ರಾತ್ರಿಹೊತ್ತು ದುಂಡಗಿನ ಒಂದು ಪಾದರಸ ಬಾಷ್ಪದೀಪದೆದುರು ಸಾಕಷ್ಟು ದೂರದಲ್ಲಿ ಒಂದು ಚೆಂಡನ್ನು ಹಿಡಿದಿದ್ದೀರಿ ಎಂದಿಟ್ಟುಕೊಳ್ಳಿ. ಚೆಂಡು ಅಪಾರಕ. ಅದರ ನೆರಳು ಬೀಳುತ್ತದೆ; ಆದರೆ ನೆರಳಿನ ಗಾಡತೆ ಒಂದೇ ತೆರನಾಗಿರುವುದಿಲ್ಲ (ಚಿತ್ರ ೧). ದೀಪದ ಯಾವ ಭಾಗದಿಂದಲೂ ಬೆಳಕು ನುಸುಳದ ದಟ್ಟ ನೆರಳು ಹೆಚ್ಚು ಕಪ್ಪಾಗಿರುತ್ತದೆ. ಇದು ಅಂಬ್ರ. ದೀಪದ ಯಾವುದೋ ಭಾಗದಿಂದ ನುಸುಳಿದ ಬೆಳಕು, ಉಳಿದ ಭಾಗದಿಂದ ಬೆಳಕು ನುಸುಳದೆ ಉಂಟಾದ ನೆರಳಿನ ಮೇಲೆ ಬಿದ್ದಾಗ ಅರೆ ನೆರಳು ಉಂಟಾಗುತ್ತದೆ. ಇದು ಪಿನಂಬ್ರ. ಬೆಳಕು ಸರಳರೇಖೆಯಲ್ಲಿ ಪಸರಿಸುವುದರಿಂದ ಉಂಟಾಗುವ ಪರಿಣಾಮಗಳಿವು. ಅಂಬ್ರದೊಳಗಿನಿಂದ ನೋಡಿದರೆ ದೀಪ ಕಾಣಿಸದು; ಪಿನಂಬ್ರದಿಂದ ನೋಡಿದರೆ ದೀಪದ ಸ್ವಲ್ಪ ಭಾಗ ಕಾಣಿಸುವುದು. ಅಂದರೆ ದೀಪ ಆಂಶಿಕವಾಗಿ ಕಾಣಿಸುವುದು.
ದೀಪದ ಸ್ಥಾನದಲ್ಲಿ ಸೂರ್ಯನನ್ನೂ ಅಪಾರಕ ಚೆಂಡಿನ ಬದಲಿಗೆ ಚಂದ್ರನನ್ನೂ ಕಲ್ಪಿಸಿಕೊಳ್ಳಿ. ಚಂದ್ರನ ಅಂಬ್ರ ಭೂಮಿಯ ಕಡೆ ಶೃಂಗವಿರುವ ಶಂಕುವಿನಂತೆ ಮುಂದುವರಿಯುತ್ತದೆ ಎಂದು ಬಾವಿಸಿಕೊಳ್ಳಿ. ಈ ಯಾ ಶಂಕು ಭೂಮಿಯ ಯಾವ ಜಾಗದ ಮೇಲೆ ಬೀಳುತ್ತದೋ ಅಲ್ಲಿಂದ ಸೂರ್ಯಪ್ರಕಾಶ ಸ್ವಲ್ಪವೂ ಕಾಣಿಸುವುದಿಲ್ಲ. ಆದ್ದರಿಂದ ಅಲ್ಲಿ ಆಗ ಪೂರ್ಣ ಸೂರ್ಯಗ್ರಹಣ (ಚಿತ್ರ ೨). ಚಂದ್ರನ ಪಿನಂಬ್ರ ಬೀಳುವ ಜಾಗದಿಂದ ನೋಡಿದರೆ ಸೂರ್ಯನ ಒಂದು ಪಾರ್ಶ್ವ ಅಥವಾ ಸೂರ್ಯ ಬಿಂಬದ ಕೇಂದ್ರ ಭಾಗ ಮರೆಯಾಗಬಹುದು. ಆಗ ಅಲ್ಲಿ ಕ್ರಮವಾಗಿ ಖಂಡ ಸೂರ್ಯಗ್ರಹಣ (ಪಾರ್ಶ್ವ ಸೂರ್ಯಗ್ರಹಣ) (ಚಿತ್ರ ೩) ಹಾಗೂ ಕಂಕಣ ಸೂರ್ಯಗ್ರಹಣ (ಚಿತ್ರ ೪) ಉಂಟಾಗುತ್ತವೆ. ಅಂದರೆ ಚಂದ್ರಬಿಂಬವು ಸೂರ್ಯನನ್ನು ಆಂಶಿಕವಾಗಿ ಅಥವಾ ಪೂರ್ಣವಾಗಿ ಮರೆಮಾಡುವುದೇ ಸೂರ್ಯಗ್ರಹಣ.
Leave A Comment