ಸೂರ್ಯಗ್ರಹಣವಾಗಲೀ, ಚಂದ್ರಗ್ರಹಣವಾಗಲೀ, ಪೂರ್ಣ ಗ್ರಹಣವಾಗಲೀ, ಪಾರ್ಶ್ವಗ್ರಹಣವಾಗಲೀ  –  ಯಾಮದೇ ಒಂದು ನಿಶ್ಚಿತ ರೀತಿಯ ಗ್ರಹಣ  –  ಮತ್ತೆ ಹಾಗೆಯೇ ಉಂಟಾಗಲು ಸೂರ್ಯ, ಚಂದ್ರ, ಭೂಮಿಗಳು ಹಿಂದಿನ ಬಾರಿಯಂತೆಯೇ ಸಾಲುಗಟ್ಟಬೇಕಷ್ಟೇ? ಅಮಾವಾಸ್ಯೆಯಿಂದ ಅಮಾವಾಸ್ಯೆಗಿರುವ ಅವಧಿಯನ್ನು ಸಂಯುತಿ ಮಾಸ ಅಥವಾ ಚಾಂದ್ರಮಾಸ ಎನ್ನೋಣ. (ಸೌರ ಮಾಸಕ್ಕಿಂತ ಇದು ಭಿನ್ನವಾಗಿದೆ). ಒಂದು ಚಾಂದ್ರಮಾಸದಲ್ಲಿ ೨೯.೫೩೦೬ ದಿನಗಳಿವೆ. ಅಂದರೆ ೬೫೮೫.೩೨ ಸೌರ ದಿನಗಳಲ್ಲಿ ಇಂಥ ೨೨೩ ಮಾಸಗಳಿರುತ್ತವೆ. ಇದು ೧೮ ವರ್ಷ ೧೧ ದಿನಗಳಿಗೆ ಸಮ (ಆ ಅವಧಿಯಲ್ಲಿ ೫ ಅಧಿಕ ವರ್ಷಗಳಿದ್ದರೆ ೧೮ ವರ್ಷ ೧೦ ದಿನಗಳಿಗೆ ಸಮ). ಪ್ರಾಚೀನ ಬ್ಯಾಬಿಲೋನಿಯದಲ್ಲಿ ದೀರ್ಘಕಾಲೀನ ಆವರ್ತನೆಯನ್ನು ‘ಶಾರು’ ಎನ್ನುತ್ತಿದ್ದರು. ಅದನ್ನೇ ಗ್ರೀಕರು ಸಾರೊಸ್ ಎಂದರು. ಮೇಲಿನ ಅವಧಿಯಲ್ಲಿ ಆಗುವ ಆವರ್ತವನ್ನು ಸಾರೊಸ್ ಆವರ್ತ ಎನ್ನುತ್ತಾರೆ. ೬೫೮೫.೩೬ ಸೌರ ದಿನಗಳಲ್ಲಿ ಚಂದ್ರ ೨೪೨ ಸಲ ರಾಹುವನ್ನು ದಾಟುತ್ತದೆ. ಸುಮಾರು ಇದೇ ಅವಧಿಯಲ್ಲಿ (ಅಂದರೆ ೬೫೮೫.೫೪ ಸೌರ ದಿನಗಳಲ್ಲಿ) ಭೂಮಿ ಚಂದ್ರರ ನಿರ್ದಿಷ್ಟ ಅಂತರವೂ ೨೩೯ ಬಾರಿ ಪುನರಾವರ್ತಿಸುತ್ತದೆ. ಹೀಗೆ ಚಂದ್ರನ ತಿಥಿ ಅಥವಾ ಅವಸ್ಥೆ (ಅಮಾವಾಸ್ಯೆ ಅಥವಾ ಹುಣ್ಣಿಮೆ), ಪರ್ವರೇಖೆಯ ದಿಕ್ಕು, ಗ್ರಹಣದ ನಿಶ್ಚಿತ ಲಕ್ಷಣ ಇವುಗಳ ಪುನರಾವರ್ತನೆಯ ಅವಧಿಗಳಿಗೆಲ್ಲ ಸಾರೊಸ್ ಆವರ್ತ ಅವಧಿಯು ಸುಮಾರಾಗಿ ಲಘುತಮ ಸಾಮಾನ್ಯ ಅಪವರ್ತ್ಯ –  ವಾಗಿದೆ. ಒಂದು ಸಾರೊಸ್ ಶ್ರೇಣಿಯಲ್ಲಿ ಹಲವು ಸಾರೊಸ್ ಆವರ್ತಗಳಿವೆ.

೧೯ ಗ್ರಹಣ ವರ್ಷಗಳು ೬೫೮೫.೭೮ ಸೌರ ದಿನಗಳಿಗೆ ಸಮ. (ಒಂದು ಗ್ರಹಣ ವರ್ಷ ೩೪೬.೬೨ ಸೌರ ದಿನಗಳಿಗೆ ಸಮ). ಸಾರೊಸ್ ಆವರ್ತದಲ್ಲಿ ಪೂರ್ಣ ಸಂಖ್ಯೆಯ ದಿನಗಳೊಂದಿಗೆ  ದಿನ ಅಥವಾ ೮ ಗಂಟೆ ಕೂಡಿದೆಯಷ್ಟೆ? ಈ ಅವಧಿಯಲ್ಲಿ ಭೂಮಿ ೧೨೦ ಡಿಗ್ರಿಗಳಷ್ಟು ಪೂರ್ವಕ್ಕೆ ಭ್ರಮಿಸಿರುತ್ತದೆ. ಅಂದರೆ ಅಂಬ್ರವು ಭೂಮಿಯನ್ನು ಸ್ಪರ್ಶಿಸುವ ಜಾಗ ಹಿಂದಿನದೇ ಆಗಿರದೆ ಅದಕ್ಕಿಂತ ೧೨೦ ಡಿಗ್ರಿ ಪಶ್ಚಿಮಕ್ಕಿರುವ ಜಾಗವಾಗಿರುತ್ತದೆ. ಇದರಿಂದಾಗಿ ಒಂದು ಆವರ್ತದಲ್ಲಿ ಬರುವ ಗ್ರಹಣವು ಹಿಂದಿನ ಆವರ್ತದಲ್ಲಿ ಗ್ರಹಣವಾದ ಜಾಗಕ್ಕಿಂತ ಪಶ್ಚಿಮಕ್ಕೆ  ದಿನ ಕಾಲ ವ್ಯತ್ಯಾಸವಿರುವ ಜಾಗದಲ್ಲಿ ಅಥವಾ ೧೨೦ ಡಿಗ್ರಿ ರೇಖಾಂಶ ವ್ಯತ್ಯಾಸವಿರುವ ಜಾಗದಲ್ಲಿ ಕಂಡುಬರುತ್ತದೆ. ಅದ್ದರಿಂದ ಮೂರು ಸಾರೊಸ್ ಆವರ್ತಗಳ ಬಳಿಕ ಮತ್ತೆ ಅದೇ ರೇಖಾಂಶ ವ್ಯಾಪ್ತಿಯಲ್ಲಿ ಆ ಗ್ರಹಣ ನಡೆಯುತ್ತದೆ. ಆದರೆ ಆ ಪ್ರದೇಶದ ಅಕ್ಷಾಂಶದಲ್ಲಿ ಮಾತ್ರ ಬದಲಾವಣೆಯಾಗುತ್ತದೆ. ಅಂದರೆ ಒಂದು ನಿಶ್ಚಿತ ಶ್ರೇಣಿಯ ಗ್ರಹಣದ ನಾಲ್ಕನೆಯ ಆವರ್ತವು ಮೊದಲನೇ ಆವರ್ತ ನಡೆದ ಅಕ್ಷಾಂಶಕ್ಕಿಂತ ಉತ್ತರದಲ್ಲಿ ಅಥವಾ ದಕ್ಷಿಣದಲ್ಲಿ ನಡೆಯಬಹುದು.