಲಾಗುವುದರಿಂದ ಪರಿಸರದ ದೃಶ್ಯತೆ ಲಕ್ಷ ಪಟ್ಟು ಕಡಿಮೆಯಾಗುತ್ತದೆ. ಆಗ ನಿಶ್ಚಿತ ಬೆಳಕನ್ನು ಒಳಬಿಟ್ಟು ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಕಣ್ಣುಪಾಪೆ ತನ್ನಷ್ಟಕ್ಕೆ ಹಿಗ್ಗಿಕೊಳ್ಳುತ್ತದೆ. ಹೀಗೆ ಹಿಗ್ಗಿದ ಸ್ಥಿತಿಯಲ್ಲಿರುವಾಗಲೇ ಪೂರ್ಣತೆ ಮುಗಿದುಹೋದರೆ ಸೂರ್ಯನ ಉಜ್ವಲ ಪ್ರಕಾಶ ಪಾಪೆಯ ಮೂಲಕ ಅಧಿಕ ಪ್ರಮಾಣದಲ್ಲಿ ಸಾಗಿ ರೆಟಿನವನ್ನು ಸುಟ್ಟು ಹಾಕಬಹುದು. ೧೯೮೦ರ ಗ್ರಹಣ ಕಾಲದಲ್ಲಿ ಹೀಗೆ ಅನೇಕರು ಕಣ್ಣುಕಳೆದುಕೊಂಡದ್ದು ವರದಿಯಾಗಿದೆ. ಆದ್ದರಿಂದ ಗ್ರಹಣವನ್ನು – ವಜ್ರದ ಉಂಗುರವನ್ನು ಕೂಡ – ನೋಡುವಾಗ ಸುರಕ್ಷಿತವಾದ ಫಿಲ್ಮು, ವೆಲ್ಡರ್ಸ್ ಗಾಜು ಅಥವಾ ಫಿಲ್ಟರುಗಳನ್ನು ಉಪಯೋಗಿಸಬೇಕು. ದುರ್ಬೀನು, ದೂರದರ್ಶಕಗಳಂಥ ಉಪಕರಣಗಳ ಮೂಲಕ ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲೇಬಾರದು. ಗ್ರಹಣ ನೋಡುವ ಸಂಭ್ರಮದಲ್ಲಿ ಮುಂಜಾಗರೂಕತೆಯ ಬಗ್ಗೆ ಅಲಕ್ಷ್ಯ ಸರ್ವಥಾ ಸಲ್ಲದು.
ಗ್ರಹಣ : ಅಪಾಯದ ಅರಿವು
By kanaja|2016-11-08T03:55:52+05:30January 22, 2012|ಕನ್ನಡ, ಖಗೋಳ ವಿಜ್ಞಾನ, ಗ್ರಹಣ, ನೈಸರ್ಗಿಕ ವಿಜ್ಞಾನ, ವಿಜ್ಞಾನ|0 Comments
Leave A Comment