ಮನುಷ್ಯ ಭೂಮಿಯಲ್ಲಿ ಉದಯಿಸುವ ಮೊದಲೇ ಗ್ರಹಣಗಳಾಗುತ್ತಿದ್ದವು. ಅವನ್ನು ದಾಖಲಿಸುವ ಮೊದಲೇ ಎಷ್ಟೋ ಗ್ರಹಣಗಳನ್ನು ಆತ ನೋಡಿದ್ದ. ಆದರೆ ದಾಖಲಾದ ಮೊದಲ ಸೂರ್ಯಗ್ರಹಣ ಚೀನದಲ್ಲಿ ಕ್ರಿ.ಪೂ. ೨೧೩೬ನೇ ವರ್ಷ ಅಕ್ಟೋಬರ್ ೨೨ನೇ ದಿನಾಂಕ ಕಂಡದ್ದು. ನಮಗೆ ತಿಳಿದಂತೆ ಸೂರ್ಯಗ್ರಹಣವನ್ನು ಮುನ್ಸೂಚಿಸಿದವರಲ್ಲಿ ಪ್ರಾಯಶಃ ಮೊದಲಿಗನೆಂದರೆ ಗ್ರೀಕ್ ದಾರ್ಶನಿಕ ಥೇಲೀಸ್. ಕ್ರಿ.ಪೂ. ೫೮೫ನೇ ವರ್ಷ ಮೇ ೨೫ರಂದು ಮೆಡಿಟರೇನಿಯನ್ ಪ್ರದೇಶದಲ್ಲಿ ಕಂಡುಬಂದ ಗ್ರಹಣವನ್ನು ಆತ ಮುನ್ಸೂಚಿಸಿದ್ದನಂತೆ. ಅಂದರೆ ಗ್ರಹಣಗಳ ಬಗೆಗಿನ ಕರಾರುವಾಕ್ಕಾದ ಲೆಕ್ಕಾಚಾರವನ್ನು ಮನುಷ್ಯನು ಕರಗತಮಾಡಿಕೊಂಡು ಕಡಿಮೆಯೆಂದರೆ ೨೫ ಶತಮಾನಗಳಾದವು. ೧೫ನೇ ಶತಮಾನದ ಜ್ಯೋತಿಷ ಗ್ರಂಥಕಾರ ಗಣೇಶ ದೈವಜ್ಞ ಪೂರ್ಣ ಸೂರ್ಯಗ್ರಹಣವನ್ನು ನೋಡಿ ಮನೋಜ್ಞವಾಗಿ ವರ್ಣಿಸಿದ್ದರು. ಹೀಗೆ ಸೂರ್ಯಗ್ರಹಣವನ್ನು ಮನುಷ್ಯ ಬಹಳ ಹಿಂದೆಯೇ ವಿಶ್ಲೇಷಿಸಿ ತಿಳಿದಿದ್ದರೂ ಇದು ಇಂದಿಗೂ ಭಯ, ಬೆರಗುಗಳಿಗೆ ಕಾರಣವಾಗುತ್ತದೆ ಎಂಬುದು ವಿಸ್ಮಯದ ಸಂಗತಿಯಲ್ಲವೆ?