ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಅನೇಕ ರೀತಿಯಲ್ಲಿ ಭಾರತೀಯ ಗುಣಲಕ್ಷಣಗಳನ್ನು ಹೊಂದಿರುವ ಒಂದು ಮಾದರಿ ರಾಜ್ಯವಾಗಿದೆ. ನೈಸರ್ಗಿಕ, ಭಾಷೆ, ಧರ್ಮಗಳಲ್ಲಿ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಅಭಿವೃದ್ಧಿ ಕುರಿತ ಸಾಧನೆಗಳಲ್ಲಿಯೂ ದೇಶದ ಒಟ್ಟಾರೆ ಸ್ಥಿತಿಯನ್ನು ಬಹುಮಟ್ಟಿಗೆ ಪ್ರತಿಬಿಂಬಿಸುತ್ತದೆ. ರಾಜ್ಯದ ಗ್ರಾಮೀಣ ಜನತೆಯ ಮೂಲಭೂತ ಅಗತ್ಯಗಳಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ಲಭ್ಯತೆಯ ಸ್ಥಿತಿಗತಿಗಳನ್ನು ತಿಳಿಯುವ ಪ್ರಯತ್ನ ಈ ಅಧ್ಯಯನದಲ್ಲಿ ಮಾಡಲಾಗಿದೆ.

ಕರ್ನಾಟಕದಲ್ಲಿ ಒಟ್ಟು ೫೨೭ ಲಕ್ಷ ಜನರಿದ್ದು ಇದರಲ್ಲಿ ೩೪೮ ಲಕ್ಷ (೬೬%) ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದಾರೆ (೨೦೦೧) ಈ ಜನತೆಯು ೨೭೦೬೬ ರೆವೆನ್ಯೂ ಹಳ್ಳಗಳು ಮತ್ತು ೨೯೬೧೬ ಕೊಪ್ಪಲುಗಳು ಒಟ್ಟು ೫೬೬೮೭ ವಾಸ್ತವ್ಯಗಳಲ್ಲಿ ವಾಸಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರವು ಕುಡಿಯುವ ನೀರು ಪೂರೈಕೆಗೆ ಮಹತ್ವ ನೀಡಿದ್ದು ಕೇಂದ್ರದ ನೆರವು ಹಾಗೂ ವಿದೇಶಗಳ ಧನಸಹಾಯದೊಂದಿಗೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುತ್ತಾ ಗ್ರಾಮೀಣ ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಪೂರೈಸುವಲ್ಲಿ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ.

ಪ್ರಸ್ತುತದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆ ಕಾರ್ಯಕ್ರಮಗಳನ್ನು ಆಯಾ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಲ್ಲಿ ರೂಪಿಸಿ ವಿನ್ಯಾಸಗೊಳಿಸಿ ಅನುಷ್ಟಾನಗೊಳಿಸಲಾಗುತ್ತಿದೆ.

ರಾಷ್ಟ್ರೀಯ ಕುಡಿಯುವ ನೀರು ಪೂರೈಕೆ ಗ್ರಾಮೀಣ ಜನತೆಗೆ ತಮ್ಮ ಕನಿಷ್ಟ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೊನೆ ಪಕ್ಷ ತಲಾವಾರು ೪೦ ಲೀಟರ್ ನೀರಿನ ಅಗತ್ಯವಿದೆಯೆಂದು ಬಳ್ಳಾರಿ, ರಾಯಚೂರು, ಬಿಜಾಪುರ ಮುಂತಾದ ಅಧಿಕ ಉಷ್ಣಾಂಶವಿರುವ ಜಿಲ್ಲೆಗಳಲ್ಲಿ ಜನತೆಗೆ ತಲಾವಾರು ೭೦ ಲೀಟರ್ ನೀರು ಬೇಕಾಗುತ್ತದೆಯೆಂದು ನಿರ್ಧರಿಸಿದೆ. ಕುಡಿಯುವ ನೀರು ರೋಗಾಣು, ರಾಸಾಯನಿಕಗಳಿಂದ ಮುಕ್ತವಾಗಿದ್ದು ಕುಡಿಯಲು ಸುರಕ್ಷಿತವಾಗಿರಬೇಕು ಮತ್ತು ನೀರು ಪೂರೈಸುತ್ತಿರುವ ನೀರಿನ ಮೂಲಗಳು ವಾಸಸ್ಥಳಗಳಿಂದ ಸುಮಾರು ೫೦೦ ಮೀಟರ್ ದೂರದ ಒಳಗಿರಬೇಕೆಂದು ಗೊತ್ತು ಪಡಿಸಿತು.

ಗ್ರಾಮೀಣ ಪ್ರದೇಶಗಳ ಜನರಿಗೆ ಕನಿಷ್ಟ ಅಗತ್ಯ ಮೂಲ ಸೇವೆಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ೧೯೯೬ರಲ್ಲಿ ನಡೆದ ಮುಖ್ಯ ಮಂತ್ರಿಗಳ ಸಮ್ಮೇಳನದಲ್ಲಿ ಕುಡಿಯುವ ನೀರು ಪೂರೈಕೆಯು ಅತ್ಯಗತ್ಯವೆಂದು ಸದ್ಯದಲ್ಲಿ ತಲಾವಾರು ೪೦ ಲೀಟರ್ ನೀರಿನ ಪ್ರಮಾಣವನ್ನು ೫೫ ಲೀಟರ್‌ಗೆ ಹೆಚ್ಚಿಸಲಾಯಿತು. ಕೇಂದ್ರ ಸರ್ಕಾರದ ಶರತ್ತಿನ ಅನುಸಾರವೇ ರಾಷ್ಟ್ರೀಯ ಕುಡಿಯುವ ನೀರು ಪೂರೈಕೆ ಮಾನಕವು ನಿಗದಿ ಪಡಿಸಿರುವ ಪ್ರತಿ ವ್ಯಕ್ತಿಗೆ ದಿನಕ್ಕೆ ತಲಾವಾರು ೪೦ ಲೀಟರ್ ನೀರು ಪೂರೈಕೆಯ ನಂತರವೇ, ರಾಜ್ಯವು ೨೦೦೫ರ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ತಲಾವಾರು ೫೫ ಲೀಟರ್ ಕುಡಿಯುವ ನೀರು ಪೂರೈಸುವ ಗುರಿ ಹೊಂದಿದೆ. (ಮಾನವ ಅಭಿವೃದ್ಧಿ ವರದಿ ಕರ್ನಾಟಕ ೧೯೯೯) ಈ ಗುರಿ ಸಾಧನೆಗಾಗಿ ಕುಡಿಯುವ ನೀರು ಪೂರೈಕೆಯಲ್ಲಿ ಕೆಲವು ಮಾನದಂಡ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ೩೫೦-೫೦೦ ಜನರಿರುವ ವಾಸ್ತವ್ಯಗಳಿಗೆ ಪ್ರತಿ ೧೦೦ ಜನರಿಗೆ ಒಂದರಂತೆ ಕೈಪಂಪು ಕೊಳವೆ ಬಾವಿಗಳು, ೫೦೦-೧೦೦೦ ಜನಸಂಖ್ಯೆ ಇರುವ ವಾಸ್ತವ್ಯಗಳಿಗೆ ಕಿರು ನೀರು ಘಟಕಗಳು ಹಾಗೂ ೧೦೦೦ ದಿಂದ ೧೦೦೦೦ ಜನ ಸಂಖ್ಯೆಗಳಿರುವ ವಾಸ್ತವ್ಯಗಳಿಗೆ ನಲ್ಲಿ ಜಾಲದ ಮೂಲದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಸಡಿಲಿಕೆ ನೀಡಲಾಗಿದೆ.

ಗ್ರಾಮೀಣ ಪ್ರದೇಶದ ಶೇ. ೯೭ರಷ್ಟು ಜನತೆ ಕುಡಿಯುವ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ಕೊಳವೆ ಬಾವಿಗಳನ್ನು ಕೊರೆದು ಅವುಗಳಿಗೆ ಕೈಪಂಪು, ವಿದ್ಯುತ್ ಮೋಟರ್‌ಗಳನ್ನು ಅಳವಡಿಸಿ ಆಳದಿಂದ ಸೆಲೆಯಲ್ಪಡುವ ಅಂತರ್ಜಲದಿಂದ ಪೂರೈಸಲಾಗುತ್ತಿದೆ.

ಕೈಪಂಪು ಕೊಳವೆ ಬಾವಿಗಳಲ್ಲಿ ಕೈಪಂಪನ್ನು ಒತ್ತುವುದರಿಂದ ಮೇಲೆರಿದ ನೀರನ್ನು ಜನರು ನೇರವಾಗಿ ಪಡೆದುಕೊಳ್ಳುತ್ತಾರೆ. ಕಿರು ನೀರು ಘಟಕಗಳಿಗೆ ನಾಲ್ಕು ಕಡೆ ನಲ್ಲಿಗಳನ್ನು ಅಳವಡಿಸಲಾಗಿರುತ್ತದೆ. ವಿದ್ಯುತ್ ಮೋಟಾರ್ ನೆರವಿನಿಂದ ಮೇಲಕ್ಕೆತ್ತಿದ ಅಂತರ್ಜಲವನ್ನು ಒವರ್ ಟ್ಯಾಂಕುಗಳಲ್ಲಿ ಸಂಗ್ರಹಿಸಿ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ದೊಡ್ಡ ದೊಡ್ಡ ಅನೇಕ ಗ್ರಾಮಗಳಲ್ಲಿ ಕೊಳವೆ ಬಾವಿ, ಕಿರುನೀರು ಘಟಕ ಹಾಗೂ ನಲ್ಲಿ ನೀರಿನ ಮೂಲದ ಜಾಲಗಳನ್ನು ಒಟ್ಟಿಗೆ ಕಾಣಬಹುದಾಗಿದೆ. ಕಿರುನೀರು ಘಟಕ ಹಾಗೂ ನಲ್ಲಿ ನೀರಿನ ಮೂಲಗಳಿದ್ದರೂ ಆಗಾಗ ವಿದ್ಯುತ್ ಕೈಕೊಟ್ಟಾಗ ಮಾತ್ರ ಕೈಪಂಪು ಕೊಳವೆ ಬಾವಿಗಳು ಬಳಕೆಯಾಗುತ್ತಿವೆ.

ಪ್ರಸ್ತುತ ಕುಡಿಯುವ ನೀರು ಪೂರೈಕೆ ಪ್ರಮಾಣ

ರಾಜ್ಯವುಗ್ರಾಮೀಣ ಜನತೆಗೆ ಕುಡಿಯುವ ನೀರು ಪೂರೈಸಲು ೧೯೯೧-೨೦೦೧ವರೆಗೆ (೮೦ರ ದಶಕಗಳ ಯೋಜನೆಗಳನ್ನು ಒಳಗೊಂಡಂತೆ) ೧೩೯೮.೭೬ ಕೋಟಿ ರೂ. ವೆಚ್ಚದಲ್ಲಿ ೧.೭೧ ಲಕ್ಷ ಕೈಪಂಪು ಕೊಳವೆ ಬಾವಿಗಳು, ೧೭,೦೨೨ ಕಿರು ನೀರು ಘಟಕಗಳು ಹಾಗೂ ೧೧,೦೮೫ ನಲ್ಲಿ ನೀರು ಸರಬರಾಜುಗಳ ಮೂಲಗಳನ್ನು ನಿರ್ಮಿಸಲಾಗಿದೆ. ಕನಿಷ್ಟ ಅಗತ್ಯ ಸೇವೆಗಳ ಕಾರ್ಯಕ್ರಮದಡಿ ೧೩,೯೮.೭೬ ಕೋಟಿ ರೂ. ವೆಚ್ಚದಲ್ಲಿ ತ್ವರಿತ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳ ಜೊತೆಗೆ ವಿದೇಶಗಳ ಧನ ಸಹಾಯದೊಂದಿಗೆ ನಾಲ್ಕು ಬಹುದೊಡ್ಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ವಿಶ್ವಬ್ಯಾಂಕಿನ ೫೧೫.೦೬ ಕೋಟಿ ರೂ. ಧನಸಹಾಯದೊಂದಿಗೆ ಸಮಗ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ ಹದಿನಾರು ಜಿಲ್ಲೆಗಳಿಂದ ಒಟ್ಟು ೧,೧೦೪ ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೆದರ್‌ಲ್ಯಾಂಡ್ ಸಹಯೋಗದೊಂದಿಗೆ ೮೨.೫೬ ಕೋಟಿ ರೂ. ವೆಚ್ಚದಲ್ಲಿ ಉತ್ತರ ಕರ್ನಾಟಕದ (ಬೆಳಗಾಂ ವಲಯ) ಐದು ಜಿಲ್ಲೆಗಳಿಂದ ೨೦೧ ಗ್ರಾಮಗಳಲ್ಲಿ ಕಾರ್ಯಗತಗೊಳಿಸಲಾಗಿದೆ.

ಡ್ಯಾನಿಡಾ ಸಹಕಾರದೊಂದಿಗೆ ೭೭.೦೫ ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಜಿಲ್ಲೆಗಳಿಂದ ೧೨೧೮ ಹಳ್ಳಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ೧೦೩೫.೩೭ ಕೋಟಿ ರೂ. ವೆಚ್ಚದಲ್ಲಿ ಜಲನಿರ್ಮಲ ಯೋಜನೆಯಡಿ ೧೧ ಜಿಲ್ಲೆಗಳಿಂದ ೨೦೦೧ ಹಳ್ಳಿಗಳಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ. (ಹೈ ಪವರ್ ಕಮಿಟಿ ವರದಿ ೨೦೦೧) ರಾಜ್ಯದಲ್ಲಿ ಇದುವರೆಗೆ ೪೧,೦೮೧ (೭೫%) ವಾಸ್ತವ್ಯಗಳಲ್ಲಿ ತಲಾವಾರು ೪೦ ಲೀಟರ್‌ಗಿಂತಲೂ ಹೆಚ್ಚಿನ ಕುಡಿಯುವ ನೀರು ಪೂರೈಸಲಾಗುತ್ತಿದೆ. (ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವರದಿ) ಆರ್ಥಿಕ ಮತ್ತು ಸಾಂಖಿಕ ಇಲಾಖೆಯ ಅಧ್ಯಯನ ವರದಿಯಂತೆ (೨೦೦೧) ರಾಜ್ಯದಲ್ಲಿ ಶೇ. ೬೨ರಷ್ಟು ಗ್ರಾಮೀಣ ವಾಸ್ತವ್ಯಗಳಲ್ಲಿ ತಲಾವಾರು ೪೦ ಲೀಟರ್‌ಗಿಂತಲೂ ಕಡಿಮೆ ಪ್ರಮಾಣದ ನೀರು ಪಡೆಯುತ್ತಿದ್ದು ಇನ್ನೂ ಶೇ. ೪೩ ರಷ್ಟು ವಾಸ್ತವ್ಯಗಳು ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತ್ತಿರುವುದು ಕಂಡುಬಂದಿದೆ.

ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶಗಳ ಜನತೆಗೆ ಕುಡಿಯುವ ನೀರು ಪೂರೈಸಲು ಹಲವಾರು ಯೋಜನೆ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದರೂ ನಿಗದಿತ ಪ್ರಮಾಣದ ಸುರಕ್ಷಿತ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯತ್ ಸರಬರಾಜಿನ ಕೊರತೆ, ಕುಡಿಯುವ ನೀರು ಪೂರೈಕೆಯಲ್ಲಿ ಕಡಿಮೆ ಗುಣಮಟ್ಟ ಯೋಜನೆ, ಕುಡಿಯುವ ನೀರು ಪೂರೈಕೆಯ ಗ್ರಾಮ ಪಂಚಾಯ್ತಿಗಳ ಕಳಪೆ ನಿರ್ವಹಣೆ, ಪರಿಕರಗಳ ದುರಸ್ತಿ ಕಾರ್ಯದ ವಿಳಂಬ, ಅಂತರ್ಜಲ ಬತ್ತುವಿಕೆ, ವಿದ್ಯುತ್ ಕೊರತೆ ಮುಂತಾದ ಹಲವಾರು ಸಮಸ್ಯೆಗಳು ಒಗ್ಗೂಡಿ ಗ್ರಾಮೀಣ ಕುಡಿಯುವ ನೀರು ಪೂರೈಕೆಯಲ್ಲಿ ಅಡೆ ತಡೆಗಳು ಉಂಟು ಮಾಡುತ್ತಿವೆ.

ಕುಡಿಯುವ ನೀರು ಪೂರೈಕೆಯ ಕಾರ್ಯನಿರ್ವಹಣೆ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಪಾಸಣೆ ನಡೆಸಿದಾಗ ಶೇ. ೨೧ ರಷ್ಟು ಕೈಪಂಪು ಕೊಳವೆ ಬಾವಿಗಳು ಶೇ. ೭ ರಷ್ಟು ಕಿರು ನೀರು ಘಟಕಗಳು ಹಾಗೂ ಶೇ. ೬ ರಷ್ಟು ನಲ್ಲಿ ನೀರು ಸರಬರಾಜಿನ ಮೂಲಗಳು ಕಾರ್ಯನಿರ್ವಹಿಸದೇ ಇರುವುದು ಕಂಡುಬಂದಿದೆ.

ಹೈಪವರ್ ಸಮಿತಿಯ ಸರ್ವೆ ಮಾದರಿಯ ಅಧ್ಯಯನ ವರದಿಯಂತೆ (೨೦೦೧) ಶೇ. ೧೩ ರಷ್ಟು ಕೈಪಂಪು ಕೊಳವೆ ಬಾವಿಗಳು ಶೇ. ೧೯ ರಷ್ಟು ಕಿರುನೀರು ಘಟಕಗಳು ಹಾಗೂ ಶೇ. ೧೫ರಷ್ಟು ನಲ್ಲಿ ನೀರಿನ ಮೂಲಗಳು ದುರಸ್ತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸುತ್ತಿರುವ ನೀರಿನ ಮೂಲಗಳ ಚಿತ್ರಣ ನೋಡಿದಾಗ ವಾಸ್ತವದಲ್ಲಿ ಕೈಪಂಪು ಕೊಳವೆ ಬಾವಿಗಳು ಹೆಚ್ಚು ದುರಸ್ಥಿಗೆ ಒಳಗಾಗುತ್ತಿರುವುದು ಕಂಡುಬರುತ್ತದೆ. ಕಿರುನೀರು ಘಟಕ ಹಾಗೂ ನಲ್ಲಿ ನೀರಿನ ಮೂಲಗಳ ರಿಪೇರಿಗೆ ಆದ್ಯತೆ ನೀಡಿದಷ್ಟು ಕೈಪಂಪು ಕೊಳವೆ ಬಾವಿಗಳ ದುರಸ್ತಿ ಕಾರ್ಯಕ್ಕೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಹೆಚ್ಚು ಕೈಪಂಪು ಕೊಳವೆ ಬಾವಿಗಳೂ ಕಾರ್ಯನಿರ್ವಹಿಸುತ್ತಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸುತ್ತಿರುವ ನೀರಿನ ಮೂಲಗಳ ಪರಿಕರಗಳ ದುರಸ್ಥಿಯನ್ನು ಜಿಲ್ಲಾವಾರು ಗಮನಿಸಿದಾಗ ಧಾರವಾಡ (೫೯%) ಹಾವೇರಿ (೪೩%) ಗದಗ (೪೦%) ದಾವಣಗೆರೆ (೩೯%) ರಾಯಚೂರು (೩೩%) ಬೆಂಗಳೂರು (೩೦%) ಉಳಿದ ಜಿಲ್ಲೆಗಳಲ್ಲಿ ಶೇ. ೩೦ಕ್ಕಿಂತ ಹೆಚ್ಚು ಕೈಪಂಪು ಕೊಳವೆ ಬಾವಿಗಳು ದುರಸ್ಥಿಯಲ್ಲಿರುವುದನ್ನು ಕಾಣಬಹುದು.

ಇನ್ನೂ ನಲ್ಲಿ ನೀರಿನ ಮೂಲಗಳಿಗೆ ಸಂಬಂಧಿಸಿದಂತೆ ಬಳ್ಳಾರಿ (೨೫%) ಕೊಪ್ಪಳ, ಚಾಮರಾಜಪೇಟೆ, ಬೆಳಗಾಂ, ಬೀದರ್ ಜಿಲ್ಲೆಗಳಲ್ಲಿ ತಲಾ ಶೇ. ೧೦ ರಷ್ಟು ನಲ್ಲಿ ನೀರಿನ ಮೂಲಗಳು ಕಾರ್ಯನಿರ್ವಹಿಸುತ್ತಿಲ್ಲ. (ಹೈಪವರ್ ಸಮಿತಿಯ ವರದಿ ೨೦೧) ಕರ್ನಾಟಕ ಸರ್ಕಾರವು ಕುಡಿಯುವ ನೀರು ನಿರ್ವಹಣೆಯಲ್ಲಿನ ರಿಪೇರಿ ಕೆಲಸಗಳೆಂದು ಪ್ರತಿ ಗ್ರಾಮ ಪಂಚಾಯ್ತಿಗೂ ಪ್ರತಿ ನೀರಿನ ಮೂಲಗಳಿಗೆ ನಲ್ಲಿ ನೀರಿನ ಮೂಲ -೮೦೦೦, ಕಿರು ನೀರು ಘಟಕ -೩೫೦೦ ಹಾಗೂ ಕೈಪಂಪು ಕೊಳವೆ ಬಾವಿಗೆ – ೬೦೦ ರೂ.ಗಳನ್ನು ನೀಡುತ್ತಿದೆ. ಆದಾಗ್ಯೂ ಪಂಚಾಯ್ತಿಗಳ ನಿರ್ಲಕ್ಷ್ಯದ ಜೊತೆಗೆ ವಿದ್ಯುತ್ ಕೊರತೆ, ಅಂತರ್ಜಲದ ಬತ್ತುವಿಕೆಯಿಂದಾಗಿ ನಿಗದಿತ ಪ್ರಮಾಣದ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ.

ಅಂತರ್ಜಲ ಮೂಲದ ಸಂರಕ್ಷಣೆ

ಅಂತರ್ಜಲವನ್ನು ಕುಡಿಯುವ ನೀರಿಗಾಗಿ ಬಳಸುವುದು ಭಾರತದಲ್ಲಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ತೆರೆದ ಬಾವಿಗಳ ನಿರ್ಮಾಣದ ಇತಿಹಾಸ ವೇದಗಳಷ್ಟು ಪ್ರಾಚೀನವಾದದ್ದು. ಅಂದಿನಿಂದ ಇಂದಿನವರೆಗೂ ತೆರೆದ ಬಾವಿಗಳ ಮೂಲಕ ನೆಲದೊಳಗಿನ ನೀರಿನ ಉಪಯೋಗ ಮುಂದುವರಿಯುತ್ತಲೆ ಇದೆ. ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಕುಡಿಯುವ ನೀರು ಮತ್ತು ಆಹಾರ ಉತ್ಪಾದನೆಯಲ್ಲಿ ಅಂತರ್ಜಲವು ಅತಿ ಮುಖ್ಯ ಆಧಾರವಾಗಿದ್ದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಅಂತರ್ಜಲ ಅಂದಾಜು ಸಮಿತಿಯ ಪ್ರಕಾರ ಕರ್ನಾಟಕದಲ್ಲಿ ಪುನರುಜ್ಜಿವಿಸಬಲ್ಲ ಅಂತರ್ಜಲ ಸಂಪನ್ಮೂಲ ಪ್ರಮಾಣ ೧೬೧೮೬.೯೪ ಲಕ್ಷ ಹೆಕ್ಟೇರ್ ಮೀಟರ್‌ಗಳು. ಕುಡಿಯುವ ನೀರು ಕೈಗಾರಿಕೆ ಮತ್ತು ಮತ್ತಿತರ ಉದ್ದೇಶಗಳಿಗೆ ನಿಗದಿ ಮಾಡಿರುವ ನೀರಿನ ಪ್ರಮಾಣ ೨೪೨೭.೮೦ ಹೆಕ್ಟೇರ್ ಮೀಟರ್‌ಗಳು, ನೀರಾವರಿಗಾಗಿ ಬಳಕೆಯಾಗಬಲ್ಲ ನೀರಿನ ಪ್ರಮಾಣ ೩,೬೯೫.೦೦ ಹೆಕ್ಟೇರ್ ಮೀಟರ್‌ನಷ್ಟು. ಬಳಕೆಯಾಗದೆ ಇನ್ನೂ ಬಾಕಿ ಉಳಿದಿರುವ ನೀರಿನ ಪ್ರಮಾಣ ೧೦೦೬೪.೧೪ ಹೆಕ್ಟೇರ್ ಮೀಟರ್‌ಗಳಷ್ಟಿವೆ.

ರಾಜ್ಯದಲ್ಲಿ ಅಂತರ್ಜಲ ರೂಢಿಸಿಕೊಂಡಿರುವ ಮಟ್ಟ ಶೇ. ೨೬.೮೫ರಷ್ಟಿದೆ. (ಅಂದಾಜು ೧೯೯೦) ವೈಜ್ಞಾನಿಕವಲ್ಲದ ಹಾಗೂ ಒಂದು ವಿಧಾನಕ್ಕೆ ಒಳಪಡದ ರೀತಿಯಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಸುವುದರಿಂದ ನೀರಿನ ಮಟ್ಟ ಕಡಿಮೆಯಾಗುತ್ತದೆ. ಬಾವಿ/ ಕೊಳವೆ ಬಾವಿಗಳಲ್ಲಿ ನೀರು ದೊರೆಯದೆ ಅವು ನೀರು ಪೂರೈಸುವಲ್ಲಿ ವಿಫಲವಾಗುತ್ತದೆ. ನೀರು ಪಡೆಯುವ ಸಲುವಾಗಿ ಬಾವಿಯ ಆಳವನ್ನು ಹೆಚ್ಚಿಸಬೇಕಾಗುತ್ತದೆ. ಅಂತರ್ಜಲ ನೀರಿನ ಮೂಲಗಳು ವಾಸ್ತವ್ಯಗಳಿಗೆ ಹತ್ತಿರದಲ್ಲಿ ದೊರೆಯುವುದಿಲ್ಲ. ಕೆಲವೆಡೆ ಅಂತರ್ಜಲ ಸಿಕ್ಕಿದರೂ ಕುಡಿಯಲು ಸುರಕ್ಷಿತವಲ್ಲ. ಸುರಕ್ಷಿತ ನೀರು ದೊರೆತರೆ ಸಾಕಷ್ಟು ಇಳುವರಿ ಇರುವುದಿಲ್ಲ. ಅಂತರ್ಜಲ ಬತ್ತಿ ಹೋಗುವುದು ಮುಂತಾದ ಸಮಸ್ಯೆಗಳಿಗೆ ಒಳಗಾದ ಜನರು ಬದಲಿ ಮತ್ತೊಂದು ನೀರಿನ ಮೂಲದ ಅನುಷ್ಠಾನಕ್ಕೆ ಒತ್ತಾಯಿಸುತ್ತಾರೆ.

ಕೃಷಿ ನೀರಾವರಿಗೆಂದು ಬೋರ್‌ವೇಲ್‌ಗಳನ್ನು ಕೊರೆಯುವುದರಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸುಮಾರು ೨೧ ತಾಲ್ಲೂಕುಗಳಲ್ಲಿ ಶೇ. ೮೫ ರಷ್ಟು ಅಂತರ್ಜಲದ ಬಳಕೆಯಾಗಿದೆ ಇನ್ನೂ ೨೨ ತಾಲ್ಲೂಕುಗಳಲ್ಲಿ ಶೇ. ೬೫ರಷ್ಟು ಅಂತರ್ಜಲ ಬಳಕೆಯಾಗಿರುವುದು ಕಂಡುಬಂದಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ಅಂತರ್ಜಲದ ಬಳಕೆಯಾಗಿರುವುದನ್ನು ಕಾಣಬಹುದು. ಕುಡಿಯುವ ನೀರಿನ ಹೆಚ್ಚು ಕೊರತೆ ಇರುವ ಹಳ್ಳಿಗಳಿಗೆ ನದಿ ನೀರು ಸರಬರಾಜು ಮಾಡಬೇಕೆಂದು ಸಾರ್ವಜನಿಕ ಇಂಜಿನಿಯರಿಂಗ್ ಇಲಾಖೆ ವರದಿ ಮಾಡಿದೆ.

ಕುಡಿಯುವ ನೀರಿನ ಗುಣಮಟ್ಟ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪೂರೈಸುತ್ತಿರುವ ಅಂತರ್ಜಲವು ಸಾಮಾನ್ಯವಾಗಿ ರೋಗಾಣು ಮತ್ತು ರಸಾಯನಿಕಗಳಿಂದ ಮುಕ್ತವಾಗಿದ್ದು ಕುಡಿಯಲು ಸುರಕ್ಷಿತವಾಗಿದೆ ಎಂದು ನಂಬಲಾಗಿತ್ತು. ಆದರೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂತರ್ಜಲವೂ ಸಹ ಅತ್ಯಧಿಕ ಪ್ರಮಾಣದ ರಸಾಯನಿಕಗಳಿಂದ ಕೂಡಿರುವುದು ಕಂಡುಬಂದಿದೆ.

ಖಾಸಗಿ ಸಂಸ್ಥೆಗಳ ಮೂಲಕ ಗ್ರಾಮೀಣ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಸಲಾಗಿದ್ದು ೧೫೦ ತಾಲ್ಲೂಕುಗಳಲ್ಲಿ ೧೬,೨೧೬ ಗ್ರಾಮಗಳು ಗುಣಮಟ್ಟದ ಸಮಸ್ಯೆ ಎದುರಿಸುತ್ತಿವೆ. ೪,೨೯೧ ಗ್ರಾಮಗಳಲ್ಲಿ ಅಧಿಕ ಪ್ಲೋರೈಡ್, ೨,೭೬೨ ಹಳ್ಳಿಗಳಲ್ಲಿ ಅಧಿಕ ಲವಣಾಂಶ ೪,೩೩೫ ಗ್ರಾಮಗಳಲ್ಲಿ ಅಧಿಕ ನೈಟ್ರಿಟ್ ಮತ್ತು ೪,೮೩೭ ಗ್ರಾಮಗಳಲ್ಲಿ ಅಧಿಕ ಕಬ್ಬಿಣದ ಸಮಸ್ಯೆ ಕಂಡು ಬಂದಿದೆ. (ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಾರ್ಷಿಕ ವರದಿ ೨೦೦೧)
ಇತ್ತೀಚಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ೧೯೯೯-೨೦೦೧ರಲ್ಲಿ ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಪರೀಕ್ಷೆಗಾಗಿ ರಾಜ್ಯಾದ್ಯಂತ ಎರಡು ಲಕ್ಷ ಸಾರ್ವಜನಿಕ ನೀರಿನ ಮೂಲಗಳನ್ನು ಆಯ್ಕೆ ಮಾಡಿಕೊಂಡು ಪರೀಕ್ಷಿಸಿದಾಗ ಸುಮಾರು ೨೦,೯೨೯ ವಾಸ್ತವ್ಯಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂದಿದೆ. ಇವುಗಳಲ್ಲಿ ೫೮೨೨ ಹಳ್ಳಿಗಳು ಅಧಿಕ ಪ್ಲೋರೈಡ್, ೬,೬೨೯ ಹಳ್ಳಿಗಳು ಅಧಿಕ ಕಬ್ಬಿಣಾಂಶ, ೪೦೭೭ ಗ್ರಾಮಗಳು ಅಧಿಕ ನೈಟ್ರೆಟ್ ಹಾಗೂ ೪,೪೦೧ ಹಳ್ಳಗಳು ಅಧಿಕ ಉಪ್ಪಿನಾಂಶ ಸಮಸ್ಯೆಗಳನ್ನು ಎದುರಿಸುತ್ತಿವೆ.

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಅನುದಾನ ಹಾಗೂ ವಿದೇಶಿ ನೆರವಿನ ಯೋಜನೆಯಡಿ ೧೮ ಜಿಲ್ಲಾ ಮಟ್ಟದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ೭ ಪ್ರಯೋಗಾಲಯಗಳು ಸಿಬ್ಬಂದಿಗಲಳಿಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ.

ಗ್ರಾಮೀಣ ನೈರ್ಮಲ್ಯ

ನೀರು ಜೀವ ಸೆಲೆಯಾದರೆ ನೈರ್ಮಲ್ಯ ಬದುಕಿನ ಮಾರ್ಗವಾಗಿದೆ. ನೈರ್ಮಲ್ಯವು ಗ್ರಾಮೀಣ ಪ್ರದೇಶಗಳ ಆರ್ಥಿಕ ಸಾಮಾಜಿಕ ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಶುಚಿತ್ವವು ವ್ಯಕ್ತಿಯ ಆರೋಗ್ಯ ಹಾಗೂ ಉತ್ತಮ ಜೀವನ ನಡೆಸುವಲ್ಲಿ ಪ್ರಮುಖ ಅಂಶವಾಗಿದೆ. ಅಲ್ಲದೆ ಮಾನವ ಅಭಿವೃದ್ಧಿ ನಿರ್ಧರಿಸುವ ನಿರ್ಣಾಯಕ ಮಾನದಂಡವಾಗಿದೆ.

ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಕಾರ್ಯತಂತ್ರ ರೂಪಿಸುವಲ್ಲಿ ನೈರ್ಮಲ್ಯ ಕಾರ್ಯಕ್ರಮವನ್ನು ಅಭಿವೃದ್ಧಿ ಯೋಜನೆಯ ಒಂದು ಅಂಗವಾಗಿ ಕಾರ್ಯರೂಪಕ್ಕೆ ತರುತ್ತಿರುವುದು ಇತ್ತೀಚಿನ ಅತಿಶಯೋಕ್ತಿಯಾಗಿದೆ. ನೈರ್ಮಲ್ಯ ಕಾರ್ಯಕ್ರಮಗಳ ಅನುಷ್ಠಾನದ ಆರಂಭದಲ್ಲಿ ಚರಂಡಿ ಹಾಗೂ ಸಮುದಾಯದ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿತ್ತು.

ಗ್ರಾಮ ಪಂಚಾಯ್ತಿ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಳಿಗಳು ಶೌಚಾಲಯ ನಿರ್ಮಾಣಗಳ ಉಸ್ತುವಾರಿ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದವು. ಹಣದ ಕೊರತೆ ಮತ್ತಿತರ ಸಮಸ್ಯೆಗಳಿಂದ ಅವುಗಳ ಸಾಧನೆ ಅತ್ಯಂತ ವಿರಳ. ಹೀಗಾಗಿ ಕೇಂದ್ರ ನೈರ್ಮಲ್ಯ ಕಾರ್ಯಕ್ರಮಗಳಡಿಯಲ್ಲಿ ರಾಜ್ಯದಲ್ಲಿ ಶೇ. ೬.೯ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯಗಳ ಸೌಲಭ್ಯ ಒದಗಿಸಲು ಸಾಧ್ಯವಾಯಿತು.

ಶೌಚಾಲಯ ಸೌಲಬ್ಯ ಪಡೆಯುವಲ್ಲಿ ರಾಜ್ಯದಲ್ಲಿ ಏಕರೂಪತೆಯಿಲ್ಲ. ಜಿಲ್ಲೆ ಜಿಲ್ಲೆಗಳ ಮಧ್ಯೆ ವ್ಯತ್ಯಾಸಗಳನ್ನು ಕಾಣಬಹುದು. ಕೊಡಗು (೨೪.೯%), ದಕ್ಷಿಣ ಕನ್ನಡ (೨೦.೧೨%), ಬೆಂಗಳೂರು ಗ್ರಾಮಾಂತರ (೧೮.೮೨%), ಚಿಕ್ಕಮಗಳೂರು (೧೪.೩೪%), ಉತ್ತರ ಕನ್ನಡ (೧೧.೯೨%), ಶಿವಮೊಗ್ಗ (೧೦.೦೭%) ಜಿಲ್ಲೆಗಳಲ್ಲಿ ರಾಜ್ಯ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ಶೌಚಾಲಯ ಸೌಲಭ್ಯ ಪಡೆಯುತ್ತಿವೆ.

ಬಿಜಾಪುರ (೧.೩೪%), ರಾಯಚೂರು (೧.೯೨%), ಗುಲ್ಬರ್ಗಾ (೨.೧೭%) ಹಾಗೂ ಬೀದರ್ (೨.೬೬%) ಜಿಲ್ಲೆಗಳು ಅತಿ ಕಡಿಮೆ ಪ್ರಮಾಣದ ಶೌಚಾಲಯ ಸೌಲಭ್ಯ ಪಡೆಯುತ್ತಿದೆ.

ಕೇಂದ್ರ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮ (ಸಿ,ಆರ್.ಎಸ್.ಪಿ)

ಭಾರತ ಸರಕಾರವು ೧೯೮೫-೮೬ರಲ್ಲಿ ಕೇಂದ್ರ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮವನ್ನು ಒಂದು ನಿರ್ದಿಷ್ಟ ವಿಧಾನದ ಮೂಲಕ ಕಾರ್ಯರೂಪಕ್ಕೆ ತರಲಾಯಿತು. ಶೌಚಾಲಯ ನಿರ್ಮಿಸುವಲ್ಲಿ ಎರಡು ಗುಂಡಿಗಳ ಪಾಯದ ಆಧಾರದ ಮೇಲೆ Pour Flush ಮಾದರಿಯ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಯಿತು. ಬಡತನ ರೇಖೆಗಿಂತ ಕೆಳಗಿರುವ ಕಡುಂಬಗಳಿಗೆ ಹಾಗೂ ಸಮುದಾಯ ಮಹಿಳಾ ಶೌಚಾಲಯ ನಿರ್ಮಾಣದಲ್ಲಿ ಶೇ. ೪೦ರಷ್ಟು ಸಹಾಯಧನ ಒದಗಿಸಲಾಗುತ್ತದೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳು ಸಿ.ಆರ್.ಎಸ್.ಪಿ. ಕಾರ್ಯಚರಣೆ ತರುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಆರ್ಥಿಕ ಸಹಾಯ ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡುವುದರ ಜೊತೆಗೆ ಕುಟುಂಬಗಳ ಬೇಡಿಕೆ ತಕ್ಕಂತೆ ಶೌಚಾಲಯ ಸೌಲಭ್ಯಗಳನ್ನು ಒದಗಿಸುತ್ತೆವೆಂದು ತಿಳಿದಿದ್ದರೂ ಕೇಂದ್ರಸರಕಾರ ನೀಡುತ್ತಿರುವ ಧನ ಸಹಾಯವು ಜನರ ಬೇಡಿಕೆಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು. ಇಷ್ಟಾದರೂ ಸಿ.ಆರ್.ಎಸ್.ಪಿ. ಯೋಜನೆಯಡಿ ೧೯೮೫-೯೦ ರಿಂದ ೧೯೯೪ರ ನಡುವೆ ೧.೧೯ ಲಕ್ಷ ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಒದಗಿಸಲಾಗಿದೆ.

ನಿರ್ಮಲ ಗ್ರಾಮ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ರಾಜ್ಯವು ಸರಕಾರೇತರ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಹಕಾರದಿಂದ ೧೯೯೫-೯೬ರಲ್ಲಿ ನಿರ್ಮಲ ಗ್ರಾಮ ಯೋಜನೆ ಪ್ರಾರಂಭಿಸಿತು.

ಪ್ರತಿವರ್ಷ ೫ ಲಕ್ಷ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯತಿಯು ವರ್ಷಕ್ಕೆ ೧೦೦ ಕುಟುಂಬಗಳಿಗೆ ಶೌಚಾಲಯ ಒದಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಬಡತನ ರೇಖೆ ಕೆಳಗಿರುವ ಕುಟುಂಬಗಳಿಗೆ ತಲಾ ರೂ ೨೦೦೦ ಹಾಗೂ ಬಡತನ ರೇಖೆ ಮೇಲಿರುವ ಕುಟುಂಬಗಳಿಗೆ ೧೫೦೦ರೂ. ನಗದು ಸಹಾಯಧನ ನೀಡಲಾಗುತ್ತಿದೆ. ಈ ಕಾರ್ಯಕ್ರಮ ಆರಂಭವಾದಾಗಿನಿಂದ ೧೯೯೦-೨೦೦೦ ವರೆಗೆ ೯,೧೭೦.೭೧ ಲಕ್ಷ ರೂ. ವೆಚ್ಚದಲ್ಲಿ ೭೫,೩೪೬೪ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈಗ ಅನುಷ್ಠಾನಗೊಳಿಸಲಾಗುತ್ತಿರುವ ಕಾರ್ಯಕ್ರಮಗಳ ಜೊತೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಸಮಗ್ರ ಪರಿಸರ ನೈರ್ಮಲ್ಯ ಯೋಜನೆಯಡಿ ೧೯೯೩-೨೦೦೦ ನಡುವೆ ೮೯,೦೦೦ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಸ್ವಚ್ಛಗ್ರಾಮ ಯೋಜನೆ

ಗ್ರಾಮಗಳ ಸಂಪೂರ್ಣ ನೈರ್ಮಲೀಕರಣಕ್ಕಾಗಿ ಪಂಚ ಸೂತ್ರಗಳನ್ನು ಒಳಗೊಂಡ ಸ್ವಚ್ಛ ಗ್ರಾಮ ಯೋಜನೆಯನ್ನು ರಾಜ್ಯ ಸರಕಾರ ೧೦೦೦ ಗ್ರಾಮಗಳಲ್ಲಿ ೨,೦೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಹುಡ್ಕೊ ನೆರವಿನೊಂದಿಗೆ ಅನುಷ್ಠಾನಗೊಳಿಸಲು ಉದ್ದೇಶಿಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕ ಭೂಸೇನೆ ನಿಗಮವನ್ನು ಕೇಂದ್ರ ಸಂಸ್ಥೆಯಾಗಿ ನೇಮಿಸಲಾಗಿದೆ. ಈ ಯೋಜನೆಯಡಿ ಗ್ರಾಮಗಳಲ್ಲಿ ಚರಂಡಿ ನಿರ್ಮಾಣ, ಮಳೆ ನೀರಿನ ವಿಲೇವಾರಿ, ವಾಸ್ತವ್ಯಗಳ ಹತ್ತಿರದ ತಿಪ್ಪೆಗುಂಡಿಗಳ ಸ್ಥಳಾಂತರ ಹೊಗೆರಹಿತ ಒಲೆ, ಶೌಚಾಲಯ ಈ ಎಲ್ಲಾ ಸೌಲಭ್ಯಗಳನ್ನು ಜನತೆಗೆ ಒದಗಿಸುವುದಾಗಿದೆ. ಗ್ರಾಮ ಪಂಚಾಯತಿಗಳ ಯೋಜನೆ ತಯಾರಿಕೆಯಲ್ಲಿ ಗ್ರಾಮಸ್ಥರ ಭಾಗವಹಿಸುವುದು ಮತ್ತು ಒಟ್ಟು ವೆಚ್ಚದ ಶೇ. ೧೦ ರಷ್ಟು ವಂತಿಕೆಯನ್ನು ನೀಡಬೇಕಾಗಿದೆ. ಗ್ರಾಮಕ್ಕೆ ಒದಗಿಸಲಾದ ಸೌಲಭ್ಯಗಳ ನಿರ್ವಹಣೆ ಗ್ರಾಮಸ್ಥರೇ ನೋಡಿಕೊಳ್ಳಬೇಕು. ಇದರ ಜೊತೆಗೆ ವಿದೇಶಿ ನೆರವಿನ ಧನ ಸಹಾಯದಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನೆದರ್‌ಲ್ಯಾಂಡ್ ನೆರವಿನೊಂದಿಗೆ ೨೦೧ ಗ್ರಾಮಗಳಿಗೆ ನೈರ್ಮಲ್ಯ ಸೌಲಭ್ಯ ಒದಗಿಸುವ ಗುರಿ ಹೋಂದಿದೆ.

ಡ್ಯಾನಿಡಾ ದೇಶದ ನೆರವಿನೊಂದಿಗೆ ೫೧.೦೦ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳ ಗ್ರಾಮೀಣ ಜನತೆಗೆ ೨೦೦೫-೦೬ ವೇಳೆಗೆ ಶೇ. ೫೦ ರಷ್ಟು ಸೌಲಭ್ಯ ಒದಗಿಸುವ ಗುರಿ ಹೊಂದಿದೆ.