ಭೂಮಿಯ ಭೌತಿಕ ಮತ್ತು ಜೈವಿಕ ಚಟುವಟಿಕೆಗಳ ಮೇಲೆ ಆದಿಯಿಂದಲೂ ಪ್ರಬಾವ ಬೀರಿದ ನಕ್ಷತ್ರವೆಂದರೆ ಸೂರ್ಯ. ಸೂರ್ಯನನ್ನೂ, ಅಲ್ಲಾಗುವ ವಿದ್ಯಮಾನಗಳನ್ನೂ ಹೆಚ್ಚು ಹೆಚ್ಚು ತಿಳಿದಷ್ಟೂ ನಮ್ಮ ಬದುಕಿಗೂ ಸೂರ್ಯನಿಗೂ ಇರುವ ಸಂಬಂಧದ ಬಗ್ಗೆ ಹೆಚ್ಚು ತಿಳಿಯಬಹುದು.

ಸೂರ್ಯಗೋಲದ ಕೇಂದ್ರದಿಂದ ಹೊರಕ್ಕೆ ಸರಿಯುತ್ತಾ ನ್ಯೂಕ್ಲಿಯರ್ ಪ್ರತಿಕ್ರಿಯಾ ವಲಯ (ಗರ್ಬ), ವಿಕಿರಣ ವಲಯ (ಮಧ್ಯಮ ವಲಯ), ವಹನ ವಲಯ, ಪ್ರಬಾಗೋಲ, ವರ್ಣಗೋಲ, ಕರೋನ (ಕಿರೀಟ) ಎಂದು ವಿವಿಧ ವಲಯಗಳನ್ನು ಗುರುತಿಸಿದ್ದಾರೆ. ಮೊದಲ ಮೂರು ವಲಯಗಳು ಪ್ರಬಾಗೋಲದೊಳಗಿವೆ. ಸೂರ್ಯನ ಗೋಚರ ಮೈಯೇ ಪ್ರಬಾಗೋಲ. ಅದರ ಹೊರಗೆ ತೆಳುವಾದ, ಪ್ರಬಾಗೋಲಕ್ಕಿಂತ ತಣ್ಣಗಾದ ವರ್ಣಗೋಲವಿದೆ. ವರ್ಣಗೋಲದ ಹೊರಗೆ ಹೆಚ್ಚು ತೆಳುವೂ ತಪ್ತವೂ ಬಹಳ ದೂರದವರೆಗೆ ಅನಿರ್ದಿಷ್ಟವಾಗಿ ಹರಡಿದ್ದೂ ಆಗಿರುವ ಭಾಗ ಕರೋನ. ಪೂರ್ಣ ಸೂರ್ಯಗ್ರಹಣದ ಕಾಲದಲ್ಲಿ ಪ್ರಬಾಗೋಲದವರೆಗಿನ ಸೂರ್ಯಬಿಂಬ ಪೂರ್ತಿ ಮರೆಯಾಗುವಾಗ ವರ್ಣಗೋಲ ಮತ್ತು ಕರೋನಗಳು ಕಾಣಿಸುತ್ತವೆ.

ಸೂರ್ಯನ ಪ್ರಬಾಗೋಲದಲ್ಲಿ ಕಪ್ಪಾದ ಸೌರಕಲೆಗಳು ಮತ್ತು ಉಜ್ವಲ ಭಾಗಗಳು (ಫ್ಯಾಕುಲಗಳು) ಕಾಣಿಸುತ್ತವೆ. ವರ್ಣಗೋಲದಲ್ಲಿ ಜ್ವಾಲೆಗಳು ಮತ್ತು ಧಾರೆಗಳು (ಸ್ವಿಕ್ಯೂಲುಗಳು) ಕಾಣುತ್ತವೆ. ಕರೋನದಲ್ಲಿ ಚಾಚಿಕೆಗಳಂಥ (ಪ್ರಾಮಿನೆನ್ಸ್) ಸಂರಚನೆಗಳು ಕಂಡು ಬರುತ್ತವೆ. ತೆಳುವಾದ ಕರೋನದ ಸಾಂದ್ರತೆ ಬಹಳ ಕಡಿಮೆ. ಆದರೆ ಉಷ್ಣತೆ ತುಂಬ ಹೆಚ್ಚು (ಒಂದು ಮಿಲಿಯನ್ ಕೆಲ್ವಿನ್). ಭೂಮಿಯವರೆಗೂ ಪ್ರಬಾವ ಬೀರಬಲ್ಲ ಅದನ್ನು ಅಧ್ಯಯಿಸಲು ಪೂರ್ಣ ಸೂರ್ಯಗ್ರಹಣ ಉತ್ತಮ ಅವಕಾಶವನ್ನೊದಗಿಸುತ್ತದೆ.

ವಿಕಿರಣವನ್ನು ಅಥವಾ ಬೆಳಕನ್ನು ಪ್ರಿಸಮ್ ಇಲ್ಲವೇ ಗ್ರೇಟಿಂಗ್‌ನಂಥ ಸಾಧನದಿಂದ ವಿವಿಧ ತರಂಗದೂರಗಳಿಗೆ ಅನುಗಣವಾಗಿ ಸ್ಪೆಕ್ಟ್ರೋಸ್ಕೋಪ್ ಎಂಬ ಉಪಕರಣದಲ್ಲಿ ವಿಶ್ಲೇಷಿಸಿದಾಗ ಸಿಗುವ ರೇಖೆಗಳನ್ನು ರೋಹಿತ ರೇಖೆಗಳೆನ್ನುತ್ತಾರೆ. ಇವು ವರ್ಣಗೋಲ ಮತ್ತು ಕರೋನಗಳ ಸಂಯೋಜನೆಯ ಬಗ್ಗೆ ತಿಳಿವು ಚೆಲ್ಲುತ್ತವೆ. ಅಯಾನು ಗೋಲವೆಂಬುದು ಭೂ ವಾತಾವರಣದ ಒಂದು ಭಾಗ. ಭೂಮಿಯಿಂದ ಸುಮಾರು ೫೦ ಕಿಮೀ ಮೀರಿದ ಎತ್ತರದಲ್ಲಿ ಅಯಾನುಗಳನ್ನು (ವಿದ್ಯುದಾವಿಷ್ಟ ಕಣಗಳನ್ನು) ಒಳಗೊಂಡ ಭಾಗ ಇದು. ಸೂರ್ಯನಿಂದ ದೂಡಲ್ಪಟ್ಟು ಭೂಮಿಯ ಸುತ್ತ ಸೆಕೆಂಡಿಗೆ ಕೆಲವು ನೂರು ಕಿಮೀ ವೇಗದಲ್ಲಿ ಸಾಗುವ ವಿದ್ಯುದಾವಿಷ್ಟ ಕಣಗಳ ಹೊನಲನ್ನು ಸೌರ ಮಾರುತ ಎನ್ನುತ್ತಾರೆ. ಅಯಾನುಗೋಲ ಮತ್ತು ಸೌರ ಮಾರುತಗಳ ಅಧ್ಯಯನಕ್ಕೂ ಅನುಕೂಲ ಸನ್ನಿವೇಶವನ್ನು ಪೂರ್ಣ ಸೂರ್ಯಗ್ರಹಣ ಒದಗಿಸುತ್ತದೆ.

ಆಕಾಶದ ಡೈನಮೊ ಸೂರ್ಯ: ೧. ಗರ್ಭ ೨. ಮಧ್ಯಮ ವಲಯ ೩. ವಹನ ವಲಯ. ತಪ್ತ ಅನಿಲ ಪ್ರವಾಹಗಳಿಂದ ಮೇಲ್ಮ್ಯೆಗೆ ಶಕ್ತಿಯ ವರ್ಗಾವಣೆ ೪. ಪ್ರಭಾಗೋಲ. ೫೦೦ ಕಿಮೀ ತೆಳುವಾದ ಈ ವಲಯದ ಮೂಲಕ ಬೆಲಕು ಹೊರಬೀಳುತ್ತದೆ. ಉಷ್ಣತೆ ಸುಮಾರು ೬೦೦೦ ಡಿಗ್ರಿ ಸೆಲ್ಸಿಯಸ್ ೫. ಸೌರಕಲೆ: ಪ್ರಭಾ ವಲಯಕ್ಕಿಂತ ೨೦೦೦ ಡಿಗ್ರಿ ಸೆ. ಕಡಮೆ ಉಷ್ಣತೆ ೬. ಭೂಮಿಯ ಗಾತ್ರ ೭. ವರ್ಣಗೋಲ (ಕ್ರೋಮೋಸ್ಫಯರ್) ೮. ಕರೋನ ೯. ಸೌರಮಾರುತ. ೧೦. ಜ್ವಾಲೆ

ಸೂರ್ಯನ ಮೇಲ್ಮೈ ಉಷ್ಣತೆ ಸುಮಾರು ೫೭೦೦ ಕೆಲ್ವಿನ್. ಇಲ್ಲಿಂದ ಸುತ್ತಲಿನ ಕರೋನದ ಉಷ್ಣತೆ ಒಮ್ಮೆಲೆ ಮಿಲಿಯನ್ ಕೆಲ್ವಿನ್‌ಗೆ ಏರುವುದು ಹೇಗೆ ಎಂಬುದು ಒಂದು ಒಗಟಾಗಿದೆ. ಪೂರ್ಣಸೂರ್ಯಗ್ರಹಣ ಕಾಲದಲ್ಲಿ ಕರೋನ ಬಿಟ್ಟರೆ ಉಳಿದ ಚೆದರಿಕೆ ಬೆಳಕು ಸಾವಿರ ಮಡಿ ಕಡಿಮೆಯಾಗುತ್ತದೆ. ಆದ್ದರಿಂದಲೇ ಅದು ಅಧ್ಯಯನಕ್ಕೆ ಉತ್ತಮ ವೇಳೆ. ೧೯೩೦ರಿಂದ ಕರೋನ ಅಧ್ಯಯನಕ್ಕೆ ಕರೋನಗ್ರಾಫ್  ಲಬ್ಯವಿದ್ದರೂ ಪೂರ್ಣಗ್ರಹಣಕಾಲದ ಅಧ್ಯಯನದ ಮಹತ್ವ ಕುಗ್ಗಿಲ್ಲ. ದೊಡ್ಡದಾದ ಹಾಗೂ ಬಾರದ ಉಪಕರಣಗಳನ್ನು ನೆಲದಲ್ಲೇ ಸ್ಥಾಪಿಸಿ ನಡೆಸುವ ಅಧಿಕ ಪೃಥಕ್ಕರಣ ಪ್ರಯೋಗಕ್ಕೂ ಆಗ ಅನುಕೂಲ.

ಪೂರ್ಣ ಸೂರ್ಯಗ್ರಹಣ: ಕಣ್ಮರೆಯಾದ ಸೂರ್ಯಬಿಂಬ, ಎದ್ದು ಕಾಣಿಸುವ ಕರೋನ

 

ವಾತಾವರಣ ಸಂಬಂಧವಾದ ಉಷ್ಣತೆ, ಆರ್ದ್ರತೆ, ಒತ್ತಡಗಳು ಒಮ್ಮೆಲೆ ನಡೆಯುವ ಸೂರ್ಯ ವಿಕಿರಣ ಹ್ರಾಸದಿಂದ ಹೇಗೆ ವ್ಯತ್ಯಯವಾಗುತ್ತವೆ ಎನ್ನುವುದೂ ಪೂರ್ಣಗ್ರಹಣ ವೇಳೆ ಬೇರೆ ಬೇರೆ ದೇಶಗಳ ವಿಜ್ಞಾನಿಗಳ ಪ್ರಯೋಗಗಳಿಗೆ ಒಳಗಾಗುತ್ತದೆ.