ಜುಲೈ ೨೨ನೇ ದಿನಾಂಕ ಮಳೆಗಾಲದೊಳಗೇ ಬರುವುದರಿಂದ ಪೂರ್ಣಗ್ರಹಣ ವೀಕ್ಷಣೆಗೆ ಯುಕ್ತವಾದ ಜಾಗಕ್ಕಾಗಿ ಹವಾಮಾನ ದಾಖಲೆಗಳನ್ನು ಅಧ್ಯಯಿಸಿದ್ದಾರೆ. ಎಲ್ಲೆಡೆ ಮಳೆ ಬೀಳುವ ಶ್ರಾಯವಾದ್ದರಿಂದ ಗ್ರಹಣನೋಟದ ಬಗ್ಗೆ ಬಹಳ ಆಶಾವಾದಿಗಳಾಗಲು ಸಾಧ್ಯವಿಲ್ಲ. ಆದರೆ ವಾರಾಣಸಿ, ಪಾಟ್ನಾ ಕಡೆ ಸರಿದಂತೆ ನೋಟದ ಸಂಭವನೀಯತೆ ಹೆಚ್ಚು ಎಂಬ ಒಂದು ಅಭಿಪ್ರಾಯವಿದೆ. ಪೂರ್ಣತೆಯ ಪಥದಲ್ಲಿ ನಿವಾಸಿಗಳಾದವರು ತಾವಿರುವಲ್ಲೇ ನೋಡಲು ಪ್ರಯತ್ನಿಸುವುದು ಸಹಜ. ಉಳಿದವರು ಪಯಣ, ಉಳಕೊಳ್ಳುವ ಸೌಲಬ್ಯ, ಖರ್ಚು  –  ಇವನ್ನೂ ಹವೆಯ ಅನುಕೂಲವನ್ನೂ ಪರಿಗಣಿಸಿ ನಿರ್ಧರಿಸಬೇಕಷ್ಟೆ. ಎಲ್ಲ ಸಿದ್ಧತೆಗಳನ್ನು ನಡೆಸಿಯೂ ಹವೆಯಿಂದಾಗಿ ಪೂರ್ಣತೆಯ ಎಲ್ಲ ಮೋಹಕ ಹಂತಗಳನ್ನೂ ದೃಶ್ಯಗಳನ್ನೂ ನೋಡಲಾಗಲಿಲ್ಲ ಎಂದುಕೊಳ್ಳಿ. ಆಗ ಎಷ್ಟು ಲಬ್ಯವೋ ಅಷ್ಟನ್ನು ನೀವು ಅನುಭವಿಸಿ ಆನಂದಿಸಲು ಮಾನಸಿಕವಾಗಿ ಸಿದ್ಧರಿರಬೇಕು. ಆದರೆ ಪೂರ್ಣಗ್ರಹಣದ ದೃಶ್ಯ ವೈಭವವನ್ನು ಖಂಡಗ್ರಹಣದಲ್ಲಿ ನಿರೀಕ್ಷಿಸಬೇಡಿ.

ಖಂಡ ಗ್ರಹಣದಲ್ಲಿ ಸೂರ್ಯ ಬಿಂಬ

ಅಂದು ಸೂರ್ಯನ ಹೊರ ಕರೋನದ ಅಧ್ಯಯನ, ಏಕವರ್ಣದಲ್ಲಿ ಸೂರ್ಯ ಮೈಯ ಅಧ್ಯಯನವೇ ಮೊದಲಾದ ಪ್ರಯೋಗಗಳನ್ನು ನಡೆಸಲು ಭಾರತದ ವಿಜ್ಞಾನಿಗಳು ಶುಬ್ರ ಹವೆಯ ಸಾಧ್ಯತೆ ಹೆಚ್ಚಿರುವ ಚೀನಕ್ಕೆ ಪಯಣಿಸುತ್ತಾರೆ.

ಗ್ರಹಣದಿನ ಸಮೀಪಿಸುತ್ತಿರುವಂತೆ ಸಂಭ್ರಮ, ಉದ್ವೇಗಗಳ ಫಲವಾಗಿ ಸಾರ್ವಜನಿಕ ಹೇಳಿಕೆಗಳು ಬರತೊಡಗುತ್ತವೆ. ಅನಂತರದ ಅವಕಾಶ ಭಾರತದಲ್ಲಿ ಯಾವಾಗ ಎಂಬುದೂ ಅವುಗಳಲ್ಲೊಂದು. ಭಾರತದಲ್ಲಿ ಮುಂದಿನ ಪೂರ್ಣಗ್ರಹಣ ೨೦೮೭ರಲ್ಲಿ, ೨೧೧೪ರಲ್ಲಿ ಎಂಬ ಹೇಳಿಕೆಗಳು ಈಗಾಗಲೇ ಬಂದಿವೆ. ಫ್ರೆಡ್ ಎಸ್ಪೆನಾಕ್ ಲೆಕ್ಕ ಹಾಕಿ ನಾಸದವರು ಪ್ರಕಟಿಸಿದ ಪ್ರಕಾರ ಅದು ೨೦೩೪ರಲ್ಲಿ. ಅವರು ತೋರಿಸಿದ ಬೂಪಟದಲ್ಲಿ ಆ ವರ್ಷ ಮಾರ್ಚ್ ೨೦ನೇ ದಿನಾಂಕ ಪೂರ್ಣತೆಯ ಪಥ ಕಾಶ್ಮೀರದ ಮೂಲಕ ಹಾದು ಹೋಗುತ್ತದೆ.

೧೯೯೫ನೇ ಅಕ್ಟೋಬರ್ ೨೪ರಂದು ಮುಖ್ಯ ನಗರಗಳಲ್ಲಿ ಇದ್ದ ಪಾರ್ಶ್ವಗ್ರಹಣದ ಮಟ್ಟ - ಈ ಬಾರಿಯ ನಕ್ಷೆಯೊಂದಿಗೆ ಹೋಲಿಸಿ ನೋಡಿ