ಒಂದು ದೊಡ್ಡ ಸಾಮ್ರಾಜ್ಯದ ಅಳಿವು ಉಳಿವುಗಳು ಆ ಸಾಮ್ರಾಜ್ಯದಲ್ಲಿನ ಸಾಮಂತರ ಅಥವಾ ಮಾಂಡಲೀಕರ ನಿಷ್ಠೆಯನ್ನವಲಂಬಿಸಿದ್ದಿತು. ಇಂಥ ಸಾಮಂಥ ಮಾಂಡಲೀಕರ ಚರಿತ್ರೆಯ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆದಿಲ್ಲ. ಅಂತಹದರಲ್ಲಿ ಮುಧೋಳ ಘೋರ‍್ಪಡೆ ಘರಾಣಾವು ಜನ ಸಮುದಾಯದ ಸಂಪರ್ಕವುಳ್ಳದಾಗಿದ್ದು ಜನಜೀವನದ ಆಗುಹೋಗುಗಳಲ್ಲಿ ತಕ್ಕಮಟ್ಟಿಗೆ ಗಣನೀಯ ಪಾತ್ರ ವಹಿಸಿದ್ದಿತು. ಇಂಥವರ ಹೋರಾಟ, ನಿಷ್ಠೆ, ತ್ಯಾಗ ಬಹುದೊಡ್ಡದು. ಈ ರಾಜ ಮನೆತನದ ಇತಿಹಾಸ ಸಾಧ್ಯವಾದಷ್ಟು ಸಮಗ್ರವಾಗಿ ರಚನೆಗೊಳ್ಳದ ಹೊರತು ನಿಜವಾದ ಅರ್ಥದಲ್ಲಿ ನಮ್ಮ ನಾಡಿನ ಸಮಗ್ರ ಇತಿಹಾಸವೆಂಬುದರ ರಚನೆ ಸ್ಪಷ್ಟವಾಗಲಾರದು.

ಈ ದಿಸೆಯಲ್ಲಿ ಅಧ್ಯಯನಕ್ಕೆ ಅಳವಡಿಸಿದಾಗ ಸಣ್ಣಪುಟ್ಟ ಸಂಸ್ಥಾನಿಕರು ಅದರಲ್ಲೂ ಮರಾಠ ಕ್ಷತ್ರೀಯರಾದ ಇವರು ‘ರಾಜ’ ಎಂಬ ಬಿರುದು ಪಡೆದು ಇತಿಹಾಸದಲ್ಲಿ ಮೆರೆದವರು. ಪ್ರಜಾ ಹಿತಕ್ಕೆ ನೀಡಿದ ಕಾಣಿಕೆ ಅವಿಸ್ಮರಣೀಯವಾದುದು. ಇವರ ಕಾಲದಲ್ಲಿ ರಚನೆಗೊಂಡ ಕೆರೆಗಳು, ಬಾವಿಗಳು, ಪುರಗಳು, ಕೋಟೆ ಕೊತ್ತಲುಗಳು, ಮಠಮಾನ್ಯಗಳು ಹಾಗೂ ಕುಸ್ತಿ, ಬೇಟೆ ಪದ್ಧತಿ ಎಂಬ ಕಲೆಗಳು ನಮ್ಮ ನಾಡಿನ ಸಂಸ್ಕೃತಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಳಾಗಿವೆ. ಈವರೆಗೆ ಅಲಕ್ಷಿತವಾಗಿಯೇ ಉಳಿದಿರುವ ಈ ಮನೆತನದ ಇತಿಹಾಸ ರಚನೆಯ ವಿಷಯಗಳಲ್ಲಿ ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ ಎನಿಸುತ್ತದೆ.

ಮುಧೋಳ ಘೋರ‍್ಪಡೆ ಅವರ ಇತಿಹಾಸವನ್ನು ಲಭ್ಯವಿರುವ ಆಕರ ಸಾಮಗ್ರಿಗಳ ಹಿನ್ನೆಲೆಯಲ್ಲಿ ಪುನಾರಚಿಸಲು ಇಲ್ಲಿ ಚಿಕ್ಕ ಪ್ರಯತ್ನ ಮಾಡಲಾಗಿದೆ. ಈ ರಾಜಮನೆತನದ ಬಗ್ಗೆ ಅಧ್ಯಯನ ಮಾಡಲು ೨೦೦೧-೨೦೦೨ರಲ್ಲಿ ಕೆಲವು ದಾಖಲೆಗಳನ್ನು ಸಂಗ್ರಹಿಸಿ ಜೊತೆಗೆ ಅರಮನೆ ಕಾರಭಾರಿಗಳು ರಾಜಪುರೋಹಿತರ ಜೊತೆಗೆ ಸಂದರ್ಶನ ಮಾಡಿ ವಿಷಯ ಸಂಗ್ರಹವನ್ನು ಇಟ್ಟುಕೊಳ್ಳಲಾಗಿತ್ತು. ಹಾಗೇ ಆಗಾಗ ಡಾ. ವೀರೇಶ ಬಡಿಗೇರ ಅವರ ಸಲಹೆ ಮೇರೆಗೆ ಚಿಕ್ಕಪುಟ್ಟ ಹೇಳಿಕೆಗಳನ್ನು ಮಾಹಿತಿಗಳನ್ನು ಮತ್ತು ಸಂಗ್ರಹಿಸಿದ್ದು ಇದೆ. ಈ ಕುರಿತಾಗಿ ಇನ್ನೂ ಅಲಕ್ಷಿತವಾಗಿಯೇ ಉಳಿದಿರುವ ಅಂಶಗಳನ್ನು ಒಂದೆಡೆಗೆ ತರಲು ಕನ್ನಡ ವಿಶ್ವವಿದ್ಯಾಲಯ ನನಗೆ ಪ್ರೋತ್ಸಾಹಿಸಿದ್ದು ತುಂಬಾ ಸಹಕಾರಿಯಾಗಿದೆ.

ಕರ್ನಾಟಕ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಮೆರೆದ ಹಲವು ರಾಜ ಮಹಾರಾಜರಲ್ಲಿ ಮುಧೋಳ ಘೋರ‍್ಪಡೆ ಘರಾಣಾದಲ್ಲಿ ಆಳ್ವಿಕೆ ಮಾಡಿ ಹೋದ ರಾಜರು ಒಬ್ಬರಾಗಿದ್ದಾರೆ. ಸ್ವಾತಂತ್ರ‍್ಯ ಪೂರ್ವದಿಂದ ಹಿಡಿದು ಸಂಸ್ಥಾನಿಕರ ವಿಲಿನೀಕರಣಗಳವರೆಗೆ ಆದಿಲ್‌ಷಾಹಿ ಪೇಶ್ವೆಗಳು ಹೈದರಾಲಿ ಹಾಗೂ ಬ್ರಿಟಿಷ್‌ರೊಡನೆ ವಹಿಸಿದ ಪಾತ್ರವೆಂತಹದು ಎಂಬುದನ್ನು ಇವರ ಹೋರಾಟದ ಮುಖಗಳ ಪರಿಶೀಲನೆಯಿಂದ ಮನಗಾಣಬಹುದಾಗಿದೆ.

ಘೋರ‍್ಪಡೆ ಘರಾಣಾವು ಅನೇಕ ರಾಜ್ಯದ ಹೊರಗಡೆ ಎಲ್ಲೆ ಚಾಚಿ ಹಬ್ಬಿದ್ದರೂ ಈವರೆಗೆ ಇತಿಹಾಸ ರಚಿಸಲು ಮುಂದಾಗದಿರುವುದಕ್ಕೆ ಸಾಕಷ್ಟು ಆಕರಗಳ ಕೊರತೆ ಇರುವುದು. ‘ಪುಣೆ’ಯ ಭಾರತ ಇತಿಹಾಸ ಸಂಶೋಧನ ಮಂಡಳ, ಕೇಂದ್ರ ಸರಕಾರಿ ಅಭಿಲೇಖಾಲಯಗಳಲ್ಲಿ ದೇಸಗತಿಗಳ ಕುರಿತು ಅಧ್ಯಯನಕ್ಕೆ ತೊಡಗಿದಾಗ ಅಲ್ಲಿ ಕೂಡ ಆಕರ ಸಾಮಗ್ರಿಗಳು ಇತ್ತೀಚೆಗೆ ಕಂಡುಬಂದವು. ಅವುಗಳ ಬಳಕೆ ಹಾಗೂ ಪ್ರಕಟಣೆ ಆಗದೇ ಇರುವುದರಿಂದ ಇಂಥ ಸಂಸ್ಥಾನಿಕರ ಇತಿಹಾಸ ರಚನೆಗೆ ಅವಕಾಶವಿಲ್ಲದೆ ಮರೆಮಾಚಿದಂತಾಗಿದೆ. ಅಂತಹ ಒಂದು ಸನ್ನಿವೇಶದಲ್ಲಿ ಮರೆಮಾಚಿ ನಿಂತ ಈ ಘೋರ‍್ಪಡೆ ಘರಾಣಾ ಅರಸು ಮನೆತನದ ಇತಿಹಾಸ ಈ ದಿನದಲ್ಲಿ ತಕ್ಕ ಮಟ್ಟಿಗೆ ಬೆಳಕು ಕಂಡಂತಾಯಿತು.

ಅಧ್ಯಯನದ ಆಕರಗಳು

ಮುಧೋಳ ಘೋರ‍್ಪಡೆ ಅರಸರು ಆದಿಲ್ ಶಾಹಿಯ ಆಡಳಿತದಲ್ಲಿ ಅದರಲ್ಲೂ ಸೇನಾ ನಾಯಕತ್ವದಲ್ಲಿ ನಿಷ್ಟೆ ಹೊಂದಿ ವಂಶಪರ‍್ಯಂತ ತಮ್ಮ ಹೆಸರನ್ನು ಉಳಿಸಿಕೊಂಡು ಬಂದದ್ದು ಅನೇಕ ಫರ್ಮಾನುಗಳಲ್ಲಿ ಕಂಡುಬರುತ್ತದೆ. ಚರಿತ್ರೆಯನ್ನು ಕಟ್ಟಿಕೊಡಲು ಈ ಫರ್ಮಾನುಗಳು ಪ್ರಮುಖ ಆಕರಗಳು. ಆದರೆ ಅವೆಲ್ಲವು ಮರಾಠಿ ಭಾಷೆಯಲ್ಲಿರುವುದರಿಂದ ಹೆಚ್ಚು ಬಳಕೆಯಾಗಲಿಲ್ಲ. ಎರಡನೇದಾಗಿ ಅವರ ವಂಶಾವಳಿಯನ್ನು ಕೂಡ ಗಮನಿಸಿದಾಗ ಸಂಪೂರ್ಣ ವಿವರಣೆ ಸಿಗುವುದಿಲ್ಲ. ವಂಶಾವಳಿಯನ್ನು ಯಾರು ತಯಾರಿಸಿದರು ಎಂಬುದರ ಬಗ್ಗೆ ಉಲ್ಲೇಖವಿಲ್ಲ. ಬಾ.ಬಾ. ಘೋರ‍್ಪಡೆಯವರು ತಯಾರಿಸಿದ ೪ ವಿಭಿನ್ನ ವಂಶಾವಳಿ ಸಿಗುತ್ತವೆ. ಅವೆಲ್ಲವೂ ಒಂದೇ ರೀತಿಯಾಗಿಲ್ಲ. ಬೇರೆ ಬೇರೆ ಕಡೆಗೆ ವಂಶಾವಳಿ ಹರಿದು ಹಂಚಿ ಹೋಗಿವೆ. ಲೇಖಕ ಆಪ್ಪೆಯವರು ರಚಿಸಿದ ‘ಘೋರ‍್ಪಡೆ ಘರಾಣಾಚೆ ಇತಿಹಾಸವು’ ಬೃಹತ್ ಗ್ರಂಥವಿದ್ದು, ಅದರಲ್ಲಿ ಕೂಡ ಭಿನ್ನ ಭಿನ್ನ ನೆಲೆಯಲ್ಲಿ ಹೋರಾಟ ಹಾಗೂ ಘನತೆ ಗೌರವಗಳನ್ನು ಸಂಪಾದಿಸಿದ್ದರ ಕುರಿತು ಮಾಹಿತಿ ದೊರೆಯುತ್ತದೆ.

ಘೋರ‍್ಪಡೆ ಅರಸರು ಶಾಸನಗಳನ್ನು ಬರೆಸಿಲ್ಲ. ಆದರೆ ಹಲವು ಧರ್ಮದವರಿಗೆ ಪುರೋಹಿತ ಶಾಹಿಗಳಿಗೆ ಸಿದ್ದಾಟಗಿಯವರಿಗೆ ಪೂಜಾರಿಗಳಿಗೆ ಮಾಲಗಾರರಿಗೆ ದಾನ ಕೊಟ್ಟಿದ್ದು ಇದೆ. ಕಂಚಿನ ಪತ್ರಗಳು ಹಾಗೂ ದಾನ ತೆಗೆದುಕೊಂಡ ಪೂಜಾರಿಗಳು ತಾವೇ ಶಾಸನ ಕೆತ್ತಿಸಿದ್ದು ಸಿಗುತ್ತದೆ. ಹೀಗೆ ರಾಣಿಯರು ದೇವ ದಯಾ ಮತ್ತು ಬ್ರಹ್ಮದಯಾ ದಾನಗಳನ್ನು ನೀಡಿದ್ದು ತಿಳಿದು ಬರುತ್ತದೆ. ಇಂಥ ಇನಾಂ ನೀಡಿದ ೩ ದಾಖಲೆಗಳನ್ನು ತಹಶೀಲ್ದಾರ ಕಛೇರಿಯಲ್ಲಿ ಸ್ವತಃ ನಾನು ಕಂಡಿದ್ದೇನೆ. ಇಂತಹ ದಾನದತ್ತಿಗಳಿಗೆ ಅವರ ಹಿಂದಿನ ಹಿರಿಯರು ನೀಡಿದ ನಡೆಸಿಕೊಂಡು ಬಂದಿರುವುದನ್ನು ಸಹಜವಾಗಿ ಅರಿತು ತಾವು ಪುಣ್ಯ ಲಭಿಸಲೆಂದು ಮುಂದುವರೆಸಿದ್ದು ಕಾಣುತ್ತದೆ. ಇಂಥ ದಾನಗಳು ಜನೋಪಯೋಗಿ ಕಾರ್ಯಗಳೇ ಆಗಿರುತ್ತಿದ್ದವೆಂದು ಬೇರೆ ಹೇಳಬೇಕಾಗಿಲ್ಲ. ಇಂಥ ಎಲ್ಲ ಇತಿಹಾಸದ ಕವಲುಗಳನ್ನು ಒಂದೆಡೆ ಸೇರಿಸಿ ವಿವಿಧ ಪ್ರದೇಶಗಳ ವೈವಿಧ್ಯಪೂರ್ಣವಾದ ಆಧಾರಗಳನ್ನು ಸಂಗ್ರಹಿಸಿ ಶೋಧಿಸಿ ಶುದ್ಧೀಕರಿಸಿ ಜೋಡಿಸಿದಾಗ ನಮ್ಮ ಪೂರ್ವಜರ ಬಾಳಿನ ಚಿತ್ರ ಸ್ಪಷ್ಟವಾಗಿ ಮೂಡುತ್ತದೆ.

ಇತಿಹಾಸದ ಆಧ್ಯಯನಕ್ಕೆ ಆಯಾ ಪ್ರದೇಶದ ಭಾಷೆ ಧರ್ಮ ಸಂಸ್ಕೃತಿಗಳ ಬಲ್ಲವರ ಸಹಕಾರ ಬೇಕಾಗುತ್ತದೆ. ಸಂಘ ಸಂಸ್ಥೆಗಳ ಧಾರ್ಮಿಕ ಕ್ಷೇತ್ರಗಳ ಇತಿಹಾಸ ಖಚಿತವಾಗಿ ಹೊರಬಂದಾಗ ನಮ್ಮ ಇತಿಹಾಸ ಸ್ಪಷ್ಟಗೊಳ್ಳುತ್ತದೆ. ಈ ಕಾರಣದಿಂದಲೇ ಸ್ಥಳೀಯ ಮಾಹಿತಿ ಹಾಗೂ ಸಂದರ್ಶನಗಳೂ ಕೂಡ ಪೂರಕವಾಗುತ್ತವೆ.

ದಕ್ಷಿಣಭಾರತ ಉತ್ತರಭಾರತದುದ್ದಕ್ಕೂ ರಾಜಕೀಯ ಹಿರಿಮೆ ಗರಿಮೆಗಳನ್ನು ಮೆರೆದ ಅನೇಕ ಅರಸುಮನೆತನಗಳಲ್ಲಿ ರಜಪೂತ ಕ್ಷತ್ರಿಯ ಮರಾಠ ಘರಾಣಾವು ಒಂದು. ಬಿಜಾಪುರ ಆದಿಲ್ ಶಾಹಿಯ ಕಾಲದಲ್ಲಿ ಕರ್ನಾಟಕದ ಇತಿಹಾಸದುದ್ದಕ್ಕೂ ಈ ಘರಾಣವು ವಹಿಸಿದ ಪಾತ್ರವೆಂತಹದು ಎಂಬುದನ್ನು ಇವರ ಆಳ್ವಿಕೆಯ ವಿಭಿನ್ನ ಮುಖಗಳ ಪರಿಶೀಲನೆಯಿಂದ ಮನಗಾಣಬಹುದಾಗಿದೆ.

ಬಹಮನಿ ಸುಲ್ತಾನರ ಕಾಲದಿಂದಲೂ ಈ ಮನೆತನದವರು ರಣಭೈರವರಾಗಿ ಹೋರಾಟ ಮಾಡಿದ್ದು ಗಮನಾರ್ಹವಾಗಿದೆ. ಪೇಶ್ವೆ ಮಾಧವರಾಯನ ವಿಶ್ವಾಸಕ್ಕೆ ಪಾತ್ರನಾಗಿ ಮೂರುವರೆ ಪೋಷಾಕು ಪಡೆದು ಆಡಳಿತ ನಡೆಸಿದ್ದು ಇದೆ. ಬ್ರಿಟಿಷರ ವಿರೋಧ ಗಳಿಸಿ ಈ ಮನೆತನವು ಮುಂದೆ ಅವರ ಅನುಯಾಯಿಯಾಗಿ ಸಂಸ್ಥಾನ ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಿತ್ತು. ಹಲಗಲಿ ಬೇಡರ ಹೋರಾಟದಲ್ಲಿ ಬ್ರಿಟಿಷರಿಗೆ ಬಾಹ್ಯವಾಗಿ ನಿಂತಿತು. ಕೊನೆಗೆ ಘೋರ‍್ಪಡೆ ನೇತೃತ್ವದಲ್ಲಿ ಸಾವಿರಾರು ಮುಗ್ಧ ಜನರ ಗಲ್ಲಿಗೇರಿಸಲು ಸಹಾಯ ಮಾಡಿತು.

ಘೋರ‍್ಪಡೆ ಸಂಸ್ಥಾನಿಕರ ಚಾರಿತ್ರಿಕ ಹಿನ್ನೆಲೆ

ಇತಿಹಾಸ ಕಾಲದಿಂದ ಹಿಡಿದು ಏಕೀಕೃತ ಕರ್ನಾಟಕ ರೂಪಗೊಳ್ಳುವವರೆಗೆ ಜಿಲ್ಲೆಯು ನಡೆದು ಬಂದಿರುವ ದಾರಿ ಆಕರ್ಷಕವಾಗಿದ್ದು, ಕರ್ನಾಟಕದ ಸಂಸ್ಕೃತಿಗೆ ಜಿಲ್ಲೆಯ ಕೊಡುಗೆ ವಿಶಿಷ್ಟವಾಗಿದೆ. ಬಾಗಲಕೋಟೆಯೆಂಬುದು ರಾವಣನ ರಾಜ್ಯಕ್ಕೆ ಸೇರಿದ ಸಂಗೀತಕಾರರ ಊರಾಗಿತ್ತೆಂದು ತಿಳಿಯಲಾಗಿದೆ. ಹಾಗೆ ಸುಮಾರು ೧೦ನೇ ಶತಮಾನಕ್ಕೆ ಸೇರಿದ ಶಾಸನಗಳಲ್ಲಿ ವಿಜಾಪುರ ಜಿಲ್ಲೆಯು ಹಿಂದೆ ತರ್ದವಾಡಿ ೧೦೦೦ ಹಗರಟಿಗೆ ೩೦೦ ಅಣಂದೂರು ೩೦೦ ಬೆಳ್ವಲ ೩೦೦ ಮುಂತಾದ ಆಡಳಿತ ವಿಭಾಗಗಳು ನಡುವೆ ಹಂಚಿಹೋಗಿದ್ದ ಅಂಶ ವೇಧ್ಯವಾಗುತ್ತದೆ. ಸ್ವಲ್ಪ ಇತಿಹಾಸ ಪೂರ್ವಕ್ಕೆ ಹೋದರೆ ಆ ಕಾಲಕ್ಕೆ ಸೇರಿದ ಹಲವಾರು ಪ್ರಾಗೈತಿಹಾಸಿಕ ನೆಲೆಗಳು ಜಿಲ್ಲೆಯ ಶಿಲಾಯುಗ, ಮಾನವನ ವಸತಿಗೆ ಜಿಲ್ಲೆಯ ಭೌಗೋಳಿಕ ಪರಿಸರ ಪ್ರಶಸ್ತವಾಗಿದ್ದ ಅಂಶ ಗೊತ್ತಾಗುತ್ತದೆ. ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ರಾಮಾಯಣ ಮಹಾಭಾರತದ ಪೌರಾಣಿಕ ಘಟನೆಗಳೊಂದಿಗೆ ಸಂಬಂಧ ಸೂಚಿಸುವಂತಹ ಐತಿಹ್ಯಗಳಿವೆ. ಒಟ್ಟಂದದಲ್ಲಿ ಗ್ರಹಿಸುವುದಾದರೆ ಅಖಂಡ ಬಿಜಾಪುರ ಜಿಲ್ಲೆಯು ನಿಜವಾದ ಅರ್ಥದಲ್ಲಿ ನಂದ-ಮೌರ್ಯ ಶಾತವಾಹನ ಹಾಗೂ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತೆಂಬುದು ಗಮನಾರ್ಹ.

ಆಡಳಿತವನ್ನೇ ಕೇಂದ್ರವಾಗಿ ಗುರುತಿಸುವುದಾದರೆ ನಿಜವಾದ ಅರ್ಥದಲ್ಲಿ ಆಡಳಿತ ಆರಂಭವಾಗುವುದು ಬಾದಾಮಿ ಚಾಲುಕ್ಯರೊಂದಿಗೆ. ಜಿಲ್ಲೆಯ ಇತಿಹಾಸಕ್ಕೆ ನಾಂದಿ ಹಾಡಿದ ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆ ಅಪೂರ್ವ. ಇವರನ್ನು ಬಗ್ಗು ಬಡಿದು ಬಂದವರು ರಾಷ್ಟ್ರಕೂಟರು. ರಾಷ್ಟ್ರಕೂಟರ ಸಾಮ್ರಾಜ್ಯದ ಪ್ರಧಾನ ನಾಡುಗಳಲ್ಲಿ ಒಂದಾಗಿದ್ದ ತರ್ದವಾಡಿ ನಾಡಿನ ಅಭ್ಯುದಯಕ್ಕೆ ಇವರು ಶ್ರಮಿಸಿರುವುದನ್ನು ಶಾಸನಗಳು ಪ್ರತಿಧ್ವನಿಸುತ್ತದೆ. ಕಲ್ಯಾಣ ಚಾಲುಕ್ಯ, ಹೊಯ್ಸಳ, ಯಾದವ, ವಿಜಯನಗರ, ಆದಿಲ್‌ಶಾಹಿ ಮೊದಲಾದ ಸಾಮ್ರಾಟರ ಸಾಮಂತರ ಆಡಂಬೊಲವಾದ ಇಲ್ಲಿ ಅಸಂಖ್ಯಾತ ಶಾಸನಗಳಿಂದ ಆಡಳಿತದ ವಿವರಗಳನ್ನು ಪಡೆಯಬಹುದು.

ರಾಷ್ಟ್ರಕೂಟರನ್ನು ಬದಿಗೊತ್ತಿ ಗದ್ದುಗೆ ಏರಿದ ಕಲ್ಯಾಣ ಚಾಲುಕ್ಯರ ಮಧ್ಯಂತರದಲ್ಲಿ ಅಧಿಕಾರಕ್ಕೆ ಬಂದ ಕಳಚೂರಿಗಳು ನೀಡಿದ ಆಡಳಿತ ಗಮನಾರ್ಹವಾಗಿದೆ. ತುಂಗಭದ್ರೆಯ ದಕ್ಷಿಣಕ್ಕೆ ಹೊಯ್ಸಳರು ಉತ್ತರಕ್ಕೆ ದೇವಗಿರಿ ಯಾದವರು ಪ್ರಬಲ ರಾಜಕೀಯ ಪ್ರತಿಸ್ಪರ್ಧಿಗಳಾಗಿ ರೂಪಿತಗೊಂಡು ೧೩ನೇ ಶತಮಾನದುದ್ದಕ್ಕೂ ರಾಜಕೀಯ ಸಾರ್ವಭೌಮತ್ವಕ್ಕಾಗಿ ಪರಸ್ಪರ ಹೋರಾಟದಲ್ಲಿ ತೊಡಗಿದ್ದರು. ದೆಹಲಿ ಖಿಲ್ಜಿ ಮನೆತನದ ಅಲ್ಲಾವುದ್ದೀನ್ ಖಿಲ್ಜಿಯಿಂದ ಆರಂಭವಾದ ದಖನ್ ದಾಳಿ ಸತತವಾಗಿ ಮುಂದುವರಿದು ಮುಂದೆ ತುಘಲಕ್ ಮನೆತನದ ಮಹ್ಮದ್ ಬಿನ್ ತುಘಲಕನ ಆಳ್ವಿಕೆಯಲ್ಲಿ ದಕ್ಷಿಣದಲ್ಲಿ ಉಂಟಾದ ರಾಜಕೀಯ ಕ್ಷೋಭೆಯ ಲಾಭ ಪಡೆದು ೧೦ ವರ್ಷಗಳಲ್ಲಿ ಅಂತರದಲ್ಲಿ ವಿಜಯನಗರ ಹಾಗು ಬಹಮನಿ ಸಾಮ್ರಾಜ್ಯವು ವಿಶಾಲವಾಗಿ ಪ್ರಾಂತ ಹೊಂದಿತ್ತು. ಮುಂದೆ ಬಹಮನಿ ಸಾಮ್ರಾಜ್ಯದ ಒಳ ಜಗಳದಿಂದ ೫ ಭಾಗಗಳಾಗಿ ವಿಂಗಡಣೆ ಹೊಂದಿ ಪ್ರತ್ಯೇಕ ಬಹಮನಿ ಸಾಮ್ರಾಜ್ಯದ ಒಂದು ಅಂಗವಾಗಿ ವಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಆದಿಲ್‌ಶಾಹಿಗಳು ನೆರೆಯ ವಿಜಯನಗರ ಸಾಮ್ರಾಜ್ಯದೊಂದಿಗೆ ೧೫೬೫ರವರೆಗೆ ರಾಜ್ಯ ವಿಸ್ತರಣೆಗಾಗಿ ಕದನದಲ್ಲಿ ತೊಡಗಿದ್ದು, ನಂತರದಲ್ಲಿ ವಿಜಯನಗರ ಸಾಮ್ರಾಜ್ಯ ಪತನ ಹೊಂದಿತು. ಅದರಲ್ಲಿ ಘೋರ‍್ಪಡೆಯವರ ಪಾತ್ರ ಹಿರಿದಾಗಿತ್ತು.

ಮುಂದೆ ಆದಿಲ್‌ಶಾಹಿ ಆಳ್ವಿಕೆ ತನ್ನ ಬೇರುಗಳನ್ನು ಎಲ್ಲೆಡೆ ಚಾಚಿ ವಿಸ್ತಾರವಾಗಿ ಬೆಳವಣಿಗೆ ಕಂಡಿತು. ರಾಜಕೀಯವಾಗಿ ಮೊಘಲ ಮರಾಠ ಪೇಶ್ವೆ ಅಮಲ ಶುರುವಾಯಿತು. ಹೈದರ ಟಿಪ್ಪು ಯಾದವರು ಸೇರಿಕೊಂಡು ೧೩೩೪ರಿಂದ ೧೩೪೭ರಲ್ಲಿ ಬಹಮನಿ ಸಾಮ್ರಾಜ್ಯವು ಜನ್ಮ ತಾಳಿತು. ಹೀಗೆ ಅನೇಕ ಪ್ರಾದೇಶಿಕ ಚಾರಿತ್ರ‍್ಯ ಹೊಂದಿದ ಈ ಪ್ರದೇಶವು ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿದೆ.

ಆದಿಲ್‌ಶಾಹಿ ಮನೆತನವು ೧೪೮೯ರಲ್ಲಿ ಸ್ಥಾಪನೆ ಆಗುತ್ತದೆ. ಯುಸೂಪ್ ಆದಿಲ್ ಖಾನನು ಘೋರ‍್ಪಡೆ ಸೇನಾ ನಾಯಕನನ್ನು ಬೆಳೆಸುವುದರೊಂದಿಗೆ ಸ್ಥಳೀಯ ಆಡಳಿತಗಾರನಾಗಿ ಪ್ರವರ್ಧಮಾನಕ್ಕೆ ಬರುತ್ತಾನೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಘೋರ‍್ಪಡೆ ಎಂಬ ಹೆಸರಿನಿಂದಲೇ ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿಯೂ ಈ ಘರಾಣಾದ ವಂಶದವರು ಆಡಳಿತ ನಡೆಸಿದ್ದೂ ಗಮನಾರ್ಹವೆನಿಸಿದೆ.

ಘೋರ‍್ಪಡೆ ಘರಾಣಾ ಮೂಲ

ಮಧ್ಯಕಾಲೀನ ಯುಗದ ಭಾರತದ ಇತಿಹಾಸದಲ್ಲಿ ರಜಪೂತರು ವಹಿಸಿದ ಪಾತ್ರ ಮಹತ್ವ ಪೂರ್ಣವಾದದು. ಹರ್ಷವರ್ಧನ ನಂತರ ಉತ್ತರಭಾರತದಲ್ಲಿ ಏಳ್ಗೆ ಹೊಂದಿದ ರಜಪೂತರು ಭಾರತದ ರಾಜಕೀಯ ಮೇಲೆ ಸಾಕಷ್ಟು ಪ್ರಭಾವ ಬೀರಿದರು. ಕ್ರಿ.ಶ. ೮ನೇ ಶತಮಾನದ ತರುವಾಯ ರಜಪೂತರು ಉತ್ತರ ಮತ್ತು ದಕ್ಷಿಣಭಾರತದಲ್ಲಿ ಹಲವು ರಾಜ್ಯಗಳನ್ನು ಸ್ಥಾಪಿಸಿ ಆಳಲು ಮೊದಲು ಮಾಡಿದರು. ಮುಸ್ಲಿಂರು ಇವರಿಂದಲೇ ಉತ್ತರಭಾರತವನ್ನು ಗೆದ್ದು ಪಡೆದುಕೊಂಡರು. ಇವುಗಳ ರಾಜಕೀಯ ಮತ್ತು ಧಾರ್ಮಿಕ ಧಾಳಿ ಆರಂಭಿಸಿದಾಗ ಹಿಂದೂ ಧರ್ಮ ಪರಂಪರೆಗಳ ನಿಷ್ಠಾವಂತ ಸೆಣಸಾಟ ರಕ್ಷಕರಾಗಿ ಹೋರಾಟ ನಡೆಸಿದರು. ಅವರೇ ರಜಪೂತ ಕ್ಷತ್ರೀಯ ಮರಾಠರು. ಅವರ ಮಹತ್ವಪೂರ್ಣ ಆಡಳಿತ ಸ್ವಾಮಿನಿಷ್ಠೆ ಮತ್ತು ಉದಾರತೆಯನ್ನು ಅವರ ಚರಿತ್ರೆಯಿಂದ ತಿಳಿಯಬಹುದಾಗಿದೆ.

ರಜಪೂತ ಮೂಲ

ರಜಪೂತರು ಮೂಲತಃ ಯಾವ ಪ್ರದೇಶದವರು ಎಂಬುದು ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಅವರ ಮೂಲಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ಎರಡು ವಾದಗಳು ಹುಟ್ಟಿಕೊಂಡಿವೆ. ಮೊದಲನೆಯದಾಗಿ ವಿದೇಶಿಯ ಮೂಲ ಎರಡನೇಯದು ದೇಶಿಮೂಲ.

ಮೊದಲನೆಯದಾಗಿ ‘ವಿದೇಶಿಯ ಶಕರು, ಕುಶಾನರು, ಹೂಣರು, ಭಾರತದ ಮೇಲೆ ದಾಳಿ ಮಾಡಿ, ಇಲ್ಲಿಯೇ ನೆಲೆ ನಿಂತು ಭಾರತೀಯ ಸ್ತ್ರೀಯರನ್ನು ವಿವಾಹವಾಗಿ ಸಮಾಜದಲ್ಲಿ ಬೆರೆತು ಹೋಗಿ ಸಂಸ್ಥಾನದಂತಹ ಪಾಳೆಪಟ್ಟುಗಳನ್ನು ಸ್ಥಾಪಿಸಿದರು. ಇವರನ್ನೇ ರಜಪೂತ ಅಥವಾ ಕ್ಷತ್ರೀಯರೆಂದು ಕರೆಯಲಾಗುತ್ತದೆ. (ಭಾರತದ ಇತಿಹಾಸ, ಟಿ.ಜಿ. ಚಂದ್ರಪೂಜಾರಿ, ಪು-೨೧೦)

“ರಜಪೂತರು ಮೂಲತಃ ಭಾರತೀಯರು. ಅವರು ಹೊರನಾಡಿನಿಂದ ಬಂದವರಲ್ಲ” ಎಂಬುದನ್ನು ಜಿ.ಎಸ್. ಓಝ್ಟ್, ಇತರೆ ವಿದ್ವಾಂಸರು ಗುರುತಿಸಿದ್ದಾರೆ. (ಸದರ, ೨೧೧) ಕ್ರಿ.ಶ.೧೯೦೧ರ ಜನಗಣತಿ ವರದಿ ಪ್ರಕಾರದ ರಾಜಪೂತರ ದೈಹಿಕ ಲಕ್ಷಣಗಳು ಆರ್ಯರ ದೈಹಿಕ ಲಕ್ಷಣಗಳಿಗೆ ಅನುರೂಪವಾಗಿವೆ ಎಂದು ಹೇಳಿದೆ. ಇವರು ಭಾರತೀಯರಾಗಿದ್ದರಿಂದಲೇ ಮುಸ್ಲಿಂರ ವಿರುದ್ಧ ಸುದೀರ್ಘ ಕಾಲಾವಧಿಯವರೆಗೆ ಹೋರಾಡಿದರು. ಆ ಮೂಲಕ ಅವರು ಹಿಂದೂ ಧರ್ಮವನ್ನು ರಕ್ಷಿಸಿದರು ಎಂದು ಹೇಳಲಾಗಿದೆ. ಒಂದರ್ಥದಲ್ಲಿ ಇವರು ಭಾರತೀಯರೇ ವಿನಃ ಹೊರ ನಾಡಿನವರಲ್ಲವೆಂದು ಅಭಿಪ್ರಾಯಪಡಲಾಗಿದೆ. “ಬೊಂಬಾಯಿ ಪ್ರಾಂತದಲ್ಲಿ ಒಂದು ಸಣ್ಣ ರಾಜ್ಯವಿದೆ. ಅದಕ್ಕೆ ಮರಹಾಟೆ ಎಂದು ಕರೆಯಲಾಗುತ್ತದೆ”. (ರಜಪೂತರ ಇತಿಹಾಸ ೧೯೩೭, ಪುಟ-೩೬೩.) ಇವರು ಚಿತ್ತೋಡದ ರಾಜ ಘರಾಣಾದ ವಂಶಜರೇ ಆಗಿದ್ದಾರೆ. ಇವರ ಮೂಲ ದೊರೆ ರಾಹಪನು ಶಿಶೋದಿಯ ಜಹಾಗೀರದಾರನಿ‌ದ್ದನು. ಅವರಿಂದ ಮುಂದೆ ಉದಯಿಸಿ ಬಂದವರು ಶಿಶೋದೆಯ ರಜಪೂತರು. ಕೋಶಲ ದೇಶ ಅಯೋದ್ಯೆ ಪ್ರಾಂತ್ಯದಲ್ಲಿ ರಾಜ್ಯ ಆಳುವ ವೇಳೆಗೆ ದಕ್ಷಿಣ ಪ್ರಾಂತ್ಯಕ್ಕೆ ಬಂದ ರಜಪೂತರು ಮಹಾರಾಷ್ಟ್ರದಲ್ಲಿ ಮಹಾರಾಟೆ ಎಂದು ಕರೆಸಿಕೊಳ್ಳುತ್ತಾರೆ. ಒಂದು ಅರ್ಥದಲ್ಲಿ ಮಹಾರಾಟೆಯಿಂದಲೇ ಮರಾಠಾ, ಮಹಾರಾಷ್ಟ್ರ ಎಂದು ರೂಢಿಗತವಾಗಿರಬೇಕು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಇಂಥ ಮೂಲದಲ್ಲಿ ಬಂದ ಈ ರಾಣಾಗಳು ವಂಶಪರಂಪರಾಗತವಾಗಿ ಶೂರರಾಗಿ ಮೆರೆದರು. ಬಿಜಾಪೂರ ಆಡಳಿತದಲ್ಲಿದ್ದ ಇವರು ಅವಕಾಶ ಸಿಕ್ಕಾಗ ರಾಜಕೀಯ ಲಾಭ ಪಡೆಯಲು ಮತ್ತೊಬ್ಬರ ಆಶ್ರಯದಲ್ಲಿ ಹೋಗದೇ ತಲೆತಲಾಂತರದಿಂದ ಬಹಮನಿ ಅರಸೊತ್ತಿಗೆಯಲ್ಲಿ ಸೇವೆ ಸಲ್ಲಿಸಿದಂತೆ ಕಂಡುಬರುತ್ತಾರೆ. ಧೈರ್ಯ, ಶೌರ್ಯ, ದೇಶಭಕ್ತಿ, ನಂಬಿಕೆ, ಗೌರವ, ಉದಾರತೆ, ಸರಳತೆ ಮತ್ತು ಸತ್ಯಪ್ರಿಯತೆ ಇವರ ಸಹಜ ಗುಣಗಳಾಗಿದ್ದವು. ಇವೆಲ್ಲವುಗಳಲ್ಲಿ ಒಂದನ್ನು ಗಮನಿಸುವುದಾದರೆ ಅವರಲ್ಲಿದ್ದ ನಂಬಿಕೆ ಎಂತಹದೆಂಬುದು ದೃಢವಾಗುತ್ತದೆ. ಕ್ರಿ.ಶ. ೧೨೫೦ರ ಸುಮಾರಿಗೆ ಲಕ್ಷ್ಮಣ ಸಿಂಗ ವಂಶಜರಾದ ಸುಜನಸಿಂಗನು ೧೩ ವರ್ಷದವನಾಗಿದ್ದನು. ಚಿತ್ತೋಡ ದೊರೆತನಕ್ಕೆ ಸುಜನ ಸಿಂಗನೇ ಅಧಿಕಾರಸ್ಥನಾಗಬೇಕಿತ್ತು. ಮುಸ್ಲಿಂ ದಾಳಿಯಿಂದ ತತ್ತರಿಸಿದ ದೇವಾಡದ ರಾಣಾರು ಒಂದೆಡೆಗೆ ತಮ್ಮ ರಕ್ಷಣೆ ಜೊತೆಗೆ ಅರಸೊತ್ತಿಗೆ ಉಳಿಸಿಕೊಳ್ಳಲು ಹೋರಾಟಕ್ಕೆ ಹೋಗಿದ್ದರು. ಮರಳಿ ಬಂದಾಗ ರಾಣಾ ಹಮ್ಮಿರನಿಗೆ ಪಟ್ಟಾಧಿಕಾರ ನಡೆದುಹೋಗಿತ್ತು. ರಾಣಾ ಹಮ್ಮಿರ ಅವರ ಅಕ್ಕನ ಮಗನಾಗಿದ್ದನು. ಅದನ್ನು ವಿರೋಧಿಸಿದ ಸುಜನಸಿಂಗನ ಇಡೀ ಕುಟುಂಬದ ಬಂಧುಗಳು ಮೇವಾಡವನ್ನು ತ್ಯಜಿಸಿದರು. ಹಮ್ಮೀರನಿಗೆ ಒಂದು ಮಾತು ಹೇಳಿದರು. ರಜಪೂತ ಕ್ಷತ್ರೀಯ ವಂಶದ ರಕ್ತ ತಿಲಕ ನೀನು. ನಿನ್ನ ವಂಶಜರು ಸುಖದಿಂದ ಸಾವಿರಾರು ವರ್ಷ ಆಳಿರಿ. ನೂರಾರು ವರ್ಷ ಬಾಳಿರಿ ಎಂದು ಹಣೆಗೆ ರಕ್ತ ತಿಲಕವನ್ನು ಇಟ್ಟರು. ಈ ಅಂಶವನ್ನು ಗಮನಿಸಿದಾಗ ಅವರಲ್ಲಿದ್ದ ದೇಶಪ್ರೇಮ ನಂಬಿಕೆ ಎಂಥದ್ದು ಎಂಬುದು ದೃಢವಾಗುತ್ತದೆ.

೧೩೦೩ರಲ್ಲಿ ಅಲ್ಲಾವುದ್ದೀನ್ ಮೇವಾಡದ ಮೇಲೆ ದಾಳಿ ಮಾಡಿದನು. ಮೇವಾಡದ ರಾಜಧಾನಿಯಾಗಿದ್ದ ಚಿತ್ತೋರ (ಚಿತ್ತೋಡ) ವಶಪಡಿಸಿಕೊಂಡನು. ಅಲ್ಲಾವುದ್ದೀನನ ಸಾವಿನ ನಂತರ ರಾಣಾ ಹಮ್ಮೀರನ ನೇತೃತ್ವದಲ್ಲಿ ಚಿತ್ತೊರನ್ನು ವಶಪಡಿಸಿಕೊಂಡು ಪುನಃ ಚಿತ್ತೊರನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. ಆಗ ಈ ವಂಶಜರೇ ಕೈಲಾದ ಸಹಾಯ ನೀಡಿದರು. ಇದರಿಂದ ಅವರಲ್ಲಿರುವ ಸ್ವಾಭಿಮಾನ ಮೆಚ್ಚುವಂತದ್ದು ಎಂಬುದನ್ನು ಮೇಲೆ ಉಲ್ಲೇಖಿಸಿದ ಅಂಶದಿಂದ ಮನಗಾಣಬಹುದು.

ರಾಣಾ

‘ರಾಣಾ’ ಎಂಬುದು ಅನ್ಯದೇಶಿಯ ಶಬ್ಧ ಇದನ್ನು ಕನ್ನಡ ನಿಘಂಟಿನಲ್ಲಿ ಉಲ್ಲೇಖಿಸಲಾಗಿದೆ. ರಾಣಾ ಎಂಬುದು ರಜಪೂತ ಅರಸರ ಬಿರುದು ಎಂದು ಉಲ್ಲೇಖ ಇದೆ. ರಾಣಾ ಎಂದರೆ ‘ದೊರೆ’ ಎಂದು ‘ಪ್ರಮುಖ’ ಎಂದು ಉಲ್ಲೇಖವಿದೆ. ರಾಣಾ ಇದು ನಾಮಪದವಾಗಿದೆ. ರಜಪೂತರಲ್ಲಿ ಬಹುಪಾಲು ತಮ್ಮ ಹೆಸರಿನ ಪೂರ್ವ ಪದವು ರಾಣಾ ಆಗಿದ್ದು, ನಂತರದಲ್ಲಿ ಅವರ ನಿರ್ದಿಷ್ಟ ಹೆಸರನ್ನು ಸೂಚಿಸುತ್ತಾರೆ. ಇದರಿಂದ ಅವರ ಪೂರ್ಣ ಹೆಸರು ರಾಣಾ ಸೇರಿಯೇ ಉಲ್ಲೇಖಿಸಲ್ಪಡುತ್ತದೆ. ರಾಣಾ ಎಂಬುದು ನಿರ್ದಿಷ್ಟ ಪದವಾಗಿಯೇ ಇರುತ್ತದೆ. ಇನ್ನೊಂದು ಅರ್ಥದಲ್ಲಿ ಅದು ಕ್ರಿಯಾ ವಿಶೇಷಣವೆಂಬಂತೆ ನಾಮ ವಿಶೇಷಣವೆಂಬಂತೆ ಬಳಕೆಯಾಗುತ್ತದೆ.

ಮಧ್ಯಕಾಲೀನ ಭಾರತದ ರಜಪೂತ ರಾಜವರ್ಗದವರು ರಾಜ ಪರಿವಾರದವರು ಮತ್ತು ಪ್ರಮುಖ ವ್ಯಕ್ತಿಗಳ ಹೆಸರಿನ ಮುಂದೆ ರಾಣಾ ಸೇರಿರುವುದರಿಂದ ಅದಕ್ಕೊಂದು ಅರ್ಥ ಪ್ರಾಪ್ತವಾಗಿದೆ. ರಾಣಾ ಎಂದರೆ ಪ್ರಮುಖ ಮುಖ್ಯಸ್ಥ, ರಾಜ, ಎಂಬಿತ್ಯಾದಿಯಾಗಿ ಅರ್ಥೈಸಬಹುದಾಗಿದೆ. ಇವೆಲ್ಲವುಗಳ ಒಂದರ್ಥವೇ ರಾಜಪರಿವಾರದ ಎತ್ತರದ ವ್ಯಕ್ತಿ, ಗೌರವಪೂರ್ವಕ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತದೆ.

ರಾಜನಾದ ಮೇಲೆ ಮಹಾರಾಣ ಎಂದು ಕರೆಯುವುದು ಅವರ ಇತಿಹಾಸದಿಂದ ತಿಳಿದುಬರುತ್ತದೆ. ಮುಧೋಳ ಘರಾಣೇದ ಮೂಲಪುರುಷರು ಮೇವಾಡದಿಂದ ದೆಹಲಿ ಕಡೆಗೆ ವಲಸೆ ಬಂದು ಜಹಗೀರ ಪಡೆದು ತಮ್ಮ ಶಕ್ತಿ ಸಾಮರ್ಥ್ಯಗಳೊಂದಿಗೆ ಯುದ್ಧದಲ್ಲಿ ರಾಜನಿಗೆ ಸೈನಿಕ ಸೇವೆ ಸಲ್ಲಿಸಿ ನಿಕಟ ಬಾಂದವ್ಯವನ್ನು ಹೊಂದಿದ್ದರು. ರಾಜನ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಲು ಇವರು ತಯಾರಿದ್ದರು ಎಂಬುದಕ್ಕೆ ಅವರ ಅನೇಕ ಹೋರಾಟಗಳು ಸಾಕ್ಷಿಯಾಗಿವೆ. ಸುಮಾರು ೮ ತಲೆಮಾರುಗಳವರೆಗೆ ರಾಣಾ ಎಂಬ ಗುಣವಾಚಕದೊಂದಿಗೆ ಮಧ್ಯಕಾಲೀನ ಅವಧಿಯಿಂದ ಗುಲಬರ್ಗಾ ಬಹಮನಿ ಸುಲ್ತಾನರವರೆಗೆ ನಡೆದುಕೊಂಡು ಬಂದದ್ದು ಅವರ ವಂಶಾವಳಿಯಿಂದ ತಿಳಿದುಬರುತ್ತದೆ.

ಘೋರ‍್ಪಡೆ ಘರಾಣಾದ ಪೂರ್ವಾರ್ಧ ಚರಿತ್ರೆ

ದಕ್ಷಿಣ ಭಾರತದಲ್ಲಿ ವೀರವೃತ್ತಿಯಿಂದ ಮೆರೆಯುತ್ತಿರುವ ರಜಪೂತರು ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಅವರ ದೇಶಭಕ್ತಿ, ಉದಾರತೆ ಮತ್ತು ನಂಬಿಕೆ ಮೆಚ್ಚುವಂತಹದು. ಈ ಪರಂಪರೆಯಿಂದಲೇ ವಲಸೆ ಬಂದ ರಜಪೂತ ಘರಾಣೆಯು ದೆಹಲಿಯಲ್ಲಿ ಸುಜನಸಿಂಗನಿಂದ ಪ್ರಾರಂಭವಾಗುತ್ತದೆ. ಈತನು ಸುಮಾರು ೬೫ ವರ್ಷ ಬದುಕಿದನು ಸುಜನಸಿಂಗ. ೧೩೩೪ರಲ್ಲಿ ದೌಲತಾಬಾದ ಕಡೆಗೆ ಆಗಮಿಸಿದನು. ೪೪ ವರ್ಷದವನಿದ್ದಾಗ ತನ್ನ ಹೆಂಡಿರು ಮಕ್ಕಳೊಂದಿಗೆ ದೌಲತಾಬಾದಕ್ಕೆ ಬಂದಾಗ ಯಾದವರು ಅಲ್ಲಿ ಆಳುತ್ತಿದ್ದರು. ಆಗಲೇ ರಾಜಕೀಯದ ಅನೇಕ ಘಟನೆಗಳನ್ನು ಅರಿತು ಅದಕ್ಕೆ ತಕ್ಕಂತೆ ತನ್ನ ಬಾಹುಬಂದರನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿದ್ದನು. ದಿಲೀಪ್‌ಸಿಂಗ್ ಬಹಮನಿ ಸ್ಥಾಪನೆ ವೇಳೆಗೆ ಆದಾಯಕರ ಸಂಗ್ರಹದ ಕೆಲಸಕ್ಕೆ ಸೇರಿಸಿಕೊಂಡನು ತಾನು. ೧೩೪೭ರ ಬಂಡಾಯದ ವೇಳೆಗೆ ಸೈನ್ಯದಲ್ಲಿ ಸೇರಿಕೊಂಡು ದಕ್ಷಿಣ ಭಾಗದಲ್ಲಿ ಸೇವೆ ಪ್ರಾರಂಭಿಸಿದನು. ಹಸನಗಂಗೂ ಸಿಂಹಾಸನದ ಮೇಲೆ ಕೂತ ನಂತರ ‘ವಿಜಾಪುರ ಜುಮ್ಮಾ ಮಸೀದಿ ರಾಜಾರೋಹಣ ಪ್ರಸಂಗದಲ್ಲಿ ಹಸನ ಗಂಗು ತನ್ನ ಸಹಾಯಕರಿಗೆ ಸೇವಕರಿಗೆ ಮರೆಯದೆ ಎಲ್ಲರಿಗೂ ಮುಕ್ತ ಹಸ್ತದಿಂದ ಯೋಗ್ಯತೆಗೆ ತಕ್ಕಂತೆ ಗೌರವಿಸಿದ’ನೆಂದು ಘೋರ‍್ಪಡೆ ಘರಾಣಾಚೆ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ಈ ಗೌರವ ಸ್ವೀಕರಿಸಿದ ಸುಜನಸಿಂಗ ಮತ್ತು ದಿಲೀಪಸಿಂಗರು ಮರಳಿ ದೇವಗಿರಿಗೆ ಹೋಗಿ ಪರಾಕ್ರಮಣ ತೋರಿದಾಗ ದೇವಗಿರಿ ಸುತ್ತಮುತ್ತ ಮೊರಬ ಪ್ರಾಂತ್ಯದಲ್ಲಿ ೧೦ ಹಳ್ಳಿ ಮತ್ತು ಇತರೆ ಪ್ರದೇಶಗಳನ್ನು ಜಾಹಾಗೀರಿ ಪಡೆದು ಸರದಾರ ಎಂಬ ಹುದ್ದೆ ದೊರಕಿಸಿಕೊಂಡರು. ಹಾಗೆ ಸೈಪುದ್ದೀನ್ ಘೋರಿ ಇವರನ್ನು ಪ್ರಧಾನರನ್ನಾಗಿ ಮಾಡಿದನು. ಈ ಅವಕಾಶದಿಂದಲೇ ಇವರು ಶೂರತ್ವ ಬೆಳೆಸಿಕೊಳ್ಳಲು ಆವರಣ ಸಿಕ್ಕೆತೆನ್ನಬಹುದು. ೧೩೫೧ರಲ್ಲಿ ಕರ್ನಾಟಕ ಪರಾಕ್ರಮಣದಲ್ಲಿ ಭಾಗವಹಿಸುವಿಕೆ ಜೊತೆಗೆ ರಾಣಾ ದಿಲೀಪ ಸಿಂಗನಿಗೆ ೬೦೦೦ ಸೈನಿಕರ ಮುಖ್ಯಸ್ಥನನ್ನಾಗಿಸಿ ಖಾಸ ಸರದಾರನನ್ನಾಗಿ ನೇಮಿಸಲಾಯಿತು. ೧೩೬೦ರ ಸುಮಾರಿಗೆ ತೆಲಂಗಾಣದ ಮೇಲೆ ದಾಳಿ ಮಾಡಿದಾಗ ದಿಲೀಪಸಿಂಗ ಕಡೆಗೆ ೨೦೦೦ ಕುದರೆ ಸೈನ್ಯ ಸಿಬ್ಬಂದಿ ಇತ್ತು. ಇದರಿಂದ ಪರಾಕ್ರಮಣದಲ್ಲಿ ದ್ರವ್ಯ ಆಯಿತು. ಇದರಿಂದ ತನ್ನ ಮತ್ತು ಬಂಧುಗಳ ಬದುಕಿಗೆ ಬೇಕಾದುದು ಸಿಕ್ಕಿದ್ದರಿಂದ ಮತ್ತಷ್ಟು ಖುಷಿಯಿಂದ ಸೇವೆಸಲ್ಲಿಸಿದ್ದು ತಿಳಿದು ಬರುತ್ತದೆ.

ಸಿದ್ದಾಜಿ . ಭೈರವಜಿ ಉರ್ಪ ಬೋಸಾಜಿ

ದಿಲೀಪ ಸಿಂಗನ ನಂತರ ಈ ವಂಶದಲ್ಲಿ ಕಂಡುಬರುವವರು. ರಾಣಾ ಸಿದ್ದಾಜಿ ಹಾಗೂ ಭೈರವಜಿಯವರು. ದಿಲೀಪ ಸಿಂಗನು ಹಿಜರಿ ೨೬೬ (೧೩೬೫)ರಲ್ಲಿ ಮರಣಹೊಂದಿದನು. ಒಟ್ಟು ಅವನ ಸೇವೆಯ ೧೩ ವರ್ಷ ಉತ್ತಮ ಆಡಳಿತ ಹಾಗೂ ಸ್ವಾಮಿ ನಿಷ್ಠೆಯ ದಿನಗಳಾಗಿದ್ದವು. ಇವನ ನಂತರ ಇವನ ಮಗನಾದ ಸಿದ್ದೂಜಿ ಕೂಡ ಬಹಮನಿ ರಾಜ್ಯದಲ್ಲಿ ಸೇನಾ ನಾಯಕನಾಗಿದ್ದನು. ಮಹ್ಮದಶಾಹನು ತೀರಿದ ಮೇಲೆ ಅವನನ್ನು ಒಂದು ಭಾಗದ ಕಡೆಗೆ ನೇಮಿಸಿ ಅಲ್ಲಿನ ಉಸ್ತುವಾರಿ ಜೊತೆಗೆ ರಾಜಕೀಯದಲ್ಲಿ ಹೊಸ ಹೊಸ ವಿಚಾರಗಳಿಗೆ ಅವನಿಗೆ ಅವಕಾಶ ಕಲ್ಪಿಸಿಕೊಟ್ಟರು.

೧೩೭೭ರಲ್ಲಿ ಮುಜಾಹೀದ ಶಾಹನ ಕಾಲದ ಕೀರ್ತಿಯಲ್ಲಿ ಸಿದ್ದಾಜಿ ಕಡೆಗೆ ಖಾಸ ಕಿಲ್ಲೆದಲ್ಲಿ ಬಹುದೊಡ್ಡ ಜಾಗ ಇತ್ತು. ಅಂದರೆ ಇಡೀ ಕಿಲ್ಲೆಯ ಠಾಣೇದಾರನಾಗಿ ಮುಖ್ಯಸ್ಥನಾಗಿ. ಸಾವಿರ ಕುದುರೆಗಳ ಸರದಾರನಾದನು. ಮುಂದಿನ ರಾಜಕಾಂತ್ರಿ ವೇಳೆಯಲ್ಲಿ ರಾಜಧಾನಿ ಸಂರಕ್ಷಣೆ ಕೆಲಸವು ಸಿದ್ದಾಜಿ ಮತ್ತು ಭೈರವಜಿ ಕಡೆಗೆ ಇತ್ತು. ಅದು ೧೩೭೮ರಲ್ಲಿ ನಂತರದ ೧೩೯೬ರಲ್ಲಿ (ಮರತೂರ ಯುದ್ಧ ಹಾಗೂ ರಾಯಭಾಗದಲ್ಲಿ ಮು.ಘ.ಇತಿಹಾಸ, ಬಖರ ಪುಟ-೭) ಯುದ್ಧ ಮಾಡಿದ್ದರಿಂದ (‘ಟಾನೇದಾರ ಆಫ್ ಸಾಗರ ಕೋರ್ಟ್‌’) ಸಾಗರ ಕೋಟೆಯ ಮುಖ್ಯಸ್ಥನನ್ನಾಗಿಸಿದ್ದು ಅರಮನೆಯಲ್ಲಿ ಬರೆದಿಟ್ಟ ದಾಖಲೆ ಹಾಗೂ ಫರ್ಮಾನದಿಂದ ತಿಳಿದುಬರುತ್ತದೆ. ಅದಕ್ಕೆ ಪೂರಕವಾಗಿರುವಂತೆ ಸಾಗರ ಕಿಲ್ಲೇದಲ್ಲಿ ಮಹ್ಮದನ ಶಾಜೀದ ಹಾಗೂ ದಾವುದ್ದೀನ್ ಎಂಬ ಮಕ್ಕಳಿದ್ದರೆಂದು ಅದರ ರಕ್ಷಣೆಗೋಸ್ಕರ ಸಿದ್ದೋಜಿಗೆ ಸಾಗರ ಕಿಲ್ಲೆ ಠಾಣೇದಾರರನ್ನಾಗಿಸಿದ್ದು, ಮತ್ತೊಂದು ಅಂಶವಾಗಿದೆ. ಹಾಗೆ ಬಹುದೊಡ್ಡ ಜವಾಬ್ದಾರಿಯು ಅವರ ವಿಶ್ವಾಸ ಹಾಗೂ ನಿಷ್ಠೆಗೆ ನೀಡಿದ್ದೆದು ಗುರುತಿಸಬಹುದಾಗಿದೆ. ಇಸ್ವಿಸ್‌ನ್‌ ೧೩೯೭ರಲ್ಲಿ ನಡೆದ ಮರತೂರ ಯುದ್ಧದಲ್ಲಿ ಭಯಂಕರ ಹೋರಾಟ ನಡೆಯಿತು. ಸಿದ್ದೋಜಿಗೆ ಪೆಟ್ಟು ಬಿದ್ದಿದ್ದರಿಂದ ಅಲ್ಲಿಯೇ ಮರಣವಪ್ಪಿದನು. ಹಿಜರಿ ೭೮೯ರಂದು ಒಟ್ಟು ಸೇವೆ ೩೧ ವರ್ಷ ಎಂದು ಹೇಳಬಹುದು.

ಭೈರವ ಸಿಂಗ

ಸಿದ್ದೋಜಿ ಮತ್ತು ಭೈರವಸಿಂಗನು ಜೊತೆಯಾಗಿಯೇ ಯುದ್ಧ ಮಾಡುತ್ತಿದ್ದರು. ಭೈರವಸಿಂಗನು ತನ್ನ ದೊರೆ ಪಿರೋಜಶಹನಿಗೆ ಸಹಾಯ ಮಾಡುವುದು ತನ್ನ ಕರ್ತವ್ಯವಾದರೂ ಗಂಡಾಂತರದಿಂದ ಪಾರು ಮಾಡಿದ್ದರಿಂದ ಮತ್ತು ಬಾದಶಾಹಿ ಪಟ್ಟ ಉಳಿಯುವಂತೆ ಪ್ರಯತ್ನಿಸಿದ್ದು, ಜೀವದ ಹಂಗು ತೊರೆದು ಹೋರಾಡಿದ್ದು ಅತ್ಯಮೂಲ್ಯವಾಗಿದೆ. ಇದಕ್ಕಾಗಿಯೇ ಪಿರೋಜಶಾಹನು ಸ್ವತಃ ರಾಯಭಾಗದ ಪೈಕಿ ೮೪ ಹಳ್ಳಿಯೊಂದಿಗೆ ಮುಧೋಳ ಜಹಾಗೀರ ಪಡೆದನು. (ಫರ್ಮಾನ ಸಂಖ್ಯೆ-೩, ಪುಟ-೬,೭) ಭೈರವ ಸಿಂಗನು ಕೇವಲ ಒಬ್ಬ ಸೇನಾ ನಾಯಕನಾಗಿರದೇ ತನ್ನ ಮಕ್ಕಳಿಗೆ ಆಗಾಗ ಯುದ್ಧದ ಸನ್ನಿವೇಶ ಅರಿಯಲು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದನು. ತರಬೇತು ನೀಡುತ್ತಿದ್ದನು. ಅವರಾದರೂ ಕೂಡ ನಿಪುಣರಾಗಿ ಯುದ್ಧ ಮಾಡಿದ್ದು ಇದೆ.

ಕರ್ಣಸಿಂಗ ಮತ್ತು ದೇವರಾಜ

ಭೈರವಸಿಂಗನ ಎರಡು ಮಕ್ಕಳೆಂದರೆ ಕರ್ಣಸಿಂಗ ಮತ್ತು ದೇವರಾಜ ಆಗಿದ್ದಾರೆ. ಇವರು ಕೂಡ ತಂದೆಯಿಂದಲೇ ಹೋರಾಟದ ಅನುಭವ ಪಡೆದವರು. ೧೪೦೭ರಲ್ಲಿ ರಾಯಭಾಗದಲ್ಲಿ ಮತ್ತೆ ಹೋರಾಟ ಪ್ರಾರಂಭವಾಯಿತು. ಆಗ ಭೈರಸಿಂಗನು ತನ್ನ ಮಕ್ಕಳನ್ನು ಕಳಿಸಿದ್ದನು. ಅಲ್ಲಿನ ರಾಯಭಾಗದ ಕೆಲವು ಸುಭಾದ ಅಧಿಕಾರವನ್ನು ನೀಡಿದ್ದರಿಂದ ರಾಯಭಾಗಕರ ಅವರ ಜೊತೆ ಶಾಂತಿ ಒಪ್ಪಂದಗಳು ಏರ್ಪಟ್ಟ ಬಗ್ಗೆ ತಿಳಿದುಬರುವುದಿಲ್ಲ. ಆದರೆ ಹಿಜರಿ ೮೧೫ರಲ್ಲಿ ಯುದ್ಧ ನಡೆದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆಗಲೇ ಕರ್ಣಸಿಂಗ ಮರಣ ಹೊಂದಿದನೆಂದು ಉಲ್ಲೇಖಿಸಿದ್ದು ಕಂಡುಬರುತ್ತದೆ.

೧೪೨೨ರ ವೇಳೆಗೆ ದೇವರಾಜ ಮತ್ತು ಹಸನ್‌ಬಸರಿ ಜೊತೆಯಾಗಿದ್ದುಕ್ಕೊಂಡು ಅಹಮ್ಮದ್ ಖಾನ್‌ಗೆ ಸುಲ್ತಾನನಿಗೆ ಸೇವೆ ಸಲ್ಲಿಸುವುದು ಅವಶ್ಯವೆಂದು ತಿಳಿದು ಯುದ್ಧಗಳಲ್ಲಿ ಶ್ರಮವಹಿಸಿ ಶಕ್ತಿ ಪ್ರಯೋಗಿಸಿದರು. ಬಾದ್‌ಶಾಹಿ ಉಳಿಯುವಂತೆ ಮಾಡಿದ್ದು ಇವರ ಶ್ರೇಷ್ಠತೆಯನ್ನು ತೋರಿಸಿತು. ಹೀಗೆ ಪ್ರಾರಂಭದಿಂದಲೇ ಇಡೀ ಕುಟುಂಬವು ಶೌರ್ಯ ಸಾಹಸವನ್ನು ಪ್ರಾಣದ ಭಯವಿಲ್ಲದೆ ಮುಡುಪಾಗಿಟ್ಟಿದ್ದು, ಮೆಚ್ಚುವಂತಹದ್ದು. ತಮಗೆ ದೊರೆತ ಜಾಹಗೀರಿಕೆಗೆ ಒಳಗಾಗದೇ ತಕ್ಕಮಟ್ಟಿಗೆ ಅದನ್ನು ಬಳಸಿಕೊಂಡು ವಂಶ ಬೆಳೆಸಿದ್ದು, ನಿಸ್ವಾರ್ಥ ಸೇವೆಗೆ ಕಂಕಣಬದ್ಧರಾಗಿದ್ದು ಇವರ ಹಲವು ಮುಖಗಳಿಂದ ಕಾಣಬಹುದು. ಮುಂದೆ ರಾಜಕೀಯ ಬದಲಾವಣೆಗಳಿಂದ ಮತ್ತೆ ಉತ್ತರಾರ್ಧದಲ್ಲಿ ಕಾಣಬರುತ್ತಾರೆ.

ಘೋರ‍್ಪಡೆ (ಅರಸೊತ್ತಿಗೆ) ಘರಾಣಾವೆಂದೆ ಮುಂದೆ ಬರುವ ಅವರ ಚಾರಿತ್ರಿಕತೆಯಲ್ಲಿ ಸಂಪೂರ್ಣವಾಗಿ ೧೧೪೮ರಿಂದ ಬ್ರಿಟಿಷ್ ಆಗಮನದವರೆಗೆ ನಂತರದ ಸಂಸ್ಥಾನಗಳ ವಿಲಿನೀಕರಣದವರೆಗೂ ಇವರ ಇತಿಹಾಸದ ಎಳೆಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಘೋರ‍್ಪಡೆ ಘರಾಣಾದ ಉತ್ತರಾರ್ಧ ಚರಿತ್ರೆ

ಉತ್ತರಾರ್ಧವೆಂದರೆ ಆದಿಲ್‌ಶಾಹಿಗಳ ಆಡಳಿತದಿಂದ ಹಿಡಿದು ಅಂತ್ಯದವರೆಗಿನ ಇತಿಹಾಸ. ಯುಸೂಫ್ ಆದಿಲ್‌ಖಾನನು ಬಹಮನಿ ಸಾಮ್ರಾಜ್ಯದಲ್ಲಿ ಒಬ್ಬ ತುರುಕಿ ವಂಶಿ ನೌಕರನಾಗಿದ್ದ. ಈತನು ದಾಡಸಿ ಧೈರ್ಯವಂತ ಸ್ವತಂತ್ರ ರಾಜ್ಯದ ಆದಿಲ್‌ಶಾಹಿ ವಂಶವನ್ನು ಬೆಳೆಸಿದ ಮೂಲಪುರುಷನಾಗಿದ್ದಾನೆ. ಇಲ್ಲಿ ಆಶ್ರಯ ಪಡೆದುಕೊಂಡ ಘೋರ‍್ಪಡೆ ವಂಶಜನು ವರಾಡಕ್ಕೆ ಹೋಗುವ ಪ್ರಸಂಗ ಹಾಗೂ ‘ಕಾಮಾಲಕಾ ದರ್ಬಾರಿ’ (ದರ್ಬಾರ ಹಾದಿಯಲ್ಲಿ) ಕೆಲಸದ ಮೇಲೆ ನೇಮಕವಾದ ಘೋರ‍್ಪಡೆಗೆ ಜವಾಬ್ದಾರಿ ಕೆಲಸ ವಹಿಸಿದರು. ಅಲ್ಲಿನ ರಾಜಕೀಯ ವಾತಾವರಣದೊಂದಿಗೆ ಬೆರೆತು ಇವರ ಮೂಲಪುರುಷರು ತಮ್ಮ ಪರಾಕ್ರಮ ತೋರಿಸಿದಂತೆ ೧೦೦ ವರ್ಷಗಳ ಸೇವೆಯನ್ನು ಖಾಯಂ ಮಾಡಲು ಸತತ ಪ್ರಯತ್ನ ಮಾಡಿದ್ದು ಮೆಚ್ಚುವಂತಹದ್ದು.

ಘೋರ‍್ಪೊಡೆಗಳು ಸ್ವತಂತ್ರ ಸಂಸ್ಥಾನಿಕರಾಗಿ ಬೆಳೆದದ್ದು ಆದಿಲ್‌ಶಾಹಿಯಿಂದ. ಮತ್ತೊಂದು ಅಂಶವೆಂದರೆ ಸರದಾರ ಮಕ್ಕಳು ಚತುರರಾಗಿದ್ದರು. ತಂದೆಯ ಕೈ ಕೆಳಗೆ ಪಳಗಿದ್ದರು. ಭೀಮಸಿಂಗನಿಂದ ಹಿಡಿದು ಚೋಳರಾಜನ (ಆರು ತಲೆಮಾರುಗಳ) ವರೆಗೆ ಖಡ್ಗ ಹಿಡಿದು ಹೋರಾಡಿದರು. ಇದು ಅಲ್ಲದೆ ಈ ಮನೆತನದ ಮತ್ತೊಂದು ವಿಶೇಷತೆ ‘ಖುರ್ನಿಸಾತ’ (ಸಲಾಮ) ಪದ್ಧತಿಯನ್ನು ಬೇರೊಂದು ರೀತಿಯಲ್ಲಿ ತಂದಿದ್ದು. ಘೋರ‍್ಪಡೆಯವರು ಜೀವದ ಹಂಗು ತೊರೆದು ಹೋರಾಡಿದ್ದ ಪ್ರತೀಕವಾಗಿ ರಕ್ಷಣಾ ಕಿರು ಚಾಕುವನ್ನು ಅವರಿಗೆ ನೀಡಿದ್ದು ಇದೆ. ಎರಡನೆಯದಾಗಿ ಅರಮನೆಗೆ ಆಗಮಿಸಿದಾಗ ಸಲಾಮ ಪದ್ಧತಿ (ಬಾಗಿ ನಮಿಸುವ)ದನ್ನು ಕಡಿಮೆ ಮಾಡಿ ಕಿರು ಚಾಕು (ಭರ್ಚಿ) ಹಣೆಗೆ ಹಚ್ಚಿಕೊಂಡರೆ ಅದೇ ಗೌರವವೆಂದು ಸಲಾಮ ಮಾಫ್ ಮಾಡಿದ್ದು ವಿಶೇಷವಾಗಿದೆ. ಬಹುತೇಕ ಈ ಪದ್ಧತಿ ತಾಳೀಕೋಟೆ ಕದನದ ನಂತರ ಆರಂಭವಾಗುತ್ತದೆ.

ಭೀಮಸಿಂಗ ಮತ್ತು ಖೇಲೂಜಿ

ಭೀಮಸಿಂಗನು ಇಸ್ವಿಸನ್ ೧೪೪೩ರಿಂದ ೧೪೮೯ರವರೆಗೆ ಬಲಶಾಲಿಯಾಗಿ ವೀರ ಶೂರನಾಗಿ ೪೬ ವರ್ಷಗಳವರೆಗೆ ಸೇನಾ ನಾಯಕನಾಗಿ ಹೋರಾಡಿದನು. ೧೪೭೧ ರಿಂದ ೧೫೧೪ರವರೆಗೆ ಪ್ರಥಮ ಯುದ್ಧದ ಶೂರತನದ ಅನಾವರಣ ಆದದ್ದು ದೌಲತಾಬಾದ, ರಾಂಚಿ, ಬೆಳೆಗಾಂವಿ, ರಾಯಪ್ರತಾಪಗಡಗಳ ಯುದ್ಧದಲ್ಲಿ. ೧೪೭೯ರಲ್ಲಿ ರಾಜನರಸಿಂಹ ಕರ್ನಾಟಕದಲ್ಲಿರುವ ಜಮೀನುದಾರರ ಮೇಲೆ ಸೈನ್ಯ ತೆಗೆದುಕೊಂಡು ಹೊರಟಾಗ ಯುಸೂಫಖಾನನೊಂದಿಗೆ ಭೀಮಸಿಂಗನಿದ್ದು ಜಮೀನುದಾರರನ್ನು ವಹಿಸಿಕೊಂಡಿದ್ದು, ಅವರಿಂದ ತೆರಿಗೆ ವಸೂಲಿ, ಜೊತೆಗೆ ವಿಶ್ವಾಸ ಗಳಿಸಿಕೊಳ್ಳುವಲ್ಲಿ ಮಾಡಿದ ಪ್ರಯತ್ನ ಗಮನಾರ್ಹವಾದುದು.

ಎರಡನೆಯದಾಗಿ ಭೀಮಸಿಂಗನು ಬಹಮನಿ ಸುಲ್ತಾನರ ಜೊತೆಗೆ ೧೪೮೦ರಲ್ಲಿ ರಾಂಚಿ ಕಡೆಗೆ ಹೋಗಿ ಶೂರತನ ಮತ್ತೆ ಪ್ರದರ್ಶಿಸಿದನು. ೧೪೮೦ರಲ್ಲಿ ಮಹ್ಮದ್ ಶಾಹಾ (ಬಹಮನಿ) ಅವರಿಗೆ ಅಭಿನಂದಾರ್ಹವಾಗಿ ಯುಸೂಫನೊಂದಿಗೆ ಕೊಂಕಣ, ಭೀಮಗಡೆಗೆ ಹೋದನು. ಆಗ ಲೂಟಿ ಪ್ರಸಂಗದಲ್ಲಿ ಯೂಸೂಫನಿಗೆ ಜೀವಕ್ಕೆ ಜೀವಕೊಟ್ಟು ೩ ಜನರನ್ನು ರಕ್ಷಿಸಿದನು. ಆದರೆ ತನ್ನ ಜೀವವನ್ನು ಕಳೆದುಕೊಂಡನು. ಇದನ್ನು ಮನಗಂಡ ಯುಸೂಫ ಅವನ ವಂಶಜನಾದ ಕೆಲೂಜಿಗೆ ಪ್ರಥಮ ಬಾರಿಗೆ ಸರದಾರಕಿ ಹಾಗೂ ಜಹಾಗೀರಿ ನೀಡಿದನು.

ಇಸ್ವಿ ಸನ್ ೧೪೯೧ರಲ್ಲಿ ವಿಜಯನಗರ ಯುದ್ಧದಲ್ಲಿ ಆದಿಲ್‌ಶಾಹಿ ಸೈನ್ಯವು ಪರಾಭವವಾಗಿದ್ದರೂ ಸಹಿತ ರಾತ್ರಿ ವೇಳೆ ಕುಟೀಲತೆಯಿಂದ ಹಲ್ಲೆಮಾಡಿ ವಿಜಯನಗರ ಪರಾಭವ ಮಾಡುವಲ್ಲಿ ಖೇಲೂಜಿ ಪ್ರಮುಖ ಪಾತ್ರವಹಿಸುತ್ತಾನೆ. ಅಂದಿನಿಂದ ಬಿಜಾಪುರದಲ್ಲಿ ಇರಲು ನಿರ್ದಿಷ್ಟ ಸ್ಥಾನ ಸಿಕ್ಕಿತು. ನಂತರದಲ್ಲಿ ೧೯೯೫ರ ವೇಳೆಗೆ ಕಲಬುರ್ಗಿ ಕಡೆಗೆ ದಸ್ತೂದ್ದೀನಾರ ಬಂಡಾಯವನ್ನು ಮುರಿದು ಅವನನ್ನು ಯುದ್ಧದಲ್ಲಿ ಸೋಲಿಸಿದ್ದು ಮಹತ್ತರವಾದುದಾಗಿದೆ. ಹೀಗಾಗಿ ಖೇಲೋಜಿ ಸಾಧನೆ ಅಪ್ರತಿಮ ಶೌರ‍್ಯ ಬಹು ದೂರದವರೆಗೆ ಹಬ್ಬಿತು.

೧೫೦೪ರಿಂದ ೧೫೨೮ರವರೆಗೆ ಅವನ ಮಹತ್ತರ ಸಾಧನೆಯ ಪಟ್ಟಿ ಬೆಳೆಯುತ್ತದೆ. ಅದರಲ್ಲಿ ೧೫೨೧ರ ಕೃಷ್ಣಾ ನದಿಯ ದಂಡೆ ಮೇಲೆ ರಾಯಚೂರು ಯುದ್ಧದಲ್ಲಿ ಇಸ್ಮಾಯಿಲ್ ಬಾದ್‌ಶಾಹಾ ಶತ್ರುಗಳ ಪಾಶದಲ್ಲಿ ಸಿಕ್ಕಿಬಿದ್ದನು. ಆವಾಗ ಮಾಲೋಜಿ ಮುಂದಾಗಿ ಬಾದಶಹಾನನ್ನು ಬದುಕಿಸಿದನು. ಎರಡನೆಯದಾಗಿ ಸೊಲ್ಲಾಪುರ ಯುದ್ಧದಲ್ಲಿ ನಿಜಾಂಶಹಾ ಮತ್ತು ಕಾಶಿಂಬರೀದ ಇವರ ಪರಾಭವ ಆದಿಲ್‌ಶಾಹಿ ಸೈನ್ಯದಿಂದ ಆಯಿತು. ಆಗ ಮಾಲೋಜಿ ಅವನ ಮಗ ಅಖೈಜಿ ಒಳ್ಳೆ ಶೂರತನ ತೋರಿಸಿದರು.