ಏಳು ಕೊಳ್ಳದ ಎಲ್ಲಮ್ಮನನ್ನು ಕೇಂದ್ರ ವಸ್ತುವಾಗಿಟ್ಟುಕೊಂಡು ಈ ಎರಡು ದಿನ ನಡೆದಿರುವ ವಿಚಾರ ಗೋಷ್ಠಿಗಳ ಸಂಪ್ರಬಂಧಗಳನ್ನು ಕೇಳಿದ್ದೀರಿ. ಎಲ್ಲಮ್ಮನ ಕೇಂದ್ರವಾಗಿರುವ ಸವದತ್ತಿಯಲ್ಲಿ ಆ ದೇವತೆಯನ್ನು ಕುರಿತಾದ ಚರ್ಚೆ ನಡೆದಿರುವುದು ಸ್ವಾಗತಾರ್ಹವಾದರೂ, ಐತಿಹಾಸಿಕ ಅಥವಾ ಸಂಶೋಧನಾತ್ಮಕ, ಅದಕ್ಕಿಂತ ಹೆಚ್ಚಾಗಿ ಸಮಕಾಲೀನ ಸಾಮೂಹಿಕ ಚಿಂತನೆಯನ್ನು ಇಂತಹ ಕಡೆ ನಡೆಸುವುದು ಅಷ್ಟು ಸುಲಭ ಸಂಗತಿಯೇನೂ ಅಲ್ಲ. ವಿಚಾರಗೋಷ್ಠಿಗಳು ಜಾನಪದ ಶಾಸ್ತ್ರದ ಹೆಸರು ಹೊತ್ತು ನಡೆಯುವುದರಿಂದ ಅಲ್ಲಿ ಮುಖ್ಯವಾಗಿ ಆ ದೈವವನ್ನು – ಎಲ್ಲಮ್ಮನನ್ನು , ಅವಳ ಇತಿಹಾಸವನ್ನು, ಆ ದೈವ ಜನತೆಯ ಮೇಲೆ ಹೊಂದಿರುವ ನಿಯಂತ್ರಣವನ್ನು, ಸಾಮೂಹಿಕ ರಚನೆಯ ಮೇಲೆ ಬೀರಿರುವ ಪರಿಣಾಮವನ್ನು ಸಂಗ್ರಹಿಸುವ, ವ್ಯಾಖ್ಯಾನಿಸುವ, ಒಟ್ಟಾರೆ ತಿಳಿದುಕೊಳ್ಳುವ ಉದ್ದೇಶವೇ ಮುಖ್ಯವಾಗಿರುತ್ತದೆ: ಅದೇ ಮುಖ್ಯವಾಗಿರಬೇಕು. ಇಂತಹ ಕಡೆ ಸಮಾಜ ಸುಧಾರಣೆಯ ಮಾತನಾಡುವುದು ಕಷ್ಟವಾದರೂ, ಯಾವುದೇ ಸಂಶೋಧನೆ ಸಾಮಾಜಿಕ ಒಳಿತನ್ನೂ ಗಮನದಲ್ಲಿಟ್ಟುಕೊಂಡಿರುತ್ತದೆ ಎಂಬುದನ್ನು ಮರೆಯಬಾರದು. ಕೆಲವು ವರ್ಷಗಳ ಹಿಂದೆ ಸವದತ್ತಿ ಎಲ್ಲಮ್ಮನ “ರಂಡೆ ಹುಣ್ಣಿಮೆ” ದಿನದಂದು ಮತ್ತು ಅದರ ಮುಂದಿನ ಹುಣ್ಣಿಮೆ ದಿನದಂದು ಬಂದು ಜನ ಜಾತ್ರೆಯನ್ನು ನೋಡಿದಾಗ, ಏಕಕಾಲಕ್ಕೆ ಸ್ವರ್ಗ ನರಕಗಳೆರಡೂ ಏಕತ್ರ ಅವತರಿಸಿದ್ದುದು ನನ್ನ ಅನುಭವಕ್ಕೆ ಬಂದಿತು. ಆ ಹುಣ್ಣಿಮೆ ಬೆಳಕು, ಜನರ ಉತ್ಸಾಹ, ಜೋಗಿತಿಯರ ಕುಣಿತ, ಹಾಡು, ವಾದ್ಯಮೇಳ, ಕುಂಕುಮ ಅರಿಸಿನಗಳ ತೂರಾಟ, ಜನತೆಯ ಜಾನಪದ ಮೇಳಗಳು ಒಂದು ಕಡೆ. ಮುಗ್ಧ ಹೆಣ್ಣು ಮಕ್ಕಳನ್ನು ಎಲ್ಲಮ್ಮನಿಗೆ ಒಪ್ಪಿಸಿ, ಬಹುಶಃ ಅಲ್ಲಿಂದಲೇ ನೇರವಾಗಿ ಬೊಂಬಾಯಿಯ ಕೆಂಪುದೀಪದ ಬೀದಿಗೆ ಸಾಗಿಸಿ, ಸೂಳೆಯರನ್ನಾಗಿ ಅವರನ್ನು ಮಾರಿ, ಅವರ ಇಡೀ ಬದುಕು ಅಸಹನೀಯವಾಗುವಂತೆ ಮಾಡುವ ಕ್ರಿಯೆ ಇನ್ನೊಂದು ಕಡೆ. ಅಂದು ನಾವು ಕಂಡ ನೂರಾರು ಹೆಂಗಸರಿದ್ದ ಒಂದು ತಂಡ: ಅದರಲ್ಲಿ ಒಬ್ಬಳ ಹೆಸರು ಶಾಂತಾಬಾಯಿ-ಮುಂಭಾಗದಲ್ಲಿ ಕುಣಿಯುತ್ತಿದ್ದ ಹದಿ ಹರೆಯದ ಅಪ್ಸರೆ. ನಾವು ಕುತೂಹಲದಿಂದ ವಿಚಾರಿಸಿದಾಗ ಆ ಹೆಂಗಸರು “ನಾವು ಸೂಳೇರು ಸ್ವಾಮಿಗಳ್ರಾ” ಎಂದು ಹೇಳಿ, “ಬಿ. ಎ.” ಓದಿದ ಶಾಂತಾಬಾಯಿಯನ್ನು ತೋರಿಸಿದರು. ಶಾಂತಾಬಾಯಿ ಎಸ್‌.ಎಸ್‌.ಎಲ್‌.ಸಿ. ವರೆಗೆ ಓದಿದ ವಿದ್ಯಾವಂತೆ, ಆಗಲೇ ವೇಶ್ಯಾವೃತ್ತಿಗೆ ಬಲವಂತದಿಂದ ಬಂದವಳು. ಅವಳು ಆ ದಿನ ಎಲ್ಲವ್ವನಿಗೆ ಒಪ್ಪಿಸಲು ಬಂದಿದ್ದ ಇನ್ನೊಬ್ಬ ಅಪ್ಸರೆಯ ಜೊತೆ ಬಂದಿದ್ದಳು. ಆ ಇನ್ನೊಬ್ಬ ಹೆಣ್ಣುಮಗಳೂ ಸಧ್ಯದಲ್ಲೇ ಬೊಂಬಾಯಿಯಂತಹ ಶಹರಿನ ಸರಕಾಗಿ  ದಿನ ಪರಿವರ್ತನೆ ಹೊಂದಲಿದ್ದಳು, ಆ ದಿನ ನಮಗಾದ ನೋವು ಅಸದಳ. ಆದರೆ ನಾವು ನಿಸ್ಸಹಾಯಕರಾಗಿದ್ದೆವು.

ದೇವದಾಸಿ ಸಂಪ್ರದಾಯದ ಹಿನ್ನೆಲೆ ನನಗೆ ಸಾಕಷ್ಟು ಗೊತ್ತಿದೆ. ಹಿಂದೊಮ್ಮೆ ಅವರು ನಮ್ಮ ಸಂಗೀತ, ನರ್ತನಗಳಿಗೆ ಸಲ್ಲಿಸಿದ ಅಮೋಘ ಸೇವೆಯೂ ನನಗೆ ತಿಳಿದಿದೆ. ಅವರಿಗೆ ಅದೇ ಕಾಲಕ್ಕೆ ಇದ್ದ ಉನ್ನತ ಸಾಮಾಜಿಕ ಸ್ಥಾನಮಾನಗಳ ಅರಿವೂ ಇದೆ. ದೇವರು, ದೈವಭಕ್ತಿ ಇವು ಸಮಾಜದ ಗೌರವಾರ್ಥ ಮೌಲ್ಯಗಳಾಗಿದ್ದ ಕಾಲದ ಅಗತ್ಯವಾಗಿ ಮೂಡಿ ಬಂದಿರಬಹುದಾದ ಆ ಹಿಂದಿನ ದೇವದಾಸಿ ಪದ್ಧತಿಯನ್ನು ನಾನು ಇಂದು ಸಮರ್ಥಿಸಲಾರೆನಾದರೂ, ಖಂಡಿತವಾಗಿಯೂ ಖಂಡಿಸಲಾರೆ. ಅದೇ ಉಸಿರಿನಲ್ಲಿ, ಸಾಮಾಜಿಕ ಪರಿಸ್ಥಿತಿ ತೀರ ಬದಲಾಗಿರುವ ಇಂದಿನ ಕಾಲದಲ್ಲಿ ಪೇಟೆಯ ವೇಶ್ಯೆಯೂ ದೇವದಾಸಿಯೂ ಒಂದೇ ಆಗಿರುವಂತಹ ಸಂದರ್ಭದಲ್ಲಿ, ದೇವದಾಸಿ ಪದ್ಧತಿಯನ್ನು ಅಥವಾ ಎಲ್ಲವ್ವನ ಗುಡ್ಡದ ಬಸವಿ ಪದ್ಧತಿಯನ್ನೂ ತೀವ್ರವಾಗಿ ವಿರೋಧಿಸಬೇಕಾಗಿದೆ. ಎಲ್ಲವ್ವ ಹಲವರ ಮನೆದೇವತೆಯಾಗಿ, ರಕ್ಷಕಳಾಗಿ, ಅಭಯ ಪ್ರದಾಯಕಳಾಗಿ ಇರಲಿ. ನನಗೆ ದೇವರಲ್ಲಿ ನಂಬಿಕೆ ಇದೆಯೋ ಇಲ್ಲವೋ ಆ ಮಾತು ಬೇರೆ; ಒಟ್ಟು ಸಾಮಾಜಿಕವಾಗಿ “ದೈವ” ಎಂಬ ನಂಬಿಕೆಯಿಂದ ಒಳಿತುಗಳು ಇವೆಯೆಂಬುದು ನನ್ನ ದೃಢನಂಬಿಕೆಯಾಗಿದೆ. ಸವದತ್ತಿ ಎಲ್ಲಮ್ಮನ ಹೆಸರಿನಲ್ಲಿ ಹೆಣ್ಣುಗಳನ್ನು ಜೋಗತಿಯರನ್ನಾಗಿ ಬಿಟ್ಟು ಅವರನ್ನು ಪುರುಷರ ಕಾಮತೃಪ್ತಿಯ ಸಾಧನಗಳನ್ನಾಗಿ ಮಾಡುತ್ತಿರುವ ದುಷ್ಟ ಪ್ರವೃತ್ತಿಯನ್ನು ಸವದತ್ತಿ ನಗರದ ಪ್ರಜ್ಞಾವಂತ ಜನ ಪ್ರಚಾರದ ಮೂಲಕ ಮತ್ತು ಅದರ ಬಗ್ಗೆ ನಿಷೇಧ ಭಾವನೆಯನ್ನು ಹರಡುವುದರ ಮೂಲಕ ನಿಲ್ಲಿಸಬೇಕಾಗಿದೆ. ಈಚೆಗೆ ಲಿಂಗವಂತ ಗುರುಗಳ ಸಮಕ್ಷಮದಲ್ಲಿ ದೇವದಾಸಿಯರ ಮದುವೆ ವಿಧ್ಯುಕ್ತವಾಗಿ ನೆರವೇರಿದ ಸಂಗತಿಯನ್ನು ಪತ್ರಿಕೆಗಳಲ್ಲಿ ಓದಿ ಮಾತ್ರವಲ್ಲ, ದೂರದರ್ಶನದಲ್ಲಿಯೂ ಕಂಡು ಅನುಭವಿಸಿದ ಹಿಗ್ಗು ಹೇಳತೀರದು. ಈ ಸುಧಾರಣೆ ನಿಧಾನಕ್ಕೆ ನಡೆಯಬೇಕಾಗಿದೆ. ಸವದತ್ತಿ ದೇವಾಲಯದ ಹಿಡಿತ ಲಿಂಗವಂತರ ಕೈಯಲ್ಲಿರುವುದರಿಂದ, ಇಂದಿನ ಎಚ್ಚತ್ತ ಜನಾಂಗವಾದ ಲಿಂಗವಂತ ಸಮಾಜವೂ ಮಠಾಧಿಪತಿಗಳೂ ಇತ್ತ ತೀವ್ರಗಮನವನ್ನು ಹರಿಸಬೇಕಾಗಿದೆ.

– ೨ –

ಎಲ್ಲಮ್ಮನ ಇತಿಹಾಸದ ಬಗ್ಗೆ ನಾನು ಅಭ್ಯಾಸಮಾಡಿಲ್ಲ. ಆದರೆ ಆಕೆಯ ಹೆಸರಿನ ನಿಷ್ಪತ್ತಿ ಕುರಿತು ಎರಡು ಮಾತು ಹೇಳಬೇಕಾಗಿದೆ. “ಎಲ್ಲರ ಅಮ್ಮನೇ” ಎಲ್ಲಮ್ಮ ಎಂಬುದು ಬಹು ಸುಲಭ ಮತ್ತು ಆಕರ್ಷಕ ವಿವರಣೆ. ಆದರೆ, ನೆರೆಪ್ರಾಂತಗಳಾದ ತಮಿಳುನಾಡು, ಆಂಧ್ರಗಳಲ್ಲಿ “ಎಲ್ಲೈ ಪಿಡಾರಿ” “ಎಲ್ಲರಮ್ಮ” ಅಥವಾ “ಎಲ್ಲಮ್ಮ” ಎಂಬ ಗಡಿದೇವತೆಗಳಿರುವುದನ್ನು ಗಮನಿಸಿದರೆ. ಎಲ್ಲೆ ಅಥವಾ ಗಡಿಯ ದೇವತೆಯೇ ಎಲ್ಲಮ್ಮ ಇರಬಹುದು. ಸವದತ್ತಿಯ ಎಲ್ಲಮ್ಮ ಯಾವ ಗಡಿಯ ದೇವತೆಯೆಂಬುದನ್ನು ಇತಿಹಾಸ ಮರೆತಿರಬಹುದು. ಗಡಿಯ ರಕ್ಷಣೆಗಾಗಿ ಕಲ್ಲುಗಳನ್ನು ಅಥವಾ ವಿಗ್ರಹಗಳನ್ನು ಇಟ್ಟು ಪೂಜಿಸುವ ಪದ್ಧತಿ ದಕ್ಷಿಣ ಭಾರತದಲ್ಲಿ ವ್ಯಾಪಿಕವಾಗಿದೆ.

– ೩ –

ನಾನು ಈಗ ಮುಖ್ಯ ವಿಷಯವೊಂದಕ್ಕೆ ಬರುತ್ತೇನ.  ಯಾವುದೇ ಊರಿಗೆ ಹೋದರೂ ಅಲ್ಲಿ ಶಿವ, ವೀರಭದ್ರ, ರಾಮ, ವಿಷ್ಣು, ಹನುಮಂತ ಈ ಶಿಷ್ಟ ದೇವಾಲಯಗಳಲ್ಲದೆ ಬಹು ಸಂಖ್ಯೆಯ ದೇವತೆಗಳ ಗುಡಿಗಳೂ, ಕಲ್ಲುಗೂಡುಗಳೂ, ಬರಿಯ ಬಣ್ಣ ಹಚ್ಚಿದ ಕಲ್ಲುಗಳೂ ಇರುತ್ತವೆ. ಈ ಶಿಷ್ಟೇತ್ತರ ದೇವತೆಗಳನ್ನು ಗ್ರಾಮ್ಯದೇವತೆಗಳೆಂದು ಹೆಸರಿಸೋಣ. “ಗ್ರಾಮದೇವತೆ” ಎಂಬುದು ಗ್ರಾಮ್ಯದೇವತೆಗಳಲ್ಲಿ ಒಂದಾದರೂ ಅದು ವಿಶಿಷ್ಟ ದೈವವೆಂದು ನಾನು ಪ್ರತಿಪಾದಿಸಲಿರುವುದರಿಂದ “ಗ್ರಾಮ್ಯದೇವತೆ” ಮತ್ತು “ಗ್ರಾಮದೇವತೆ” ಎಂಬ ಹೆಸರುಗಳನ್ನು ಪ್ರತ್ಯೇಕವಾಗಿ ಬಳಸಲು ಬಯಸುತ್ತೇನೆ. ಮಾಹೇಶ್ವರಮ್ಮ, ಮುನೇಶ್ವರ, ಮಾರೆವ್ವ ಕರಿಯೆವ್ವ, ದುರಗವ್ವ, ಬರಿಮಸ್ಣಿ, ಮಾಸ್ತ್ಯಮ್ಮ, ಆಂಕುಲಮ್ಮ, ಪಟಾಲಮ್ಮ, ಅಣ್ಣಮ್ಮ, ಎಲ್ಲಮ್ಮ, ಜೋಕುಮಾರ, ಹೊನ್ನಾಲದಮ್ಮ, ಗಿಡ್ಡಮ್ಮ, ಬಳಲಿಕವ್ವ, ಬೀರ, ಚಿಕ್ಕಮ್ಮ, ಬಾಣಂತಮ್ಮ, ಇವಲ್ಲದೆ ಆಯಾ ಊರಿನ ಹೆಸರನ್ನೇ ಹೊತ್ತ ಮದ್ದೂರಮ್ಮ, ಹಾಸನಾಂಬಾ , ಕಿಕ್ಕೇರಿ ಅಮ್ಮ. ಅಂತರಗಟ್ಟೆ ಅಮ್ಮ. ಬಾಚಳ್ಳಿ ಅಮ್ಮ ಇದೇ ಮೊದಲಾದ ದೈವಗಳು ಶಿಷ್ಟೇತರ ದೈವಗಳು ಅಥವಾ ಗ್ರಾಮ್ಯದೇವತೆಗಳು. ಇವುಗಳಿಗೂ ಶಿಷ್ಟದೇವತೆಗಳಿಗೂ ಇರುವ ಸ್ಥೂಲ ವ್ಯತ್ಯಾಸಗಳನ್ನು ಈ ರೀತಿ ಒಂದು ಪಟ್ಟಿಯಲ್ಲಿ ತೋರಿಸಲು ಸಾಧ್ಯ. ಶಿಷ್ಟ ದೇವಾಲಯಗಳನ್ನು ಮಾಧ್ಯಮ ದೇವಾಲಯ, ಮೇಲು ದೇವಾಲಯಗಳೆಂದು ಸ್ಥೂಲವಾಗಿ ಒಳವಿಂಗಡಣೆ ಮಾಡಿಕೊಂಡರೆ, ಗ್ರಾಮ್ಯ ಅಥವಾ ಕೆಳ ದೇವತೆಗಳ ದೇವಾಲಯಗಳನ್ನು ಈ ರೀತಿ ತೋರಿಸಲು ಸಾಧ್ಯ,

(ದೇ=

  ಕೆಳ ದೇವಾಲಯ ಮಧ್ಯಮ ದೇವಾಲಯ ಮೇಲು ದೇವಾಲಯ
ಕಟ್ಟಡ ಇಲ್ಲ/ತೀರ ಸಾಮಾನ್ಯ ಸಾಮಾನ್ಯ ಉತ್ತಮ/ವಾಸ್ತು ಶಿಲ್ಪಗಳಿಂದ ಗಮನಾರ್ಹ
ವಿಗ್ರಹ ಇಲ್ಲ/ವಿರಳ ಉಂಟು ಉಂಟು
ಭಕ್ತರು ತೀರ ಕೆಳವರ್ಗ ಮಧ್ಯಮವರ್ಗ ಮತ್ತು ಕೆಳವರ್ಗ ಎಲ್ಲ ವರ್ಗದ ಜನ
ವ್ಯಾಪ್ತಿ ಹಳ್ಳಿಯ ಒಂದು ವರ್ಗದ ಜನ/ಕೆಲವು ಸಂಸಾರಗಳು ಪರಿಮಿತ ಪ್ರದೇಶ ವಿಸ್ತಾರವಾದ ಪ್ರದೇಶ
ಪೂಜೆ ಇಲ್ಲ/ವಿರಳ ನಿತ್ಯ ಉಂಟು, ಆದರೆ ಸರಳ ಉಂಟು ಮತ್ತು ಶಾಸ್ತ್ರೋಕ್ತ
ಅರ್ಚಕ ಇಲ್ಲ/ತೀರ ಅವಿದ್ಯಾವಂತ ಅನಕ್ಷರಸ್ಥ, ಆದರೆ ಲೋಕ ಬಲ್ಲವನು ವಿದ್ಯಾವಂತ ಸಾಮಾನ್ಯವಾಗಿ ಬ್ರಾಹ್ಮಣ
ಅರ್ಪಣೆ ಮಾಂಸಾಹಾರ ಶಾಕಾಹಾರ ಶಾಕಾಹಾರ
ದೈವ ಸ್ಥಳೀಯ, ಕೆಲವೊಮ್ಮೆ ಐತಿಹಾಸಿಕ ಪೌರಾಣಿಕ ಮತ್ತು ಸ್ಥಳೀಯ ಮಿಶ್ರಿತ ಪೌರಾಣಿಕ
ಆಸ್ತಿ ಇಲ್ಲ ತಕ್ಕಮಟ್ಟಿಗೆ ಸಮೃದ್ಧ
ಆಡಳಿತ ಇಲ್ಲ ಇಲ್ಲ/ಸ್ವಲ್ಪ ಉಂಟು ಸುವ್ಯವಸ್ಥಿತ
ಲಿಖಿತ, ಇತಿಹಾಸ ಇಲ್ಲ ಇಲ್ಲ/ಸ್ವಲ್ಪ ಉಂಟು ತಕ್ಕಮಟ್ಟಿಗೆ/ ಸ್ಪಷ್ಟವಾಗಿ
ಜಾನಪದ ವಾಙ್ಮಯ (ಕತೆ ಹಾಡು ಇ.) ಸಮೃದ್ಧ ತಕ್ಕಮಟ್ಟಿಗೆ ಕನಿಷ್ಠ ಪ್ರಮಾಣ
ಭಾರತೀಯ ಪರಂಪರೆ ಇಲ್ಲ ಸ್ವಲ್ಪಮಟ್ಟಿಗೆ ಪೂರ್ತಿ

ಈ ಪಟ್ಟಿ ಅಪೂರ್ಣ ಎಂದು ಹೇಳಬೇಕಾಗಿಲ್ಲ, ಮತ್ತು ಮೇಲಿನ ಮೂರೂ ವರ್ಗಗಳ ಮಧ್ಯೆ ಎಲ್ಲ ಬಾರಿಯೂ ಗೆರೆ ಕೊರೆದು ತೋರಿಸುವಷ್ಟು ವ್ಯತ್ಯಾಸಗಳು ಸ್ಪಷ್ಟವಾಗಿರುವುದಿಲ್ಲ. ಹಾಗೆಯೇ ಮೂರು ವರ್ಗಗಳ ಮಧ್ಯೆ ನಿಲ್ಲಬಹುದಾದ ದೇವಾಲಯಗಳೂ ಇವೆಯೆಂಬುದಂತೂ ಸ್ಪಷ್ಟವಾಗಿಯೇ ಇದೆ. (ಹೆಚ್ಚಿನ ವಿವರಗಳಿಗೆ, ನೋಡಿ-ಎಂ. ಚಿದಾನಂದಮೂರ್ತಿ: ‘ಉತ್ತರ ಕನ್ನಡ ಜಿಲ್ಲೆಯ ಒಂದು ದೇವಾಲಯ’. ಪಗರಣ ಮತ್ತು ಇತರ ಸಂಪ್ರಬಂಧಗಳು, ಮೈಸೂರು. (೬೮೪).

ಮೂಲತಃ ಕೆಳದೇವಾಲಯಗಳನ್ನು ಹೊಂದಿದ್ದ ಕೆಲವು ಗ್ರಾಮ್ಯದೇವತೆಗಳು ಯಾವುದೋ ಐತಿಹಾಸಿಕ ಕಾರಣಗಳಿಂದಾಗಿ ಬೆಳೆದು ನಿಂತು. ಭಾರತೀಯವಾದ ಮೇಲು ಸಂಪ್ರದಾಯದ ಕತೆಗಳ ಜೊತೆ ಹೊಂದಾಣಿಕೆ ಪಡೆದು, ಮೇಲು ಜಾತಿಗಳಾದ ಲಿಂಗಾಯತ. ವೈಶ್ಯರನ್ನಲ್ಲದೆ, ಬ್ರಾಹ್ಮಣರನ್ನೂ ಅನುಯಾಯಿಗಳನ್ನಾಗಿ ಪಡೆದು ತೀರ ವಿಸ್ತಾರವಾದ ಪ್ರದೇಶದಲ್ಲಿ ಪ್ರಭಾವಶಾಲಿ ಶಕ್ತಿಗಳಾಗಿ ಬೆಳೆಯಬಹುದು. ಸವದತ್ತಿಯ ಎಲ್ಲಮ್ಮ. ಬಾದಾಮಿಯ ಬನಶಂಕರಿ, ಕೊಲ್ಲೂರಿನ ಮೂಕಾಂಬಿಕೆ, ಶಿರಸಿಯ ಮಾರಿಕಾಂಬಾ ಇದಕ್ಕೆ ಒಳ್ಳೆಯ ನಿದರ್ಶನಗಳು.

ಹಳ್ಳಿಯ ಅಥವಾ ಗ್ರಾಮದ ಎಲ್ಲ ಕೆಳವರ್ಗದ, ಆ-ಪೌರಾಣಿಕ ದೇವತೆಗಳೆಲ್ಲವೂ ಗ್ರಾಮ್ಯದೇವತೆಗಳು. ಗ್ರಾಮ್ಯದೇವತೆಗಳ ಮೌಲಿಕಾಂಶಗಳನ್ನು (ಅಥವಾ ವಿಶಿಷ್ಟ ಲಕ್ಷಣಗಳನ್ನು “distinguishing features” ಮೇಲೆ ಕೆಳವರ್ಗದ ದೇವಾಲಯಗಳ ಕೆಳಗೆ ಪಟ್ಟಿ ಮಾಡಿದೆ. ‘ಗ್ರಾಮದೇವತೆ’ಯೂ ಗ್ರಾಮ್ಯದೇವತೆಯೇ ಆದರೂ, ಅದು ತನ್ನದೇ ವೈಶಿಷ್ಟ್ಯವನ್ನು ಹೊಂದಿರುವ ಊರಿನ ದೇವತೆ; ಊರಿನ ಎಲ್ಲ ಕೆಳವರ್ಗದ ದೈವಗಳೂ ‘ಗ್ರಾಮದೇವತೆ’ಗಳಲ್ಲ, ಅವು ಬರೀ ಗ್ರಾಮ್ಯದೇವತೆಗಳು. ಬ್ರಾಹ್ಮಣರೂ ಸೇರಿದಂತೆ ಊರಿನ ಎಲ್ಲ ವರ್ಗದ ಜನರೂ ಅಥವಾ ಇಡೀ ಊರಿಗೆ ಊರೇ ಯಾವ ಗ್ರಾಮ್ಯ ದೇವತೆಯ ಉತ್ಸವ ಅಥವಾ ಜಾತ್ರೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗುವುದೋ ಅದು ಆ ಊರಿನ “ಗ್ರಾಮದೇವತೆ”: ಎಂದರೆ ಯಾವುದೇ ಊರಿಗೆ ಒಂದೇ ಒಂದು ‘ಗ್ರಾಮದೇವತೆ’: ಆದರೆ ಊರಲ್ಲಿ ಹಲವು ಗ್ರಾಮ್ಯದೇವತೆಗಳಿರಬಹುದು. ಗ್ರಾಮದೇವತೆ ಆ ಗ್ರಾಮದ ಅಧಿದೈವ. ನಿಜವಾದ ದೈವ. ರಕ್ಷಣಾ ದೇವತೆ. ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಶ್ರೀರಂಗಪಟ್ಟಣದ ತಾಲೂಕಿನ ಅರಕೆರೆಯ ಬಿಸಿಲ ಮಾರಮ್ಮ ಆ ಊರಿನ ಅಧಿದೇವತೆ. ಅದರ ಅರ್ಚಕ (‘ತಮ್ಮಡಿ’) ಒಬ್ಬ ಒಕ್ಕಲಿಗ. ಸುತ್ತಲೂ ಒಂದು ಪ್ರಾಕಾರ ಬಿಟ್ಟರೆ ಮೇಲೆ ಛಾವಣಿಯೂ ಇಲ್ಲದ ಜಾಗದಲ್ಲಿ ಇರುವ ಒಂದು ಮರದ ಕಂಬವೇ ಬಿಸಿಲು ಮಾರಮ್ಮ, (ಉತ್ಸವ ಮೂರ್ತಿ ಒಂದು ಲೋಹದ ವಿಗ್ರಹ) ಅದರ ಹೆಸರಲ್ಲಿ ನಡೆಯುವ “ಶೂಲದ ಹಬ್ಬ” ಎಂದು ಕರೆಯುವ ಮೂರು ವಾರಗಳ ಹಬ್ಬದಲ್ಲಿ ಕುರಿ, ಕೋಳಿಗಳ ಬಲಿ, ಕೆಂಡ ಹಾಯುವುದು ಇತ್ಯಾದಿ ಎಲ್ಲ ಉಂಟು. ಆ ದೇವತೆಯ ಗುಡಿಗೆ ಆ ಹಬ್ಬದ ಬೇರೆ ಬೇರೆ ದಿನಗಳಲ್ಲಿ ಬ್ರಾಹ್ಮಣರು, ಒಕ್ಕಲಿಗರು, ಲಿಂಗಾಯತರು, ಗಾಣಿಗರು, ಬೆಸ್ತರು, ಹರಿಜನರು ಇತ್ಯಾದಿ ಎಲ್ಲ ಜಾತಿಯ ಜನರೂ ಎಡೆ ತರುತ್ತಾರೆ. ಆ ಊರಲ್ಲಿ ಬೇಟಯ್ಯ, ಮಾಸ್ತ್ಯಮ್ಮ, ಅಜ್ಜಿ ಗುಜ್ಜಮ್ಮ, ಕೆಮ್ಲಮ್ಮ, ಗೂರ್ಲಮ್ಮ, ಮಹಾದೇವಮ್ಮ,  ಪಟಾಳಮ್ಮ ಮೊದಲಾದ ಗ್ರಾಮ್ಯದೇವತೆಗಳೂ ಚೆನ್ನಕೇಶವ ಮೊದಲಾದ ಶಿಷ್ಟ ದೇವತೆಗಳಿದ್ದರೂ ದೇವತೆಯೆಂದರೆ ಬಿಸಿಲು ಮಾರಮ್ಮನೇ. ಅವಳ ಗುಡಿ ಊರ ಪ್ರವೇಶ ದ್ವಾರ ಇದೆ, ಮತ್ತು ಅವಳ ಜಾತ್ರೆಯಲ್ಲಿ ಮುಸ್ಲಮಾನರಾದಿಯಾಗಿ ಎಲ್ಲರಿಗೂ ಅವರದೆ ಕರ್ತವ್ಯಗಳೂ ಜವಾಬ್ದಾರಿಗಳೂ ಹಕ್ಕುಗಳೂ ಉಂಟು. ಮಾಸ್ತ್ಯಮ್ಮ, ಇತ್ಯಾದಿಗಳು ಗ್ರಾಮ್ಯದೇವತೆಗಳಾದರೂ, ಗ್ರಾಮ್ಯದೇವತೆಯೂ ಆಗಿ ಮಾರಮ್ಮ ಮಾತ್ರ ಅರಕೆರೆಯ “ಗ್ರಾಮದೇವತೆ”. (ಹೆಚ್ಚಿನ ವಿವರ ನೋಡಿ- ಎಂ. ಚಿದಾನಂದಮೂರ್ತಿ: ‘ಶೂಲದ ಹಬ್ಬ’, ಗ್ರಾಮೀಣ,  ೧೯೭೭). ಇಂದಿಗೂ ಬೆಂಗಳೂರಿನ “ಗ್ರಾಮದೇವತೆ” ಕೆಂಪೇಗೌಡ ಸಮೀಪದ ಅಣ್ಣಮ್ಮ. ಆ ದೇವತೆಯ ಉತ್ಸವ ಮೂರ್ತಿಯನ್ನು ಬೆಂಗಳೂರಿನ ಎಲ್ಲ ಭಾಗದ ಜನರೂ ಡಿಪಾಸಿಟ್‌ ಕಟ್ಟಿ ತಮ್ಮ ಭಾಗಕ್ಕೆ ಕೊಂಡೊಯ್ದು, ಮೆರವಣಿಗೆ ಮಾಡಿಸಿ ಹಿಂದಿರುಗಿಸುತ್ತಾರೆ. ಬೆಂಗಳೂರು ಹಳ್ಳಿಯಾಗಿದ್ದಾಗ ಆ ಊರಿನ ‘ಗ್ರಾಮದೇವತೆ’ ಅವಳು; ಇಂದಿಗೂ ಬೆಂಗಳೂರು ಮಹಾನಗರದ ಗ್ರಾಮದೇವತೆ’.

ಅನುಕ್ರಮಣಿಕೆಯಲ್ಲಿ ಗ್ರಾಮದೇವತೆಯು ಒಂದು ಊರಿನ ಅತ್ಯುನ್ನತ್ತ ದೈವ ಆದರೆ ಆ ಊರಿನ ಬಹುಮುಖ್ಯ ದೈವ . ಅರಕೆರೆ ಗ್ರಾಮದಲ್ಲಿ ಚೆನ್ನಕೇಶವರು ಬಿಸಿಲು ಮಾರಮ್ಮ ದೇವರಿಗಿಂತ ದೊಡ್ಡವನಾದರೂ, ಊರಿನ ದೃಷ್ಟಿ ಬಿಸಿಲು ಮಾರಮ್ಮ ಉಳಿದ ದೈವಗಳಿಗಿಂತ ಬಹುಮುಖ್ಯ. ಹಿರೇಕೋಗ ಊರಿನ (ಶಿವಮೊಗ್ಗ ಜಿಲ್ಲೆ) ಈಶ್ವರ ಮತ್ತು ವೀರಭದ್ರ ದೇವರುಗಳು ಅದೇ ಕರಿಯವ್ವನಿಗಿಂತ ಉನ್ನತ ದೈವಗಳಾದೆರೂ, ಅವುಗಳ ಪೂಜೆ ಅಥವಾ ದೀಪೋತ್ಸವಗಳು ಕರಿಯವ್ವನ ಜಾತ್ರೆಗಿಂತ ಹೆಚ್ಚು ವೈಭವಪೂರ್ಣವಾದರೂ ಕರಿಯವ್ವ ಊರಿನ ದೈವ, ಗ್ರಾಮದೇವತೆ ಆ ಊರಿನ ಬಹುಸಂಖ್ಯಾಕರಾದ ಲಿಂಗಾಯತರು ವರ್ಗದವರ ದೇವತೆ ಕರಿಯವ್ವನಿಗೆ ಬಲಿಗಾಗಿ ಕೋಣವನ್ನು ಕೊಡಿಸುತ್ತಾರೆ. ಮತ್ತು ಬಲಿಯಾಗಿ ಕೊಟ್ಟ ಕೋಣನ ಮಾಂಸದಲ್ಲಿ ಊರಿನ ಲಿಂಗಾಯತ ಪಟೇಲನಿಗೂ ಭಾಗದ ಹಕ್ಕು ಇರುತ್ತದೆ ಎಂದರೆ, ಕರಿಯವ್ವನಿಗೆ ಕೊಡುವ ಬಲಿಯಲ್ಲಿ ಇವರೂ ಭಾಗಿಗಳು: ಇದಕ್ಕೆ ಕಾರಣವೆಂದರೆ ಕರಿಯವ್ವ ಆ ಊರಿನ ‘ಗ್ರಾಮ ದೇವತೆ’.

ಒಂದು ಊರು ಪ್ರಾರಂಭವಾದಾಗ ಇದ್ದ ಅಥವಾ ಸ್ಥಾಪಿತವಾದ ಆ ಊರಿನ ದೇವತೆ ಅಥವಾ ಮೂಲದೇವತೆಯೇ ಆ ಊರಿನ “ಗ್ರಾಮದೇವತೆ”. ಊರುಗಳಲ್ಲೂ ಗ್ರಾಮ್ಯದೇವತೆಗಳುಂಟು; ಆದರೆ ಎಲ್ಲ ಊರುಗಳಲ್ಲೂ ಗ್ರಾಮ ದೇವತೆಗಳಿರುವುದಿಲ್ಲ. ‘ಗ್ರಾಮದೇವತೆ’ಗಳು ಇಲ್ಲದಿರುವ ಊರುಗಳು ಬಹುಶಃ ಇತ್ತೀಚಿನ ಹಳ್ಳಿಗಳು ಎಂದು ಊಹಿಸಲು ಅವಕಾಶವಿದೆ. (ಈ ಊಹೆ ವ್ಯಾಪಕ ಕಾರ್ಯದಿಂಧ ಸಮರ್ಥಿತವಾಗಬೇಕಾಗಿದೆ). ಒಂದು ಊರಿನ ಮೂಲದೇವತೆ ಅಥವಾ ಗ್ರಾಮದೇವತೆ ಸ್ಥಾಪಿತವಾದ ಮೇಲೆ, ಆ ಊರಿಗೆ ಬೇರೆ ಬೇರೆ ಉನ್ನತ ಸಾಮಾಜಿಕ ಅಥವಾ ಜಾತೀಯ ಜನಗಳು ಬಂದು ಅಲ್ಲಿ ನೆಲಸಿ ತಮ್ಮ ತಮ್ಮ ದೇವಾಲಯಗಳನ್ನು (ರಾಮ, ಶಿವ, ವೀರಭದ್ರ, ಇ.) ಸ್ಥಾಪಿಸಿಕೊಂಡರೂ, ಗ್ರಾಮದೇವತೆಗೆ ಇಡೀ ಊರು ಗೌರವ ಸಲ್ಲಿಸುವ ಪದ್ಧತಿ ಮಾತ್ರ ಮುಂದುವರಿದುಕೊಂಡು ಬಂದಿತು. ಗ್ರಾಮ್ಯದೇವತೆ ಮತ್ತು ಗ್ರಾಮದೇವತೆಗಳ ಮೇಲಿನ ಒಂದು ಮೂಲಭೂತ ವ್ಯತ್ಯಾಸವನ್ನು ಗುರುತಿಸುವುದು ಜಾನಪದ ಶಾಸ್ತ್ರದಲ್ಲಿ ಬಹು ಅಗತ್ಯವಾದ ಮುಖ್ಯ ಸಂಗತಿಯಾಗಿದೆ ‘ಗ್ರಾಮದೇವತೆ’ ಎಂಬ ಪದವನ್ನು ಮೇಲಿನ ಮಿಶ್ರ ಅಥವಾ ಪಾರಿಭಾಷಿಕ ಅರ್ಥದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಈಗಲೂ ವ್ಯಾಪಕವಾಗಿ ಬಳಸುತ್ತಿದ್ದಾರೆ.

ಗ್ರಾಮ್ಯದೇವತೆಗಳ ಇನ್ನೂ ಕೆಲವು ಸಮಾನ ಲಕ್ಷಣಗಳು ಹೀಗಿವೆ:

೧) ಗ್ರಾಮ್ಯದೇವತೆಗಳು ಬಹುತೇಕ ಸ್ತ್ರೀದೇವತೆಗಳು: ಪುರುಷ ದೇವತೆಗಳ ಸಂಖ್ಯೆಯೂ ಮಹತ್ವವೂ ಸ್ತ್ರೀದೇವತೆಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆ. ಪುರುಷದೇವತೆಗಳಲ್ಲಿ ಯಾವುದೂ ‘ಗ್ರಾಮದೇವತೆ’ ಅಲ್ಲ.

೨) ಗ್ರಾಮ್ಯದೇವತೆಗಳ ಹೆಸರುಗಳಲ್ಲಿ ಬಹುತೇಕ ದ್ರಾವಿಡ. ದುರ್ಗವ್ವ, ಕಾಳವ್ವ ಇಂತಹ ಕೆಲವು ಹೆಸರುಗಳಲ್ಲಿ ಸಂಸ್ಕೃತ ಅಂಕಿತನಾಮಗಳು ಹುದುಗಿದ್ದರೂ ಅವುಗಳಿಗೂ ಆ ದೇವತೆಗಳಿಗೂ ಯಾವುದೇ ಸಂಬಂಧವೂ ಇಲ್ಲ. ಎಲ್ಲ ಗ್ರಾಮ್ಯ ಸ್ತ್ರೀ ದೇವತೆಗಳನ್ನು ಶಕ್ತಿ ಅಥವಾ ದುರ್ಗೆಯ ಅವತಾರವೆಂದು ವಿದ್ಯಾವಂತರು ಹೇಳುತ್ತಾರೆ. ಹಳ್ಳಿಗರಿಗೆ ಅವು ಶಿವನ ಹೆಂಡತಿಯಾದ ಪಾರ್ವತಿಯ ಅವತಾರಗಳು. ನಮ್ಮ ಜಾನಪದ ಕತೆಗಳಲ್ಲಿ ಶಿವ, ಪಾರ್ವತಿಯರು ಮಾತ್ರ ಕಾಣಿಸಿಕೊಳ್ಳುವುದು ಗ್ರಾಮ್ಯದೇವತೆಗಳೆಲ್ಲ ಶಕ್ತ