ವಿಶ್ವಾಸಾರ್ಹ ಸಂಘ  –  ಸಂಸ್ಥೆಗಳಿಂದ ಪಡೆದ ಫಿಲ್ಟರ್ (ಅಥವಾ ಗ್ರಹಣ ಕನ್ನಡಕ)ಗಳನ್ನು ಬಳಸುವುದು ಲೇಸೆಂದು ಹಿಂದೆ ಹೇಳಿದೆವು. ಇದರೊಂದಿಗೆ ಇನ್ನೂ ಬೇರೆ ಕೆಲವು ಅಂಶಗಳ ಬಗ್ಗೆ ಗಮನ ಹರಿಸುವುದು ಕ್ಷೇಮ.

ಕಳೆದಬಾರಿ ಉಪಯೋಗಿಸಿದ ಹಳೆ ಫಿಲ್ಟರುಗಳನ್ನು ಕೆಲವರು ಬಳಸಬಹುದು. ಆಗ ಅದರಲ್ಲಿ ಏನಾದರೂ ಒಡಕಿದೆಯೇ, ಸೂಕ್ಷ್ಮ ರಂಧ್ರಗಳು ಉಂಟಾಗಿವೆಯೇ ಎಂದು ನೋಡಬೇಕು. ಹಾಗಿದ್ದರೆ ಅವನ್ನು ಬಳಸಬಾರದು.

ಇನ್ನೊಬ್ಬರಿಂದ ತಾತ್ಕಾಲಿಕವಾಗಿ ತೆಗೆದುಕೊಂಡು ಬಳಸುವಾಗ ಫಿಲ್ಟರನ್ನು ಕೊಟ್ಟವರಿಗೆ ಕಂಜಕ್ಟಿವೈಟಿಸ್ ನಂಥ ಕಣ್ಣಿನ ಸೋಂಕು ಇಲ್ಲವೆಂದು ಖಾತ್ರಿ ಮಾಡಿಕೊಳ್ಳಬೇಕು. ಎಕ್ಸ್ ರೇ ಫಿಲ್ಮು, ಹೊಗೆ ಹಿಡಿಸಿದ ಗಾಜು, ಕೂಲಿಂಗ್ ಗ್ಲಾಸ್‌ಗಳು ಗ್ರಹಣ ವೀಕ್ಷಣೆಯಲ್ಲಿ ಅಪಾಯಕಾರಿ.

ಫಿಲ್ಟರನ್ನು ಒರಸದಿರುವುದೊಳ್ಳೆಯದು. ಏಕೆಂದರೆ ಹಾಗೆ ಒರಸುವಾಗಲೇ ಅದರ ಫಿಲ್ಮಿನಲ್ಲಿ ಒಡಕು ಕಾಣಿಸುವುದು. ಅಗತ್ಯ ಬೇಕೆಂದಾದರೂ ಮೃದುವಾಗಿ ಮಿದುಬಟ್ಟೆಯಿಂದ ಫಿಲ್ಮು ಕೆಡದಂತೆ ಒರಸಿ.

ಇಷ್ಟೆಲ್ಲ ಸಿದ್ಧತೆಯಿಂದ ಪೂರ್ಣ ಸೂರ್ಯಗ್ರಹಣವನ್ನು ನೋಡಬೇಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ನೋಡಿದ ಅನಂತರವಷ್ಟೇ ಅದರ ಸಾರ್ಥಕತೆಯನ್ನು ಅಳೆಯಬಹುದಷ್ಟೆ.