‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವ ನಾಣ್ಣುಡಿಯಂತೆ ಕುರಿಗಳು ಇತರ ಜಾನುವಾರುಗಳಿಗೆ ಹೋಲಿಸಿದಲ್ಲಿ ದೈಹಿಕ ಗಾತ್ರದಲ್ಲಿ ಚಿಕ್ಕದಾದರೂ, ಗ್ರಾಮೀಣ ಆರ್ಥಿಕತೆಯಲ್ಲಿ ಅವುಗಳ ಪಾತ್ರ ಬಹಳ ದೊಡ್ಡದು. ಆದುದರಿಂದಲೇ ಅವುಗಳನ್ನು ಬಡವರ ಹಾಗೂ ಸಣ್ಣ ಮತ್ತು ಅತಿಸಣ್ಣ ರೈತರ ‘ಕಿರುಕಾಮಧೇನು’ ಹಾಗೂ ‘ಜೀವಂತ ಚಲಿಸುವ ನಿಧಿ’ ಎಂದು ಕರೆಯಲಾಗಿದೆ. ಅದರ ಪ್ರತಿಯೊಂದು ಭಾಗವೂ-ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇವೆಲ್ಲವೂ ಉಪಯುಕ್ತವಾದವು. ಅವುಗಳ ನಿರ್ವಹಣೆ ಸುಲಭ ಆದರೆ ಆರ್ಥಿಕ ಲಾಭ ಹೆಚ್ಚಿನದು. ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲ ಈ ಜೇವಿಗಳು ರೈತನಿಗೆ ಆಪತ್ಕಾಲದಲ್ಲಿ ನೆರವಾಗಬಲ್ಲವು. ಇಂದಿನ ರೈತ ಆಧುನಿಕ ತಂತ್ರಜ್ಞಾನ, ಮೇವು ವಿಜ್ಞಾನ ಹಾಗೂ ತಳಿಯ ಅಭಿವೃದ್ಧಿ ಜ್ಞಾನವನ್ನು ಅಳವಡಿಸಿ ಕುರಿ ಸಾಕಾಣಿಕೆ ಮಾಡಿದಲ್ಲಿ ಇನ್ನೂ ಹೆಚ್ಚಿನ ಲಾಭ ಗಳಿಸಬಹುದು. ಅದಕ್ಕೆ ಸಹಕಾರಿಯಾಗುವಂತೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರ ವಿಜ್ಞಾನಿಯಾಗಿರುವ ಡಾ. ವಸುಂಧರದೇವಿಯವರ ಈ ಕಿರು ಕೃತಿಯನ್ನು ವಿಭಾಗವು ಪ್ರಕಟಿಸುತ್ತಿದೆ.

ಈ ಕೃತಿಯ ತಾಂತ್ರಿಕ ಪರಿಶೀಲನಾ ಕಾರ್ಯವನ್ನು ಡಾ. ಕೆ.ಎಸ್, ಪ್ರತಾಪ್ ಕುಮಾರ್, ನಿವೃತ್ತ ಡೀನ್, ಪಶುವೈದ್ಯಕೀಯ ವಿಸ್ವವಿದ್ಯಾನಿಲಯ ಇವರು ನಿರ್ವಹಿಸಿಕೊಟ್ಟಿರುತ್ತಾರೆ. ಈ ಕೃತಿಯಲ್ಲಿ ವಿವಿಧ ತಳಿಗಳ ಪರಿಚಯ, ಸಂವರ್ಧನೆಯಲ್ಲಿ ಪಾಲಿಸಬೇಕಾದ ಕ್ರಮಗಳು, ಮರಿಗಳ ಪಾಲನೆ ಪೋಷಣೆ, ಆಹಾರ ಪೂರೈಕೆ, ಕುರಿ ಅಭಿವೃದ್ಧಿಯ ಕ್ರಮಗಳು, ಅವುಗಳ ಸುಧಾರಣೆಗೆ ಸಲಹೆ, ಸೂಚನೆಗಳು ಹಾಗೂ ಮಾರಾಟದ ಬಗೆಗೆ ಅತ್ಯಮೂಲ್ಯ ಮಾಹಿತಿಯನ್ನು  ನೀಡಲಾಗಿದೆ.

ಈ ಕೃತಿ ಕುರಿ ಸಾಕಾಣಿಕೆದಾರರಿಗೆ, ವಿದ್ಯಾರ್ಥಿಗಳಿಗೆ, ವಿಸ್ಥರಣಾ ಕಾರ್ಯಕರ್ತರಿಗೆ ಹಾಗೂ ಇತರ ಆಸಕ್ತರಿಗೆ ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

 

ಡಾ. ಉಷಾಕಿರಣ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಬೆಂಗಳೂರು – ೫೬೦ ೦೨೪