ಗುಡಿಸಲು

ಗುಬ್ಬಿ ಮಂಚದ ಎಡಭಾಗದಲ್ಲಿ (ದಕ್ಷಿಣಕ್ಕೆ) ತ್ರಿಕೋಣಾಕಾರದಲ್ಲಿ ಕೆಲವು ನಕ್ಷತ್ರಗಳು, ಗುಡಿಸಲದ ಆಕಾರವನ್ನು ಹೋಲುವಂತೆ ಸಂಯೋಜನೆಯಾದುದನ್ನು ಕಾಣಬಹುದಾಗಿದೆ. ಇವಕ್ಕೆ ’ಗುಡಿಸಲು’ ಎಂದು ಜನಪದರು ಕರೆಯುತ್ತಾರೆ. ಮಂಚದ ಹಿಂದಿರುವ ಮೂರ ನಕ್ಷತ್ರಗಳಲ್ಲಿ ನಡುವಿನ (ವಶಿಷ್ಠ) ನಕ್ಷತ್ರದ ಸರಳರೇಖೆಯಲ್ಲಿ ದಕ್ಷಿಣಕ್ಕೆ ಹತ್ತು-ಹನ್ನೆರಡು ಅಡಿ ಅಂತರದಲ್ಲಿ ಈ ನಕ್ಷತ್ರ ಸಮೂಹ ಕಾಣುತ್ತದೆ. ತಲೆಯ ಮೇಲೆ ಮೂರು ಒಂದೊಂದು ಕಡೆಗೆ ನಾಲ್ಕು- ನಾಲ್ಕು ತೀರ ಚಿಕ್ಕ ಚಿಕ್ಕೆಗಳಿವೆ. ಈ ಗುಡಿಸಲು ಜನೆವರಿ ಸುಮಾರು ನಾಲ್ಕು ಗಂಟೆಗೆ ಸರಿಯಾಗಿ ನೆತ್ತಿಯ ಮೇಲೆ ಬಂದಿರುತ್ತದೆ. ಆಗ ಗುಡಿಸಲು ’ಲಾಗಹೊಡಿತು’ ಎಂದು ಹೇಳುತ್ತಾರೆ.

ಬಾಲಚಿಕ್ಕಿ

ಧೂಮಕೇತು ಎಂದು ಪ್ರಖ್ಯಾತಗೊಂಡ ಈ ನಕ್ಷತ್ರವನ್ನು ಜಾನಪದದಲ್ಲಿ ’ಬಾಲಚಿಕ್ಕಿ’ ಎನ್ನಲಾಗುತ್ತದೆ. ಅಗಣಿತ ನಕ್ಷತ್ರಗಳ ಇಡೀ ಕೂಟಕ್ಕೆ ಈ ಹೆಸರು. ಇದಕ್ಕೆ ಪಶ್ಚಿಮಕ್ಕೆ ತಲೆ, ಪೂರ್ವಕ್ಕೆ ಬಾಲದಂತೆ ಉದ್ದಾಗಿ ನಕ್ಷತ್ರಗಳಿರುತ್ತವೆ. ತಲೆ ಸ್ಪಷ್ಟವಾದ ನಕ್ಷತ್ರದಿಂದಾಗಿ, ಅದರ ಹಿಂದೆ ನವಿಲುಗರಿಯಂತೆ ತೀರ ಚಿಕ್ಕವಾದ ಅಗಣಿತ ನಕ್ಷತ್ರಗಳಿರುತ್ತವೆ. ಅವು ಹೊಗೆಯಂತೆ ಕಾಣುತ್ತವೆ. ಹಿಂದೆ ಕಿಡಿ ಕಾರುತ್ತ ಮೇಲೇರುವ ದೀಪಾವಳಿಯಲ್ಲಿ ಬಿಟ್ಟ ಬಾಣವನ್ನು ಇದು ಹೋಲುತ್ತದೆ. ಇದಕ್ಕೆ ಬಾಲವಿರುವ ಕಾರಣ ಈ ಹೆಸರು ಪ್ರಾಪ್ತವಾಗಿದೆ.

ಇದು ಎಷ್ಟೋ ವರ್ಷಗಳಿಗೊಮ್ಮೆ ಬರುವ ನಕ್ಷತ್ರವಾದ ಕಾರಣ ಬಹಳ ಜನರ ಕುತೂಹಲಕ್ಕೆ ಕಾರಣವಾಗಿದೆ. ಇದರ ಬರವು ಜಗತ್ತಿಗೆ ಕೆಡಕನ್ನು ಸೂಚಿಸುವುದೆಂಬ ದಟ್ಟವಾದ ನಂಬುಗೆಗಳಿವೆ. ಕನ್ನಡದ ಹಲವು ಕಾವ್ಯಗಳಲ್ಲಿ ಇದರ ಪ್ರಸ್ತಾಪವಿರುವುದನ್ನು ಮುಂದೆ ನೋಡಬಹುದು. ಪ್ರಪಂಚದ ತುಂಬ ಇದನ್ನು ಕುರಿತು ಇದ್ದಷ್ಟು ನಂಬುಗೆಗಳು ಮತ್ತಾವ ನಕ್ಷತ್ರವನ್ನು ಕುರಿತು ಇರಲಾರವು. ಇದನ್ನು ಕೆಲವು ಕಡೆ ’ಬೆಂಕೀಚಿಕ್ಕಿ’ ಎಂದೂ ಹೇಳಲಾಗುತ್ತದಂತೆ. ಹೊಗೆಯಂತೆ ಅದರ ಹಿಂದೆ ವಲಯವಿರುವುದರಿಂದ ಈ ಹೆಸರು ಬಂದಿರಬೇಕು. ಆದರೆ ಜನಪದರ ದೃಷ್ಟಿ, ಅನುಭವದ ಸೂಕ್ಷ್ಮತೆಗೆ ಸಾಕ್ಷಿಯಾಗಿ, ಧೂಮಕೇತುವಿನಲ್ಲಿ ಎರಡು ತೆರನಾದವುಗಳನ್ನು ಹೆಸರಿಸಿದ್ದನ್ನು ಕಾಣಬಹುದು. ಬಾಲಚಿಕ್ಕಿ ಮೂಡಿದ ವರ್ಷ ಬಾಲರಿಗೆ (ಮಕ್ಕಳಿಗೆ) ಕೆಡಕೆಂದೂ; ಅನಿಷ್ಠವೆಂದೂ ಗ್ರಾಮೀಣರಲ್ಲಿ ಹುರುಳಿಲ್ಲದ ನಂಬುಗೆಯೊಂದಿದೆ.

ಸೊಡ್ಡ ಅಥವಾ ಬಾರಿಗಿ

ಇದೂ ಒಂದು ಧೂಮಕೇತುವೆ. ಆದರೆ ಇದು ’ಬಾಲಚಿಕ್ಕಿ’ಯ ತಿರುವು ಮುರುವು ರೂಪ ಅಷ್ಟೇ. ಮುಖ್ಯ ನಕ್ಷತ್ರ ಪೂರ್ವಕ್ಕಿದ್ದು, ಅದರ ಬಾಲ ಪಶ್ಚಿಮಕ್ಕಿರುವುದರಿಂದ ಮೂಡಿದಾಗ ಅದು ಕಸಬರಿಗೆಯಂತೆ ಕಾಣುತ್ತದೆ. ಜಾನಪದದಲ್ಲಿ ಇದನ್ನು ಅದರ ರೂಪಕ್ಕನುಗುಣವಾಗಿ ’ಸೊಡ್ಡ’ ’ಬಾರಿಗೆ’ ಎಂದು ಕರೆಯುತ್ತಾರೆ. ಇದು ಮೂಡಿದ ವರ್ಷ ದೇಶಕ್ಕೆ ದಾರುಣ ಬರಗಾಲವಂತೆ! ಈ ಬಾರಿಗೆ ದೇಶದ ಜನ ದನ ಎಲ್ಲವನ್ನೂ ಹುಡುಗಿ ಹಾಕುತ್ತದೆಂದು ಒಕ್ಕಲಿಗರು ನಂಬುತ್ತಾರೆ.

ಇನ್ನು ಕೆಲವು ಒಂಟಿ ನಕ್ಷತ್ರಗಳನ್ನು ಕುರಿತು ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದು.

ಮೂರು ತಾಸಿನ ಚಿಕ್ಕಿ

ಮೂರು-ಸಂಜೆಗೆ ಪಶ್ಚಿಮ ದಿಕ್ಕಿನಲ್ಲಿ ಹೊಳೆವ ಈ ದೊಡ್ಡ ಚಿಕ್ಕ (ಶುಕ್ರ) ಯನ್ನು ಮೂರು ತಾಸಿನ ಚಿಕ್ಕಿ ಎನ್ನುವ ರೂಢಿ. ಸೂರ್ಯಾಸ್ತದ ನಂತರ ಕಾಣುವ ಈ ನಕ್ಷತ್ರ ಮೂರು ತಾಸು ರಾತ್ರಿಗೆ ಮುಳುಗುತ್ತದೆಂಬ ಕಾರಣಕ್ಕೆ ಈ ಹೆಸರು. ಕೆಲವು ಕಡೆ ಇದಕ್ಕೆ ’ಮುದುಕಿ’ ಎಂದು ಹೇಳಲಾಗುತ್ತದಂತೆ, ಇದು. ಬೇಗ ಮುಳುಗುತ್ತದೆಂಬ ಕಾರಣಕ್ಕೆ ಈ ಹೆಸರು ಬಂದಂತಿದೆ. ಹಳ್ಳಿಗರು ಇದನ್ನು ನೋಡಿಯೇ ರಾತ್ರಿಯ ಲೆಕ್ಕ ಹಾಕಿ ಮಲಗುತ್ತಿದ್ದರು. ಬೀದರದ ಕುರುಬ ಜನಾಂಗದಲ್ಲಿ ಇದನ್ನು ’ಮಲಾ ಮೇಯೋ ಚಿಕ್ಕಿ’ ಎಂದು ಹೇಳಲಾಗುತ್ತದೆ. ಅಡವಿಯಲ್ಲಿ ಮೊಲ ಈ ನಕ್ಷತ್ರದ ಬೆಳಕಿನಲ್ಲಿ ಮೇಯುತ್ತದಂತೆ!

ಬೆಳ್ಳಿ ಚಿಕ್ಕಿ

ಜನಪದ ಬದುಕಿನಲ್ಲಿ ಬಹಳಷ್ಟು ಜನಜನಿತವಾದ ನಕ್ಷತ್ರ ಈ ಬೆಳ್ಳೀಚಿಕ್ಕಿ. ಶುಕ್ರಗ್ರಹಕ್ಕೆ ಇದು ಜನಪದರಿಟ್ಟ ಹೆಸರು. ಒಂದು ದೃಷ್ಟಿಯಿಂದ ಅವರಿಗೆ ಇದು ಸೂರ್ಯೋದಯವೇ ಸರಿ. ಇದನ್ನು ನೋಡಿಯೇ ಅವರಿಗೆ ಬೆಳಗು ಹರಿಯುತ್ತದೆ. ಹೊಲದಲ್ಲಿರುವವರಂತೂ ಬೆಳ್ಳೀಚಿಕ್ಕಿಯನ್ನೇ ನಂಬಿಕೊಂಡು ಏಳುತ್ತಾರೆ. ಅವರಿಗೆ ದಿನ ಆರಂಭವಾಗುವುದೇ ಬೆಳ್ಳಿಯ ಬರವಿನಿಂದ. ನೀರು, ನಿಡಿ, ಹೆಂಡಿ-ಕಸ, ಬೀಸು-ಕುಟ್ಟುವ ಕಾರ್ಯಕ್ಕಾಗಿ ಗ್ರಾಮೀಣ ಬದುಕು ಎಚ್ಚರಗೊಳ್ಳುತ್ತದೆ. ಬೆಳ್ಳಿ ಮೂಡುವ ಹೊತ್ತು, ಕೋಳಿ ಕೂಗುವ ಹೊತ್ತು ಎಂಬ ಮಾತುಗಳೂ ಜನಪದರಲ್ಲಿ ಸಹಜ. ಈ ನಕ್ಷತ್ರ ಬೆಳ್ಳಗೆ ಬೆಳ್ಳಿಯಂತೆ ಪ್ರಕಾಶಮಾನಗಾರಿವುದರಿಂದಲೇ ಇದಕ್ಕೆ ’ಬೆಳ್ಳಿ’ ಎನ್ನುವ ಅನ್ವರ್ಥಕ ಹೆಸರು. ಇದನ್ನು ಒಕ್ಕಲಿಗನ ಸ್ನೇಹಿತ ಎಂದು ಹೇಳಲಾಗುತ್ತದೆ. ’ಬೆಳ್ಳೆಪ್ಪ’ ’ಬೆಳ್ಳ್ಯಾ’ ಎಂದು ಮಕ್ಕಳಿಗೆ, ಎತ್ತುಗಳಿಗೆ ಹೆಸರಿಟ್ಟು ಕರೆಯುವುದು, ಈ ಚಿಕ್ಕಿಯಂತೆ ಮೇಲೇರಲಿ, ಪ್ರಕಾಶಮಾನವಾಗಿ ಬದುಕಲಿ ಎಂಬ ಆಕಾಂಕ್ಷೆಯಾಗಿ ಮೂರು ತಾಸಿನ ಚಿಕ್ಕಿಯನ್ನು ’ಮುದಕಿ ಎಂದು ಪರಿಗಣಿಸಿದರೆ, ಬೆಳ್ಳಿ ಚಿಕ್ಕಿಯನ್ನು ’ಕನ್ಯೆ’ ಎಂದು ತಿಳಿಯಲಾಗುತ್ತದೆ.

ಬಣಜಿಗನ ಮಿಂಡ

ಈ ಹೆಸರು ಅಚ್ಚ ಜಾನಪದ. ಪೂರ್ವ ದಿಕ್ಕಿನಲ್ಲಿ ಬೆಳ್ಳಿ ಮೂಡುವ ಒಂದು ಗಂಟೆ ಮೊದಲು ಈ ನಕ್ಷತ್ರ ಮೂಡುತ್ತದೆ. ಇದೂ ಬಹಳಷ್ಟು ಪ್ರಕಾಶಮಾನವಾಗಿರುವುದರಿಂದ ಇದನ್ನು ಬೆಳ್ಳೀಚಿಕ್ಕಿ ಎಂದೇ ಭ್ರಮಿಸುವ ಸಂಭವವಿದೆ. ಒಕ್ಕಲಿಗರೆಲ್ಲ ನಸುಕಿನಲ್ಲೆದ್ದು ಕಾರ್ಯತತ್ಪರರಾಗುವುದನ್ನು ಕಂಡು ಬಂದಾಗ (ವ್ಯಾಪಾರಿ) ತಾನೂ ನಸುಕಿನಲ್ಲೆದ್ದು ಈ ದೊಡ್ಡ ಚಿಕ್ಕಿಯನ್ನು ಕಂಡು ’ಬೆಳ್ಳಿ’ ಮೂಡಿತೆಂದು ಪರ ಊರಿಗೆ ವ್ಯಾಪಾರಕ್ಕೆ ಹೊರಟನಂತೆ. ಆದರೆ ರಾತ್ರಿ ಇನ್ನೂ ಬಹಳ ಇದ್ದುದರಿಂದ ಕಳ್ಳರು ದಾರಿಯಲ್ಲಿ ಬಡಿದು ಅವನ ವಸ್ತುಗಳನ್ನೆಲ್ಲ ದೋಚಿದರು. ಅಳುತ್ತ ಮನೆಗೆ ಹೊರಟ ಬಣಜಿಗನಿಗೆ, ನಿತ್ಯದಂತೆ ಹೊಲಕ್ಕೆ ಹೊರಟ ಒಕ್ಕಲಿಗ ಎದುರಾದ. ನಡೆದುದೆಲ್ಲ ಕೇಳಿದ ಒಕ್ಕಲಿಗ; ’ಬೆಳ್ಳಿ ಚಿಕ್ಕಿ’ ಮೂಡಿದ ಮೇಲೆ ಭಯವಿಲ್ಲ, ’ನೀನು ಬಹಳ ರಾತ್ರಿಯಲ್ಲೆ ಹೊರಟಿರುವಿ’ ಎಂದಾಗ ’ಇಲ್ಲ ನಾನೂ ಬೆಳ್ಳಿಚಿಕ್ಕಿ ಹೊರಟ ಮೇಲೆ ಮನೆ ಬಿಟ್ಟಿರುವೆ ಎಂದು ಬಣಜಿಗ ಉತ್ತರಿಸಿದನಂತೆ. ಆಗ ಒಕ್ಕಲಿಗ ’ಅಲ್ಲ, ಅದಲ್ಲ. ಅಲ್ಲಿ ನೋಡ ಈಗ ಬೆಳ್ಳಿ ಮೂಡಿದೆ’ ಎಂದು ಮೂಡಣಕ್ಕೆ ಕೈ ಮಾಡಿ ತೋರಿಸಿದನಂತೆ. ಈಗಾಗಲೇ ಮೇಲೆ ಬಂದುದು ’ಬೆಳ್ಳಿ ಅಲ್ಲವೇ? ಹಾಗಾದರೆ ಅದಾವುದು?’ ಎಂದು ಬಣಜಿಗ ಕೇಳಿದಾಗ ಆ ಚಿಕ್ಕಿಯ ಹೆಸರನ್ನರಿಯದ ಒಕ್ಕಲಿಗ ’ಅದು ಬಣಜಿಗನ ಮಿಂಡ’ ಎಂದನಂತೆ! ಅದಕ್ಕಾಗಿ ’ಬೆಳ್ಳಿ, ಮೂಡುವ ಮೊದಲು ಬಣಜಿಗನ ಮಿಂಡ ಮೂಡಿದಂತೆ’ ಎಂಬ ಗಾದೆಯೇ ಸಿದ್ಧವಾಯ್ತು, ಅದಕ್ಕಾಗಿ ಇಂದು ಜನಪದರು ಮದುವೆ ಮುಂತಾದ ಸಂದರ್ಭಗಳಲ್ಲಿ ಬೇಡಾದವರು ಮೊದಲು ಬಂದರೆ ’ಸಂತಿ ನೆರೆಯುವ ಮೊದಲು ಗಂಟೀಚೌಡೆಯರು ನೆರೆದ’ರೆಂಬ ಗಾದೆಯ ಅರ್ಥದಲ್ಲಿ ’ಬೆಳ್ಳಿಕಿತ ಮದಲ ಬಣಜಿಗನ ಮಿಂಡ ಬಂದ’ ಎಂದು ವ್ಯಂಗ್ಯವಾಡುತ್ತಾರೆ. ಬಳ್ಳಾರಿಯ ಕಡೆ ಇದೂ ’ಕೊಮಟಿ ಮಿಂಡ’ ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಯಾರಿಗೂ ಮೋಸ ಹೋಗದ ವ್ಯಾಪಾರಿ ಈ ನಕ್ಷತ್ರಕ್ಕೆ ಮೋಸ ಹೋದ ಎಂಬುದಕ್ಕೆ ಈ ರೀತಿಯ ಹೆಸರು ಪ್ರಾದೇಶಿಕವಾಗಿ ಬೇರ-ಬೇರೆ ಕಡೆ ಇರುವ ಸಂಭವವಿದೆ.

ಗಂಡಾಹೆಂಡ್ತಿ ಚಿಕ್ಕಿ (ವಶಿಷ್ಠಆರುಂಧತಿ)

ಪುರಾಣೋಕ್ತ ಈ ನಕ್ಷತ್ರಗಳನ್ನು ಬ್ರಾಹ್ಮಣ ಸಮಾಜದಲ್ಲಿ ಲಗ್ನವಾದೊಡನೆ ನವದಂಪತಿಗಳಿಗೆ ತೋರಿಸುವುದೊಂದು ಸಂಪ್ರದಾಯ. ಯಾವಾಗಲೂ ಜೊತೆಯಾಗಿರುವ ವಶಿಷ್ಠ- ಆರುಂಧತಿಯರ ಹೆಸರಿನ ಈ ನಕ್ಷತ್ರಗಳಂತೆ ಅನ್ಯೋನ್ಯ ದಂಪತಿಗಳಾಗಲು ಅವರಿಗೆ ಈ ಆದರ್ಶದ ದರ್ಶನ ಮಾಡಿಸುತ್ತಾರೆ. ಸಪ್ತರ್ಷಿಗಳಲ್ಲಿ (ಮಂಚ) ಕೊನೆಗಿರುವ ಮೂರು ನಕ್ಷತ್ರಗಳಲ್ಲಿ ನಡುವಿನದು ವಶಿಷ್ಠ, ಅದರ ಬದಿಯಲ್ಲಿರುವ ಚಿಕ್ಕ ನಕ್ಷತ್ರವೇ ಆರುಂಧತಿ ಇವುಗಳನ್ನು ಜಾನಪದರಲ್ಲಿ ಗಂಡಾ-ಹೆಣ್ತಿ ಚಿಕ್ಕಿ ಎಂದು ಹೇಳುತ್ತಾರೆ.

ಧ್ರುವನಕ್ಷತ್ರ:

ಉತ್ತಾನಪಾದ, ಸುನೀತಿಯ ಮಗನಾದ ಧ್ರುವ ಅಖಂಡ ತಪಸ್ಸು ಮಾಡಿ ಅಚಲ ನಕ್ಷತ್ರವಾದ ಕಥೆ, ಪೌರಾಣಿಕವಾದರೂ ಜನಪದ ಬದುಕಿನಲ್ಲಿ ಜನಜನಿತವಾಗಿದೆ. ಜನಪದ ಕುಟುಂಬದ ಕಥೆಯೇ ಈ ರೂಪದಲ್ಲಿ ಪುರಾಣಕ್ಕೆ ಸೇರಿದೆಯೆನ್ನುವಲ್ಲಿ ಸಂಶಯವೇ ಇಲ್ಲ. ಇದು ಗಂಡೆಂದು ಬೇರೆ ಹೇಳಬೇಕಿಲ್ಲ. ಈ ನಕ್ಷತ್ರ ಸ್ಥಿರ, ಅಚಲ. ಇದರಿಂದ ರಾತ್ರಿ ದಿಕ್ಕು ಬೇರೆ ಬೇಳಬೇಕಿಲ್ಲ. ಈ ನಕ್ಷತ್ರ ಸ್ಥಿರ, ಅಚಲ. ಇದರಿಂದಾಗಿ ರಾತ್ರಿ ಗುರುತಿಸುವ ಕೆಲಸ ಇಂದೂ ನಡೆಯುತ್ತಿದೆ. ಇದನ್ನು ’ಉತ್ತರ ಧ್ರುವ’ ಎಂದು ಗುರುತಿಸಲಾಗುತ್ತದೆ. ಕಾವ್ಯಗಳಲ್ಲಿ ಇದನ್ನು ನಿಶ್ಚಲತೆಗೊಂದು ಸಂಕೇತವಾಗಿ ಅಲ್ಲಲ್ಲಿ ಉದಾಹರಿಸುವುದುಂಟು. ರಾವಣ ವಿದ್ಯಾ ಸಾಧನೆಗೆ ತಪಸ್ಸು ಮಾಡುವಾಗ ಧ್ರುವಮಂಡಲದಂತೆ ನಿಶ್ಚಲನಾಗಿದ್ದುದನ್ನು ನಾಗಚಂದ್ರ ಹೇಳುತ್ತಾನೆ. ಒಳ್ಳೆಯವರು ಸ್ವರ್ಗಸೇರಿ ನಕ್ಷತ್ರವಾಗುತ್ತಾರೆಂಬ ಜನಪದ ನಂಬಿಕೆಗೆ ಇದೊಂದು ಉತ್ತಮ ಉದಾಹರಣೆ, ಸೈನ್ಯದಲ್ಲಿ ರಾತ್ರಿ ದಿಕ್ಕು ಗುರುತಿಸಲು ಇದನ್ನು ಈಗಲೂ ನೋಡುತ್ತಾರೆ.

ನಂಬುಗೆಗಳು:

ಈ ಗ್ರಹ ನಕ್ಷತ್ರಗಳನ್ನು ಕುರಿತು ಪ್ರಚಲಿತವಿರುವ ನಂಬುಗೆಗಳು ಪ್ರಾದೇಶಿಕವಾದವುಗಳಾದರೂ ಅವುಗಳ ವೈಚಾರಿಕ ಹಿನ್ನೆಲೆ ಮಾತ್ರ ಬೇರೆಯಾಗಿಲ್ಲ. ಈ ಅಧ್ಯಯನ ಮಾನವ ಜನಾಂಗದ ಮೂಲ ಒಂದೇ ಎಂಬುದನ್ನು ಸಿದ್ಧಪಡಿಸುವಲ್ಲಿ ಬಹಳ ಸಹಾಯಕವಾಗುವಲ್ಲಿ ಸಂಶಯವೇ ಇಲ್ಲ.

ನಕ್ಷತ್ರಗಳನ್ನು ಸತ್ತವರ ಕಣ್ಣುಗಳು, ಇಲ್ಲವೆ ತಮ್ಮ ಹಿರಿಯರ ಅತ್ಮಗಳು ಎಂಬ ನಂಬುಗೆ ಭಾರತದ ಬಹುತೇಕ. ಜನಾಂಗಗಳಲ್ಲಿದೆ. ಪುಣ್ಯವಂತರೇ ನಕ್ಷತ್ರಗಳಾಗುತ್ತಾರೆಂಬ ತಿಳಿಕೆ ಬದುಕಿನ ಸಾರ್ಥಕತೆಗೆ ಬೆರಳುಮಾಡಿ ತೋರಿಸುವಂತಿದೆ. ನಮ್ಮ ಹಿರಿಯರೆಂದು ಪರಿಭಾವಿಸಿದ ಈ ನಕ್ಷತ್ರಗಳು ನಮಗೆ ಬೆಳಕು ನೀಡಿ ಬದುಕಿನಲ್ಲಿ ದಾರಿ ತೋರಿಸಲು ಶಾಶ್ವತವಾಗಿ ಅಲ್ಲಿವೆಯಂತೆ!

ನಕ್ಷತ್ರ ಬೀಳುವುದನ್ನು ಕಂಡರೆ ಅಶುಭ, ಕೆಡಕು ಎಂಬುದು ಜನಪದರ ನಂಬುಗೆ. ನಕ್ಷತ್ರ ಬಿದ್ದೊಡನೆ ನೋಡಿದವರು ಉಗುಳಿ ಒಳಿತೆನ್ನುವ ರೂಢಿ ಇಂದೂ ಇದೆ. ಮಂಡ್ಯ, ಮೈಸೂರ ಕಡೆಗೆ ನಕ್ಷತ್ರ ಬೀಳುವುದನ್ನು ಕಂಡವರು ’ಹರಿಶ್ಚಂದ್ರಾ’ ಎಂದು ಹೇಳಿ ಹಸಿರು ಮರ ನೋಡುತ್ತಾರಂತೆ!

ದೊಡ್ಡ ಚಿಕ್ಕಿ ಬಿದ್ದರೆ ಅದನ್ನು ರಾಷ್ಟ್ರದ ಕೆಡಕು, ಪ್ರತಿಷ್ಠಿತರ ಸಾವಿನ ಸೂಚನೆ ಎಂದು ಪರಿಗಣಿಸುತ್ತಾರೆ.

ಸೊಡ್ಡ ಇಲ್ಲವೆ ಬಾರಿಗೆ ಆಕಾಶದಲ್ಲಿ ಬಂದ ವರ್ಷ ಭೀಕರ ಬರಗಾಲ ದೇಶಕ್ಕೆಲ್ಲ ಎಂಬುದು ದಟ್ಟವಾದ ತಿಳಿಕೆ. ೧೯೭೨ ರಲ್ಲಿ ಇದು ಮೂಡಿತ್ತಂತೆ. ಬರಗಾಲದ ಬರೆಯ ನೋವನ್ನನುಭವಿಸಿದವರು ಹೇಳುತ್ತಾರೆ. ಅದರ ಹೆಸರೇ ಸೂಚಿಸುವಂತೆ ಎಲ್ಲವನ್ನೂ ಅದು ಹುಡುಗಿ ಹಾಕುತ್ತದೆಂದು ಅನುಭವಿ ಗ್ರಾಮೀನ ಬದುಕು ಅಚಲವಾಗಿ ನಂಬಿದೆ.

’ಬಾಲಚಿಕ್ಕಿ’ಯನ್ನು ದೇಶಕ್ಕೊದಗುವ ಭಯಂಕರ ಅನಾಹುತಕ್ಕೆ ಸಂಕೇತವೆಂದು ಪರಿಗಣಿಸುತ್ತಾರೆ. ದೊಡ್ಡವರ ಸಾವು. ಯುದ್ಧದ ಹಿಮಸೆ, ಬರಗಾಲದ ಭೀಕರತೆ, ರೋಗ, ಪ್ರಳಯ ಮೊದಲಾದ ರಾಷ್ಟ್ರವ್ಯಾಪಿ ಗಂಡಾಂತರಗಳಿಗೆ ಇದರ ಹುಟ್ಟು, ’ಡಂಗುರ’ ಎಂದು ಹೇಳಲಾಗುತ್ತದೆ. ಇದು ಮೂಡಿದ ವರ್ಷ ’ಮಕ್ಕಳಿಗೆ ಕುತ್ತು ಎಂದೂ ನಂಬಲು ಬಾಲಚಿಕ್ಕಿ ಎಂಬ ಅದರ ಹೆಸರು ಕಾರಣವೆಂದು ಕಾಣುತ್ತದೆ. ಆದರೆ ಇದನ್ನು ವಿಪತ್ತುಗಳ ಮೂನ್‌ಸೂಚನೆ ಎಂದು ಅನಂತ ಕಾಲದಿಂದಲೂ, ಪ್ರಪಂಚದುದ್ದಗಲಕ್ಕೂ ನಂಬಿಕೊಂಡು ಬಂದಿದ್ದಾರೆ. ಹಲವಾರು ಕಾವ್ಯ ಶಾಸ್ತ್ರಗಳು ಇದಕ್ಕೆ ಸಾಕ್ಷಿ ನುಡಿಯುತ್ತವೆ. ಕೆಲವು ಉದಾಹರಣೆಗಳನ್ನಿಲ್ಲಿ ನೋಡಬಹುದು.

“….. ಅಗಸವೆಡೆಗೆಟ್ಟಿರೆ ಧೂಮಕೇತು
ಗಳ್ ಮೂಡುವುದಂ…”

ಎಂದು ನಾಗಚಂದ್ರನು ದಶಾನನನಿಗೆ ಲಂಕೆಗೆ ವಿಪತ್ತನ್ನು ಸೂಚಿಸುವಲ್ಲಿ ಧೂಮಕೇತು ಮೂಡುವುದನ್ನು ಉಲ್ಲೇಖಿಸುತ್ತಾನೆ.

ಇನ್ನೊಬ್ಬ ಜೈನಕವಿ ರತ್ನಾಕರ ತನ್ನ ಭರತೇಶ ವೈಭವದಲ್ಲಿ ಚಕ್ರರತ್ನ ಬಾಹುಬಲಿಯ ಭುಜದತ್ತ ತೊಲಗಿದಾಗ, ಕ್ರಮ ವಿಪರ್ಯಾಸದಿಂದ ಅನಾಹುತಗಳಾಗುತ್ತವೆಂಬುದನ್ನು ಸೂಚಿಸಲು

“ದಳ ನಡುಗಿತು ಧೂಮಕೇತುಗಳೆದ್ದವು ಕೂಡೆ
ನೆಲ ನಡುಗಿತು….” (ಪುಟ ೨೮೯ ಪದ್ಯ ೧೧೫ ರಾಜೇಂದ್ರ ಗುಣ)

ಎಂದು ಬಣ್ಣಿಸಿ, ಸತ್ಪಥ ತಪ್ಪಿ ಕಾಪಥ ಹುಟ್ಟುವಾಗ ಇಂಥ ಮಹೋತ್ಪಾತಗಳಾಗುತ್ತವೆಂದು ಬಾಯ್ಬಿಟ್ಟು ಹೇಳುತ್ತಾನೆ.

ಸಮಕಾಲೀನ ರಾಷ್ಟ್ರಕವಿ ಕುವೆಂಪು ಅವರು ರಾಮಾಯಣ’ ದರ್ಶನದಲ್ಲಿ ಹಲವು ಕಡೆ ಧೂಮಕೇತುವನ್ನು ಚಿತ್ರಿಸುತ್ತಾರೆ. ಇದನ್ನು ’ಬಾನ್‌ಬರೆಪ’ ’ನಕ್ಷತ್ರ ಲೇಖನಿಯ ದಿವ್ಯಾಗ್ನಿ ಲಿಖಿತ ಬಿದಿ ಬರಹ ಗಗನ ಶಕುನ’ ಎಂದು ಬಣ್ಣಿಸಿದ್ದನ್ನು ಅಲ್ಲಲ್ಲಿ ಕಾಣಬಹುದು.

ರಾಮಪಟ್ಟಾಭಿಷೇಕಕ್ಕೆ ದಶರಥ ಇಚ್ಛಿಸಿದ್ದೇ ಈ ಭಯಂಕರ ಗಗನ ಶಕುನವನ್ನು ಕಂಡು,

’ನೆತ್ತರುರಿಗೂದಲಂ ಬೀಸಿ ರಂಜಿಸುತಿರ್ದ ಆ
ಭೀಷ್ಮ ಭೀಷಣ ಧೂಮಕೇತುಗೆ ಜನಂ ಬೆರ್ಚಿ
ನರಳ್ದುದಕಟಾ ಕೋಸಲಕೆ ಕೇಡಪ್ಪುದೆಂದಳ್ಕಿ’ (ಪುಟ ೬೮ ಮ, ಸು, ಮ.)

ಅದರ ಪರಿಣಾಮ ರಾಮ ವನವಾಸ, ದಶರಥನ ಸಾವು ಕೋಸಲದ ಕಣ್ಣೀರು!

ಆಂಗ್ಲ ನಾಟಕಕಾರ ಶೇಕ್ಸಪೀಯರನ ’ಜ್ಯುಲಿಯಸ್ ಸೀಝರ’ದಲ್ಲಿ ಬರುವ ಮಾತೊಂದನ್ನು ಉದಾಹರಿಸಿದರೆ ವಿಶ್ವವ್ಯಾಪಿಯಾಗಿ ಈ ಧೂಮಕೇತುವಿನ ಬಗ್ಗೆ ಇದ್ದ ನಂಬುಗೆ ಇನ್ನಷ್ಟು ದೃಢಪಡುತ್ತದೆ. ಸೀಝರನ ಹೆಂಡತಿ ಕೆಲಪುರ್ನಿಯಾಳ ಮಾತನ್ನಿಲ್ಲಿ ಗಮನಿಸಬಹುದಾಗಿದೆ.

“When beggers die, there are no comets seen The Heavens themselves blaze forth the death of Princes”

(Julius Caesar 144, P)

ಸಾಮಾನ್ಯರ ಸಾವನ್ನು ಸೂಚಿಸಲು ಧೂಮಕೇತು ಬರಬೇಕಿಲ್ಲ. ಆದರೆ ರಾಜರ, ಖ್ಯಾತರ ಸಾವನ್ನದು ಸಾರುತ್ತದೆನ್ನುವುದನ್ನು ಜಾಗತಿಕ ಕಾವ್ಯಗಳು ಎತ್ತಿ ಹಿಡಿದವೆ. ಅದರಂತೆ ನಮಗೂ ಒಂದು ಅನುಭವವೆಂದರೆ ಮಹಾತ್ಮಾಗಾಂಧಿಯವರು ಕೊಲೆಯಾಗುವ ಮುನ್ನ ಧೂಮಕೇತು ಮೂಡಿದ್ದನ್ನು ಬಹಳ ಜನ ಇನ್ನೂ ಮರೆತಿರಲಿಕ್ಕಿಲ್ಲ, ಅರವಿಂದರ ಸಾವಿನ ಸಮೀಪದಲ್ಲಿಯೂ ಅದು ಮೂಡಿತ್ತೆಂದು ಕೆಲವರು ಹೇಳುತ್ತಾರೆ.

ಮೇಲೆ ಹೇಳಿದ ಜನಪದ ನಂಬಿಕೆಯಂತೆ ನಕ್ಷತ್ರ ಬೀಳುವುದನ್ನು ಅಶುಭ ಸೂಚಕವೆಂದು ಹಲವಾರು ಕಾವ್ಯಗಳು ದೃಢಪಡಿಸುತ್ತವೆ.

’ಪಗಲುಳ್ಕಂ ಬೀಳ್ಪುದಂ’

ಎಂಬುದು ನಾಗಚಂದ್ರನ ಮಾತಾದರೆ,

ಶ್ರೀ ಕುವೆಂಪು ಅವರವು ಈ ವಿಷಯದಲ್ಲಿ ಹಲವು ಸಂದರ್ಭೋಚಿತ ಉಕ್ತಿಗಳನ್ನು ನೋಡಬಹುದು.

“ಬಿದ್ದುದು ಮಹೋಲ್ಕೆ…
….. ಲಂಕಾ ಸಮಸ್ತಮುಂ
ಕಂಡುದೆಂಬರು ಆ ಭಯಂಕರದ ದುಶ್ಶಕುನ
ದೃಶ್ಯಮಂ….’ (ರಾ, ದ, ಪುಟ ೪೫೮)
’……. ನಿನ್ನೆ ಸಂಜೆ, ಲಂಕೆಗೆಲಂಕೆ
ಕಂಡುದಾ ನೋಟಮಂ ಬಿಳ್ದುದೊಂದುರಿವರಿಲ್’ (ರಾ,ದ, ಪು. ೪೬೮)
’……ಪೋದ ಬಯ್ಗುಂಬೋಳ್ತು
ಕೆಡೆದ ಉಳ್ಳೆಯ ಅಶುಭಮಂ’ (ರಾ.ದ, ಪುಟ ೪೭೩)

ಹೀಗೆ ಮಹಾಕಾವ್ಯಕ್ಕೇರಿದ ಈ ನಂಬುಗೆಗಳು ಜನಪದರವೆನ್ನುವಲ್ಲಿ ಯಾವ ಸಂಶಯವೂ ಇಲ್ಲ.

ಪ್ರಣಯಿಗಳು ಬೆಳುದಿಂಗಳಲ್ಲಿ ವಿರಹವನ್ನನುಭವಿಸಲು ಗ್ರಹ-ನಕ್ಷತ್ರಗಳ ಅಗಲಿಕೆಯೇ ಕಾರಣವೆನ್ನುವುದಕ್ಕೆ ಕೆಲವರು ಕಾರಣ ಹೇಳುತ್ತಾರೆ. ಚಂದ್ರ-ತಾರೆ, ಗಂಡಹೆಂಡತಿಯರು, ಅಮವಾಸ್ಯೆ ಬಂದಾಗ ಅವರು ಕೂಡಿ ಇರುತ್ತಾರಂತೆ. ಹುಣ್ಣಿವೆ ಬಂದಾಗ ಅವರು ದೂರ ಇರುವುದರಿಂದ ಅವರ ವಿರಹದಿಂದಾಗಿ ಪ್ರಣಯಿಗಳು ವಿರಹಿಗಳಾಗುತ್ತಾರೆಂದು ನಂಬುತ್ತಾರೆ.

ಗ್ರಹಗಳನ್ನು ಕುರಿತೇ ಕೆಲವು ನಂಬಿಕೆಗಳು ಜನ ಮನದಲ್ಲಿವೆ. ರಾಹು, ಕೇತುಗಳು ಸರ್ಪಗಳೆಂದೂ, ರಾಕ್ಷಸರೆಂದೂ ಅವರು ಸೂರ್ಯ-ಚಂದ್ರರನ್ನು ನುಂಗಿದ್ದರ ಪರಿಣಾಮವೇ ಗ್ರಹಣಗಳೆಂದು ಭಾವಿಸುತ್ತಾರೆ.

ಅದರಂತೆ ನವಗ್ರಹಗಳು ಸಮೀಪಕ್ಕೆ ಬಂದು ಒಂದೇ ದಿಕ್ಕಿನಲ್ಲಿ ಕೂಡಿದರೆ, ಅದರಿಂದ ಜಗತ್ತಿಗೆ ಕೆಡಕಾಗುತ್ತದೆಂದು ಹೇಳಿ ಆ ಗ್ರಹಗಳ ಶಾಂತಿಗೆ ಹೋಮ-ಹವನಗಳನ್ನು ಸಾಮೂಹಿಕವಾಗಿ ಮಾಡುವುದನ್ನು ಕಾಣುತ್ತೇವೆ.

ಒಳ್ಳೆಯದಾದಾಗ ’ಗ್ರಹಬಲ ಬಂತು’ ಎಂದರೆ ಕೆಡುಕಾದರೆ ’ನಮ್ಮ ಗ್ರಹಚಾರ’ ಎನ್ನುತ್ತೇವೆ. ’ಗ್ರಹಗತಿ ಚೆನ್ನಾಗಿಲ್ಲ’ ವೆಂದು ಹೇಳುತ್ತೇವೆ. ಎಂಥಾ ’ನಕ್ಷತ್ರ’ದಲ್ಲಿ ಹುಟ್ಟಿದ್ದಿಯೋ! ಎಂದು ಬೈಯುತ್ತೇವೆ. ಕೆಟ್ಟವನನ್ನು ’ಶನಿ’ ಎಂದು ಶಪಿಸುತ್ತೇವೆ. ಒಳ್ಳೆಯದಾದಾಗ ’ಶುಕ್ರದೆಸೆ’ ಎಂದು ಹರ್ಷಪಡುತ್ತೇವೆ. ಮೂಲಾನಕ್ಷತ್ರದಲ್ಲಿ ಮಗು ಹುಟ್ಟಬಾರದೆನ್ನುತ್ತಾರೆ. ಅದರಿಂದ ತಂದೆ-ತಾಯಿಗಳಿಗೆ ಕಂಕಟವಂತೆ. ಮೂಲಾನಕ್ಷತ್ರದಲ್ಲಿ ಹುಟ್ಟಿದವ ಮಾವನಿಗೆ ಮೂಲಾಗುತ್ತಾನಂತೆ. ಹೆಣ್ಣು ಆ ನಕ್ಷತ್ರದಲ್ಲಿ ಹುಟ್ಟಿದರೆ ಅತ್ತೆ-ಮಾವ ಈರ‍್ವರೂ ಇಲ್ಲದ ಮನೆಯೇ ಅವಳಿಗೆ ಗತಿ. ’ಭರಣಿ’ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣನ್ನು ಮಾವ ಇಲ್ಲದ ಮನೆಗೇ ಕೊಡಬೇಕೆಂದರೆ ’ಅಶ್ವಿನಿ’ ನಕ್ಷತ್ರದಲ್ಲಿ ಹುಟ್ಟಿದವಳಿಗೆ ಅತ್ತೆ ಇಲ್ಲದ ಮನೆಯನ್ನೇ ಹುಡುಕಬೇಕು. ’ರೇವಣಿ’ ಇಪ್ಪತ್ತೇಳು ನಕ್ಷತ್ರಗಳಲ್ಲಿ ಕನೆಯದು. ಅದಕ್ಕಾಗಿ ’ರೇವತಿ’ ಎಂದು ಹೆಸರಿದ್ದವಳನ್ನು ಖಂಡಿತವಾಗಿ ಕೊನೆಯ ಮಗಳೆಂದೇ ತಿಳಿಯಬೇಕು. ಉಳಿದವರಿಗೆ ಈ ಹೆಸರು ಇಡುವುದಿಲ್ಲ. ಅದರಂತೆ ’ರೇವಣ್ಣ’ ಎನ್ನುವ ಹೆಸರಿನವರ ಕುಂಡಲಿಯಲ್ಲಿ ’ರಾಹು’ ಇರುತ್ತಾನಂತೆ. ಅದಕ್ಕೆ ಅವನಿಗೆ ಆ ಹೆಸರು. ಚೌತಿಯ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಕಥೆ ಪ್ರಖ್ಯಾತ. ಹೀಗೆ ಹಲವಾರು ಗ್ರಹ-ನಕ್ಷತ್ರಗಳನ್ನು ಕುರಿತು ಹಲವಾರು ನಂಬಿಕೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರತಿಯೊಂದಕ್ಕೂ ವಾರ, ತಿಥಿ, ನಕ್ಷತ್ರಗಳನ್ನು ಎಣಿಸುವುದನ್ನು ಬಹಳ ಕಾಲದಿಂದಲೂ ರೂಢೀಕರಿಸಿಕೊಂಡು ಸಮಾಜ ಬೆಳೆದಿದೆ. ವಡ್ಡಾರಾಧನೆಯಲ್ಲಿ ವಾರ, ತಿಥಿ, ನಕ್ಷತ್ರಗಳ ಉಲ್ಲೇಖಗಳಿವೆ. ಇಂದೂ ’ರಾಹುಕಾಲ’ ಮೊದಲಾಗಿ ನಂಬುತ್ತೇವೆ. ಆದರೆ ಜನಪದ ಅನುಭವ, ತಿಳಿಕೆಗಳೆಲ್ಲ ಶಾಸ್ತ್ರರೂಪ ತಳೆದು ಅನಂತಕಾಲವಾಗಿರಲೇಬೇಕು. ಅಂತೆಯೇ ಎಲ್ಲ ದೇಶ ಭಾಷೆಗಳಲ್ಲಿಯೂ ಗ್ರಹಗಳ ಹೆಸರನ್ನೇ ವಾರದ ದಿನಗಳಿಗೆ ಹೆಸರಿಸಿದ್ದನ್ನು ಕಾಣುತ್ತೇವೆ. ಮಾನವ ಜನಾಂಗದ ಒಂದೇ ಮೂಲವನ್ನಿಲ್ಲಿ ಗುರುತಿಸಬಹುದಾಗಿದೆ.

ಸಾಹಿತ್ಯ ಮತ್ತು ನಕ್ಷತ್ರ

ನಕ್ಷತ್ರಗಳನ್ನು ಕುರಿತಿರುವ ಶಾಸ್ತ್ರ ವಿಚಾರಗಳನ್ನು ಹೇಳುತ್ತ ಹೋಗಿ ಪ್ರಬಂಧಕ್ಕಿರುವ ಇತಿ ಮಿತಿಗಳನ್ನು ದಾಟುವ ವಿಚಾರ ನನಗಿಲ್ಲ. ಆದರೂ ಸಾಹಿತ್ಯದಲ್ಲಿ ನಕ್ಷತ್ರ ವಿಷಯವನ್ನು ಬಳಸಿಕೊಂಡುದನ್ನು ಕುರಿತು ಒಂದೆರಡು ಮಾತು ಹೇಳುವುದು ಸಮ್ರಯೋಚಿತವೆಂದು ಭಾವಿಸುವೆ.

ಜನಪದ ಸಾಹಿತ್ಯದಲ್ಲಿ ಚಂದ್ರ ಬಳಕೆಯಾದಷ್ಟು ಇನ್ನುಳಿದ ಗ್ರಹ-ನಕ್ಷತ್ರಗಳು ಬಳಕೆಯಾಗಿಲ್ಲ. ಕಥೆಗಳಲ್ಲಿ ಚಂದ್ರ-ಸೂರ್ಯರೇ ಹೆಚ್ಚು ಬರುತ್ತಾರೆ. ಪೂರ್ವ ಬ್ರಾಝಿಲ್, ಉತ್ತರ ಅಮೇರಿಕಾದ ಕೆಲವು ಕಥೆಗಳಲ್ಲಿ ’ನಕ್ಷತ್ರ’ಗಳ ಹೆಸರಿನಲ್ಲಿದ್ದ ಕಥೆಗಳು ಭಾರತದಲ್ಲಿ ಚಂದ್ರನ ಹೆಸರಿನಲ್ಲಿ ಕಾಣದೊರೆಯುತ್ತವೆ. ’ಆಕಾಶದ ಘಂಟೆ ಘಣಲೆನ್ನುವ’ ಪವಾಡ, ಸೂರ್ಯನಿಗೆ ಬಾಣಬಿಡುವ’ ಪೌರುಷದ ಕಲ್ಪನೆ, ಚಂದ್ರಾಮನುಷ್ಟು ಯಾರೂ ಚಂದಿಲ್ಲದ ವಿಚಾರ ಜನಪದ ತ್ರಿಪದಿಗಳಲ್ಲಿ ಅಲ್ಲಲ್ಲಿ ಕಾಣದೊರೆಯುತ್ತದೆ. ಮಳೆಯ ನಕ್ಷತ್ರಗಳನ್ನು ಕುರಿತು ಹಲವಾರು ’ಗಾದೆ’ಗಳು ಜನಪದರ ನಾಲಗೆಯ ಮೇಲಿವೆ.

’ಆದರೆ ಉತ್ರಿ ಆಗದಿದ್ದರೆ ಸತ್ರಿ’,
’ಉತ್ರಿ ಜ್ವಾಳಾ ಬಿತ್ರಿ’
’ಆದರೆ ಹಸ್ತ ಆಗದಿದ್ದರೆ ಹುಲ್ಲಕಿಸ್ತಾ’
’ಸ್ವಾತಿ ಮಳಿ ಹೇತೀನಂದ್ರ ಬಿಡಲಿಲ್ಲಂತ’
’ಮೃಗಾ ಮಿಂಚಬಾರ್ದು, ಆರಿದ್ರ ಗದ್ದರಿಸಬಾರದು’
’ಆದರೆ ಮಗಿ, ಆಗದಿದ್ದರೆ ಹೊಗಿ’
’ರೋಣಿ ಮಳಿ ಬಂದರೆ ಓಣೆಲ್ಲಾ ಜ್ವಾಳ’

ಒಗಟುಗಳು ವಿಶೇಷವಾಗಿಲ್ಲವೆಂದರೂ ಕಾಣದೊರೆಯುತ್ತವೆ. ಪಾರಿಜಾತದಲ್ಲಿ ಶ್ರೀ ಮೇಳೇದ ರಾಮ ಹೇಳುತ್ತಿದ್ದ ಒಗಟಿನ್ನಿಲ್ಲಿ ಹೇಳುವುದು ಔಚಿತ್ಯಪೂರ್ಣವೆಂದು ಭಾವಿಸುವೆ.

ನಕ್ಷತ್ರ ಸುತನನುಜ
ನಕ್ಷತ್ರದೊಳಗಿನ ಬೆಣ್ಣೆಯನು
ನಕ್ಷತ್ರದಿಂ ಕೊಂಡು
ನಕ್ಷತ್ರ ಬಂದಂತೆ ತಿಂದು
ನಕ್ಷತ್ರದೊಳ್ ಅಡಗಿದ.

ಜಾನಪದದಲ್ಲಿ ಇಂಥ ಕಸರತ್ತುಗಳಿಗೆ ಕೊರತೆಯೇನಿಲ್ಲ. ಜಾಣ್ಮೆಯ ಪ್ರದರ್ಶನಕ್ಕೆ ದಾರಿಯೊಂದನ್ನು ಇಲ್ಲಿ ಹುಡುಕಿಕೊಂಡಿದ್ದಾರೆ. ಅರ್ಥಕ್ಕಿಂತ ವೈಚಿತ್ರ್ಯ ಮುಖ್ಯ ಅವರಿಗೆ. ’ರೋಹಿಣಿಯ ಮಗ’ ಶ್ರೀ ಕೃಷ್ಣ ’ಭರಣಿ’ಯೊಳಗಿನ ಬೆಣ್ಣೆಯನ್ನು ’ಹಸ್ತ’ದಿಂದ ’ಚಿತ್ರ’ ಬಂದಂತೆ ತಿಂದು ’ಮೂಲೆ’ಯಲ್ಲಡಗಿದ, ಎಂದು ಹೇಳಲು ಈ ನಾಲ್ಕಾರು ನಕ್ಷತ್ರಗಳ ಹೆಸರುಗಳನ್ನು ಬಳಸಿಕೊಂಡು ಈ ಒಗಟಿನ ವೈಚಿತ್ರ್ಯವನ್ನು ಸೃಷ್ಟಿಸಿದ್ದಾರೆ. ಹೀಗೆ ಮಳೆಯ ನಕ್ಷತ್ರಗಳನ್ನು ಕುರಿತಿರುವಷ್ಟು ಮಾತುಗಳು ಜಾನಪದದಲ್ಲಿ ಬೇರೆ ನಕ್ಷತ್ರಗಳನ್ನು ಕುರಿತು ಕಂಡುಬರುವುದಿಲ್ಲ. ಸರ್ವಜ್ಞನೂ ಶಕುನಶಾಸ್ತ್ರ ಹೇಳಿದಂತೆ ನಕ್ಷತ್ರಗಳನ್ನು ಕುರಿತು ಕೆಲವು ತ್ರಿಪದಿಗಳನ್ನು ಬರೆದುದನ್ನು ಗಮನಿಸಬಹುದಾಗಿದೆ. ಇವು ಆವನವೊ, ಅನ್ಯರವೊ ಎಂದು ಹೇಳುವುದೂ ಕಷ್ಟ.

“ಮೃಗಧರನ ಕೂಡ ಮೃಗವಿರಲಿ! ಮಳೆಗಾಲ
ಜಗದಣಿಯಲಕ್ಕು. ……………………….”
“ತಾರೆಗಳು ಅಯ್ದಕ್ಕೆ ತಾರೇಶತಾ ಬರಲು
ಧಾರಿಣಿಯು ಹೊತ್ತಿ ಹೊಗೆಯುವುದು”
“ಪಂಚತಾರೆಯು ಮೃಗದ ಲಾಂಛನವು ಸಹತಾರೆ
ಕಂಚಿಯಿಂದತ್ತತ್ತ ಮಳೆಯಿಲ್ಲ…………..!”

ಮುಂತಾಗಿ ಖಗೋಲ ವಿಜ್ಞಾನ ಶಕುನ ಎಲ್ಲದಕ್ಕೂ ಸಂಬಂಧಿಸಿದ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾನೆ. “ಶಾಸನಗಳಲ್ಲಿ ಆಚಂದ್ರಾರ್ಕ ತಾರಾಂಬಂರಂ” ಎಂದು ಶಾಶ್ವತತೆಯನ್ನು ಸೂಚಿಸುವ ಬರಹಗಳಿವೆ. ಶರಣರಂತೂ ಗ್ರಹ-ನಕ್ಷತ್ರಗಳನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ, ದಾಸರು ಸರಜಿಜಾಕ್ಷನನ್ನೇ ’ಸಕಲ ಗ್ರಹಬಲ’ ವೆಂದು ನಂಬಿದರು. ಜೈನ ಕಾವ್ಯಗಳಲ್ಲಿ ನಕ್ಷತ್ರಗಳ ಪ್ರಸ್ತಾಪ ಬರುವುದನ್ನು ಹಿಂದೆ ಹೇಳಿಯಾಗಿದೆ. ಹರಿಶ್ಚಂದ್ರನನ್ನು ಬಿಡದೆ ಬೆಂಬತ್ತಿ ಕಾಡಿದ ’ನಕ್ಷತ್ರಕ’ ನನ್ನು ’ನಕ್ಷತ್ರ’ವೆಂದು ಪರಿಗಣಿಸುವುದು ಅಷ್ಟು ಸಮಂಜಸವಲ್ಲವೆಂದು ಕಾಣುತ್ತದೆ. ಅವನು ವಿಶ್ವಾಮಿತ್ರನ ಅನುಯಾಯಿ, ಅವನ ಸೃಷ್ಟಿ ಮಾತ್ರ ಅಷ್ಟೆ.

ಆಧುನಿಕ ಕವಿಗಳಲ್ಲಿ ಬೇಂದ್ರೆ, ಪುಟ್ಟಪ್ಪನವರನ್ನು ಬಿಟ್ಟರೆ ಬಹಳಷ್ಟು ಜನ ಆಕಾಶಕ್ಕೆ ಕಣ್ತೆರೆಯಲಿಲ್ಲ. ಶ್ರೀ ರಾಮಾಯಣದರ್ಶನದಲ್ಲಿ ಆಕಾಶ ಅಧ್ಯಯನಕ್ಕೆ ಅಪಾರ ಅವಕಾಶಗಳಿವೆ. ಸೂರ್ಯ, ಚಂದ್ರ , ನಕ್ಷತ್ರಗಳ ಉಲ್ಲೇಖವಿಲ್ಲಿ ದಟ್ಟವಾಗಿದೆ. ಸುರ್ಯೋದರ-ಚಂದ್ರೋದಯ ದೇವರ ದಯ ಅವರಿಗೆ.

ಆಕಾಶ ಮತ್ತು ಆಧುನಿಕಗಳು

ಕಾಲನನ್ನೇ ಹಿಡಿದು ಕೈಗೆ ಕಟ್ಟಿದ ಆಧುನಿಕ ಪ್ರಪಂಚಕ್ಕೆ ಆಕಾಶದ ಕಡೆಗೆ ನೋಡುವ ಅವಶ್ಯಕತೆಯೇ ಇಲ್ಲ. ಗಾಳಿ, ಮಳೆ, ಬೆಳಕು ಎಲ್ಲದಕ್ಕೂ ಆಕಾಶದ ಕಡೆಗೇ ನೋಡುವ ಕಾಲವೊಂದಿತ್ತು. ಇಂದು ಸೂರ್ಯೋದಯ, ಸೂರ್ಯಾಸ್ತಗಳ ಕಲ್ಪನೆಯೂ ಬರದಂತೆ ಬದುಕುವವರಿದ್ದಾರೆ. ಹುಣ್ಣಿಮೆ-ಅಮಾವಾಸ್ಯೆ, ವಾರ ತಿತಿ ನಕ್ಷತ್ರಗಳ ವಿಚಾರವೂ ತಲೆಯಲ್ಲಿ ಸುಳಿಯದು. ನಳ ಬರದಿದ್ದರೆ ಮಾತ್ರ ಸಮಸ್ಯೆ, ಮಳೆ ಬರದಿರುವ ಚಿಂತೆ ನಮಗಿಲ್ಲ. ನಾಗರಿಕ ವೈಜ್ಞಾನಿಕ ಸೌಲಭ್ಯ ಲಭ್ಯದಿಂದಾಗಿ ನಾವೂ ಯಂತ್ರಗಳಾಗುತ್ತಿದ್ದೇವೆ. ಆಧುನಿಕ ಜಗತ್ತು ಆಕಾಶಕ್ಕೂ ಅಂಟಿಕೊಳ್ಳದೆ, ಭೂಮಿಗೂ ಬೆಸೆದುಕೊಳ್ಳದೆ ಅಂತರ್ ಪಿಶಾಚಿಯ ಕೃತ್ಘಿಮ ಬದುಕನ್ನು ಸೃಷ್ಟಿಸಿಕೊಳ್ಳಲೆತ್ನಿಸುತ್ತಿದೆ. ಕೇವಲ ಅವಕಾಶಗಳಿಗೆ ಕಾಯುತ್ತ ಜೀವ ಹಿಡಿವ ನಾಳಿನ ಜನಾಂಗಕ್ಕೆ ಆಕಾಶವನ್ನು ಗುರುತಿಸುವುದೂ ಆಗಲಿಕ್ಕಿಲ್ಲ. ರಜತ ಪರದೆಯೇ ಆಕಾಶಃ ಸಿನಿಮಾ ತಾರೆಯರೇ ತಾರಾಗಣ, ರಾಜಕೀಯ ನಾಯಕರೇ ಸೂರ್ಯ ಚಂದ್ರ ಸಪ್ತರ್ಷಿ ರಾಹುತೇಕು ಆದಕಾಲ ಇದು. ಇಂದು ಓಣಿ-ಓಣಿಗೆ ಶ್ಯಾನಿಟೋರಿಯಂ ತೆರೆದಂತೆ, ಊರೊರಿಗೆ ಪ್ಲಾನಟೋರಿಯಂ ಸೃಷ್ಟಿಸುವ ಕಾಲ ದೂರಿಲ್ಲ. ಅಲ್ಕೊಹಾಲಿನ ಸಂಸ್ಕೃತಿಯವರಿಗೆ ಆಕಳ ಹಾಲನ್ನು ಕುರಿತು ಹೇಳುವುದು ಸುಳ್ಳು ಪುರಾಣವಲ್ಲದೆ ಮತ್ತೇನು? ’ತಂದೆ-ತಾಯಿ’ ಎಂಬ ಯಂತ್ರೋತ್ಪತ್ತಿ ತಾನೆಂದು ಪರಿಗಣಿಸಬಹುದಾದ ಜನಾಂಗ, ಭೂಮಿತಾಯಿ ಆಕಾಶ-ತಂದೆಯನ್ನು ಕುರಿತು ಚಿಂತಿಸುತ್ತಾರೆನ್ನುವುದನ್ನು ವಿಚಾರಿಸುವುದೇ ತಪ್ಪು., ದಿನ-ದಿನವೂ ನಾವು ನೈಸರ್ಗಿಕ ನಿಯಂತ್ರಣದಿಂದ ಹೊರಗಾಗಲೆತ್ನಿಸುತ್ತಿದ್ದೇವೆ. ಭೂಮಿಯನ್ನು ಬರಡು, ಬರಿದು ಮಾಡುವ ಸನ್ನಾಹದಲ್ಲಿದ್ದ ಈ ಮಾನವಕುಲಕ್ಕೆ ಆಕಾಶವನ್ನು ಆಗಿ ಮಾಡುವದು ತಡವಾಗಲಿಕ್ಕಿಲ್ಲ! ಸೂರ್ಯನ ಶಾಖವನ್ನು ತಿಂದು ನಕ್ಷತ್ರಗಳ ಕಾಂತಿಯನ್ನು ಕುಡಿದು ಬದುಕಲು ಅಂತರಿಕ್ಷದಲ್ಲಿ ಆಕಾಶನೆಲೆಗಳನ್ನು ನಿರ್ಮಿಸುತ್ತಿದ್ದೇವೆ. ಅಂತರಿಕ್ಷ ಕುರಿತು ಅಂತಃಕಲಹ ಈಗಲೇ ಆರಂಭವಾಗಿವೆ. ’ಸ್ಟಾರವಾರ’ದ (ನಕ್ಷತ್ರಯುದ್ಧ) ಸನ್ನಾಹದಲ್ಲಿ ವಿಶ್ವಶಕ್ತಿಗಳು ತೊಡಗಿರುವಾಗ ನಾವು ನಡೆಸಿದ ಈ ಆಕಾಶ ಜಾನಪದ ಅಧ್ಯಯನಕ್ಕೆ ಅರ್ಥವಿಲ್ಲದಿಲ್ಲ. ವ್ಯರ್ಥವಂತೂ ಅಲ್ಲವೇ ಅಲ್ಲ.