ಕೃಷ್ಣನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಹಳ್ಳಿಗಳಿವೆ. ಒಂದು ಕೃಷ್ಣನಗರ ಮತ್ತೊಂದು ದೌಲತ್‌ಪುರ. ಈ ಎರಡು ಹಳ್ಳಿಗಳು ತಮ್ಮ ಹಳೆಯ ಹೆಸರು ಕಳಚಿ ಹೊಸ ಹೆಸರು ಪಡೆದುಕೊಂಡಿದೆ. ಕೃಷ್ಣಪುರ ಕೃಷ್ಣನಗರವಾಗಿದ್ದರೆ, ಕೋನಪುರ ದೌಲತ್‌ಪುರ ಆಗಿದೆ. ಕೃಷ್ಣನಗರ ತಾಲ್ಲೂಕು ಕೇಂದ್ರವಾದ ಸಂಡೂರಿನಿಂದ ಬಳ್ಳಾರಿಗೆ ಹೋಗುವ ರಸ್ತೆಯಲ್ಲಿ ಎರಡು ಕಿ.ಮಿ. ದೂರದಲ್ಲಿದೆ. ದೌಲತ್‌ಪುರ ಸಂಡೂರಿನಿಂದ ಹೊಸಪೇಟೆಗೆ ಹೋಗುವ ರಸ್ತೆಯಲ್ಲಿ ಎರಡು ಕಿ.ಮಿ. ದೂರದಲ್ಲಿ ಬಲಭಾಗಕ್ಕೆ ಸುಮಾರು ೧೫-೨೦ ನಿಮಿಷ ಕಾಲು ನಡಿಗೆ ದೂರದಲ್ಲಿದೆ. ಈ ಎರಡು ಹಳ್ಳಿಗಳ ನಡುವೆ ಎರಡು ಕಿ.ಮಿ. ಅಂತರವಿದೆ.

ಭಾಗೋಳಿಕವಾಗಿ ಕೃಷ್ಣನಗರ (೧೭೮೦.೩೦ ಹೇಕ್ಟೇರ್) ದೌಲತ್‌ಪುರಕ್ಕಿಂತ (೨೨೨೮-೫೩ ಹೇಕ್ಟೇರ್) ವಿಸ್ತೀರ್ಣದಲ್ಲಿ ಚಿಕ್ಕದಿದೆ. ಜನಸಂಖ್ಯೆಯಲ್ಲಿ (೪೧೬೫), ದೌಲತ್‌ಪುರ (೨೮೪೦) ಕ್ಕಿಂತ ದೊಡ್ಡದಿದೆ. ಒಟ್ಟಾರೆ ಗ್ರಾಮ ಪಂಚಾಯ್ತಿಯಲ್ಲಿ ೭೦೦೫ ಜನರಿದ್ದಾರೆ. ಇವರಲ್ಲಿ ಶೇ. ೫೨ ರಷ್ಟು ಪುರುಷರು ಹಾಗೂ ಶೇ. ೪೮ರಷ್ಟು ಮಹಿಳೆಯರಿದ್ದಾರೆ. ಮಹಿಳಾ ಜನಸಂಖ್ಯೆ ಪ್ರಮಾಣ, ಬಳ್ಳಾರಿ ಜಿಲ್ಲಾ ಮಹಿಳಾ ಪ್ರಮಾಣ ( ೪೯.೨೨%) ಕ್ಕಿಂತ ಶೇ. ೧.೨೨ರಷ್ಟು ಕಡಿಮೆಯಾಗಿದೆ. ಶಿಕ್ಷಣ ಪ್ರಮಾಣ (ಶೇ. ೩೯.೪೭) ಹೆಚ್ಚು ಕಡಿಮೆ ಎರಡು ಹಳ್ಳಿಗಳಲ್ಲೂ ಏಕ ರೂಪವಾಗಿದೆ. ಆದರೆ ಸಂಡೂರು ತಾಲ್ಲೂಕು (ಶೇ. ೫೩.೭೬) ಮತ್ತು ಬಳ್ಳಾರಿ ಜಿಲ್ಲೆ (ಶೇ. ೫೮.೦೪) ಯ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಕಡಿಮೆ ಪ್ರಮಾಣದಲ್ಲಿದೆ. ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಒಟ್ಟು ೧೦೨೪ ಕುಟುಂಬಗಳಿದ್ದು ಇವುಗಳಲ್ಲಿ ಕೃಷ್ಣನಗರದಲ್ಲಿ ೬೮೬ ಕುಟುಂಬಗಳು ಹಾಗೂ ದೌಲತ್‌ಪುರದಲ್ಲಿ ೩೩೮ ಕುಟುಂಬಗಳಿವೆ. ಎರಡು ಹಳ್ಳಿಗಳಲ್ಲಿ ೬೦೦ ಮುಸ್ಲಿಂ ಕುಟುಂಬಗಳಿವೆ. (೩೭೪+೨೨೬) ಕುರುಬರು (೧೫೫) (ಕೃಷ್ಣನಗರದಲ್ಲಿ ಮಾತ್ರ ಇದ್ದಾರೆ) ಪರಿಶಿಷ್ಠ ಜಾತಿ (೯೯), ಲಿಂಗಾಯತ (೭೪) ಕುಟುಂಬಗಳಿವೆ. ಉಳಿದಂತೆ ಬೆರಳಿಕೆಯಷ್ಟು ಇತರ ಜಾತಿಗಳ ಕುಟುಂಬಗಳಿವೆ.

೧೯೯೧ರಲ್ಲಿ ಗ್ರಾಮ ಪಂಚಾಯ್ತಿಯ ಒಟ್ಟು ಜನಸಂಖ್ಯೆ ೫,೪೪೧ ರಷ್ಟಿತ್ತು. ೨೦೦೧ರ ವೇಳೆಗೆ ೭,೦೦೫ಕ್ಕೆ ಏರಿಕೆಯಾಗಿದೆ. ದಶಕವಾರು ಜನಸಂಖ್ಯೆ ಹೆಚ್ಚಳ ಪ್ರಮಾಣ ಶೇ. ೩೬ರಷ್ಟಿದೆ. ಕೃಷ್ಣನಗರಕ್ಕಿಂತ (೨೯.೮೮%) ದೌಲತ್‌ಪುರದಲ್ಲಿ (ಶೇ. ೩೫) ಜನಸಂಖ್ಯೆ ಹೆಚ್ಚಳ ಪ್ರಮಾಣ ಅಧಿಕವಿದೆ. ಇಲ್ಲಿನ ಜನಸಂಖ್ಯೆ ಪ್ರಮಾಣಕ್ಕೆ ಬೇರೆ ಬೇರೆ ಕಡೆಯಿಂದ ಜನರು ಬಂದು ನೆಲೆಸಿರುವುದು ಒಂದು ಕಾರಣ ಇರಬಹುದಾದರೂ ಅಲ್ಲಿನ ಬಹುಸಂಖ್ಯಾತರು ಕುಟುಂಬ ಯೋಜನೆಯ ಬಗ್ಗೆ ಒಲವು ತೋರದೆ ಇರುವುದು ಜನಸಂಖ್ಯೆ ಹೆಚ್ಚಳಕ್ಕೆ ಮತ್ತೊಂದು ಕಾರಣ. ಗ್ರಾಮಪಂಚಾಯ್ತಿಯ ಪರಿವಿಡಿಯಲ್ಲಿ ಐದು ಅಂಗನವಾಡಿ ಕೇಂದ್ರಗಳಿವೆ. ಮೂರು ಅಂಗನವಾಡಿ ಕೇಂದ್ರಗಳು ಕೃಷ್ಣನಗರದಲ್ಲಿವೆ. ಮತ್ತೆರಡು ದೌಲತ್‌ಪುರದಲ್ಲಿವೆ. ಐದು ಅಂಗನವಾಡಿ ಕೇಂದ್ರಗಳಲ್ಲಿ ೩ ರಿಂದ ೬ ವರ್ಷದ ಒಟ್ಟು ೬೨೯ ಮಕ್ಕಳಿದ್ದಾರೆ. ಎರಡು ಹಳ್ಳಿಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಪರಿಸರ ಸ್ವಚ್ಛವಾಗಿಲ್ಲ. ಶಾಲಾ ಕಟ್ಟಡಗಳಿಗೆ ಕಾಂಪೌಂಡ್ ಇಲ್ಲ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮುಂತಾದ ಮೂಲ ಸೌಲಭ್ಯ ಇಲ್ಲ, ಅಲ್ಲದೆ ನಿಗದಿಪಡಿಸಿರುವ ಆಹಾರ ಸಾಮಗ್ರಿಗಳು ಕಾಲ ಕಾಲಕ್ಕೆ ಸರಿಯಾಗಿ ಸರಬರಾಜಾಗುತ್ತಿಲ್ಲ. ಆಹಾರ ಪಡೆಯುತ್ತಿರುವ ಮಕ್ಕಳ ಲೆಕ್ಕದ ಪ್ರಮಾಣದಷ್ಟು ಮಕ್ಕಳ ಹಾಜರಾತಿ ಕಂಡುಬರುವುದಿಲ್ಲ. ಮಕ್ಕಳನ್ನು ಅಂಗನವಾಡಿ ಶಾಲೆಗೆ ಕಳುಹಿಸದೆ ಇರುವ ಬಗ್ಗೆ ಮುಸ್ಲಿಂ ಮಹಿಳೆಯರನ್ನು ವಿಚಾರಿಸಿದಾಗ ಅಂಗನವಾಡಿ ಶಾಲೆ ದೂರವಿದೆ. ಹಾದಿ ಉದ್ದಕ್ಕೂ ಗಂಡಸರು ಇರುತ್ತಾರೆ. ಬುರಕಾ ಹಾಕಿಕೊಂಡು ಹೋಗಬೇಕು. ಬೇಜಾರು ಆದ್ದರಿಂದ ಮಕ್ಕಳನ್ನು ಅಂಗನವಾಡಿ ಶಾಲೆಗೆ ಕಳುಹಿಸುತ್ತಿಲ್ಲ. ಹಳ್ಳಿಗಳಲ್ಲಿರುವ ಅಂಗನವಾಡಿ ಕೇಂದ್ರಗಳು ತಾತ್ಕಾಲಿಕ ಆರೋಗ್ಯ ಕೇಂದ್ರಗಳಂತಿವೆ. ಇಲ್ಲಿನ ಕಾರ್ಯಕರ್ತೆಯರು ಹಳ್ಳಿಗಳು ನರನಾಡಿಗಳಂತಿದ್ದು ಗರ್ಭಿಣಿ ಸ್ತ್ರೀಯರು, ಬಾಣಂತಿಯರು, ಮಕ್ಕಳ ಪೌಷ್ಠಿಕ ಆಹಾರ ಮತ್ತು ಆರೋಗ್ಯ ಸುಧಾರಿಸುವಲ್ಲಿ ದುಡಿಯುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುವ ಸಂಬಳ ಬಹಳ ಕಡಿಮೆ. ಅಲ್ಲದೆ ಸಂಬಳವೂ ಸರಿಯಾಗಿ ಕೊಡುತ್ತಿಲ್ಲವಾದ್ದರಿಂದ ಅಲ್ಲಿಗೆ ಭೇಟಿ ಕೊಟ್ಟವರ ಬಳಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಶಿಕ್ಷಣ ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಸಾಧನ ಅಷ್ಟೇ ಅಲ್ಲ ಮಾನವನ ಸರ್ವಾಂಗೀಣ ಬೆಳವಣಿಗೆ ಪೂರಕವಾಗಿದೆ. ಒಟ್ಟು ಮೂರು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಹಾಗೂ ಎರಡು ಉರ್ದು ಮಾಧ್ಯಮಿಕ ಶಾಲೆಗಳಿವೆ.

ಕೃಷ್ಣನಗರದಲ್ಲಿ ಎರಡು ಕನ್ನಡ ಮಾಧ್ಯಮಿಕ ಶಾಲೆ ಇವೆ. ಒಂದು ಊರೊಳಗೆ ಇದ್ದರೆ ಮತ್ತೊಂದು ಪರಿಶಿಷ್ಠ ಕೇರಿಯಲ್ಲಿದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಒಟ್ಟು ೬೭೮ ವಿದ್ಯಾರ್ಥಿಗಳಿಗೆ ೫ ಜನ ಶಿಕ್ಷಕರಿದ್ದಾರೆ. ಐದು ಕೊಠಡಿಗಳಿವೆ. ದೌಲತ್‌ಪುರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ೨೦೮ ವಿದ್ಯಾರ್ಥಿಗಳಿದ್ದು ೪ ಜನ ಶಿಕ್ಷಕರಿದ್ದಾರೆ.

ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಕೃಷ್ಣನಗರ ಮತ್ತು ದೌಲತ್‌ಪುರದಲ್ಲಿ ೧೬೩ ಮತ್ತು ೧೯೫ ಒಟ್ಟು ೩೫೮ ವಿದ್ಯಾರ್ಥಿಗಳಿಗೆ ೮ ಜನ ಶಿಕ್ಷಕರಿದ್ದಾರೆ.

ಕನ್ನಡ ಮಾಧ್ಯಮ ಹಾಗೂ ಉರ್ದು ಮಾಧ್ಯಮ ಮಕ್ಕಳು ಮತ್ತು ಶಿಕ್ಷಕ ಅನುಪಾತ ಕ್ರಮವಾಗಿ ಸುಮಾರು ೧೧೩೬, ೧೪೭ ಕಾಣಬಹುದು. ಇಲ್ಲಿ ಕಂಡು ಬಂದ ಮತ್ತೊಂದು ಅಂಶವೆಂದರೆ ಮುಸ್ಲಿಂ ಸಮುದಾಯದ ಗಂಡು ಮಕ್ಕಳು ಮಾಧ್ಯಮ ಶಾಲೆಗಳಲ್ಲಿ ಹೆಚ್ಚು ದಾಖಲಾಗುತ್ತಿದ್ದಾರೆ. ಇದಕ್ಕೆ ಗಂಡು ಮಕ್ಕಳು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮುಂದೆ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಹೆಣ್ಣು ಮಕ್ಕಳಾದರೆ ಮದುವೆ ಮಾಡಿ ಕಳುಹಿಸುತ್ತಾರೆ, ಅಲ್ಲಿಯವರೆಗೂ ಶಾಲೆಗೆ ಹೋಗುತ್ತಿರಲಿ ನಮಾಜ್ ಮಾಡುವಷ್ಟು ಉರ್ದು ಕಲಿತರೆ ಸಾಕು ಎಂದು ಹೇಳುತ್ತಾರೆ. ಮಧ್ಯದಲ್ಲೇ ಶಾಲೆ ಬಿಡುವ ಮಕ್ಕಳ ಸಂಖ್ಯೆಯೇ ಅರ್ಧದಷ್ಟಿದೆ. ಶಾಲಾ ಕಟ್ಟಡಗಳು ಬಹಳ ಹಳೆಯದಾಗಿದೆ. ಕೊಠಡಿಗಳ ಸಂಖ್ಯೆ ಬಹಳ ಕಡಿಮೆ, ಕುಡಿಯುವ ನೀರು ಶೌಚಾಲಯ ಮುಂತಾದ ಮೂಲಭೂತ ಸೌಲಭ್ಯಗಳಿಲ್ಲ.

ಆರೋಗ್ಯ ಕೇಂದ್ರ

ಕೃಷ್ಣನಗರದಿಂದ ಸಂಡೂರಿಗೆ ಹೋಗುವ ಮಾರ್ಗದಲ್ಲಿ ಕೃಷ್ಣನಗರ ಕೋಟೆಯ ಕಿರುಬಾಗಿಲ ಹೊರಗೆ ಒಂದು ಆರೋಗ್ಯ ಉಪಕೇಂದ್ರ ತೆರೆಯಲಾಗಿದೆ. ಸಿಬ್ಬಂದಿಗಳ ಕೊರತೆಯಿಂದಾಗಿ ಈ ಉಪಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ. ಈ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಆರೋಗ್ಯ ಕೇಂದ್ರ ಸುಮಾರು ೫-೬ ಕಿ.ಮೀ.ನಷ್ಟು ದೂರದಲ್ಲಿರುವ ತಾರಾನಗರದಲ್ಲಿದೆ. ಇದಕ್ಕಿಂತಲೂ ಸಂಡೂರು ತಾಲ್ಲೂಕು ಆರೋಗ್ಯ ಕೇಂದ್ರ ಹತ್ತಿರವಿದೆ. ಆದ್ದರಿಂದ ಜನರು ತಮ್ಮ ರೋಗ ರುಜಿನುಗಳಿಗೆ ಸಂಡೂರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಎ.ಎನ್.ಎಂ. ನಿತ್ಯ ಹಳ್ಳಿಗಳಿಗೆ ಭೇಟಿ ಕೊಡುವುದಿಲ್ಲ. ಭೇಟಿಕೊಟ್ಟರೂ ಅಂಗನವಾಡಿ ಕೇಂದ್ರಗಳಿಗೆ ಬಂದು ಹೋಗುತ್ತಾರೆ.

ವಸತಿ

ಕೃಷ್ಣನಗರ ಗ್ರಾಮಪಂಚಾಯತಿಯು ವಸತಿಗಳಿಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆ ಎದುರಿಸುತ್ತಿದೆ. ದೌಲತ್‌ಪುರಕ್ಕಿಂತಲೂ ಕೃಷ್ಣನಗರದ ವಸತಿ ಸಮಸ್ಯೆ ಭೀಕರವಾಗಿದೆ. ಊರಿನ ಸುತ್ತಲೂ ಎತ್ತರವಾದ ಕೋಟೆ ಸುತ್ತಿಕೊಂಡಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲಾ ಗಾಳಿ ಬೆಳಕಿಲ್ಲದೆ ಒಂದಕ್ಕೊಂದು ಅಂಟಿಕೊಂಟಿರುವ ಇಕ್ಕಟ್ಟಾದ ಚಿಕ್ಕ ಚಿಕ್ಕ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಊರಿನೊಳಗೆ ಸರಿಯಾದ ಬೀದಿಗಳಿಲ್ಲ. ಮನೆ ಬಳಕೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರು ಓಣಿಗಳಲ್ಲಿ ಹರಿಯುತ್ತಿದೆ. ಸಾರ್ವಜನಿಕ ಹಾಗೂ ವೈಯಕ್ತಿಕ ಶೌಚಾಲಯ ಸೌಲಭ್ಯ ಒದಗಿಸಿದ್ದರೂ ಅವುಗಳ ಬಳಕೆಯಾಗುತ್ತಿಲ್ಲ. ಗ್ರಾಮಪಂಚಾಯ್ತಿಯ ಹಿಂಭಾಗದಲ್ಲಿ ಒಂದು ದೊಡ್ಡ ಬಾವಿ ಇದೆ. ಕೋಟೆಯ ಗೋಡೆ ಮತ್ತು ಈ ಬಾವಿಯ ಮಧ್ಯೆ ಇಳಿಜಾರಿನಲ್ಲಿ ಒಂದು ಸಾಮೂಹಿಕ ಶೌಚಾಲಯ ನಿರ್ಮಿಸಿಲಾಗಿದೆ. ಈ ಇಳಿಜಾರಿನಿಂದಾಗಿ ಹೆಂಗಸರು ಮಕ್ಕಳು ಈ ಶೌಚಾಲಯಕ್ಕೆ ಹೋಗಿಬರಲು ಸಮಸ್ಯೆಯಾಗುತ್ತಿದೆ.

ನೈರ್ಮಲ್ಯ ಸ್ಥಿತಿಗತಿ

ಕೃಷ್ಣನಗರ ಮತ್ತು ದೌಲತ್‌ಪುರ ಎರಡು ಹಳ್ಳಿಗಳು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮೂಕ ವೇದನೆ ಅನುಭವಿಸುತ್ತಿವೆ. ಕೃಷ್ಣನಗರ ನೈರ್ಮಲ್ಯ ಸ್ಥಿತಿ ಚಿಂತಾಜನಕವಾಗಿದೆ. ಊರ ರಕ್ಷಣೆಗೆಂದು ನಿರ್ಮಿಸಿದ ಕೋಟೆ ಇಂದು ಜನರ ನೈರ್ಮಲ್ಯಕ್ಕೆ ಮಾರಕವಾಗಿದೆ. ಕೋಟೆಯ ಸುತ್ತಲು ಆಳವಾದ ಕಂದಕವಿದೆ. ಬಸ್‌ಸ್ಟಾಂಡಿನಿಂದ ಕೋಟೆಯ ಹೆಬ್ಬಾಗಿಲವರೆಗೆ ಅಕ್ಕಪಕ್ಕದಲ್ಲಿ ಎತ್ತರವಾದ ತಿಪ್ಪೆಗಳಿವೆ. ಕೋಟೆಯ ಒಳಸುತ್ತುಗಳಲ್ಲಿ ತಿಪ್ಪೆಗಳು ಸಾಲು ಸಾಲಾಗಿನಿಂತಿವೆ. ಊರಿನ ಕೊಳಚೆ ನೀರು ಕೋಟೆಯಿಂದ ಆಚೆ ಹರಿದು ಹೋಗಲು ಅವಕಾಶವಿಲ್ಲದೆ ಕೋಟೆ ಬಾಗಿಲಲ್ಲಿ ನಿಂತಿದೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಸಾರ ಈ ಕೋಟೆ ವಿಸ್ತರಿಸಲು ಸಾಧ್ಯವಿಲ್ಲ. ಜನಸಂಖ್ಯೆ ಹೆಚ್ಚಾದಂತೆಲ್ಲಾ ಗಾಳಿ ಬೆಳಕಿಲ್ಲದೆ ಒಂದಕ್ಕೊಂದು ಅಂಟಿಕೊಂಡಿರುವ ಇಕ್ಕಟ್ಟಾದ ಚಿಕ್ಕ ಚಿಕ್ಕ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಊರಿನೊಳಗೆ ಸರಿಯಾದ ಬೀದಿಗಳಿಲ್ಲ. ಮನೆ ಬಳಕೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರು ಓಣಿಗಳಲ್ಲಿ ಹರಿಯುತ್ತಿವೆ. ಸಾರ್ವಜನಿಕ ಹಾಗೂ ವೈಯಕ್ತಿಕ ಶೌಚಾಲಯ ಸೌಲಭ್ಯ ಒದಗಿಸಿದ್ದರೂ ಅವುಗಳ ಬಳಕೆಯಾಗುತ್ತಿಲ್ಲ. ಗ್ರಾಮ ಪಂಚಾಯ್ತಿಯ ಹಿಂಭಾಗದಲ್ಲಿ ಒಂದು ದೊಡ್ಡ ಬಾವಿ ಇದೆ. ಕೋಟೆಯ ಗೋಡೆ ಮತ್ತು ಈ ಬಾವಿಯ ಮಧ್ಯೆ ಇಳಿಜಾರಿನಲ್ಲಿ ಒಂದು ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಈ ಇಳಿಜಾರಿನಿಂದಾಗಿ ಹೆಂಗಸರು ಮಕ್ಕಳು ಈ ಶೌಚಾಲಯಕ್ಕೆ ಹೋಗಿಬರಲು ಸಮಸ್ಯೆಯಾಗುತ್ತಿದೆ. ಅಲ್ಲದೆ ಬೀದಿಯಲ್ಲಿ ಒಡಾಡುವ ಜನರಿಗೆ ಶೌಚಾಲಯದ ಒಳಗಿರುವ ಜನರು ಕಾಣುವಂತಿದೆ. ನೀರಿನ ಸಮಸ್ಯೆಯಿಂದಾಗಿ ಶೌಚಾಲಯ ದುರ್ನಾತ ಹೊಡೆಯುತ್ತಿದೆ. ನೀರಿನ ಹೊಸ ಟ್ಯಾಂಕ್ ಬಳಿ ಮತ್ತೊಂದು ಶೌಚಾಲಯವಿದೆ. ಇದರ ಬಳಕೆಯಾಗುತ್ತಿದ್ದರೂ ಸದ್ಯದಲ್ಲಿ ಶೌಚಾಲಯದ ಕಕ್ಕಸು ಗುಂಡಿಯನ್ನು ಹಂದಿಗಳು ಗೂಟಿರುವುದರಿಂದ ಕಕ್ಕಸೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬರುತ್ತದೆ. ಜೊತೆಗೆ ನೀರಿನ ಸಮಸ್ಯೆಯಿಂದಾಗಿ ಶೌಚಾಲಯ ಗಬ್ಬುವಾಸನೆ ಬರುತ್ತದೆ. ಅಲ್ಲಿನ ಸುತ್ತ ಮುತ್ತ ವಾಸಿಸುತ್ತಿರುವ ಜನರು ಕೆಟ್ಟ ವಾಸನೆ ತಡೆಯಲಾಗದೆ ಈ ಶೌಚಾಲಯವನ್ನು ಸ್ಥಳಾಂತರಿಸಬೇಕೆಂದು ಊರಿಗೆ ಬರುವ ಅಧಿಕಾರಿಗಳಿಗೆಲ್ಲಾ ಕೈ ಮುಗಿದು ಬೇಡುತ್ತಾರೆ. ಕೋಟೆಯ ಎಡ ಭಾಗದ ಗೋಡೆ ಕಿತ್ತು ಹೋಗಿದೆ. ಅದರ ಹೊರಭಾಗ ಕೆಳಗಡೆ ಮತ್ತೊಂದು ಶೌಚಾಲಯ ನಿರ್ಮಿಸಲಾಗಿದೆ. ಆದರೆ ರಾತ್ರಿ ವೇಳೆಯಲ್ಲಿ ಹೆಂಗಸರು ಹೋಗಲು ಭಯ ಪಡುತ್ತಾರೆ. ಅಲ್ಲದೆ ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಬಾಗಿಲು ಇಲ್ಲ ಹೀಗಾಗಿ ಈ ಶೌಚಾಲಯದ ಬಳಕೆ ಇಲ್ಲ. ಕೋಟೆ ಹೊರಭಾಗ ಮತ್ತು ಪರಿಶಿಷ್ಟರ ಕೇರಿ ಮಧ್ಯ ಒಂದು ಶೌಚಾಲಯವಿದೆ. ಊರಿಗೆ ಬಂದು ಇಳಿದುಕೊಂಡಿದ್ದ ಅಲೆಮಾರಿಗಳಲ್ಲಿ ಯಾರೋ ಒಬ್ಬಳು ಆ ಶೌಚಾಲಯದಲ್ಲಿ ಬೆಂಕಿ ಹಚ್ಚಿಕೊಂಡಿದ್ದಳಂತೆ ಹಾಗಾಗಿ ಆ ಶೌಚಾಲಯದ ಕಡೆ ಯಾರೂ ಸುಳಿಯುವುದಿಲ್ಲ. ಇನ್ನು ಕೌಟುಂಬಿಕ ಶೌಚಾಲಯಗಳು ಇದ್ದರೂ ನೀರು ಮತ್ತು ಇತರ ಸಮಸ್ಯೆಗಳಿಂದಾಗಿ ಬಳಕೆ ಇಲ್ಲ. ಗ್ರಾಮಪಂಚಾಯ್ತಿ ಹಿಂಭಾಗದಲ್ಲಿ ಒಂದು ಅಗಲವಾದ ಬಾವಿ ಇದೆ. ಸುಮಾರು ೪೦-೪೫ ಅಡಿ ಆಳ ಇರಬಹುದಾದ ಈ ಬಾವಿ ನೂರಾರು ವರ್ಷಗಳಿಂದ ಊರಿನ ಕೊಳಚೆ ನೀರನ್ನು ತನ್ನ ಉದರದಲ್ಲಿ ಅಡಗಿಸಿಕೊಳ್ಳುತ್ತಿದೆ. ಈ ನೀರು ಕೆಟ್ಟ ವಾಸನೆ ಬರುತ್ತಿದೆ. ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಆಗಾಗ ಬ್ಲೀಚಿಂಗ್ ಪೌಡರ್ ಹಾಕುತ್ತಿದ್ದಾರೆ. ಆದರೂ ಅದನ್ನು ಮೀರಿ ವಾಸನೆ ಮೇಲೆರುತ್ತದೆ. ಈ ಬಾವಿಯನ್ನು ಮುಚ್ಚಲು ಜನ ಮನವಿ ಮಾಡಿಕೊಳ್ಳುತ್ತಲೆ ಇದ್ದಾರೆ. ಊರಿನ ಕೊಳಚೆ ನೀರು ಕೋಟೆಯ ಹೊರಗೆ ಹೋಗಲೆಂದು ಗ್ರಾಮ ಪಂಚಾಯ್ತಿಯವರು ಕೋಟೆಯ ಗೋಡೆಗೆ ಬಂದಿ ಸಣ್ಣ ಕಿಂಡಿ ಮಾಡಿದ್ದರು ಆದರೆ ಪುರಾತತ್ವ ಇಲಾಖೆಯವರು ಗ್ರಾಮ ಪಂಚಾಯ್ತಿ ಸದಸ್ಯರನ್ನು ಪೋಲಿಸ್ ಸ್ಟೇಷನ್ನಿಗೆ ಕರೆಸಿ ಕೋಟೆಯ ಗೋಡೆಯ ತಂಟೆಗೆ ಹೋಗಬಾರದೆಂದು ಗದರಿಸಿ ಕಳುಹಿಸಿದ್ದಾರೆ. ನೈರ್ಮಲ್ಯಕ್ಕೆ ಸಂಬಂಧಪಟ್ಟಂತೆ ಕೋಟೆ ಹೊರಗೆ ವಾಸಿಸುತ್ತಿರುವ ಪರಿಶಿಷ್ಟರ ಕೇರಿ ಸ್ವಚ್ಛವಾಗಿದೆ.

ದೌಲತಪುರ: ದೌಲತಪುರದಲ್ಲಿ ಕೃಷ್ಣನಗರದಂತೆ ಊರ ಸುತ್ತಲೂ ಕೋಟೆ ಇಲ್ಲದಿದ್ದರೂ ತಿಪ್ಪೆಗಳೇ ಕೋಟೆಯಂತೆ ಸುತ್ತುವರಿದಿದೆ. ಅನೈರ್ಮಲ್ಯದಲ್ಲಿ ಕೃಷ್ಣನಗರದ ತಮ್ಮನಂತೆ ಕಾಣುತ್ತದೆ. ಇತ್ತೀಚಿಗೆ ವಿಸ್ತರಿಸಿಕೊಂಡಿರುವ ಹರಿಜನ ಕೇರಿ ಮತ್ತು ಇತರ ಜಾತಿ ವಸತಿಗಳ ಆಸುಪಾಸು ಬೀದಿಗಳಲ್ಲಿ ಒಂದಿಷ್ಟು ಸ್ವಚ್ಛತೆ ವಿಶಾಲತೆ ಕಾಣಬಹುದಾದರೂ ಊರಿನ ಕೇಂದ್ರ ಭಾಗದಲ್ಲಿನ ಕೊಳಚೆ ವರ್ಣಾತೀತ, ಊರಿನ ಮಧ್ಯಭಾಗಗಳಲ್ಲಿಯೇ ದೊಡ್ಡ ದೊಡ್ಡ ತಿಪ್ಪೆಗಳಿವೆ. ಮನೆಗೊಂದು ಮರದ ಬದಲು ಮನೆ ಮುಂದೊಂದು ತಿಪ್ಪೆ ಇದೆ. ಒಂದಕ್ಕೊಂದು ಅಂಟಿಕೊಂಡಿರುವ ಜಂಟಿ ಮನೆಗಳು ಗಾಳಿ ಬೆಳಕು ಬರಲು ಕಿಟಕಿಗಳಿಲ್ಲ. ಮನೆ ಬಳಕೆಯ ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಸಣ್ಣ ಸಣ್ಣ ಓಣಿಗಳಲ್ಲಿ ಕೊಳಚೆ ನೀರು ಹರಿಯುತ್ತದೆ. (ನಾವು ಕ್ಷೇತ್ರ ಕಾರ್ಯದಲ್ಲಿದ್ದಾಗ) ಪೋಸ್ಟ ಹರೀಷಪ್ಪನ ಮನೆ ಸುತ್ತಮುತ್ತಲಿನ ಕೆಲವು ಮನೆಗಳು ಕೆಸರಿನೊಳಗೆ ಮುಚ್ಚಿಹೋದಂತೆ ಕಾಣುತ್ತಿದ್ದವು. ಮಳೆ ನೀರು, ಕೊಳಚೆ ನೀರು ನಿಂತಿದ್ದು, ಅದರೊಳಗೆ ಕಸಕಡ್ಡಿ ಮಲಮೂತ್ರ ಎಲ್ಲಾ ಒಗ್ಗೂಡಿ ಗಬ್ಬು ವಾಸನೆ ಬರುತ್ತಿತ್ತು. ಜನರು ಓಡಾಡಲು ಅಲ್ಲಲ್ಲಿ ಕಲ್ಲುಗಳನ್ನು ಹಾಕಿಕೊಂಡು ಅದರ ಮೇಲೆ ಹೆಜ್ಜೆಗಳನ್ನಿಡುತ್ತ ಮೆಲ್ಲ ಮೆಲ್ಲನೆ ಓಡಾಡುತ್ತಿದ್ದರು. ಇಲ್ಲಿನ ಜನರು ಸಹ ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬೇಸಿಗೆಯಲ್ಲಿ ಅಷ್ಟಿರುವುದಿಲ್ಲವಾದರೂ ಮಳೆಗಾಲದಲ್ಲಿ ಬೆಳೆ ಬಿತ್ತುತ್ತಾರೆ ಹಾಗೂ ಬೆಳೆಯ ರಕ್ಷಣೆಗೆ ಬೇಲಿ ಹಾಕಿಕೊಳ್ಳುತ್ತಾರೆ. ಆಗ ವಿಪರೀತ ಸಮಸ್ಯೆ ಉಂಟಾಗುತ್ತದೆ. ಹೆಂಗಸರು ರಾತ್ರಿ ವೇಳೆ ರಸ್ತೆಗಳನ್ನೇ ಶೌಚಾಲಯವಾಗಿ ಬಳಸುತ್ತಿದ್ದಾರೆ. ಆ ರಸ್ತೆಯಲ್ಲಿ ಓಡಾಡಲು ಅಸಹ್ಯ ಉಂಟಾಗುತ್ತದೆ. ಗ್ರಾಮ ಪಂಚಾಯ್ತಿಯು ಶೌಚಾಲಯಗಳ ಸಮಸ್ಯೆ ನೀಗಿಸಲು ಸಾಮೂಹಿಕ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿದೆ. ಆರಂಭದಲ್ಲಿ ಈ ಶೌಚಾಲಯಗಳ ಬಳಕೆಯಾಗುತ್ತಿದ್ದರೂ ಸದ್ಯದಲ್ಲಿ ಉಪಯೋಗಿಸುತ್ತಿಲ್ಲ. ಮಸೀದಿ ಹತ್ತಿರ ಒಂದು ಮಹಿಳಾ ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಈ ಶೌಚಾಲಯಗಳ ಬಾಗಿಲು ಮೆಟ್ಟಿಲುಗಳ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದಾರೆ. ಒಳಗೆ ಹೋಗಲು ಸಾಧ್ಯವಾಗದು ಅಸಾಧ್ಯ ವಾಸನೆ ಇದೆ. ಇತ್ತೀಚಿಗೆ ಹೆಂಗಸೊಬ್ಬಳು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಳೆಂದು ಯಾರೂ ಅಲ್ಲಿಗೆ ಹೋಗುವುದಿಲ್ಲ. ಊರ ಹಿಂಭಾಗದಲ್ಲಿ ಇನ್ನೊಂದು ಶೌಚಾಲಯವಿದೆ. ಶೌಚಾಲಯದ ಕಟ್ಟಡ ಚೆನ್ನಾಗಿದೆ. ಆದರೆ ಮಲಮೂತ್ರ ವಿಸರ್ಜಿಸಬೇಕಾದ ಸ್ಥಳ ಬಿಟ್ಟು ಶೌಚಾಲಯದ ಉಳಿದೆಲ್ಲಾ ಭಾಗದಲ್ಲಿ ಗಲೀಜು ಮಾಡಿದ್ದಾರೆ. ಅಲ್ಲದೆ ಅಲ್ಲಿಗೆ ಹೋಗಲು ದಾರಿ ಇಲ್ಲ. ಸುತ್ತಲೂ ತಿಪ್ಪೆಗಳಿದ್ದು, ಈ ತಿಪ್ಪೆಗಳ ಮೇಲೆ ನಡೆದುಕೊಂಡೇ ಆ ಶೌಚಾಲಯಕ್ಕೆ ಹೋಗಬೇಕಾಗಿದೆ. ಇನ್ನು ಪರಿಶಿಷ್ಟರ ಕೇರಿಯಲ್ಲಿರುವ ಶೌಚಾಲಯ ನೀರಿನ ಸಮಸ್ಯೆಯಿಂದಾಗಿ ಬಳಕೆಯಾಗುತ್ತಿಲ್ಲ.

ನಿರ್ಮಲ ಕರ್ನಾಟಕ ಯೋಜನೆಯಡಿ ನಿರ್ಮಿಸಲಾಗಿರುವ ವೈಯಕ್ತಿಕ ಶೌಚಾಲಯಗಳನ್ನು ಶೌಚಾಲಯಕ್ಕಾಗಿ ಬಳಸದೆ ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಹಾಗೂ ನೀರಿನ ಸಮಸ್ಯೆಯಿಂದಾಗಿ ಈ ಶೌಚಾಲಯಗಳನ್ನು ಬಳಸುತ್ತಿಲ್ಲ.

ಆರ್ಥಿಕ ಸ್ಥಿತಿ

ಮೂಲತಃ ಕೃಷಿಯನ್ನೇ ಅವಲಂಬಿಸಿರುವ ಇಲ್ಲಿನ ಕುಟುಂಬಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು. ಕೆಲ ಕುಟುಂಬಗಳು ನೀರಾವರಿ ಭೂಮಿಯನ್ನು ಹೊಂದಿದ್ದಾರೆ. ಇದರ ಜೊತೆಗೆ ಕೆಲವು ಕುಟುಂಬಗಳು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಫ್ಯಾಕ್ಟರಿ, ಗ್ಯಾರೇಜ್, ವ್ಯಾಪಾರ, ಮೈನ್ಸನ ಕೆಲಸಗಳಲ್ಲಿ ತೊಡಗಿದ್ದಾರೆ. ಮನೆಗೆ ಒಬ್ಬರಾದರೂ ಮೈನ್ಸ ಲಾರಿಗಳಲ್ಲಿ ಡ್ರೈವರ್‌ಗಳಾಗಿದ್ದಾರೆ. ಈ ಕುಟುಂಬಗಳು ಒಂದು ವಾರ ಕೆಲಸ ಮಾಡಿದರೆ ಇನ್ನೊಂದು ವಾರ ಮನೆಯಲ್ಲಿರುತ್ತಾರೆ. ಬಹುಜನರಿಗೆ ಕೆಲಸ ಕೊಡುವ ತಂತ್ರವೂ ಇದಾಗಿರಬಹುದು. ಲಿಂಗಾಯತರು ಮತ್ತು ಕುರುಬರು ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದಾರೆ. ಉಳಿದ ಜಾತಿಗಳು ತಕ್ಕ ಮಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಮಹಿಳೆಯರಿಗೆ ದುಡಿಯಲು ಕೆಲಸವಿಲ್ಲ. ಮಧ್ಯಾಹ್ನದ ವೇಳೆಯಲ್ಲಿ ಕೆಲಸವಿಲ್ಲದೆ ಮನೆಮುಂದೆ ಗುಂಪು ಗುಂಪಾಗಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಊರಿನ ಜನ ಬಡತನದಲ್ಲಿದ್ದರೂ ಹೆಂಗಸರು ಮತ್ತು ಗಂಡಸರು ಮಟಕಾ (ಓಸಿ) ಆಟ ಆಡುತ್ತಿದ್ದಾರೆ.

ಗ್ರಾಮ ಪಂಚಾಯ್ತಿ

ಕೃಷ್ಣನಗರದಲ್ಲಿ ಗ್ರಾಮಪಂಚಾಯ್ತಿ ಕಛೇರಿ ಇದೆ. ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡ ಇಲ್ಲ. ಸದ್ಯಕ್ಕೆ ಬಯಲು ರಂಗಮಂದಿರದ ಎಡಭಾಗದ ಪ್ರಸಾಧನ ಕೋಣೆಯನ್ನು ಗ್ರಾಮಪಂಚಾಯ್ತಿ ಕಛೇರಿಯಾಗಿ ಪರಿವರ್ತಿಸಲಾಗಿದೆ. ಬಲಭಾಗದ ಕೋಣೆಯನ್ನು ಗ್ರಾಮೀಣ ಗ್ರಂಥಾಲಯವಾಗಿ ಮಾರ್ಪಾಡು ಮಡಲಾಗಿದೆ.

ಪಂಚಾಯ್ತಿಯಲ್ಲಿ ಒಟ್ಟು ೫ ವಾರ್ಡುಗಳಿವೆ, ಕೃಷ್ಣನಗರದಲ್ಲಿ ಮೂರು ವಾರ್ಡಗಳು ಹಾಗೂ ದೌಲತಪುರದಲ್ಲಿ ಉಳಿದೆರಡು ವಾರ್ಡುಗಳಿವೆ, ಪ್ರತಿ ವಾರ್ಡಿನಲ್ಲಿಯೂ ಕನಿಷ್ಟ ೨೨೫ ಮನೆಗಳಿವೆ. ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು ೧೩ ಜನ ಸದಸ್ಯರು ಇವರಲ್ಲಿ ೯ ಜನ ಕೃಷ್ಣಾನಗರ ಹಾಗೂ ೪ ಮಂದಿ ಸದಸ್ಯರು ದೌಲತಪುರದಿಂದ ಆಯ್ಕೆಯಾಗಿದ್ದಾರೆ. ಇವರಲ್ಲಿ ೭ ಜನ ಮುಸ್ಲಿಂ ಸದಸ್ಯರಿದ್ದಾರೆ. ಮಹೀಳೆಯರು ಮೀಸಲಾತಿ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇವರಾರು ಕುಡಿಯುವ ನೀರು ನೈರ್ಮಲ್ಯ ಮುಂತಾದ ಮೂಲಭೂತ ಸೌಲಭ್ಯಗಳ ಪೂರೈಸುವಲ್ಲಿ ಗ್ರಾಮ ಪಂಚಾಯ್ತಿಗಳ ಕಾರ್ಯಕಲಾಪಗಳಲ್ಲಿ ಆಸಕ್ತಿಯ ಪಾತ್ರ ಕಂಡುಬರುತ್ತಿಲ್ಲ. ಗ್ರಾಮ ಪಂಚಾಯ್ತಿ ಚಟುವಟಿಕೆಗಳಲ್ಲಿ ಪುರುಷರ ಪಾತ್ರವೇ ಎದ್ದು ಕಾಣುತ್ತದೆ.

ಕುಡಿಯುವ ನೀರು ಪೂರೈಸುತ್ತಿರುವ ನೀರಿನ ಮೂಲಗಳು ಮತ್ತು ಅವುಗಳ ಸ್ಥಿತಿಗತಿ

ಕೃಷ್ಣನಗರ ಗ್ರಾಮ ಪಂಚಾಯ್ತಿಯು ತನ್ನ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ವಿವಿಧ ಮೂಲಗಳಿಂದ ಕುಡಿಯುವ ನೀರು ಪೂರೈಸುತ್ತಿದೆ. ಪ್ರಸ್ತುತ ಕುಡಿಯುವ ನೀರು ಪೂರೈಸುವಲ್ಲಿ ೧೫ ಕೈಪಂಪು ಕೊಳವೆ ಬಾವಿಗಳು ೮ ಕಿರುನೀರು ಘಟಕಗಳು, ೧೭ ಸಾರ್ವಜನಿಕ ನಳಗಳು ಹಾಗೂ ೧೧೪ ವೈಯಕ್ತಿಕ ನಳಗಳು ಕಾರ್ಯ ನಿರತವಾಗಿದೆ. ನೀರು ಸಂಗ್ರಹಿಸಲು ನಾಲ್ಕು ಟ್ಯಾಂಕುಗಳಿವೆ. ಆರು ಕೊಳವೆ ಬಾವಿಗಳಿದ್ದು ಅವುಗಳಿಗೆ ವಿದ್ಯುತ್ ಮೋಟಾರ್ ಜೋಡಿಸಲಾಗಿದೆ. ಬೋರ್‌ವೆಲ್‌ಗಳಿಂದ ನೀರನ್ನು ಟ್ಯಾಂಕುಗಳಲ್ಲಿ ದಾಸ್ತಾನುಗೊಳಿಸಿ ನಳಗಳ ಮೂಲಕ ವಿತರಿಸಲಾಗುತ್ತದೆ.

ಕೃಷ್ಣನಗರ: ಕೃಷ್ಣನಗರದಲ್ಲಿ ೮ ಕೈಪಂಪು ಕೊಳವೆ ಬಾವಿಗಳು, ೫ ಕಿರುನೀರು ಘಟಕಗಳು, ೧೩ ಸಾರ್ವಜನಿಕ ನಳಗಳು ಹಾಗೂ ೧೪ ವೈಯಕ್ತಿಕ ನಳಗಳಿವೆ, ನೀರು ಸಂಗ್ರಹಿಸಲು ೩ ಟ್ಯಾಂಕುಗಳಿವೆ, ೩ ಬೋರ್‌ವೆಲ್‌ಗಳಲ್ಲಿ ವಿದ್ಯುತ್ ಮೋಟಾರ್ ಸಹಾಯದಿಂದ ಮೇಲೆತ್ತಿದ ನೀರನ್ನು ಟ್ಯಾಂಕುಗಳಲ್ಲಿ ಸಂಗ್ರಹಿಸಿ ನಂತರ ನಳಗಳ ಮೂಲಕ ವಿತರಿಸಲಾಗುತ್ತಿದೆ. ನೀರು ಪೂರೈಕೆ ಮಾಡುವಲ್ಲಿ ಇಷ್ಟೆಲ್ಲಾ ಮೂಲಗಳಿದ್ದರೂ ಅವುಗಳ ದುರಸ್ಥಿ ಮತ್ತಿತರ ಸಮಸ್ಯೆಗಳಿಂದಾಗಿ ಜನತೆಗೆ ಸಾಕಷ್ಟು ಪ್ರಮಾಣದ ನೀರು ಪೂರೈಸಲಾಗುತ್ತಿಲ್ಲ. ೮ ಕೈಪಂಪು ಕೊಳವೆ ಬಾವಿಗಳು ಸಮರ್ಪಕವಾಗಿ ನೀರು ಪೂರೈಸುವ ಸ್ಥಿತಿಯಲ್ಲಿಲ್ಲ. ಬಸ್‌ಸ್ಟಾಂಡ್ ಹತ್ತಿರವಿರುವ ಕೈಪಂಪು ಕೊಳವೆ ಬಾವಿ ಬೌದ್ಧಿಕವಾಗಿ ಚೆನ್ನಾಗಿದೆ, ಮೊದಲು ನೀರು ಲಭ್ಯವಿತ್ತು. ಸದ್ಯದಲ್ಲಿ ನೀರು ಬರುತ್ತಿಲ್ಲ. ಉರ್ದು ಪ್ರಾಥಮಿಕ ಶಾಲೆಯ ಎದುರಿಗೆ ಮತ್ತೊಂದು ಕೈಪಂಪು ಕೊಳವೆ ಬಾವಿ ಇದೆ. ಇದರಲ್ಲಿ ನೀರು ಬರುತ್ತಿದೆ. ಉಪ್ಪು ನೀರು ಕುಡಿಯಲು ಯೋಗ್ಯವಾಗಿಲ್ಲ. ಕಬ್ಬಿಣದ ವಾಸನೆ ಬರುತ್ತಿದೆ. ಮನೆ ಬಳಕೆಗೂ ಸಹ ಬಳಸುತ್ತಿಲ್ಲ. ಸದ್ಯದಲ್ಲಿ ಆಶ್ರಯ ಮನೆ ಕಟ್ಟಡಗಳ ನಿರ್ಮಾಣಕ್ಕೆ ಈ ನೀರು ಬಳಸಲಾಗುತ್ತಿದೆ. ನೀರಿನ ಮೂಲದ ಸುತ್ತ ಕಸ ಕಡ್ಡಿ, ಕೆಸರು ತುಂಬಿ ಗಲೀಜಾಗಿದೆ. ಗ್ರಾಮ ಪಮಚಾಯ್ತಿಯ ಎದುರಿಗೆ ಮುಲಾನಿ ಮಸೀದಿ ಪಕ್ಕ ಇರುವ ಕೈಪಂಪು ಕೊಳವೆ ದೈಹಿಕವಾಗಿ ಆರೋಗ್ಯವಾಗಿದೆ. ಆದರೆ ನೀರು ಬತ್ತಿ ಹೋಗಿದೆ. ಇದರ ಸುತ್ತಲೂ ಕಟ್ಟಿರುವ ಕಟ್ಟೆಯ ಅರ್ಧ ಭಾಗ ಚರಂಡಿಗೆ ಹೋಗಿದೆ. ಮೂರನೆ ವಾರ್ಡಿನಲ್ಲಿ ಇಮಾಮ್‌ಸಾಬ್ ಮನೆ ಹತ್ತಿರ ಇರುವ ಕೈ ಪಂಪು ಕೊಳವೆ ಬಾವಿ ಕುತ್ತಿಗೆ ಮಟ್ಟ ಮುಚ್ಚಿ ಹೋಗಿದೆ. ಮೇಲ್ಗಡೆ ತಲೆ ಮಾತ್ರ ಕಾಣುತ್ತಿದೆ. ನೀರು ಒತ್ತುವ ಹಿಡಿಕೆ ನೆಲದ ಮೇಲೆ ಕೈ ಚಾಚಿಕೊಂಡು ಬಿದ್ದಿದೆ. ಒಂದು ವರ್ಷದಿಂದ ರಿಪೇರಿ ಕೆಲಸ ನಡೆದಿಲ್ಲ. ಅಕ್ಕ ಪಕ್ಕದ ಜನ ಅದರ ಮೇಲೆ ಸೌದೆ ಸೊಪ್ಪು ಹಾಕಿದ್ದಾರೆ.

ಗ್ರಾಮ ಪಂಚಾಯ್ತಿಯ ಹಿಂಭಾಗದಲ್ಲಿರುವ ದೊಡ್ಡ ಬಾವಿ ಹತ್ತಿರ ಒಂದು ಕೈಪಂಪು ಕೊಳವೆ ಬಾವಿ ಇದ್ದು ಅದರಲ್ಲಿ ನೀರು ಲಭ್ಯವಿದೆ. ಆದರೆ ಕುಡಿಯಲು ಯೋಗ್ಯವಾಗಿಲ್ಲ. ನೀರು ಕುಡಿದರೆ ಮೈ ಚರ್ಮ ತುರುಕಿ ಬರುತ್ತದೆ. ನಲ್ಲಿ ನೀರಿನ ಸಮಸ್ಯೆಯಿದ್ದಾಗ ಮಾತ್ರ ಮನೆ ಬಳಕೆಗೆ ಈ ನೀರು ಉಪಯೋಗಿಸಲಾಗುತ್ತದೆ. ಪರಿಶಿಷ್ಟರ ಕೇರಿಯಲ್ಲೊಂದು ಕೈ ಪಂಪು ಕೊಳವೆ ಬಾವಿ ಇದೆ. ಕೈ ಕಾಲು ಮುರಿದು ಹೋಗಿ ನೆಲಸಮವಾಗಿದೆ. ಎರಡು ವರ್ಷ ಕಳೆದರೂ ದುರಸ್ತಿ ಕೆಲಸ ನಡೆದಿಲ್ಲ. ಉಳಿದ ಎರಡು ಕೈಪಂಪುಗಳು ಕಾಣೆಯಾಗಿವೆ.

ಕಿರುನೀರು ಘಟಕಗಳು

ಪರಿಶಿಷ್ಟರ ಕಾಲೋನಿಯಲ್ಲಿ ಒಂದು ಕಿರುನೀರು ಘಟಕ ಸ್ಥಾಪಿಸಲಾಗಿದೆ. ಇದರಲ್ಲಿನ ನಾಲ್ಕು ನಳಗಳಲ್ಲಿ ಎರಡು ನಳಗಳು ಮುರಿದು ಹೋಗಿವೆ. ಮೊದಲು ನೀರು ಬರುತ್ತಿತ್ತು. ಈಗ ನೀರು ಬರುತ್ತಿಲ್ಲ. ಕಿರುನೀರು ಘಟಕದ ಸುತ್ತಲೂ ಕೆಸರಿನ ರೊಚ್ಚು ನಿಂತಿದೆ. ಇತ್ತೀಚಿಗೆ ಒಂದು ಸಾರ್ವಜನಿಕ ನಳ ಅಲ್ಲಿಯೇ ನಿರ್ಮಿಸಲಾಗಿದೆ.

ಕೋಟೆಯ ಹೊರ ಬಾಗಿಲು ಹತ್ತಿರ ಕಿರುನೀರು ಘಟಕ ನಿರ್ಮಿಸಲಾಗಿದೆ. ಅದು ಚಾಲನೆಯಲ್ಲಿ ಇಲ್ಲ. ನಳಗಳು ಮುರಿದು ಹೋಗಿವೆ. ಗಿಡಗಂಟೆ ತಿಪ್ಪೆಗಳು ನೀರಿನ ಘಟಕವನ್ನು ಮುಚ್ಚಿಕೊಂಡಿವೆ. ಅದರ ಪಕ್ಕದಲ್ಲೆ ಬಟ್ಟೆ ಒಗೆಯಲು ಹಾಕಿದ ಎರಡು ಬಂಡೆಗಳು ಅನಾಥವಾಗಿ ನಿಂತಿವೆ. ನೆಲ ಟ್ಯಾಂಕಿನ ಎಡಭಾಗದಲ್ಲೊಂದು ಕಿರುನೀರು ಘಟಕ ಸ್ಥಾಪಿಸಲಾಗಿದೆ. ಅವುಗಳಿಗೆ ನಲ್ಲಿಗಳನ್ನು ಅಳವಡಿಸಿಲ್ಲ, ಮೇಲ್ಛಾವಣಿಯೂ ಇಲ್ಲ. ಗ್ರಾಮ ಪಂಚಾಯ್ತಿಯ ಪಕ್ಕದಲ್ಲಿರುವ ಕೀರುನೀರು ಘಟಕದಲ್ಲಿ ನಾಲ್ಕು ವರ್ಷಗಳು ಹಿಂದೆ ನೀರು ಬರುತ್ತಿತ್ತು. ಈಗ ಅದು ಚಾಲ್ತಿಯಲ್ಲಿಲ್ಲ. ಅದಕ್ಕೆ ಅಳವಡಿಸಿದ ನಳಗಳೆಲ್ಲಾ ಮುರಿದು ಹೋಗಿವೆ. ಅದರ ಎದುರಿಗೆ ಊರಿನ ಕೊಳಚೆ ನೀರು ಹರಿದು ಹೋಗುತ್ತಿದೆ. ಕೃಷ್ಣನಗರದಿಂದ ಸಂಡೂರಿಗೆ ಹೋಗುವ ಕೋಟೆಯ ಹಿಂಭಾಗದ ಹತ್ತಿರ ಇರುವ ಕಿರುನೀರು ಘಟಕದಲ್ಲಿನ ನೀರು ವಿಶಯುಕ್ತವಾಗಿದ್ದು ಅದರ ಬಳಕೆಯಾಗುತ್ತಿಲ್ಲ.

ನಲ್ಲಿ ಜಾಲದ ಮೂಲಗಳು

ಕುಡಿಯುವ ನೀರು ಸರಬರಾಜಿಗಾಗಿ ೧೩ ಸಾರ್ವಜನಿಕ ನಳಗಳನ್ನು ಅಳವಡಿಸಲಾಗಿದೆ. ನೀರಿನ ಮೂರು ಟ್ಯಾಂಕುಗಳಿವೆ. ಗ್ರಾಮ ಪಂಚಾಯ್ತಿಯ ಹತ್ತಿರ ಒಂದು ಟ್ಯಾಂಕ್ ಇದೆ. ಎರಡು ಮತ್ತು ಮೂರನೆ ವಾರ್ಡಿನ ಮಧ್ಯೆ ಮತ್ತೊಂದು ಟ್ಯಾಂಕ್ ನಿರ್ಮಿಸಲಾಗಿದೆ. ಅದು ಇನ್ನೂ ಕಾರ್ಯಾರಂಭ ಮಾಡಿಲ್ಲ. ೩ ಪಂಪ್‌ಸೆಟ್‌ಗಳಿವೆ ಇವುಗಳಿಗೆ ವಿದ್ಯುತ್ ಮೋಟರ್ ಅಳವಡಿಸಲಾಗಿದೆ. ಇದರ ನೆರವಿನಿಂದ ಅಂತರ್ಜಲವನ್ನು ಮೇಲೆತ್ತಿ ನೀರಿನ ಟ್ಯಾಂಕುಗಳಲ್ಲಿ ಸಂಗ್ರಹಿಸಿ ನಲ್ಲಿಗಳ ಮೂಲಕ ವಿತರಿಸಲಾಗುತ್ತಿತ್ತು.

ರಸ್ತೆ ವಿಸ್ತೀರ್ಣ ಹೆಚ್ಚಿಸಲು ನಡೆಯುತ್ತಿರುವ ಕಾಮಗಾರಿಯಿಂದಾಗಿ ಅಲ್ಲಿ ನೀರು ಸರಬರಾಜು ಮಾಡುತ್ತಿದ್ದ ಪೈಪುಗಳ ದುರಸ್ಥಿಗೊಂಡಿವೆ. ಬಾಬಯ್ಯನ ತಿರುವಿನ ಸ್ಮಶಾನದಲ್ಲಿರುವ ಖಾಸಗಿಯವರ ತೋಟದ ಪಂಪ್‌ಸೆಟ್‌ಗೆ ಗ್ರಾಮ ಪಂಚಾಯ್ತಿಯವರು ವಿದ್ಯುತ್ ಮೋಟರ್ ಜೋಡಿಸಿ ಸದ್ಯದಲ್ಲಿ ನೀರು ಪೂರೈಸಲಾಗುತ್ತಿದೆ.

ದೌಲತಪುರ : ದೌಲತಪುರದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ೩ ಕಿರುನೀರು ಘಟಕಗಳು, ೭ ಕೈಪಂಪು ಕೊಳವೆ ಬಾವಿಗಳು, ೪ ಸಾರ್ವಜನಿಕ ನಳಗಳು ಹಾಗೂ ೧೦೦ ವೈಯಕ್ತಿಕ ನಳಗಳನ್ನು ಅಳವಡಿಸಲಾಗಿದೆ. ಹಾಗೂ ಒಂದು ನಿರಿನ ಟ್ಯಾಂಕು ಇದೆ.

ಕೈಪಂಪು ಕೊಳವೆ ಬಾವಿಗಳು

ಹೊನ್ನುರಸ್ವಾಮಿ ದೇವಸ್ಥಾನದ ಬಳಿ ಒಂದು ಕೈಪಂಪು ಕೊಳವೆ ಬಾವಿ ನಿರ್ಮಿಸಲಾಗಿದೆ. ಆರು ತಿಂಗಳ ಹಿಂದೆ ನೀರು ಬರುತ್ತಿತ್ತು. ಈಗ ಇದ್ದಕ್ಕಿದ್ದಂತೆ ನೀರು ನಿಂತು ಹೋಗಿವೆ. ನೀರು ಕುಡಿಯಲು ಉತ್ತಮವಾಗಿತ್ತು ಮತ್ತು ನೀರಿನ ಇಳುವರಿ ಪ್ರಮಾಣವು ಅಧಿಕವಿತ್ತು. ಈಗ ನೀರು ಬತ್ತಿಹೋಗಿವೆ. ರಿಪೇರಿ ಕೆಲಸ ನಡೆದಿಲ್ಲ. ಮಸೀದಿ ಹತ್ತಿರ ಮತ್ತೊಂದು ಕೈಪಂಪು ಕೊಳವೆ ಬಾವಿಯಿದೆ. ಕಿರುನೀರು ಘಟಕಕ್ಕೆ ನೀರು ಸರಬರಾಜು ಮಾಡಲು ಬೋರ್‌ವೆಲ್ ಕೊರೆಯಲಾಗುತ್ತಿತ್ತು. ನೀರಿನ ಇಳುವರಿ ತುಂಬ ಕಡಿಮೆ ಇದ್ದುದರಿಂದ ಇದಕ್ಕೆ Hand pump ಅಳವಡಿಸಲಾಗಿದೆ. ತುಂಬಾ ಸಮಯ ಜಗ್ಗಿದರೆ ಮಾತ್ರ ನೀರು ಬರುತ್ತದೆ. ನಲ್ಲಿ ನೀರು ಸರಬರಾಜು ಇಲ್ಲದಿದ್ದರೆ ಮಾತ್ರ ಈ ಕೈಪಂಪನ್ನು ಬಳಸಲಾಗುತ್ತದೆ. ಸುತ್ತಲೂ ರೊಚ್ಚೆ ನೀರು ನಿಂತಿದೆ. ಶಾಲಾ ಪಕ್ಕದಲ್ಲಿ ಮತ್ತೊಂದು ಕೈ ಪಂಪು ಕೊಳವೆ ಬಾವಿ ಇದೆ. ಅದರ ಕೈಕಾಲು ಎಲ್ಲಾ ಮುರಿದು ತುಕ್ಕು ಹಿಡಿದಿದೆ. ತುಂಬಾ ವರ್ಷಗಳಿಂದ ರಿಪೇರಿ ಕೆಲಸ ನಡೆದಿಲ್ಲ. ಇದರ ಸುತ್ತಲೂ ಕಟ್ಟಿದ್ದ ಪುಟ್ಟ ಕಟ್ಟೆ ಹೊಡೆದು ಹೋಗಿದೆ. ಗೌಡರ ಮನೆ ಹತ್ತಿರ ತಿಪ್ಪೆಯೊಳಗೆ ಒಂದು ಬೋರ್ ಮುಚ್ಚಿ ಹೋಗಿದೆ. ಕೈಪಂಪಿಗೆ ಅಳವಡಿಸಿದ್ದ ಕೈ ಮುರಿದು ಹೋಗಿದೆ. ವಿದ್ಯುತ್ ಕಂಬ ಬೀಳದಿರಲೆಂದು ವಿದ್ಯುತ್ ಕಂಬ ಮತ್ತು ಈ ಕೈಪಂಪು ಕೊಳವೆ ಬಾವಿ ತಲೆಗೂ ಒಂದು ದಪ್ಪ ವೈರ್ ಬಿಗಿಯಲಾಗಿದೆ. ಮುಸ್ಲಿಂ ಬೀದಿಯಲ್ಲಿ ಒಂದು ಕೈಪಂಪು ಅಳವಡಿಸಲಾಗಿದೆ. ರಿಪೇರಿ ಮಾಡಲೆಂದು ಬಂದಿದ್ದವರು ಅದರ ಒಳಗಿದ್ದ ಎಲ್ಲ ಪೈಪುಗಳನ್ನು ಹೊರಗೆ ತೆಗೆದು ಬಿಸಾಕಿ ಹೋದವರು ನಾಲ್ಕು ತಿಂಗಳಾದರೂ ತಿರುಗಿ ನೋಡಿಲ್ಲ. ಕೊಳವೆ ಬಾವಿ ಇದ್ದ ಸ್ಥಳವನ್ನು ಪಕ್ಕದ ಮನೆಯವರು ಸಾರಿಸಿ ಗುಡಿಸಿ ಸಮ ಮಾಡಿಕೊಂಡಿದ್ದಾರೆ. ಪರಿಶಿಷ್ಟರ ಕೇರಿಯ ಅಂಬ್ರಪ್ಪನ ಮನೆ ಹತ್ತಿರ ಇರುವ ಕೈಪಂಪು ಕೊಳವೆ ಬಾವಿ ದುರಸ್ಥಿಗೊಂಡು ಬಹಳ ವರ್ಷಗಳಿಂದ ರಿಪೇರಿ ಕೆಲಸ ನಡೆದಿಲ್ಲ. ರಿಪೇರಿ ಮಾಡಿಸುವತ್ತ ಜನರೂ ಸಹ ಗಮನ ಹರಿಸುತ್ತಿಲ್ಲ. ಚಪ್ಪದಹಳ್ಳಿ ಶರೀಪರ ಮನೆಯ ಪಕ್ಕದಲ್ಲಿರುವ ಕೈಪಂಪು ಕೊಳವೆ ಬಾವಿ ದುರಸ್ಥಿಗೊಂಡು ತುಂಬಾ ವರ್ಷಗಳಾಗಿವೆ. ಎಲ್ಲಾ ತುಕ್ಕು ಹಿಡಿದಿದೆ. ರಿಪೇರಿ ಕೆಲಸ ನಡೆದಿಲ್ಲ. ಪರಿಶಿಷ್ಟರ ಕೇರಿ ಮತ್ತು ಚಪ್ಪರದಹಳ್ಳಿ ಕೈಪಂಪು ಕೊಳವೆ ಬಾವಿಗಳ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದೆ.

ಕಿರು ನೀರಿನ ಘಟಕಗಳು

ಶಾಲಾ ಮುಂಭಾಗದಲ್ಲಿ ಒಂದು ಕಿರುನೀರು ಘಟಕ ಇದೆ. ಅದರ ಎರಡು ನಳಗಳು ಮುರಿದು ಸುತ್ತಲು ಕಲ್ಲುದುಂಡಿಗಳು ಬಿದ್ದಿವೆ. ಕೊಡಗಳನ್ನು ಇಟ್ಟು ನೀರು ತುಂಬಿಕೊಳ್ಳಲು ಸ್ಥಳವಿಲ್ಲ. ಎರಡೆ ನಲ್ಲಿಗಳು ಇರುವುದರಿಂದ ನೀರು ಸಂಗ್ರಹಿಸುವಾಗ ಸಣ್ಣಪುಟ್ಟ ಜಗಳಗಳಾಗುತ್ತಿರುತ್ತವೆ. ನೀರು ಕುಡಿಯಲು ಉತ್ತಮವಾಗಿದೆ. ಮಸೀದಿ ಹತ್ತಿರವಿರುವ ಟ್ಯಾಂಕ್ ಸುತ್ತ ಸ್ವಚ್ಛ ಪರಿಸರವಿದೆ. ನೀರು ಕುಡಿಯಲು ಮತ್ತು ಬಳಕೆಗೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ಅದರ ಪಕ್ಕದಲ್ಲೆ ಒಂದು ದೊಡ್ಡ ತೊಟ್ಟಿ ನಿರ್ಮಿಸಲಾಗಿದೆ. ಎಲ್ಲರೂ ಆ ತೊಟ್ಟಿ ನೀರಿನಿಂದ ಬಟ್ಟೆ ಒಗೆಯುತ್ತಾರೆ.

ಮುಸ್ಲಿಂ ಮತ್ತು ಪರಿಶಿಷ್ಟರ ಕೇರಿಯಲ್ಲಿ ಮತ್ತೊಂದು ಕಿರುನೀರು ಘಟಕವಿದೆ. ಕುಡಿಯಲು ನೀರು ಉತ್ತಮವಾಗಿದೆ. ಒಂದು ನಲ್ಲಿ ನಾಪತ್ತೆಯಾಗಿದೆ. ಘಟಕದ ಸುತ್ತಲೂ ಹಾಕಿದ ಸಿಮೆಂಟ್ ಕಿತ್ತು ಹೋಗಿದೆ. ಪಕ್ಕದಲ್ಲಿ ಚರಂಡಿ ಇದೆ. ಅದರೊಳಗೆ ಕಸಕಡ್ಡಿ ಬಿದ್ದಿವೆ, ನೋಡಲು ಗಲೀಜಾಗಿ ಕಾಣುತ್ತದೆ.

ನಲ್ಲಿ ನೀರಿನ ಮೂಲಗಳು

ನಲ್ಲಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ೪ ಸಾರ್ವಜನಿಕ ಹಾಗೂ ೧೦೦ ವೈಯಕ್ತಿಕ ನಳಗಳನ್ನು ಅಳವಡಿಸಲಾಗಿದೆ. ಒಂದು ಟ್ಯಾಂಕ್ ಇದೆ. ೭ ಕೊಳವೆ ಬಾವಿಗಳಿವೆ. ಮಸೀದಿ ಹಿಂಭಾಗದಲ್ಲಿ ಮೊದಲು ಒಂದು ಕೊಳವೆ ಬಾವಿ ಕೊರೆಯಲಾಗಿ ಸುತ್ತಲು ತಿಪ್ಪೆಗಳಿದ್ದು ಅದರಲ್ಲಿ ವಿಷಯುಕ್ತ ನೀರು ಬರುತ್ತಿತ್ತು. ಆ ಕಾರಣ ದೌಲತಪುರ ತಿರುವಿನಲ್ಲಿ ಮತ್ತೊಂದು ಬೋರ್ ಕೊರೆಯಲಾಗಿತ್ತು. ಇತ್ತೀಚಿಗೆ ಇನ್ನೂ ಒಂದು ಬೋರ್‌ವೆಲ್‌ ಕೊರೆದು ವಿದ್ಯುತ್ ಮೋಟರ್ ಅಳವಡಿಸಲಾಗಿದೆ. ಬೋರ್‌ವೆಲ್‌ನಿಂದ ನೀರು ಟ್ಯಾಂಕ್‌ಗೆ ಏರುವುದಿಲ್ಲ. ಆದ ಕಾರಣ ನಳದ ನೀರು ಸರಬರಾಜಿನಲ್ಲಿ ಸಮಸ್ಯೆ ಇದೆ. ಒಟ್ಟಾರೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ೧೫ ಕೈಪಂಪು ಕೊಳವೆ ಬಾವಿಗಳಲ್ಲಿ ಮೂರು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೃಷ್ಣನಗರದಲ್ಲಿರುವ ಎರಡು ಕೈಪಂಪುಗಳು ನೀರು ಕುಡಿಯಲು ಯೋಗ್ಯವಾಗಿಲ್ಲ.ಆದರೆ ಒಂದು ಕೈಪಂಪು ಕೊಳವೆ ಬಾವಿಯ ನೀರು ಬಳಕೆಗೆ ಮಾತ್ರ ಯೋಗ್ಯವಾಗಿದೆ. ದೌಲತಪುರದಲ್ಲಿರುವ ಒಂದು ಕೈಪಂಪು ಕೊಳವೆ ಬಾವಿ ನೀರು ಕುಡಿಯಲು ಮತ್ತು ಬಳಸಲು ಯೋಗ್ಯವಾಗಿದೆ.

ಕುಡಿಯುವ ನೀರು ಪೂರೈಸುತ್ತಿರುವ ೮ ಕಿರುನೀರು ಘಟಕಗಳಲ್ಲಿ ೩ (ದೌಲತಪುರ) ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕುಡಿಯಲು ನೀರು ಯೋಗ್ಯವಾಗಿದೆ. ಇನ್ನೂ ೫ ಕಿರುನೀರು ಘಟಕಗಳು (ಕೃಷ್ಣನಗರ) ಪೂರ್ಣ ದುರಸ್ಥಿಗೊಂಡಿದ್ದು ಸದ್ಯ ಅವುಗಳು ಚಾಲ್ತಿಯಲ್ಲಿಲ್ಲ. ನಳದ ನೀರು ಪೂರಯಸುವಲ್ಲಿ ವಿದ್ಯುತ್ ಮೋಟಾರ ಜೋಡಿಸಿದ ೬ ಪಂಪ್‌ಸೆಟ್‌ಗಳಿದ್ದು ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನೀರು ದಾಸ್ತಾನುಗೊಳಿಸಲು ನಾಲ್ಕು ಟ್ಯಾಂಕುಗಳಿವೆ. ಇವುಗಳಲ್ಲಿ ೩ ಟ್ಯಾಂಕ್‌ಗಳು ಕೃಷ್ಣನಗರದಲ್ಲಿದ್ದು ಉಳಿದ ಒಂದು ಟ್ಯಾಂಕ್ ದೌಲತ್‌ಪುರದಲ್ಲಿದೆ. ಕೃಷ್ಣನಗರದಲ್ಲಿರುವ ನೀರಿನ ಹೊಸ ಟ್ಯಾಂಕ್ ಇನ್ನೂ ಕಾರ್ಯಾರಂಭ ಮಾಡಿಲ್ಲ. ದೌಲತ್‌ಪುರದಲ್ಲಿರುವ ನೀರಿನ ಟ್ಯಾಂಕ್‌ಗೆ ಪಂಪಸೆಟ್‌ನಿಂದ ನೀರು ಏರುತ್ತಿಲ್ಲ. ಕೃಷ್ಣನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿನ ನೀರು ಸರಬರಾಜು ಮಾಡುತ್ತಿದ್ದ ನೀರಿನ ಕೊಳವೆಗಳು ದುರಸ್ಥಿಗೊಂಡಿದೆ. ಸದ್ಯದಲ್ಲಿ ಖಾಸಗಿ ಕೊಳವೆ ಬಾವಿಯೊಂದರಿಂದ ನೀರು ಸರಬರಾಜು ಮಾಡಲಾಗುತ್ತಿದೆ.