ಕಣ್ಣಿಗೆ ಅಪಾಯ ತಟ್ಟದಂತೆ ಬೇರೆ ಬೇರೆ ವಿವರಗಳನ್ನು ಗ್ರಹಣಕಾಲದಲ್ಲಿ ನೋಡಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸಬಹುದು.

(i) ಒಂದು ರಟ್ಟಿನಲ್ಲಿ ಸಣ್ಣರಂಧ್ರವನ್ನು (ಸೂಜಿರಂಧ್ರ) ಮಾಡಿ ಅದರ ಮೂಲಕ ಹಾದು ಹೋಗುವ ಸೂರ್ಯಕಿರಣಗಳನ್ನು ಮತ್ತೊಂದು ಬಿಳಿ ರಟ್ಟಿನ ಮೇಲೆ ಬೀಳುವಂತೆ ಮಾಡಿ ಸೂರ್ಯಬಿಂಬದ ಆಕಾರವನ್ನು ನೋಡಬಹುದು. ರಂಧ್ರದ ಅಂಚು ನಯವಾಗಿರಲು ರಟ್ಟಿನಲ್ಲಿ ೨ – ೩ ಸೆಮೀ ವ್ಯಾಸದ ತೂತು ಮಾಡಿ, ಅದನ್ನು ಅಲ್ಯೂಮಿನಿಯಂ ರೇಕಿನಿಂದ ಮುಚ್ಚಬಹುದು; ಈ ಅಲ್ಯೂಮಿನಿಯಂ ರೇಕಿನಲ್ಲಿ ಒಂದು ಸೂಕ್ಷ್ಮ ರಂಧ್ರವನ್ನು ಮಾಡಿರಬೇಕು.

(ii) ಮರಗಳ ಎಲೆಗಳ ನಡುವಿನ ಸಣ್ಣ ಎಡೆಗಳ ಮೂಲಕ ಸೂರ್ಯಕಿರಣ ಸಾಗುವಾಗ ಕೂಡ ಇದೇ ಪರಿಣಾಮ ಉಂಟಾಗುತ್ತದೆ. ಒತ್ತೊತ್ತಾಗಿ ಎಲೆಗಳಿರುವ ಒಂದು ಮರದ ಕೆಳಗೆ ಬಹುಸಂಖ್ಯೆಯಲ್ಲಿ ಸೂರ್ಯಬಿಂಬದ ಪ್ರಕ್ಷೇಪಗಳನ್ನು ನೀವು ಕಾಣಬಲ್ಲಿರಿ. ಬಿದಿರಿನ ಬುಟ್ಟಿಯ ತೂತುಗಳಿಂದ ಬರುವ ಬೆಳಕಿನಿಂದಲೂ ಸೂರ್ಯನ ಪ್ರತಿಬಿಂಬಗಳನ್ನು ಪಡೆಯಬಹುದು. ಮೇಲಿನ ಮೂರು ಸನ್ನಿವೇಶಗಳಲ್ಲೂ ನಿಮ್ಮ ಬೆನ್ನು ಸೂರ್ಯನ ಕಡೆಗಿರಬೇಕು.

(iii) ಕನ್ನಡಿಗೆ ಕಪ್ಪು ಕಾಗದ ಹಚ್ಚಿ ಕಾಗದದ ಮಧ್ಯೆ ಸಣ್ಣ ತೂತು ಮಾಡಿ ಸೂರ್ಯ ಪ್ರಕಾಶ ಈ ತೂತಿನ ಮೂಲಕ ಗೋಡೆಯ ಮೇಲೆ ಬೀಳುವಂತೆ ಮಾಡಿಯೂ ಸೂರ್ಯನ ಪ್ರತಿಬಿಂಬವನ್ನು ಪಡೆಯಬಹುದು. ಪಾರಕ ಗಾಜನ್ನು ಬುಡ್ಡಿ ದೀಪದ ಮಸಿಗೆ ಒಡ್ಡಿ ಮಸಿ ಲೇಪಿಸಿ ಅದರ ಮೂಲಕ ಗ್ರಹಣವನ್ನು ವೀಕ್ಷಿಸುವುದುಂಟು. ಇಲ್ಲಿ ಸೂರ್ಯನು ಚಂದ್ರನಂತೆ ಮಂದವಾಗಿ ತೋರುವಷ್ಟು ದಪ್ಪಕ್ಕೆ ಮಸಿಯ ಲೇಪವಿರಬೇಕು. ಲೇಪದ ದಪ್ಪ ಹೆಚ್ಚು ಕಡಿಮೆ ಇರುವುದು, ಇಲ್ಲವೇ ಕೆಲವು ಬಿಂದುಗಳಲ್ಲಿ ಮಸಿಯ ಲೇಪವೇ ಇಲ್ಲದಿರುವುದು ಅಪಾಯಕಾರಿ.

(iv) ಗ್ರಹಣ ವೀಕ್ಷಣೆಗಾಗಿಯೇ ತಯಾರಿಸಿದ ಅಲ್ಯೂಮಿನೀಕೃತ ಮೈಲಾರ್ ಪ್ಲಾಸ್ಟಿಕ್ ಹಾಳೆ ಅಥವಾ ಫಿಲ್ಟರುಗಳನ್ನು ಅಧಿಕೃತ ಸಂಸ್ಥೆ (ಉದಾಃ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಥವಾ ವಿಜ್ಞಾನ ಪ್ರಸಾರ) ಅಥವಾ ವ್ಯಕ್ತಿಗಳಿಂದ ಪಡೆದು ಉಪಯೋಗಿಸಬಹುದು. ಗ್ರಹಣವನ್ನು ನೇರವಾಗಿ ನೋಡುವುದಕ್ಕೆ ಇದುವೇ ಬಹಳ ಸುರಕ್ಷಿತ ದಾರಿ.

(v) ಸಂಪೂರ್ಣವಾಗಿ ಡೆವಲಪ್ ಮಾಡಿದ ಎರಡು ಫಿಲ್ಮುಗಳು ಪೂರ್ತಿ ಕಪ್ಪಾಗಿದ್ದರೆ ಅವನ್ನು ಒಂದರ ಮೇಲೊಂದರಂತೆ ಇಟ್ಟು ಅಲ್ಪ ಕಾಲಾವಧಿ ಗ್ರಹಣ ವೀಕ್ಷಣೆಗೆ ಬಳಸಬಹುದು. ಆದರೆ ಫಿಲ್ಮುಗಳು ಒಂದೇ ರೀತಿಯಾಗಿ ಕಪ್ಪಾಗಿಲ್ಲದಿರುವ ಸಾಧ್ಯತೆಯಿಂದ ಈ ವಿಧಾನ ಸೂಕ್ತವಲ್ಲ.

(vi) ನಿರ್ಮಲವಾದ ನೀರಿನ ಮೇಲ್ಮೈಯಿಂದ ಪ್ರತಿಫಲಿಸಲ್ಪಡುವ ಸೂರ್ಯಬಿಂಬ ಪ್ರಖರವಾಗಿರುತ್ತದೆ; ಅದನ್ನು ನೋಡಬಾರದು. ಹಿಂದೆ ಸೆಗಣಿ ಕಲಸಿದ ಅಥವಾ ಅರಸಿನ ಹುಡಿ ಬೆರಸಿದ ಬಗ್ಗಡದ ನೀರಿನಲ್ಲಿ ಸೂರ್ಯನ ಮಂದ ಪ್ರಕಾಶದ ಬಿಂಬವನ್ನು ನೋಡುತ್ತಿದ್ದರು. ಇದು ಕೂಡ ಸುರಕ್ಷಿತ ವಿಧಾನವಲ್ಲ. ಸುರಕ್ಷತೆ ಬಗ್ಗೆ ಇಂದಿನಷ್ಟು ವಿವರಗಳು ಇಲ್ಲದ, ಹಾಗೂ ಗ್ರಹಣವೀಕ್ಷಣೆಗೆ ಇಂದಿನ ಸುರಕ್ಷಿತ ಸೌಲಬ್ಯಗಳು ಸಿಗದ ಕಾಲದಲ್ಲಿ ಈ ವಿಧಾನವನ್ನು ಹೆಚ್ಚು ಅನುಸರಿಸುತ್ತಿದ್ದಿರಬಹುದು.

(vii) ದುರ್ಬೀನಿನಿಂದ ಸೂರ್ಯಬಿಂಬವನ್ನು ಪಡೆಯುವುದಾದರೆ ಅದರ ಎರಡು ವಸ್ತುಕಗಳಲ್ಲಿ (ಸೂರ್ಯನ ಕಡೆಗಿರುವ ಅಗಲವಾದ ಮಸೂರ ಅಥವಾ ಲೆನ್ಸ್) ಒಂದನ್ನು ಮುಚ್ಚಬೇಕು, ನೇತ್ರಕವನ್ನು (ಸಾಮಾನ್ಯವಾಗಿ ನೋಡುವಾಗ ನಮ್ಮ ಕಣ್ಣಿನ ಕಡೆಗಿರುವ ಮಸೂರ) ಹೊರಗೆಳೆಯಬೇಕು. ಆಗ ನೇತ್ರಕದಿಂದ ೨೫ – ೩೦ಸೆಮೀ. ದೂರದಲ್ಲಿ ಒಂದು ಬಿಳಿ ತೆರೆಯನ್ನಿಟ್ಟು ಅದರ ಮೇಲೆ ಸೂರ್ಯನ ಪ್ರತಿಬಿಂಬ ಮೂಡುವಂತೆ ಮಾಡಬಹುದು. ದುರ್ಬೀನಿನ ಹೊರಭಾಗದಿಂದ ಬೆಳಕು ಬೀಳದಂತೆ ಮಾಡಿ ಪ್ರತಿಬಿಂಬದ ಸ್ಫುಟತೆಯನ್ನು ಹೆಚ್ಚಿಸಬಹುದು. ರಟ್ಟು ಅಥವಾ ಕಪ್ಪು ಬಟ್ಟೆಯಿಂದ ಮುಚ್ಚಿ ಇದನ್ನು ಸಾಧಿಸಬಹುದು. ದುರ್ಬೀನನ್ನು ಸೂರ್ಯನ ದಿಕ್ಕಿಗೆ ಹಿಡಿಯಲು ನೀವು ಅದರ ಮೂಲಕ ಖಂಡಿತ ನೋಡಬೇಡಿ. ದುರ್ಬೀನಿನ ನೆರಳನ್ನು ನೋಡುತ್ತ ದುರ್ಬೀನನ್ನು ಬಾಗಿಸುತ್ತ ನೆರಳು ಅತ್ಯಂತ ಸಣ್ಣದಾಗುವ ಸ್ಥಿತಿಗೆ ತನ್ನಿ. ಬಿಳಿ ತೆರೆಯನ್ನು ನೇತ್ರಕದ ಮುಂದೆ ಇಡಿ. ದೂರದರ್ಶಕವನ್ನು ದುರ್ಬೀನಿನಂತೆಯೇ ಉಪಯೋಗಿಸಬಹುದು. ಆದರೆ ನೇರವಾಗಿ ನೋಡುತ್ತ ದೂರದರ್ಶಕವನ್ನು ಹೊಂದಿಸಬೇಡಿ.

(viii) ಗ್ರಹಣದ ವಿವಿಧ ಹಂತಗಳ  – ಟೋ ತೆಗೆಯುವ ಬಗ್ಗೆ ಪರಿಣತರ ಸಲಹೆ ಪಡೆದುಕೊಳ್ಳಿ.

(ix) ಬರಿಕಣ್ಣಿನಿಂದ ಪೂರ್ಣತೆಯಲ್ಲಿ ಪಡೆಯಬಹುದಾದ ನೋಟ ಅನುಪಮವಾದದ್ದು. ಆದರೆ ಕಾಲ ಪ್ರಜ್ಞೆಯೊಂದಿಗೆ ಈ ಸ್ಥಿತಿಯಿಂದ ಸುರಕ್ಷಿತವಾಗಿ ಹೊರಬರಬೇಕು.