ನಮ್ಮ ನಿತ್ಯ ಅತ್ಯಗತ್ಯವಾದ ನೀರನ್ನು ಪ್ರಕೃತಿಯ ವಿವಿಧ ಮೂಲಗಳಾದ ಕೆರೆ ಕಟ್ಟೆ ನದಿ ಜಲಾಶಯ ಮುಂತಾದವುಗಳಿಂದ ಪಡೆಯಲಾಗುತ್ತಿದೆ. ನೀರಿನ ಎಲ್ಲಾ ಮೂಲಗಳಿಗೂ ಮಳೆಯ ನೀರು ಪ್ರಾಥಮಿಕ ಮೂಲವಾಗಿದೆ. ಭೂಮಿಯ ಮೇಲ್ಮೈನ್ನು ೩/೪ರಷ್ಟು ನೀರು ಆವರಿಸಿದೆ. ಭೂಮಿಯ ಮೇಲಿನ ನೀರು ಆವಿಯಾಗಿ ಮೋಡವಾಗಿ ಮಳೆಯ ರೂಪದಲ್ಲಿ ಧರೆಗಿಳಿಯುತ್ತದೆ. ಮತ್ತೆ ಅದೇ ನೀರು ಆವಿಯಾಗುತ್ತದೆ. ಈ ಜಲ ಚಕ್ರವನ್ನು ಡಿ.ವಿ.ಜಿ.ಯವರು ಪುದಿರ ರಸವಾಸನೆಗಳೆಲ್ಲಾ, ಆವಿಯಾಗಿ ಮುಗಿಲಾಗಿ ಮಳೆಗೆರೆದು ಬಾವಿ (ಬೋರ್‌ವೆಲ್) ಗೂಟೆಯನಿತ್ತು ನರರೊಡಲ ಸೇರುವುದು ದೈವರಸ ತಂತ್ರವಿದು ಎಂದಿದ್ದಾರೆ. ಜಾಗತಿಕ ಸಂಪನ್ಮೂಲ ೪೧,೦೦೦ ಘನ ಕಿ.ಮೀ.ನಷ್ಟಿದೆ. (ವಿಶ್ವ ಅಭಿವೃದ್ಧಿ ವರದಿ ೧೯೯೨). ದೇಶದಲ್ಲಿ ವರ್ಷಕ್ಕೆ ಸರಾಸರಿ ೧೧೨ ಸೆ.ಮೀ. ಮಳೆಯಾಗುತ್ತದೆ. ಅನುಪಾತ ದ್ರವ ಅಂದರೆ ಮಳೆ, ಇಬ್ಬನಿ, ಹಿಮ ಮುಂತಾದ ರೂಪದಲ್ಲಿ ದ್ರವೀಭವಿಸಿದ ನೀರಿನ ಪ್ರಮಾಣ ಸುಮಾರು ೩೭,೦೦,೦೦೦ ದಶಲಕ್ಷ ಘನಮೀಟರ್‌ನಷ್ಟು.

ಒಟ್ಟು ವಾರ್ಷಿಕ ಅನುಪಾತದಲ್ಲಿ ಸುಮಾರು ೮,೦೦,೦೦೦ ದಶಲಕ್ಷ ಘನ ಮೀಟರ್‌ನಷ್ಟು ನೀರು ನೆಲದೊಳಗೆ ಇಂಗುತ್ತದೆ. ಸುಮಾರು ೧,೭೦,೦೦೦ ದಶಲಕ್ಷ ಘನಮೀಟರ್ ನೀರು ನದಿ ಹಳ್ಳಿಗಳಲ್ಲಿ ಹರಿದು ಭೂಮಿಯ ಮೇಲ್ಮೈ ನೀರಾಗಿ ದೊರೆಯುತ್ತದೆ. ಉಳಿದ ನೀರು ಆವಿಯಾಗಿ ಪುನಃ ವಾತಾವರಣದಲ್ಲಿ ಸೇರುತ್ತದೆ. ನಮ್ಮ ದಿನ ನಿತ್ಯದ ಬಳಕೆಗಾಗಿ ನೀರನ್ನು ಮುಖ್ಯವಾಗಿ ಈ ಮೂರು ಪ್ರಧಾನ ಮೂಲಗಳಿಂದ ಪಡೆಯಲಾಗುತ್ತದೆ.

ಮಳೆನೀರು: ಮಳೆ ಬರುತ್ತಿರುವಾಗಲೇ ನೇರವಾಗಿ ಸಂಗ್ರಹಿಸಿದ ನೀರು ಮಳೆಯ ನೀರು. ಈ ನೀರು ಕುಡಿಯಲು ಸುರಕ್ಷಿತವಾಗಿರುತ್ತದೆ. ನೀರನ್ನು ಕುಡಿಯಲು ಮತ್ತು ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ. ಆದಾಗ್ಯೂ ಮನೆ ಮೇಲ್ಛಾವಣಿಗಳ ಮೇಲೆ ಸುರಿದ ನೀರನ್ನು ತೊಟ್ಟಿ ಅಥವಾ ಟ್ಯಾಂಕುಗಳಲ್ಲಿ ಸಂಗ್ರಹಿಸಿ ಮನೆ ಬಳಕೆಯ ಮತ್ತು ಇತರ ಉದ್ದೇಶಗಳಿಗೆ ಬಳಸುವುದನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು. ಆದರೆ ಮಳೆ ನೀರನ್ನು ಕುಡಿಯಲು ಉಪಯೋಗಿಸುವುದು ಕಂಡು ಬರುವುದಿಲ್ಲ. ಮಳೆ ನೀರು ಕುಡಿದರೆ ಶೀತ, ನೆಗಡಿ ಬರುತ್ತದೆ ಎಂಬ ನಂಬಿಕೆ ಹಳ್ಳಿಯ ಜನರಲ್ಲಿದೆ.

ಭೂಮಿಯ ಮೇಲ್ಮೈ ನೀರು: ಹೆಸರೇ ಹೇಳುವಂತೆ ಭೂಮಿಯ ಮೇಲೆ ಕೆರೆ, ಹಳ್ಳ, ನದಿ ಮುಂತಾದವುಗಳಲ್ಲಿ ಸಂಗ್ರಹವಾಗುವ ನೀರೇ ಭೂಮಿಯ ಮೇಲ್ಮೈ ನೀರು. ನದಿ, ಸರೋವರ, ಜಲಾಶಯ, ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗುವ ನೀರನ್ನು ಕುಡಿಯಲು ಬಳಸಲಾಗುತ್ತದೆ. ನಗರ ಪ್ರದೇಶಗಳ ಜನತೆಗೆ ನದಿ, ಜಲಾಶಯಗಳ ನೀರನ್ನು ಕುಡಿಯಲು ಸರಬರಾಜು ಮಾಡಲಾಗುತ್ತದೆ.

ಭೂತಲದ ನೀರು: ಭೂಮಿಯ ಒಳಭಾಗದಲ್ಲಿ ಸಂಗ್ರಹವಾಗಿರುವ ನೀರು. ಭೂತಲದ ಬಾನೆಯಲ್ಲಿ ಸಂಗ್ರಹವಾದ ನೀರನ್ನು ಬಾವಿ, ಕೊಳವೆ ಬಾವಿಗಳನ್ನು ತೋಡಿ ಅವುಗಳ ಮೂಲಕ ಕುಡಿಯಲು ನೀರನ್ನು ಸಂಗ್ರಹಿಸಲಾಗುವುದು. ಗ್ರಾಮೀಣ ಪ್ರದೇಶದ ಶೇ. ೯೭ರಷ್ಟು ಜನತೆಗೆ ಕುಡಿಯಲು ಭೂತಲದ ನೀರು ಸರಬರಾಜು ಮಾಡಲಾಗುತ್ತಿದೆ.

ನೀರಿನ ಗುಣಲಕ್ಷಣಗಳು

ಕುಡಿಯುವ ನೀರು ಸುರಕ್ಷಿತವಾಗಿರಬೇಕು. ಸೂಕ್ಷ್ಮ ರೋಗಾಣು ಮತ್ತು ರಾಸಾಯನಿಕಗಳಿಂದ ಮುಕ್ತವಾಗಿದ್ದು ಬಣ್ಣ, ವಾಸನೆ, ರುಚಿ ಇಲ್ಲದ ಸ್ವಚ್ಛ ನೀರು ಕುಡಿಯಲು ಯೋಗ್ಯವಾಗಿರುತ್ತದೆ. ನೀರು ಎಷ್ಟು ಶುದ್ಧವಿದೆ ಎಂಬುದನ್ನು ತಿಳಿಯಲು ನೀರಿನ ಒಂದು ಅಂಗದ ಮೇಲೆ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಯಾವುದೇ ಕೊಳಕು ಕಣಗಳು ಇಲ್ಲದ ನೀರಿನ ಬೆಳಕು ಪ್ರತಿಫಲನಗೊಳ್ಳುತ್ತದೆ. ಅಂತಹ ನೀರನ್ನು ಶುದ್ಧ ನೀರು ಎಂದು ಹೇಳಬಹುದು. ಒಂದು ವೇಳೆ ನೀರಿನಲ್ಲಿ ಸಾಕಷ್ಟು ಪ್ರಮಾಣದ ಧೂಳಿನ ಕಣಗಳು ಅಥವಾ ಇತರ ಕೊಳಕು ಇದ್ದರೆ ಅಂತಹ ನೀರಿನ ಮೂಲಕ ಹಾಯಿಸುವ ಬೆಳಕು ಸ್ಪಷ್ಟವಾಗಿ ಕಾಣುವುದಿಲ್ಲ, ಅಂತಹ ನೀರು ಅಶುದ್ಧವಾಗಿರುತ್ತದೆ.

ಶುದ್ಧ, ಸುರಕ್ಷಿತ ಕುಡಿಯುವ ನೀರಿಗೆ ಯಾವುದೇ ಬಣ್ಣ, ವಾಸನೆ, ರುಚಿ ಇರುವುದಿಲ್ಲ. ಮಳೆನೀರು ಗುಣದಲ್ಲಿ ಶುದ್ಧ ಹಾಗೂ ಮೆದುವಾಗಿದ್ದರೂ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡಿರುವುದರಿಂದ ನಶಿಸುವ ಹಾಗೂ ನೀರಸವಾದ ರುಚಿಯನ್ನು ಹೊಂದಿರುತ್ತದೆ.

ಕೆರೆ, ನದಿ, ಜಲಾಶಯಗಳಲ್ಲಿನ ನೀರಿನ ಗುಣಮಟ್ಟ ಸಾಮಾನ್ಯವಾಗಿ ವೈವಿಧ್ಯಮಯದಿಂದ ಕೂಡಿರುತ್ತದೆ. ಪ್ರಕೃತಿ ಹಾಗೂ ಮಾನವ ನಿರ್ಮಿತ ಮಾಲಿನ್ಯದಿಂದ ನೀರು ಬಣ್ಣ, ವಾಸನೆ, ರುಚಿ ಹಾಗೂ ಅಶುದ್ಧತೆ ಹೊಂದಿರುತ್ತದೆ. ಇದಕ್ಕಿಂತಲೂ ಮೇಲಾಗಿ ಅದರೊಂದಿಗೆ ಬ್ಯಾಕ್ಟೀರಿಯಾ ಮತ್ತು ಇತರ ಸುಕ್ಷ್ಮ ಜೀವಾಣುಗಳು ಸೇರಿಕೊಂಡು ನೀರನ್ನು ಕೊಳಕಾಗಿಸುತ್ತದೆ. ಇಂತಹ ನೀರು ಕುಡಿಯಲು ನೇರವಾಗಿ ಬಳಸಲು ಯೋಗ್ಯವಾಗಿರುವುದಿಲ್ಲ.

ಭೂತಲದ ನೀರು : ಭೂತಳದ ನೀರು ಸಾಮಾನ್ಯವಾಗಿ ಸ್ವಚ್ಛ ಹಾಗೂ ಬಣ್ಣ ರಹಿತವಾಗಿದ್ದರೂ ಅದರಲ್ಲಿಯೂ ಖನಿಜಾಂಶಗಳು ಸಮೃದ್ಧವಾಗಿರುತ್ತದೆ. ಭೂತಲದ ನೀರು ಭೂಮಿಯ ಕೆಳಗಡೆ ಸಾಗಿದಂತೆಲ್ಲಾ ಜೈವಿಕ ಹಾಗೂ ನೀರ್ಜಿವಿಕಣಗಳೊಡನೆ ಸಂಪರ್ಕ ಹೊಂದಿರುತ್ತದೆ ಮತ್ತು ರಾಸಾಯನಿಕ ಗುಣ ಲಕ್ಷಣಗಳನ್ನು ಹೊಂದಿರುವ ಭೂಮಿಯಲ್ಲಿ ಹಾದು ಹೋಗುವಾಗ ಆ ಭೂಮಿಯ ಗುಣಲಕ್ಷಣಗಳನ್ನು ಪ್ರತಿ ಬಿಂಬಿಸುತ್ತದೆ.

ಸುಣ್ಣದ ಕಲ್ಲಿನಲ್ಲಿರುವ ನೀರು ತುಂಬಾ ಗಡುಸಾಗಿರುತ್ತದೆ. ಬೆಣಚುಕಲ್ಲಿನ ರೂಪದಲ್ಲಿ ನೀರು ಮೆದುವಾಗಿರುತ್ತದೆ. ಇದರಲ್ಲಿ ಕರಗುವ ಖನಿಜಾಂಶಗಳು ಕಡಿಮೆ ಇರುತ್ತದೆ. ಇಂಗಾಲದ ಡೈ ಆಕ್ಸೈಡ್ ಅಧಿಕ ಪ್ರಮಾಣದಲ್ಲಿರುತ್ತದೆ ಮತ್ತು ನೀರು ರುಚಿಯಾಗಿಯೂ ಇರುತ್ತದೆ. ಸಾಮಾನ್ಯವಾಗಿ ಭೂತಲದ ನೀರು ಅಸುರಕ್ಷಿತವಾಗಿರಬಹುದು ಆದರೆ ಈ ನೀರು ಸಮರೂಪದ ಗುಣಲಕ್ಷಣ ಹೊಂದಿರುತ್ತದೆ.

ಚಿಲುಮೆಗಳು: ಚಿಲುಮೆಗಳು ಅಥವಾ ಬುಗ್ಗೆಗಳ ಮೂಲಕ ಮೇಲೆ ಬರುವ ನೀರಿನ ಗುಣಮಟ್ಟವು ಆಯಾ ಪ್ರಾಂತ್ಯದ ಭೌಗೊಳಿಕ ರಚನೆಗೆ ಅನುಗುಣವಾಗಿರುತ್ತದೆ. ಮೇಲಿನ ಪದರಗಳಲ್ಲಿರುವ ನೀರು ಕೆಳಗಿನ ಪದರಗಳಲ್ಲಿರುವ ನೀರಿಗಿಂತ ಮೇಲ್ಮೈಯಲ್ಲಿನ ಮಾಲಿನ್ಯಗಳಿಂದ ಹೆಚ್ಚು ಪ್ರಭಾವ ಹೊಂದಿರಬಹುದು. ಬುಗ್ಗಿಯ ನೀರು ಮೇಲ್ಮೈ ಕಾಲುವೆಗಳಲ್ಲಿ ಹರಿಯುವಾಗ ಸೂಕ್ಷ್ಮಾಣುಗಳಿಗೆ ಪೌಷ್ಠಿಕತೆ ಒದಗಿಸುತ್ತದೆ.

ಲೋಹಾಂಶ: ಕೆಲವೊಂದು ನಿರ್ದಿಷ್ಟ ಭೌಗೋಳಿಕ ಪರಿಸ್ಥಿತಿ ಹೊಂದಿರುವ ಭೂಮಿಯಲ್ಲಿ ನೀರು ನೈಸರ್ಗಿಕವಾಗಿ ವಿಷಯುಕ್ತ ಮಾಲಿನ್ಯ ಉಂಟಾಗುತ್ತದೆ. ಅನುಮತಿ ಮಿತಿಯೋಗ್ಯ ೦.೦೫ ಮಿ.ಗ್ರಾಂ.ಗಿಂತ ಹೆಚ್ಚಾಗಿ ಲೋಹಾಂಶವಿರುವ ನೀರನ್ನು ಸೇವಿಸಬಾರದು, ಇಂತಹ ನೀರು ಸೇವನೆಯಿಂದ ತ್ವಚೆಯಲ್ಲಿ ಹುಣ್ಣು ಸ್ನಾಯುಗಳು ಕ್ಷೀಣಗೊಳ್ಳಬಹುದು, ಲಕ್ವ ಹೊಡೆಯಬಹುದು, ದೀರ್ಘಕಾಲದ ಬಳಕೆಯಿಂದ ತ್ವಚೆಯ ಮತ್ತು ಶ್ವಾಸಕೋಶಗಳ ಕ್ಯಾನ್ಸರ್ ಬರಬಹುದು.

ನೀರಲ್ಲಿ ೧ ಮಿ.ಗ್ರಾಂ. ಹೆಚ್ಚಿನ ಕಬ್ಬಿಣಾಂಶವಿದ್ದರೆ ಅಂತಹ ನೀರು ಬಳಸಲು ಸೂಕ್ತವಲ್ಲ, ಇಂತಹ ನೀರಿನಿಂದ ಆರೋಗ್ಯಕ್ಕೆ ಯಾವುದೆ ಹಾನಿ ಉಂಟಾಗದಿದ್ದರೂ ಅಡಿಗೆಗೆ ಬಳಸುವಲ್ಲಿ ಹೆಚ್ಚು ಇಂಧನ ಬೇಕಾಗುತ್ತದೆ. ಅಲ್ಲದೆ ಈ ನೀರಿನಿಂದ ಬಟ್ಟೆ, ಪಾತ್ರೆಗಳನ್ನು ತೊಳೆದರೆ ಕಲೆ ಉಂಟಾಗುತ್ತದೆ.

ಬ್ಯಾಕ್ಟೀರಿಯಾಗಳು : ರಾಸಾಯನಿಕ ಅಂಶಗಳಿಂದ ಉಂಟಾಗುವ ನೀರಿನ ಸಮಸ್ಯೆಗಳು ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿದ್ದರೆ. ಬ್ಯಾಕ್ಟೀರಿಯಾಗಳ ಮೂಲಕ ನೀರು ಮಾಲಿನ್ಯವಾಗುವುದು. ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತದೆ. ರೋಗ ಉಂಟು ಮಾಡುವ ಸೂಕ್ಷ್ಮ ಜೀವಾಣುಗಳು ನೀರಿನೊಂದಿಗೆ ಸೇರಿಕೊಂಡಿರುತ್ತದೆ. ಈ ನೀರಿನಲ್ಲಿರುವ ರೋಗಾಣುಗಳನ್ನು ಕಂಡು ಹಿಡಿಯುವುದು ಬಹಳ ಕಷ್ಟಕರ. ಬ್ಯಾಕ್ಟೀರಿಯಾಗಳು ಹೆಚ್ಚಿನ ಕೋಲಿಫಾರಂ ಅಣುಜೀವಿ ಎಂಣಿಕೆಗಳು ೧೦/೧೦೦ ಮಿ.ಲಿ. ಪ್ರಮಾಣದಲ್ಲಿರುವ ನೀರು ಕುಡಿಯಲು ಯೋಗ್ಯವಿಲ್ಲ.

ಈ ಕೂಲಿ ಎಣಿಕೆಗಳು ೧೦/೧೦ ಮಿ.ಲಿ. ಮಿತಿಗಿಂತ ಅಧಿಕವಿದ್ದರೆ. ಅತಿಸಾರ ಭೇದಿ, ಕಾಲರಾ, ಜಾಂಡಿಸ್, ವಿಷಮಶೀತ ಜ್ವರ, ಪೋಲಿಯೋ ಮುಂತಾದ ಕಾಯಿಲೆಗಳು ಬರಬಹುದು. ಆದ್ದರಿಂದಲೇ ಜನರು ಕುಡಿಯುವ ನೀರನ್ನು ಮೊದಲು ಪರೀಕ್ಷಿಸಿ ಯೋಗ್ಯವಾದ ಸುರಕ್ಷಿತ ನೀರನ್ನು ಕುಡಿಯಬೇಕು.

ಕ್ಲೋರೈಡ್ : ನೀರಿನಲ್ಲಿ ಅತಿಯಾದ ಕ್ಲೋರೈಡ್ ಅಂಶವು ಸೇರಿಕೊಂಡಿದೆಯೆಂದಾದರೆ ಉಪ್ಪಿನ ರಚನೆಗಳ ಮೂಲಕ ನೀರು ಹಾದು ಹೋಗುವಾಗ ಉಂಟಾಗುವ ನೈಸರ್ಗಿಕ ಪ್ರಕ್ರಿಯೆಯಿಂದ ಪಡೆದುಕೊಂಡಿದ್ದು ಅಥವಾ ಸಮುದ್ರದ ನೀರು ಬೆರೆತುಕೊಂಡಿರುತ್ತದೆ.

೧೦೦೦ ಮಿ.ಗ್ರಾಂ./ಲೀ. ಗಿಂತ ಹೆಚ್ಚಾಗಿ ಲವಣಾಂಶ ಸೇರಿಕೊಂಡಿರುವ ಅಂತಹ ನೀರನ್ನು ಕುಡಿಯಲು ಬಳಸಬಾರದು. ನೀರಿನಲ್ಲಿ ಕ್ಲೋರೈಡ್ ಅಂಶವಿರುವ ನೀರು ಬಳಕೆಗೆ ಯೋಗ್ಯವಲ್ಲದಿದ್ದರೂ ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ.

ಪ್ಲೋರೈಡ್: ನೈಸರ್ಗಿಕವಾಗಿಯೇ ನೀರಿನಲ್ಲಿ ಉತ್ಪಾದನೆಯಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಪ್ಲೋರೈಡ್‌ಯುಕ್ತ ಖನಿಜಗಳು ಮಣ್ಣಿನಲ್ಲಿರುತ್ತದೆ. ಇಂತಹ ಭೂತಲದ ನೀರಿನಲ್ಲಿ ಪ್ಲೋರೈಡ್ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಅನುಮತಿ ಯೋಗ್ಯ ಮಿತಿಯು ೧.೫ ಮಿ.ಗ್ರಾಂ./ಲೀ ಗಿಂತ ಅಧಿಕ ಪ್ರಮಾಣದಲ್ಲಿರುವ ಪ್ಲೋರೈಡ್‌ಯುಕ್ತ ನೀರನ್ನು ಸುದೀರ್ಘ ಕಾಲದ ತನಕ ಉಪಯೋಗಿಸದಿದ್ದರೆ ಹಲ್ಲುಗಳು ಕಂದು ಬಣ್ಣಕಟ್ಟುವುದು, ಅಸ್ಥಿಪಂಜರದ ಪ್ಲೊರೋಸಿಸ್ ಉಂಟಾಗುತ್ತದೆ. ಅನೇಕ ಬಗೆ ನಾಡಿ, ಎಲುಬುಗಳ ರಚನೆಗೂ ತೊಡಕುಂಟಾಗುತ್ತದೆ, ಅನೇಕ ಅಕಾಲಿಕ ವೃದ್ಧಾಪ್ಯವನ್ನುಂಟು ಮಾಡುತ್ತವೆ. ಒಟ್ಟಾರೆ ಪ್ಲೋರೈಡ್‌ಯುಕ್ತ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ.