ನಮ್ಮ ಅನುಕೂಲಕ್ಕಾಗಿ ಒಂದು ನಿಶ್ಚಿತ ಗ್ರಹಣವನ್ನು ಕೆಲವು ಸಂಖ್ಯೆ ಅಥವಾ ಪರಿಮಾಣಗಳಿಂದ ನಮೂದಿಸುವುದುಂಟು. ಈಗಾಗಲೇ ವಿವರಿಸಿದಂತೆ ಗ್ರಹಣವನ್ನು ಸಾರೊಸ್ ಶ್ರೇಣಿ ಸಂಖ್ಯೆಯಿಂದ ನಮುದಿಸುತ್ತಾರೆ. ೧೯೮೦ರ  – ಬ್ರವರಿ ೧೬ರಂದು ನಡೆದ ಪೂರ್ಣ ಸೂರ್ಯಗ್ರಹಣದ ಸಾರೊಸ್ ಸಂಖ್ಯೆ ೧೩೦. ಈ ಗ್ರಹಣದ ಹಿಂದಿನ ಆವರ್ತ ೧೯೬೨ರ  – ಬ್ರವರಿ ೪ – ೫ರಂದು ನಡೆಯಿತು. (ಅದು ಭಾರತದಲ್ಲಿ ಕಾಣಿಸಲಿಲ್ಲ.) ೧೯೯೫ರ ಅಕ್ಟೋಬರ್ ೨೪ರಂದು ನಡೆದ ಪೂರ್ಣ ಸೂರ್ಯಗ್ರಹಣದ ಸಾರೊಸ್ ಶ್ರೇಣಿ ಸಂಖ್ಯೆ ೧೪೩. ೧೯೯೯ನೇ ಆಗಸ್ಟ್ ೧೧ರ ಪೂರ್ಣ ಸೂರ್ಯಗ್ರಹಣದ ಸಾರೊಸ್ ಸಂಖ್ಯೆ ೧೪೫.

ಅ - ಚಂದ್ರನ ಅಂಬ್ರ, d = ಭೂಕೇಂದ್ರದಿಂದ ಅಕ್ಷದ ಲಂಬದೂರ, R - ಭೂಮಧ್ಯರೇಖಾ ಪ್ರದೇಶದಲ್ಲಿ ಭೂಮಿಯ ತ್ರಿಜ್ಯ. ಗಾಮ = d/R

ಒಂದು ಸಾರೊಸ್ ಆವರ್ತ ವ್ಯತ್ಯಾಸ ಇರುವ ಗ್ರಹಣಗಳಲ್ಲಿ ಜ್ಯಾಮಿತಿ ಸನ್ನಿವೇಶ, ಪರ್ವ, ಚಂದ್ರನ ದೂರ, ವರ್ಷದಲ್ಲಿ ನಡೆಯುವ ಕಾಲ ಒಂದೇ ತರಹವಾಗಿರುತ್ತವೆ.

ಗ್ರಹಣಕ್ಕೆ ಕಾರಣವಾದ ಚಂದ್ರಬಿಂಬದ ವ್ಯಕ್ತ  –  ನಮಗೆ ತೋರುವ  –  ಗಾತ್ರಕ್ಕೂ ಸೂರ್ಯ ಬಿಂಬದ ವ್ಯಕ್ತಗಾತ್ರಕ್ಕೂ ಇರುವ ನಿಷ್ಪತ್ತಿಯೇ ಗ್ರಾಸಮಾನ (ಮ್ಯಾಗ್ನಿಟ್ಯೂಡ್). ಪೂರ್ಣಸೂರ್ಯಗ್ರಹಣದಲ್ಲಿ ಇದು ಯಾವಾಗಲೂ ೧ಕ್ಕಿಂತ ಹೆಚ್ಚು. ಚಂದ್ರ ಮತ್ತು ಸೂರ್ಯರ ವ್ಯಕ್ತ ವ್ಯಾಸಗಳ ನಿಷ್ಪತ್ತಿಯಿಂದ ಇದನ್ನು ನಿರ್ಣಯಿಸಬಹುದು. ೨೦೦೯ನೇ ಜುಲೈ ೨೨ರ ಗ್ರಹಣಕ್ಕೆ ಇದರ ಗರಿಷ್ಟ ಗ್ರಾಸಮಾನ ೧.೦೮.

ಚಂದ್ರನ ಅಂಬ್ರ ನೆರಳು ಭೂಮಿಯನ್ನು ಎಷ್ಟು ಕೇಂದ್ರೀಯವಾಗಿ ಸ್ಪರ್ಶಿಸುತ್ತದೆ ಎಂಬುದನ್ನು ಗ್ರಹಣದ ‘ಗಾಮ’ ಸೂಚಿಸುತ್ತದೆ (ಚಿತ್ರ ೧೩). ಭೂಕೇಂದ್ರದಿಂದ ಅಂಬ್ರ ಅಕ್ಷ (ಕೇಂದ್ರ ರೇಖೆ)ದ ಲಂಬ ದೂರಕ್ಕೂ ಭೂಮಧ್ಯರೇಖೆಯಲ್ಲಿ ಬೂ ತ್ರಿಜ್ಯಕ್ಕೂ ಇರುವ ನಿಷ್ಪತ್ತಿ ಇದು. ಇದು ೦.೯೯೭೨ಗಿಂತ ಕಡಿಮೆ ಇದ್ದರೆ ಗ್ರಹಣವನ್ನು ಕೇಂದ್ರೀಯ ಎಂದು ಪರಿಗಣಿಸುತ್ತಾರೆ. ಜುಲೈ ೨೨ರ ಗ್ರಹಣಕ್ಕೆ ಗಾಮ ೦.೦೭ ಆಗಿದೆ. ಆದ್ದರಿಂದ ಗ್ರಹಣವು ಕೇಂದ್ರೀಯ.

ದಿಗಂತದಿಂದ ಗ್ರಸ್ತಸೂರ್ಯಬಿಂಬ ಇರುವ ಎತ್ತರವನ್ನು ಕೋನ ಡಿಗ್ರಿಗಳಲ್ಲಿ ವ್ಯಕ್ತಪಡಿಸುವಾಗ ಸೂರ್ಯಬಿಂಬದ ‘ಉನ್ನತಿ’ ಸಿಗುತ್ತದೆ. ಈ ಬಾರಿ ಗರಿಷ್ಠ ಗ್ರಾಸಮಾನದಲ್ಲಿ ಉನ್ನತಿ ೮೬ ಡಿಗ್ರಿ. ಗರಿಷ್ಠ ಪೂರ್ಣತೆಯ ಅವಧಿ ಮತ್ತೊಂದು ನಮೂದು. ಇದು ೬ ಮಿನಿಟು ೩೯ ಸೆಕೆಂಡು.