ಅಮಾವಾಸ್ಯೆ - ಸೂರ್ಯಗ್ರಹಣವಿದೆ (NN’ - ಪರ್ವರೇಖೆಯು ಸೂರ್ಯ ಭೂಮಿ ರೇಖೆಯ ಉದ್ದಕ್ಕಿದೆ.)

ಸೂರ್ಯನ ಬೆಳಕನ್ನು ಪ್ರತಿಫಲಿಸುವ ಚಂದ್ರನ ಮೈ ಭೂಮಿಯಲ್ಲಿರುವ ನಮಗೆ ಸ್ವಲ್ಪವೂ ಕಾಣಿಸದಾಗ ಅಮಾವಾಸ್ಯೆಯಾಗುತ್ತದೆ. ಹೀಗಾಗಲು ಚಂದ್ರನು ಸೂರ್ಯ ಮತ್ತು ಭೂಮಿಯ ಮಧ್ಯದಲ್ಲಿರಬೇಕು. ಆದರೆ ಸೂರ್ಯಗ್ರಹಣವಾಗಬೇಕಾದರೆ ಸೂರ್ಯ – ಭೂಮಿಗಳ ಮಧ್ಯೆ ಇರುವುದಷ್ಟೇ ಅಲ್ಲ, ಸೂರ್ಯ – ಭೂಮಿಗಳ ರೇಖೆಯಲ್ಲೇ ಚಂದ್ರ ಇರಬೇಕು (ಚಿತ್ರ ೫). ಆದ್ದರಿಂದ ಅಮಾವಾಸ್ಯೆಯಂದೇ ಹಗಲಿನಲ್ಲಿ ಸೂರ್ಯ ಗ್ರಹಣವಾಗುತ್ತದೆ; ಆದರೆ ಎಲ್ಲ ಅಮಾವಾಸ್ಯೆಗಳಲ್ಲಿ ಸೂರ್ಯಗ್ರಹಣ ಆಗುವುದಿಲ್ಲ (ಚಿತ್ರ ೬).

ಅಮಾವಾಸ್ಯೆ - ಗ್ರಹಣವಿಲ್ಲ (NN’ - ಪರ್ವರೇಖೆಯು ಸೂರ್ಯನೆಡೆ ದಿಕ್ಕು ಮಾಡಿಲ್ಲ)

ಸೂರ್ಯ ಪ್ರಕಾಶದಿಂದ ಬೆಳಗುವ ಚಂದ್ರನ ಅರ್ಧಗೋಳದ ಮೈ ನಮಗೆ (ಭೂಮಿಗೆ) ಪೂರ್ತಿಯಾಗಿ ಕಾಣಿಸುವಾಗ ಹುಣ್ಣಿಮೆ. ಹುಣ್ಣಿಮೆಯಾಗಬೇಕಾದರೆ ಸೂರ್ಯ ಮತ್ತು ಚಂದ್ರನ ಮಧ್ಯದಲ್ಲಿ ಭೂಮಿ ಇರಬೇಕು. ಆಗ ಭೂಮಿಯ ನೆರಳು ಚಂದ್ರನಿರುವ ಬದಿಯಲ್ಲಿ ಬೀಳುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬೀಳುವಾಗ ಚಂದ್ರ ಗ್ರಹಣವಾಗುತ್ತದೆ (ಚಿತ್ರ ೭, ಚಿತ್ರ ೮). ಆದ್ದರಿಂದಲೇ ಚಂದ್ರ ಗ್ರಹಣ ಆಗುವುದು ಹುಣ್ಣಿಮೆಯ ರಾತ್ರಿಯಲ್ಲಿ ಮಾತ್ರ. ಆದರೆ ಎಲ್ಲ ಹುಣ್ಣಿಮೆಗಳಲ್ಲಿ ಚಂದ್ರಗ್ರಹಣವಾಗುವುದಿಲ್ಲ.

ಭೂಮಿಯ ಅಂಬ್ರದಲ್ಲಿ ಚಂದ್ರ - ಪೂರ್ಣ ಚಂದ್ರಗ್ರಣ (ಅ - ಅಂಬ್ರ, ಪಿ - ಪಿನಂಬ್ರ)

ಭೂಮಿಯ ಪಿನಬ್ರದಲ್ಲಿ ಚಂದ್ರ: ಪಿನಂಬ್ರ ಚಂದ್ರಗ್ರಹಣ

ಭೂಮಿಯ ನೆರಳಲ್ಲೂ ಅಂಬ್ರ ಮತ್ತು ಪಿನಂಬ್ರ ಭಾಗಗಳಿವೆ. ಚಂದ್ರ ಪೂರ್ಣವಾಗಿ ಅಂಬ್ರದ ಒಳಗಿರುವಾಗ ಪೂರ್ಣ ಚಂದ್ರಗ್ರಹಣವಾಗುತ್ತದೆ (ಚಿತ್ರ ೭). ಗ್ರಹಣಕಾಲದಲ್ಲಿ ಚಂದ್ರಬಿಂಬ ಸೂರ್ಯಬಿಂಬದಷ್ಟು ಕಪ್ಪಾಗಿರುವುದಿಲ್ಲ. ಏಕೆಂದರೆ ಅಂಬ್ರದಲ್ಲಿರುವಾಗಲೂ ಭೂವಾತಾವರಣದಿಂದ ವಕ್ರೀಕರಣಕ್ಕೊಳಗಾಗುವ ಸೂರ್ಯನ ನಸುಬೆಳಕು ಚಂದ್ರಬಿಂಬದ ಮೇಲೆ ಬಿದ್ದು ಪ್ರತಿಫಲಿಸುತ್ತದೆ.

ಚಂದ್ರ ಆಂಶಿಕವಾಗಿ ಭೂಮಿಯ ಅಂಬ್ರದಲ್ಲಿರುವಾಗ ಪಾರ್ಶ್ವ ಚಂದ್ರಗ್ರಹಣ ವಾಗುತ್ತದೆ (ಚಿತ್ರ ೯). ಚಂದ್ರ ಭೂಮಿಯ ಪಿನಂಬ್ರದಲ್ಲಿರುವಾಗ ಕಾಣುವುದು ಪಿನಂಬ್ರ ಚಂದ್ರಗ್ರಹಣ (ಚಿತ್ರ ೮). ಚಂದ್ರಬಿಂಬದಿಂದ ಹೊಮ್ಮುವ ಪ್ರತಿಫಲಿತ ಬೆಳಕಿನಲ್ಲಿ ವಿಶೇಷ ವ್ಯತ್ಯಾಸ ನಮ್ಮ ಕಣ್ಣಿಗೆ ತೋರದಿರುವುದರಿಂದ ಪಿನಂಬ್ರ ಚಂದ್ರಗ್ರಹಣವು ಎದ್ದು ಕಾಣಿಸುವುದಿಲ್ಲ.

ಚಂದ್ರ ಬಿಂಬ ಆಂಶಿಕವಾಗಿ ಭೂಮಿಯ ಅಂಬ್ರದೊಳಗೆ - ಪಾರ್ಶ್ವ ಚಂದ್ರಗ್ರಹಣ