ಪೂರ್ಣತಾ ಪಥ ಮತ್ತ ಅದರ ಎರಡು ಬದಿಗಳಲ್ಲಿ ಆಂಶಿಕ ಗ್ರಹಣ ಇರುವ ಪ್ರದೇಶ. ವಿವಿಧ ಪ್ರಮಾಣಗಳಲ್ಲಿ ತೋರುವ ಗ್ರಹಣದ ಪ್ರದೇಶಗಳನ್ನು ವಿವಿಧ ಸಮಾಂತರ ವಕ್ರರೇಖೆಗಳು ತೋರಿಸುತ್ತವೆ.

ಗ್ರಹಣವು ಅರಬಿಸಮುದ್ರದಲ್ಲಿ ಬೆಳಗ್ಗೆ ಸುಮಾರು ನಾಲ್ಕೂವರೆ ಗಂಟೆಗೆ ಆರಂಭವಾಗುವುದು. ಬೆಂಗಳೂರು ಒಳಗೊಂಡಂತೆ ಹಲವು ಕಡೆ ಗ್ರಹಣ ಗ್ರಸ್ತ ಸೂರ್ಯನ ಉದಯವಾಗುತ್ತದೆ (ಗ್ರಸ್ತೋದಯ). ನಾಗಪುರ (೦.೯೬, ಹುಬ್ಬಳ್ಳಿ  –  ಧಾರವಾಡ (೦.೮೨೨), ಬೆಂಗಳೂರು (೦.೭೨)ಗಳಲ್ಲಿ ಗ್ರಾಸಮಾನಗಳು ಬೇರೆ ಬೇರೆಯಾಗಲು ಪೂರ್ಣತಾ ಪಥದಿಂದ ಆ ಸ್ಥಳಗಳಿರುವ ದೂರಗಳೇ ಕಾರಣ. ಬರೋಡ ಮತ್ತು ಸೂರತ್‌ಗಳಲ್ಲಿ ಪೂರ್ಣತೆಯ ಆರಂಭ ಮತ್ತು ಮುಕ್ತಾಯಕಾಲಗಳ ಮಧ್ಯದ ವ್ಯತ್ಯಾಸ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಕಾಣುತ್ತಿದೆಯಷ್ಟೆ? ಸೂರತ್ ಪೂರ್ಣತಾಪಥದ ಕೇಂದ್ರ ರೇಖೆಯ ಸಮೀಪವೂ ಬರೋಡ ಅಂಚಿನಲ್ಲೂ ಇರುವುದೇ ಇದಕ್ಕೆ ಕಾರಣ.

ಭಾರತದಲ್ಲಿ ಪೂರ್ಣತೆಯ ದಾರಿ. ಪೂರ್ವಕ್ಕೆ ಸೇರಿದಂತೆ ಪೂರ್ಣತೆಯ ಅವಧಿ ಹೇಗೆ ಬದಲಾಗುತ್ತದೆ ಎಂಬುದನ್ನು ಗಮನಿಸಿ

 

ಚಿತ್ರ ೨೩: ಸೂರ್ಯನಿಗೆ ಚಂದ್ರ ಅಡ್ಡ ಬಂದಾಗ ಭೂಮಿಯಲ್ಲಿ ಬೀಳುವ ಪೂರ್ಣತೆಯ ಫಥ

 

ಭೂಮಧ್ಯರೇಖೆಯ ಸಮೀಪ ಅಂಬ್ರದ ವ್ಯಾಸ ಅತಿ ಅನುಕೂಲ ಸನ್ನಿವೇಶದಲ್ಲಿ ೨೬೯ ಕಿಮೀ ಆಗಬಹುದು; ಖಗ್ರಾಸದ ಅವಧಿ ೭.೫ ಮಿನಿಟುಗಳಾಗಬಹುದು. ಪೂರ್ಣತೆ (ಖಗ್ರಾಸ)ಯ ಅವಧಿ ಮತ್ತು ಪೂರ್ಣತಾ ಪಥದ ಅಗಲ ಇವುಗಳ ಗರಿಷ್ಠ ಮೌಲ್ಯಗಳು ಬೇರೆ ಬೇರೆ ಗ್ರಹಣಗಳಲ್ಲಿ ಬೇರೆ ಬೇರೆ. ೨೦೧೦ನೇ ವರ್ಷ ಜುಲೈ ೧೧ರಂದು ದಕ್ಷಿಣ ಪೆಸಿಫಿಕ್ ಸಾಗರದ ಮೂಲಕ ಪೂರ್ಣತಾ ಪಥ ಹಾದು ಹೋಗುವಾಗ ಪೂರ್ಣತಾ ಪಥದ ಗರಿಷ್ಠ ಅಗಲ ೨೫೬ ಕಿಮೀ, ಪೂರ್ಣತೆಯ ಗರಿಷ್ಠ ಅವಧಿ ೫ ಮಿನಿಟು ೨೦ ಸೆಕೆಂಡು. ೨೦೨೭ನೇ ಆಗಸ್ಟ್ ೨ರಂದು ಜಿಬ್ರಾಲ್ಟರ್ ಮೂಲಕ ಹಾದು ಹೋಗುವ ಪೂರ್ಣತಾ ಪಥದ ಗರಿಷ್ಠ ಅಗಲ ೨೨೯ ಕಿಮೀ. ಆಗ ಗರಿಷ್ಠ ಪೂರ್ಣತಾ ಅವಧಿ ೬ ಮಿನಿಟು ೨೨ ಸೆಕೆಂಡು. ಅಕ್ಷಾಂಶ ಬದಲಾವಣೆಯೊಂದಿಗೆ ಅಂಬ್ರ ವಿಸ್ತಾರವೂ ಅಂಬ್ರದ ವೇಗವೂ ಬದಲಾಗುತ್ತದೆ ಎಂಬುದನ್ನು ಜ್ಞಾಪಿಸಿಕೊಂಡರೆ ಪೂರ್ಣತಾ ಪಥದ ಗರಿಷ್ಠ ಅಗಲ ಮತ್ತು ಪೂರ್ಣತೆಯ ಗರಿಷ್ಠ ಅವಧಿ  –  ಇವು ಗ್ರಹಣದಿಂದ ಗ್ರಹಣಕ್ಕೆ ಬದಲಾಗುವುದರ ಕಾರಣವನ್ನು ಗ್ರಹಿಸಬಹುದು. ಈ ಬಾರಿ ಇವು ಕ್ರಮವಾಗಿ ೨೫೮.೪ ಕಿಮೀ ಮತ್ತು ೬ ಮಿನಿಟು ೩೯ ಸೆಕೆಂಡು.