ಒಂದು ಸಾರೊಸ್ ಅವಧಿಯಲ್ಲಿ ಹಲವು ಗ್ರಹಣಗಳಾಗುತ್ತವೆ. ಇವು ಬೇರೆ ಬೇರೆಯಾಗಿ ಪುನರಾವರ್ತನೆಯಾಗುತ್ತವೆ. ಹೀಗೆ ಪುನರಾವರ್ತನೆಯಾಗುವ ಒಂದೊಂದು ನಿಶ್ಚಿತ ಲಕ್ಷಣದ ಗ್ರಹಣಗಳೆಲ್ಲ ಕೂಡಿ ಸಾರೊಸ್ ಶ್ರೇಣಿ ಅಥವಾ ಬಳಗವಾಗುತ್ತದೆ. ಈ ಮೊದಲು ಸೂಚಿಸಿದಂತೆ ಮೂರು ಸಾರೊಸ್ ಅವಧಿಗಳ ಅನಂತರ ಒಂದು ನಿಶ್ಚಿತ ರೇಖಾಂಶದಲ್ಲಿ ನಿಶ್ಚಿತ ಗ್ರಹಣವೊಂದು ಪುನರಾವರ್ತಿಸುವುದಾದರೂ ನಿಧಾನವಾಗಿ ತಲೆದೋರುವ ಆವರ್ತ ವ್ಯತ್ಯಾಸದಿಂದ ದೀರ್ಘ ಕಾಲಾವಧಿಯಲ್ಲಿ ಗ್ರಹಣದ ಈ ಪುನರಾವರ್ತನೆಯು ತಪ್ಪಿಹೋಗುತ್ತದೆ. ಆದ್ದರಿಂದ ಸಾರೊಸ್ ಶ್ರೇಣಿಗೂ ಆದಿ ಮತ್ತು ಅಂತ್ಯಗಳಿವೆ. ಆ ಮಧ್ಯೆ ೭೦ – ೮೦ ಸಾರೊಸ್ ಆವರ್ತಗಳು ನಡೆಯಬಹುದು. ಇವಕ್ಕೆ ಒಟ್ಟು ಸುಮಾರು ೧೩  –  ೧೫ ಶತಮಾನಗಳು ಬೇಕಾಗುತ್ತವೆ.

ಭೂಮಿಯ ಒಂದು ಧ್ರುವ ಪ್ರದೇಶದಲ್ಲಿ (ದಕ್ಷಿಣ ಧ್ರುವದಲ್ಲಿ) ನಡೆಯುವ ಪಾರ್ಶ್ವಗ್ರಹಣದೊಂದಿಗೆ ಯಾವುದೇ ಸಾರೊಸ್ ಶ್ರೇಣಿ ಪ್ರಾರಂಭವಾಗುತ್ತದೆ. ಅದು ಮತ್ತೊಂದು ಧ್ರುವ ಪ್ರದೇಶದಲ್ಲಿ ನಡೆಯುವ ಪಾರ್ಶ್ವ ಗ್ರಹಣದಲ್ಲಿ ಮುಕ್ತಾಯವಾಗುವುದೆಂದು ಒಪ್ಪಿಕೊಳ್ಳಲಾಗಿದೆ.

ಅನೇಕ ಸಾರೊಸ್ ಶ್ರೇಣಿಗಳಿವೆಯಷ್ಟೆ? ಇವನ್ನು ಅಂಕಿಸುವ ಕೆಲಸವನ್ನು ಡಚ್ ಖಗೋಲಜ್ಞ ಜಿ. ವಾನ್ ಡೆನ್ ಬರ್ಗ್ ೧೯೫೫ರಲ್ಲಿ ಮಾಡಿದರು. ಕ್ರಿಸ್ತಪೂರ್ವ ೨೦೦೦ ವರ್ಷಗಳಿಂದೀಚೆಗಿನ ಗ್ರಹಣಗಳ ಸಾರೊಸ್ ಶ್ರೇಣಿಗಳ ಸಂಖ್ಯೆ ಹೀಗೆ ನಿಗದಿಯಾಯಿತು. ೨೦೦೯ನೇ ಜುಲೈ ೨೨ರಂದು ನಡೆಯುವ ಪೂರ್ಣ ಸೂರ್ಯಗ್ರಹಣವನ್ನೊಳಗೊಂಡ ೧೩೬ನೇ ಸಾರೊಸ್ ಶ್ರೇಣಿ ೧೩೬೦ನೇ ಜೂನ್ ೧೪ರಂದು ನಡೆದ ಖಂಡ ಸೂರ್ಯಗ್ರಹಣದೊಂದಿಗೆ ಪ್ರಾರಂಭವಾಯಿತು. ೨೬೨೨ನೇ ಜುಲೈ ೩೦ರಂದು ಭೂಮಿಯ ಉತ್ತರಾರ್ಧದಲ್ಲಿ ನಡೆಯುವ ಖಂಡ ಸೂರ್ಯಗ್ರಹಣದಿಂದಿಗೆ ಅದು ಕೊನೆಗೊಳ್ಳುತ್ತದೆ. ೧೩೬ನೇ ಸಾರೊಸ್ ಶ್ರೇಣಿಯ ಒಟ್ಟು ಅವಧಿ ೧೨೬೨.೧೧ ವರ್ಷಗಳು. ಈ ಅವಧಿಯಲ್ಲಿ ನಡೆಯುವ ಒಟ್ಟು ೭೧ ಸೂರ್ಯಗ್ರಹಣಗಳಲ್ಲಿ ೩೭ನೇ ಗ್ರಹಣ ೨೦೦೯ನೇ ಜುಲೈ ೨೨ ದಿನಾಂಕದ್ದು.