ಅಧ್ಯಯನದ ಫಲಿತಗಳು

ನೀರು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ಮತ್ತು ಅಗತ್ಯದಷ್ಟು ಪ್ರಮಾಣದ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಈ ಕೊರತೆಯಿಂದಾಗಿ ತನ್ನ ಸುತ್ತಮುತ್ತಲಿನ ಪರಿಸರ ಮಲಿನಗೊಂಡಿರುತ್ತದೆ. ಇಂತಹ ಸ್ಥಳಗಳಲ್ಲಿ ವಾಸಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಗಮನಿಸಿದ ಸರಕಾರ ಹಳ್ಳಿಯ ಜನರಿಗೆ ಸುರಕ್ಷಿತವಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸಲು, ಅನೇಕ ಕಾರ್ಯಕ್ರಮಗಳನ್ನು ಗ್ರಾಮಪಂಚಾಯ್ತಿಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ.

ಗ್ರಾಮೀಣ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಗ್ರಾಮ ಪಂಚಾಯ್ತಿಗಳ ಜವಾಬ್ದಾರಿಯಾಗಿದ್ದು ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸುವಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇಂತಹ ಗ್ರಾಮ ಪಂಚಾಯ್ತಿಗಳಲ್ಲಿ ಕೃಷ್ಣನಗರ ಗ್ರಾಮಪಂಚಾಯ್ತಿಯು ಒಂದು. ಕೃಷ್ಣನಗರ ಗ್ರಾಮ ಪಂಚಾಯ್ತಿಯು ಕೃಷ್ಣನಗರ ಮತ್ತು ದೌಲತ್‌ಪುರ ಎರಡು ಹಳ್ಳಿಗಳು ಒಳಗೊಂಡಿವೆ. ಕೆಳ ಮಾಧ್ಯಮ ಜಾತಿಗಳೇ ಅಧಿಕ ಸಂಖ್ಯೆಯಲ್ಲಿದ್ದು ಇಲ್ಲಿ ಶೇ. ೬೫ಕ್ಕೆ ಹೆಚ್ಚು ಮುಸ್ಲಿಂ ಕುಟುಂಬಗಳಿದ್ದು ಮೊದಲನೆಯ ಸ್ಥಾನದಲ್ಲಿದ್ದರೆ, ಕುರುಬರ ಜಾತಿ ಕುಟುಂಬಗಳು ಎರಡನೆ ಸ್ಥಾನದಲ್ಲಿದ್ದಾರೆ. ಕುರುಬರು ಕೃಷ್ಣನಗರದಲ್ಲಿ ಮಾತ್ರ ನೆಲಸಿದ್ದಾರೆ ಉಳಿದಂತೆ ಲಿಂಗಾಯತರು, ಮರಾಠರು, ಬಡಿಗೇರರು, ಅಜಾಮರು, ಮಡಿವಾಳರು, ಪರಿಶಿಷ್ಟ ಜಾತಿ/ಪಂಗಡ ಮತ್ತಿತರ ಜಾತಿ-ಕುಟುಂಬಗಳು ಎರಡು ಹಳ್ಳಿಗಳಲ್ಲೂ ನೆಲೆಸಿದ್ದಾರೆ. ತಲಾವಾರು ಸರಾಸರಿ ೬ ರಷ್ಟು ಜನಸಂಖ್ಯೆ ಇದೆ. ಪರಿಶಿಷ್ಟ ಜಾತಿ ಜನರು ಊರ ಹೊರಗೆ ಕೇರಿಯಲ್ಲಿ ನೆಲೆಸಿದ್ದಾರೆ. ಕೃಷ್ಣನಗರದಲ್ಲಿ ಪರಿಶಿಷ್ಟರ ಕೇರಿ ಊರಿನ ಆಚೆ ಇದೆ. ದೌಲತ್‌ಪುರದಲ್ಲಿ ಕೇರಿ ಊರಿಂದ ಹೊರಗಿದ್ದರೂ ಇತ್ತೀಚಿಗೆ ಸರಕಾರ ಉಚಿತ ಸೌಲಭ್ಯ ಒದಗಿಸುವಲ್ಲಿ ಕೇರಿ ಒಂದರೊಳಗೊಂದು ಸೇರಿಕೊಂಡಂತೆ ಕಂಡರೂ ಜಾತಿಯ ಆಚರಣೆ ಇದೆ. ಪರಿಶಿಷ್ಟ ಜಾತಿ ಜನರಿಗೆ ಸವರ್ಣೀಯ ಮನೆಯೊಳಗೆ, ಸಾರ್ವಜನಿಕ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ಕುಡಿಯುವ ನೀರು ಸಂಗ್ರಹಿಸುವಲ್ಲಿ ಜಾತಿ ಮಡಿ ಮೈಲಿಗೆ ಎದ್ದು ಕಾಣುತ್ತದೆ.

ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಸೌಲಭ್ಯದ ಬೇಡಿಕೆಯು ಜನಸಂಖ್ಯೆ ಪ್ರಮಾಣ ಅವಲಂಬಿಸಿರುತ್ತದೆ. ಗ್ರಾಮಪಂಚಾಯ್ತಿಯಲ್ಲಿ ಒಟ್ಟಾರೆ ೭೦೯೫ ಜನ ಇದ್ದಾರೆ. ಇವರಲ್ಲಿ ಶೇ. ೫೩.೯೨ ರಷ್ಟು ಪುರುಷರಿದ್ದಾರೆ. ಶೇ, ೪೬.೩ ಮಹಿಳೆಯರಿದ್ದಾರೆ. ಶಿಕ್ಷಣವು ಜನತೆಯು ಪಡೆಯುತ್ತಿರುವ ನೀರಿನ ಗುಣಮಟ್ಟ, ನೀರಿನ ಪ್ರಮಾಣ ಹಾಗೂ ನೈರ್ಮಲ್ಯವನ್ನು ಪ್ರತಿಬಿಂಬಿಸುತ್ತಿದೆ. ಇಲ್ಲಿನ ಶಿಕ್ಷಣ ಪ್ರಮಾಣ ನೋಡಿದಾಗ ತೀರ ಕಡಿಮೆ ಪ್ರಮಾಣದಲ್ಲಿದೆ (೩೯%). ಮಹಿಳೆಯರ ಶಿಕ್ಷಣ ಪ್ರಮಾಣ ಇನ್ನೂ ಶೋಚನೀಯ (೨೯%) ಸ್ಥಿತಿಯಲ್ಲಿದೆ.

ಕೃಷ್ಣನಗರ ಗ್ರಾಮ ಪಂಚಾಯ್ತಿಯು ತಾಲ್ಲೂಕು ಕೇಂದ್ರವಾದ ಸಂಡೂರಿನಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದ್ದರೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಪಡೆಯುವಲ್ಲಿ ರಾಜ್ಯದ ಇತರೆ ಹಳ್ಳಿಗಳನ್ನು ಪ್ರತಿಬಿಂಬಿಸಲಾಗುವಂತಿದೆ. ಗ್ರಾಮ ಪಂಚಾಯ್ತಿಯು ತನ್ನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸುವಲ್ಲಿ ಜನಸಂಖ್ಯೆ ಪ್ರಮಾಣಕ್ಕಿಂತ ಅಧಿಕ ನೀರಿನ ಮೂಲಗಳನ್ನು ಅನುಷ್ಠಾನಗೊಳಿಸಿದೆ. ಶೇ. ೪೫.೫ ರಷ್ಟು ಕೈಪಂಪು ಕೊಳವೆ ಬಾವಿಗಳು, ಶೇ. ೫೦ ರಷ್ಟು ಕಿರುನೀರು ಘಟಕಗಳು ಹಾಗೂ ಶೇ. ೫೦ರಷ್ಟು ನೀರಿನ ಮೂಲಗಳನ್ನು ಅನುಷ್ಠಾನಗೊಳಿಸಿದೆ. ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಶೇ. ೧೭.೪೮ ರಷ್ಟು ಶೌಚಾಲಯ ಸೌಲಬ್ಯ ಒದಗಿಸಲಾಗಿದೆ. ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಲಾದ ಹದಿನೈದು ಕೈಪಂಪು ಕೊಳವೆ ಬಾವಿಗಳಲ್ಲಿ ಕೇವಲ ಮೂರು ಕೈಪಂಪು ಕೊಳವೆ ಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲು ಎರಡು ಕೈಪಂಪು ಕೃಷ್ಣನಗರದಲ್ಲಿದೆ. ಇನ್ನೊಂದು ಕೈಪಂಪು ಕೊಳವೆ ಬಾವಿ ದೌಲತ್‌ಪುರದಲ್ಲಿದೆ. ಇನ್ನು ಎಂಟು ಕಿರುನೀರು ಘಟಕಗಳಲ್ಲಿ ದೌಲತ್‌ಪುರದಲ್ಲಿದ್ದು ಮೂರು ಕಿರುನೀರು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಎರಡು ಕೈಪಂಪುಗಳು ಕೃಷ್ಣನಗರದಲ್ಲಿವೆ. ನಲ್ಲಿ ನೀರಿಗಾಗಿ ನಿರ್ಮಿಸಿರುವ ಆರು ಪಂಪಸೆಟ್‌ಗಳಲ್ಲಿ ಕೃಷ್ಣನಗರ ಮತ್ತು ದೌಲತ್‌ಪುರದಲ್ಲಿ ತಲಾ ಒಂದೊಂದು ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸುತ್ತಿವೆ. ನೀರು ದಾಸ್ತಾನುಗೊಳಿಸಲಿರುವ ನಾಲ್ಕು ಟ್ಯಾಂಕುಗಳಲ್ಲಿ ಕೃಷ್ಣನಗರ ದೌಲತ್‌ಪುರದಲ್ಲಿದ್ದು ಒಂದು ಟ್ಯಾಂಕ್ ಮಾತ್ರ ಚಾಲ್ತಿಯಲ್ಲಿದೆ. ಅಧ್ಯಯನಕ್ಕೆ ಒಳಪಟ್ಟ ಕುಟುಂಬಗಳು ಸರಾಸರಿ ತಲಾವಾರು ೩೩ ಲೀಟರ್‌ ನೀರು ಪಡೆಯುತ್ತಿವೆ. ಬಹುತೇಕ (೬೦%) ಕುಟುಂಬಗಳು ೨೫ ಲೀಟರ್‌ನಷ್ಟು ನೀರು ಪಡೆಯುತ್ತಿವೆ. ದೌಲತ್‌ಪುರದಲ್ಲಿ ಮಾತ್ರ ಶೇ. ೩೩ ರಷ್ಟು ಕುಟುಂಬಗಳು ೪೦ ಲೀಟರ್‌ಗಿಂತ ಹೆಚ್ಚಿನ ಪ್ರಮಾಣದ ನೀರು ಪಡೆಯುತ್ತಿದ್ದರೆ ಕೃಷ್ಣನಗರದಲ್ಲಿ ಯಾವ ಕುಟುಂಬಗಳು ತಲಾವಾರು ೪೦ ಲೀಟರ್‌ಗಿಂತ ಹೆಚ್ಚಿನ ಪ್ರಮಾಣದ ನೀರು ಪಡೆಯುತ್ತಿಲ್ಲ. ಕುಡಿಯುವ ನೀರು ಪಡೆಯುವಲ್ಲಿ ದೌಲತ್‌ಪುರ (೩೬%) ಕೃಷ್ಣನಗರಕ್ಕಿಂತ (೩೧%) ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ. ಗುಣಮಟ್ಟಕ್ಕೆ ಸಂಬಂಧಿಸಿದಂತೆಯೂ ಒಟ್ಟು ಶೇ. ೩೧.೨೫ ರಷ್ಟು ಕುಟುಂಬಗಳು ನೀರಿನ ಗುಣಮಟ್ಟದ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ. ೫೦ ರಷ್ಟು ಕುಟುಂಬಗಳಲ್ಲಿ ಕುಡಿಯಲು ನೀರು ಯೋಗ್ಯವಾಗಿಲ್ಲ. ಶೇ. ೨೦ ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾದ ನೀರು ಪಡೆಯುತ್ತಿವೆ.

ದೌಲತ್‌ಪುರದಲ್ಲಿ ನೀರಿನ ಗುಣಮಟ್ಟದ ಸಮಸ್ಯೆ ಕಂಡು ಬಂದಿಲ್ಲ. ಇಲ್ಲಿನ ಜನತೆ ಕುಡಿಯುವ ನೀರನ್ನು ಶೋಧಿಸಿ ಕುಡಿಯುತ್ತಿದ್ದಾರೆ. ಕೃಷ್ಣನಗರದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಸಮಸ್ಯೆಯಿಂದಾಗಿಯೇ ಅನೇಕ ಕುಟುಂಬಗಳಲ್ಲಿ ಜನರು ಮೈಕೈ ತುರುಕೆಯಂತ ರೋಗಗಳನ್ನು ಅನುಭವಿಸುತ್ತಿದ್ದಾರೆ.

ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಯಾವ ಕುಟುಂಬಗಳು ಕುಡಿಯುವ ನೀರಿಗಾಗಿ ಕೈಪಂಪು ಕೊಳವೆ ಬಾವಿಗಳನ್ನು ಅವಲಂಬಿಸಿಲ್ಲ. ಅಧ್ಯಯನಕ್ಕೆ ಒಳಪಟ್ಟ ಬಹುತೇಕ ಕುಟುಂಬಗಳು ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೈಪಂಪು ಕೊಳವೆ ಬಾವಿ, ನಲ್ಲಿ ನೀರಿನ ಮೂಲಗಳು ಕಿರುನೀರು ಘಟಕಗಳನ್ನು ಅವಲಂಬಿಸಿದೆ. ಹೊಸ ನೀರು ಬಂದು ಹಳೆ ನೀರು ಕೊಚ್ಚಿದಂತೆ ಕಿರುನೀರು ಘಟಕಗಳು, ನಲ್ಲಿ ನೀರಿನ ಮೂಲಗಳು ಬಂದ ಮೇಲೆ ಕೈಪಂಪು ಕೊಳವೆ ಬಾವಿಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ.

ಮಳೆಗಾಲದಲ್ಲಿ ನೀರಿನ ಸಮಸ್ಯೆ ಒಂದಿಷ್ಟು ಕಡಿಮೆಯಾದರೂ ಬೇಸಿಗೆ ಹೆಚ್ಚಿದಂತೆಲ್ಲಾ ನೀರಿನ ಹೆಚ್ಚು ಹೆಚ್ಚು ಕೊರತೆ ಉಂಟಾಗುತ್ತದೆ. ನೀರಿನ ಕೊರತೆ ಹೆಚ್ಚಾದಂತೆಲ್ಲಾ ಜನರು ೨-೩ ಕಿ.ಮೀ. ದೂರದ ತೋಟದ ಬಾವಿಗಳಿಂದ ನೀರು ಸಂಗ್ರಹಿಸಿ ತರುತ್ತಾರೆ. ಶೇ. ೨೭ರಷ್ಟು ಕುಟುಂಬಗಳು ಅರ್ಧ ಕಿ.ಮೀ. ದೂರದೊಳಗೆ ನೀರು ಸಂಗ್ರಹಿಸಿ ತರುತ್ತಿದ್ದರೆ ಉಳಿದ ಶೇ. ೨೮ ರಷ್ಟು ಕುಟುಂಬಗಳು ಅರ್ಧ ಕಿ.ಮೀ. ಯಿಂದ ಒಂದು ಕಿ.,ಮೀ. ದೂರದೊಳಗೆ ನೀರು ಸಂಗ್ರಹಿಸುತ್ತಿದ್ದಾರೆ. ನೀರಿನ ಕೊರತೆಯಿಂದಾಗಿಯೇ ಜನರು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ.

ನಮ್ಮ ಅಧ್ಯಯನದಲ್ಲಿ ೧೬೦ ಕುಟುಂಬಗಳಲ್ಲಿ ೧೦೪ ಕುಟುಂಬಗಳು ಸ್ನಾನಕ್ಕೆ ಮತ್ತು ಬಟ್ಟೆ ಒಗೆಯಲು ತಲಾವಾರು ೪೦ ರಿಂದ ೮೦ ಲೀಟರ್ ನೀರಿನ ಅಗತ್ಯವಿದೆ. ಆದರೆ ಹೆಚ್ಚಿನ ಕುಟುಂಬಗಳು ಪ್ರತಿದಿನ ೨೫ ಲೀಟರ್‌ನಷ್ಟು ನೀರು ಪಡೆಯುತ್ತಿವೆ. ನೀರಿನ ಸಮಸ್ಯೆಯಿಂದಾಗಿಯೇ ಜನರು ನಿತ್ಯ ಸ್ನಾನ ಮಾಡುವುದಿಲ್ಲ. ಬಟ್ಟೆ ಒಗೆಯುವುದಿಲ್ಲ. ವಾರದಲ್ಲಿ ಯಾವುದೋ ಒಂದು ದಿನ ದೇವರ ಪೂಜೆ ಹೆಸರಿನಲ್ಲಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸುತ್ತಾರೆ. ಉಳಿದಂತೆ ಇಲ್ಲಿನ ಜನರು ಕೊಳೆಯಾದ ಉಡುಪಿನಲ್ಲೆ ಇರುತ್ತಾರೆ. ನೀರಿನ ಸಮಸ್ಯೆಯಿಂದಾಗಿಯೇ ಜನರು ವೈಯಕ್ತಿಕ ಹಾಗೂ ಶೌಚಾಲಯದ ಸಾಮೂಹಿಕ ಶೌಚಾಲಯಗಳನ್ನು ಬಳಸಲಾಗುತ್ತಿಲ್ಲ. ಒದಗಿಸಲಾಗಿರುವ ೩೩ ವೈಯಕ್ತಿಕ ಶೌಚಾಲಯಗಳಲ್ಲಿ ೮ ಶೌಚಾಲಯ ಬಳಸಲಾಗುತ್ತಿದೆ. ಉಳಿದಂತೆ ೨೫ ಶೌಚಾಲಯಗಳ ಬಳಕೆ ಇಲ್ಲ. ಇನ್ನು ಶೇ. ೭೫.೭೪ ರಷ್ಟು ಕುಟುಂಬಗಳು ಶೌಚಾಲಯ ಸೌಲಭ್ಯಗಳನ್ನು ಹೊಂದಿಲ್ಲ.

ಮಳೆ, ಕೊಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಅಲ್ಲಲ್ಲಿ ಚರಂಡಿಗಳಿದ್ದರೂ ಅವೆಲ್ಲವು ಕಸಕಡ್ಡಿಗಳಿಂದ ಮುಚ್ಚಿ ಕಣ್ಮರೆಯಾಗಿವೆ. ಬೀದಿಗಳಲ್ಲಿ ಕೊಳಚೆ ನೀರು ಹರಿದು ಹೋಗುತ್ತಿದೆ. ಅಲ್ಲದೆ ಅಲ್ಲಲ್ಲಿ ನಿಂತಿರುವ ಚರಂಡಿ ನೀರು ವಾಸನೆ ಬರುತ್ತಿದೆ. ದೌಲತ್‌ಪುರದ ಒಳಗೆ ತಿಪ್ಪೆಗಳು ರಾಶಿ ರಾಶಿ ಬಿದ್ದಿವೆ. ಕೃಷ್ಣನಗರದಲ್ಲಿ ಕೋಟೆಯ ಒಳಸುತ್ತಗಳಲ್ಲಿ ತಿಪ್ಪೆಗಳಿವೆ. ಕೋಟೆಯ ಬತ್ತೇರಿಗಳು ಗಬ್ಬುವಾಸನೆ ಹೊಡೆಯುತ್ತಿವೆ. ಒಟ್ಟಾರೆ ಪಂಚಾಯ್ತಿಯ ಅನೈರ್ಮಲ್ಯ ಅಸಹ್ಯ ಉಂಟು ಮಾಡುತ್ತದೆ.

ಸರಕಾರ ಗ್ರಾಮೀಣ ಜನತೆಯನ್ನು ನಿರ್ಲಕ್ಷಿಸುತ್ತಿದೆ ಎನಿಸುತ್ತದೆ. ನಿರಂತರ ವಿದ್ಯುತ್‌ ಸರಬರಾಜಿನ ಕೊರತೆಯೇ ಅಗತ್ಯದಷ್ಟು ನೀರಿನ ಪೂರೈಕೆಗಿರುವ ಮುಖ್ಯ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಸಾಯಂಕಾಲ ಆರು ಗಂಟೆಯವರೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ಒಂದೊಂದು ಸಾರಿ ಎರಡು ಮೂರು ದಿನಗಳ ಕಾಲ ವಿದ್ಯುತ್ ಪೂರೈಕೆ ಇರುವುದಿಲ್ಲ. ಕೆ.ಇ.ಬಿ. ಕಛೇರಿಗಳು ಹಳ್ಳಿಗಳಿಂದ ದೂರದಲ್ಲಿರುತ್ತದೆ. ಸದಾ ಪವರ್‌ ಕಟ್‌ನಿಂದಾಗಿ ನೀರಿನ ಕೊರತೆ ಹೆಚ್ಚಾಗುತ್ತಿದೆ.

ಕುಟುಂಬದ ಅಗತ್ಯಕ್ಕೆ ಬೇಕಷ್ಟು ನೀರು ಸಂಗ್ರಹಿಸುತ್ತಿರುವವರು ಮಹಿಳೆಯರು. ಇಲ್ಲಿ ಒಟ್ಟಾರೆ ಶೇ. ೬೮.೭೫ ರಷ್ಟು ಮಹಿಳೆಯರು ನೀರು ಸಂಗ್ರಹಿಸುತ್ತಿದ್ದಾರೆ. ಇತರರ ಹಳ್ಳಿಗಳಲ್ಲಿ ಹೋಲಿಸಿದರೆ ನೀರು ಸಂಗ್ರಹಿಸುವ ಮಹಿಳೆಯರು ನೀರು ಸಂಗ್ರಹಿಸುವ ಮಹಿಳೆಯರ ಪ್ರಮಾಣ ಕಡಿಮೆ ಎಂದು ಹೇಳಬಹುದು. ಇದಕ್ಕೆ ಕಾರಣ, ಸಂಪ್ರದಾಯಸ್ಥ ಕುಟುಂಬಗಳು ಮಹಿಳೆಯರನ್ನು ನೀರು ಸಂಗ್ರಹಣೆಗೆ ಕಳಿಸುವುದಿಲ್ಲ.

ಕುಟುಂಬಗಳ ಆರ್ಥಿಕ ಸಾಮಾಜಿಕ ಸ್ಥಿತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಪಡೆಯುವ ಸಾಮರ್ಥ್ಯ

ಸಾಮಾಜಿಕ ಸ್ಥಿತಿ ಮತ್ತು ಕುಡಿಯುವ ನೀರು ಪಡೆಯುವ ಸಾಮರ್ಥ್ಯಕ್ಕೂ ಆಂತರಿಕ ಸಂಬಂಧವಿದೆ. ಜನತೆಯ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯಗಳಂತ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಸಾಮರ್ಥ್ಯ ಹೆಚ್ಚುತ್ತದೆ. ಮಧ್ಯಮ ಕೆಳಜಾತಿಗಳೆ ಕುಟುಂಬಗಳ ಅಧಿಕ ಸಂಖ್ಯೆ. ಈ ಗ್ರಾಮ ಪಂಚಾಯ್ತಿಯಲ್ಲಿ ಶೇ. ೫೨ ರಷ್ಟು ಕುಟುಂಬಗಳು ಬಡತನ ರೇಖೆ ಕೆಳಗಿವೆ. ಉಳಿದಂತೆ ಲಿಂಗಾಯತರು, ಕುರುಬರು ಹಾಗೂ ಕೆಲವು ಮುಸ್ಲಿಂ ಕುಟುಂಬಗಳು ಅಧಿಕವಾಗಿ ಉತ್ತಮ ಸ್ಥಿತಿಯಲ್ಲಿವೆ. ಈ ಕುಟುಂಬಗಳು ಮನೆಯೊಳಗೆಯೇ ನೀರು ಸರಬರಾಜಿನ ನಲ್ಲಿಗಳು ಹಾಗೂ ಶೌಚಾಲಯ, ಸ್ನಾನ ಗೃಹಗಳ ಸೌಲಭ್ಯ ಹೊಂದಿದ್ದಾರೆ. ಶೇ. ೪೫.೮೩ ಕುಟುಂಬ ತಲಾವಾರು ೪೦ ಲೀಟರ್‌ ನೀರು ಪಡೆದರೆ ಶೇ. ೪೨.೫ ಕುಟುಂಬಗಳು ೨೫ ಲೀಟರ್‌ಗಿಂತ ಕಡಿಮೆ ಪ್ರಮಾಣದ ನೀರು ಪಡೆಯುತ್ತಿದ್ದಾರೆ. ದೌಲತ್‌ಪುರದಲ್ಲಿ ನೀರು ಪಡೆಯುವ ಪ್ರಮಾಣ ಕೃಷ್ಣನಗರಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ನಿತ್ಯ ಸ್ನಾನ ಮತ್ತು ಸ್ವಚ್ಛತೆಗಾಗಿ ಹೆಚ್ಚು ನೀರು ಬಳಸುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದಾಗಿ ನೀರಿನ ಕೊರತೆ ಎದಿರಿಸುತ್ತಿದ್ದಾರಾದರೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರ ಎತ್ತಿನ ಬಂಡಿ ಅಥವಾ ಟ್ಯಾಕ್ಟ್ರರ್‌ಗಳಲ್ಲಿ, ಕೆರೆ, ಹಳ್ಳ ಅಥವಾ ಬೇರೆ ಊರುಗಳಿಂದ ನೀರು ಸಂಗ್ರಹಿಸಿಕೊಳ್ಳುತ್ತಾರೆ. ಆರ್ಥಿಕವಾಗಿ ದುರ್ಬಲ ಜಾತಿಗಳು ಹಾಗೂ ಪರಿಶಿಷ್ಟ ಜಾತಿ ಪಂಗಡದ ಕುಟುಂಬಗಳು ಕನಿಷ್ಟ ಅಗತ್ಯವಾದಷ್ಟು ನೀರು ಪಡೆಯುವ ಸಾಮರ್ಥ್ಯ ಹೊಂದಿಲ್ಲ. ಕುಟುಂಬಗಳು ತಲಾವಾರು ೨೫ ಲೀಟರ್‌ಗಿಂತ ಕಡಿಮೆ ಕುಡಿಯುವ ನೀರು ಪಡೆಯುತ್ತಿದ್ದಾರೆ. ನೀರು ಸಂಗ್ರಹಿಸಿಟ್ಟುಕೊಳ್ಳುವಲ್ಲಿ ನೀರಿನ ತೊಟ್ಟಿ ಹಂಡೆ ಗುಂಡಿಗಳಂತ ಪರಿಕರಗಳಿಲ್ಲ. ನೀರಿನ ಕೊರತೆ ಸ್ನಾನದ ಮನೆ ತೊಂದರೆಯಿಂದಾಗಿ ನಿತ್ಯ ಸ್ನಾನ ಸ್ವಚ್ಛತೆಗೆ ಹೆಚ್ಚು ಗಮನ ಕೊಡುತ್ತಿಲ್ಲ. ಸರ್ಕಾರದವರು ಶೌಚಾಲಯ ಸೌಲಭ್ಯ ಒದಗಿಸಿಕೊಟ್ಟಿದ್ದರೂ ನೀರಿನ ಸಮಸ್ಯೆ, ಶೌಚಾಲಯಗಳ ಮಹತ್ವದ ಬಗ್ಗೆ ತಿಳುವಳಿಕೆ ಇಲ್ಲದೆ ಮುಂತಾದ ಹಲವಾರು ಕಾರಣಗಳಿಂದಾಗಿ ಜನತೆ ತಮ್ಮ ಆರ್ಥಿಕ ಸಾಮಾಜಿಕ ಸ್ಥಾನಮಾನಗಳಿಗೆ ಅನುಸಾರ ಕುಡಿಯುವ ನೀರು ನೈರ್ಮಲ್ಯ ಸೌಲಭ್ಯ ಪಡೆಯುತ್ತಿದ್ದಾರೆ.

ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಲಿಂಗ ಸಂಬಂಧಿ ಆಯಾಮಗಳು

ಸ್ತ್ರೀ ಪುರುಷರ ಕೆಲಸದ ವಿಭಜನೆಯಲ್ಲಿ ನೀರು ಸಂಗ್ರಹಿಸುವುದು ಮಹಿಳೆಯರ ಪ್ರಧಾನ ಕೆಲಸವಾಗಿದೆ. ಅನಾದಿಕಾಲದಿಂದಲೂ ಅಡಿಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಮುಂತಾದ ಕೆಲಸಗಳಿಗೆ ಎಷ್ಟೆಷ್ಟು ನೀರು ಬೇಕೆಂದು ಅಂದಾಜು ಮಾಡಿ ಕುಟುಂಬದ ಅಗತ್ಯಕ್ಕೆ ಬೇಕಷ್ಟು ನೀರು ಸಂಗ್ರಹಿಸುವವರು ಮಹಿಳೆಯರು. ಇದು ಎಲ್ಲಾ ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. ನೀರಿನ ಕೊರತೆ ಹೆಚ್ಚಾದಂತೆಲ್ಲಾ ಅದು ನೇರವಾಗಿ ಮಹಿಳೆಯರ ಮೇಲೆ ಪರಿಣಾಮ ಉಂಟು ಮಾಡುತ್ತದೆ. ನಮ್ಮ ಅಧ್ಯಯನದಲ್ಲಿ ಕೆಲಸದ ಸಂದರ್ಭಗಳಿಗೆ ಅನುಸಾರವಾಗಿ ಶೇ. ೬೫ ರಷ್ಟು ಮಹಿಳೆಯರ ನೀರು ಸಂಗ್ರಹಿಸುತ್ತಿದ್ದಾರೆ. ಇಲ್ಲಿ ಮುಸ್ಲಿಂ ಕುಟುಂಬಗಳು ಆರ್ಥಿಕ ಸುಸ್ಥಿತಿಯಲ್ಲಿರುವ ಇತರ ಸಮುದಾಯದಲ್ಲಿ ಮಹಿಳೆಯರನ್ನು ನೀರು ಸಂಗ್ರಹಣೆ ಮನೆ ಹೊರಗೆ ಕಳಿಸುತ್ತಿಲ್ಲ. ಹಾಗಾಗಿ ಇಲ್ಲಿ ನೀರು ಸಂಗ್ರಹಿಸುವಲ್ಲಿ ತೊಡಗಿರುವ ಕಡಿಮೆ ಪ್ರಮಾಣದ ಮಹಿಳೆಯರನ್ನು ಕಾಣಬಹುದಾಗಿದೆ. ಒಟ್ಟಾರೆ ಗ್ರಾಮಪಂಚಾಯ್ತಿಯಲ್ಲಿ ಕುಡಿಯುವ ನೀರು ಸಂಗ್ರಹಣೆಗಾಗಿ ಮಹಿಳೆಯು ೨-೩ ಕಿ.ಮೀ. ದೂರದಲ್ಲಿರುವ ತೋಟದ ಬಾವಿಗಳಿಂದ ನೀರು ಸಂಗ್ರಹಿಸುತ್ತಿದ್ದಾರೆ.

ಕೃಷ್ಣನಗರದಲ್ಲಿ ಕುಡಿಯುವ ನೀರು ಸಂಗ್ರಹಿಸಿ ತರಲೆಂದು ತೋಟದ ಬಾವಿಗೆ ಹೋಗುತ್ತಿದ್ದ ೧೨ ವರ್ಷದ ಹುಡುಗಿ ರಸ್ತೆ ದಾಟುತ್ತಿದ್ದಾಗ ಬೈಕಿಗೆ ಸಿಕ್ಕಿ ಕಾಲು ಮುರಿದುಕೊಂಡಿದ್ದಾಳೆ. ಕುಡಿಯುವ ನೀರಿನ ಸಮಸ್ಯೆಯಿಂದ ಉಂಟಾದ ಜಗಳದಲ್ಲಿ ಪೋಲಿಸರು ಮತ್ತು ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆಗಳು ಉಂಟು. ದೌಲತ್‌ಪುರದಲ್ಲಿ ಕುಡಿಯುವ ನೀರು ಸಂಗ್ರಹಿಸಲು ತೋಟದ ಬಾವಿಗಳಂತ ಅನ್ಯಮಾರ್ಗವಿಲ್ಲ. ಆಗಾಗ ಕೈ ಕೊಡುವ ವಿದ್ಯುತ್‌ ಅಭಾವದಿಂದಾಗಿ ಮೂರು ನಾಲ್ಕು ದಿನಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಿನ ಕೊರತೆ ಉಂಟಾದಂತೆ ನೀರು ಸಂಗ್ರಹಿಸುವಲ್ಲಿ ಮಹಿಳೆಯರ ಮಧ್ಯೆ ಆಗಾಗ ಜಗಳ ಉಂಟಾಗುತ್ತದೆ. ಅಲ್ಲದೆ ನೀರು ಸಂಗ್ರಹಿಸುವಲ್ಲಿ ಜಾತಿಯ ಕೀಳರಿಮೆಗಳನ್ನು ಕಾಣಬಹುದಾಗಿದೆ. ಮುಸ್ಲಿಂ ಮತ್ತು ಪರಿಶಿಷ್ಟ ಮಹಿಳೆಯರು ಒಂದೇ ಕಿರು ನೀರು ಘಟಕದಲ್ಲಿ ನೀರು ಸಂಗ್ರಹಿಸುತ್ತಿದ್ದಾರೆ. ಪರಿಶಿಷ್ಟ ಮಹಿಳೆಯರು ನೀರು ಸಂಗ್ರಹಿಸಲು ಕೊಡ ಇಟ್ಟ ಸ್ಥಳಕ್ಕೆ ಸ್ವಲ್ಪ ನೀರು ಚಿಮುಕಿಸಿ ಮುಸ್ಲಿಂ ಮಹಿಳೆಯರು ನೀರು ಸಂಗ್ರಹಿಸುತ್ತಿದ್ದಾರೆ. ಸ್ವಚ್ಛತೆ ಹಾಗೂ ಆರೊಗ್ಯದ ದೃಷ್ಟಿಯಿಂದ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ಪ್ರಮಾಣದ ನೀರು ಅಗತ್ಯವಿದೆ. ನೀರಿನ ಕೊರತೆಯಿಂದಾಗಿಯೇ ಬಹುತೇಕ ಮಹಿಳೆಯರು ನಿತ್ಯ ಸ್ನಾನ ಮಾಡುತ್ತಿಲ್ಲ. ಸ್ನಾನಕ್ಕೆ ತಕ್ಕಷ್ಟು ನೀರು ದೊರೆಯದಿರಲು ಹಾಗೂ ಸ್ನಾನಕ್ಕೆ ಬಚ್ಚಲು ಮನೆ ತೊಂದರೆಯಿಂದಾಗಿ ಬಹುತೇಕ ಮಹಿಳೆಯರು ದೇವರ ಪೂಜೆ ಮಾಡುವ ದಿನ ವಾರಕ್ಕೆ ಅಥವಾ ೧೫ ದಿನಕ್ಕೆ ಒಂದು ಸಾರಿ ಸ್ನಾನ ಮಾಡಿ ಒಗೆದ ಬಟ್ಟೆ ಧರಿಸುತ್ತಿದ್ದಾರೆ. ಶೌಚಾಲಯದ ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಿನ ಕೊರತೆಯಿಂದಾಗಿ ಸಾಮೂಹಿಕ ಅಥವಾ ವೈಯಕ್ತಿಕ ಶೌಚಾಲಯಗಳನ್ನು ಬಳಸುತ್ತಿಲ್ಲ. ಮುಂಜಾನೆ ಅಥವಾ ರಾತ್ರಿಯ ವೇಳೆಯಲ್ಲಿ ರಸ್ತೆ, ತಿಪ್ಪೆಗಳು, ಶೌಚಾಲಯಗಳಿಗಾಗಿ ಬಳಸುತ್ತಿದ್ದಾರೆ.

ಹೀಗೆ ನೀರಿನ ಕೊರತೆ ಹೆಚ್ಚಾದಂತೆಲ್ಲಾ ಮಹಿಳೆಯರು ನೀರು ಸಂಗ್ರಹಣೆಗಾಗಿ ಹೆಚ್ಚು ಸಮಯ ದೂರ ವ್ಯಯಿಸುವುದು ಹಾಗೂ ಶೌಚಾಲಯಗಳ ತೊಂದರೆಯು ದೈಹಿಕ, ಮಾನಸಿಕವಾಗಿ ಹಿಂಸೆಗೊಳಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ

ಗ್ರಾಮ ಪಂಚಾಯ್ತಿಯ ಕಾರ್ಯವೈಖರಿ

ಗ್ರಾಮೀಣ ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯಗಳಂತ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಗ್ರಾಮ ಪಂಚಾಯ್ತಿಗಳ ಆದ್ಯ ಕರ್ತವ್ಯವಾಗಿದೆ. ಕೃಷ್ಣನಗರ ಗ್ರಾಮ ಪಂಚಾಯತಿಯು ಸಹ ತನ್ನ ವ್ಯಾಪ್ತಿಯಲ್ಲಿನ ಜನತೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ನೀರಿನ ಮೂಲಗಳು ಅನುಷ್ಠಾನ ಪ್ರಮಾಣ ನೋಡಿದಾಗ (೭೦೦೦ ಜನತೆಗೆ ೨೯ ನೀರಿನ ಮೂಲಗಳು) ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ನಿರ್ಮಿಸಬೇಕಿದ್ದ ನೀರಿನ ಮೂಲಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.

ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮಹಿಳಾ ಸಾಮೂಹಿಕ ಶೌಚಾಲಯಗಳು, ಕೌಟುಂಬಿಕ ಶೌಚಾಲಯಗಳು, ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಲಾಗಿದೆ.

ಜನರು ತಮ್ಮ ಜಾತಿ ಧರ್ಮಗಳ ನೆಲೆಯಲ್ಲಿ ತಮ್ಮ ತಮ್ಮ ಮನೆಗಳ ಮುಂದೆ ನೀರಿನ ಮೂಲಗಳನ್ನು ನಿರ್ಮಿಸಬೇಕೆಂದು ಸ್ವಾರ್ಥದಿಂದ ಕೊಳವೆ ಬಾವಿಗಳು ಕೊರೆಯುವುದರಲ್ಲಿ ಸರಿಯಾದ ಅಂತರ (೨೦೦) ಮೀಟರ್‌ ಅಥವಾ ಕಾನೂನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ. ದೌಲತ್‌ಪುರದಲ್ಲಿ ಮಸೀದಿಯ ಎದುರಿಗೆ ಒಂದು ಕೊಳವೆ ಬಾವಿ ಕೊರೆಯಲಾಗಿದೆ. ತಿಪ್ಪೇಗಳ ಮಧ್ಯೆ ಇದ್ದ ಈ ಬೋರ್‌ವೆಲ್ ನೀರು ವಿಷಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ.

ದೌಲತ್‌ಪುರ ಕ್ರಾಸ್‌ನಲ್ಲಿ ಇನ್ನೊಂದು ಬೋರ್‌ವೆಲ್‌ ತೋಡಲಾಗಿದೆ. ಸದ್ಯದಲ್ಲಿ ನೀರು ಪೂರೈಸುತ್ತಿರುವ ಏಕಮಾತ್ರ ಸಾಧನವಾಗಿದೆ. ಇನ್ನೂ ಹೊಸದಾಗಿ ಮತ್ತೊಂದು ಬೋರ್‌ವೆಲ್‌ ಕೊರೆಯಲಾಗಿದೆ. ವಿದ್ಯುತ್‌ ಮೀಟರ್‌ ಜೋಡಿಸಿ ತುಂಬಾ ದಿನಗಳಾಗಿವೆ. ಆದರೆ ಅದು ಚಾಲ್ತಿಯಲ್ಲಿಲ್ಲ. ನೀರು ದಾಸ್ತಾನುಗೊಳಿಸಲು ಎತ್ತರದಲ್ಲಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್‌ಗೆ ಬೋರ್‌ವೆಲ್‌ ನೀರು ಏರುತ್ತಿಲ್ಲ. ಇದ್ದುದರಲ್ಲಿ ಕಿರುನೀರು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ನೀರು ಪೂರೈಸುತ್ತಿರುವ ಏಕಮೇವ ಸಾಧನವಾಗಿದೆ. ಆದರೆ ಕಿರುನೀರು ಘಟಕಗಳಿಗೆ ಅಳವಡಿಸಿದ ಎರಡು ನಲ್ಲಿಗಳು ಮುರಿದು ಹೋಗಿವೆ. ಇನ್ನು ಕೈಪಂಪುಗಳು ಕೊಳವೆ ಬಾವಿಗಳಲ್ಲಿ ಒಂದು ಕೈಪಂಪು ಕೊಳವೆ ಬಾವಿ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಕೃಷ್ಣನಗರದಲ್ಲಿ ಕೈಪಂಪು ಕೊಳವೆ ಬಾವಿಗಳಲ್ಲಿ ಕೈಪಂಪು ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿಲ್ಲ. ನಿರ್ಮಿಸಲಾದ ಎಲ್ಲಾ ಕಿರುನೀರು ಘಟಕಗಳು ಸಂಪೂರ್ಣವಾಗಿ ನಿರ್ನಾಮವಾಗಿದೆ. ನಲ್ಲಿ ನೀರಿನ ಸರಬರಾಜಿಗಾಗಿ ನಿರ್ಮಿಸಲಾಗಿರುವ ಪಂಪ್‌‌ಸೆಟ್‌‌ಗಳಲ್ಲಿ ಒಂದು ಪಂಪ್‌ಸೆ‌ಟ್‌ ಮಾತ್ರ ಕಾರ್ಯನಿರ್ವಹಿಸುತ್ತಿದೆ. ನೀರು ಸಂಗ್ರಹಣೆಗಾಗಿ ಇರುವ ಟ್ಯಾಂಕುಗಳಲ್ಲಿ ಹೊಸ ಟ್ಯಾಂಕ್ ಇನ್ನು ಕಾರ್ಯಾರಂಭ ಮಾಡಿಲ್ಲ. ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿಲ್ಲ. ಕೃಷ್ಣನಗರ ಜನತೆ ನೀರಿನ ಗುಣಮಟ್ಟದ ಸಮಸ್ಯೆಯಿಂದಾಗಿಯೇ ಮೈ ಕೈ ನೋವು, ಚರ್ಮದ ತುರಿಕೆ ರೋಗಗಳನ್ನು ಅನುಭವಿಸುತ್ತಿದ್ದಾರೆ. ಶೌಚಾಲಯಗಳ ಬಳಕೆಯಾಗುತ್ತಿಲ್ಲ. ಪ್ರಾರಂಭದಲ್ಲಿ ಬಳಕೆಯಾದರೂ ನಂತರದಲ್ಲಿ ಅನೈರ್ಮಲ್ಯದ ಪರಿಸರದಿಂದಾಗಿ ಸದ್ಯದಲ್ಲಿ ಶೌಚಾಲಯಗಳನ್ನು ಉಪಯೋಗಿಸುತ್ತಿಲ್ಲ. ಊರಿನ ಓಣಿಗಳಲ್ಲಿ ಕೊಳಚೆ ನೀರು ಹಾಗೂ ತಿಪ್ಪೆಗಳನ್ನು ಸ್ಥಳಾಂತರಗೊಳಿಸುವುದರ ಬಗ್ಗೆ ಗ್ರಾಮಪಂಚಾಯ್ತಿಗಳು ಕಾಳಜಿ ವಹಿಸುತ್ತಿಲ್ಲ. ಗ್ರಾಮ ಪಂಚಾಯ್ತಿಯಲ್ಲಿ ಮಹಿಳಾ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರ‍್ಯಾರು ಕುಡಿಯುವ ನೀರು ನೈರ್ಮಲ್ಯದ ಬಗ್ಗೆ ಚರ್ಚಿಸಿ ವಿಚಾರ ಮಾಡುವುದಿಲ್ಲ. ಪುರುಷ ಸದಸ್ಯರು ಮೂಲಭೂತ ಸೌಲಭ್ಯಗಳ ಕಾಳಜಿ ತೋರಿಸುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯ್ತಿಗಳ ನಿರ್ಲಕ್ಷದಿಂದಾಗಿ ನೀರಿನ ಮೂಲಗಳು ಹಾಗೂ ನೈರ್ಮಲ್ಯ ಸವಲತ್ತುಗಳ ದುರಸ್ಥಿ ಕಾರ್ಯಗಳು ನಡೆಯುತ್ತಿಲ್ಲ.

ದುರಸ್ಥಿ ವಿಳಂಬ

ಕೈಪಂಪು ಕೊಳವೆ ಬಾವಿಗಳು ಹಾಗೂ ನಲ್ಲಿ ನೀರಿನ ಮೂಲದ ಪಂಪ್‌ಸೆಟ್‌ಗಳು ದುರಸ್ಥಿಗೊಳಿಸುವ ಸಮಸ್ಯೆ ಕಾಡುತ್ತಿದೆ. ನೀರು ಸರಬರಾಜಿನ ಯಂತ್ರಗಳು ಕೆಟ್ಟು ಹೋದ ತಕ್ಷಣವೇ ರಿಪೇರಿ ಕ್ರಮ ಜನರು ಕೈಗೊಳ್ಳುತ್ತಿಲ್ಲ. ಪ್ರಾಯೋಗಿಕ ತಾಂತ್ರಿಕ ಜ್ಞಾನದ ತರಬೇತಿ ಪಡೆದ ಸಿಬ್ಬಂದಿ ತಾಲ್ಲೂಕು ಕೇಂದ್ರವಾದ ಸಂಡೂರಿನಲ್ಲಿದ್ದಾರೆ. ದುರಸ್ಥಿ ಕೋರಿ ದೂರು ಸಲ್ಲಿಸಿದರೂ ದುರಸ್ಥಿಗೊಳಿಸುವ ಸಿಬ್ಬಂದಿಗಳು ಬೇರೆ ಬೇರೆ ಊರುಗಳಿಗೆ ಹೋಗಿರುತ್ತಾರೆ. ಅಲ್ಲದೆ ವಾಹನ ಸೌಲಭ್ಯಗಳ ಕೊರತೆ ಮುಂತಾದ ತೊಂದರೆಗಳಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಗ್ರಾಮ ಪಂಚಾಯ್ತಿಯಲ್ಲಿ ಕೈಪಂಪು ಕೊಳವೆ ಬಾವಿಗಳು, ಕಿರುನೀರು ಘಟಕಗಳು ಹಾಗೂ ಪಂಪ್‌ಸೆಟ್‌ಗಳು ಯಂತ್ರಗಳು ಕೆಟ್ಟು ಹೋಗಿದ್ದು, ಸುಮಾರು ವರ್ಷಗಳೇ ಆಗಿವೆ ರಿಪೇರಿ ಕೆಲಸ ನಡೆದಿಲ್ಲ. ನೀರು ಸಂಗ್ರಹಿಸಲಿರುವ ೪ ಟ್ಯಾಂಕುಗಳಲ್ಲಿ ಎರಡು ಟ್ಯಾಂಕುಗಳು ಚಾಲ್ತಿಯಲ್ಲಿಲ್ಲ. ಮಹಿಳಾ ಸಾಮೂಹಿಕ ಶೌಚಾಲಯಗಳ ಉಪಯೋಗ ಸ್ಥಗಿತಗೊಂಡು ವರ್ಷಗಳೇ ಕಳೆದರೂ ಸ್ವಚ್ಛತೆಯ ಕೆಲಸ ಕೈಗೊಂಡಿಲ್ಲ. ದುರಸ್ಥಿ ಕೆಲಸದ ವಿಳಂಬದಿಂದಾಗಿಯೇ ಗ್ರಾಮ ಜನತೆಗೆ ನೀರು ನೈರ್ಮಲ್ಯದ ಹೆಚ್ಚು ಸಮಸ್ಯೆ ಉಂಟಾಗುತ್ತದೆ.

ಸಲಹೆ ಸೂಚನೆಗಳು

ದೇಶದ ಅಭಿವೃದ್ಧಿಯಯು ಹಳ್ಳಿಗಳ ಅಭಿವೃದ್ಧಿಯನ್ನು ಅವಲಂಬಿಸಿರುತ್ತದೆ. ಸರಕಾರವು ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಪಂಚವಾರ್ಷಿಕ ಯೋಜನೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಜನರ ಮೂಲಭೂತ ಅಗತ್ಯಗಳಾದ ಆಹಾರ, ವಸತಿ, ವಿದ್ಯುತ್, ಆರೋಗ್ಯ, ಕುಡಿಯುವ ನೀರು ನೈರ್ಮಲ್ಯ ಮುಂತಾದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಜನರಲ್ಲಿ ಬೇರು ಬಿಟ್ಟಿರುವ ಅಜ್ಞಾನ ಮೂಢನಂಬಿಕೆ, ಅನಕ್ಷರತೆ, ಬಡತನ, ಸ್ವಜಾತಿ, ಧರ್ಮ, ಸ್ವಾರ್ಥದಿಂದಾಗಿ ಹಾಕಿಕೊಂಡ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುತ್ತಿಲ್ಲ. ಕೃಷ್ಣನಗರ ಗ್ರಾಮ ಪಂಚಾಯ್ತಿಯು ಇದರಿಂದ ಹೊರತಾಗಿಲ್ಲ. ಈ ಪಂಚಾಯ್ತಿಯು ತನ್ನ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಒದಗಿಸುವಲ್ಲಿ, ಜನಸಂಖ್ಯೆ ಪ್ರಮಾಣಕ್ಕೆ ನಿರ್ಮಿಸಬೇಕಿದ್ದ ಪ್ರಮಾಣಕ್ಕಿಂತಲೂ ಹೆಚ್ಚಿನ ಕೈಪಂಪು ಕೊಳವೆ ಬಾವಿಗಳು, ಕಿರುನೀರು ಘಟಕ, ನಲ್ಲಿ ನೀರಿನ ಮೂಲಗಳು, ವೈಯಕ್ತಿಕ ಸಾರ್ವಜನಿಕ ನಳಗಳು ನೀರು ದಾಸ್ತಾನ ಟ್ಯಾಂಕುಗಳು ನಿರ್ಮಿಸಲಾಗಿದೆ. ಸ್ವಚ್ಛತೆಗಾಗಿ ವೈಯಕ್ತಿಕ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳು ಒದಗಿಸಲಾಗಿದ್ದರೂ ಜನರು ಅಗತ್ಯದಷ್ಟು ಪ್ರಮಾಣದ ನೀರು ಮತ್ತು ನೈರ್ಮಲ್ಯದ ಸೌಲಭ್ಯ ಪಡೆಯುತ್ತಿಲ್ಲ. ಸ್ವಜಾತಿ, ಧರ್ಮದ ಪ್ರೀತಿ ತಮ್ಮ ಮನೆಗಳ ಮುಂದೆ ನೀರಿನ ಮೂಲಗಳನ್ನು ನಿರ್ಮಿಸಬೇಕೆಂಬ ಸ್ವಾರ್ಥದಿಂದ ಸೂಕ್ತವಾದ ಸ್ಥಳಗಳಲ್ಲಿ ನೀರಿನ ಮೂಲಗಳನ್ನು ನಿರ್ಮಿಸದೇ ಇರುವುದು ಒಂದು ನೀರಿನ ಮೂಲಕ್ಕೂ ಮತ್ತೊಂದು ನೀರಿನ ನಡುವೆ (೨೦೦ ಮೀಟರ್) ಅಂತರ ಪಾಲಿಸದೇ ಇರುವುದು, ದುರಸ್ಥಿ ವಿಳಂಬ, ವಿದ್ಯುತ್ ಕೊರತೆ ಮುಂತಾದ ಅಂಶಗಳು ಕುಡಿಯುವ ನೀರು ನೈರ್ಮಲ್ಯ ಸೌಲಭ್ಯಘಲನ್ನು ಒದಗಿಸುವಲ್ಲಿರುವ ಮುಖ್ಯವಾದ ಸಮಸ್ಯೆಗಳಾಗಿವೆ. ಈ ಸಮಸ್ಯೆಗಳನ್ನು ನಿವಾರಿಸಲು ಕೆಳಗಿನ ಪ್ರಯತ್ನಗಳನ್ನು ಮಾಡಿದ್ದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಗಳನ್ನು ಫಲಕಾರಿಯಾಗುವ ಸಾಧ್ಯತೆಗಳಿವೆ.

೧. ಸಾಂಘಿಕ ಉಸ್ತುವಾರಿ ಮನೋಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವುದು

ಸರಕಾರ ಅನುಷ್ಠನಗೊಳಿಸುತ್ತಿರುವ ಯೋಜನೆಗಳು ತಮ್ಮದೇ ಎನ್ನುವ ಭಾವನೆ ಮತ್ತು ಜವಾಬ್ದಾರಿ ಮೂಡಿಸುವುದಲ್ಲದೆ ದುರಸ್ಥಿಗೊಂಡ ನೀರಿನ ಮೂಲಗಳನ್ನು ಸ್ಥಳೀಯ ಜನರೇ ರಿಪೇರಿಗೊಳಿಸುವಂತ ಹಾಗೂ ಪರಿಸರ ಸ್ವಚ್ಛಗೊಳಿಸುವ ಹೊಣೆ ಹೊರಬೇಕು. ಈ ನಿಟ್ಟಿನಲ್ಲಿ ಸ್ತ್ರೀ ಶಕ್ತಿ, ಯುವಕ ಸಂಘಗಳಿಗೆ ಜವಾಬ್ದಾರಿ ವಹಿಸಬೇಕು. ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆಯೇ? ಇಲ್ಲವೆ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಆಯಾ ವಾರ್ಡಿನ ಸದಸ್ಯರಿಗೆ ವಹಿಸಬೇಕು. ಕೃಷ್ಣನಗರದಲ್ಲಿ ರಸ್ತೆ ವಿಸ್ತರಿಸುವಲ್ಲಿ ಒಡೆದು ಹಾಕಿರುವ ನೀರು ಸರಬರಾಜು ಮಾಡುವ ಕೊಳವೆಗಳನ್ನು ತಕ್ಷಣವೇ ದುರಸ್ಥಿ ಕಾರ್ಯ ಕೈಗೊಂಡು ಜನತೆಗೆ ಕುಡಿಯುವ ನೀರು ಸರಬರಾಜು ಮಾಡಬೇಕಿದೆ. ಬಾಬಯ್ಯನ ಕ್ರಾಸ್ ಬಳಿ ಇರುವ ಬೋರ್‌ವೆಲ್‌ಗೆ ಪರ್ಯಾಯವಾಗಿ ಜನವಸತಿಗೆ ಹತ್ತಿರದಲ್ಲಿ ಸುರಕ್ಷಿತ ಕುಡಿಯುವ ನೀರಿನ ಮೂಲ ಪತ್ತೆ ಹಚ್ಚಿ ಮತ್ತೊಂದು ನೀರಿನ ಮೂಲ ನಿರ್ಮಿಸಬೇಕಿದೆ. ತುಂಬ ವರ್ಷಗಳಿಂದ ಚಾಲ್ತಿಯಾಗದೇ ಇರುವ ನಿಷ್ಕ್ರೀಯಗೊಂಡಿರುವ ಎಲ್ಲಾ ಕಿರುನೀರು ಘಟಕಗಳನ್ನು ದುರಸ್ಥಿಗೊಳಿಸಿ ಚಾಲನೆಗೆ ತರುವ ಅಗತ್ಯವಿದೆ. ನೀರಿನ ಹೊಸ ಟ್ಯಾಂಕ್ ಸದ್ಯದಲ್ಲೇ ಕಾರ್ಯಾರಂಭ ಮಾಡಬೇಕಾಗಿದೆ. ದೌಲತ್‌ಪುರದಲ್ಲಿರುವ ನೀರು ದಾಸ್ತಾನು ಮತ್ತೊಂದು ಟ್ಯಾಂಕ್ ನಿರ್ಮಿಸಿ ನೀರು ಪೂರೈಸಬೇಕಿದೆ. ನೀರಿನ ಮೂಲಗಳು ಬತ್ತಿ ಹೋಗಿರುವ ಕೈಪಂಪು ಕೊಳವೆ ಬಾವಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೈಪಂಪು ಕೊಳವೆ ಬಾವಿಗಳ ದುರಸ್ಥಿ ಕೈಗೊಳ್ಳಬೇಕಾಗಿದೆ. ಜನತೆ ಕುಡಿಯುವ ನೀರು ಸರಬರಾಜಿನಲ್ಲಿ ಇರುವ ಸಮಸ್ಯೆಗೆ ಶೀಘ್ರದಲ್ಲಿ ದುರಸ್ಥಿ ಕೆಲಸಗಳನ್ನು ಮಾಡದಿರುವುದು. ದುರಸ್ಥಿ ಕಾರ್ಯ ನಿರ್ವಹಿಸುವ ತರಬೇತಿ ಪಡೆದು ಸಿಬ್ಬಂದಿ, ರಿಪೇರಿ ಪರಿಕರಗಳು ತಾಲ್ಲೂಕು ಪಂಚಾಯ್ತಿಯಲ್ಲಿದ್ದು ಈ ಸಿಬ್ಬಂದಿ ಇಡಿ ತಾಲ್ಲೂಕಿನಲ್ಲಿರುವ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿರುವ ದುರಸ್ಥಿ ಕೆಲಸ ನಿರ್ವಹಿಸಬೇಕಿದೆ. ದುರಸ್ಥಿ ಪರಿಕರಗಳು ವಾಹನ ಸೌಲಭ್ಯ ಮುಂತಾದ ಸಮಸ್ಯೆಗಳಿಂದ ನೀರಿನ ಮೂಲಗಳು ದುರಸ್ಥಿ ಕೆಲಸ ವಿಳಂಬವಾಗುತ್ತಿದೆ. ಹಾಗಾಗಿ ಸ್ಥಳೀಯ ತರಬೇತಿ ಪಡೆದ ಸಿಬ್ಬಂದಿ ದುರಸ್ಥಿ ಪರಿಕರಗಳನ್ನು ಪ್ರತಿ ಗ್ರಾಮ ಪಂಚಾಯ್ತಿಯು ಹೊಂದಿರಬೇಕು.

ಇನ್ನೂ, ಕುಟುಂಬಗಳಿಗೆ ಅಗತ್ಯದಷ್ಟು ನೀರು ಪೂರೈಸುವಲ್ಲಿ ಇರುವ ಮತ್ತೊಂದು ತೊಂದರೆ ನಿರಂತರ ವಿದ್ಯುತ್ ಸರಬರಾಜು ಕೊರತೆ, ಕೊನೆ ಪಕ್ಷ ಕುಡಿಯುವ ನೀರು ಸರಬರಾಜಿಗಾದರೂ ನಿರಂತರ ವಿದ್ಯುತ್ ಸರಬರಾಜಿನ ಸೌಲಭ್ಯ ಒದಗಿಸಬೇಕು.

ದುರಸ್ಥಿ ಕೆಲಸಗಳಿಗೆ ನೀಡುತ್ತಿದ್ದ ಹಣವನ್ನು ಇದ್ದಕ್ಕಿದ್ದಂತೆ ಸರಕಾರ ಸ್ಥಗಿತಗೊಳಿಸಿರುವುದರಿಂದ ಪಂಚಾಯ್ತಿಯು ತೆರಿಗೆ ವಸೂಲಾತಿಗೆ ಪರ್ಯಾಯ ಹೊಸ ಮಾದರಿಯನ್ನು ಅಳವಡಿಸಿ ತಮ್ಮ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು ಆ ಮೂಲಕ ಕುಡಿಯುವ ನೀರು ನೈರ್ಮಲ್ಯ ದುರಸ್ಥಿ ಕಾಮಗಾರಿಗಳಿಗೆ ಬಳಸಿಕೊಳ್ಳುವ ಅಗತ್ಯವಿದೆ.

ಗ್ರಾಮ ಪಂಚಾಯ್ತಿಯ ಜನತೆಗೆ ಇದುವರೆಗೂ ಶೇ. ೧೭ ರಷ್ಟು ಶೌಚಾಲಯ ಸೌಲಭ್ಯ ಒದಗಿಸಲಾಗಿದೆ. ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಒದಗಿಸುವುದು ಜೊತೆಗೆ ಪುರುಷರಿಗೂ ಸಾಮೂಹಿಕ ಶೌಚಾಲಯಗಳನ್ನು ತುರ್ತಾಗಿ ಒದಗಿಸುವುದು ಅಗತ್ಯವಾಗಿದೆ. ಸದ್ಯದಲ್ಲಿರುವ ಮಹಿಳಾ ಶೌಚಾಲಯಗಳಲ್ಲೂ ನೀರಿನ ಸಂಗ್ರಹಣೆಗಾಗಿ ತೊಟ್ಟಿಗಳನ್ನು ನಿರ್ಮಿಸಿ ಪ್ರತಿದಿನ ನೀರು ಸರಬರಾಜಿನ ವ್ಯವಸ್ಥೆ ಮಾಡಬೇಕಾಗಿದೆ. ಅಲ್ಲದೆ ಶೌಚಾಲಯಗಳ ಸ್ವಚ್ಛತೆಗಾಗಿ ಗ್ರಾಮ ಪಂಚಾಯ್ತಿಯ ಕೆಲಸಗಾರರನ್ನು ನೇಮಿಸಿ, ಶೌಚಾಲಯಗಳಿಗೆ ಪರಿಸರ ನೈರ್ಮಲ್ಯ ಕಾಪಾಡುವುದು ಅಗತ್ಯವಾದ ಕೆಲಸವಾಗಿದೆ. ಎರಡು ಹಳ್ಳಿಗಳಲ್ಲಿರುವ ತಿಪ್ಪೆಗಳನ್ನು ಸ್ಥಳಾಂತರಿಸುವುದು ಬಹುಮುಖ್ಯವಾದುದು. ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯಕ್ಕೆ ಮಾರಕವಾಗಿರುವ ಸ್ಮಾರಕ ಕೃಷ್ಣನಗರದ ಸುತ್ತಲೂ ಇರುವ ಕೋಟೆಯನ್ನು ಸರಕಾರದ ಅನುಮತಿ ಪಡೆದು ನೆಲಸಮ ಮಾಡಿ ಆ ಸ್ಥಳದಲ್ಲಿ ಜನರಿಗೆ ವಸತಿ ಸೌಲಭ್ಯ ಒದಗಿಸುವುದರ ಜೊತೆಗೆ ಪಂಚಾಯ್ತಿ ಕಛೇರಿ ಹಿಂಭಾಗದಲ್ಲಿರುವ ಕೊಳಚೆ ಬಾವಿಯನ್ನು ಮುಚ್ಚಿಸಬೇಕಿದೆ. ಗ್ರಾಮ ಪಂಚಾಯ್ತಿಯು ಸದ್ಯದಲ್ಲೇ ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ ಗುಣಮಟ್ಟದ ಕುಡಿಯುವ ನೀರು ಪೂರೈಸುವುದು ಅಗತ್ಯವಾಗಿದೆ.

ಮನೆಕೆಲಸ ಮಹಿಳೆಯರಿಗೆ ಮುಡುಪಾಗಿರುವುದರಿಂದ ನೀರು ಸಂಗ್ರಹಿಸುವ ಕೆಲಸವನ್ನು ಮಹಿಳೆಯರೇ ನಿರ್ವಹಿಸುತ್ತಿರುವುದರಿಂದ ಸಣ್ಣ ಪುಟ್ಟ ಕೆಲಸವನ್ನು ದುರಸ್ಥಿ ಕೆಲಸಗಳ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಬೇಕು. ಕುಡಿಯುವ ನೀರು ಮತ್ತು ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ಸ್ತ್ರೀಯರು ಹಾಗೂ ಪುರುಷರು ಬೀದಿ ನಾಟಕ ಜಾನಪದ ಹಾಗೂ ನೃತ್ಯಗಳ ಮೂಲಕ ಹಳ್ಳಿಯ ಜನತೆಗೆ ತಿಳುವಳಿಕೆ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಸಾಂಘಿಕ ಮನೋಭಾವನೆ ಬೆಳೆಸಬೇಕಾಗಿದೆ.

ಗ್ರಾಮ ಪಂಚಾಯ್ತಿಗೆ ಒಂದು ಸ್ವಂತ ಕಟ್ಟಡ ಬೇಕಾದ ಅಗತ್ಯವಿದೆ. ಪಂಚಾಯ್ತಿಯು ಸದಸ್ಯರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರತಿನಿಧಿಗಳಿಗೆ ನೀರು ನೈರ್ಮಲ್ಯದ ಮಹತ್ವ ಯೋಜನೆಯ ಕಾರ್ಯವೈಖರಿ ಮುಂತಾದವುಗಳ ಬಗ್ಗೆ ತರಬೇತಿ ನೀಡಿ ತಮ್ಮ ಜವಾಬ್ದಾರಿಗಳನ್ನು ಅರಿತು ಕಾಲಬದ್ಧ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ. ಮೇಲಿನ ಎಲ್ಲಾ ಸಲಹೆ ಸೂಚನೆಗಳನ್ನು ಪರಿಗಣಿಸಿ, ಗ್ರಾಮೀಣ ಜನತೆಗೆ ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಪಡೆಯುವಂತಾಗಿ ಉತ್ತಮ ಆರೋಗ್ಯವಂತ ಜೀವನ ನಡೆಸುವ ಅವಕಾಶ ಮಾಡಿ ಕೊಡಬೇಕಾಗಿದೆ.