ಜನಪದರು ಭೂಮಿಯನ್ನು ಹಾಸಿ ಆಕಾಶವನ್ನು ಹೊದ್ದು ಬದುಕಿದವರು. ನಿಸರ್ಗದ ಕ್ರಿಯೆಯೊಂದಿಗೆ ತಾವೂ ಕ್ರಿಯಾಶೀಲರಾದವರು. ಯಾವುದಕ್ಕೂ ತಮ್ಮ ಪರಿಸರವನ್ನು ಬಳಸಿಕೊಂಡು ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸಿದವರು. ಭೂಮಿ ತಾಯಿಯ ಜೊತೆ ಅವರಿಗೆ ಎಂಥ ಬಿಡಿಸದ ನಂಟಿತ್ತೊ. ಆಕಾಶ ಲತೆಯ ಜೊತೆ ಹಾಗೆ ಬಿಚ್ಚದ ಗಂಟಿತ್ತು. ಬೆಳೆಗಾಗಿ ಭೂಮಿಯನ್ನು ಹದಗೊಳಿಸಿಕೊಂಡು ಮಳೆಗಾಗಿ ಆಕಾಶಕ್ಕೆ ಕಣ್ಣು ತೆರೆದವರು; ಗಾಳಿಗಾಗಿ ಬಾಯಿ ಬಿಟ್ಟವರು. ಸೂರ್ಯ-ಚಂದ್ರ ಅವರಿಗೆ ದೇವರು. ಅವರನ್ನೂ ಪೂಜಿಸಿದರು. ಮಕ್ಕಳನ್ನು ಸೂರ್ಯ-ಚಂದ್ರ ಎಂದರು. ಎತ್ತುಗಳಿಗೆ ಇವೇ ಹೆಸರನ್ನಿಟ್ಟು ಕರೆದರು. ಮಳೆಯನ್ನು ’ಮಳೆರಾಜ’ ಎಂದು ಗೌರವದಿಂದ ಹರಸಿ ಹಾಡಿದರು. ಹೀಗೆ ಋತು ಚಕ್ರದ ಜೊತೆಗೆ ತಮ್ಮ ಬದುಕನ್ನು ಬೆಸೆದುಕೊಂಡರು. ಮಳೆ, ಬೆಳೆ, ಗಾಳಿ, ಬೆಳಕು ಅವರ ಬದುಕಿನ ಅನಿವಾರ್ಯ ಅಂಗಗಳಾದವು.

ಅನಾಗರಿಕ ಅರೆನಾಗರಿಕ ಕಾಲದಲ್ಲಿ ಆಕಾಶವೇ ಮಾನವನ ಮಾರ್ಗದರ್ಶಿಯಾಗಿತ್ತು. ಹಗಲಿನ ವ್ಯವಹಾರಕ್ಕೆ ಸೂರ್ಯನನ್ನು ನಂಬಿದವರು; ಇರುಳಿನ ಕೆಲಸಕ್ಕೆ ಅಗಣಿತ ಚಿಕ್ಕ-ಚಂದ್ರಾಮರ ಕಡೆ ನೋಡುತ್ತಿದ್ದರು. ಚಂದ್ರಾಮನೂ ತನ್ನ ಹೊತ್ತು ಗೊತ್ತನ್ನು ಬದಲಿಸುವವ, ಅದಕ್ಕಾಗಿ ನಕ್ಷತ್ರಗಣವೇ ಅವರ ನಿತ್ಯದ ನೆರವಿಗೆ. ನಾಗರಿಕತೆಯ ಸೌಲಭ್ಯಗಳಿಲ್ಲದವರು ನಕ್ಷತ್ರಗಳನ್ನು ನೋಡಿಕೊಂಡು ಮಲಗಿದರು. ಎದ್ದರು, ಸೂರ್ಯನ ಬರವನ್ನೋ ಚಂದ್ರನ ಉದಯವನ್ನೊ ನಿರೀಕ್ಷಿಸಿಕೊಂಡರು. ಭೂಮಿತಾಯಿಯ ಎದೆಯ ಮೇಲೆ ಅಂಗಾತಾಗಿ ಮಲಗಿದವರು ನಕ್ಷತ್ರ ಲೋಕದ ವೈಚಿತ್ರ್ಯಗಳನ್ನು ಊಹಿಸಿದರು, ಚಿಂತಿಸಿದರು. ಆ ಅದ್ಭುತ ಲೋಕಕಂಡು ಆಶ್ಚರ್ಯಪಟ್ಟರು! ಹಗಲು ಭೂಮಿ ಗಂಟಿಕೊಂಡು ಕಾರ್ಯಮಗ್ನರಾದವರು ಮುಗಿಲಕಡೆ ಅಷ್ಟು ಕಣ್ಣು ಹಾಯಿಸಲಿಲ್ಲ. ಇದ್ದೊಬ್ಬ ಸೂರ್ಯನೂ ಇವರ ನೋಟವನ್ನು ಪ್ರತಿಭಟಿಸಿದ. ಇರುಳು ವಿಶ್ರಾಂತಿಗಾಗಿಯೇ ಮಗ್ಗಲೂರಿದವರು, ಚೆಲ್ಲುವರಿದ ಅನಂತ ನಕ್ಷತ್ರಗಳ ಜೊತೆ ಕಣ್ಣುಕೂಡಿಸಿದರು, ತಲೆ ಓಡಿಸಿದರು. ಹೀಗಾಗಿ ಜನಪದರು ಭೂಮಿಗಿಂತ ಆಕಾಶದ ನೆರವಿನಿಂದ ಹೆಚ್ಚು ಭಾವುಕರಾದರು, ಕಲ್ಪನಾಜೀವಿಗಳಾದರು. ಮರದಾಗ ಮಾವಿನ ಮರವನ್ನು, ಹಕ್ಕಿ ಪಕ್ಕಾಗ ಗಿಣಿಯನ್ನು, ಚಿಕ್ಕ್ಯಾಗ ಚಂದ್ರಾಮನನ್ನು ’ಚೆಂದ’ ಎಂದು ಹಾಡಿದರು. ಅರುವಿಗೆ ಆಕಾಶದ ಹೋಲಿಕೆ ಕೊಟ್ಟರು.

ಪ್ರಯೋಜನ:

ಇದು ಗ್ರಹ, ಇದು ನಕ್ಷತ್ರ ಎಂದು ಅವರು ಯೋಚಿಸಲಿಲ್ಲ. ಅವರ ಪಾಲಿಗೆ ಎಲ್ಲವೂ ’ಚಿಕ್ಕೆ’ಗಳು. ಹೆಚ್ಚು ಪ್ರಕಾಶಮಾನವಾಗಿದ್ದವುಗಳ ಕಡೆಗೆ ಅವರ ವಿಶೇಷಗಮನ ಹರಿಯಿತು. ಒಂದು ನಿಗದಿತ ಆಕಾರದಲ್ಲಿದ್ದ, ನಿಶ್ಚಿತ ಗತಿಯಲ್ಲಿದ್ದ ನಕ್ಷತ್ರ ಪುಂಜಗಳನ್ನು ಗುರುತಿಸಿ ತಮ್ಮದೇ ಆದ ಹೆಸರಿನಿಂದ ಕರೆದರು. ಅವುಗಳ ಗತಿಯನ್ನು ಗಮನಿಸಿದರು. ಅವಕ್ಕೆ ತಮ್ಮ ಬದುಕಿನ ಕ್ರಿಯೆಯನ್ನು ಹೊಂದಿಸಿಕೊಂಡರು. ಸಮಯವನ್ನು ತಿಳಿಯಲು, ಅಳೆಯಲು ಅವುಗಳನ್ನು ಗಡಿಯಾರದಂತೆ ಬಳಸಿಕೊಂಡರು. ದಿಕ್ಕು ತಿಳಯಲು ನಕ್ಷತ್ರಗಳನ್ನೇ ದಿಕ್ಸೂಚಿಯಾಗಿಸಿಕೊಂಡರು. ’ಹೀಗೆ ಮೂರು ತಾಸಿನ’ ಚಿಕ್ಕಿ ಮುಳುಗಿದಾಗ ಮಲಗಿದರು. ’ಬೆಳ್ಳಿ’ ಮೂಡಿದಾಗ ಎದ್ದು ಕೆಲಸಕ್ಕೆ ತೊಡಗಿದರು. ಒಂದೊಂದು ನಕ್ಷತ್ರದಿಂದ ಬೆಳಗಿನ ಬರವನ್ನೊ ರಾತ್ರಿಯ ಸಾಂದ್ರತೆಯನ್ನೊ ಗುರುತಿಸುವ ನೈಪುಣ್ಯ ಪಡೆದರು. ಇರುಳು ಬದುಕಿನ ಚಕ್ರವನ್ನು ನಕ್ಷತ್ರಕ್ಕೆ ಹೊಂದಿಸಿಕೊಂಡರು.

ಮಡಿಚಲು ಬಾರದ ಅವ್ವನ ಸೀರೆಯ ತುಂಬ ಚೆಲ್ಲುವರಿದ ಅಪ್ಪನ ಈ ರೊಕ್ಕವನ್ನು ಅಗಣಿತವೆಂದು ಮಕ್ಕಳು ಪರಿಗಣಿಸಿದ್ದನ್ನೇ ಇಂದು ಖಗೋಲ ವಿಜ್ಞಾನ ಖಚಿತ ಪಡಿಸಿದೆ. ಕಣ್ಣಿಗೆ ಕಂಡರೂ ಕೈಗೆ ನಿಲುಕದ ಲೋಕವದು. ಅಳೆಯಲಾಗದ ಆಕಾಶ, ತಿಳಿಯಲಾಗದ ತಾರಗೆಗಳನ್ನು ಕುರಿತ ಮನುಷ್ಯನ ಚಿಂತನ ಎಷ್ಟೇ ಸುದೀರ್ಘವಾದರೂ ಇನ್ನೂ ಅಪಾರವಾಗಿಯೇ ಉಳಿದಿದೆ. ಆದರೂ ನಕ್ಷತ್ರಗಳ ಚಲನವಲನದಿಂದ ಬದುಕಿನ ಮೇಲಾಗುವ ಪರಿಣಾಮವನ್ನು ನಿಸರ್ಗದಲ್ಲಾಗುವ ಬದಲಾವಣೆಗಳನ್ನು ನಮ್ಮ ಜನಪದರು ತಮ್ಮ ಅಪಾರ ಅನುಭವದಿಂದ ಗುರುತಿಸಿದರು. ಇಂದು ಬೆಳೆಯುತ್ತಿರುವ ಖಗೋಲ ವಿಜ್ಞಾನಕ್ಕೆ ನಕ್ಷತ್ರಗಳನ್ನು ಕುರಿತ ಜನಪದ ಕಲ್ಪನೆ ಸಾಕಷ್ಟು ಕೊಡುಗೆಯಾದುದನ್ನು ಅಳೆಯಲಾಗದು. ಅನಂತ ವೈಚಿತ್ರ್ಯಗಳಿಗೆ ತಾರಾಲೋಕ ತವರುಮನೆ. ಸೀಮಿತ ಶಕ್ತಿಯ ಮಾನವನ ನಿಸ್ಸೀಮ ಸಾಹಸ ಈ ದಿಸೆಯಲ್ಲಿ ಹಾಗೇ ಮುಂದುವರೆದಿದೆ. ನಕ್ಷತ್ರಗಂಗೆಯೊಂದರಲ್ಲೇ ಸುಮಾರು ಇಪ್ಪತ್ತು ಸಾವಿರ ಕೋಟಿ ನಕ್ಷತ್ರಗಳಿವೆ ಎಂಬುದು ಇಂದಿನ ವಿಜ್ಞಾನಿಗಳ ಅಜಮಾಸು ಲೆಕ್ಕ. ಆಕಾಶದೊಳಕ್ಕೆ ಇನ್ನೂ ಹಲವು ಸೂರ್ಯರು ಹಲವಾರು ನಕ್ಷತ್ರಗಂಗೆಗಳೂ ಇವೆ ಎಂದು ಅವರೇ ಹೇಳುವ ಮಾತು. ಆಕಾಶಜ್ಞಾನ ಕುರಿತ ನಮ್ಮ ಅಲ್ಪತೆಯನ್ನು ಇಲ್ಲೇ ಮನಗಾಣುತ್ತೇವೆ.

ಗ್ರಹನಕ್ಷತ್ರ ಕುರಿತು

ನಕ್ಷತ್ರಗಳನ್ನು ಕುರಿತು ಭಾರತೀಯರಿಗಿರುವಷ್ಟು ಕಲ್ಪನೆ, ನಂಬುಗೆ, ತಿಳಿಕೆ ಬೇರೆ ಯಾವ ದೇಶದವರಿಗೂ ಇರಲಿಲ್ಲ ಎನ್ನುವ ನನ್ನ ಖಚಿತಾಭಿಪ್ರಾಯಕ್ಕೆ ’ಮೆರಿಯ ಲೀಚ’  (Merea Leach) ಅವರ ’ದಿಕ್ಷ್ನರಿ ಆಫ್ ಫೋಕಲೋರ ಮೈಥಾಲಾಜಿ ಆಂಡ ಲೀಜಂಡ’ ಎಂಬ ಗ್ರಂಥವನ್ನು ಸಾಕ್ಷಿ ನುಡಿಸುತ್ತೇನೆ. ಉತ್ತರ ಅಮೇರಿಕಾ, ಪೂರ್ವ ಬ್ರಾಝಿಲ್‌ಗಳಲ್ಲಿರುವ ’ಸ್ಟಾರ ಹಜಬಂಡ’ ’ಸ್ಟಾರ ವುಮನ್’ದಂತ ಕೆಲವು ಕಲ್ಪನೆಗಳನ್ನು ಬಿಟ್ಟರೆ ಎಲ್ಲಿಯೂ ನಕ್ಷತ್ರಗಳ ಜನಪದ ಕಲ್ಪನೆ ಇಲ್ಲವೆನ್ನುವಷ್ಟು ಕಡಿಮೆ. ಈ ವಿಷಯದಲ್ಲಿ ಭಾರತೀಯ ಜನಪದರಿಗಿರುವ ಕಲ್ಪನೆ, ತಿಳಿಕೆ ತೀರ ಶ್ರೀಮಂತವೂ, ಆಸಕ್ತಿ ಪೂರ್ಣವೂ ಆಗಿರುವುದನ್ನು ಅಲ್ಲಗಳೆಯಲಾಗದು. ನಕ್ಷತ್ರಗಳೆಂದರೇನು? ಅವು ಹೇಗೆ ರೂಪಗೊಂಡವು? ಅವುಗಳ ಪ್ರಯೋಜನ, ಪರಿಣಾಮ, ಅವು ಗಂಡೊ, ಹೆಣ್ಣೊ ಮೊದಲಾಗಿ ಹಲವು ದೃಷ್ಟಿಯ ಇವರ ತಿಳಿಕೆ ಆಶ್ಚರ್ಯ ಹುಟ್ಟಿಸುವಂಥದು.

ನಮ್ಮ ಜನಪದ ’ಅಜ್ಜಿ’ ಅನುಭವದ ಸಂಕೇತವಾಗಿ ಜನಪದ ಸಾಹಿತ್ಯದಲ್ಲಿ ಕಾಣಿಸಿಕೊಂಡವಳು. ಆಕಾಶ ನಕ್ಷತ್ರಗಳ ವಿಷಯದಲ್ಲಿ ಅವಳು ಅಸಾಮಾನ್ಯ ಸಾಮರ್ಥ್ಯದ ಸೃಷ್ಟಿಕರ್ತಳಾಗಿ ಕಾಣುವುದನ್ನು ಗುರುತಿಸಬಹುದಾಗಿದೆ.

ಟೊಂಕ ಬಗ್ಗಿಸಿ, ಕಸ ಹುಡುಗುವ ಅಜ್ಜಿಯನ್ನು ಕಂಡು ಚಿಕ್ಕಮಕ್ಕಳು ’ಯಾಕಜ್ಜಿ ಇಷ್ಟು ಬಗ್ಗಿ ಕಸಾಹೊಡಿತಿಯಲ್ಲಾ?’ ಎಂದು ಕೇಳಿದಕ್ಕೆ, ಅಜ್ಜಿ ಸಿಟ್ಟಿನಿಂದ ’ಏನಮಾಡ್ಲೊ ತೆಲಿಗಿ ಬಡಿತೈತೆತ್ತ ಬಗ್ಗಿದರ, ಬೆನ್ನಿಗಿ ಬಡಿಲಾಕಹತ್ತೈತಿ ಈ ಮುಗಲು’, ಎಂದು ಸಿಟ್ಟಿನಿಂದ ಕಸಪೊರಕೆ ಎತ್ತಿ ಹೊಡೆದಳಂತೆ! ಆಗ ಆಕಾಶ ಸರ್‌ನೆ ಮೇಲೆ ಓಡಿತಂತೆ! ಅದು ತೀರ ದೂರ ಓಡುವುದನ್ನು ಕಂಡು ಮತ್ತೆ ಅಜ್ಜಿ ಅದಕ್ಕೆ ನಿಲ್ಲುವಂತೆ ಆಜ್ಞೆ ಮಾಡಿದಾಗ, ಅಲ್ಲೇ ಅದು ನಿಂತಿದೆಯಂತೆ! ಇದು ಆಕಾಶದ ಗತಿಯಾದರೆ ನಕ್ಷತ್ರಗಳ ಸೃಷ್ಟಿಯ ಕಥೆ ಇನ್ನೂ ವಿಚಿತ್ರ! ಆ ಅಜ್ಜಿಯ ಕಸಪೊರಕೆಗೆ ಹತ್ತಿದ ನೆಲದ ಮಣ್ಣಿನ ಕಣ, ಅದರಿಂದ ಹೊಡೆದಾಗ, ಆಕಾಶದ ತುಂಬೆಲ್ಲ ಸಿಡಿದು ನಕ್ಷತ್ರವಾದುವಂತೆ! ಹೀಗಾಗಿ ಆಕಾಶವನ್ನು ಅಲುಗಾಡಿಸಿದ ನಕ್ಷತ್ರಗಳನ್ನು ನಿರ‍್ಮಾಣ ಮಾಡಿದ ’ಅಜ್ಜಿ’ಯ ಮೊಮ್ಮಕ್ಕಳ ಹೆಮ್ಮೆ ನಮ್ಮದಾಗಿದೆ, ಭಾರತೀಯರು ಅಸಾಮಾನ್ಯರೆಂದು ಕರೆದುಕೊಳ್ಳುವುದು ಆ ಅಜ್ಜಿಯ ’ಪೈಕಿ’ ಎನ್ನುವ ಅಭಿಮಾನಕ್ಕೇ ಇರಬೇಕು!

ಅದೇನೇ ಇರಲಿ, ಈ ಕಥೆಯ ಹಿಂದಿನ ವೈಜ್ಞಾನಿಕ ದೃಷ್ಟಿಯನ್ನು ಗಮನಿಸುವುದು ತೀರ ಪ್ರಮುಖ ವಿಷಯವಾಗಿದೆ. ಮೊದಲನೆಯದಾಗಿ ಭೂಮಿ ಮತ್ತು ನಕ್ಷತ್ರಗಳ ಸಂಬಂಧವನ್ನಿಲ್ಲಿ ಕಂಡುಕೊಳ್ಳಬಹುದಾಗಿದೆ. ಹೊಳೆವ ನಕ್ಷತ್ರಗಳು ಬೇರೇನು ಅಲ್ಲ, ಅವೂ ಈ ಭೂಮಿಯ ಬಂಧುಗಳು. ಕಲ್ಲು ಮಣ್ಣುಗಳಿಂದ ಆಕಾರಗೊಂಡು ಗಾತ್ರವಾಗಿ ಕಾಣುವಂಥವು ಎನ್ನುವ ಮಾತು ನಿಚ್ಚಳ. ಒಂದರಿಂದೊಂದು ಸಿಡಿದು ಬೇರೆ ಬೇರೆ ನಕ್ಷತ್ರಗಳಾದ ಸತ್ಯವನ್ನು ಈ ಕಥೆ ಸ್ಪಷ್ಟಪಡಿಸುತ್ತದೆ. ಹೀಗೆ ಇಂದು ವಿಜ್ಞಾನ ಸಿದ್ಧಪಡಿಸಿದ ವಿಚಾರಕ್ಕೆ ಈ ಜನಪದ ದೃಷ್ಟಿ ಎಷ್ಟು ಹಾಳತ ಎಂದು ಯಾರೂ ಅಚ್ಚರಿ ಪಡಬಹುದಾಗಿದೆ.

ನಮ್ಮಲ್ಲಿ ಉಪಲಬ್ಧವಿದ್ದ ಜನಪದ ಕಥೆಗಳಲ್ಲಿ ಆಕಾಶದ ’ಚಂದ್ರ’ ಬಂದು ಭೂಮಿಯ ಹುಡುಗಿಯನ್ನು ಮೋಹಿಸಿ ಮದುವೆಯಾಗಿ ಅವಳನ್ನು ಆಕಾಶಕ್ಕೆ ಕರೆದು ಕೊಂಡು ಹೋಗಿ ಸಂಸಾರ ಮಾಡಿದ ವಿಷಯ ಬರುತ್ತದೆ. ಈ ಕಥೆಯಿಂದ ಭೂಮಿ ಆಕಾಶಗಳ ಸಂಬಂಧವನ್ನು ಕಲ್ಪಿಸುವುದರ ಜೊತೆಗೆ ಇಂದಿನ ನಮ್ಮ ಆಕಾಶಯಾನದ ಪ್ರಯೋಗಗಳು ತೀರ ಹಳೆಯ ಕಲ್ಪನೆಗಳೆನ್ನುವುದು ಖಚಿತವಾಗುತ್ತದೆ. ಅಷ್ಟೇ ಅಲ್ಲದೆ ಭೂಮಿ ತಾಯಿ, ಆಕಾಶ ತಂದೆ, ಎನ್ನುವ ಆಧ್ಯಾತ್ಮ ವಿಚಾರಕ್ಕೆ ವಿಶೇಷ ಪುಷ್ಟಿ ದೊರೆಯುತ್ತದೆ. ಇಂದು ಗಗನಯಾನವನ್ನೇ ಮಹಾ ಸಾಹಸವೆಂದು ಪರಿಗಣಿಸಿದ ನಮಗೆ, ಜನಪದರು ’ಚಂದ್ರ’ನನ್ನು ತಮ್ಮ ಅಳಿಯನನ್ನಾಗಿ ಮಾಡಿಕೊಂಡಿದ್ದರು. ಅಂತೆಯೇ ನಾವೆಲ್ಲ ಚಂದ್ರನನ್ನು ’ಚಂದೂ ಮಾಮಾ’ ಎಂದು ಕರೆಯುತ್ತೇವೆ! ಭೂಮಿ ಆಕಾಶಗಳು ಬೀಗರೂ ಆಗಿದ್ದವು ಎನ್ನುವುದನ್ನು ಬರುವ ವೈಜ್ಞಾನಿಕ ಯುಗ ಸತ್ಯವಾಗಿಸಿದರೆ ಆಶ್ಚರ‍್ಯ ಪಡಬೇಕಾದ ಮಾತೇನೂ ಇಲ್ಲ. ಈ ಆಶಯದ ಕಥೆಗಳು ಉತ್ತರ ಅಮೇರಿಕಾ ಪೂರ್ವ ಬ್ರಾಝಿಲ್‌ಗಳಲ್ಲಿ ನಕ್ಷತ್ರಗಂಡ, ನಕ್ಷತ್ರ-ಹುಡುಗನ ಹೆಸರಿನಲ್ಲಿವೆ.

ಈ ಸಂದರ್ಭವೊಂದನ್ನುಳಿದು ಉಳಿದೆಲ್ಲ ಕಡೆ ನಕ್ಷತ್ರವನ್ನು ಜನಪದರು ಹೆಣ್ಣೆಂದೇ ಭಾವಿಸಿದ್ದಾರೆ. ಪುರಾಣಗಳಲ್ಲಿಯೂ ನಕ್ಷತ್ರಗಳನ್ನು ಹೆಣ್ಣೆಂದೇ ಉಲ್ಲೇಖಿಸಿದ್ದುಂಟು. ನಕ್ಷತ್ರವನ್ನು ಚಂದ್ರನ ಹೆಂಡತಿ ಎಂದು ಹೇಳುವುದನ್ನು ಗಮನಿಸಬಹುದಾಗಿದೆ. ’ಉಡುರಾಜ’ ’ನಕ್ಷತ್ರೇಶ’ ’ನಕ್ಷತ್ರಾಧೀಪ’ ’ತಾರಗೆಯಾಣ್ಮ’ ಮೊದಲಾದ ಚಂದ್ರನ ಹೆಸರುಗಳು, ಮಳೆಯ ನಕ್ಷತ್ರಗಳ ಹೆಸರುಗಳು ಹೆಣ್ಣಿನ ಹೆಸರುಗಳೇ ಆಗಿವೆ. ಉದಾಹರಣೆಗೆ ಉತ್ತರಿ, ಸ್ವಾತಿ, ಚಿತ್ತಿ, ಭರಣಿ, ಮೊದಲಾದವನ್ನು ನೋಡಬಹುದು. ಪುರಾಣದಲ್ಲಿ ಬರುವ ಅರುಂಧತಿ, ಭರಣಿ, ತಾರಾ, ಉತ್ತರಾ ಮೊದಲಾದ ಹೆಣ್ಣಿನ ಹೆಸರುಗಳು ನಕ್ಷತ್ರಗಳ ಹೆಸರುಗಳಾಗಿವೆ. ನಕ್ಷತ್ರಗಳನ್ನು ದಕ್ಷನ ಹೆಣ್ಣು ಮಕ್ಕಳೆಂದು ಹೇಳುತ್ತಾರೆ. ಆದರೆ ಇದಕ್ಕೆ ಅಪವಾದ ಇಲ್ಲದಿಲ್ಲ. ಸಪ್ತರ್ಷಿಗಳೆಂದು ಕರೆವ ನಕ್ಷತ್ರಗಳು ಧ್ರವ ನಕ್ಷತ್ರವನ್ನು ಗಂಡೆಂದೇ ಗುರುತಿಸಲಾಗುತ್ತದೆ. ಚಂದ್ರ-ತಾರೆಯರಿಂದ, ’ಬುಧ’ ಹುಟ್ಟಿದ ಎಂಬ ಪೌರಾಣಿಕ ಕಥೆ ’ಬುಧವನ್ನು’ ಗಂಡೆಂದು ಗುರುತಿಸಲಾಗುತ್ತಿದೆ. ಒಟ್ಟಿನಲ್ಲಿ ಗ್ರಹಗಳನ್ನು ಗಂಡೆಂದರೂ, ನಕ್ಷತ್ರಗಳನ್ನು ಹೆಣ್ಣೆಂದೂ ಪರಿಗಣಿಸುವಂತಿದೆ.

ಜಾನಪದದಲ್ಲಿ ನಸುಕಿನ ಬೆಳ್ಳೀಚಿಕ್ಕೆಯನ್ನು (ಕನ್ಯೆ) ಹೆಣ್ಣೆಂದೂ ಮೂರು ಸಂಜೆಯ ಚಿಕ್ಕೆಯನ್ನು ’ಮುದುಕಿ’ ಎಂದೂ ಬಹಳ ಕಡೆ ಹೇಳುವುದುಂಟು. ಆದರೂ ಕೆಲವೆಡೆ ಈ ಮೂರು ಸಂಜೆಯ ಚಿಕ್ಕಿಯನ್ನು ಗಂಡೆಂದೂ ಹೇಳಲಾಗುತ್ತದೆ. ಪೂರ್ವ ಬ್ರಾಝಿಲ್‌ದ ಒಂದು ಕಥೆಯಲ್ಲಿ ಭೂಮಿಯ ಕುರೂಪಿಯೊಬ್ಬ ’ನಕ್ಷತ್ರ’ ಕನ್ಯೆಯನ್ನು ಮದುವೆಯಾದ ವಿಷಯವಿದೆ. ಒಟ್ಟಿನಲ್ಲಿ ನಕ್ಷತ್ರವನ್ನು ಹೆಣ್ಣು-ಗಂಡು ಎಂದು ಎರಡೂ ರೀತಿಯಲ್ಲಿ ಗುರುತಿಸಿದರೂ ಹೆಣ್ಣೆಂದೇ ಉಲ್ಲೇಖಗಳು ಹೆಚ್ಚು ಉಪಲಬ್ಧವಾಗುತ್ತವೆ. ಇಂದೂ ನಮಗೆ ಸಿನೇಮಾ ತಾರೆಯರ ವಿಚಾರ ಬಂದಾಗ ’ನಟಿ’ ಯೊಂದೇ ತಟ್ಟನೆ ಹೊಳೆಯುತ್ತಿಲ್ಲವೆ?

ನಿಜವಾಗಿ ಜನಪದ ದೃಷ್ಟಿ ನಕ್ಷತ್ರಗಳನ್ನು ಗುರುತಿಸಿದ್ದೇ ಬೇರೆ. ನಕ್ಷತ್ರಗಳು ಸತ್ತು ಸ್ವರ್ಗ ಸೇರಿದ ನಮ್ಮ ಹಿರಿಯರ ಕಣ್ಣುಗಳೆಂಬುದು ಜನಪದರ ನಂಬುಗೆ. ಆಕಾಶದಲ್ಲಿದ್ದು ಅವು ನಮ್ಮ ಬಾಳಿಗೆ ಬೆಳಕು ನೀಡಿ ದಾರಿ ತೋರಿಸುವುದರ ಜೊತೆಗೆ ನಿತ್ಯದ ಬದುಕಿನಲ್ಲಿ ನಮ್ಮ ’ನಡಾವಳಿ’ಯನ್ನು ಗಮನಿಸುತ್ತವಂತೆ! ಎರಡನೆಯದಾಗಿ ಅವುಗಳನ್ನು ಸತ್ತವರ ಆತ್ಮಗಳೆಂದೂ ಗುರುತಿಸಲಾಗುತ್ತದೆ. ಪುಣ್ಯ ಮಾಡಿ ಸತ್ತವರು ಮಾತ್ರ ಚಿಕ್ಕಿಗಳಾಗುತ್ತಾರೆಂಬುದು ಜನಪದರ ಅಚಲ ವಿಶ್ವಾಸ. ಅದಕ್ಕಾಗಿಯೇ ಮಕ್ಕಳ ತೊಟ್ಟಿಲಿಗೆ ಆಕಾಶದ ಸಾಕಾರವಾದ ಛತ್ತನ್ನು ಕಟ್ಟಿದರು. ಅದರಲ್ಲಿ ಸೂರ್ಯ-ಚಂದ್ರ ಚಿಕ್ಕಿಗಳನ್ನು ನಿರ‍್ಮಿಸಿ ಮಗುವನ್ನು ಆಕಾಶದ ವೈಚಿತ್ರ್ಯಗಳಿಗೆ ಕಣ್ದೆರೆಸಿದರು.

ಪುರಾಣಪಂಚಾಂಗ

ಪುರಾಣ ಪಂಚಾಂಗಗಳು ಹೆಸರಿಸುವ ನಕ್ಷತ್ರಗಳಿಗೂ, ಜನಪದರು ಗುರುತಿಸುವ ನಕ್ಷತ್ರಗಳಿಗೂ ವಿಶೇಷ ವ್ಯಾತ್ಯಾಸವಿರುವುದು ಸ್ವಾಭಾವಿಕ. ಸಪ್ತರ್ಷಿ, ಧ್ರುವಮಂಡಲ, ನವಗ್ರಹಗಳೆಂದು ಪರಿಗಣಿಸುವ ಸೂರ್ಯ ಚಂದ್ರ ರಾಹು ಕೇತು ಮೊದಲಾದವುಗಳ ಪ್ರಸ್ತಾಪ ಪುರಾಣಗಳಲ್ಲಿ ಬರುವುದುಂಟು. ಅದರಂತೆ ವಾರ, ತಿಥಿ, ನಕ್ಷತ್ರ, ಯೋಗ, ಕರಣವೆಂದು ಪಂಚಾಂಗದ ಒಂದು ಅಂಗ ’ನಕ್ಷತ್ರವೂ ಆಯ್ತು. ನಿಜವಾಗಿ ಪಂಚಾಂಗವ ನ್ನು ಜನಪದ ಶಾಸ್ತ್ರವೆಂದೇ ಹೇಳಬೇಕು (Folk Science). ಇವರು ಜನ ಪದರ ತಿಳಿಕೆಗೊಂದು ವ್ಯವಸ್ಥಿತ ರೂಪಕೊಡಲೆತ್ನಿಸಿದರು. ಜನಪದರಿಗೆ ಮಳೆಯನ್ನು ಕುರಿತು ಬೇಕದಷ್ಟು ಜ್ಞಾನವಿದ್ದರೂ, ಅವುಗಳನ್ನು ಇಪ್ಪತ್ತೇಳು ನಕ್ಷತ್ರಗಳ ಹೆಸರಿನಲ್ಲಿ ಹೆಸರಿಸಿ ಅವುಗಳ ಆರಂಭ, ಮುಕ್ತಾಯ ಮೊದಲಾಗಿ ಸೀಮೆ ಕೊರೆದರು. ಆದರೆ ಈ ’ಮಳೆಯ ನಕ್ಷತ್ರಗಳು ಬಹಳಷ್ಟು ಕಣ್ಣಿಗೆ ಕಾಣುವುದಿಲ್ಲ. ಅವುಗಳ ಅಸ್ತಿತ್ವವನ್ನು ಗುರುತಿಸುವುದು ಕೇವಲ ಸೂರ್ಯ-ಚಂದ್ರರ ಸುಳಿದಾಟದ ಲೆಕ್ಕಾಚಾರದ ಮೇಲೆ, ಆದರೆ ಆಯಾ ಮಳೆಯ ಅವಧಿಯಲ್ಲಿ ವಿಶಿಷ್ಟ ಉಷ್ಣತಾಮಾನ, ಹವೆಯ ಒತ್ತಡ ಮೊದಲಾದ್ದನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ಉತ್ತರಿಯ ಮಳೆ ಆರಂಭವಾದಾಗ ಬೆದೆ ಬಿಸಿಲು ಬಹಳ ಪ್ರಖರವಾಗಿರುವಿಕೆ. ಹಸ್ತದ ಹನಿ ದಪ್ಪ, ಸ್ವಾತಿಯ ಹನಿ ಸಣ್ಣಾಗಿರುವುದು. ಮೃಗಸಿರಕ್ಕೆ ಹವೆ ತಂಪಾಗಿರುವುದು, ಇವೆಲ್ಲ ಆಯಾ ನಕ್ಷತ್ರಗಳ ಪರಿಣಾಮವೇ ಹೊರತು ಬೇರೇನೂ ಅಲ್ಲ. ಇದೆಲ್ಲ ಒಕ್ಕಲಿಗರಿಗೆ ತಿಳಿಕೆ ಇತ್ತು. ಆದರೆ ಪುರಾಣ-ಪಂಚಾಂಗಗಳು ಅವುಗಳಿಗೆ ಹೆಸರುಕೊಟ್ಟು ವ್ಯವಸ್ಥಿತಗೊಳಿಸಿದವು. ಅದಕ್ಕಾಗಿ ಕಾಣದ ಈ ಇಪ್ಪತ್ತೇಳನ್ನು ’ನಕ್ಷತ್ರ’ಗಳೆಂದು ಹೇಗೆ ಹೇಳಬೇಕು ಎಂದೇನಿಲ್ಲ, ಅವುಗಳ ಪರಿಣಾಮದಿಂದ ಅಸ್ತಿತ್ವವನ್ನರಿಯಬೇಕು ಅಷ್ಟೇ, ಅದರಂತೆ ’ಮೂಲಾ ನಕ್ಷತ್ರ’ ಮೊದಲಾದ ಹೆಸರುಗಳೂ ಬರುತ್ತವೆ. ಈ ವಿಚಾರಗಳು ಜಾನಪದದಿಂದ ಹೋಗಿ ಶಾಸ್ತ್ರಪುರಾಣಗಳಾಗಿ ಮತ್ತೆ ಜಾನಪದಕ್ಕೆ ಬಂದಂಥವುಗಳೆಂದು ಮತ್ರ ಹೇಳಬಹುದೇನೋ? ಆದರೆ ’ನಕ್ಷತ್ರ -ಜಾನಪದ’ ಕುರಿತು ವಿಚಾರ ಮಾಡುವ ನಮಗೆ ಪಂಚಾಂಗವನ್ನು ತಳುಕು ಹಾಕಿಕೊಳ್ಳುವುದು ನಮ್ಮ ವಿಷಯ ವ್ಯಾಪ್ತಿಗೆ ಹೊರಗು ಅನ್ನಿಸುತ್ತದೆ. ಅದಕ್ಕಾಗಿ ಜನಪದರ ದೃಷ್ಟಿಯಲ್ಲಿ ’ನಕ್ಷತ್ರ’ ಕುರಿತೇ ಇಲ್ಲಿ ವಿಚಾರಿಸುವುದು ಸೂಕ್ತ ಎಂದು ಭಾವಿಸಿರುವೆ.

ಹೆಸರುಗಳು

ಜನಪದರು ಗ್ರಹ, ನಕ್ಷತ್ರಗಳನ್ನು ’ಚಿಕ್ಕೆ’ ಎಂದೇ ಕರೆದರು. ಅವುಗಳಿಗೊಂದು ಹೆಸರು ಕೊಡುವಾಗ ವಿಶೇಷವಾಗಿ ನಕ್ಷತ್ರ ಸಮೂಹಗಳನ್ನೇ ಒಂದೊಂದು ಹೆಸರಿನಿಂದ ಗುರುತಿಸಿದ್ದೇ ಹೆಚ್ಚು. ಒಂಟಿ ನಕ್ಷತ್ರಗಳನ್ನು ಗುರುತಿಸಿಲ್ಲ ಎಂದಲ್ಲ; ಅವುಗಳಿಗೂ ಅವುಗಳ ಆಕಾರ, ಕಾಣುವ ಅವಧಿ ವೈಶಿಷ್ಟ್ಯಗಳಿಗನುಗುಣವಾಗಿ ತಮ್ಮವೇ ಆದ ಹೆಸರುಗಳನ್ನು ಕೊಟ್ಟಿದ್ದಾರೆ. ಅವು ಪ್ರಾದೇಶಿಕವಾಗಿ ಬೇರೆ ಬೇರೆ ಎನಿಸಿದರೂ ಅವುಗಳ ಹಿಂದಿನ ಜನಪದದ ದೃಷ್ಟಿ ಒಂದೇ ಆಗಿದೆ.

ನಕ್ಷತ್ರಸಮೂಹ ಆಕಾಶದಲ್ಲಿ ಒಂದು ಆಕಾರ ತಳೆದಾಗ ಅದನ್ನು ತಮ್ಮ ಬದುಕಿನಲ್ಲಿ ಕಂಡ ಒಂದು ವಸ್ತುವಿಗೆ ಇಲ್ಲವೆ ಪ್ರಾಣಿಗೆ ಹೋಲಿಸಿ ಹೆಸರಿಸಿದರು. ಉದಾಹರಣೆಗೆ ಮುತಾಳ ಕೂರಿಗಿ, ಚೇಳು, ಕೇವಲ ಹೋಲಿಕೆಯನ್ನೇ ಆಧಾರವಾಗಿಟ್ಟುಕೊಂಡು ಬಂದ ಈ ಹೆಸರುಗಳು ಬೇಗ ಸರ್ವಗ್ರಾಹಿಯಾಗಿ ಜನಮನದಲ್ಲಿ ನೆಲೆನಿಂತವು. ಒಂದೇ ನಕ್ಷತ್ರವನ್ನು ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ಪ್ರದೇಶದಲ್ಲಿ ಬೇರೆ-ಬೇರೆ ಹೆಸರಿನಿಂದ  ಗುರುತಿಸಿದರು. ಮುಂಜಾನೆ ಬಂದ ಶುಕ್ತವನ್ನು ’ಬೆಳ್ಳಿ’ ಎಂದರೆ, ಮುಚ್ಚಂಜೆಗೆ ಬಂದ ಶುಕ್ರನನ್ನು ಮೂರು ತಾಸಿನ ಚಿಕ್ಕಿ ಎಂದರು.

ಪಾಶ್ಚಾತ್ಯ ಜನಪದರು ಬಹಳಷ್ಟು ನಕ್ಷತ್ರಗಳಿಗೆ ಪ್ರಾಣಿಗಳ ಹೆಸರುಗಳನ್ನು ಕೊಟ್ಟುದನ್ನು ಗಮನಿಸಬಹುದಾಗಿದೆ. (Leo) ಸಿಂಹ, (Scorpio) ವೃಶ್ಚಿಕ (Orion) ಮೃಗಶಿರ (Pisces) ಮೀನ (Canis Major) ಮಹಾಶ್ವಾನ (Great Bear) ದೊಡ್ಡ ಕರಡಿ (Little Bear) ಸಣ್ಣ ಕರಡಿ ಹೀಗೆ ಕರೆಯುವುದನ್ನು ಗಮನಿಸಬಹುದಾಗಿದೆ. ಅದರಂತೆ ಭಾರತೀಯರು ಸಹ ವೃಶ್ಚಿಕ, ಮೀನ, ಮೇಷ, ವೃಷಭ, ಮೃಗಶಿರ, ನಾಗರ ಮೊದಲಾಗಿ ಕರೆಯುವುದನ್ನು ಗುರುತಿಸಬಹುದಾಗಿದೆ.

ಮುತಾಳ ಕೂರಿಗಿ

ಒಕ್ಕಲುತನ ಪ್ರಧಾನ ಉದ್ಯೋಗವಾದ ಜನಪದರಿಗೆ ತಾವೇ ಸೃಷ್ಟಿಸಿದ ಮೂರು ತಾಳಿನ (ಮುಗ್ಗೂರ‍್ಗಿ) ನಾಲ್ಕು ತಾಳಿನ (ಚೌದತ್ತಿ) ಬಿತ್ತುವ ಕೂರಿಗೆಯ ಆಕಾರ ಸದಾ ಕಣ್ಮುಂದೆ. ಇವು ಸಮನಾಂತರದ ತಾಳುಗಳನ್ನು ಹೊಂದಿರುತ್ತವೆ. ಆಕಾಶದಲ್ಲಿ ಸಮಾನಾಂತರದಲ್ಲಿ ಸಮಾನಗಾತ್ರದ ಮೂರು ನಕ್ಷತ್ರಗಳನ್ನು ಕಂಡಾಗ ಮುತಾಳ ಕೂರಿಗೆ ಅವರ ಕಣ್ಮುಂದೆ ಬರುವುದು ಸ್ವಾಭಾವಿಕ. ಇದನ್ನೂ ಕೆಲವು ಕಡೆ ’ದೊಡ್ಡ ಕೂರಿಗೆ’ ಎಂದೂ ಕರೆಯುತ್ತಾರೆ. ಇದರ ಪಕ್ಕದಲ್ಲೇ ಇರುವ ತೀರ ಚಿಕ್ಕವಾದ ಮೂರು ಚಿಕ್ಕಿಗಳ ಸಮೂಹವನ್ನು ’ಸಣ್ಣ ಕೂರಿಗೆ’ ಎಂದೂ ಕೆಲವರು ಹೇಳುತ್ತಾರೆ. ಕೂರಿಗೆಯ ಜೊತೆ ಬೀಜ ಬಿತ್ತಲು ’ಮಂಡಿ’ ಅವಶ್ಯಕ. ದೊಡ್ಡ ಕೂರಿಗೆಯ ಸ್ವಲ್ಪ ಮೇಲ್ಗಡೆಗೆ ಚಿಕ್ಕಗಾತ್ರದ ಮೂರು ಚಿಕ್ಕೆಗಳ ಗುಂಪೊಂದಿದೆ, ಅದನ್ನು ’ಮಂಡಿ’ ಎಂದು ಹೇಳಲಾಗುತ್ತದೆ. ಇದರ ಹಿಂದೆ ಇನ್ನೂ ಒಂದು ಕಲ್ಪನೆಯಿದೆ. ಈ ಮುತಾಳ ಕೂರಿಗೆ (ಡಿಶಂಬರ ಸುಮಾರಿಗೆ) ಮೂರು ಸಂಜೆಗೆ ಪೂರ್ವಕ್ಕೆ ಕಾಣಿಸಿಕೊಳ್ಳುತ್ತದೆ. ಸ್ಪಷ್ಟ ಗಾತ್ರದ ಈ ನಕ್ಷತ್ರಗಳು ಮೊದಲು ಕಾಣಿಸಿಕೊಂಡು ಅವು ಮೇಲೆ ಬಂದಂತೆ ಕತ್ತಲೆಯ ಸಾಂದ್ರತೆ ಅಧಿಕವಾಗುತ್ತದೆ. ಆಗ ಅದರ ಹಿಂದಿನಿಂದ ನಕ್ಷತ್ರಗಳ ಬೆಳೆಯೇ ಬಂದಂತೆ ಹಲವಾರು ನಕ್ಷತ್ರಗಳು ಪೂರ್ವ ದಿಗಂತದ ತುಂಬ ಕಾಣುತ್ತವೆ. ಕೂರಿಗೆ ಮುಂದೆ-ಮುಂದೆ ಸಾಗಿದಂತೆ ಹಿಂದೆ “ನಕ್ಷತ್ರ ಬೆಳೆ” ಬೆಳೆದು ಬರುವ ಕಲ್ಪನೆ ಇಲ್ಲಿದೆ. ಕೂರಿಗೆಯನ್ನೇ ಅವಲಂಬಿಸಿದ ಹಿಂದೆ “ನಕ್ಷತ್ರ ಬೆಳೆ” ಬೆಳೆದು ಬರುವ ಕಲ್ಪನೆ ಇಲ್ಲಿದೆ. ಕೂರಿಗೆಯನ್ನೇ ಅವಲಂಬಿಸಿದ ಇಡೀ ಭಾರತದ ತುಂಬ ಇದೇ ಅರ್ಥ ಬರುವ ಹೆಸರು ಈ ನಕ್ಷತ್ರಗಣಕ್ಕೆ ಇರುವುದು ಸ್ವಾಭಾವಿಕ. ಭಾರತೀಯ ಜನಪದ ಸಂಸ್ಕೃತಿಯ ದ್ಯೋತಕ ಈ ನಕ್ಷತ್ರಗುಂಪು.

ಚೇಳು

ಮುತಾಳ ಕೂರಿಗೆಯ ಸ್ವಲ್ಪ ಮುಂದೆ ತೀರ ಚಿಕ್ಕ-ಚಿಕ್ಕ, ಎಣಿಸಲು ಬಾರದಷ್ಟು ಮಿಣುಕು ನಕ್ಷತ್ರಗಳ ಗುಂಪೊಂದು ಚೇಳಿನ ಆಕಾರದಲ್ಲಿದೆ. ಪಶ್ಚಿಮಾಭಿಮುಖವಾಗಿ ಹೊರಟ ಈ ಚೇಳು ವೇಳೆ ಗುರುತಿಸಲು ಆಗಾಗ ಬಳಕೆಯಾಗುತ್ತದೆ.

ಈ ನಕ್ಷತ್ರ ಪುಂಜಕ್ಕೆ ’ಚೆನ್ನಮ್ಮನ ದಂಡಿ’ ಎಂಬ ಇನ್ನೊಂದು ಪ್ರಾದೇಶಿಕ ಹೆಸರೂ ಇದೆ. ಸತ್ತ ಗಂಡನನ್ನು ಮರಳಿ ಪಡೆದ ಮುತ್ತೈದೆ ಚೆನ್ನಮ್ಮನ ಶಾಶ್ವತ ಕುರುಹಾಗಿ ಇದು ಆಕಾಶದಲ್ಲಿ ಎಂದೂ ಇದೆ ಎಂಬ ಕಲ್ಪನೆ. ಮಂಗಲ ಕಾರ್ಯಗಳಲ್ಲಿ ಹೆಣ್ಣು ಮಕ್ಕಲು ತಲೆಯ ಮೇಲೆ ಕಟ್ಟಿಕೊಳ್ಳುವ, ಹೂವಿನಿಂದ ಮಾಡಿದ ಮುತ್ತೈದೆತನದ ಸಂಕೇತಕ್ಕೆ ’ದಂಡಿ’ ಎಂದು ಹೇಳಲಾಗುತ್ತದೆ. ತ್ರಿಕೋನಾಕಾಋದ ದಂಡಿಯನ್ನು ಹೋಲುವ ಈ ನಕ್ಷತ್ರ ಸಮೂಹಕ್ಕೆ ’ಚೆನ್ನಮ್ಮನ ದಂಡಿ’ ಎಂದು ಕರ್ನಾಟಕದಲ್ಲಿ ಕರೆಯುತ್ತಾರೆ. ’ಚೆನ್ನಮ್ಮನ ದಂಡೆ’ ಎಂಬ ಜನಪದ ಖಂಡಕಾವ್ಯವೊಂದಿದೆ. ಈ ದಂಡೆಯನ್ನು ಮುತ್ತೈದೆಯರು ಪೂಜ್ಯ ಭಾವದಿಂದ ಕಾಣುತ್ತಾರೆ. ಇಲ್ಲಿಯೂ ಈ ನಕ್ಷತ್ರ ಗಣಕ್ಕಿರುವ ಆಕಾರವೇ ಮುಖ್ಯ.

ಗುಬ್ಬೀ ಮಂಚ

ಸಪ್ತರ್ಷಿಮಂಡಲವೆಂದು ಪ್ರಖ್ಯಾತವಾದ ಏಳು ಚಿಕ್ಕಿಗಳ ಸಮೂಹವನ್ನು ಜಾನಪದದಲ್ಲಿ ಗುಬ್ಬೀಮಂಚ, ಮುದಿಕೀ ಮಂಚ ಮೊದಲಾಗಿ ಕರಯೆಲಾಗುತ್ತಿದೆ. ಮಂಚದ ಕಾಲಿನಂತಿರುವ ನಾಲ್ಕು ನಕ್ಷತ್ರಗಳ ಆಕಾರವೇ ಇದಕ್ಕೆ ಈ ಹೆಸರನ್ನು ತಂದಿದೆ. ಇದು ಬಂಗಾರದ್ದೆಂದೂ ಅದರ ಕೆಳಗಿರುವ ಮೂರು ನಕ್ಷತ್ರಗಳು ಮೂವರು ಕಳ್ಳರೆಂದೂ, ಅವರು ಆ ಬಂಗಾರದ ಮಂಚ ಕದಿಯಲು ಬರುತ್ತಿದ್ದಾರೆಂದೂ ಜನಪದರು ಹೇಳುವ ಮಾತು. ಜನಪದದಲ್ಲಿ ಎಲ್ಲರೂ ಗುರುತಿಸಬಹುದಾದ, ಗುರುತಿಸಿರುವ ನಕ್ಷತ್ರ ಗುಂಪು ಇದು. ರಾತ್ರಿಯಲ್ಲಿ ಇದರ ಸಹಾಯದಿಂದ ವೇಳೆ, ದಿಕ್ಕು, ತಿಳಿದುಕೊಳ್ಳುತ್ತಿದ್ದರು. ಬೀದರ ಜಿಲೆಯಲ್ಲಿ ಇದನ್ನು ’ಪಟ್ಟಮಂಚ’ ’ಸಾಳಾಮಂಚ’ ಎಂದು ಕರೆಯುತ್ತಾರೆ. ಇದರ ಮೇಲೆ ಶಿವ-ಪಾರ್ವತಿಯರು ಮಲಗುತ್ತಾರಂತೆ! ಕೊನೆಯ ಚಿಕ್ಕಿಯನ್ನು ಕೆಲವು ಕಡೆ ಮಂಚ ಕಾಯುವ ’ನಾಯಿ’ ಎಂದೂ ಹೇಳುತ್ತಾರೆ.

ಬೇಡ (ವ್ಯಾಧ)

ಮುತಾಳ ಕೂರಿಗೆಯನ್ನು ಕೇಂದ್ರವಾಗಿಟ್ಟುಕೊಂಡ ಇನ್ನೊಂದು ನಕ್ಷತ್ರಗಣವನ್ನು ವ್ಯಾಧ, ಬೇಡ ಎಂದು ಹೇಳಲಾಗುತ್ತದೆ. ಇಂಗ್ಲೀಷರೂ ಇದನ್ನು ’ಹಂಟರ’ ಎಂದು ಗುರುತಿಸುತ್ತಾರೆ. ಈ ಬೇಡನ ಆಕಾರವನ್ನು ಕಂಡುಕೊಳ್ಳುವುದು ಸ್ವಲ್ಪ ಕಷ್ಟವೇನೋ! ಆದರೂ ಕೆಲವು ನಿರ್ದೇಶನದಿಂದ ಸ್ಪಷ್ಟವಾಗಿ ಬೇಡನ ಆಕಾರವನ್ನು ಗುರುತಿಸಬಹುದಾಗಿದೆ.

ಮುತಾಳ ಕೂರಿಗೆಯನ್ನು ವ್ಯಾಧನ ಟೊಂಕಪಟ್ಟಿ (Belt) ಯೆಂದು, ಅದರ ಕೆಳಗಿರುವ (ಸಣ್ಣ ದಿಂಡನ್ನು) ತೀರಚಿಕ್ಕ ಮೂರು ನಕ್ಷತ್ರಗಳನ್ನು ಅವನ ಟೊಂಕ ಪಟ್ಟಿಗೆ ನೇತಾಡುವ ಕಿರುಗತ್ತಿ ಎಂದು ಹೇಳಲಾಗುತ್ತಿದೆ. ಕೂರಿಗೆಯ ಕೇಂದ್ರದಿಂದ ಕೆಳಗೆರಡು, ಮೇಲೆರಡು ಸ್ಪಷ್ಟವಾಗಿ ಕಾಣುವ ನಕ್ಷತ್ರಗಳನ್ನು ಬೇಡನ ಕಾಲು ಮತ್ತು ಕೈಗಳೆಂದು ಅನುಕ್ರಮವಾಗಿ ಗುರುತಿಸಲಾಗುತ್ತಿದೆ. ಕೈಗಳೆರಡರ ಮಧ್ಯ ಸ್ವಲ್ಪ ಮೇಲೆ ಇರುವ ಚಿಕ್ಕ ಮೂರು ನಕ್ಷತ್ರ ಗುಂಪನ್ನು (ಮಂಡಿ) ಬೇಡನ ತಲೆ ಎನ್ನಲಾಗುತ್ತದೆ. ಈ ನಕ್ಷತ್ರಗಳ ಸಂಯೋಜನೆ ಒಬ್ಬ ವ್ಯಾಧನ ರೂಪವನ್ನು ಕಲ್ಪಿಸಲು ಸಹಾಯವಾಗುತ್ತದೆ. ದಕ್ಷಿಣಕ್ಕೆ ಕಾಲು ಉತ್ತರಕ್ಕೆ ಇದ್ದರೂ ಪಶ್ಚಿಮಕ್ಕೆ ಅವನು ಚಲಿಸುತ್ತಾನೆ. ಇಲ್ಲಿ ’ಕೂರಿಗಿ’ ’ಸಣ್ಣ ಕೂರಿಗಿ’ ’ಮಂಡಿ’ ಎಲ್ಲವನ್ನೂ ಒಳಗೊಂಡ ಮತ್ತೊಂದು ಆಕರ ನಿರ‍್ಮಾಣವಾಗುತ್ತದೆ. ಅದಕ್ಕೆ ಇನ್ನೊಂದು ಹೆಸರು ಬೇಡ. ಈ ನಕ್ಷತ್ರಗಳ ಮುಂದಿರುವ ಇನ್ನಷ್ಟು ನಕ್ಷತ್ರಗಳನ್ನೂ ಕೂಡಿಸಿ ಈ ಗುಂಪಿಗೆ ಮೃಗಸಿರ (Orion) ಎಂದು ಕೆಲವರು ಕರೆದಿದ್ದಾರೆ.

ನಕ್ಷತ್ರ ಗಂಗೆ (ಹಾಲಾದಿ)

ಆಗ್ನೇಯದಿಂದ ವಾಯುವ್ಯಕ್ಕೆ ಆಕಾಶದಲ್ಲಿ ಹರಿಯುವ ಈ ಆಕಾಶಗಂಗೆಗೆ ಅದೇ ಅರ್ಥದ ಹಲವು ಹೆಸರುಗಳಿವೆ. ಇಂಗ್ಲೀಷಿನಲ್ಲಿ (Milky-Way) ’ಮಿಲ್ಕಿವೇ’ ಎಂದು ಹೇಳುವಂತೆ ಕನ್ನಡದಲ್ಲಿಯೂ ’ಹಾಲಾದಿ’ ಎಂದು ಜನಪದರು ಕರೆಯುವುದುಂಟು ನಡುರಾತ್ರಿಯಲ್ಲಿ ಭೂಮಿಗೆ ಬೆಳಕು ಈ ದಾರಿಯಿಂದಲೇ ಬರುತ್ತದೆ. ’ನಕ್ಷತ್ರಗಳ ತವರು ಮನೆ’ ಎಂದು ಇದನ್ನು ತಿಳಿಯಲಾಗುತ್ತದೆ. ಯಾಕೆಂದರೆ ಎಲ್ಲ ನಕ್ಷತ್ರಗಳು ಇಲ್ಲಿಂದಲೇ ಹುಟ್ಟುತ್ತವಂತೆ! ಇದರಲ್ಲಿ ಸುಮಾರು ಇಪ್ಪತ್ತು ಸಾವಿರಕೋಟೆ ನಕ್ಷತ್ರಗಳಿವೆ ಎಂಬುದೊಂದು ವಿಜ್ಞಾನದ ಅಜಮಾಸು ಲೆಕ್ಕಾಚಾರ ಎಂದು ಹೇಳಿಯಾಗಿದೆ. ಆಕಾಶದಲ್ಲಿ ಇನ್ನೂ ಇಂಥ ಹಲವಾರು ’ಹಾಲಾರಿ’ಗಳಿವೆ ಎಂಬುದೊಂದು ಗ್ರಹಿಸಲಾಗದ ಅದ್ಭುತ!

ಜಾನಪದದಲ್ಲಿ ಇದನ್ನು ’ಸ್ವರ್ಗದ ಹಾದಿ’ ಎಂದು ಹೇಳುತ್ತಾರೆ. ’ಗಂಗಿ ಹೊಳಿ’ ಎಂಬ ಪ್ರಾದೇಶಿಕ ಹೆಸರೂ ಇದೆ. ಪಾಂಡವರು ನಡೆದು ಸ್ವರ್ಗಕ್ಕೆ ಹೋದುದು ಇದೇ ದಾರಿಯಂತೆ! ಇದನ್ನು ’ಧರ‍್ಮಾರ’ ’ದುರಗಮುರಿಗಿ’ ಎಂದು ಅಲ್ಲಲ್ಲಿ ಕೆಲ ಜನರ ಬಾಯಿಂದ ಕೇಳಿರುವೆ. ಬಹಳ ಮಾಡಿ ಇವು ’ಧರ‍್ಮ ಮಾರ್ಗ’ ಎಂಬುದರ ಅಪಭ್ರಂಶ ರೂಪಗಳಿರಬೇಕೇನೊ! ಅಂದರೆ ’ಧರ‍್ಮರಾಜ ನಡೆದು ಸ್ವರ್ಗ ಸೇರಿದ ಮಾರ್ಗ’ ಎಂಬ ಅರ್ಥದಲ್ಲಿ ಇವು ಇರಬಹುದಾಗಿದೆ. ನಕ್ಷತ್ರಗಳ ಈ ಬೆಳಕಿನ ಹೊಳೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ’ಹಣದಿ’ ಎಂದೂ ಹೇಳುವುದುಂಟು ದೇವತೆಗಳು ನಡೆ-ನಡೆದು ದಾರಿ ಬಿದ್ದಿದೆಯಂತೆ.

ನಾಗ()

ಹೆಡೆ ತೆರೆದ ನಾಗರಹಾವಿನ ಆಕಾರದಲ್ಲಿ ಸಂಯೋಜನೆಯಾದ ಹಲವು ನಕ್ಷತ್ರಗಳ ಮೇಳಕ್ಕೆ ನಾಗ, ನಾಗರ, ನಾಗರಹಾವು ಎಂದು ಹೇಳಲಾಗುತ್ತದೆ. ಜನೇವರಿಯಲ್ಲಿ ನಸುಕಿನ ನಾಲ್ಕು ಗಂಟೆಗೆ ಹೆಡೆ ಮೊದಲಾಗಿ ಪೂರ್ವದಲ್ಲಿ ಹುಟ್ಟುತ್ತದೆ. ಸುಮಾರು ಐದು ಗಂಟೆಗೆ ಸ್ಪಷ್ಟವಾಗಿ ಮೇಲೆ ಬಂದ ನಾಗರಹಾವಿನ ರೂಪದಲ್ಲಿ ನಕ್ಷತ್ರಗಳು ಕಾಣುತ್ತವೆ. ಮೇಲೆ ಮೂರು ನಾಲ್ಕು ನಕ್ಷತ್ರಗಳು ಹೆಡೆಯ ವಕ್ರಾಕಾರದಲ್ಲಿದ್ದು, ಕೆಳಭಾಗದ ಕುತ್ತಿಗೆಯನ್ನು ಸೂಚಿಸುವ ಒಂದೇ ಒಂದು ದೊಡ್ಡ ನಕ್ಷತ್ರವಿರುತ್ತದೆ. ಅದರ ಕೆಳಗೆ ಹಾವಿ ಅಂಕು-ಡೊಂಕಾದ ಮೈಯನ್ನು ನೆನಪಿಸುವ ನಾಲ್ಕಾರು ನಕ್ಷತ್ರಗಳು ಆಗ್ನೇಯ ಕಡೆಗೆ ದೂರದವರೆಗೆ ಒಂದರ ನಂತರ ಒಂದರಂತೆ ಇರುತ್ತವೆ. ಅದನ್ನು ನೋಡಿದ ಯಾರಿಗೂ ನಾಗರಹಾವಿನ ಚಿತ್ರ ತಟ್ಟನೆ ಕಣ್ಮುಂದೆ ನುಸುಳಿ ಬರುತ್ತದೆ. ಇದು ವರ್ಷವಿಡೀ ಬೇರೆ ಬೇರೆ ವೇಳೆಯಲ್ಲಿ ಆಕಾಶದಲ್ಲಿ ಕಾಣುತ್ತದೆ. ಮೇ, ಜೂನ ತಿಂಗಳಲ್ಲಿ ನಾಗರಹಾವನ್ನು ಮೂರು ಸಂಜೆಗೆ ಪೂರ್ವದಲ್ಲಿ ಕಾಣಬಹುದಾಗಿದೆ.