ಮೇಲೆ ವಿವರಿಸಿದ ಸನ್ನಿವೇಶದಲ್ಲಿ ಸೂರ್ಯಗ್ರಹಣದ ಮೊದಲು ಅಥವಾ ಅನಂತರ ಎರಡು ವಾರಗಳ ಅಂತರದಲ್ಲಿ ಒಂದು ಚಂದ್ರಗ್ರಹಣವಾಗಬಹುದು. ಪರ್ವರೇಖೆಯು ಸುಮಾರಾಗಿ ಸೂರ್ಯ – ಭೂಮಿ ರೇಖೆಯ ಉದ್ದಕ್ಕೆ ಇರುವ ಈ ಅವಧಿಯನ್ನು ಗ್ರಹಣಗಳ ಶ್ರಾಯ ಎನ್ನುವುದುಂಟು. ಆಗ ಎರಡು ಸೂರ್ಯ ಗ್ರಹಣಗಳು ಮತ್ತು ಅವುಗಳ ಮಧ್ಯೆ ಒಂದು ಚಂದ್ರ ಗ್ರಹಣ ಉಂಟಾಗಬಹುದು. ಕಡೇ ಪಕ್ಷ ಆಗ ಒಂದು ಪೂರ್ಣ ಅಥವಾ ಪಾರ್ಶ್ವ ಸೂರ್ಯಗ್ರಹಣ ಆಗುತ್ತದೆ. ಸುಮಾರು ೬ ತಿಂಗಳುಗಳ ಬಳಿಕ ಗ್ರಹಣಗಳ ಮತ್ತೊಂದು ಶ್ರಾಯ ಬರುತ್ತದೆ. ೧೯೯೫ನೇ ವರ್ಷ ಭೂಮಿಯಲ್ಲಿ ಎಪ್ರಿಲ್ ೧೫ರಂದು ಚಂದ್ರಗ್ರಹಣ ಮತ್ತು ಎಪ್ರಿಲ್ ೨೯ರಂದು ಸೂರ್ಯಗ್ರಹಣಗಳಾದವು. ೬ ತಿಂಗಳ ಅನಂತರದ ಶ್ರಾಯದಲ್ಲಿ ಅಕ್ಟೋಬರ್ ೨೪ರಂದು ಮತ್ತೊಂದು ಸೂರ್ಯಗ್ರಹಣವಾಯಿತು. ೧೯೯೯ನೇ ಜುಲೈ ೨೮ರ ಚಂದ್ರಗ್ರಹಣ ಮತ್ತು ಆಗಸ್ಟ್ ೧೧ರ ಸೂರ್ಯಗ್ರಹಣ ಒಂದೇ ಶ್ರಾಯದವು. ೨೦೦೯ನೇ ಜುಲೈ ೭ರಂದು ಪಿನಂಬ್ರ ಚಂದ್ರಗ್ರಹಣ, ಜುಲೈ ೨೨ರಂದು ಪೂರ್ಣ ಸೂರ್ಯಗ್ರಹಣ ಹಾಗೂ ಆಗಸ್ಟ್ ೬ರಂದು ಪಿನಂಬ್ರ ಚಂದ್ರಗ್ರಹಣ  –  ಇವೆಲ್ಲ ಒಂದೇ ಗ್ರಹಣ ಶ್ರಾಯಕ್ಕೆ ಸೇರಿದಂಥವು. ೨೦೧೦ನೇ ಜನವರಿ ೧೧ರಂದು ನಡೆಯುವ ಕಂಕಣ ಗ್ರಹಣ ಮುಂದಿನ ಶ್ರಾಯಕ್ಕೆ ಸೇರಿದೆ. ಸೂರ್ಯನ ಗುರುತ್ವದಿಂದಾಗಿ ಚಾಂದ್ರ ಕಕ್ಷೆ ಸ್ಥಿರವಾಗಿರುವುದಿಲ್ಲ. ಇದರ ಪರಿಣಾಮವಾಗಿ ಪರ್ವರೇಖೆಯು ಭೂಮಿಯ ಕಕ್ಷಾ ಚಲನೆಗೆ ವಿರುದ್ಧ ದಿಸೆಯಲ್ಲಿ ಚಲಿಸುತ್ತದೆ. ಇದರಿಂದ ಭೂಮಿ ತನ್ನ ಅರ್ಧ ಕಕ್ಷೆಯನ್ನು ಕ್ರಮಿಸಲು ಬೇಕಾಗುವ ಸುಮಾರು ೧೮೨.೫ ದಿನಗಳ ಅವಧಿ ಮೊದಲೇ ಅಂದರೆ ೧೭೩.೩೧ ಸೌರದಿನಗಳಲ್ಲಿ  –  ಗ್ರಹಣ ಶ್ರಾಯ ಪುನರಾವರ್ತಿಸುತ್ತದೆ. ಗ್ರಹಣ ವರ್ಷ ಅಂದರೆ ಇದರ ಇಮ್ಮಡಿ ಅವಧಿ (೩೪೬.೩೨ ದಿನ). ಚಂದ್ರನ ಕಕ್ಷೆಯಲ್ಲಿರುವ ಒಂದು ಪರ್ವ ಬಿಂದುವನ್ನು ಸೂರ್ಯ ಅನುಕ್ರಮವಾಗಿ ೨ ಬಾರಿ ದಾಟುವಾಗ ಕಳೆಯುವ ಅವಧಿಯೂ ಇದುವೇ.