ಮನಸ್ಸು ಕಲ್ಪಿಸುವ ಅಪಾಯವೇ ಭಯಕ್ಕೆ ಮೂಲ; ಇಂಥ ಭಯವೇ ಆಧಾರ ರಹಿತ ನಂಬಿಕೆಗಳನ್ನು ಹುಟ್ಟುಹಾಕುತ್ತದೆ. ಗ್ರಹಣಕ್ಕೆ ಸಂಬಂಧಿಸಿಯೂ ಹೀಗೆ ಭಯ ಮತ್ತು ನಂಬಿಕೆಗಳು ಜಗತ್ತಿನ ವಿವಿಧ ಭಾಗಗಳಲ್ಲಿ ರೂಢಿಗೆ ಬಂದುವು.

ಇದ್ದಕ್ಕಿದ್ದ ಹಾಗೆ ಹಗಲಲ್ಲಿ ಸೂರ್ಯಬಿಂಬ ಕಪ್ಪಾಗಿ ತೋರಿ ವಾತಾವರಣ ಮಬ್ಬಾಗುವುದಾಗಲೀ ರಾತ್ರಿ ಹೊತ್ತು ಚಂದ್ರಬಿಂಬ ಮಸುಕಾಗಿ ಕೆಂಪು ಯೆಯಿಂದ ಕಾಣಿಸುವುದಾಗಲೀ ಮನುಷ್ಯ ನಿಯಂತ್ರಣವನ್ನು ಮೀರಿದ ವಿದ್ಯಮಾನಗಳು. ನಾವು ಇಂದು ‘ಗ್ರಹಣ’ ಎಂದು ಕರೆಯುವ ಈ ವಿದ್ಯಮಾನಗಳಿಗೆ ಬಹಳ ಹಿಂದೆ ಸರಿಯಾದ ಕಾರಣವಾಗಲೀ ವಿವರಣೆಯಾಗಲೀ ತಿಳಿದಿರಲಿಲ್ಲ. ಜಗತ್ತಿಗೆ ಬೆಳಕನ್ನು ಚೆಲ್ಲುವ ಸೂರ್ಯ ಮತ್ತು ಚಂದ್ರರ ಶಕ್ತಿಯೇ ಕುಸಿಯುವುದೆಂದರೆ ಅಲ್ಪ ಸಂಗತಿಯೆ? ಆದ್ದರಿಂದ ಸೂರ್ಯ – ಚಂದ್ರರಿಗೆ ಗ್ರಹಣಕಾಲದಲ್ಲಿ ಏನಾಗುತ್ತಿರಬಹುದು ಎಂದು ಜಗತ್ತಿನ ವಿವಿಧ ಸಂಸ್ಕೃತಿಗಳ ಜನ ಊಹಿಸುತ್ತ ಹೋಗಿರಬಹುದು. ಸೂರ್ಯ – ಚಂದ್ರರ ಮೇಲೆ ಬರುವ ಆಪತ್ತುಗಳನ್ನು ನೆನೆದು ಅವರು ತಮ್ಮ ಮೇಲೆ ಎರಗಬಹುದಾದ ಅಪಾಯಗಳನ್ನು ಕಲ್ಪಿಸಿದರು. ಆ ಅಪಾಯಗಳನ್ನು ನಿವಾರಿಸಲು ‘ಸಾಧ್ಯ’ ಮತ್ತು ‘ಸರಿ’ ಎಂದು ಆ ಕಾಲಕ್ಕೆ ಅನಿಸಿದ ಉಪಾಯಗಳನ್ನು ಅನುಸರಿಸಿದರು.

ಸೂರ್ಯನನ್ನು ಡ್ರಾಗನ್ ಎಂಬ ಪ್ರಾಣಿ, ಗ್ರಹಣ ಕಾಲದಲ್ಲಿ ತಿನ್ನುತ್ತದೆ ಎಂದು ಪ್ರಾಚೀನ ಚೀನದಲ್ಲಿ ನಂಬಿದ್ದರು. ಅದೇ ಆಧಾರದಿಂದ ಗ್ರಹಣವನ್ನು ಹೆಸರಿಸಿದರು. ಗ್ರಹಣಕ್ಕೆ ಪ್ರಾಚೀನ ಚೀನೀ ಹೆಸರು ‘ಚಿಹ್’. ಹಾಗೆಂದರೆ ‘ತಿನ್ನುವುದು’ ಎಂದು ಅರ್ಥ. ಸೂರ್ಯ  –  ಚಂದ್ರರನ್ನು ತಿನ್ನುವ ಈ ಕಲ್ಪನೆ ಭಾರತವೂ ಸೇರಿದಂತೆ ಬೇರೆ ಕೆಲವು ಕಡೆಗಳಲ್ಲೂ ಇತ್ತು. ಸೂರ್ಯ  –  ಚಂದ್ರರನ್ನು ವಾಸುಕಿಯ ರುಂಡಭಾಗವಾದ ರಾಹು ತಿನ್ನುವುದೆಂಬ ಪೌರಾಣಿಕ ಕಲ್ಪನೆ ಭಾರತದಲ್ಲಿತ್ತು. ಸೂರ್ಯ  –  ಚಂದ್ರರನ್ನು ತಿನ್ನದಂತೆ ಹೆದರಿಸಲು ಚೀನದಲ್ಲಿ ಡೋಲು ಬಡಿದು ದೊಡ್ಡ ಸದ್ದೆಬ್ಬಿಸುತ್ತಿದ್ದರು, ರುಮೇನಿಯಾದಲ್ಲಿ ಬೆಂಕಿ ಉರಿಸುತ್ತಿದ್ದರು. ಇಂದಿನ ರಾಕೆಟ್, ಬಾಂಬರ್‌ಗಳು ಅಂದು ಇರಲಿಲ್ಲವಲ್ಲ?

ಚಂದ್ರನಿಗೆ ಕೋಪ ಬರುವುದರ ಸೂಚನೆಯೇ ಗ್ರಹಣ ಎಂದು ಪ್ರಾಚೀನ ಬ್ಯಾಬಿಲೋನಿಯದಲ್ಲಿದ್ದ ಕಾಲ್ಡಿಯನ್ ಜನ ನಂಬಿದರು. ಇದರ ಫಲವಾಗಿ ಬರುವ ಬರ, ರೋಗಗಳಂಥ ಆಪತ್ತುಗಳು ನಾಡಿನ ಯಾವ ಭಾಗಕ್ಕೆ ಬರಬಹುದು ಎಂಬುದರ ಬಗೆಗೆ ಗ್ರಹಣ ಹಿಡಿದ ಚಂದ್ರಬಿಂಬದ ಭಾಗ ಯಾವ ದಿಕ್ಕಿನಲ್ಲಿದೆ ಎಂದು ನೋಡಿ ಭವಿಷ್ಯ ಹೇಳುತ್ತಿದ್ದರು. ಭವಿಷ್ಯದ ಬಗ್ಗೆ ಎಂಥ ಅಲ್ಪ ಸುಳಿವಾದರೂ ಲಾಭದಾಯಕವಷ್ಟೆ?

ಆದರೆ ಕಾಲ್ಡಿಯನರು ಗ್ರಹಣಗಳ ದಾಖಲೆಯನ್ನಿಟ್ಟು ಅವುಗಳಲ್ಲಿರುವ ಆವರ್ತವನ್ನೂ ಪತ್ತೆ ಹಚ್ಚಿದ್ದರು. ಮನುಷ್ಯನ ಚಟುವಟಿಕೆಗಳಲ್ಲಿ ಕುತೂಹಲ ತಣಿಸುವ ಶ್ರಮವೂ ಅಡಗಿರುವುದಕ್ಕೆ ಇದೊಂದು ದೃಷ್ಟಾಂತ.

ಗ್ರಹಣದ ಅವಧಿಯಲ್ಲಿ ಸೂರ್ಯ – ಚಂದ್ರರಿಗೆ ವಿಷ ಪ್ರಾಶನವಾಗುತ್ತದೆ ಎಂದೋ ರೋಗ ತಗಲುವುದೆಂದೋ ಇರುವ ನಂಬಿಕೆ ಭೂಮಿಯಲ್ಲಿರುವವರ ಊಟ – ತಿಂಡಿಯ ಮೇಲೂ ಪರಿಣಾಮ ಬೀರಿತ್ತು. ಗ್ರಹಣ ಕಾಲದಲ್ಲಿ (ಕೆಲವು ಅಪವಾದಗಳೊಂದಿಗೆ)  –  ಮಾತ್ರವಲ್ಲ ಗ್ರಹಣಕ್ಕೆ ನಿಗದಿತ ಅವಧಿಗೆ ಮೊದಲೇ  –  ಆಹಾರ ಸೇವಿಸದಿರುವುದು, ಅಡಿಗೆ ಮಾಡದಿರುವುದು, ಚಿಲುಮೆ  –  ಬಾವಿಗಳಿಗೆ ಬೆಳಕು ಬೀಳದಂತೆ ಅವುಗಳ ಬಾಯಿಗಳನ್ನು ಮುಚ್ಚುವುದು, ತಯಾರಿಸಿದ ಆಹಾರವನ್ನು ದರ್ಬೆ  –  ತುಳಸಿಗಳನ್ನಿಟ್ಟು ರಕ್ಷಿಸುವುದು, ಪಾತ್ರೆಗಳನ್ನು ಕವುಚಿ ಇಡುವುದು  –  ಇವೆಲ್ಲ ಸ್ವರಕ್ಷಣೆಗೆ ಹಿತ ಎಂದು ಹಿಡಿದ ದಾರಿಗಳು.

ಶಿಕ್ಷಣದಿಂದಾಗಿಯೋ ಗ್ರಹಣಕಾಲದಲ್ಲಿ ಸಂಘ ಸಂಸ್ಥೆಗಳು ನಡೆಸಿದ ಜಾಗೃತಿ ಕಾರ್ಯಕ್ರಮಗಳಿಂದಾಗಿಯೋ ಮೇಲಿನ ಹಲವು ನಂಬಿಕೆ  –  ಆಚರಣೆಗಳು ಮಾಯವಾಗುತ್ತಿವೆ. ಆದರೆ ‘ವೈಜ್ಞಾನಿಕ’ ಕಾರಣವನ್ನು ಹೊತ್ತ ಕೆಲವು ಆಚರಣೆಗಳು ಗಟ್ಟಿಯಾಗುತ್ತಿವೆ.

ಗ್ರಹಣ ಕಾಲದಲ್ಲಿ ಚಂದ್ರ  –  ಸೂರ್ಯರ ಗುರುತ್ವದಿಂದ ಸಮುದ್ರ ಅತಿ ಉಬ್ಬರಕ್ಕೊಳಗಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ಇದರ ಪರಿಣಾಮದ ಬಗ್ಗೆ ಇನ್ನೂ ನಿರ್ಣಾಯಕ ನಿಲುವು ತಾಳದೆ ಚಿಂತಿಸುವವರಿದ್ದಾರೆ.

ಗರ್ಭಿಣಿಯರ ಬಗ್ಗೆ ಗ್ರಹಣಕಾಲದ ನಿಯಂತ್ರಣಗಳು ಇನ್ನೂ ಬಲವಾಗಿ ಉಳಿದುಕೊಂಡಂತಿವೆ. ಅವರು ಹೊರಗೆ ಬಾರದೆ ಮನೆಯೊಳಗೇ ಇರಬೇಕು; ಕತ್ತರಿ, ಪೆನ್ನು, ಕೀಲಿಗಳನ್ನು ಇಟ್ಟುಕೊಳ್ಳಬಾರದು (ಆದರೆ ಸೇಫ್ಟಿ ಪಿನ್ನು ಒಳ್ಳೆಯದೆಂಬ ನಂಬಿಕೆ ಕೆಲವೆಡೆ ಇದೆ!); ಕ್ರಮ ತಪ್ಪಿದರೆ ಸೀಳು ತುಟಿಯ ಮಗು ಹುಟ್ಟಬಹುದು, ಮಗುವಿನ ಮೈ ತುಂಬ ಮಚ್ಚೆಗಳಿರಬಹುದು, ಹಿಟ್ಟು ನಾದಿದರೆ ಶಿಶುವಿನ ದೇಹದಲ್ಲಿ ಕುರ ಏಳಬಹುದು! ಗ್ರಹಣ ಸಂದರ್ಭದ ಅಪಾಯಭಯದಿಂದ ಇಡೀ ಜಗತ್ತಿನಲ್ಲಿ ಹೆರಿಗೆಯಾಗದಿದ್ದೀತೆ? ಆಗ ನವಜಾತ ಶಿಶುಗಳು ಕೆಟ್ಟ ಪರಿಣಾಮದಿಂದ ನರಳಿದ ಎಷ್ಟು ವರದಿಗಳು ಬಂದಿವೆ?

‘ಗ್ರಹಣ ಕಾಲದಲ್ಲಿ ಸೂರ್ಯ ಅಪಾಯಕಾರಿ ವಿಕಿರಣಗಳನ್ನು ಹೊಮ್ಮಿಸುತ್ತಾನೆ, ಇದರಿಂದ ಜನ  –  ಅದರಲ್ಲೂ ಗರ್ಭಿಣಿಯರು  –  ಹೊರಾಂಗಣದಲ್ಲಿರುವುದು ಗಂಡಾಂತರ’  –  ಎಂಬ ಬದ್ಧತೆಯ ನಿಲುವಿನವರಿದ್ದಾರೆ. ನಿತ್ಯವೂ ಇಲ್ಲದಿರುವುದು ಗ್ರಹಣಕಾಲದಲ್ಲಿ ಹೇಗೆ ಬರುತ್ತದೆ, ಎಲ್ಲೆಲ್ಲೂ ವ್ಯಾಪಿಸುವ ವಿಕಿರಣ ಒಳಾಂಗಣಕ್ಕೂ ಬಾರದಿರದೇಕೆ ಎಂಬ ಪ್ರಶ್ನೆಗಳಿಂದ ವಿಚಲಿತರಾಗುವವರನ್ನು ಮಾತ್ರ ಹುಡುಕಬೇಕು!

ಮೂಡನಂಬಿಕೆಗಳಿಗೆ ಒಳಗಾದ ವ್ಯಕ್ತಿಗಳನ್ನು ಅವುಗಳಿಗೆ ಒಳಗಾಗದ ವ್ಯಕ್ತಿಗಳು ತಮ್ಮ ಕಾರ್ಯಸಾಧನೆಗಾಗಿ ಬಳಸುವುದು ಒಂದು ದುರಂತ. ಗ್ರಹಣ ಸಂಬಂಧಿತ ನಂಬಿಕೆಗಳಿಗೂ ಈ ಮಾತು ಅನ್ವಯಿಸುತ್ತದೆ. ಇದಕ್ಕೆ ಐತಿಹಾಸಿಕವಾಗಿ ಸಿಗುವ ಒಂದು ದೃಷ್ಟಾಂತ ಕ್ರಿಸ್ಟೊಫರ್ ಕೊಲಂಬಸ್ ಜಮೈಕ ದ್ವೀಪದಲ್ಲಿ ಉಳಕೊಂಡಾಗ ನಡೆದದ್ದು (೧೫೦೪). ಅವನ ವರ್ತನೆಯನ್ನು ಸಹಿಸದ ಅಲ್ಲಿಯ ಆದಿವಾಸಿಗಳು ಆಹಾರ ಪೂರೈಕೆಯನ್ನು ನಿಲ್ಲಿಸಿದ್ದರು. ಹಡಗಿನಲ್ಲಿದ್ದ ಪಂಚಾಂಗದಿಂದ ೧೫೦೪ನೇ  ಫೆಬ್ರವರಿ ೪ರಂದು ನಡೆಯಲಿದ್ದ ಚಂದ್ರಗ್ರಹಣದ ವಿವರ ಕೊಲಂಬಸ್‌ನಿಗೆ ತಿಳಿದಿತ್ತು. ಆ ದಿನ ಸಮಯ ನೋಡಿ ಆದಿವಾಸಿ ಮುಖ್ಯಸ್ಥರ ಸಭೆ ಕರೆದ. ಆಹಾರ ಪೂರೈಕೆ ಪ್ರಾರಂಭಿಸದಿದ್ದರೆ ಚಂದ್ರನನ್ನು ಮರೆ ಮಾಡುವೆ ಎಂದು ಭೀತಿ ಹುಟ್ಟಿಸಿದ. ಗ್ರಹಣ ಸ್ಪರ್ಶವಾಗುವುದರೊಂದಿಗೆ ಅದನ್ನು ವಾಸ್ತವ ಎಂದು ತೋರಿಸಿದ. ಆದಿವಾಸಿ ಜನ ಚಂದ್ರನಿಗೆ ಒದಗಿದ ಗತಿ ನೋಡಿ ಹೆದರಿದರು. ಅವನ ಮಾತಿಗೆ ಒಪ್ಪಿದರು. ತನ್ನ ಮಾತನ್ನು ನಿಜ ಮಾಡುವೆನೆಂದು ಶಿಬಿರದೊಳಗೆ ಹೋದ ಕೊಲಂಬಸ್, ಸಮಯ ನೋಡಿ ಗ್ರಹಣ ಮೋಕ್ಷವನ್ನು ತೋರಿಸಲು ಹೊರಬಂದ! ಈಗ ಇಷ್ಟು ಡಾಳಾಗಿ ಅಲ್ಲದಿದ್ದರೂ ಬೇರೆ ಯಾವುದೇ ರೂಪದ ಶೋಷಣೆ ಗ್ರಹಣ ಕಾಲದಲ್ಲಿ ಇಲ್ಲ ಎನ್ನಲಾದೀತೆ?

 

ಇವಕ್ಕೆಲ್ಲ ಪರಿಹಾರ  –  ನಿಜಕ್ಕೂ ಇರುವ ಅಪಾಯದ ಆಳಕ್ಕೂ ಗ್ರಹಣದ ಅಪಾಯರಹಿತ ವೀಕ್ಷಣೆಯ ಸೂಕ್ಷ್ಮಕ್ಕೂ ಸಾಧ್ಯವಿರುವಷ್ಟು ಜನ ತಮ್ಮ ಮನಸ್ಸನ್ನು ತೆರೆದುಕೊಳ್ಳುವಂತೆ ಮಾಡುವುದು.