ಸೂರ್ಯನನ್ನು ನೇರವಾಗಿ ನೋಡಲು ಉಪಯೋಗಿಸುವ ಫಿಲ್ಟರು ಅಥವಾ ಫಿಲ್ಮು ಸೂರ್ಯ ಪ್ರಕಾಶದ ತೀವ್ರತೆಯನ್ನು ಒಂದು ಲಕ್ಷ ಪಟ್ಟು ಕಡಿಮೆಗೊಳಿಸಬೇಕು. ಅದಲ್ಲದೆ ಫಿಲ್ಟರುಗಳನ್ನು ಉಪಯೋಗಿಸಿಕೊಂಡರೂ ಕೂಡ, ಒಂದು ಬಾರಿಗೆ ಸತತವಾಗಿ ಕೆಲವು ಸೆಕೆಂಡುಗಳಿಗಿಂತ ಅಧಿಕ ಅವಧಿಗೆ ನೋಡದಿರುವುದೇ ಲೇಸು. ವೀಕ್ಷಿಸುವ ಹಲವು ಜನರ ತಂಡವಿದ್ದರೆ ಮೊದಲೇ ಒಬ್ಬ ನಾಯಕನನ್ನು ಆರಿಸಿ ವೀಕ್ಷಣಾ ಕಾಲದಲ್ಲಿ ಕಾಲೋಚಿತವಾಗಿ ಫಿಲ್ಟರುಗಳನ್ನು ಉಪಯೋಗಿಸುವುದಕ್ಕೂ ಪೂರ್ಣತೆಯನ್ನು ಮತ್ತು ಅದರೊಂದಿಗೆ ತೋರುವ ವಿದ್ಯಮಾನಗಳನ್ನು ನೋಡುವುದಕ್ಕೂ ಸೂಚನೆಗಳನ್ನು ಕೊಡುವಂತೆ ಮಾಡಬಹುದು. ಆದರೆ ಆ ನಾಯಕ ಅಸಂದಿಗ್ಧ ರೀತಿಯಲ್ಲಿ ಸೂಚನೆಗಳನ್ನು ನೀಡಲು ಸಮರ್ಥನಾಗಿರಬೇಕು.

ವಿದ್ಯುತ್ ಬಲ್ಬಿನಲ್ಲಿ ವೋಲ್ಟೇಜಿನೊಂದಿಗೆ ವಾಟ್‌ಗಳನ್ನೂ ನಮೂದಿಸುತ್ತಾರಷ್ಟೆ. ೬೦ ವಾಟ್ (೨೨೦ ವೋಲ್ಟ್) ಬಲ್ಬು ಉರಿಯುತ್ತಿರುವಾಗ ಸುಮಾರು ೨೫ ಸೆಮೀ ದೂರದಲ್ಲಿ ನೀವು ಉಪಯೋಗಿಸುವ ಫಿಲ್ಟರಿನ ಮೂಲಕ ಮುದ್ರಿತ ಅಕ್ಷರ ಅಂಕಿಗಳನ್ನು ಓದಲಾಗದಂತೆ ಬೆಳಕಿನ ತೀವ್ರತೆ ಕುಗ್ಗಿದರೆ ಅದು ಪ್ರಶಸ್ತ. ಕತ್ತಲೆಯ ಕೋಣೆಯಲ್ಲಿ ಉರಿಯುವ ೬೦ ವಾಟ್ ಬಲ್ಬು, ಫಿಲ್ಟರು ಮೂಲಕ ಹುಣ್ಣಿಮೆ ಚಂದ್ರನ ದೀಪ್ತತೆಯಿಂದ ಹೆಚ್ಚೆಂದು ಅನಿಸಬಾರದು. ವ್ಯಕ್ತಿಯಿಂದ ವ್ಯಕ್ತಿಗೆ ಇಂಥ ಒರೆ ಬದಲಾಗಬಹುದೆಂಬುದನ್ನೂ ನಾವು ನೆನಪಿಟ್ಟುಕೊಳ್ಳಬೇಕು.