(ಕ್ರಿ. ಶ. ೧೮೨೨-೧೮೮೪) (ಆನುವಂಶಿಕತೆಯ ನಿಯಮಗಳು)

ಗ್ರೆಗೊರ್ ಮೆಂಡೆಲ್ ಜುಲೈ ೨೨, ೧೮೨೨ರಂದು ಈಗಿನ ಚೆಕೊಸ್ಲೊವಾಕಿಯದ ಹೈಂಜೆನ್ಡಾರ್ಫ್‌ನಲ್ಲಿ ಬಡ ರೈತನ ಮಗನಾಗಿ ಜನಿಸಿದರು. ಇವರ ಮೊದಲಿನ ಹೆಸರು ಯೋಹನ್ ಎಂದಿತ್ತು. ಪ್ರಾಥಮಿಕ ಶಿಕ್ಷಣವನ್ನು ತನ್ನ ಊರಲ್ಲಿಯೇ ಮುಗಿಸಿಕೊಂಡು ಯೋಹನ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓಲ್ಮುಟ್ಸ್ ಫಿಲಾಸಫಿಕಲ್ ಇನ್ ಸ್ಟಿಟ್ಯೂಟ್ ಗೆ ಹೋದರು. ಹಣದ ಕೊರತೆಯಿಂದಾಗಿ ಆ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ಬ್ರೂಯಿನ್ ನಲ್ಲಿಯ ಆಗಸ್ಟೀನಿಯನ್ ಕ್ರೈಸ್ತ ಮಠಕ್ಕೆ ಸೇರಿದರು. ಮುಂದೆ ಕ್ರೈಸ್ತ ಸನ್ಯಾಸ ದೀಕ್ಷೆ ಪಡೆದು ಗ್ರೆಗೊರ್ ಎಂಬ ಹೊಸ ಹೆಸರನ್ನು ಪಡೆದರು. ಆಗಸ್ಟೀನಿಯನ್ ಕ್ರೈಸ್ತ ಮಠ ಅವರನ್ನು ಉನ್ನತ ವ್ಯಾಸಂಗಕ್ಕಾಗಿ ವಿಯೆನ್ನಾ ವಿಶ್ವವಿದ್ಯಾಲಯಕ್ಕೆ ಕಳಿಸಿಕೊಟ್ಟಿತು. ಆದರೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ.

ಬ್ರೂಯಿನ್ ಟೆಕ್ನಿಕಲ್ ಹೈಸ್ಕೂಲಿನಲ್ಲಿ ವಿಜ್ಞಾನ ಶಿಕ್ಷಕನಾಗಿ ಸೇವೆ ಸಲ್ಲಿಸುವ ಅವಕಾಶ ಮೆಂಡೆಲ್ ಗೆ ದೊರಕಿತು. ಅಲ್ಲಿ ಕೆಲಸ ಮಾಡುವಾಗ ಮಠದ ಕೈದೋಟವನ್ನೂ ನೋಡಿಕೊಳ್ಳತೊಡಗಿದರು. ಈ ತೋಟಗಾರಿಕೆ ಹವ್ಯಾಸ ಅವರ ಗಮನವನ್ನು ಜೀವಿಗಳ ಅನುವಂಶಿಕ ಗುಣಗಳ ಕಡೆಗೆ ಸೆಳೆಯಿತು.

ಮೊದಲು ಗ್ರೆಗೂರ್ ಮೆಂಡೆಲ್ ಬಟಾಣಿ ಗಿಡಗಳ ಮೇಲೆ ಪ್ರಯೋಗ ಮಾಡಿದರು. ಸ್ವಕೀಯ ಮತ್ತು ಪರಕೀಯ ಪರಾಗಸ್ಪರ್ಶ ಮಾಡಿಸುವ ಮೂಲಕ ಬೇರೆ ಬೇರೆ ತಳಿಯ ಸಸ್ಯಗಳನ್ನು ಬೆಳೆಸಿದರು. ನಂತರ ತಳಿಗಳನ್ನು ತಯಾರು ಮಾಡಿದರು. ೧೮೫೭ರಿಂದ ಮುಂದೆ ಎಂಟು ವರ್ಷಗಳ ಕಾಲ ಬಟಾಣೆಗಿಡಗಳ ಅಧ್ಯಯನದಿಂದ ಅನುವಂಶಿಕತೆಯ ನಿಯಮಗಳನ್ನು ಅವರು ಪ್ರಕಟಿಸಿದರು. ಆದರೆ, ದುರದೃಷ್ಟವಶಾತ್ ಇವು ೧೯೦೦ವರೆಗೆ ಯಾರ ಗಮನವನ್ನು ಸೆಳೆಯದೇ ಹೋದವು. ಜೀವಿಯಿಂದ ಜೀವಿಗೆ ಗುಣಲಕ್ಷಣಗಳು ಸಾಗಣೆಯಾಗುವ ವಿಧಾನದ ಕುರಿತು ಅವರು ಸಾದರಪಡಿಸಿದ ನಿಯಮಗಳು ಸುಮಾರು ೩೫ ವರ್ಷ ಅಜ್ಞಾತವಾಗಿಯೇ ಉಳಿದವು.

ಅವರ ಸಾವಿನ ನಂತರ ಇಪ್ಪತ್ತನೆಯ ಶತಮಾನದಲ್ಲಿ ಅವರ ಹೆಸರು ಒಡನೆಯೇ ಜಗತ್ಪ್ರಸಿದ್ಧವಾಯಿತು. ಕ್ರಿ. ಶ. ೧೯೦೦ರಲ್ಲಿ ಹ್ಯೂಗೊ ಡಿವ್ರೀಸ್, ಎರಿಕ್ ಷೆರ್ಮಾಕ್ ಮತ್ತು ಕಾರ್ಲ್ ಕಾರೆನ್ಸ್-ಈ ಮೂವರು ವಿಜ್ಞಾನಿಗಳು ಆತನ ಸಾಧನೆಯನ್ನು ಜಗತ್ತಿನ ಗಮನಕ್ಕೆ ತಂದರು.

ಇಂದು ಅನುವಂಶಿಕ ಎಂಜಿನೀಯರಿಂಗ್ (ಜೆನೆಟಿಕ್ ಎಂಜಿನಿಯರಿಂಗ್) ಬಹು ದೊಡ್ಡ ವಿಜ್ಞಾನ ಕ್ಷೇತ್ರವಾಗಿ ಬೆಳೆದಿದೆ. ಇದಕ್ಕೆ ಅಡಿಪಾಯ ಹಾಕಿದ ಕೀರ್ತಿ ಗ್ರೆಗೊರ್ ಮೆಂಡಲ್ ಇವರಿಗೆ ಸಲ್ಲುತ್ತದೆ. ಗ್ರೆಗೊರ್ ಮೆಂಡೆಲ್ ಜನವರಿ ೬, ೧೮೮೪ರಂದು ನಿಧನ ಹೊಂದಿದರು.

ಪರಿಷ್ಕರಿಸಿದವರು: ಡಾ. ಎಸ್.ಕೆ. ನಟರಾಜು

This page was last modified on 22 March 2010 at 10:33.