ಎಪ್ಪತ್ತರ ಇಳಿ ಹರಯದಲ್ಲೂ ಇಪ್ಪತ್ತರ ಜೀವನೋತ್ಸಾಹದಿಂದ ತುಂಬಿ ತುಳುಕುವ, ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ನಿರತರಾಗಿರುವ ಕಾರ್ಕಡ ಮಂಜುನಾಥ ಉಡುಪರು ನಿಡುಗಾಲದಿಂದ ನನ್ನ ಪಾಲಿಗೊಂದು ಅದ್ಭುತ ವ್ಯಕ್ತಿ. ತಮ್ಮ ನಿವೃತ್ತಿಯ ನಂತರದ ಪ್ರತಿಯೊಂದು ಕ್ಷಣವನ್ನೂ ಸಮಾಜದ ಋಣ ತೀರಿಸಲೆಂದೇ ಮೀಸಲಿಟ್ಟಂತೆ ಬದುಕುತ್ತಿರುವ ಅವರ ಕುರಿತು ನಾನು ಹೇಳುತ್ತಿರುವ ಮಾತುಗಳೆಲ್ಲ ಉತ್ಪ್ರೇಕ್ಷೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕಾದರೆ ನೀವೊಮ್ಮೆ ಅವರನ್ನು, ಅವರ ಕಾರ್ಯಕ್ಷೇತ್ರವನ್ನು, ಬದುಕಿನ ವೈಖರಿಯನ್ನು ನೋಡಬೇಕು. ಒಬ್ಬ ನಿವೃತ್ತ ಬ್ಯಾಂಕ್ ಅಧಿಕಾರಿ, ಒಬ್ಬ ನಿವೃತ್ತ ಕೃಷಿತಜ್ಞ ತನ್ನ ಇಳಿಹರಯದಲ್ಲೂ ಸಮಾಜಕ್ಕೆ ಇಷ್ಟೊಂದು ಉಪಯುಕ್ತನಾಗಿ ಬದುಕುವುದು ಸಾಧ್ಯವೆ ಎಂಬ ಕುತೂಹಲ ಬಗೆ ತುಂಬಿ ನೀವವರನ್ನು ನೋಡಬೇಕು.

ಅವರೀಗ ಭಾರತದ ಬೆನ್ನೆಲುಬಾದ ಗ್ರಾಮೀಣ ಬದುಕನ್ನು, ಹಳ್ಳಿಗಳ ಜೀವನಕ್ರಮವನ್ನು ಸುಸೂತ್ರಗೊಳಿಸುವ ಪರಿಕರಗಳನ್ನು ಪ್ರೋಗಾಂಧಿಯನ್ ಫಿಲಾಸಫಿಯ ಮೇಲೆ ನಿಂತಿರುವ ಭಾರತೀಯ ವಿಕಾಸ್ ಟ್ರಸ್ಟ್ನ ಕಾರ್ಯಕ್ರಮಗಳನ್ನು ನಿರ್ದೇಶಿಸುತ್ತಿರ ಬಹುದು; ಭತ್ತದ ಬೆಳೆಗೆ ಸಂಬಂಧಿತ ವಿಚಾರಗಳನ್ನು ಕೃಷಿತಜ್ಞರೊಂದಿಗೋ, ಯಾವುದೋ ಊರಿನಿಂದ ಹುಡುಕಿಕೊಂಡು ಬಂದ ರೈತರೊಂದಿಗೋ ಚರ್ಚಿಸುತ್ತಿರಬಹುದು; ದೇಶ ವಿದೇಶಗಳ ಯಾವುದೋ ಕೇಂದ್ರದಲ್ಲಿ ಅತಿ ಮಹತ್ವದ ವೇದಿಕೆಯ ಮೇಲೆ ನಿಂತು ಸೌರಶಕ್ತಿಯ ಬಳಕೆಯ ಅನಿವಾರ್ಯತೆಯ ಕುರಿತು ಮಾತನಾಡುತ್ತಿರಬಹುದು; ಗ್ರಾಮೀಣ ಬ್ಯಾಂಕುಗಳ, ಸಹಕಾರಿ ಸಂಘಗಳ ಅಧಿಕಾರಿಗಳಿಗೆ ತರಬೇತಿ ನೀಡುತ್ತಿರ ಬಹುದು; ಸುತ್ತಲಿನ ಹತ್ತೂರ ಸಾಮಾಜಿಕ ಚಟುವಟಿಕೆಗಳ ಮುಂಚೂಣಿ ಯಲ್ಲಿ ಕಾಣಿಸಿಕೊಳ್ಳುತ್ತಿರಬಹುದು; ತಾವೇ ಮುಂದೆ ನಿಂತು ಬೆಳೆಸಿದ ಮಂದರ್ತಿ ಶಾಲೆಯ ಎದುರು ನಿಂತು ಯಾರಿಗೋ ಸಲಹೆ ನೀಡುತ್ತಿರಬಹುದು; ಇಲ್ಲವಾದರೆ ಸಂಜೆಗತ್ತಲಿನಲ್ಲಿ ತಮ್ಮ ಮಂದರ್ತಿಯ ಮನೆಯ ವರಾಂಡದಲ್ಲಿ ಕುಳಿತು ಅನತಿದೂರದ ಗುಡಿಸಲೊಂದಕ್ಕೆ ತಾವೇ ನಿಂತು ಹಾಕಿಸಿಕೊಟ್ಟ ಸೋಲಾರ್ ಲೈಟ್ನ ಬೆಳಕಿನಲ್ಲಿ ಓದುತ್ತಿರುವ ರೈತ ಹುಡುಗನಲ್ಲಿ ನಾಳಿನ ಭಾರತವನ್ನು ಕಾಣುತ್ತಿರಬಹುದು.

ಹೀಗೂ ಇರುತ್ತಾರೆ ಮನುಷ್ಯರೆಂದರೆ ನಂಬುವುದು ಕಷ್ಟವೇ. ಅವರ ಬೆಳವಣಿಗೆಯನ್ನು, ಚಟುವಟಿಕೆಗಳನ್ನು ಅತಿ ಸನಿಹದಿಂದ ಕಂಡು ಪ್ರೋಕೆ.ಕೆ. ಪೈ.ಯವರು ಹೆಮ್ಮೆಯಿಂದ ಹೇಳುತ್ತಿದ್ದಂತೆ ಕೆ.ಎಂ. ಉಡುಪರೊಂದು “Crusader of Rural Empowerment. ಗ್ರಾಮೀಣ ಸಬಲೀಕರಣದ ಹರಿಕಾರ.

* * *

ಇವೆಲ್ಲ ಉತ್ಪ್ರೇಕ್ಷೆ ಎನ್ನುವವರಿದ್ದರೆ ಅಂಥವರ ಎದುರು ತೆರೆದಿಡಲೆಬೇಕು ಉಡುಪರ ಬದುಕಿನ ಪಕ್ಷಿನೋಟವನ್ನು.  31-08-1996, ಶನಿವಾರ, ಸಿಂಡಿಕೇಟ್ ಬ್ಯಾಂಕಿನ ಹೈದರಾಬಾದ್ ವಲಯ ಕಚೇರಿ. ಸಿಂಡಿಕೇಟ್ ಬ್ಯಾಂಕಿನಲ್ಲಿ 31 ವರ್ಷ 4 ತಿಂಗಳುಗಳ ಅತಿ ಸಫಲ, ಸೃಜನಶೀಲ, ಉಪಯುಕ್ತ ಮತ್ತು ಹೊಸ ಹಾದಿಯ ಅನ್ವೇಷಕರಾಗಿ ಸೇವಾವಧಿಯನ್ನು ಮುಗಿಸಿ ನಿವೃತ್ತರಾಗುವ ಹೊತ್ತಿಗೆ ಕೆ.ಎಂ. ಉಡುಪರು ಬ್ಯಾಂಕಿನ ಹತ್ತನೆಯ ಅತಿ ಹಿರಿಯ ಅಧಿಕಾರಿಯಾಗಿದ್ದರು. ಆಗವರು ಬ್ಯಾಂಕಿನ ಹೈದರಾಬಾದ್ ವಲಯದ ಉಪ ಮಹಾ ಪ್ರಬಂಧಕ (DGM) ಆಗಿದ್ದರು. ಒಂದು ಮನುಷ್ಯ ಬದುಕು ಸಾರ್ಥಕ ಎಂದುಕೊಳ್ಳಬಹುದಾದ ಎಲ್ಲವನ್ನೂ ನೆನಪಿಸಿಕೊಂಡು ಹೆಮ್ಮೆ ಪಡಬಹುದಾದುದನ್ನು ಅವರು ಈ ಅವಧಿಯಲ್ಲಿ ಸಾಧಿಸಿ ತೋರಿಸಿದ್ದರು. ಒಂದು ಬ್ಯಾಂಕ್ ಪ್ರೀತಿಯಿಂದಲೂ ಗೌರವದಿಂದಲೂ ದಾಖಲಿಸಬಹುದಾದ ಸಾಧನೆಗಳನ್ನು ಅವರು ಆಗುಮಾಡಿ ತೋರಿಸಿದ್ದರು. ಬೇರೆ ಯಾರಾದರೂ ಅವರ ಜಾಗದಲ್ಲಿದ್ದಿದ್ದರೆ ಗತವೈಭವವನ್ನು ಮೆಲುಕು ಹಾಕುತ್ತಾ ನಿವೃತ್ತಿಯ ಅನಂತರದ ವಾನಪ್ರಸ್ಥಾಶ್ರಮಕ್ಕೆ ಸಂದು ಹೋಗುತ್ತಿದ್ದರು.

ಆದರೆ ಅವರು ಉಡುಪರು! ಟಿ.ಎ. ಪೈ, ಟಿ.ಎಂ.ಎ. ಪೈ ಮತ್ತು ಕೆ.ಕೆ. ಪೈಯವರ ಗರಡಿಯಲ್ಲಿ ಪಳಗಿದವರು. ನಿವೃತ್ತಿಯೊಂದಿಗೆ ತಮ್ಮ ಬದುಕೇ ಮುಗಿದುಹೋಯಿತು ಎಂಬಂತೆ ಹತಪ್ರಭರಾಗಿ, ಖಿನ್ನರಾಗಿ ಉಳಿದು ಬಿಡುವ ಸರಕಾರೀ ನೌಕರರ ಪಾಲಿಗೆ ಮಾರ್ಗದರ್ಶಕವಾಗಬಲ್ಲ ಸಮೃದ್ಧ ಜೀವನೋತ್ಸಾಹದಿಂದ ತುಂಬಿ ತುಳುಕಿದವರು.

ನಿವೃತ್ತಿಯ ಅನಂತರ ಸಮಾಜಕ್ಕೆ ಭಾರವಾಗದೆ, ಸಮಾಜ ತನಗೆ ಕೊಟ್ಟ ಜೀವನಾನುಭವದ ಕಿಂಚಿತ್ತನ್ನಾದರೂ ಸಮಾಜದ ಅತಿಸಾಮಾನ್ಯರಿಗೆ ಹಿಂದೆ ತಿರುಗಿಸಬೇಕೆಂಬ ಹಂಬಲ ಉಡುಪರ ನಿವೃತ್ತಿಯ ನಂತರದ ಬದುಕನ್ನೊಂದು ತಪಸ್ಸನ್ನಾಗಿಸಿದೆ. ಈ ಎಪ್ಪತ್ತೆರಡರ ಇಳಿ ಹರೆಯದಲ್ಲಿ, ಅವರ ಸಮವಯಸ್ಕರು ರಾಮ, ಕೃಷ್ಣ ಎಂದು ಕುಳಿತಿರುವ ಹೊತ್ತಿನಲ್ಲಿ, ಉಡುಪರು ಒಬ್ಬ ಧರ್ಮ ಪ್ರಚಾರಕನ ಉನ್ಮೇಷದಲ್ಲಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಡಿನುದ್ದಕ್ಕೆ ತಿರುಗುತ್ತಿರುತ್ತಾರೆ. ತಮ್ಮ ಪಾಲಿನ ಧರ್ಮವೇ ಎಂದು ತಿಳಿದಿರುವ ಕೃಷಿ, ಸೇವೆ, ಪ್ರೋಸೌರಶಕ್ತಿ, ತರಬೇತಿಗಳನ್ನು ಆತ್ಮಸಾಕ್ಷಿಗೆ ಧಕ್ಕೆಯಾಗದ ಹಾಗೆ ಪ್ರತಿಪಾದಿಸುತ್ತಾ ಬಂದಿದ್ದಾರೆ.

ಎಲ್ಲವನ್ನೂ ಸಾಧ್ಯ ಮಾಡಿಯೂ ನಾನು ಏನೂ ಅಲ್ಲ ಎಂಬ ಅಹಂಕಾರ ರಹಿತ ಮನೋಸ್ಥಿತಿಯನ್ನೂ, ಕೃತಜ್ಞರಾದ ಫಲಾಕಾಂಕ್ಷಿಗಳು ಪ್ರೀತಿಯಿಂದ ಕಾಲಿಗೆರಗಲು ಬಂದರೆ, ಇದು ನನಗಲ್ಲ, ಆ ಮಹಾನುಭಾವನಿಗೆ ಎಂದು ಟಿ.ಎ. ಪೈಯವರ ಫೋಟೋ ತೋರಿಸಿ ಬಿಡುವ ಹನುಮ-ಪ್ರೀತಿಯನ್ನೂ ಹೋಲುವ ಇನ್ನೊಂದು ವ್ಯಕ್ತಿತ್ವವನ್ನು ನಾನು ಕಂಡಿಲ್ಲ. ಅವರನ್ನು ಅತಿ ಸನಿಹದಿಂದ ಕಂಡು, ಮಾತುಗಳನ್ನು ಕೇಳಿ, ಜೀವನ ದರ್ಶನ (vision) ದಿಂದ ಪುಳಕಿತನಾದವನು. ನಾನು ತಪ್ಪು ಮಾಡಿದಾಗೆಲ್ಲ ಇದು ತಪ್ಪು ಎಂದು ನಿರ್ಮೋಹಕನಾಗಿ ಹೇಳಿ ಬಿಡುವ ನಿರ್ವ್ಯಾಜ ಪ್ರೀತಿಯಿಂದ ಮನದುಂಬಿ ನಿಂತವರು. ಉಡುಪರು ಎಂದೊಡನೆ ನನಗೆ ನೆನಪಾಗುವುದು ಪ್ರೊ. ಉಪೇಂದ್ರ ಸೋಮಯಾಜಿಯವರು ತಮ್ಮ ಸಂಶೋಧನಾತ್ಮಕ ಬೃಹತ್ ಕೃತಿಯೊಂದನ್ನು ಕೆ.ಎಂ. ಉಡುಪರಿಗೆ ಅರ್ಪಿಸಿ ಹೇಳಿಕೊಂಡ ಒಂದು ಮಾತು – ಸಾಗರಕ್ಕೆ ಸಾಗರ, ಆಕಾಶಕ್ಕೆ ಆಕಾಶ ಸಾಟಿ ಎಂದ ಹಾಗೆ, ಉಡುಪರಿಗೆ ಉಡುಪರು ಮಾತ್ರ!

* * *

ಕೆ.ಎಂ. ಉಡುಪರ ನಿವೃತ್ತಿಯ ನಂತರದ ಬದುಕನ್ನು ಹತ್ತಿರದಿಂದ ಗಮನಿಸಿದರೆ ನಮಗರಿವಾಗುವ ಚೋದ್ಯವೆಂದರೆ ಈ ದಿನಗಳಲ್ಲಿ ಬಹಳಷ್ಟನ್ನು ಅವರು ಇತರರ ಕನಸುಗಳನ್ನು ನನಸು ಮಾಡಲೆಂದೇ ಮೀಸಲಿಟ್ಟಿರುವುದು; ತಂದೆಯ ಕನಸು ಮಂದರ್ತಿಯ ಶಾಲೆ, ಟಿ.ಎ. ಪೈಗಳ ಕನಸು ಭಾರತೀಯ ವಿಕಾಸ್ ಟ್ರಸ್ಟ್ ಮತ್ತು ಗಾಂಧೀಜಿಯ ಕನಸು ಗ್ರಾಮ ಸ್ವರಾಜ್ಯ. ವೈಯಕ್ತಿಕ ಮಹತ್ವಾಕಾಂಕ್ಷೆ ಏನಾದರೂ ಅವರಲ್ಲಿ ಉಳಿದಿದ್ದರೆ ಅದನ್ನು ಪೂರ್ಣಗೊಳಿಸಲು ಅವರಿಗೆ ಸಾಕಷ್ಟು ಅವಕಾಶಗಳು ಪ್ರಾಪ್ತವಾಗುತ್ತಿದ್ದವು. ನಿವೃತ್ತಿಯ ಹೊತ್ತಿಗೆ ದೊಡ್ಡ ದೊಡ್ಡ ಬೇಡಿಕೆಗಳು ಅವರ ಮುಂದಿದ್ದವು. ಮಣಿಪಾಲದಲ್ಲೊಂದು Local Area Bank ಸ್ಥಾಪನೆಗೆ ರಿಸರ್ವ್ ಬ್ಯಾಂಕಿನ ಅನುಮತಿ ಪ್ರಾಪ್ತವಾಗಿದ್ದು, ಮುಂಚೂಣಿಯಲ್ಲಿ ನಿಲ್ಲಬೇಕೆಂಬ ಕೋರಿಕೆ ಉಡುಪರನ್ನು ಕಾಯುತ್ತಿತ್ತು. ಇನ್ನು ಮುಂದೆ ನನ್ನ ಸಮಯ (time) ನನ್ನದು ಮಾತ್ರ ಎಂದು ಹೇಳಿ ಎಲ್ಲ ಉದ್ಯೋಗ ಪ್ರಸ್ತಾಪಗಳನ್ನು ಉಡುಪರು ತಿರಸ್ಕರಿಸಿದರು. ಇನ್ನು ಮುಂದೆ ಮಾಡುವುದು ಟಿ.ಎ. ಪೈಗಳ ಕೆಲಸ ಮಾತ್ರ ಎಂದರು, ಅದೂ ಟಿ.ಎ. ಪೈಯವರು ನಿಧನರಾದ ಹದಿನೈದು ವರ್ಷಗಳ ನಂತರ. ಟಿ.ಎ. ಪೈಯವರ ಕುರಿತು ಉಡುಪರ ಅನನ್ಯ ಪ್ರೀತಿ ಮತ್ತು ಟಿ.ಎ. ಪೈಯವರ ಚಿಂತನೆಯ ದೂರಗಾಮಿತ್ವದ ಕುರಿತು ಉಡುಪರಲ್ಲಿದ್ದ ಅಚಲ ನಂಬಿಕೆಗಳಿಗಿಂತ ಇದಕ್ಕೆ ಹೆಚ್ಚಿನ ಕಾರಣ ಇದ್ದಿರಲಾರದು.

ನಿವೃತ್ತಿಯ ಅನಂತರ ಉಡುಪರು ಮಂದರ್ತಿಯಲ್ಲಿಯೇ ನೆಲೆ ನಿಂತರು. ಮನಸ್ಸು ಮಾಡಿದ್ದರೆ ಅವರು ಇತರ ಸಮಕಾಲೀನ ಅಧಿಕಾರಿಗಳ ಹಾಗೆ ದೇಶದ ಯಾವುದೇ ದೊಡ್ಡ ನಗರದಲ್ಲಿ ಬಂಗಲೆ ಕಟ್ಟಿ ನಿಲ್ಲಬಹುದಿತ್ತು. ಹಳ್ಳಿಯ ನಡುವಿನ ಜೀವನ ಅವರ ಅಂತರಂಗದ ಬಯಕೆ ಅದು. ಅವರು ದೀರ್ಘಕಾಲದಿಂದ ಆರಾಧಿಸುತ್ತಾ ಬಂದ ಗಾಂಧೀ ಚಿಂತನೆಯ ಒಂದು ಭಾಗ. ವಾಸ್ತವವಾಗಿ ಅವರ ಗುರು ಟಿ.ಎ. ಪೈಗಳು ದೆಹಲಿ ಬಿಟ್ಟು ಮಣಿಪಾಲಕ್ಕೆ ಬಂದು ನಿಂತವರು. ಉಡುಪರು 1971 ರ ಅಮೇರಿಕಾ ಯಾತ್ರೆ ಮತ್ತು ವಾಸ್ತವ್ಯದ ಸಂದರ್ಭದಲ್ಲಿ ಅಲ್ಲಿಯ ಜೀವನ ಕ್ರಮವನ್ನು ಕಂಡು ಇದು ಭಾರತದ ಮನಃಸ್ಥಿತಿಗೆ ಒಗ್ಗಲಾರದು ಎಂದು ಮನದಟ್ಟು ಮಾಡಿಕೊಂಡವರು. ಹಳ್ಳಿಯಲ್ಲಿ ಹುಟ್ಟಿದವರು ಕೊನೆಯ ಪಕ್ಷ ತಾವು ಹುಟ್ಟಿದ ಹಳ್ಳಿಯ ಬೆಳವಣಿಗೆಯನ್ನು ಸಾಧ್ಯ ಮಾಡಿಕೊಡಬೇಕು ಎಂಬ ಪೈಗಳ ಸಲಹೆ ಹಲವೊಂದು ಸಂದರ್ಭಗಳಲ್ಲಿ ಉಡುಪರಿಗೆ ಆದೇಶದ ಹಾಗೆ ಅನ್ನಿಸಿದ್ದೂ ಉಂಟು.

ಮಂದರ್ತಿಯಲ್ಲಿ ಉಡುಪರ ಪಾಲಿಗೆ ಇನ್ನೊಂದು ಸೆಳೆತವೂ ಇದ್ದಿತ್ತು. ಮಂದರ್ತಿಯ ಶ್ರೀದುರ್ಗಾ ಪರಮೇಶ್ವರಿ ಹಾಯರ್ ಪ್ರೈಮರಿ ಶಾಲೆ, ಉಡುಪರ ತಂದೆ ಮರಿ ಉಡುಪರು ಆರಂಭದ ದಿನಗಳಲ್ಲಿ ಅಧ್ಯಾಪಕರಾಗಿದ್ದ, ಪಾಂಡೇಶ್ವರ ರಾಮದಾಸ ಚಡಗರು ನಿರ್ವಹಿಸುತ್ತಿದ್ದು, ಮತ್ತೆ ಕೈಸೋತು, 1947 ರಲ್ಲಿ ಮರಿ ಉಡುಪರಿಗೇ ಜವಾಬ್ದಾರಿ ವಹಿಸಿ ಕೊಟ್ಟು ಹೋದ ಒಂದು ಶಾಲೆ. ಕೆ.ಎಂ. ಉಡುಪರ ಮಗ ಮಹೇಶ ಉಡುಪರು ಈಗ ಸಂಚಾಲಕರಾಗಿರುವ ಈ ಶಾಲೆ ಉಡುಪರನ್ನು ಸಂತೃಪ್ತಗೊಳಿಸಿದ ಇನ್ನೊಂದು ಕನಸು.

ಉಡುಪರ ಈ ಶಾಲೆ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ, ಇವತ್ತಿಗೂ ಉಡುಪಿ ಜಿಲ್ಲೆಯ ಮಾದರಿ ಶಾಲೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಮಾದರಿ ಎನಿಸುವ ಮೂಲಭೂತ ಸೌಕರ್ಯಗಳನ್ನು ಈ ಶಾಲೆಯಲ್ಲಿ ಒದಗಿಸಲು ಉಡುಪರು ಇವತ್ತಿಗೂ ಶ್ರಮಿಸುತ್ತಿದ್ದಾರೆ. 2005ನೆಯ ಇಸವಿಯವರೆಗೆ ಈ ಶಾಲೆಯಲ್ಲಿ ಸುಮಾರು 500 ಮಕ್ಕಳು ಕಲಿಯುತ್ತಿದ್ದು, ಈಚೆಗೆ ಇಂಗ್ಲೀಷ್ ಮೀಡಿಯಂನ ವ್ಯಾಮೋಹದಿಂದ ಈ ಸಂಖ್ಯೆ 350-400ರ ಆಸುಪಾಸಿಗೆ ಇಳಿದಿರುವುದನ್ನು ಉಡುಪರು ಖೇದದಿಂದಲೇ ಗುರುತಿಸುತ್ತಾರೆ. ಸ್ನೇಹಿತರ ನೆರವಿನಿಂದ ಈ ಶಾಲೆಗೆ ಲೈಬ್ರೆರಿ, ಓದುವಕೋಣೆ, ಪ್ರಯೋಗಶಾಲೆ, ಕಂಪ್ಯೂಟರ್ ಶಿಕ್ಷಣಗಳನ್ನು ಸಾಧ್ಯ ಮಾಡಿಕೊಡುವುದರ ಹಿಂದೆ ಉಡುಪರ ಏಕಮೇವ ಉದ್ದೇಶವೆಂದರೆ ಒಂದು ಮಗು ಈ ಶಾಲೆಯಲ್ಲಿ ಏಳನೆಯ ತರಗತಿ ಪಾಸು ಮಾಡಿ ಹೋಗುವಾಗ ಅದರ ಕ್ಷಮತೆ, ಯೋಗ್ಯತೆ, ಕಾನ್ವೆಂಟಿನಿಂದ ಪಾಸಾಗಿ ಬರುವ ಯಾವುದೇ ವಿದ್ಯಾರ್ಥಿಯ ಕ್ಷಮತೆಗಿಂತ ಕಡಿಮೆಯಿರಬಾರದು ಎನ್ನುವುದು. ಮಂದರ್ತಿಯಂತಹ ಹಳ್ಳಿಯಲ್ಲಿ ಇದೆಲ್ಲ ಎಷ್ಟು ಕಷ್ಟ ಎನ್ನುವುದನ್ನು ಉಡುಪರು ಅರಿತಿದ್ದಾರೆ. ಅಂತೆಯೇ ಶಿಕ್ಷಣದ ಬುನಾದಿಗೆ ಒಂದು ಶಿಸ್ತು ಬೇಕು ಎಂಬ ಹಂಬಲದಿಂದ 1996 ರಲ್ಲಿ ಡಾ. ರಾಜ್ಪಾಲ್ ಮೆಮೋರಿಯಲ್ ಸ್ಕೂಲ್ ಎಂಬ ನರ್ಸರಿ ಶಾಲೆಯನ್ನು ಆರಂಭಿಸಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ಡಿ.ಜಿ.ಎಂ. ಆಗಿದ್ದ ಆನಂದರಾಯರು ತಮ್ಮ ಮಗ ದಿ. ಡಾ. ರಾಜ್ಪಾಲ್ನ ನೆನಪಿಗೆ ಕೊಟ್ಟ ಒಂದು ದೊಡ್ಡ ಮೊತ್ತವನ್ನು ಈ ಶಾಲೆಯ ಕಟ್ಟಡಕ್ಕೆ ಬಳಸಿಕೊಂಡ ಉಡುಪರು ಈ ನರ್ಸರಿ ಶಾಲೆಗೆ ಆತನ ಹೆಸರನ್ನೇ ಇರಿಸಿದ್ದಾರೆ. ಮಣಿಪಾಲದ ಪೈ ಬಂಧುಗಳ ನೆರವಿನಿಂದ ಟಿ.ಎಂ.ಎ. ಪೈ ಚಿಲ್ಡ್ರನ್ಸ್ ಕಾರ್ನರ್ ಎಂಬ ಹೆಸರಿನ ಚಿಕ್ಕ ಮಕ್ಕಳ ಆಟದ ಅಂಗಣವನ್ನು ಕಟ್ಟಿದ್ದಾರೆ. ಮಾಧವ ಪೈಯವರ ತಂತ್ರವನ್ನೇ ಉಪಯೋಗಿಸಿ ಉಡುಪರು ಶಾಲೆಗೆ ಬಂದ ನೆರವನ್ನೆಲ್ಲ ಕ್ರೋಢೀಕರಿಸಿ ಇವತ್ತೊಂದು ದೊಡ್ಡ ಮೊತ್ತದ CORPUS ಮಾಡಿ ಇರಿಸಿದ್ದಾರೆ, ಯಾವ ಕಾಲಕ್ಕೂ ಶಾಲೆಯ ನಿರ್ವಹಣೆಗೆ ತೊಂದರೆಯಾಗಬಾರದೆಂದು.

ಹಿಂದುಳಿದ ಹಳ್ಳಿಯ ಮಕ್ಕಳಿಗೆ ಶಿಕ್ಷಣವನ್ನು ಒಂದು ಆಸಕ್ತಿಯಾಗಿ ಬೆಳೆಸಲಿಕ್ಕೆ ಏನು ಮಾಡಬೇಕೋ ಅದನ್ನೆಲ್ಲ ಉಡುಪರು ಮಾಡುತ್ತಾ ಬಂದಿದ್ದಾರೆ. ಅವರು ತಮ್ಮ ತಂದೆಯ ಶ್ರಾದ್ಧವನ್ನು ಆಚರಿಸುವುದು ಶಾಲೆಯ ಬಡಮಕ್ಕಳಿಗೆ ಬಟ್ಟೆ ನೀಡುವ ಮೂಲಕ; ಅವರ ಮಿತ್ರ ಅಮೇರಿಕಾದ ಖ್ಯಾತ ನ್ಯೂರೋ ಸರ್ಜನ್ ಪಾಂಡೇಶ್ವರ ಶ್ರೀಪತಿ ಹೊಳ್ಳರು ದೊಡ್ಡ ಮೊತ್ತದ ಆರ್ಥಿಕ ಸಹಾಯವನ್ನು ನೀಡುತ್ತ ಬಂದಾಗೆಲ್ಲ, ಪಾರಂಪಳ್ಳಿ ಮಂಜುನಾಥ ಹೇರ್ಳೆಯವರ ಮತ್ತವರ ಪತ್ನಿ ಸರಸ್ವತಿಯವರ ಹೆಸರಿನಲ್ಲಿ ಸ್ಕಾಲರ್ಶಿಪ್ ನೀಡುವ ಮೂಲಕ; ಹಾಗೂ ಶಾಲೆಗೆ ಮತ್ತೊಂದು ಕಟ್ಟಡವನ್ನೇ ಕಟ್ಟಿಸುವ ಮೂಲಕ. 1985ರಲ್ಲಿ ಕುಟುಂಬಿಕರ ನೆರವಿನಿಂದ ಕಾರ್ಕಡ ಮರಿ ಉಡುಪ ಸಭಾ ಭವನವನ್ನೂ ಕಟ್ಟಿಸಿದರು. ಶಾಲೆಯ ಡೈಮಂಡ್ ಜುಬಿಲಿ ಸಂದರ್ಭದಲ್ಲಿ ಅಧ್ಯಾಪಕರಿಗೆ ಅಮೂಲ್ಯ ನೆನಪಿನ ಕಾಣಿಕೆಗಳನ್ನು ನೀಡುವಾಗಲೂ ಉಡುಪರು ಹೇಳಿದ್ದು ಒಂದೇ ಮಾತು – ಮನುಷ್ಯರು ಒಳ್ಳೆಯವರೇ ಇರುತ್ತಾರೆ.

ಸುಮಾರು ಹತ್ತು ವರ್ಷಗಳಿಗೂ ಹಿಂದೆ ಉಡುಪರು ಈ ಶಾಲೆಯಲ್ಲಿ ಆರಂಭಿಸಿದ ಎರಡು ಉಪಯುಕ್ತ ಯೋಜನೆಗಳನ್ನು ಮತ್ತೆಷ್ಟೋ ವರ್ಷಗಳ ನಂತರ ಸರಕಾರ ನಕಲು ಮಾಡಿದುದನ್ನೂ ಇಲ್ಲಿ ಉಲ್ಲೇಖಿಸಬಹುದು. ಮೊದಲಿನದ್ದು ಮಕ್ಕಳಿಗೆ ಊಟದ ವ್ಯವಸ್ಥೆ. ಮಕ್ಕಳಿಗೆ ಉಪಯುಕ್ತ ಪೌಷ್ಠಿಕ ಆಹಾರವನ್ನು ನೀಡತೊಡಗಿದ ಉಡುಪರು ಸಾಂಕೇತಿಕವಾಗಿ ಪ್ರತಿ ಮಗು ಒಂದು ರೂಪಾಯಿ ಕೊಟ್ಟು ಈ ಸವಲತ್ತನ್ನು ಪಡೆಯಬೇಕೆಂದು ಹೇಳುತ್ತಾರೆ. ಏನನ್ನೇ ಆದರೂ ಪುಕ್ಕಟೆಯಾಗಿ ಕೊಟ್ಟರೆ ಅದರ ಬೆಲೆ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವುದು ಉಡುಪರ ಖಚಿತ ಅಭಿಪ್ರಾಯ. ಹೀಗೆ ಸಂಗ್ರಹಿತವಾದ ಹಣ ಅತಿ ಬಡ ಮಕ್ಕಳ ನೆರವಿಗೇ ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ಮಾತು. ಎರಡನೆಯದು ಇಂಗ್ಲೀಷ್ ಶಿಕ್ಷಣ. ಉಡುಪರ ಶಾಲೆಯಲ್ಲಿ ಅತಿ ಚಿಕ್ಕ ತರಗತಿಯಿಂದ ಸರಕಾರ ನಿರ್ದೇಶಿಸಿದ ಪಠ್ಯಕ್ರಮದೊಂದಿಗೆ ಇಂಗ್ಲೀಷ್ ಭಾಷೆಯ ಶಿಕ್ಷಣ ಅದೆಷ್ಟೋ ಕಾಲದಿಂದ ನಡೆಯುತ್ತಾ ಬಂದಿದೆ.

ಶಿಕ್ಷಣದ ಬಗ್ಗೆ ಉಡುಪರ ನಿಲುವನ್ನು ಈ ಕಾರಣಗಳಿಂದಾಗಿ ಸಾಂಪ್ರದಾಯಿಕ ಎನ್ನುವಂತಿಲ್ಲ. ಆದರೆ ಕನ್ನಡ ಮಾಧ್ಯಮದ ಮಾತು ಬಂದಾಗ, ಗಾಂಧಿಮಾರ್ಗದ ಮಾತು ಬಂದಾಗ ಅವರು ತುಂಬ ಸಂಪ್ರದಾಯ ನಿಷ್ಠರಂತೆ ಕಾಣಿಸುತ್ತಾರೆ. ಅವರ ಒಟ್ಟು ನಿಲುವಿನ ಮೇಲೆ ಟಿ.ಎ. ಪೈ, ಟಿ.ಎಂ.ಎ. ಪೈ ಮಾತ್ರವಲ್ಲ ಗಾಂಧೀಜಿ ಮತ್ತು ವಿವೇಕಾನಂದರು ಅಚ್ಚಳಿಯದ ಪ್ರಭಾವ ಬೀರಿರುವುದನ್ನು ಅವರ ಯೋಚನಾ ಲಹರಿಯಿಂದ, ಮಾತುಗಳಿಂದ ಮತ್ತು ಕ್ರಿಯೆಯಿಂದ ಮನಗಾಣಬಹುದು.

* * *

ಟಿ.ಎ. ಪೈಗಳು ತಮ್ಮ ಜೀವಿತಾವಧಿಯಲ್ಲಿ ಎರಡು ಮಹತ್ವದ ಟ್ರಸ್ಟ್ಗಳನ್ನು ಮಾಡಿದ್ದರು. ಮೊದಲಿನದ್ದು India Foundation for Development. ಇದು ಚಿಂತನೆಗೆ ಸಂಬಂಧಿಸಿದ ಪುಸ್ತಕಗಳ ಪ್ರಕಟಣೆಯ ಉದ್ದೇಶವನ್ನು ಹೊಂದಿದೆ. ಈ ಸಂಸ್ಥೆ ಪ್ರಕಟಿಸಿದ ಮೊದಲ ಎರಡು ಪುಸ್ತಕಗಳು ಟಿ.ಎ. ಪೈಯವರಿಂದಲೇ ಬರೆಯಲ್ಪಟ್ಟವಾಗಿವೆ. ಎರಡನೆಯದು ಭಾರತೀಯ ವಿಕಾಸ್ ಟ್ರಸ್ಟ್ (BVT). ಇದು ಆರಂಭವಾದದ್ದು 1978ರಲ್ಲಿ. ಮೊದಲಿಗೆ ಧೀರುಬಾ ಅಂಬಾನಿ, ಆರ್ಥಿಕ ತಜ್ಞ ನರಸಿಂಹನ್ ಮೊದಲಾದ ಖ್ಯಾತರು ಟ್ರಸ್ಟಿಗಳಾಗಿದ್ದರು. 1981ರಲ್ಲಿ ಟಿ.ಎ. ಪೈಯವರು ಉಡುಪರನ್ನು ಟ್ರಸ್ಟಿಗಳಾಗಿ ಸೇರಿಸಿಕೊಂಡರು.

1981ರ ಮೇ 29ರಂದು ಟಿ.ಎ. ಪೈಗಳು ಅಕಾಲ ಮೃತ್ಯುವಿಗೆ ವಶರಾದ ನಂತರ ಅವರೆಲ್ಲ ಕನಸುಗಳ ಜವಾಬ್ದಾರಿ ಉಡುಪರ ಹೆಗಲಿಗೇರಿತು. ಶ್ರೀಮತಿ ವಸಂತಿ ಪೈಯವರೂ ಉಡುಪರ ನಾಯಕತ್ವದಲ್ಲಿ ಅಚಲ ನಂಬಿಕೆ ಹೊಂದಿದ್ದುದು ಉಡುಪರ ಬೆಂಗಾವಲಾಯಿತು. ಮುಂದಿನ ವರ್ಷದಿಂದ ಟಿ.ಎ. ಪೈಗಳ ಜನ್ಮದಿನದಂದು (17, ಜನವರಿ) ದೇಶದ ಖ್ಯಾತ ಅರ್ಥಶಾಸ್ತ್ರಜ್ಞರನ್ನೂ ಚಿಂತಕರನ್ನೂ ಉಡುಪಿಗೆ ಆಹ್ವಾನಿಸಿ ಟಿ.ಎ. ಪೈ ಸ್ಮಾರಕ ಉಪನ್ಯಾಸ ಮಾಲೆ ಯ ಹೆಸರಿನಲ್ಲಿ ಅವರ ಉಪನ್ಯಾಸಗಳನ್ನು ಏರ್ಪಡಿಸಿ, ಉಪನ್ಯಾಸಗಳನ್ನು ಮುದ್ರಿಸಿ ಹಂಚುವ ಕಾರ್ಯವನ್ನು ಉಡುಪರು ನಡೆಸಿದ್ದಾರೆ. ಈ ಮಾಲೆಯಲ್ಲಿ ಆರ್ಥಿಕ ತಜ್ಞರಾದ ನರಸಿಂಹನ್, ನೀಲಕಂಠ ರತ್, ತ್ರಿಲೋಕ್ ಸಿಂಗ್ ಮೊದಲಾದವರು ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. 1989 ರಿಂದ ಈ ಉಪನ್ಯಾಸ ಮಾಲಿಕೆಯನ್ನು TAPMI ನಿರ್ವಹಿಸುತ್ತಿದೆ.

ಟಿ.ಎ. ಪೈಯವರು ನಿಧನರಾದ ದಿನ, ಮೇ 29ನ್ನು, ಪ್ರತಿವರ್ಷ ಸ್ಮತಿ ದಿನ ವನ್ನಾಗಿ ಆಚರಿಸುತ್ತಿರುವುದರ ಹಿಂದೆಯೂ ಉಡುಪರ ಚಿಂತನೆಯಿದೆ. ಉಡುಪರು ಟಿ.ಎ. ಪೈಯವರ ಸ್ಮರಣೆಯಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಟಿ.ಎ. ಪೈ ಸಂಸ್ಥೆ (T.A. Pai Institute for Rural Development) ಆರಂಭಿಸಿದ್ದೂ ಇದೇ ವರ್ಷ. ಈ ಸಂಸ್ಥೆಯ ಆಶ್ರಯದಲ್ಲಿ ಡಾ. ವಿ.ಕೆ.ಆರ್.ವಿ. ರಾವ್ ಮೊದಲಾದ ಆರ್ಥಿಕ ತಜ್ಞರು ಉಡುಪಿಗೆ ಆಗಮಿಸಿ ಉಪನ್ಯಾಸಗಳನ್ನು ನೀಡಿದ್ದಾರೆ. ಈ ಸಂಸ್ಥೆಯ ನಿರ್ವಹಣೆ ಮತ್ತು ಸ್ಮತಿದಿನ ಆಚರಣೆಯನ್ನು ಇವತ್ತಿಗೂ ಉಡುಪರು ಟಿ.ಎ. ಪೈ ಚಿಂತನೆಯ ಕುರಿತು ತಮ್ಮ ಅನನ್ಯ ಪ್ರೀತಿ ಮತ್ತು ಭಕ್ತಿಯ ದ್ಯೋತಕವಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

ಉಡುಪರ ದೀರ್ಘದರ್ಶಿತ್ವದ ಇನ್ನೊಂದು ಉದಾಹರಣೆ ಕೆ.ಕೆ. ಪೈ ಟ್ರಸ್ಟ್. ಸಿಂಡಿಕೇಟ್ ಬ್ಯಾಂಕ್ನ ಸುದೀರ್ಘಕಾಲದ ಅಧ್ಯಕ್ಷರಾಗಿದ್ದ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಅನುಭವಿ ಕೆ.ಕೆ. ಪೈಯವರನ್ನು 1988ರಲ್ಲಿ ಉಡುಪಿಯಲ್ಲಿ ಸಾರ್ವಜನಿಕವಾಗಿ ಸನ್ಮಾನಿಸಲಾದ ಒಂದು ದೊಡ್ಡ ಕಾರ್ಯಕ್ರಮದ ಯೋಜನೆ, ನಿರ್ವಹಣೆ, ಉಡುಪರದ್ದಾಗಿತ್ತು. ಉದ್ಯಮಿಗಳಾದ ಸತೀಶ್ಚಂದ್ರ ಹೆಗ್ಡೆ, ಶಿಕ್ಷಣ ತಜ್ಞರಾದ ಕು.ಶಿ. ಹರಿದಾಸ ಭಟ್ಟರು, ಪ್ರೊ.ಕೆ.ಆರ್. ಹಂದೆ ಮೊದಲಾದವರೆಲ್ಲ ಈ ಕಾರ್ಯಕ್ರಮದ ಹಿಂದಿದ್ದರು.  ಕೆ.ಎಂ. ಉಡುಪ ಮತ್ತು ಬಿ.ವಿ. ಕೆದಿಲಾಯರ ಸಹಸಂಪಾದಕತ್ವದಲ್ಲಿ, ಈ ಸಂದರ್ಭದಲ್ಲಿ ಕೆ.ಕೆ. ಪೈ – ಜೀವನ ಮತ್ತು ಸಾಧನೆ ಎಂಬ ವ್ಯಕ್ತಿ ಚಿತ್ರಣವೊಂದನ್ನು ಪ್ರಕಟಿಸಲಾಯಿತು. ಈ ಕಾರ್ಯಕ್ರಮದ ಕೊನೆಯಲ್ಲಿ ಉಳಿದ ಒಂದು ಗಣನೀಯ ಮೊತ್ತವನ್ನು ಒಂದು ಠೇವಣಿಯಾಗಿ ಇರಿಸಿ, ಅದರ ಬಡ್ಡಿಯಿಂದ ಕೆ.ಕೆ. ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ (K.K. Pai National Banking Award) ಕೊಡುವುದನ್ನು ಆರಂಭಿಸಲಾಯಿತು. ಕಾರ್ಪೋರೇಷನ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ವೈ.ಎಸ್. ಹೆಗ್ಡೆ (2000) ಮತ್ತು ಕೆ.ಆರ್. ರಾಮಮೂರ್ತಿ (2007) ಐಸಿಐಸಿಐ ಬ್ಯಾಂಕಿನ ಅಧ್ಯಕ್ಷರಾಗಿದ್ದ ನಾರಾಯಣನ್ ವಾಘುಲ್ (2002), ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಅಧ್ಯಕ್ಷರಾಗಿದ್ದ ಜೆ.ಎಸ್. ವಾರ್ಷ್ನೇಯ (2003), ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ.ವಿ. ಮೂರ್ತಿ ಯೆರ್ಕಡಿತ್ತಾಯ (2006) ಮೊದಲಾದ ಗಣ್ಯರು ಈ ಪುರಸ್ಕಾರವನ್ನು ಸ್ವೀಕರಿಸಿ, ಅಮೂಲ್ಯ ಉಪನ್ಯಾಸಗಳನ್ನು ನೀಡಿದರು.

ಉಡುಪರ ಪ್ರವೃತ್ತಿಯ, ಹವ್ಯಾಸದ, ನಿವೃತ್ತಿಯ ನಂತರದ ಮನೋವೃತ್ತಿಯ ಬಗ್ಗೆ ಹೇಳ ಹೊರಟಾಗ ಸಾಲಿಗ್ರಾಮ ಮಕ್ಕಳ ಮೇಳದ ಕುರಿತು ಹೇಳಲೇಬೇಕಾಗುತ್ತದೆ. ಉಡುಪರ ಚಿಕ್ಕಪ್ಪ ಕಾರ್ಕಡ ಶ್ರೀನಿವಾಸ ಉಡುಪರು ಸಹಶಿಕ್ಷಕ ಹಂದಟ್ಟು ಶ್ರೀಧರ ಹಂದೆ ಎಂಬ ಪ್ರತಿಭಾನ್ವಿತರೊಂದಿಗೆ ಸೇರಿ 1975ರಲ್ಲಿ ಕಟ್ಟಿದ ಸಾಲಿಗ್ರಾಮ ಮಕ್ಕಳ ಮೇಳ ಸಮುದ್ರೋಲ್ಲಂಘನಗೈದ ಮೊದಲ ಯಕ್ಷಗಾನ ತಂಡ. 1978ರ ಆಗಸ್ಟ್ 24ರಂದು ಈ ತಂಡ ಅಮೇರಿಕಾದ ಸ್ಯಾನ್ಜೋಸ್ನಲ್ಲಿ ಇತ್ತ ಪ್ರದರ್ಶನ ಇವತ್ತೊಂದು ಇತಿಹಾಸ. ಈ ವಿದೇಶೀ ಯಾತ್ರೆಯ ಸಂದರ್ಭದಲ್ಲಿ ಮಾರ್ಗದರ್ಶಕನಾಗಿ ರಂಗಕ್ಕಿಳಿದ
ಕೆ.ಎಂ. ಉಡುಪರು ಮತ್ತೆ ಮಕ್ಕಳ ಮೇಳದ ಆಡಳಿತದ ಒಂದು ಅವಿಭಾಜ್ಯ ಅಂಗವೇ ಆಗಿಬಿಟ್ಟರು. ವೃತ್ತಿಯಲ್ಲಿದ್ದಾಗಲೂ, ನಿವೃತ್ತಿಯ ನಂತರವೂ ಮಕ್ಕಳ ಮೇಳದ ವಿಶ್ವಸ್ತ ಮಂಡಳಿಯ ಸದಸ್ಯರಾಗಿ ಉಡುಪರು ಹಂದೆಯವರ ಬೆಂಗಾವಲಿಗೆ ನಿಂತಿದ್ದಾರೆ. ಇದಲ್ಲದೇ ಕೋಟದ ಮಿತ್ರಮಂಡಳಿಯ ಶ್ರೀನಿವಾಸ ಉಡುಪರ ಸಂಸ್ಮರಣೆಯ ವಾರ್ಷಿಕ ಕಾರ್ಯಕ್ರಮಗಳಲ್ಲಿ ಉಡುಪರೊಂದು ಅನಿವಾರ್ಯ ಅಂಗವಾಗಿದ್ದಾರೆ. ಶ್ರೀನಿವಾಸ ಉಡುಪರು ಕೆ.ಎಂ. ಉಡುಪರ ಬದುಕಿನ ಮೇಲೆ ದೀರ್ಘಗಾಮಿ ಪ್ರಭಾವವನ್ನು ಬೀರಿದವರಲ್ಲಿ ಒಬ್ಬರು ಎನ್ನುವುದೂ ಇದಕ್ಕೆ ಕಾರಣವಿದ್ದೀತು.

ಟಿ.ಎ. ಪೈಯವರ ಗ್ರಾಮಾಭಿವೃದ್ಧಿಯ ಕನಸಿನ ವಿಸ್ತತ ಆವೃತ್ತಿಯಂತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುರಿತೂ ಇಲ್ಲಿ ಹೇಳಬಹುದು. ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಇದರ ವಿಶ್ವಸ್ತ ಮಂಡಳಿಯಲ್ಲಿ ಉಡುಪರು 1984 ರಿಂದಲೂ ಸದಸ್ಯರು. ನಿವೃತ್ತಿಯ ನಂತರವೂ ಅವರು ಈ ನಿಟ್ಟಿನಲ್ಲಿ ಸಾರ್ಥಕ ಪ್ರವೃತ್ತರು. ಧರ್ಮಸ್ಥಳದ ಸಹಯೋಜನೆಯ ತರಬೇತಿ ಸಂಸ್ಥೆ ರುಡಸೆಟ್ನ ಪದಾಧಿಕಾರಿಗಳಾಗಿಯೂ ಉಡುಪರು 1982 ರಿಂದ 2008ರ ವರೆಗೆ ಕಾರ್ಯನಿರ್ವಹಿಸಿದ್ದಾರೆ.

* * *

ನಿವೃತ್ತಿಯ ನಂತರ ಉಡುಪರು ಸಂಪೂರ್ಣವಾಗಿ ತೊಡಗಿಕೊಂಡ, ಅವರ ಪ್ರತಿಭೆ, ಜೀವನಾನುಭವ ಮತ್ತು ಗ್ರಾಮೀಣ ಕಾಳಜಿಗಳು ಸಮಗ್ರವಾಗಿ ಬಳಸಲ್ಪಟ್ಟ ಸಂಸ್ಥೆ ಭಾರತೀಯ ವಿಕಾಸ ಟ್ರಸ್ಟ್. 1978ರಲ್ಲಿ ದಾಖಲಾದರೂ ಬಿವಿಟಿಯ ಕಾರ್ಯ ಆರಂಭವಾದದ್ದು 1981ರಲ್ಲಿ ಮಣಿಪಾಲದ ಸಮೀಪದ ಪೆರಂಪಳ್ಳಿಯಲ್ಲಿ, ಟಿ.ಎ. ಪೈಗಳು ಅದಕ್ಕಾಗಿಯೇ ಮೀಸಲಿಟ್ಟ ಐದು ಎಕರೆ ಭೂಮಿಯಲ್ಲಿ. ಕೆಲವೇ ದಿನಗಳಲ್ಲಿ ಟಿ.ಎ. ಪೈಯವರು ನಿಧನರಾದ ಕಾರಣ ಪೂರ್ಣ ಜವಾಬ್ದಾರಿಯನ್ನು ಉಡುಪರು ತಾವೇ ಕೈಗೆತ್ತಿಕೊಳ್ಳಬೇಕಾಯಿತು. ನಿವೃತ್ತಿಯ ನಂತರವಂತೂ ಬಿವಿಟಿ ಉಡುಪರ ಬದುಕಿನ ಭಾಗವೇ ಆಗಿಬಿಟ್ಟಿದೆ. ನಂತರದ 28 ವರ್ಷಗಳಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರಕಾರಗಳ ಹಲವು ಯೋಜನೆಗಳ ಅನುಷ್ಠಾನದಲ್ಲಿ ಬಿವಿಟಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಪಶು ಸಂಗೋಪನೆ, ಶಕ್ತಿ, ಶಿಕ್ಷಣ, ಸ್ವೋದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳನ್ನು ಉದ್ದೇಶಿಸಿ ಸ್ವಷ್ಟವಾದ ಬದಲಾವಣೆಗಳನ್ನು ಸಾಧ್ಯ ಮಾಡುವುದು ಬಿವಿಟಿಯ ಧ್ಯೇಯ. ಈ ನಿಟ್ಟಿನಲ್ಲಿ ಇವತ್ತು ಬಿವಿಟಿಯಲ್ಲಿ ಅದರದೇ ಆದ ತರಬೇತಿ ವ್ಯವಸ್ಥೆ, ವಸತಿ ಗೃಹ, ಕ್ಯಾಂಟೀನ್ಗಳಿವೆ. ಪ್ರತಿದಿನ 200 ಲೀಟರ್ ಹಾಲು ಉತ್ಪಾದಿಸುವ 30 ಹಸುಗಳನ್ನೊಳಗೊಂಡ ಹೈನೋದ್ಯಮವಿದೆ. ಪಶುಸಂಗೋಪನೆ ಮತ್ತು ಕೃತಕ ಗರ್ಭಧಾರಣೆಗೆ ಪಶುಗಳ ಆಸ್ಪತ್ರೆಯಿದೆ. ಮೇವು ಉತ್ಪನ್ನಕ್ಕಾಗಿ ಕೃಷಿ ಮತ್ತು ತೋಟಗಾರಿಕೆಯ ಕೃಷಿ ಕ್ಷೇತ್ರವಿದೆ. 20 ಹೊಲಿಗೆ ಯಂತ್ರಗಳನ್ನು ಒಳಗೊಂಡ ಹೊಲಿಗೆ ವಿಭಾಗವಿದೆ. ಸೌರಶಕ್ತ್ಯುತ್ಪನ್ನಗಳ ಒಂದು ಮ್ಯೂಸಿಯಂ, ಲೈಬ್ರೆರಿ ಮೊದಲಾದ ವ್ಯವಸ್ಥೆಗಳೆಲ್ಲ ಖಾಸಗೀಕ್ಷೇತ್ರದ ಅತ್ಯುತ್ತಮ ಮಾದರಿ ಎನ್ನಿಸುವಂತಿವೆ. ಬಿವಿಟಿಯ ಪ್ರಮುಖ ಕಾರ್ಯಕ್ರಮಗಳೆಲ್ಲ ಉಡುಪಿ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದ್ದರೂ, ಸೌರಶಕ್ತಿಗೆ ಸಂಬಂಧಿತ ಚಟುವಟಿಕೆ ಮತ್ತಿತರ ಯೋಜನೆಗಳನ್ನು ಕರ್ನಾಟಕದ ಇತರ ಭಾಗ, ಉತ್ತರ ಪ್ರದೇಶ ಮತ್ತು ಹರ್ಯಾನ ರಾಜ್ಯಗಳಲ್ಲಿ ಬಿವಿಟಿ ಅನುಷ್ಠಾನಕ್ಕೆ ತಂದಿದೆ. ಟಿ. ಮೋಹನದಾಸ ಪೈಯವರು ಅಧ್ಯಕ್ಷರಾಗಿರುವ ವಿಶ್ವಸ್ತಮಂಡಳಿಗೆ ಕೆ.ಎಂ. ಉಡುಪರು ಮೆನೇಜಿಂಗ್ ಟ್ರಸ್ಟಿಯಾಗಿ ಜೀವ ತುಂಬಿದ್ದಾರೆ.

ವಿದ್ಯಾರ್ಥಿಗಳಲ್ಲಿ ಗ್ರಾಹಕ ಹಕ್ಕುಗಳ ಜಾಗೃತಿ ನಿರ್ಮಾಣಕ್ಕಾಗಿ ಹತ್ತು ಹೈಸ್ಕೂಲುಗಳಲ್ಲಿ, ಉಡುಪಿಯ ಕನ್ಸೂಮರ್ ಫೋರಂ (ಗ್ರಾಹಕ ಕೇಂದ್ರ) ದ ಸಹಯೋಗದಲ್ಲಿ ಬಿವಿಟಿ ಹತ್ತು ಕನ್ಸೂಮರ್ ಕ್ಲಬ್ಗಳನ್ನು ಆರಂಭಿಸಿದೆ. ಪ್ರಮುಖ ಶಾಲೆಗಳಲ್ಲಿ ಕೃಷಿ ಮತ್ತು ಪರ್ಯಾಯ ಶಕ್ತಿಯ ಕುರಿತು ಭಾಷಣಗಳನ್ನು ಏರ್ಪಡಿಸಿದೆ. ವೈಯಕ್ತಿಕ ಆರೋಗ್ಯ, ಆರೋಗ್ಯ ವಿಜ್ಞಾನಗಳ ಜಾಗೃತಿ ಶಿಬಿರಗಳು, ಗ್ರಾಮೀಣ ಕೃಷಿ ಉತ್ಸವ, ಇತರ NGO  ಗಳೊಂದಿಗೆ ಸಹಯೋಗ, ತರಬೇತುದಾರರ ತರಬೇತಿ, ಉಪಯುಕ್ತ ಪುಸ್ತಕಗಳ ಮುದ್ರಣ – ಹೀಗೆ ಬಿವಿಟಿಯ ಕಾರ್ಯಕ್ಷೇತ್ರ ವಿಸ್ತತವಾದುದು. ಬಿವಿಟಿಯ ಸಂಪನ್ಮೂಲ ನಿರ್ವಹಣೆಯಲ್ಲಿ ಅತ್ಯಂತ ಜಾಣ್ಮೆ ವಹಿಸುತ್ತಾ ಬಂದಿರುವ ಉಡುಪರು ಈ ಅವಧಿಯಲ್ಲಿ ಯಾವುದೇ ಸರಕಾರೀ ವ್ಯವಸ್ಥೆ ನಾಚಬಹುದಾದಷ್ಟು ದೊಡ್ಡ ಸಂಖ್ಯೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಿಸಿದ್ದಾರೆ. ಅದೂ ಟಿ.ಎ. ಪೈ ಎಜುಕೇಶನ್ ಸ್ಕಾಲರ್ಶಿಪ್ ಹೆಸರಿನಲ್ಲಿ. ಮಾನಸಿಕ ಅಶಕ್ತರಿಗೆ, ಅನಾಥಾಲಯಗಳಿಗೆ ಮತ್ತು ಅರ್ಹರ ವೈದ್ಯಕೀಯ ವೆಚ್ಚಗಳಿಗೆ ನೆರವಾಗಿದ್ದಾರೆ.

ಬಿವಿಟಿಯ ಒಂದು ಅಂಗವಾದ ಟಿ.ಎ. ಪೈ ಗ್ರಾಮೀಣ ನಿರ್ವಹಣ ಸಂಸ್ಥೆ (TAPIRM) ಮೂಲಕವೂ ಹಲವು ಉಪಯುಕ್ತ ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುವುದು ಇಲ್ಲಿ ಉಲ್ಲೇಖಾರ್ಹ. ಆರೋಗ್ಯ, ಸಂಪನ್ಮೂಲ ನಿರ್ವಹಣೆಗೆ ಸಂಬಂಧಿತ ತರಬೇತಿ, ತರಬೇತುದಾರರ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಸ್ವಉದ್ಯೋಗ ತರಬೇತಿ ಸ್ಕೌಟ್ ಮತ್ತು ಗೈಡ್ಸ್ಗಳಿಗೆ ತರಬೇತಿ, ಅಧ್ಯಾಪಕರ ತರಬೇತಿ, ಸಹಕಾರಿ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ಹೀಗೆ ಜನ ಸಂಪನ್ಮೂಲಾಭಿವೃದ್ಧಿಯ ಹಲವು ಕಾರ್ಯಕ್ರಮಗಳು.

ಈಚೆಯ ದಿನಗಳಲ್ಲಿ ಉಡುಪರನ್ನು ಮತ್ತು ಬಿ.ವಿ.ಟಿ.ಯನ್ನು ಮುಂಚೂಣಿಯಲ್ಲಿ ನಿಲ್ಲಿಸಿರುವುದು ಸೌರಶಕ್ತಿಗೆ ಸಂಬಂಧಿತ ಕಾರ್ಯಕ್ರಮಗಳು. ಬಿವಿಟಿಯ ಈ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ SDC ಎಂಬ ಸ್ವಿಜರ್ಲ್ಯಾಂಡ್ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯ ಬಳಕೆಗೆ ಹೊಸಮಾರ್ಗಗಳನ್ನು ಗುರುತಿಸಲು ಬಿವಿಟಿಗೆ ನಿರ್ವಹಣಾಧಿಕಾರ ವೊಂದನ್ನು ನೀಡಿದೆ. ಸೌರಶಕ್ತಿ ಬಳಕೆಯಲ್ಲಿ ಹೊಸತನವನ್ನು ಸುಗಮ ಮಾಡಿಕೊಡುವ ಈ ಯೋಜನೆ (Solar Innovation Facilitation Centre) 2004 ರ ನವಂಬರ್ನಿಂದ 2008ರ ಮಾರ್ಚ್ ತನಕದ 4 ವರ್ಷಗಳ ಅವಧಿಯಲ್ಲಿ 13 ಯೋಜನೆಗಳ ಮೂಲಕ 600 ಫಲಾನುಭವಿಗಳಿಗೆ ನೆರವು ನೀಡಿದೆ.

ಭಾರತೀಯ ವಿಕಾಸ್ ಟ್ರಸ್ಟಿಗೆ ಮಣಿಪಾಲ ವಿಶ್ವವಿದ್ಯಾನಿಲಯವು 2008ರಲ್ಲಿ “Branch Campus” ಗೌರವ ನೀಡಿ ಗುರುತಿಸಿದ್ದು, ವಾಸ್ತವವಾಗಿ ಟಿ.ಎ. ಪೈಗಳ ಕನಸನ್ನು ನನಸು ಮಾಡುವಲ್ಲಿ ಉಡುಪರು ಸಾಧ್ಯಮಾಡಿಕೊಟ್ಟ ಅನನ್ಯ ಸಾಧನೆಗೆ ಸಂದ ಪುರಸ್ಕಾರವೆಂದೇ ಹೇಳಬೇಕು. ಉಡುಪರ ಸಾಹಿತ್ಯಾಸಕ್ತಿ, ಸಾಹಿತ್ಯ ಸಂಬಂಧಿತ ಚಟುವಟಿಕೆಗಳ ಬಗ್ಗೆಯೂ ಬಹಳಷ್ಟು ಮಾತುಗಳನ್ನಿಲ್ಲಿ ಹೇಳಬಹುದು. ಪಾಪು, ಎಂ.ವಿ. ಕಾಮತ್, ಕುಶಿ, ಎಚ್. ಕೃಷ್ಣಭಟ್, ಬಿ.ವಿ. ಕೆದಿಲಾಯ, ಶಾರದಾ ಭಟ್, ಕೆ.ಕೆ. ಅಮ್ಮಣ್ಣಾಯ, ಬೊಳುವಾರು, ಉಪೇಂದ್ರ ಸೋಮಯಾಜಿ, ಸುಜಯೀಂದ್ರ ಹಂದೆ, ನೀಲಾವರ ಸುರೇಂದ್ರ ಅಡಿಗ, ನಭನೆಂಪು ಮೊದಲಾದ ಹಲವು ಪ್ರಾತಿನಿಧಿಕ ಬರಹಗಾರರು ಈ ದಿನಗಳಲ್ಲಿ ಉಡುಪರ ಆತ್ಮೀಯತೆಯ ಕೋಟೆಗೆ ಲಗ್ಗೆ ಹಾಕಿದ್ದಾರೆ. ಬೊಳುವಾರು ಬರೆದ ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಉಡುಪರು ನಿಯೋಜಿಸಿದ ಕಾರ್ಯಕ್ರಮಗಳೂ ಹಲವು. ಅವರು ಸ್ವತಂತ್ರವಾಗಿಯೂ ಹಲವು ಪ್ರೌಢ ಲೇಖನಗಳನ್ನು ಬರೆದಿದ್ದಾರೆ.

* * *

ಟಿ.ಎ. ಪೈಯವರು ಒಂದೆಡೆ ಹೇಳಿದ್ದುಂಟು – ಬದಲಾವಣೆಯನ್ನು ಯಾರೋ ಎಲ್ಲಿಂದಲೋ ಬಂದು ಮಾಡುತ್ತಾರೆ ಎಂದು ಕಾಯುವುದೆಷ್ಟು ಅರ್ಥಹೀನ. ಆ ಬದಲಾವಣೆಯನ್ನು ನಾವೇ ತರಬೇಕು. ನಮ್ಮ ಬದುಕಲ್ಲಿ ಮೊದಲಿಗೆ ಬದಲಾಗಬೇಕು.

ಈ ಮಾತನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದವರು ಕೆ.ಎಂ. ಉಡುಪರು. ಅವರು ತಮ್ಮ ಬದುಕಲ್ಲಿ ತನ್ಮೂಲಕವಾಗಿ ತಮ್ಮ ಪರಿಸರದಲ್ಲಿ ತಂದ ಬದಲಾವಣೆ ಅತ್ಯಂತ ಅಮೂಲ್ಯವಾದದ್ದು. ಸಾಮಾಜಿಕ ಮೌಲ್ಯಗಳಿಂದ ಶ್ರೀಮಂತವಾದದ್ದು. ನಿವೃತ್ತಿಯ ನಂತರದ ಪ್ರತಿಯೊಂದು ಕ್ಷಣವನ್ನು ತಮ್ಮ ಪಾಲಿಗೆ ಸಾರ್ಥಕ, ಸಮಾಜಕ್ಕೆ ಉಪಯುಕ್ತ ಎಂಬ ಹಾಗೆ ಬದುಕುತ್ತಿರುವ ಉಡುಪರು ಒಂದು ತಲೆಮಾರಿನ ಆದರ್ಶಗಳ ಸಂಕೇತ; ಇನ್ನೊಂದು ತಲೆಮಾರಿಗೆ ಅಮೂಲ್ಯ ಮಾರ್ಗದರ್ಶಕ.

* * *

ಪೂರ್ವಾಪರ

ಅಧಿಕೃತ ದಾಖಲೆಯಂತೆ ಕಾರ್ಕಡ ಮಂಜುನಾಥ ಉಡುಪರು ಜನಿಸಿದ್ದು ಶಾಲಿವಾಹನ ಶಕವರ್ಷ 1861, ಬಹುಧಾನ್ಯ ನಾಮ ಸಂವತ್ಸರದ ಸಿಂಹಮಾಸ ದಿ. 6 ಸಲುವ ಶ್ರಾವಣಕೃಷ್ಣ, 12 ಯು (ದ್ವಾದಶಿ), ಕ್ರಿ.ಶ. 1938ರ ಆಗಸ್ಟ್ 22, ಸೋಮವಾರದಂದು. ತಂದೆ ವಾಸುದೇವ ಯಾನೆ ಮರಿ ಉಡುಪ, ತಾಯಿ ಲಕ್ಷ್ಮೀದೇವಿ.

ಕೆ.ಎಂ. ಉಡುಪರ ಪೂರ್ವಜರ ಬದುಕು ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬ ಕಾವ್ಯೋದ್ಗಾರ ಸಾಕ್ಷಾತ್ಕಾರವಾದ ಹಾಗೆ ಕಾವ್ಯಸ್ವರೂಪಿ ಆಕಸ್ಮಿಕಗಳ ಅದ್ಭುತ; ಶಿವರಾಮ ಕಾರಂತರ ಪ್ರಾತಿನಿಧಿಕ ಕಾದಂಬರಿಗಳಲ್ಲೆಲ್ಲ ಪುನರಪಿ ಕಾಣಬರುವ ಬಡತನದ ನಡುವೆ ಬದುಕು ಕಟ್ಟಿಕೊಂಡ ಕೋಟ ಬ್ರಾಹ್ಮಣರ ಕಥೆಗಳೆಲ್ಲ ಮೂರ್ತಿವೆತ್ತ ಹಾಗೆ ಹದಿನಾಲ್ಕು ಗ್ರಾಮಗಳ ಕೂಟ ಮಹಾ ಜಗತ್ತಿನ ಪರಿಧಿಯಲ್ಲಿ ಹನುಮದ್ವಿಕಾಸದ ಎಲ್ಲೆ ಇಲ್ಲದ ವಿಸ್ಮಯ! ಒಂದು ದೃಷ್ಟಿಯಲ್ಲಿ ಎರಡು ಮಹಾಯುದ್ಧಗಳ ಆಚೀಚೆ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ನಿಕಟ ದಿನಗಳಲ್ಲಿ ಕನ್ನಡ ಜಿಲ್ಲೆಯೇ ಬದುಕು ಕಟ್ಟಿಕೊಂಡಂಥ ಕಥೆ. ಏನನ್ನೋ ಗಳಿಸುವಲ್ಲಿ ಮತ್ತೇನನ್ನೋ ಕಳೆದುಕೊಂಡ ಈಗಿನ ತಲೆಮಾರು ಅನನ್ಯ ಕುತೂಹಲದಿಂದ ಎದೆಗಪ್ಪಿಕೊಳ್ಳಬೇಕಾದ ಜೀವನ ಪ್ರೀತಿಯ, ಸಾರ್ಥಕ ಬದುಕಿನ, ದಂತ ಕಥೆ ಎಂದನ್ನಿಸುವ ಕಥೆ.

ಒಡ್ಡರ್ಸೆ ಮೂಲದ ಉಡುಪರ ಪೂರ್ವಜರು ಕಾರ್ಕಡಕ್ಕೆ ಬಾಡಿಗೆಗೆ ಬಂದವರು. ನಿಂತ ಜಾಗವನ್ನು ಮೂಲಗೇಣಿಗೆ ಹಿಡಿದು ನೆಲೆ ನಿಂತ ವೆಂಕಟರಮಣ ಉಡುಪ ಮತ್ತು ಶೇಷಮ್ಮ ದಂಪತಿಗೆ ವಾಸುದೇವ (ಮರಿ), ಕಾಳಿಂಗ, ನಾಗವೇಣಿ, ರಾಮಚಂದ್ರ, ಶ್ರೀನಿವಾಸರೆಂಬ ಐದು ಮಕ್ಕಳು. ಚಿನ್ನದ ವ್ಯಾಪಾರದಲ್ಲಿ ನಂಬಿಗಸ್ಥರಿಂದಲೇ ಮೋಸ ಹೋಗಿ ಅಕಾಲ ಮೃತ್ಯುವಶರಾದ ವೆಂಕಟರಮಣ ಉಡುಪರು ಆ ಹೊತ್ತಿಗೆ ಮಗಳ ಮದುವೆ ಮಾಡಿ ಮುಗಿಸಿದ್ದರಷ್ಟೆ. ಮತ್ತೆಲ್ಲ ಜವಾಬ್ದಾರಿಯನ್ನು ವಾಸುದೇವ (ಮರಿ) ಉಡುಪರು ಹೆಗಲಿಗೇರಿಸಿಕೊಂಡರು. ಕೊಂಗಾಟಕ್ಕೆ ಮರಿ ಉಡುಪರೆಂದೇ ಕರೆಯಲ್ಪಟ್ಟ ಅವರು ಹಿರಿಯ ಮಗನ ಜವಾಬ್ದಾರಿ ಹೊತ್ತು ಆದರ್ಶಪ್ರಾಯ ಬದುಕನ್ನು ಬಾಳಿದರು. ಆರೆಂಟು ರೂಪಾಯಿ ಸಂಪಾದನೆಯ ಅಧ್ಯಾಪಕ ವೃತ್ತಿ ಹಿಡಿದು ಮಂದರ್ತಿಗೆ ಬಂದ ಮರಿ ಉಡುಪರು, ಮಂದರ್ತಿಯ ಮೇಲ್ಮನೆಯಲ್ಲಿ ದೇವರ ಕೆಲಸದ ಜವಾಬ್ದಾರಿ ಹೊತ್ತರು. ಅಲ್ಲಿಯ ತನಕ ಮೇಲ್ಮನೆಯ ವ್ಯವಹಾರಗಳನ್ನೆಲ್ಲ ನೋಡಿಕೊಂಡಿದ್ದ ನೀಲಾವರ ರಾಮಣ್ಣ ಅಡಿಗರು ಈ ಹುಡುಗ ಸಜ್ಜನ ಎಂದು ಮನದಟ್ಟಾಗುತ್ತಲೇ ಆ ಮನೆಯ ಜವಾಬ್ದಾರಿಯನ್ನೂ ಅವರ ಹೆಗಲಿಗೆ ಇಳಿಸಿಬಿಟ್ಟರು. ಆ ಮನೆಯಲ್ಲಿದ್ದ ಸಂತಾನವಿಲ್ಲದ ಮೂವರು ವಿಧವೆಯರು ಯಮುನಮ್ಮ, ಕಾಯಮ್ಮ ಮತ್ತು ಕಮಲಮ್ಮ ದತ್ತಕಕ್ಕೆ ತಂದುಕೊಂಡಿದ್ದ ಶಂಕರನಾರಾಯಣದ ಮಂಜರ ಮಗಳು ಲಕ್ಷ್ಮೀದೇವಿಯನ್ನು ಮರಿ ಉಡುಪರ ಕೈಗಿತ್ತರು. ಮರಿ ಉಡುಪ, ಲಕ್ಷ್ಮಿದೇವಿಯಮ್ಮನವರ ದಾಂಪತ್ಯದ ಫಲಶ್ರುತಿ ಗೌರಿ (ಶಾಂತ) ಮತ್ತು ಶಾರದೆ ಎಂಬ ಹೆಮ್ಮಕ್ಕಳು; ಮಂಜುನಾಥ ಮತ್ತು ಶಂಕರನಾರಾಯಣ ಎಂಬ ಗಂಡು ಮಕ್ಕಳು. 1938 ಮಂಜುನಾಥ ಜನಿಸಿದ ವರ್ಷ ಎಂದೆನಷ್ಟೆ? ಅದೇ ವರ್ಷ ಮರಿ ಉಡುಪರು ಕಾರ್ಕಡದ ಮೂಲಗೇಣಿ ಜಾಗದಲ್ಲೊಂದು ಮನೆ ಕಟ್ಟಿ ತಮ್ಮಂದಿರ ಬದುಕಿಗೊಂದು ನೆಲೆ ಕೊಟ್ಟರು. 1945 ರ ಸುಮಾರಿಗೆ ಶಂಕರ ನಾರಾಯಣನನ್ನು ಹೆತ್ತ ಲಕ್ಷ್ಮೀದೇವಿ ಬಾಣಂತನದ ಹೊತ್ತಿಗೆ ನಂಜು ಏರಿ ಮೃತರಾದರು. ನಾಲ್ಕು ತಬ್ಬಲಿ ಮಕ್ಕಳು, ಎರಡು ಮನೆಯ ಜವಾಬ್ದಾರಿ. ಆಗಿನ್ನೂ 32ರ ಹರಯವಷ್ಟೇ. ಮರಿ ಉಡುಪರ ಮುಂದೆ ಸ್ವಂತ ಸುಖ ಮತ್ತು ತನ್ನನ್ನು ನಂಬಿಕೊಂಡ ಸಂಸಾರದ ಜವಾಬ್ದಾರಿ ಎಂಬ ಎರಡು ಆಯ್ಕೆಗಳು. ಅವರು ಆಯ್ಕೆ ಮಾಡಿಕೊಂಡದ್ದು ಅವರ ನಂತರದ ತಲೆಮಾರು ಹೆಮ್ಮೆಯಿಂದ ನೆನಪಿಸಿಕೊಳ್ಳಬಹುದಾದ ಮಾರ್ಗವನ್ನು. ಮಂದರ್ತಿಯ ಮೇಲ್ಮನೆಯ ಮೂವರು ಅಜ್ಜಿಯರು ಈ ನಾಲ್ಕು ಮಕ್ಕಳ ಬಾಲ್ಯವನ್ನು ಕೊರತೆಗಾಣದ ಹಾಗೆ ತುಂಬಿಕೊಟ್ಟರು, ತಮ್ಮೆಲ್ಲ ಆರ್ಥಿಕ ಕೊರತೆಯ ಹೊರತಾಗಿಯೂ,  ತಮ್ಮ ಸಾಕು ಮಗಳ ಮಕ್ಕಳೆಂಬ ಪ್ರೀತಿಯಿಂದ. ಶಿವರಾಮ ಕಾರಂತರ ಮರಳಿಮಣ್ಣಿಗೆ ಕಾದಂಬರಿಯ ಮೂರು ಅಜ್ಜಿಯರು ಧರೆಗಿಳಿದ ಹಾಗಿದ್ದ ಈ ಮಂದರ್ತಿ ಅಜ್ಜಿಯರ ನೆನಪು ಇಳಿವಯಸ್ಸಿನ ಕೆ.ಎಂ. ಉಡುಪರ ಕಣ್ಣುಗಳನ್ನು ಈಗಲೂ ಹನಿಗೂಡಿಸುತ್ತದೆ.

ವೈಯಕ್ತಿಕ ಬದುಕಿಗಿಂತ ಸಮುದಾಯದ ಬದುಕಿಗೆ ಹೆಚ್ಚು ಒತ್ತಾಸೆಯಿತ್ತ ಮರಿ ಉಡುಪರ ನೆನಪು ಅವರ ಮಕ್ಕಳ, ಮಾತ್ರವಲ್ಲ, ತಮ್ಮಂದಿರ ಮತ್ತು ಹಲವು ಬಂಧುಮಿತ್ರರ ಸ್ಮರಣೆಯಲ್ಲಿ ಈಗಲೂ ಚಿರಂತನವಾಗಿ ಉಳಿದಿದೆ. ಅವರು ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಯಜಮಾನಿಕೆಯನ್ನೋ, ಅಧ್ಯಾಪನ ವೃತ್ತಿಯನ್ನೋ, ಸಾರ್ವಜನಿಕ ಸೇವೆಯನ್ನೋ ನಿಷ್ಕಳಂಕವಾಗಿ ನಡೆಸಿಕೊಟ್ಟವರು. ಮಂದರ್ತಿಯಲ್ಲಿ ಶಾಲೆ ನಡೆಸುತ್ತಿದ್ದ ಪಾಂಡೇಶ್ವರ ರಾಮದಾಸ ಚಡಗರು ಕೈಸೋತು ನಿಂತಾಗ ಮರಿ ಉಡುಪರು ಆ ಶಾಲೆಯ ಜವಾಬ್ದಾರಿ ಹೊತ್ತದ್ದು 1947ರಲ್ಲಿ. ಮಂದರ್ತಿ ಸೊಸಾಯಿಟಿಗೆ ಸ್ಥಾಪಕ ಕಾರ್ಯದರ್ಶಿಯಾಗಿ ಅವರು ಬಂದದ್ದೂ ಈ ಹೊತ್ತಿಗೇ. ಶಾಲಾ ಸಮಯವನ್ನು ಹೊರತುಪಡಿಸಿ ದಿನದ ಏಳೆಂಟು ಘಂಟೆಗಳನ್ನು ಸಮಾಜ ಸೇವೆಗಾಗಿ ಮೀಸಲಿಟ್ಟ ಮರಿ ಉಡುಪರು ಇವತ್ತಿಗೂ ಒಂದು ಅದರ್ಶ. ಅವರಿತ್ತ ನೆರವನ್ನು, ಮಾರ್ಗದರ್ಶನವನ್ನು, ಹಿತವಚನಗಳನ್ನು ಅವರ ಆಪ್ತವಲಯಕ್ಕೆ ಸೇರಿಕೊಂಡವರು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಮಾತೃಪ್ರಧಾನ ಪದ್ಧತಿಯನ್ನು ನಂಬಿಕೊಂಡಿರುವ ಶೆಟ್ಟಿ (ಬಂಟ) ಮನೆತನಗಳ ಹಲವು ಹಿರಿಯ ಹೆಮ್ಮಕ್ಕಳು ಉಡುಪರ ಆರ್ಥಿಕ ಹಿತವಚನಗಳನ್ನು ಸ್ಮರಿಸಿಕೊಳ್ಳುತ್ತಾರೆ. ಬಾಲ್ಯದಲ್ಲಿ ತಮ್ಮ ನಡವಳಿಕೆಯನ್ನು ತಂದೆ ಮರಿಉಡುಪರು ನಿಷ್ಠುರವಾಗಿ ತಿದ್ದುತ್ತಿದ್ದುದನ್ನು ನೆನಪಿಸಿಕೊಂಡು ಕೆ.ಎಂ. ಉಡುಪರು ಅಂಥ ಒಂದು ಘಟನೆಯ ಕುರಿತು ಆಗಾಗ ಹೇಳುತ್ತಿರುತ್ತಾರೆ. ಇವರೊಮ್ಮೆ ಬಾಲ್ಯದಲ್ಲಿ ಮುದಿ ಭಿಕ್ಷುಕನೊಬ್ಬನನ್ನು ಅಸಭ್ಯ ಭಾಷೆಯಿಂದ ಬಯ್ಯುತ್ತಿದ್ದಾಗ ಕೇಳಿಸಿಕೊಂಡ ಮರಿ ಉಡುಪರು ಮಗನಿಗೆ ಕೊಟ್ಟ ಶಿಕ್ಷೆ – ಭಿಕ್ಷುಕನಿಗೆ ಮೂರು ಪ್ರದಕ್ಷಿಣೆ ಹಾಕಿ ಅವನ ಕಾಲಿಗೆ ಬೀಳುವಂತೆ ಹೇಳಿದ್ದು. ಉಪಕಾರ ಮಾಡುವುದು ಸಾಧ್ಯವಾದರೆ ಮಾಡಬೇಕು. ಇಲ್ಲವಾದರೆ ಸುಮ್ಮನಿರಬೇಕು ಎನ್ನುವುದು ಉಡುಪರಿಗೆ ಬಾಲ್ಯ ಕಲಿಸಿದ ಪಾಠ.

ಕೆ.ಎಂ. ಉಡುಪರು ತಮ್ಮ ಪ್ರಾಥಮಿಕ ಶಿಕ್ಷಣದ ಐದು ವರ್ಷಗಳನ್ನು ಕಳೆದದ್ದು ಮಂದರ್ತಿಯ ಶಾಲೆಯಲ್ಲಿಯೇ. 1948ರ ಜೂನ್ನಲ್ಲಿ ಬಾರಕೂರು ಹೈಸ್ಕೂಲು ಸೇರಿದರು.  ಪ್ರತಿಭಾನ್ವಿತರಾಗಿದ್ದ ಉಡುಪರು ಆ ವರ್ಷ ತಿಂಗಳಿಗೆ 8 ರೂಪಾಯಿಗಳ ರಾಷ್ಟ್ರೀಯ ಸ್ಕಾಲರ್ಶಿಪ್ಗೆ ಆಯ್ಕೆಯಾದರು. ಪ್ರಾತಃಸ್ಮರಣೀಯ ಬೋಜರಾಯರು ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ಮುಂದಿನ ಸ್ವಲ್ಪ ಸಮಯ ಆದರ್ಶಪ್ರಾಯರಾಗಿದ್ದ ಕೆ.ಆರ್. ಹಂದೆ, ರಾಮಚಂದ್ರ ಉಡುಪ ಮೊದಲಾದ ಶಿಕ್ಷಕರ ಮಾರ್ಗದರ್ಶನವೂ ಲಭ್ಯ. ದೇಶದ ಒಟ್ಟು ವ್ಯವಸ್ಥೆಯೇ ಸ್ಥಿತ್ಯಂತರಗೊಳ್ಳುತ್ತಿದ್ದ ಒಂದು ಪರ್ವಕಾಲ ಆಗಿತ್ತದು. ಗಾಂಧೀ ಚಿಂತನೆಯು ದೇಶದ ಆಲೋಚನಾ ಕ್ರಮವನ್ನೇ ಬದಲಿಸತೊಡಗಿತ್ತು. ಇಂಗ್ಲೀಷನ್ನು ದೇಶದಿಂದಲೇ ಓಡಿಸಬೇಕೆಂಬ ನಿರ್ಣಯ ಕೈಗೆತ್ತಿಕೊಂಡವರು ಈ ನಿಟ್ಟಿನ ಮೊದಲ ಹೆಜ್ಜೆಯಾಗಿ ಇಂಗ್ಲೀಷ್ ಶಿಕ್ಷಣದ ಆರಂಭವನ್ನು ಒಂದು ವರ್ಷ ಮುಂದೂಡಿದುದರಿಂದ ಉಡುಪರ ಪಾಲಿಗೆ ಇಂಗ್ಲೀಷ್ ಅಕ್ಷರಾಭ್ಯಾಸ ಆರಂಭವಾದುದು ಏಳನೆಯ ತರಗತಿಯಲ್ಲಿ.

ಮಂದರ್ತಿ ಬಾರಕೂರು ಪರಿಸರದ ಹಳೆಯ ತಲೆಮಾರಿನ ಜನ ಈ ಹೊತ್ತು ಕೂಡಾ ನೆನಪಿಸಿಕೊಳ್ಳುವ ಎರಡು ಘಟನೆಗಳು ಈ ನಡುವೆ ನಡೆದವು. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಊರಿಗೆ ಊರೇ ಅದನ್ನೊಂದು ಹಬ್ಬದ ಹಾಗೆ ಆಚರಿಸಿತ್ತು. ಮಂದರ್ತಿ ದೇವಸ್ಥಾನದ ಎದುರಿನ ಸರ್ಕಲ್ನಲ್ಲಿ ಧ್ವಜಾರೋಹಣ; ಹತ್ತು ವರ್ಷಗಳ ಹುಡುಗ ಮಂಜುನಾಥನ ಭಾಷಣ. 1948 ರಲ್ಲಿ ಗಾಂಧೀಜಿ ಹತ್ಯೆಗೊಳಗಾದಾಗಲೂ ಊರಿಗೆ ಊರೇ ಸೂತಕದ ದುಗುಡದಲ್ಲಿ ಮುಳುಗಿ, ಶಾಲಾ ಮಕ್ಕಳೆಲ್ಲ ಸಾಲಾಗಿ ಹೋಗಿ, ಹೊಳೆಯಲ್ಲಿ ಮಿಂದು, ತರ್ಪಣಕೊಟ್ಟ ಘಟನೆಯೂ ನಡೆಯಿತು.

ಗಾಂಧೀಜಿ ಈ ದೇಶದ ಆಲೋಚನಾ ಕ್ರಮವನ್ನೇ ಬದಲಿಸತೊಡಗಿದರು ಎಂದೆನಷ್ಟೆ? ಸ್ವಲ್ಪ ಸಮಯದ ಹಿಂದಷ್ಟೇ ಮೊಗೆಬೆಟ್ಟಿಗೆ ಕೊಟ್ಟ ಮಗಳ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸಿದ್ದ ಮರಿ ಉಡುಪರು, ಮಗನ ಉಪನಯನವನ್ನು ಧರ್ಮಸ್ಥಳದಲ್ಲಿ ಅತ್ಯಂತ ಸರಳವಾಗಿ ನಡೆಸಿದರು. 13 ವರ್ಷ ತುಂಬಿರದ ಹುಡುಗನನ್ನು ಬಾರಕೂರಿನ ಭಂಡಾರಕೇರಿ ಮಠಕ್ಕೆ ಸೇರಿಸಿ ಅಲ್ಲಿಂದಲೇ ಹೈಸ್ಕೂಲು ಶಿಕ್ಷಣ ಮುಂದುವರಿಸುವ ವ್ಯವಸ್ಥೆ ಮಾಡಿದರು. ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ ಆದದ್ದೆಲ್ಲ ಮಂಜುನಾಥ ಉಡುಪರ ಬದುಕಲ್ಲೂ ಆಯಿತು. ಮೊದಲೇ ಯಕ್ಷಗಾನದ ಹುಚ್ಚು; ಈಗ ತಂದೆಯವರ ಮೇಲ್ವಿಚಾರಣೆಯೂ ಇಲ್ಲ. ಹುಡುಗನ ಗುರಿ ತಪ್ಪುತ್ತಿದೆ ಎನ್ನುವುದು ಖಚಿತವಾದಾಗ ಯಾರಿಂದಲೋ ಮರಿ ಉಡುಪರಿಗೊಂದು ಕಿವಿಮಾತು. ಮಂಜುನಾಥ ಮುಂದೆ ಕಲಿಯಬೇಕು, ಶಂಕರ ನಾರಾಯಣ ಅಧ್ಯಾಪಕನಾಗಿ ತನ್ನ ನಂತರ ಶಾಲೆಯ ಜವಾಬ್ದಾರಿ ಹೊರಬೇಕು ಎಂದು. ಮೊದಲೇ ನಿರ್ಣಯಿಸಿಕೊಂಡಂತಿದ್ದ ಮರಿ ಉಡುಪರು ಹಿತೈಷಿಗಳೊಂದಿಗೆ ಚರ್ಚಿಸಿ, ಆ ದಿನಗಳಲ್ಲಿ ಕೆ.ಎಲ್. ಕಾರಂತರ ನೇತೃತ್ವದಲ್ಲಿ ಗಟ್ಟಿಗೊಳ್ಳುತ್ತಿದ್ದ ಕೋಟದ ವಿವೇಕ ಹೈಸ್ಕೂಲಿಗೆ ಮಗನನ್ನು ಸೇರಿಸಿದ್ದು 1952ರಲ್ಲಿ, ಹತ್ತನೆಯ ತರಗತಿಗೆ.

ನಂತರದ ಎರಡು ವರ್ಷಗಳು ಅಕ್ಷರಶಃ ಮಂಜುನಾಥ ಉಡುಪರ ಭವಿತವ್ಯವನ್ನು ರೂಪಿಸಿದ ದಿನಗಳು. ಕಾರ್ಕಡದ ತುಂಬಿದ ಮನೆ. ಚಿಕ್ಕಪ್ಪಂದಿರ ಮಾರ್ಗದರ್ಶನ. ಮಯ್ಯ, ಹೇರ್ಳೆ ಕುಟುಂಬಗಳ ಮಿತ್ರರು. ಕೋಟ ಹೈಸ್ಕೂಲಿನ ಶಿಸ್ತು. ಪಠ್ಯೇತರ ಚಟುವಟಿಕೆಗಳು. ಕೆ.ಎಲ್. ಕಾರಂತ, ಸೂರ್ಯನಾರಾಯಣ ಅಡಿಗ, ಮೊದಲಾದ ಹಿರಿಯರ ನಿರಂತರ ಸಂಪರ್ಕ. ಮಂಜುನಾಥ ಉಡುಪರಲ್ಲಿ ಸುಪ್ತವಾಗಿದ್ದ ನಾಯಕತ್ವದ ಶಕ್ತಿಗೊಂದು ರೂಪು ಬಂದ ದಿನಗಳವು. ಕೊನೆಯ ವರ್ಷ ಕೋಟ ಹೈಸ್ಕೂಲಿನ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದರು. ಆ ವರ್ಷದ ಎಸ್ಸೆಸ್ಸೆಲ್ಸಿ ತಂಡದಲ್ಲಿ ಮೂರನೆಯವರಾಗಿ, ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾದರು.

ಶಿಕ್ಷಣ ಮುಂದುವರಿಸುವ ಒಂದೇ ಗುರಿಯಿಂದ ಉಡುಪರು ಬೆಂಗಳೂರಿಗೆ ಬಂದದ್ದು 1954 ರಲ್ಲಿ. ಕಾರ್ಕಡದ ಕುಪ್ಪಯ್ಯ ಹೊಳ್ಳರ ಮಕ್ಕಳು ವಿಶ್ವೇಶ್ವರಪುರಂನಲ್ಲಿ ಉಡ್ಲ್ಯಾಂಡ್ಸ್ ಎಂಬ ಹೆಸರಿನ ಪ್ರತಿಷ್ಠಿತ ಹೋಟೆಲ್ ನಡೆಸುತ್ತಿದ್ದ ದಿನಗಳವು. ಬೆಂಗಳೂರಿ ನಲ್ಲಿ ಕಲಿಯುವಷ್ಟು ದಿವಸ ಉಚಿತ ಊಟ ವಸತಿಯ ಭರವಸೆ. ಬಸವನಗುಡಿಯ ಪ್ರತಿಷ್ಠಿತ ನ್ಯಾಶನಲ್ ಕಾಲೇಜನಲ್ಲಿ ಎರಡು ವರ್ಷಗಳ ಶಿಕ್ಷಣ. ರಾಷ್ಟ್ರೀಯತೆಯ ಭವ್ಯ ಪರಿಕಲ್ಪನೆಗಳೊಂದಿಗೆ ಮುಖಾಮುಖಿ. ಇಂಟರ್ಮಿಡಿಯೆಟ್ನಲ್ಲಿ ಫಿಜಿಕ್ಸ್ ಕಲಿಸುತ್ತಿದ್ದ ಎಚ್ಚೆನ್, ಕನ್ನಡ ಕಲಿಸುತ್ತಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳು, ಗಾಂಧಿವಾದಿ ಸಂಪದ್ಗಿರಿರಾಯರು ವಿಶ್ವೇಶ್ವರ ಪುರಂನಲ್ಲೇ ಇದ್ದು ತಮ್ಮ ಸ್ನೇಹಿತರೊಂದಿಗೆ ಪ್ರತಿದಿನ ಎಂಬ ಹಾಗೆ ಉಡ್ಲ್ಯಾಂಡ್ಸ್ಗೆ ಬರುತ್ತಿದ್ದ ಅನಕೃ, ಆಪ್ತರೇ ಆಗಿಬಿಟ್ಟ ರಾಜರತ್ನಂ, ಸಹವಾಸಿಯಾಗಿದ್ದ ಸದಭಿರುಚಿಯ ಸುಬ್ರಹ್ಮಣ್ಯ ಹಂದೆ, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಕಟತೆ – ಬಯಸದೇ ಬಂದ ಭಾಗ್ಯ ಎಂದರೆ ಅದು! ಇಷ್ಟೆಲ್ಲದರ ನಡುವೆ ಪ್ರಥಮ ದರ್ಜೆಯಲ್ಲಿ ಇಂಟರ್ ಮಿಡಿಯೆಟ್ ಮುಗಿಯಿತು.

ಪರೀಕ್ಷೆಗೆ ಒಂದಿಷ್ಟು ದಿನ ಮೊದಲು (1955 ರ ಕೊನೆ), ತಮ್ಮ ಶಂಕರ ನಾರಾಯಣನ (ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ) ಅಕಾಲ ಮರಣ. ಮಗ ಬೆಂಗಳೂರು ಬಿಟ್ಟು ತಮ್ಮೊಂದಿಗೆ ಬಂದು ನಿಂತಿದ್ದರೆ ಒಳ್ಳೆಯದಿತ್ತೇನೋ ಎಂಬ ಹೇಳಿಕೊಳ್ಳಲಾಗದ ನಿರೀಕ್ಷೆಯಲ್ಲಿ ಮರಿ ಉಡುಪರು. ಆಗಿನ್ನೂ ಕರ್ನಾಟಕ (ಮೈಸೂರು) ರಾಜ್ಯದ ಏಕೀಕರಣ ಆಗಿರಲಿಲ್ಲ. ಹಾಗಾಗಿ ದ.ಕ. ಜಿಲ್ಲೆಯವರು ಮದ್ರಾಸ್ ರಾಜ್ಯದವರು. ಮೆಡಿಕಲ್, ಇಂಜಿನಿಯರಿಂಗ್ ಸೀಟು ಸಿಗುವ ಸಾಧ್ಯತೆ ಕಡಿಮೆ. ಮಂಜುನಾಥ ಉಡುಪರು ಅನಿವಾರ್ಯತೆಯಿಂದ ಹೆಬ್ಬಾಳದ ಕೃಷಿ ಕಾಲೇಜಿಗೆ ಮುಖ ಮಾಡಿದರು. ಹೊರರಾಜ್ಯದ ಕನ್ನಡಿಗರ ಕೋಟಾದಲ್ಲಿ ಸಿಕ್ಕಿತೊಂದು ಸೀಟ್.

ಹೆಬ್ಬಾಳದ ಕೃಷಿ ಕಾಲೇಜು ಆ ದಿನಗಳಲ್ಲಿ ತನ್ನ ಬಾಲ್ಯಾವಸ್ಥೆಯಲ್ಲಿದ್ದರೂ ಅಲ್ಲಿದ್ದ ಅತಿಶ್ರೇಷ್ಠ ಅಧ್ಯಾಪಕರುಗಳು, ಕ್ರಿಯಾಶೀಲ ಮಿತ್ರರು ಉಡುಪರ ಆಸಕ್ತಿಗಳಿಗೆ ಹೊಸ ಆಯಾಮ ಕೊಟ್ಟರು. ಕೊನೆಯ ವರ್ಷ ಕಾಲೇಜಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಉಡುಪರು ಆಯ್ಕೆಯಾದರು. ಆ ವರ್ಷ ಕರ್ನಾಟಕ ಸಂಘದ ಉದ್ಘಾಟನೆಗೆ ಅನಕೃರನ್ನು ಕರೆಸಿದ್ದು ಉಡುಪರ ಸಾಧನೆ. ಇದಕ್ಕಿಂತ ದೊಡ್ಡ ಸಾಧನೆಯೊಂದನ್ನು ಕೆಲವೇ ಸಮಯದ ಹಿಂದೆ ಉಡುಪರು ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಲೇಬೇಕು. ವಿಶ್ವೇಶ್ವರಪುರಂನಲ್ಲಿ ಅವರು ಕಟ್ಟಿದ ದ.ಕ. ಯುವಕರ ಸಂಘದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಗೆ ಉಡುಪರು ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಕರೆತಂದಿದ್ದರು. ಅವರು ಪಾರಂಪಳ್ಳಿ ವೈಕುಂಠ ಐತಾಳ್ ಮೊದಲಾದ ಮಿತ್ರರೊಂದಿಗೆ ಅಂತರ್ ಕಾಲೇಜು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದರು. 1958 ರಲ್ಲಿ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಇವರೊಂದಿಗೆ ಭಾಗವಹಿಸಿದ್ದ ಡಾ. ರಾಮೇಗೌಡರು ಮೂವತ್ತು ವರ್ಷಗಳ ನಂತರ ಬತ್ತದ ಕೃಷಿಯ ಮಾಂತ್ರಿಕ ಡಾ. ಎಂ. ಮಹದೇವಪ್ಪನವರ ಮನೆಯಲ್ಲಿ ಉಡುಪರಿಗೆ ಮುಖಾಮುಖಿಯಾದರು. ಆ ಹೊತ್ತಿಗೆ ಅವರು ಕರ್ನಾಟಕ ಯುನಿವರ್ಸಿಟಿಯ ಉಪ ಕುಲಪತಿ ಆಗಿದ್ದರು. ವಿದ್ಯಾರ್ಥಿ ದಿನಗಳಲ್ಲಿ ಪಠ್ಯೇತರ ಚಟುವಟಿಕೆಯ ಮಹತ್ವವನ್ನು ಹೇಳುತ್ತ ಉಡುಪರು ಈ ವಿಚಾರವನ್ನು ನೆನಪಿಸಿಕೊಳ್ಳುತ್ತಾರೆ. 1959ರಲ್ಲಿ ಹೆಬ್ಬಾಳದಲ್ಲಿ ಪದವಿ ಮುಗಿಸಿದ ಬ್ಯಾಚಿನಲ್ಲಿ ಹಲವಷ್ಟು ಮಂದಿ ಸರಕಾರಿ ಆಡಳಿತಾತ್ಮಕ ಹುದ್ದೆಗಳನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಅತಿ ಎತ್ತರವನ್ನು ತಲುಪಿದ್ದನ್ನು ಉಡುಪರು ನೆನಪಿಸಿಕೊಂಡು, ತಮ್ಮ ಆಯ್ಕೆಯ ಬಗ್ಗೆ ತಮಗೆಂದೂ ಖೇದವಾಗಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅವರೆಲ್ಲರೊಂದಿಗಿದ್ದ ಸಂಪರ್ಕವನ್ನು ಉಡುಪರು ಸಮಾಜದ ಏಳಿಗೆಗೆಂದೇ ಹೇಗೆ ಉಪಯೋಗಿಸಿ ಕೊಂಡರು ಎನ್ನುವುದು ಇನ್ನೊಂದು ರೋಚಕ ಕಥೆ.

ಉಡುಪರನ್ನು ಪರ್ಯಾಯ ಚಿಂತನೆಗಳೆದುರು ನಿಲ್ಲಿಸಿದ ಮತ್ತೊಂದು ಘಟನೆಯೂ ಈ ದಿನಗಳಲ್ಲೇ ಘಟಿಸಿತು. ಕೃಪಲಾನಿಯವರ ಅಖಿಲ ಭಾರತ ಪ್ರಜಾಸೋಷಿಯಲಿಸ್ಟ್ ಪಾರ್ಟಿಯ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಿತು. ಜಯಪ್ರಕಾಶ್ ನಾರಾಯಣ, ಆಚಾರ್ಯ ನರೇಂದ್ರದೇವ್, ಅಶೋಕ್ ಮೆಹ್ತಾ, ಮಧು ದಂಡವತೆ ಮೊದಲಾದ ವಿಚಾರವಾದಿಗಳು ಭಾಗವಹಿಸಿದ್ದರು. ಪಾರ್ಟಿಯ ಮೈಸೂರು ವಿಭಾಗದ ಅಧ್ಯಕ್ಷರಾಗಿದ್ದ ರಾಮಕೃಷ್ಣ ಕಾರಂತರು ತಮ್ಮೂರಿನ ಉಡುಪರಿಗೆ ಕುಮಾರಕೃಪ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ರಾಷ್ಟ್ರ ನಾಯಕರ ಜವಾಬ್ದಾರಿ ವಹಿಸಿಕೊಳ್ಳಲು ಆದೇಶವಿತ್ತರು. ಜವಾಬ್ದಾರಿ ತೆಗೆದುಕೊಳ್ಳುವ ಮತ್ತು ಪರ್ಯಾಯ ಚಿಂತನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಸುವರ್ಣಾವಕಾಶ ಉಡುಪರಿಗೆ ಪ್ರಾಪ್ತವಾದದ್ದು ಮೊದಲಿಗೆ, ಹೀಗೆ.

1959ರಲ್ಲಿ ಕೃಷಿಯಲ್ಲಿ ಪದವಿ ಶಿಕ್ಷಣ ಮುಗಿಸುತ್ತಲೇ ಉಡುಪರ ಎದುರು ತೆರೆದುಕೊಂಡದ್ದು ಮತ್ತೊಂದು ಬಾಗಿಲು. ಕೃಷಿರಂಗದಲ್ಲಿ ಸಂಶೋಧನೆಯ ಫಲಿತಾಂಶ ಗಳನ್ನು ಜನರಿಗೆ ತಲುಪಿಸುವ ಕ್ರಮಗಳ ಕುರಿತಂತೆ ಒಂದು ಸ್ನಾತಕೋತ್ತರ ಡಿಪ್ಲೊಮಾ ಅಮೇರಿಕಾದ ತಾಂತ್ರಿಕ ಸಂಸ್ಥೆಯೊಂದರ ಸಹಯೋಗದಲ್ಲಿ ಉದ್ದೇಶಿಸಲಾದ ಮೊದಲ ತಂಡ. ಎಪ್ಪತ್ತೈದು ವರ್ಷಗಳ ಮುದುಕ ಡೀನ್ ಮೆಕ್ಲಾಡ್ ನಿರ್ದೇಶನ. ಡಾ. ದ್ವಾರಕಾನಾಥ್ ಮಾರ್ಗದರ್ಶನ. ಉಡುಪರಿಗೆ ಸಾರ್ವಜನಿಕ ಸಂಪರ್ಕ ಮತ್ತು ಸಂವಹನದ ಸಾಧ್ಯತೆಗಳ ಸ್ಪಷ್ಟ ಅರಿವಾದದ್ದು ಈ ಅವಧಿಯಲ್ಲಿಯೇ. ಈ ಕೋರ್ಸ್ನಲ್ಲಿ ಉಡುಪರು ಸರ್ವಪ್ರಥಮರಾಗಿ ಹೊರ ಹೊಮ್ಮುವುದರೊಂದಿಗೆ ಅವರ ಬದುಕಿನ ಮತ್ತೊಂದು ಮಜಲು ಮುಗಿಯಿತು. ಅವರಿನ್ನು ಬದುಕಿನ ಭವ್ಯ ಪ್ರಯೋಗಶಾಲೆಯ ಎದುರು.

ಉಡುಪರ ವೃತ್ತಿಜೀವನ ಆರಂಭವಾದದ್ದು ಕಂಕನಾಡಿಯ ಪ್ಯಾಡಿ ಬ್ರೀಡಿಂಗ್ ಸ್ಟೇಷನ್ ಎಂಬ ಭತ್ತದ ಕುರಿತ ಸಂಶೋಧನ ಕೇಂದ್ರದಲ್ಲಿ, 1959ರ ಸೆಪ್ಟೆಂಬರ್ನಲ್ಲಿ ಸಂಶೋಧನಾ ಅಧಿಕಾರಿಯಾಗಿ. ಉಡುಪರು ಇವತ್ತಿಗೂ ಪ್ರಾತಃಸ್ಮರಣೀಯರೆಂದೇ ತಿಳಿದಿರುವ ಬೋಜರಾಯರ ತಮ್ಮ ಪಿ. ಅನಂತಕೃಷ್ಣರಾಯರ ನೇತೃತ್ವದಲ್ಲಿ ಉಡುಪರಿಗೆ ಶಿಸ್ತು ಮತ್ತು ಪ್ರಾಮಾಣಿಕತೆಯ ಮಹತ್ವದ ಪಾಠ. ಎರಡು ವರ್ಷಗಳಲ್ಲಿ ಉಡುಪರು ಅಲ್ಲಿನ ಹಿರಿಯ ವಿಜ್ಞಾನಿಯೆಂದು ಗುರುತಿಸಲ್ಪಟ್ಟರು. 1962 ರಲ್ಲಿ ಕಟಕ್ನ CRRI (ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ) ನಡೆಸಿಕೊಟ್ಟ ಹೊಸತಳಿಯ ಭತ್ತ ಸೃಷ್ಟಿ ಕುರಿತ ಆರು ತಿಂಗಳ ಅವಧಿಯ ಅಧ್ಯಯನ ಕಾರ್ಯಕ್ರಮಕ್ಕೆ ಸರಕಾರದಿಂದ ನಿಯುಕ್ತರಾದರು. ಜಗತ್ತಿನ ಅತಿಪ್ರಮುಖ ತರಬೇತಿ ಸಂಸ್ಥೆಯಲ್ಲಿ ಭತ್ತ ತಳಿ ಉತ್ಪಾದನೆ ಮತ್ತು ಅನುವಂಶಿಕ ಶಾಸ್ತ್ರ ಕುರಿತಂತೆ ಮತ್ತೊಂದು ಸ್ನಾತಕೋತ್ತರ ಡಿಪ್ಲೊಮಾ. ಇಂಡಿಕಾ ಮತ್ತು ಜಪಾನಿಕಾ ಭತ್ತದ ತಳಿಗಳ ಒಂದು ಹೈಬ್ರಿಡ್ ತಳಿಯ ಸೃಷ್ಟಿ ಪ್ರಯತ್ನ. ಈ ರಿಸರ್ಚ್ಗೆ ಪ್ರಯೋಗ ಶಾಲೆಯೆಂದರೆ ಭತ್ತದ ಗದ್ದೆ. ಈ ನಡುವೆ, ಆಗಿನ ಕಾಲಸ್ಥಿತಿಗೆ ತಕ್ಕ ಹಾಗೆ, ಕಂಕನಾಡಿಯಲ್ಲಿ ಉದ್ಯೋಗಕ್ಕೆ ಸೇರಿದ ನಂತರ ಪಾರಂಪಳ್ಳಿ ಮಂಜುನಾಥ ಹೇರ್ಳೆಯವರ ಪ್ರಥಮ ಪುತ್ರಿ ಶಾಂತ, ಮಂಜುನಾಥ ಉಡುಪರ ಪತ್ನಿಯಾಗಿ ಮನತುಂಬಿ ಮನೆ ತುಂಬಿದ್ದು 27-01-1961ರಂದು. ಇನ್ನೊಂದು ವರ್ಷದಲ್ಲಿ ಐವತ್ತು ತುಂಬುವ ಈ ದಾಂಪತ್ಯದ ಯಶಸ್ಸಿಗೆ ಶಾಂತಮ್ಮನ ಕೊಡುಗೆಯೇನೂ ಅಲ್ಪವಲ್ಲ. ಉಡುಪರನ್ನು ಪೂರ್ಣವಾಗಿ ಸಾರ್ವಜನಿಕ ಬದುಕಿಗೆ ಬಿಟ್ಟುಕೊಟ್ಟು ಮಂದರ್ತಿಯ ಮನೆಯ ಪೂರ್ಣ ಜವಾಬ್ದಾರಿ ಯನ್ನು ಅವರು ಸಮರ್ಥವಾಗಿಯೇ ಹೊತ್ತರು.

ಈ ದಾಂಪತ್ಯದ ಫಲಶ್ರುತಿ ನಾಲ್ಕು ಮಕ್ಕಳು. ಹಿರಿಯಾತ ಮೋಹನ (1961) ಈಗ ಗುಜರಾತ್ನ ಜಾಮ್ನಗರದ ರಿಲಯನ್ಸ್ ರಿಫೈನರಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಕೊನೆಯಾಕೆ ಮಾಳವಿಕ (1973) ಗೃಹಿಣಿಯಾಗಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿದ್ದಾರೆ. ಉಳಿದಿಬ್ಬರು ಮಕ್ಕಳು ಮಹೇಶ (1964) ಮತ್ತು ಮಾಧವ (1966), ಉಡುಪರು ಬದುಕಿನುದ್ದಕ್ಕೆ ಯುವಜನರಿಗೆ ತಿಳಿಯ ಹೇಳುತ್ತಾ ಬಂದ ಸ್ವಉದ್ಯೋಗದ ಉನ್ನತ ಮೌಲ್ಯಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ. ಮಹೇಶ ಯಕ್ಷಗಾನ ಕಲಾವಿದನಾಗಿ ಸಾಲಿಗ್ರಾಮ ಮಕ್ಕಳ ಮೇಳದ ಪ್ರಮುಖ ಪಾತ್ರಗಳಲ್ಲಿ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ. 1978ರಲ್ಲಿ ಯಕ್ಷಗಾನ ಸೀಮೋಲ್ಲಂಘನ ಮಾಡಿ ತಂಡದ ಮುಂಚೂಣಿಯಲ್ಲೂ ಕಾಣಿಸಿಕೊಂಡಿದ್ದರು. ತಂದೆಯ ಪಾಲಿಗೆ ನನಸಾಗದ ಒಂದು ಕನಸನ್ನು ನನಸು ಮಾಡಿದ ಹೆಮ್ಮೆ ಅವರ ಪಾಲಿಗೆ ಉಳಿದಿದೆ. ಗೇರುಬೀಜದ ಎಣ್ಣೆ ಉತ್ಪಾದನೆ, ಔಷಧಿ ವಿತರಣೆ ಮೊದಲಾದ, ಆ ದಿನಗಳಲ್ಲಿ ಸವಾಲೆನ್ನಿಸುವ ಸ್ವಉದ್ಯೋಗ ಸ್ವೀಕರಿಸಿ, ಯಶಸ್ಸನ್ನು ಕಂಡುಕೊಂಡ ಮಾಧವ ಇವತ್ತು ಬ್ರಹ್ಮಾವರದ ಪರಿಸರದಲ್ಲಿ ಗುರುತಿಸಲ್ಪಡುವ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾನೆ.

ಉಡುಪರು ವೃತ್ತಿಜೀವನವನ್ನು ಆರಂಭಿಸಿದ ದಿನಗಳಲ್ಲಿ ದೇಶ ಕೂಡಾ ಒಂದು ಮಹತ್ವದ ಹೊರಳುಹಾದಿಯ ನಿರೀಕ್ಷೆಯಲ್ಲಿತ್ತು. ಆಗ ಪ್ರಧಾನಿಗಳಾಗಿದ್ದರು ಲಾಲ್ಬಹದ್ದೂರ್ ಶಾಸ್ತ್ರಿ. ಸುಬ್ರಹ್ಮಣ್ಯಂ ಆಹಾರ ಮಂತ್ರಿಗಳಾಗಿದ್ದರು. ಅಮೇರಿಕಾದ ಗೋದಿ, ಬರ್ಮಾದ ಅಕ್ಕಿ ಬಾರದೇ ಹೋದರೆ ಉಳಿಗಾಲವಿಲ್ಲ ಎಂಬ ಸ್ಥಿತಿಗೆ ದೇಶ ತಲುಪಿತ್ತು. ಆಹಾರ ಧಾನ್ಯಗಳ ಉತ್ಪಾದನೆ ಮತ್ತು ವಿತರಣೆಗೆ ಪ್ರತ್ಯೇಕ ನಿಗಮವೊಂದರ ಅಗತ್ಯ ಕಾಣಿಸಿದ್ದು ಆಗಲೇ. 1965 ರಲ್ಲಿ ಭಾರತೀಯ ಆಹಾರ ನಿಗಮದ ಸ್ಥಾಪನೆ. ಅದರ ಸ್ಥಾಪಕ ಅಧ್ಯಕ್ಷರಾಗಿ ನೇಮಿತರಾದರು, ಟಿ.ಎ. ಪೈ. ಅವರಿಗಾಗ ನಲವತ್ತೈದರ ವಯಸ್ಸಷ್ಟೇ. ಆ ಹೊತ್ತಿಗೆ ಸಿಂಡಿಕೇಟ್ ಬ್ಯಾಂಕಿನ ಕಾರ್ಯಾಧ್ಯಕ್ಷರಾಗಿದ್ದ ಟಿ.ಎ. ಪೈಯವರ ಯೋಚನಾ ಲಹರಿಯನ್ನು ದೇಶಕ್ಕೆ ದೇಶವೇ ಕುತೂಹಲದಿಂದ ನೋಡುತ್ತಿತ್ತು. ಹಿಂದಿನ ವರ್ಷವಷ್ಟೇ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೃಷಿ ಸಾಲ ವಿಭಾಗ, (ಮುಂದೆ ಗ್ರಾಮೀಣ ಅಭಿವೃದ್ಧಿ ವಿಭಾಗ) ವೊಂದನ್ನು ಅವರು ಆರಂಭಿಸಿದ್ದರು. ಕೃಷಿಗೆ ಬೇಕಾದ ಆರ್ಥಿಕ ನೆರವಿನ ಕುರಿತಂತೆ ಅವರು ಮುಂಚೂಣಿಯ ಚಿಂತಕರಾಗಿದ್ದರು. ಸಮಾನ ಚಿಂತಕರಾಗಿದ್ದ ಸುಬ್ರಹ್ಮಣ್ಯಂ, ಕುರಿಯನ್ ಮತ್ತು ಟಿ.ಎ. ಪೈ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಯ  ನೀಲನಕ್ಷೆಯೊಂದನ್ನು ಅದಾಗಲೇ ಗುರುತಿಸಿದ್ದರು.

ಈ ಸಂದರ್ಭದಲ್ಲಿಯೇ ಟಿ.ಎ. ಪೈಯವರಿಗೆ ಆಪ್ತರಾಗಿದ್ದ ಡಾ.ಎನ್.ಸಿ. ಮೆಹ್ತಾರವರು ಟಿ.ಎ. ಪೈಯವರ ಯೋಚನಾ ತರಂಗಗಳಿಗೆ ಹೊಂದಿಕೊಳ್ಳಬಲ್ಲ ಕ್ರಿಯಾಶೀಲ ವ್ಯಕ್ತಿತ್ವವನ್ನು ಉಡುಪರಲ್ಲಿ ಗುರುತಿಸಿ, ಪೈಗಳ ಗಮನಕ್ಕೆ ತಂದರು. ಮೆಹ್ತಾರವರು ಆಗಾಗ ಕಂಕನಾಡಿಯ ಸಂಶೋಧನಾ ಕೇಂದ್ರಕ್ಕೆ ಬರುತ್ತಿದ್ದು ಉಡುಪರ ಜೀವನೋತ್ಸಾಹವನ್ನು ಕುತೂಹಲದಿಂದ ಗಮನಿಸುತ್ತಿದ್ದವರು.

1965ರ ಮಾರ್ಚ್ನಲ್ಲಿ ಟಿ.ಎ. ಪೈಯವರು ಉಡುಪರನ್ನು ಸಿಂಡಿಕೇಟ್ ಬ್ಯಾಂಕಿಗೆ ಆಹ್ವಾನಿಸಿದರು. ಉಡುಪರ ಬದುಕನ್ನು ಪ್ರೀತಿ ಮತ್ತು ಮೌಲ್ಯಗಳಿಂದ ಕಟ್ಟಿ ಬೆಳೆಸಿದ ಮಂದರ್ತಿಯ ಅಜ್ಜಿ ಕಮಲಮ್ಮ ಅದೇ ದಿನ ತೀರಿಕೊಂಡರು. ಪ್ರತಿಷ್ಠಿತ ಸಿಬಾ ಕಂಪೆನಿಯಿಂದಲೂ ಒಂದು ನೇಮಕಾತಿ ಪತ್ರ ಕೈಸೇರಿತು. ಅಜ್ಜಿಯ ಕ್ರಿಯೆಯ ನಂತರ ಉಡುಪರು ಬೆಂಗಳೂರಿನಲ್ಲಿ ಟಿ.ಎ. ಪೈಯವರನ್ನು ಭೇಟಿಯಾದರು. ಉಡುಪರ ಯಾವತ್ತೂ ಬದುಕಿನ ದಿಕ್ಕನ್ನೇ ನಿರ್ಣಯಿಸಿಬಿಟ್ಟ ಮಹತ್ವಪೂರ್ಣ ಮುಖಾಮುಖಿಯದು. ಟಿ.ಎ. ಪೈಯವರು ಕೇಳಿದ್ದು ಒಂದೇ ಪ್ರಶ್ನೆ ಯಾವಾಗ ಸೇರಿಕೊಳ್ಳುತ್ತಿ? ಉಡುಪರು ಆತಂಕದಿಂದಲೇ ಉತ್ತರಿಸಿದ್ದರು : ನಾನೊಬ್ಬ ಸಂಶೋಧಕ. ಭತ್ತದ ಗಿಡಗಳ ಕುರಿತಷ್ಟೇ ನಾನು ಬಲ್ಲೆ. ಟಿ.ಎ. ಪೈ ಹೇಳಿದರು, ಬ್ಯಾಂಕಿನಲ್ಲೂ ಮಾಡಬೇಕಾದದ್ದು ಅದೇ. ಜಗತ್ತಿನ ಅತ್ಯಂತ ಶ್ರೇಷ್ಠ ಹದಿನೈದು ತಳಿಗಳನ್ನು ತಂದು ಭಾರತದ ಪರಿಸ್ಥಿತಿಗೆ ಒಗ್ಗುವಂತೆ ಮಾಡಬೇಕು. ಉಡುಪರು ಕೂಡಲೇ ಉತ್ತರಿಸಲಿಲ್ಲ. ಅವರ ತಂದೆ ಮರಿ ಉಡುಪರು ತಮ್ಮ ಆಪ್ತ ಮಿತ್ರ ಬಂಟ್ವಾಳ ನಾರಾಯಣ ನಾಯಕರಲ್ಲಿ ಒಂದು ಮಾತು ಕೇಳಿದರಂತೆ. ಕೈಯಲ್ಲಿರುವ ಸರಕಾರಿ ಉದ್ಯೋಗ, ಹೆಚ್ಚು ಸಂಬಳದ ಸಿಬಾ ಉದ್ಯೋಗದ ಆಮಿಷ ಮತ್ತು ಟಿ.ಎ. ಪೈಯವರ ಆಹ್ವಾನ – ಏನು ಮಾಡಬಹುದು?

ಟಿ.ಎ. ಪೈಯವರು ಕೇಳಿದರೆ, ಯಾವುದೇ ಸಂಶಯವಿಲ್ಲದೆ ನಿಮ್ಮ ಮಗನ ಕೈಯನ್ನು ಅವರ ಕೈಯಲ್ಲಿಡಬಹುದು ಎಂದರಂತೆ ಬಂಟ್ವಾಳ ನಾರಾಯಣ ನಾಯಕರು.

ಇಷ್ಟರ ನಡುವೆ ಕಂಕನಾಡಿಯಲ್ಲಿ ಇವರ ಭ್ರಮನಿರಸನಗೊಳಿಸುವ ಘಟನೆಯೊಂದು ನಡೆಯಿತು. ಭತ್ತ ಬೆಳೆಯ ಸಂಶೋಧಕರ ಪಾಲಿನ ಕಾಶಿ ಎಂದೇ ಖ್ಯಾತವಾದ CRRI ಮನಿಲಾದಲ್ಲಿ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ಒಂದಕ್ಕೆ ಉಡುಪರು ಖಾಸಗಿಯಾಗಿ ಅರ್ಜಿ ಸಲ್ಲಿಸಿ, ಅದನ್ನು ಅಲ್ಲೇ ಮರೆತು ಬಿಟ್ಟಿದ್ದರು. ಮುಂದೆ ಆಯ್ಕೆಯಾದ ಉಡುಪರು ಡಿಪಾರ್ಟ್ಮೆಂಟಿನ ಕ್ಲಿಯರೆನ್ಸ್ ಕೇಳಿದಾಗ, ಕೆಂಪುಪಟ್ಟಿಯ ಅನುಭವ ಅವರಿಗೆ ದಕ್ಕಿತು. ಸೇವಾ ನಿಯಮಾವಳಿಯ ಅನುಸಾರ ಡಿಪಾರ್ಟ್ಮೆಂಟಿನ ಮೂಲಕ (Through proper channel) ಯಾಕೆ ಅರ್ಜಿ ಸಲ್ಲಿಸಲಿಲ್ಲವೆಂದು ಅವರಿಂದ ವಿವರ ಕೇಳಲಾಯಿತು.

(ಈ ಘಟನೆ ನೆನಪಾದಾಗೆಲ್ಲ ಉಡುಪರಿಗೆ ಸಿಂಡಿಕೇಟ್ ಬ್ಯಾಂಕಿನಲ್ಲುಂಟಾದ ಒಂದು ಅನುಭವವೂ ನೆನಪಾಗುತ್ತದೆ. 1971ರಲ್ಲಿ ರೋಟರಿ ಇಂಟರ್ನೇಶನಲ್ನ ಗ್ರೂಪ್ ಸ್ಟಡಿ ಎಕ್ಸ್ಚೆಂಜ್ ಪ್ರೋಸುಮ್ಮನೆ ಅರ್ಜಿ ಹಾಕಿದ ಉಡುಪರು ಬ್ಯಾಂಕಿಂಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು ಯೂರೋಪ್, ಅಮೇರಿಕಾ ದೇಶಗಳ ಪ್ರವಾಸಕ್ಕೆ. ಉಡುಪರು ಸೇವಾ ನಿಯಮಾವಳಿಯ ಅನುಸಾರ ಸಂಬಂಧಪಟ್ಟವರ ಮೂಲಕ ಈ ಅರ್ಜಿ ಕಳಿಸಿರಲಿಲ್ಲವೆಂದು ಬ್ಯಾಂಕಿನ ಅಧ್ಯಕ್ಷ ಕೆ.ಕೆ. ಪೈ ಒಂದು ಕ್ಷಣ ಗರಂ ಆದರು. ಮರುಕ್ಷಣ ಇದು ಬ್ಯಾಂಕಿನ ಪ್ರತಿಷ್ಠೆಯ ಪ್ರಶ್ನೆ ಎಂದು ಹೇಳಿ, ಉಡುಪರಿಗೆ ಯೂರೋಪ್ ಅಮೇರಿಕಾ ಪ್ರವಾಸದಿಂದ ಹಿಂದೆ ಬರುವಾಗ, ಬ್ಯಾಂಕ್ ವೆಚ್ಚದಲ್ಲಿ ಜಪಾನ್, ಮನಿಲಾ ದೇಶಗಳನ್ನು ಸಂದರ್ಶಿಸಿ ಅಲ್ಲಿನ ಕೃಷಿ ಅಧ್ಯಯನ ಮಾಡಿಬರಬೇಕೆಂಬ ಆದೇಶವನ್ನು ಕೆ.ಕೆ. ಪೈಗಳು ನೀಡಿದರು. ಎಂತಹ ನಿಷ್ಠುರತೆ ಮತ್ತು ಸಹೃದಯತೆ ಕೆ.ಕೆ. ಪೈಗಳದ್ದು!)

19-04-1965ರಂದು ಉಡುಪರು ಸಿಂಡಿಕೇಟ್ ಬ್ಯಾಂಕ್ ಸೇರಿದರು. ಆಗ ಅವರೆದುರು ಬಾಲ್ಯದ ಬಡತನವಿರಲಿಲ್ಲ. ಮಂದರ್ತಿಯ ಅಜ್ಜಿಯರಿರಲಿಲ್ಲ. ಬ್ಯಾಂಕಿಂಗ್ಗೆ ಸಂಬಂಧಿಸಿದ ಯಾವ ಕನಸುಗಳಿರಲಿಲ್ಲ. ಒಂದು ಮಹತ್ವಾಕಾಂಕ್ಷೆ ಮಾತ್ರ ಇದ್ದಿತ್ತು. ಭಾರತದ ಪರಿಸರಕ್ಕೆ ಒಗ್ಗಿಕೊಳ್ಳುವ ಹದಿನೈದು ಶ್ರೇಷ್ಠ ಜಾಗತಿಕ ತಳಿಗಳನ್ನು ಗುರುತಿಸುವ ಒಂದು ಮಹತ್ವಾಕಾಂಕ್ಷೆ ಮಾತ್ರ.

* * *

ವರ್ಧಮಾನದ ವರಾತ

19-04-1965. ಮೇಜು ಕುರ್ಚಿಗಳಿಲ್ಲದ, ಕಚೇರಿ ಫೈಲುಗಳಿಲ್ಲದ, ಅಬ್ಬರ ಆಡಂಬರಗಳಿಲ್ಲದ, ಉಡುಪಿಯಿಂದ ಅನತಿದೂರದ ಮಡಿ ಎಂಬ ಹಳ್ಳಿಯಲ್ಲಿ, ಟಿ.ಎ. ಪೈಗಳು ಗುರುತಿಸಿದ 30 ಎಕ್ರೆ ಕೃಷಿಭೂಮಿಯಲ್ಲಿ ಉಡುಪರ ಬ್ಯಾಂಕಿಂಗ್ ಉದ್ಯೋಗದ ಆರಂಭ. ಹದಿನೈದು ಭತ್ತದ ತಳಿಯ ಬೀಜಗಳು. ಮುಂದಿನ ಒಂದು ವರ್ಷದಲ್ಲಿ 5000 ಎಕ್ರೆ ಕೃಷಿ ಭೂಮಿಯಲ್ಲಿ ಬೆಳೆಯಲು ಬೇಕಾದ ಭತ್ತದ ತಳಿಯ ಗುರುತಿಸುವಿಕೆ ಮತ್ತು ಸಾಕಷ್ಟು ಬೀಜೋತ್ಪಾದನೆಯ ಸವಾಲು. ಈ ದಿಸೆಯಲ್ಲಿ ಬೇಕಾದ ಸವಲತ್ತುಗಳನ್ನೆಲ್ಲ ನಿಂತ ನಿಟ್ಟಿನಲ್ಲಿ ಒದಗಿಸಬೇಕೆಂಬ ಆದೇಶ. ಬದುಕಿನುದ್ದಕ್ಕೆ ಇಂಥ ಸವಾಲುಗಳೆದುರು ಪುಟಗೊಳ್ಳುತ್ತ ಬಂದ ಉಡುಪರಿಗೆ ಸುವರ್ಣಾವಕಾಶ.

ಮೊದಲ ಬೆಳೆಗೆ ಉಡುಪರು ಆಯ್ದುಕೊಂಡದ್ದು ತಾಯ್ಚುಂಗ್-65 ಎಂಬ ಜಪಾನ್ ತಳಿ ಮತ್ತು ತಾಯ್ಚುಂಗ್ ನೇಟಿವ್-1 ಎಂಬ ತೈವಾನ್ ತಳಿ. ಇದೇ ತಳಿಗಳ ಎರಡನೆಯ ಬೆಳೆ. ಇದೇ ಬೀಜಗಳಿಂದ ಮೂರನೆಯ ಬೆಳೆ (ಕೊಳಕೆ). 1966 ರ ಮೂರನೆಯ ಬೆಳೆಗೆ ರೈತರ 50 ಎಕ್ರೆ ಕೃಷಿಭೂಮಿಯಲ್ಲಿ ಈ ತಳಿಗಳ ಬೆಳೆಯ ಗುರಿ. ಉಡುಪರ ಬೆಂಗಾವಲಿಗೆ ಕೆ.ವಿ. ಬಿಳಿರಾಯರು ಮತ್ತು ಮುದ್ದಣ ಶೆಟ್ಟರೆಂಬ ದಕ್ಷ ಬ್ಯಾಂಕ್ ಅಧಿಕಾರಿಗಳು. ಈ ಬೆಳವಣಿಗೆಯನ್ನೆಲ್ಲ ನಿಂತು ನಿರುಕಿಸುತ್ತಿದ್ದವರು ಮೊದಲಿಗೆ ಉಡುಪರ ಅಂತರ್ಗತ ಶಕ್ತ್ಯುತ್ಸಾಹಗಳನ್ನು ಗುರುತಿಸಿದ್ದ ಡಾ. ಎನ್.ಸಿ. ಮೆಹ್ತಾ. ಖಾಸಗೀ ಭಾಗವಹಿಸುವಿಕೆಯಲ್ಲಿ ಇಂತಹದೊಂದು RISK ಸವಾಲು ತೆಗೆದುಕೊಂಡ ಕೇಂದ್ರ ಸಚಿವ ಸುಬ್ರಹ್ಮಣ್ಯಂ ಮತ್ತು ಭಾರತ ಸರಕಾರದ ಕೃಷಿ ವಿಭಾಗ. ರೈತರು ಉತ್ಪಾದಿಸಿದ ಬೀಜವನ್ನು ಮಾರುಕಟ್ಟೆಯ ಇಮ್ಮಡಿ ಬೆಲೆಗೆ ಹಿಂದೆ ಕೊಳ್ಳುವ ಆಮಿಷ. ಇಷ್ಟೆಲ್ಲದರ ನಡುವೆ ಈ ಹೊಸ ತಳಿಗಳು ನಮ್ಮ ನೆಲಕ್ಕೆ ಒಗ್ಗಿಯಾವೆ? ಅವುಗಳೊಂದಿಗೆ ಬರಬಹುದಾದ  ಜೈವಿಕ  ಸವಾಲುಗಳು? ಇದೊಂದು ಅವೈಜ್ಞಾನಿಕ ಕ್ರಮವಲ್ಲವೆ? ಎಂದೆಲ್ಲ ಕಾಲೆಳೆಯುವ ಮಾತುಗಳು. ಅವಕ್ಕೆಲ್ಲ ಅಳುಕದೆ ಉಳಿದವರು ಟಿ.ಎ. ಪೈಗಳು.1966 ರ ಕೊನೆಯಲ್ಲಿ ಪರಿಷ್ಕೃತಗೊಂಡ ಸುಮಾರು 500 ಕ್ವಿಂಟಾಲ್ ಬೀಜ ಲಭ್ಯವಿದೆ ಎಂಬ ವಿಚಾರ ತಿಳಿದು ಸುಬ್ರಹ್ಮಣ್ಯಂ ಅಕ್ಷರಶಃ ರೋಮಾಂಚನಗೊಂಡರು. ಟಿ.ಎ. ಪೈಗಳು ಬೀಜದ ಆಯ್ಕೆ, ಚೀಲಗಳಲ್ಲಿ ತುಂಬಿ ಬ್ರಾಂಡಿಂಗ್ ಮಾಡುವುದಕ್ಕೆ ಅಗತ್ಯವಿದ್ದ ಯಂತ್ರೋಪಕರಣ ಗಳನ್ನು ಒದಗಿಸಿಕೊಟ್ಟರು. ಬೀಜದ ಮೊದಲ ಚೀಲವನ್ನು ಹಸ್ತಾಂತರಿಸಲಿಕ್ಕೆ ಸುಬ್ರಹ್ಮಣ್ಯಂ ಹೆಲಿಕಾಪ್ಟರ್ ಮೂಲಕ ಮಣಿಪಾಲದಿಂದ ಮಡಿಯ ಸುಪೀರಿಯರ್ ಸೀಡ್ ಫಾರ್ಮ್ಗೆ ಬಂದರು. ಹತ್ತೇ ದಿನಗಳ ಅವಧಿಯಲ್ಲಿ ಕಟ್ಟಿಸಿದ ಗೋಡೌನನ್ನು ಉದ್ಘಾಟಿಸಿದರು. 50-60 ಸಾವಿರದಷ್ಟಿದ್ದ ಜನಸಮೂಹ ನಿಬ್ಬೆರಗಾಗಿ ನೋಡುತ್ತಿರುವಾಗ ಭಾರತದ ಕೃಷಿ ಕ್ಷೇತ್ರದಲ್ಲಿ ಮತ್ತು ಸಿಂಡಿಕೇಟ್ ಬ್ಯಾಂಕಿನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ಉಲ್ಲೇಖವಾಯಿತು. ಟಿ.ಎ. ಪೈ, ಟಿ.ಎಂ.ಎ. ಪೈ, ಕೆ.ಕೆ. ಪೈ, ಕೆ.ಎಂ. ಉಡುಪರು ಮತ್ತವರ ತಂಡ ಈ ಯಜ್ಞದಲ್ಲಿ ಸಾರ್ಥಕ ಸಮಿಧೆಯಾದರು.

ಈ ಘಟನೆ ನಡೆದ ನಲವತ್ಮೂರು ವರ್ಷಗಳ ನಂತರ, ಇದೇ ವಿಷಯದಲ್ಲಿ ಉಡುಪರನ್ನು ಮಾತಿಗೆಳೆದಾಗ, ಅವರು ಸಂತೃಪ್ತಿಯಿಂದ ಈ ಕೆಲಸ ಸಿಂಡಿಕೇಟ್ ಬ್ಯಾಂಕಿಗೆ ರಾಷ್ಟ್ರಮಟ್ಟದ ಹೆಸರು ತಂದುಕೊಟ್ಟಿತೆಂದು, ಭತ್ತದ ಬೆಳೆಗೆ ಸಂಬಂಧಿಸಿದ ಹಸಿರು ಕ್ರಾಂತಿಯಲ್ಲಿ ತಮ್ಮದೊಂದು ಸಾರ್ಥಕ ಕೊಡುಗೆಯೆಂದೂ, ಅದೆಲ್ಲಕ್ಕಿಂತ ಹೆಚ್ಚಾಗಿ ಮುಂದಿನ ಐದಾರು ವರ್ಷಗಳಲ್ಲಿ ದೇಶ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಪಡೆಯುವತ್ತ ಇದೊಂದು ಮಹತ್ವದ ಮೈಲಿಗಲ್ಲೆಂದೂ ನೆನಪಿಸಿಕೊಳ್ಳುತ್ತಾರೆ. ಉತ್ತರ ಭಾರತದಲ್ಲಿ ಇದೇ ಕೆಲಸವನ್ನು ಗೋದಿ ಬೆಳೆಗೆ ಸಂಬಂಧಿಸಿದಂತೆ ಡಾ. ಸ್ವಾಮಿನಾಥನ್ ಮಾಡಿ ಸಫಲರಾದ ಸಂಗತಿಯನ್ನೂ ಉಲ್ಲೇಖಿಸುತ್ತಾರೆ.

ಭಾರತದ ಬ್ಯಾಂಕಿಂಗ್ ಇತಿಹಾಸ ಕಂಡ ಅತಿ ದೊಡ್ಡ ಕನಸುಗಾರರಲ್ಲಿ ಒಬ್ಬರು ಟಿ.ಎ. ಪೈ. ಅವರ ಕನಸುಗಳೆಲ್ಲ ನನಸಿನ ವ್ಯಾಪ್ತಿಯಲ್ಲಿಯೇ ಇರುತ್ತಿದ್ದವು. ಮತ್ತು ಆ ಕನಸುಗಳನ್ನು ಸಾರ್ಥಕವಾದ ನನಸಾಗಿಸಲಿಕ್ಕೆ ಅವರು ಯೋಗ್ಯರನ್ನೂ, ಕ್ರಿಯಾಶೀಲರನ್ನೂ ಗುರುತಿಸಿ, ತಮ್ಮ ಕನಸಿನ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸುತ್ತಿದ್ದರು. ಈ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದಂತೆ ಉಡುಪರು ಸಿಂಡಿಕೇಟ್ ಬ್ಯಾಂಕಿನ ಕೃಷಿ ವಿಭಾಗದ ತಾಂತ್ರಿಕ ಅಧಿಕಾರಿಯಷ್ಟೇ ಆಗಿರಲಿಲ್ಲ; ಅವರು ಪೈಗಳಿಗೆ ಟೆಕ್ನಿಕಲ್ ಎಡ್ವೈಸರ್ ಕೂಡ ಆಗಿದ್ದರು. ಸಾಂಪ್ರದಾಯಿಕ ಕೃಷಿಗೆ ನಾವು ಸಾಲ ಕೊಡುವುದಲ್ಲ ಎನ್ನುತ್ತಿದ್ದರು ಪೈಗಳು. ಅವರು ಬ್ಯಾಂಕಿನ ಕೃಷಿ ವಿಭಾಗವನ್ನು ಪ್ರಗತಿ ಮತ್ತು ತಂತ್ರಜ್ಞಾನದೊಂದಿಗೆ ಮೇಳೈಸಿ ಕರೆದೊಯ್ಯಬೇಕೆಂಬ ಕಿವಿ ಮಾತನ್ನು ತಮ್ಮ ಅಧಿಕಾರಿಗಳಿಗೆ ತಿಳಿಯ ಹೇಳುತ್ತಿದ್ದರು. ಅತಿ ಸಾಮಾನ್ಯ ಸಣ್ಣ ಹಿಡುವಳಿದಾರನಿಗೆ ತಂತ್ರಜ್ಞಾನವನ್ನು ತಲುಪಿಸುವ ಮಾರ್ಗವನ್ನು ಆವಿಷ್ಕರಿಸಿರಿ ಎಂದು ಅವರು ಆಗಾಗ ಉಡುಪರಲ್ಲಿ ಹೇಳುತ್ತಿದ್ದರು. ಮುಂದೆ ಅವರು ಸಿಂಡಿಕೇಟ್ ಬ್ಯಾಂಕ್ನ ಹುದ್ದೆ ತೊರೆದು ಕೇಂದ್ರ ಸರಕಾರದ ಮಂತ್ರಿಗಳಾಗಿದ್ದಾಗಲೂ ಉಡುಪರು ಎದುರಾದಾಗೆಲ್ಲಾ ಹೊಸತೇನನ್ನು ಮಾಡಿದಿರಿ? ಹೊಸ ಆಲೋಚನೆಗಳು ಏನಾದರೂ ಇವೆಯೆ? ಎಂದೇ ಪ್ರಶ್ನಿಸುತ್ತಿದ್ದರು. ಇದನ್ನು ನೆನಪಿಸಿಕೊಂಡವರೆಲ್ಲ ಈ ಪ್ರಶ್ನೆಗಳಲ್ಲಿ ಟಿ.ಎ. ಪೈಗಳ ಆವಿಷ್ಕಾರಗಳಿಗಾಗಿ ತುಡಿತ ಮಾತ್ರವಲ್ಲ, ಉಡುಪರ ಕ್ರಿಯಾಶೀಲತೆಯ ಬಗ್ಗೆ ಪೈಗಳ ಅಚಲವಾದ ನಂಬಿಕೆಯನ್ನು ಗುರುತಿಸುತ್ತಿದ್ದರು. ಸಿಂಡಿಕೇಟ್ ಬ್ಯಾಂಕಿನ ಕೃಷಿ ವಿಭಾಗ ಸಾಗಿ ಬಂದ ಹಾದಿಯನ್ನು ಬಲ್ಲವರಾರೂ ಈ ತೆರನಾದ ನಂಬಿಕೆಯ ಕುರಿತು ಆಕ್ಷೇಪ ಎತ್ತಲಾರರು.

ಬೇರೆ ಬ್ಯಾಂಕುಗಳು, ಮಾತ್ರವಲ್ಲ ರಿಸರ್ವ್ಬ್ಯಾಂಕ್ ಕೂಡಾ ಕೃಷಿ ಸಾಲದ ಕುರಿತು ಗುಮಾನೆಯನ್ನು ವ್ಯಕ್ತಪಡಿಸುತ್ತಿದ್ದ ದಿನಗಳಲ್ಲಿ ಟಿ.ಎ. ಪೈ ಮತ್ತು ಕೆ.ಕೆ. ಪೈಯವರ ಕಂಗಾಪಿನಲ್ಲಿ ಈ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಯೋಚನೆಗಳನ್ನೂ ಉಡುಪರು ಹುಟ್ಟು ಹಾಕಿದರು. ರೈತರ ಹೊಲಗಳಲ್ಲಿ ಕ್ಷೇತ್ರ-ತರಬೇತಿಗಳನ್ನು ನಡೆಸುವ ಪರಿಕಲ್ಪನೆ ಉಡುಪರದ್ದೇ. ರೈತರ ಹೊಲದ ನಡುವೆ ಒಂದು ಹತ್ತು ಸೆಂಟ್ಸ್ ಜಾಗದಲ್ಲಿ ಇವರದೇ ತಂಡ ಬಿತ್ತಿ ಬೆಳೆದು ಮಾದರಿಯಾದದ್ದೂ ಇದೆ. 1965 ರ ಸುಮಾರಿಗೆ ಇವರು ಯಾಂತ್ರೀಕರಣದ ಅಗತ್ಯದ ಕುರಿತು ಒತ್ತಿ ಹೇಳುತ್ತಿದ್ದಾಗ ಪವರ್ ಟಿಲ್ಲರ್, ಪವರ್ ಸ್ಟ್ರೇಯರ್ ಮೊದಲಾದ ಚಿಕ್ಕ ಕೃಷಿ ಉಪಕರಣಗಳನ್ನು ರೈತರ ಕೈಗೆ ಎಟಕುವಂತೆ ಮಾಡಿದ್ದೇ ಟಿ.ಎ. ಪೈಗಳು. ಇವರ ಮಾರ್ಗದರ್ಶನದಲ್ಲಿಯೇ ಕೃಷಿ ವಿಚಾರ ವಿನಿಮಯ ಕೇಂದ್ರಗಳು ಹುಟ್ಟಿಕೊಂಡವು. ಉಡುಪರ ತಲೆಯಲ್ಲಿ ಹುಟ್ಟಿಕೊಳ್ಳುತ್ತಿದ್ದ ಹೊಸ ಆಲೋಚನೆಗಳನ್ನು ಟಿ.ಎ. ಪೈಗಳು ಗೌರವಿಸುತ್ತಿದ್ದರು. ಆ ಚಿಕ್ಕ ವಯಸ್ಸಿಗೆ ಅವರಿಗೆ ಸಿಕ್ಕ exposure ಅವರನ್ನು ದೂರದರ್ಶಿಯನ್ನಾಗಿಸಿತ್ತು.

ಬ್ಯಾಂಕಿನ ವೇದಿಕೆಯ ಮೂಲಕ ವಿಜ್ಞಾನಿಗಳೊಂದಿಗೆ ಸಮಾಲೋಚನೆ ಎಂಬ ಪರಿಕಲ್ಪನೆ ಕೂಡಾ ಉಡುಪರದ್ದೇ. ಅವರು ಕೃಷಿ ತಜ್ಞರನ್ನು ರೈತರಿಗೆ ಮುಖಾಮುಖಿ ಯಾಗಿಸಿದರು. ಡಾ. ಮಹದೇವಪ್ಪನವರಂತಹ ತಜ್ಞರು ಉಡುಪಿಯಂತಹ ಸಣ್ಣ ಊರುಗಳ ರೈತರೊಂದಿಗೆ ಚರ್ಚಿಸುವುದು ಸಾಧ್ಯವಾದದ್ದು ಈ ದಿನಗಳಲ್ಲಿಯೇ. ಈ ದಿನಗಳಲ್ಲಿಯೇ ರೈತರ ಕ್ಷೇತ್ರದರ್ಶನ ಕಾರ್ಯಕ್ರಮಗಳ ಅಗತ್ಯವನ್ನು ಉಡುಪರು ಎತ್ತಿ ಹೇಳಿದರು. ಪ್ರತಿಕ್ಷೇತ್ರದಿಂದ 40-50 ಪ್ರಗತಿಪರ ರೈತರನ್ನು ಆಯ್ದು ಅವರನ್ನು ನೆರೆಯ ಕ್ಷೇತ್ರಗಳ ಕೃಷಿ ಮತ್ತು ಕೃಷಿ ಸಂಬಂಧಿ ಪ್ರಗತಿಪರ ರೈತರಲ್ಲಿಗೆ ಬಸ್ಸುಗಳಲ್ಲಿ ಕರೆದೊಯ್ದು, ಅಧ್ಯಯನಾವಕಾಶವನ್ನು ಒದಗಿಸುವುದು ಈ ಪರಿಕಲ್ಪನೆಯ ಮೂಲ. ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ.ಕೆ. ಪೈಗಳೂ ಆ ಬಸ್ಸುಗಳಲ್ಲಿ ಕುಳಿತು ನಾಲ್ಕೈದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೂ ಇದೆ. ಈ ತೆರನಾದ ಯಾತ್ರೆಗಳು ಬೇರೆ ರೈತರ ಕ್ಷೇತ್ರಗಳನ್ನು ಮಾತ್ರವಲ್ಲ, ಸಂಶೋಧನೆಗಳು ನಡೆಯುತ್ತಿದ್ದ ಕೃಷಿ ಕ್ಷೇತ್ರಗಳನ್ನೂ ಗುರಿಯಾಗಿಸಿಕೊಂಡಿದ್ದವು.

ಅವಿಭಜಿತ ಕನ್ನಡ ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಆಶ್ರಯದಲ್ಲಿ ಇಷ್ಟೆಲ್ಲ ಚಟುವಟಿಕೆಗಳು ನಡೆಯುತ್ತಿದ್ದ ದಿವಸಗಳಲ್ಲಿ ರಾಜ್ಯ ಸರಕಾರದ ವಿತ್ತ ಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ತೆರನಾದ ಪ್ರಯೋಗ ನಡೆಸಬೇಕೆಂಬ ವಿನಂತಿಯನ್ನು ಕೆ.ಕೆ. ಪೈಯವರಲ್ಲಿ ಇಟ್ಟರಂತೆ. ಕೆ.ಕೆ. ಪೈಯವರ ಆದೇಶದಂತೆ ಉಡುಪ ಮತ್ತು ಬೆಳಿರಾಯರ ತಂಡ ಹದಿನೈದು ದಿನ ಉತ್ತರ ಕನ್ನಡ ಜಿಲ್ಲೆಯ ಕೃಷಿ ಸಾಧ್ಯತೆ ಮತ್ತು ಸಂಪ್ರದಾಯಗಳನ್ನು ಅಭ್ಯಾಸ ಮಾಡಿದರು. ಉತ್ತರ ಕನ್ನಡ ಜಿಲ್ಲೆಯ ಕೃಷಿ ಪರ್ಯಾಯ ಮಾರ್ಗಗಳಿಗೆ ತೆರೆದುಕೊಳ್ಳದೇ ಇನ್ನು ಆರಂಭಿಕ ಸ್ಥಿತಿಯಲ್ಲಿಯೇ ಇರುವುದನ್ನು ಅವರು ಗುರುತಿಸಿದರು. ಅಲ್ಲಿನ ಮರಳು ಮಿಶ್ರಿತ ಮಣ್ಣಿನಲ್ಲಿ ಒಂದೇ ಬೆಳೆ ಬೆಳೆಯಲಾಗುತ್ತಿತ್ತು. ಎರಡನೆಯ ಬೆಳೆಯಾಗಿ ಶೇಂಗಾ ಬೆಳೆಯುವ ಸಲಹೆಯನ್ನೂ, ಜಿಲ್ಲೆಯ ಒಳಭಾಗದಲ್ಲಿ ಅನಾನಾಸ್ ಬೆಳೆಯುವ ಸಲಹೆಯನ್ನೂ ಇವರ ವರದಿಯಲ್ಲಿ ನೀಡಲಾಗಿತ್ತು. ಮುಂದಿನ ನಲವತ್ತು ವರ್ಷಗಳಲ್ಲಿ ಶೇಂಗಾ ಮತ್ತು ಅನಾನಾಸ್ ಪರ್ಯಾಯ ಬೆಳೆಯಾಗಿ ಉತ್ತರ ಕನ್ನಡ ಜಿಲ್ಲೆಯ ಆರ್ಥಿಕ ಸ್ವರೂಪವನ್ನು ಬಹುಮಟ್ಟಿಗೆ ಬದಲಿಸಿದವು. ಸಿಂಡಿಕೇಟ್ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿಯಲ್ಲಿ ಎಷ್ಟು ಕಾಳಜಿಯನ್ನು ಹೊಂದಿತ್ತೆನ್ನುವುದನ್ನು ದಾಖಲಿಸುತ್ತದೆ ಈ ಘಟನೆ. ಬ್ಯಾಂಕ್ ಕೃಷಿ ಡಿಪಾರ್ಟ್ಮೆಂಟಿನ ಕಾರ್ಯಕ್ಷೇತ್ರಕ್ಕೆ ತಲೆ ಹಾಕುತ್ತಿದೆ ಎಂದು ಯಾರೋ ಆಪಾದಿಸಿದಾಗ “No, No, We are taking care of our money” ಎಂದಿದ್ದರಂತೆ ಪೈಗಳು.

ಕೃಷಿಯಲ್ಲಿ ಬೆಳವಣಿಗೆಯೊಂದಿಗೆ ಮೇಲ್ವಿಚಾರಣೆ ಟಿ.ಎ. ಪೈಗಳ ಒಂದು ಅದ್ಭುತ ಪರಿಕಲ್ಪನೆ. ಸಾಲದೊಂದಿಗೆ ಮಾಹಿತಿ ಕೂಡಾ ಬ್ಯಾಂಕುಗಳ ಮೂಲಕ ಒದಗುವಂತಾಗಬೇಕು ಎಂಬ ನಿರ್ದಿಷ್ಟ ಸಲಹೆಯೊಂದಿಗೆ ಈ ಜವಾಬ್ದಾರಿಯನ್ನು ಅವರಿತ್ತದ್ದು ಉಡುಪರ ಕೈಗೆ. ಆ ದಿನಗಳಲ್ಲಿ ಮತ್ತು ನಂತರದ ಹಲವಷ್ಟು ವರ್ಷ ಸಿಂಡಿಕೇಟ್ ಬ್ಯಾಂಕಿನ ಕೃಷಿ ಸಾಲ ವಿಭಾಗ ಉಡುಪರ ನೇತೃತ್ವದಲ್ಲಿ “Supervised agricultural development” ಎಂಬ ಅನನ್ಯ ಪರಿಕಲ್ಪನೆಯನ್ನೇ ಸಾಕಾರಗೊಳಿಸಿತ್ತು. ಕೃಷಿ ತಜ್ಞರನ್ನು ಬ್ಯಾಂಕ್ ಅಧಿಕಾರಿಗಳಾಗಿ ನೇಮಿಸುವ ಒಂದು ಪರಂಪರೆಗೆ ಬಲ ಬಂದದ್ದೂ ಈ ಕಾಲದಲ್ಲಿಯೇ.

ಟಿ.ಎ. ಪೈ ಒಬ್ಬ ಅದ್ಭುತ ಕನಸುಗಾರ. ಕೃಷಿಕರಿಗೆ ಬರೇ ಮಾಹಿತಿ ಕೊಟ್ಟರೆ ಸಾಲದು. ಅವರಲ್ಲೊಂದು ಅಂತಃಸ್ಫೂರ್ತಿ ತರಬೇಕು. ಅವರ ಸಾಧ್ಯತೆಗಳು ಏನು ಅಂತ ತೋರಿಸಿ ಕೊಡಬೇಕು. ಮನುಷ್ಯನನ್ನು ಅಭಿವೃದ್ಧಿಪಡಿಸಬೇಕು. ಕುಟುಂಬ ಆಧಾರಿತ ಯೋಜನೆಗಳು ಬೇಕು. ಸಾಮಾನ್ಯ ಸುಖದಿಂದ ಮನುಷ್ಯ ಬದುಕಲಿಕ್ಕೆ ಏನೆಲ್ಲ ಬೇಕು ಅವನ್ನು ಕೊಡಬಲ್ಲ ಬ್ಯಾಂಕಿಂಗ್ ಸೌಕರ್ಯ ಬೇಕು ಎಂಬ ಮಾತು ಟಿ.ಎ. ಪೈಗಳ ಮೂಲಕ ಬಂದಾಗ, ಉಡುಪರ ತಂಡ ಕಟ್ಟಿಕೊಟ್ಟದ್ದು ಕೃಷಿ ಚಿಕಿತ್ಸಾಲಯ (ಫಾರ್ಮ್ ಕ್ಲಿನಿಕ್) ಪರಿಕಲ್ಪನೆ.

ಪ್ರತಿಯೊಬ್ಬ ರೈತನಿಗೂ ಸಾಧ್ಯವಿರುವಲ್ಲೆಲ್ಲ ಒಂದು ಬಾವಿ, ಸಣ್ಣ ಪಂಪ್ಸೆಟ್, ಎರಡು ದನ ಕೊಡಿ ಎಂದಿದ್ದರು ಪೈಗಳು. ವರ್ಷದಲ್ಲಿ ಏಳೆಂಟು ತಿಂಗಳು ನೀರಿದ್ದರೂ ಒಂದು ಬೆಳೆ ಬೆಳೆಯುವಲ್ಲಿ ಎರಡು ಬೆಳೆ ಬೆಳೆಯುವಂತಾಗಬೇಕು ಎನ್ನುವುದು ಅವರ ಉದ್ದೇಶ. ಉಡುಪರು ಈ ಪರಿಕಲ್ಪನೆ ಸಾಕಾರಗೊಳ್ಳುವ ನೀಲನಕ್ಷೆ ಬರೆದರು. ಬ್ಯಾಂಕು ಪೊಟ್ಟು ಬಾವಿ (Dry well) ಗಳಿಗೆ ಸಾಲ ಕೊಡುವ ದಿನಗಳೂ ಬಂದು ಹೋದವು. ಇವತ್ತಿನ ನೀರು ಗುಂಡಿಯ ಕಲ್ಪನೆಯನ್ನು ಸುಮಾರು ನಲವತ್ತು ವರ್ಷಗಳ ಹಿಂದೆ ಉಡುಪರು ಕರಡು ಪ್ರತಿಯಲ್ಲಿ ತಂದರು.

1973ರಲ್ಲಿ ಅಮೂಲ್ ಮಾದರಿಯ ಹಾಲು ಉತ್ಪಾದಕರ ಸಹಕಾರಿ ಸಂಘ ಕನ್ನಡ ಜಿಲ್ಲೆಯಲ್ಲಿ ಆರಂಭವಾದದ್ದೂ ಸಿಂಡಿಕೇಟ್ ಬ್ಯಾಂಕ್ ಮಾರ್ಗದರ್ಶನದಲ್ಲಿ. ಅದರ ಕಾರಣಕರ್ತರಾಗಿದ್ದ ಟಿ.ಎ. ಪೈಗಳು ಒಂದಿಷ್ಟು ಕಾಲ ಅದರ ಅಧ್ಯಕ್ಷರೂ ಆಗಿದ್ದರು. ಸುಮಾರು ನಲವತ್ತರಿಂದ ಐವತ್ತು ಲಕ್ಷ ರೂಪಾಯಿಗಳ ಸಾಲ ನೀಡುವಿಕೆಯೊಂದಿಗೆ ಸಿಂಡಿಕೇಟ್ ಬ್ಯಾಂಕ್ ಆ ದಿನಗಳಲ್ಲಿಯೇ ಹೈನುಗಾರಿಕೆಯನ್ನು ಪ್ರೋ

ಇದಕ್ಕೆ ಬಹಳ ಹಿಂದೆಯೇ, 1966ರಲ್ಲಿ ಟಿ.ಎ. ಪೈಯವರ ಮತ್ತೊಂದು ಕನಸಿನ ಕೂಸು ಸಿಂಡಿಕೇಟ್ ಕೃಷಿ ಪ್ರತಿಷ್ಠಾನ (ಸಿಂಡಿಕೇಟ್ ಎಗ್ರಿಕಲ್ಚರಲ್ ಫೌಂಡೇಶನ್) ಹುಟ್ಟಿಕೊಂಡಿತ್ತು. ಕೃಷಿ ಸಂಬಂಧಿ ಧ್ಯೇಯಗಳ ಸರ್ವತೋಮುಖ ಅಭಿವೃದ್ಧಿಯೇ ಏಕಮೇವ ಗುರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಮೀಣ ಅಭಿವೃದ್ಧಿಯ ನಿಟ್ಟಿನಲ್ಲಿ ಅದೊಂದು ಸರ್ವಪ್ರಥಮ ಪ್ರಯತ್ನ. 1968ನೆಯ ಇಸವಿಯಿಂದ 1989 ನೆಯ ಇಸವಿಯವರೆಗೆ ಉಡುಪರು ಈ ಫೌಂಡೇಶನ್ನಿನ ಮುಖ್ಯ ಚೈತನ್ಯವಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳಿಂದ ರೈತ ಮಿತ್ರನಾಗಿ ಬೆಳೆದ ಈ ಪರಿಕಲ್ಪನೆಯನ್ನು ಮುಂದಿನ ಇಪ್ಪತ್ತು ವರ್ಷಗಳಲ್ಲಿ ಎಲ್ಲ ಪ್ರಮುಖ ಬ್ಯಾಂಕುಗಳು ನಕಲು ಮಾಡಿದವು. ಈ ಫೌಂಡೇಶನ್ ಮೂಲಕ ಸಿಂಡಿಕೇಟ್ ಬ್ಯಾಂಕಿಗೆ ಅಂತರರಾಷ್ಟ್ರೀಯ ಮನ್ನಣೆ ಮತ್ತು ಹಲವಷ್ಟು ಅಂತರರಾಷ್ಟ್ರೀಯ ಪುರಸ್ಕಾರಗಳು ಲಭ್ಯವಾದವು. ಕೃಷಿಲೋಕ ಪತ್ರಿಕೆ ಈ ಫೌಂಡೇಶನ್ನಿನ ಮುಖವಾಣಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಸುಮಾರು ನಲವತ್ತೆರಡು ವರ್ಷಗಳ ಕಾಲ ನಿರಂತರವಾಗಿ ಪ್ರಕಟವಾಗುತ್ತಿತ್ತು.

ಈ ಪ್ರತಿಷ್ಠಾನದ ಮೂಲಕ ಸಿಂಡಿಕೇಟ್ ಬ್ಯಾಂಕ್ ಒಂದು ಅದ್ಭುತವಾದ, ಸೃಜನಾತ್ಮಕವಾದ ರೀತಿಯಲ್ಲಿ ಜನರ ಗಮನ ಸೆಳೆಯಿತು, ಆ ದಿನಗಳಲ್ಲಿ ಪ್ರತಿವರ್ಷ ಸುಮಾರು ರೂ. ಹತ್ತು ಸಾವಿರ ವೆಚ್ಚದಲ್ಲಿ 25 ರಿಂದ 30 ಸಾವಿರ ತರಕಾರಿ ಬೀಜಗಳ ಪಾಕೇಟುಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ. ಯಾರೋ ಈ ವೆಚ್ಚದ ಕುರಿತು ಆಕ್ಷೇಪಿಸಿದಾಗ ಟಿ.ಎ. ಪೈಯವರು ಉಡುಪರನ್ನು ಸಮರ್ಥಿಸಿದ್ದು ಹೀಗೆ : ಇದು ಬ್ಯಾಂಕಿನ ಗುಡ್ವಿಲ್ ಬೆಳೆಸುವ ಕೆಲಸ. ಜಾಹಿರಾತಿಗೆ ಪರ್ಯಾಯ. ಎಲ್ಲಕ್ಕಿಂತ ಹೆಚ್ಚಾಗಿ ಈ ಬೀಜಗಳನ್ನು ಪಡೆದವರಲ್ಲಿ 25% ಜನ ತರಕಾರಿ ಬೆಳೆದರೂ ಐದು ಲಕ್ಷ ರೂಪಾಯಿಗಳ ತರಕಾರಿ ಸೃಷ್ಟಿಯಾಗುತ್ತದೆ. ದೇಶದ ಪ್ರಗತಿಗೆ ಇದಕ್ಕಿಂತ ದೊಡ್ಡ ಕೊಡುಗೆ ಬೇರೇನೂ ಇಲ್ಲ. ಈ ನಡುವೆ ನಿಂತು ಹೋದ ಈ ಕೆಲಸವನ್ನು ಈಚೆಯ ದಿನಗಳಲ್ಲಿ ಉಡುಪರು ಭಾರತೀಯ ವಿಕಾಸ್ ಟ್ರಸ್ಟ್ ಮೂಲಕ ಬ್ಯಾಂಕ್ ಸಹಯೋಗದಲ್ಲಿ ಮತ್ತೆ ಮುಂದುವರಿಸಿದ್ದಾರೆ.

1973ರಲ್ಲಿ ಆರಂಭವಾದ ಭಾವೀ ಕೃಷಿಕ ಕ್ಲಬ್ (Future Farmers Club) ಶಾಲೆಗಳಲ್ಲಿ ವಿದ್ಯಾರ್ಥಿ ಕೃಷಿ ಸಂಘ ಉಡುಪರ ಮತ್ತೊಂದು ಕನಸಿನ ಕೂಸು. ಅಮೇರಿಕಾ ಪ್ರವಾಸ ಕಾಲದಲ್ಲಿ ಉಡುಪರನ್ನು ವಿಸ್ಮಯಗೊಳಿಸಿದ ಯುವಕರನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಪ್ರೇರೇಪಿಸುವ “4H Club” ಗಳ ಮಾದರಿಯಲ್ಲಿ ಈ ಪರಿಕಲ್ಪನೆಯನ್ನವರು ರೂಪಿಸಿದ್ದರು. 1973ರಲ್ಲಿ ಪೆರ್ಡೂರಿನಲ್ಲಿ ಆರಂಭವಾಗಿ ಮತ್ತೆ ಕೃಷಿ ಹಿನ್ನೆಲೆಯ ಶಾಲೆಗಳಲ್ಲಿ ಆ ದಿನಗಳಲ್ಲಿ ತುಂಬು ಯಶ ಕಂಡ ಯೋಜನೆಯಿದು. ಇದಕ್ಕೆ ಎರಡು ವರ್ಷಗಳ ಹಿಂದೆಯೇ 1971ರಲ್ಲಿ ಪಾಂಗಾಳದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರವೆಂಬ ಕಲ್ಪನೆಯನ್ನು ಅನಾವರಣಗೊಳಿಸಲಾಗಿತ್ತು. ರೋಟರಿ ಕ್ಲಬ್ ಗಳ ಮಾದರಿಯಲ್ಲಿ ಈ ಕ್ಲಬ್ಬುಗಳ ಅಂತರಕ್ಲಬ್ ಸಮ್ಮೇಳನ, ರಾಜ್ಯ ಸಮ್ಮೇಳನಗಳನ್ನೂ ನಡೆಸಲಾಗುತ್ತಿದ್ದು, ಸಿಂಡಿಕೇಟ್ ಬ್ಯಾಂಕಿನ ನಂತರದ ಅಧ್ಯಕ್ಷರುಗಳೂ ಈ ಸಮ್ಮೇಳನದಲ್ಲಿ ಭಾಗವಹಿಸಿದ ದಾಖಲೆಗಳು ಉಪಲಬ್ಧವಿವೆ.

ಟಿ.ಎ. ಪೈಗಳ ಮತ್ತೊಂದು ಕನಸಿಗೆ ಉಡುಪರು ರೂಪು ಕೊಟ್ಟು ಕಲ್ಪಿಸಿದ್ದು ಸಿಂಡಿಕೇಟ್ ಸ್ವೋದ್ಯೋಗ ಯೋಜನೆಯನ್ನು. ಪ್ರತಿ ಆದಿತ್ಯವಾರ ಹಳ್ಳಿಹಳ್ಳಿಗಳಿಗೆ ಹೋದ ಸಿಂಡಿಕೇಟ್ ಬ್ಯಾಂಕಿನ ಕೃಷಿ ಅಧಿಕಾರಿಗಳ ತಂಡ ಸ್ಥಳೀಯ ಬ್ರಾಂಚ್ ಮೆನೇಜರ್ಗಳ ನೆರವಿನಿಂದ ಗ್ರಾಹಕರಿಗೆ ಸ್ವ-ಉದ್ಯೋಗ ಮತ್ತು ಬ್ಯಾಂಕ್ ಆರ್ಥಿಕ ನೆರವಿನ ಕುರಿತು ಮಾರ್ಗದರ್ಶನವನ್ನು ನೀಡತೊಡಗಿತು. 1970ರಲ್ಲಿ ಶುರುವಾದ ಈ ಕಾರ್ಯಕ್ರಮ ಮುಂದೆ ಬ್ಯಾಂಕಿನ ಅಧಿಕೃತ ಕಾರ್ಯಕ್ರಮವೇ ಆಗಿ ಬೆಳೆಯಿತು.  1975-76ರಲ್ಲಿ ಬಾರಕೂರಿನಲ್ಲಿ ಒಂದು ದೊಡ್ಡ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಬಿ. ಪ್ರಮೋದ್ ಮತ್ತು ಡಾ. ಅಂಬಸ್ತಾ ನಡೆಸಿಕೊಟ್ಟರು. ಅದರಲ್ಲಿ ಸುಮಾರು 70 ಜನ ಬ್ಯಾಂಕ್ ನೆರವಿನಿಂದ ಸ್ವಉದ್ಯೋಗಕ್ಕಿಳಿದು ಯಶಸ್ಸನ್ನೂ ಪಡೆದರು. ಕ್ರಿಯಾಶೀಲ ನಿರುದ್ಯೋಗಿಗಳಿಗೆ ಸೂಕ್ತ ತರಬೇತಿಯ ಮೂಲಕ ಸ್ವೋದ್ಯೋಗ ನಿರತರನ್ನಾಗಿಸುವುದು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದು ಈ ಕಾರ್ಯಕ್ರಮ. ಸ್ವ ಉದ್ಯೋಗಕ್ಕೆ ಹಣಕಾಸಿನ ನೆರವಿನೊಂದಿಗೆ ಯೋಗ್ಯ ಮಾರ್ಗದರ್ಶನ ಮತ್ತು ತರಬೇತಿಯ ಅಗತ್ಯವಿದೆ ಎನ್ನುವುದನ್ನು ಮತ್ತೊಮ್ಮೆ ದಾಖಲಿಸಿದ ಉಡುಪರು ಈ ತೆರನಾದ ತರಬೇತಿಗೆ ಒಂದು ಶಾಶ್ವತ ವ್ಯವಸ್ಥೆಯ ನೀಲ ನಕ್ಷೆ ಬರೆದರು. 1973ರಿಂದಲೂ ನಿಕಟ ಪರಿಚಿತರಾಗಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೊಂದಿಗೆ ಚರ್ಚಿಸಿದರು. ಸಿಂಡಿಕೇಟ್ ಬ್ಯಾಂಕ್, ಕೆನರಾಬ್ಯಾಂಕ್ ಮತ್ತು ಧರ್ಮಸ್ಥಳಗಳ 40:40:20 ಸಹಯೋಗದಲ್ಲಿ ರುಡ್ಸೆಟ್ ಕಲ್ಪನೆ ಸಾಕಾರಗೊಂಡು ಮೊದಲ ತರಬೇತಿ ಸಂಸ್ಥೆ ಉಜಿರೆಯಲ್ಲಿ ಕಾರ್ಯಾರಂಭ ಮಾಡಿತು. ಮುಂದೆ ಅದೊಂದು ಯಶೋಗಾಥೆಯೇ ಆಗಿ ಬೆಳೆದು ನಿಂತು, ನಿರುದ್ಯೋಗಿಗಳ ಪಾಲಿಗೆ ಚೈತನ್ಯದ ನಾಡಿಯೇ ಆಗಿ ಪರಿವರ್ತಿತವಾದದ್ದು ಒಂದು ಸೋಜಿಗ; ಒಂದು ಅನಿವಾರ್ಯ ಅಗತ್ಯ.

ಉಡುಪರು ತಮ್ಮ ಬದುಕಿನುದ್ದಕ್ಕೆ ಸ್ವೋದ್ಯೋಗದ ಅಧಿಕೃತ ಪ್ರಚಾರಕರೇ ಆಗಿದ್ದರು. ತಮ್ಮ ಅಧಿಕಾರ ಮತ್ತು ಸಂಪರ್ಕವನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ಯಾವುದೇ ಗುರುತರವಾದ ಉದ್ಯೋಗವನ್ನು ಕೊಡಿಸಬಲ್ಲವರಾಗಿದ್ದೂ ಅವರು ತಮ್ಮಿಬ್ಬರು ಮಕ್ಕಳನ್ನು ಸ್ವ ಉದ್ಯೋಗದ ಮೂಲಕ ‘ಸ್ವಯಂ ಸಂಪೂರ್ಣರನ್ನಾಗಿಸಿದ ಬಗ್ಗೆ ಈ ಮೊದಲೇ ಹೇಳಿದೆನಷ್ಟೆ? ಉಡುಪರ ಸ್ವೋದ್ಯೋಗ ಆಂದೋಲನದ ಯಶೋಗಾಥೆಗಳಲ್ಲಿ ಒಂದಾದ ಬ್ರಹ್ಮಾವರದ ಮಹೇಶ್ ಸಮೂಹ ಸಂಸ್ಥೆಗಳ ಸ್ಥಾಪನೆಯ ಕಥೆಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ಡಿಪಾರ್ಟ್ಮೆಂಟಿನಲ್ಲಿ ಡೆಮಾನ್ಸ್ಟ್ರೇಟರ್ ಆಗಿದ್ದ, ಉಡುಪರ ಶಾಲಾದಿನಗಳ ಸ್ನೇಹಿತ ಬಂಡೀಮಠ ರಾಮಣ್ಣ ಅಡಿಗರು, ಉಡುಪರ ಪ್ರೋಪ್ರೇರಿತರಾಗಿ ಕೈಯಲ್ಲಿದ್ದ ಕೆಲಸ ಬಿಟ್ಟು ಮಹೇಶ್ ಇಲೆಕ್ಟ್ರಿಕಲ್ಸ್ ಆರಂಭಿಸಿದ್ದು 1967ರ ಏಪ್ರಿಲ್ನಲ್ಲಿ.  ಮುಂದಿನ ನಲವತ್ತೆರಡು ವರ್ಷಗಳಲ್ಲಿ ಮಹೇಶ್ ಇಲೆಕ್ಟ್ರಿಕಲ್ಸ್, ಮಹೇಶ್ ಹಾರ್ಡ್ವೇರ್, ಮಹೇಶ್ ಹಾಸ್ಪಿಟಲ್ಗಳ ಮೂಲಕ ಮನೆಮಾತಾಗಿರುವ ಅಡಿಗರು ಉಡುಪರು ನೀಡಿದ ಸಕಾಲಿಕ ಸಲಹೆ ಮತ್ತು ನೆರವನ್ನು ಈಗಲೂ ನೆನೆಯುತ್ತಿರುತ್ತಾರೆ.

ಸಿಂಡಿಕೇಟ್ ಬ್ಯಾಂಕಿನ ಕೃಷಿ ವಿಭಾಗದಲ್ಲಿ ಉಡುಪರು ನಿರ್ದೇಶಿಸಿದ ಹಲವು ಸ್ಪಂದನೀಯ ಕಾರ್ಯಕ್ರಮಗಳ ಮಾತು ಬಂದಾಗ ಬ್ಯಾಂಕಿನ ನಿಡುಗಾಲದ ಅಧ್ಯಕ್ಷರಾಗಿದ್ದ ಕೆ.ಕೆ. ಪೈ ನೆನಪಿಸಿಕೊಂಡದ್ದು ಬಯೋಗ್ಯಾಸ್ ಪ್ಲಾಂಟ್ ಯೋಜನೆಯನ್ನು. ಕೊಳೆಯುವ ಜೈವಿಕ ವಸ್ತುವಿನಿಂದ ಉತ್ಪನ್ನವಾಗುವ ಮಿಥೇನ್ ಅನಿಲವನ್ನು ಅಡುಗೆಯ ಗ್ಯಾಸ್ ಆಗಿ ಬಳಸಿಕೊಳ್ಳುವ ಕಲ್ಪನೆ 1972-73ರಷ್ಟು ಹಿಂದೆ ದೇಶಕ್ಕೆ ಅಪರಿಚಿತ ಎನ್ನಿಸಿದ ದಿನಗಳಲ್ಲಿ ಉಡುಪರು ಅಂತಹ ಯೋಜನೆಗೆ ಬ್ಯಾಂಕ್ ಆರ್ಥಿಕ ನೆರವಿನ ಮಾತನಾಡಿದರು. ಮದ್ರಾಸ್ನಲ್ಲಿ ನಡೆದ ರೀಜಿಯನಲ್ ಫರ್ಟಿಲೈಸರ್ ಮತ್ತು ಮ್ಯಾನ್ಯೂರ್ ವರ್ಕ್ಶಾಪ್ ಒಂದರಲ್ಲಿ ಕೆ.ಕೆ. ಪೈಯವರ ಆದೇಶದ ಮೇರೆಗೆ ಭಾಗವಹಿಸಿದ್ದ ಉಡುಪರು ಭಾರತ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದು ಬರೂವಾ ಎನ್ನುವವರು ನೀಡಿದ ಉರುವಲಾಗಿ ಉಪಯೋಗಿಸಲ್ಪಟ್ಟು ನಾಶವಾಗಿ ಹೋಗುವ ನೈಟ್ರೋಜನ್ ಗೊಬ್ಬರ ದ ಲೆಕ್ಕಾಚಾರದಿಂದ ವಿಹ್ವಲರಾಗಿ ಹಾಕಿದ ಒಂದು ಟಿಪ್ಪಣಿಯೇ ಈ ಯೋಜನೆಯ ಮೂಲ. ಕೆ.ಕೆ. ಪೈಯವರ ನಿರ್ದೇಶನದ ಮೇರೆಗೆ ಉಡುಪರು ಬ್ಯಾಂಕ್ ಸಾಲ ಯೋಜನೆ ಯೊಂದರ ಕರಡು ಪ್ರತಿ ತಯಾರಿಸಿದರಾದರೂ ಇದಕ್ಕೆ ಆ ದಿನಗಳಲ್ಲಿ ದೀರ್ಘಕಾಲೀನ ಸಾಲ ಯೋಜನೆಗಳಿಗೆ ಅಗತ್ಯವಿದ್ದ ರಿಸರ್ವ್ಬ್ಯಾಂಕಿನ ಅನುಮತಿ ಪ್ರಾಪ್ತವಾಗಲಿಲ್ಲ. ಉಡುಪರು ಈ ಹಿಂಜರಿತದಿಂದ ಹತಾಶರಾಗದೇ ತಮ್ಮ ಯೋಜನೆಯನ್ನು ಟಿ.ಎ. ಪೈಯವರ ಗಮನಕ್ಕೆ ತಂದರು. ಟಿ.ಎ. ಪೈಯವರ ನಿರ್ದೇಶನದ ಮೇರೆಗೆ, 1973ರ ಅಕ್ಟೋಬರ್ 3ರಂದು ಕೇಂದ್ರ ವಿತ್ತ ಸಚಿವ ವೈ.ಬಿ. ಚವ್ಹಾಣ ಸಿಂಡಿಕೇಟ್ ಬ್ಯಾಂಕಿನ ಗೋಬರ್ಗ್ಯಾಸ್ ಸ್ಕೀಮ್ ಉದ್ಘಾಟಿಸಿದರು.  ಮರುದಿನದ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಸಿಂಡಿಕೇಟ್ ಬ್ಯಾಂಕಿನ ಹೊಸ ಯೋಜನೆಗೆ ಮುಖಪುಟ ಮನ್ನಣೆ. ಉಡುಪರಿಗೆ ಮತ್ತಷ್ಟು exposure. ರಾಷ್ಟ್ರಮಟ್ಟದ ಇತರ ಬ್ಯಾಂಕುಗಳನ್ನು ಈ ದಿಸೆಯಲ್ಲಿ ಮನದಟ್ಟು ಮಾಡಿಕೊಡುವ ಜವಾಬ್ದಾರಿ. 1974ರಲ್ಲಿ ಇದಕ್ಕಾಗಿಯೇ ಸಿಂಡಿಕೇಟ್ ಬ್ಯಾಂಕಿಗೆ ರಾಷ್ಟ್ರಮಟ್ಟದ FICCI ಪುರಸ್ಕಾರ ಲಭ್ಯವಾಯಿತು. 1980ರಲ್ಲಿ ಈ ಪರಿಕಲ್ಪನೆಯ ಮೇಲೆ ನಿಂತ ರಾಷ್ಟ್ರಮಟ್ಟದ ಯೋಜನೆ – ‘National Biogas Project’ ಅಸ್ತಿತ್ವಕ್ಕೆ ಬಂತು. ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಬಯೋಗ್ಯಾಸ್ ಪ್ಲಾಂಟ್ಗಳ ಸಂಖ್ಯೆ ಎಂಟು ಸಾವಿರದಿಂದ 5-6 ಮಿಲಿಯನ್ ಮಟ್ಟಕ್ಕೆ ಏರಿದೆ ಎನ್ನುವಲ್ಲಿ ಉಡುಪರ ದೂರಗಾಮಿ ಚಿಂತನೆಯ ಕುರುಹು ಕಾಣಸಿಗುತ್ತದೆ.

1976-77ರ ಸುಮಾರಿಗೆ ಗ್ರಾಮೀಣ ಬ್ಯಾಂಕುಗಳ ಪರಿಕಲ್ಪನೆ ಭಾರತೀಯ ಬ್ಯಾಂಕಿಂಗ್ ಜಗತ್ತಿನ ಎದುರು ಬಂದಾಗ, ಸಿಂಡಿಕೇಟ್ ಬ್ಯಾಂಕ್ ಮೊದಲಿಗೆ ಹುಟ್ಟು ಹಾಕಿದ್ದು ದೂರದ ಉತ್ತರ ಪ್ರದೇಶದಲ್ಲಿ ಪ್ರಥಮ ಬ್ಯಾಂಕ್. ಅನತಿ ಸಮಯದಲ್ಲಿ ರಿಸರ್ವ್ಬ್ಯಾಂಕ್ ಮತ್ತು ರಾಜ್ಯಸರಕಾರಗಳ ಸಹಭಾಗಿತ್ವದಲ್ಲಿ ಮತ್ತೆ ಒಂಬತ್ತು ಗ್ರಾಮೀಣ ಬ್ಯಾಂಕುಗಳು. ಈ ವಿಭಾಗದ ನಿರ್ವಹಣೆ ಕೆ.ಎಂ. ಉಡುಪ ಮತ್ತು ಕೆ.ವಿ. ಬೆಳಿರಾಯರ ಕೈಯಲ್ಲಿ. 1976ರಿಂದ 80ರ ಅವಧಿಯಲ್ಲಿ ತಲಾ 5 ಗ್ರಾಮೀಣ ಬ್ಯಾಂಕುಗಳ ನಿರ್ದೇಶಕರಾಗಿ ಇವರಿಬ್ಬರದ್ದು ಮಹತ್ವಪೂರ್ಣ ಕೆಲಸ. 1980ರ ನಂತರ ಗ್ರಾಮೀಣ ಬ್ಯಾಂಕುಗಳ ಒಟ್ಟು ನಿರ್ವಹಣೆ ಉಡುಪರ ಕೈಗೆ. ಈ ಅವಧಿಯಲ್ಲಿ ಅಧಿಕಾರ ವಿಕೇಂದ್ರೀಕರಣ, ನೌಕರರ ಆಯ್ಕೆ ಮತ್ತು ತರಬೇತಿ, ಗ್ರಾಮೀಣ ಬ್ಯಾಂಕುಗಳಲ್ಲಿ ಕಾರ್ಯಕ್ಷಮತೆಯ ವೃದ್ಧಿ ಮುಂತಾದ ನಿಟ್ಟಿನಲ್ಲಿ ಉಡುಪರದ್ದು ಅರ್ಥಪೂರ್ಣ ಹೆಜ್ಜೆ. ತರಬೇತಿಯ ಮಾತು ಬಂದಾಗ ಈ ಬ್ಯಾಂಕುಗಳ ಮೌಲ್ಯ, ಕ್ಷಮತೆ ಮತ್ತು ಕಾರ್ಯವೈಖರಿ ಮಾತೃ ಸಂಸ್ಥೆಯಿಂದ ಸಂಪೂರ್ಣ ವಿಭಿನ್ನ ಎಂಬ ಕಾರಣಕ್ಕೆ ಉಡುಪರು ಪ್ರತ್ಯೇಕ ತರಬೇತಿ ಸಂಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದರು. ಗುರಗಾಂವ್, ಅನಂತಪುರ, ಕಣ್ಣಾನೂರ್ ಮತ್ತು ಧಾರವಾಡಗಳಲ್ಲಿ ನಾಲ್ಕು ಗ್ರಾಮೀಣ ಬ್ಯಾಂಕ್ ತರಬೇತಿ ಸಂಸ್ಥೆ (RBTC) ಗಳ ಸ್ಥಾಪನೆಗೆ ಕಾರಣಕರ್ತರಾದರು. ಭಾರತದಲ್ಲಿ ಗ್ರಾಮೀಣ ಬ್ಯಾಂಕ್ ಸಂಸ್ಕೃತಿಯ ಕುರಿತು ಮಾತನಾಡುತ್ತ ಕೆ.ಕೆ. ಪೈಯವರು ಉಡುಪರ ಕೊಡುಗೆಯ ಪ್ರಸ್ತಾಪವಿಲ್ಲದೆ ಈ ಕುರಿತಾದ ಯಾವ ಚರ್ಚೆಯೂ ಪರಿಪೂರ್ಣವಾಗದು ಎಂದಿರುವುದು ಇಲ್ಲಿ ಉಲ್ಲೇಖಾರ್ಹ.

1980ರಲ್ಲಿ ಸಿಂಡಿಕೇಟ್ ಫಾರ್ಮ್ ಕಾರ್ಡ್ ಎಂಬ ಯೋಜನೆ ಆರಂಭ ವಾದದ್ದೂ ಉಡುಪರ ನಿರ್ದೇಶನದಲ್ಲಿಯೇ. ರೈತ ಯಾವುದೇ ಕೃಷಿ ಸಂಬಂಧಿ ವ್ಯಾಪಾರಿ ಯಲ್ಲಿ ಹೋಗಿ, ತಮ್ಮ ಕಾರ್ಡನ್ನು ತೋರಿಸಿ, ಬೀಜ, ಗೊಬ್ಬರ ಮತ್ತು ರೋಗನಾಶಕಗಳನ್ನು ಖರೀದಿ ಮಾಡುವ ಅವಕಾಶ ಮತ್ತು ಅವುಗಳ ಬೆಲೆ ಬ್ಯಾಂಕ್ ಸಾಲದ ರೂಪದಲ್ಲಿ ನೇರ ಪಾವತಿ. ಕ್ರೆಡಿಟ್ ಕಾರ್ಡ್ ಕಲ್ಪನೆ ಭಾರತಕ್ಕೆ ಕಾಲಿಡುವ ಪೂರ್ವದಲ್ಲಿಯೇ ಇಂತಹದೊಂದು ಯೋಜನೆ, ಅದೂ ಕೃಷಿ ಉದ್ದೇಶಿತ ಎನ್ನುವುದಕ್ಕೆ ರಾಷ್ಟ್ರಮಟ್ಟದ ಮಹತ್ವವಿದೆ.

ಉಡುಪರ ಅಧಿಕಾರಾವಧಿಯಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ಬ್ಯಾಂಕು ಪ್ರತ್ಯೇಕ ಬಜೆಟ್ ಎತ್ತಿಡುವ ಪರಂಪರೆಯೂ ಆರಂಭವಾಯಿತು. ಬ್ಯಾಂಕಿನ ಶಾಖೆಗಳು ಮಾಹಿತಿ ಶಿಬಿರ, ತಜ್ಞರ ಸಲಹೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಡುವ, ಮತ್ತು ತನ್ಮೂಲಕ ಬ್ಯಾಂಕಿನ ಇಮೇಜ್ ಬೆಳೆಸುವ ಪರಿಕಲ್ಪನೆಯನ್ನು ಸಾಮಾನ್ಯ ಜನಗ್ರಾಹ್ಯವನ್ನಾಗಿಸಿದ ಒಂದು ಕ್ರಾಂತಿಯೂ ಸಾಧ್ಯವಾಯಿತು. ಬ್ಯಾಂಕಿನ ಹಿರಿಯ ಅಧಿಕಾರಿಗಳಾಗಿದ್ದು ಮತ್ತೆ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದ ಡಾ. ಎನ್.ಕೆ. ತಿಂಗಳಾಯರು ಈ ಯೋಜನೆಯ ಬೆಂಗಾವಲಿಗೆ ನಿಂತಿದ್ದರು.

1980ರ ಸುಮಾರಿಗೆ ಟಿ.ಎ. ಪೈಗಳು ದೆಹಲಿ ಬಿಟ್ಟು ಮಣಿಪಾಲಕ್ಕೆ ಹಿಂದಿರುಗಿದ ಹೊತ್ತಿಗೆ ಫೋರ್ಡ್ ಫೌಂಡೇಶನ್ನಿನಿಂದ ಮಣಿಪಾಲ ಇಂಡಸ್ಟ್ರಿಯಲ್ ಟ್ರಸ್ಟ್ಗೆ ಒಂದು ದೊಡ್ಡ ಮೊತ್ತದ ಅನುದಾನ ಬಂದಿತ್ತು. ಟಿ.ಎ. ಪೈಗಳು ಕೆ.ಎಂ. ಉಡುಪರನ್ನು ಕರೆಸಿ, ಈ ಅನುದಾನವನ್ನು ಜನೋಪಯೋಗಿಯಾಗಿ ಬಳಸಿಕೊಳ್ಳುವತ್ತ ಒಂದು ಹೊಸ ಯೋಜನೆ ಯನ್ನು ಕಲ್ಪಿಸುವಂತೆ ಆದೇಶವಿತ್ತರು. ಈ ಆದೇಶದ ಫಲಶ್ರುತಿ ಗ್ರಾಮ ವಿಕಾಸ ಕೇಂದ್ರ (RDC). ಮಣಿಪಾಲ ಇಂಡಸ್ಟ್ರಿಯಲ್ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಸಿಂಡಿಕೇಟ್ ಎಗ್ರಿಕಲ್ಚರಲ್ ಫೌಂಡೇಶನ್ನಿನ ಸಹ ಪ್ರಾಯೋಜಕತ್ವದಲ್ಲಿ 1980 ರಲ್ಲಿ ಆರಂಭವಾದ RDC ಒಂದು ದೃಷ್ಟಿಯಲ್ಲಿ ಫಾರ್ಮ್ಕ್ಲಿನಿಕ್ ಫಿಲಾಸಪಿಯ ವಿಸ್ತತ ಆವೃತ್ತಿ. ಟಿ.ಎ. ಪೈಯವರೇ ಹೇಳಿದ ಒಂದು ಮಾತು ಈ ಯೋಜನೆಯ ಧೀ ಮಂತ್ರ. ಅರವತ್ತೆಂಟು ಕೋಟಿ ಭಾರತೀಯರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಅಸಮರ್ಥರಾದರೆ ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ. ಕುಂದಿದ ಆತ್ಮವಿಶ್ವಾಸವನ್ನು, ರಾಷ್ಟ್ರೀಯ ಪ್ರಜ್ಞೆ ಮತ್ತು ಸಾಧ್ಯತೆಗಳ ತಳಗಟ್ಟಿನ ಮೇಲೆ ಪುನರುತ್ಥಾನಗೊಳಿಸಿ, ಇಡೀ ಜನಸಮುದಾಯವನ್ನು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಜ್ಜುಗೊಳಿಸಬೇಕಾಗಿದೆ. ನಮ್ಮ ಮಾನಸಿಕ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಭವ್ಯ ಭವಿಷ್ಯತ್ತಿನ ಕಲ್ಪನೆಯೊಂದಿಗೆ ಗುರಿ ಸಾಧಿಸಬೇಕು. ಮನಸ್ಸು ಮಾಡಿದರೆ ನಮಗಿದು ಅಸಾಧ್ಯವಲ್ಲ. (RDC) ಯ ನಿರ್ದಿಷ್ಟ ಉದ್ದೇಶವೆಂದರೆ ಪ್ರಗತಿಗೆ ಸ್ಪಂದಿಸುವ ಗ್ರಾಮೀಣ ಭಾಗದ ಆಯ್ಕೆ, ಸಂಪೂರ್ಣವಾಗಿ ತೊಡಗಿಕೊಳ್ಳುವ ತಳಮಟ್ಟದ ಕಾರ್ಯಕರ್ತ ಪಡೆಯ ಕಟ್ಟೋಣ ಮತ್ತು ಖಚಿತ ಅವಧಿಯಲ್ಲಿ ಸಮಗ್ರ ಬೆಳವಣಿಗೆ. ಉಡುಪಿ, ಕಾರ್ಕಳ ತಾಲೂಕುಗಳ ಹಿಂದುಳಿದ 51 ಗ್ರಾಮಗಳನ್ನು ಆಯ್ಕೆ ಮಾಡಿ, ಸಂಪೂರ್ಣವಾಗಿ ತೊಡಗಿಕೊಳ್ಳಬಲ್ಲ ಕಾರ್ಯಕರ್ತರ ಮೂಲಕ ಸುಮಾರು 15,000 ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಯನ್ನು ಮೊದಲ ಹಂತದ ಗುರಿಯಾಗಿ ನಿಶ್ಚಯಿಸಲಾಯಿತು. ಪ್ರತಿ ಕುಟುಂಬಕ್ಕೆ ಮನೆ, ಆರೋಗ್ಯ, ಶುಚಿ, ಶಿಕ್ಷಣ, ಸ್ತ್ರೀ ಸಬಲೀಕರಣಗಳನ್ನು ಸಾಧ್ಯ ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿ 500 ಫಲಾಕಾಂಕ್ಷಿಗಳಿಗೆ ಒಬ್ಬ ಕಾರ್ಯಕರ್ತನ ಲೆಕ್ಕದಲ್ಲಿ ಅನುಷ್ಠಾನಕ್ಕೆ ತರಲಾಯಿತು.

ಗ್ರಾಮ ವಿಕಾಸ ಕೇಂದ್ರ (RDC) ಯ ಮೂಲೋದ್ದೇಶವೇ ಈ ಕುಟುಂಬಗಳನ್ನು ಸ್ವಸಂಪೂರ್ಣ ಮತ್ತು ಸ್ವಯಂಧಾರಕವನ್ನಾಗಿಸುವುದು; ಹೊಸ ಆರ್ಥಿಕ ಕಾರ್ಯಕ್ರಮಗಳನ್ನು ಗುರುತಿಸಿ, ಪ್ರೋಜಡವಾಗಿ ಉಳಿದ ಜನಶಕ್ತಿಯನ್ನು ಸಮಗ್ರವಾಗಿ ಬಳಸಿಕೊಂಡು, ಕೊನೆಯ ಪಕ್ಷ ಅವರ ಮೂಲಭೂತ ಅಗತ್ಯಗಳನ್ನು ಪೂರೈಸಬಲ್ಲಷ್ಟು ಆದಾಯವನ್ನು ತಂದುಕೊಡುವುದು. ಈ ಫಲಾನುಭವಿಗಳ ಕಾರ್ಯಕ್ಷಮತೆಯನ್ನು ಮೊದಲಿಗೆ ನಿರ್ಣಯಿಸುವುದು ಅವರ ದೈನಂದಿನ ಆಹಾರದ ಪೋಷಕಾಂಶಗಳ ಮಟ್ಟ ಮತ್ತು ಬದುಕಿನ ಅತಿಸಾಮಾನ್ಯ ಅಗತ್ಯಗಳ ಲಭ್ಯತೆ ಎನ್ನುವುದನ್ನು RDC ಗಮನಕ್ಕೆ ತೆಗೆದುಕೊಂಡು, ವಿವಿಧ ಸರಕಾರಿ/ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ, ಬಟ್ಟೆ, ಆಶ್ರಯ, ಆರೋಗ್ಯದ ಅಗತ್ಯಗಳನ್ನು ಪೂರೈಸುವಲ್ಲಿ ಶ್ರಮಿಸಲಾಯಿತು. ಹೆಂಗಸರು ಮತ್ತು ಮಕ್ಕಳನ್ನು ಗುರಿಯಾಗಿಟ್ಟುಕೊಂಡೇ ನಿಶ್ಚಿತ ಯೋಜನೆಗಳನ್ನು ಸೃಷ್ಟಿಸಲಾಯಿತು. RDCಯ ಒಟ್ಟು ಪರಿಕಲ್ಪನೆಯೇ ದೂರಗಾಮಿ ಯೋಜನೆ. ಐದು ವರ್ಷಗಳ ಕೊನೆಯಲ್ಲಿ ನಡೆಸಿದ ಒಂದು ವಿಶ್ಲೇಷಣೆಯಿಂದ ಲಭ್ಯವಾದ ಮಾಹಿತಿಯೆಂದರೆ – ಈ ಮೂಲಕ ಜನರಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿನ ಹೊಸ ಸಂಶೋಧನೆಗಳನ್ನು ಒಪ್ಪಿಕೊಳ್ಳುವ ಮನೋಸ್ಥಿತಿ, ಆಹಾರದಲ್ಲಿ ಪೋಷಕಾಂಶಗಳ ಅಗತ್ಯದ ಕುರಿತ ಜಾಗೃತಿ, ಫಲಾನುಭವಿಗಳ ಆರ್ಥಿಕ ಸ್ಥಿತಿಯಲ್ಲಿ ಖಚಿತ ಸುಧಾರಣೆ, ಸರಕಾರದಿಂದ ಲಭ್ಯವಿರುವ ಸವಲತ್ತುಗಳ ಕುರಿತು ಸಾಕಷ್ಟು ಮಾಹಿತಿ, ಉದ್ದೇಶಿತ ಫಲಾನುಭವಿಗಳನ್ನು ತಲುಪುವ ನೇರ ಸಾಧ್ಯತೆ ಮತ್ತು ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಸಾಧ್ಯವಾಗಿತ್ತು. ಈ ಕಾರ್ಯಕ್ರಮದ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ (1980-85) ತಾನು ಗುರಿಯಾಗಿಟ್ಟುಕೊಂಡ 51 ಗ್ರಾಮಗಳಲ್ಲಿ 100% ಶಿಕ್ಷಣವನ್ನು RDC  ಸಾಧ್ಯಮಾಡಿಕೊಟ್ಟಿತ್ತು ಎನ್ನುವುದೂ ಇಲ್ಲಿ ಗಮನಾರ್ಹ. ಈ ಐದು ವರ್ಷಗಳಲ್ಲಿ ಸಾಧ್ಯವಾದ ಬೆಳವಣಿಗೆಯ ವರದಿಯನ್ನು ಅವಲೋಕಿಸಿದ ಫೋರ್ಡ್ ಫೌಂಡೇಶನ್ ಮುಂದೆ 1959ರಲ್ಲಿ NIBMನಲ್ಲಿ ನಡೆಸಿದ ಯಶಸ್ವಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತ ಅಂತರರಾಷ್ಟ್ರೀಯ ಸೆಮಿನಾರ್ಗೆ ಆಯ್ಕೆಯಾದ ಎಂಟು ಪ್ರಬಂಧಗಳಲ್ಲಿ ಒಂದನ್ನು ಪ್ರಸ್ತುತಪಡಿಸುವ ಅವಕಾಶವನ್ನು ಸಿಂಡಿಕೇಟ್ ಬ್ಯಾಂಕಿಗೆ ಕೊಟ್ಟದ್ದು ಮಾತ್ರವಲ್ಲ, ಆಗ ಬ್ಯಾಂಕಿನ ಕಾರವಾರದ ವಲಯದ ಮುಖ್ಯಸ್ಥರಾಗಿದ್ದ ಉಡುಪರಿಗೆ ಒಂದು ಹೊತ್ತಿನ ನಿಯಂತ್ರಕ (moderator) ಜವಾಬ್ದಾರಿಯನ್ನೂ ನೀಡಿ ಗೌರವಿಸಿತ್ತು.

ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಬೆಳ್ತಂಗಡಿ ತಾಲೂಕಿನ 18,500 ಕುಟುಂಬಗಳನ್ನು ಸ್ವಯಂ ಸಂಪೂರ್ಣರನ್ನಾಗಿಸುವ ಉದ್ದೇಶದಿಂದ ಆರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಂದು ದೃಷ್ಟಿಯಲ್ಲಿ RDCಯ ವಿಸ್ತತ ಆವೃತ್ತಿ ಎನ್ನುವುದನ್ನೂ ಇಲ್ಲಿ ಗಮನಿಸಬಹುದು.

1984ರ ಸುಮಾರಿಗೆ ಸಿಂಡಿಕೇಟ್ ಬ್ಯಾಂಕ್ ತನ್ನ ಕೆಲವು ಆಯ್ದ ಶಾಖೆಗಳನ್ನು ಸಮಗ್ರ ಗ್ರಾಮೀಣಾಭಿವೃದ್ಧಿ ಶಾಖೆಗಳೆಂದು ಆಯ್ಕೆ ಮಾಡಿ, ಆ ಶಾಖೆಗಳಿಗೆ ಸವಲತ್ತುಗಳನ್ನು, ತಾಂತ್ರಿಕ ತಜ್ಞರ ತಂಡವನ್ನು ಒದಗಿಸಿ ಆ ಶಾಖೆಯ ಅಧೀನ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಸಾಧ್ಯ ಮಾಡಿಕೊಡಲು ಪ್ರಯತ್ನಿಸಿತ್ತು. ಶಾಖಾ ಮಟ್ಟದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮಗಳ ಅನುಷ್ಠಾನ ಆರಂಭವಾದದ್ದೂ ಈ ಅವಧಿಯಲ್ಲಿಯೇ. ಬ್ಯಾಂಕಿನ ಕೃಷಿ ವಿಭಾಗದಲ್ಲಿ ಆ ದಿನಗಳಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಉಡುಪರು ಈ ನಿಟ್ಟಿನಲ್ಲಿ ಗುರುತರವಾದ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸಿದ್ದರು.

* * *

ಸುದೀರ್ಘ ಕಾಲ ವಿವಿಧ ಪದೋನ್ನತಿಗಳಿಗೆ ಹೊರತಾಗಿಯೂ ಕೆ.ಎಂ. ಉಡುಪರು ಬ್ಯಾಂಕಿನ ಪ್ರಧಾನ ಕಚೇರಿಯ ಕೃಷಿ ಸಾಲ ಮತ್ತು ಅಭಿವೃದ್ಧಿ ವಿಭಾಗದ ನಿರ್ವಾಹಕರಾಗಿ ಉಳಿದದ್ದೊಂದು ಇತಿಹಾಸ.  ಈ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಕೃಷಿ ಪದವೀಧರರನ್ನು ತೊಡಗಿಸಿಕೊಳ್ಳುವ ಒಂದು ಸಂಪ್ರದಾಯವನ್ನೇ ಅವರು ಹುಟ್ಟು ಹಾಕಿದರು. 1200ಕ್ಕೂ ಹೆಚ್ಚು ಕೃಷಿ ಪದವೀಧರ, ಸ್ನಾತಕೋತ್ತರರ ಆಯ್ಕೆ, ತರಬೇತಿ ಮತ್ತು ಬೆಳವಣಿಗೆಯಲ್ಲಿ ಅವರ ಪಾತ್ರ ಹಿರಿದಾದುದು. ಉಡುಪರ ಗರಡಿಯಲ್ಲಿ ನುರಿತ ಏಳು ಜನ ಮುಂದೆ ಬ್ಯಾಂಕಿನ ಜನರಲ್ ಮ್ಯಾನೇಜರ್ಗಳಾದರು ಎಂಬೊಂದು ಮಾತು ಸಾಕು, ಅವರ ಮಾರ್ಗದರ್ಶನದ ಮಹತ್ವವನ್ನು ಗುರುತಿಸಲು. 1987ರಲ್ಲಿ ಸಹಾಯಕ ಮಹಾಪ್ರಬಂಧಕ ನಾಗಿ ಪದೋನ್ನತರಾದ ಉಡುಪರು 1989ರಲ್ಲಿ ಬ್ಯಾಂಕಿನ ಕಾರವಾರ ವಿಭಾಗದ ಚುಕ್ಕಾಣಿ ಹಿಡಿದರು. 1990ರ ಜುಲೈ ತನಕದ ಈ ಅವಧಿ ಉಡುಪರನ್ನು ಮತ್ತಷ್ಟು ಪಕ್ವಗೊಳಿಸಿತು. 1990ರ ಫೆಬ್ರವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ಸುಮಾರು 100 ಕೋಟಿ ರೂ. ವ್ಯಾಪ್ತಿಯ ಉತ್ತರ ಕನ್ನಡ ಅಭಿವೃದ್ಧಿ ಯೋಜನೆಯ ನೀಲನಕ್ಷೆಯನ್ನು ಉಡುಪರ ನೇತೃತ್ವದ ತಂಡ ತಯಾರಿಸಿತು. ಹೊಸ ಪರ್ಯಾಯ ಬೆಳೆಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಿರುವ ಈ ಮಹತ್ವಾಕಾಂಕ್ಷೆಯ ಕಲ್ಪನೆಯ ಹಿಂದೆ ಉಡುಪರು ತಮ್ಮ ಮಲೇಶಿಯಾ ಪ್ರವಾಸ ಕಾಲದಲ್ಲಿ ಕಂಡು ಅಧ್ಯಯನಗೈದ ಅಲ್ಲಿನ ಬೆಳವಣಿಗೆಯ ಯೋಜನೆಯ ಪರಿಕಲ್ಪನೆಯ ರೂಪುರೇಷೆಗಳಿದ್ದವು. ಈ ಕಾರ್ಯಕ್ರಮದ ಉದ್ಘಾಟನೆಯಂದು ನಡೆದ ಒಂದು ಪುಟ್ಟ ಘಟನೆ ಮರುದಿನ ಸುದ್ದಿ ಮಾಧ್ಯಮದಲ್ಲಿ ವಿಸ್ತತವಾದ ಪ್ರಚಾರ ಪಡೆಯಿತು. ಕಾರ್ಯಕ್ರಮದ ವೇದಿಕೆಯಿಂದ ಆಗ ಕಾರವಾರದ ಎಂ.ಪಿ. ಆಗಿದ್ದ ದೇವರಾಯ ನಾಯಕರು ಕೇಂದ್ರ ಸರಕಾರದ ಬ್ಯಾಂಕಿಂಗ್ ರಾಜ್ಯ ಸಚಿವ ಎಡ್ವರ್ಡ್ಫೆಲೆರೂ ಅವರನ್ನುದ್ದೇಶಿಸಿ ಇಷ್ಟೆಲ್ಲ ಜನಹಿತ ಕೆಲಸಗಳನ್ನು ಮಾಡಿಕೊಡುತ್ತಿರುವ ಸಿಂಡಿಕೇಟ್ ಬ್ಯಾಂಕನ್ನು ಉಳಿಸಿಕೊಡಬೇಕು ಎಂದು ವಿನಂತಿಸಿಕೊಂಡರು. ಆ ದಿನಗಳಲ್ಲಿ ಸಿಂಡಿಕೇಟ್ ಬ್ಯಾಂಕಿನ ವಿರುದ್ಧ ನಡೆಯುತ್ತಿದ್ದ ವ್ಯವಸ್ಥಿತ ಅಪಪ್ರಚಾರ ಪ್ರಾಯಶಃ ಅವರ ಮನಸಿನಲ್ಲಿತ್ತು. ಇದಕ್ಕೆ ಉತ್ತರವಾಗಿ ಕೇಂದ್ರ ಮಂತ್ರಿಗಳು ಸಿಂಡಿಕೇಟ್ ಬ್ಯಾಂಕಿಗಿಂತ ಹೆಚ್ಚು ಲಾಭ ಗಳಿಸುತ್ತಿರುವ ಬ್ಯಾಂಕುಗಳಿರಬಹುದು. ಆದರೆ ಸಿಂಡಿಕೇಟ್ ಬ್ಯಾಂಕಿಗಿಂತ ಹೆಚ್ಚಿನ ಸಾಮಾಜಿಕ ಬದ್ಧತೆ, ಜನಹಿತಗಳನ್ನು ಗಮನ ದಲ್ಲಿರಿಸಿಕೊಂಡ ಇನ್ನೊಂದು ಬ್ಯಾಂಕ್ ಇಲ್ಲ. ಯಾವ ಕಾರಣಕ್ಕೂ ಸಿಂಡಿಕೇಟ್ ಬ್ಯಾಂಕ್ ತನ್ನ ಅನನ್ಯತೆ (identity) ಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಭರವಸೆಯಿತ್ತರು.

1992ರ ಜುಲೈಯಿಂದ ಸೆಪ್ಟೆಂಬರ್ ತನಕ ಉಡುಪರು ಸಿಂಡಿಕೇಟ್ ಬ್ಯಾಂಕಿನ ಬೆಂಗಳೂರು ವಲಯದ ಸಹಾಯಕ ಮಹಾಪ್ರಬಂಧಕರಾಗಿ ಕಾರ್ಯನಿರ್ವಹಿಸಿದರು. ಈ ಅಲ್ಪ ಅವಧಿಯಲ್ಲಿ ಡಾಲರ್ಸ್ ಕಾಲನಿ ಮತ್ತು ನಂದಿನಿ ಲೇಔಟ್ನ ಅಧಿಕಾರಿಗಳ ವಸತಿ ಗೃಹಗಳನ್ನು ಬ್ಯಾಂಕ್ ವಶಕ್ಕೆ ತಂದು ಕೊಡುವಲ್ಲಿ ಶ್ರಮಿಸಿದರು.

ಇದೇ ಹೊತ್ತಿಗೆ ರಾಷ್ಟ್ರವ್ಯಾಪಿ ಗ್ರಾಮೀಣ ಬ್ಯಾಂಕುಗಳು ಒಂದು ತಳ್ಳಂಕದ ಸ್ಥಿತಿಗೆ ತಳ್ಳಲ್ಪಟ್ಟಿದ್ದವು. ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿಸಿದ ಮಲಪ್ರಭಾ ಗ್ರಾಮೀಣ ಬ್ಯಾಂಕ್ 1992  ಮಾರ್ಚ್ ಬ್ಯಾಲನ್ಸ್ ಶೀಟ್ನಲ್ಲಿ ಗಾಬರಿ ಹುಟ್ಟಿಸುವಷ್ಟು ನಷ್ಟವನ್ನು ತೋರಿಸಿತ್ತು. ಬ್ಯಾಂಕಿನ ನೌಕರರೂ, ಅಧಿಕಾರಿಗಳೂ ಚೈತನ್ಯವನ್ನೇ ಕಳೆದುಕೊಂಡಂತಿದ್ದರು. ಹದಿನಾರು ವರ್ಷಗಳ ಹಿಂದೆ ತಾವೇ ನೀಲನಕ್ಷೆ ಹಾಕಿಕೊಟ್ಟ ಗ್ರಾಮೀಣ ಬ್ಯಾಂಕಿನ ಪುನರುತ್ಥಾನಕ್ಕೆ ತಾವೇ ಹೋಗಬೇಕಾದ ಒಂದು ಉಭಯಸಂಕಟ, ಒಂದು ಸವಾಲು ಉಡುಪರ ಪಾಲಿಗೆ. 1992ರ ಸೆಪ್ಟೆಂಬರ್ನಲ್ಲಿ ಉಡುಪರು ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದರು. ಮುಂದಿನದ್ದು ಇತಿಹಾಸ.

ದೇಶದ ಪ್ರತಿಷ್ಠಿತ ಮೆನೇಜ್ಮೆಂಟ್ ಸಂಸ್ಥೆ II M : ಅಹ್ಮದಾಬಾದ್ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಪುನರುತ್ಥಾನದ ಕಥೆಯನ್ನು ಮುಂದಿನ ವರ್ಷಗಳಲ್ಲಿ ಅಧ್ಯಯನಕ್ಕೆ ಆಯ್ಕೆ (case study) ಮಾಡಿಕೊಂಡಿತೆಂಬ ಒಂದು ವಿಷಯ ಸಾಕು, ಉಡುಪರ ನಾಯಕತ್ವದ ವೈಶಿಷ್ಟ್ಯವನ್ನು ಹೇಳಲಿಕ್ಕೆ.

1994ರ ನವೆಂಬರ್ನಲ್ಲಿ ಉಡುಪರಿಗೆ ಉಪ ಮಹಾಪ್ರಬಂಧಕ (DGM) ಆಗಿ ಪದೋನ್ನತಿ ಪ್ರಾಪ್ತವಾಯಿತು. ಅದೇ ತಿಂಗಳ ಕೊನೆಯ ವಾರ ಅವರು ಬ್ಯಾಂಕಿನ ಅತಿ ದೊಡ್ಡ ವಲಯ, ಸುಮಾರು 300 ಶಾಖೆಗಳನ್ನು ಒಳಗೊಂಡ ಹೈದರಾಬಾದ್ನ ಚುಕ್ಕಾಣಿಯನ್ನು ಹಿಡಿದರು. ಈ ಹೊತ್ತಿಗೆ ಅವರು ಸೌರಶಕ್ತಿ ಸದುಪಯೋಗದ  ವಕ್ತಾರರಾಗಿ ಬಿಟ್ಟಿದ್ದರು. ಹೈದರಾಬಾದ್ನಲ್ಲಿ ರಾಷ್ಟ್ರಮಟ್ಟದ ಸೋಲಾರ್ ಕಾನ್ಫರೆನ್ಸ್ ನಡೆಸಿಕೊಟ್ಟರು. ಸೌರಶಕ್ತಿಗಾಗಿ ಬ್ಯಾಂಕ್ ಸಾಲ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು.

1996ರ ಆಗಸ್ಟ್ ತಿಂಗಳ ಕೊನೆಯ ದಿನ ಉಡುಪರು ಲೇಖನಿಯನ್ನು ಕೆಳಗಿರಿಸಿ, ಬದುಕಿಗೆ ಸಾರ್ಥಕತೆಯನ್ನು ತಂದು ಕೊಟ್ಟ ಬ್ಯಾಂಕಿಂಗ್ ವೃತ್ತಿಯಿಂದ ನಿವೃತ್ತರಾದರು. ಒಂದು ಕಾಲದಲ್ಲಿ ತಮ್ಮ ರೋಲ್ ಮಾಡೆಲ್ – ವೃತ್ತಿ ಜೀವನಕ್ಕೆ ಆದರ್ಶಪ್ರಾಯರೆಂದೇ ತಿಳಿದಿದ್ದ ಹಿರಿಯ ಬ್ಯಾಂಕರ್ ವಿ.ಎಸ್. ಪರ್ಕಳರು ಕುಳಿತ ಕುರ್ಚಿಯ ಮೇಲೆ ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳನ್ನು ಉಡುಪರು ಕಳೆಯುವಂತಾದುದು ಬರಿದೆ ಆಕಸ್ಮಿಕವಿದ್ದಿರಲಿಕ್ಕಿಲ್ಲ!

1994ರ ನವೆಂಬರ್ನಲ್ಲಿ ಉಡುಪರು ಸಿಂಡಿಕೇಟ್ ಬ್ಯಾಂಕಿನ ಹೈದರಾಬಾದ್ ವಲಯದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು ಎಂದೆನಷ್ಟೆ? ಅಧಿಕಾರ ಸ್ವೀಕರಣದ ದಿನ ನಡೆದ ಒಂದು ಘಟನೆ ಅವರನ್ನು ನಿತ್ಯ ಅಲುಗಿಸುತ್ತಾ ಉಳಿದು ಬಿಟ್ಟಿದೆ. ಒಂದು ಪರ್ವ ಕಾಲದಲ್ಲಿ ಸಿಂಡಿಕೇಟ್ ಬ್ಯಾಂಕನ್ನು ಆಂಧ್ರದಲ್ಲಿ ಪ್ರವರ್ಧಮಾನಕ್ಕೆ ತಂದ ಹಿರಿಯ ಬ್ಯಾಂಕರ್ ಶ್ರೀ ವಿ.ಎಸ್. ಪರ್ಕಳರ ಆಶೀರ್ವಾದ ಪಡೆಯಲು, ಆ ದಿನಗಳಲ್ಲಿ ಸಹಾಯಕ ಜನರಲ್ ಮ್ಯಾನೇಜರ್ಗಳಾಗಿದ್ದ ಬಿ.ಎಲ್. ಶೆಣೈ, ಆರ್.ಕೆ. ಅಬ್ರೊಲ್ ಮತ್ತು ಸಂಪರ್ಕಾಧಿಕಾರಿ ಸುಧಾಕರ್ರೊಡನೆ ಉಡುಪರು ಅವರನ್ನು ಭೇಟಿಯಾದರು. ಬಾಗಿಲು ತೆರೆದು ಅವರನ್ನು ಸ್ವಾಗತಿಸಿದ್ದ ಶ್ರೀಮತಿ ಪರ್ಕಳರು, ಮುಂದಿನ ಸ್ವಲ್ಪ ಹೊತ್ತಿನಲ್ಲೇ, ಈ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲೇ ಉಬ್ಬಸದ ಏರುಸಿರಿನಿಂದ ತೀರಿಕೊಂಡರು. ಇಳಿವಯಸ್ಸಿನ ಪರ್ಕಳರು ಆತಂಕಗೊಂಡರು. ಪರ್ಕಳರ ಪುತ್ರ (ವೈದ್ಯ)ನನ್ನು ಸಂಪರ್ಕಿಸುವುದರಿಂದ ಹಿಡಿದು ಮುಂದಿನೆಲ್ಲ ಕೆಲಸಗಳನ್ನು ಬ್ಯಾಂಕ್ ಅಧಿಕಾರಿಗಳೇ ನಿರ್ವಹಿಸಿದರು. ಸಿಂಡಿಕೇಟ್ ಬ್ಯಾಂಕಿನ ಹಿರಿಯ ಅಧಿಕಾರಿಯಾಗಿ ಆಂಧ್ರದಲ್ಲಿ ಬ್ಯಾಂಕನ್ನು ಕಟ್ಟಲು ಅನುಪಮ ಸೇವೆ ಸಲ್ಲಿಸಿ, ತನಗಾಗಿ ಏನನ್ನೂ ಮಾಡಿಕೊಂಡಿರದ ಪರ್ಕಳರು ಆ ದಿನಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರಂತೆ. ದುರಂತ ನಡೆದ ಹೊತ್ತಿಗೆ ಉಡುಪರು ಹೋಗಿರದೇ ಇದ್ದರೆ ಆ ರಾತ್ರಿಯಿಡೀ ಪರ್ಕಳರು ಅಸಹಾಯಕರಾಗಿಯೇ ಉಳಿದುಬಿಡುತ್ತಿದ್ದರಂತೆ. ತಮ್ಮನ್ನು ಅಲ್ಲಿ ಕರೆಸಿದ್ದು ದೈವಪ್ರೇರಣೆಯೇ ಇರಬೇಕು ಎನ್ನುವುದು ಇವತ್ತೂ ಉಡುಪರ ಅಭಿಪ್ರಾಯ.

* * *

ತಮ್ಮ ಸೇವಾವಧಿಯಲ್ಲಿ ಮತ್ತು ನಿವೃತ್ತಿಯ ಅನಂತರ ಕೂಡಾ ಉಡುಪರು ಹಲವು ಸಮಿತಿ ಮತ್ತು ಪ್ರತಿಷ್ಠಾನಗಳ ಉತ್ತರದಾಯತ್ವವುಳ್ಳ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವುಗಳಲ್ಲಿ ಕೆಲವು ಗುರುತರವಾದ ಜವಾಬ್ದಾರಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು :

1.    ಸಿಂಡಿಕೇಟ್ ಕೃಷಿ ಪ್ರತಿಷ್ಠಾನದಲ್ಲಿ 1966ರಿಂದ 1989ರ ತನಕ ಮತ್ತು 1996 ರಿಂದ 2009ರ ತನಕದ 36 ವರ್ಷಗಳ ಕಾಲ ವಿವಿಧ ಹುದ್ದೆಗಳ ನಿರ್ವಹಣೆ.

2.    ರುಡ್ಸೆಟಿಯಲ್ಲಿ ಮೊದಲ ದಿನದಿಂದ ಆಡಳಿತ ಮಂಡಳಿಯ ಸದಸ್ಯತ್ವ.

3.    ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಕ್ಕಳಿಗೆ ಬುನಾದಿ ಶಿಕ್ಷಣ ಪರಿಕಲ್ಪನೆಯ ರತ್ನಮಾನಸ ನಿರ್ವಹಣಾ ಸಮಿತಿಯ ಸದಸ್ಯರು.

4.    1980ರಲ್ಲಿ ಗ್ರಾಮೀಣ ಬ್ಯಾಂಕಿಂಗ್ಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ತರಬೇತಿ ರೂಪಿಸಲು ನಿಯುಕ್ತವಾದ ಸಮಿತಿಯ ಸದಸ್ಯತ್ವ. ಡಾ. ಎಸ್. ಆರ್. ರಾವ್ ಅಧ್ಯಕ್ಷತೆಯ TRUDEC ಎಂಬ ಈ ಸಮಿತಿಯಲ್ಲಿ ಡಾ. ಹಳದೀಪುರ್ ಮತ್ತು ಕೆ.ವಿ. ಪಟೇಲ್ ಸಹಸದಸ್ಯರು. ಈ ಸಮಿತಿಯ ಸಲಹೆಯಂತೆ ಲಕ್ನೋದಲ್ಲಿ BIRD (Bankers Institute for Rural Development) ಅಸ್ತಿತ್ವಕ್ಕೆ ಬಂತು.

5.    ನಬಾರ್ಡ್ನ ತರಬೇತಿ ಕೇಂದ್ರ BIRD (Lucknow) ಯೋಜನಾ ಸಮಿತಿಯ ಸದಸ್ಯ.

6.    ಭಾರತೀಯ ರಿಸರ್ವ್ಬ್ಯಾಂಕಿನ ಹಲವು ಸಮಿತಿಗಳಲ್ಲಿ ಸಿಂಡಿಕೇಟ್ ಬ್ಯಾಂಕನ್ನು ಪ್ರತಿನಿಧಿಸಿ ಸದಸ್ಯ.

7.    CAB (Pune) ಆಗ CBTC]ಗಾಗಿ, ಗ್ರಾಮೀಣ ಬ್ಯಾಂಕ್ಗಳ ತರಬೇತಿಗೆ ಪಠ್ಯಕ್ರಮ
ಯೋಜನೆಗಾಗಿ ನಿಯೋಜಿತ ಸಮಿತಿಯ ಸದಸ್ಯ.

8.    ಉಡುಪಿಯ ಸರಕಾರೀ ಆಸ್ಪತ್ರೆಯ ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ.

9.    ಸಿಂಡಿಕೇಟ್ ಕೃಷಿ ಪ್ರತಿಷ್ಠಾನದಿಂದ ಕೃಷಿ ಲೋಕ ಮಾಸ ಪತ್ರಿಕೆಗೆ 35 ವರ್ಷಗಳ ಸಂಪಾದಕತ್ವ.

10.   ಮಣಿಪಾಲ ಹೌಸಿಂಗ್ ಸಿಂಡಿಕೇಟ್ನ ಹಿರಿಯ ಸಲಹೆಗಾರನಾಗಿ 1997-2002ರ ಅವಧಿಯಲ್ಲಿ ಕಾರ್ಯ ನಿರ್ವಹಣೆ.

11.    Banking Service Recruitment Board  ನ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ವಲಯಗಳ ಕೃಷಿ ಅಧಿಕಾರಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಣೆ.

12.   ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಗ್ರಾಮೀಣ ನೀತಿ ನಿರೂಪಣ ಸಮಿತಿಗಳಲ್ಲಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಣೆ.

13.   IIM ಅಹ್ಮದಾಬಾದ್, ಬೆಂಗಳೂರು CAB ಪುಣೆ, NIBM ಪುಣೆ, NIRD  ಹೈದರಾಬಾದ್ ಮತ್ತು ವಿವಿಧ ಬ್ಯಾಂಕುಗಳ ತರಬೇತಿ ಕಾಲೇಜುಗಳಲ್ಲಿ ಸಂದರ್ಶಕ ಉಪನ್ಯಾಸಕರಾಗಿ ಗುರುತಿಸಲ್ಪಟ್ಟದ್ದು.

14.   1968ರಲ್ಲಿ ಬ್ಯಾಂಕುಗಳ ಸಾಮಾಜಿಕ ನಿಯಂತ್ರಣ (Social Control of Banks) ಜಾರಿ ಬಂದಾಗ, ವಾಣಿಜ್ಯ ಬ್ಯಾಂಕುಗಳ ಪಠ್ಯನಿರೂಪಣಾ ಸಮಿತಿ (RBI ಆಯೋಜಿತ) ಸದಸ್ಯತ್ವ. ಡಾ. ಪಿ.ಆರ್. ದುಭಾಷಿ ಇದರ ಅಧ್ಯಕ್ಷರು.

15.   IBDP ಸಂಬಂಧಿತ ರಾಷ್ಟ್ರೀಯ ಸಮಿತಿಯ ಸದಸ್ಯತ್ವ.

16.   ಕೆ.ಕೆ. ಪೈ ಅಭಿನಂದನ ಸಮಿತಿಯ ಕಾರ್ಯದರ್ಶಿ.

17.   ಕೆ.ಕೆ. ಪೈ ಟ್ರಸ್ಟಿನ ಕಾರ್ಯನಿರ್ವಾಹಕ ಟ್ರಸ್ಟಿ.

18.   ಸೆಲ್ಕೋ ಇಂಡಿಯಾದ ಡೈರೆಕ್ಟರ್.

19.   ಹಲವು ಗ್ರಾಮೀಣ ಬ್ಯಾಂಕುಗಳ ನಿರ್ದೇಶಕರು (ಅಧಿಕಾರಾವಧಿಯಲ್ಲಿ).

20.  ಉಡುಪಿಯ ಮಹಾತ್ಮಗಾಂಧಿ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸದಸ್ಯ,
ಸಲಹೆಗಾರ.

21.   ವಿನ್ರಾಕ್ ಇಂಟರ್ನ್ಯಾಶನಲ್ನ ಕರ್ಣಧಾರ ಸಮಿತಿಯ ಸದಸ್ಯ.

22.  ಭಾರತೀಯ ವಿಕಾಸ್ಟ್ರಸ್ಟಿನ ಮೆನೇಜಿಂಗ್ ಟ್ರಸ್ಟಿ.

23.  ಸಾಲಿಗ್ರಾಮ ಮಕ್ಕಳ ಮೇಳ – ಆಡಳಿತ ಸಮಿತಿಯ ಸದಸ್ಯ.

* * *

ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಪುನರುಜ್ಜೀವನದ ಕಥೆ

ದೇಶದ ಪ್ರತಿಷ್ಠಿತ ಮೆನೇಜ್ಮೆಂಟ್ ಸಂಸ್ಥೆ IIM : ಅಹ್ಮದಾಬಾದ್ ಕೇಸ್ ಸ್ಟಡಿಗಾಗಿ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಪುನರುಜ್ಜೀವನದ ಕಥೆಯನ್ನು ಆಯ್ಕೆ ಮಾಡಿ ಕೊಂಡಿತ್ತೆಂಬ ಒಂದು ಮಾತು ಸಾಕು, ಈ ಸಾಧನೆಯ ಐತಿಹಾಸಿಕ, ಸಾಮಾಜಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಮಹತ್ವವನ್ನು ಹೇಳಲು. ಈ ಒಂದು ಕಥೆ ಸಾಕು, ಉಡುಪರೆಂಬ ಕೃಷಿ ವಿಜ್ಞಾನಿಯನ್ನು ಮೆನೇಜ್ಮೆಂಟ್ ಗುರು ಎಂದು ಪರಿಚಯಿಸಲು.

ಸೆಪ್ಟೆಂಬರ್ 1992 : ಹದಿನಾರು ವರ್ಷಗಳ ಹಿಂದೆ ತಾವೇ ಕಲ್ಪಿಸಿಕೊಟ್ಟ ಒಂದು ಗ್ರಾಮೀಣ ಬ್ಯಾಂಕಿನ ಅವಸಾನ ಖಚಿತ ಎಂದು ಪರಿಣತರು ಭವಿಷ್ಯ ಹೇಳಿದ ಹೊತ್ತೊಂದರಲ್ಲಿ ಆ ಬ್ಯಾಂಕಿನ ಚುಕ್ಕಾಣಿ ಉಡುಪರೇ ಹಿಡಿಯಬೇಕಾಗಿ ಬಂದುದಕ್ಕಿಂತ ಕ್ರೂರ ವ್ಯಂಗ್ಯ ಇನ್ನೊಂದಿರಲಿಕ್ಕಿಲ್ಲ ! ಉಡುಪರು ಇವತ್ತೂ ನೆನಪಿಸಿಕೊಳ್ಳುವ ಹಾಗೆ, ಆ ಹೊತ್ತು ಅವರೆದುರಿದ್ದುದು, ಅವರ ಮಾನಸ ಗುರುಗಳಾಗಿದ್ದ ಎ. ಕೃಷ್ಣರಾಯರ ಮೇಜಿನ ಮೇಲೆ ಬರೆದಿರಿಸಿದ್ದ ಒಂದು ಹಿತನುಡಿ ಯಾವ ಕೆಲಸವನ್ನಾದರೂ ಮಾಡುವಾಗ, ಅದನ್ನೊಂದು ಉನ್ನತ ಪೂಜೆಯ ರೀತಿಯಲ್ಲಿ ಮಾಡಬೇಕು.

ಅಧಿಕಾರವನ್ನು ಕೈಗೆತ್ತಿಕೊಳ್ಳುವ ಮೊದಲು ಉಡುಪರು ಗ್ರಾಮೀಣ ಬ್ಯಾಂಕಿನ ವಿವಿಧ ಶಾಖೆಗಳ ನಿಕಟಪೂರ್ವ ಸಾಧನೆಯ ಅಧ್ಯಯನ ಮಾಡಿದರು. 210 ಶಾಖೆಗಳು ಯಾವ ಸ್ಥಿತಿಯಲ್ಲಿವೆ, ಅಲ್ಲಿಂದ ಅವು ಮುಂದೆ ಸಾಗಬಹುದಾದ ದಾರಿ ಎಂತಹದು ಎನ್ನುವುದು ಮೊದಲ ಪ್ರಶ್ನೆ. ಈ ಶಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದ ನೌಕರರು – ಅವರ ಮಾನಸಿಕ ಸ್ಥಿತಿ ಏನು, ಅವರನ್ನು ಹೇಗೆ ಉದ್ದೀಪನ ಗೊಳಿಸಬಹುದು ಎನ್ನುವುದು ಎರಡನೆಯ ಪ್ರಶ್ನೆ. ಬ್ಯಾಂಕ್ ಒಟ್ಟಾರೆಯಾಗಿ ವಿಫಲವಾಗಲಿಕ್ಕೆ ಕಾರಣವೇನು, ಎಲ್ಲಿಂದ ಅದಕ್ಕೆ ಚೈತನ್ಯವನ್ನು ತರಬಹುದು ಎನ್ನುವುದು ಮೂರನೆಯ ಪ್ರಶ್ನೆ.

ಉಡುಪರು ಮೊದಲಿಗೆ ಟಿ.ಎ. ಪೈಗಳ ಮಾದರಿಯನ್ನು ಬಳಸಿಕೊಂಡರು. ತಾವು ಬ್ಯಾಂಕಿನಲ್ಲಷ್ಟೇ ಅಧ್ಯಕ್ಷರು. ಹೊರಗಡೆ ಪ್ರತ್ಯೇಕ ಮನುಷ್ಯರು ಎನ್ನುವುದು. ಗೌರವವನ್ನು ಸಂಪಾದಿಸಿಕೊಳ್ಳಬೇಕು; ಸಹಕಾರವನ್ನು ಪಡೆಯಬೇಕು; ಹೊಸ ಪದ್ಧತಿಗಳನ್ನು, ಕ್ರಮಗಳನ್ನೂ, ವಿಕಲ್ಪಗಳನ್ನೂ ನೈಸರ್ಗಿಕವಾಗಿ ವಿಸ್ತರಿಸಬೇಕು – ಇವೆಲ್ಲ ಪೈಗಳ ಮಾರ್ಗ, ಮಾದರಿ.

ಯಾವ ಮೆನೇಜ್ಮೆಂಟ್ ಕೋರ್ಸ್ಗಳನ್ನು ಮಾಡಿರದ ಉಡುಪರು ಮೆನೇಜ್ಮೆಂಟ್ನ ವಿಶಿಷ್ಟ ಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡರು. ಶಾಖೆಗಳ ಮೆನೇಜರ್ಗಳೊಂದಿಗೆ ನೇರ ಸಂಪರ್ಕ ಬೆಳೆಸಿಕೊಂಡರು. ಬ್ಯಾಂಕಿಂಗ್ ಕ್ಷೇತ್ರ ಕಂಡು ಕೇಳಿ ಅರಿಯದ “Open office system” ಎಂಬ ಕ್ರಮವನ್ನು ಅನುಷ್ಠಾನಕ್ಕೆ ತಂದರು. ಅಧ್ಯಕ್ಷರನ್ನು ಭೇಟಿಯಾಗಬೇಕಿದ್ದರೆ ಯಾರೊಬ್ಬರೂ ಕಾಯಬೇಕಾದ ಅಗತ್ಯವಿಲ್ಲ. ತೆರೆದ ಬಾಗಿಲಿನ ಮೂಲಕ ನೇರವಾಗಿ ಅಧ್ಯಕ್ಷರ ಸಮಕ್ಷಮಕ್ಕೆ. (ಇಲ್ಲಿ ಅಂಥಾ ರಹಸ್ಯದ ಸಂಗತಿಯೇನಿದೆ ಬಾಗಿಲು ಮುಚ್ಚಿಟ್ಟು ಮಾತನಾಡಲಿಕ್ಕೆ ಎನ್ನುವುದು ಉಡುಪರ ಸಮಜಾಯಿಷಿ.)

ಬ್ರಾಂಚ್ ಮೆನೇಜರ್ಗಳಿಗಾಗಿ ಉಡುಪರು ಹತ್ತು ಅಂಶಗಳ ಕಾರ್ಯಕ್ರಮ ಪಟ್ಟಿಯೊಂದನ್ನು ಅನುಷ್ಠಾನಕ್ಕೆ ತಂದರು. ಈ ಹತ್ತು ಅಳತೆಗೋಲುಗಳಡಿ ಸಾಧನೆಯ ವರದಿ ನೇರವಾಗಿ ಶಾಖಾಧಿಕಾರಿಯಿಂದ ಬ್ಯಾಂಕಿನ ಅಧ್ಯಕ್ಷರಿಗೆ. ಶಾಖೆಗಳ ಸಾಧನೆಯನ್ನು ಅಧ್ಯಕ್ಷರೇ ತಿಂಗಳಿಗೊಮ್ಮೆ ಅವಲೋಕಿಸುವ ಕ್ರಮ. ಮುಂದಿನ ಆರು ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬ ಶಾಖಾಧಿಕಾರಿಯನ್ನು ಉಡುಪರು ಮುಖತಃ ಭೇಟಿಯಾಗಿ ವಿಚಾರ ವಿನಿಮಯ ನಡೆಸಿದರು. Unit level viability – ಪ್ರತಿಯೊಂದು ಶಾಖೆಯ ಯೋಗ್ಯತಾ ವಿಶ್ಲೇಷಣೆ ಉಡುಪರು ಅಳವಡಿಸಿಕೊಂಡ ವಿಶಿಷ್ಟ ಮಾರ್ಗ. ಪ್ರತಿಯೊಂದು ಶಾಖೆಯ ಸಾಧಕ-ಬಾಧಕ ಗಳನ್ನು ಕೂಲಂಕಷವಾಗಿ ಅಭ್ಯಸಿಸಿ, ಪ್ರತಿ ಶಾಖೆಯ ಪ್ರಾಣಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿದ ಉಡುಪರು, ಸರಕಾರ ಮತ್ತು ಜಿಲ್ಲಾ ಪಂಚಾಯತ್ಗಳ ನೆರವಿನಿಂದ ಶಾಖಾ ಕಟ್ಟಡಗಳ ಮೌಲ್ಯವರ್ಧನೆ ನಡೆಸಿದರು. ಶಾಖೆಗಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಪೂರೈಸಿದರು. ವರ್ಷಾಂತ್ಯದ ಒಳಗೆ ಬ್ಯಾಂಕ್ ತಲುಪಬೇಕಾದ ಒಟ್ಟು ವ್ಯವಹಾರವನ್ನು, ಅದು ಸಾಧ್ಯವಾದರೆ ಮಾತ್ರ ಬ್ಯಾಂಕ್ ಉಳಿಯುತ್ತದೆ ಎನ್ನುವುದನ್ನು ನೌಕರರಿಗೆ ಮನದಟ್ಟು ಮಾಡಿಕೊಟ್ಟರು. ಉಡುಪರ ನಿಷ್ಪಕ್ಷಪಾತ ಕಾರ್ಯವೈಖರಿ ಈ ಹೊತ್ತು ಅವರ ಬೆಂಗಾವಲಿಗೆ ನಿಂತಿತು. ಅಕ್ಷಮ್ಯ ಅಪರಾಧವೆಂದು ಮನದಟ್ಟಾದಾಗ, ಅಪರಾಧಿ ಯಾವ ಒತ್ತಡಗಳನ್ನು ತಂದರೂ ಅಳುಕದೆ ಆತನನ್ನು ಶಿಕ್ಷಿಸಲು ಹಿಂಜರಿಯದ ಉಡುಪರ ಕಾರ್ಯವೈಖರಿ ಬ್ಯಾಂಕಿನುದ್ದಕ್ಕೆ ಒಂದು ಸ್ಪಷ್ಟ ಸಂದೇಶವನ್ನು ಹಬ್ಬಿಸಿತು. SWOT ಕಾರ್ಯವೈಖರಿಯ T ಯನ್ನು ಉಡುಪರು ಬಳಸಿಕೊಂಡ ಬಗ್ಗೆ ಹಲವಷ್ಟು ದಂತಕಥೆಗಳಿವೆ. ಒಂದು ಬೋರ್ಡ್ ಮೀಟಿಂಗ್ನ ಸಂದರ್ಭದಲ್ಲಿ ಉಡುಪರು ಯಾವ ಶಾಖೆಗಳು ಸೆಪ್ಟೆಂಬರ್ನ ಒಳಗೆ ಲಾಭ ಸಾಧ್ಯತೆಗಳನ್ನು ತೋರಿಸುವುದಿಲ್ಲವೋ ಆ ಶಾಖೆಯ ನೌಕರರಿಗೆ ಮುಂದಿನ ತಿಂಗಳ ಸಂಬಳ ಸಿಗುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಬಿಟ್ಟರಂತೆ. ರಿಸರ್ವ್ ಬ್ಯಾಂಕಿನಿಂದ ಆಗಮಿಸಿದ್ದ ಡೈರೆಕ್ಟರ್ ಒಬ್ಬರು ಈ ಹೇಳಿಕೆಯ ಸಾಧ್ಯಾಸಾಧ್ಯತೆಯ ಬಗ್ಗೆ ತಲೆಕೆಡಿಸಿಕೊಂಡಿದ್ದರಂತೆ.

ಬ್ಯಾಂಕ್ ನೌಕರರ ತರಬೇತಿಯ ಬಗ್ಗೆ ಉಡುಪರಷ್ಟು ತಲೆಕೆಡಿಸಿಕೊಂಡ ಅಧ್ಯಕ್ಷರೇ ಇರಲಿಕ್ಕಿಲ್ಲ ಎಂದರೆ ಉತ್ಪ್ರೇಕ್ಷೆ ಆಗಲಾರದು. ನಬಾರ್ಡ್ನ ನೆರವಿನಿಂದ ಹಿರಿಯ ಅಧಿಕಾರಿಗಳಿಗಾಗಿ ಹಲವು Executive Development Programme ಗಳನ್ನು ನಡೆಸಿದರು. ಈ ತೆರನಾದ ತರಬೇತಿಗಳು ವಿವಿಧ ಸ್ತರಗಳ ಅಧ್ಯಯನಾವಕಾಶವನ್ನು ಒದಗಿಸುತ್ತವೆ ಮಾತ್ರವಲ್ಲ, ಪ್ರೋಕೆಲಸ ಮಾಡುತ್ತವೆ ಎನ್ನುವುದು ಉಡುಪರ ನಂಬಿಕೆ. Future planning ಉಡುಪರ ಮಹತ್ವಾಕಾಂಕ್ಷೆಯ ಕೆಲಸ. ಮುಂದಿನ ಐದು ವರ್ಷಗಳಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಎಲ್ಲಿಗೆ ಹೋಗಬೇಕು ಎನ್ನುವ ಗುರಿಯನ್ನು ಅವರು ವೈಜ್ಞಾನಿಕವಾಗಿ ಗುರುತಿಸಿದರು. ಆ ಎತ್ತರ ಏರಲಿಕ್ಕೆ ಏನು ಮಾಡಬೇಕು ಎನ್ನುವುದನ್ನು ನಿಶ್ಚಯಿಸಿದರು. ಸಣ್ಣ ಸಾರಿಗೆ ವ್ಯವಸ್ಥೆಗಳಿಗೆ ಬ್ಯಾಂಕ್ ಸಾಲವನ್ನು ಒದಗಿಸಿದರು. ಸೌರಶಕ್ತಿ ಬಳಕೆಗೆ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಬ್ಯಾಂಕಿನ ಗ್ರಾಹಕರನ್ನು ಭೇಟಿಯಾಗಿ ರೈತರ ಅಗತ್ಯಗಳನ್ನು ಗುರುತಿಸಿದರು. ತಮ್ಮ ಅಗಾಧವಾದ ಕೃಷಿ ಜ್ಞಾನವನ್ನು ಅವರಿಗಾಗಿ ತೆರೆದಿಟ್ಟರು. ಕೃಷಿಕರ ಮೇಲಿರಿಸಿದ ನಂಬಿಕೆ ಹುಸಿಯಾಗುವುದಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದರು. ಮುಂದಿನ ವರ್ಷದ ಬ್ಯಾಂಕ್ ಬ್ಯಾಲೆನ್ಸ್ಶೀಟ್ ಲಾಭಾಂಶವನ್ನು ತೋರಿಸಿದರೆ 1994ರ ಮಾರ್ಚ್ನ ಬ್ಯಾಲೆನ್ಸ್ಶೀಟ್ ಹಿಂದಿನ ವರ್ಷಗಳಿಂದ ಉಳಿದು ಬಂದ ನಷ್ಟವನ್ನು ಪೂರ್ಣವಾಗಿ ತುಂಬಿಕೊಟ್ಟು ಲಾಭದೊಂದಿಗೆ ಸಮಗ್ರ ಅಭಿವೃದ್ಧಿಯನ್ನು ತೋರಿಸಿತು. ಇಂಡಿಯನ್ ಬ್ಯಾಂಕ್ ಎಂಬ ತೀವ್ರ ನಷ್ಟದಲ್ಲಿದ್ದ ರಾಷ್ಟೀಕೃತ ಬ್ಯಾಂಕಿನಲ್ಲಿ ಶ್ರೀಮತಿ ರಂಜನಾಕುಮಾರ್ ಎಂಬ ಅಧ್ಯಕ್ಷರು ಆಗುಮಾಡಿಕೊಟ್ಟ ಅಭೂತಪೂರ್ವ “Turn around” ಕಥೆಗೆ ಮತ್ತೊಂದು ಪರ್ಯಾಯ ಕಥೆಯೆಂದೇ ಹೇಳಬಹುದಾದ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಪುನರುಜ್ಜೀವನ ಉಡುಪರ ಮುಂಡಾಸಿಗೊಂದು ಅನನ್ಯ ತುರಾಯಿ!

* * *

ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ ಉಡುಪರು ಆಗುಮಾಡಿಕೊಟ್ಟದ್ದು ಬರಿಯ ಆರ್ಥಿಕ ಪುನರುಜ್ಜೀವನವನ್ನು ಮಾತ್ರವಲ್ಲ; ಬ್ಯಾಂಕಿನ Good will, ಸುನಾಮೆ, ಗ್ರಾಹಕರ ನಂಬಿಕೆ, ಸಿಬ್ಬಂದಿಯ ಆತ್ಮವಿಶ್ವಾಸಗಳ ಮೌಲ್ಯವರ್ಧನೆಯನ್ನು ಕೂಡಾ.

1992ರ ಸೆಪ್ಟೆಂಬರ್ನಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಉಡುಪರು ಧಾರವಾಡಕ್ಕೆ ಹೋದಾಗ ಅವರು ಮೊದಲು ಗಮನಿಸಿದ ಸಂಗತಿಯೆಂದರೆ ಬ್ಯಾಂಕಿಗೆ ಅದರದೇ ಆದ ಒಂದು ಪ್ರಧಾನ ಕಚೇರಿಯ ಕಟ್ಟಡ ಇರಲಿಲ್ಲ. ಸ್ವಂತ ಕಟ್ಟಡ ಸ್ವಾಭಿಮಾನದ ಕುರುಹು ಮಾತ್ರವಲ್ಲ, ಗ್ರಾಹಕರ ವಿಶ್ವಾಸದ ವರ್ಧನೆಗೆ ಪ್ರೇರಕ ಕೂಡಾ ಹೌದೆನ್ನುವುದು ಉಡುಪರ ನಂಬಿಕೆ. ಬ್ಯಾಂಕಿನ ಕಡತಗಳನ್ನು ಅವಲೋಕಿಸಿದಾಗ ಅವರ ಗಮನಕ್ಕೆ ಬಂದ ಮಹತ್ವದ ಸಂಗತಿಯೆಂದರೆ 1986ರಷ್ಟು ಹಿಂದೆಯೇ ಸರಕಾರ ಹೆದ್ದಾರಿಯ ಪಕ್ಕದ ಎರಡೂವರೆ ಎಕ್ರೆ ಭೂಮಿಯನ್ನು ಬ್ಯಾಂಕಿನ ಪ್ರಧಾನ ಕಚೇರಿಯ ಕಟ್ಟೋಣಕ್ಕಾಗಿ ನೀಡಿದ್ದು, ಎರಡೆರಡು ಬಾರಿ ಅವಕಾಶ ಪುನರ್ನವೀಕರಣದ ಹೊರತಾಗಿಯೂ ಬ್ಯಾಂಕ್ ಈ ನಿಟ್ಟಿನಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎನ್ನುವುದು. ಈಗಂತೂ ಬ್ಯಾಂಕಿನ ಉಳಿವೇ ಒಂದು ಪ್ರಶ್ನೆಯಾಗಿರುವಾಗ ಕಟ್ಟಡಕ್ಕಾಗಿ ಹಣ ವೆಚ್ಚ ಮಾಡುವುದೊಂದು ಕನಸೆನ್ನುವುದನ್ನು ಅವರು ಗಮನಿಸಿದರು.

ಉಡುಪರು ನೆನಪಿಸಿಕೊಂಡದ್ದು ಮತ್ತೆ ಟಿ.ಎ. ಪೈಗಳ ಮಾತನ್ನು. ಸಾಧ್ಯ ವಿರುವುದನ್ನು ಎಲ್ಲರೂ ಮಾಡುತ್ತಾರೆ. ನಿಮ್ಮ ಸಾಮರ್ಥ್ಯ ಸ್ಪಷ್ಟವಾಗಬೇಕಿದ್ದರೆ ಅಸಾಧ್ಯ ವಿರುವುದನ್ನು ಸಾಧಿಸಬೇಕು. ಉಡುಪರು ಎಲ್ಲ ದಾಖಲೆಗಳನ್ನು ಮತ್ತೆ ಕೈಗೆತ್ತಿಕೊಂಡರು.

ಸರಕಾರದ ಆದೇಶ – ಮಾರ್ಚ್ 31, 1993ರ ಒಳಗೆ ಕಟ್ಟೋಣ ಆರಂಭವಾಗಬೇಕು.

ಕಟ್ಟಡಕ್ಕಾಗಿ ಅಪೇಕ್ಷಿತ ಹಣ _ ರೂ. 1.25 ಕೋಟಿ.

ಲಭ್ಯವಿರುವ ಸಂಪನ್ಮೂಲ – ಸೊನ್ನೆ

ಪ್ರವರ್ತಕ ಬ್ಯಾಂಕಿನಿಂದ ನಿರೀಕ್ಷಿಸಬಹುದಾದ ನೆರವು – ದುರ್ಲಭ.

ಉಡುಪರು ಈ ವಿಚಾರವನ್ನು ಬ್ಯಾಂಕ್ ನೌಕರ-ಅಧಿಕಾರಿಗಳ ನಾಯಕರೊಂದಿಗೆ ಚರ್ಚಿಸಿದಾಗ ಬಂದ ಅನಿರೀಕ್ಷಿತ ಬೆಂಬಲ – 1600 ಸಿಬ್ಬಂದಿಗಳು ತಮ್ಮ ಒಂದು ವಾರದ ಸಂಬಳವನ್ನು ಈ ಕೆಲಸಕ್ಕಾಗಿ ಕೊಡುತ್ತೇವೆ ಎಂದರು. ಆ ಮೊತ್ತ ಸುಮಾರು ರೂ. 25 ಲಕ್ಷದ ಹತ್ತಿರ. ಉಡುಪರು ಆ ಹಣವನ್ನು ಪಡೆದುಕೊಳ್ಳಲಿಲ್ಲ ಎನ್ನುವುದು ಬೇರೆ ಮಾತು. ಒಂದು ಕಟ್ಟಡದ ಮಾತು ಸಿಬ್ಬಂದಿಗಳಲ್ಲಿ ಅಳಿವಿನ ಅಂಚಿಗೆ ಹೋಗಿದ್ದ ‘sense of belongingness’ ಗೆ ಪುನರ್ಜೀವ ಕೊಟ್ಟಿತು. ಉಡುಪರು ಮೆನೇಜ್ಮೆಂಟ್ ಪುಸ್ತಕಗಳ ಬಹುಚರ್ವಿತ ದಾಳವೊಂದನ್ನು ಎಸೆದಿದ್ದರು; ಸಫಲರಾದರು ಕೂಡಾ.

ಉಡುಪರು ಈ ಸಂದರ್ಭದಲ್ಲಿ ತಮ್ಮ ಚೀಲದಲ್ಲಿದ್ದ ಎಲ್ಲಾ ತಂತ್ರಗಳನ್ನು ಹೊರ ತೆಗೆದರು. ಜಿಲ್ಲಾಡಳಿತವು ಕಟ್ಟಡ ಕೆಲಸ ಆರಂಭಕ್ಕೆ ಕೊಟ್ಟ ಕೊನೆಯ ಗಡುವು ಮುಗಿಯುವ ಮುನ್ನ ಆ ಜಾಗದಲ್ಲೊಂದು ಬೋರ್ವೆಲ್ ಹಾಕಿಸಿ, ಕೆಲಸ ಆರಂಭವಾಗಿದೆ ಎಂಬ ವರದಿ ಕೊಟ್ಟರು. ಪ್ರವರ್ತಕ ಬ್ಯಾಂಕಿನ ಪ್ರಧಾನ ಕಚೇರಿ, ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕುಗಳ ಬೆನ್ನು ಹತ್ತಿ ಸಂಪನ್ಮೂಲ ಕ್ರೋಢೀಕರಿಸಿದರು. ಅದಾಗಲೇ ಕಲ್ಲು ಹಾಕಿಸಿಕೊಂಡಿದ್ದ ಕಟ್ಟಡಕ್ಕೆ ಜಾಹಿರಾತಿಗಾಗಿ ಗುದ್ದಲಿಪೂಜೆ ಕಾರ್ಯಕ್ರಮ ನಡೆಸಿದರು, ಯಾವತ್ತೂ ಬೇರೆಯವರ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿರದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವರಹಸ್ತದಿಂದ. ಮತ್ತೆ ನಡೆದದ್ದು ಇತಿಹಾಸ. ಬ್ಯಾಂಕ್ ನೌಕರರಲ್ಲಿಯೇ ಇದ್ದ ಪರಿಣಿತರನ್ನು ತಂತ್ರಜ್ಞರನ್ನು ಉಡುಪರು ಬಳಿಸಿಕೊಂಡರು. ಸ್ನೇಹ, ದಾಕ್ಷಿಣ್ಯ, ಒತ್ತಾಯ – ತಮ್ಮ ಬತ್ತಳಿಕೆಯ ಎಲ್ಲ ಅಸ್ತ್ರಗಳನ್ನು ಹೊರತೆಗೆದರು. ನಿವೃತ್ತ ಚೀಫ್ ಇಂಜಿನಿಯರ್ ಜಿ.ವಿ.ಜೋಷಿಯವರು ತಾಂತ್ರಿಕ ಸಲಹೆಗಾರರಾಗಿ ಉಡುಪರ ಬೆಂಗಾವಲಿಗೆ ನಿಂತರು. 1993 ಏಪ್ರಿಲ್ನಲ್ಲಿ ಆರಂಭವಾದ ಕಟ್ಟೋಣ ಡಿಸೆಂಬರ್ ಹೊತ್ತಿಗೆ ಬಹುಮಟ್ಟಿಗೆ ಒಂದು ಸ್ಥಿತಿಗೆ ತಲುಪಿತು. 1994 ಮಾರ್ಚ್ನಲ್ಲಿ ಬ್ಯಾಂಕ್ ಲಾಭವನ್ನು ತೋರಿಸಿತು. ಅದೇ ವರ್ಷ ನವಂಬರ್ನಲ್ಲಿ ಪದೋನ್ನತಿಯೊಂದಿಗೆ ಗ್ರಾಮೀಣ ಬ್ಯಾಂಕ್ನಿಂದ ಉಡುಪರು ನಿರ್ಗಮಿಸುವ ಮುನ್ನ 14-11-1994 ರಂದು ಕಟ್ಟಡದ ಔಪಚಾರಿಕ ಉದ್ಘಾಟನೆಯೂ ನಡೆಯಿತು, ಪ್ರವರ್ತಕ ಬ್ಯಾಂಕಿನ ಅಧ್ಯಕ್ಷ ಚಡ್ಡಾರ ಕೈಗಳಿಂದ, ಪಾಪು, ಡಾ. ರಾಮೇಗೌಡ ಮೊದಲಾದ ಹಿರಿಯರ ಉಪಸ್ಥಿತಿಯಲ್ಲಿ.

ಹದಿನೈದು ವರ್ಷಗಳ ನಂತರ ಈ ಘಟನೆಯನ್ನು ನೆನಪಿಸಿಕೊಂಡು ಉಡುಪರು ಹೇಳುತ್ತಾರೆ – ಈಗ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಕಟ್ಟಡ ಮಲಪ್ರಭಾ ಗ್ರಾಮೀಣ ಬ್ಯಾಂಕಿಗೆ ಆತ್ಮಗೌರವವನ್ನು, ಸಾರ್ವಜನಿಕ ಗೌರವವನ್ನು ತಂದುಕೊಟ್ಟು ಬ್ಯಾಂಕಿನ ನಂತರದ ದಿನಗಳ ಬೆಳವಣಿಗೆಗೆ ಪ್ರೇರಕವೂ ಆಗಿ ನಿಂತಿದೆ.

* * *

ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಉಡುಪರ ಪಾಲಿಗೆ ಸಾರ್ಥಕತೆಯ ಸಂತೃಪ್ತಿಯನ್ನು ಉಳಿಸಿಬಿಟ್ಟ ಇನ್ನೊಂದು ಘಟನೆ – ಮೋಳೆ ಪ್ರಯೋಗ. ಮೋಳೆ ಯಾವ ಭೂಪಟದಲ್ಲೂ ಕಾಣಸಿಗದ, ಅಥಣಿ ತಾಲೂಕಿನ ಒಂದು ಚಿಕ್ಕ ಹಳ್ಳಿ. 1992ರ ತನಕ ನೀರಾವರಿ ಸೌಲಭ್ಯವೇ ಇಲ್ಲದ, ತೊಟ್ಟು ನೀರಿಗೂ ಗತಿ ಇಲ್ಲದ ಮೋಳೆ ಗ್ರಾಮ ಬರಪೀಡಿತ ಉರಿಬಿಸಿಲಿನ ನಾಡೇ ಆಗಿತ್ತು. ಅಲ್ಲಿನ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಶಾಖೆ ನಿರಂತರ ನಷ್ಟದಲ್ಲಿ ನಡೆಯುತ್ತಿದ್ದು, ರೂ. 40 ಲಕ್ಷ  ವ್ಯವಹಾರ ಮೀರಿರದ ಪುಟ್ಟ ಶಾಖೆಯಾಗಿತ್ತು. ಮೋಳೆಯ ಕುಬೇರಪ್ಪ ಎಂಬ ರೈತರೊಬ್ಬರು ಅಲ್ಲಿನ ಇತರ ಸಣ್ಣ ಹಿಡುವಳಿದಾರರೊಂದಿಗೆ ಸೇರಿ, 9-10 ಕಿಲೋಮೀಟರ್ ದೂರದ ಕೃಷ್ಣಾ ನದಿಯಿಂದ ಮೋಳೆಯ ಒಣಭೂಮಿಗೆ ನೀರು ತರುವ ಒಂದು ಯೋಜನೆಯೊಂದಿಗೆ, ರೂ. 22 ಲಕ್ಷ ಬ್ಯಾಂಕ್ ಸಾಲಕ್ಕಾಗಿ ಮಲಪ್ರಭಾ ಗ್ರಾಮೀಣ ಬ್ಯಾಂಕನ್ನು ಸಂಪರ್ಕಿಸಿದರು. ಬ್ಯಾಂಕಿನ ಅಧ್ಯಕ್ಷರಾಗಿದ್ದ ಉಡುಪರು, ಮೋಳೆ ಶಾಖಾ ಮೆನೇಜರ್ ಜೆ.ಎನ್. ದೇಸಾಯಿ, ಜನರಲ್ ಮೆನೇಜರ್ ಧನಂಜಯ ಅವರೊಂದಿಗೆ ಕಾರ್ಯಕ್ಷೇತ್ರವನ್ನು ಕಂಡು, ಸಾಧಕಬಾಧಕಗಳನ್ನು ಚರ್ಚಿಸಿದಾಗ ಇದೊಂದು ಭಗೀರಥ ಪ್ರಯತ್ನವೆಂದು ಅನ್ನಿಸದಿರಲಿಲ್ಲ. ಇಂಥ ಸವಾಲುಗಳನ್ನು ಬದುಕಿನುದ್ದಕ್ಕೆ ತೆಗೆದುಕೊಳ್ಳುತ್ತಲೇ ಬಂದ ಉಡುಪರಿಗೆ ಪ್ರತಿ ಅಗ್ನಿಪರೀಕ್ಷೆ ಚಿನ್ನವನ್ನು ಪುಟಗೊಳಿಸುವ ಬಗ್ಗೆ ಖಚಿತವಾದ ನಂಬಿಕೆ. ಅವರು ಮೋಳೆ ಶಾಖೆಯ ಹನ್ನೆರಡು ಯೋಜನೆಗಳನ್ನು ಮಂಜೂರು ಮಾಡಿದರು.

ದೂರದ ಕೃಷ್ಣಾನದಿಯ ನೀರನ್ನು ಪಂಪು ಮಾಡಿ, ಪೈಪುಗಳ ಮೂಲಕ ಮೋಳೆಯ ತನಕ ಸಾಗಿಸಿ, ಬೃಹತ್ ಕೆರೆಗಳಲ್ಲಿ ಶೇಖರಿಸಿ, ರೈತರ ಒಣಭೂಮಿಗೆ ಒದಗಿಸಿ, ಅಲ್ಲಿ ಪರ್ಯಾಯ ಬೆಳೆ ತರುವ ಯೋಜನೆಯ ಧಾರಣ ಶಕ್ತಿಯನ್ನು ಉಡುಪರು ಒಪ್ಪಿಕೊಂಡದ್ದೇನೋ ಸರಿ. ಅದರೆ ರೂ. 22 ಲಕ್ಷ ಸಾಲ ಪೂರೈಕೆಯ ಪ್ರಶ್ನೆ. ಆ ಹೊತ್ತು ಮಲಪ್ರಭಾ ಗ್ರಾಮೀಣ ಬ್ಯಾಂಕ್ ಇಷ್ಟೊಂದು ದೊಡ್ಡ ಮೊತ್ತವನ್ನು ಪೂರೈಸುವ ಸ್ಥಿತಿಯಲ್ಲಿಯೇ ಇರಲಿಲ್ಲ. ನಬಾರ್ಡ್ ರಿಫೈನಾನ್ಸ್ ಸಿಗುವುದಂತೂ ಅಸಾಧ್ಯ ಮಾತಾಗಿತ್ತು. ವಿಚಕ್ಷಣಮತಿ ಉಡುಪರು ಆ ಪರಿಸರ ಮೂಲದ ಮಲಶೆಟ್ಟಿ ಎನ್ನುವವರು ನಬಾರ್ಡ್ನ ಬೆಂಗಳೂರು ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿರುವುದನ್ನು ಪತ್ತೆ ಹಚ್ಚಿದರು. ಸಾಲ ಮತ್ತು ರಿಫೈನಾನ್ಸ್ ಯೋಜನೆ, ಕೋರಿಕೆಗಳೊಂದಿಗೆ ಅವರನ್ನು ಸಂಪರ್ಕಿಸಿದರು. ಯೋಜನೆ ಸಿದ್ಧವಾದ ಎರಡೇ ತಿಂಗಳಲ್ಲಿ ಸಾಲ ಮತ್ತು ರಿಫೈನಾನ್ಸ್ ಮಂಜೂರಾದುದೂ ಈ ಘಟನೆಯ ಇನ್ನೊಂದು ಚಿರಸ್ಮರಣೀಯ ಮಜಲು. ಉಡುಪರು ಮತ್ತು ಧನಂಜಯ ಈ ದಿಸೆಯಲ್ಲಿ ಎಷ್ಟು ಧೈರ್ಯ ತೋರಿದರೆಂದರೆ, ಸಾಲ ಮಂಜೂರಾತಿ ಕೊಡಬೇಕಾದ ನಬಾರ್ಡ್ ತೀರ್ಮಾನ ಬರುವ ಮೊದಲೇ ಬ್ಯಾಂಕಿನಿಂದ ರೈತರಿಗೆ ಹಣ ಬಿಡುಗಡೆಯ ಆದೇಶ ನೀಡಿದರು. 9-10 ಕಿಲೋಮೀಟರ್ ದೂರದ ಕೃಷ್ಣಾನದಿಗೆ ಪಂಪ್ ಹಾಕಿ, ಪೈಪ್ ಮೂಲಕ ನೀರು ಹರಿಸಲಾಯಿತು. ಮಧ್ಯೆ ಮಧ್ಯೆ ಟ್ಯಾಂಕ್ (ಬಾವಿ)ಗಳನ್ನು ಕಟ್ಟಿ ನೀರು ಶೇಖರಿಸಲಾಯಿತು. ಇಲ್ಲಿ ಪುನಃ ಪಂಪ್ ಹಾಕಿ ನೀರನ್ನು ಎತ್ತಿ ಪೈಪ್ಗಳ ಮೂಲಕ ಹರಿಸಿ ಬೃಹತ್ ಕೆರೆಗಳಲ್ಲಿ ತುಂಬಲಾಯಿತು. ರೈತರು ಊಟ, ನಿದ್ದೆ ಬಿಟ್ಟು ದುಡಿದರು. ಮಲಪ್ರಭಾ ಗ್ರಾಮೀಣ ಬ್ಯಾಂಕ್ ಬ್ಯಾಂಕುಗಳ ಇತಿಹಾಸಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟಿತು. ಈ ಯೋಜನೆ ಅತಿ ಶೀಘ್ರ. ಅತಿ ಕಡಿಮೆ ಖರ್ಚಿನಲ್ಲಿ, ಅತಿ ಹೆಚ್ಚು ಭೂಮಿಗೆ ನೀರು ಒದಗಿಸುವಂತಾಯಿತು.

ಅಂತೂ ಇಂತೂ ಮೋಳೆಗೆ ಕೃಷ್ಣಾ ನದಿಯ ನೀರು ಬಂತು. ಒಂದೇ ಒಂದು ಬೆಳೆ ಬೆಳೆಯಲಾಗದ ಒಣಭೂಮಿಯಲ್ಲಿ ಇಲ್ಲಿನ ರೈತರು ಎರಡು-ಮೂರು ಬೆಳೆಗಳನ್ನು ಬೆಳೆಯಲು ಶಕ್ತರಾದರು. ಜಿಲ್ಲೆಯ ಅತಿ ಹಿಂದುಳಿದ ಹಳ್ಳಿಗಳಲ್ಲಿ ಒಂದಾದ ಮೋಳೆಯಲ್ಲೊಂದು ಆರ್ಥಿಕ ಕ್ರಾಂತಿ ಸಾಧ್ಯವಾಯಿತು. ಎತ್ತಿನ ಗಾಡಿಗಳಷ್ಟೇ ತಿರುಗುತ್ತಿದ್ದ ಧೂಳು ತುಂಬಿದ ದಾರಿಯಲ್ಲಿ ಜೀಪು, ಟ್ರಾಕ್ಟರ್, ಮೋಟಾರ್ ಸೈಕಲ್ಲುಗಳು ತಿರುಗತೊಡಗಿದವು. ಈ ಬೆಳವಣಿಗೆಯನ್ನು ಸರಕಾರೀ ಯಂತ್ರ ಮತ್ತು ಇತರ ಬ್ಯಾಂಕ್ಗಳು ಮೂಕವಿಸ್ಮಿತರಾಗಿ ನಿರುಕಿಸುತ್ತಿದ್ದವು. ಆ ದಿನಗಳಲ್ಲಿ ತರಂಗ ವಾರಪತ್ರಿಕೆಯ ಸಂಪಾದಕರಾಗಿದ್ದ ಸಂತೋಷ ಕುಮಾರ್ ಗುಲ್ವಾಡಿಯವರು ಮೋಳೆಯಲ್ಲಿ ಸಾಧ್ಯವಾಯಿತೆನ್ನಲಾದ ಕ್ರಾಂತಿಯನ್ನು ಕೇಳಿ, ನಂಬಲಾಗದೇ ನಂಬಿ, ತಮ್ಮ ತಂಡವನ್ನು ವರದಿಗಾಗಿ ಕಳಿಸಿ, ಡಿಸೆಂಬರ್ 11, 1994ರ ತರಂಗದ ಮುಖಪುಟ ಲೇಖನವಾಗಿ ಮೋಳೆ-ಜನರ ಯೋಜನೆಯಲ್ಲಿ 4 ಕೋಟಿಯ ನಂದನವನ, ಧಾರವಾಡದ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅದ್ಭುತ ಸಾಧನೆಗೆ ವ್ಯಾಪಕ ಪ್ರಚಾರವನ್ನು ತಂದುಕೊಟ್ಟರು.

ಆ ಲೇಖನದ ಕೊನೆಯಲ್ಲಿ ಗುಲ್ವಾಡಿಯವರು ಬರೆದ ಕೆಲವು ಮಾತುಗಳು ಕೆ.ಎಂ. ಉಡುಪರ ದೂರದರ್ಶಿತ್ವಕ್ಕೆ ಹಿಡಿದ ಕನ್ನಡಿ –

ಮೋಳೆ ಗ್ರಾಮಕ್ಕೆ ನೀರಾವರಿ ಸಾಲದ ಯೋಜನೆಯನ್ನು ತಮ್ಮ ಕೊಡುಗೆಯಾಗಿ ಕೊಡಲು ಮುಂದಾದ ಗ್ರಾಮೀಣ ಬ್ಯಾಂಕ್ ಹಲವು ಸಂಕಷ್ಟಗಳನ್ನೂ ಎದುರಿಸಿದೆ. ಸರಕಾರೀ ಕಾಯಿದೆ, ಕಾನೂನಿನ ತೊಡಕುಗಳನ್ನು ದಾಟಿದೆ. ಮೊದಲಾಗಿ ಈ ಯೋಜನೆಯ ಅನುಷ್ಠಾನಕ್ಕೆ ಮುಂದಾಗುವ ಸಂದರ್ಭದಲ್ಲಿ ಮೋಳೆ ಗ್ರಾಮಕ್ಕೆ ಯಾವುದೇ ಬ್ಯಾಂಕೂ ಒಂದಿಷ್ಟೂ ಸಾಲ ಕೊಡಲು ಒಪ್ಪುತ್ತಿರಲಿಲ್ಲ. ಅಂದರೆ ಉತ್ಪನ್ನವಿಲ್ಲ. ಎಲ್ಲರೂ ನಿರುದ್ಯೋಗಿಗಳು. ಸಾಲ ಕೊಟ್ಟಾಕ್ಷಣ ಖರ್ಚು ಮಾಡಿ ಉಂಡು ತೇಗುತ್ತಾರೆ ಎಂಬ ಕಲ್ಪನೆ. ಮರುಪಾವತಿ ಸೊನ್ನೆ. ಆದರೂ ಗ್ರಾಮೀಣ ಬ್ಯಾಂಕ್ ಹಿಂದೆ ಮುಂದೆ ನೋಡಲಿಲ್ಲ. ಸಾಲಕೊಟ್ಟಿತು. ರೈತರ ಬಸವಳಿದ ಬದುಕಿಗೆ ಜನ್ಮನೀಡಿತು. ಎಂಥಾ ಸಾಹಸ. ಎಂಥಾ ಮಾನವೀಯ ಸಂಕಲ್ಪ. ಎಲ್ಲಾ ಬ್ಯಾಂಕುಗಳೂ ಇದೇ ರೀತಿ ವರ್ತಿಸಿದರೆ, ಬ್ಯಾಂಕುಗಳು ಕೇವಲ ಕೊಟ್ಟ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಏರಿಸುವ ಲೆಕ್ಕಾಚಾರವಷ್ಟೇ ಸೀಮಿತಗೊಳ್ಳದೆ ನಿಜವಾದ ಸೇವೆ, ಸಹಾಯ, ಸಹಕಾರದ ಗುಣಮೌಲ್ಯಗಳನ್ನು ಉಳಿಸಿಕೊಂಡರೆ – ಮೋಳೆ ಗ್ರಾಮದಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಮಾಡಿದ ಈ ಕ್ರಾಂತಿ ನಮ್ಮ ದೇಶದ ಎಲ್ಲಾ ಹಳ್ಳಿಗಳಲ್ಲೂ ಪ್ರತಿಧ್ವನಿಸುತ್ತದೆ. ಇಲ್ಲಿ ರೈತ ಬಾಂಧವರ ಸಹಕಾರ, ಪ್ರಾಮಾಣಿಕ ದುಡಿಮೆಯೂ ಮೌಲಿಕ-ಆದರ್ಶಪ್ರಾಯ.

ನಮ್ಮ ಸರಕಾರೀ ಇಲಾಖೆಗಳು ಇಂಥ ಪ್ರಯೋಗಗಳಿಂದ ಕಲಿಯುವುದು ತುಂಬ ಇದೆ. ಆದರೆ ಅವರಿಗೆ ಕಲಿತುಕೊಳ್ಳಬೇಕು ಎಂಬ ಬುದ್ಧಿ ಇದೆಯೆ?
(ತರಂಗ 11.12.1994, ಪುಟ 74)

ಆ ಲೇಖನದಲ್ಲಿ ಗುಲ್ವಾಡಿಯವರು ಉಡುಪರ ಕೊಡುಗೆಯನ್ನು ಗುರುತಿಸಿ, ಶ್ಲಾಘಿಸಿದ್ದಲ್ಲದೇ ಅವರ ಒಂದು ಕಿರು ಸಂದರ್ಶನವನ್ನು ಪ್ರಕಟಿಸಿದ್ದರು. ಈ ಲೇಖನದಲ್ಲಿ ಉಡುಪರ ಸಾಂಸ್ಕೃತಿಕ ಮಹತ್ವವನ್ನು ಗುಲ್ವಾಡಿ ಗುರುತಿಸಿದ ಪರಿ ಕೂಡಾ ಗಮನಾರ್ಹ.

ಹೌದು, ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಚೆಯರ್ಮನ್ ಕೆ.ಎಂ. ಉಡುಪರು ನಮ್ಮ ಉಡುಪಿ ತಾಲೂಕಿನವರು. ಧಾರವಾಡದ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಮೂಲಕ ರಾಷ್ಟ್ರೀಯ ಸಾಧನೆ ಮಾಡಿದ ಇವರು ಒಬ್ಬ ಧೀರ, ಪ್ರಾಮಾಣಿಕ, ಶ್ರಮ ಗೌರವ ಉಳ್ಳ ಅಧಿಕಾರಿ.

ಕಾನೂನು ಇರುವುದು ನಮ್ಮ ಉಪಯೋಗಕ್ಕೇ ಹೊರತು ಅದು ನಮ್ಮನ್ನು ಕಟ್ಟಿ ಹಾಕಲು ಅಲ್ಲ ಎಂದು ಸ್ಪಷ್ಟವಾಗಿ ಹೇಳುವ ಉಡುಪರು ಮೋಳೆ ಏತ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಈ ಮಾತನ್ನು ಕಾರ್ಯರೂಪಕ್ಕೂ ತಂದವರು. ಧಾರವಾಡ, ಬೆಳಗಾಂ ಜಿಲ್ಲೆಗಳ ಪೂರ್ಣ ಅಭಿವೃದ್ಧಿಯ ಯೋಜನೆಯನ್ನು ಸ್ವತಃ ತಯಾರಿಸಿ ಇದರ ಅನುಷ್ಠಾನಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ.

ಉಡುಪರಿಗೆ ಬ್ಯಾಂಕಿನ ಮೂಲಕ ಜನರಿಗೆ, ರೈತರಿಗೆ ಗರಿಷ್ಠ ಸೇವೆ ನೀಡುವ ಹುಮ್ಮಸ್ಸು, ಉತ್ತಮ ಮನಸ್ಸು. ದಿವಂಗತ ಟಿ.ಎ. ಪೈ ಅವರ ಬ್ಯಾಂಕಿಂಗ್ ಸಾಹಸ-ಸಾಧನೆಗಳ ತಂಡದಲ್ಲಿ ತರಬೇತಾದ ಉಡುಪರು, ಪೈಗಳ ಸ್ಫೂರ್ತಿಯನ್ನು, ಕಾರ್ಯತತ್ಪರತೆಯನ್ನು ಆಗಾಗ ನೆನಪಿಸುತ್ತ, ಅದೇ ರೀತಿ ಮುಂದುವರಿದಿದ್ದಾರೆ.

ಯಾವುದೇ ಸ್ವಾರ್ಥಲಾಲಸೆ ಇಲ್ಲದ ಉಡುಪರು ಶುದ್ಧಹಸ್ತರು. 24 ಗಂಟೆಗಳ ಕಾಲ ಬ್ಯಾಂಕಿನ ಉದ್ದೇಶಿತ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಇವರು ಒಬ್ಬ ಜನಪ್ರಿಯ  ಅಧಿಕಾರಿ. ಪಾದರಸದಷ್ಟು ಚುರುಕು ಸ್ವಭಾವ. ಚಾಣಾಕ್ಷ ಬುದ್ಧಿಮತ್ತೆ. ಇವರು ಅಧಿಕಾರ ವಹಿಸಿಕೊಳ್ಳುವಾಗ ಗ್ರಾಮೀಣ ಬ್ಯಾಂಕ್ ತೀರಾ ನಷ್ಟದಲ್ಲಿತ್ತು. ಬಂದ ಎರಡೇ ವರ್ಷಗಳಲ್ಲಿ ಗರಿಷ್ಠ ಲಾಭಗಳಿಸಿಕೊಟ್ಟ ಕೀರ್ತಿಶಾಲಿ. ಈ ಮಧ್ಯೆ ಮೋಳೆ ಗ್ರಾಮದ ಬರಬಿದ್ದ ನೆಲದಲ್ಲಿ ಹಸುರುಕ್ರಾಂತಿ ಮಾಡಿದ ಅದ್ವಿತೀಯ ಸಾಧನೆ. ರಾಷ್ಟ್ರೀಯ ದಾಖಲೆ.

ಉಡುಪರನ್ನು ತರಂಗಕ್ಕಾಗಿ ಸಂದರ್ಶಿಸಿದ ಆಯ್ದ ಭಾಗ ಇಲ್ಲಿದೆ –

ಯಾವ ಬ್ಯಾಂಕಿನವರೂ ಸಾಲಕೊಡದೇ ಇರುವಂತಹ ಸಂದರ್ಭದಲ್ಲಿ ನೀವು ಮುಂದಾದದ್ದು ಹೇಗೆ? ಯಾವ ಧೈರ್ಯದಲ್ಲಿ?

– ಅದೂ ಒಂದು ರಿಸ್ಕ್ ತೆಗೆದುಕೊಳ್ಳುವ ಧೈರ್ಯ. ಹೊಸತನ್ನು ಮಾಡಬೇಕೆಂಬ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಟೀಮಿನ ಉತ್ಸಾಹ. ರೈತರ ಆಶೋತ್ತರಗಳಿಗೆ ಒತ್ತುಕೊಟ್ಟು ದುಡಿದರೆ ಎಂದೂ ಯಾವ ಬ್ಯಾಂಕೂ ಹಾಳಾಗುವುದಿಲ್ಲ – ಎಂಬ ನಂಬುಗೆ. ನಾವು ಒಂದು ಸಾಹಸ ಮಾಡಿದೆವು. ಗೆದ್ದೆವು.

ಸರಕಾರದ ಕಾನೂನಿನ ತೊಡಕುಗಳು ನಿಮ್ಮ ತ್ವರಿತ ಕಾಮಗಾರಿಗೆ ಅಡ್ಡಿಪಡಿಸಲಿಲ್ಲವೇ?

– ಅದೇನು ಕೇಳ್ತೀರಿ? ಹೆಜ್ಜೆ ಹೆಜ್ಜೆಗೂ ಅಡ್ಡಿ, ಆತಂಕ, ನಾವು ಸರಕಾರೀ ಪ್ಲಾನಿನ ಪ್ರಕಾರ ಹೋದರೆ ಕೆಲಸ ಮಾಡಲು ಅಸಾಧ್ಯ. ನಮ್ಮ ಸ್ವಧೈರ್ಯ, ಹಿತಾಸಕ್ತಿ, ಆತ್ಮನಂಬುಗೆಯ ಮೇಲೆ ಕೆಲಸ ಮಾಡಬೇಕು. ಕೆಲವು ಸಾರಿ ಈ ಸರಕಾರೀ ರೂಲ್ಸ್ಗಳನ್ನು ಓವರ್ಟೇಕ್ ಮಾಡಬೇಕಾಗುತ್ತದೆ. ದಿ ಟಿ.ಎ. ಪೈಗಳು ನಾನು ಸಿಂಡಿಕೇಟ್ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರತಿದಿನ ಬಂದು – ಇಂದೇನು ಹೊಸತು ಮಾಡಿದ್ದೀರಿ? ಎಂದು ಕೇಳುತ್ತಿದ್ದರು. ಅಂದರೆ ಮನುಷ್ಯ ಹೊಸ ಹೊಸ ಕಾರ್ಯಗಳ ಸಂಶೋಧನೆಯಲ್ಲಿ ಇರಬೇಕೆಂಬದು ಅವರ ಅಭಿಪ್ರಾಯ. ಅದನ್ನೇ ನನ್ನ ಬದುಕಿನ ಆದರ್ಶವಾಗಿಸಿಕೊಂಡಿದ್ದೇವೆ. ನಮ್ಮ ದೇಶದಲ್ಲಿ ಹೊಸ ಐಡಿಯಾ, ಯೋಜನೆಗೆ ಮುಂದಾದರೆ ಪ್ರೋಬಹಳ ಕಡಿಮೆ.

ನಮ್ಮ ಮೋಳೆ ನೀರಾವರಿ ಯೋಜನೆ ದೇಶದಲ್ಲಿಯೇ ಹೊಸ ಮಾದರಿ. ಈ ಮೋಳೆಯಂತಹ ಹಳ್ಳಿ ಬೆಳೆದರೆ ಬೆಳಗಾಂವ್ ಪೂರ್ಣ ಬೆಳೆಯುತ್ತದೆ. ಬೆಳಗಾವಿ ಬೆಳೆದರೆ ಎಲ್ಲಾ ಸೌತ್ ಇಂಡಿಯಾಕ್ಕೇ ಸಕ್ಕರೆ ಕೊಡಬಹುದಾಗಿದೆ.

ನಾವು ರೈತರಿಗೆ ಏನು ಬೇಕಾದರೂ ಕೊಡಲು ಮುಂದಾಗಿದ್ದೇವೆ. ಸಾಲ ಕೊಡುವ ಸಂಸ್ಥೆಗಳ ಅಧಿಕಾರಿಗಳು ಅಭಿವೃದ್ಧಿಯ ನಿಜವಾದ ಯೋಚನೆ ಮಾಡಿದರೆ ಏನೂ ಮಾಡಬಹುದು. ಕೆಲಸ ಮಾಡದೇ ಇದ್ದುದರಿಂದಲೇ ಉಳಿದ ಬ್ಯಾಂಕುಗಳು ದಿವಾಳಿ ಎದ್ದಿವೆ.

ಮೋಳೆ ಗ್ರಾಮದ ಏತ ನೀರಾವರಿಗೆ ಹಣ ಸಹಾಯ ಮಾಡಿದ್ದರಿಂದ ನಿಮ್ಮ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಮೇಲೆ ಆದ ಪರಿಣಾಮ ಯಾವ ರೀತಿಯದ್ದು?

– ಬಹಳ ಉತ್ತಮ ರೀತಿಯದ್ದು. ಮೋಳೆ ಗ್ರಾಮದ ಏತ ನೀರಾವರಿಗೆ ಹಣ ಸಹಾಯ ಮಾಡಿದ್ದರಿಂದ ನಮ್ಮ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಮೇಲೆ ಧನಾತ್ಮಕವಾದ ಪರಿಣಾಮವೇ ಆಗಿದೆ. ನಮ್ಮ ಬ್ಯಾಂಕ್ ಲಾಭ ಗಳಿಸಿದೆ. ಮೋಳೆ ಗ್ರಾಮದ ಯಶಸ್ಸು ನಮ್ಮ ಬ್ಯಾಂಕಿನ ನಿಷ್ಠಾವಂತ ಸಹೋದ್ಯೋಗಿಗಳ ಪ್ರಾಮಾಣಿಕ ದುಡಿಮೆಯ ಫಲ. ನಾವು ಮೂಲಭೂತವಾಗಿ ರೈತರನ್ನು ನಂಬಿದ್ದೆವು. ನಮ್ಮ ಬ್ಯಾಂಕಿನ ಕ್ರೆಡಿಟ್ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ಇದ್ದುದಕ್ಕಿಂತ ಬಹಳಷ್ಟು ಪ್ರಮಾಣ ಹೆಚ್ಚಿದೆ ಕೂಡ. ನಮ್ಮ ಬ್ಯಾಂಕ್ ಇಂದು ದೇಶದ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ (208) ಗ್ರಾಮೀಣ ಬ್ಯಾಂಕ್.

ಗ್ರಾಮೀಣ ಬದುಕು ಹಸನಾಗಬೇಕಾದರೆ ಏನು ಮಾಡಬೇಕು?

– ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ಬದಲು ಗ್ರಾಮೀಣ ಬ್ಯಾಂಕುಗಳನ್ನು ಬೆಳೆಸಬೇಕು, ಹೆಚ್ಚಿಸಬೇಕು. ರೈತರಿಗೆ ಹೆಚ್ಚು ಹೆಚ್ಚು ಸಾಲ ಕೊಡಬೇಕು. ಆಗ ನಮ್ಮ ದೇಶದ ಗ್ರಾಮೀಣ ಚಿತ್ರ ಬದಲಾಗುತ್ತದೆ. ಬ್ಯಾಂಕುಗಳು ಧೈರ್ಯ ವಹಿಸಬೇಕು. ಸಾಹಸಕ್ಕೆ ಮುಂದಾಗಬೇಕು. ಸಾಲ ಕೇಳಿ ಬರುವವರನ್ನು ನಂಬಬೇಕು.

ಈ ಹಿನ್ನೆಲೆಯಲ್ಲಿ ಕೃಷಿ ಸಂಬಂಧ ಪ್ರಯೋಗಗಳಲ್ಲಿ ಆಸಕ್ತರಾಗಿದ್ದ ಡಾ. ನಂಜುಂಡಪ್ಪ ಉಡುಪರನ್ನು ಭೇಟಿಯಾಗಿ, ಸಕಲ ಮಾಹಿತಿಗಳನ್ನು ಪಡೆದು ಮೋಳೆಯನ್ನು ಕಣ್ಣಾರೆ ಕಂಡು, ಹೃದಯ ತುಂಬಿ ಹರಸಿದರು. ಡಾ. ಡಿ.ಎಂ. ನಂಜುಂಡಪ್ಪ ಆಗ ಸರಕಾರದ ಅಭಿವೃದ್ಧಿಯ ಸಲಹೆಗಾರರಾಗಿದ್ದರು. ಮುಂದೆ ಅವರು ರಾಜ್ಯದ ಪ್ಲಾನಿಂಗ್ ಬೋರ್ಡ್ನ ಉಪಾಧ್ಯಕ್ಷರೂ ಆದರು. ಈ ಘಟನೆಗಳು ಮಲಪ್ರಭಾ ಗ್ರಾಮೀಣ ಬ್ಯಾಂಕನ್ನು ಮಾತ್ರವಲ್ಲ  ಆ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕುಗಳನ್ನೆಲ್ಲ ಎಚ್ಚರಗೊಳಿಸಿ, ಸಾಂಪ್ರದಾಯಿಕ ಸಾಲಸೌಲಭ್ಯಗಳ ಆಚೆ ನೋಡುವ ಹಾಗೆ ಮಾಡಿದವು.

ಮುಂದೆ ಮಲಪ್ರಭಾ ಗ್ರಾಮೀಣ ಬ್ಯಾಂಕ್ ಈ ತೆರನಾದ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಫಲವಾಯಿತು. ಮುಂದಿನ ನಾಲ್ಕಾರು ವರ್ಷಗಳಲ್ಲಿ ಉಳಿದ ಬ್ಯಾಂಕುಗಳು ಸುಮಾರು ಐವತ್ತು ಹೊಸ ಯೋಜನೆಗಳಿಗೆ ಆರ್ಥಿಕ ನೆರವು ನೀಡಿದವು. ಉಡುಪರು ತೆಗೆದುಕೊಂಡ ಒಂದು ಪುಟ್ಟ ದಿಟ್ಟ ಹೆಜ್ಜೆ ಮುಂದೆ ಆ ಭಾಗದ ರೈತರ ಹಣೆಬರಹವನ್ನೇ ಬದಲಿಸಿದ್ದೊಂದು ಸೋಜಿಗ; ಮಾತ್ರವಲ್ಲ ದಾಖಲೆ.

1994ರ ನವೆಂಬರ್ನಲ್ಲಿ ಪದೋನ್ನತಿಯೊಂದಿಗೆ ಹೈದರಾಬಾದಿಗೆ ಹೊರಟ ಉಡುಪರನ್ನು ಮೋಳೆಗೆ ಮೋಳೆಯೇ ವಿದಾಯ ಕೊಡಲು ಎದ್ದು ನಿಂತದ್ದೂ ಒಂದು ದಾಖಲೆ. ಎಲ್ಲೆಲ್ಲಿ ಹೋಗಿ ಬಂದ ಉಡುಪರನ್ನು ಇವತ್ತಿಗೂ ಕಾಡುತ್ತಿರುವ ಒಂದು ವಿದಾಯವೆಂದರೆ ಮೋಳೆಯ ಹಳ್ಳಿಗರದ್ದು. ಅವರೆಲ್ಲರೊಡನೆ ಒಂದು ಊಟ ಮತ್ತು ಯಾವ ವಿದಾಯದ ಭಾಷಣಗಳಿಲ್ಲದ ಅವರೆಲ್ಲರ ನೀರು ತುಂಬಿದ ಕಣ್ಣುಗಳು. ವೃತ್ತಿ ಸಾರ್ಥಕತೆ ಎನ್ನುತ್ತೇವಲ್ಲ, ಇದಕ್ಕಿಂತ ಹೆಚ್ಚಿನದೇನಾದರೂ ಇರಲಿಕ್ಕೆ ಸಾಧ್ಯವಿದೆಯೆ?

* * *

ಕರುಣಾಳು ಬಾ ಬೆಳಕೆ

1992-94ರ ಅವಧಿಯಲ್ಲಿ ಉಡುಪರು ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅವರೊಮ್ಮೆ ಸೂರತ್ನಲ್ಲಿದ್ದ ಮಗನ ಮನೆಗೆ ಹೋಗಿದ್ದರು. ಹಿಂದೆ ಬೆಂಗಳೂರಿನ ಕಾಲೇಜು ದಿನಗಳಲ್ಲಿ ವುಡ್ಲ್ಯಾಂಡ್ಸ್ ಹೋಟೆಲ್ನ ಹಿಂಭಾಗದ ಕೋಣೆಯೊಂದರಲ್ಲಿ ಇವರ ಸಹವಾಸಿಯಾಗಿದ್ದ ಸುಬ್ರಹ್ಮಣ್ಯ ಹಂದೆಯವರನ್ನು ಅಲ್ಲಿ ಇವರು ಮತ್ತೊಮ್ಮೆ ಭೇಟಿಯಾದರು. ಅವರೊಂದಿಗೆ ಅವರ ಮಗ ಹರೀಶ ಹಂದೆ ಕೂಡಾ ಇದ್ದರು. ಖರಗ್ಪುರದ IIT ಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಅಮೇರಿಕಾದ ಬಾಸ್ಟನ್ನಲ್ಲಿ ಎಂ.ಎಸ್. ಮುಗಿಸಿ ಪಿಹೆಚ್ಡಿ ಮುಂದುವರಿಸುತ್ತಿದ್ದ ಆತ ಪ್ರತಿಭಾವಂತ ಎಂಬುದನ್ನು ಉಡುಪರು ಬಲ್ಲರು. ಆ ಹೊತ್ತು ಆತ ನಿರುತ್ಸಾಹದಲ್ಲಿ ಮುಳುಗಿ ಹೋದಂತಿತ್ತು. ಕುತೂಹಲದಿಂದ ವಿಚಾರಿಸಿದಾಗ  ಉಡುಪರಿಗೆ ತಿಳಿದು ಬಂದದ್ದೆಂದರೆ ಆ ಹೊತ್ತು ಆತ ಭಾರತದ ಒಟ್ಟು ವ್ಯವಸ್ಥೆಯ ಬಗ್ಗೆ ಹತಾಶನಾಗಿದ್ದ. ಆತನ ಹತಾಶತೆಯ ಪೂರ್ವಾಪರಗಳನ್ನು ಉಡುಪರು ಕೆದಕಿ, ಪ್ರಶ್ನಿಸಿ, ತಿಳಿದುಕೊಂಡರು. ಅಮೇರಿಕಾದಲ್ಲಿ renewable energy ಚಟುವಟಿಕೆಗಳ ಸಂಸ್ಥಾಪಕ ನವಲ್ ವಿಲಿಯಮ್ಸ್ ನಡೆಸುತ್ತಿದ್ದ SELF ಎಂಬ ಸೌರಶಕ್ತಿ ಬಳಕೆಯ ಪ್ರತಿಪಾದಕ NGO ಒಂದರಿಂದ ಹರೀಶ್ ಹಂದೆಗೆ ಸೌರಶಕ್ತಿಯ ಹುಚ್ಚು ಹಿಡಿದು, ಡಾಕ್ಟರೇಟ್ಗಾಗಿ ಅದನ್ನೇ ಒಂದು ಪ್ರಾಜೆಕ್ಟ್ ಆಗಿ ತೆಗೆದುಕೊಂಡಾತ ಒಂದು assignment ಗೆ ಸಂಬಂಧಿಸಿದಂತೆ ಭಾರತಕ್ಕೆ ಬಂದಿದ್ದನಂತೆ. ಯಾವುದಾದರೊಂದು ದೇಶದಲ್ಲಿ ನೂರು ಮನೆಗಳಿಗೆ ಸೌರಶಕ್ತಿಯ ಬೆಳಕು ಒದಗಿಸುವ assignment ಯಾವುದೋ ದೇಶ ಯಾಕೆ, ತನ್ನದೇ ಇರುವಾಗ ಎಂದು ಹರೀಶ್ ಭಾರತ ಸರಕಾರದ ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಿದಾಗ ಅವರಿಂದ ಯಾವುದೇ ಪ್ರೋಸಿಗಲಿಲ್ಲ. ಮಾತ್ರವಲ್ಲ, ಹಿರಿಯ ಅಧಿಕಾರಿಗಳು ಆತನ ಉತ್ಸಾಹಕ್ಕಿಷ್ಟು ತಣ್ಣೀರು ಎರಚಿದರು ಕೂಡಾ. ನಿರುತ್ಸಾಹದಿಂದ ಹಿಂದಿರುಗುವ ಹಾದಿಯಲ್ಲಿ ಸೂರತ್ನಲ್ಲಿದ್ದ ತಂದೆಯವರ ಭೇಟಿ, ಅಚಾನಕವಾಗಿ ಕೆ.ಎಂ. ಉಡುಪರ ಭೇಟಿ.

ಉಡುಪರು ಹೇಳಿ ಕೇಳಿ ಟಿ.ಎ. ಪೈಗಳ ಶಿಷ್ಯರು. ಪೈಗಳು ಯಾವತ್ತೂ ಹೇಳುತ್ತಿದ್ದ ಮಾತೊಂದಿದೆ – ಒಳ್ಳೆಯ ಕೆಲಸ ಮಾಡುವ ಸಂದರ್ಭ ಬಂದಾಗ ಮೊದಲು yes ಅನ್ನಬೇಕು. ಹೇಗೆ ಮಾಡುವುದು ಅಂತ ಮತ್ತೆ ಯೋಚಿಸಬೇಕು.

ಹತಾಶನಂತಿದ್ದ ಹರೀಶ ಹಂದೆಯಲ್ಲಿ ಉಡುಪರು ಉತ್ಸಾಹವನ್ನು ತುಂಬಿದರು ಮಾತ್ರವಲ್ಲ, ಧಾರವಾಡಕ್ಕೆ ಬಂದರೆ ನಾನೇನಾದರೂ ಮಾಡಿಕೊಡುತ್ತೇನೆ. ಸೋಲಾರ್ ಲೈಟ್ಸ್ ಕೊಳ್ಳುವವರಿಗೆ ಬ್ಯಾಂಕ್ ಸಾಲ ಕೊಡಿಸುತ್ತೇನೆ. ಆದರೆ ಲೈಟ್ಸ್ ಮಾರುವುದು ಮಾತ್ರ ನಿನ್ನ ಕೆಲಸ ಎಂದರು. ಉಡುಪರು ಹಾಗೆ ಆಶ್ವಾಸನೆ ಕೊಟ್ಟದ್ದನ್ನು ಅಲ್ಲೇ ಮರೆತು ಧಾರವಾಡಕ್ಕೆ ಹಿಂದಿರುಗಿದರು. ಮತ್ತೆ ಅವರಿಗೆ ಈ ವಿಷಯ ನೆನಪಾದದ್ದು 1994ರ ಜುಲೈನಲ್ಲಿ ಹರೀಶ ಹಂದೆ ಮತ್ತೊಬ್ಬ ಪಿಎಚ್ಡಿ ವಿದ್ಯಾರ್ಥಿಯೊಂದಿಗೆ ಧಾರವಾಡಕ್ಕೆ ಬಂದಾಗ. ಉಡುಪರು ಧಾರವಾಡದಲ್ಲಿ ಎಲ್ಲ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ನಡೆಸಿಕೊಟ್ಟ press meet ನಲ್ಲಿ ಹರೀಶ್ ಹಂದೆ ವಿವರವಾದ ಪ್ರಾತ್ಯಕ್ಷಿಕೆ ನೀಡಿದರು. ಮಾಧ್ಯಮಗಳಲ್ಲಿ ಪ್ರೋಸಿಕ್ಕಿತು. ಸೌರಶಕ್ತಿಯ ಸದುಪಯೋಗದ ಬಗ್ಗೆ ಆಸಕ್ತರಾಗಿದ್ದ ಉಡುಪರ ನೇತೃತ್ವದಲ್ಲಿ ಗ್ರಾಮೀಣ ಬ್ಯಾಂಕ್ ಇದಕ್ಕಾಗಿ ಬ್ಯಾಂಕ್ ಸಾಲದ ಒಂದು ಯೋಜನೆಯನ್ನು ಕಟ್ಟಿದರು. ಜಗತ್ತಿನಲ್ಲೇ ಮೊದಲ ಬಾರಿಗೆ ಸೌರಶಕ್ತಿ ಬೆಳಕಿನ ಬಳಕೆಗೆ ಬ್ಯಾಂಕ್ ಸಾಲ ಕೊಟ್ಟ ಕೀರ್ತಿ ಮಲಪ್ರಭಾ ಗ್ರಾಮೀಣ ಬ್ಯಾಂಕಿಗೆ ಸಂದದ್ದು ಹೀಗೆ. ನವಲ್ ವಿಲಿಯಮ್ಸ್ ಈ ವರದಿಯ ಅವಲೋಕನದ ನಂತರ ಕುತೂಹಲದಿಂದ ಭಾರತಕ್ಕೆ, ಧಾರವಾಡಕ್ಕೆ ಬಂದರು, ಒಂದು ಬ್ಯಾಂಕ್ ಸೋಲಾರ್ ಉತ್ಪನ್ನಕ್ಕೆ ಬ್ಯಾಂಕ್ ಸಾಲ ಕೊಡುವುದು ಹೇಗೆ ಸಾಧ್ಯವಾಯಿತೆಂದು ಉಡುಪರಲ್ಲಿ ವಿಚಾರಿಸಲಿಕ್ಕೆ. ಅದೇ ವರ್ಷ ಜರುಗಿದ ಪೊಕೆಂಟಿಕೊ ಕಾನ್ಫರೆನ್ಸ್ (ನ್ಯೂಯಾರ್ಕ್)ಗೆ ಉಡುಪರು ಆಮಂತ್ರಿತರಾದರು, ಮಾತ್ರವಲ್ಲ, ಸೌರ ತಂತ್ರಜ್ಞಾನದ ಬಳಕೆಗಾಗಿ ಬ್ಯಾಂಕ್ ಸಾಲ ಕೊಟ್ಟ ಏಕಮೇವ ಬ್ಯಾಂಕರ್ ಎಂಬ ನೆಲೆಯಲ್ಲಿ ಒಂದು ಪ್ರಬಂಧ ಪ್ರಸ್ತುತಪಡಿಸುವ ಅವಕಾಶವೂ ಅವರದಾಯಿತು.

ಅಲ್ಪ ಸಮಯದಲ್ಲೇ ನವಲ್ ವಿಲಿಯಮ್ಸ್ Solar Electric Lighting Company (SELCO) ಎಂಬ ಬಹು ರಾಷ್ಟ್ರೀಯ ಕಂಪೆನಿಯನ್ನು ಹುಟ್ಟು ಹಾಕಿದರು. ಆಗಷ್ಟೇ ಪಿಎಚ್ಡಿ ಮುಗಿಸಿದ್ದ ಡಾ. ಹರೀಶ್ ಹಂದೆ ಸೆಲ್ಕೊ ಇಂಡಿಯಾದ ಮೆನೇಜಿಂಗ್ ಡೈರೆಕ್ಟರ್ (MD) ಆಗಿ ನಿಯುಕ್ತರಾದರು. ಉಡುಪರ ಕ್ರಿಯಾಶೀಲತೆಯಿಂದ ಬೆರಗಾಗಿದ್ದ ನವಲ್ ವಿಲಿಯಮ್ಸ್, ಅವರನ್ನು ಸೆಲ್ಕೋ ಇಂಟರ್ ನ್ಯಾಶನಲ್ನ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವಂತೆ ಆಮಂತ್ರಿಸಿದರು. ಉಡುಪರು ಆಗ ಬ್ಯಾಂಕ್ ಸರ್ವೀಸ್ನಲ್ಲಿದ್ದುದರಿಂದ ಇದನ್ನು ಒಪ್ಪಿಕೊಳ್ಳದೇ ಹೋದಾಗ, ಅವರ ನಿವೃತ್ತಿಯ ತಾರೀಕನ್ನು ನವಲ್ ವಿಲಿಯಮ್ಸ್ ಕೇಳಿ, ಟಿಪ್ಪಣಿ ಮಾಡಿಕೊಂಡರು.

31-8-1996, ಶನಿವಾರ. ನಿವೃತ್ತಿಯ ನಿಟ್ಟುಸಿರಿನೊಂದಿಗೆ ಉಡುಪರು ಹೈದರಾಬಾದ್ ವಲಯದ ಕಚೇರಿಯ ಡಿ.ಜಿ.ಎಂ. ಆಫೀಸಿನಿಂದ ಹೊರಬೀಳುವ ಹೊತ್ತಿಗೆ ನವೆಲ್ ವಿಲಿಯಮ್ಸ್ರಿಂದ ಅವರಿಗೊಂದು ಟೆಲೆಕ್ಸ್ ಮೆಸೇಜ್. ಅಭಿನಂದನೆಗಳು, ಯಶಸ್ವಿ ನಿವೃತ್ತಿಗೆ. ಸೆಲ್ಕೊ ಡೈರೆಕ್ಟರಾಗಲು ಒಪ್ಪಿಕೊಂಡಿದ್ದಿರಿ, ನೆನಪಿರಬಹುದು. ಇದು ನೇಮಕಾತಿ ಪತ್ರ. ಸೆಪ್ಟೆಂಬರ್ ಒಂದರಿಂದ ಉಡುಪರು ಸೆಲ್ಕೊ ಇಂಟರ್ ನ್ಯಾಶನಲ್ ಕಂಪೆನಿಯ ಡೈರೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಲ್ಕೊ ಮತ್ತು SDCಗಳ ನೆರವಿನಿಂದ ಉಡುಪರೊಂದು ಪ್ರೊಮೋಶನ್ ಫಂಡ್ ಸ್ಥಾಪಿಸಿ, ಅದರ ಬಡ್ಡಿಯಿಂದ ಬಡ ವಿದ್ಯಾರ್ಥಿಗಳಿಗೆ ಸೌರ ವಿದ್ಯುತ್ ಬೆಳಕಿನಲ್ಲಿ ಓದಲು ಸಹಾಯ ಮಾಡುವ ಉದ್ದೇಶದಿಂದ ಬೆಳಕಿಗೆ ವಿದ್ಯಾರ್ಥಿ ವೇತನ (Light Scholarship) ನೀಡುತ್ತಾ ಬಂದಿದ್ದಾರೆ. ಈತನಕ ಉತ್ತರ ಭಾರತದಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ದಕ್ಷಿಣ ಭಾರತದಲ್ಲಿ ಸುಮಾರು ನೂರು ವಿದ್ಯಾರ್ಥಿಗಳು ತಲಾ ರೂ. ಒಂದು ಸಾವಿರದ ಸೋಲಾರ್ ಸ್ಕಾಲರ್ಶಿಪ್ ಪಡೆದಿದ್ದಾರೆ. ಮನೆಯಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆಯಿಲ್ಲದ ಅರ್ಹ, ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರ ಹೆತ್ತವರಿಂದ ಹಾಯರ್ ಪರ್ಚೇಸ್ ಎಗ್ರೀಮೆಂಟ್ ಮಾಡಿಸಿಕೊಂಡು ಆ ಮನೆಗಳಿಗೆ ಸೆಲ್ಕೋದ ಮೂಲಕ ಸೋಲಾರ್ ದೀಪಗಳನ್ನು ಒದಗಿಸುವುದು ಈ ಯೋಜನೆ. ರೂ. 9000 ಬೆಲೆ ಬಾಳುವ ಸೋಲಾರ್ ದೀಪಗಳಿಗೆ ಸೆಲ್ಕೊ ಕೊಡುವ ರಿಯಾಯತಿ ರೂ. 500. ಸ್ಕಾಲರ್ಶಿಪ್ ಹಣ ರೂ. 1000, ಫಲಾನುಭವಿಗಳು ಮೊದಲಿಗೆ ಕೊಡಬೇಕಾದದ್ದು ರೂ. 500 ಮತ್ತು ರೂ. 7000 ಬಡ್ಡಿ ರಹಿತ ಸಾಲ. ಸೋಲಾರ್ ದೀಪ ಇಲ್ಲದೇ ಹೋದರೆ ಈ ಮನೆಗಳಲ್ಲಿ ಚಿಮಣಿ ಎಣ್ಣೆಗಾಗಿ ಏನು ಖರ್ಚು ಮಾಡುತ್ತಿದ್ದರೋ ಅಷ್ಟು ಹಣ ಸಾಲ ಮರುಪಾವತಿಯ ಕಂತು. ಮನೆಗೆ ದೀಪ ಬಂದೊಡನೆ ಈ ಜನರ ಬದುಕಿನ ಶೈಲಿಯೇ ಬದಲಾಗುತ್ತದೆ ಎನ್ನುವುದು ಉಡುಪರ ಅಭಿಪ್ರಾಯ. ರೋಟಿ, ಕಪಡಾ, ಔರ್ ಮಕಾನ್ ಎಂಬ ಬಡವರ ಅಗತ್ಯಗಳ ಕುರಿತ ಮಾತನ್ನು ಉಡುಪರು ರೋಟಿ, ಕಪಡಾ, ಮಕಾನ್ ಔರ್ ರೋಶನಿ ಎಂದು ಬದಲಿಸಿದ್ದಾರೆ.  ಬೆಳಕು ಒಂದು ಮೂಲಭೂತ ಅಗತ್ಯ. ಬಡವರ ಬದುಕನ್ನು ಬೆಳಕು ಬದಲಿಸಬಲ್ಲದು ಎನ್ನುವುದು ಅವರ ಅನುಭವದ ಮಾತು.

1996ರಲ್ಲಿ ಉಡುಪರು ಭಾರತೀಯ ವಿಕಾಸ್ಟ್ರಸ್ಟ್ಗೆ ಬಂದನಂತರ ಡಾ. ಹರೀಶ್ ಹಂದೆ ಮೂಲಕ ಬಿವಿಟಿಗೆ  ಸೋಲಾರ್ ಬಂತು. ಬಿವಿಟಿ ಒಂದು ಜಾಗತಿಕ ಮಟ್ಟದ ಬೆಳಕಿಗೆ ಮುಖಾಮುಖಿಯಾಯಿತು. ಸೆಲ್ಕೊ ರೂ. ಐದು ಲಕ್ಷದ ವೆಚ್ಚದಿಂದ ಬಿವಿಟಿಯನ್ನು ಒಂದು ಸೋಲಾರ್ ಪಾರ್ಕ್ ಮಾಡಿತು. ಸೋಲಾರ್ ಬಳಕೆಯ ಪ್ರಚಾರಕ್ಕೆ ಬಿವಿಟಿ ಒಂದು ಏಕಗವಾಕ್ಷವಾಯಿತು. ಉಡುಪರು ಇದನ್ನು ಬಡವರನ್ನು ಬೆಳಕಿನ ಮೂಲಕ ತಲುಪುವ ಕ್ರಿಯೆ ಎಂದು ಕರೆದರು.

1998ರಲ್ಲಿ ಬಿವಿಟಿ ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ನಡೆಸಿತು. ಸೆಲ್ಕೊ ಮಾತ್ರವಲ್ಲ ಸೌರಶಕ್ತಿಯ ಬಳಕೆಯನ್ನು ಆಧಾರಿಸಿದ ಎಲ್ಲ ಕಂಪೆನಿಗಳ ಎಲ್ಲ ಉತ್ಪನ್ನಗಳಿಗೆ ಇಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು. ವಿಶ್ವ ಮಟ್ಟದ ಎರಡು NGO ಗಳು – ವಿನ್ರಾಕ್ ಇಂಟರ್ ನ್ಯಾಶನಲ್ ಮತ್ತು USAID (United State Agency for International Development) ಸಂಸ್ಥೆಗಳು ಬಿವಿಟಿಯನ್ನು ಗುರುತಿಸಿ, ತಮ್ಮ ಚಟುವಟಿಕೆಗಳಲ್ಲಿ ಬಿವಿಟಿಯನ್ನು ಒಳಗೊಳ್ಳತೊಡಗಿದವು. ಈ ಹೊತ್ತಿಗೆ ಡಾ. ಹರೀಶ್ ಹಂದೆ ಸೋಲಾರ್ ಶಕ್ತಿ ಬಳಕೆಗೆ  ಸಂಬಂಧಿಸಿದಂತೆ ಬಹು ದೊಡ್ಡ ಹೆಸರಾಗಿ ಬೆಳೆದಿದ್ದರು. ಅವರೂ ಪ್ರಮುಖ ಕಾರ್ಯಕ್ರಮಗಳಲ್ಲಿ ಬಿವಿಟಿ ಮತ್ತು ಉಡುಪರನ್ನು ಗುರುತಿಸತೊಡಗಿ ದರು. ರಾಷ್ಟ್ರೀಕೃತ ಬ್ಯಾಂಕುಗಳು ಸೌರಶಕ್ತಿ ಬಳಕೆಗಾಗಿ ಸಾಲ ಕೊಡಲು ಮುಂದಾದಾಗ, ಮೆನೇಜರ್ಗಳ ತರಬೇತಿಯ ಪ್ರಶ್ನೆ ಎದುರಾಯಿತು. ಅಂತರರಾಷ್ಟ್ರೀಯ ಸಂಸ್ಥೆಗಳು ಉಡುಪರನ್ನು ಸಂಪರ್ಕಿಸಿದವು. ವಿನ್ರಾಕ್ ಇಂಟರ್ ನ್ಯಾಶನಲ್ನ ಸಂಯೋಜಕತ್ವದಲ್ಲಿ ಬಿವಿಟಿ ಹೊಸ ಜವಾಬ್ದಾರಿಯನ್ನು ಒಪ್ಪಿಕೊಂಡಿತು. ಉಡುಪರ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಮೆನೇಜರ್ಗಳಿಗೆ ಬಹುದೊಡ್ಡ ಪ್ರಮಾಣದ ತರಬೇತಿ ಕಾರ್ಯಕ್ರಮಗಳು ನಡೆದವು. ಸೌರ ಶಕ್ತ್ಯುತ್ಪನ್ನಗಳ ತಾಂತ್ರಿಕತೆ, ಬ್ಯಾಂಕಿಂಗ್, ಉತ್ತೇಜನ ಮತ್ತು ಫಲಾನುಭವಿಗಳ  ಸಂದರ್ಶನ ಎಂಬ ನಾಲ್ಕು ಅಂಕಗಳ ತರಬೇತಿಯ ಪೂರ್ವಭಾವಿಯಾಗಿ ತರಬೇತುದಾರರ ತರಬೇತಿಗಳು ನಡೆದವು. 6500 ಬ್ಯಾಂಕ್ ಮ್ಯಾನೇಜರ್ಗಳು ಮತ್ತು 1000 ತಂತ್ರಜ್ಞರು ಈ ತರಬೇತಿಯ ಪ್ರಯೋಜನ ಪಡೆದರು. ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಈ ತರಬೇತಿ ಕಾರ್ಯಕ್ರಮಗಳ ಮೌಲ್ಯಮಾಪನ ನಡೆಸಿದವು. ಇದರ ಕೊನೆಯಲ್ಲಿ ಸೌರಶಕ್ತಿಯ ಕ್ಷೇತ್ರದಲ್ಲಿ ಉಡುಪರು ಮತ್ತು ಬಿವಿಟಿ ಬಹುದೊಡ್ಡ ಹೆಸರಾಗಿ ಗುರುತಿಸಲ್ಪಟ್ಟವು.

ಸೌರಶಕ್ತಿಗೆ ಸಂಬಂಧಿಸಿದ ಈ ತೆರನಾದ ತರಬೇತಿ ಕಾರ್ಯಕ್ರಮಗಳು ಉಡುಪರ ನಿವೃತ್ತಿಯ ನಂತರದ ದಿನಗಳಿಗೆ ತುಂಬು ಕೆಲಸವನ್ನು ಒದಗಿಸಿದವು, ಮಾತ್ರವಲ್ಲ, ಬಿವಿಟಿಗೆ ನಿರಂತರ ಸಂಪನ್ಮೂಲ ಪೂರೈಕೆಯನ್ನು ಖಚಿತ ಪಡಿಸಿದವು. ಈ ಕಾರ್ಯಕ್ರಮಗಳ ಮೂಲಕ, ಬಹುಮಟ್ಟಿಗೆ ನಾವು ಮರೆತೇಬಿಟ್ಟಿದ್ದ ಡಾ. ಸಿ.ಕೆ. ಅಂಬಸ್ತಾ, ದಿನಕರರಾವ್ ಮತ್ತು ಎಂ.ಎಸ್. ಹೆಬ್ಬಾರ್ ಮೊದಲಾದ ಪ್ರತಿಭಾವಂತ ನಿವೃತ್ತ ಬ್ಯಾಂಕ್ ಅಧಿಕಾರಿಗಳು ಮತ್ತೊಮ್ಮೆ ಸಮಾಜಮುಖಿ ಬದುಕಿಗೆ ತಿರುಗಿಕೊಂಡರು. ಸೌರಶಕ್ತಿಯ ಬಳಕೆ ಮತ್ತು ಬ್ಯಾಂಕ್ ಸಾಲ ನೀಡಿಕೆ ಮುಂದಿನ ದಿನಗಳಲ್ಲಿ ಗಮನಾರ್ಹವಾಗಿ ವಿಸ್ತಾರಗೊಂಡಿರುವುದನ್ನು ಕಂಡಾಗ ಉಡುಪರ ದೂರದರ್ಶಿತ್ವವನ್ನು ಪ್ರಶಂಸಿಸದೇ ಇರಲಾಗದು.

ಉಡುಪರದ್ದು ಯಾವಾಗಲೂ ಹಂಸಕ್ಷೀರ ನ್ಯಾಯಕ್ಕೆ ಒಪ್ಪುವ ನಿಲುವು. ಸಮರ್ಥ ರನ್ನು, ಕನಸುಗಳಿಂದ ಸಮೃದ್ಧರನ್ನು, ಅಂತರ್ಗತ ದೀಶಕ್ತಿಯಿಂದ ಪ್ರಚೋದಿತರನ್ನು ಗುರುತಿಸು ವಲ್ಲಿ, ಗೌರವಿಸುವಲ್ಲಿ, ಸಮಾಜದ ಮುಂಚೂಣಿಗೆ ತರುವಲ್ಲಿ ಉಡುಪರಿಗೆ ಉಡುಪರಷ್ಟೇ ಸಾಟಿ. ಹಾಗೆ ಹೇಳಿದಾಗ ತಟ್ಟನೆ ನೆನಪಾಗುವ ಹೆಸರು ಚೇರ್ಕಾಡಿ ರಾಮಚಂದ್ರರಾಯರದ್ದು.

ಇತ್ತೀಚೆಗೆ ತಮ್ಮ 92ನೆಯ ವಯಸ್ಸಿನಲ್ಲಿ ನಿಧನರಾದ ಚೇರ್ಕಾಡಿ ರಾಮಚಂದ್ರ ರಾಯರು ಸುಮಾರು ನಲುವತ್ತೈದು ವರ್ಷಗಳ ಹಿಂದೆಯೇ ಉಡುಪರನ್ನು ಆಕರ್ಷಿಸಿದ್ದರು. ‘ಚೇರ್ಕಾಡಿ ಗಾಂದಿ’ ಎಂದೇ ಮುಂದೆ ಖ್ಯಾತರಾದ ರಾಮಚಂದ್ರ ರಾಯರಿಗೆ ವ್ಯಾಪಕವಾದ ಪ್ರಚಾರವನ್ನು ತಂದುಕೊಟ್ಟದ್ದು ಕೆ.ಎಂ. ಉಡುಪರೇ. ರಾಮಚಂದ್ರ ರಾಯರು ‘ಸಾವಯವ ಕೃಷಿಯ ಮೂಲಕ ಈ ದೇಶದ ಕೃಷಿ ಬದುಕಿಗೆ ಹೊಸ ಆಯಾಮವೊಂದನ್ನು ಗುರುತಿಸಿಕೊಡುತ್ತಿದ್ದ ಹೊತ್ತೊಂದರಲ್ಲಿ’ ಅವರ ‘ಕಲ್ಲು ಹಿಂಡಿ ನೀರು ತರುವ ಯತ್ನ’ದ ಬಗ್ಗೆ ಹಿಂದಿನಿಂದ ನಗುವವರ ನಡುವೆ, ಕೃಷಿಯಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಆಸಕ್ತರಾಗಿದ್ದ ಉಡುಪರು ಅವರ ವಿಚಾರಧಾರೆಯ ಮಹತ್ತ ್ವವನ್ನು ಗುರುತಿಸಿದರು, ಗೌರವಿಸಿದರು, ಟಿ.ಎ. ಪೈಗಳ ಗಮನಕ್ಕೆ ತಂದರು. ರಾಮಚಂದ್ರ ರಾಯರ ಹಿರಿಯ ಮಗ ಎಂ.ಎಂ. ರಾವ್ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗ ಪಡೆದು ತಂದೆಯ ಕನಸಿಗೆ ಬೆಂಗಾವಲಾಗಿ ನಿಲ್ಲುವಲ್ಲಿ ಟಿ.ಎ. ಪೈಗಳ ಪ್ರೋತ್ಸಾಹ ಸಲ್ಲುವಲ್ಲೂ ಉಡುಪರ ಪಾತ್ರವಿದೆ.

ಸಣ್ಣ ಕೃಷಿಕರ ಆರ್ಥಿಕ ಸ್ವಾವಲಂಬನೆಗೆ ಅನುಕರಣೀಯ ತತ್ವಗಳ ಮಾದರಿ ನಿರ್ಮಿಸಿದ, ಸರ್ವೋದಯದಲ್ಲಿ ಅಚಲ ವಿಶ್ವಾಸ ಇರಿಸಿದ್ದ ರಾಮಚಂದ್ರ ರಾಯರದ್ದು ‘ಇನ್ನೊಂದು ಹುಲ್ಲಿನ ಕತೆ’ ಎಂಬಷ್ಟು ವ್ಯಾಪಕವಾದ ಗುರುತಿಸುವಿಕೆ ಪ್ರಾಪ್ತವಾದದ್ದೂ ಉಡುಪರ ಮೂಲಕ. 1985ರ ಅಕ್ಟೋಬರ್ನಲ್ಲಿ ಸಿಂಡಿಕೇಟ್ ಬ್ಯಾಂಕಿನ ವಜ್ರ ಮಹೋತ್ಸವದ ಸಂದರ್ಭದಲ್ಲಿ ರಾಮಚಂದ್ರರಾಯರನ್ನು ಆಗ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ರಿಲಯನ್ಸ್ನ ದೀರೂಬಾಯಿ ಅಂಬಾನಿ ಮುಂತಾದ ಗಣ್ಯರೊಂದಿಗೆ ವೇದಿಕೆಯಲ್ಲಿ ಕೂರಿಸಿದ್ದು ಸಿಂಡಿಕೇಟ್ ಬ್ಯಾಂಕಿನ ಪರಂಪರೆಯನ್ನು ಮಾತ್ರವಲ್ಲ, ಉಡುಪರ ದೀಮಂತಿಕೆಯನ್ನೂ ತೋರಿಸುವಂತಹದು. ಭಾರತೀಯ ವಿಕಾಸ್ ಟ್ರಸ್ಟ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಮಚಂದ್ರ ರಾಯರ ಕುರಿತು ವಿವರವಾದ ಮಾಹಿತಿಗಳುಳ್ಳ ಪುಸ್ತಕವೊಂದನ್ನು ಟಿ.ಎ. ಪೈಯವರ ಆಶಯವನ್ನು ಪೂರ್ಣಗೊಳಿಸುವ ಸಲುವಾಗಿ ಉಡುಪರು ಪ್ರಕಟಿಸಿದ್ದರು.

‘‘ಆಧುನಿಕತೆ, ಪಾಶ್ಚಾತ್ಯರ ಅನುಕರಣೆ, ಮೌಲ್ಯಗಳ ಅಧಃಪತನ ಇವುಗಳ ನಡುವೆ ರಾಮಚಂದ್ರ ರಾಯರ ಜೀವನ ಸಾಧನೆಯು ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ. ಲಕ್ಷಾಂತರ ರೈತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವಲ್ಲಿ ಸಹಕಾರಿ’’ ಎಂಬುದು ಉಡುಪರು 45 ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಬರೆಯುತ್ತಲೇ ಉಳಿದಿದ್ದಾರೆ ಎಂಬಲ್ಲಿ ರಾಮಚಂದ್ರ ರಾಯರ ಮಾತ್ರವಲ್ಲ ಉಡುಪರ ದೊಡ್ಡಸ್ತಿಕೆಯೂ ದಾಖಲಾಗುತ್ತದೆ.

* * *

ಸಮುದ್ರೋಲ್ಲಂಘನ – ಜ್ಞಾನ ಸಂವರ್ಧನ

ಗುರಿ ಎಷ್ಟು ದೂರ ಎಂದರೆ ಹೇಳುವವರಿಲ್ಲ. ನಡೆದಂತೆ ದಾರಿಯೂ ಸವೆಯುತ್ತದೆ; ಬದುಕಿನುದ್ದಕ್ಕೆ ಕಲಿಯಲು ಅವಕಾಶಗಳು ಕಲಿತದ್ದು ಬಳಸುವವರಿಗಷ್ಟೇ ಲಭಿಸುತ್ತವೆ.

ಕೆ.ಎಂ. ಉಡುಪರ ಬದುಕನ್ನು ಹತ್ತಿರದಿಂದ ಕಂಡವರಿಗೆ ವಿಸ್ಮಯ ಹುಟ್ಟಿಸುವ ಸಂಗತಿಗಳೆಂದರೆ ಬದುಕಿನ ಪ್ರತಿಯೊಂದು ಹಂತದಲ್ಲೂ ಅವರಿಗೆ ಪ್ರಾಪ್ತವಾಗುತ್ತಾ ಬಂದಿರುವ ಕಲಿಕೆಯ ಅವಕಾಶಗಳು ಮತ್ತು ಪ್ರತಿಯೊಂದು ಸ್ತರದಲ್ಲಿ ಲಭ್ಯವಾದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಅವರ ವ್ರತ. ಕಲಿಕೆಯ ಪ್ರತಿಯೊಂದು ಅವಕಾಶವನ್ನು ಅವರು ಬಳಸಿಕೊಂಡಿದ್ದಾರೆ. ಅಂತಹ ಅವಕಾಶಗಳು ಅವರ ವ್ಯಕ್ತಿತ್ವವನ್ನು ವರ್ಧಿಸಿವೆ. ವಿವಿಧ ಸಂಘಸಂಸ್ಥೆಗಳ ಮೂಲಕ ಈ ತೆರನಾದ ಸಂವರ್ಧನಾವಕಾಶಗಳು ಅವರಿಗೆ ದೇಶಾಂತರದಿಂದಲೂ ಲಭ್ಯವಾಗಿವೆ. ಕಳೆದ ನಲವತ್ತು ವರ್ಷಗಳಲ್ಲಿ ಉಡುಪರು ಹತ್ತು ಹಲವು ಬಾರಿ ವಿದೇಶಗಳನ್ನು ಸಂದರ್ಶಿಸಿ, ಮುಖ್ಯವಾಗಿ ಕೃಷಿಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡು, ಅಭ್ಯಸಿಸಿ, ಅವುಗಳಲ್ಲಿನ ಅನುಕರಣೀಯ ಅಂಶಗಳನ್ನು ನಮ್ಮಲ್ಲಿಗೆ ತರಲು ಯತ್ನಿಸಿದ್ದೂ ಇದೆ. ಈ ತೆರನಾದ ಶೈಕ್ಷಣಿಕ ಮಹತ್ವದ ಅವರ ಕೆಲವು ವಿದೇಶಿ ಪ್ರವಾಸಗಳು ಇಂತಿವೆ :

1971 (ಆಗಸ್ಟ್-ಅಕ್ಟೋಬರ್ ಅವಧಿಯ ಮೂರು ತಿಂಗಳು): ರೋಟರಿ ಫೌಂಡೇಶನ್ನಿನ ವತಿಯಿಂದ ಪ್ರಾಪ್ತವಾದ, ಹನ್ನೆರಡು ಕುಟುಂಬಗಳೊಂದಿಗೆ ಎರಡು ವಾರಗಳ ಯೂರೋಪ್, ಲಂಡನ್, ಪ್ಯಾರಿಸ್, ಕೂಪನ್ ಹೇಗನ್, ರೋಮ್, ಜಿನೇವಾ ಮತ್ತು ಎಂಟು ವಾರಗಳ ಅಮೇರಿಕಾ ಪ್ರವಾಸದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ವೀಕ್ಷಣೆಯ ಅವಕಾಶವೊಂದು ಉಡುಪರ ಪಾಲಿಗೆ ಲಭ್ಯವಾಯಿತು. ಈ ಪ್ರವಾಸವನ್ನೇ ಮುಂದುವರಿಸಿ ಹದಿನೈದು ದಿನಗಳ ಅವಧಿಯಲ್ಲಿ ಜಪಾನ್, ಹಾಂಗ್ಕಾಂಗ್, ಮನಿಲಾ, ಸಿಂಗಪುರ್ ಮತ್ತು ಮಲೇಸಿಯಾ ದೇಶಗಳ ಶೈಕ್ಷಣಿಕ ಸಂದರ್ಶನ ಮತ್ತು ಕೃಷಿ ಮತ್ತು ಗ್ರಾಮೀಣ ಬ್ಯಾಂಕಿಂಗ್ ಅಧ್ಯಯನದ ಅವಕಾಶವೂ ಸಿಂಡಿಕೇಟ್ ಬ್ಯಾಂಕ್ ಮೂಲಕ ಉಡುಪರಿಗೆ ಪ್ರಾಪ್ತವಾಯಿತು. ಈ ಅವಧಿಯಲ್ಲಿ ಮನಿಲಾದ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರ (IRRI)ಕ್ಕೆ ಭೇಟಿ ನೀಡಿದರು.

IRRI ಸಂಶೋಧಕರ ಪಾಲಿನ ಕಾಶಿಯೆಂದೇ ಜನ ಮನ್ನಿತವಾಗಿದೆ.

1978 (ಆಗಸ್ಟ್-ಸೆಪ್ಟೆಂಬರ್ ಅವಧಿಯ ಒಂದು ತಿಂಗಳು) : ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕನಾಗಿ, ವಿಶ್ವಸಂಸ್ಥೆಯ ಮಕ್ಕಳ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಮಕ್ಕಳ ತಂಡದ ಮಾರ್ಗದರ್ಶನ; ಯಕ್ಷಗಾನ ಸೀಮೋಲ್ಲಂಘನದ ಸೂತ್ರಧಾರ. ಈ ಅವಧಿಯಲ್ಲಿ ಸ್ಯಾಂಜೋಸ್, ಅಟ್ಲಾಂಟಿಕಾ, ವಾಷಿಂಗ್ಟನ್, ನ್ಯೂಯಾರ್ಕ್, ಬಫೆಲೋ ಮತ್ತು ಲಂಡನ್ಗಳಲ್ಲಿ ಪ್ರದರ್ಶನವಿತ್ತಿತ್ತು ಮಕ್ಕಳ ಯಕ್ಷಗಾನ ತಂಡ.

1980 (ಆಗಸ್ಟ್-ಸೆಪ್ಟೆಂಬರ್ ಅವಧಿಯ ಎರಡು ತಿಂಗಳು) : ಆಸ್ಟ್ರೇಲಿಯಾದ ನ್ಯಾಶನಲ್ ಬ್ಯಾಂಕ್ ಆಸ್ಟ್ರೇಲಿಯಾದಲ್ಲಿ ನಾಲ್ಕು ವಾರಗಳ ಬ್ಯಾಂಕಿಂಗ್ ತರಬೇತಿ. ನಂತರ ನ್ಯೂಜಿಲ್ಯಾಂಡ್ (ಒಂದು ವಾರ), ಥೈಲ್ಯಾಂಡ್ (4 ದಿನ), ಮನಿಲಾ (3 ದಿನ) ಮತ್ತು ಮಲೇಶಿಯಾ (5 ದಿನ) ಗಳಲ್ಲಿ ಅಧ್ಯಯನ ಪ್ರವಾಸ.

1985 (ಹದಿನೈದು ದಿನ) : ಇಂಗ್ಲೆಂಡಿನ Reading (ಯುನಿವರ್ಸಿಟಿ)ನಲ್ಲಿ ಅಂತರರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ “Farm Clinic” (ಕೃಷಿ ಚಿಕಿತ್ಸಾಲಯ) ಕುರಿತು ಪ್ರಬಂಧ ಮಂಡಿಸಿದರು. ಆ ಯುನಿವರ್ಸಿಟಿಯ ಗೋಲ್ಡನ್ ಜುಬಿಲಿ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಎಂಬತ್ತು ದೇಶಗಳ ಕೃಷಿ ವಿದ್ವಾಂಸರು ಭಾಗವಹಿಸಿದ್ದರು. ಈ ಪ್ರವಾಸದ ಅವಧಿಯಲ್ಲಿ ಲಂಡನ್ನಿಂದ 60-70 ಕಿಲೋಮೀಟರ್ ದೂರದಲ್ಲಿರುವ ರೋಥಮ್ಸ್ಟೆಡ್ ದರ್ಶನ ಭಾಗ್ಯ ಪ್ರಾಪ್ತವಾಯಿತು. ಅಲ್ಲಿರುವ ವಿಶ್ವದ  ಪ್ರಪ್ರಥಮ ಕೃಷಿ ಪ್ರಯೋಗಶಾಲೆಯ ದರ್ಶನ ಪ್ರತಿಯೊಬ್ಬ ಕೃಷಿ ವಿದ್ವಾಂಸನ ಕನಸು.

1990 : ಬ್ಯಾಂಕಿಂಗ್ ಸಂಬಂಧಿತ ಅಧ್ಯಯನಕ್ಕಾಗಿ ನ್ಯೂಯಾರ್ಕ್ ಪ್ರವಾಸ.

1993 (ನಾಲ್ಕು ವಾರ) : ಫ್ರಾನ್ಸ್ ದೇಶದ ಕೃಷಿ ಬ್ಯಾಂಕ್ ಕ್ರೆಡಿಟ್ ಎಗ್ರಿಕೋಲ್ (Credit Agricol)ನ ಶತಮಾನೋತ್ಸವದ ಸಂದರ್ಭದಲ್ಲಿ ಆ ಬ್ಯಾಂಕಿನ ಕಾರ್ಯವೈಖರಿಯ ಅಧ್ಯಯನಕ್ಕಾಗಿ ಪ್ಯಾರಿಸ್ಗೆ ಹೋದ ಉನ್ನತ ಅಧಿಕಾರಿ ಸಮಿತಿಯೊಂದರಲ್ಲಿ ಉಡುಪರು ಸದಸ್ಯರಾಗಿದ್ದರು. ಕ್ರೆಡಿಟ್ ಎಗ್ರಿಕೋಲ್ ಫ್ರಾನ್ಸ್ ದೇಶದ ಅತಿ ದೊಡ್ಡ ಬ್ಯಾಂಕ್ ಮಾತ್ರವಲ್ಲ, ವಿಶ್ವದ ದೊಡ್ಡ ಬ್ಯಾಂಕುಗಳ ಪಂಕ್ತಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ನಿಲ್ಲುವಂತಹದು. ಒಂದು ಕೃಷಿ ಬ್ಯಾಂಕಿಗೆ ಈ ಸಾಧನೆ ಹೇಗೆ ಸಾಧ್ಯವಾಯಿತೆನ್ನುವುದು ಅಧ್ಯಯನದ ವಿಷಯ. ಈ ಪ್ರವಾಸದ ಅವಧಿಯಲ್ಲಿ ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ವಿಚಾರವಿನಿಮಯ ನಡೆಸಿದ ಉಡುಪರು, ಅವಸಾನದ ಅಂಚಿನಲ್ಲಿದ್ದ ಭಾರತೀಯ ಗ್ರಾಮೀಣ ಬ್ಯಾಂಕುಗಳ ಪುನರುತ್ಥಾನದ ಕುರಿತು ಹಲವು ಸಲಹೆಗಳನ್ನು ನೀಡಿದರು. “Liberalise the working of Grameena Banks” (