ಭಾರತದಲ್ಲಿ ಕಂಡು ಬಂದ ಪೂರ್ಣ ಸೂರ್ಯ ಗ್ರಹಣಗಳಲ್ಲಿ ೧೮೬೮ನೇ ಆಗಸ್ಟ್ ೧೮ರಂದು ನಡೆದುದು ಐತಿಹಾಸಿಕವಾಗಿ ಮಹತ್ವದ್ದು. ಅದರ ವೀಕ್ಷಣೆಯಿಂದ ವಿಜ್ಞಾನಿಗಳು ಸೂರ್ಯನ ಹೊರಮೈಯಲ್ಲಿ ನಡೆಯುವ ಪ್ರಾಮಿನೆನ್ಸ್ (ಚಾಚಿಕೆ) ಎಂಬ ಸೊಟನಗಳ ಬಗ್ಗೆ ಹೆಚ್ಚು ತಿಳಿದರು. ಅವು ಅನಿಲಮಯವಾಗಿರುವುದನ್ನು ಕಂಡುಕೊಂಡರು. ರೋಹಿತ ವೀಕ್ಷಣೆಯಿಂದ ಸೂರ್ಯನಲ್ಲಿ ಹೀಲಿಯಂ ಎಂಬ ಹೊಸ ಧಾತುವಿನ ಆವಿಷ್ಕಾರವಾದದ್ದೂ ಆ ಗ್ರಹಣ ಕಾಲದಲ್ಲೇ.

೧೮೭೧ನೇ ಡಿಸೆಂಬರ್ ೧೨ರಂದು ಭಾರತದಲ್ಲಿ ಕಂಡ ಗ್ರಹಣವನ್ನು  ಫ್ರಾನ್ಸಿನ ಖಗೋಲಜ್ಞ ಜಾನ್ಸೆನ್ ಅವರು ವೀಕ್ಷಿಸಿ ಸೂರ್ಯನ ಕರೋನದಿಂದ ಬರುವ ರೋಹಿತ ರೇಖೆಗಳನ್ನು ಅಧ್ಯಯಿಸಿದರು. ೧೮೯೮ರ ಜನವರಿ ೨೨ರಂದು ಭಾರತದಲ್ಲಿ ಕಂಡು ಬಂದ ಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿ ಇಲೆಕ್ಟ್ರಾನ್ ಸಾಂದ್ರತೆಯನ್ನು ನಿರ್ಧರಿಸಲು ವರ್ಣಮಂಡಲ ಮತ್ತು ಚಾಚಿಕೆಗಳ ರೋಹಿತ ವಿಶ್ಲೇಷಣೆಯನ್ನು ಮಾಡಿದರು. ೧೯೫೫ರಲ್ಲಿ ಚಂದ್ರನ ನೆರಳು ಭಾರತ ಉಪಖಂಡದ ದಕ್ಷಿಣ ತುದಿಯನ್ನು ಸ್ಪರ್ಶಿಸಿತ್ತು ಮಾತ್ರ. ೧೯೮೦ರಲ್ಲಿ ನಡೆದ ಪೂರ್ಣಗ್ರಹಣದ ಕಾಲದಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಳ್ಳಲಾಯಿತು. ಅವುಗಳಲ್ಲಿ ಒಂದು  –  ಸೂರ್ಯಬಿಂಬದಲ್ಲಿ ಕಾಣುವ ಕಲೆಗಳಿಗೂ ಕಾಂತಕ್ಷೇತ್ರಕ್ಕೂ ಇರುವ ಸಂಬಂಧವನ್ನು ತಿಳಿಯುವುದು. ಭಾರತದಲ್ಲಿ ೧೯೯೫ರ ಅಕ್ಟೋಬರ್ ೨೪ರಂದು ಲಕ್ಷಾಂತರ ಜನ ಪೂರ್ಣತೆಯನ್ನು ನೋಡಿದರು. ಕೆಲವೆಡೆ ೧೯೯೯ನೇ ಆಗಸ್ಟ್ ೧೧ರಂದು ಪೂರ್ಣಸೂರ್ಯಗ್ರಹಣವನ್ನು ಉತ್ಸವದಂತೆ ಆಚರಿಸಿದರು. ಇದೀಗ ಪೂರ್ಣಸೂರ್ಯಗ್ರಹಣ ೨೦೦೯ನೇ ಜುಲೈ ೨೨ರಂದು ಭಾರತ, ಚೀನಗಳಲ್ಲಿ ಕಾಣಿಸುತ್ತದೆ. ಈ ಸಂದರ್ಭದಲ್ಲಿ ಅನೇಕ ಸಂಸ್ಥೆಗಳು ವ್ಯಾಪಾರೀ ದೃಷ್ಟಿಯಿಂದ ಆಕರ್ಷಕ ಪ್ರವಾಸಗಳನ್ನು ಸಂಘಟಿಸಿದ್ದಾರೆ. ಭಾರತದಲ್ಲಿ ಇದೀಗ ಪೂರ್ಣ ಸೂರ್ಯಗ್ರಹಣ ೨೦೦೯ನೇ ಜುಲೈ ೨೨ರಂದು  ಕಾಣಿಸುತ್ತದೆ. ಗ್ರಹಣದ ಬಗ್ಗೆ ಜನರ ಆಸಕ್ತಿ, ಅವಧಾನಗಳು ಹೇಗೆ ಬದಲಾಗುತ್ತವೆ ಎಂದು ತಿಳಿಯುವುದಕ್ಕೂ ಇದೊಂದು ಸಂದರ್ಭ.