ಪೂರ್ಣ ಗ್ರಹಣ ಕಾಲದಲ್ಲಿ ಸೂರ್ಯಬಿಂಬಕ್ಕೆ ಚಂದ್ರಬಿಂಬ ಅಡ್ಡ ಬರುವುದಷ್ಟೆ? ಹಾಗೆ ಅಡ್ಡ ಬರಲು ಆರಂಭವಾಗುವ ಹಂತದಿಂದ ಹಿಡಿದು ಪೂರ್ತಿಯಾಗಿ ಅಡ್ಡ ಬಂದು ಉಂಟಾಗುವ ‘ಪೂರ್ಣತೆಯನ್ನು’ ದಾಟಿ ದೂರ ತೊಲಗುವವರೆಗಿನ ಅವಧಿಯಲ್ಲಿ ಬೆರಗುಗೊಳಿಸುವ ಹಲವು ವಿದ್ಯಮಾನಗಳನ್ನು ನೋಡಬಹುದು. ಪ್ರಯೋಗಾಲಯದೊಳಗೆ ಒಂದು ಪ್ರಯೋಗ ಅಥವಾ ಪ್ರದರ್ಶನವನ್ನು ಒಬ್ಬೊಬ್ಬರು ಅಥವಾ ಸಣ್ಣ ಸಣ್ಣ ಗುಂಪಿನ ಜನ ನೋಡಬಹುದು. ಆದರೆ ಪೂರ್ಣ ಸೂರ್ಯಗ್ರಹಣದ ಕಾಲದಲ್ಲಿ ವಿದ್ಯಮಾನವನ್ನು ಗುಂಪು ಗುಂಪಾಗಿ ನೂರಾರು ಜನ ನೋಡಿ ಆನಂದಿಸುವ ಸಂದರ್ಭ ಬರುತ್ತದೆ. ಪೂರ್ಣ ಗ್ರಹಣದ ಬದಲಾಗಿ ಸೂರ್ಯಬಿಂಬದ ಅಧಿಕಾಂಶವನ್ನು ಮರೆಮಾಡುವ ಖಂಡಗ್ರಹಣ ಅಥವಾ ಆಂಶಿಕ ಗ್ರಹಣದಿಂದ ಪೂರ್ಣಗ್ರಹಣ ಹುಟ್ಟಿಸುವ ಬೆರಗು ಉಂಟಾಗದು. ಆದ್ದರಿಂದಲೇ ಪೂರ್ಣ ಗ್ರಹಣದ ವೀಕ್ಷಣೆಯೊಂದು ‘ಪೂರ್ಣ ಅನುಭವ’ ಎನ್ನುವುದು.

ಚಂದ್ರಬಿಂಬವು ಸೂರ್ಯಬಿಂಬದ ಅಂಚನ್ನು ಸ್ಪರ್ಶಿಸಿದಂತೆ ಕಂಡುಬಂದು ಮರೆಮಾಡತೊಡಗುವುದರೊಂದಿಗೆ ಗ್ರಹಣ ಆರಂಭವಾಗುತ್ತದೆ. ಚಂದ್ರ ಬಿಂಬವು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡುವಾಗಿನ ಸ್ಥಿತಿಯನ್ನು ಪೂರ್ಣತೆ (ಖಗ್ರಾಸ) ಎನ್ನುತ್ತಾರೆ. ಹೀಗೆ ಸೂರ್ಯಬಿಂಬ ಮರೆಯಾಗಿರುವ ಅವಧಿಯೇ ಪೂರ್ಣತೆಯ ಕಾಲ. ಪೂರ್ಣತೆಗೆ ಸುಮಾರು ೧೫ ಮಿನಿಟುಗಳ ಮೊದಲು ಕತ್ತಲು ಆವರಿಸತೊಡಗಿ ದೃಶ್ಯತೆ ಕಡಿಮೆಯಾಗುತ್ತದೆ. ಚಂದ್ರನ ನೆರಳು ಪಶ್ಚಿಮದಿಂದ ಬರುತ್ತಿರುತ್ತದೆ. ಸೂರ್ಯಬಿಂಬದ ಅಂಚಿನಿಂದ ಬರುವ ಅಲ್ಪಸ್ವಲ್ಪ ಬೆಳಕಿನಲ್ಲಿ ಪರಿಸರವೇ ವಿಚಿತ್ರವಾಗಿ ತೋರುತದೆ. ಕ್ಷಣಗಳು ಉರುಳಿದಂತೆ ಸೂರ್ಯಬಿಂಬದ ದೀಪ್ತಭಾಗ ಸಣ್ಣದಾಗುತ್ತದೆ. ಪರಿಸರದ ಉಷ್ಣತೆ ಇಳಿಯುತ್ತದೆ. ಸೂರ್ಯ ಕಂತಿ ಕತ್ತಲಾಗುವಾಗ ತೋರುವ ಪ್ರತಿಕ್ರಿಯೆಯನ್ನು ಪಕ್ಷಿ, ಪ್ರಾಣಿಗಳು ತೋರುತ್ತವೆ. ಸೂರ್ಯಬಿಂಬ ಒಮ್ಮೆಲೇ ಮರೆಯಾದಾಗ ಕಪ್ಪು ಬಿಂಬದ ಸುತ್ತು, ಸೌರ ತ್ರಿಜ್ಯದ ನಾಲ್ಕೈದು ಮಡಿ ದೂರದ ತನಕ ಕರೋನ ಹೊಳೆಯುತ್ತದೆ. ವಾಸ್ತವವಾಗಿ ಕರೋನದ ವ್ಯಾಪ್ತಿ ಇದಕ್ಕಿಂತ ಎಷ್ಟೋ ಹೆಚ್ಚಿದೆ.

ಪೂರ್ಣಗ್ರಹಣ ಕಾಲದಲ್ಲಿ ನಾಲ್ಕು ಸ್ಪರ್ಶ ಬಿಂದುಗಳನ್ನು ನೋಡಬಹುದು. ಮೊದಲಿಗೆ ಚಂದ್ರಬಿಂಬವು ಸೂರ್ಯಬಿಂಬವನ್ನು ಸ್ಪರ್ಶಿಸುವಂತೆ ತೋರುವ ಬಿಂದು, ಪೂರ್ಣತೆ ಪ್ರಾರಂಭವಾಗುವಾಗ ಚಂದ್ರಬಿಂಬದ ಮತ್ತೊಂದು ಬದಿಯ ಸ್ಪರ್ಶ, ಪೂರ್ಣತೆ ಕೊನೆಯಾದಾಗ ಮತ್ತು ಮೋಕ್ಷವಾದಾಗ (ಗ್ರಹಣ ಕೊನೆಗೊಂಡಾಗ) ಕಂಡು ಬರುವ ಸ್ಪರ್ಶಬಿಂದುಗಳು. ಈ ಸ್ಪರ್ಶಬಿಂದುಗಳ ಮಧ್ಯದ ಕಾಲಾವಧಿಯನ್ನು ಅಳೆದು ಮುನ್ಸೂಚಿತ ಅವಧಿಯೊಂದಿಗೆ ಹೋಲಿಸಬಹುದು (ಚಿತ್ರ ೧೭).

ಪೂರ್ಣತೆಗೆ ಸ್ವಲ್ಪ ಮೊದಲು ಮತ್ತು ಸ್ವಲ್ಪ ಅನಂತರ ನೆಲದ ಮೇಲೆ ನೆರಳಿನ ಪಟ್ಟೆಗಳು ಹಾದುಹೋಗುತ್ತವೆ. ನೆಲದ ಮೇಲೆ ಬಿಳಿಯ ಬಟ್ಟೆಯನ್ನು ಹಾಸಿದರೆ ಅಲೆ ಅಲೆಯಾಗಿ ಸಾಗುವ ಈ ಪಟ್ಟೆಗಳು ಹೆಚ್ಚು ಸುಟವಾಗಿ ತೋರುತ್ತವೆ. ನೆಲದ ಮೇಲೆ ನಿಶ್ಚಿತ ಅಂತರಗಳಲ್ಲಿ ನೆಟ್ಟಗಿನ ಕೋಲುಗಳನ್ನು ನೆಟ್ಟು ನೆರಳಿನ ಪಟ್ಟೆಗಳು ಚಲಿಸುವ ದಿಕ್ಕನ್ನೂ ಪಥವನ್ನೂ ಗುರುತಿಸಬಹುದು. ಭೂಮಿಯ ಮೇಲೆ ಓಡುವ ಚಂದ್ರನ ನೆರಳಿನೊಂದಿಗೆ ಚಂದ್ರನ ಮೈಯನ್ನು ದಾಟುವಾಗ ಬಾಗುವ ಸೂರ್ಯನ ಕಿರಣಗಳು ಭೂಮಿಯ ವಾತಾವರಣದಲ್ಲಿ ಅನಿಯತವಾಗಿ ವಕ್ರೀಕರಣಕ್ಕೊಳಗಾಗುವುದು ಈ ವಿಶಿಷ್ಟ ಪಟ್ಟೆಗಳಿಗೆ ಕಾರಣವಾಗಿರಬಹುದು.

ಪೂರ್ಣಗ್ರಹಣ (ಮೇಲೆ): ೧. ಮೊದಲ ಸ್ಪರ್ಶ, ೩, ಎರಡನೇ ಸ್ಪರ್ಶ (ಪೂರ್ಣತೆಯ ಆರಂಭ), ೪. ಮೂರನೇ ಸ್ಪರ್ಶ (ಪೂರ್ಣತೆಯ ಮುಕ್ತಾಯ), ೬. ನಾಲ್ಕನೇ ಸ್ಪರ್ಶ (ಮೋಕ್ಷ). ಖಂಡಗ್ರಹಣ (ಕೆಳಗೆ) ೧. ಮೊದಲ ಸ್ಪರ್ಶ, ೩. ಗರಿಷ್ಠ ಹಂತ, ೫. ಕೊನೆಯ ಸ್ಪರ್ಶ, ಬಿಳಿ ವೃತ್ತ: ಸೂರ್ಯಬಿಂಬ, ಕಪ್ಪು ವೃತ್ತ: ಚಂದ್ರ ಬಿಂಬ

೧೯೯ನೇ ಅಕ್ಟೋಬರ್‌೨೪ - ಮುಂಜಾನೆ ೮.೩೦ ಗಂಟೆಗೆ ಆಕಾಶಕಾಯಗಳ ಸಾಪೇಕ್ಷ ಸ್ಥಾನಗಳು

ಸೂರ್ಯನ ಕೊನೆಯ ಅಂಚನ್ನು ಚಂದ್ರಬಿಂಬ ಮರೆಮಾಡುತ್ತಿರುವಂತೆ ಕೆಲವೇ ಸೆಕೆಂಡುಗಳ ಕಾಲ ಸೂರ್ಯನ ವರ್ಣಗೋಲವನ್ನು ನೋಡಬಹುದು.

ಪೂರ್ಣತೆಗಿಂತ ಕೆಲವೇ ಕ್ಷಣಗಳ ಮೊದಲು ಮತ್ತು ಅನಂತರ ಚಂದ್ರನ ಕಣಿವೆಗಳ ಮೂಲಕ ಹಾದು ಕಪ್ಪು ಬಿಂಬದ ಸುತ್ತಲಿನಿಂದ ಮಿನುಗುವ ಸೂರ್ಯಕಿರಣಗಳು ಮಣಿಖಚಿತ ಕಂರಹಾರದ ಭ್ರಮೆಯನ್ನು ತರಬಹುದು. ೧೮೩೬ರಲ್ಲಿ ಇದನ್ನು ವಿವರಿಸಿದ  ಫ್ರಾನ್ಸಿಸ್ ಬೈಲಿ ಎಂಬ ಇಂಗ್ಲಿಷ್ ಖಗೋಲಜ್ಞನ ಹೆಸರಿನಿಂದ ಈ ದೃಶ್ಯವನ್ನು ‘ಬೈಲಿ ಮಣಿಗಳು’ ಎಂದು ಕರೆಯುತ್ತಾರೆ. ಪರ್ವತಗಳು ಇಲ್ಲದ ಚಾಂದ್ರಕಣಿವೆಗಳ ಮೂಲಕ ಸೂರ್ಯ ಪ್ರಕಾಶ ಭೂಮಿಗೆ ಹರಿಯುವಾಗ ಮಣಿಗಳ ಭ್ರಮೆ ಉಂಟಾಗುತ್ತದೆ. ಚಾಂದ್ರ ಕಣಿವೆಯೊಂದರಿಂದ ತೂರಿಬರುವ ಬೆಳಕು ಕಪ್ಪುಬಿಂಬದ ಒಂದೆಡೆ ವಜ್ರದಂತೆ ಹೊಳೆಯುತ್ತ ಒಳಕರೋನವೇ ಉಂಗುರದಂತೆ ಕಂಡುಬಂದು ಪೂರ್ಣತೆಯ ಸ್ವಲ್ಪ ಮೊದಲು ಮತ್ತು ಅನಂತರ ‘ವಜ್ರದುಂಗುರ’ದ ದೃಶ್ಯವೂ ತೋರಬಹುದು. ಸೂರ್ಯನ ಸನಿಹ ಖಗೋಲದಲ್ಲಿರುವ ನಕ್ಷತ್ರಗಳನ್ನೂ ಗ್ರಹಗಳನ್ನೂ ಪೂರ್ಣತೆಯ ಕಾಲದಲ್ಲಿ ನೋಡಬಹುದು. ಅವೇ ನಕ್ಷತ್ರಗಳನ್ನು ರಾತ್ರಿ ಕಾಲದಲ್ಲಿ ನೋಡಬೇಕಾದರೆ ಕೆಲವು ತಿಂಗಳುಗಳೇ ಸರಿಯಬೇಕಾದೀತು. ಈ ಬಾರಿಯ ಪೂರ್ಣಗ್ರಹಣ ಪೂರ್ವಾಹ್ನ ನಡೆಯುವುದರಿಂದ ಗ್ರಹಣ ಕಾಲದಲ್ಲಿ ಕಾಣುವ ಹಲವು ಆಕಾಶಕಾಯಗಳು ಗ್ರಹಣಾನಂತರದ ರಾತ್ರಿ ಆಕಾಶದಲ್ಲಿ ಕಾಣಲಾರವು.

ಒಳಕರೋನದಲ್ಲಿ ಕೆಂಪು ಕಿತ್ತಳೆ ಬಣ್ಣದಲ್ಲಿ ಅಗ್ನಿ ಜ್ವಾಲೆಗಳಂತೆ ತೋರುವ ಚಾಚಿಕೆಗಳನ್ನು ಕಾಣಬಹುದು. ಪೂರ್ಣತೆಯ ಅವಧಿಯಲ್ಲಿ ಸೂರ್ಯನ ಪ್ರಕಾಶಕ್ಕೆ ಸಂವೇದಿಸುವ ಪ್ರಾಣಿ ಪಕ್ಷಿಗಳ ಮತ್ತು ಗಿಡಮರಗಳ ಚರ್ಯೆಗಳಲ್ಲಿ ಆಗುವ ಬದಲಾವಣೆಯನ್ನು ಗಮನಿಸಬಹುದು.

ಆದರೆ ಇವೆಲ್ಲವೂ ಕೇವಲ ಪೂರ್ಣತೆಯ ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾದಂಥವು.