ಒಂದು ಆಕಾಶಕಾಯದ ನೆರಳಿನಿಂದಾಗಿ ಮತ್ತೊಂದು ಆಕಾಶಕಾಯ ಮರೆಯಾಗುವುದು ಅಥವಾ ಮಸುಕಾಗುವುದೇ ಗ್ರಹಣ. ಭೂಮಿಯ ಮೇಲೆ ಚಂದ್ರನ ನೆರಳು ಬೀಳುವಾಗ ಸೂರ್ಯಗ್ರಹಣವಾಗುತ್ತದೆ; ಭೂಮಿಯ ನೆರಳು ಚಂದ್ರನ ಮೇಲೆ ಬೀಳುವಾಗ ಚಂದ್ರಗ್ರಹಣವಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ ನೆರಳು ಬೀಳಲು ಸೂರ್ಯನ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ನೆರಳು ಹೇಗಾದೀತು? ಗ್ರಹಣಕ್ಕೆ ಕಾರಣವಾದ ನೆರಳಿನ ಬಗ್ಗೆ ಪ್ರಾಚೀನ ಗ್ರೀಕರಿಗೂ ತಿಳಿದಿತ್ತು, ಬಾರತೀಯರಿಗೂ ತಿಳಿದಿತ್ತು.

ಆದರೆ ಕಾಲಾಂತರದಲ್ಲಿ ಬೇರೆ ನಂಬಿಕೆಗಳೂ ಬೇರು ಬಿಟ್ಟಿದ್ದುವು. ಸೂರ್ಯಗ್ರಹಣದ ಬಗ್ಗೆ ಅನೇಕರಿಗೆ ಇದ್ದ ಅಜ್ಞಾತ ಭಯವೇ ಈ ನಂಬಿಕೆಗಳನ್ನು ಹುಟ್ಟುಹಾಕಿರಬಹುದು. ಗ್ರಹಣವನ್ನು ನೋಡುವುದರಿಂದ ಬರಬಹುದಾದ ಅಪಾಯವೇ ಇಂಥ ಭಯಕ್ಕೆ ಕಾರಣವಾಗಿರಬಹುದು. ಆದರೆ ಗ್ರಹಣ ಕಾಲದಲ್ಲಿ ನಡೆಯುವ ನೆರಳು – ಬೆಳಕುಗಳ ಆಟವನ್ನು ಸಾಕಷ್ಟು ಮುಂಜಾಗರೂಕತೆ ವಹಿಸಿ ನೋಡಿದರೆ ಅದೊಂದು ಅನನ್ಯ ಅನುಭವವಾದೀತು.