ಕುಡಿಯುವ ನೀರು ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನೀರು ಜೀವಸೆಲೆಯಾದರೆ ನೈರ್ಮಲ್ಯ ಬದುಕಿನ ಮಾರ್ಗ. ಜನತೆಗೆ ಆರೋಗ್ಯ ಒದಗಿಸುವಲ್ಲಿ ನೀರು ನೈರ್ಮಲ್ಯಗಳು ಒಂದಕ್ಕೊಂದು ಪೂರಕ ಅಂಶಗಳಾಗಿವೆ. ಜನರು ಉತ್ತಮ ಜೀವನ ನಡೆಸುವಲ್ಲಿ ನೀರು, ಆಹಾರ, ವಸತಿ, ನೈರ್ಮಲ್ಯಗಳು ಕನಿಷ್ಟ ಮೂಲಭೂತ ಅಗತ್ಯಗಳೆಂದು ಪರಿಗಣಿಸಲಾಗಿದೆ. ಅವಕಾಶ ವಂಚಿತರು, ದುರ್ಬಲ ವರ್ಗದವರು, ಮಹಿಳೆಯರು ಮುಂತಾದವರಿಗೆ ಇಂತಹ ಕನಿಷ್ಠ ಅಗತ್ಯಗಳನ್ನು ಪೂರೈಸುತ್ತಾ ಜನರ ಜೀವನ ಮಟ್ಟ ಉತ್ತಮ ಪಡಿಸುವುದೇ ಅಭಿವೃದ್ಧಿ ಪ್ರಕ್ರಿಯೆಯ ಮುಖ್ಯ ಕಾಳಜಿಯಾಗಿದೆ.

ಪ್ರಕೃತಿಯ ಹಲವು ವಿಸ್ಮಯಗಳಲ್ಲಿ ಒಂದಾಗಿರುವ ನೀರು ಮಾನವನ ಅಸ್ತಿತ್ವಕ್ಕೆ ಮೂಲ ವಸ್ತುವಾಗಿದೆ. ಇಡೀ ಜಗತ್ತಿನ ಜೀವ ಅಸ್ಥಿತ್ವವು ನೀರಿನಿಂದ ನಿರ್ದೇಶಿಸಲ್ಪಡುತ್ತಿದೆ. ನೀರು ಇಲ್ಲದೆ ಮಾನವನ ಬದುಕು ಊಹಿಸುವುದು ಅಸಾಧ್ಯವಾಗಿದೆ.

ವ್ಯಕ್ತಿಯೊಬ್ಬನಿಗೆ ಪ್ರತಿ ದಿನ ಕುಡಿಯಲು ೩-೪ ಲೀಟರ್ ನೀರಿನ ಅಗತ್ಯವಿದೆ ಹಾಗೂ ನಿತ್ಯದ ಅಗತ್ಯಗಳನ್ನು ಪೊರೈಸಿಕೊಳ್ಳಲು ಕೊನೆಪಕ್ಷ ೪೦ ಲೀಟರ್ ನೀರು ಬೇಕಾಗುತ್ತದೆ. ಶರೀರದಲ್ಲಿರುವ ಆಮ್ಲಜನಕ ಹಾಗೂ ರೋಗ ನಿರೋಧಕ ಜೀವಕಣಗಳನ್ನು ದೇಹದ ವಿವಿಧ ಭಾಗಗಳಿಗೆ ಸಾಗಿಸುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಚರ್ಮ ಒಣಗಲು ಬಿಡದೆ ನುಣುಪಾಗಿಡುತ್ತದೆ. ಶರೀರದ ಆಂತರೀಕ ನೈತೃವೀಕರಣ ಸವಲತ್ತು ನೀಡುತ್ತದೆ. ಆರೋಗ್ಯ ಕಾಪಾಡುವಲ್ಲಿ ಶುಚಿತ್ವಕ್ಕೆ ನೀರು ಸಹಕಾರಿಯಾಗುತ್ತದೆ. ಅನೈರ್ಮಲ್ಯದಿಂದ ಉಂಟಾಗಬಹುದಾದ ಅನೇಕ ಕಾಯಿಲೆಗಳನ್ನು ಅಗತ್ಯದಷ್ಟು ಪ್ರಮಾಣದ ನೀರು ಪೂರೈಕೆಯಿಂದ ತಡೆಯಬಹುದಾಗಿದೆ. ಇಷ್ಟೇ ಅಲ್ಲದೆ ಕೃಷಿ, ಕೈಗಾರಿಕೆ, ಮೀನುಗಾರಿಕೆ, ವಿದ್ಯುತ್ ಉತ್ಪಾದನೆ, ಮನರಂಜನೆ ಹೀಗೆ ಹಲವು ಹನ್ನೊಂದು ನಿಟ್ಟಿನಿಂದ ಮಾನವ ಬದುಕು ನೀರಿನಿಂದ ಸುತ್ತುವರಿಯಲ್ಪಟ್ಟಿದೆ.

ಇಂತಹ ಬಹುಬೇಡಿಕೆಯ ನೀರನ್ನು ಕೆರೆ, ಬಾವಿ, ನದಿ ಸರೋವರ ಮುಂತಾದ ಪ್ರಕೃತಿಯ ವಿವಿಧ ಮೂಲಗಳಿಂದ ಉಚಿತವಾಗಿ ಪಡೆಯಲಾಗುತ್ತಿತ್ತು. ಶತಮಾನಗಳು ಉರುಳಿದಂತೆ ಜನಸಂಖ್ಯೆ ಹೆಚ್ಚಳ, ಆಧುನೀಕರಣ ಕೈಗಾರೀಕರಣ, ಖಾಸಗೀಕರಣಗಳ ಸರಣಿಯಲ್ಲಿ ಪರಿಸರ ಮಾಲಿನ್ಯದಿಂದ ಪ್ರಕೃತಿಯ ಸಂಪನ್ಮೂಲಗಳ ಕೊರತೆ ಉಂಟಾಗತೊಡಗಿತು. ಇದರಿಂದಾಗಿ ಉಚಿತವಾಗಿ ಪಡೆಯುತ್ತಿದ್ದ ನಿಸರ್ಗದ ಸಂಪತ್ತೆಲ್ಲಾ ಮಾರುಕಟ್ಟೆಯ ಸರಕಾಗಿ ಪರಿವರ್ತನೆಗೊಳ್ಳುತ್ತಿದೆ. ಈಗಾಗಲೇ ಆಹಾರ ಮಾರುಕಟ್ಟೆಯ ವಸ್ತುವಾಗಿದ್ದು, ಹಣ ಕೊಟ್ಟು ಕೊಂಡು ತಿನ್ನಬೇಕಾಗಿದೆ. ಇನ್ನು ಕುಡಿಯುವ ನೀರು ಹಣಕೊಟ್ಟು ಕೊಂಡು ಕುಡಿಯುವ ಕಾಲ ದೂರವಿಲ್ಲ. ನಗರ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಬಾಟಲ್‌ಗಳಲ್ಲಿ ಕೊಂಡು ಕುಡಿಯುವುದನ್ನು ಕಾಣಬಹುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ಈ ಪರಿಸ್ಥಿತಿ ಇನ್ನು ಉಂಟಾಗಿಲ್ಲ.

ಕುಡಿಯುವ ನೀರು ಸುರಕ್ಷಿತವಾಗಿರಬೇಕು. ಕಾಯಿಲೆಗಳನ್ನು ಉಂಟುಮಾಡುವ ಸೂಕ್ಷ್ಮ ಜೀವಾಣುಗಳಿಂದ ಮುಕ್ತವಾಗಿರಬೇಕು. ಅತಿ ಪ್ಲೋರೈಡ್, ವಿಷಯುಕ್ತತೆ, ಮಾದಕ ಮುಂತಾದ ಮತ್ತಿತರ ರಸಾಯನಿಕಗಳಿಲ್ಲದ ರುಚಿ, ವಾಸನೆ, ಬಣ್ಣವಿಲ್ಲದ ನೀರು ಕುಡಿಯಲು ಆರೋಗ್ಯಕರವಾಗಿರುತ್ತದೆ. ಆದರೆ ಕೆರೆ, ಕಾಲುವೆ, ನದಿ, ಹಳ್ಳ ಮೊದಲಾದ ಕಡೆ ಬಟ್ಟೆ ಒಗೆಯುವುದು ಸ್ನಾನ ಮಾಡುವುದು ದನಕುರಿಗಳ ಮೈ ತೊಳೆಯುವುದರಿಂದಾಗಿ ಹಾಗೂ ಮಾನವ ತ್ಯಾಜ್ಯಗಳು, ಕೃಷಿ ಕೈಗಾರಿಕೆಗಳ ತ್ಯಾಜ್ಯವಸ್ತುಗಳು ರಸಾಯನಿಕದಂತಹ ವಿಷವಸ್ತುಗಳು, ಸೀಸ ಹಾಗೂ ಪಾದರಸ ಮುಂತಾದ ಭಾರಿ ಪ್ರಮಾಣದ ಕಲುಷಿತ ವಸ್ತುಗಳು ಭೂಮಿಯ ಮೇಲ್ಮೈನ ಕುಡಿಯುವ ನೀರನ್ನು ಅಸುರಕ್ಷಿತವಾಗಿ ಮಾಡಿಬಿಡುತ್ತದೆ.

ಭೂತಲದ ಅಂತರ್ಜಲ ನೀರು ಕುಡಿಯಲು ಸುರಕ್ಷಿತ ಎಂದು ಹೇಳುವುದಾದರೂ ಮಣ್ಣಿನ ಮೂಲಕ ಭೂತಲ ಸೇರಿದ ನೀರು ಕೆಲವೊಂದು ನಿರ್ದಿಷ್ಟ ವಲಯಗಳಲ್ಲಿ ಪ್ಲೊರೈಡ್‌ಗಳ ಹಾನಿಕಾರಕಗಳಿಂದ ಮಲಿನಗೊಂಡಿರುತ್ತದೆ. ನೀರಿನ ಮೂಲಗಳ ಸುತ್ತಲೂ ನಿಂತಿರುವ ಕೊಳಚೆ ನೀರು, ಕಸಕಡ್ಡಿ ಮಲಮೂತ್ರ ಮುಂತಾದವುಗಳಲ್ಲಿರುವ ಸೂಕ್ಷ್ಮಾಣುಗಳು ಭೂತಲದ ನೀರನ್ನು ಮಲಿನಗೊಳಿಸುತ್ತವೆ.

ಮಳೆ ನೀರು ಕುಡಿಯಲು ಸುರಕ್ಷಿತವೆಂದಾದರೂ, ಮಳೆ ಬರುವಾಗಲೇ ಗಾಳಿಯಲ್ಲಿನ ಧೂಳು ಸೂಕ್ಷ್ಮಾಣುಗಳು ಸೇರಿಕೊಂಡು ಮಳೆ ನೀರು ಸಹ ಧರೆಗಿಳಿಯುವ ಮೊದಲೆ ಮಲಿನಗೊಂಡಿರುತ್ತದೆ. ಇನ್ನು ಇಂತಹ ನೀರು ಕುಡಿಯುವುದರಿಂದ ಅತಿಸಾರಭೇದಿ, ರಕ್ತಹೀನತೆ, ವಿಶಮಶೀತ ಜ್ವರ, ಪೋಲಿಯೋ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅತಿಸಾರ ಭೇದಿಯಿಂದಾಗಿ ನೀರು ಮತ್ತು ಉಪ್ಪಿನ ಅಂಶ ಕಡಿಮೆಯಾಗುವುದರಿಂದ ದೇಹವು ಶಕ್ತ್ಯಹೀನವಾಗಿ ಅತಿಸಾರ ರಕ್ತಹೀನತೆಯಂತಹ ಕಾಯಿಲೆಗಳಿಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.

ಆರೋಗ್ಯ ಮತ್ತು ಕಲ್ಯಾಣ ಕಾರ್ಯಪಡೆಯ ಹತ್ತನೆಯ ಯೋಜನೆ ವರದಿಯಂತೆ ಮರಣ ಹೊಂದುತ್ತಿರುವ ಶಿಶುಮರಣ ಪ್ರಮಾಣದಲ್ಲಿ ಶೇ. ೫೦ರಷ್ಟು ಮಕ್ಕಳು ನೀರಿನಲ್ಲಿರುವ ದೋಷಗಳಿಂದಾಗಿಯೇ ಮರಣ ಸಂಭವಿಸುತ್ತವೆ ಎಂದು ಕಂಡುಬಂದಿದೆ. ವಿಶ್ವ ನೀರಿನ ಅಂಗವಾಗಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಜನರನ್ನು ಬೆಚ್ಚುಗೊಳಿಸುತ್ತದೆ. ಜಗತ್ತಿನಲ್ಲಿ ೧೧೦ ಕೋಟಿ ಜನರು ಸುರಕ್ಷಿತ ಕುಡಿಯುವ ನೀರಿನ ಸಮಸ್ಯೆಯಿಂದಾಗಿಯೆ ಪ್ರತಿವರ್ಷ ೫೦ ಲಕ್ಷ ಜನರು ಮರಣ ಹೊಂದುತ್ತಿದ್ದಾರೆ.

ಜನಸಮುದಾಯಗಳಲ್ಲಿನ ಕಾಯಿಲೆಗಳನ್ನು ತಡೆಗಟ್ಟಲು ಸುರಕ್ಷಿತ ಕುಡಿಯುವ ನೀರು ಪೂರೈಸಿದರಷ್ಟೆ ಸಾಲದು. ಮಲಮೂತ್ರಗಳ ಸುರಕ್ಷಿತ ವಿಲೇವಾರಿಯು ಪ್ರಮುಖ ಪಾತ್ರವಹಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ಅತಿಸಾರ, ವಿಶಮಶೀತಜ್ವರ, ರಕ್ತಹೀನತೆ ಮುಂತಾದ ಶೇ. ೮೦ರಷ್ಟು ಕಾಯಿಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಮತ್ತು ಶುಚಿತ್ವದ ಕೊರತೆಯು ಕಾರಣವಾಗಿದೆಯೆಂದು ತಿಳಿಸಿದೆ. ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಸಂಸ್ಥೆ (ಐ.ಇ.ಸಿ. ಭಾರತ ಸರ್ಕಾರ) ಎಲ್ಲ ಪ್ರಮುಖ ಖಾಯಿಲೆಗಳಿಗೂ ಎಲ್ಲೆಂದರಲ್ಲಿ ಬಯಲು ಪ್ರದೇಶಗಳಲ್ಲಿ ಮಲಮೂತ್ರ ವಿಸರ್ಜಿಸುವುದೇ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. ೮೬ರಷ್ಟು ಜನರು ಹೊಲಗದ್ದೆ, ರಸ್ತೆ, ಚರಂಡಿ ಮುಂತಾದ ತೆರೆದ ಪ್ರದೇಶಗಳಲ್ಲಿ ಮಲಮೂತ್ರ ವಿಸರ್ಜಿಸುತ್ತಿದ್ದಾರೆ, ಈ ಮಲಮೂತ್ರಗಳ ಮೂಲಕವೇ ಅನೇಕ ಖಾಯಿಲೆಗಳು ಹರಡುತ್ತಿವೆ. ಮಲಮೂತ್ರಗಳಲ್ಲಿ ರೋಗ ಉಂಟುಮಾಡುವ ಅಣುಜೀವಿ ಉತ್ಪತ್ತಿಯಾಗುತ್ತವೆ. ಈ ರೋಗಾಣುಗಳು ನೀರು, ಕೈಬೆರಳು, ಕೀಟಗಳು, ಮಣ್ಣು ಆಹಾರಗಳ ಮೂಲಕ ಇತರರಿಗೆ ಕಾಯಿಲೆ ಉಂಟುಮಾಡುವಲ್ಲಿ ಮೂಲ ಪಾತ್ರವಹಿಸುತ್ತವೆ.

ನಿಸರ್ಗದ ಮೂಲಗಳಿಂದ ಲಭ್ಯವಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಶೇ. ೯೭.೨ರಷ್ಟು ನೀರು ಸಾಗರದಲ್ಲಿದೆ. ಈ ನೀರು ಉಪ್ಪು, ಕುಡಿಯಲು ಸುರಕ್ಷಿತವಾಗಿಲ್ಲ. ಶೇ. ೨.೨ರಷ್ಟು ನೀರು ಹಿಮಗಡ್ಡೆ ರೂಪದಲ್ಲಿದೆ. ಉಳಿದ ಶೇ. ೦.೬ರಷ್ಟು ಅಂದರೆ ೮೭೬೦೦೦೦ ಘನ ಕಿ.ಮೀ.ಗಳಷ್ಟು ಸಿಹಿನೀರು ಕುಡಿಯಲು ಯೋಗ್ಯವಾಗಿದೆ. ಒಟ್ಟು ಈ ಸಿಹಿನೀರಿನ ಶೇ. ೯೭.೭ರಷ್ಟು ನೀರು ಭೂಮಿಯ ಒಳಗಿದೆ. ಉಳಿದ ಶೇ. ೨.೩ರಷ್ಟು ನೀರು ಮಾತ್ರ ಮನುಷ್ಯನ ಬಳಕೆಗೆ ಲಭ್ಯವಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶೇ. ೯೭ರಷ್ಟು ಕುಡಿಯುವ ನೀರನ್ನು ಹಾಗೂ ಕೃಷಿಗೆ ಶೇ ೫೦ರಷ್ಟು ನೀರನ್ನು ಅಂತರ್ಜಲದಿಂದಲೇ ಪೂರೈಸಲಾಗುತ್ತಿದೆ. ಕೈಗಾರಿಕೆಗಳಿಗೂ ಸಹ ಅಂತರ್ಜಲವನ್ನೇ ಬಳಸಲಾಗುತ್ತದೆ. ಹೀಗೆ ಸತತವಾಗಿ ಅತಿಯಾದ ಅಂತರ್ಜಲ ಬಳಕೆಯಿಂದಾಗಿ ನೀರಿನ ಮಟ್ಟ ಕಡಿಮೆಯಾಗಲು ಕಾರಣವಾಗಿದೆ.

ಸುರಕ್ಷಿತ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಅಗತ್ಯವಾದಷ್ಟು ನೀರಿನ ಕೊರತೆಯೇ ಅನೇಕ ಖಾಯಿಲೆಗಳಿಗೆ ಕಾರಣವಾಗಿದೆ. ಪ್ರತಿವ್ಯಕ್ತಿಗೆ ಕುಡಿಯಲು ಮತ್ತು ನಿತ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ತಲಾವಾರು ೧೦೦ ಲೀ. ನೀರಿನ ಅಗತ್ಯವಿದೆ. ಕೈಗಾರಿಕೆ ಪ್ರದೇಶಗಳಲ್ಲಿ ತಲಾವಾರು ೪೫೦ ಲೀ. ನೀರು ಪೂರೈಸಲಾಗುತ್ತಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ತಲಾವಾರು ೨೦ ಲೀ. ನೀರು ಪೂರೈಸಲಾಗುತ್ತಿಲ್ಲ. ಒಂದು ಅಂದಾಜಿನಂತೆ ಕೆಲವೇ ವರ್ಷಗಳಲ್ಲಿ ಪ್ರತಿವ್ಯಕ್ತಿಗೆ ನೀರಿನ ಲಭ್ಯತೆಯು ರಾಷ್ಟ್ರೀಯ ಸರಾಸರಿ ೫೦೦೦-೯೦೦೦ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ೧೭೦೦ ಕ್ಯೂಬಿಕ್ ಲೀಟರ್ ನೀರು ಪಡೆಯುವಂತಾಗುತ್ತದೆ. ನೀರು ಮತ್ತು ನೈರ್ಮಲ್ಯದ ಸಮಸ್ಯೆ ಹೆಚ್ಚಾದಂತೆಲ್ಲಾ ಅದು ನೇರವಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಕುಟುಂಬಕ್ಕೆ ಅಗತ್ಯವಾದ ನೀರು ಸಂಗ್ರಹಣೆ ಮಾಡುವವರು ಹೆಂಗಸರು ಮತ್ತು ಮಕ್ಕಳ ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಮುಂತಾದ ಮನೆ ಬಳಕೆಗೆ ಎಷ್ಟೆಷ್ಟು ನೀರು ಬೇಕೆಂದು ಖರ್ಚುಮಾಡುವವರು ಹೆಂಗಸರು. ನೀರಿನ ಸಮಸ್ಯೆ ಹೆಚ್ಚಾದಂತೆ ನೀರು ಸಂಗ್ರಹಣೆಗಾಗಿ ೫-೬ ಕಿ.ಮೀ. ಗಿಂತಲೂ ದೂರದಿಂದ ನೀರು ಸಂಗ್ರಹಿಸಬೇಕಾಗುತ್ತದೆ. ಇದರಿಂದಾಗಿ ಕಾಲು ನೋವು ಬೆನ್ನುನೋವಿನ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.

ಸ್ವಚ್ಛತೆಯ ದೃಷ್ಟಿಯಿಂದ ಮಹಿಳೆಯರಿಗೆ ಪುರುಷರಿಗಿಂತಲೂ ಹೆಚ್ಚು ನೀರು ಅಗತ್ಯವಾಗಿದೆ. ನೀರಿನ ಸಮಸ್ಯೆಯಿಂದಾಗಿ ಹಾಗೂ ಸ್ನಾನ ಗೃಹಗಳ ತೊಂದರೆಯಿಂದಾಗಿ ಅವರು ನಿತ್ಯ ಸ್ನಾನದ ಬಗ್ಗೆ ಅಷ್ಟಾಗಿ ಗಮನ ಕೊಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿಯೇ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಅವರು ಕುಟುಂಬದ ಅಥವಾ ಸಾಮಾಜಿಕ ಅವಶ್ಯಕತೆಗಳ ಅಥವಾ ಜವಾಬ್ದಾರಿಗಳೂ ಪೂರೈಸಲು ಸಮಯ ಹಾಗೂ ಶಕ್ತಿ ಇಲ್ಲದಂತಾಗುವುದೆ ಇದರ ಪರಿಣಾಮದಿಂದಾಗಿ ಕುಟುಂಬದ ಆರ್ಥಿಕ ನೆರವಾಗುವಂತಹ ಕೃಷಿ ಮತ್ತಿತರ ಕೆಲಸಗಳಲ್ಲಿ ಭಾಗವಹಿಸಲು ಆಗುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಬಹುದೊಡ್ಡ ಸಮಸ್ಯೆ ಇದೆ. ತಮ್ಮ ನಿತ್ಯ ಕರ್ಮಗಳನ್ನು ತೀರಿಸಿಕೊಳ್ಳಲು ಮುಂಜಾವಿನಲ್ಲಿ ಅಥವಾ ರಾತ್ರಿಯ ವೇಳೆಯಲ್ಲಿ ರಸ್ತೆಗಳನ್ನು ಶೌಚಾಲಯಗಳಾಗಿ ಬಳಸುತ್ತಿದ್ದಾರೆ. ಬಯಲು ಪ್ರದೇಶಗಳಲ್ಲಿ ಮಲಮೂತ್ರ ವಿಸರ್ಜನೆ ಮತ್ತು ಅಂತಹ ಸ್ಥಳಗಳಲ್ಲಿ ಬರಿಗಾಲಿನಲ್ಲಿ ಓಡಾಡುವುದು ಮುಂತಾದ ಸಮಸ್ಯೆಗಳಿಂದಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾದಂತೆಲ್ಲಾ ಜನರ ಆರೋಗ್ಯ ದುಸ್ಥಿತಿಗೊಂಡು ದೇಶದ ಅಭಿವೃದ್ಧಿಗೆ ಧಕ್ಕೆ ಉಂಟು ಮಾಡುತ್ತದೆ.

ಆರೋಗ್ಯ ಸಮಸ್ಯೆಯು ಸಾಮಾಜಿಕ ಸಮಸ್ಯೆಗಿಂತ ದೊಡ್ಡದು ಜನರ ಅನಾರೋಗ್ಯವು ಕುಟುಂಬಗಳ ರಾಷ್ಟ್ರದ ಆರ್ಥಿಕ ಪರಿಸ್ಥಿತಿಯ ಮೇಲೆ ನೇರ ದುಷ್ಪರಿಣಾಮ ಉಂಟು ಮಾಡುತ್ತಿದೆ.

ಒಂದು ದೇಶದ ಅಭಿವೃದ್ಧಿಯು ಯಶಸ್ವಿಯಾಗಬೇಕಾದರೆ ಅಲ್ಲಿನ ಸಂಪನ್ಮೂಲಗಳ ಲಭ್ಯತೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇವೆರಡು ಅತ್ಯಂತ ಪ್ರಮುಖ ಅಂಶಗಳಾಗಿವೆ. ಜನರು ಅಭಿವೃದ್ಧಿಯ ಸಾಧನವು ಹೌದು. ಸಾಧ್ಯವೂ ಹೌದು. ವ್ಯಕ್ತಿ ಸಮಾಜಗಳ ಅಭಿವೃದ್ಧಿಯ ಒಟ್ಟು ಮೊತ್ತವೇ ರಾಷ್ಟ್ರದ ಅಭಿವೃದ್ಧಿ ಇಲ್ಲಿ ಜನರೇ ಅಭಿವೃದ್ಧಿಯ ಕೇಂದ್ರ ಬಿಂದು. ಅಭಿವೃದ್ಧಿ ಶೀಲ ಮತ್ತು ಹಿಂದುಳಿದ ರಾಷ್ಟ್ರಗಳಲ್ಲಿ ಜನಸಂಖ್ಯೆ ಮಿತಿಮೀರಿ ಬೆಳಿಯುತ್ತಿದೆ. ಪ್ರಪಂಚದಲ್ಲಿರುವ ಅರ್ಧದಷ್ಟು ಬಡವರು ದಕ್ಷಿಣ ಏಷ್ಯಿಯಾ ಖಂಡದಲ್ಲಿದ್ದಾರೆ. ಇವರಲ್ಲಿ ಬಹುತೇಕ ಬಡವರೆಲ್ಲಾ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದಾರೆ. ಈ ಜನತೆ ನೀರು, ವಸತಿ, ಆಹಾರ, ಆರೋಗ್ಯ, ಶುಚಿತ್ವ ಮುಂತಾದ ಮೂಲಭೂತ ಅಗತ್ಯಗಳ ಸಮಸ್ಯೆಯಿಂದಾಗಿ ಆಗಾಗ ಕಾಯಿಲೆಗಳಿಗೆ ತುತ್ತಾಗುವುದರಿಂದ ವ್ಯಕ್ತಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಧಕ್ಕೆಯುಂಟಾಗುತ್ತದೆ.

ದೈಹಿಕ ಪರಿಶ್ರಮವನ್ನೇ ಬದುಕಿನ ಬಂಡವಾಳವನ್ನಾಗಿಸಿಕೊಂಡ ಕೂಲಿಕಾರ್ಮಿಕರು, ಬಡವರಿಗೆ ಆರೋಗ್ಯವೇ ಮೂಲ ಸಂಪತ್ತು. ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಯಿಂದಾಗಿ ಉಂಟಾಗುವ ಕಾಯಿಲೆಗೆ ಆಗಾಗ ತುತ್ತಾಗಿ ಬದುಕಿ ಉಳಿದ ಜನರು ತಮ್ಮ ದೇಹದಲ್ಲಿನ ಪೌಷ್ಠಿಕತೆಯನ್ನು ಕಳೆದುಕೊಂಡು ದುಡಿಯುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಇದರ ಪರಿಣಾಮ ಅವರ ಉತ್ಪಾದನಾ ಶ್ರಮ ವ್ಯರ್ಥವಾಗುತ್ತದೆ. ಭಾರತದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಉಂಟಾಗುವ ಖಾಯಿಲೆಗಳಿಂದಲೇ ಪ್ರತಿವರ್ಷ ಸುಮಾರು ೧೮೦ ಕೋಟಿ ಮಾನವ ಗಂಟೆಗಳು ನಷ್ಟವಾಗುತ್ತಿವೆ ಎಂದು ಅಂದಾಜು ಮಾಡಲಾಗಿದೆ. ದುಡಿಯುವ ಸಾಮರ್ಥ್ಯ ಕಳೆದುಕೊಂಡು ವ್ಯಕ್ತಿಗೆ ವರಮಾನವಿಲ್ಲದೆ ತಿನ್ನಲು ಆಹಾರದ ಕೊರತೆ ಉಂಟಾಗಿ ಇದು ವ್ಯಕ್ತಿಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ದಕ್ಕೆ ಉಂಟುಮಾಡುತ್ತದೆ. ಈಗಾಗಲೆ ದಕ್ಷಿಣ ಏಷಿಯಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ೨೬ಕ್ಕೂ ಹೆಚ್ಚು ರಾಷ್ಟ್ರಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಭಾರತ ದೇಶವು ಒಂದು.

ಮಿತ ಪ್ರಮಾಣದಲ್ಲಿರುವ ಈ ನೀರು ಮಾನವ ಹಾಗೂ ಪ್ರಕೃತಿ ನಿರ್ಮಿತ ಮಾಲಿನ್ಯದಿಂದ ಮತ್ತು ಕೃಷಿ ನೀರಾವರಿಗಾಗಿ ಅಂತರ್ಜಲವನ್ನು ಹೆಚ್ಚು ಹೆಚ್ಚು ಬಳಸುತ್ತಿರುವುದರಿಂದ ಸುರಕ್ಷಿತ ಕುಡಿಯುವ ನೀರಿನ ಸಮಸ್ಯೆ ದಿನೆ ದಿನೆ ಹೆಚ್ಚುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಭೀಕರಗೊಂಡಂತೆಲ್ಲಾ ಅನಾರೋಗ್ಯದಿಂದಾಗಿ ಮಾನವ ಅಸ್ತಿತ್ವವು ವಿನಾಶದ ಅಂಚಿಗೆ ತಲುಪಿತ್ತಿರುವುದನ್ನು ಗಮನಿಸಿದ ರಾಷ್ಟ್ರ ಸಂಘವು ಅಭಿವೃದ್ಧಿ ಶೀಲ ಮತ್ತು ಹಿಂದುಳಿದ ರಾಷ್ಟ್ರಗಳಲ್ಲಿನ ಜನಸಮುದಾಯಕ್ಕೆ ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಪೂರೈಸುವುದರ ಮೂಲಕ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳನ್ನು ಮೂಲಭೂತ ಅಗತ್ಯಗಳೆಂದು ಸಾರ್ವತ್ರಿಕವಾಗಿ ಒಪ್ಪಿಕೊಂಡು ಜನತೆಗೆ ಮೂಲ ಆಕರಗಳನ್ನು ಒದಗಿಸುವಲ್ಲಿ ಶ್ರಮಿಸುತ್ತದೆ.

ಪ್ರಸ್ತುತದಲ್ಲಿ ದೇಶದ ಜನತೆಗೆ ಕುಡಿಯುವ ನೀರನ್ನು ನಳಗಳ (ಶೇ. ೩೬.೭), ಕೈಪಂಪು (ಶೇ. ೩೫.೭), ಬಾವಿಗಳು (ಶೇ. ೧೮.೨) ಹಾಗೂ ಕೊಳವೆ ಬಾವಿಗಳಿಂದ (ಶೇ. ೫.೬) ಕುಟುಂಬಗಳು ಕುಡಿಯುವ ನೀರು ಪೂರೈಸಿಕೊಳ್ಳುತ್ತಿದ್ದಾರೆ. ಇನ್ನೂ ಕೆರೆ, ಕೊಳ್ಳ ಹಳ್ಳ (ಶೇ. ೧.೦) ನದಿ (ಶೇ. ೧.೨) ಚಿಲುಮೆಗಳಿಂದ (ಶೇ. ೦.೭) ಹಾಗೂ ಮತ್ತಿತರ (ಶೇ. ೧.೨) ಮೂಲಗಳಿಂದ ಕುಟುಂಬಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೂ ಇನ್ನೂ ೫ ಮಿಲಿಯನ್ ಕುಟುಂಬಗಳು ಕುಡಿಯುವ ನೀರಿಗಾಗಿ ನದಿ ಕೆರೆಗಳನ್ನು ಅವಲಂಬಿಸಿದೆ. ಈಗಲೂ ಶೇ. ೧೭ರಷ್ಟು ಕುಟುಂಬಗಳು ಸಮುದಾಯ ಮೂಲಗಳಿಂದ ಕುಡಿಯುವ ನೀರು ಪಡೆಯುತ್ತವೆ. ಶೇ. ೩೬ರಷ್ಟು ಜನತೆ ಶೌಚಾಲಯ ಸೌಲಭ್ಯ ಹೊಂದಿದ್ದು ಉಳಿದ ಶೇ. ೬೪ರಷ್ಟು ಜನತೆ ಶೌಚಾಲಯ ಸೌಲಭ್ಯ ಹೊಂದಿಲ್ಲ.

ಕುಡಿಯುವ ನೀರು ನೈರ್ಮಲ್ಯ ಒಳಗೊಂಡಂತೆ ಕನಿಷ್ಟ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಮೀಣ ಮತ್ತು ನಗರದ ನಡುವೆ ತಾರತಮ್ಯ ಮುಂದುವರಿಯುತ್ತದೆ. ಗ್ರಾಮೀಣ ಜನತೆ ಅಗತ್ಯ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಜನತೆ ಮೂಲ ಸೌಲಭ್ಯ ಪಡೆಯುವಲ್ಲಿ ನಗರ ಗ್ರಾಮೀಣ ಪ್ರದೇಶಗಳ ನಡುವೆ ತಾರತಮ್ಯ ಅಥವಾ ಅಸಮಾನತೆ ಕಾಣಬಹುದಾಗಿದೆ. ನಗರ ಪ್ರದೇಶದ ಶೇ. ೮೧.೩೮ರಷ್ಟು ಜನತೆ ಕುಡಿಯುವ ನೀರು ಸೌಲಭ್ಯ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಶೇ. ೫೫ರಷ್ಟು ಜನತೆ ಮಾತ್ರ ಕುಡಿಯಲು ನೀರಿನ ಸೌಲಭ್ಯ ಪಡೆಯುತ್ತಿದೆ. ನಗರ ಪ್ರದೇಶದ ಶೇ. ೬೫ರಷ್ಟು ಕುಟುಂಬಗಳು ಮನೆಯೊಳಗೆ ಕುಡಿಯುವ ನೀರಿನ ಸೌಲಭ್ಯ ಹೊಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. ೨೯ರಷ್ಟು ಕುಟುಂಬಗಳು ಮನೆಯೊಳಗೆ ಕುಡಿಯುವ ನೀರಿನ ಮೂಲಗಳ ಸೌಲಭ್ಯ ಪಡೆದಿದ್ದಾರೆ. ನಗರದ ಶೇ. ೭೦ರಷ್ಟು ಕುಟುಂಬಗಳು ಸ್ನಾನದ ಮನೆಯ ಸೌಲಭ್ಯ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ. ೫೦ರಷ್ಟು ಕುಟುಂಬಗಳು ಇನ್ನೂ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಬದುಕುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಜನತೆ ಕ್ರಮವಾಗಿ ಶೇ. ೨೩ರಷ್ಟು ಹಾಗೂ ಶೇ. ೪ರಷ್ಟು ಪ್ರಮಾಣ ದೂರವಾಣಿ ಸೌಲಭ್ಯ ಹೊಂದಿದ್ದಾರೆ.

ಗ್ರಾಮೀಣ ನಗರ ತಾರತಮ್ಯಗಳು ಎಲ್ಲಾ ರಾಜ್ಯಗಳಲ್ಲೂ ಮುಂದುವರಿದಿವೆ. ಗ್ರಾಮೀಣ ಪ್ರದೇಶಗಳ ಜನತೆಗೆ ಕುಡಿಯುವ ನೀರು ಪೂರೈಸುವ ಜವಾಬ್ದಾರಿ ರಾಜ್ಯ ಸರಕಾರಗಳಿಗೆ ಸೇರಿದ ವಿಷಯವಾಗಿದೆ. ಕರ್ನಾಟಕವು ಗ್ರಾಮೀಣ ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಒದಗಿಸುವಲ್ಲಿ ವಿದೇಶಗಳ ಆರ್ಥಿಕ ಧನ ಸಹಾಯ, ಕೇಂದ್ರ ಸರಕಾರದ ಅನುದಾನಗಳ ನೆರವಿನಿಂದ ಹಲವಾರು ಯೋಜನೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಪ್ರಸ್ತುತದಲ್ಲಿ ಕೈಪಂಪು ಕೊಳವೆಬಾವಿ, ಕಿರುನೀರು ಘಟಕ, ನಲ್ಲಿ ನೀರಿನ ಜಾಲ ಮತ್ತು ಸ್ವಚ್ಛಗ್ರಾಮ ಮುಂತಾದ ಕಾರ್ಯಕ್ರಮಗಳ ಮೂಲಕ ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಪೂರೈಸುತ್ತಿದೆಯಾದರೂ ನಿಗದಿ ಪಡಿಸಿದ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸಲಾಗುತ್ತಿಲ್ಲ. ಸುಮಾರು ೮೦೦ಕ್ಕೂ ಅಧಿಕ ಗ್ರಾಮಗಳು, ತಲಾ ೧೦ ಮೀಟರ್‌ಗಿಂತಲು ಕಡಿಮೆ ಪ್ರಮಾಣ ನೀರು ಪಡೆಯುತ್ತಿದ್ದಾರೆ. ೨೧೩೧೦ ಹಳ್ಳಿಗಳಲ್ಲಿ ತಲಾ ೧೦-೫೫ ಲೀಟರ್ ಪಡೆಯುತ್ತಿರುವುದು ಕಂಡುಬರುತ್ತದೆ. ಶೌಚಾಲಯ ಸೌಲಭ್ಯಗಳನ್ನು ಪಡೆಯುತ್ತಿರುವವರ ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿಲ್ಲ. ಇಷ್ಟೇಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿದ್ದರೂ ಗ್ರಾಮೀಣ ಜನತೆ ಕುಡಿಯುವ ನೀರು ಮತ್ತು ನೈರ್ಮಲ್ಯದಂತ ಸಮಸ್ಯೆಗಳು ಮುಂದುವರಿಯುತ್ತಲೆ ಇವೆ.

ಅಭಿವೃದ್ಧಿಯ ವ್ಯಾಖ್ಯಾನವು ಆರ್ಥಿಕ ಅಭಿವೃದ್ಧಿಯಿಂದ ಮಾನವ ಅಭಿವೃದ್ಧಿಯಡೆಗೆ ವರ್ಗಾಂತರಗೊಂಡಿದೆ. ಬಡತನವನ್ನು ಮಾನವ ದುಸ್ಥಿತಿಯ ಪರೀಕ್ಷೆಯಲ್ಲಿ ನಿರ್ಮಿಸಲಾಗಿದೆ. ಮಾನವ ದುಸ್ಥಿತಿಯಲ್ಲಿ ವರಮಾನ ದುಸ್ಥಿತಿ ಹಾಗೂ ಆರೋಗ್ಯ ದುಸ್ಥಿತಿಗಳು ಪ್ರಮುಖ ಅಂಶಗಳೆಂದು ಪರಿಗಣಿಸಲಾಗಿದೆ. ಆರೋಗ್ಯ ದುಸ್ಥಿತಿಯಲ್ಲಿ ಕುಡಿಯುವ ನೀರಿನ ಕೊರತೆ, ನೈರ್ಮಲ್ಯ ಒಂದಾಗಿದೆ. ಅಭಿವೃದ್ಧಿ ಚರ್ಚೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ನೈರ್ಮಲ್ಯ ಸಮಸ್ಯೆ ಚರ್ಚೆ ಇಲ್ಲದೆ ಅದು ಪೂರ್ಣಗೊಳಿಸಲಾಗದು. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜನತೆಯ ಆರೋಗ್ಯ ವರ್ಧನೆಗೆ ಮಹತ್ವ ಪಾತ್ರವಹಿಸುತ್ತಿರುವ ನೀರಿನ ಪೂರೈಕೆ ಮತ್ತು ನೈರ್ಮಲ್ಯ ಕುರಿತಂತೆ ಗ್ರಾಮಪಂಚಾಯ್ತಿಗಳು ಯಾವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಪ್ರಸ್ತುತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಸ್ಥಿತಿಗತಿಗಳನ್ನು ತಿಳಿಯಲು ಪ್ರಯತ್ನಿಸಲಾಗಿದೆ.

ಗ್ರಾಮೀಣ ಪ್ರದೇಶಗಳ ಸಮಸ್ಯೆ ಕುರಿತು ಹಲವಾರು ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಆದರೆ ಈ ಎಲ್ಲಾ ಅಧ್ಯಯನಗಳು ಮುಖ್ಯವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಯನ್ನು ಮೂಲ ನೆಲೆಯಾಗಿ ಮಾಡಿಕೊಂಡು ಅಭ್ಯಸಿಸಿರುವ ಅಧ್ಯಯನಗಳು ವಿರಳವೆಂದೇ ಹೇಳಬಹುದು. ಸೂಕ್ಷ್ಮವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದಾಗ ಮಾತ್ರ ಒಳ ಅರಿವು ತಿಳಿಯಲು ಸಾಧ್ಯ. ಇಂತಹ ಸೂಕ್ಷ್ಮ ಒಳ ಅರಿವನ್ನು ಕೃಷ್ಣನಗರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳ ಮೂಲಕ ತಿಳಿಯುವ ಪ್ರಯತ್ನ ಮಾಡಲಾಗಿದೆ.

ಅಧ್ಯಯನದ ಉದ್ದೇಶಗಳು

೧. ಕೃಷ್ಣನಗರ ಗ್ರಾಮಪಂಚಾಯ್ತಿಯ ವ್ಯಾಪ್ತಿಯಲ್ಲಿನ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ವಸ್ತು ಸ್ಥಿತಿಯನ್ನು ತಿಳಿಯುವುದು.

೨. ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ನಿರ್ವಹಣೆಯಲ್ಲಿ ಗ್ರಾಮಪಂಚಾಯ್ತಿ ಕಾರ್ಯವೈಖರಿ ತಿಳಿಯುವುದು.

೩. ಆರ್ಥಿಕ ಸಾಮಾಜಿಕ ನೆಲೆಯಲ್ಲಿ ಕುಟುಂಬಗಳು ಪಡೆಯುತ್ತಿರುವ ಕುಡಿಯುವ ನೀರಿನ ಪ್ರಮಾಣ ನೈರ್ಮಲ್ಯ ಸೌಲಭ್ಯ ಗುರುತಿಸುವುದು.

೪. ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಲಿಂಗ ಸಂಬಂಧಿ ಆಯಾಮಗಳನ್ನು ಗುರುತಿಸುವುದು.

೫. ನೀರು ನೈರ್ಮಲ್ಯ ಸರಬರಾಜಿನ ಮೂಲಗಳು ಅಥವಾ ಪರಿಕರಗಳ ದುರಸ್ಥಿ ಕಾಮಗಾರಿಗಳ ಸ್ಥಿತಿ ತಿಳಿಯುವುದು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತ ಈ ಅಧ್ಯಯನವು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು ಕೃಷ್ಣನಗರ ಗ್ರಾಮಪಂಚಾಯ್ತಿಗೆ ನಿರ್ದಿಷ್ಟಗೊಳಿಸಿಕೊಳ್ಳಲಾಗಿದೆ. ಈ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಕೃಷ್ಣನಗರ ಮತ್ತು ದೌಲತ್‌ಪುರ ಎಂಬ ಎರಡು ಹಳ್ಳಿಗಳಿವೆ. ಕೃಷ್ಣನಗರ ತಾಲ್ಲೂಕು ಕೇಂದ್ರದಿಂದ ಒಂದು ಕಿ.ಮೀ. ದೂರದಲ್ಲಿದೆ. ದೌಲತ್‌ಪುರ ಎರಡು ಕಿ.ಮೀ. ದೂರದಲ್ಲಿದೆ. ಪಟ್ಟಣದೊಳಗಿನ ಗ್ರಾಮಗಳಂತಿರುವ ಈ ಎರಡು ಹಳ್ಳಿಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಜನರ ಪ್ರಮುಖ ಆಧ್ಯತೆಗಳಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತಂತೆ ಪ್ರಾಥಮಿಕ ಮತ್ತು ಆನುಷಂಗಿಕ ಮಾಹಿತಿಯನ್ನು ಅವಲಂಬಿಸಿದ ತಳಸ್ಪರ್ಶಿ ಪ್ರಯೋಗಾತ್ಮಕ ಅಧ್ಯಯನವಾಗಿದೆ.

ಪ್ರಸ್ತುತ ಅಧ್ಯಯನವು ಹಲವು ದಿಕ್ಕಿನಿಂದ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಆರೋಗ್ಯದ ಸ್ಥಾನಮಾನದಲ್ಲಿ ಬಳ್ಳಾರಿ ಜಿಲ್ಲೆಯು ೨೦ನೇಯ ಸ್ಥಾನದಲ್ಲಿದೆ. ರಾಜ್ಯದ ಉದರ ಭಾಗದಂತಿರುವ ಬಳ್ಳಾರಿ ಜಿಲ್ಲೆಯಲ್ಲಿ ಕೆಳ ಮಧ್ಯಮ ಜಾತಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ೧೪ನೇ ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ಮಹಿಳಾ ಮಣಿಗಳಿಬ್ಬರು ಈ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದು ಪ್ರಪಂಚದಾದ್ಯಂತ ಗಮನ ಸೆಳೆದಿದ್ದಲ್ಲದೆ ಅಭಿವೃದ್ಧಿಯೂ ಅದರಲ್ಲಿಯೂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯಗಳಂತಹ ಅಭಿವೃದ್ಧಿಯ ಮಹಾಪೂರಗಳೆ ಹರಿದು ಬರುತ್ತಿವೆಯೆಂಬ ನಂಬಿಕೆ ಜನರಲ್ಲಿದೆ. ಈ ನಿಟ್ಟಿನಲ್ಲಿ ಸರಕಾರ ಗ್ರಾಮೀಣ ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸುವಲ್ಲಿ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಪಂಚಾಯ್ತಿಗಳು ಅವುಗಳ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಯಾವ ನಿಲುವು ತಳೆದಿವೆ ಎಂಬುದಾಗಿ ತಿಳಿಯಬಹುದು. ಜನತೆಗಾಗಿ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಜನರು ಅನುಕೂಲ ಪಡೆಯುತ್ತಿದ್ದಾರೆಯೇ ಹಾಗೂ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಇರುವ ಸಮಸ್ಯೆಗಳೇನು? ಮುಂತಾದ ಒಟ್ಟಾರೆ ಗ್ರಾಮೀಣ ನೀರು ನೈರ್ಮಲ್ಯ ಚಿತ್ರಣ ನೀಡುವುದರಿಂದ ನೀರು ಪೂರೈಕೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವಲ್ಲಿ ಇಂತಹ ಅಧ್ಯಯನಗಳು ನೆರವಾಗುತ್ತವೆ ಎಂದು ನಂಬಲಾಗಿದೆ.

ಅಧ್ಯಯನ ವಿಧಾನ

ಅಧ್ಯಯನವು ಪ್ರಾಥಮಿಕ ಮತ್ತು ಅನುಷಂಗಿಕ ಮೂಲಗಳ ಮಾಹಿತಿಗಳನ್ನು ಆಧರಿಸಿದ ಅಧ್ಯಯನವಾಗಿದೆ. ಕೃಷ್ಣನಗರದಿಂದ ಮತ್ತು ದೌಲತ್‌ಪುರದಿಂದ ೬೦ ಕುಟುಂಬಗಳು ಒಟ್ಟಾರೆ ಗ್ರಾಮಪಂಚಾಯ್ತಿಂದ ವಿವಿಧ ಜಾತಿ ಧರ್ಮಗಳನ್ನೊಳಗೊಂಡಂತೆ ೧೬೦ ಕುಟುಂಬಗಳನ್ನು ರ‍್ಯಾಂಡಮ್ ಮಾದರಿ ವಿಧಾನದ ಮೂಲಕ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಅನುಷಂಗಿಕ ಮಾಹಿತಿಯನ್ನು ಗ್ರಾಮಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳಿಂದ ಸಂಗ್ರಹಣೆ ಮಾಡಲಾಗಿದೆ. ಪಂಚಾಯ್ತಿ ಸದಸ್ಯರು, ಕಾರ್ಯದರ್ಶಿಗಳಿಂದ ಅಲಿಖಿತ ರೂಪದ ಮಾಹಿತಿ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವಿನ್ಯಾಸಗೊಳಿಸಲಾಗಿದೆ.

ಅಧ್ಯಯನದ ವಿನ್ಯಾಸ

ಒಟ್ಟಾರೆ ಈ ಅಧ್ಯಯನದಲ್ಲಿ ಐದು ಭಾಗಗಳಿವೆ. ಮೊದಲನೆ ಅಧ್ಯಾಯದಲ್ಲಿ ಪ್ರಸ್ತಾವನೆ, ಉದ್ದೇಶ ವ್ಯಾಪ್ತಿ, ಪ್ರಾಮುಖ್ಯತೆ ಅಧ್ಯಯನ ವಿಧಾನಗಳನ್ನು ಒಳಗೊಂಡಿದೆ. ಎರಡನೆ ಅಧ್ಯಾಯವು ಕುಡಿಯುವ ನೀರಿನ ಮೂಲಗಳು ಮತ್ತು ಕುಡಿಯುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ವಿವರಣೆ ಒಳಗೊಂಡಿದೆ. ಮೂರನೇಯ ಅಧ್ಯಾಯವು ಕರ್ನಾಟಕದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಪ್ರಸ್ತುತದ ಸ್ಥಿತಿಗತಿ ವಿವರಣೆ ನೀಡುತ್ತದೆ. ನಾಲ್ಕನೆ ಅಧ್ಯಾಯವು ಕೃಷ್ಣನಗರ ಗ್ರಾಮ ಪಂಚಾಯ್ತಿಯ ಚಿತ್ರಣ ಒಳಗೊಂಡಿದೆ. ಕೊನೆಯ ಅಧ್ಯಯನದಲ್ಲಿ ಮಾಹಿತಿ ವಿಶ್ಲೇಷಣೆ ಅಧ್ಯಯನದ ಫಲಿತಗಳು ಹಾಗೂ ಸಲಹೆಗಳೂ ಒಳಗೊಂಡಿದೆ.