ಚಂದ್ರ ತನ್ನ ಕಕ್ಷೆಯಲ್ಲಿ ಗಂಟೆಗೆ ಸುಮಾರು ೩೪೦೦ ಕಿಮೀ ವೇಗದಲ್ಲಿ ಪೂರ್ವಾಭಿಮುಖವಾಗಿ ಚಲಿಸುತ್ತದೆ. ಸೂರ್ಯಗ್ರಹಣದ ವೇಳೆ ಈ ಚಲನೆಯನ್ನು ನೀವು ಸುಲಭವಾಗಿ ಗ್ರಹಿಸಬಹುದು. ಚಂದ್ರನ ಅಂಬ್ರ ನೆರಳು ಕೂಡ ಸುಮಾರು ಅದೇ ವೇಗದಲ್ಲಿ ಚಲಿಸುತ್ತದೆ. ಭೂಮಿಯೂ ಪೂರ್ವಾಭಿಮುಖವಾಗಿ ಭ್ರಮಿಸುತ್ತದೆ. ಭೂಮಧ್ಯ ರೇಖಾ ಪ್ರದೇಶದಲ್ಲಿ ಈ ವೇಗ ಗಂಟೆಗೆ ಸುಮಾರು ೧೭೦೦ ಕಿಮೀ. ಆದ್ದರಿಂದ ಭೂಮಧ್ಯ ರೇಖೆಯ ಗುಂಟ (ಸೊನ್ನೆ ಅಕ್ಷಾಂಶ) ಅಂಬ್ರದ ವೇಗ ಗಂಟೆಗೆ ಸುಮಾರು ೧೭೦೦ ಕಿಮೀ. ಅಧಿಕ ಅಕ್ಷಾಂಶಗಳಲ್ಲಿ ಈ ವೇಗ ಹೆಚ್ಚಾಗುತ್ತ ಹೋಗುತ್ತದೆ. ಭೂಮಿಯನ್ನು ಅಂಬ್ರ ಸವರುವ ಕಿರಿಯ ಪ್ರದೇಶದಲ್ಲಿ ಪೂರ್ಣ ಸೂರ್ಯಗ್ರಹಣ ಅಥವಾ ಖಗ್ರಾಸ ಉಂಟಾಗುತ್ತದೆ.

೧೯೯೫ರ ಅಕ್ಟೋಬರ್ ೨೪ ಮತ್ತು ೧೯೯೯ರ ಆಗಸ್ಟ್ ೧೧  –  ಈ ದಿನಗಳಲ್ಲಿ ಅಂಬ್ರ ಭಾರತದ ನೆಲದ ಮೇಲೆ ಹಾದು ಹೋಯಿತು. ಇದೀಗ ೨೦೦೯ನೇ ಜುಲೈ ೨೨ರಂದು ಕೂಡ ಅಂಬ್ರ ನೆರಳು ಭಾರತವನ್ನು ಒಂದು ಸಪುರವಾದ ಹಾದಿಯಲ್ಲಿ ಅರಬಿಸಮುದ್ರ ಕಿನಾರೆಯಿಂದ ಉತ್ತರದ ಗಡಿಯ ತನಕ ಸವರಲಿದೆ.

ಕಳೆದ ಬಾರಿ (೧೯೯೯) ಪೂರ್ಣತೆಯ ಪಥ ಗುಜರಾತ್ ನಿಂದ ಆಗ್ನೇಯ ದಿಕ್ಕಿನಲ್ಲಿ ಮುಂದುವರಿದಿತ್ತು. ಈ ಬಾರಿ ಅದು ಮೊದಲಿಗೆ ಈಶಾನ್ಯ ದಿಕ್ಕಿನಲ್ಲಿ ಮುಂದುವರಿಯುತ್ತದೆ. ಸೂರತ್, ಬೋಪಾಲ್, ಇಂದೋರ್, ವಾರಣಾಸಿ, ಗಯಾ, ಪಾಟ್ನಾ ಮೊದಲಾದ ಸ್ಥಳಗಳನ್ನು ದಾಟಿ ನೇಪಾಳ, ಬಾಂಗ್ಲಾದೇಶ, ಬೂತಾನ್, ಮ್ಯಾನ್‌ಮಾರ್, ಚೀನ, ಜಪಾನಿನ ದಕ್ಷಿಣ ದ್ವೀಪಗಳ ಮೂಲಕ ಸಾಗಿ ಆಗ್ನೇಯ ಪೆಸಿಫಿಕ್ ಸಾಗರದ ಪಾಲಿನೇಶಿಯದಲ್ಲಿ ಕೊನೆಗಾಣುತ್ತದೆ (ಚಿತ್ರ ೨೦. ಚಿತ್ರ ಕೃಪೆ : ನಾಸ ವೆಬ್‌ಸೈಟ್). ಗರಿಷ್ಠ ಪೂರ್ಣತಾ ಅವಧಿ (೬ ಮಿನಿಟು ೩೯ ಸೆಕೆಂಡು) ಜಪಾನಿನ ದಕ್ಷಿಣ ಭಾಗದಲ್ಲಿ ಕಾಣಿಸುತ್ತದೆ. ಪೂರ್ವ ಏಷ್ಯ, ಇಂಡೊನೇಷ್ಯ ಹಾಗೂ  ಫೆಸಿಫಿಕ್ ಸಾಗರದ ಹಲವು ಪ್ರದೇಶಗಳು ಆಂಶಿಕ ಗ್ರಹಣವನ್ನು ಕಾಣುತ್ತವೆ. ನಮ್ಮ ದೇಶದಲ್ಲಿಡೀ ಆಂಶಿಕ ಗ್ರಹಣ ಕಾಣಿಸುವುದು (ಚಿತ್ರ ೨೧. ಕೃಪೆ : ನಾಸ ವೆಬ್‌ಸೈಟ್). ಪೂರ್ಣತೆಯ ಪಥ ಭಾರತದಲ್ಲಿ ಪೂರ್ವಕ್ಕೆ ಮುಂದುವರಿಯುವುದನ್ನು ಚಿತ್ರ ೨೨ ಸೂಚಿಸುವುದು. (ಚಿತ್ರ ಕೃಪೆ : ಎ – . ಎಸ್ಪೆನಾಕ್, ಜೆ. ಆಂಡರಸನ್ : ನಾಸ ವೆಬ್‌ಸೈಟ್).

ಅರಬಿ ಸಮುದ್ರದಿಂದ ಫೆಸಿಫಿಕ್ ಸಾಗರಕ್ಕೆ ಪೂರ್ಣತೆಯ ಫಥ